ಪರಿಸ್ಥಿತಿಗಳಿಂದಾಗಿ ಸೋಲುತ್ತಿರುವ ಕೃಷಿ ಕ್ಷೇತ್ರಜನಾಂತರಂಗ ೩೧೦೧೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ದೇಶದ ಕೃಷಿಕರಲ್ಲಿ ಬಹುಪಾಲು ಅನಕ್ಷರಸ್ಥರು. ಪ್ರಕೃತ ದೇಶದಲ್ಲೇನು ಆಗುತ್ತಿದೆ, ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರವೇನು ಮಾಡುತ್ತಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಏನೇನು ಬದಲಾವಣೆಗಳಾಗುತ್ತಿವೆ, ಇವಾವುದೂ ಇವರಿಗೆ ತಿಳಿದಿಲ್ಲ. ದಿನ ಬೆಳಗಾದರೆ, ತಾನಾಯಿತ ತನ್ನ ಕೃಷಿ ಚಟುವಟಿಕೆಗಳಾಯಿತು ಎಂದು ಜೀವನ ನಡೆಸುತ್ತಿರುವ ಈ ರೈತರಿಂದು ನಿರಂತರವಾಗಿ ಶೋಷಣೆಗಳಿಗೆ ಒಳಗಾಗುತ್ತಿದ್ದು, ಇದೀಗ ಮುಂದಿನ ದಿನಗಳ ಬಗ್ಗೆ ಕಲ್ಪನೆ ಮಾಡಲಸಾಧ್ಯವೆಂಬ ಹಂತಕ್ಕೆ ತಲುಪಿದ್ದಾರೆ. ಈ ರೀತಿಯ ಪರಿಸ್ಥಿಯನ್ನರಿತ ನಮ್ಮ ಸಮಾಜವಿಂದು ಇದರ ಪರಿಪೂರ್ಣ ಲಾಭವನ್ನು ಪಡೆಯಲು ಹವಣೆಸುತ್ತಿದ್ದು, ಇದೇ ಸ್ಥಿತಿ ಮುಂದುವರಿದಲ್ಲಿ ರೈತ ಸಮುದಾಯದೊಂದಿಗೆ ಇತರ ವ್ಯವಸ್ಥೆಗಳೂ ಸೋಲನ್ನು ಅನುಭವಿಸುವ ದಿನಗಳು ದೂರವಿಲ್ಲ.

ಕಳೆದೊಂದು ವರ್ಷದಿಂದ ನಮ್ಮ ಕೃಷಿ ಕ್ಷೇತ್ರವನ್ನು ಅಲುಗಿಸಲಾರಂಭಿಸಿದ ಅಂತರಾಷ್ಟೀಯ ಒಪ್ಪಂದಗಳು ನಿಜಕ್ಕೂ ಪರಿಣಾಮಕಾರಿ ಆಘಾತವನ್ನು ನೀಡುತ್ತಿದೆಯೇ ಎಂಬ ಬಗ್ಗೆ ಚಿಂತನೆಗಳು ಈಗಷ್ಟೇ ಆರಂಭವಾಗಿದ್ದು , ಈ ಹಂತದಲ್ಲೇ ಸೋಲಿನ ಸುಳಿಗೆ ಸಿಕ್ಕಿದ ರೈತ ಸಮುದಾಯ ಮುಂದೇನು ಮಾಡಬಹುದು ಎಂಬುದೀಗ ನಮ್ಮೆಲ್ಲರ ಮುಂದಿದೆ. ಆದರೆ ನಿಜಕ್ಕೂ ಒಪ್ಪಂದಗಳು ಆಘಾತ ನೀಡಿವೆಯೇ? ಇಲ್ಲ. ಹಾಗಾದರೆ ಈಗಿರುವ ಪರಿಸ್ಥಿತಿಯಾದರೂ ಏನು? ಇದಕ್ಕೆ ಪರಿಸ್ಥಿಯ ಲಾಭವೆನ್ನುವುದು.

ಅಂತಾರಾಷ್ಟೀಯ ಒಪ್ಪಂದಕ್ಕನುಗುಣವಾಗಿ ಕೃಷಿಯುತ್ಪನ್ನಗಳ ಆಮದಿಗೆ ವಿಪುಲ ಅವಕಾಶಗಳೆಂದು ಪ್ರಚಾರ ಕಂಡು ಬಂದ ಪರಿಣಾಮದಿಂದಾಗಿ ನಮ್ಮಲ್ಲಿ ಬೆಳೆಸಲ್ಪಡುವ ಹಲವು ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಈ ಸ್ಥಿತಿಗೆ ಕಾರಣ ಆಮದೆಂಬ ಪುಕಾರಿನೊಂದಿಗೆ ಮಾರುಕಟ್ಟೆಯಲ್ಲಿ ಧಾರಣೆ ಏರುಪೇರಾಗಿ, ಕೃಷಿಕರ ಸೋಲಿಗೆ ದಾರಿಯಾಯಿತು. ಇಲ್ಲಿ ಮಾರಾಟಗಾರನಿಗಾಗಲೀ, ವ್ಯಾಪಾರಸ್ಥನಿಗಾಗಲೀ ಒಪ್ಪಂದವೇನು, ಆಮದೆಷ್ಟಾಗಬಹುದು, ಅದರಿಂದ ತಾನು ವ್ಯವಹಾರ ಕೈಗೊಳ್ಳತ್ತಿರುವ ಉತ್ಪನ್ನದ ಮೇಲೇನು ಪರಿಣಾಮವಾಗಬಹುದು ಎಂಬ ಬಗ್ಗೆ ಮಾಹಿತಿಯನ್ನು, ತಿಳಿದೂ ಇಲ್ಲ. ಇದನ್ನರಿತ ಪರಿಸರವಿಂದು ಅದರ ಪರಿಪೂರ್ಣ ಪ್ರಯೋಜನ ಪಡೆಯುತ್ತಿದ್ದು, ಇದರಿಂದಾಗಿ ಕೃಷಿ ಕ್ಷೇತ್ರ ಸೋಲನ್ನಪ್ಪುತ್ತಿದೆ. ಇನ್ನೊಂದೆಡೆಯಲ್ಲಿ ಒಪ್ಪಂದವೆಂಬ ವಿಚಾರವನ್ನು ಮುಖ್ಯ ಅಸ್ತ್ರವನ್ನಾಗಿಸಿಕೊಂಡು ರಾಜಕೀಯ ಪಕ್ಷಗಳೂ ಪರಸ್ಪರ ಅರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು, ಇಲ್ಲಸಲ್ಲದ ವಾತಾವರಣವನ್ನು ಸೃಷ್ಟಿಸಿ ರೈತ ಸಮುದಾಯವನ್ನು ದಿಕ್ಕೆಡುವಂತೆ ಮಾಡಿ ಅವರೂ ಪರಿಸ್ಥಿತಿಯ ಲಾಭವನ್ನು  ಗಳಿಸುವಂತಾಗಿದೆ.

ರೈತರಿಂದು ಬೆಳೆಸುತ್ತಿರುವ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳತ್ತಿರುವ ವ್ಯಾಪಾರಿ ಸಮುದಾಯವೂ ಪರಿಸ್ಥಿತಿಯ ಲಾಭ ಪಡೆವಲ್ಲಿ ಹಿಂಜರಿದಿಲ್ಲ. ಅಗಾಧ ಪ್ರಮಾಣದ ಲಾಭ ಗಳಿಸುವ ಉದ್ದೇಶದಿಂದ ಪ್ರಕೃತಿ ವಿಕೋಪ, ಭೂಕಂಪ, ಬರ ಮತ್ತಿತರ ನೆಪಗಳನ್ನೊಡ್ಡಿ ಉತ್ಪಾದಕರನ್ನು ಮರುಳು ಮಾಡಿ ಅನುಕಂಪವೆಂಬ ವಾತಾವರಣವನ್ನು ಸೃಷ್ಟಿಸಿ ಧಾರಣೆಯ ಏರಿಳಿತವನ್ನು ಮಾಡಿಕೊಂಡು ಪರಿಸ್ಥಿತಿ ಲಾಭ ಪಡೆಯುತ್ತಿರುವುದು ನಮ್ಮಲ್ಲಿ ಸರ್ವೇ ಸಾಮಾನ್ಯ.

ಒಪ್ಪಂದಗಳಿಗನುಗುಣವಾಗಿ ನಮ್ಮಲ್ಲಿ ಉತ್ಪಾದಿಸಲ್ಪಡುವತ್ತಿರುವ ಕೆಲವು ಕೃಷಿಯುತ್ಪನ್ನಗಳು ನಿಜಕ್ಕೂ ಹೊಡೆತ ತಿಂದಿದ್ದು, ಇನ್ನು ಕೆಲವು ಈಗಿನ್ನೂ ಹೊಡೆತ ತಿಂದಿಲ್ಲ. ಆದರೆ ಹೊಡೆತ ತಿಂದ, ತಿನ್ನುತ್ತಿರುವ ಉತ್ಪನ್ನಗಳನ್ನೇ ಎದುರಿಗಿಟ್ಟು, ಇನ್ನುಳಿದ ಉತ್ಪನ್ನಗಳಿಂದ ಲಾಭ ಗಳಿಸಹೊರಟ ಮಾರುಕಟ್ಟೆ ವ್ಯವಸ್ಥೆಯಿಂದ ಇಡೀ ಕೃಷಿ ಕ್ಷೇತ್ರವನ್ನು ಸೋಲಿಗೆ ಕೊಂಡೊಯ್ಯುತ್ತಿದ್ದರೂ ನಮ್ಮ ಸರಕಾರಗಳಿಂದು ಎಚ್ಚೆತ್ತಂತೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಕೃಷಿ ಕ್ಷೇತ್ರಕ್ಕೆ ಅಗತ್ಯ ಮಾಹಿತಿಗಳ ಪೂರೈಕೆಯ ಅಗತ್ಯವಿದೆ. ಈ ಮಾಹಿತಿಗಳು ಸ್ಥಳೀಯ ಅಗತ್ಯಕ್ಕನುಗುಣವಾಗಿ ಇರಬೇಕು ಪ್ರತಿಯೊಂದು ಜಿಲ್ಲಾ ಕೇಂದ್ರಗಳು ಮತ್ತು ಅಲ್ಲಿನ ಆಡಳಿತ ವ್ಯವಸ್ಥೆಗಳು, ಮಾಧ್ಯಮಗಳು ಮತ್ತಿತರ ವ್ಯವಸ್ಥೆಗಳು ಆಯಾಯ ಪ್ರದೇಶಗಳ ಕೃಷಿ ಕ್ಷೇತ್ರದ ಮೇಲೆ, ಅಲ್ಲಿ ಬೆಳೆಸಲ್ಪಡುವ, ಬೆಳೆಯಲಾಗುತ್ತಿರುವ ಕೃಷಿಯುತ್ಪನ್ನಗಳ ಮೇಲೆ ಆಮದಿನ ಪರಿಣಾಮವೇನಾಗಬಹುದು, ಇಲ್ಲವೇ ಒಪ್ಪಂದಗಳಿಂದ ಯಾವ ರೀತಿಯ ತೊಂದರೆಗಳು ಬರಬಹುದು, ತೊಂದರೆಗಳು ಬರುವುದಿದ್ದಲ್ಲಿ, ಯಾವ ರೀತಿಯವುಗಳು, ಯಾವಕಾಲಕ್ಕೆ, ಯಾವ ಪ್ರಮಾಣದಲ್ಲಿ ಎಂಬಿತ್ಯಾದಿ ಮಾಹಿತಿಗಳನ್ನು ರೈತ ಸಮುದಾಯಕ್ಕೆ ತಿಳಿ ಹೇಳಬೇಕಾಗಿದೆ. ಇದರೊಂದಿಗೆ ಪ್ರಕೃತ ಈ ಪ್ರದೇಶಗಳಲ್ಲಿ ಉತ್ಪಾದಿಸಲ್ಪಡುವ ಉತ್ಪನ್ನಗಳು ಎಲ್ಲಿ, ಹೇಗೆ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ, ಮುಂದೆ ಈ ಉತ್ಪನ್ನಗಳ ಭವಿಷ್ಯವೇನು, ಉತ್ಪಾದನೆಯ ಹೆಚ್ಚಳಕ್ಕೆ ಅವಕಾಶವೆಷ್ಟು ಮುಂತಾದ ವಿಚಾರಗಳನ್ನು ಈ ಕ್ಷೇತ್ರಕ್ಕೊದಗಿಸಬೇಕು. ಇದಕ್ಕಾಗಿ ನಮ್ಮಲ್ಲಿರುವ ಆಡಳಿತ ಮತ್ತಿತರ ವ್ಯವಸ್ಥೆಗಳಿಂದು ಅಗತ್ಯಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿದೆ.

ಈ ರೀತಿಯದ್ದಾದ ಪರಿಣಾಮಕಾರಿ ಹೆಜ್ಜೆಗಳನ್ನಿಂದು ನಮ್ಮ ಸರಕಾರಗಳು, ಸಂಸ್ಥೆಗಳು ಮಾಧ್ಯಮ ಮತ್ತಿತರ ಸಂಘಟಿತ ಕ್ಷೇತ್ರಗಳು ಇಟ್ಟಲ್ಲಿ ನಮ್ಮ ಕೃಷಿಕ್ಷೇತ್ರ ಮುಂದೆ ಅಭಿವೃದ್ಧಿಯಾಗಿ ಬೆಳವಣಿಗೆಯನ್ನು ಸಾಧಿಸಬಹುದು. ಇಲ್ಲವಾದಲ್ಲಿ ಈಗಿರುವ ವ್ಯವಸ್ಥೆಯಾದ ಪರಿಸ್ಥಿಯ ಪ್ರಯೋಜನ ಮುಂದುವರಿದು ಕೃಷಿಕ್ಷೇತ್ರ ಸೋಲನ್ನಪ್ಪಿಕೊಳ್ಳಬಹುದು.