ಜಕ್ಕಣ ತಮ್ಮಾ ಮಾಳಣ್ಣಾs
ಸತ್ಯ ಧರಮರs
ಅವರ ಮನಿತಾನಾs  || ಜಕ್ಕಣ ತಮ್ಮಾ ….. . . . ||

ಸತ್ಯ ಧರಮರ
ಸಿದ್ಧಾಟ್ಗಿ ನುಡಿಗಳ
ಶಾಂತ ಕೇಳರಿ ಸರ್ವ ಜನಾs

ಬಾರಾಮತಿಗಳ ಹುಟ್ಟಿದ ಸ್ಥಾನಾs
ತೇರಾಮತಿಗಳ ಬೆಳದ ಠಿಕಾಣಾss  || ಬಾರಮತಿಗಳ ….. . . . ||

ಅಣ್ಣ ತಮ್ಮರs
ಅವತಾರ ಸ್ಥಾನಾs
ಅದು ಹೆಚ್ಚಿಂದ
ಪುಣ್ಯ ಠಿಕಾಣಾss || ಅಣ್ಣ ತಮ್ಮರs ….. . . . ||

ಪುಣ್ಯವಂತರು ಹುಟ್ಟಿ ಬಂದಾರಾs
ಮರುತ್ಯಕ ಮಿಗಿಲವರೇನs
ಐದು ವರುಷದವ ಜಕ್ಕಣ್ಣs
ಮೂರು ವರುಷದವ
ಇದ್ದೊ ಮಾಳಣ್ಣಾs
ತುಕ್ಕಪ್ಪರಾಯಂದು ಅನಿಸಿ ಸಂತಾನಾs
ಜಗ ಉದ್ಧಾರ ಕತೃ ಅವರೇನಾs

ಜಾತ ಜೋತಿ ಜಕ್ಕಪ್ಪ ಮಾಳಪ್ಪss
ಜಗ ವಿಖ್ಯಾತರಾದ್ರು ಅವರೇನಾs
ಹಳದಿ ಹಸರs
ನಿಶಾನಿ ಕೂನಾs
ಕತ್ತಿ ಡಾಲ
ಕೈಯಾಗ ಹಿಡಿದಾರೇನಾs
ದುಷ್ಟ ಮಂದಿ
ಚಂಡ ಕಡದಾರೆನಾs
ಸಜ್ಜನ ಜನರನು
ಮಾಡಿ ರಕ್ಷೇನಾs

ಹರನಕಿಂತ ಗುರುs
ಶ್ರೇಷ್ಟಂದ ಗುರುವಿನ
ಕೂಡಿಕೊಂಡ್ರು ಅವರೇನಾs
ಗುರು ಭಕ್ತಿಯ ಮಾಡಿ ಸಂಪೂರ್ಣಾs
ಭವ ಬಾದಿ ಬಿಡಸಿ ಎಲ್ಲಾರ್ನs
ಉದ್ಧಾರ ಮಾಡ್ಯಾರ
ಸರ್ವ ಜನಾs

ಸತ್ತ ಜೀವಿಯ
ಪಡಿಸ್ಯಾರಾ ಪ್ರಾಣಾs
ಹಾಲಮತಕ ಮೂಲ
ಒಡೆಯರ ಅನಿಸಿs
ಏರಿಸ್ಯಾರ ಕೋರಿ ಮೀಸಿ ಏನಾs
ದೇಶಕ ಹುಲಜಂತಿ ವಾಯೇಣಾs
ಅಡಿವೆಪ್ಪ ಮಾರಾಯರ ರಚನಾs
ಸುತ್ತಿ ಸಾರತೈತಿ ನೋಡುವಾ ಏನಾs
ಹಗಲ ರಾತರಿ
ಮಾಳಪ್ಪನ ಧ್ಯಾನಾs

* * *

ಕಂದ ಹುಡಗರು
ಬಂದ ಹಾಡತೇವುs
ದೈವ ಕೂಡರಿ ದೇವರೇನಾs
ಹಿರಿಯರಿಲ್ಲದ ಮನಿತನ
ಅಲ್ಲ ನೋಡು
ಗುರುವ ಇಲ್ಲದ
ಮಠಾ ಸುಳ್ಳೋs
ಗುರುವಿನ ಹೊರತು
ದಾರಿ ಸಿಗುವುದಿಲ್ಲೊ ಮಳ್ಳಾs
ಗುರು ಮಾರ್ಗ ಮರತ್ಯಕs
ಬೆಳಿಯಲೆಂದಾನ ಭವಕs

ಜಂಬೂನೀಲ ಜಕ್ಕಪ್ಪ ಸರಳs
ಅರಸೂತ್ಗಿ ಜಕ್ಕಪ್ಪನ
ಭಕ್ತಿಗಿ ಒಲೊತೋs
ಅನಿಸಿಕೊಂಡ ಅವನು ಬಹಳಾs
ಅಮೃತಬಾಯಿ ಮಲಿಹಾಲ
ಸವಸ್ಯಾನೋ ಸಳ ಸಳs
ಸಣ್ಣ ತಮ್ಮ ಮಾಳಪ್ನs
ಅಣ್ಣನಾಗಿ ಮೆರದಾನಾs

ಜಂಭೂ ದ್ವೀಪ ಅನ್ನೂ ಸ್ಥಳಕs
ಹುಣವಿ ಚಂದ್ರನಂಗ
ಜಕಪ್ಪ ಬೆಳದಾನೋs
ದಿವ್ಸ ಆಗಲಿಲ್ಲೊ ಬಹಳಾs
ಆ ಮೇಲೆ ಮಾಳಪ್ಪ
ಹುಟ್ಟಿ ಬಂದ ಜವಳಾs
ಎರಡು ಮೂರು ವರ್ಷದ
ಅಣ್ಣ ತಮ್ಮರವರುs
ಮರತ್ಯಕ ಹೊಳದಾರs
ಥಳ ಥಳಾss

ಏಳಿ ತೆಲಿ ಗುರುವs
ಸೋನಾರ ಸಿದ್ಧ ಇದ್ದೊs
ಸೋನಾರಿ ಗ್ರಾಮ
ಅವ್ನ ಸ್ಥಳಾs
ಸೋನಾರಿ ಬಿಟ್ಟು
ಬಂದ್ರು ಗುರುಗಳಾs
ಜಾತ ಜೋತಿ
ಜಕಪ್ಪ ಮಾಳಪ ಅಲ್ಲಿ
ಆಟಾ ಆಡ್ಯಾರೋs
ಒಳೆ ನಿವುಳಾs

ಗುರುತ ಕೊಡದ ಗುರುವ
ಸಾಗಿ ನಡದಾನೋs
ಹುಡಗರ ಬಿಟ್ಟು
ಹೊಂಟ ಹೋದಾs
ಜಕಪ್ಪ ಕಂಡು ಹಿಡಿದ ಗುರಗಳಾs
ಅಣ್ಣ ತಮ್ಮಾ ಆಟ ಬಿಟ್ಟು
ಗುರುಪಾದಕ ಹಣೆ ಇಟ್ಟುs
ವರಗಳ ಕೊಡಬೇಕಂದವರಾs
ಅವತಾರ ಪುರುಷರ ಕಂಡು
ಆಶೀರ್ವಾದ ಮಾಡ್ಯಾನಾs
ಮುಂದಿನ ಸೂಚ ಕಂಡು ಗುರುಗಳಾs
ನಿಮ್ಮ ಕೀರ್ತಿ ಮರೆತ್ಯಕ
ಹೊಳಿಲೆಂದ ಥಳ ಥಳಾs

ಹಾಲಮತಕ ಒಡಿಯರಾಗಿs
ಮಾನವರಲ್ಲಿ ಮೆರಿರೆಂದು
ಮರ್ತ್ಯದಲ್ಲಿ ಝುಳ ಝಳಾs

ಆಶೀರ್ವಾದ ಮಾಡ್ಯಾನೋs
ಮಾಯಾಗಿ ಹೋಗ್ಯಾನೋs
ಬಾರಾಮತಿ ಬಿಟ್ಟು ತಳಾs
ಅಡಿವೆಪ್ಪ ಮಾರಾಯರು ತಿಳಿಸ್ಯಾರಾs
ಮನಸ್ಸಿನ ಮೈಲಿಗಿ ತಗಿದುs
ಹಾಲಮತ ಬೆಳಸಂದಾರಾs
ಹಾದಿ ಹಿಡದು ಹಾಡೆಂದ್ರು ಸರಳಾs

ಜಕ್ಕಪ್ಪ ಮಾಳಪ್ಪಂದು
ಕೇಳರಿ ಕೌತುಕs
ಅವರು ಹುಟ್ಟಿದ
ಬಾರಾಮತಿ
ಪಟ್ಟಣ ಸ್ಥಳಕs
ಜನಿಸಿ ಬಂದ್ರು ಅವರು
ತೋರ್ಯಾರ ಬೆಳಕs
ಬಾರಾಮತಿ ಪಟ್ಟಣ
ಹುಟ್ಟಿದ ಭಾಗಕs
ನಿತ್ಯಲಿಂಗ ಪೂಜೆ
ಮಾಡ್ತಿದ್ರೊ ತಳಕs
ಹೋಗಿ ಬೀಳ್ತಿದ್ರೊ
ತಂದಿ ಪಾದಕs

ಅಣ್ಣ ತಮ್ಮರು
ಅರಮನಿ ತಳಕs
ಬಾಲ ಲೀಲೆಗಳ
ತೋರಸ್ಯಾರ ಠಳಕs
ಮಾಳಪ್ಪ ಹೇಳ್ತಾನ
ಅಣ್ಣ ಜಕ್ಕಪ್ಪನ ಬಲ್ಯಕs
ಬರಗಾಲ ಬೀಳೂದು ಅಣ್ಣಾs
ಬಾರಾಮತಿ ಭಾಗಕs

ತಮ್ಮನ ಮಾತ ಕೇಳಿ
ಜಕ್ಕಪ್ಪನ ಮನಕs
ಹೋಗಿ ಹೇಳತಾನ
ತಾಯಂದ್ಯಾರ ಹಂತೇಕs
ಹುಸಿ ಇಲ್ಲದ ನುಡೀs
ಮಕ್ಕಳ ಬಲ್ಯೆಕs
ಬರಗಾಲ ಬೀಳೋದು ಅಂದ್ರುs
ನಮ್ಮ ಭಾಗಕs

ಕೆಟ್ಟ ಅನಸಿತೋs
ತಾಯಂದ್ಯಾರ ಮನಕs
ಚಿಂತೆಯಲ್ಲಿ ಕಾಲಕಳೀತಾರs
ಇದ್ದ ಸ್ಥಳಕs
ಕೆಟ್ಟ ಬರಗಾಲ ಬಿತ್ತೋs
ಅದೇ ಬಾಗಕs
ಜನರ ಗೋಳ ಕೇಳಿ
ಮರಗ್ಯಾರ ಮನಕs

ತುಕ್ಕಪ್ಪ ಹೇಳ್ತಾನ
ತಮ್ಮ ಸೋಮರಾಯನ ಬಲ್ಲೇಕs
ಚಿಂತೆ ತಮ್ಮ ಈಗ
ಮಾಡುವುದು ಯಾತಕs
ಗುರುವಿನ ಕಿಲ್ಲಾರs
ಈಗ ನಮ್ಮಂತೇಕs
ಮರಗತಾವು ನೊಡು ತಮ್ಮs
ಹೊಟ್ಟಿಗಿ ಇಲ್ಲದಕs

ಅಷ್ಟ ಐಶ್ವರ್ಯು
ಬೇಕೋ ಯಾತಕs
ಗುರುಸೇವೆ ಒಂದು
ಇದ್ದರ ಸಾಕs

ಕಿಲ್ಲಾರಿ ಸಲುವಾಗಿ ನಾವು
ಊರ ಬಿಡಬೇಕs
ತುಕ್ಕಪ್ಪ ಹೇಳ್ತಾನs
ಸೋಮರಾಯನ ಬಲ್ಲೇಕs

ನಿಷ್ಠುರಾಗಿ ಹೊಂಟರಾs
ಕಿಲ್ಲಾರ ಮೇಸೂದಕs
ಅರಸಕಿ ಗೌಡಕೀs
ಬಿಟ್ಟರೊ ಆ ಕ್ಷಣಕs
ಅಮೃತಬಾಯಿಗಿ ಹೇಳಿ
ಹೋಗ್ತಾರ ಮೆಲ್ಲಕs

ಹೆಂತ ತ್ಯಾಗ ಇತ್ತೋs
ಇವುರ ಹಂತ್ಯೇಕs
ಈ ಸಂದ ಇಲ್ಲಿಗಿ
ಮುಗಸೇವೂ ಟಳಕs
ಅಡಿವೆಪ್ಪ ಮಾರಾಯ್ರು
ತಿಳಿಸಿ ಕೌತುಕs

ಸತ್ಯ ಧರಮರ ನುಡಿಗೆ
ಬೀರ್ಯಾರ ಬೆಳಕs
ನರಿ ಹೊಕ್ಕಾಂಗ ನೋಡೋs
ಕಬ್ಬಿನ ಪಡಕs

* * *

ಭಕ್ತಿಬಾವ ಇಟ್ಟು ದುಡಿ
ಭಗವಂತನ ಸಲುವಾಗಿ ದುಡೀs || ಭಕ್ತಿ ….. . . . ||

ಜಕಪ್ಪ ಮಾಳಪ್ಪs
ಅರಮನಿ ಒಳಗs
ಗವಿಯಾಗ ಇದ್ದಾರs
ಅವ್ರ ಜೋಡೀss
ತಾಯಿ ಕಣಬಾಯಿ
ಹೆಡಗಿ ಹೊತಗೊಂಡುs
ಹೊಂಟ ನಡದಾಳ ದೇಶದಡೀss
ಅಮೃತಬಾಯಿ ಕಳವಿಕ ಮಾಡೀss
ಬರಬೇಕೆಂದ್ಳೋ ಮನಿಕಡೀss

ಅಕ್ಕ ತಂಗ್ಯಾರುs
ಕಣ್ಣೀರ ಸುರಸುತs
ಊರ ಹೊರಗs
ಪ್ಲ್ಯಾನ ಮಾಡಿs
ಕಲ್ಲಿನ ಬಾಗಿಲಕs
ಕಲ್ಲೀನ ಕೀಲಿ ಹಾಕೀss
ಮಕ್ಕಳಿಗಿ ಬಂದು ಬಸ್ತ ಮಾಡೀss

ಅರುವುಳ್ಳ ಮಾಳಪ್ಪ
ಜಕ್ಕಪ್ಪಗ ಹೇಳತಾನೋs
ತಾಯಿ ಹೊಂಟಾಳೋ ದೇಶದದೀss
ಅವುಸರದಿಂದ ಎದ್ದಲ್ಲಿ ಬಂದಾs
ಬಾಗಿಲ ಮುಚ್ಚಿದ್ದ ನೋಡಿs
ಪರಬ್ರಹ್ಮ ಒಬ್ಬಾತ
ಎರಡಾಗಿ ಬಂದಿದ್ದೋss

ಜಕಪ್ಪ ಮಾಳಪ್ಪs
ಬಾಗಿಲು ಮುಚ್ಚಿದ್ದು ನೋಡಿ
ಉರಿದು ಬೆಂಕಿ ಕಿಡಿಯಾಗಿs
ನೋಡ್ಯಾರ ಆಗs

ಹಸ್ತ ಎಳೆದಾರs
ಬಾಗಿಲ ನೋಡೀs
ಕಲ್ಲೀನ ಬೀಗs
ಕಡದ ಬಿದ್ದಾವ ಅಲ್ಲೀs
ಬಾಗೀಲ ತೆರದಾರ ಜೋಡೀs

ಓಡುತ ಓಡುತs
ಓಣ್ಯಾಂದ ಹಾಯ್ದುs
ಇಬ್ಬರು ತಾಯಿಂದ್ಯಾರ್ನ ನೋಡಿs
ನಡಕ ಹೋಗಿ ನಿಂತಾರೋs

ಮಕ್ಕಳ ಮಾರಿ ಅವ್ವ ನೋಡೀs
ಹಡದಾಕೀ ನಾನೆಂದುs
ಪಡದಾಕೀ ಕಣ್ಣವ್ವೆಂದುs
ಮನಸ್ಸಿನ್ಯಾಗ ಅಕ್ಕ ಮಾತಾಡೀs

ಪಡದಕೀ ನಾನೆಂದು
ಹಡದಕೀ ಅಮೃತಬಾಯಿಯಂದುs
ಕಣ್ಣವ್ವ ಮನಕ ಮಾತಾಡೀs

ಅಳಕೋತ ಕರಕೋತs
ಹೋಗಿ ಬರತೇನೆಂದುs
ಕಣ್ಣವ್ವ ನಡದಾಳs
ಗೋವುಗಳ ಕಡೀs

ಹೋಗಿ ಬಾರೇs
ತಂಗಿ ಎಂದುs
ಕಣ್ಣೀರ ಸುರಸುತs
ಅಮೃತಬಾಯಿ ಬಂದಾಳೋs
ಮನಿ ಕಡೀs

ಇಬ್ಬರು ಮಕ್ಕಳುs
ನಡಕ ನಿಂತಾರವರುs
ಇಬ್ಬರು ಕೂಡೀs
ವಿಚಾರ ಮಾಡೀs
ತಾಯಿ ಕಣ್ಣವನs
ಬೆನ್ನ ಹತ್ಯಾರೋs
ತಾಯಿ ಮಕ್ಕಳಿಗಿs
ಹೊಳ್ಳಿ ನೋಡೀs

ಹರುಷದಿಂದ ಕಣ್ಣವ್ವs
ಮಕ್ಕಳಿಗೆ ತೆಕ್ಕಿ ಹಾಯ್ದು
ಪ್ರೀತೀಲಿ ತಾನೂ ಮಾತಾಡೀs
ಅವತಾರ ಪುರುಷರು ನೀವೂs
ಕಲ್ಲೀನ ಬಾಗಿಲ ತೆರೆದು
ಬಂದಿರೆಪ್ಪಾ ನನಕಡೀs

ಎಷ್ಟು ಜಲ್ಮದ ಪುಣ್ಯ
ನನ ಬಳಿ ಐತೆಂದೋs
ಕಣ್ಣವ್ವ ಮನಕ ತಾ ನೋಡೀs
ಇವರಿಂದ ಎನ್ನ ಜನಮs
ಆಗೋದು ಪಾವನಾs
ಮನಸಿಗಿ ಆನಂದ ಮೂಡೀs

ಅವಸರದಿಂದs
ಕಿಲ್ಲಾರ ಕಡೆ ಬಂದs
ಅಣ್ಣ ತಮ್ಮರ
ಮಕ್ಕಳಿಗಿ ನೋಡೀs
ಅಲ್ಲೆಲ್ಲಿ ವಸ್ತಿಗಳಿಯುತ್ತ ಬಂದಾರೋs
ಅವರು ಗ್ರಾಮ
ನಾಥೇ ಪೂತೆ ಕಡೀs
ಅಡಿವೆಪ್ಪ ಮಾರಾಯ್ರು
ಜಗವೆಲ್ಲ ತಿಳಿಸ್ಯಾರs
ಶರಣರ ಕತೀ ಭಾಗ ಹಾಡೀs
ಮಂಗಲವಾಡ ತಾಲೂಕ ಪೈಕಿ
ಹಾಲಜಂತಿ ಊರಾs
ಜಗದಾಗ ಗ್ರಾಮ ಕೊಂಡಾಡೀs

* * *