ಮಾರುಕಟ್ಟೆಗಾಗಿರುವ ಅಡಿಕೆ

ದೇಶದಲ್ಲಿಂದು ಉತ್ಪಾದಿಸಲ್ಪಡುವ ಅಡಿಕೆಯನ್ನು ಹೆಚ್ಚು ಕಡಿಮೆ ತಿನ್ನಲು ಮಾತ್ರ ಉಪಯೋಗಿಸಲಾಗುತ್ತಿದ್ದು, ಇದಕ್ಕಾಗಿ ಅಡಿಕೆಯನ್ನಿಂದು ಮುಖ್ಯವಾಗಿ ನಾಲ್ಕು ಬಗೆಗಳಾಗಿ ವರ್ಗಿಕರಿಸಬಹುದು. ಅವುಗಳೆಂದರೆ ೧. ಹಣ್ಣಡಿಕೆ, ೨. ಚಾಲಿ ಅಡಿಕೆ, ೩. ಸಂಸ್ಕರಿಸಿದ ಹಸಿ ಅಡಿಕೆ, ಮತ್ತು ೪. ಸಂಸ್ಕರಿಸಿದ ಮತ್ತು ಬಣ್ಣ ಹಾಕಿದ ಹಸಿ ಅಡಿಕೆ.

. ಹಣ್ಣಡಿಕೆ:

ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹಣ್ಣಡಿಕೆಯ ಉಪಯೋಗ ಅಧಿಕವಾಗಿದ್ದು, ಇವುಗಳೊಂದಿಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಇದನ್ನು ಉಪಯೋಗಿಸಲಾಗುತ್ತಿದೆ. ಈ ಅಡಿಕೆಯನ್ನು ಸ್ಥಳೀಯವಾಗಿ ಲಭ್ಯವಿರುವ ವೀಳ್ಯದೆಲೆಯೆ ಸಹಯೋಗದೊಂದಿಗೆ ತಿನ್ನಲು ಬಳಸಲಾಗುತ್ತಿದ್ದು, ಇದನ್ನು ಬಳಸುವವರಲ್ಲಿ ಅಧಿಕ ಪಾಲು ಕೂಲಿಕಾರ್ಮಿಕರಾಗಿದ್ದಾರೆ. ಈ ಅಡಿಕೆಯನ್ನು ಉಪಯೋಗಿಸಿ ತಯಾರಿಸಲ್ಪಡುವ ಬೀಡಾಗಳನ್ನು ಸಾಮಾನ್ಯವಾಗಿ ಎಲ್ಲಾ ಗೂಡಂಗಡಿ ಯಾ ಸಣ್ಣ ಅಂಗಡಿಗಳಲ್ಲಿ ಕಾಣಬಹುದಾಗಿದ್ದು, ಹೆಚ್ಚು ಕಡಿಮೆ ಒಂದರಿಂದ ಎರಡು ಸಾವಿರ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಇವುಗಳ ಮಾರಾಟ ದಿನ ಒಂದರ ಸುಮಾರು ಒಂದರಿಂದ ಒಂದೂವರೆ ಸಾವಿರಗಳಷ್ಟು. ಒಂದು ಹಣ್ಣಡಿಕೆಯಿಂದ ಕನಿಷ್ಟ ಮೂರರಿಂದ ನಾಲ್ಕು ಬೀಡಾಗಳನ್ನು ಮಾಡಬಹುದಾಗಿದ್ದು ಇದರ ಮಾರಾಟ ಬೆಲೆ ರೂಪಾಯಿ ಒಂದಾಗಿದೆ. ಈ ಬೀಡಾದಲ್ಲಿ ಅಡಿಕೆ, ವೀಳ್ಯದೆಲೆ, ಸುಣ್ಣ, ತಂಬಾಕುಗಳಿದ್ದು, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇದನ್ನ ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರಾಟಕ್ಕಾಗಿ ಪೂರೈಸುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಪತ್ಪಾದಿಸಲ್ಪಡುವ ಹಣ್ಣಡಿಕೆಯು ಹೆಚ್ಚಾಗಿ ವಾರದ ಸಂತೆಗಳಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಸ್ಥಳೀಯ ಮತ್ತು ದೂರದೂರಿನ ವ್ಯಾಪಾರಿ ಮಥ್ಯವರ್ತಿಗಳು ಕೊಂಡುಕೊಂಡು ಜಿಲ್ಲಾ ಮಟ್ಟದ ಮಾರುಕಟ್ಟೆಗಳಿಗೆ ರವಾನಿಸುತ್ತಾರೆ. ಅಲ್ಲಿಂದ ಅದು ದೂರದೂರಗಳಿಗೆ ಮತ್ತು ಸ್ಥಳೀಯ ಬೇಡಿಕೆಗನುಗುಣವಾಗಿ ಪೂರೈಸಲ್ಪಡುತ್ತಿದ್ದು, ಮಳೆಗಾಲದ ಆರಂಭದಲ್ಲಿ ಭತ್ತದ ಬೇಸಾಯ ಕೈಗೊಳ್ಳುತ್ತಿರುವ ದೂರದ ಕೇರಳದ ಪ್ರದೇಶಗಳಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೇಸಾಯದಲ್ಲಿ ಅನಾಸಕ್ತಿ ಕಂಡು ಬರುತ್ತಿರುವುದರಿಂದ ಇದಕ್ಕಿರುವ ಬೇಡಿಕೆ ಕುಸಿಯಲಾರಂಬಿಸಿದೆ. ಇದರೊಂದಿಗೆ ಈಗೀಗ ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳಾದ ಗುಟ್ಕಾಗಳು ಸುಲಭದಲ್ಲಿ ಲಭ್ಯವಾಗುತ್ತಿರುವುದರಿಂದ ಹಣ್ಣಡಿಕೆಯನ್ನು ಹೆಚ್ಚಾಗಿ ಬಳಸುತ್ತಿದ್ದ ಹೆಣ್ಣು ಕಾರ್ಮಿಕರು ಇದಕ್ಕೆ ಮಾರು ಹೋಗುತ್ತಿದ್ದಾರೆ. ಹಣ್ಣಡಿಕೆಯ ಮಾರಾಟ ವ್ಯವಸ್ಥೆಯಲ್ಲಿ ಉತ್ಪಾದಕನಿಗೆ ಗ್ರಾಹಕನು ಕೊಡುವ ಹಣದ ಶೇಕಡಾ ೪೦ ರಿಂದ ೫೦ರಷ್ಟು ಮಾತ್ರ ದೊರಕುತ್ತಿದ್ದು, ಉಳಿದ ಪಾಲು ಮಧ್ಯವರ್ತಿಗಳದ್ದಾಗಿದೆ.

ಹಣ್ಣಡಿಕೆಯು ವರ್ಷದ ಎಲ್ಲಾ ಸಮಯದಲ್ಲಿ ದೊರಕದೇ ಇರುವುದರಿಂದ , ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಇದರ ಪೂರೈಕೆಯಲ್ಲಿ ಅಭಾವವುಂಟಾಗುತ್ತಿರುವ ಅಂತಿಮ ಕೊಯ್ಲಿನಲ್ಲಿ ದೊರಕುವ ಹಣ್ಣಡಿಕೆಯನ್ನು ನೀರು ತುಂಬಿರುವ ಮಡಕೆ ಇಲ್ಲವೇ ಹೊಂಡಗಳಲ್ಲಿ ಶೇಖರಿಸಿಡುವ ಪದ್ಧತಿ ಇದೆ. ಆದರೆ  ಈ ಆಡಿಕೆಯ ಸಿಪ್ಪೆ ಕೊಳೆತು ದುರ್ಗಂಧವನ್ನು ಹೊರಸೂಸುತ್ತಿರುವುದರಿಂದ ಈಗಿನ ಯುವ ಜನಾಂಗ ಇದರಿಂದ ತಯಾರಿಸಿದ ಬೀಡಾವನ್ನು ಸೇವಿಸುವ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ  ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ, ಇತ್ತೀಚಿನ ದಿನಗಳಲ್ಲಿ ಆಧುನಿಕ ತಳಿಗಳ ಕೃಷಿ ಆರಂಭಗೊಂಡು ವರ್ಷದ ಎಲ್ಲಾ ಋತುಗಳಲ್ಲೂ ಹಣ್ಣಡಿಕೆ ಲಭ್ಯವಾಗತೊಡಗಿದ್ದು ಇದು ನೀರಡಿಕೆಗಿರುವ ಬೇಡಿಕೆಯ ಕುಸಿತಕ್ಕೆ ದಾರಿ ಮಾಡಿಕೊಡುತ್ತದೆ.

ಹಣ್ಣಡಿಕೆಗಿಂದು ಲಭ್ಯವಿರುವ ಮಾರುಕಟ್ಟೆ ಏನಿದ್ದರೂ ಉತ್ಪಾದನಾ ಪ್ರದೇಶಗಳೇ ಹೊರತು ದೂರದ ಊರಿನಲ್ಲಿಲ್ಲವಾದ್ದರಿಂದ ಹಣ್ಣಡಿಕೆಯ ಬಳಕೆಯನ್ನು ದೂರದ ರಾಜ್ಯಗಳಿಗಿಂದು ವಿತ್ತರಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಗ್ಯ ಸಾಗಾಟ ವ್ಯವಸ್ಥೆ ಶೇಖರಣಾ ವ್ಯವಸ್ಥೆ ಇತ್ಯಾದಿಗಳಿಂದು ಇಲ್ಲಿಗಾಗ ಬೇಕಾಗಿದೆ. ಹಣ್ಣಡಿಕೆಯಿಂದ ತಯಾರಿಸಲ್ಪಡುವ ಬೀಡದ ಬೆಲೆಯು ಬಿಳಿ ಅಡಿಕೆಯಿಂದ ತಯಾರಾಗುವ ಬೀಡಾಕ್ಕೆ ಹೋಲಿಸಿದಾಗ ಅತ್ಯಲ್ಪವಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನಗಳಿಂದಾಗಬೇಕಾಗಿದೆ. ಈ ಪ್ರಯತ್ನ ಯಶಸ್ಸಿಯಾದಲ್ಲಿ ಬೆಳೆಗಾರರಿಂದು ಬಿಳಿ ಅಡಿಕೆಯನ್ನು ತಯಾರಿಸಲು ಪಡುವ ಶ್ರಮು ಮತ್ತು ವೆಚ್ಚ ಕಡಿಮೆಗೊಂಡು ತಮ್ಮ ಆರ್ಥಿಕ ಸ್ಥಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಹಣ್ಣಡಿಕೆಯನ್ನು ದೀರ್ಘಕಾಲ ಒಳ್ಳೆ ರೀತಿಯಲ್ಲಿ ಶೇಖರಿಸಿಡಲು ಅಗತ್ಯವುಳ್ಳ ಸೂಕ್ತ ವಿಧಾನವೊಂದನ್ನು ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನಾಲಯದವರು ಹೆಸರಿಸಿದ್ದು, ಇದರ ಪ್ರಕಾರ ಹಣ್ಣಡಿಕೆಯನ್ನು ಮೊದಲು ಕ್ಲೋರಿನೇಟೆಡ್ ನೀರಿನಲ್ಲಿ (೧೦೦೦ ಪಿ.ಪಿ.ಎಂ. ಕ್ಲೋರಿನ್ ) ಹಾಕಿ ಕೊಳೆಯನ್ನು ಮತ್ತು ಹೊರಗಿನ ವಸ್ತುಗಳನ್ನು ತೊಳೆದು ಬಳಿಕ ಶೇ. ೦.೨ ಕಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಕುದಿಸಬೇಕು. ಆ ಮೇಲೆ ಭದ್ರವಾದ ರಂಧ್ರ ರಹಿತ ಹೊಳಪಿನ ಭರಣಿಯಂತಹ ಪಾತ್ರೆಗಳಲ್ಲಿ ರಕ್ಷಕ ದ್ರಾವಣಗಳಾದ ಶೇ ೦.೧ರ  ಸೋಡಿಯಂ ಬೆನ್ಜೊಮೇಟ್ ಮತ್ತು ಶೇ. ೦.೨ ಪೊಟ್ಯಾಸಿಯಂ ಮೆಟಾಬೈಸಲ್ಫ್ಯೆಟ್‌ನ ಮಿಶ್ರಣದಲ್ಲಿ ಚೆನ್ನಾಗಿ ಮುಳುಗಿಸಬೇಕು. ಈ ರೀತಿಯ ವ್ಯವಸ್ಥೆಯಿಂದ ಹಣ್ಣಡಿಕೆಯನ್ನು ಸುಮಾರು ಒಂದು ವರ್ಷಗಳ ವರಗೆ ಶೇಖರಿಸಿಡಬಹುದೆಂದು ತಿಳಿಸಲಾಗಿದೆ. ಆದರೆ ಈ ವ್ಯವಸ್ಥೆಯನ್ನು ಕೈಗೊಳ್ಳಲು ಬೆಳೆಗಾರರಿಗಿಂದು ಅಗತ್ಯ ಶಿಕ್ಷಣ ಮತ್ತು ತರಬೇತನ್ನು ಕೊಡಬೇಕಾಗಿದೆ. ಇರರೊಂದಿಗೆ ಹೊರರಾಜ್ಯಗಳಲ್ಲಿ ಹಣ್ಣಡಿಕೆಗೆ ಬೇಡಿಕೆಯನ್ನು ಕುದುರಿಸಲು ಮತ್ತು ಅಲ್ಲಿಗೆ ಅದನ್ನು ನಿರಂತರವಾಗಿ ಪೂರೈಸಲು ನಮ್ಮಲ್ಲಿಂದು ಯಾವುದೇ ಕ್ರಮಗಳಾದಂತಿಲ್ಲ. ಈ ನಿಟ್ಟಿನಲ್ಲಿ  ಇನ್ನು ಮುಂದೆಯಾದರೂ ಪ್ರಯತ್ನಗಾಳಾಗಲೇಬೇಕು.

. ಚಾಲಿ ಅಡಿಕೆ:

ಚಾಲಿ ಅಥವಾ ಬಿಳಿಯಾಡಿಕೆ ಯಾ ಬಿಳಿಗೋಟು ಅಡಿಕೆಯನ್ನು, ಬೆಳೆದು ಹಣ್ಣಾದ ಅಡಿಕೆಯನ್ನು ಕೊಯ್ಲು ಮಾಡಿ ಸುಮಾರು ೪೦ರಿಂದ ೫೦ರ ತನಕ ಬಿಸಿಲಿನಲ್ಲಿ  ಒಣಗಿಸಿ ಬಳಿಕ ಸಿಪ್ಪೆಯನ್ನು ಸುಲಿದು ಒಡೆದುಕೊಳ್ಳಬಹುದು. ಈ ಅಡಿಕೆಯನ್ನು ಒಣಗಿದಾಗಲೇ ಸುಲಿದು ಪಡೆದುಕೊಳ್ಳಬಹುದು. ಈ ಅಡಿಕೆಯನ್ನು ಒಣಗಿದಾಗಲೇ ಸುಲಿದು ಯಾ ಒಣಗಿದ ನಾಲ್ಕೈದು ತಿಂಗಳೊಳಗೆ ಮಾರಾಟಕ್ಕೆ ಬಿಡುಗಡೆ ಮಾಡಿದ್ದಲ್ಲಿ ಹೊಸ ಅಡಿಕೆಯೆಂದೂ, ಅದಕಿಂತ ಹೆಚ್ಚು ಸಮಯ ಶೇಖರಿಸಿ ಸುಲಿದು ಮಾರಾಟಕ್ಕೆ ಬಿಡುಗಡೆ ಮಾಡಿದಲ್ಲಿ ಛೋಲ್ ಅಥವಾ ಹಳೆ ಅಡಿಕೆಯೆಂದು ಕರೆಯುವುದು ವಾಡಿಕೆ. ಅಡಿಕೆ ಹಳತಾದಷ್ಟು ಅದಕ್ಕಿರುವ ರುಚಿ ಹೆಚ್ಚು. ಹಳೆ ಅಡಿಕೆಗೆ ಗುಜರಾತಿನಲ್ಲಿರುವಷ್ಟು ಬೇಡಿಕೆ ದೇಶದ ಇನ್ಯಾವುದೇ ಭಾಗಗಳಲಿಲ್ಲ.

ಚಾಲಿ ಅಡಿಕೆಯನ್ನು ಮಲಯಾಳದಲ್ಲಿ ‘ಕೊಟ್ಟ್ಅಪಾಕು’ ಯಾ ‘ಕೊಟ್ಟಡಕ’ ಎಂತಲೂ, ಅಸ್ಸಾಂನಲ್ಲಿ ‘ಮೋಡ’ ಎಂದು ಕರೆಯುತ್ತಾರೆ. ಈ ರೀತಿಯ ಅಡಿಕೆಯನ್ನು ಕರ್ನಾಟಕದ ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೇರಳದ ಕಾಸರಗೋಡು, ಕಣ್ಣಾನೂರು, ಕೋಝೀಕೋಡ್, ಕೋಟ್ಟಾಯಂ, ಅಲೆಪ್ಪಿ, ತ್ರಿವೆಂಡ್ರಮ್ ಮತ್ತು ಕ್ಚಿಲಾನ್ , ತಮಿಳುನಾಡಿನ ಮೆಟ್ಟುಪಾಳ್ಯಂ, ಮಹಾರಾಷ್ಟ್ರದ ಕೊಲಾಬ ಮತ್ತು ರತ್ನಗಿರಿ ಜಿಲ್ಲೆಗಳಲ್ಲದೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ತಯಾರಿಸಲಾಗುತಿದೆ. ಈ ಎಲ್ಲಾ ಪ್ರದೇಶಗಳ  ಪೈಕಿ ಕರ್ನಾಟದ ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ  ತಯಾರಾಗುತ್ತಿರುವ ಬಿಳಿ ಅಡಿಕೆಗೆ ದೇಶದಾದ್ಯಂತ ಅತ್ಯಧಿಕ ಬೇಡಿಕೆಯಿದ್ದು, ಇದಕ್ಕೆ ಮುಖ್ಯ ಕಾರಣ ಇದರ ರುಚಿ ಮತ್ತು ಗುಣಮಟ್ಟ .

ವಿದೇಶಗಳಲ್ಲಿಂದು ಉತ್ಪಾದಿಸಲ್ಪಡುವ ಅಡಿಕೆಯನ್ನು ಅಧಿಕ ಪ್ರಮಾಣದಲ್ಲಿ ಚಾಲಿ ಅಡಿಕೆಯಾಗಿ ಪರಿವರ್ತಿಸುತ್ತಿದ್ದು, ಹೀಗಿದ್ದರೂ ಅವುಗಳ ಗುಣಮಟ್ಟ ಭಾರತದಲ್ಲಿ ತಯಾರಿಸಲ್ಪಡುವ ಚಾಲಿ ಅಡಿಕೆಗೆ ಹೋಲಿಸಿದಾಗ ಕಳಪೆ ದರ್ಜೆಯಾದ್ದಾಗಿದೆ.

ಚಾಲಿ ಅಡಿಕೆಯನ್ನು ಬೇಳೆಗಾರರ ಹಂತದಲ್ಲಿ ಮುಖ್ಯವಾಗಿ ನಾಲ್ಕು ರೀತಿಯ ವರ್ಗೀಕರಣ ಮಾಡಿ ಮಾರಾಟ ಮಾಡುವುದು ರೂಢಿ. ಅವುಗಳೆಂದರೆ (ಅ) ಉತ್ತಮ ಚಾಲಿ, (ಆ) ಫಟೋರ, (ಇ) ಉಳ್ಳಿಗಡ್ಡೆ ಮತ್ತು (ಈ) ಕರಿಗೋಟು ಇವುಗಳ ಪೈಕಿ ಉತ್ತಮ ಚಾಲಿ ಅಡಿಕೆಯನ್ನು ದೊಡ್ಡಡಿಕೆ ಯಾ ಮೋರ ಮತ್ತು ಸಣ್ಣಡಿಕಯನ್ನಾಗಿ ವರ್ಗಿಕರಿಸುವ ಪದ್ಧತಿಯು ಕೆಲವೊಂದು ಬೆಳೆಗಾರರಲ್ಲಿದ್ದು ಇದು ಕೇವಲ ಕಣ್ಣಂದಾಜಿನಿಂದಾಗಿರುತ್ತದೆ. ಚಾಲಿ ಅಡಿಕೆಗೆ ಉತ್ತಮ ಧಾರಣೆ ದೊರಕಬೇಕಿದ್ದಲ್ಲಿ ಸುಲಿದಾಕ್ಷಣ ಮಾರಾಟಕೆ ಬಿಡುಗಡೆ ಮಾಡುವುದು ಉತ್ತಮವಾಗಿದ್ದರೂ ಈಗೀಗ ಹೆಚ್ಚಿನ ಧಾರಣೆಯ ಅಪೇಕ್ಷಯಿಂದಾಗಿ ಇದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ, ಸೆಣಬಿನ ಚೀಲಗಳಲ್ಲಿಡುವುದು ವಾಡಿಕೆಯಾಗಿದೆ. ಈ ರೀತಿಯ ವ್ಯವಸ್ಥೆಯನ್ನು ಹೆಚ್ಚಾಗಿ ದೊಡ್ಡ ಬೆಳೆಗಾರರೇ ನೆಚ್ಚಿಕೊಂಡಿದ್ದಾರೆ.

ಚಾಲಿ ಅಡಿಕೆಗೆ ಇರುವ ಮುಖ್ಯ ಮಾರುಕಟ್ಟೆಗಳೆಂದರೆ ಗುಜರಾತು, ಹೈದರಾಬಾದ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಒರಿಸ್ಸಾ, ದೆಹಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ. ಇವುಗಳ ಪೈಕಿ ಮಂಗಳೂರು ಚಾಲಿಯ ಮುಖ್ಯ ಗ್ರಾಹಕ ಗುಜರಾತ್ ಆಗಿದ್ದು, ಈ ಎಲ್ಲಾ ಗ್ರಾಹಕ ಪ್ರದೇಶಗಳ ಬೇಡಿಕೆಗನುಗುಣವಾಗಿ ಇದನ್ನಿಂದು ವಿವಿಧ ಗಾತ್ರಗಳಾಗಿ ವಿಂಗಡಿಸಲಾಗುತ್ತಿದೆ. ಈ ರೀತಿಯ ವಿಂಗಡನೆ ಜರಡಿ ಯಂತ್ರದ ಸಹಾಯದಿಂದ ಮಾಡಲಾಗುತ್ತಿದ್ದು, ಇದರ ಪ್ರಕಾರ ಇವನ್ನಿಂದು ಮೋರಾ, ಮೋಟಿ, ಸೇವರ್ಧನ್, ಜಾಮ್, ಜೀನಿ ಮತ್ತು ಲಿಂಡಿಗಳೆಂದು ಕರೆಯಲಾಗುತ್ತದೆ. ೩೦ಮಿ.ಮೀ. ಗಿಂತ ಹೆಚ್ಚಿನ ಗಾತ್ರದ ಅಡಿಕೆಯನ್ನು ಮೋರಾವೆಂದು, ೨೬ರಿಂದ ೩೦ಮಿ.ಮೀ. ತನಕದ್ದನ್ನು ಮೋಟಿಯೆಂದು, ೨೪–೨೪ಮಿ.ಮೀ.ಯ ಅಡಿಕೆಯನ್ನು ಸೇವರ್ಧನ್ ಎಂದು, ೨೧.೫ರಿಂದ ೨೪ ಮಿ.ಮೀ.ಯದ್ದನ್ನು ಜಾಮ್, ೧೭.೫–೨೧.೫ರ ತನಕದ್ದನ್ನು ಜೀನಿ ಮತ್ತು ಅದಕ್ಕಿಂತ ಕೆಳಗಿನದ್ದನ್ನು ಲಿಂಡಿ ಎಂದೂ ಕರೆಯಲಾಗುತ್ತದೆ.

ಉತ್ತಮ ದರ್ಜೆಯ ಚಾಲಿಯಡಿಕೆಗೆ  ಗುಜರಾತು, ಮಹಾರಾಷ್ಟ್ರ, ಮಧ್ಯಪ್ರದೇಶ,ರಾಜಸ್ಥಾನಗಳಲ್ಲಿ ಅಧಿಕ ಬೇಡಿಕೆಯಿದ್ದು ಉತ್ತರ ಪ್ರದೇಶ, ಆಂಧ್ರ ಪ್ರದೇಶಗಳಲ್ಲಿ ಇದಕ್ಕೆ ಸಾಧಾರಣ ಬೇಡಿಕೆಯಿದೆ. ಸಾಮಾನ್ಯ ದರ್ಜೆಯ ಅಡಿಕೆಯನ್ನು ಹೆಚ್ಚಾಗಿ ಉಪಯೋಗಿಸುವ ರಾಜ್ಯಗಳೆಂದರೆ ಬಿಹಾರ, ಒರಿಸ್ಸಾ, ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಪಶ್ಚಿಮ ಬಂಗಾಳ. ಈ ಎಲ್ಲಾ ರಾಜ್ಯಗಳಲ್ಲಿ ಉತ್ತಮ ದರ್ಜೆಯ ಅಡಿಕೆಯನ್ನು ವಿಧವಿಧದ ಬೀಡಾವನ್ನು ತಯಾರಿಸಲು ಮತ್ತು ಬೀಡಾರಹಿತವಾಗಿ ಸೇವಿಸಲು ಬಳಸಲಾಗುತ್ತಿದೆ. ಸಾಮಾನ್ಯ ದರ್ಜೆಯ ಅಡಿಕೆಯನ್ನು ಬೀಡಾವನ್ನು ತಯಾರಿಸಲು ಉಪಯೋಗಿಸುವುದರೊಂದಿಗೆ, ಸುಗಂಧ ಭರಿತ ಸುಪಾರಿ, ಪಾನ್ ಮಸಾಲ ಮತ್ತು ಗುಟ್ಟಾಗಳ ತಾಯಾರಿಸಲೂ ಬಳಸಲಾಗುತ್ತದೆ. ಚಾಲಿಯಡಿಕೆಯಲ್ಲಿ ಸಿಗುವಂತಹ ಅತ್ಯಂತ ಕಳಪೆ ದರ್ಜೆಯ ಅಡಿಕೆಯನ್ನು ಹಲ್ಲಿನ ಪುಡಿ ತಾಯಾರಿಸಲು ಉತ್ತರದ ರಾಜ್ಯಗಳಲ್ಲಿ ಬಳಸಲಾಗುತ್ತಿದ್ದು, ಇಲ್ಲಿ ಈ ಪುಡಿಯನ್ನು ತಯಾರಿಸುವಾಗ ಕಳಪೆ ದರ್ಜೆಯ ತಂಬಾಕನ್ನು ಸೇರಿಸುವುದು ರೂಢಿಯಾಗಿದೆ. ಈ ಹಲ್ಲಿನ ಪುಡಿಯನ್ನು ಹೆಚ್ಚಾಗಿ ಕೆಳವರ್ಗದ ಯಾ ಬಡವರು ಉಪಯೋಗಿಸುತ್ತಾರೆ.

ಚಾಲಿಅಡಿಕೆಯಉಪಯೋಗದವಿಧಾನಗಳು:

ಚಾಲಿ ಅಡಿಕೆಯನ್ನಿಂದು ಮುಖ್ಯವಾಗಿ ಬೀಡಾಗಳ ತಯಾರಿಯಲ್ಲಿ ಒಂದು ಮೂಲ ಉತ್ಪನ್ನವಾಗಿ ಉಪಯೋಗಿಸಲಾಗುತ್ತಿದೆ. ಈ ಅಡಿಕೆಯ ವಿವಿಧ ರೀತಿಯ ತುಂಡುಗಳನ್ನಾಗಿ ಪರಿವರ್ತಿಸಿ ಬೀಡಾಗಳ ಗ್ರಾಹಕರ ರುಚಿಗನುಗುಣವಾಗಿ ಪೂರೈಸಲಾಗುತ್ತಿದ್ದು, ಇದರ ಪೂರೈಕೆಗಾಗಿ ಹಲವು ಗೃಹ ಕೈಗಾರಿಕೆಗಳಿಂದು ಉತ್ತರ ಭಾರತದ ರಾಜ್ಯಗಳಲ್ಲಿ  ಕಾರ್ಯನಿರ್ವಹಿಸುತ್ತಿವೆ. ಇವನ್ನು ‘ಕಟ್ಟಿಂಗ್ ಸೆಂಟರ್’ ಗಳೆಂದು ಕರೆಯಲಾಗುತ್ತಿದ್ದು, ಈ ಉದ್ದಿಮೆಗಳಲ್ಲಿಂದು ಸರಾಸರಿ ಉದ್ದಿಮೆಯೊಂದರ ಸುಮಾರು ಹತ್ತರಿಂದ ಇಪ್ಪತ್ತು ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ವಿವಿಧ ರೂಪಗಳನ್ನು ತಳೆಯುವ ಅಡಿಕೆಯನ್ನು ವಿವಿಧ ತೂಕಗಳ ಪ್ಯಾಕೆಟ್ ಗಳಲ್ಲಿ ತುಂಬಿಸಿ ಸೈಕಲೊಂದರ ಮೂಲಕ ಪಾನ್ ಬೀಡಾ ಅಂಗಡಿಗಳ ಮಾಲಕರಿಗೆ ಅವರ ಆಗತ್ಯಕ್ಕನುಗುಣವಾಗಿ ಪೂರೈಸಲಾಗುತ್ತಿದೆ. ಇಲ್ಲಿ  ಇಂದು ಆಗುತ್ತಿರುವ ವ್ಯವಹಾರ ಸಾಲದ ರೂಪದ್ದಾಗಿದ್ದು, ಈ ವ್ಯವಸ್ಥೆಯು ನಿರಂತರವಾಗಿ ನಡೆಯುವುದನ್ನು ನಾವಿಂದು ಕಂಡು ಕೊಳ್ಳಬಹುದಾಗಿದೆ.

ಚಾಲಿ ಅಡಿಕೆಯನ್ನಿಂದು ಪಾನ್‌ಬೀಡಾ ಅಂಗಡಿಗಳಿಗೆ ಹುರಿದು, ತುಂಡಗಳಾಗಿ ಪುಡಿಯಾಗಿ ಪೂರೈಸಲಾಗುತ್ತಿದ್ದು, ಇವೆಲ್ಲಾ ಇದರ ಮಾಲೀಕರ ಅಗತ್ಯಕ್ಕನುಗುಣವಾಗಿ ನಡೆಯುತ್ತಿದೆ. ಪಾನ್‌ಬೀಡಾ ಅಂಗಡಿಯ ಒಡೆಯರು ಕೆಲವೊಮ್ಮೆ ಇಡೀ ಚಾಲಿ ಅಡಿಕೆಯನ್ನೇ ಬಯಸುತ್ತಿದ್ದು, ಅವರು ಪಡಕೊಳ್ಳುವ ಅಡಿಕೆಯ ಒಟ್ಟು ಪ್ರಮಾಣದಲ್ಲಿ ಈ ಪಾಲು ಅತ್ಯಧಿಕ. ಹುರದಡಿಕೆ, ತುಂಡಡಿಕೆ ಇತ್ಯಾದಿಗಳಿಗೆ ಅವರ ಬೇಡಿಕೆ ಅತ್ಯಲ್ಪ. ಅದಕ್ಕೆ ಮುಖ್ಯ ಕಾರಣ ಅಡಿಕೆಯ ಸಂಸ್ಕರಣೆಗೊಳಪಟ್ಟಂತೆ ಅದರ ಬೆಲೆಯೂ ಜಾಸ್ತಿಯಿರುವುದು.

ಪಾನ್ಬೀಡಾಅಂಗಡಿಗಳು:

ಭಾರತದಲ್ಲಿಂದು ಒಂದು ಅಂದಾಜಿನಂತೆ ೧೫ ಲಕ್ಷ ಪಾನ್ ಬೀಡಾ ಅಂಗಡಿಳಿದ್ದು, ಇವುಗಳಲ್ಲಿಂದು ಉಪಯೋಗಿಸಲ್ಪಡುವ ಸರಾಸರಿ ಅಡಿಕೆಯ ಪ್ರಮಾಣ ಅಂಗಡಿಯೊಂದರ ಕಾಲು ಕಿಲೋದಿಂದ ಹಿಡಿದು ಸುಮಾರು ಐದು ಕಿಲೋ ತನಕ. ಗುಜರಾತು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿರುವ ಅಂಗಡಿಗಳಲ್ಲಿ ಈ ಪ್ರಮಾಣವು ಅಧಿಕ ಮಟ್ಟದ್ದಾದರೆ ಇನ್ನುಳಿದ ರಾಜ್ಯಗಳಲ್ಲಿರುವ ಅಂಗಡಿಗಳಲ್ಲಿ ಇದು ಕಡಿಮೆ ಮಟ್ಟದ್ದಾಗಿದೆ.

ದೇಶದಲ್ಲಿರುವ ಪಾನ್ ಬೀಡಾಗಳನ್ನು ಮುಖ್ಯವಾಗಿ ಐದು ರೀತಿಯಲ್ಲಿ ವರ್ಗೀಕರಿಸಬಹುದು. ಈ ರೀತಿಯ ವರ್ಗೀಕರಣ ಗ್ರಾಹಕರಿಗನುಗುಣವಾಗಿ, ಅವರ ರುಚಿ, ಶುಚಿಗನುಗುಣವಾಗಿ, ವ್ಯವಹಾರದ ಸ್ಥಳಕ್ಕನುಗುಣವಾಗಿ, ಅವರ ರುಚಿ, ಶುಚಿಗನುಗುಣವಾಗಿ, ವ್ಯವಹಾರದ ಸ್ಥಳಕ್ಕನುಗುಣವಾಗಿ ಇಲ್ಲವೇ ಬೇಡಿಕೆಯ ಪ್ರದೇಶಕ್ಕನುಗುಣವಾಗಿ ಮಾಡಬಹುದಾಗಿದೆ. ಅವುಗಳೆಂದರೆ:

೧. ಕಳಪೆ ದರ್ಜೆ

೨. ಸಾಮಾನ್ಯ ದರ್ಜೆ

೩. ಮಧ್ಯಮ ದರ್ಜೆ

೪. ಉತ್ತಮ ದರ್ಜೆ

೫. ಅತ್ಯುತ್ತಮ ದರ್ಜೆ

. ಕಳಪೆ ದರ್ಜೆ:
ಕಳಪೆ ದರ್ಜೆಯ ಬೀಡಾ ಅಂಗಡಿಗಳು ಹೆಚ್ಚಾಗಿ ಬಡ ಜನರ ಬೇಡಿಕೆಗನುಗುಣವಾಗಿ ಕಾರ್ಯನಿರ್ವಹಿಸುವವು. ಈ ಅಂಗಡಿಗಳಲ್ಲಿ ದೊರಕುವ ಬೀಡಾದ ಗುಣಮಟ್ಟು ಕೀಳು ದರ್ಜೆಯದ್ದಾಗಿದ್ದು, ಇದರ ಬೆಲೆಯೂ ಕಡಿಮೆ. ಇಲ್ಲಿ ಬೀಡಾವನ್ನು ತಯಾರಿಸಲು ಕಡಿಮೆ ಬೆಲೆಯ ಪೂರಕ ಉತ್ಪನ್ನಗಳನ್ನು ಉಪಯೋಗಿಸಲಾಗುತ್ತದೆ. ಇಲ್ಲಿ ಉಪಯೋಗಿಸುವ ಚಾಲಿ ಅಡಿಕೆಯು ಕಳಪೆ ಗುಣಪಟ್ಟದ್ದಾಗಿದ್ದು, ಉದಾಹರಣೆಗೆ ಪಠೋರ, ಅಲ್ಲದೆ ಬೀಡಾದ ತಯಾರಿಕೆಯಲ್ಲಿ ಉಪಯೋಗಿಸಲಾಗುವ ತಂಬಾಕಿನ ಗುಣಮಟ್ಟವೂ ಕಳಪೆ ದರ್ಜೆಯದ್ದು, ಈ ಅಂಗಡಿಗಳಿಗೆ ಉತ್ತಮ ಗುಣಮಟ್ಟದ ತಂಬಾಕಿನೊಂದೊಡಗೂಡಿದ ಬೀಡಾಕ್ಕಾಗಿ ಗ್ರಾಹಕನು ಬೇಡಿಕೆ ಸಲ್ಲಿಸಿದಲ್ಲಿ ಉತ್ತಮ ಗುಣಮಟ್ಟದ ತಂಬಾಕನ್ನೂ ಪೂರೈಸುವ ಡಬ್ಬಗಳಲ್ಲಿ ಕಳಪೆ ಗುಣಮಟ್ಟದ ತಂಬಾಕನ್ನು ತುಂಬಿಸಿ, ಅದನ್ನು ಗ್ರಾಹಕನೆದುರಿಗೆ ಹಾಕಿ ಆತನ ಮನತಣಿಸುವ ಕಾರ್ಯವು ನಡೆಯುತ್ತಿರುವುದು ಸರ್ವೆ ಸಾಮಾನ್ಯ. ಈ ಬೀಡಾ ಅಂಗಡಿಗಳು ಹೆಚ್ಚಾಗಿ ಸಂತೆ ಪ್ರದೇಶಗಳಲ್ಲಿ ಇಲ್ಲವೆ ಹೆಚ್ಚು ಜನ ಸೇರುವ ಬಸ್ ನಿಲ್ದಾಣ, ಸಾಮಾನ್ಯ ಗುಣಮಟ್ಟದ ಹೋಟೆಲ್‌ಗಳ ಮುಂಭಾಗದಲ್ಲಿ ಇಲ್ಲವೇ ತರಾತುರಿಯಲ್ಲಿ ವ್ವವಹಾರಕೈಗೊಳ್ಳುವ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಈ ಅಂಗಡಿಯ ಸ್ಥಾಪನೆ ಮತ್ತು ವ್ಯವಹಾರಕ್ಕೆ ಅಗತ್ಯವಿರುವ ಹಣಕಾಸು ಅತ್ಯಲ್ಪ. ಆದರೆ ಈ ಅಂಗಡಿಯ ವಾರಿಸುದಾರನಿಗೆ ವಿವಿಧ ವರ್ಗಗಳ ಜನರ ಪೀಡೆ ಅಧಿಕ.

. ಸಾಮಾನ್ಯ ದರ್ಜೆ:
ಸಾಮಾನ್ಯ ದರ್ಜೆಯ ಬೀಡಾ ಅಂಗಡಿಗಳು ಹೆಚ್ಚಾಗಿ ಹೋಟೆಲ್, ಸಿನೇಮಾ ಮಂದಿರ ಮತ್ತು ಪೇಟೆಪಟ್ಟಣಗಳ ರಸ್ತೆಗಳ ಬದಿಯಲ್ಲಿ ಒಂದು ಬಣ್ಣ ಬಣ್ಣದ ದೊಡ್ಡ ಛತ್ರಿಯಡಿ ಒಂದೋ ಸಣ್ಣ ಮೇಜನ್ನಿಟ್ಟು ಇಲ್ಲವೇ ಮೇಜಿನ ಮೇಲೆ ಕಂಚಿನ ತಟ್ಟೆಯನ್ನಿಟ್ಟು ಕಾರ್ಯನಿರ್ವಹಿಸುತ್ತಾರೆ. ಈ ರೀತಿಯ ವ್ಯವಹಾರವನ್ನು ದೇಶದ ಉದ್ದಗಲಕ್ಕೂ ಕಾಣಬಹುದಾಗಿದ್ದು, ಇಲ್ಲಿ ಉತ್ತರ ಪ್ರದೇಶ, ಗುಜರಾತು ಮತ್ತು ಇತರೇ ಉತ್ತರದ ರಾಜ್ಯಗಳ ಜನರು ಹೆಚ್ಚಾಗಿ ಕಾರ್ಯೋನ್ಮುಖರಾಗಿದ್ದಾರೆ. ಈ ರೀತಿಯ ವ್ಯವಹಾರಕ್ಕಾಗಿ ದೂರದೂರಿನಿಂದ ಹಲವು ಜನರ ಗುಂಪು ಇನ್ನೊಂದು ಊರಿಗೆ ಚಲಿಸುತ್ತದೆ. ಈ ಅಂಗಡಿಗಳಲ್ಲಿ ದೊರಗಕುವ ಬೀಡಾಗಳ ಗುಣಮಟ್ಟ ಉತ್ತಮವಲ್ಲದಿದ್ದರೂ ಕಳಪೆ ದರ್ಜೆಯದ್ದಲ್ಲ. ಇಲ್ಲಿನ ಗ್ರಾಹಕರು ವಿಭಿನ್ನ ವರ್ಗಕ್ಕೆ ಸೇರಿದ್ದು, ಗ್ರಾಹಕರನ್ನು ನೋಡಿ ಆತನ ರುಚಿಯನ್ನು ನಿರ್ಧರಿಸುವಷ್ಟು ಮಟ್ಟಕ್ಕೆ ಈ ಪಾನ್‌ವಾಲಗಳು ಶಿಕ್ಷಿತರಾಗಿರುವುದು ಇಲ್ಲಿನ ವಿಶೇಷ.

. ಮಧ್ಯಮ ದರ್ಜೆ:
ಈ ರೀತಿಯ ಪಾನ್ ಅಂಗಡಿಗಳು ಹೆಚ್ಚಾಗಿ ಮಧ್ಯಮ ದರ್ಜೆಯ ಹೋಟೆಲ್‌ಗಳ ಮುಂಬಾಗದಲ್ಲಿ ಒಂದು ನಿರ್ಧಿಷ್ಟ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ. ಇಲ್ಲಿ ಎಲ್ಲಾ ರೀತಿಯ ಬೀಡಾಗಳು ದೊರಕುತ್ತಿದ್ದು. ಇಲ್ಲಿ ಬೀಡಾಕ್ಕೆ ತಗಲುವ ವೆಚ್ಚ ಒಂದು ನಿರ್ಧಿಷ್ಟ ಮಟ್ಟದ್ದಾಗಿದೆ. ಈ ರೀತಿಯ ಅಂಗಡಿಗಳು ಹೆಚ್ಚಾಗಿ ಹೋಟೆಲ್ ಮಾಲಿಕರ ಕೃಪಾಕಟಾಕ್ಷದಿಂದಲೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ವ್ಯವಹಾರಕ್ಕಾಗಿ ಒಂದು ನಿರ್ಧಿಷ್ಟ ಬಾಡಿಗೆಯನ್ನು ತೆರಬೇಕಾಗುತ್ತದೆ. ಇಲ್ಲಿನ ವ್ಯವಹಾರವು ಹೋಟೆಲಿನ ವ್ಯವಹಾರಕ್ಕನುಗುಣವಾಗಿ ನಡೆಯುತ್ತಿರುವುದು ಸರ್ವೇ ಸಾಮಾನ್ಯ. ಈ ರೀತಿಯ ಅಂಗಡಿಗಳ ವಾರಿಸುದಾರರು ಹೊಟೆಲಿಗೆ ಬಂದ ಗಿರಾಕಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿ ತಮ್ಮ ವ್ಯವಹಾರವನ್ನು ಕುದುರಿಸಿಕೊಳ್ಳುವುದು ಒಂದು ಸಾಮಾನ್ಯ ಸಂಗತಿ.

. ಉತ್ತಮ ದರ್ಜೆ:
ಈ ರೀತಿಯ ಪಾನ್ ಅಂಗಡಿಗಳು ಹೆಚ್ಚಾಗಿ ಉತ್ತಮ ದರ್ಜೆಯ ಹೊಟೆಲ್‌ಗಳ ಎದುರುಗಡೆ, ಹೊಟೆಲ್‌ ಆವರಣದಲ್ಲಿ ಒಂದು ಪ್ರತ್ಯೇಕ ಕೊಠಡಿಯಲ್ಲಿ, ಇಲ್ಲವೇ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಅಂಗಡಿಗಳಲ್ಲಿರುವ ಪಾನ್‌ವಾಲಗಳು ಒಂದು ರೀತಿಯ ಶಿಸ್ತನ್ನು ಹೊಂದಿದ್ದು, ಇಲ್ಲಿ ಸ್ವಚ್ಚತೆಗೆ ಆಧ್ಯತೆ ಹೆಚ್ಚು. ಇಲ್ಲಿ ತಯಾರಿಸಲಾಗುವ ಬೀಡಾಗಳು ಗ್ರಾಹಕನ ರುಚಿಗನುಗುಣವಾಗಿದ್ದು, ಇದಕ್ಕೆ ಕೊಡಬೇಕಾದ ಬೆಲೆ ಇನ್ನಿತರೇ ವರ್ಗದ ಬೀಡಾ ಅಂಗಡಿಗಳಿಗಿಂತ ಹೆಚ್ಚು. ಈ ರೀತಿಯ ಅಂಗಡಿಗಳಿಗೆ ಹೆಚ್ಚಾಗಿ ಖಾಯಂ ಗಿರಾಕಿಗಳಿದ್ದು, ಒಬ್ಬೊಬ್ಬ ಗ್ರಾಹಕ ಒಂದು ಬಾರಿ ಒಂದಕ್ಕಿಂತ ಹೆಚ್ಚು ಬೀಡಾಗಳನ್ನು ಪಡಕೊಳ್ಳುವುದು ರೂಢಿ. ಈ ಪಾನ್‌ವಾಲಗಳು ಗ್ರಾಹಕನ ವೈಯಕ್ತಿಕ ವಿಚಾರಗಳ ಬಗ್ಗೆ ಗಮನಕೊಡುತ್ತಿರುವುದರಿಂದ ಈತ ಗ್ರಾಹಕನ ಸ್ನೇಹಿತಾನಾಗಿ ಪರಿವರ್ತನೆಗೊಳ್ಳುತ್ತಾನೆ. ಇಲ್ಲಿ ಬಳಸಲಾಗುವ ಅಡಿಕೆ ಮತ್ತಿತರೆ ಉತ್ಪನ್ನಗಳು ಹೆಚ್ಚಾಗಿ ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಇದರಿಂದಾಗಿ ಇಲ್ಲಿಗೆ ಬರುವ ಗ್ರಾಹಕರೂ ಮೇಲ್ದರ್ಜೆಯವರಾಗಿದ್ದಾರೆ. ದೇಶದ ಕೆಲವೊಂದು ಭಾಗಗಳಲ್ಲಿ ಈ ರೀತಿಯ ಪಾನ್ ಅಂಗಡಿಗಳಲ್ಲಿ ಬೀಡಾಕ್ಕಾಗಿ ಮುಂಗಡ ಕಾದಿರುಸುವಿಕೆಯೂ ಇದ್ದು. ಇದರಿಂದಾಗಿ ಈ ದರ್ಜೆಯ ಅಂಗಡಿಗಳ ಮಹತ್ವವನ್ನಿಂದು ಅರಿತುಕೊಳ್ಳಬಹುದು.

. ಅತ್ಯುತ್ತಮ ದರ್ಜೆ:
ಈ ರೀತಿಯ ಪಾನ್ ಅಂಗಡಿಗಳು ಹೆಚ್ಚಾಗಿ ಪಂಚತಾರ ಹೋಟೆಲ್‌ಗಳಲ್ಲಿ, ಮೆಟ್ರೋಪಟ್ಟಣಗಳಲ್ಲಿ ಉತ್ತಮ ದರ್ಜೆಯ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ರೀತಿಯ ಪಾನ್‌ವಾಲಗಳು ಕೆಲವು ಪ್ರದೇಶಗಳಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ದೊರಕುವ ಬೀಡಾಗಳ ರುಚಿ ಮತ್ತವುಗಳಿಗೆ ವಿಧಿಸುವ ದರ ಅಧಿಕ ಪ್ರಮಾಣದ್ದಾಗಿದೆ. ಈ ಬೀಡಾಗಳಿಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಗ್ರಾಹಕರಿದ್ದು, ಇವರೆಲ್ಲಾ ಅತ್ಯಂತ ಶ್ರೀಮಂತ ವರ್ಗದವರಾಗಿದ್ದಾರೆ. ಇಲ್ಲಿ ತಯಾರಿಸಲಾಗುವ ಬೀಡಾಗಳು ವಿಮಾನಗಳ ಮೂಲಕ ವಿದೇಶಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಇಲ್ಲಿನ ಉತ್ಪನ್ನಗಳೇನಿದ್ದರೂ ದುಬಾರಿ.

ಪಾನ್ಬೀಡಾಅಂಗಡಿಗಳಲ್ಲಿರುವಉತ್ಪನ್ನಗಳು:

ಉತ್ತಮ ದರ್ಜೆಯ ಅಡಿಕೆ, ಹುರಿದಡಿಕೆ, ಪಠೋರ, ಉತ್ತಮ ದರ್ಜೆ ಮತ್ತು ಪಠೋರ ಮಿಶ್ರಿತ ಅಡಿಕೆ, ನೀರಿನಲ್ಲಿ ನೆನೆಸಿದ ಅಡಿಕೆ, ಅಡಿಕೆ ಪುಡಿ, ತುಂಡು, ವಿವಿಧ ರೀತಿಯ ತಂಬಾಕುಗಳು, ಬೀಡಾದ ತಯಾರಿಯಲ್ಲಿ ಉಪಯೋಗಿಸುವ ಕತ್ತಾ, ಕಿಮಾಮ್, ಲವಂಗ, ಯಾಲಕ್ಕಿ, ವಿವಿಧ ರೀತಿಯ ಸುವಾಸನಾಭರಿತ ಸಿಹಿ ಪದಾರ್ಥಗಳು, ಪರಿಮಳ ದ್ರವ್ಯಗಳು, ಸಂಬಾರ ಪದಾರ್ಥಗಳು, ಸೇಲಂ, ಬನಾರಸ್, ಬಾಂಗ್ಲ, ಕಲ್ಕತ್ತಾ ವೀಳ್ಯದೆಲೆಗಳು, ಸಿಹಿಪುಡಿ ಇತ್ಯಾದಿಗಳು ಬೀಡಾವನ್ನು ತಯಾರಿಸುವಾಗ ಉಪಯೋಗಿಸುವ ವೀಳ್ಯದೆಲೆ, ತಂಬಾಕಿನ ದರ್ಜೆ, ಮತ್ತಿತರೇ ಉತ್ಪನ್ನಗಳು ಗ್ರಾಹಕರ ತನುಮನ ಧನಕ್ಕನುಗುಣವಾಗಿರುತ್ತದೆ.

ಬೀಡಾಗಳಬೆಲೆ:

ವಿವಿಧ ದರ್ಜೆಯ ಬೀಡಾ ಅಂಗಡಿಗಳಲ್ಲಿ ವಿವಿಧ ರೀತಿಯ ಮೂಲ ಉಪತ್ಪನ್ನಗಳನ್ನು ಉಪಯೋಗಿಸಿ ಗ್ರಾಹಕರ ರುಚಿಗನುಗುಣವಾಗಿ ತಯಾರಿಸಲಾಗುತ್ತಿರುವುದರಿಂದ ಬೀಡಾವೊಂದಕ್ಕೆ ಕೊಡಬೇಕಾದ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಆದರೂ ಸಾಮಾನ್ಯವಾಗಿ ಈ ಬೆಲೆಯು ರೂಪಾಯಿ ೨ರಿಂದ ಹಿಡಿದು ಸುಮಾರು ೫೦೦ರ ತನಕವಿರುವುದನ್ನು ನಾವಿಂದು ಕಂಡುಕೊಳ್ಳಬಹುದು. ಈ ದರವು ಬೀಡಾ ಅಂಗಡಿಗಳ ದರ್ಜೆ, ಗಿರಾಕಿಗಳೊಂದಿಗಿರುವ ಸಂಪರ್ಕದಿಂದಾಗಿಯೂ ಏರುಪೇರಾಗುತ್ತದೆ. ಬೀಡಾದ ಮೌಲ್ಯವರ್ಧನೆ ಹೆಚ್ಚಾದಂತೆ ಅದಕ್ಕೆ ತಗಲುವ ವೆಚ್ಚವೂ ಅಧಿಕ. ಉದಾಹರಣೆಗೆ ಹುರಿದಡಿಕೆಯಿಂದ ತಯಾರಿಸಿದ ಬೀಡಾಕ್ಕೆ ಅಧಿಕ ದರ, ಸಾಮಾನ್ಯ ಅಡಿಕೆಯಿಂದೊಡಗೂಡಿದಕ್ಕೆ ಕಡಿಮೆ ದರ. ವಿದೇಶಕ್ಕೆ ರಫ್ತಾಗುವ ಬೀಡಾದಲ್ಲಿ ಚಿನ್ನದ ಹುಡಿ ಮತ್ತಿತರೆ ಅಧಿಕ ಬೆಲೆಯ ಮೂಲ ಉತ್ಪನ್ನಗಳು ಸೇರಿಸಲ್ಪಡುವುದರಿಂದ ಅದಕ್ಕೆ ಕೊಡಬೇಕಾದ ಬೆಲೆಯೂ ಹೆಚ್ಚು.

ಬೀಡಾಅಂಗಡಿಗಳಲ್ಲಿದೊರಕುವಇನ್ನಿತರೇಉತ್ಪನ್ನಗಳು:

ಇತ್ತೀಚಿನ ದಿನಗಳಲ್ಲಿ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳಾದ ಗುಟ್ಕಾ, ಪಾನ್ ಮಸಾಲ, ಸುಗಂಧಭರಿತ ಅಡಿಕೆಗಳಿಗೆ ಬೇಡಿಕೆ ಏರುತ್ತಿರುವುದರಿಂದ ವಿವಿಧ ರೀತಿಯ ಇಂತಹ ಉತ್ಪನ್ನಗಳು ಇಲ್ಲಿ ಲಭ್ಯ. ಇವುಗಳೊಂದಿಗೆ ಬೀಡಿ, ಸಿಗರೇಟುಗಳೂ ಇಲ್ಲಿ ಮಾರಾಟಕ್ಕಿವೆ. ಇದರಿಂದಾಗಿ ಬೀಡಾ ಅಂಗಡಿಗಳಿಂದು ಬೀಡಾಕ್ಕೆ ಮಾತ್ರ ಮೀಸಲಾಗಿರದೆ, ಗ್ರಾಹಕರ ರುಚಿಗನುಗುಣವಾಗಿ ಕಾರ್ಯ ನಿಭಾಯಿಸುತ್ತಿವೆಯೆಂಬುದನ್ನು ನಾವು ತಿಳಿದುಕೊಳ್ಳಬಹುದು.

ಬೀಡಾದತಯಾರಿಯಲ್ಲಿಉಪಯೋಗಿಸಲ್ಪಡುವಚಾಲಿಅಡಿಕೆಯಪ್ರಮಾಣ:

ಸಾಮಾನ್ಯವಾಗಿ ಒಂದು ಅಡಿಕೆಯಿಂದ ೨ಯಾ ೩ಬೀಡಾಗಳನ್ನು ತಯಾರಿಸಲಾಗುತ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ಇದು ಒಂದು ಬೀಡಾದ ತಯಾರಿಕೆಗೆ ಸಾಕಾಗದು. ಉದಾಹರಣೆಗೆ ಗುಜಾರತ್ ಮತ್ತು ಮಹಾರಾಷ್ಟ್ರಗಳ ಬೀಡಾ ಪ್ರಿಯರು ತಾವು ಬಯಸುವ ಬೀಡಾದಲ್ಲಿ ಅಧಿಕ ಪ್ರಯಾಣದ ಅಡಿಕೆಯನ್ನು ಬಯಸುತ್ತಾರೆ, ಆದರೆ ಉತ್ತರ ಪ್ರದೇಶ, ದೆಹಲಿ ಇತ್ಯಾದಿ ಪ್ರದೇಶಗಳಲ್ಲಿ ಉಪಯೋಗಿಸಲ್ಪಡುವ ಅಡಿಕೆ ಪ್ರಮಾಣ ಅಲ್ಪವಾಗಿದೆ.

ಹರ್ಬ್ಲ್ಸುಪಾರಿ:

ಚಾಲಿ ಅಡಿಕೆಯ ಧಾರಣೆಯು ೨೦೦೦ದಲ್ಲಿ ಕುಸಿದಾಗ ಇದರ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಚಿಂತನೆ ಆರಂಭಗೊಂಡಿತ್ತು. ಈ ವಿಚಾರದಲ್ಲಿ ಸಂಬಾರ ಪದಾರ್ಥಗಳಿಂದೊಡಗುಡಿದ ಚಾಲಿ ಅಡಿಕೆಯನ್ನು ತಯಾರಿಸಬಹುದೆಂಬ ವಿಚಾರವನ್ನು ಅಕ್ಬೋಬರ್ ೨೦೦೦ದಲ್ಲಿ ನಾನು ಹೆಸರಿಸಿದ್ದೆ. ಈ ರೀತಿಯ  ಉತ್ಪನ್ನದ ಉತ್ಪಾದನೆಗೆ ಕರ್ನಾಟಕದ ಅಡ್ಯನಡ್ಕದಲ್ಲಿ ವಾರಣಾಸಿ ಸಂಶೋಧನಾ ಕೇಂದ್ರವು ಕೈಹಾಕಿ ಇದೀಗ ಸಂಬಾರ ಪದಾರ್ಥಗಳಿಂದದೊಡಗೂಡಿದ ಅಡಿಕೆ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.  ಈ ನಿಟ್ಟಿನಲ್ಲಿ ಕೂರ್ಲುಗಯ, ಅಡ್ಯನಡ್ಕದ ನವತರುಣ ಗೋಪಾಲಕೃಷ್ಣ ಭಟ್ಟರ ಸಂಶೋಧನಾ ಕಾರ್ಯಕ್ರಮಗಳೂ ನಿರಂತರವಾಗಿ ಸಾಗುತ್ತಿದೆ.

ಸುಗಂಧಸುಪಾರಿ:

ಕೆಳದರ್ಜೆಯ ಅಡಿಕೆಯನ್ನು ಉಪಯೋಗಿಸಿ ವಿವಿಧ ರೀತಿಯ ಸಂಬಾರ ಪದಾರ್ಥಗಳು ಮತ್ತು ಸುಗಂಧ ದ್ರವ್ಯವನ್ನು ಸೇರಿಸಿ ಯಯಾರಿಸಲಾಗುತ್ತಿರುವ ಅಡಿಕೆಯನ್ನಿಂದು ಸುಗಂಧ ಸುಪಾರಿ ಎನ್ನುತ್ತಾರೆ. ಈ ರೀತಿಯ ಸುಪಾರಿ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಲಭ್ಯ. ಅಲ್ಲದೆ ವಿವಿಧ ರೀತಿಯ ಟಿನ್‌ಗಳಲ್ಲೂ ಇದನ್ನು ಮಾರಾಟ ಮಾಡುತ್ತಾರೆ.

ಕೆಂಪಡಿಕೆ:

ಕನ್ನಡದಲ್ಲಿ ಕೆಂಪಡಿಕೆ, ಮಲಯಾಳಂನಲ್ಲಿ ಕಾಲಿಪಾಕ್ ಎಂದು ಕರೆಯಲ್ಪಡುವ ಇದನ್ನು ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲೂ. ಕೇರಳದ ತಿರುವನಂತಪುರ, ಅಲೆಪ್ಪಿ, ಕೊಟ್ಟಾಯಂ, ಎರ್ನಾಕುಲಂ, ತ್ರಿಚೂರು, ಕಿಲ್ವಾನ್ ಜಿಲ್ಲೆಗಳಲ್ಲೂ ಉತ್ಪಾದಿಸಲಗುತ್ತಿದೆ. ಕೆಂಪಡಿಕೆಯನ್ನು ದಕ್ಷಿಣ ಕೇರಳವೊಂದನ್ನು ಬಿಟ್ಟಲ್ಲಿ ಉಳಿದೆಲ್ಲಾ ಕಡೆ ಬೆಳೆಗಾರರೇ ತಯಾರಿಸುತ್ತಾರೆ. ಕೆಂಪಡಿಕೆಯನ್ನು ತಯಾರಿಸಲು ಹದವಾಗಿ ಬೆಳೆದ ಹಸಿರಡಿಕೆಯ ಅಗತ್ಯವಿದೆ. ಈ ಹಸಿರಡಿಕೆಯ ಸಿಪ್ಪೆ ತೆಗೆದು, ವಿವಿಧ ಆಕಾರಗಳಲ್ಲಿ ಕತ್ತರಿಸಿ ಕುದಿಯುವ ನೀರಿನಲಿ ಅಥವಾ ಅಡಿಕೆಯ ಚೊಗರಿನಲ್ಲಿ ಮುಳುಗಿಸಿ ಕಡಿಮೆಯೆಂದರೆ ಹತ್ತು ನಿಮಿಷ ಹೆಚ್ಚೆಂದರೆ ಮೂರು ತಾಸುಗಳಷ್ಟು ಕುದಿಸಬೇಕು. ಬಳಿಕ ದ್ರಾವಣದಲ್ಲಿ ಮುಳುಗಿಸಿ ಅದಕ್ಕೆ ಬಣ್ಣ ಬರುವುದು ಬಳಿಕ ಅದನ್ನು ಒಣಗಿಸುತ್ತಾರೆ. ಈ ರೀತಿಯ ಅಡಿಕೆ ಅತ್ಯಧಿಕ ಬೆಲೆಯನ್ನು ಆಕರ್ಷಿಸುತ್ತದೆ.

ಎಳೆಯ ಹಸಿರು ಕಾಯಿಯಡಿಕೆ ಬೇಯಿಸುವಾಗ ಅದನ್ನು ಉಂಡೆ ಎನ್ನಲಾಗುತ್ತದೆ. ಉಂಡೆಯಲ್ಲಿ ಅಪಿ, ಚಿಕಣಿ, ಬರ್ದಾ, ಗೋಟು ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಈ ರೀತಿಯ ಅಡಿಕೆಗೆ ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಲ್ಲಿ ಬೇಡಿಕೆಯಿದೆ.

ಕರ್ನಾಟಕದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಎಳತಾಗಿರುವ ಅಡಿಕೆಯನ್ನು ಸಂಸ್ಕರಿಸಿ ಬಳಿಕ ಅವನ್ನು ಅಪಿ, ಇಡಿ, ಸರಕು, ಬೆಟ್ಟೆ ಇತ್ಯಾದಿಗಳಾಗಿ ವಿಂಗಡಿಸುತ್ತಾರೆ. ಕೇರಳದಲ್ಲೆ ತಯಾರಿಸಲಾಗುವ ಈ ರೀತಿಯ ಅಡಿಕೆಗೆ ಸ್ಥಳೀಯವಾದ ಹೆಸರಿನಿಂದ ಕೆರೆಯಾಲಾಗುತ್ತದ್ದು, ಇವೆಲ್ಲದಕ್ಕೆ ತಮಿಳುನಾಡು, ಆಂಧ್ರ , ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಬೇಡಿಕೆಯಿದೆ. ಇತ್ತೀಚಿನ ವರ್ಷಗಳಲ್ಲಿ ಕೆಂಪಡಿಕೆಯ ವಿವಿಧ ರೂಪಗಳಿಗೆ ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳ ತಯಾರಕರಿಂದ ಅಗಾಧ ಬೇಡಿಕೆ ಬರುತ್ತಿದ್ದು, ಇವನ್ನಿಂದು ಪಾನ್ ಮಸಾಲ, ಗುಟ್ಕಾ ಮತ್ತು ಸುಗಂಧಭರಿತ ಅಡಿಕೆಯನ್ನು ತಯಾರಿಸಲು ಉಪಯೋಗಿಸಲಾಗುತ್ತಿದೆ.

ಕೆಂಪಡಿಕೆಯಉಪಯೋಗಗಳು:

ಕೆಂಪಡಿಕೆಯನ್ನಿಂದು ಹೆಚ್ಚಾಗಿ ಪಾನ್ ಮಸಾಲ ಮತ್ತು ಗುಟ್ಕಾ ಉದ್ದಿಮೆದಾರರು ಬಯಸುತ್ತಿದ್ದು, ಇದರೊಂದಿಗೆ ಇದನ್ನಿಂದು ಬೀಡಾದ ಬಳಕೆದಾರರು, ಸುಗಂಧಭರಿತ ಅಡಿಕೆ ತಯಾರಕರು ಮತ್ತು ವಿವಿಧ ರೀತಿಯ ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳ ತಯಾರಕರೂ ಬಳಸುತ್ತಿದ್ದಾರೆ. ಈ ಅಡಿಕೆಯಿಂದ ತಯಾರಿಸಿದ ಹಲವು ರೀತಿಯ ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದು, ಇದರ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಏರುತ್ತಿದೆ ಈ ರೀತಿಯ ಉತ್ಪನ್ನಗಳನ್ನು ಉತ್ತರ ಭಾರತ, ಮಹಾರಾಷ್ಟ್ರ ಮತ್ತು ತಮುಳುನಾಡಿಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತಿದೆ.

ಅಡಿಕೆಯಮೌಲ್ಯವರ್ಧಿತಉತ್ಪನ್ನಗಳು:

ಅಡಿಕೆಯಿಂದೊಡಗೂಡಿದ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳಾದ  ಪಾನ್ ಮಸಾಲ , ಗುಟ್ಕಾ ಎಂಬಿತ್ಯಾದಿಗಳಿಂದು ಮಾರುಕಟ್ಟೆಯಲ್ಲಿ ವಿವಿಧ ಹೆಸರಿನಲ್ಲಿ ವಿವಿಧ ಪ್ಯಾಕೆಟ್ ಗಳಲ್ಲಿ ದೊರಕುತ್ತಿದ್ದು, ಇವುಗಳೊಂದಿಗೆ ಸುಗಂಧಭರಿತ ಸುಪಾರಿಯೂ ಪ್ರಸಿದ್ಧವಾಗಿದೆ. ಈ ಎಲ್ಲಾ ಮೌಲ್ಯವರ್ಧಿತ ಉತ್ಪನ್ನಗಳು ಅವುಗಳ ಗ್ರಾಹಕರನ್ನು ಶೀಘ್ರವಾಗಿ ಸಂತೋಷಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದಾಗಿ ಅವಕ್ಕಿಂದು ಬೇಡಿಕೆಯೇರುತ್ತಿದೆ.

ಪಾನ್ಮಸಾಲ:

ಪಾನ್ ಮಸಾಲ್ ಇಲ್ಲವೇ ಗುಟ್ಕಾವನ್ನಿಂದು ಹೆಚ್ಚಾಗಿ ಕೆಂಪಡಿಕೆ, ಬಿಳಿಅಡಿಕೆಯಲ್ಲಿ ಸಿಗುವ ಪಠೋರ ಇತ್ಯಾದಿಗಳಿಂದ ತಯಾರಿಸಲಾಗುತ್ತಿದ್ದು, ಇಲ್ಲಿ ಅಡಿಕೆಯೊಂದಿಗೆ ಕತ್ತಾ. ಸುಣ್ಣ ಮತ್ತಿತರೆ ಉತ್ಪನ್ನಗಳನ್ನು ಅಲ್ಲದೆ ಸುಗಂಧ ದ್ರವ್ಯವನ್ನು ಉಪಯೋಗಿಸಿ ತಯಾರಿಸಲಾಗುವ ಉತ್ಪನ್ನವನ್ನು ಪಾನ್ ಮಸಾಲವೆಂದು, ಇವುಗಳೊಂದಿಗೆ ತಂಬಾಕನ್ನು ಸೇರಿಸಿ ಮಾಡಲಾಗುವ ಉತ್ಪನ್ನವನ್ನು ಗುಟ್ಕಾವೆಂದು ಕರೆಯಾಲಾಗುತ್ತದೆ. ಈ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಎಲ್ಲಾ ವರ್ಗದ ಜನರೂ  ಇತ್ತೀಚಿನ ವರ್ಷಗಳಲ್ಲಿ ಧಾರಾಳವಾಗಿ ಉಪಯೋಗಿಸುತ್ತಿದ್ದು, ಉತ್ತರ ಬಾರತದ ದೆಹಲಿ, ಕಾನ್ಪುರಗಳಂತಹ ನಗರಗಳಲ್ಲಿ ಒಂದೊಂದು ಪಾನ್ ಬೀಡಾ ಅಂಗಡಿಗಳಲ್ಲಿ ದಿನವೊಂದರ ಸುಮಾರು ೨ಸಾವಿರ ಪ್ಯಾಕೆಟ್‌ಗಳ ಮಾರಾಟವಿಂದಾಗುತ್ತಿದೆ. ಇವು ಶೀಘ್ರ ಸಂತೃಪ್ತಿಯನ್ನು ಗ್ರಾಹಕನಿಗೆ  ನೀಡಬಲ್ಲವುಗಳಾಗಿದ್ದು, ಇದನ್ನು ಸೇವಿಸುವುದರಿಂದ ಬೀಡಾದ ಸೇವನೆಯಿಂದಾಗಿ ಹಲ್ಲು ಕೆಂಪಾಗುವುದನ್ನು ತಪ್ಪಿಸಬಹುದಾಗಿದೆ, ಅಲ್ಲದೆ ಬಾಯಿಯ ದುರ್ವಾಸನೆ ಮತ್ತು ಸುಗಂಧಭರಿತ ಶ್ವಾಸ ಇದು ಕೊಡುತ್ತದೆ. ಇದನ್ನಾಗಲಿ ಬೀಡಾವನ್ನಾಗಲಿ ಇವುಗಳ ಗ್ರಾಹಾಕರು ಚಿಂತೆಯನ್ನು ಮರೆಯಲು , ಕೆಲಸದ ಒತ್ತಡದ ನೋವನ್ನು ತಗ್ಗಿಸಲು, ಎಕಾಂತದಿಂದ ದೂರವಿರಲು ಮತ್ತು ಸ್ನೇಹಿತರನ್ನು ಆಕರ್ಷಿಸಲು ಉಪಯೋಗಿಸುತ್ತಿರುವುದನ್ನು ನಾವು ಅವರಿಂದಲೇ ಕೇಳಿ ತಿಳಿದು ಕೊಳ್ಳಬಹುದು.

ಪಾನ್ ಮಸಾಲಗಳ ವಿವಿಧ ವರ್ಗಗಳು, ನಮೂನೆಗಳನ್ನು ನಾವಿಂದು ಮಾರುಕಟ್ಟೆಯಲ್ಲಿ ಕಂಡು ಕೊಳ್ಳಬಹುದಾಗಿದ್ದು, ಇವುಗಳ ಪೈಕಿ ಪಾನ್ ಪರಾಗ್, ಮಾಣಿಕ್ ಚಂದ್, ಪ್ರಿನ್ಸ್ ಗುಟ್ಕಾ , ರಜನೀಗಂಧಾ, ಪಾನ್ ಮಯೂರ್, ದರ್ಬಾರ್, ತಾಂಬೂಲ್, ಮಾರುತಿ, ಸ್ಟಾರ್, ಪಾನ್ ಕಿಂಗ್, ಪಾನ್ ಬಹಾರ್, ರಾಜ್ ಗುಟ್ಕಾ ಅತ್ಯಂತ ಹೆಚ್ಚಿನ ಮಾರುಕಟ್ಟೆಯನ್ನು ಮತ್ತು ಪ್ರಸಿದ್ಧಿಯನ್ನು ಹೊಂದಿವೆ. ಉದಹಾರಣೆಗೆ ಪಾನ್‌ಪರಾಗನ್ನು ತಯಾರಿಸುತ್ತಿರುವ ಕೊಠಾರಿ ಉದ್ದಿಮೆದಾರರು ತಮ್ಮ ಉತ್ಪನ್ನವನ್ನು ಮಾರಾಟಮಾಡಲು ಸುಮಾರು ೩ ಸಾವಿರಕ್ಕಿಂತಲೂ ಹೆಚ್ಚಿನ ವಿತರಣಾಕಾರರನ್ನು ಹೊಂದಿದು, ಇವುಗಳ ಮಾರಾಟದಿಂದ ಈ ಉದ್ದಿಮೆದಾರರಿಗೆ ವಾರ್ಷಿಕವಾಗಿ ದೊರಕುತ್ತಿರುವ ಆದಾಯವು ಸುಮಾರು ೫೦ ಸಾವಿರ ಮಿಲಿಯಕ್ಕಿಂತಲೂ ಹೆಚ್ಚು. ಇದೇ ರೀತಿಯ ವ್ಯವಹಾರವನ್ನು ಮಾಣಿಕ್‌ಚಂದ್‌ ಉದ್ದಿಮೆಯೂ ಹೊಂದಿದ್ದು, ಇವೆಲ್ಲಾ ಈ ರೀತಿಯ ಉತ್ಪನ್ನಗಳಿಗಿಂದು ಕಂಡು ಬರುತ್ತಿರುವ ಬೇಡಿಕೆಯ ಪ್ರಮಾಣವನ್ನು ಎತ್ತಿತೋರಿಸುತ್ತಿದೆ. ನಮ್ಮ ದೇಶಾದಾದ್ಯಂತ ಇಂತಹ ಉತ್ಪನ್ನಗಳಿಂದು ಹಳ್ಳಿಯಿಂದ ಹಿಡಿದು ಪಟ್ಟಣಗಳಲ್ಲೂ ವಿಜೃಂಭಿಸುತ್ತಿದ್ದು, ಇವುಗಳ ಬಣ್ಣ ಬಣ್ಣ ಮಾಲೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಒಮ್ಮೆ ಇವುಗಳ ರುಚಿಯನ್ನು ಸವಿದ ಗ್ರಾಹಕನು ಮತ್ತೆ ಮತ್ತೆ ಇವುಗಳಿಗೆ ಬಲಿಬೀಳುತ್ತಿರುವುದನ್ನು ನಮ್ಮ ಸುತ್ತಮುತ್ತ ನಾವಿಂದು ಕಂಡುಕೊಳ್ಳಬಹುದಾಗಿದೆ. ಈ ಮೌಲ್ಯವರ್ಧಿತ ಉತ್ಪನ್ನಗಳ ಬೆಲೆ ರೂಪಾಯಿ ೦.೫೦ ರಿಂದ ಹಿಡಿದು ರೂಪಾಯಿ ೪ರ ತನಕವಿದ್ದು, ಒಮ್ಮೆ ಈ ಚಟಕ್ಕೆ ಬಲಿಬಿದ್ದ ಗ್ರಾಹಕ ಕನಿಷ್ಠ ದಿನವೊಂದರ ೫ರಿಂದ ೮ ಪ್ಯಾಕೆಟ್‌ಗಳನ್ನು ಸೇವಿಸುವುದು ಒಂದು ಸಾಮಾನ್ಯ ಸಂಗತಿಯಾಗಿದೆ.

ಪಾನ್ಮಸಾಲದಲ್ಲಿರಬೇಕಾದಮುಖ್ಯಲಕ್ಷಣಗಳು:

(೧) ಬಾಯಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡುವಂತಿರಬಾರದು.
(೨) ಬಾಯಿಯನ್ನು ತಂಪಾಗಿರಿಸುವಂತಿರಬೇಕು.
(೩) ಬಾಯಿಯಿಂದ ಸುಗಂಧವನ್ನು ಹೊರ ಹೊಮ್ಮಿಸುವಂತಿರಬೇಕು.
(೪) ಹೆಚ್ಚಿನ ಪ್ರಮಾಣದ ಸುಣ್ಣವಿರಬಾರದು.
(೫) ಇದರ ಪ್ಯಾಕೇಟ್‌ಗಳು ಹೆಚ್ಚಿನ ತೂಕವನ್ನು ಹೊಂದಿರಬಾರದು.
(೬) ಪ್ಯಾಕೇಟನಲ್ಲಿ ಮುದ್ರೆಯಿರಬೇಕು.
(೭) ಪ್ಯಾಕೇಟು ಗ್ರಾಹಕರನ್ನು ಆಕರ್ಷಿಸುವಂತಿರಬೇಕು.
(೮) ಪ್ಯಾಕೇಟು ಬೇಕಾದಂತೆ ತೆರೆಯವಂತಿರಬೇಕು.
(೯) ಪ್ಯಾಕೇಟಿನೊಳಗೆ ಗಾಳಿಹೋಗದಂತೆ ಭದ್ರವಾಗಿರಬೇಕು.
(೧೦) ಟಿನ್ನ್‌ಗಳಲ್ಲಿ ಮಾರಾಟಮಾಡುವುದಿದ್ದಲ್ಲಿ ಅದು ಅತ್ಯಂತ ಕಡಿಮೆ ಭಾರದ್ದಾಗಿರಬೇಕು.
(೧೧) ಟಿನ್‌ನೊಳಗೆ ಗಾಳಿಯ ಪ್ರವೇಶವಾಗದಂತಿರಬೇಕು.
(೧೨) ಪ್ಯಾಕೇಟು ಆಗಲಿ, ಟಿನ್‌ ಆಗಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿರಬೇಕು.

ಪಾನ್‌ಮಸಾಲ ಇಲ್ಲವೇ ಗುಟ್ಕಾ ಗುಣಮಟ್ಟದ ಬಗ್ಗೆ ಇಂಡಿಯನ್‌ ಸ್ಟೇಂಡರ್ಡ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಯಾವುದೇ ನಿರ್ದಿಷ್ಟ ಪಡಿಸಿದ ವಿವರಣೆ ಇಲ್ಲದಿರುವುದರಿಂದ ಇದರ ಉತ್ಪಾದಕರಿಂದು ಅವರವರ ರುಚಿಗನುಗುಣವಾಗಿ ಇಲ್ಲವೇ ಗ್ರಾಹಕರನ್ನಾರ್ಷಿಸುವ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ ತಂಬಾಕಿನ ಬಗ್ಗೆ IS: ೨೩೪೪–೧೯೭೩ ಪ್ರಕಾರ ಗುಣಮಟ್ಟ ಹೇಗಿರಬೇಕೆಂಬ ವಿಚಾರವನ್ನು ತಿಳಿಸಿದ್ದು, ಇದನ್ನು ತಂಬಾಕು ಸಹಿತದ ಉತ್ಪನ್ನಗಳನ್ನು ತಯಾರಿಸುವವರ ಪಾಲಿಸಬೇಕಾಗಿದೆ.

ಪಾನ್ಮಸಾಲಮತ್ತುಗುಟ್ಕಾಕ್ಕಿರುವಬೇಡಿಕೆ:

ಇತ್ತೀಚಿನ ದಿನಗಳಲ್ಲಿ ಇವುಗಳಿಗಿರುವ ಬೇಡಿಕೆ ಹೆಚ್ಚಾಗುತ್ತಿದ್ದು, ಇದು ಇನ್ನಷ್ಟು ಏರುವ ಸಂಭವವಿದೆ. ನಮ್ಮಲ್ಲಿಂದು ಒಟ್ಟಾರೆಯಾಗಿ ಉತ್ಪಾದನೆಯಾಗುತ್ತಿರುವ ಈ ಉತ್ಪನ್ನಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಇವಿಂದು ತಂಬಾಕಿನ ಸೇವನೆ ಮಾಡುವವರಿಗೆ ಮತ್ತು ಅಡಿಕೆಯ ಬಳಕೆದಾರರಿಗೆ ಒಂದು ಬಹುಬೇಡಿಕೆಯ ಉತ್ಪನ್ನಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ವೀಳ್ಯದೆಲೆಯೊಡಗೂಡಿದ ಬೀಡಾಕ್ಕಿಂದು ಉತ್ತಭಾರತದ ಉತ್ತರ ಪ್ರದೇಶ, ದೆಹಲಿ, ಹರ್ಯಾಣ ಇತ್ಯಾದಿಗಳಲ್ಲಿಂದು ಬೇಡಿಕೆ ಕುಸಿಯತೊಡಗಿದೆ. ಈ ಉತ್ಪನ್ನಗಳ ತಯಾರಿಯು ಹೆಚ್ಚಾಗಿ ಉತ್ತರ ಭಾರತದಲ್ಲಾಗುತ್ತಿದ್ದು, ಇದರಿಂದಾಗಿ ಅಲ್ಲಿ ಇದಕ್ಕಿರುವ ಬೇಡಿಕೆಯು ಹೆಚ್ಚುತ್ತಲ್ಲಿದೆ.

ಪ್ಯಾಕೆಟ್‌ ತಯಾರಕರು ಹೆಚ್ಚಾಗಿ ಎಲ್ಲಾ ರಾಜ್ಯಗಳಲ್ಲೂ ಇದ್ದು ಇದರಿಂದ ಈ ಉತ್ಪನ್ನಗಳ ತಯಾರಕರು ತಮ್ಮ ಅಗತ್ಯಕ್ಕನುಗುಣವಾದ ಪ್ಯಾಕೆಟ್‌ಗಳನ್ನು ಪಡೆದುಕೊಳ್ಳುತ್ತಾರೆ. ಇದರೊಂದಿಗೆ ದೊಡ್ಡ ದೊಡ್ಡ ಉದ್ದಿಮೆದಾರರು ಪ್ಯಾಕೆಟ್‌ನ್ನು ತಾವೇ ತಯಾರಿಸುತ್ತಲೂ ಇದ್ದಾರೆ.

ಪಾನ್ಮಸಾಲತಯಾರಿಸುವವಿಧಾನ:

ಪಾನ್‌ಮಸಾಲವನ್ನು ತಯಾರಿಸಲು ಅಗತ್ಯವಿರುವ ಉತ್ಪನ್ನಗಳೆಂದರೆ ಗಂಧ, ಕತ್ತಾ, ಕರ್ಪೂರ, ಲವಂಗ, ದಾಲ್ಚೀನಿ, ಒಣಗುಲಾಬಿ, ಮಾದಕಪುಡಿ, ಯಾಲಕ್ಕಿ, ಪತ್ರೆ, ಸಕ್ಕರೆ, ಕೇಸರಿ, ಪೆಪ್ಪರಮಿಂಟ್‌, ಗುಲಾಬಿ, ದ್ರವ್ಯ, ಸಾಕ್ರಿನ್‌ ಮತ್ತಿತರೇ ಪರಿಮಳ ದ್ರವ್ಯಗಳು. ಇವುಗಳ ಪೈಕಿ ಗಂಧ, ಮಾದಕ ಪುಡಿ, ಸಕ್ಕರೆ, ಗುಲಾಬಿ ದ್ರವ್ಯ, ದಾಲ್ಚೀನಿ ಮತ್ತು ಕರ್ಪೂರಗಳ ಪ್ರಮಾಣ ಅಧಿಕವಾಗಿರಬೇಕು.

ತಂಬಾಕುಯುಕ್ತ ಉತ್ಪನ್ನವನ್ನು ತಯಾರಿಸಲು ತಂಬಾಕಿನ ಎಲೆ, ಕಪ್ಪು ಬಣ್ಣದ ಕಾಚು, ಸುಣ್ಣ, ಕರಿಮೆಣಸು, ಲವಂಗ, ಯಾಲಕ್ಕಿ, ಪತ್ರೆ, ದಾಲ್ಚೀನಿ, ಬಿಳಿಗಂಧದ ಪುಡಿ, ಪರಿಮಳ ದ್ರವ್ಯ ಇತ್ಯಾದಿಗಳು ಅಗತ್ಯ. ಇವುಗಳ ಪೈಕಿ ತಂಬಾಕಿನ ಪ್ರಮಾಣ ಶೇ. ೭೦ ಆಗಿರಬೇಕು. ಇವನ್ನೆಲ್ಲಾ ಪುಡಿಮಾಡಿ ಅಡಿಕೆಯೊಂದಿಗೆ ಬೆರೆಸಿ ಉತ್ಪನ್ನವನ್ನು ತಯಾರಿಸಲಾಗುತ್ತದೆ. ಇಲ್ಲಿ ಅಡಿಕೆಯನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಬಳಸಲಾಗುತ್ತಿದೆ. ಒಟ್ಟಾರೆಯಾಗಿ ಈ ಎಲ್ಲಾ ಉತ್ಪನ್ನಗಳನ್ನು ಪುಡಿ ಮಾಡಿ ಅಡಿಕೆಯೊಂದಿಗೆ ಬೆರೆಸಿ ಒಂದು ಚೂರ್ಣದಂತೆ ಮಾಡಲಾಗುತ್ತದೆ. ಈ ರೀತಿಯ ಪುಡಿಯನ್ನು ಮಾಡಲು ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ರೀತಿಯ ಯಂತ್ರಗಳು ದೇಶದ ನಾನಾ ಭಾಗಗಳಲ್ಲಿ ಲಭ್ಯವಾಗುತ್ತಿದೆ. ಅಡಿಕೆಯನ್ನು ಕತ್ತರಿಸಲು ಅಗತ್ಯವಿರುವ ಸಾಧನಗಳು ಹೆಚ್ಚಾಗಿ ಮುಂಬೈಯಲ್ಲಿ ದೊರಕುತ್ತವೆ.

ಈ ಉತ್ಪನ್ನಗಳ ತಯಾರಕನು ಮೊದಲನೆಯದಾಗಿ ಅಗತ್ಯವಿರುವ ಎಲ್ಲಾ ಮೂಲ ಉತ್ಪನ್ನಗಳನ್ನು ಒಟ್ಟು ಹಾಕಿ ಬಳಿಕ ಅದನ್ನು ಹುಡಿ ಮಾಡಿ, ನಂತರ ಚೂರ್ಣದ ರೂಪಕ್ಕೆ ಉತ್ಪನ್ನವನ್ನು ತರುತ್ತಾನೆ, ಬಳಿಕ ಅದನ್ನೊಮ್ಮೆ ತೂಕಕ್ಕೆ ಒಳಪಡಿಸಿ ಪುನಃ ಮಿಶ್ರಣವನ್ನು ಮಾಡುತ್ತಾನೆ. ಇದಾದನಂತರ ಈ ಮಿಶ್ರಣಕ್ಕೆ ಪರಿಮಳ ದ್ರವ್ಯವನ್ನು ಹಾಕಿ ಕಲಸಿ ಸಿಗುವ ಉತ್ಪನ್ನವನ್ನು ಶೇಖರಿಸಿ, ತೂಕಕ್ಕೊಳಪಡಿಸಿ ಪ್ಯಾಕೇಟ್‌ಗಳಿಗೆ ತುಂಬಿಸುತ್ತಾನೆ. ಬಳಿಕ ಪ್ಯಾಕೆಟ್‌ನ್ನು ಭದ್ರಪಡಿಸಿ ಮಾರಾಟಕ್ಕಾಗಿ ಬಿಡುಗಡೆಗೊಳಿಸುತ್ತಾನೆ.

ಮಾರುಕಟ್ಟೆಗೆಬಿಡುಗಡೆಗೊಳಿಸುವಪ್ಯಾಕೇಟಿನಲ್ಲಿರಬೇಕಾದಮಾಹಿತಿಗಳು:

(೧) ಹೆಸರು ಮತ್ತು ಉತ್ಪಾದನಾ ಸ್ಥಳ.
(೨) ಉತ್ಪನ್ನದ ವ್ಯಾಪಾರಿ ಹಸರು.
(೩) ಪ್ಯಾಕ್‌ ಮಾಡಿದಾಗ ಒಟ್ಟು ತೂಕ.
(೪) ತಾರೀಕು ಮತ್ತು ಉತ್ಪಾದನೆಯ ಗುಂಪಿನ ಸಂಖ್ಯೆ.
(೫) ಸ್ಥಳೀಯ ತೆರಿಗೆಯನ್ನು ಒಳಗೊಂಡು ಯಾ ಒಳಗೊಳ್ಳದೆ ಅದರ ಬೆಲೆ.
(೬) ಐ.ಯಸ್‌.ಐ. ಮಾರ್ಕ್ ಇದ್ದಲ್ಲಿ ಅದರ ಸೇರ್ಪಡಿಸುವಿಕೆ.
(೭) ಉತ್ಪನ್ನದ ವಿಶೇಷತೆ ಬಗ್ಗೆ ಮಾಹಿತಿ.

ಪಾನ್ಮಸಾಲಇಲ್ಲವೇಗುಟ್ಕಾಉದ್ದಿಮೆಯೊಂದರಸ್ಥಾಪನೆಗೆಅಗತ್ಯವಿರುವಹಣಕಾಸಿನಬಗ್ಗೆಮಾಹಿತಿ:

ದಿನವೊಂದರ ಸುಮಾರು ೧೦೦ ಕಿಲೋ. ವರ್ಷಕ್ಕೆ ಅಂದಾಜು ೩೦,೦೦೦ ಕಿಲೋ ಉತ್ಪನ್ನವನ್ನು ತಯಾರಿಸಲು ಅಗತ್ಯವಿರುವ ಉದ್ದಿಮೆಯ ಸ್ಥಾಪನೆ ಅಗತ್ಯವಿರುವ ಹಣಕಾಸು ಮತ್ತಿತರ ವ್ಯವಸ್ಥೆಗಳೆಂದರೆ:

(೧) ಸ್ಥಳ ಸುಮಾರು ೫೦೦ ಚದರ ಅಡಿ.

(೨) ವಿವಿಧ ರೀತಿಯ ಯಂತ್ರಗಳು ಮತ್ತು ಸಾಧನಗಳು. ಇದಕ್ಕಾಗಿ ತಗಲಬಹುದಾದ ವೆಚ್ಚ ಅಂದಾಜು ೧,೫೦,೦೦೦ ರೂಪಾಯಿಗಳು. ಇದರಲ್ಲಿ ಪ್ಯಾಕಿಂಗ್‌ ಯಂತ್ರಕ್ಕೆ ಸುಮರು ಒಂದು ಲಕ್ಷ. ಚೂರ್ಣಮಾಡುವ ಯಂತ್ರಕ್ಕೆ ನಲ್ವತ್ತು ಸಾವಿರ, ಅಡಿಕೆ ಪುಡಿ ಮಾಡುವ ಯಂತ್ರಕ್ಕೆ ಹದಿನೈದು ಸಾವಿರ ಬೇಕಾಗುತ್ತದೆ.

(೩) ಕಾರ್ಯಾರಂಭ ಮಾಡುವಾಗ ಅಗತ್ಯವಿರುವ ಮೂಲ ಉತ್ಪನ್ನಗಳಿಗೆ ತಿಂಗಳೊಂದರ ಸುಮಾರು ಮೂರು ಲಕ್ಷ ರೂಪಾಯಿಗಳು ಬೇಕಾಗಬಹುದಾಗಿದ್ದು, ಇದರೊಂದಿಗೆ ನಿರ್ವಹಣಾ ವೆಚ್ಚ ಸುಮಾರು ರೂಪಾಯಿ ನಲ್ವತ್ತು ಸಾವಿರಗಳೂ ಬೇಕು. ಅಲ್ಲದೆ ಪ್ರಚಾರ, ಎಕ್ಸೈಸ್ ಸುಂಕ, ವಿದ್ಯತ್‌ ಇತ್ಯಾದಿಗಳಿಗೆ ತಿಂಗಳೊಂದರ ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳು ತಗಲಬಹುದು.

(೪) ಒಟ್ಟಾರೆಯಾಗಿ ಉದ್ದಿಮೆಯನ್ನು ನಡೆಸಲು ಮೂರು ತಿಂಗಳಿಗೆ ಸುಮಾರು ಹದಿನಾಲ್ಕು ಲಕ್ಷ ರೂಪಾಯಿಗಳ ಅಗತ್ಯವಿದ್ದು, ಸರಿಯಾದ ರೀತಿಯಲ್ಲಿ ಈ ಉದ್ದಿಮೆಯು ಕಾರ್ಯನಿರ್ವಹಿಸಿದಲ್ಲಿ ವರ್ಷವೊಂದರ ಸುಮಾರು ೩೦,೦೦೦ ಕಿಲೋಗಳಷ್ಟು ಉತ್ಪನ್ನವನ್ನು ಮಾರಾಟ ಮಾಡಿದಲ್ಲಿ ಈಗಿನ ಪರಿಸ್ಥಿತಿಯಲ್ಲಿ ದೊರಕಬಹುದಾದ ಆದಾಯ ಸುಮಾರು ಅರುವತ್ತು ಲಕ್ಷ ರೂಪಾಯಿಗಳಾಗಬಹುದೆಂದು ಅಂದಾಜಿಸಬಹುದಾಗಿದೆ.

ಸುಗಂಧಸುಪಾರಿ:

ಕೆಂಪಡಿಕೆಯಲ್ಲಿ ದೊರಕುವ ಕೆಳದರ್ಜೆಯ ಅಡಿಕೆಯನ್ನು ಉಪಯೋಗಿಸಿ ಅದಕ್ಕೆ ವಿವಿಧ ರೀತಿಯ ಸಂಬಾರ ಪದಾರ್ಥಗಳು, ಸಕ್ಕರೆ, ಪರಿಮಳ ದ್ರವ್ಯ ಇತ್ಯಾದಿಗಳನ್ನು ಸೇರಿಸಿ ತಯಾರಿಸಲ್ಪಡುವ ಉತ್ಪನ್ನವೇ ಸುಗಂಧ ಸುಪಾರಿ. ಈ ರೀತಿಯ ಉತ್ಪನ್ನಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಾಗುತ್ತಿರುವ ಮದುವೆ ಮತ್ತಿತರೆ ಸಮಾರಂಭಗಳಲ್ಲಿ ಅತಿಥಿ ಸತ್ಕಾರಕ್ಕಾಗಿ ಉಪಯೋಗಿಸಲಾಗುತ್ತದೆ.

ಸಿಹಿಸುಪಾರಿ:

ಕೆಂಪಡಿಕೆಯಲ್ಲಿರುವ ವಿವಿಧ ನಮೂನೆಗಳನ್ನು ಉಪಯೋಗಿಸಿ ಅವನ್ನು ಸಣ್ಣ ಸಣ್ಣ ತುಂಡುಗಳಾಗಿಸಿ ಅವಕ್ಕೆ ವಿವಿಧ ರೀತಿಯ ಸಿಹಿ ಪದಾರ್ಥಗಳನ್ನು ಸೇರಿಸಿ ಅದರೊಂದಿಗೆ ಕೊಬ್ಬರಿ ಚೂರು, ಪಪ್ಪಾಯಿಯನ್ನು ಸಂಸ್ಕರಿಸಿ ಅದರ ಚೂರು, ಸಂಬಾರ ಪದಾರ್ಥ ಇತ್ಯಾದಿಗಳನ್ನು ಸೇರಿಸಿ ಬಣ್ಣವನ್ನು ಹಾಕಿ ಸುಮಾರು ೧೦೦ ರಷ್ಟು ವಿಧದ ಸಿಹಿ ಸುಪಾರಿಗಳನ್ನು ಮಹಾರಾಷ್ಟ್ರ ಮತ್ತು ಹೈದರಾಬಾದ್‌ಗಳಲ್ಲಿ ತಯಾರಿಸುತ್ತಾರೆ. ಇವನ್ನು ವಿವಿಧ ತೂಕಗಳ ಪ್ಲಾಸ್ಟಿಕ್‌ ಡಬ್ಬದಲ್ಲಿ ಹಾಕಿ ವಿದೇಶಗಳಿಗೆ ರಪ್ತುನ್ನು ಕೈಗೊಳ್ಳುತ್ತಾರೆ.