ಭಾರತದಲ್ಲಿ ಅಡಿಕೆ ಕೃಷಿಯ ವಿಸ್ತೀರ್ಣ ಮತ್ತು ಉತ್ಪಾದನೆ

 

ಭಾರತದಲ್ಲಿ ಅಡಿಕೆಯ ಕೃಷಿಯನ್ನು ಅನಾದಿಕಾಲದಿಂದಲೇ ನಮ್ಮ ಪೂರ್ವಜರು ಕೈಗೊಳ್ಳುತ್ತಾ ಬಂದಿದ್ದು, ಇದಿಂದು ಒಂದು ವ್ಯವಸ್ಥಿತ ರೀತಿಯ ಕೃಷಿಯಾಗಿ ಮಾರ್ಪಟ್ಟಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಂತರಿಕ ಅಗತ್ಯಕ್ಕನುಗುಣವಾಗಿ ಅಡಿಕೆಯ ಉತ್ಪಾದನೆ ಭಾರತದಲ್ಲಾಗದೆ ಇದ್ದುದರಿಂದ ದೇಶವು ತನ್ನ ಅಗತ್ಯಕ್ಕನುಗುಣವಾಗಿ ಅಡಿಕೆಯ ಆಮದನ್ನು ಆಗ್ನೇಯ ಏಷ್ಯಾದ ರಾಷ್ಟ್ರಗಳಿಂದ ಮಾಡಿಕೊಳ್ಳುತ್ತಿತ್ತು. ಆದರೆ ಈ ರೀತಿಯ ಆಮದಿನಿಂದಾಗಿ ಆಂತರಿಕವಾಗಿ ಬೆಳೆಯುತ್ತಿದ್ದ ಅಡಿಕೆಯ ಧಾರಣೆಯ ಮೇಲೆ ಪ್ರಬಲ ಹೊಡೆತ ಬೀಳಲಾರಂಭಿಸಿದಾಗ ಬೆಳೆಗಾರರೆಲ್ಲ ಒಗ್ಗೂಡಿ ಪ್ರತಿಭಟನೆಯನ್ನು ಸೂಚಿಸಿದ ಕಾರಣ ಭಾರತ ಸರಕಾರವು ೧೯೪೯ರಲ್ಲೆ ಭಾರತದ ಕೇಂದ್ರೀಯ ಅಡಿಕೆ ಸಮಿತಿಯನ್ನು ರೂಪಿಸಿ, ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ ಮತ್ತು ಅದಕ್ಕೆ ಸಂಬಂಧಪಟ್ಟ ಇತರೇ ವಿಚಾರಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಇದಕ್ಕನುಗುಣವಾಗಿ ಪಂಚವಾರ್ಷಿಕ ಯೋಜನೆಗಳಲ್ಲಿ ವಿವಿಧ ರೀತಿಯ ನೆರವನ್ನು ನೀಡಿ ಕ್ಷೇತ್ರದ ಬೆಳೆವಣಿಗೆಗೆ ಉತ್ತೇಜನ ದೊರಕಿತು. ಈ ರೀತಿಯದ್ದಾದ ಯೋಗ್ಯ ಪರಿಸರದಿಂದಾಗಿ ಭಾರತದಲ್ಲಿ ಅಡಿಕೆ ಕೃಷಿಯು ವರ್ಷಗಳು ಕಳೆದಂತೆ ಗಣನೀಯವಾಗಿ ಅಭಿವೃದ್ಧಿಗೊಳ್ಳಲಾರಂಭಿಸಿತು.

ಭಾರತದಲ್ಲಿಂದು ಅಡಿಕೆ ವ್ಯವಸಾಯವನ್ನು ಪ್ರಮುಖವಾಗಿ ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕೈಗೊಳ್ಳುತ್ತಿದ್ದು, ಇವುಗಳೊಂದಿಗೆ ಮೇಘಾಲಯ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ, ತ್ರಿಪುರ, ಮಿಜೋರಾಂ, ಪಾಂಡಿಚೇರಿ, ಅಂಡಮಾನ್‌ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲೂ ಬೆಳಸಲಾಗುತ್ತಿದೆ. ಒಟ್ಟಾರೆಯಾಗಿ ೧೯೯೮–೯೯ರಲ್ಲಿ ದೇಶದ ಅಡಿಕೆ ಬೆಳೆಯ ವಿಸ್ತೀರ್ಣವು ಸುಮಾರು ೩,೭೨,೦೦೦ ಹೆಕ್ಡೇರ್ ಗಳಾಗಿದ್ದು ಇದರಿಂದ ಲಭ್ಯವಾದ ಉತ್ಪಾದನಾ ಪ್ರಮಾಣವು ಸುಮಾರು ೪,೧೫,೦೦೦ ಟನ್‌ಗಳು. ೧೯೯೮–೯೯ ರ ಅಂಕಿ-ಅಂಶಗಳ ಪ್ರಕಾರ ದೇಶದ ಅಡಿಕೆ ಬೆಳೆಯ ಒಟ್ಟು ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ, ಕೇರಳ ಮತ್ತು ಅಸ್ಸಾಂಗಳ ಪಾಲು ಶೇಕಡಾ ೮೩ರಷ್ಟಾಗಿದೆ. ಇವುಗಳ ಪೈಕಿ ಕರ್ನಾಟಕವು ವಿಸ್ತೀರ್ಣದಲ್ಲಿ ಶೇಕಡಾ ೨೯.೩ನ್ನು ಹೊಂದಿದ್ದು, ಉತ್ಪಾದನೆಯಲ್ಲಿ ಇದರ ಪಾಲು ಶೇಕಡಾ ೩೮.೫ ಆಗಿದೆ. ಇದರಿಂದಾಗಿ ಅಡಿಕೆ ಕೃಷಿಯಲ್ಲಿ ಕರ್ನಾಟಕವಿಂದು ದೇಶದಲ್ಲಿ ಅಗ್ರಸ್ಥಾನವನ್ನು ಹೊಂದಿದ್ದು, ಆ ಬಳಿಕದ ಸ್ಥಾನಗಳನ್ನು ಕ್ರಮವಾಗಿ ಕೇರಳ ಮತ್ತು ಅಸ್ಸಾಂಗಳದ್ದಾಗಿದೆ. (ಪಟ್ಟಿ)

ಪಟ್ಟಿ
ಭಾರತದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ೧೯೯೮೯೯
(ವಿಸ್ತೀರ್ಣ ಹೆಕ್ಟೇರ್ ಗಳಲ್ಲಿ, ಉತ್ಪಾದನೆ ಮೆಟ್ರಿಕ್‌ ಟನ್‌ಗಳಲ್ಲಿ)

ರಾಜ್ಯ

ವಿಸ್ತೀರ್ಣ

ಉತ್ಪಾದನೆ

ಕರ್ನಾಟಕ

೧,೦೯,೦೦೦

೧,೬೦,೦೦೦

ಕೇರಳ

೯೪,೦೦೦

೧,೦೦,೦೦೦

ಅಸ್ಸಾಂ

೧,೦೬,೦೦೦

೮೫,೦೦೦

ಇತರೆ

೬೩,೦೦೦

೭೦,೦೦೦

ಒಟ್ಟು

೩,೭೨,೦೦೦

೪,೧೫,೦೦೦

ಮೂಲ: ಕೇಂದ್ರ ಸರಕಾರದ ಕೃಷಿ ಮಂತ್ರಾಲಯ

 

ರಾಜ್ಯಗಳಿಗನುಗುಣವಾಗಿ ಅಡಿಕೆಯ ವ್ಯವಸಾಯ:

ಕರ್ನಾಟಕ: ಕರ್ನಾಟಕ ರಾಜ್ಯದಲ್ಲಿಂದು ಕೈಗೊಳ್ಳಲಾಗುತ್ತಿರುವ ಅಡಿಕೆ ವ್ಯವಸಾಯವನ್ನು ಮುಖ್ಯವಾಗಿ ಎರಡು ವಿಭಾಗಗಳನ್ನಾಗಿ ಮಾಡಬಹುದು. ಅವುಗಳೆಂದರೆ, (೧) ಮಲೆನಾಡು ಪ್ರದೇಶ ಮತ್ತು (೨) ಬಯಲು ಪ್ರದೇಶ.

. ಮಲೆನಾಡು ಪ್ರದೇಶ:
ಹೆಚ್ಚಿನ ಪ್ರಮಾಣದ ಮಳೆ ಬೀಳುವ ಮಲೆನಾಡು ಪ್ರದೇಶವು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದ್ದು ಈ ಪ್ರದೇಶದಲ್ಲಿ ಕರ್ನಾಟಕದ ಅಡಿಕೆ ಬೆಳೆಯ ಒಟ್ಟು ವಿಸ್ತೀರ್ಣ ಮತ್ತು ಉತ್ಪಾದನೆಯ ಶೇಕಡಾ ೭೮ಕಿಂತಲೂ ಹೆಚ್ಚಿದೆ. ಈ ಎಲ್ಲಾ ಜಿಲ್ಲೆಗಳ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೊಂದೇ ಶೇಕಡಾ ೩೦ರ ವಿಸ್ತೀರ್ಣ ಮತ್ತು ಉತ್ಪಾದನೆಯನ್ನು ಹೊಂದಿದ್ದು, ಬಳಿಕದ ಸ್ಥಾನವನ್ನು ಕ್ರಮವಾಗಿ ಶಿವಮೊಗ್ಗ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳದ್ದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಆ ಬಳಿಕದ ಸ್ಥಾನಗಳನ್ನು ಕ್ರಮವಾಗಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಮಂಗಳೂರುಗಳು ಆಕ್ರಮಿಸಿಕೊಂಡಿವೆ. ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳು ಕುಂದಾಪುರ, ಉಡುಪಿಗಳದ್ದಾಗಿದೆ. ಒಟ್ಟಾರೆಯಾಗಿ ರಾಜ್ಯದ ಒಟ್ಟು ವಿಸ್ತೀರ್ಣ ಮತ್ತು ಉತ್ಪಾದನೆಗಳು ಕುಂದಾಪುರ, ಉಡುಪಿಗಳದ್ದಾಗಿದೆ. ಒಟ್ಟಾರೆಯಾಗಿ ರಾಜ್ಯದ ಒಟ್ಟು ವಿಸ್ತೀರ್ಣ ಮತ್ತು ಉತ್ಪಾದನೆಗಳನ್ನು ಗಣನೆಗೆ ತೆಗೆದುಕೊಂಡಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಗ್ರ ಸ್ಥಾನದಲ್ಲಿದ್ದು, ಇದರ ವ್ಯವಸಾಯವನ್ನು ಮುಖ್ಯ ಕಸುಬನ್ನಾಗಿಸಿಕೊಂಡು ಹಲವು ಲಕ್ಷ ಕೃಷಿಕರು ಮತ್ತು ಕಾರ್ಮಿಕರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇದೇ ರೀತಿಯಾಗಿ ಮಲೆನಾಡಿನ ಇನ್ನಿತರೇ ಅಡಿಕೆ ಬೆಳೆಯುವ ಪ್ರದೇಶಗಳಲ್ಲೂ ನಾವಿಂದು ಕಂಡು ಕೊಳ್ಳಬಹುದಾಗಿದೆ.

. ಬಯಲು ಪ್ರದೇಶ:
ಇದರಲ್ಲಿ ಮುಖ್ಯವಾಗಿ ತುಮಕೂರು, ಚಿತ್ರದುರ್ಗ, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿದ್ದು, ಇಲ್ಲಿ ಮಳೆಯ ಪ್ರಮಾಣವು ಮಲೆನಾಡು ಪ್ರದೇಶಕ್ಕೆ ಹೋಲಿಸಿದಾಗ ಕಡಿಮೆಯಿದ್ದು, ಇಲ್ಲಿ ನೀರಾವರಿ ಮ್ಯವಸ್ಥೆಗಳ ಮುಖಾಂತರ ಅಡಿಕೆ ಕೃಷಿಯನ್ನಿಂದು ಕೈಗೊಳ್ಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆಗೆ ದೊರಕುತ್ತಿರುವ ಹೆಚ್ಚಿನ ಧಾರಣೆಯಿಂದ ಈ ಪ್ರದೇಶದಲ್ಲಿ ಇದರ ವ್ಯವಸಾಯವು ಗಣನೀಯವಾಗಿ ವೃದ್ಧಿಸತೊಡಗಿದೆ. ಈ ಜಿಲ್ಲೆಗಳಲ್ಲದ ಬೆಂಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲೂ ಅಡಿಕೆ ಕೃಷಿಯಿಂದು ಜನಪ್ರಿಯಗೊಳ್ಳುತ್ತಿದೆ.

ಕೇರಳ: ಕೇರಳ ರಾಜ್ಯದಲ್ಲಿಂದು ಅಡಿಕೆ ವ್ಯಸಾಯವನ್ನು ಅಲೆಪ್ಪಿ, ಎರ್ನಾಕುಲಂ, ಇಡುಕ್ಕಿ, ತಿರುವನಂತಪುರ, ಕಿಲ್ವಾನ್, ಕಾಸರಗೋಡು, ಕೊಟ್ಟಾಯಂ, ತ್ರಿಶೂರ್, ಪಾಲ್ಗಾಟು, ಮಲಪುರಂ, ಕಲ್ಲಿಕೋಟೆ, ಕಣ್ಣಾನೂರು ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿದ್ದು ಇವುಗಳ ಪೈಕಿ ಕಾಸರಗೋಡಿನ ಪಾಲು ಅತ್ಯಧಿಕ.

ಅಸ್ಸಾಂ: ಅಸ್ಸಾಂ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಅಡಿಕೆಯ ವ್ಯವಸಾಯವನ್ನು ಕೈಗೊಳ್ಳುತ್ತಿದ್ದರೂ ಕಮರೂಪ್ ಮತ್ತು ಶಿಭಸಾಗರ ಜಿಲ್ಲೆಗಳಲ್ಲಿ ಇದು ಅಧಿಕ ಮಟ್ಟದ್ದಾಗಿದೆ. ಆ ಬಳಿಕದ ಸ್ಥಾನಗಳನ್ನು ಕ್ರಮವಾಗಿ ದರಂಗ್‌, ಗೋಲ್‌ಪುರ, ನೋವ್‌ಗಂಗ್‌, ಕಚ್ಚಾರ್, ದಿಬ್‌ರೂಗಡ್‌, ಲಕ್ಷ್ಮೀಪುರ ಜಿಲ್ಲೆಗಳು ಹೊಂದಿವೆ.

ಇನ್ನಿತರೆ ರಾಜ್ಯಗಳು: ತಮಿಳುನಾಡಿನ ಮೆಟ್ಟುಪಾಳ್ಯಂ, ಮಹಾರಷ್ಟ್ರದ ಶ್ರೀವರ್ಧನ ಮತ್ತು ಪಶ್ಚಿಮ ಬಂಗಾಳದ ಜಲಪಾಯಿಗಿರಿ ಪ್ರದೇಶಗಳಲ್ಲಿಂದು ಅಡಿಕೆಯ ಕೃಷಿಯನ್ನಿಂದು ಕೈಗೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ವರ್ಷಗಳು ಉರುಳಿದಂತೆ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರದೇಶಗಳಲ್ಲಿಂದು ಅಡಿಕೆ ವ್ಯವಸಾಯವು ಆಕರ್ಷಣೆಗೊಳಗಾಗಿದ್ದು, ಪರಿಣಾಮವಾಗಿ ಉತ್ಪಾದನೆಯ ಪ್ರಮಾಣವೂ ಏರತೊಡಗಿದೆ. (ಪಟ್ಟಿ).

ಪಟ್ಟಿ
ಭಾರತದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಪ್ರವೃತ್ತಿ
(೧೯೬೬–೬೭ರಿಂದ ೧೯೯೮–೧೯೯೯ ವಿಸ್ತೀರ್ಣ ‘೦೦೦ಹೆ, ಉತ್ಪಾದನೆ ‘೦೦೦ಟನ್‌)

ವರ್ಷ

ಕರ್ನಾಟಕ

ಕೇರಳ

ಅಸ್ಸಾಂ

ಇತರೆ

ಭಾರತದಲ್ಲಿ ಒಟ್ಟು

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

೧೯೬೬–೬೭ ೩೪.೮ ೫೨.೭ ೭೧.೨ ೪೪.೩ ೨೬.೨ ೨೫.೨ ೯.೯ ೭.೯ ೧೪೨.೧ ೧೩೦.೧
೬೭–೬೮ ೩೪.೯ ೫೪.೨ ೭೬.೦ ೪೭.೩ ೨೬.೪ ೨೬.೧ ೧೦.೧ ೭.೮ ೧೪೭.೪ ೧೩೫.೪
೬೮–೬೯ ೩೮.೧ ೫೪.೫ ೮೧.೨ ೫೦.೬ ೨೧.೮ ೨೩.೧ ೧೬.೬ ೧೦.೯ ೧೫೭.೭ ೧೩೯.೧
೬೯–೭೦ ೩೮.೬ ೫೦.೭ ೮೩.೭ ೫೧.೯ ೨೧.೮ ೨೩.೧ ೧೬.೭ ೧೧.೯ ೧೬೦.೮ ೧೩೭.೮
೭೦–೭೧ ೪೧.೦ ೫೦.೪ ೮೫.೮ ೫೩.೦ ೨೩.೨ ೨೫.೧ ೧೭.೩ ೧೨.೫ ೧೬೭.೩ ೧೪೧.೦
೭೧–೭೨ ೪೩.೨ ೫೬.೩ ೮೬.೮ ೫೩.೪ ೨೫.೯ ೨೯.೦ ೧೮.೪ ೧೧.೮ ೧೭೪.೩ ೧೫೦.೫
೭೨–೭೩ ೪೩.೯ ೫೯.೫ ೮೮.೭ ೫೪.೬ ೨೭.೧ ೨೯.೩ ೧೬.೯ ೮.೩ ೧೭೬.೬ ೧೫೧.೭
೭೩–೭೪ ೪೫.೪ ೫೫.೧ ೯೦.೭ ೫೫.೯ ೩೦.೬ ೩೧.೨ ೧೬.೭ ೮.೧ ೧೮೩.೪ ೧೫೦.೩
೭೪–೭೫ ೪೬.೫ ೭೧.೯ ೯೨.೯ ೫೭.೨ ೩೧.೨ ೩೨.೦ ೧೬.೮ ೮.೩ ೧೮೭.೪ ೧೬೯.೪
೭೫–೭೬ ೪೯.೦ ೬೯.೫ ೭೬.೬ ೪೭.೭ ೩೫.೯ ೩೩.೫ ೧೬.೯ ೯.೩ ೧೭೭.೫ ೧೬೦.೦
೭೬–೭೭ ೪೮.೯ ೭೦.೪ ೬೮.೪ ೪೭.೮ ೩೬.೫ ೩೮.೬ ೧೬.೭ ೮.೩ ೧೭೦.೫ ೧೬೫.೧
೭೭–೭೮ ೪೯.೦ ೭೦.೯ ೬೮.೭ ೪೮.೧ ೪೦.೪ ೪೨.೪ ೧೭.೪ ೮.೯ ೧೭೫.೫ ೧೭೦.೩
೭೮–೭೯ ೫೦.೦ ೬೧.೫ ೬೨.೭ ೫೧.೧ ೪೬.೪ ೪೪.೫ ೧೮.೧ ೯.೨ ೧೭೭.೨ ೧೬೩.೩
೭೯–೮೦ ೫೩.೦ ೭೭.೦ ೫೨.೭ ೫೦.೬ ೪೬.೪ ೪೪.೫ ೧೮.೫ ೧೯.೩ ೧೮೦.೬ ೧೯೧.೪
೮೯–೮೧ ೫೪.೩ ೭೯.೨ ೬೦.೯ ೫೩.೨ ೫೦.೮ ೪೯.೮ ೧೪.೬ ೯.೨ ೧೮೦.೬ ೧೯೧.೪
೮೧–೮೨ ೫೫.೨ ೮೦.೨ ೬೧.೨ ೫೩.೦ ೪೭.೨ ೪೮.೧ ೨೦.೯ ೧೩.೪ ೧೮೪.೫ ೧೯೪.೭
೮೨–೮೩ ೫೬.೦ ೮೧.೫ ೫೮.೧ ೪೦.೭ ೪೭.೧ ೪೮.೧ ೨೧.೪ ೧೪.೨ ೧೮೨.೬ ೧೮೪.೫
೮೩–೮೪ ೫೬.೨ ೮೨.೨ ೬೦.೪ ೪೧.೪ ೫೦.೨ ೪೭.೯ ೧೩.೩ ೧೮.೦ ೧೮೦.೧ ೧೮೯.೫
೮೪–೮೫ ೫೭.೫ ೮೪.೪ ೫೮.೭ ೪೬.೨ ೫೧.೨ ೬೪.೩ ೧೮.೬ ೨೩.೭ ೧೮೬.೧ ೨೧೮.೭
೮೫–೮೬ ೫೮.೬ ೮೬.೧ ೫೮.೬ ೫೩.೪ ೫೦.೭ ೬೦.೧ ೧೭.೬ ೧೬.೫ ೧೮೫.೬ ೨೧೬.೨
೮೬–೮೭ ೬೦.೬ ೮೯.೦ ೫೭.೭ ೫೨.೪ ೫೦.೭ ೬೦.೧ ೨೫.೭ ೧೭.೪ ೧೯೪.೮ ೨೧೯.೦
೮೭–೮೮ ೬೦.೭ ೮೮.೭ ೬೦.೫ ೫೪.೩ ೫೮.೭ ೬೧.೪ ೧೯.೮ ೨೨.೨ ೧೯೯.೮ ೨೨೬.೭
೮೮–೮೯ ೬೦.೮ ೮೮.೭ ೬೨.೪ ೫೮.೬ ೫೯.೮ ೭೮.೨ ೨೦.೫ ೨೨.೯ ೨೦೩.೬ ೨೪೮.೫
೮೯–೯೦ ೫೨.೨ ೯೧.೧ ೬೩.೮ ೬೬.೦ ೬೩.೧ ೮೨.೫ ೨೦.೩ ೧೧.೬ ೨೦೯.೫ ೨೫೧.೩
೯೦–೯೧ ೬೩.೧ ೯೨.೪ ೬೪.೮ ೬೭.೬ ೬೩.೧ ೭೦.೪ ೨೫.೯ ೮.೧ ೨೧೭.೦ ೨೩೮.೫
೯೧–೯೨ ೬೫.೪ ೯೬.೦ ೬೩.೪ ೬೫.೧ ೬೬.೦ ೫೦.೫ ೨೬.೯ ೩೯.೩ ೨೨೧.೮ ೨೫೧.೦
೯೨–೯೩ ೬೪.೧ ೯೪.೨ ೬೩.೯ ೬೮.೧ ೭೦.೩ ೫೫.೩ ೨೮.೨ ೩೮.೬ ೨೨೬.೬ ೨೫೬.೩
೯೩–೯೪ ೭೭.೦ ೧೧೩.೩ ೬೩.೯ ೭೦.೩ ೭೦.೩ ೫೫.೩ ೨೪.೩ ೩೨.೨ ೨೩೫.೫ ೨೭೧.೧
೯೪–೯೫ ೬೮.೫ ೧೦೦.೧ ೬೯.೦ ೮೦.೯ ೭೧.೪ ೫೪.೪ ೩೫.೦ ೫೪.೩ ೨೪೩.೯ ೨೮೯.೭
೯೫–೯೬ ೭೭.೭ ೧೧೩.೪ ೭೬.೫ ೯೧.೨ ೭೨.೦ ೫೭.೮ ೨೮.೮ ೩೭.೪ ೨೫೫.೦ ೨೯೯.೮
೯೬–೯೭ ೮೪.೬ ೧೨೧.೦ ೭೨.೮ ೮೦.೧ ೭೪.೧ ೬೪.೭ ೨೯.೭ ೪೨.೬ ೨೬೧.೨ ೩೦೭.೭
೯೭–೯೮ ೮೮.೪ ೧೨೮.೩ ೭೬.೧ ೯೪.೦ ೭೪.೧ ೬೪.೦ ೩೦.೧ ೪೭.೬ ೨೬೮.೭ ೩೩೩.೯
೯೮–೯೯ ೧೦೯.೦ ೧೬೦.೦ ೯೪.೦ ೧೦೦.೦ ೧೦೬ ೮೫.೦ ೬೩.೦ ೭೦.೦ ೩೭೨.೦ ೪೧೫.೦

ಮೂಲ: ಕೇದ್ರ ಸರಕಾರದ ಕೃಷಿ ಮಂತ್ರಾಲಯ

 

ತಳಿಗಳು:

ಅಡಿಕೆಯ ಕೃಷಿಯಲ್ಲಿಂದು ಸಾಂಪ್ರದಾಯಿಕ ಮತ್ತು ಆಧುನಿಕ ತಳಿಗಳನ್ನು ಬಳಸಲಾಗುತ್ತಿದ್ದು. ಇವುಗಳನ್ನು ಅದನ್ನು ಬೆಳಸಲಾಗುತ್ತಿರುವ, ಪ್ರದೇಶ ಮತ್ತು ಮೂಲ ತಳಿಗನುಗುಣವಾಗಿ ಹೆಸರಿಸಲಾಗುತ್ತದೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ:

() ದಕ್ಷಿಣ ಕನ್ನಡ: ಈ ತಳಿಯನ್ನು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಪ್ರದೇಶಗಳಲ್ಲಿ ಬೆಳೆಸಲಾಗುತ್ತಿದ್ದು, ಇದರ ಆಕಾರ ದೊಡ್ಡದಾಗಿದ್ದು, ಇದರೊಂದಿಗೆ ಮುಣಮಟ್ಟವು ಉತ್ತಮವೆಂಬ ಹೆಗ್ಗಳಿಕೆ ಇದೆ. ಇದನ್ನು ಹೆಚ್ಚಾಗಿ ‘ಚಾಲಿ’ ಅಡಿಕೆಯನ್ನು ಮಾಡಲು ಉಪಯೋಗಿಸಲಾಗುತ್ತಿದೆ.

() ತೀರ್ಥಹಳ್ಳಿ: ಈ ತಳಿಯನ್ನು ಅಧಿಕ ಮಟ್ಟದಲ್ಲಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದು, ಇದನ್ನು ಹಸಿ ರೂಪದಲ್ಲೇ ಕೊಯಿಲು ಮಾಡಿ ಸಂಸ್ಕರಿಸಲಾಗುತ್ತಿದೆ.

() ಶ್ರೀವರ್ಧನ: ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿರುವ ತಳಿಯಿದಾಗಿದ್ದು, ಇದಕ್ಕಿರುವ ರುಚಿ, ಆಕಾರ ಮತ್ತು ಬಣ್ಣದಿಂದಾಗಿ ಅತ್ಯಧಿಕ ಧಾರಣೆಗೆ ಮಾರಾಟವಾಗುತ್ತಿದೆ.

() ಮಂಗಳ: ಈ ತಳಿಯನ್ನು ಚೀನಾದ ಬೀಜಿಂಗ್‌ನಿಂದ ತಂದು ನಮ್ಮಲ್ಲಿ ಅಭಿವೃದ್ಧಿ ಪಡಿಸಿದ್ದು ಇದರಿಂದ ಲಭ್ಯವಾಗುವ ಇಳುವರಿ ಅಧಿಕ ಮಟ್ಟದ್ದಾಗಿದೆ.

() ಸುಮಂಗಳ: ಇದು ಇಂದೋನೇಷಿಯಾದ ಒಂದು ತಳಿ.

() ಶ್ರೀಮಂಗಳ: ಇದು ಸಿಂಗಾಪುರದಿಂದ ಬಂದ ತಳಿ.

() ಮೆಟ್ಟುಪಾಳ್ಯಂ: ಇದನ್ನು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿ ಬೆಳೆಸಲಾಗುತ್ತಿದೆ.

() ಮೋಹಿತನಗರ: ಪಶ್ಚಿಮ ಬಂಗಾಳದಲ್ಲಿ ಬೆಳೆಸಲಾಗುತ್ತಿರುವ ತಳಿ.

() ಕಾಹಿಕುಚ್ಚಿ: ಇದು ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಬೆಳೆಸಲಾಗುತ್ತಿರುವ ತಳಿ.

ಭಾರತದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನಾ ಪ್ರವೃತ್ತಿ:

ನಮ್ಮ ದೇಶದಲ್ಲಿ ಅಡಿಕೆ ವ್ಯವಸಾಯದ ವಿಸ್ತರಣಾ ಕಾರ್ಯವು ಒಂದು ನಿರಂತರ ಪ್ರಕ್ರಿಯೆಯಾಗಿ ಮೂಡಿಬರುತ್ತಿದ್ದು, ಇದೇ ದಿಕ್ಕಿನಲ್ಲಿ ಉತ್ಪಾದನೆಯೂ ಹೆಚ್ಚುತ್ತಿದೆ. ಸ್ವಾತಂತ್ರ್ಯ ನಂತರದಲ್ಲಿ ಈ ಕ್ಷೇತ್ರದಲ್ಲಿ ಕಂಡು ಬರುತ್ತಿರುವ ಬೆಳವಣಿಗೆಯನ್ನು ಪರಿಶೀಲಿಸಿದಾಗ ಇನ್ನು ಮುಂದೆ ಇದರ ವಿಸ್ತರಣೆಗಿರುವ ಅವಕಾಶಗಳು ಕಡಿಮೆ. ೧೯೫೦–೫೧ರಲ್ಲಿ ದೇಶದಲ್ಲಿ ಅಡಿಕೆ ವ್ಯವಸಾಯವನ್ನು ಸುಮಾರು ೧,೦೫,೦೦೦ ಹೆಕ್ಟೇರ್ ಪ್ರದೇಶಗಳಲ್ಲಿ ಕೈಗೊಂಡಿದ್ದು ೧೯೬೦–೬೧ರಲ್ಲಿ ಅದು ೧,೧೩,೦೦೦ ಹೆಕ್ಟೇರ್ ಗಳಿಗೆ ವಿಸ್ತರಿಸಲ್ಪಟ್ಟಿತು. ೧೯೭೦–೭೧ರಲ್ಲಿ ಅದು ಇನ್ನಷ್ಟು ಹೆಚ್ಚಿ ೧,೬೭,೦೦೦ ಹೆಕ್ಟೇರ್ ಗಳಿಗೆ ತಲುಪಿತ್ತು. ೧೯೮೦–೮೧ ಕ್ಕಾಗುವಾಗ ಅದು ೧,೮೫,೦೦೦ ಹೆಕ್ಟೇರ್ ಗಳಾಯಿತು. ಈ ಮೂವತ್ತು ವರ್ಷಗಳ ಅವಧಿಯಲ್ಲಿ ಈ ವಿಸ್ತರಣೆಯು ಶೇ. ೭೬ರಷ್ಟಾಗಿ, ವಾರ್ಷಿಕ ಸರಾಸರಿಯು ಶೇ. ೨.೬ರಷ್ಟಿತ್ತು. ಈ ರೀತಿಯ ಬೆಳವಣಿಗೆಯನ್ನು ಕಂಡ ಸರಕಾರಗಳು ೧೯೭೦ರಿಂದೀಚೆಗೆ ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಆ ಮೊದಲು ಹಾಕಿಕೊಂಡಿದ್ದ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಕಡಿಮೆ ಮಾಡತೊಡಗಿತು.

ಹೀಗಿದ್ದರೂ, ೧೯೮೦ರ ನಂತರ, ಅದರಲ್ಲೂ ಮುಖ್ಯವಾಗಿ ೧೯೯೦ರ ಬಳಿಕ ವಿಸ್ತರಣಾ ಕಾರ್ಯಗಳು ನಿಜಕ್ಕೂ ಗಮನಾರ್ಹ. ಒಟ್ಟಾರೆಯಾಗಿ ೧೯೫೦–೫೧ರಿಂದ ೧೯೯೦–೯೧ರ ತನಕದ ವಿಸ್ತರಣಾ ಬೆಳವಣಿಗೆಯು ಸಾಮಾನ್ಯ ಮಟ್ಟದ್ದಾಗಿದ್ದು, ಆ ಬಳಿಕದ ಬೆಳವಣಿಗೆಯು ಅತ್ಯಂತ ವೇಗದ್ದೆನ್ನಬಹುದು. ೧೯೯೦–೯೧ರಲ್ಲಿ ಈ ಬೆಳೆಯ ವಿಸ್ತೀರ್ಣವು ಸುಮಾರು ೨,೨೧,೦೦೦ ಹೆಕ್ಟೇರ್ ಗಳಷ್ಟಿದ್ದು, ೧೯೯೮–೯೯ ಕ್ಕಾಗುವಾಗ ಇದು ಸುಮಾರು ೩,೭೨,೦೦೦ ಹೆಕ್ಟೇರ್ ಗಳಿಗೇರಿತು. ಈ ಅಂಕಿ-ಅಂಶಗಳ ಪ್ರಕಾರ ೧೯೯೦–೯೧ರಿಂದ ೧೯೯೮–೯೯ರ ಅವಧಿಯ ವಾರ್ಷಿಕ ಸರಾಸರಿ ಬೆಳವಣಿಗೆಯು ಶೇ. ೭.೫೯ರಷ್ಟಾಗಿತ್ತು. ಈ ರೀತಿಯ ಬೆಳವಣಿಗೆಗೆ ಮುಖ್ಯ ಕಾರಣ ಅಡಿಕೆ ವ್ಯವಸಾಯವನ್ನಿಂದು ಸಾಂಪ್ರದಾಯಿಕವಲ್ಲದ ರಾಜ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೈಗೊಳುತ್ತಿರುವುದು. ಉದಾ: ೧೯೬೬–೬೭ರಲ್ಲಿ ಈ ರಾಜ್ಯಗಳಲ್ಲಿದ್ದ ವಿಸ್ತೀರ್ಣವು ಸುಮಾರು ೯.೯ ಸಾವಿರ ಹೆಕ್ಟೇರ್, ೧೯೯೮–೯೯ ಕ್ಕಾಗುವಾಗ ಇದು ಸುಮಾರು ೬೩ ಸಾವಿರ ಹೆಕ್ಟೇರಿಗೇರಿದೆ.

ಇನ್ನೊಂದೆಡೆಯಲ್ಲಿ ನಮ್ಮಲ್ಲಿಂದು ಉತ್ಪಾದನೆಯಾಗುತ್ತಿರುವ ಅಡಿಕೆಯ ಪ್ರಮಾಣವು ಗಣನೀಯವಾಗಿ ಏರುತ್ತಿದ್ದು, ೧೯೫೦–೫೧ರಲ್ಲಿ ಈ ಪ್ರಮಾಣವು ಸುಮಾರು ೭೩,೦೦೦ ಟನ್‌ಗಳಾಗಿದ್ದು ಅದು ೧೯೯೦–೯೧ಕ್ಕಾಗುವಾಗ ೨,೩೮,೫೦೦ ಟನ್‌ಗಳಿಗೇರಿತು. ಈ ೪೦ ವರ್ಷಗಳ ಅವಧಿಯಲ್ಲಿ ವಾರ್ಷಿಕ ಸರಾಸರಿ ಬೆಳವಣಿಗೆಯು ಶೇ ೫.೬೭ರಷ್ಟಾಗಿತ್ತು. ಆದರೆ ಆ ಬಳಿಕ ಕಂಡು ಬಂದ ಬೆಳವಣಿಗೆಯು ಈ ಕ್ಷೇತ್ರದಲ್ಲಾಗುತ್ತಿರುವ ಕ್ರಾಂತಿಕಾರಿ ಬದಲಾವಣೆಯನ್ನು ಸೂಚಿಸುತ್ತಿದೆ. ೧೯೯೮–೯೯ಕ್ಕಾಗುವಾಗ ನಮ್ಮ ದೇಶದಲ್ಲಾದ ಅಡಿಕೆಯ ಉತ್ಪಾದನೆಯು ಸುಮಾರು ೪,೧೫,೦೦೦ ಟನ್‌ಗಳಷ್ಟಾಗಿದ್ದು, ೧೯೯೦–೯೧ ರಿಂದ ೧೯೯೮–೯೯ರ ತನಕದ ಈ ೯ ವರ್ಷಗಳಲ್ಲಿ ಅಡಿಕೆಯ ಉತ್ಪಾದನೆಯು ವಾರ್ಷಿಕ ಸರಾಸರಿ ಶೇ. ೮.೨೨ರ ಮಟ್ಟಕ್ಕೇರಿತು. ಈ ರೀತಿಯ ಬೆಳವಣಿಗೆಯಲ್ಲಿ ಸಾಂಪ್ರದಾಯಕವಲ್ಲದ ರಾಜ್ಯಗಳ ಪಾಲು ಗಣನೀಯವಾಗಿದ್ದು ಇನ್ನೊಂದೆಡೆಯಲ್ಲಿ ಸಾಂಪ್ರದಾಯಕ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ಅಸ್ಸಾಂಗಳ ಪಾಲು ಹಿಂದಕ್ಕೆ ಚಲಿಸಲರಾಂಬಿಸಿದೆ. (ಪಟ್ಟಿ).

ಒಟ್ಟಾರೆಯಾಗಿ ನಮ್ಮ ದೇಶದ ಅಡಿಕೆ ಕ್ಷೇತ್ರದಲ್ಲಿಂದು ಗಣನೀಯ ಪ್ರಮಾಣದ ಬೆಳವಣಿಗೆಯು ಕಂಡು ಬರುತ್ತಿದ್ದು, ಇದಕ್ಕೆ ಹಲವು ಕಾರಣಗಳನ್ನಿಂದು ಹೆಸರಿಸಬಹುದು.

() ಸಾಂಪ್ರದಾಯಿಕ ಪ್ರದೇಶಗಳಾದ ಕರ್ನಾಟಕ, ಕೇರಳ ಮತ್ತು ಅಸ್ಸಾಂಗಳಲ್ಲಿ ಲಭ್ಯವಿರುವ ಹವಾಗುಣ, ಮಣ್ಣಿನ ಫಲವತ್ತತೆ ಮತ್ತು ಈ ಬೆಳೆಗೆ ಕೃಷಿಕರು ಹೊಂದಿರುವ ಆತ್ಮೀಯತೆ ಇವೆಲ್ಲಿ ಇನ್ನಷ್ಟು ವಿಸ್ತರಣೆಗೆ ಪ್ರೇರಣೆಯನ್ನು ಕೊಟ್ಟಿರುವುದು.

() ೧೯೯೦–೯೧ರಿಂದ ಇದಕ್ಕೆ ದೊರಕುತ್ತಿರುವ ಆಕರ್ಷಣಾ ಬೆಲೆ.

() ಸಾಂಪ್ರದಾಯಿಕವಲ್ಲದ ರಾಜ್ಯಗಳಲ್ಲಿ ಅಡಿಕೆ ವ್ಯವಸಾಯಕ್ಕೆ ಕಂಡು ಬರುತ್ತಿರುವ ಆಸಕ್ತಿ.

() ಆಹಾರೋತ್ಪನ್ನಗಳ ಉತ್ಪಾದನಾ ವೆಚ್ಚ ಏರುತ್ತಿರುವುದು;

() ಸಾಂಪ್ರದಾಯಕವಲ್ಲದ ರಾಜ್ಯಗಳಲ್ಲಿ ದೊರಕುತ್ತಿರುವ ನೀರಾವರಿ ವ್ಯವಸ್ಥೆಗಳು, ಅಲ್ಪಪ್ರಮಾಣದ ನಿರ್ವಹಣಾ ವೆಚ್ಚ ಇತ್ಯಾದಿಗಳು.

() ಅಡಿಕೆ ವ್ಯಸಾಯಕ್ಕೆ ಬದಲಿಯಾಗಿ ಇನ್ನಿತರೇ ಕೃಷಿ ಉತ್ಪನ್ನಗಳನ್ನು ಬೆಳಸಲು ಅಗತ್ಯ ಶಿಕ್ಷಣ, ಮಾಹಿತಿ ಮತ್ತು ಮಾರಾಟ ವ್ಯವಸ್ಥೆಗಳ ಅಭಾವ.

() ಅಡಿಕೆ ಬೆಳೆಯ ಇನ್ನಷ್ಟು ವಿಸ್ತರಣೆ ಮತ್ತು ಉತ್ಪಾದನೆಗಳಿಂದಾಗಬಲ್ಲ ಕೆಡಕುಗಳ ಬಗ್ಗೆ ಅಗತ್ಯ ಮಾಹಿತಿಯ ಕೊರತೆ.

() ಪೂರೈಕೆಗೆ ತಕ್ಕುದಾದ ಬೇಡಿಕೆ ಬರಬಹುದೆಂಬ ಕಲ್ಪನೆ.

ಉತ್ಪಾದನಾ ಕ್ಷೇತ್ರದ ಪ್ರಮುಖ ಸಮಸ್ಯೆಗಳು:

ಅಡಿಕೆ ವ್ಯಸಾಯವಿಂದು ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಒಂದು ಮುಖ್ಯ ಕೃಷಿ ಕಸುಬು ಆಗಿದ್ದು, ಈ ಕೃಷಿಯನ್ನು ನಂಬಿ ಹಲವು ಲಕ್ಷ ಕುಟುಂಬಗಳು ಜೀವನ ನಡೆಸುತ್ತಿವೆ. ಈ ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳು ನಿರಂತರವಾಗಿ ಕಂಡು ಬರುತ್ತಿದ್ದು, ಇವುಗಳಿಂದಾಗಿ ಉತ್ಪಾದನಾ ವೆಚ್ಚವಿಂದು ಅಧಿಕಗೊಂಡು, ಯೋಗ್ಯ ಪ್ರತಿಫಲ ಬೆಲೆಗಾಗಿ ಬೆಳೆಗಾರರಿಂದು ಎದುರುನೋಡುವಂತಾಗಿದೆ. ಈ ನಿಟ್ಟಿನಲ್ಲಿ ಇಲ್ಲಿಂದು ಕಂಡು ಬರುತ್ತಿರುವ ಪ್ರಮುಖ ಸಮಸ್ಯೆಗಳನ್ನು ಕೆಳಗೆ ಸೂಕ್ಷ್ಮವಾಗಿ ಹೆಸರಿಸಲಾಗಿದೆ.

ಸಮಸ್ಯೆಗಳು:

. ಅಡಿಕೆ ಕೃಷಿಯನ್ನು ಸರಿಯಾದ ಕ್ರಮದಲ್ಲಿ ಕೈಗೊಳ್ಳಬೇಕಿದ್ದಲ್ಲಿ ಕೂಲಿಯಾಳುಗಳ ಸಹಾಯ ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ ಕೂಲಿಯಾಳುಗಳ ಪೂರೈಕೆಯಲ್ಲಾಗುತ್ತಿರುವ ಕೊರತೆಯಿಂದಾಗಿ ಕೂಲಿದರವು ನಿರಂತರವಾಗಿ ಏರಿ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆ. ಇದರೊಂದಿಗೆ ಅಡಿಕೆ ಮರವೇರಲು ಅಗತ್ಯ ನುರಿತ ಕೂಲಿಯಾಳುಗಳ ಕೊರತೆಯ ಪ್ರಮಾಣ ಅಧಿಕಗೊಳ್ಳುತ್ತಿದ್ದು ಕಾಲಕಾಲಕ್ಕೆ ಔಷಧಿ ಸಿಂಪಡಣೆ, ಕೊಯ್ಲು ಇತ್ಯಾದಿ ಕಾರ್ಯಗಳಾಗದೆ ಬೆಳೆಗಾರರಿಂದು ಕೊರಗುವಂತಾಗಿದೆ.

. ಮಳೆಗಾಲದಲ್ಲಿ ಅಡಿಕೆ ಗೊಂಚಲುಗಳಿಗೆ ಔಷಧಿ ಸಿಂಪಡಿಸಲು ಯೋಗ್ಯ ವ್ಯವಸ್ಥೆಯ ಅಭಾವ. ಇದರಿಂದಾಗಿ ಕೊಳೆ ಯಾ ಮಹಾಳಿ ರೋಗ ಬಂದು ಬೆಳೆ ನಾಶವಾಗುತ್ತಿರುವುದು. ಈ ನಿಟ್ಟಿನಲ್ಲಿ ತಳದಿಂದಲೇ ಔಷಧಿ ಸಿಂಪಡಿಸುವ ವ್ಯವಸ್ಥೆ ಯಾ ತಂತ್ರಜ್ಞಾನದ ಅಗತ್ಯವಿದ್ದು, ಈ ಬಗ್ಗೆ ಯಾವುದೇ ಪರಿಹಾರವಿನ್ನೂ ದೊರಕದೇ ಇರುವುದು.

. ಗಿಡ್ಡ, ಅಧಿಕ ಇಳುವರಿ ಕೊಡಬಲ್ಲ ತಳಿಗಳ ಪೂರೈಕೆ ಅಗತ್ಯಕ್ಕನುಗುಣವಾಗಿ ಇಲ್ಲದೇ ಇರುವುದು.

. ಅಡಿಕೆ ಮರಕ್ಕೆ ತಗಲುತ್ತಿರುವ ವಿವಿಧ ರೋಗಗಳು ಮತ್ತು ಕೀಟಗಳ ಬಾಧೆ.

, ರಸಗೊಬ್ಬರ, ರಾಸಾಯನಿಕ ಮತ್ತಿತರೇ ಪೂರಕ ವ್ಯವಸ್ಥೆಗಳ ವೆಚ್ಚ ಏರುತ್ತಿರುವುದು.

. ಅಗತ್ಯ ಹಣಕಾಸಿನ ಪೂರೈಕೆ ಕಾಲಕಾಲಕ್ಕೆ ಲಭ್ಯವಾಗದಿರುವುದು.

. ಆಧುನಿಕ ಕೃಷಿ ಮತ್ತು ಶಿಕ್ಷಣದ ಕೊರತೆ.

. ವಿದ್ಯತ್ ಪೂರೈಕೆಯಲ್ಲಾಗುತ್ತಿರುವ ಏರುಪೇರು, ವಿದ್ಯುತ್‌ ದರದ ಹೆಚ್ಚಳ.

ಈ ಎಲ್ಲಾ ಸಮಸ್ಯೆಗಳಿಗೆ ಅಗತ್ಯ ಪರಿಹಾರಗಳಿಂದು ಈ ಕ್ಷೇತ್ರಕ್ಕೆ ಆಗಬೇಕಾಗಿದ್ದು, ಹೀಗಾದಲ್ಲಿ ಮಾತ್ರ ಈ ಬೆಳೆಯ ವ್ಯವಸಾಯಗಾರರಿನ್ನು ಮುಂದೆ ಆಸಕ್ತಿಯನ್ನು ಹೊಂದಬಹುದು