ವಿಶ್ವದಾದ್ಯಂತ ೨೦೦೦ನೇ ಇಸವಿ ಬಂದಾಗ ಜನರೆಲ್ಲಾ ಸಂತೋಷದಿಂದ ಕುಪ್ಪಳಿಸುತ್ತಿದ್ದಾಗ, ಭಾರತದ ಅದರಲ್ಲೂ ಮುಖ್ಯವಾಗಿ ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಅಡಿಕೆ ಬೆಳೆಗಾರರು ಕಂಗೆಟ್ಟು ಮುಂದೇನು ಎಂಬ ಚಿಂತೆಯಲ್ಲಿದ್ದರು. ಇದಕ್ಕೆ ಮುಖ್ಯ ಕಾರಣ ಚಾಲಿ ಅಡಿಕೆಯ ಧಾರಣೆಯಲ್ಲಿ ಕಂಡು ಬಂದ ಕುಸಿತ. ಈ ಕುಸಿತವು ದಿನದಿಂದ ದಿನಕ್ಕೆ ಮತ್ತಷ್ಟಾಗಿ, ಕೆಲವೊಮ್ಮೆ ಅಲ್ಪ ಸ್ವಲ್ಪ ಚೇತರಿಸಿ, ಇಡೀ ಕ್ಷೇತ್ರವನ್ನು ಅಲುಗಿಸಲಾರಂಭಿಸಿತು. ಜುಲೈ ೨೦೦೧ರ ಅಂತಿಮ ಭಾಗದಲ್ಲಿ ಚಾಲಿ ಅಡಿಕೆಯ ಧಾರಣೆಯು ನೆಲಕಚ್ಚಲು ಆರಂಭವಾಯಿತು. ಈ ರೀತಿಯ ಇಳಿಮುಖ ಪ್ರವೃತ್ತಿ ೨೦೦೦ನೇ ಇಸವಿಯಿಂದ ಆರಂಭಗೊಂಡಾಗ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರ ಸಮಾವೇಶಗಳಾದವು, ಇಲ್ಲೆಲ್ಲಾ ಸಮಸ್ಯೆಯ ನಿವಾರಣೆಗೆ ಪರಿಹಾರಗಳನ್ನು ಕಂಡುಕೊಳ್ಳಲು ಚಿಂತನೆಗಳಾದವು. ಈ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಸಮಾವೇಶಗಳ ಪೈಕಿ ಹೆಚ್ಚಿನವುಗಳಲ್ಲಿ ಭಾಗವಹಿಸಿದ ನಾನು ಅಡಿಕೆ ಮಾರುಕಟ್ಟೆಯ ರೀತಿ, ನೀತಿಗಳ ಬಗ್ಗೆ ನನ್ನ ಅಧ್ಯಯನದಿಂದ ಕಂಡುಕೊಂಡ ವಿಚಾರಗಳನ್ನು ಮಂಡಿಸಿದ್ದೆ. ನಾನು ಮಂಡಿಸಿದ್ದ ವಿಚಾರಗಳನ್ನು ಒಂದು ಪುಸ್ತಕದ ರೂಪದಲ್ಲಿ ಬೆಳೆಗಾರರಿಗೆ ಒದಗಿಸಬೇಕೆಂಬ ಅಭಿಪ್ರಾಯವನ್ನು ಈ ಎಲ್ಲಾ ಸಮಾವೇಶಗಳು ಹೆಸರಿಸಿದ್ದರಿಂದ “ಅಡಿಕೆ ಮಾರುಕಟ್ಟೆ : ಅಂದು, ಇಂದು, ಮುಂದು” ತಮ್ಮ ಮುಂದಿಡುತ್ತಿದ್ದೇನೆ.

ಕಳೆದ ಶತಮಾನದ ಆದಿಯಿಂದೀಚೆಗೆ ಅಡಿಕೆಯ ಧಾರಣೆ ಸದಾ ಏರುಪೇರಾಗುತ್ತಿದೆ. ಈ ರೀತಿಯ ವರ್ತನೆ ಕಂಡು ಬಂದಾಗ ಇದಕ್ಕೆ ಹೆಚ್ಚುತ್ತಿರುವ ಉತ್ಪಾದನೆ, ಬಳಕೆಯ ಪ್ರಮಾಣದ ಕುಸಿತ ಮತ್ತ ಹೆಚ್ಚಿನ ಆಮದು ಎಂಬಿತ್ಯಾದಿ ಕಾರಣಗಳನ್ನು ಮಾರುಕಟ್ಟೆ ವಲಯವು ಕೊಡುತ್ತಿದ್ದು, ಇದರಿಂದಾಗಿ ಇಡೀ ಅಡಿಕೆ ಕ್ಷೇತ್ರವೇ ಇಂದು ಗೊಂದಲಕ್ಕೊಳಗಾಗಿವೆ. ಇನ್ನೊಂದೆಡೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊರಕಿದ ಆಕರ್ಷಣಾ ಬೆಲೆ ಅಡಿಕೆ ಬೆಳೆಯ ವಿಸ್ತರಣೆಗೆ ಅವಕಾಶವನ್ನೂ ಕಲ್ಪಿಸಿದೆ. ಇವೆಲ್ಲದರಿಂದ ಅಡಿಕೆ ಬೆಳೆಗಾರರಿಂದು ಮುಂದೇನು ಎಂಬ ಚಿಂತೆಗೊಳಗಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಲು ಬೆಳೆಗಾರರದ್ದಾದ ಸಂಸ್ಥೆಗಳು ಶ್ರಮಿಸುತ್ತಿದ್ದು, ಇದರೊಂದಿಗೆ ಹೊಸ ಸಂಸ್ಥೆಗಳೂ ಹುಟ್ಟುತ್ತಿವೆ. ಹೀಗಿದ್ದರೂ ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಅಡಿಕೆ ಕ್ಷೇತ್ರಕ್ಕೆ ಸರಿಯಾದ ಮಾಹಿತಿಯ ಅಭಾವವಿದೆಯೆಂಬುದನ್ನು ಅರಿತ ನಾನು ೧೯೮೪ರಿಂದೀಚೆಗೆ ಅಡಿಕೆ ಮರುಕಟ್ಟೆ ವಿಚಾರದಲ್ಲಿ ಕೈಗೊಂಡ ಸಮೀಕ್ಷೆ ಮತ್ತು ಅಧ್ಯಯನಗಳ ಅಧಾರದಿಂದ ಈ ಪ್ರಯತ್ನಕ್ಕಿಳಿದಿದ್ದೇನೆ. ಆದರೂ ಈ ಪುಸ್ತಕದಲ್ಲಿ ಕಂಡು ಬರುವ ಕುಂದುಕೊರತೆಗಳನ್ನು, ಉಳಿದುಕೊಂಡಿರುವ ದೋಷಗಳನ್ನು ಗುರುತಿಸಿ ಇದರ ಉಪಯುಕ್ತತೆ ಹೆಚ್ಚುವಂತೆ ಮಾಡಲು ತಜ್ಞರಿಂದ ಬರುವ ಸೂಕ್ತ ಸಲಹೆಗಳನ್ನು ಸ್ವೀಕರಿಸಿ ಮುಂದಿನ ಮುದ್ರಣ ಸಮಯದಲ್ಲಿ ಅವುಗಳನ್ನು ಅಳವಡಿಸಿ ಇದು ಇನ್ನೂ ಹೆಚ್ಚು ಉಪಯುಕ್ತವಾಗುವಂತೆ ಮಾಡಲು ಪ್ರಯತ್ನಿಸುತ್ತೇನೆ.

ಅಡಿಕೆ ಮರುಕಟ್ಟೆ ವಿಚಾರದಲ್ಲಿ ನಾನಿಲ್ಲಿ ಅಳವಡಿಸಿಕೊಂಡ ವಿಚಾರಗಳು ಮತ್ತು ಅಂಕಿ-ಅಂಶಗಳ ಬೆಂಬಲಗಳನ್ನು ಹೊತ್ತ ಯಾವುದೇ ಪುಸ್ತಕಗಳು ಕನ್ನಡದಲ್ಲಿ ಈ ತನಕ ಬಾರದೇ ಇರುವುದರಿಂದ ಇದೊಂದು ಉಪಯುಕ್ತ ಪುಸ್ತಕವಾಗಬಹುದೆಂಬ ಅನಿಸಿಕೆ ನನ್ನದು.

ಈ ಪುಸ್ತಕದ ರಚನೆಗಾಗಿ ಮಾಹಿತಿಯನ್ನು ಸಂಗ್ರಹಿಸಲು ನಾನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಿಂದ ಸಹಾಯವನ್ನು ಪಡೆದಿದ್ದು, ಇದರೊಂದಿಗೆ ಕ್ಯಾಂಪ್ಕೋ, ಎಸ್‌.ಕೆ.ಎ.ಸಿ.ಯಮ್‌.ಎಸ್., ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌, ಟಿ.ಎಸ್‌.ಎಸ್‌., ಮ್ಯಾಮ್‌ಕೋಸ್‌, ಸಿ.ಪಿ.ಸಿ.ಆರ್.ಐ. ವಿಟ್ಲ, ಕಾಸರಗೋಡು ಮುಂತಾದ ಸಂಸ್ಥೆಗಳಿಂದ ಪ್ರತಯಕ್ಷ ಹಾಗೂ ಪರೋಕ್ಷ ಬೆಂಬಲವನ್ನು ಪಡಕೊಂಡಿದ್ದು, ಈ ಎಲ್ಲಾ ಇಲಾಖೆಗಳ ಮತ್ತು ಸಂಸ್ಥೆಗಳ ಆಡಳಿತ ಮತ್ತು ಸಿಬ್ಬಂಧಿ ವರ್ಗದವರಿಗೆ ನಾನು ಋಣಿಯಾಗಿದ್ದೇನೆ.

ಈ ಕೃತಿಯ ರಚನೆಯ ಕಾರ್ಯದಲ್ಲಿ ನನಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದ.ಕ. ಜಿಲ್ಲೆಯ ಸಹಕಾರಿ ಧುರೀಣರು, ಬೆಳೆಗಾರರು ಮತ್ತು ಸಂಸ್ಥೆಗಳು ಸಹಕಾರವನ್ನಿತ್ತಿದ್ದು ಇವರಿಗೂ ನನ್ನ ನಮನಗಳು. ಅಡಿಕೆಯ ವಿವಿಧ ವಿಚಾರಗಳ ಅದರಲ್ಲೂ ಮುಖ್ಯವಾಗಿ ಮಾರುಕಟ್ಟೆ, ಸಮಸ್ಯೆಗಳು ಎಂಬಿತ್ಯಾದಿಗಳ ಬಗ್ಗೆ ನಾನು ಈ ಮೊದಲು ಬರೆದ ಲೇಖನಗಳನ್ನು ಪ್ರಕಟಿಸಿ ಸಹಕರಿಸಿದ ಕನ್ನಡ ದೈನಿಕಗಳಾದ ಉದಯವಾಣಿ, ವಿಜಯ ಕರ್ನಾಟಕ, ಹೊಸದಿಂಗಂತ, ಜನಾಂತರಂಗ ಪತ್ರಿಕೆಗಳ ಸಂಪಾದಕರುಗಳಿಗೆ ಮತ್ತು ವಿವಿಧ ಮಾಹಿತಿಗಳನ್ನು ಪ್ರಕಟಿಸಿ ಸಹಕರಿಸಿದ ರಾಜ್ಯದ ಎಲ್ಲಾ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳ ವರದಿಗಾರರನ್ನು ಇಲ್ಲಿ ನೆನೆಸುತ್ತೇನೆ.

ನನ್ನ ಎಲ್ಲಾ ಚಟುವಟಿಗಳಿಗೆ ಸಹಕಾರ ಮತ್ತು ಬೆಂಬಲವನ್ನು ಕೊಡುತ್ತಿರುವ ಮಂಗಳೂರು ವಿ.ವಿ. ಯ ಉಪಕುಲಪತಿಗಳು, ವಿವೇಕಾನಂದ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಹೋದ್ಯೋಗಿ ಮಿತ್ರರಾದ ಶ್ರೀ ರವೀಂದ್ರ ಕುಮಾರ್ ಬೈಪದವು ಮತ್ತು ಡಾ. ಪಿ. ಡಬ್ಲ್ಯು. ಪ್ರಭಾಕರ ರವರಿಗೆ ನಾನು ಋಣಿ.

ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಹಿರಿಯ ಸಹಕಾರಿ ಧುರೀಣ, ‘ಸಹಕಾರಿ ರತ್ನ’ ಕ್ಯಾಂಪ್ಕೋದ ಸ್ಥಾಪಕಾಧ್ಯಕ್ಷರಾದ ಶ್ರೀ ವಾರಣಾಸಿ ಸುಬ್ರಾಯ ಭಟ್ಟರಿಗೆ ನಾನು ಆಭಾರಿಯಾಗಿದ್ದೇನೆ.

ಕನ್ನಡ ಭಾಷೆಯಲ್ಲಿ ನನ್ನ ಅನಿಸಿಕೆಗಳನ್ನು ಪ್ರಕಟಿಸಲು ಸದಾ ಹುರಿದುಂಬಿಸುತ್ತಿರುವ ಗುರುಗಳಾದ ಪ್ರೊ. ವಿ.ಬಿ. ಅರ್ತಿಕಜೆಯವರಿಗೆ ಹೃದಯಪೂರ್ವಕ ನಮನಗಳನ್ನಿಲ್ಲಿ ಸಲ್ಲಿಸುತ್ತಿದ್ದೇನೆ.

ಈ ಪುಸ್ತಕಕ್ಕೆ ಶಭ ಹಾರೈಸಿದ ದ.ಕ. ಜಿಲ್ಲೆಯ ಎಲ್ಲಾ ಸಹಕಾರಿ ಧುರೀಣರಿಗೆ ನನ್ನ ಶುಭನಮನಗಳು.

ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿದ ಅಧ್ಯಾಪಕರ ಸಹಕಾರಿ ಮುದ್ರಣಾಲಯ, ವಿಟ್ಲ, ಅವರಿಗೆ ಮತ್ತು ಇದಕ್ಕೆ ಸಹಾಯ ಮಾಡಿದ ವಿಟ್ಲದ ಶ್ರೀ ವಿ. ಲಕ್ಷ್ಮೀಕಾಂತ್ ಶೆಣೈ ಮತ್ತು ಕಿರಣ್ ಇವರಿಗೆ ನನ್ನ ಕೃತಜ್ಞತೆಗಳು.

ಈ ಕೃತಿಯ ರಚನೆಗೆ ನನ್ನ ತಂದೆಯವರಾದ ಶ್ರೀ ವರ್ಮುಡಿ ಶಂಕರನಾರಾಯಣ ಭಟ್ಟರು, ನನ್ನ ಅಣ್ಣಂದಿರಾದ ಶ್ರೀ ಕೃಷ್ಣ ಭಟ್ ವರ್ಮುಡಿ ಮತ್ತು ಡಾ. ಸತ್ಯಶಂಕರ ವರ್ಮುಡಿಯವರು ಪ್ರೋತ್ಸಾಹವನ್ನಿತ್ತಿದ್ದು ಇದಕ್ಕಾಗಿ ಇವರನ್ನಿಲ್ಲಿ ನೆನೆಸುತ್ತಿದ್ದೇನೆ. ನನ್ನ ಬರಹಗಳಿಗೆಲ್ಲ ನಿಜಸ್ಪೂರ್ತಿ ತುಂಬುವವರು ಪತ್ನಿ ಪೂರ್ಣಶ್ರೀ, ಮಗಳು ಶ್ರೇಯಸ್ವಿ ಮತ್ತು ಅವಳ ಪುಟಾಣಿಗಳಾದ ನಿತಿನ್ ಮತ್ತು ಸಚಿನ್, ಇದಕ್ಕಾಗಿ ಇವರನ್ನು ಎಷ್ಟು ಕೊಂಡಾಡಿದರೂ ಸಾಲದು.

ಅಡಿಕೆ ಬೆಳೆಗಾರರಿಂದು ದಿಕ್ಕೆಟ್ಟಿದ್ದರೂ, ಅವರುಗಳಿಗೆ ತಮ್ಮ  ಕ್ಷೇತ್ರದಲ್ಲಿಂದು ಏನಾಗುತ್ತಿದೆ, ಮುಂದೇನಾಗುಬೇಕು ಎಂಬ ಬಗ್ಗೆ ಅರಿವು ಮೂಡಿಸಲು ನಾನು ಈ ಪ್ರಯತ್ನಕ್ಕಿಳಿದಿದ್ದು, ಈ “ಅಡಿಕೆ ಮಾರುಕಟ್ಟೆ : ಅಂದು, ಇಂದು, ಮುಂದು”ಗೆ ತುಂಬು ಮನಸ್ಸಿನ ಸ್ವಾಗತ ಕೊಡುವರೆಂದು ನಂಬಿದ್ದೇನೆ.

ಡಾ. ವಿಘ್ನೇಶ್ವರ ವರ್ಮುಡಿ
ವರ್ಮುಡಿ, ಗುಂಪೆ
೦೫-೦೮-೨೦೦೧.