ದೈವ ದೇವರಂಗ ಬಂದೋs
ಹಾಡಿ ಹೇಳತೇವೋ
ದೈವದ ಮುಂದೋss
ನಾ ದೈವದ ಕೂಸೇಳಂದೋss
ತಪ್ಪಾದ್ರೆ ಮಾಫಿ ಮಾಡ್ರೆಂದೋss || ನಾ ದೈವದ ….. . . . ||

ಆದಿ ಕಾಲದಿಂದ ತಾನು ಬಂದೋss
ಅವತಾರ ತಾಳಿದ ಪರಿಲಿಂದೋss || ಆದಿಕಾಲದಿಂದ ….. . . . ||

ಮಹಿಮಾ ಪುರುಷ
ಮಾಳಪ್ಪನ ಸಂದೋ
ಭವದಾಗ ಹುಟ್ಟಿ ಬೆಳದದೋss || ಮಹಿಮಾ ….. . . . ||

ಬಾರಾಮತಿಯಾಗ ಹುಟ್ಟಿ ಬಂದೋss
ತೇರಾಮತಿಯಾಗ ಬೆಳದಾನೊ ಕಂದೋss || ಬಾರಾಮತಿಯಾಗ ….. . . . ||

ನಾನಾ ತರದಲಿ
ಲೀಲಾ ಮಾಡ್ಯಾನಂದೋss
ಸತ್ತ ಪ್ರಾಣಾ ಪಡಿಸ್ಯಾನ ಸಂಗ್ಯಂದೋss  || ನಾನಾತರದಲಿ ….. . . . ||

ಹಿಪ್ಪಿ ಸಾರಂಗ ಗುಡ್ಡಕ ಬಂದೋss
ಗರಡಿ ಮನಿಯಾಗ ಇದ್ದಪ್ಪ ಕಂದೋss  || ಹಿಪ್ಪಿ ….. . . . ||

ತಂದಿ ತುಕ್ಕಪ್ಪಗ ಹೇಳತಾನೊ ಬಂದೋss
ಇಲ್ಲೇ ಗುರುವಿನ ಸ್ಥಾನಾಗೊದಂದೋss  || ತಂದಿ ….. . . . ||

ನುಡಿ ಕೇಳಿ ಆದ್ರೊ ಆನಂದೋss
ಹಾಲ ಎರದರೋ ಹುತ್ತಿಗಿ ಬಂದೋss  || ನುಡಿ ….. . . . ||

ಗುರು ಸೊನಾರ ಸಿದ್ಧನ ಸ್ಥಾನಂದೋss
ಹೆಸರಿಟ್ಟು ಬಂದರಪ್ಪಾ ಮುಂದೋss  || ಗುರು ….. . . . ||

ಕರಸುಂಡಿ ಸಿದ್ಧೋಬಾ ಅಲ್ಲಿಂದೋss
ಶೃತಿ ಸಾರತೈತಿ ನೋಡು ಗುರವಿಂದೋ  || ಕರಸುಂಡಿ ….. . . . ||

ಸಿದ್ಧ ಮಾಳಪ್ಪ ನಡದಾನೊ ಮುಂದೋss
ತಂದಿ ಹಿಂಬಾಲಿ ಬೆನ್ಹತ್ತಿ ಬಂದೋss || ಸಿದ್ಧ ….. . . . ||

ಜಕಪ್ಪ ಮಾಳಪ್ಪ ಅಲ್ಲಿಂದೋss
ಜಗ ಉದ್ಧಾರ ಮಾಡುತ ಮುಂದೋss || ಜಕ್ಕಪ್ಪ ….. . . . ||

ಮಹಿಮಾ ಶರಣ ಮಾಳನ್ಹೇಳಂದೋss
ಅನಿಸಿಕೊಂಡ ಮರತ್ಯಾಕ ಮಿಗಿಲಂದೋss || ಮಹಿಮಾ ….. . . . ||

ಇಲ್ಲಿಗಿ ಮುಗಸೇವಪ್ಪಾ ಈ ಸಂದೋss
ಕವಿ ಅಡಿವೆಪ್ನ ನುಡಿಗಳು ಚಂದೋss || ಇಲ್ಲಿಗಿ ….. . . . ||

ಹುಟ್ಟಿ ಬಂದೊಮ್ಮೆ ಹುಲಜಂತಿಗೆಂಡೋss
ಹೋಗಿ ಬಂದು ಉದ್ಧಾರಾಗ್ರೆಂದೋ || ಹುಟ್ಟಿ ….. . . .  ||

* * *

ಸುತ್ತ ಮುತ್ತಲಿನ ಮಾತs
ಜಾಣರು ಕೇಳ್ರಪ್ಪs
ಕುಳಿತಂತ ಪಂಡಿತರಾss
ಮರತ್ಯ ಲೋಕದಾಗ ಮಾಳಿಂಗರಾಯs
ಅನಿಸ್ಯಾನ ದೇವರss || ಮರತ್ಯ ….. . . . ||

ಐದು ವರುಷದವ
ಅಣ್ಣ ಜಕ್ಕಪ್ಪನs
ಹಿಂಬಾಲ ತಿರಗವರಾss
ಮೂರ ವರುಷದವ
ಮಾಳಿಂಗರಾಯ ಕಾಲಗಳದವರಾs

ತಂದಿ ಬೆನ್ಹತ್ತಿ
ಸಿದ್ಧ ಮಾಳಿಂಗರಾಯಾs
ಸಾಗಿ ನಡದವರಾss
ಕರಸುಂಡಿ ಗುಡ್ಡ ಬಿಟ್ಟವರಾss
ಕರಸುಂಡಿ ಗುಡ್ಡ ಬಿಟ್ಟು
ಮಾನ ನದಿ ಕೂಡಿ
ಸಾಗಿ ನಡದವರಾ  || ಕರಸುಂಡಿ ….. . . . ||

ಅಲ್ಲಲ್ಲಿ ಮುಕ್ಕಾಂ
ಮಾಡುತ ಮಾಳಪ್ಪs
ತಾವೇ ಬಂದವರಾss

ತಾಳೇವಾಡಿ ಎಂಬುವ ಗ್ರಾಮಾs
ಮುಂದ ಕಂಡವರಾss
ತಾಳೇವಾಡದಲ್ಲಿ ಸತ್ತs
ಪುರುಷನ ನೋಡಿದವರಾs
ಮಾಳಪ್ಪ ಪುರುಷನ ನೋಡವರಾss
ಸತ್ತ ಮುದುಕನ ಪ್ರಾಣ ತಾನುs
ಅಲ್ಲಿಯೇ ಕೊಟ್ಟವರಾ  || ಸತ್ತ ….. . . . ||

ಇದನು ಕಂಡು
ತಾಳೇವಾಡಿ ಗ್ರಾಮದs
ಜನರು ಅಂತಾರಾss
ಮರತ್ಯ ಲೋಕದಲ್ಲಿ
ಧನ್ಯ ಧನ್ಯ
ಇವ ಹೆಚ್ಚಿನ ಪುರುಷರಾss

ಮೂರು ವರುಷದ ಹುಡುಗs
ಮುಪ್ಪಾನ ಮುದಕಗs
ಪ್ರಾಣ ಕೊಟ್ಟವರಾss
ಆಹಾs ಪ್ರಾಣ ಕೊಟ್ಟವರಾss
ಹೆಚ್ಚಿನ ಮಾಳಪ್ಪ ಅಂತ ನಾಮೇs
ಭೂ ಘೋಷ ಮಾಡವರಾss
ಮಾಳಪ್ಪ ಮಾಳಪ್ಪ ಅಂತ
ಚಾಂಗಬಲ ನಾಮ ನುಡದವರಾs
ಏಳ್ನೂರ ಕಿಲ್ಲಾರ
ಹೊಡಕೊಂಡ ತಾಯ್ತಂದೀ
ಮುಂದೆ ನಡದವರಾss
ಅವರ ಬೆನ್ಹತ್ತಿ ಮಾಳಿಂಗರಾಯಾs
ಸಾಗಿನೇ ಬಂದವರಾs

ಮಾನಾ ನದಿಯ
ಭೀಮಾ ನದಿಯ
ಕೂಡಲ ಕಂಡವರಾss
ಭೀಮಾ ನದಿಯ
ದಡದಲ್ಲಿ ಮಾಳಣ್ಣs
ಸಾಗಿನಿ ನಡದವರಾss  || ಭೀಮಾ ….. . . . ||

ಅಲ್ಲಲ್ಲಿ ವಸ್ತಿ ಮಾಡುತ ಎಲ್ಲರುs
ಮುಂದಕ್ಕೆ ಬಂದವರಾss
ಉಂಬರ್ಜಿ ಎಂಬುದು
ಉಂಬ್ಳ್ಯಾನ ಹಟ್ಟಿಗೀss
ಮೆಟ್ಟ ಮಾಡವರಾss  || ಉಂಬರ್ಜಿ ….. . . . ||

ಐದು ವರುಷದ ಮಾಳಿಂಗರಾಯಾs
ವಯಸ್ಕ ಬಂದವರಾss
ಆಹಾs ವಯಸ್ಕ ಬಂದವರಾss
ಏಳು ವರುಷದವ ಜಕ್ಕಪ್ಪರಾಯಾs
ಕಾಲ ಕಳದವರಾss  || ಏಳು ….. . . . ||

ಅಣ್ಣ ತಮ್ಮರು ಕೂಡಿ
ಅನೇಕ ಲೀಲಾs
ಅಲ್ಲೇ ಮಾಡವರಾss
ಸಿದ್ಧ ಮಾಳಿಂಗರಾಯ್ನ
ಚರಿತೆ ಹೇಳತೇವು
ಕೇಳರಿ ಮಜಕೂರಾss

ಇಲ್ಲೀಗೆ ಒಂದs
ಸಂದ ಮುಗದೀತs
ಮುಂದ ಉಳದಿತೋs
ಕತಿ ಸಾರಾss
ಹಾಲಮತಕ ಮೇಲ
ಗದ್ದಗಿ ಹುಲಜಂತಿs
ಅಡಿವೆಪ್ಪ ಹೇಳ್ಯಾರಾss || ಹಾಲ ….. . . . ||

* * *

ಜಗವೆಲ್ಲ ಕೀರ್ತಿ ಬೆಳಿತೋs
ತೋಡಿಗಿ ತೋಡಿ ಹಾಡೀss
ಮಾಳಿಂಗರಾಯನ ಹಾಲಮತs
ಗ್ರಂಥವೆ ನೋಡೀs
ನಾಡ ತುಂಬ ಕವಿಗಳು
ಎಲ್ಲಾ ಪದಗಳ ಮಾಡೀs

* * *

ಜಕ್ಕಪ್ಪ ಮಾಳಪ್ಪ ಜೋಡೀs
ಬಾಲ ಲೀಲೆಗಳ ಮಾಡೀs
ಸಾಗಿ ಬಂದ್ರೋ ನಾಥೆಪೂತೇ ಕಡೀs
ನಾಥೇಪೂತೇ ಮ್ಯಾಲಿಂದ್ಹಾಯ್ದುs
ಕಂಡರು ಕರಸುಂಡೀs

ಗುಡ್ಡ ಗವ್ವಾರದಲ್ಲೀ ಕಾಲs
ಕಳೀತಾರ ಜೋಡೀs
ಸೋಮರಾಯ ತುಕ್ಕಪ್ಪರಾಯನs
ಹಿಂಬಾಲೆ ಹರದಾಡೀs

ಆರು ಏಳು ವರುಷದವರುs
ಉಂಬಳಿ ಠಾಣೆದ ಮ್ಯಾಲೆ ಅವರುs
ನಿತ್ಯ ಗುರುವಿನ ಧ್ಯಾನವರು ಮಾಡೀs

ಕಾಲಜಯಾ ನೀಲಜಯಾs
ಗಂಧರ್ವ ಇಬ್ಬರು ಕೂಡೀs
ಅಂತರದಿಂದ ಹೋಗತಿದ್ರೊs
ಹುಡುಗರೆಲ್ಲ ನೋಡೀs
ಅವರಲ್ಲಿ ತುಂಬಿ ತುಳಿಕಿತೋs
ಹಂಕಾರ ಮನಿ ಮಾಡೀs

ಮಾಯದ ತಮ್ಮಾ ಮಾಳಿಂಗರಾಯಗs
ತಿಳಿಸಿ ಕೊಟ್ಟಾನ ಜಕ್ಕರಾಯಾs
ಇಳಿದು ಬಂದ್ರೋ ಗಂಧರ್ವರುs
ಅಲ್ಲಿ ಜೋಡೀs

ಕಾಲ ಕಟಗಿ ಆಟಿನಲ್ಲೀs
ಹುಡುಗರು ಕೂಗ್ಯಾಡೀs
ಹುರ್ಯಾಳ ಹಾಕೀ ಓಡಿ ಹ್ವಾದ್ರೋs
ಗಂಧರ್ವರಿಗಿ ನೋಡೀs

ಜಕ್ಕಪ್ಪರಾಯ ಮಾಳಿಂಗರಾಯs
ನಿಂತಾರಪ್ಪಾ ಜೋಡೀs
ಜಾತ ಜೋತ ರೂಪ ಚಂದs
ಗಂಧರ್ವರಿಬ್ಬರು ನೋಡ್ಯಾರ ಬಂದೋs
ಧನ್ಯ ಧನ್ಯಂದು ಶರಣ ಅವರು ಮಾಡೀs

ಪರಬ್ರಹ್ಮನ ಸ್ವರೂಪ ಅವರುs
ಪ್ರತ್ಯಕ್ಷ ನೋಡೀs
ಜಕ್ಕಪ್ಪ ಮಾಳಪ್ಪ ಜ್ಯೋತಿ ರೂಪs
ತೋರಸ್ಯಾರ ಜೋಡೀs
ಗಂಧರ್ವರ ಗರವ ಹರಣ
ಇಬ್ಬರದಲ್ಲಿ ಮಾಡೀs
ಸಾಕ್ಷಾತ್‌ ಬ್ರಹ್ಮ ಇವರೇ ಎಂದುs
ಮತ್ತೊಮ್ಮೆ ಶರಣ ಮಾಡ್ಯಾರ ಬಂದುs

ಉದ್ಧರವಾಗಿ ಹೋದಾರಪ್ಪ ಜೋಡೀs
ಅಂತರ್ಲೆ ಬಂದು ಶರಣ ಮಾಡಿದೋs
ಜನರೆಲ್ಲ ನೋಡಿ ಸಾಕ್ಷಾತ್‌ ಬ್ರಹ್ಮ
ಇವರೇ ಎಂದೋ ಜನ ಮಾತಾಡೀs

ಕಣಮುಟ್ಟ ಕಂಡು ಹೊಗಳ್ಯಾರs
ಮಹಿಮಾ ಜಯಘೋಷ ಮಾಡೀs
ಒಂದೇ ಗಳಿಗ್ಯಾಗ ಉದ್ಧಾರ ಮಾಡೀs
ಕಳವ್ಯಾರಪ್ಪಾ ಗಂಧರ್ವರಿಗೀs
ಧನ್ಯ ಧನ್ಯಂತ ಎಲ್ಲಾರು ಕೊಂಡಾಡೀs

ಹುಲಜಂತಿ ಗ್ರಾಮದಾಗ
ಅಡಿವೆಪ್ಪ ಮಾರಾಯ್ರುs
ಪದಗಳ ಅವರು ಮಾಡೀs
ಜ್ಞಾನ ಅವತಾರ ಮಾಳಿಂಗರಾಯs
ಅವರ ಹಾಡಿಗಿ ಜೋಡೀs

ಕಂದ ಹುಡುಗರು ಹಾಡತೇವು ಕೂಗ್ಯಾಡೀs
ಹುಲಜಂತಿ ಹುಡುಗರು ಹಾಡತೇವು ಕೂಗ್ಯಾಡೀs
ಚಿತ್ತಿಟ್ಟ ಕೇಳರಿ ದೇವರ ನುಡೀs
ಮತ್ತೊಂದು ಸಂದಿಗಿ ಹೇಳತೇವ ಹಾಡೀs
ಮುಂದ ಉಳಿತೋ ಮಾಳಪ್ಪನ ನುಡೀs

* * *

ಶಾಂತ ಜನರು ಕುಂತ ಕೇಳರೆಪ್ಪಾs
ಹೇಳುವೆ ನಾ ನಿಮಗೋss
ಬಾರಾಮತಿ ಗೌಡರ ಕಿಲ್ಲಾರ ಹಿಂಡಾs
ಉಂಬಳೆ ಠಾಣ್ಯಾದ ಮ್ಯಾಗೋss || ಬಾರಾಮತಿ ….. . . . ||

ಕಿಲ್ಲಾರ ಹಟ್ಟಿ ಹಾಕ್ಯಾರ ಗಟ್ಟಿs
ಭೀಮಾನದಿ ದಡಿ ಮ್ಯಾಗೋs
ಐದೇಳು ವರುಷದವರು
ಜಕ್ಕಪ್ಪ ಮಾಳಪ್ಪs
ಹಾಲ ಹಟ್ಟಿ ಮ್ಯಾಗೋss || ಐದೇಳು ….. . . . ||

ತಂದಿ ತುಕ್ಕಪ್ಪರಾಯ ಕಿಲ್ಲಾರಿ ಕಾಯ್ತಿದ್ದೋs
ಅಡವಿ ಆರ್ಯಾಣದೊಳಗೋss
ಬಾರದ ಯಾಳಿಗಿ ನೀರೀಗಿ ಬಂದಾನs
ಸಂಗಮ್ನ ಮುರಿಯಾಗೋss || ಬಾರದ ….. . . . ||

ನೀರ ಕುಡಿಸಿ ಹೊಳ್ಳಿ ಬಂದನಾs
ಅರಸ ಭೀಮಾನದಿ ದಡಿಮ್ಯಾಗೋss
ಮೂರ ಕಣ್ಣಿನ ಹುತ್ತಿಗಿ ಮಲಗಿ ಬಿಟ್ಟನೋss
ಕೇಳರಿ ಯಾವಾಗೋss || ಮೂರ ಕಣ್ಣಿನ ….. . . . ||

ಕಳ್ಳರ ಕವುಟ್ಯಾಗs
ಏಳ್ನೂರು ಬ್ಯಾಡರು ಕಂಡ ಹಿಡದರಾಗೋss
ಅವರು ಕಂಡ ಹಿಡದರಾಗೋss
ಅಟ್ಟೂರು ಕೂಡಿ ಬಂದರು ಸಾಗೀss
ಸಂಗಮ್ನ ಮುರಿಯಾಗೋss || ಅಟ್ಟೂರು ….. . . . ||

* * *

ತುಕ್ಕಪ್ಪರಾಯನ ನೋಡೀss
ಅನಸ್ಯಾನು ಹಾಲ ಮತದ ಗಡೀs
ದೊಡ್ಡ ದೈವ ಕೂಡೀs
ಶಾಂತರಾಗಿ ಕೇಳಿರಪ್ಪ ಈ ನುಡೀs || ತುಕ್ಕಪ್ಪರಾಯನ ….. . . . ||

ಏಳ್ನೂರು ಬ್ಯಾಡರು ಸಾಗಿ ಬಂದರೋs
ಸಂಗಮ್ನ ಮುರಿ ನೋಡೀs
ಏಳ್ನೂರು ಕಿಲ್ಲಾರ್ಕ ಮುಸಕ ಹಾಕತಾರs
ಕೇಳರಿ ಅವಸರ ಮಾಡೀs
ಹುತ್ತೀಗಿ ತಾ ನೋಡಿ ತುಕ್ಕಪ್ಪರಾಯಾs
ಮನಿಗ್ಯಾನ ದೌಡ ಮಾಡೀs || ಹುತ್ತೀಗಿ ….. . . . ||

ತುಕ್ಕಪ್ಪರಾಯ ಎದ್ದ ನೋಡ್ತಾನ
ತುಕ್ಕಪ್ಪರಾಯ ತಾ ನೋಡ್ತಾನ ಅಲ್ಲೀs
ಕೇಳರಿ ಅವಸರ ಮಾಡೀs
ಈರಗಾಲ ಹೂಡಿ ತೀರ
ಚಿಮ್ಮಟ ಹಚ್ಚೀs
ಬಾಣ ಬಿಟ್ಟ ದೌಡ ಮಾಡೀs || ಈರಗಾಲ ….. . . . ||

ಕೇಳರಿ ಹೊಯ್ಕದ ನುಡಿs
ಅಷ್ಟು ಬಾಣ ಹುಸಿ ಹ್ವಾದಾವ ನೋಡೀs || ಕೇಳರಿ ….. . . . ||

ತುಕ್ಕಪ್ಪರಾಯ ಬಾಣ ಹೊಡಿಕೊಂಡ ಬಿದ್ದಾನೋs
ಬ್ಯಾಡರ ಸಂಗಟ ಯುದ್ಧ ಆಡೀs
ಶಿವನ ಸಲಗದ ಗೂಳೀs
ಕಣ್ಣೀರ ಸುರಸುತ
ಸೋಮರಾಯ್ನ ಕಡಿ ಬಂತೋs
ಓಡಿ ಓಡಿ ಓಡಿ ಓಡೀs
ಕಣ್ಣವ್ವ ಗೂಳಿಗೆ ನೋಡೀs
ಕಣ್ಣೀರ ಸುರಸ್ಯಾಳ ಬೋರ್ಯಾಡೀs  || ಕಣ್ಣವ್ವ ….. . . . ||

ಎದ್ದ ಸೋಮರಾಯ ಗೂಳಿಗಿ ನೋಡ್ತಾನೋs
ತನ್ನ ಮಂಡಿಯ ಜಡಿ ಹಿಂಡೀs
ಮೂರ ಹನಿ ರಗತಾs
ಜಡಿಯು ಕಾರಿದ ನೋಡೀs
ಘಾತೈತ ಮಾತಂದ ನೋಡಿ ನೋಡೀs
ಸಂಗಮ್ನ ಮುರಿ ಕಡೀs
ಸೋಮರಾಯ ಬಂದನಾ
ಅವಸರ ಮಾಡೀs  || ಸಂಗಮ್ನ ….. . . . ||

ಅಣ್ಣನ ನೋಡೀs
ಸೋಮರಾಯ ಅಳತಾನೋs
ಕಣ್ಣೀರ ತಗದಾನೋs
ದುಃಖ ಮಾಡತಾನೋs
ಬೋರ್ಯಾಡಿ ಅಳತಾನೋs
ದೇವರ್ಹೆಂತ ಮಾನಗೇಡಿs
ಆಡಿನ ಮಲಿ ಹಂಗs
ಜೋಡಿದ್ರು ಅಣತಮ್ರು
ಅಗಲೇವ ಇಂದೀಗೀs
ಜೋಡಿ ಜೋಡೀss || ಜೋಡಿದ್ರು ….. . . . ||

ಅಂಗೈ ಇತ್ತ ಕಡಿ ಮಾಡೀs
ಸೋಮರಾಯ ಮುಂಗೈ
ದಂಡೀಗಿ ಮಾಡೀs
ಅಣ್ಣನ ಹೊತಗೊಂಡುs
ಹಟ್ಟೀಗಿ ಬಂದಾನೋs
ಗೊಬ್ಬರ ಡಿಗ್ಯಾಗs  || ಅಣ್ಣನ ….. . . . ||

ಗವಿ ಮಾಡೀs
ಅಳಕೋತ ಕರಕೋತs
ಗವಿಯಾಗಿಟ್ಟಾನಾs
ಎರಡು ಮಕ್ಕಳ್ನ ತಂದಾನs
ನೋಡಿ ನೋಡೀs || ಎರಡು ….. . . . ||

ಜಕ್ಕಪ್ಪ ಮಾಳಪ್ಪs
ತಂದಗೀ ನೋಡೀs
ಅಪ್ಪ ಅಪ್ಪಂತ ಬೋರ್ಯಾಡೀs
ಅಳತಾರ ಕಣ್ಣೀರ ಸುರಸ್ಯಾಡೀs
ತಂದಿ ತುಕ್ಕಪ್ಪರಾಯ
ಮಕ್ಕಳಿಗಿ ಹೇಳತಾನs
ಬ್ಯಾಡರಿಗಿ ಹೊಡಿರೀs
ಅವಸರ ಮಾಡೀs || ಬ್ಯಾಡರಿಗಿ ….. . . . ||

ಐದು ವರುಷದವ ಎದ್ದು
ಮಾಳಿಂಗರಾಯs
ತಂದಿ ಮುಂದ ಮಾತುs
ಆಡಿ ಆಡೀs
ಬ್ಯಾಡರ್ನ ಹುಡಿಕ್ಯಾಡಿ ಚಂಡs
ಕಡಿಯತೇವ ಕೂಗ್ಯಾಡೀs
ಚಂಡಿನ ಮ್ಯಾಲೆ
ಚಕ್ರಗಟ್ಟಿ ಕಟ್ಟತೇವೋs
ರುದ್ದರಗಟ್ಟಿ ಮ್ಯಾಲ ಮಾಡೀs || ಚಕ್ರಗಟ್ಟಿ ….. . . . ||

ಆಗು ಹೋಗುವ ಭವಿಷ್ಯ
ಹೇಳತೇನಿ ತಂದೀs
ಕೇಳಪ್ಪ ಮುಂದಿನs
ನುಡಿ ನುಡೀs
ಮುಂದಿನ ಭವಿಷ್ಯ ನೋಡೀs
ಹೇಳ್ತಾನ ಕೇಳರಿ ಕೈ ಮಾಡೀs || ಮುಂದಿನ ….. . . . ||

ಆರುತಿ ಬೆಳಗೀs
ಕಣಬಾಯಿ ಅಲತಾಳೋs
ಎಲ್ಲಾರ್ಕೂಡೀs
ಊಟಾ ಮಾಡೀs
ಬಾಣ ಕಿತ್ತು ಹಿಂದಕs
ನೋಡಬ್ಯಾಡಂತs
ಹೇಳ್ತಾನ ಕೈ ಸೊನ್ನಿ
ಮಾಡಿ ಮಾಡೀs
ಬಾಣ ಕಿತ್ತ ಬೋರ್ಯಾಡೀs
ಸೋಮರಾಯ ಹಿಂದಕs
ಹೊಳ್ಯಾನ ನೋಡಿ ನೋಡೀs || ಬಾಣ ….. . . . ||

ಹಾಲಮತ ಬಿಟ್ಟು ಶಿವಮತs
ಹೊಂದ್ಯಾನ ಅಣ್ಣಾs
ತುಕ್ಕಪ್ಪರಾಯನ ಲಿಂಗ ಮಾಡೀs
ಮಾಯದ ಬಜಾರು ಯಾರೀಗೀs
ಬಿಟ್ಟಿಲ್ಲ ತಮ್ಮಾs
ಶರಣರ ಕತೀ ಭಾಗs
ಹಾಡಿ ಹಾಡೀs || ಶರಣರ ….. . . . ||

ಅಡಿವೆಪ್ಪ ಮಾರಾಯ್ರ ನೋಡೀs
ಜಗವೆಲ್ಲ ಸಾರ್ತದ ಕೂಗ್ಯಾಡೀs || ಅಡಿವೆಪ್ಪ ….. . . . ||

* * *