ಪೀಠಿಕೆ

ಅನಾದಿಕಾಲದಿಂದಲೂ ನಮ್ಮಲ್ಲಿ ಬೆಳೆಸಿ ಬಳಸಲ್ಪಡುತ್ತಿರುವ ಒಂದು ಪ್ರಮುಖ ಕೃಷಿಯುತ್ಪನ್ನ ಅಡಿಕೆ. ಅಡಿಕೆಯು ನಮ್ಮ ದೇಶದ ಒಂದು ಮುಖ್ಯ ತೋಟಗಾರಿಕಾ ಬೆಳೆಯಾಗಿದ್ದು, ಇದಕ್ಕಿಂದು ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಮಹತ್ವವಿದ್ದು, ಇದಿಲ್ಲದೆ ಯಾವುದೇ ಮಹತ್ವದ ಕಾರ್ಯಗಳು ಆರಂಭವಾಗಲಾರದು. ದೇವರ ಪೂಜೆಗಾಗಲಿ, ಶುಭಸಮಾರಂಭಗಳಲ್ಲಾಗಲಿ ಅಡಿಕೆ ಇಲ್ಲದೆ ಇವು ನಡೆಯದು. ಉತ್ತರ ಭಾರತದ ರಾಜ್ಯಗಳಲ್ಲಿ ಯಾವುದೇ ಶುಭ ಸಮಾರಂಭಗಳಲ್ಲಿ ಇಲ್ಲವೇ ಅತಿಥಿ ಸತ್ಕಾರ ಕಾರ್ಯಗಳಲ್ಲಿ ಅಡಿಕೆಗೆ ಒಂದು ಪ್ರತಿಷ್ಠಿತ ಸ್ಥಾನವಿದೆ. ಇಲ್ಲಿ ಅತಿಥಿಗಳಿಗೆ ಕೊಡುವ ಅಡಿಕೆ ಗಾತ್ರ ದೊಡ್ಡದಾದಷ್ಟು ಘನಸ್ಥಿಕೆಯೂ ಹೆಚ್ಚುತ್ತದೆ. ತಾಂಬೂಲ ಸೇವನೆಗೆ ಭಾರತದಲ್ಲಿರುವಷ್ಟು ಮಹತ್ವ ವಿಶ್ವದ ಇನ್ಯಾವುದೇ ರಾಷ್ಟ್ರಗಳಲ್ಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಮತ್ತು ಅಡಿಕೆಯಿಂದೊಡಗೂಡಿದ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೊರರಾಷ್ಟ್ರಗಳಲ್ಲೂ ಬೇಡಿಕೆ ಏರ ತೊಡಗಿದ್ದು, ಇದರಿಂದಾಗಿ ಅಡಿಕೆಗಿಂದು ಅಂತರಾಷ್ಟ್ರೀಯ ಸ್ಥಾನಮಾನ ದೊರಕಿದಂತಾಗಿದೆ.

ಭಾರತದಲ್ಲಿ ಅಡಿಕೆ ಕೃಷಿಯನ್ನು ಮುಖ್ಯವಾಗಿ ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಇದನ್ನು ಅವಲಂಬಿಸಿ ಹಲವು ಕೋಟಿಗಳಷ್ಟು ಕೃಷಿಕರು, ಕೃಷಿಕಾರ್ಮಿಕರು ಮತ್ತು ಉದ್ಯಮಿಗಳು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅಡಿಕೆ ವ್ಯವಹಾರದಿಂದ ನಮ್ಮ ಸರಕಾರಗಳಿಗೆ ಅಗಾಧ ಪ್ರಮಾಣದ ಆದಾಯವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊರಕುತ್ತಿದೆ. ಇದರೊಂದಿಗೆ ಪರೋಕ್ಷವಾಗಿ ವಿವಿಧ ಉದ್ದಿಮೆಗಳ ಬೆಳವಣಿಗೆ, ಉದ್ಯೋಗ ನಿರ್ಮಾಣ ಮತ್ತು ವಿವಿಧ ರೀತಿಯ ಸೇವೆಗಳಾದ ಹಣಕಾಸು ಸಂಸ್ಥೆ, ಸಾರಿಗೆ, ಶಿಕ್ಷಣ ಮುಂತಾದವುಗಳ ಅಭಿವೃದ್ಧಿಯೂ ಆಗುತ್ತಲಿದೆ. ಉದಾಹರಣೆಗೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಕೇರಳದ ಕಾಸರಗೋಡು ಜಿಲ್ಲೆಗಳ ಅಭಿವೃದ್ಧಿಯಲ್ಲಿ ಅಡಿಕೆಯ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಕ್ಷೇತ್ರದಲ್ಲಾಗುವ ಆಗು ಹೋಗುಗಳು ಈ ಜಿಲ್ಲೆಗಳಲ್ಲಿನ ಕೈಗಾರಿಕೆ, ಹಣಕಾಸಿನ ಸಂಸ್ಥೆ, ಶಿಕ್ಷಣ ಸಂಸ್ಥೆ, ಸಾರಿಗೆ, ವಾಣಿಜ್ಯ ವ್ಯವಹಾರ ಮತ್ತಿತರೇ ವಹಿವಾಟುಗಳ ಭವಿಷ್ಯವನ್ನು ನಿರ್ಧರಿಸುವುದು. ಒಟ್ಟಾರೆಯಾಗಿ ದೇಶದಾದ್ಯಂತ ಇಂದು ನಡೆಯುವ ಅಡಿಕೆ ವಹಿವಾಟು ಸುಮಾರು ೧೨,೦೦೦ ಕೋಟಿಗಳಿಂಗಿಂತಲೂ ಅಧಿಕವಾಗಿದ್ದು, ಈ ಕ್ಷೇತ್ರದಲ್ಲಾಗಬಲ್ಲ ಯಾವುದೇ ಏರಿಳಿತಗಳು ದೇಶದ ಆರ್ಥಿಕತೆಯ ಮೇಲೆ ಪ್ರಬಲ ಪರಿಣಾಮ ಬೀರಬಲ್ಲದು.

ಅಡಿಕೆಯ ಇತಿಹಾಸ:

ಸಸ್ಯ ಶಾಸ್ತ್ರದಲ್ಲಿ ಅಡಿಕೆಯ “ಅರೆಕಾಕಟೇಚು” ಎಂದಾಗಿದ್ದು, ಇದರ ಮೂಲದ ಬಗ್ಗೆ ಹಲವು ಭಿನ್ನಾಭಿಪ್ರಾಯಗಳಿದ್ದರೂ, ಇದು ಮಲಯಾ ದೇಶದಲ್ಲಿ ಹುಟ್ಟಿ ನಂತರ ಇತರೇ ರಾಷ್ಟ್ರಗಳತ್ತ ಪಸರಿತೆಂಬುದನ್ನು ಹಲವು ಮಾಹಿತಿಗಳ ಆಧಾರದಿಂದ ತಿಳಿದುಕೊಳ್ಳಬಹುದು. ಭಾರತದಲ್ಲಿ ಅಡಿಕೆ ಯಾವಾಗ ಹುಟ್ಟಿ ಬಂತು ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲದಿದ್ದರೂ, ಅದು ಕ್ರಿ.ಪೂ. ದಲ್ಲೇ ಉನ್ನತ ಸ್ಥಾನಗಳಿಸಿಕೊಂಡಿತ್ತೆಂಬುದನ್ನು ಐತಿಹಾಸಿಕ ಗ್ರಂಥಗಳಲ್ಲಿ ಹೆಸರಿಸಿರುವ ವಿಚಾರಗಳಿಂದ ಅರಿತುಕೊಳ್ಳಬಹುದು. ವೇದ, ಉಪನಿಷತ್ ಮತ್ತು ಸಂಹಿತೆಗಳಲ್ಲಿ ಅಡಿಕೆಯ ಮಹತ್ವದ ಬಗ್ಗೆ ವರ್ಣನೆಗಳಿದ್ದು, ಗುಪ್ತರ ಕಾಲದ ಶಾಸನಗಳು, ಆ ಬಳಿಕ ಬಂದ ಕಾವ್ಯಗಳು ಮತ್ತು ಗ್ರಂಥಗಳು ಅಡಿಕೆಯ ಬಗ್ಗೆ ಹೆಸರಿಸಿದ್ದು ಈ ಎಲ್ಲಾ ಆಧಾರಗಳಿಂದ ಅಡಿಕೆಯು ಅನಾಧಿಕಾಲದಿಂದಲೂ ನಮ್ಮಲ್ಲಿ ಉಪಯೋಗದಲ್ಲಿ ಇತ್ತೆಂಬುದನ್ನು ನಾವು ತಿಳಿದುಕೊಳ್ಳಬಹುದು.

ನಾಲ್ಕನೆ ಶತಮಾನದಲ್ಲಿ ವಾಗ್ಭಟನು ಬರೆದ ‘ಅಷ್ಟಾಂಗ ಹೃದಯ’ವೆಂಬ ಗ್ರಂಥದಲ್ಲಿ ಅಡಿಕೆಯು ಬಿಳಿತೊನ್ನು, ಕುಷ್ಠ, ಕೆಮ್ಮು, ಮೂರ್ಛಾರೋಗ, ಹುಳಗಳ ಭಾಧೆ, ರಕ್ತಹೀನತೆ ಮತ್ತು ಶಾರೀರಿಕ ಬೆಳೆವಣಿಗೆ ಮುಂತಾದವುಗಳನ್ನು ಹತೋಟಿಯಲ್ಲಿಡಲು ಸಹಾಯಕವೆಂದು ಹೆಸರಿಸಿದ್ದು, ಇದರೊಂದಿಗೆ ವಿಷ್ಣುಶರ್ಮನು ‘ಹಿತೋಪದೇಶ’ದಲ್ಲಿ ಅಡಿಕೆಯು ಕಫ ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಉಪಕಾರಿಯೆಂದು ಹೇಳಲಾಗಿದ್ದು, ಇದೇ ರೀತಿಯಣ ವರ್ಣನೆಗಳನ್ನು ಮತ್ತಿತರೇ ಉಪಯೋಗಗಳನ್ನು ಹಲವು ಪ್ರಾಚೀನ ಗ್ರಂಥಗಳು ಹೆಸರಿಸಿದ್ದು, ಇದರಿಂದಾಗಿ ಅಡಿಕೆಗೆ ಐತಿಹಾಸಿಕ ಮೂಲ ಮತ್ತು ಮಹತ್ವವಿದೆಯಿಂಬುದನ್ನು ನಾವಿಂದು ತಿಳಿದುಕೊಳ್ಳಬಹುದಾಗಿದೆ.

ಭಾರತದ ಐತಿಹಾಸಿಕ ಪುಟಗಳನ್ನು ತಿರುಚಿದಾಗ ಅಡಿಕೆಗೆ ಅನಾದಿ ಕಾಲದಿಂದಲೂ ಇದ್ದ ಸಾಮಾಜಿಕ ಮತ್ತು ಧಾರ್ಮಿಕ ಮಹತ್ವವನ್ನು ಅರಿತುಕೊಳ್ಳಬಹುದು. ಉದಾಹರಣೆಗೆ ಮೊಗಲರ ಕಾಲದಲ್ಲಿ ಅಡಿಕೆಗೆ ಬಹಳಷ್ಟು ಮಹತ್ವ ದೊರಕಿತ್ತು. ಆ ಕಾಲದಲ್ಲಿ ಅಡಿಕೆಯಿಂದೊಡಗೂಡಿದ ವೈವಿಧ್ಯಮಯ ತಾಬೂಲದ ಸೇವನೆಯಾಗುತ್ತಿತ್ತು. ಈ ತಾಬೂಲದಲ್ಲಿ ಅಧಿಕ ಬೆಲೆಯ ಸಾಂಬಾರ ಪದಾರ್ಥಗಳಾದ ಲವಂಗ, ಯಾಲಕ್ಕೆ, ಜಾಯಿಪತ್ರೆ, ಕೇಸರಿ, ಸಿಹಿ ಪದಾರ್ಥ ಇತ್ಯಾದಿಗಳ ಬಳಕೆಯಾಗುತ್ತಿತ್ತು. ಇದೇ ಪ್ರವೃತ್ತಿ ಮುಂದುವರಿದು ಇದೀಗ ಅಡಿಕೆಯಿಂದೊಡಗೂಡಿದ ನಾನಾ ರೀತಿಯ ವೀಳ್ಯದೆಲೆಗಳನ್ನು ಉಪಗೋಗಿಸಿ ತಯಾರಿಸಿ ಮಾಡಲಾಗುವ ತಾಬೂಲ ಯಾ ಬೀಡಾಗಳ ಸೇವನೆ ದೇಶದಾದ್ಯಂತ ಕಾಣಬಹುದಾಗಿದ್ದು, ಇವೆಲ್ಲಾ ಅಡಿಕೆಗಿಂದು ನಮ್ಮಲ್ಲಿರುವ ಮಹತ್ವವನ್ನು ತಿಳಿಸುತ್ತದೆ.

ಅಡಿಕೆಯಲ್ಲಿ ನಾನಾ ರೀತಿಯ ಔಷಧೀಯ ಗುಣಗಳಿವೆಯೆಂಬುದನ್ನು ಪುರಾತನ ಗ್ರಂಥಗಳೇ ತಿಳಿಸುತ್ತಿದ್ದರೂ, ನಮ್ಮಲ್ಲಿಂದು ಇದನ್ನು ಕೇವಲ ಜಗಿಯಲು ಮಾತ್ರ ಉಪಗೋಗಿಸುತ್ತಿರುವುದರಿಂದ ಅಡಿಕೆಯ ಪರಿಪೂರ್ಣ ಬಳಕೆ ನಮ್ಮಲ್ಲಿನ್ನೂ ಆಗಿಲ್ಲ ಎನ್ನಬಹುದು. ಅಡಿಕೆಯ ಹಿಂಗಾರಕ್ಕೆ ಇರುವ ಪರಿಮಳ, ದ್ರವ್ಯಗಳನ್ನು ತಯಾರಿಸಲು ಅವಕಾಶವಿರಲೂ ಬಹುದು. ಈ ಬಗ್ಗೆ ನಮ್ಮಲ್ಲೇನೂ ಪ್ರಯತ್ನಗಳಾದಂತಿಲ್ಲ. ಅಡಿಕೆಯ ಸಿಪ್ಪೆ, ಮರ, ಕಾಂಡ, ಎಲೆ ಇತ್ಯಾದಿಗಳಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡಕೊಳ್ಳಲು ಅವಕಾಶಗಳಿದ್ದರೂ ಇವಕ್ಕಿನ್ನೂ ಕ್ಷೇತ್ರ ಕೈಹಾಕಿಲ್ಲ. ಇದರಿಂದಾಗಿ ಅಡಿಕೆಯ ಪರಿಪೂರ್ಣ ಪ್ರಯೋಜನಗಳನ್ನು ಪಡೆಯಲು ಮತ್ತು ಹೆಚ್ಚಿನ ಆದಾಯಗಳಿಸಲು ಇಲ್ಲಿಂದು ಅವಕಾಶಗಳಿದ್ದು ಇವನ್ನಿಂದು ಕ್ಷೇತ್ರ ತನ್ನದಾಗಿಸಿಕೊಳ್ಳಬೇಕು.

ಪ್ರಕೃತ ಅಡಿಕೆಯಿಂದು ಕರಾವಳಿ ಜಿಲ್ಲೆಗಳ ಜನರ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದರೂ, ಈ ಕ್ಷೇತ್ರವು ನಿರಂತರವಾಗಿ ಏಳು ಬೀಳುಗಳನ್ನು ಕಂಡು ಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಈ ಗ್ರಂಥವು ಅದಕ್ಕಿರುವ ಕಾರಣಗಳನ್ನು ಮತ್ತು ಅಳವಡಿಸಿಕೊಳ್ಳಬೇಕಾದ ಪರಿಹಾರೋಪಾಯಗಳನ್ನು ಸೂಚಿಸುವ ದಿಕ್ಕಿನದ್ದಾಗಿದೆ. ಅಡಿಕೆ ಕ್ಷೇತ್ರ ಕಾಲಕಾಲಕ್ಕೆ ದಿಕ್ಕೆಡಲು ಒಂದು ಮುಖ್ಯ ಕಾರಣ ಅದರ ಬೆಲೆಯಲ್ಲಿ ಕಂಡು ಬರುತ್ತಿರುವ ಏರುಪೇರು. ಆರ್ಥಿಕ ಸಿದ್ಧಾಂತದ ಪ್ರಕಾರ ಯಾವುದೇ ಉತ್ಪನ್ನದ ಧಾರಣೆ ಏರಿಳಿತಕ್ಕೊಳಗಾಗುವುದು ಅದರ ಪೂರೈಕೆ ಮತ್ತು ಬೇಡಿಕೆಗಳಲ್ಲಾಗುತ್ತಿರುವ ಬದಲಾವಣೆಗಳಿಂದ. ಈ ನಿಟ್ಟಿನಲ್ಲಿ ನಾವಿಂದು ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಅಡಿಕೆಯ ಪ್ರಮಾಣವೆಷ್ಟು, ಇದರ ಮಾರಾಟ ವ್ಯವಸ್ಥೆಯೇನು, ಇದನ್ನಿಂದು ಯಾವ ರೀತಿಯಲ್ಲಿ ಬಳಸಲಾಗುತ್ತಿದೆ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ವಿಚಾರಗಳನ್ನು ಅಂಕಿ-ಅಂಶಗಳ ಆಧಾರದಲ್ಲಿ ತಿಳಿಸುವ ಪುಸ್ತಕಗಳ ಅಭಾವ ನಮ್ಮಲ್ಲಿರುವುದರಿಂದ ಮತ್ತು ಈ ಎಲ್ಲಾ ವಿಷಯಗಳನ್ನು ಬೆಳೆಗಾರರು, ವ್ಯವಹಾರಸ್ಥರು, ಸಂಸ್ಥೆಗಳು, ಇಂದಿನ ಮತ್ತು ಮುಂದಿನ ಜನಾಗದ ಜನರು ಅರಿತುಕೊಳ್ಳಬೇಕಾಗಿರುವುದರಿಂದ ಈ ಪುಸ್ತಕಗಳನ್ನು ಬರೆಯುವ ಉದ್ದೇಶವನ್ನು ನಾನಿಟ್ಟುಕೊಂಡೆ.

ಈ ಗ್ರಂಥವು ಮುಖ್ಯವಾಗಿ ದೇಶದಲ್ಲಿರುವ ಉತ್ಪಾದನೆಯಾಗುತ್ತಿರುವ ಅಡಿಕೆಯ ಪ್ರಮಾಣ, ಅದರ ಮಾರುಕಟ್ಟೆ, ಇದಕ್ಕಿರುವ ಆಂತರಿಕ ಮತ್ತು ಬಾಹ್ಯ ಬೇಡಿಕೆ, ಧಾರಣೆಯ ವರ್ತನೆ, ಕ್ಷೇತ್ರವೆದುರಿಸುತ್ತಿರುವ ಸಮಸ್ಯೆಗಳು, ಅವಕ್ಕಿರುವ ಪರಿಹಾರಗಳು, ಸರಕಾರ, ಸಂಸ್ಥೆ ಮತ್ತು ಸಂಘಗಳಿಂದಾದ ಪ್ರಯತ್ನಗಳು ಮತ್ತು ಇತರೇ ವಿಚಾರಗಳ ಬಗ್ಗೆ ಲಭ್ಯ ಅಂಕಿ-ಅಂಶಗಳ ಆಧಾರದಲ್ಲಿ ಮಾಹಿತಿಯನ್ನೊದಗಿಸಲಿದೆ. ಈ ಅಂಕಿ-ಅಂಶಗಳು ಸರಕಾರದ ವಿಭಾಗಗಳದ್ದಾಗಿದ್ದು, ಇವು ಪರಿಪೂರ್ಣವಲ್ಲವೆಂಬ ಭಾವನೆ ನಮ್ಮಲ್ಲಿದ್ದರೂ, ಇವುಗಳ ಆಧಾರದಿಂದ ಈ ಕ್ಷೇತ್ರದಲ್ಲಿ ಇಂದೇನು ಆಗುತ್ತಿದೆ, ಎತ್ತ ಸಾಗುತ್ತಿದೆ, ಮುಂದೇನಾಗಬೇಕು ಮತ್ತು ಆಗಬಹುದು ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಖಂಡಿತವಾಗಿಯೂ ಸಾಧ್ಯ. ಆದ್ದರಿಂದ ಇದು ಈ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಬಹುದೆಂಬ ಭಾವನೆ ನನ್ನದು.