ಅಲ್ಲಿ ಗುಡದಲ್ಲಿರತಕ್ಕಂತಾs
ಕಲ್ಲ ಮುಳ್ಳಗಳನ್ನ ಕಡದು
ಜಡದ ದಡ್ಡೀ ಹಾಕಿ
ಆ ಗೋಳಗಳ ಸಂರಕ್ಷಣ ಸಲುವಾಗಿ
ಒಂದ ದಡ್ಡಿ ನಿರ್ಮಾಣ ಮಾಡಿದಾs
ತನ್ನ ಮಕಳ ಸಂರಕ್ಷಣ ಸಲುವಾಗಿ
ಒಂದು ನೆಲ್ದ ಬೈಯಾರ ತಗದಾs
ಎಲ್ಲೀs ಶಾಡಬಾಬಾನ ಗುಡದಲ್ಲೀs
ತಗದು ತನ್ನ ಮಡದಿ
ಕಣ್ಣವ್ವನ ಕರಕೊಂಡು
ಆ ಗುರುನಾಮ ಸ್ಮರಣೆಯಲ್ಲಿ
ಕಾಲಹರಣ ಮಾಡ್ತಾ ಇದ್ದಾs
ಸೋಮರಾಯ ತನ್ನ ಗುರು
ಸೋನಾರ ಸಿದ್ಧನ ಧ್ಯಾನದಲ್ಲಿ
ಆ ಶಾಡಬಾಬಾನ ಗುಡದಲ್ಲಿ
ಕಾಲ ಹರಣ ಮಾಡ್ತಾ ಇದ್ದಾಗs
ಒಂದಾನ ಒಂದ ಕಾಲದಲ್ಲಿ
ಒಂದಾನ ಒಂದ ದಿನದಲ್ಲಿ
ಏಳು ತೆಲಿ ಗುರುಗಳಾದಂತವರು
ಕಾಲ ಭೈರವನಾಥ
ತಮ್ಮ ಸೋನಾರಿ ಗ್ರಾಮದಲ್ಲೀs
ಪಂಚರ್ ಗಾಂಜೀ ಸೇದಿದ್ರು
ಗಾಂಜೀ ನ್ಯಾರ್ ಏರಿತ್ತು
ಅಂದs ನಿಶಾ ಆಗಿತ್ತು
ಆ ನಿಶೆದ ಬರದಲ್ಲೀs
ಗುರು ಏನ್ ಅಂತಾನ
ಶಿಶು ಮಗಾ ಸೋಮರಾಯಾs
ಈಗ ಸಧ್ಯೆ ಕಾಲದಲ್ಲೀs
ಉಂಬ್ಳೆ ಠಾಣೆ ಬಿಟ್ಟು
ಶಾಡಬಾಬಾನ ಗುಡದಲ್ಲಿ ಅದಾನs
ಅವಾs ನನ್ನ ಗುರುತು ಹಿಡದ್ರs
ಅವನಿಗೆ ಬೇಕಾದ್ದ ಕೊಟ್ಟು
ಕಾಪಾಡಿ ಬರಬೇಕು
ಗುರುತು ಹಿಡಿಯುದಿದ್ರs
ಸುಟ್ಟು ಭಸ್ಮ ಮಾಡೀs
ನನ್ನ ಮೈಗೆ ಬೂದೀs
ಧರಿಸಿಕೊಂಡು ಬರಬೇಕು
ಅಂತ ನಿಗದಿ ಹಾಕೀs
ತನ್ನ ಹವಳದ ಹರಿ
ಗದ್ದಿಗಿಯಿಂದಿಳಿದು
ತನ್ನ ಮಂದಿರವನ್ನು ಬಿಟ್ಟು
ಹೊರಗ ಬಂದಾs
ಕೈಕಾಲು ಮಜ್ಜಣ ಮಾಡೀs
ಮಾರಿ ಮಜ್ಜಣ ಮಾಡೀs
ಕಿನ್ನರಿ ಕಿರಿ ಜಡಿ ಜಾಡಿಸಿದಾs
ಜಾಡ್ಸಿ ಅಲಕ್ಷ ಅಂದಾs
ಅಲಕ್ಷ ಅಂದಾ ಕ್ಷಣs
ಏಳನೂರು ಜೋಗಿಗಳು
ಆ ಜಡಿಯೊಳಗಿಂದ ಪ್ರಕಟವಾಗೀs
ಎದ್ದ ನಿತ್ತ ಸಮಯದಲ್ಲೀs
ಆ ಕಾಲ ಭೈರವನಾಥ
ಏಳು ತೆಲಿ ಗುರು
ಗೌಡ ಬಂಗಾಲ ಜೋಗೀs
ಏನ್ ಮಾಡಿದ್ದಾs
ಕ್ಯಾವಿ ಕಂತೀ ತೊಟ್ಟಿದ್ದಾs
ಅದೇ ಬಣ್ಣದ ಜೊಳಗೀ ಹಾಕಿದ್ದಾs
ಬಂಗಾರ ಸಿಂಗನಾಥಗs
ಜೋಳಗಿ ಒಳಗ ಇಟ್ಟಿದ್ದಾs
ರುಮ್ಮು ಚೂರಿ ಬಗಲಾಗ ಹಿಡಿದಿದ್ದಾs
ಎಡವುರಿ ಶಂಖಾ, ತ್ರಿಶೂಲಾ
ಕಿನ್ನರಿ ಕಾಯಿ ತೊಗೊಂಡುs
ಬಂಗಾಲ ದೇಶದ ಬಾವಾನ ರೂಪ ತೊಟ್ಟುs
ಆ ತನ್ನ ಸೋನಾರಿ ಮಠವನ್ನು ಬಿಟ್ಟು
ಸಾಗಿ ನಡದಾs
ಎಡದಲ್ಲಿ ಎಳಿಗಾಳೀs
ಸುಳದಲ್ಲಿ ಸುಳಿಗಾಳೀs
ಗಾಳಿಯಿಂದ ಗುರುಗಳು
ಸಾಗಿ ಮುಂದs
ಎಲ್ಲಿಗಿ ಬಂದ್ರುs
ಗಂಗಿ ನಾಡ ಗೌರಿ ನಾಡ
ಹಾಲ ಹೌಲಿ ನಾಡ
ಶಾಲಬಿದರಿ ನಾಡs
ಶಾಡಬಾಬಾನ ಹುಡದಲ್ಲಿ ಬಂದ್ರುs
ಬಂದ ಸಮಯದಲ್ಲಿ
ಸೋಮರಾಯ ಎನ್ ಮಾಡ್ತಿದ್ದಾs
ಅಂದ ಚಂದದ ದಾರಿಯಲ್ಲಿ
ಏಳು ಮಳದ ಕಲ್ಲಿತ್ತು
ಆ ಕಲ್ಲಿನ ಮ್ಯಾಲ ಕೂತಿದ್ದಾs
ಕುಂತು ಮುಂದಿನ ಧ್ಯಾನಾ ಬಿಟ್ಟಿದ್ದಾs
ಹಿಂದಿನs ಧ್ಯಾನಾ ಮಾಡಿದ್ದಾs
ಬಾರಾಮತಿ ಗೌಡರು
ತೇರಾಮತಿ ಆರಸರು
ಬಾರಾಮತಿ ಗೌಡಕಿ ಬಿಟ್ಟು
ತೇರಾಮತಿ ಅರಸಗಿ ಬಿಟ್ಟು
ಈ ಗುರುವಿನ ಬಾಲ ಜನಗಿ ಸಲುವಾಗಿ
ಇನಾಮದಾರ ಹಕ್ಕದಾರ
ಎಲ್ಲಾ ಬಿಟ್ಟು ನಾಡ ಪರಗಂದ್ಯಾದೆವೋs
ಭೀಮಾ ನದಿ ದಡದಲ್ಲಿ
ನನ್ನ ಅಣ್ಣಗ ಬಿಟ್ಟು
ಈ ಶಾಡಬಾಬಾನ ಗುಡದಾಗ
ಎರಡು ಮಕ್ಕಳ ತೆಗೆದುಕೊಂಡು
ಬಂದು ಏಳ್ಯಾ ಗಳೀತಿದ್ದ
ಮಕ್ಕಳಿಗಿ ಯಾನರೇ ಆದ್ರ
ನನಗ್ಹೇಂಗ ತಿಳಿಯಬೇಕು
ನನಗೇನರೇ ಆದ್ರs
ಮಕ್ಕಳಿಗ್ಹೇಂಗ ತಿಳಿಯಬೇಕುs
ಈ ಗುಡ್ಡದಲ್ಲಿ ಸಿಂಹಾ ಶರ್ದೂಲಾ
ಹುಲಿ ಕರಡಿ
ಅನೇಕ ಮಿಕ್ಕ ಜಾತಿ ಹಿಂಡ
ಕುರಿ ಹಿಂಡ ಆಡ್ಯಾದಿದಾಂಗ ಆಡ್ಯಾಡ್ತಾವ
ಹೆಮ್ಗ ಮಾಡ್ಬೇಕಂತs
ದುಃಖ ರೋಜನದಲ್ಲಿ
ಆಳಾಪ ಮಾಡ್ಕೋತ್ತ ಕುತಿದ್ದಾs
ಈ ಕಡೆ ಗುರು ಬಂದದ್ದು ಅರುವಾತು
ಆಗ ಗುರುವಾ ಸೌಜ್ಞ ಆದ ಕೂಡ್ಲೇs
ಸೋಮರಾಯನು ಆ ಏಳು ಮಳದ
ಕಲ್ಲಿನ ಮ್ಯಾಲಿಂದ ಎದ್ದು
ಏನ್ ಮಾಡ್ತಾನs
ನಂದು ದಂಡ ಬತ್ತು
ದೌಲತ್ತ ಬಂತಂದು ತಿಳಿದುಕೊಂಡು
ಕೈಯಾಗ ಹೂವಿನ ಬೇಡಿ
ಕಾಲಾಗ ಹೂವಿನ ಬೇಡಿ ಹಾಯ್ಕೆಂಡು
ಆ ತನ್ನ ಅಂದ ಚಂದದ ವಾರ್ಯಾಗ
ದುಂಡರ್ಕಿ ಉಳಕೋತs
ಗುರುವಿನ ಇದರ್ ಹ್ವಾದಾs
ಅಟ್ಟರೊಳಗs
ಗುರು ಇದ್ದಂತವಾ ಬಂದಾs
ಹೋಗಿ ಗುರುವಿನ ಶ್ರೀಪಾದಕ ಎರಗಿದಾ
ಗುರು ಇದ್ದಂತವಾ
ಮಂಡಿ ಮ್ಯಾಲ ಹಸ್ತಿಟ್ಟ
ಆರ್ಶೀವಾದ ಕೊಟ್ಟು
ಎಲೋ ಮಗನ ಸ್ವಾಮರಾಯಾs
ಈಗ ಹಸದ ಬಂದೇನು
ಬಾಳ ಹಸುವಾಗ್ಯದ ಅಂದಾs
ಎಪ್ಪಾ ಹಸದ ಬಂದಿದ್ರ ಬಂದಿರಬಹುದು
ಪರಂತು
ಹಟ್ಟಿಗಿ ಹೋಗಿ ಹಟ್ಟಿಮ್ಯಾಲ
ಕಣಬಾಯಿ ಇರ್ತಾಳುs
ಕಣಬಾಯಿ ಕೈಲಿ
ಊಟಾ ಮಾಡ್ಯ್ಕಾಸಿಂದ
ಕೂಡೂದ್ರೊಳಗಡೇs
ನಾನು ಕಿಲ್ಲಾರ್ ಹೊಡ್ಕೊಂಡು
ಬರ್ತೇನು ಅಂತ ಹೇಳ್ತಾನ
ಆ ಕಾಲಕs
ಗೌಡ ಬಂಗಾಳ ಜೋಗೀs
ಏನತ್ತಾಗs
ಎಲೋ ಮಗನ ಸೋಮರಾಯಾs
ನಿನ್ನ ಏಳುನೂರು ಆಕಳುಗಳಲ್ಲಿ
ಒಂದು ಕರೀ ಕಾಮಧೇನು
ಕಪಿಲೆ ಆಕಳೈತೀs
ಅದಕ್ಕ ಹುಟ್ಟಿನಿಂದ ಈ ವರೆಗೆ
ಹೋರಿ ಹಾರಿಲ್ಲಾs
ಇನ್ನ ಅದಕ ಹೋರಿ ಮುಟ್ಟಿಲ್ಲಾ
ಅದು ಕಪಿಲೆ ಆಕಳೈತಿ
ಜರ್ ಕಡತಾ ಆ ಕಪಿಲೆ ಆಕಳ
ನೀ ಹಿಂಡಿ ನನಗs
ಹಾಲ ಕೊಟ್ಟರs
ಮಗನ ನಂದು
ಹಸುವು ತೃಪ್ತಿ ಆಗತೈತಂದು ಹೇಳಿದಾಕ್ರ
ಸೋಮರಾಯನು ಏನಂತಾನು
ಎಪ್ಪಾ ಗುರುವೇs
ಅದು ಇನ್ನೂ ಬಂಜಿ ಐತಿ
ಬಂಜಿ ಇದ್ದ ಆಕಳು ಹಾಲs
ನೀ ಬೇಡತೀss
ಆದ್ರ ಕೊಡಲಾಕೇನ ಹರಕತ್ತಿಲ್ಲಾs
ನಿನ್ನ ದಯಾ ಜರಕಡತಾ
ನನ್ನ ಮ್ಯಾಲ ಇದ್ರs
ನಾನು ಆ ಹುಟ್ಟ ಬಂಜೀ ಆಕಳ್ದು
ಹಾಲ ತಂದುs
ನಿನಗ ಊಟಾ ಮಾಡಸ್ತೇನಂದು
ಆ ಗುರುವಿನ ಕಡೆಯಿಂದ
ಭಸ್ಮಾ ತೆಗೆದುಕೊಂಡು
ಸೋಮರಾಯನು ಎಲ್ಲಿಗೆ ಬಂದಿರ್ತಾನs
ಆ ಏಳುನೂರು ಆಕಳಗಳ ಬಿಟ್ಟು
ಮೂರು ಬಿಗಿಮ್ಯಾಲ ಹೋಗಿ ನಿತ್ತು
ಆ ಕರಿ ಕಾಮಧೇನು
ಕಪಿಲೆ ಹೆಸರು ತೊಗೊಂಡು
ಇದರ್ತಾನ ಒದರಿದಾಗs
ಬೆನ್ನ ಮ್ಯಾಲ ಬಾಲಾ ತೊಗೊಂಡುs
ಆಕಳ ಬೋರ್ಯಾಡಿಸಿಕೋತs
ಇದರ್ ಹೊಡಿಲಾಕ ಬಂದಿರ್ತದs
ಆಗ ಗುರು ಸೋನಾರ ಸಿದ್ಧ
ಗಾಬ್ರ್ಯಾಗಿ ಸೋಮರಾಯನ
ಬೆನ್ನ ಹಿಂದ ಆಡಗತಾನs
ಸೋಮರಾಯ ಇದ್ದಂತವs
ಏನ್ ಮಾಡ್ತಾನs
ಆ ಆಕಳ ಮ್ಯಾಲ
ಗುರುಕೊಟ್ಟಂತಾ ಭಸ್ಮಾ
ಅದರ ಮ್ಯಾಲ ಒಗಿತಾನs
ಆಗ ಎರಡು ಕಿವಿ ಜೋಲಹೊಡ್ಡು
ಮುಂದ ಆಕಳು
ಬೆನ್ನುತಗ್ಗಿಸಿ ನಿಂತಾಕರ
ಸೋಮರಾಯ ಗುರುವಿನ್ಹಂತೇಕಿಂದು
ಗುಂಡು ಗೋಪರಿ ತಗೋತಾನs
ಗುಂಡು ಗೋಪರಿ ಅಂದ್ರs
ಅದು ಕುಂಬಳಕಾಯಿ ಸೊಟ್ಟಿಂದ ಮಾಡಿದ್ದು
ಅದಕ್ಕ ಗುಂಡು ಗೋಪರಿ ಅಂತಿದ್ರು
ಆ ಗುಂಡು ಗೋಪರಿ ತೊಗೊಂಡು
ಆ ಕರಿ ಕಾಮಧೇನು
ಕಪಿಲೆ ಆಕಳದ್ದು
ಹಾಲಹಿಂಡ ಬೇಕಂತಂದು ಹೋಗತಾನs
ಈಗ ಹಾಲ ಜರಕಡ್ತಾ ನನ್ನ ಗುರುವಿಗೆ ಕೊಟ್ಟಿದ್ರs
ಮಗನ ನೀರ ಅಂತ ಕೇಳ್ತಾನ್ ಬೇಡ್ತಾನ್s
ಇದಕ್ಕs ಏನ್ ಮಾಡಬೇಕಂತಂದು
ವಿಚಾರ ಮಾಡಿ
ಸೋಮರಾಯನು ಆಕಳ ಕಿವ್ಯಾಗs
ಏನಮ್ತಾನಂದ್ರs
ತಾಯೀs ಕಪಿಲೇs
ನನ್ನ ಭಾವುಕ ಒಲಿ
ನನ್ನ ಭಕ್ತಿಗಿ ಒಲಿ
ಅಲ್ಲದವುಗುಣ ದೇವರ್ ಸ್ವಾಮಿ
ಘಾತಕs ದೇವುರ
ಜೀವಕ ಮುಣುಗು ದ್ಯಾವರs
ಗಾರುಡಿಗಿ ವಿದ್ಯಾ ಗಾಂಜೀಕೋರ್
ದಾದಲ್ ಕೋರ್ ದೇವರದಾನs
ನನ್ನ ಬಗತೀಗಿ ಒಲಿದು ನೀನು
ಎರಡ ಮಲಿ ನೀರs
ಅಂದ್ರs ಸೀತಾಳ ಹಿಂಡು
ಎರಡ ಮಲಿ ಹಾಲ ಹಿಂಡು
ಅಂದಾಕರs ಆಗs
ಭಕ್ತೀಗಿ ಕಾಮಧೇನು ಒಲಿದಿರ್ತದs
ಸೋಮರಾಯ ಏನ್ ಮಾಡಿರ್ತಾನs
ಆಕಳ ಕೆಚ್ಚಲಲ್ಲಿ ಕೈ ಹಾಕಿರ್ತಾನ
ಪ್ರಥಮಮದಲ್ಲಿ ಎರಡು ಮಲ್ಯಾಗಿಂದುs
ನೀರ ತಗದ ಕೊಟ್ಟಿರ್ತಾನs
ಆಗ ಗುರು ಇದ್ದಂತವಾ
ಬಾಯಿ ಮುಕ್ಕಳಿಸಿ
ಕೈಕಾಲು ಮಜ್ಜಣ ಮಾಡಿಸಿ
ಕಿನ್ನರಿ ಕಿರಿ ಜಾಡಿಸಿ
ಅಲಕ್ಷ ಅಂತಾನs
ಅಂದಾಕ್ಷಣ ಏಳುನೂರು ಜೋಗಿ ಎಬ್ಬಸ್ತಾನ
ಆ ಏಳುನೂರು ಜೋಗಿಗಳು
ಶಾಡಾಬಾಬಾನ ಗುಡದಾಗs
ಕುಂಬಳ ಸೊಟ್ಟಿ ಮುಂದಿಟಗೊಂಡುs
ಹಾಲ ಕುಡಿಲಾಕ ಕುತ್ತಿರ್ತಾವs
ಸೋಮರಾಯ ಬಾಯಲ್ಲಿ ಬಳ್ಳ ಕಚ್ಚತಾನs
ಆಗ ಏನತ್ತಾನು
ಕಾಮಧೇನು ಆಕಳಿಗೀs
ಎವ್ವಾ ತಾಯಿs
ನನ್ನ ಭಾವುಕ ಒಲಿ
ನನ್ನ ಭಕ್ತೀಗಿ ಒಲಿ
ಗುರು ಒಬ್ಬನ ಪುರತೇಕs
ಹಾಲ ಕರಿಬೇಕಂತ
ನಿನಗ ನಾ ಬೇಡಿಕೊಂಡಿದ್ದೆs
ಪರಂತು ಏಳನೂರು ಜೋಗಿ ಎದ್ದ ಕುತ್ತಾವs
ಇವಕ್ಕ ಮೊದಲ ತೃಪ್ತಿ ಪಡಿಸಿ
ಆ ನಂತರ ಗುರುವಿನ ತೃಪ್ತಿ ಪಡಿಸಬೇಕ
ಅಂದ ಸಮಯದಲ್ಲಿ
ಆ ಕಾಮಧೇನು ಕಪಿಲೆ ಆಕಳು
ಆ ಸೋಮರಾಯಗ ಯಾಕಾಗವಲ್ತಂದು
ಆ ಸೋಮರಾಯನ ಭಕ್ತಿಗೆ ಒಲ್ದು
ಅಪ್ಪಣೆ ಕೊಟ್ಟ ಸಮಯದಲ್ಲಿ
ಸೋಮರಾಯ ಕಂಬಳಸೊಟ್ಟಿ ತೊಗೊಂಡು
ಹಾಲ ಹಿಂಡತಾನs
ಹಾಲ ಹಿಂಡಿ ಪ್ರಥಮದಲ್ಲಿ
ಏಳನೂರು ಜೋಗಿಗಳಿಗೆ ಹಾಕ್ತಾನs
ಏಳನೂರು ಜೋಗಿ ಗುರು ಅಷ್ಟುರೆಲ್ಲಾ
ಉಂಡ ತೃಪ್ತಿ ಆಗ್ತಾರs
ಗುರು ಇದ್ದಂತವಾ
ಗುರುತಾತಂದು ಬಾಯಲಿ
ಶಬ್ಧ ನುಡದಿರ್ತಾನs
ಆಗ ಅಷ್ಟು ಏಳನೂರು ಜೋಗಿ
ಮಟ್ನ ಮಾಯಾಗಿರ್ತಾವs
ಆಗ ಗುರು ಸೋನಾರ ಸಿದ್ಧ
ಮುಗುಳ್ನಗಿ ನಕ್ಕು
ಸೋಮರಾಯ ಶಾಡಬಾಬಾನ ಗುಡದಲ್ಲಿ
ಕೆಟ್ಟ ಆರ್ಯಾಣದಲ್ಲಿ
ಗಿಡದ ಮಂಜ್ಯಾಣದಲ್ಲಿ
ನನ್ನ ಗುರ್ತು ಹಿಡದು
ಬಂಜಿ ಆಕಳ ಹಾಲನ್ನs
ನನಗರ್ಪಿಸಿದಾs
ಇವಾs ಹೆಚ್ಚಿನ ಶಿಷ್ಯಾ ಅದಾನ
ಈ ಭೂಲೋಕದಲ್ಲಿ ಅಂದು
ಮನಸ್ಸಿನ್ಯಾಗ ಮಾತಾಡಿಕೊಂಡು
ಶಿಷ್ಯನ ಭಾವಾ ಭಕ್ತಿ ಸುದ್ದೈತಿ
ಇನು ಶಿಶುಮಗಳು
ಕಣ್ಣವ್ವನ ಭಾವ ಗೇಗೈತೋ
ಅಕಿನ್ನs ಪರೀಕ್ಷೆ ಮಾಡಬೇಕಂತಂದು
ಸೋಮರಾಯ್ಗ ಹೇಳತಾನs
ಎಲೋs ಮಗನ ಸೋಮರಾಯಾs
ಹಟ್ಟಿಗಿ ಹೋಗೂನು ನಡಿಯುಂತ ಹೇಳಿದಾಗs
ಸೋಮರಾಯ ಏನಂತಾನು
ಎಪ್ಪಾs ಗುರುವೇs
ಏಳನೂರು ಆಕಳುಗಳು
ಇಲ್ಲಿ ಕೆಟ್ಟ ಆರ್ಯಣದಲ್ಲಿ
ಹುಲಿ ಕರಡಿ ಸಿಂಹ ಶಾರ್ದೂಲಾ
ಅನೇಕ ಮಿಕ್ಕ ಜಾತಿವ ಅದಾವs
ಈ ಆಕಳ ಸಂರಕ್ಷಣಾ ನಾನು ಮಾಡಿ
ಚೆಂಜಿ ಒಂಬತ್ತ ತಾಸಿಗಿ
ಸಿರಿ ಬರೊ ವ್ಯಾಳೇಕs
ನಾ ಹಟ್ಟಿಗೆ ಬರ್ತೀನೀ
ನೀ ನಡಿ ಅಂದಾಕರs
ಎಲೋs ಮಗನs
ಅವು ಗೋವುಗಳು ನಿನ್ನುವು
ಅಥವಾ ನನ್ನುವು ಅಂದಾಕರs
ಎಪ್ಪಾs ಗುರುವೇ
ಸಂರಕ್ಷಣ ಮಾಡು ಕರ್ತವ್ಯ ನಂದದs
ಗೋವುಗಳೆಲ್ಲಾ ನಿನ್ನುವೇ ಅದಾವುs
ಪರಂತು ಈ ಸದ್ಯೆ ಟಾಯಮದಲ್ಲಿ
ಅವು ಏಳನೂರು ಆಕಳುಗಳು ನಿನ್ನುವದಾವುs
ಆಕಳುಗಳ ಬಿಟ್ಟು ಬರಾಂಗಿಲ್ಲ
ಅಂದ ಸಮಯದಲ್ಲಿ
ಗುರು ಮುಗುಳ್ನಗೆ ನಕ್ಕು
ಆಗ ಗುರು ಇದ್ದಂತವಾs
ಏನ್ ಅಂತಾನs
ಎಪ್ಪಾ ಮಗನs
ನಿನ್ನ ತೊಗಲ್ ಕರಾs
ಜರ್ ಕಡತಾ ನಾಶವಾಗಿದ್ರs
ನಾನು ಬಂಗಾರ ಕರಾ ಕೊಡ್ತೇನು
ಈ ಶಾಶಬಾಬಾನ ಗುಡದಲ್ಲಿ
ಹಿಂಗ ಬಿಟ್ಟಿ ನಡೀs
ನನ್ನ ಸಂಗಾಟs ಅಂದಾಗs
ಗುರುವಿನ ಮಾತ ಕೇಳಿ
ಶಾಡಬಾಬಾನ ಗುಡದಲ್ಲಿ
ಏಳನೂರು ಕಿಲಾರ ಬಿಟ್ಟು
ಗುರು ಶಿಷ್ಯರು ಸಾಗಿ
ಎಲ್ಲಿಗೆ ಬರ್ತಾರs
ಹಾಳಹಟ್ಟಿ ಕಡೆ
ಬರ್ಲಾಕ್ ಶುರುವ ಮಾಡಿರ್ತಾರ
ಆ ಸಮಯದಲ್ಲಿ
ಕಣ್ ಬಾಯಿತಿ ಗುರು ಮಾರಿದ್ರುs
ತುಳಜಾಪೂರ ಅಂಬಾಭವಾನಿ ಇದ್ಳು
ಆಗs ಅಂಬಾಭವಾನಿ ಇದ್ದಾಕಿ
ತನ್ನ ಹವುಳದ ಹರಿ ಗದ್ದಗಿ ಮ್ಯಾಲ ಕುತ್ತಿದ್ಳು
ಅರುವು ಸಂಜಿನ ಆಯ್ತು
ಕಣಬಾಯಿಗಿ ಅಂತು
ಮಲ್ಲಿನಾಥ ಮನಿಗಳ್ಳನಂತ ಗುರು
ಭಕ್ತಿ ನೋಡ್ಲಾಕ ಹೊಂಟಾನs
ಜಾತಿ ಜೋತಿ ಜಕ್ಕಪ್ಪ ಮಾಳಿಂಗರಾಯ
ನೆಲ್ದ ಬುಹ್ಯಾರದೊಳಗs
ಆಟ ಆಡಿಕೋತ್ತ ಒಳಗ ಕುಂತಾರ
ಇನ್ನ ಹೆಂಗ ಮಾಡ್ಬೇಕಂತs
ತುಳಜಾಪುರ ಗ್ರಾಮದಲ್ಲಿ
ತುಕ್ಕುಬಾಯಿ ಮಟ್ನ ಮಾಯಾದ್ಳು
ಶಾಡಬಾಬಾನ ಗುಡದಾಗs
ಹುಲ್ಲ ಗುಂಪಿನ ಹಿಂದ ಬಂದು ನಿತ್ತು
ಆಕಾಶವಾಣಿ ಮಾಡಿದ್ಳು
ಎಲೋ ಕಣ್ಣವ್ವಾs
ಆಗ ಏಳೂದು ಈಗ ಏಳು ಮಗಳs
ನಿನ್ನ ಗುರುವ
ಏಳ ತೆಲಿ ಗುರು
ಸೋನಾರ ಸಿದ್ಧ ಬಂದಾನs
ಭಾವ ಭಕ್ತಿ ನೋಡ್ಲಾಕ ಬಂದಾನs
ಹುಲ್ಲಕ್ಕಿ ತೊಗೊಂಡು ಬಾ
ನೆಲ್ಲಕ್ಕಿ ಬಾನಾ ಮಾಡು
ಅವರು ಬರುದ್ರೊಳಗs
ಕಂಚಿನಾರ್ತಿ ತುಂಬಿಡ, ನೀರ ಕೊಡು
ಅವರು ಊಟಕ್ಕ ಕೂಡ್ತಾರs
ನಾ ತೋಡಿ ಕೊಡ್ತೇನು
ನೀ ನೀಡಾಕ್ಹಾಕು ಅಂದಾಗs
ಕಣ್ಣಬಾಯಿ ಬೆಚ್ಚರ್ ಹೊಡ್ದ ಏಳ್ತಾಳs
ಎದ್ದು ನೋಡ್ತಾಳs
ಮಾಯರೂಪದಿಂದ ಗುರುತೀ
ತುಳಜಾಪುರ ಅಂಬಾಭವಾನಿ ನಿತ್ತ ಬಿಟ್ಟಿದ್ಳು
ಆಗ ಕಣ್ಣಬಾಯಿ ಎದ್ದಾಕಿ
ಜಾವ ಜಳಕ ಮಾಡಿ
ನೇಮ ನಿಷ್ಠೆ ಮಾಡಿ
ಸಣ್ಣಗೇ ಸರದುಟ್ಟು
ಟಣ್ಣನೇ ಬಿಗದಿಟ್ಟು
ಬಾಚಿ ಬೇತೇಲಿ ಸೀಳಿ
ಕುಂಕುಮ ತುಂಬಿ
ಹುಲ್ಲಕ್ಕಿ ತಂದು
ಥಳಿಸಿ ನೆಲ್ಲಕ್ಕಿ ಬಾನಾ ಮಾಡ್ತಾಳs
ಅಡಿಗಿ ಸಜ್ಜ ಮಾಡಿ
ಬಂಗಾರ ಮಗಿ ತೆಂಬಗಿ ತುಂಬಿ
ಸೀತಾಳ ಹಿಡಕೊಂಡು
ದಾರಿ ಮ್ಯಾಲ ನಿತ್ತಕಾಲಕs
ಗುರು ಶಿಷ್ಯರಿಬ್ಬರು ಬಂದಿರ್ತಾರs
ಇಬ್ಬರು ಬಂದ ಸಮಯದಲ್ಲಿ
ನೀರ್ ಕೊಟ್ಟಿರ್ತಾಳs
ಸೋಮರಾಯ ಗುರು ಸೋನಾರ ಸಿದ್ಧ
ಕೈಕಾಲು ಮಜ್ಜಣ ಮಾಡಿ
ಮಾರಿ ಮಜ್ಜಣ ಮಾಡಿ
ಸೋಮರಾಯಗ ಏನಂತಾನs
ಎಲೋ ಮಗನ  ಸೋಮರಾಯಾs
ನೀ ಸ್ವಲ್ಪ ಹಿಂದಕ ಸರಿ ಅಂತಾನs
ಆಗ ಸೋಮರಾಯ ಹಿಂದಕ ಸರದಾs
ಗುರು ನಿತ್ತ ಸಮಯದಲ್ಲಿ
ಕಿನ್ನರಿ ಕಿರಿ ಜಡಿ ಜಾಡ್ಸಿ ಅಲಕ್ಷ ಅಂತ
ಶಬ್ಧಾ ನುಡಿದಾಗs
ಏಳನೂರು ಜೋಗಿಗಳು
ಸಾಲ ಪಂಕ್ತಿ ಕಟ್ಟಿ
ಊಟಕ್ಕ ಕುಂತಿರ್ತಾವs
ಆಗ ಕಣಬಾಯಿ
ಬಾಯಿಲೇ ಬಳ್ಳ ಕಚ್ಚತಾಳs
ಎವ್ವಾs ನನ್ನ ಗುರುವಿಗೆ
ಮತ್ತು ಪತಿದೇವರಿಗೆ
ಸಾಲುವಷ್ಟೆ ಅಡಿಗೆ ಮಾಡಿದ್ದೇs
ಇಷ್ಟು ಜನಾ ಎಲ್ಲಾ ಎದ್ದ ಕುಂತುವು
ಇದಕ್ಕ ಹೆಂಗ ಮಾಡ್ಲೆಂತs
ತಡಬಡಸಲಾಕ ಹತ್ಯಾಳs
ಆಗ ತುಳಜಾಪೂರ ತುಕ್ಕುಬಾಯಿ ಇದ್ದಾಕಿ
ಆಕಾಶವಾಣಿದಿಂದ ಏನಂತಾಳ
ಎಲೇs ಕಣ್ಣವ್ವಾ ಹೆದರಬ್ಯಾಡ
ನಾ ಇಲ್ಲೇ ನಿಂತೀನೀs
ನಾ ತೋಡಿ ಕೊಡತೇನ ಮಗಳs
ನೀ ನೀಡ್ಲಾಕ ಸುರುವು ಮಾಡುs
ಅಂದ ಸಮಯದಲ್ಲಿ
ಆಗ ಅಂಬಾಭವಾನಿ ಇದ್ದಾಕಿ
ತೋಡಿ ಕೊಡ್ತಾಳs
ಕಣಬಾಯಿ ಇದ್ದಾಕಿ
ಏಳನೂರು ಜೋಗಿ ಪಂಕ್ತಿಗಿ ನೀಡ್ತಾಳs
ಆಗ ಏಳನೂರು ಜೋಗಿಗಳೆಲ್ಲಾ
ಆ ಹುಲ್ಲಕ್ಕಿ ಬಾನಾ ಊಟಾ ಮಾಡಿ
ಸೀತಾಳ ಮುಗುದು
ಢಂ ನೇ ಡರಿ ಬಿಟ್ಟು
ತೃಪ್ತಿ ಆದ ಸಮಯದಲ್ಲಿ
ಗುರು ಇದ್ದಂತವಾ
ಗೋರುಕಾ ಅಂದ ಸಮಯದಲ್ಲಿ
ಅಷ್ಟು ಜೋಗಿಗಳು ಮಟ್ನೆ ಮಾಯಾಗಿರ್ತಾವs
ಅದೃಶ್ಯ ಅದ ಸಮಯದಲ್ಲಿ
ನಂತರ ಜಾತ ಜೋತ
ಜಕ್ಕಪ್ಪ ಮಾಳಪ್ಪಗ
ಶಿಶು ಮಗಾ ಸೋಮರಾಯ್ಗ ಕರದುಕೊಂಡು
ಗುರು ಸೋನಾರ ಸಿದ್ಧ
ಕಣ್ಣವ್ವ ಮಾಡಿದಂತಾ ಅಡಗಿ
ಎತಾಸಿರಿ ಕುಂತು ಊಟಾ ಮಾಡಿ
ಸೀತಾಳ ಮುಗದು
ಢಂ ನೇ ಡರಿ ಬಿಟ್ಟು
ಜನಗಿ ದೊಡ್ಡಿ ಮುಂದ ಕುತ್ತು
ಪಂಚೇರ ಗಾಂಜಿ ಸೇದತಾನs
ಗಾಂಜಿ ನಿಶೆ ಹೆಚ್ಚಾಗಿರ್ತದs
ಆ ಗಾಂಜಿ ನ್ಯಾರೊಳ್ಗೆ
ಸೋಮರಾಯ್ಗ ಏನೂ ಹೇಳಲಿಲ್ಲ
ತಾನು ನಿಗದಿ ಹಾಕಿದ
ಮಾತಂತೂ ಮರತೇ ಬಿಟ್ಟs
ಹೋಗಿ ಬರ್ತೇನ ಮಗನೇ ಅಂದವ್ನೇs
ಸಾಗಿ ತಾನು ಮೆಟ್ಟ ಬಿಟ್ಟ
ಊಟಾ ಮಾಡಿಕೊಂಡು
ಗುರು ಸೋನಾರ ಸಿದ್ಧರಿದ್ದಂತವರು
ಪಂಚೇರ ಗಾಂಜಿ ಸೇದಿ
ಗಾಂಜಿ ನ್ಯಾರದಲ್ಲಿ
ತನ್ನ ಶಿಷ್ಯನಿಗೆ ಏನು ಹೇಳದೇ
ಹೋಗಿ ಬಿಟ್ರು
ಹೋದ ಸಮಯದಲ್ಲಿ
ಸೋಮರಾಯನು ಮನಸ್ಸಿನ್ಯಾಗ ಅಂತಾನs
ಗುರುಗೋಳು ಬಂದ್ರು ಯಾತಕ್ಕೆ
ಹಿಂಗ ಯಾಕ ಹ್ವಾದ್ರುವs
ನನಗೇನ್ಹೆಳಿದ್ರು ಮಕ್ಕಳಿಗೇನ್ಹೇಳಿದ್ರು
ಮಡದಿಗೇನ್ಹೇಳಿದ್ರು
ಇಂತಾ ಕೆಟ್ಟ ಕಾಡ ಆರಾಣ್ಯದಲ್ಲಿ
ನಾವು ಬಂದು ವಾಸ ಮಾಡಿದೇವು
ಹಿಂಗs ವಿಚಾರ ಮಾಡಿಕೊಂತ
ಇರೂದ್ರೊಳಗಡೇ
ಮೂರ್ ಬಿಗಿ ಮ್ಯಾಲ ಹೋಗಿ ಗುರು
ಸೋನಾರ ಸಿದ್ಧ ಮನಸ್ಸಿನ್ಯಾಗ ಅಂತಾನs
ಅಂದ್ರ ಸೋನಾರಿ ಮಠದಲ್ಲಿ
ಶಿಶು ಮಗಾ ಸೋಮರಾಯs
ನನ್ನ ಅರತಿದ್ರs
ಗುರುತು ಹಿಡಿದ್ರs
ಬೇಡಿದ್ದ ಕೊಟ್ಟ ಬರಬೇಕು
ಹುರುತು ಹಿಡಿಯದಿದ್ರs
ಸುಟ್ಟು ಭಸ್ಮ ಮಾಡಿ
ಮೈಗೆ ಬೂದಿ ಧರಿಸಿಕೊಂಡು
ಬರಬೇಕಂತ ನಿಗದಿ ಹಾಕಿದ್ದೆs
ಅವಾs ನನ್ನನ್ನು ಗುರುತಿಸಿ
ಬಂಜಿ ಆಕಳ ಹಾಲs
ಊಟಕ್ಕ ಕೊಟ್ಟಾನಾs
ಅವ್ನ ಭಾವ ಸುದ್ದ ಐತಿ
ಆ ಕಾರಣಕ್ಕಾಗಿ ನಾನು
ಅವ ಏನ್ ಬೇಡ್ತಾನ್
ಬೇಡಿದ್ದ ಕೊಟ್ಟ
ಬರಬೇಕಂತ ತಿಳಕೊಂಡು
ಗುರು ಸೋನಾರ ಸಿದ್ಧರು ಹೊಳ್ಳಿ ಬಂದ್ರು
ಹೊಳ್ಳಿ ಬಂದ ಸಮಯದಲ್ಲಿ
ನಂತರ ಸೋಮರಾಯ
ಏನ್ ಮಾಡ್ದಾs
ಧನ ಬತ್ತು ದವಲತ್ತ ಬಂತಂದು
ಹೋಗಿ ಗುರುವಿನ ಶ್ರೀಪಾದಕ ಎರಗಿದಾ
ಆಗ ಮತ್ತ ಗುರುಗಳಿದ್ದಂತವರು
ಆಶೀರ್ವಾದ ಕೊಟ್ಟು
ಕೊಟ್ಟ ಏನ್ ಹೇಳ್ತಾರs
ಎಲೋs ಸೋಮರಾಯಾ
ಈ ಶಾಡಬಾಬಾನ ಗುಡದಲ್ಲಿ
ಆ ಮುಂದ ಕಾಣು ಬೆಟ್ಟದಲ್ಲಿ
ನೀನು ಗರಡಿನ ಮನಿ
ತಯಾರ ಮಾಡಂತ ಹೇಳ್ದಾs
ಸೋಮರಾಯ ತನ್ನ ಕೈಯಲ್ಲಿ ಇರತಕ್ಕಂತಾ
ರಾಯಭಾರಿ ಬಡಗಿ ಹಿಡಿದು
ಆ ಗರಡಿ ಮನಿಗಳ ತಗದಾs
ಆ ಸಮಯದಲ್ಲಿ
ಗೌಡ ಬಂಗಾಲ ಜೋಗಿ
ಸೋನಾರ ಸಿದ್ಧ ಭೈರಿ ಇದ್ದಂತವರು
ಆ ಸೋಮರಾಯಗ
ಭಾವಾನ ಬಂಡೀ ವಿದ್ಯಾ ಕಲಿಸಿದರು
ಕಲಸು ಟಾಯಮದಲ್ಲಿ
ಜಾತ ಜೋತಿ ಜಕ್ಕಪ್ಪ ಮಾಳಪ್ಪs
ಇವರೂ ಕೂಡಾ ಆ ಗುರು
ಸೋನಾರ ಸಿದ್ಧನ ಕೈಯಲ್ಲಿ
ವಿದ್ಯೆ ಪಾಠಗಳನ್ನು ಕಲಿತು
ಮಾನವರಾದ್ರು
ವಿದ್ಯಾ ಮನನವಾದ್ಕೂಡ್ಲೆ
ಆಗ ಮಾಳಿಂಗರಾಯರು
ಹನ್ನೆರಡು ವರ್ಷ ವಯಸ್ಸಿನವರಿದ್ರು
ಎಲ್ಲಿ ಶಾಡಾಬಾಬಾನ ಗುಡದಲ್ಲಿs

* * *