ಅಡಿಕೆಯ ಮಾರಾಟದ ದಾರಿ

ಅಡಿಕೆಯಿಂದು ಉತ್ಪಾದಕನಿಂದ ಹೊರಟು ಒಂದು ಉದ್ದದ ದಾರಿಯ ಮೂಲಕ ಅಂತಿಮ ಬಳಕೆದಾರನಾದ ಪಾನ್ ವಾಲನಿಗೆ ತಲುಪುತ್ತದೆ. ಈ ದಾರಿಯಲ್ಲಿ ಹಲವು ರೀತಿಯ ಮಧ್ಯವರ್ತಿಗಳು ಕಾರ್ಯನಿಭಾಯಿಸುತ್ತಿದ್ದಾರೆ. ಈ ಮಧ್ಯವರ್ತಿಗಳಲ್ಲಿ ಖಾಸಗಿ ವ್ಯಾಪಾರಸ್ಥರು ಮತ್ತು ಸಹಕಾರಿ ವ್ಯವಸ್ಥೆಗಳು ಸೇರಿವೆ. ನಮ್ಮ ದೇಶದಲಿಂದು ಆಗುತ್ತಿರುವ ಅಡಿಕೆ ವ್ಯವಹಾರದಲ್ಲಿ ಖಾಸಗಿ ವ್ಯವಹಾರಸ್ಥರ ಪಾಲು ಅತ್ಯಧಿಕ. ಈ ಪಾಲು ಅಡಿಕೆಯ ಒಟ್ಟಾರೆ ವ್ಯವಹಾರದ ಶೇಕಡಾ ೯೦ಕ್ಕಿಂತಲೂ ಅಧಿಕ, ಉಳಿದ ಪಾಲನ್ನು ಸಹಾಕಾರಿ ಮಾರಾಟ ವ್ಯವಸ್ಥೆಯು ಹೊಂದಿರುವ ಕಾರಣ, ಅಡಿಕೆ ಮಾರುಕಟ್ಟೆಯಿಂದು ಸಂಪೂರ್ಣವಾಗಿ ಖಾಸಗಿ ಜಾಲದಲ್ಲಿದೆಯೆಂದರೆ ತಪ್ಪಾಗಲಾರದು.

ಅಡಿಕೆಯಿಂದು ಉತ್ಪಾದಕನಿಂದ ಪಾನ್ ವಾಲನಿಗೆ ತಲಪುವಾಗ ಹಲವು ಹಂತಗಳನು ದಾಟುತ್ತಿದ್ದು, ಈ ಹಂತಗಳನ್ನು ಯಾ ದಾರಿಯನ್ನು ಹಲವು ವರ್ಗಗಳಾಗಿ ವಿಂಗಡಿಸಬಹುದು.

ಚಾಲಿ ಅಡಿಕೆ:

(೧) ಉತ್ಪಾದಕ — ಹಳ್ಳಿಯ ತಿರುಗಾಟದ ಚಿಲ್ಲರೆ ವ್ಯಾಪಾರಿ — ಹಳ್ಳಿಯಲ್ಲಿರುವ ಸಣ್ಣ ಸಗಟು ವ್ಯಾಪಾರಿ — ಜಿಲ್ಲಾ ಕೇಂದ್ರ ಮಾರುಕಟ್ಟೆಯಲ್ಲಿರುವ ದೊಡ್ಡ ಸಗಟು ವ್ಯಾಪಾರಿ — ಬಳಕೆದಾರ ಪ್ರದೇಶಗಳಿಗೆ ಮಾರಾಟ ಮಾಡಲು ನೇಮಕವಾಗಿರುವ ಮಾರಾಟ ಪ್ರತಿನಿಧಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ ಯಾ ಅಡಿಕೆಯನ್ನು ತುಂಡರಿಸಿ ಮಾರಾಟ ಮಾಡಲು ಇರುವ ಗುಡಿ ಕೈಗಾರಿಕಾ ಕೇಂದ್ರ — ಪ್ರತಿನಿಧಿಗಳ ಮೂಲಕ ಪಾನ್ ವಾಲಗಳಿಗೆ — ಬೀಡಾದ ಗ್ರಾಹಕ.

(೨) ಉತ್ಪಾದಕ — ಹಳ್ಳಿಯಲ್ಲಿರುವ ಸಣ್ಣ ಸಗಟು ವ್ಯಾಪಾರಿ — ಕೇಂದ್ರ ಮಾರುಕಟ್ಟೆಯಲ್ಲಿರುವ ದೊಡ್ಡ ಸಗಟು ವ್ಯಾಪಾರಿ — ಮಾರಾಟ ಪ್ರತಿನಿಧಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ ಯಾ ಗುಡಿಕೈಗಾರಿಕಾ ಕೇಂದ್ರ — ಪ್ರತಿನಿಧಿಗಳ ಮೂಲಕ ಪಾನ್ ವಾಲಗಳಿಗೆ — ಅಂತಿಮ ಗ್ರಾಹಕ.

(೩) ಉತ್ಪಾದಕ — ಕೇಂದ್ರ ಮಾರುಕಟ್ಟೆಯಲ್ಲಿರುವ ದೊಡ್ಡ ಸಗಟು ವ್ಯಾಪಾರಿ — ಮಾರಾಟ ಪ್ರತಿನಿಧಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ ಯಾ ಗುಡಿಕೈಗಾರಿಕೆ ಕೇಂದ್ರ — ಪ್ರತಿನಿಧಿಗಳ  ಮೂಲಕ — ಪಾನ್ ವಾಲ — ಗ್ರಾಹಕ.

(೪) ಉತ್ತ್ಪಾದಕ — ಹಳ್ಳಿಯಲ್ಲಿರುವ ಸಹಾಕಾರಿ ಸಂಸ್ಥೆ ಯಾ ಕ್ಯಾಂಪ್ಕೋ ಖರೀದಿ ಶಾಖೆ — ಮಾರಾಟ ಪ್ರತಿನಿಧಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ — ಪಾನ್ ವಾಲ — ಗ್ರಾಹಕ.

(೫) ಉತ್ಪಾದಕ — ಬಳಕೆದಾರ ಪ್ರದೇಶದಿಂದ ಬಂದು ಸ್ಥಳೀಯವಾಗಿ ನೆಲೆಸಿದ ವ್ಯಾಪಾರಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ಚಿಲ್ಲರ ವ್ಯಾಪಾರಿ — ಪಾನ್ ವಾಲ — ಗ್ರಾಹಕ.

(೬) ಉತ್ಪಾದಕ — ಕೇಂದ್ರ ಮಾರುಕಟ್ಟೆಯಲ್ಲಿರುವ ಸಗಟು ವ್ಯಾಪಾರಿ ಯಾ ಸಹಕಾರಿ ಮಾರಾಟ ಕೇಂದ್ರ — ಮಾರಾಟ ಪ್ರತಿನಿಧಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ರಫ್ತು.

(೭) ಉತ್ಪಾದಕ — ಕ್ಯಾಂಪ್ಕೋ ಖರೀದಿ — ಬಳಕೆದಾರ ಪ್ರದೇಶದ ಕ್ಯಾಂಪ್ಕೋ ಮಾರಾಟ ಕೇಂದ್ರ — ಸಗಟು ಯಾ ಚಿಲ್ಲರೆ ವ್ಯಾಪಾರಿ — ಪಾನ್ ವಾಲ — ಗ್ರಾಹಕ.

(೮) ಉತ್ಪಾದಕ — ಕೇಂದ್ರ ಮಾರುಟ್ಟೆಯ ವ್ಯಾಪಾರಿ — ಬಳಕೆದಾರ ಪ್ರದೇಶ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ — ಗ್ರಾಹಕ.

(೯) ಉತ್ಪಾದಕ — ಕೇಂದ್ರ ಮಾರುಕಟ್ಟೆಯ ವ್ಯಾಪಾರಿ — ಬಳಕೆದಾರ ಪ್ರದೇಶದ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ — ಮೌಲ್ಯವರ್ಧಿತ ಉತ್ಪನ್ನದ ತಯಾರಕರು.

ಈ ಎಲ್ಲಾ ಮಾರಾಟ ಪ್ರಕ್ರಿಯೆಯಲ್ಲಿ ಬಳಕೆದಾರ ಪ್ರದೇಶದಲ್ಲಿರುವ ಸಗಟುವ್ಯಾಪಾರಿಗಳು ರಫ್ತುನ್ನೂ ಕೈಗೊಳ್ಳುತ್ತಿದ್ದು, ಇವರೊಂದಿಗೆ ಸಹಕಾರಿ ಸಂಸ್ಥೆಯೂ ಈ ವ್ಯವಸ್ಥೆಯಲ್ಲಿದೆ.

ಕೆಂಪಡಿಕೆ:

(೧) ಉತ್ಪಾದಕ — ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಚಿಲ್ಲರೆ ವ್ಯಾಪಾರಿ — ಕೇಂದ್ರ ಮಾರುಕಟ್ಟೆಯ ಸಗಟು ವ್ಯಾಪಾರಿ — ಮೌಲ್ಯವರ್ಧಿತ ಉತ್ಪನ್ನದ ತಯಾರಕರು ಯಾ ಅವರ ಪ್ರತಿನಿಧಿ.

(೨) ಉತ್ಪಾದಕ — ಹಳ್ಳಿಯ ವ್ಯಾಪಾರಿ ಯಾ ಪ್ರಾಥಮಿಕ ಸಹಾಕಾರಿ ಸಂಸ್ಥೆಯಾ ತಾಲೂಕು ಮಟ್ಟದಲ್ಲಿರುವ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆ — ಕಮೀಷನ್ ಏಜಂಟ್ — ಬಳಕೆದಾರ ಪ್ರದೇಶದ ಯಾ ಮುಂಬಯಿ, ಕಾನ್ಪುರ, ಅಹಮದಾಬಾದ್ ನಂತ ದೊಡ್ಡ ಮಾರುಕಟ್ಟೆಗಳು — ಒಂದನೇ ಸಗಟು ವ್ಯಾಪಾರಿ — ಎರಡನೇ ಸಗಟು ವ್ಯಾಪಾರಿ — ಚಿಲ್ಲರೆ ವ್ಯಾಪಾರಿ — ಬಳಕೆದಾರ ಇಲ್ಲಿ ಒಂದನೇ ಸಗಟು ವ್ಯಾಪಾರಿಯು ರಫ್ತುನ್ನೂ ಕೈಗೊಳ್ಳುತ್ತಾನೆ. ಸಹಾಕಾರಿ ಸಂಸ್ಥೆಗಳಿಂದ ಹೊರಟ ಮಾಲು ಅವುಗಳ ಬಳಿಕೆ ಬಳಕೆದಾರರಿಗೆ ತಲುಪುವುದು. ಈ ಸಹಕಾರಿ ಸಂಸ್ಥೆಗಳು ರಫ್ತುನ್ನೂ ಕೈಗೊಳ್ಳತ್ತಿವೆ.

ಅಡಿಕೆಯಿಂದು ಉತ್ಪಾದಕನಿಂದ ಬಳಕೆದಾರನಿಗೆ ತಲಪಲು ವಿವಿಧ ಹಂತಗಳನ್ನು ದಾಟಬೇಕಾಗಿರುವುದರಿಂದ ಉತ್ಪಾದಕನಿಗಿಂದು ಬಳಕೆದಾರನು ಕೊಡುವ ಬೆಲೆಯ ಶೇಕಡಾ ೫೦ ರಿಂದ ೬೦ರಷ್ಟು ಮಾತ್ರವಾಗಿದ್ದು, ಇದಕ್ಕೆ ಕಾರಣಗಳೆಂದರೆ ಸಾಗಣೆ ವೆಚ್ಚ, ಮಧ್ಯವರ್ತಿ ಯಾ ದಲ್ಲಾಳಿಗಳ ಕಮಿಷನ್ , ವಿವಿಧ ರೀತಿಯ ತೆರಿಗೆಗಳು, ವಿವಿಧ ಹಂತದ ಲಾಭಾಂಶಗಳು, ಸಂಸ್ಕರಣಾ ವೆಚ್ಚ ಇತ್ಯಾದಿಗಳು.

ಉತ್ಪಾದಕನು ಮಾರಾಟ ಮಾಡಿದ ಅಡಿಕೆಯು ಕೇಂದ್ರ ಮಾರುಕಟ್ಟೆಗೆ ತಲುಪಿ ಅಲ್ಲಿ ಅದು ವರ್ಗಿಕರಣಗೊಂಡು ಬಳಕೆದಾರ ಕೇಂದ್ರಗಳ ಶುಚಿ, ರುಚಿಗನುಗುಣವಾಗಿ ಸಾಗಣೆಗೊಳಪಡುತ್ತದೆ. ಅಡಿಕೆಯ ವಿಧಕ್ಕನುಗುಣವಾಗಿ ಅದರ ಧಾರಣೆಯೂ ಏರುಪೇರಾಗುತ್ತದೆ.

ಒಟ್ಟಾರೆಯಾಗಿ ಅಡಿಕೆ ಮಾರುಕಟ್ಟೆ ವ್ಯವಸ್ಥೆಯಿಂದು ಖಾಸಗಿ ಕ್ಷೇತ್ರದ ಹತೋಟಿಯಲಿದ್ದು, ಇಲ್ಲಿ ಬೆಳೆಗಾರರದ್ದಾದ ಸಹಕಾರಿ ಸಂಸ್ಥೆಗಳು ಪಾಲು ಅತ್ಯಲ್ಪ. ಹೀಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಬೆಳೆಗಾರರದ್ದಾದ ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿ ಬೆಳೆಗಾರರ ರಕ್ಷಣೆಗಾಗಿ ಹೋರಾಟ ಮಾಡುತ್ತಿವೆ.

ಅಡಿಕೆ ಮಾರಾಟ ವ್ಯವಸ್ಥೆಯಲ್ಲಿರುವ ಪ್ರಮುಖ ಸಹಕಾರಿ ಸಂಸ್ಥೆಗಳು:

ಅಡಿಕೆ ಮಾರುಕಟ್ಟೆಯಲ್ಲಾಗುತ್ತಿರುವ ಶೋಷಣೆಗಳನ್ನು ತಪ್ಪಿಸಲು, ಅಬಲರನ್ನು ಸಬಲರನ್ನಾಗಿಸಲು ಮತ್ತು ಸಬಲರು ಅಬಲರನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಲು ಅಲ್ಲದೆ ಶೋಷಣಾರಹಿತ ಅಡಿಕೆ ವ್ಯವಹಾರವನ್ನು ನಡೆಸಲು ಅಡಿಕೆ ಮಾರುಕಟ್ಟೆಯನ್ನು ಸಹಕಾರಿ ಆಂದೋಲನದಡಿಯಲ್ಲಿ ಕಳೆದ ಶತಮಾನದ ಆದಿಯಲ್ಲೇ ಆರಂಭಸಲಾಯಿತು. ಈ ರೀತಿಯ ಸಹಕಾರಿ ಮಾರಾಟ ಸಂಘಗಳಿಂದು ಅಡಿಕೆಯ ಮಾರಾಟ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಇವುಗಳನ್ನಿಂದು ಕರ್ನಾಟಕ, ಕೇರಳ, ತಮಿಳುನಾಡು. ಮಹಾರಾಷ್ಟ್ರ, ಮೇಘಾಲಯ ಮತ್ತು ಗೋವಾ ರಾಜ್ಯಗಳಲ್ಲಿ ಕಂಡು ಕೊಳ್ಳಬಹುದು.

ಕರ್ನಾಟಕ ರಾಜ್ಯದಲ್ಲಿ ಅಡಿಕೆ ವಹಿವಾಟನ್ನೇ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಕಾರ್ಯನಿರ್ವಹಿಸಿತ್ತಿರುವ ಸಹಕಾರಿ ಸಂಘಗಳ ಸಂಖ್ಯೆ ಸುಮಾರು ಹದಿನೈದಕ್ಕಿಂತಲೂ ಹೆಚ್ಚು. ಇವುಗಳ ಪೈಕಿ ದಕ್ಷಿಣ ಕನ್ನಡ ಕೃಷಿಕರ ಸಹಕಾರಿ ಮಾರಾಟ ಸಂಘ ಲಿ. (SKACMS) ೧೯೧೯ರಲ್ಲಿ ಮಂಗಳೂರಿನಲ್ಲಿ, ದಿ. ತೋಟಗಾರ್ಸ್ ಕೋ ಆಪರೇಟಿವ್ ಸೇಲ್ಸ್ ಸೊಸೈಟಿ (TCSS) ಶಿರಸಿಯಲ್ಲಿ ೧೯೧೩ರಲ್ಲಿ ಮತ್ತು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ (MAMCO’s) ೧೯೩೯ರಲ್ಲಿ ಆರಂಭಗೊಂಡವು. ಈ ಎಲ್ಲಾ ಸಹಕಾರಿ ಸಂಘಗಳು ಅಡಿಕೆ ಮಾರಾಟಕ್ಕಾಗಿ ಮತ್ತು ಬೆಳೆಗಾರರ ಹಿತವನ್ನು ಕಾಪಾಡುವ ಉದ್ದೇಶದಿಂದ ಅಡಿಕೆಯೊಂದಿಗೆ ಇತರೇ ಉಪ ಉತ್ಪನ್ನಗಳ ಮಾರಾಟದ ವ್ಯವಸ್ಥೆಯನ್ನು ಕೈಗೊಳ್ಳುತ್ತಿವೆ, ಇಷ್ಟು ಮಾತ್ರವಲ್ಲದೆ ಬೆಳೆಗಾರರಿಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳನ್ನು ಪೂರೈಸಲು ಶ್ರಮಿಸುತ್ತಿವೆ. ಈ ಎಲ್ಲಾ ಸಹಕಾರಿ ಸಂಘಗಳೊಂದಿಗೆ ೧೯೭೩ರಲ್ಲಿ ಸ್ಥಾಪನೆಗೊಂಡ ಕೇರಳ ಮತ್ತು ಕರ್ನಾಟಕ ಸರಕಾರಗಳ ಬೆಂಬಲದಿಂದ ಬೆಳೆಗಾರರದ್ದೇ ಆದ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕೊಕ್ಕೋಗಳ ಮಾರುಕಟ್ಟೆಯಲ್ಲಿ ಬೆಳೆಗಾರರ ರಕ್ಷಣೆಗಾಗಿ ದೃಢ ಸಂಕಲ್ಪದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಗಿಂದು ಅಂತಾರಾಷ್ಟ್ರೀಯ ಖ್ಯಾತಿ ಇದೆ.

ಈ ಎಲ್ಲಾ ಸಹಕಾರಿ ಸಂಸ್ಥೆಗಳು ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡಲು, ಪರಸ್ಪರ ನಂಬಿಕೆ, ಸೇವೆ ಮತ್ತು ಸಹಕಾರ ಮನೋಧರ್ಮವನ್ನು ಪ್ರಕಟಿಸುತ್ತಾ ಮುಖ್ಯ ಉದ್ದೇಶಗಳನ್ನು ಮರೆಯದೆ ಅತೀ ಸಣ್ಣಬೆಳೆಗಾರರನ್ನು ಅಲಕ್ಷಿಸದೆ ಹಳ್ಳಿ ಹಳ್ಳಿಗಳಲ್ಲೂ ಶಾಖೆಗಳನ್ನು ಹೊಂದಿ ಪ್ರಗತಿ ಪಥದತ್ತ ಮುನ್ನಡೆಯುತ್ತಿದ್ದು, ಶೋಷಣಾರಹಿತ ಸಮಾಜದ ರಚನೆಗಾಗಿ ಇವಿಂದು ಶ್ರಮಿಸುತ್ತಿವೆ.

. . ಕೃಷಿಕರ ಸಹಕಾರಿ ಮಾರಾಟ ಸಂಘ (ನಿ.) (SKACMS):

ದ. ಕ. ಕೃಷಿಕರ ಸಹಕಾರಿ ಮಾರಾಟ ಸಂಘವು ೧೯-೧೦-೧೯೧೯ ರಂದು ನೊಂದಣಿಗೊಂಡು ೨-೧೧-೧೯೧೯ರಂದು ತನ್ನ ಕಾರ್ಯವನ್ನಾರಂಭಿಸಿತು. ಈ ಸಂಘವು ಪುತ್ತೂರಿನಲ್ಲಿ ಪುತ್ತೂರು ಕೃಷಿಕರ ಮಾರಾಟ ಸಂಘವೆಂಬ ಹೆಸರಿನಿಂದ ಪ್ರಾರಂಭವಾಯಿತು. ಆಗ ಸಂಘದ ವ್ಯವಹಾರವು ಪುತ್ತೂರು ತಾಲೂಕಿಗೆ ಮಾತ್ರ ಸೀಮಿತವಾಗಿದ್ದು, ೧೭-೬-೧೯೩೫ರಿಂದ ಇದರ ವ್ಯವಹಾರವು ಇಡೀ ಜಿಲ್ಲೆಗೆ ವಿಸ್ತರಿಸಲ್ಪಟ್ಟಿತು. ಇದು ೨೪-೧-೧೯೩೭ ರಿಂದ ದ. ಕ. ಕೃಷಿಕರ ಸಹಕಾರಿ ಭಾಂಡಸಾಲೆ ಸಂಘವೆಂದೂ, ೧೫-೧೦-೧೯೪೬ರ ಬಳಿಕ ದಕ್ಷಿಣ ಕನ್ನಡ ಕೃಷಿಕರ ಸಹಕಾರಿ ಮಾರಾಟ ಸಂಘವೆಂದೂ ಹೆಸರು ಬದಲಾವಣೆ ಹೊಂದಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ.

ಈ ಸಂಘವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಪಿತಾಮಹರೆನ್ನಿಸಿದ ದಿವಂಗತ ಶ್ರೀ ಮೊಳಹಳ್ಳಿ ಶಿವರಾಯರ ನೇತೃತ್ವದಲ್ಲಿ ಅಕ್ಕಿ, ಭತ್ತ, ಉದ್ದು, ಹೆಸರು ಮುಂತಾದ ವ್ಯವಸಾಯಿಕ ಉತ್ಪನ್ನಗಳ ದಾಸ್ತಾನು ಮತ್ತು ಮಾರಾಟಕ್ಕಾಗಿ ೧೯೧೯ರಲ್ಲಿ ಸ್ಥಾಪಿಸಲಾಯಿತು. ಅಡಿಕೆ ಕೃಷಿಕರಿಗಾಗಿ ವಿಟ್ಲದಲ್ಲಿ ೧೯೧೮ರಲ್ಲಿ ಸ್ಥಾಪಿತವಾದ ದಕ್ಷಿಣ ಕನ್ನಡ ಭಾಗಾಯ್ತು ಕೃಷಿಕರ ಸಹಕಾರಿ ಹೋಲ್ ಸೇಲ್ ಸಂಘ ಕಾರ್ಯರಂಭಗೊಂಡು ಸುಮಾರು ಹತ್ತು ವರ್ಷಗಳ ಕಾಲ ಯೋಗ್ಯ ರೀತಿಯಲ್ಲಿ ಕಾರ್ಯನಿರ್ವಹಿಸಿ ೧೯೩೧ರಲ್ಲಿ ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು. ಆದ್ದರಿಂದ ಆ ಬಳಿಕ ದ. ಕ. ಕೃಷಿಕರ ಸಂಘವು ಅಡಿಕೆ ವ್ಯಾಪರಕ್ಕೆ ಇಳಿಯಿತು. ೧೯೩೪ರಲ್ಲಿ ಮಂಗಳೂರಿನಲ್ಲಿ ಮಾರಾಟ ಶಾಖೆಯನ್ನು ತೆರೆದು, ಬಳಿಕ ಜಿಲ್ಲೆಯಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿ, ಅದರೊಂದಿಗೆ ಗ್ರಾಮ ಸಹಕಾರಿ ಸಂಘಗಳ ಮೂಲಕವೂ ಕೃಷಿಕರಿಗೆ ಸಹಾಯನ್ನೀಯುತ್ತಾ ಕಾರ್ಯನಿರ್ವಹಿಸುತ್ತಿದೆ.

ಸಂಘವು ಆರಂಭದಲ್ಲಿ ವಿಟ್ಲ, ಗುರುವಾಯುನಕೆರೆ ಮತ್ತು ಬೆಳ್ತಂಗಡಿಯಲ್ಲಿ ತನ್ನ ಶಾಖೆಗಳನ್ನು ಹೊಂದಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂತು. ಪ್ರಾರಂಭದಲ್ಲಿ ಕೇವಲ ೫೮ ಸದಸ್ಯರನ್ನು ಹೊಂದಿದ್ದ ಈ ಸಂಘವು ರೂಪಾಯಿ ೩,೨೬೫ರ ಪಾಲು ಬಾಂಡವಾಳದಿಂದ ಕಾರ್ಯರಂಭ ಮಾಡಿತ್ತು. ಕ್ರಮೇಣ ಮ್ಹಾಲುಗಳ ಸಂಗ್ರಹ ಮತ್ತು ವಿತರಣೆಗಾಗಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಶಾಖೆಗಳನ್ನು ತೆರೆದು ಅದರೊಂದಿಗೆ  ಕೆಲವು ಸಹಕಾರಿ ಸಂಘಗಳ ಮೂಲಕ ಬಂದ ಮ್ಹಾಲುನ್ನೂ ಖರೀದಿಸಿ ಹಂತ ಹಂತವಾಗಿ ಬೇಳವಣಿಗೆಯನ್ನು ಸಾಧಿಸಿತು.

೧೯೩೮–೩೯ರಲ್ಲಿ ಅಡಿಕೆ ವ್ಯಾಪಾರದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಪದ್ಧತಿಯನ್ನು ಬದಿಗಿಟ್ಟು ಸ್ಥಳದಲ್ಲೇ ಮಾರಾಟ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಯಿತು. ಈ ನಿಟ್ಟಿನಲ್ಲಿ ಸಂಘವು ಧೈರ್ಯದಿಂದ ಮುನ್ನುಗ್ಗಿತ್ತು. ೧೯೪೦ರಲ್ಲಿ ಉತ್ಪನ್ನಗಳ ದಾಸ್ತಾನು ಅಧಿಕವಾಗಿ ವ್ಯಾಪಾರ ಸ್ಥಗಿತಗೊಂಡು ಧಾರಣೆ ಇಳಿಮುಖವಾದ್ದರಿಂದ ಬೊಂಬಾಯಿಯಲ್ಲಿ ಸಂಗವು ತನ್ನ ಸ್ವಂತ ಮಾರಾಟ ಶಾಖೆಯನ್ನು ತೆರೆಯಿತು. ಇದರಿಂದಾಗಿ ದಾಸ್ತಾನಾಗಿದ್ದ ಅಡಿಕೆಯು ಕೇವಲ ಒಂದು ತಿಂಗಳೊಳಗಾಗಿ ವಿಕ್ರಯವಾಗಿತ್ತು. ಈ ಶಾಖೆಯು ಧಕ್ಷತೆಯಿಂದ ಕಾರ್ಯನಿರ್ವಹಿಸಿ ಅಭಿವೃದ್ಧಿಯತ್ತ ಸಾಗುತ್ತಿದ್ದಾಗ ೧೪-೪-೧೯೪೪ರಲ್ಲಿ ಬೊಂಬಾಯಿ ಬಂದರದಲ್ಲಿ ಢಕ್ಕೆ ಸ್ಫೋಟನಗೊಂಡು ಎಲ್ಲಾ ಸೊತ್ತುಗಳೂ ಬೆಂಕಿಗಾಹುತಿಯಾದವು. ಪರಿಣಾಮವಾಗಿ ನಷ್ಟಕ್ಕೊಳಗಾದ ಶಾಖೆಯನ್ನು ೧೯೪೬ರಲ್ಲಿ ಮುಚ್ಚಲಾಯಿತು.

೧೯೪೭ರಲ್ಲಿ ಮಂಗಳೂರಿನ ಬಂದರಿನ ಅಡಿಕೆ ವ್ಯಾಪಾರವು ಸ್ಥಗಿತಗೊಂಡಾಗ ಬೊಂಬಾಯಿಯ ಶಾಖೆಯ ಮಹತ್ವವನ್ನರಿತು ಮೈಸೂರು ರಾಜ್ಯ ಅಡಿಕೆ ಸಹಕಾರಿ ಮಾರಾಟ ಫೆಡರೇಶನಿನ ಬೊಂಬಾಯಿ ಶಾಖೆಯನ್ನು ಅವಶ್ಯಕ್ಕನುಗುಣವಾಗಿ ಬಳಸಿಕೊಳ್ಳುವ ತೀರ್ಮಾನಕ್ಕೆ ಸಂಘ ಬಂದಿತ್ತು. ಕ್ರಮೇಣ ತನ್ನ ವ್ಯವಹಾರದಲ್ಲಿ ಹಲವು ಏಳು ಬೀಳುಗಳನ್ನು ಕಂಡ ಸಂಘವು ೧೯೭೭ರಲ್ಲಿ ವ್ಯವಹಾರದ ವಿಕೇಂದ್ರೀಕರಣಕ್ಕಾಗಿ ಮಾರಾಟ ಶಾಖೆಯೊಂದನ್ನು ಪುತ್ತೂರಲ್ಲಿ ತೆರೆಯಿತು.

೧೯೯೯–೨೦೦೦ದಲ್ಲಿ ಸಂಘದಲ್ಲಿ ೬,೩೬೧ಕೃಷಿಕ ಸದಸ್ಯರಿದ್ದು ಇದರೊಂದಿಗೆ ೧೨೬ ಪ್ರಾಥಮಿಕ ಸಹಕಾರಿ ಸಂಘಗಳೂ ಸದಸ್ಯರಾಗಿದ್ದು, ಇದರ ಒಟ್ಟು ಪಾಲು ಹಣ ೧೫, ೮೧,೧೦೦ ರೂಪಾಯಿಗಳಾಗಿದೆ. ಪ್ರಕೃತ ಸಂಘವು ೧೪ ಶಾಖೆಗಳನ್ನು ಹೊಂದಿ ಅಡಿಕೆ ಮತ್ತಿತರೆ ಕೃಷಿ ಉತ್ಪನ್ನಗಳ ವ್ಯವಹಾರವನ್ನು ದಲ್ಲಾಳಿ ರೂಪದಲ್ಲಿ ಕೈಗೊಳ್ಳತ್ತಿದೆ. ಸಂಘವು ತನ್ನ ವ್ಯವಹಾರದಲ್ಲಿ ೧೯೧೯ರಿಂದೀಚೆಗೆ ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದು ಈ ಬಗ್ಗೆ ಇದು ಕೈಗೊಂಡ ವ್ಯವಹಾರ, ಸದಸ್ಯರ ಸಂಖ್ಯೆ, ಪಾಲುಬಂಡವಾಳ ಇತ್ಯಾದಿಗಳಿಂದ ನಾವು ಅರಿತುಕೊಳ್ಳಬಹುದು. (ಪಟ್ಟಿ )

ಪಟ್ಟಿ
.. ಕೃಷಿಕರ ಸಹಕಾರಿ ಮಾರಾಟ ಸಂಘದ ಬೆಳವಣಿಗೆ

ವಿಷಯ

ಸದಸ್ಯರ ಸಂಖ್ಯೆ

ಪಾಲು ಹಣ (ರೂ.)

ಶಾಖೆಗಳು(ಸಂಖ್ಯೆ)

ಅಡಿಕೆ ಮಾರಾಟ (ಕ್ಚಿಂಟಾಲ್)

ಲಾಭ (ರೂ.)

ನಷ್ಟ (ರೂ.)

೧೯೧೯–೨೦

೫೮

೩೨೬೬

ಲಭ್ಯಲಿಲ್ಲ

ಲಭ್ಯವಿಲ್ಲ

೧೬೫

೨೯–೩೦

೨೨೨

೧೯೧೨೫

ಲಭ್ಯವಿಲ್ಲ

ಲಭ್ಯವಿಲ್ಲ

೨೪೦೮

೩೯–೪೦

೧೮೫೨

೫೮೪೯

ಲಭ್ಯಲಿಲ್ಲ

ಲಭ್ಯವಿಲ್ಲ

೧೮೯೭

೪೯–೫೦

೪೬೮೫

೫೯೩೫೦

ಲಭ್ಯವಿಲ್ಲ

ಲಭ್ಯವಿಲ್ಲ

೩೧೭

೫೯–೬೦

೭೩೪೪

೧೧೨೭೭೧

ಲಭ್ಯವಿಲ್ಲ

ಲಭ್ಯವಿಲ್ಲ

೯೨೩೧೨

೬೯–೭೦

೧೦೫೮೮

೨೦೦೯೧೫

ಲಭ್ಯವಿಲ್ಲ

ಲಭ್ಯವಿಲ್ಲ

೧೦೩೨೯೧

೭೯–೮೦

೭೮೧೩

೩೩೯೫೯೫

೨೨

ಲಭ್ಯವಿಲ್ಲ

೬೪೧೩೬೬

೯೦–೯೧

೬೦೬೩

೧೪೧೩೨೫೦

೧೪

೬೩೭೭೯

೧೮೧೨೭೨೫

೯೧–೯೨

೬೧೬೫

೧೪೧೪೧೨೦

೧೨

೫೫೯೮೬

೩೫೩೮೩೭೭

೯೨–೯೩

೬೧೯೪

೧೪೧೬೯೨೦

೧೩

೫೦೩೦೦

೩೦೯೨೨೯೪

೯೩–೯೪

೬೨೨೬

೧೪೧೮೫೭೦

೧೫

೪೬೮೯೫

೧೫೪೮೪೬

೯೫–೯೬

೬೨೭೬

೧೪೨೨೭೫೦

೧೫

೩೨೮೫೫

೩೧೫೩೪೮೫

೯೬–೯೭

೬೨೮೦

೧೪೩೨೬೬೦

೧೫

೩೧೯೮೩

೧೪೧೨೪೪೦

೯೭–೯೮

೬೩೨೦

೧೫೩೯೬೮೦

೧೩

೨೭೭೨೫

೧೮೨೬೩೫೨

೯೮–೯೯

೬೩೬೧

೧೫೬೦೫೨೦

೧೩

೩೭೭೩೦

೧೬೫೬೪೧

೯೯–೨೦೦೦

೬೪೮೯

೧೫೮೧೧೦೦

೧೪

೨೯೪೨೫

೨೬೮೬೩೫೦

ಮೂಲ: ದ. ಕ ಕೃಷಿಕರ ಸಹಕಾರಿ ಮಾರಾಟ ಸಂಘ ಆಡಳಿತ ವರದಿಗಳು

 

ಸಂಘದ ಅಭಿವೃದ್ಧಿಯ ಪಥದತ್ತ ಒಂದು ನೋಟ:

ಸದಸ್ಯರಸಂಖ್ಯೆ:

೧೯೧೯ರಲ್ಲಿ ಆರಂಭಗೊಂಡ ಸಂಘದಲ್ಲಿ ಇದ್ದ ಸದಸ್ಯರ ಸಂಖ್ಯೆ ೫೮ ಆಗಿದ್ದು ೧೯೩೯–೪೦ ಕ್ಕಾಗುವಾಗ ಅದು ೧೮೫೨ಕ್ಕೇರಿತ್ತು. ೧೯೪೯–೫೦ರಲ್ಲಿ ಈ ಸಂಖ್ಯೆಯು ೪,೬೮೫ಕ್ಕೇರಿ ಕ್ರಮೇಣ ಏರುತ್ತಾ ಹೋಗಿ, ೧೯೬೯–೭೦ ಕ್ಕಾಗುವಾಗ  ೧೦,೫೮೮ ಆಗಿತ್ತು. ಆದರೆ ಬಳಿಕವದು ಇಳಿಯುತ್ತಾ ಹೋಗಿ ೧೯೭೯–೮೦ರಲ್ಲಿ  ೭,೮೧೩ ಆಗಿತ್ತು. ೧೯೮೬–೮೭ರಲ್ಲಿ ಸದಸ್ಯರ ಸಂಖ್ಯೆ ೯,೭೧೩ಕ್ಕೇರಿದ್ದರೂ, ಆ ಬಳಿಕ ಈ ಸಂಖ್ಯೆ ಇಳಿಮುಖವಾಗುತ್ತಾ ಹೋಗಿ ೧೯೯೯–೨೦೦೦ದಲ್ಲಿ ಇದು ೬,೪೮೯ ಆಯಿತು. ಈ ರೀತಿಯದ್ದಾದ ಸದಸ್ಯರ ಸಂಖ್ಯೆಯ ಏರಿಳಿತ ಸಂಘದ ವ್ಯಹಾರಕ್ಕೆ ಸಮಸ್ಯೆಗಳನ್ನೊಡ್ಡುವುದು ಸ್ವಾಭಾವಿಕ ಹೀಗಿದ್ದರೂ, ಸಂಘದ ಪಾಲು ಬಂಡವಾಳವಿಂದು ೧೫ ಲಕ್ಷದ ಎಂಭತ್ತೊಂದು ಸಾವಿರದ ನೂರು ರೂಪಾಯಿಗಳಾಗಿದ್ದು, ಇದು ಸಂಗದ ಬಳವಣಿಗೆಯನ್ನಿಂದು ಎತ್ತಿ ತೋರಿಸುತ್ತಿದೆ.

ಶಾಖೆಗಳು:

ಸಂಘವು ೧೯೭೯–೮೦ರಲ್ಲಿ ೨೨ ಶಾಖೆಗಳನ್ನು ಹೊಂದಿದ್ದು, ಬಳಿಕ ಈ ಶಾಖೆಗಳ ಸಂಖ್ಯೆ ಇಳಿಯಲಾರಂಭಿಸಿದೆ. ೧೯೮೨–೮೩ರಲ್ಲಿ ಅದು ೧೯ಕ್ಕಿಳಿದು ೧೯೯೮–೯೯ರಲ್ಲಿ ೧೩ ಆಗಿತ್ತು. ೧೯೯೯–೨೦೦೦ದಲ್ಲಿ ಈ ಸಂಖ್ಯೆಯು ೧೪ಕ್ಕೇರಿತ್ತು.

ಅಡಿಕೆಮಾರಾಟ:

ಸಂಘವು ೧೯೮೩–೮೪ರಲ್ಲಿ ಅತ್ಯಧಿಕ ಪ್ರಮಾಣವಾದ ೮೯,೪೧೫ ಕ್ವಿಂಟಾಲ್ ಅಡಿಕೆಯನ್ನು ಮಾರಾಟ ಮಾಡಿದ್ದು, ಬಳಿಕ ಈ ಪ್ರಮಾಣವು ಇಳಿಮುಖವಾಗುತ್ತಾ ಹೋಗಿ ೧೯೯೩–೯೪ರಲ್ಲಿ ಅದು ೪೬,೮೯೫ ಕ್ವಿಂಟಾಲ್ ಅಗಿತ್ತು. ಬಳಿಕ ಅದು ಇನ್ನಷ್ಟು ಕೆಳಕ್ಕಿಯುತ್ತಾ ಹೋಗಿ ೧೯೯೯–೨೦೦೦ ಕ್ಕಾಗುವಾಗ ೨೯,೩೬೩ ಕ್ವಿಂಟಾಲ್‌ಗಳಷ್ಟಾಗಿತ್ತು.

ಲಾಭ/ನಷ್ಟ:

ಸಂಘವು ಗಳಿಸಿದ ಲಾಭಾಂಶವು ನಿರಂತರವಾಗಿ ಏರುಪೇರಾಗಿದ್ದು, ಇದಕ್ಕೆ ಮುಖ್ಯ ಕಾರಣ ಅಡಿಕೆ ದಾರಣೆಯಲ್ಲಿ ಕಂಡು ಬಂದ ಏರಿಳಿತಗಳೇ ಎಂಬುದು ಸರ್ವವಿಧಿತ. ೧೯೭೯–೮೦ರಲ್ಲಿ ಸಂಘವು ೬,೪೧,೩೬೬ ರೂಪಾಯಿಗಳಷ್ಟು ಇದ್ದ ಲಾಭ ೧೯೯೦–೯೧ರಂದು ಅದು ೧೮,೧೨,೭೨೫ ರೂಪಾಯಿಗಳಿಗೇರಿತು. ಬಳಿಕ ೧೯೯೩–೯೪ರ ತನಕ ಸತತವಾಗಿ ಲಾಭವನ್ನು ಗಳಿಸಿದ ಸಂಸ್ಥೆ ೧೯೯೪–೯೫ರಲ್ಲಿ ೬,೪೧,೭೫೧ ರೂಪಾಯಿಗಳ ನಷ್ಟವನ್ನು ಅನುಭವಿಸಿತ್ತು. ೧೯೯೫–೯೬ರಲ್ಲಿ ನಷ್ಟದ ಮೊತ್ತವು ೩೧,೫೩,೪೮೫ ರೂಪಾಯಿಗಳಿಗೇರಿ ಬಳಿಕ ಅದು ಇಳಿಯುತ್ತಾ ಹೋಗಿ ೧೯೯೭–೯೮ರಲ್ಲಿ ಇದ್ದ ನಷ್ಟದ ಮೊತ್ತ ೧೮,೨೬,೩೫೨ ಆಗಿತ್ತು. ಆ ಬಳಿಕ ಅಡಿಕೆ ಧಾರಣೆಯು ಏರು ಪ್ರವೃತ್ತಿಯನ್ನು ತೋರಿದ ಕಾರಣ ೧೯೯೯–೨೦೦೦ದಲ್ಲಿ ಸಂಘವು ೨೬,೮೬,೮೫೦ ರೂಪಾಯಿಗಳ ಲಾಭವನ್ನು ಗಳಿಸಿತ್ತು. ಆದರೆ ಕ್ರಮೇಣ ಅಡಿಕೆ ಧಾರಣೆ ಇಳಿಮುಖವಾಗುತ್ತಾ ಹೋಗಿ ಪ್ರಕೃತ ಸಂಘವು ನಷ್ಟದ ಹಾದಿಯನ್ನು ಹಿಡಿದಿದೆ.

ಸಂಘದ ಆರಂಭದಿಂದ ಈ ತನಕ ಹಲವು ರೀತಿಯ ಹೊಡೆತಗಳನ್ನು ತಿಂದರೂ ಇದಿಂದು ಕೃಷಿಕರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಮತ್ತು ತನ್ನ ಮುಖ್ಯ ಉದ್ದೇಶವಾದ ಕೃಷಿಕರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತೆ ಕೈಗೊಳ್ಳಬೇಕಾದ ಎಲ್ಲಾ ಉಪಕ್ರಮಗಳನ್ನು ಕಮಿಷನ್ ಆಧಾರದಲ್ಲಿ ಕೈಗೊಂಡಿರುವುದರಿಂದ, ಇದು ತನ್ನ ಕಾರ್ಯಸಾಧನೆಯಲ್ಲಿ ಹಿಂದೆ ಬಿದ್ದಿಲ್ಲವೆನ್ನಬಹುದು. ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕೃಷಿಯುತ್ಪಾದಕರು ತಮ್ಮ ಉತ್ಪನ್ನಗಳಿಗೆ ಯೋಗ್ಯ ಧಾರಣೆ ದೊರಕದೆ ಕೊರಗುತ್ತಿರುವ  ಕಾರಣ ಸಂಘವು ಬದಲಾಗುತ್ತಿರುವ ಮಾರುಕಟ್ಟೆಯ ವಾತಾವರಣಕ್ಕನುಗುಣವಾಗಿ ತನ್ನ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಳಗೆ ಸೂಚಿಸಿದ ಪರಿಹಾರೋಪಾಯಗಳು ಪೂರಕವಾಗಬಲ್ಲವು.

(ಅ) ಸಂಘವು ತನ್ನ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡು, ಪಾಲು ಬಂಡವಾಳವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೃಷಿಕರ ಮನವೊಲಿಸುವ ಪ್ರಯತ್ನಗಳಾಗಬೇಕು. ಇದರೊಂದಿಗೆ ತನ್ನ ಶಾಖೆಗಳನ್ನು ಇನ್ನಷ್ಟು ಬಲಗೊಳಿಸಿ ಹಳ್ಳಿಗಳಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ವ್ಯವಹಾರವನ್ನು ಹೆಚ್ಚಿಸಬೇಕು.

(ಆ) ಪ್ರಕೃತ ಅಡಿಕೆ ವ್ಯವಹಾರದಲ್ಲಿ ಕ್ಯಾಂಪ್ಕೋವೊಂದೇ ಪರಿಣಾಮಕಾರಿ ಹೆಜ್ಜೆಯನ್ನಿಟ್ಟಿದ್ದು, ಇದಕ್ಕೆ ಬೆಂಬಲವಾಗಿ ಸಂಘವು ಕ್ಯಾಂಪ್ಕೋದ ರೀತಿಯಲ್ಲೇ ಅಡಿಕೆ ವ್ಯವಹಾರಕ್ಕಿಳಿಯಬೇಕು. ಜಿಲ್ಲೆಯ ಅಡಿಕೆ ವ್ಯವಹಾರದ ಬಹುಪಾಲನ್ನು ಸಂಘ ಮತ್ತು ಕ್ಯಾಂಪ್ಕೋ ಹೊಂದುವಂತಾಗಬೇಕು.

(ಇ) ಸಹಕಾರಿ ಮಾರಾಟ ವ್ಯವಸ್ಥೆಯ ಒಳಿತುಗಳ ಬಗ್ಗೆ ಕೃಷಿಕರಿಗೆ ಮನವರಿಗೆ ಮಾಡಲು ಅಗತ್ಯವುಳ್ಳ ಮಾಹಿತಿಯನ್ನೊದಗಿಸಬೇಕು.

ದಿ ತೋಟಗಾರ್ಸ್ ಕೋಆಪರೇಟಿವ್ ಸೇಲ್ಸ್ ಸೊಸೈಟಿ ಲಿ. (TSS)

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕೃಷಿಬೆಳೆ ಅಡಿಕೆ. ಕಳೆದ ಶತಮಾನದ ಆದಿಯಲ್ಲಿ ಇಲ್ಲಿನ ಬೆಳೆಗಾರರು ಅದರಲ್ಲೂ, ವಿಶೇಷವಾಗಿ ಸಣ್ಣ ಹಿಡುವಳಿದಾರರು, ಖಾಸಗಿ ವ್ಯಾಪಾಸ್ಥರ ಶೋಷಣೆಗೆ ಒಳಪಟ್ಟು ದಿಕ್ಕೆಟ್ಟ ಸಮಯದಲ್ಲಿ, ಈ ಭಾಗದ ಸಹಕಾರಿ ಧುರೀಣರು ರೈತರ ಸಂಕಷ್ಟವನ್ನು ಹೋಗಲಾಡಿಸಲು ೧೨-೧೧-೧೯೧೩ರಲ್ಲಿ “ದಿ ತೋಟಗಾರ್ಸ್ ಕೋ-ಆಪರೇಟಿವ್  ಸೇಲ್ಸ್ ಸೊಸೈಟಿ ಲಿಮಿಟೆಡ್ ಶಿರಸಿ” ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಆದರೆ ಮುಂದೆ ಇದರ ಕಾರ್ಯರಂಭವು ೨೪-೧೧-೧೯೨೩ರಿಂದ ಆಯಿತು. ಇದರ ಆರಂಭಕ್ಕಾಗಿ ಶ್ರಮಿಸಿದವರಲ್ಲಿ ದಿವಂಗತ ಶ್ರೀ ಎಸ್. ಎನ್. ಕೇಶ್‌ವೇನ್ ಪ್ರಮುಖರು. ಬಳಿಕ ಶ್ರೀ ಶ್ರೀಪಾದ ಹೆಗಡೆ, ಶ್ರೀ ಕಡವೆ, ಶ್ರೀ ವಿಶ್ವಾಮಿತ್ರ, ಶ್ರೀ ಅಜ್ಜಿಬಾಳ ಹೆಗಡೆ ಮುಂತಾದವರ ಮುಂದಾಳುತನದಲ್ಲಿ ಸಂಸ್ಥೆಯು ಬೆಳವಣಿಗೆಯನ್ನು ಸಾಧಿಸಿತು.

ಆರಂಭದಲ್ಲಿ ಕೇವಲ ೨೮ ಸದಸ್ಯರನ್ನು ಹೊಂದಿದ್ದ ಸಂಸ್ಥೆಯ ಪಾಲು ಬಂಡವಾಳವು ರೂಪಾಯಿ ೨೮೦ ಆಗಿತ್ತು. ಬಳಿಕ ಸಂಸ್ಥೆಯು ಅಡಿಕೆ ಬೆಳೆಗಾರರನ್ನು ಆಕರ್ಷಿಸಿ ತನ್ನ ವ್ಯವಹಾರವನ್ನು ಹೆಚ್ಚಿಸುತ್ತಾ ಹೋಗಿ ೧೯೯೯–೨೦೦೦ಕ್ಕಾಗುವಾಗ ಇದರ ಸದಸ್ಯರ ಸಂಖ್ಯೆ ೩೪೧೧ ಆಗಿತ್ತು ಮತ್ತು ಪಾಲು ಹಣದ ಮೊತ್ತ ೧೯,೨೬,೪೦೦೦ ರೂಪಾಯಿಗಳಿಗೇರಿತ್ತು. ಈ  ಸಂಸ್ಥೆಯು ಯಲ್ಲಾಪುರ ಮತ್ತು ಸಿದ್ಧಾಪುರಗಳಲ್ಲಿ ಎರಡು ಶಾಖೆಗಳನ್ನಿಂದು ಹೊಂದಿದ್ದು, ಇವಿಂದು ಸದಸ್ಯರ ಅಗತ್ಯಕ್ಕನುಗುಣವಾಗಿ ಸೇವೆಯನ್ನೊದಗಿಸುತ್ತಿವೆ.

ಸಂಸ್ಥೆಯು ತನ್ನ ಸದಸ್ಯರ ಹಾಗೂ ತನ್ನ ಸದಸ್ಯ ಸಂಘಗಳಿಂದ ಬರುವ ವ್ಯವಸಾಯ ಉತ್ಪನ್ನಗಳ ಮಾರಾಟ ಹಾಗೂ ಸಾಲದ ಆಗತ್ಯತೆಗಳನ್ನು ಪೂರೈಸುವುದರೊಂದಿಗೆ ಸದಸ್ಯರಿಗೆ ಅವಶ್ಯಕವಾದ ವಿವಿಧ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ. ಸಂಘ ತನ್ನ ಒಡೆತನದಲ್ಲಿರುವ ಅಕ್ಕಿ ಗಿರಿಣಿಯ ಮೂಲಕ ಭತ್ತವನ್ನು ರೂಪಾಂತರಗೊಳಿಸುತ್ತಿದೆ. ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ತನ್ನ ಔಷಧ ಅಂಗಡಿಯ ಮೂಲಕ ಸೇವೆಯನ್ನೊದಗಿಸುವುದರೊಂದಿಗೆ ಇತರೇ ಸೇವೆಗಳನ್ನೂ ಒದಗಿಸುತ್ತಿದೆ. ಸದಸ್ಯರ ವ್ಯವಸಾಯೋತ್ಪನ್ನಗಳನ್ನು ‘ಪೂಲಿಂಗ್’ ಪದ್ಧತಿಗನುಗುಣವಾಗಿ ಶೇಖರಿಸಿ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳುತ್ತಿದೆ.

ದಿ. ತೋಟಗಾರ್ಸ್ ಕೋ ಆಪರೇಟಿವ್ ಸೇಲ್ಸ್ ಸೊಸೈಟಿಯು ೧೯೨೩ರಿಂದ ಹಿಡಿದು ಈ ತನಕ ಅಡಿಕೆ ಬೆಳೆಗಾರರ ಹಿತಕ್ಕಾಗಿ ನಿರಂತರ ಶ್ರಮಿಸಿದ್ದು, ಇದನ್ನು ನಾವು ಅದರ ಪ್ರಗತಿಪಥವನ್ನು ತೋರಿಸುವ ಅಂಕಿ-ಆಂಶಗಳಿಂದ (ಪಟ್ಟಿ ) ಕಂಡುಕೊಳ್ಳಬಹುದು.

ಪಟ್ಟಿ
ದಿ ತೋಟಗಾರ್ಸ್ ಕೋಆಪರೇಟಿವ್ ಸೇಲ್ಸ್ ಸೊಸೈಟೀಯ ಪ್ರಗತಿ ಪಥ

ವಿಷಯ

ಸದಸ್ಯರ ಸಂಖ್ಯೆ

ಪಾಲು ಹಣ (ರೂ.)

ಅಡಿಕೆ ಮಾರಾಟ (ಮೂಟೆ)

ಲಾಭ

೧೯೨೩ ೨೮ ೨೮೦ ಲಭ್ಯವಿಲ್ಲ ೪೮
೧೯೩೩ ೧೭೩ ೨೧೦೦ ಲಭ್ಯವಿಲ್ಲ ೬೭೪
೧೯೪೩ ೨೮೩ ೩೭೨೦ ಲಭ್ಯವಿಲ್ಲ ೧೭೪೨
೧೯೫೩ ೧೪೩೦ ೧೨೯೬೧೦ ಲಭ್ಯವಿಲ್ಲ ೩೦೦೪೪
೧೯೬೩ ೨೩೧೮ ೫೦೪೮೨೦ ಲಭ್ಯವಿಲ್ಲ ೮೬೯೯೯
೧೯೭೩ ೬೨೩೦ ೧೨೯೬೩೯೦ ಲಭ್ಯವಿಲ್ಲ ೨೨೩೦೩೯
೧೯೮೩ ೩೯೯೩ ೨೩೬೧೨೯೦ ೮೪೮೮೯ ೩೧೬೨೮೨೭
೧೯೯೩–೯೪ ೩೪೭೫ ೨೧೨೩೪೯೦ ೭೬೯೮೮ ೧೨೧೦೧೦೫೯
೧೯೯೪–೯೫ ೩೬೬೪ ೨೦೯೩೧೯೦ ೭೨೨೩೨ ೧೪೦೩೭೯೫೭
೧೯೯೫–೯೬ ೩೪೯೦ ೨೦೮೧೭೦೦ ೭೩೧೫೪ ೧೬೩೪೬೧೫೭
೧೯೯೬–೯೭ ೩೫೦೭ ೨೦೮೯೩೦೦ ೭೧೮೨೪ ೧೯೫೦೮೩೩೦
೧೯೯೭–೯೮ ೩೪೪೧ ೧೯೮೭೫೦೦ ೮೯೦೭೨ ೧೩೪೪೬೭೯೮
೧೯೯೮–೯೯ ೩೪೧೭ ೧೯೫೭೬೦೦ ೧೦೨೮೬೩ ೧೬೯೪೯೯೧೦
೧೯೯೯–೨೦೦೦ ೩೪೧೧ ೧೯೨೬೪೦೦ ೮೦೦೧೫ ೧೯೩೨೧೦೮೩