ನಮ್ಮ ಕೃಷಿ ಕ್ಷೇತ್ರದ ಭವಿಷ್ಯವೇನು? – ಜನಾಂತರಂಗ ೧೭೦೧೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ವಿಶ್ವ ವ್ಯಾಪಾರಿ ಸಂಘಟನೆ (WTO) ಯ ಪ್ರಕಾರ ಕಾರ್ಯರೂಪಕ್ಕೆ ಬಂದ ಉದಾರೀಕರಣ ಇಲ್ಲವೇ ಮುಕ್ತ ಆಮದು ನೀತಿಯಿಂದಾಗಿ ಭಾರತದ ಕೃಷಿ ಕ್ಷೇತ್ರದ ಮೇಲೆ ಕಳೆದೊಂದು ವರ್ಷದಿಂದೀಚೆಗೆ ಪ್ರಬಲ ಹೊಡೆತ ಬೀಳುತ್ತಲಿದ್ದು, ಪ್ರಕೃತ ರೈತ ಸಮುದಾಯವು ದಿಕ್ಕೆಟ್ಟಿದೆ. ಪರಿಣಾಮವಾಗಿ ದೇಶದ್ಯಾಂತ ರೈತ ಸಂಘಟನೆಗಳು ಎಚ್ಚೆತ್ತು ಪ್ರತಿಭಟನೆಗಳು ತೋರಿಸುತ್ತ ಬಂದಿದ್ದರೂ ನಮ್ಮ ಬಡ ರೈತರ ಗೋಳನ್ನು ಕೇಳುವವರಿಲ್ಲದೆ ಅವರಿಂದು ಕೊರಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ನಮ್ಮ ಸರಕಾರಗಳು ಈ ಬಗ್ಗೆ ತಿಳಿದಿದ್ದರೂ ಏನನ್ನೂ ಮಾಡದೆ ಮೂಕ ಪ್ರೇಕ್ಷಕನಂತೆ ಕುಳಿತುಬಿಟ್ಟಿದೆ.

ಅಂತರಾಷ್ಟೀಯ ಒಪ್ಪಂದಗಳ ಆರಂಭದ ಹಂತದಲ್ಲೇ ಹೀಗಾದರೆ, ೨೦೦೫ರ ಬಳಿರ ಸಂಪೂರ್ಣ ಮುಕ್ತ ಅರ್ಥಿಕತೆಗೆ ಒಳಪಡಲಿರುವ ದೇಶದ ಭವಿಷ್ಯವೇನು? ಅದರಲ್ಲೂ ಮುಖ್ಯವಾಗಿ ಶೇಕಡಾ ೬೬ರಷ್ಟು ಜನ ಕೃಷಿಯನ್ನೇ ಅವಲಂಬಿಸಿರುವಾಗ  ಈ ಮುಂದಿನ ದಿನಗಳಲ್ಲಿ ಏನನ್ನೆಲ್ಲ ಅನುಭವಿಸಬೇಕಾಗಬಹುದು? ಆಂತರಿಕವಾಗಿ ಕೃಷಿ ಕ್ಷೇತ್ರವು ಇನ್ನಷ್ಟು ಸೋಲನ್ನು ಅನುಭವಿಸಿ ಇದೀಗ ಆನುಭವಿಸುತ್ತಿರುವ ಬಡತನ, ನಿರುದ್ಯೋಗ ಇತ್ಯಾದಿಗಳಿಗೆ ಇನ್ನಷ್ಟು ಪ್ರೋತ್ಸಾಹ ದೊರೆತು ದೇಶದ ಆಭಿವೃದ್ಧಿ ಕುಂಠಿತಗೊಳ್ಳಬಹುದೆ? ಎಂಬಿತ್ಯಾದಿ ಪ್ರಶ್ನೆಗಳಿಂದು ನಮ್ಮದುರಿಗಿದೆ. ಈ ಎಲ್ಲಾ ಸಂಗತಿಗಳ ಆರಿವಿದ್ದರೂ ನಮ್ಮ ಸರಕಾರಗಳಿಂದೇಕೆ ಸುಮ್ಮನಾಗಿವೆ, ಮುಂದೆ ಅವೇನು ಮಾಡಬಹುದು. ಒಪ್ಪಂದಗಳ ಪ್ರಕಾರ ದೇಶದ ಆಭಿವೃದ್ಧಿಗಾಗಿ ಸರಕಾರವು ಪೂರಕ ವ್ಯವಸ್ಥೆಯನ್ನು ಒದಗಿಸಿ, ಅಂತರಾಷ್ಟೀಯ ಸಂಸ್ಥೆಗಳ ಹೂಡಿಕೆಗೆ ವಾತಾವರಣಗಳನ್ನು, ಸೃಷ್ಟಿಸಿ, ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಸಮಾನ ರೀತಿಯಲ್ಲಿ ಕಂಡು, ಆಂತರಿಕ ಉತ್ಪಾದನೆಯನ್ನು ಹೆಚ್ಚೆಸಿಕೊಂಡು, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನು ಗಳಿಸಿಕೊಳ್ಳಬೇಕು. ಭಾರತದಂತಹ ಬಡರಾಷ್ಟ್ರಕ್ಕೆ ಈ ರೀತಿಯ ಆಭಿವೃದ್ಧಿ ಸಾಧ್ಯವೇ? ನಿಜಕ್ಕೂ ಪ್ರಕೃತ ಕಂಡು ಬರುತ್ತಿರುವುದು ಆಂತರಿಕ ಸಮಸ್ಯೆಗಳು ಮತ್ತು ವಾತಾವರಣದಲ್ಲಿ ಇದು ಅಸಾಧ್ಯ.

ಬಾರತದ ಕೃಷಿಯುತ್ಪನ್ನಗಳು ವಿದೇಶಿ ಮಾರುಕಟ್ಟೆಗಳಲ್ಲಿ ಪ್ರಬಲವಾಗಿ ನೆಲೆಗೊಳ್ಳಬೇಕಾದರೆ, ಮೊದಲನೆಯದಾಗಿ ನಾವು ಉತ್ಪಾದಿಸುತ್ತಿರುವ ಕೃಷಿಯುತ್ಪನ್ನಗಳ ಬೆಲೆ ತಗ್ಗಬೇಕು. ಅಲ್ಲದೆ ಅದು ಆ ಮಾರುಕಟ್ಟೆಗಳಲ್ಲಿ ಪ್ರಬಲ ಪೈಪೋಟಿ ಕೊಡುವಂತಿರಬೇಕು. ಈ ರೀತಿಯ ಪರಿಸ್ಥಿಗೆ ಹೊಂದಿಕೊಳ್ಳಲು ನಮ್ಮ ಕೃಷಿ ಕ್ಷೇತ್ರವಿನ್ನೂ ತಯಾರಾಗಿಲ್ಲ. ಕಾರಣ ನಮ್ಮಲ್ಲಿಂದು ಆಗುತ್ತಿರುವ ಉತ್ಪಾದಾನಾ ವೆಚ್ಚ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ ಅಧಿಕವಾಗಿದೆಯಷ್ಟೇ ಅಲ್ಲದೆ ಉತ್ಪಾದಕತೆಯೂ ಕಡಿಮೆ. ಇದರೊಂದಿಗೆ ನಮ್ಮ ಕೃಷಿಯುತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹೆಸರಿಸಿದ ಮಟ್ಟದ್ದಾಗಿರಬೇಕು. ಇಲ್ಲೂ ನಮ್ಮ ಕೃಷಿ ಕ್ಷೇತ್ರವಿಂದು ಪರಿಪೂರ್ಣವಾಗಿಲ್ಲ . ಕಾರಾಣ ಯೋಗ್ಯ ಮಾರುಕಟ್ಟೆ ವ್ಯವಸ್ಥೆಯ ಅಭಾವ ಅಧಿಕ ಲಾಭವನ್ನು ಗಳಿಸುವ ಉದ್ದೇಶದಿಂದ ಈ ಉತ್ಪನ್ನಗಳ ಮಾರಾಟ ವ್ಯವಸ್ಥೆಯಡಿ ಬರುವ ಮಧ್ಯವರ್ತಿಗಳಿಂದ ಕಲಬೆರಕೆಯಿಂದೊಡಗೂಡಿದ ಕೃಷಿಯುತ್ಪನ್ನಗಳನ್ನು ರಪ್ತು ಮಾಡುತ್ತಿದ್ದು, ಪರಿಣಾಮವಾಗಿ ವಿದೇಶಿ ಮಾರುಕಟ್ಟೆಗಳಿಂದು ಭಾರತದ ಕೃಷಿಯುತ್ಪನ್ನಗಳ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವುಗಳನ್ನಿಂದು  ಒಂದೋ ತಿರಸ್ತರಿಸುತ್ತಿದ್ದಾರೆ ಇಲ್ಲವೇ ಆಧಿಕ ಸುಂಕ ಹೇರುತ್ತಿದ್ದಾರೆ. ಉದಾಹರಣೆಗೆ ಕರಿಮೆಣಸು, ಕಾಫಿ ಇತ್ಯಾದಿಗಳು. ಈ ರೀತಿಯ ವ್ಯವಸ್ಥೆ ನಮ್ಮ ಕೃಷಿಕರಿಗಿಂದು ತಿಳಿಯದೆ ಇರುವುದರಿಂದ ಈ ಕ್ಷೇತ್ರಕ್ಕೆ ಇಂದು ಹೊಡೆತಗಳು ಬೀಳುತ್ತಲೇ ಇವೆ.

ಒಪ್ಪಂದಗಳಿಂದ ಹೆಚ್ಚಿನ ಪ್ರಮಾಣದ ರಫ್ತಿಗೆ ಅವಕಾಶವೆಂದು ಹೊರ ನೋಟಕ್ಕೆ ಕಂಡು ಬರುತ್ತಿದ್ದರೂ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ, ಆಂತರಿಕವಾಗಿ ಅಗಾಧ ಬೇಡಿಕೆಯನ್ನು ಹೊಂದಿರುವ ವಿಶ್ವವೇ ಭಾರತವನ್ನು ಅತೀ ದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿರುವ ಈ ಸಮಯದಲ್ಲಿ ಭಾರತದ ಕೃಷಿಯುಉತ್ಪನ್ನಗಳನ್ನು ಯಾವ ಪ್ರಮಾಣದಲ್ಲಿ ರಫ್ತು ಮಾಡಬಹುದು? ವಿಶ್ವದ ಮಾರುಕಟ್ಟೆಗಿಂದು ನಮ್ಮ ಕೃಷಿಯುತ್ಪನ್ನಗಳ ರಫ್ತು ಕೇವಲ ಶೇಕಾಡಾ ಒಂದಕ್ಕಿಂತಲೂ ಕಡಿಮೆ. ಏರುತ್ತಿರುವ ಜನಸಂಖ್ಯೆ, ಬಡತನ ಇತ್ಯಾದಿ ಸಮಸ್ಯೆಗಳಿಂದು ನಮ್ಮಲ್ಲಿರುವಾಗ ಮುಂದಿನ ದಿನಗಳಲ್ಲಿ ನಮ್ಮ ರಫ್ತುನ ಪ್ರಮಾಣ ಏರಲಿಕ್ಕೆ ಅವಕಾಶಗಳಿದ್ದಂತೆ ಕಾಣುತ್ತಿಲ್ಲ. ಹೀಗಿದ್ದಲ್ಲಿ ನಮ್ಮ ಕೃಷಿ ಕ್ಷೇತ್ರದ ಭವಿಷ್ಯವೇನು? ಈ ನಿಟ್ಟಿನಲ್ಲಿ ನಮ್ಮ ಕೃಷಿ ಬಾಂಧವರಿಂದು ಒಗ್ಗೂಡಿ ಸರಕಾರಗಳನ್ನು ಎಚ್ಚರಿಸಬೇಕಾಗಿದೆ. ಭಾರತವಿಂದು ತನ್ನಂತೆ ಇರುವ ಇತರ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳ ಒಡಗೂಡಿ ಒಪ್ಪಂದಗಳಿಂದ ಆಂತರಿಕ ಕೃಷಿ ಮತ್ತು ಅದನ್ನೇ ನಂಬಿರುವ ಇತರ ಕ್ಷೇತ್ರಗಳಿಗಾಗುತ್ತಿರುವ ಪರಿಣಾಮಗಳನ್ನು WTOನ ಮುಂದಿನ ಮಾತುಕತೆಗಳಲ್ಲಿ ಪ್ರತಿಭಟಿಸಬೇಕಾಗಿದೆ. ಇದಕ್ಕಾಗಿ ಈಗ ಕಂಡು ಬರುತ್ತಿರುವ ದುರಂತಗಳನ್ನು WTOನ ನ್ಯಾಯಂಗ ವಿಭಾಗಕ್ಕೆ ಮನವರಿಕೆ ಮಾಡಿಕೊಡಬೇಕಾದಿದೆ. ಅಲ್ಲದೆ ಈ ಒಪ್ಪಂದಗಳಿಂದ ಕೃಷಿ ಕ್ಷೇತ್ರವನ್ನು ಕೈಬೀಡುವಂತೆ ಒತ್ತಡ ಹೇರಬೇಕಾಗಿದೆ.

ಈ ರೀತಿಯ ಪ್ರತಿಭಟನೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳವುದರೊಂದಿಗೆ ಅಂತರಿವಾಗಿಯೂ ನಮ್ಮ ಕೃಷಿ ಕ್ಷೇತ್ರದ ಅಭಿವೃದ್ಧಿ ಹಲವು ಕಾರ್ಯಕ್ರಮಗಳನ್ನು ಈಗಿಂದೀಗಲೇ ಹಮ್ಮಿಕೊಳ್ಳಬೇಕಾಗಿದೆ. ಇದಕ್ಕಾಗಿ ಬರಲಿರುವ ೨೦೦೧–೨೦೦೨ರ ಬಜೆಟಿನಲ್ಲಿ ಅಗತ್ಯ ಹಣಕಾಸು ನೆರವನ್ನು ಒದಗಿಸಬೇಕಾಗಿದೆ. ಈ ದಿಶೆಯಲ್ಲಿ ಮುಂದಿನ ಬಜೆಟಿನಲ್ಲಿ ಕೃಷಿಯುತ್ಪನ್ನಗಳಿಗೆ ಭವಿಷ್ಯದ ಮಾರುಕಟ್ಟೆ ವ್ಯವಸ್ಥೆ, ಯೋಗ್ಯ ಮಾರುಕಟ್ಟೆಗಳ ಸೃಷ್ಟಿ ಶೇಖರಣೆ, ಶೀತಲೀಕರಣ, ಸಾರಿಗೆ ಇತ್ಯಾದಿಗಳನ್ನು ಪೂರೈಸಲು ಅಗತ್ಯ ನೆರವನ್ನು ಒದಗಿಸಬೇಕಾಗಿದೆ. ಸರಕಾರ ಈ ತನಕ ಆಹಾರ ಧಾನ್ಯಗಳಿಗೆ ಮಾತ್ರ ಮಾರುಕಟ್ಟೆ ಅಭಿವೃದ್ಧಿಯನ್ನು ಕೈಗೊಂಡಿದ್ದು, ಇನ್ನು ಮುಂದೆ ಆಹಾರೇತರ ಉತ್ಪನ್ನಗಳಿಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಒಟ್ಟಾರೆಯಾಗಿ ನಮ್ಮ ಸರಕಾರಗಳಿಂದು ಕಟಾವಿನ ನಂತರದ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿ, ರೈತ ಸಮುದಾಯವನ್ನು ರಕ್ಷಿಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಮುಂದೆ ಬರಲಿರುವ ಮತ್ತು ಬರಬಹುದಾದ ಪ್ರಬಲ ಹೊಡೆತಗಳನ್ನು ನಮ್ಮ ಕೃಷಿಕರು ಎದುರಿಸಲು ಸಾಧ್ಯ.