|| ಪ್ರಸೀದತು ಶ್ರೀ ರಾಮಚಂದ್ರಃ ||

ತಗ ಸಂಖ್ಯಾ: ೨೧

ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣ ಪಾರವಾರಾಪಾರೀಣ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ ಷಡ್ಲರ್ಶನಸ್ಥಾಪನಾಚಾರ್ಯ ತಪಶ್ಚಕ್ರವರ್ತ್ಯಾದ್ಯನೇಕ ವಿಶೇಷಣವಿಶಿಷ್ಟ

ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶಿಷ್ಯ

ಶ್ರೀ ಸುರೇಶ್ವರಾಚಾರ್ಯ ಜ್ಯೇಷ್ಠಶಿಷ್ಯ ವಿದ್ಯಾನಂದಾಚಾರ್ಯಾsವಿಚ್ಛಿನ್ನ ಗುರುಪರಂಪರಾಪ್ರಾಪ್ತ
ಸಕಲ ನಿಗಮಾಗಮಸಾರಹೃದಯ ಸಾಂಖ್ಯತ್ರಯಪ್ರತಿಪಾದಕ ವೈದಿಕ ಮಾರ್ಗ ಪ್ರವರ್ತಕ
ಸರ್ವತಂತ್ರ ಸ್ವತಂತ್ರಾದಿ ಬಿರುದಾಂಕಿತ ವಿದ್ಯಾನಗರ ಮಹಾರಾಜಧಾನೀ ವೈಭವ
ಸಿಂಹಾಸನಾಧೀಶ್ವರ ವಿಖ್ಯಾತವ್ಯಾಖ್ಯಾನಸಿಂಹಾಸನಾರೂಢ ಶ್ರೀ ಮದ್ರಾಜಾಧಿರಾಜಗುರು

ಶ್ರೀ ಗೋಕರ್ಣ ಮಂಡಲಾಚಾರ್ಯ

ಶ್ರೀ ಮಚ್ಛತಶೃಗಪುರವರಾಧೀಶ್ವರ ಶ್ರೀಮಚ್ಛರಾವತೀತೀರವಾಸ
ಶ್ರೀಮದ್ರಾಮಚಂದ್ರಾಪುರಮಠಸ್ಥ ಶ್ರೀ ಮದ್ರಾಮಚಂದ್ರ ಚಂದ್ರಮೌಳೀಶ್ವರ ಪಾದಪದ್ಮಾರಾಧಕ
ಶ್ರೀ ಮದ್ರಾಘವೇಂದ್ರ ಭಾರತೀ ಶ್ರೀ ಗುರುಕರಕಮಲಸಂಜಾತ

ಶ್ರೀ ಮದ್ರಾಘವೇಶ್ವರ ಭಾರತೀ ಶ್ರೀ ಸ್ವಾಮಿಭಿಃ

ಅಸ್ಮದತ್ಯಂತ ಪ್ರಿಯಶಿಷ್ಯರಾದ ಮಂಗಳೂರು ಹೋಬಳಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಉಪನ್ಯಾಸಕರಾದ ಡಾ|| ವಿಘ್ನೇಶ್ವರ ವರ್ಮುಡಿ ಇವರಿಗೆ ಬರೆಸಿ ಕಳಿಸಿದ ಶ್ರೀಮುಖ.ಅದಾಗಿ, ಶ್ರೀಸವಾರಿಯು ಆರಾಧ್ಯ ಶ್ರೀಸೀತಾರಾಮಚಂದ್ರ ಚಂದ್ರಮೌಳೀಶ್ವರ ಶ್ರೀ ರಾಜರಾಜೇಶ್ವರೀ ದೇವತಾ ದಿವ್ಯ ಸನ್ನಿಧಿಯಲ್ಲಿ ಅನುದಿನವೂ ಸಮಸ್ತ ಜನತೆಯ ಯೋಗಕ್ಷೇಮಗಳನ್ನು ಸಂಪ್ರಾರ್ಥಿಸುತ್ತಾ ಸದ್ಯ ಈ ಮುಕ್ಕಾಮಿನಲ್ಲಿ ಕ್ಷೇಮದಿಂದ ವಸತಿ ಮಾಡಿದೆ.

ಕೃಷಿ ನಿಸರ್ಗ ನಿರ್ಮಿತವಾದ ಅದ್ಭುತಗಳಲ್ಲೊಂದು ಪುಟ್ಟ ಬೀಜರೂಪದಲ್ಲಿರುವ ಜೀವವೊಂದು ಸಮುಚಿತವಾದ ಸಂಸ್ಕೃಗಳನ್ನಿತ್ತಾಗ ತ್ರಿವಿಕ್ರಮನಾದ ವಾಮನನಂತೆ ಮಹಾವೃಕ್ಷವಾಗಿ ಬೆಳೆದು ನಿಂತು ತನ್ನಂತಹ ಸಹಸ್ರ ಬೀಜಗಳಿಗೆ ಜನಕನಾಗುವ ಪರಿ ಪ್ರಕೃತಿ ಜಿಜ್ಞಾಸುವಿನ ಬುದ್ಧಿಗೆ ನಿರಂತರ ಆಹಾರವನ್ನೊದಗಿಸುತ್ತದೆ.

ಜಿಜ್ಞಾಸುಗಳಿಗ ಮಾತ್ರವಲ್ಲ ಬಹುಕಾಲದಿಂದ ಕೃಷಿ, ನಿಸರ್ಗಮಾತೆಯ ಮಡಿಲಲ್ಲಿ ಮೈಮರೆಯುವ ವಿಶಾಲ ಕೃಷಿವರ್ಗಕ್ಕೂ ಅನ್ನ–ವಸ್ತ್ರಗಳನ್ನೀಯುತ್ತಾ ಬಂದಿದೆ. “ಪರಸ್ಪರಂ ಭಾವಯಂತಃ” ಎಂಬ ಗೀತೆಯ ಮಾತಿನಂತೆ ಕೃಷಿಕನ ಕೈಯ ಮಮತೆಯ ನೀರು–ಸಾರಗಳಿಂದ ಬೆಳೆಯುವ ತರು-ಲತೆಗಳು ಅವನ ಜೀವನ ನಿರ್ವಹಣೆಯ  ಆಸರೆಗಳಾಗಿವೆ.

ರಾಷ್ಟ್ರದ ಬಹುಮುಖ್ಯ ಅಂಗವಾಗಿರುವ ಕೃಷಿಕ ಮುಂದುಗಾಣದ ಬವಣೆಯಲ್ಲಿದ್ದಾನೆ. ಅವನ ಬವಣೆಯಿರುವುದು ಬೆಳೆ ಬೆಳೆಯುವಲ್ಲಲ್ಲ. ಸಮೀಚೀನವಾದ ಬೆಲೆ ಪಡೆಯುವಲ್ಲಿ ಅವ್ಯವಸ್ಥಿತವಾದ ಮಾರುಕಟ್ಟೆ ಕೃಷಿಕನ ಬದುಕನ್ನು ಗಾಳಿಗೊಡ್ಡಿ ಅಸಹಾಯ ಮಾನವನನ್ನು ಹೋಲುವ ಸ್ಥಿತಿಗೆ ಒಡ್ಡುತ್ತಿದೆ. ಇದಕ್ಕೆ ಕಣ್ಣೆದುರಿನ ದೃಷ್ಟಾಂತವೇ ಅಡಿಕೆಮಾರುಕಟ್ಟೆ, ಭೂಕಂಪನಗಳು-ಪ್ರವಾಹಗಳು ಜೀವಿಗಳನ್ನು ಒಮ್ಮೆಲ್ಲೇ ಕೊಲ್ಲುತ್ತವೆ. ಆದರೆ ಅಡಿಕೆ ಮಾರುಕಟ್ಟೆಯಲ್ಲಿ ಆಗಾಗ ಆಗುವ ಕಂಪನಗಳು-ಪ್ರವಾಹಗಳು ಬೆಳೆಗಾರನನ್ನು ಚಿತ್ರವಧೆಗೀಡು ಮಾಡುತ್ತಿವೆ. ನಿರ್ಧನ ರೈತರು ಮುಂದುಗಾಣದೇ ಆತ್ಮಫಾತಕ್ಕೆ ಶರಣಾಗುತ್ತಿದ್ದಾರೆ. ಕೃಷಿಕವರ್ತಕ ವರ್ಗ ದಿಙ್ಮೂಢವಾಗಿದೆ. ಗೋಳು ಹೇಳುವ ಧ್ವನಿಗಳು ಎಲ್ಲೆಲ್ಲೂ ತುಂಬಿರುವ, ಪರಿಹಾರದ ಧ್ವನಿ ಕೇಳದಿರುವ ಈತ್ತುಗಳ ತಲಸ್ಪರ್ಶಿ ಅಧ್ಯಯನದಿಂದ ಕೂಡಿದ ಮಾರುಕಟ್ಟೆಯ ಸ್ಥಿತ್ಯಂತರಗಳ ನೈಜ ಕಾರಣಗಳನ್ನು ನಿಖರವಾಗಿ ಗುರ್ತಿಸಿರುವ, ಪರಿಹಾರದ ಸಮರ್ಪಕ ಮಾರ್ಗಗಳನ್ನು ತೋರಿಸಿರುವ ಡಾ. ವಿಘ್ನೇಶ್ವರ ವರ್ಮುಡಿಯವರ “ಅಡಿಕೆ ಮಾರುಕಟ್ಟೆ, ಅಂದು-ಇದು ಮುಂದು” ಎಂಬ ಅನ್ವರ್ಥ ಪುಸ್ತಕ ಹೊರಬರುತ್ತಿರುವುದು ಸಮಯೋಚಿತವಾಗಿದೆ.

ನಿಜವಾಗಿ ನೋಡಿದರೆ ಕೃಷಿಕ-ವರ್ತಕದಲ್ಲಿರುವ ವ್ಯವಸ್ಥೆಯ ಬಗೆಗಿನ ಅಜ್ಞಾನ, ಅಸಮಗ್ರ ಜ್ಞಾನ, ಮಿಥ್ಯಾ ಜ್ಞಾನಗಳೇ ಬೆಲೆಯಿಳಿತಕ್ಕೆ ಮುಖ್ಯ ಕಾರಣವಾದವೆಂಬುದನ್ನು ಡಾ. ವರ್ಮುಡಿಯವರು ಗ್ರಂಥದಲ್ಲಿ ಸತರ್ಕವಾಗಿ ನಿರೂಪಿಸಿದ್ದಾರೆ.

ಅಲ್ಲದೇ ಮಾರುಕಟ್ಟೆಯಲ್ಲಿ ಖಾಸಗಿಯವರ ಏಕಸ್ವಾಮ್ಯ, ಮಧ್ಯವರ್ತಿಗಳ ಉದ್ದವಾದ ಜಾಲ, ತೆರಿಗೆ ಪದ್ಧತಿ, ಬೆಳೆಗಾರರಲ್ಲಿ ಸಂಘಟನೆಯ ಕೊರತೆ, ಅಡಿಕೆಯಿಂದ ನಿರ್ಮಿಸಬಹುದಾದ ಬಹುಪಯೋಗಿ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ಅನಾಸಕ್ತಿ, ಪೂರಕವ್ಯವಸ್ಥೆ ಹಾಗೂ ಶೇಖರಣಾ ವ್ಯವಸ್ಥೆಗಳ ಕೊರತೆ, ಕೃಷಿಕರಿಗೆ ಮಾರಾಟ ವ್ಯವಸ್ಥೆಯ ಅಭಿವೃದ್ಧಿಗೆ ಅಗತ್ಯ ಶಿಕ್ಷಣ-ತರಬೇತಿಗಳ ಕೊರತೆ, ವಿದೇಶಗಳಿಗೆ ನಮ್ಮ ರಾಷ್ಟ್ರದಿಂದ ಆಗುತ್ತಿರುವ ರಫ್ತನ್ನು ಹೆಚ್ಚಿಸಲು ಪ್ರಯತ್ನಗಳ ಕೊರತೆ ಹೀಗೆ ಹಲವು ಕೊರತೆಗಳು ಸೇರಿ ಅಡಿಕೆಯ ಬೆಲೆಯಲ್ಲಿ ಭಾರೀ ಕೊರತೆಯನ್ನುಂಟು ಮಾಡಿರುವುದನ್ನು ಗ್ರಂಥವು ಗುರ್ತಿಸಿದೆ. ಮಾತ್ರವಲ್ಲ, ಅಡಿಕೆ ಬೆಲೆ ಕುಸಿತಕ್ಕೆ ೧.ಉತ್ಪಾದನೆಯ ಹೆಚ್ಚಳ,೨. ಬಳಕೆಯ ಪ್ರಮಾಣದ ಕುಸಿತ ೩. ಆಮದಿನ ಹೆಚ್ಚಳಗಳು ಕಾರಣವೆಂಬ ಮಾರುಕಟ್ಟೆ ವಲಯದ ಭ್ರಮೆಯನ್ನು ಮರ್ಮುಡಿಯವರ ನಿರಾಕರಿಸಿದ್ದಾರೆ. ಅಗ್ಗದ ಅಡಿಕೆಯ ಅಕ್ರಮ ಒಳ ಹರಿವನ್ನು ತಡೆಗಟ್ಟುವ ಬಗ್ಗೆ ವರ್ಮುಡಿಯವರು ಸರ್ಕಾರದ ಗಮನ ಸೆಳೆದರೆ ಉಪಬೆಳೆಗಳ ಕಡೆಗೆ ಕೃಷಿಕರ ಗಮನವನ್ನೂ ಸೆಳೆದಿದ್ದಾರೆ. ಜೊತೆಗೆ ಅಡಿಕೆ-ಮಾರುಕಟ್ಟೆಯ ಬಗ್ಗೆ ಸಂಶೋಧನೆ-ಅಧ್ಯಯನಗಳ ಪೀಠಸ್ಥಾಪನೆಯ ಸಾರ್ಥಕ ಸಲಹೆಯನ್ನೂ ಅಡಿಕೆ  ಜಗತ್ತಿನ ಮುಂದಿಟ್ಟಿದ್ದಾರೆ.

ಒಟ್ಟಿನಲ್ಲಿ ಅಡಿಕೆ ಬೆಲೆಯನ್ನೂ ತನ್ಮೂಲಕ ಬೆಳೆಗಾರನ ಜೀವನವನ್ನೂ ಉತ್ತಮ ಪಡಿಸುವ ಮಾರ್ಗಗಳಿವೆ ಎಂಬುದನ್ನು ವರ್ಮುಡಿಯವರು ಗೊಂದಲಕ್ಕೀಡಾಗಿರುವ ಅಡಿಕೆಯ ಜಗತ್ತಿನ ಮುಂದೆ ಪ್ರಕಟಪಡಿಸಿದ್ದಾರೆ. ಗ್ರಂಥದ ಉತ್ತಮವಾದ ಸಲಹೆಗಳನ್ನು ಕಾರ್ಯಗತಗೊಳಿಸಲು ಅವರೇ ಹೇಳುವಂತೆ, ಬೆಲೆಯಿಳಿದ ಕೂಡಲೇ ಎಚ್ಚರಗೊಳ್ಳುವ, ಬೆಲೆಯೇರುವಾಗ ಪುನಃ ನಿದ್ರಿಸುವ ಹಳೆಯ ಅಭ್ಯಾಸವನ್ನು ಬಿಟ್ಟು ಬೆಳೆಗಾರರು ಮೇಲೇಳುವುದು ಇಂದಿನ ಅಗತ್ಯವಾಗಿದೆ. ವಿಘ್ನೇಶ್ವರ ವರ್ಮುಡಿಯವರ ಬುದ್ಧಿ-ಲೇಖನಿಗಳಿಂದ ಇನ್ನಷ್ಟು ಅಧ್ಯಯನ –ಲೇಖನಗಳ ಪ್ರವಾಹವು ಹರಿದುಬರಲೆಂದೂ, ಅಡಿಕೆ ಬೆಳೆಗಾರರು ಶ್ರಮಕ್ಕೆ ತಕ್ಕ ಫಲ ಪಡೆಯುವಲ್ಲಿರುವ ವಿಘ್ನಗಳು ನಿವಾರಣೇಯಾಗುವಲ್ಲಿ ವಿಘ್ನೇಶ್ವರರ ಗ್ರಂಥ ನೆರವೀಯಲೆಂದೂ ಬೆಳೆ-ಬೆಳೆಗಾರ-ಕೃಷಿಕ-ವರ್ತಕ- ಬಳಕೆದಾರರು “ಪರಸ್ಪರಂ ಭಾವಯಂತಃ” ಎಂಬಂತೆ ಪರಸ್ಪರರ ಆಶ್ರಯದಲ್ಲಿ ಸುಖಿಗಳಾಗಿ ಧರ್ಮಾರ್ಥ ಸಮೃದ್ಧ ಬಾಳನ್ನು ಬಾಳಲೆಂದೂ ಹಾರೈಸುತ್ತೇವೆ.

ಇತಿ ಶ್ರೀ ಮನ್ನಾರಾಯಣ ಸ್ಮೃತಯಃ
ಮಿತಿ –ಶ್ರೀ ವೃಷಸಂ/ದ ಶ್ರಾವಣಶುದ್ಧ ೧೫/ಯು ಶನಿವಾರ
ವಸತಿ-ಶ್ರೀ ರಾಮಚಂದ್ರಾಪುರಮಠ ಹೊಸನಗರ