ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಒಂದು ಪ್ರಮುಖ ಕೃಷಿ ಬೆಳೆ ಅಡಿಕೆ. ಭಾರತದಲ್ಲಿಂದು ಬೆಳೆಯಲಾಗುತ್ತಿರುವ ಒಟ್ಟು ಅಡಿಕೆಯ ಬಹುಪಾಲು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕರಾವಳಿ ಜಿಲ್ಲೆಗಳದ್ದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಇನ್ನಷ್ಟು ಬೆಳವಣಿಗೆಯು ಕಂಡು ಬರುತ್ತಿದೆ. ಇದರೊಂದಿಗೆ ಇನ್ನಿತರೇ ರಾಜ್ಯಗಳಲ್ಲೂ ಈ ಬೆಳೆಯ ಬಗ್ಗೆ ಆಸಕ್ತಿಯಿಂದು ಹೆಚ್ಚಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಅಡಿಕೆಯ ಧಾರಣೆಯೂ ಸದಾ ಏರಿಳಿತಕ್ಕೊಳಪಡುತ್ತಿದೆ.

ಸ್ವಾತಂತ್ಯ್ರ ಪೂರ್ವ ಮತ್ತು ಆ ಬಳಿಕ ನಮ್ಮ ಅಡಿಕೆ ಬೆಳೆಗಾರರು ನಾನಾ ರೀತಿಯ ಹೊಡೆತಗಳನ್ನು ತಿಂದಿದ್ದು , ಈ ರೀತಿಯ ಪರಿಸ್ಥಿತಿಗೆ ಕಾರಣಗಳು ಹಲವು. ಆದರೆ ಇಲ್ಲಿ ಹೆಸರಿಸಬಹುದಾದ ಒಂದು ಮುಖ್ಯ ಕಾರಣವೆಂದರೆ ಮಾರುಕಟ್ಟೆಯಲ್ಲಿ ಕಂಡು ಬರುತ್ತಿರುವ ಅತಂತ್ರ ಸ್ಥಿತಿ ಮತ್ತು ಗೊಂದಲ. ಈ ಎಲ್ಲಾ ಗೊಂದಲಗಳು ಕಂಡುಬರುತ್ತಿರುವುದು ಮಾಹಿತಿಗಳ ಅಭಾವದಿಂದ.

ನಮ್ಮಲ್ಲಿಂದು ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ, ಬೇಡಿಕೆ, ಆಮದು ಮುಂತಾದ ವಿಚಾರಗಳಿಗೆ ಸಂಬಂಧಪಟ್ಟಂತೆ ನಿಖರ ಮಾಹಿತಿಗಳ ಅಭಾವವಿರುವುದರಿಂದ, ಈ ನಿಟ್ಟಿನಲ್ಲಿ ಅಗತ್ಯ ಕೆಲಸಗಳಾಗಬೇಕು. ಈ ದೃಷ್ಟಿಯಿಂದ ಡಾ. ವಿಘ್ನೇಶ್ವರ ವರ್ಮುಡಿಯವರು ನಡೆಸಿದ ಅಧ್ಯಯನದಿಂದ ಹೊರಬಂದ “ಅಡಿಕೆ ಮಾರುಕಟ್ಟೆ:ಅಂದು, ಇಂದು, ಮುಂದು” ಒಂದು ಉಪಯುಕ್ತ ಪುಸ್ತಕ.

ಈ ಪುಸ್ತಕದಲ್ಲಿ ಡಾ. ವಿಘ್ನೇಶ್ವರ ವರ್ಮುಡಿಯವರು ಅಡಿಕೆಯ ಇತಿಹಾಸ, ವಿಶ್ವದಲ್ಲಿ ಅಡಿಕೆ ಬೆಳೆಯ ಸ್ಥಿತಿ, ಭಾರತದಲ್ಲಿ ಈ ಬೆಳೆಯ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ಟೆ ಎಂಬಿತ್ಯಾದಿ ವಿಚಾರಗಳನ್ನು ಲಭ್ಯ ಅಂಕಿ-ಅಂಶಗಳ ಆಧಾರದಿಂದ ವಿವರಿಸಿದ್ದು, ಇದಿಂದು ಈ ಕ್ಷೇತ್ರದಲ್ಲಿಂದೇನಾಗುತ್ತಿದೆ ಎಂಬುದನ್ನು ಮೇಲ್ನೋಟಕ್ಕೆ ತಿಳಿಯಲು ಸಹಾಯಕಾರಿ. ಇದರೊಂದಿಗೆ ಅಡಿಕೆಯ ಬಳೆಕೆಯಿಂದು ಯಾವ್ಯಾವ ರೀತಿಯಲ್ಲಿ ಆಗುತ್ತಿದೆ, ಅಡಿಕೆಯ ಮಾರಾಟ ವ್ಯವಸ್ಥೆಯಲ್ಲಿರುವ ಸಂಸ್ಥೆಗಳು, ಅವುಗಳ ಕಾರ್ಯವಿಧಾನಗಳ ಬಗ್ಗೆ ಪರಿಚಯ, ಭಾರತದಿಂದ ಹೊರರಾಷ್ಟ್ರಗಳಿಗಾಗುತ್ತಿರುವ ರಫ್ತು, ಆಮದು, ಆಂತರಿಕವಾಗಿ ಅಡಿಕೆಯ ಧಾರಣೆಯ ವರ್ತನೆ, ಮಾರಾಟ ವ್ಯವಸ್ಥೆಯಲ್ಲಿಂದು ಕಂಡು ಬರುತ್ತಿರುವ ಸಮಸ್ಯೆಗಳು ಮತ್ತು ಅವುಗಳಿಗೆ ಅವರು ಸೂಚಿಸುವ ಪರಿಹಾರಗಳು ಎಂಬಿತ್ಯಾದಿ ವಿಚಾರಗಳನ್ನು ಅಂಕಿ-ಅಂಶಗಳ ಆಧಾರದಿಂದ ವಿವರಿಸಿರುವುದು ನಿಜಕ್ಕೂ ಶ್ಲಾಘನೀಯ.

ಈ ಎಲ್ಲಾ ಮಾಹಿತಿಗಳ ಅಭಾವ ಹೆಚ್ಚಿನ ಬೆಳೆಗಾರರಲ್ಲಿ ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಈ ಬರವಣಿಗೆಯು ಒಂದು ಉಪಯುಕ್ತ ಮಾಹಿತಿಯನ್ನೊದಗಿಸುವಂತದ್ದಾಗಿದೆ. ಒಟ್ಟಾರೆಯಾಗಿ ಅಡಿಕೆಯ ಉತ್ಪಾದನೆ ಮತ್ತು ಮಾರುಕಟ್ಟೆ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೊದಗಿಸುವ ಈ ಪುಸ್ತಕವು ಅಡಿಕೆ ಕ್ಷೇತ್ರದಲ್ಲಿರುವ ಎಲ್ಲರಿಗೂ ಸಹಾಯಕಾರಿಯಾಗಬಲ್ಲದು. ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಹೆಚ್ಚು ಕಡಿಮೆ ಇದೇ ಮೊದಲು ಎಂದರೆ ತಪ್ಪಾಗಲಾರದು.

ಡಾ. ವಿಘ್ನೇಶ್ವರ ವರ್ಮುಡಿಯವರ ಈ ಪ್ರಯತ್ನ ನಿಜಕ್ಕೂ ಮೆಚ್ಚತಕ್ಕದ್ದು, ಇವರ ಈ ಪ್ರಯತ್ನವನ್ನು ಅಡಿಕೆ ಬೆಳೆಗಾರರಾದ ನಾವೆಲ್ಲ ಬೆಂಬಲಿಸೋಣ ಮತ್ತು ಈ ಕ್ಷೇತ್ರದ ಬಗ್ಗೆ ಇನ್ನಷ್ಟು ಅಧ್ಯಯನವನ್ನು ಇವರು ಕೈಗೊಂಡು ಯೋಗ್ಯ ಮಾಹಿತಿ ನಮಗೊದಗಲಿ ಎಂಬುದಾಗಿ ಆಶಿಸೋಣ.

ಡಾ. ವಿಘ್ನೇಶ್ವರ ವರ್ಮುಡಿಯವರ ಈ ಪುಸ್ತಕಕ್ಕೆ ವೈಯಕ್ತಿಕವಾಗಿ ಮತ್ತು ಅಡಿಕೆ ಬೆಳೆಗಾರರ ಪರವಾಗಿ ಶುಭವನ್ನು ಕೋರುತ್ತಿದ್ದೇನೆ.

(ವಾರಣಾಸಿ ಸುಬ್ರಾಯ ಭಟ್‌)
ಅಡ್ಯನಡ್ಕ.
೪-೦೮-೨೦೦೧.