ಆನೆಗುಂದಿ ಅರಸು ಮನೆತನದ ಕರಿಗೌಡ ಮತ್ತು ಕೆಂಚಗೌಡರು ಬಿಲವಾಡಪುರದಲ್ಲಿ ಸತ್ಯ ನಿಷ್ಠೆಯಿಂದ ಕಾಲ ಕಳೆಯುತ್ತಿದ್ದರು. ಕರಿಗೌಡರಿಗೆ ಇಬ್ಬರು ಮಕ್ಕಳು. ಮೊದಲನೆಯವ ತುಕ್ಕಪ್ಪರಾಯ, ಎರಡನೆಯವ ಸೋಮರಾಯ. ಪ್ರಾಯಕ್ಕೆ ಬಂದ ಮಕ್ಕಳಿಗೆ ಮದುವೆ ಮಾಡಲು ವಿಚಾರಿಸುತ್ತಾರೆ. ತುಕ್ಕಪ್ಪರಾಯನಿಗೆ ಸಾವಳಿ ಗ್ರಾಮದ ಗೌಡರ ಮಗಳಾದ ಅಮೃತಬಾಯಿಯನ್ನು, ಸೋಮರಾಯನಿಗೆ ಕನಕಾಬಾಯಿಯನ್ನು ನಿಶ್ಚಯಿಸಿ ಮದುವೆ ಮಾಡುತ್ತಾರೆ.

ಸೋಮಾರಾಯ ಬಿಲವಾಡ ಸುತ್ತ ಮುತ್ತಲಿನ ಚಿಕ್ಕ ಚಿಕ್ಕ ಹನ್ನೆರಡು ಹಳ್ಳಿಗಳನ್ನು ಸೇರಿಸಿ ‘ಬಾರಾಮತಿ’ ಎಂಬ ಪಟ್ಟಣ ಸ್ಥಾಪಿಸಿ, ತಮ್ಮ ಶುದ್ಧ ಮತ್ತು ಸಾತ್ವಿಕ ಗುಣಗಳಿಂದ ಕಾಲಕಳೆಯುತ್ತಿದ್ದ. ತುಕ್ಕಪ್ಪರಾಯ ನದಿಯ ಬಲದಂಡಿಯಲ್ಲಿದ್ದ ಹದಿಮೂರು ಚಿಕ್ಕ ಹಳ್ಳಿಗಳನ್ನು ಸೇರಿಸಿ ‘ತೇರಾಮತಿ’ ಪಟ್ಟಣ ಎಂದು ಹೆಸರಿಟ್ಟು ಕಾಲ ಕಳೆಯುತ್ತಿದ್ದ. ಬಾರಾಮತಿ ಮತ್ತು ತೇರಾಮತಿ ಎರಡು ಪಟ್ಟಣಗಳನ್ನು ಕೂಡಿಸಿ ತುಕ್ಕಪ್ಪರಾಯನಿಗೆ ಅರಸನ ಪಟ್ಟಕಟ್ಟಿದರು. ಸೋಮರಾಯನಿಗೆ ಊರ ಗೌಡಕಿಯನ್ನಿತ್ತರು. ಸೋಮರಾಯ ಏಳನೂರು ಹಸುಗಳನ್ನು ಕಾಯುತ್ತ ಜೀವನ ಸಾಗಿಸಿದ್ದ. ಸೋಮರಾಯನ ಪತ್ನಿ ಕನಕಾಬಾಯಿಯನ್ನು ಊರ ಜನ ಅತ್ಯಂತ ಗೌರವದಿಂದ ನೋಡುತ್ತಿದ್ದರು.

ತುಕ್ಕಪ್ಪರಾಯ, ಸೋಮರಾಯ ಹನ್ನೆರಡು ವರ್ಷಗಳವರೆಗೆ ದಾಂಪತ್ಯ ಜೀವನ ಸಾಗಿಸಿದರೂ, ಮಕ್ಕಳಾಗಲಿಲ್ಲ. ಒಂದು ದಿನ ಗುರು ಸೋನಾರ. ಸಿದ್ಧರು ಬರುತ್ತಾರೆ. ಅಣ್ಣತಮ್ಮರಿಬ್ಬರು ಅವರನ್ನು ಬರಮಾಡಿಕೊಂಡು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ತಮ್ಮ ಮನದ ಇಂಗಿತವನ್ನು ಗುರುಗಳ ಮುಂದೆ ಹೇಳುತ್ತಾರೆ. ಸೋನಾರ ಸಿದ್ಧರು ತುಕ್ಕಪ್ಪರಾಯನಿಗೆ ‘ನಿನಗೆ ಸಂತಾನ ಭಾಗ್ಯ ಲಭಿಸಬೇಕಾದರೆ ನೀನು ಹನ್ನೆರಡು ವರ್ಷ ತಪಸ್ಸು ಮಾಡಬೇಕು’. ನಿನಗೆ ಇಬ್ಬರು ಪುತ್ರರು ಜನಿಸುತ್ತಾರೆ. ಅವರು ಹಾಲುಮತಕ್ಕೆ ಒಡೆಯರಾಗಿ ಲೋಕ ಕಲ್ಯಾಣ ಮಾಡುತ್ತಾರೆ ಎಂದು ಹೇಳಿದಾಗ, ತನ್ನೆಲ್ಲ ಅಧಿಕಾರವನ್ನು ಸೋನಾರಾಯನಿಗೆ ಒಪ್ಪಿಸಿ ಹೆಂಡತಿಯನ್ನು ಕರೆದುಕೊಂಡು ಬಿಲವಾಡ ಗಿರಿಗೆ ತಪ್ಪಸಿಗೆ ಹೋಗುತ್ತಾನೆ. ಶಿವ ಮತ್ತು ಇಂದ್ರ ದಂಪತಿಗಳಿಗಿಬ್ಬರಿಗೂ ಅನೇಕ ಕಷ್ಟಗಳನ್ನು ಕೊಟ್ಟು ಅವರನ್ನು ಪರೀಕ್ಷಿಸಿ, ಪ್ರತ್ಯಕ್ಷರಾಗುತ್ತಾರೆ. ಪಾರ್ವತಿ-ಪರಮೇಶ್ವರರು ಅವರ ಭಕ್ತಿಗೆ ಮೆಚ್ಚಿ ಜಪಮಣಿ ಮತ್ತು ಮಾಣಿಕಮಣಿ ಕೊಡುತ್ತಾರೆ. ಜಪಮಣಿಯಿಂದ ಜಕ್ಕಪ್ಪ, ಮಾಣಿಕಮಣಿಯಿಂದ ಮಾಳಿಂಗರಾಯ ಜನಿಸುತ್ತಾನೆ. ದೇವರ ಗೆಳೆಯ ಬಪ್ಪಣ್ಣ ತುಕ್ಕಪ್ಪನಾಗಿ ಅಮೃತಬಾಯಿ ಉದರದಲ್ಲಿ ಜನಿಸುತ್ತಾನೆ. ತುಕ್ಕಪ್ಪರಾಯನ ಜನನದ ನಂತರ ಎರಡು ವರ್ಷ ಕಳೆದ ಮೇಲೆ ಮಾಳಪ್ಪ ಜನಿಸುತ್ತಾನೆ. ಮಾಳಪ್ಪನು ಬಸವಣ್ಣನ ಅವತಾರ ಎಂದು ಸೋನಾರ ಸಿದ್ಧರು ಹೇಳುತ್ತಾರೆ.

ಬಾಲಕ ಮಾಳಿಂಗರಾಯ ಮೂರು ವರ್ಷದವನಿದ್ದಾಗ ತನ್ನ ಗೆಳೆಯರನ್ನೆಲ್ಲ ಕರೆದುಕೊಂಡು ಬಾರಮತಿ ಹತ್ತಿರವಿರುವ ಕರಾನದಿ ತೀರದಲ್ಲಿ ದಿನಾಲು ಆಟವಾಡುತ್ತಿರುತ್ತಾನೆ. ಗೆಳೆಯರೆಲ್ಲ ಮಣ್ಣಾಟ, ಚಿನ್ನಾಟ ಆಡುತ್ತಿದ್ದರೆ, ಮಾಳಿಂಗರಾಯ ಗೆಳೆಯರಿಂದ ದೂರ ಹೋಗಿ ಮರಳಿನಲ್ಲಿ ಓಂ ನಮಃ ಶಿವಾಯ ಬರೆದು ಜಪಿಸುತ್ತಿದ್ದ. ಆದಿಶೇಷನು ಇವನ ಭಕ್ತಿಗೆ ಒಲಿದು ತನ್ನ ಏಳು ಹೆಡೆಗಳನ್ನು ಬಿಚ್ಚಿ ಮಾಳಿಂಗರಾಯನಿಗೆ ನೆರಳಾಗುವಂತೆ ಮಾಡುತ್ತಿದ್ದ. ಒಂದು ದಿನ ಮಾಳಿಂಗರಾಯ ಅಣ್ಣ ಜಕಪ್ಪನನ್ನು ಕರೆದುಕೊಂಡು ಹೋಗುತ್ತಾನೆ. ಜಕ್ಕಪ್ಪ ಆಟ ಆಡುತ್ತಿರುತ್ತಾನೆ. ಮಾಳಪ್ಪ ಮರಳಿನ ಲಿಂಗ ಮಾಡಿ ಧ್ಯಾನ  ಮಾಡುತ್ತಿರುತ್ತಾನೆ.ಮಾಳಪ್ಪನ ಮೇಲೆ ಅದಿಶೇಷ ತನ್ನ ಹೆಡೆಬಿಚ್ಚಿ ನೆರಳು ಮಾಡಿಕೊಂಡು ನಿಂತಿರುತ್ತಾನೆ. ಅದೆ ಸಮಯಕ್ಕೆ ತಾಯಿ ಕಣ್ಣವ್ವ ಶಿವಾರ ಬಿಂದಗಿ ತೆಗೆದುಕೊಂಡು ನೀರಿಗೆ ಬರುತ್ತಾಳೆ. ಅವಳ ದೃಷ್ಟಿ ಮಾಳಪ್ಪನ ಕಡೆ ಹೋಗುತ್ತದೆ. ಏಳು ತಲೆ ನಾಗರಹಾವು ಮಾಳಪ್ಪನ ತಲೆಯ ಮೇಲೆ ನಿಂತಿದ್ದನ್ನು ನೋಡಿ ಗಾಬರಿಯಾಗಿ ನನ್ನ ಮಗನನ್ನು ಹಾವು ಕಚ್ಚಿ ಸಾಯಿಸುತ್ತದೆ. ಏನು ಮಾಡುವುದು ಎಂದು ಹುಚ್ಚಳಾಗಿ, ಮೂಕಳಾಗಿ ನಿಲ್ಲುತ್ತಾಳೆ. ಅಷ್ಟರಲ್ಲಿ ಅದಿಶೇಷನು ಮಾಯವಾಗುತ್ತಾನೆ. ಮಾಳಪ್ಪನು ತಾಯಿಯನ್ನು ನೋಡಿ ತಬ್ಬಿಕೊಳ್ಳುತ್ತಾನೆ. ತಾಯಿ ಕಣ್ಣು ಬಿಟ್ಟು ಮಗನಿಗೆ ಹಾವು ಎಲ್ಲಿ ಕಡಿದಿದೆ ಎಂದು ಹುಡುಕುತ್ತಾಳೆ. ಮಾಳಪ್ಪನ ಮೈಮೇಲೆ ಒಂದು ಚುಕ್ಕಿಯೂ ಕಾಣುವುದಿಲ್ಲ ಜಕ್ಕಪ್ಪ ಉಳಿದ ಹುಡುಗರು ಕಣ್ಣವ್ವನ ಹತ್ತಿರ ಬಂದು ಅವ್ವ ಮಾಳಪ್ಪ ದಿನಾ ಹೀಗೆ ಧ್ಯಾನಮಾಡುತ್ತಿರುತ್ತಾನೆ. ಆ ಹಾವು ಬಂದು ಅವನಿಗೆ ನೆರಳಾಗಿ ನಿಂತಿರುತ್ತದೆ. ಆ ನಾಗಪ್ಪ ಮಾಳಪ್ಪ ಇಬ್ಬರು ಗೆಳೆಯರು. ನೀನ್ಯಾಕೆ ಚಿಂತಿ ಮಾಡುತ್ತಿರುವೆ ಎಂದು ಹೇಳುತ್ತಾರೆ ಮಾಳಪ್ಪ ಅವ್ವ ಆ ಆದಿಶೇಷ ನಿಜವಾಗಿ ನನ್ನ ಮಿತ್ರ. ಇನ್ನು ಕೆಲವೇ ದಿನಗಳಲ್ಲಿ ಅವನು ನನ್ನ ಕೈಯಲ್ಲಿ ನಾಗಬೆತ್ತವಾಗಿ ದೊರೆಯುತ್ತಾನೆ ಎಂದಾಗ, ತಾಯಿ ಕಣ್ಣವ್ವ ಪ್ರೀತಿಯಿಂದ ಜಕ್ಕಪ್ಪ ಮಾಳಪ್ಪನನ್ನು ಎತ್ತಿಕೊಂಡು ಅರಮನೆಗೆ ಹೋಗುತ್ತಾಳೆ.

ಮಾಳಿಂಗರಾಯ ಚಿಕ್ಕವನಿದ್ದಾಗ ಹೊಳೆಗೆ ಹೋಗಿ ಸತ್ತ ಮೀನುಗಳನ್ನು ಹೊಳೆಯಲ್ಲಿ ಬಿಡುತ್ತಿದ್ದ. ಇದನ್ನು ನೋಡಿದ ಜನ ಈ ಮಾಳಪ್ಪ ಸತ್ತ ಮೀನುಗಳನ್ನು ಹೊಳೆಯಲ್ಲಿ ಬಿಟ್ಟು ನೀರು ಕೆಡಿಸುತ್ತಿದ್ದಾನೆ. ಈ ರಾಜರ ಮಕ್ಕಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಅನ್ನುತ್ತಿದ್ದರು . ಆದನ್ನು ಕೇಳಿದ ಮಾಳಪ್ಪ  ಸತ್ತ ಮೀನುಗಳಿಗೆ ಜೀವ ಕೊಡಿಸುವುದನ್ನು ಜನರಿಗೆ ತೋರಿಸಿ ಅವರಿಂದ ಜಯಘೋಷ ಹಾಕಿಸಿಕೊಳ್ಳುತ್ತಾನೆ.

ಒಂದು ದಿನ ಎಲ್ಲರೂ ಕೂಡಿದಾಗ ಚಿಕ್ಕ ಬಾಲಕ ಮಾಳಪ್ಪ ಇನ್ನು ಕೆಲವೆ ದಿನಗಳಲ್ಲಿ ಈ ನಾಡಿದೆ ಬರಗಾಲ ಬೀಳುತ್ತದೆ. ನಾಡಿನ ಜನರೆಲ್ಲ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಾವು ಈ ಪಟ್ಟಣ ಬಿಟ್ಟು ದೇಶ ಸಂಚಾರ ಮಾಡಬೇಕಾಗುತ್ತದೆ ಎಂದು ತಾಯಿಗೆ ಹೇಳುತ್ತಾನೆ. ಮಾಳಪ್ಪನ ಮಾತು ಎಲ್ಲರಿಗೂ ವೇದವಾಕ್ಯವಾಗಿತ್ತು. ಆತನ ನುಡಿ ಎಂದೂ ಸುಳ್ಳಾಗುವುದಿಲ್ಲ ಎಂದು ತಿಳಿದಿದ್ದ ಅವರು ಏನಾಗುತ್ತದೆಯೋ ಆಗಲಿ. ಎಲ್ಲದಕ್ಕೂ ದೇವರಿದ್ದಾನೆ ಎಂದು ಕಾಲಕಳೆಯುತ್ತಿರುತಾರೆ.

ಬಾರಮತಿ ಪಟ್ಟಣಕ್ಕೆ ಬರಗಾಲ ಬೀಳುತ್ತದೆ. ಅವರಲ್ಲಿರುವ ಏಳನೂರು ಗೋವುಗಳನ್ನು ರಕ್ಷಿಸುವುದಕ್ಕೋಸ್ಕರ ತುಕ್ಕಪ್ಪರಾಯ, ಸೋಮರಾಯ ತಮ್ಮ ಗೌಡಕಿ ಬಿಟ್ಟು ಕಣ್ಣವ್ವನನ್ನು ಕರೆದುಕೊಂಡು ಹೋಗಲು ನಿರ್ಧರಿಸುತ್ತಾರೆ. ಅಮೃತಬಾಯಿ ಪಟ್ಟಣದಲ್ಲಿಯೆ ಇದ್ದು ಜಕ್ಕಪ್ಪ ಮಾಳಪ್ಪನ ಸಂರಕ್ಷಣೆ ಮಾಡಬೇಕೆಂದು ತಿಳಿಸುತ್ತಾರೆ. ಆದರೆ ಜಕ್ಕಪ್ಪ ಹಾಗೂ ಮಾಳಪ್ಪ ತಾಯಿ ಅಮೃತಬಾಯಿ ಹಾಕಿರುವ ಕೀಲಿಯನ್ನು ತಮ್ಮ ಮಹಿಮೆಯಿಂದ ತೆಗೆದು, ಓಡಿ ಬಂದು ತಂದೆಯ ಜೊತೆಗೆ ಹೋಗಲು ಸಿದ್ಧರಾಗುತ್ತಾರೆ. ಹಸುಗಳ ಹಿಂಡಿನಲ್ಲಿದ್ದ ಶಿವನ ಸಲಗದ ಗೂಳಿಯ ಮೇಲೆ ಜಕ್ಕಪ್ಪ ಮಾಳಪ್ಪನನ್ನು ಕುಳ್ಳಿರಿಸಿ ಸಾಗಿಸುತ್ತಾರೆ.

ಅನೇಕ ಕಷ್ಟಗಳನ್ನು ಅನುಭವಿಸುತ್ತ ತುಕ್ಕಪ್ಪರಾಯ, ಸೋಮರಾಯ, ಕನಕಬಾಯಿ, ಜಕ್ಕಪ್ಪ, ಮಾಳಪ್ಪ ಎಲ್ಲರೂ ಗೋವುಗಳನ್ನು ಅಲ್ಲಲ್ಲಿ ಮೇಯಿಸುತ್ತಾ ವಸ್ತಿ ಮಾಡುತ್ತಾ ನಾತೇಪೂತೆ ಕಡೆಗೆ ಬರುತ್ತಾರೆ. ನಾತೇಪೂತೆಯಲ್ಲಿ ವಸ್ತಿ ಮಾಡಿ ಅಲ್ಲಿ ಸ್ವಲ್ವ ದಿನ ಕಾಲ ಕಳೆದು ಕನೇರಿ ಎಂಬ ಗ್ರಾಮಕ್ಕೆ ಬರುತ್ತಾರೆ. ಕನೇರಿ ಗ್ರಾಮದಲ್ಲಿ ನಾಲ್ಕೈದು ದಿನಗಳಿದ್ದು ಅಲ್ಲಿಂದ ಹಿಪ್ಪಿಸಾರಾಂಗ ಗುಡ್ಡಕ್ಕೆ ಬರುತ್ತಾರೆ. ಅಲ್ಲಿ ನೀರು, ಮೇವು ಸಮೃದ್ಧಿಯಾಗಿರುತ್ತದೆ. ಸುಮಾರು ದಿನಗಳವರೆಗೆ ಕಾಲ ಕಳೆಯುತ್ತಾರೆ.  ಹಿಪ್ಪಿಸಾರಾಂಗ ಗುಡ್ಡದಲ್ಲಿ ಸೋನಾರಿ ಸಿದ್ಧರ  ಸೇವೆ ಮಾಡುತ್ತ ಮುಂದೆ ಮಾನ ನದಿಯನ್ನು ಕೂಡಿ ಭೀಮಾನದಿಯ ದಡಕ್ಕೆ ಬರುತ್ತಾರೆ. ಭೀಮಾನದಿಯ ದಡದಲ್ಲಿ ಹಸುಗಳನ್ನು ಮೇಯಿಸುತ್ತ ಉಂಬರಜಂಬ ಉಪಾಧ್ಯಾನ ಹಟ್ಟಿಗೆ ಬರುತ್ತಾರೆ. ಆ ಸ್ಥಳದಲ್ಲಿ ಏಳುನೂರು ಜನ ಬ್ಯಾಡರು ವಾಸಿಸುತ್ತಿರುತ್ತಾರೆ. ಬೇಡರು ಇದನ್ನು ನೋಡಿ ಇವರಲ್ಲಿರುವ ಏಳುನೂರು ಗೋವುಗಳನ್ನು ಕಳುವು ಮಾಡಬೇಕೆಂದು ಹೊಂಚು ಹಾಕಿ ಒಬ್ಬ ಬೇಡ ಜಂಗಮನ ವೇಷಧರಿಸಿ ತುಕ್ಕಪ್ಪರಾಯ ಸೋಮರಾಯ ಇದ್ದಲ್ಲಿಗೆ ಬರುತ್ತಾನೆ. ಸೋಮರಾಯನನ್ನು ಕುರಿತು ‘ನೀವು ಹಾಲಮತದವರು. ನಿಮ್ಮಲ್ಲಿರುವ ಬಿಲ್ಲು ಬಾಣಗಳನ್ನು ನೋಡಿದರೆ ಕ್ಷತ್ರಿಯರು ಉಪಯೋಗಿಸುವಂತಹವೆ ಇವೆ. ಇವೆಲ್ಲ ನಿಮಗ್ಯಾಕೆ ಎಂದು ಜಂಗಮ ವೇಷದಲ್ಲಿರುವ ಬೇಡ ಕೇಳುತ್ತಾನೆ’. ಆಗ  ಸೋಮರಾಯ ನಮ್ಮಲ್ಲಿರುವ ಈ ಸುಖದ ಕೊಳಲು, ದುಃಖದ ಕೊಳಲು ಈ ಬಿಲ್ಲುಬಾಣಗಳನ್ನು ಏಕೆ ತಂದಿದೇವಂದ್ರ ‘ಈ ಏಳ್ನೂರು ಕಿಲ್ಲಾರಗಳ ರಕ್ಷಣೆ ಮಾಡಬೇಕು. ನಾವು ತಿರುಗಾಡುವ ಗುಡ್ಡದಲ್ಲಿ ಅನೇಕ ದುಷ್ಟ ಪ್ರಾಣಿಗಳಿವೆ. ಅವುಗಳಿಂದ ನಮ್ಮ ಹಸುಗಳಿಗೆ ಯಾವ ತೊಂದರೆಯೂ ಆಗಬಾರದು. ಆ ಉದ್ದೇಶದಿಂದ ತಂದಿದ್ದೇವೆ ಎಂದು ಹೇಳುತ್ತಾನೆ. ಒಂದೇ ಬಿಲ್ಲಿನಿಂದ ನಾನು ಏಳುನೂರು ತಲೆಗಳನ್ನು ಒಂದೇ ಸಲಕ್ಕೆ ಕಡಿದು ಹಾಕುತ್ತೇನೆ’ ಎಂಬ ಸೋಮರಾಯನ ಮಾತು ಕೇಳಿದ ಬೇಡ ಹೌಹಾರಿ ನನ್ನ ಹತ್ತಿರ ಒಂದು ವಿದ್ಯೆ ಐತಿ. ನಾನು ಒಂದೇ ಹರಳಿನಿಂದ ಅಲ್ಲಿ ಕುಳಿತಿರುವ ಏಳನೂರು ಬೆಳ್ಳಕ್ಕಿಗಳನ್ನು ಹಾರಿಸುವ ಕಲೆ ನನಗೆ ಗೊತ್ತಿದೆ ಎಂದು ಹೇಳಿ, ಒಂದೇ ಹರಳಿನಿಂದ ಏಳನೂರು ಬೆಳ್ಳಕ್ಕಿಗಳನ್ನು ಹಾರಿಸುತ್ತಾನೆ. ನೀನು ಒಂದೇ ಬಾಣದಿಂದ ಏಳನೂರು ಬೆಳ್ಳಕ್ಕಿಗಳ ಚಂದು ಕಡಿದು ಹಾಕು ಎಂದಾಗ ಸೋಮರಾಯ ಈರಗಾಲ ಹಚ್ಚಿ ಸಾಲಾಗಿ ಕುಳಿತಿರುವ ಬೆಳ್ಳಕ್ಕಿಗಳ ತಲೆ ಕತ್ತರಿಸುತ್ತಾನೆ ಮತ್ತು ಹಕ್ಕಿಗಳನ್ನು ಕೊಂದದ್ದಕ್ಕಾಗಿ ಮರುಗುತ್ತಾನೆ. ತನ್ನ ವಿದ್ಯೆಯನ್ನು ತೋರಿಸುವುದಕ್ಕಾಗಿ ಈ ಏಳ್ನೂರು ಹಕ್ಕಿಗಳನ್ನು ಕೊಂದ ಪಾಪ ನನಗೆ ಬರುತ್ತದೆ ಎಂದು ದುಃಖಿಸುತ್ತ, ಗುರು ಸೋನಾರ ಸಿದ್ಧರನ್ನು ಸ್ಮರಿಸುತ್ತಾನೆ. ಅವರಿಂದ ಬಸ್ಮ ಪಡೆದು ಆ ಬೆಳ್ಳಕ್ಕಿಗಳ ಮೇಲೆ ಹಾಕುತ್ತಾನೆ. ಎಲ್ಲ ಬೆಳ್ಳಕ್ಕಿಗಳಿಗೆ ಪ್ರಾಣ ಬಂದು ಹಾರಿ ಹೋಗುತ್ತವೆ. ಆ ಸೋಜಿಗ ನೋಡಿ ಬೇಡ ಹುಚ್ಚನಾಗಿ, ಈ ಇಬ್ಬರು ಅಣ್ಣ ತಮ್ಮಂದಿರು ಎಂದು ಅಗಲಿರುತ್ತಾರೋ ಅಂದು ಏಳ್ನೂರು ಹಸುಗಳನ್ನು ಕಳುವು ಮಾಡಬಹುದೆಂದು ನಿಶ್ವಯಿಸಿ ಹೋಗುತ್ತಾನೆ. ಬೇಡ ಅಲ್ಲಿ ನಡೆದ ಘಟನೆಯನ್ನು ತನ್ನ ಬಾಂಧವರಿಗೆ ಹೇಳುತ್ತಾನೆ.

ಒಂದು ದಿನ ತುಕ್ಕಪ್ಪರಾಯ ಸೋಮರಾಯನಿಗೆ ಒಂದೆರಡು ದಿನಾ ನೀನು ಹಟ್ಟಿಯಲ್ಲಿರು ನಾನು ಆಕಳುಗಳನ್ನು ಮೇಯಿಸಿಕೊಂಡು ಬರುತ್ತೇನೆಂದು ಹೇಳಿ ಹೋಗಿರುತ್ತಾನೆ. ಹತ್ತಳ್ಳ ಹೈನಳ್ಳಿ ಎಂಬ ಭೂಮಿಯಲ್ಲಿ ಆಕಳುಗಳನ್ನು ಮೇಯಿಸುತ್ತ ಬೋರಿನದಿ, ಭೀಮಾನದಿ ಕೂಡುವ ಸಂಗಮನಾಥ ಮುರಿಯೊಳಗೆ ಬಂದು, ಆಕಳುಗಳಿಗೆ ನೀರು ಕುಡಿಸಿ, ಮೂರು ಕಣ್ಣಿನ ಹುತ್ತಿಗೆ ತಲೆ ಕೊಟ್ಟು ಮಲಗಿರುತ್ತಾನೆ. ಆಗ ಬೇಡರೆಲ್ಲ ಕೂಡಿ ಬಂದು ಆಕಳುಗಳನ್ನು ಹಿಡಿಯಲು ಪ್ರಾರಂಭಿಸಿದಾಗ ಆಕಳುಗಳ ಚೀರಾಟದ ಶಬ್ಧ ಕೇಳಿ ತುಕ್ಕಪ್ಪರಾಯನಿಗೆ ಎಚ್ಚರವಾಗುತ್ತದೆ. ಆಗ ತುಕ್ಕಪ್ಪರಾಯನಿಗೆ ಸಿಟ್ಟು ಬಂದು ಕಿಡಿಗಣ್ಣುಗಳಲ್ಲಿ ಬೆಂಕಿ ತೂರುವಂತೆ ಬಂದು, ಈರಗಾಲ ಹಚ್ಚಿ ಬಾಣ ಬಿಡಲಿಕ್ಕೆ ಪ್ರಾರಂಭ ಮಾಡುತ್ತಾನೆ. ಅಷ್ಟು ಬಾಣಗಳು ಹುಸಿ ಹೋಗುತ್ತವೆ. ಒಂದೇ ಒಂದು ಬಾಣ ಉಳಿದಿರುತ್ತದೆ. ಇದು ಹುಸಿ ಹೋದ್ರೆ, ಆ ಕೆಟ್ಟ ಬ್ಯಾಡರು ನನ್ನ ಮುಟ್ಟಿ ಪ್ರಾಣ ತೆಗೆದುಕೊಳ್ಳುತ್ತಾರೆಂದು ತಿಳಿದು, ಆ ಬಾಣದಿಂದ ತನ್ನ ಎದೆಗೆ ಹೊಡೆದುಕೊಂಡು ಬೀಳುತ್ತಾನೆ. ಆಕಳುಗಳ ಹಿಂಡಿನಲ್ಲಿದ್ದ ಶಿವನ ಸಲಗದ ಗೂಳಿ ಓಡಿ ಹಟ್ಟಿಗೆ ಬರುತ್ತದೆ. ಮೈಯಲ್ಲ ರಕ್ತವಾಗಿರುತ್ತದೆ. ಅದನ್ನು ನೋಡಿದ ಕಣ್ಣವ್ವ ನಮ್ಮ ಭಾವನವರಿಗೆ ಏನೋ ಆಗಿದೆ ಎಂದು ಅಳುತ್ತಾಳೆ. ಸೋಮರಾಯ ಎದ್ದು ತನ್ನ ಜಡೆಯನ್ನು ಜಾಡಿಸುತ್ತಾನೆ. ಜಡೆಯಿಂದ ಮೂರು ಹನಿ ರಕ್ತ ಬೀಳುತ್ತದೆ. ಏನೋ ದೊಡ್ಡ ಅನಾಹುತ ನಡೆದಿದೆಯೆಂದು ತಿಳಿದು, ಶಿವನ ಸಲಗದ ಗೂಳಿ ಕರೆದುಕೊಂಡು ಸಂಗಮನಾಥ ಮುರಿಗೆ ಬರುತ್ತಾನೆ. ಅಣ್ಣನ ಸ್ಥಿತಿ ಕಂಡು ಮರಗುತ್ತಾನೆ. ಆಗ ತುಕ್ಕಪ್ಪರಾಯ ಸೋಮರಾಯನಿಗೆ ನೀನು ನಿಜವಾಗಿ ನನ್ನ ತಮ್ಮ ಆಗಿದ್ರೆ ಆ ಏಳ್ನೂರು ಆಕಳುಗಳನ್ನ ನನ್ನ ಮುಂದೆ ತಂದು ನಿಲ್ಲಿಸು ಎಂದಾಗ ಸೋಮರಾಯ ಚಡಚಣ ಎಂಬ ಪಟ್ಟಣದ ಪ್ಯಾಟಿ ಕೋಟೆಗೆ ಬಂದು ದುಃಖದ ಕೊಳಲನ್ನು ಊದುತ, ದುಃಖದ ರಾಗವನ್ನು ನುಡಿಸಿದಾಗ, ಎಲ್ಲ   ಆಕಳುಗಳು ಓಡಿ ಬರುತ್ತಾವೆ. ತುಕ್ಕಪ್ಪರಾಯ ಸಮಾಧಿ ಮಾಡಿ ಹಿಂತಿರುಗಿ ನೋಡಿದಾಗ ತುಕ್ಕಪ್ಪನ ಸಮಾಧಿಯಲ್ಲಿ ಲಿಂಗ ಕಾಣುತ್ತದೆ. ಲಿಂಗಕ್ಕೆ ವಿಭೂತಿ, ತಲೆಗೆ ಇಕ್ಕೇರಿ, ಕೊರಳಲ್ಲಿ ರುದ್ರಾಕ್ಷಿ ನೋಡಿ ಸೋಮರಾಯ ಧನ್ಯ ಧನ್ಯ ಅಂತ ನಮಸ್ಕಾರ ಮಾಡುತ್ತಾನೆ. ಸೋನಾರ ಸಿದ್ಧರು ಅಲ್ಲಿಗೆ ಬಂದು ಬಾರಾಮತಿಯಲ್ಲಿ ಅಮೃತಬಾಯಿ ಪ್ರಾಣಬಿಟ್ಟಿರುವುದನ್ನು ತಿಳಿಸುತ್ತಾರೆ. ಸೋಮರಾಯ ಮನದಲ್ಲಿ ದುಃಖಿಸುತ್ತಾ ಮಕ್ಕಳನ್ನು ಕರೆದುಕೊಂಡು ಆ ಸ್ಥಳ ಬಿಟ್ಟು ಭಂಡಾರ ಕೌಟಿ, ಇಚ್ಚರ, ಡೋಣಗೈ ಮೇಳಿಂದ ಹಾಯ್ದು ಸೊಲ್ಲಾಪುರಕ್ಕೆ ಬಂದು ವಸ್ತಿ ಮಾಡುತ್ತಾನೆ.

ಸೊಲ್ಲಾಪುರದಿಂದ ಬೋರಮಣಿ, ಬಾಲಗುಬ್ಬಿ, ಬಂಗಾರ ಕಿಣಿಗೆ, ನಿಟ್ಟೂರ, ನಿಲಂಗ, ಗಂಗಿನಾಡ ಗೌರಿನಾಡ, ಶಾಲಬಿದರಿ, ಶಾಡಬಾಬಾನ ಗುಡ್ಡದಲ್ಲಿ ಹಾಯ್ದು, ಜಾತ ಜೋತ ಜಕ್ಕಪ್ಪ ಮಾಳಪ್ಪನಿಗೆ ಗುರುಗಳ ಮೂಲಕ ಅನೇಕ ವಿದ್ಯೆಗಳನ್ನು ಕಲಿಸಿ, ಕವುಲ ಬಂಗಾರದಲ್ಲಿ ಹೋಗಿ, ಜಯಪಾಲನ ಜೊತೆ ಆಟವಾಡಿ ಜಯಪಾಲನನ್ನು ಸೋಲಿಸುತ್ತಾರೆ. ಅಲ್ಲಿಂದ ಶಾಡಬಾಬಾನ ಗುಡ್ಡಕ್ಕೆ ಬಂದು ಸೋಮರಾಯನ ಜೊತೆ ಇರುತ್ತಾರೆ. ಅರಬ ದೇಶದಲ್ಲಿ ಹರಣಪುರ ಎಂಬ ಪಟ್ಟಣಕಟ್ಟಿ, ಹರನ ಬಗ್ಗೆ ಪ್ರಚಾರ ಮಾಡಿ, ಕಮಟಾಣೆ ಎಂಬ ಕೆರೆ ಒಡೆದು, ಅಲ್ಲಿಯ ಜನರಿಗೆ ನೀರನ್ನು ಕೊಟ್ಟು, ರಾಜ್ಯ ಬಿಟ್ಟು ಗುರುಮಾರ್ಗ ಹಿಡಿಯಬೇಕೆಂದು ಮನಸ್ಸು ಮಾಡಿ, ತಂದೆಯ ಸಮಾಧಿ ಇರುವ ಉಂಬ್ಳೆ ಠಾಣೆ ಕಡೆ ಬರುತ್ತಾರೆ.

ಜಕ್ಕಪ್ಪ ಮಾಳಪ್ಪ ತಂದೆಯ ವಚನದಂತೆ ಏಳನೂರು ಜನ ಬ್ಯಾಡರ ತಲೆಯನ್ನು ಕಡಿಯುವುದಕ್ಕಾಗಿ ತಂದಿರುತ್ತಾರೆ. ಇವರಲ್ಲಿ ಇಪ್ಪತ್ತಾನಾಲ್ಕು ಸಾವಿರ ಜನರ ದಂಡು ಇರುತ್ತದೆ. ಆ ದಂಡು ತೆಗೆದುಕೊಂಡು ಹೋಗಿ ಬ್ಯಾಡರ ಬೆನ್ನ ಹತ್ತಿ, ಗಜೇಂದ್ರಗಡ, ಅಮ್ಮಿನಗಡ, ಪನಾಳಗಡ ತಿರುಗುತ್ತಾ ಮಂಗ್ಯಾನಹಟ್ಟಿಗಿ ಬಂದು (ಮಂಗ್ಯಾನಹಟ್ಟಿ-ಮಂಗಳವೇಡ) ಎಲ್ಲ ಬ್ಯಾಡರನ್ನು ಹಿಡಿದು ಸಾಲು ದಾವಣಿ ಕಟ್ಟಿ, ಅವರ ರುಂಡಗಳನ್ನು ಕೊಯ್ದು, ತಂದೆಯ ಸಮಾಧಿಗೆ ತರುತ್ತಾರೆ. ಉಮ್ರಜದಲ್ಲಿರುವ ತಂದೆಯ ಗುಡಿಯ ಮುಂದೆ ತಗ್ಗು ತೆಗೆದು, ಅದರಲ್ಲಿ ಏಳುನೂರು ಬೇಡರ ರುಂಡಗಳನ್ನು ಹಾಕಿ, ಅದರ ಮೇಲೆ ಚಕ್ರಗಟ್ಟಿ ಕಟ್ಟುತ್ತಾರೆ. ಅದಕ್ಕೆ ರುದ್ರಗಟ್ಟಿ ಎಂದು ಹೆಸರಿಟ್ಟು, ಅಲ್ಲಿ ಹೇಳ್ಕಿ ಮಾಡಿ ಮಾಳಿಂಗರಾಯ ಮುಂದೆ ತನ್ನ ಗುರು ಬೀರಲಿಂಗಯ್ಯನ ಜೊತೆಗೆ ಹೋಗುತ್ತಾನೆ. ಜಕ್ಕಪ್ಪ ಬರುಮಲಿಂಗನ ಜೊತೆ ಹೋಗುತ್ತಾನೆ. ಜಕ್ಕಪ್ಪರಾಯ ತನ್ನ ಸೋದರ ಮಾವನ ಮಗಳಾದ ಬಾಕಾಬಾಯಿಯನ್ನು ಲಗ್ನ ಮಾಡಿಕೊಳ್ಳುತ್ತಾನೆ.

ಜಕ್ಕಪ್ಪರಾಯ ಏಣಗಿ ಮಠದಲ್ಲಿ ಉಳಿದುಕೊಳ್ಳುತ್ತಾನೆ. ಮಾಳಿಂಗರಾಯನ ಮೊದಲನೆಯ ಪತ್ನಿ ತಾಂಬಾಗೌಡನ ಮಗಳು ಲಕ್ಷ್ಮಿ. ಇವಳು ತಾಂಬಾದಲ್ಲಿ ಐಕ್ಯವಾಗುತ್ತಾಳೆ. ನಂತರ ಈರವ್ವಶರಣಿಯನ್ನು ಮದುವೆಯಾಗುತ್ತಾನೆ. ಇವಳ ಹೊಟ್ಟೆಯಲ್ಲಿ ರೆಬ್ಬರಾಯ, ಬೀರ ಮುತ್ಯ, ಕಣ್ಣಮುತ್ಯಾ ಮತ್ತು ಸೋಮರಾಯರು ಜನಿಸುತ್ತಾರೆ. ಈ ನಾಲ್ಕು ಜನರಿಂದ ಮುದ್ದುಗೌಡಪ್ಪ, ಕೆಂಚಮಾಳಪ್ಪ, ರೂಪಾಜಿ, ಕೆಜೆಣಕಪ್ಪು, ಗೌಡಪ್ಪ, ಕೂರಲೆ ಬೀರುಮುತ್ಯಾ, ಬ್ರಹ್ಮಚಾರಿ ಬರಗಾಲಿಸಿದ್ಧ ಜನಿಸಿದರು. ಮಾಳಿಂಗರಾಯ ಅನೇಕ ಪ್ರದೇಶಗಳಲ್ಲಿ ತಿರುಗಾಡಿ, ಪವಾಡಗಳನ್ನು ಮಾಡಿ ಕೊನೆಗೆ ಜತ್ತಿ ನಾರಾಯಣಪುರ ಅಂದರೆ ಈಗಿನ ಹುಲಜಂತಿಯಲ್ಲಿ ಸಮಾಧಿ ಸೇರಿಕೊಳ್ಳುತ್ತಾನೆ.