ಕೇಳರಿ ಮಜಕೂರಾs
ಕುಳಿತಂತ ಪಂಡಿತರಾs
ಅಮೋಘಸಿದ್ಧ ಮಾಳಪ್ನ ಕತಿ ಸಾರಾs
ಅಮೋಘಸಿದ್ಧ ಮರತ್ಯಾಕ ಇಳದವರಾs
ಶೆಟ್ಟಿ ಸಾವುಕಾರನಾಗಿ ಸಾಗಿ ಬಂದಾರಾs
ಎತ್ತು ಇದ್ದಾವೊ ಮುನ್ನೂರಾs
ಬೀಜಗುಂತಿ ಬೈಲಾಗ ಮಾಳಪ್ಪ ದೇವರಾs
ಅರವ ಆಗಿ ಅಡ್ಡಗಟ್ಟಿ ನಿಂತಾರಾs
ಅಮೋಘಸಿದ್ಧನ ನಂದಿಯ ಹಿಡಿದಾರಾs

ಅಮೋಘಸಿದ್ಧ ಅಂತಾನ ಮಾಳಪ್ಪಗs
ಹೆಂತಾ ಚಮತಕಾರಾs
ನಾನು ಇದ್ದೇನಿ ಕೇಳೊ ಶೆಟ್ಟಿ ಸಾಹುಕಾರಾs

ನಂದಿ ಯಾಕ ನೀನು ತಂದಿದಿ ದೇವರಾs
ಅವಸರ ಮಾಡಿ ಬಿಡಬೇಕೊ ಅಂದವರಾs
ಮಾಳಿಂಗರಾಯ ಅಮೋಘಸಿದ್ಧಗಂತಾನs
ಕೇಳರಿ ಮಜಕೂರಾs

ಅಮೋಘಸಿದ್ಧ ಮನದಲ್ಲಿ ವಿಚಾರಾs
ಅಮೋಘಸಿದ್ಧ ಮನಕ ಮಾಡಿ ವಿಚಾರಾs
ಧನ್ಯ ಧನ್ಯ ಸಿದ್ಧ ಹೆಚ್ಚೀನ ದೇವರಾs
ಮದಲೆ ನುಡದಾರ ಪರಮೇಶೂರಾs
ನುಡಿದಂತೆ ನಡೆಯುವ ಹಾನ ಹೆಚ್ಚಿನ ಸಿದ್ಧಾ
ಇವನೆ ಮಳಪ್ಪ ದೇವರಾs

ಮುನ್ನೂರು ಎತ್ತಲ್ಲಿ ಮಾಯ ಮಾಡ್ಯಾರಾs
ನಂದಿ ಹಿಡಿದಕೊಂಡ ದಡ್ಡೀಗಿ ಹೋಗ್ಯಾರಾs
ದಡ್ದೀ ಮ್ಯಾಲ ಮೂರುತಿ ಆದವರಾs
ಹೊತ್ತ ಮುಣಗುದಕ ಕುರಿ ದಡ್ಡ್ಯಾಗ ಹಾಸಿs
ಜೋಡಿಲೆ ಕುಳಿತವರಾs

ಮಾಳಪ್ಪ ತಗದಾನೋ ಜ್ಞಾನದ ಕತಿ ಸಾರಾs
ಸಿದ್ಧಿ ಒಳಗ ಸುಖಾ ಇಲ್ಲೇಳು ಅಂದಾರಾs
ಬೆಳತನ್ಕ ಬ್ರಹ್ಮಜ್ಞಾನ ತಿಳಿಸ್ಯಾರಾs
ಬ್ರಹ್ಮ ಜ್ಞಾನ ತಿಳಿಸಿ ಅಮೋಘಸಿದ್ದನ
ಭ್ರಮೆ ಬೈಲ ಮಾಡ್ಯಾರಾs

ಇಳಿತೊ ಕೇಳರಿ ಅವಗ ಸೂಕ್ಷ್ಮ ಹಂಕಾರಾs
ಮಾಳಪ್ಪ ದೇವರ ಕಂಡು ಹಿಡಿದಾರಾs
ತಾಯ್ಗಿ ಮಾಯದಿಂದ ತಿಳಿಸ್ಯಾರಾs
ಅವುಸರ ಮಾಡಿ ತಾಯಿ ಊಟಕ್ಕs
ತರಬೇಕ ಎಡಿ ಎಂದು
ಕಣ್ಣವ್ಗ ಹೇಳ್ಯಾರಾs

ತಾಯಿ ಕಣ್ಣವ್ವ ಮಾಡಿ ಅವಸರಾs
ಮಕ್ಕಳಿಗಿ ಎಡಿ ಬಡಸಿ ಕೊಟ್ಟು ಕಳುವ್ಯಾರಾs
ಈರವ್ವ ಶರಣಿ ಬಂದಾಳೊ ಅವಸರಾs

ಲಾಗ ಬೇಗದಿಂದ ಬೀಜಗುಂತಿಗಿ ಬಂದು
ಮೂರುತಿ ಆದವರಾs

* * *

ಪಂಡಿತ ಪಂಡಿತರಿಗೆs
ಕಂಡಿತ ಹೇಳತೇವೊs
ಕೇಳರಿ ಬಲ್ಲವರಾs
ನೀವು ಕೇಳರಿ ಬಲ್ಲವರಾs

ಹೆಡಗಿ ಹೊತ್ತುಕೊಂಡು ಈರವ್ವ ಶರಣೀs
ದಡ್ಡೀಗಿ ಬಂದವರಾs || ಹೆಡಗಿ ….. . . ||

ಮಾಳಿಂಗರಾಯ ಮಾಯದಿಂದ ನೀರs
ಮಾಯ ಮಾಡಿದವರಾs
ನೀರ ಕೊಡುವುದಕ್ಕ ಈರವ್ವ ಶರಣೀs
ತೆಂಬಗಿಗೊಂಡು ಕೊಡದ ಹಂತೇಲಿ ಹೋಗಿ
ತಾವೇ ನೋಡವರಾs
ನೀರು ಇಲ್ಲೇಳು ಅಂದವರಾs
ಕೊಡಾ ತಗಿದುಕೊಂಡು ನೀರಿಗಿ ಈರವ್ವಾs
ಸಾಗಿ ನಡದವರಾs || ಕೊಡಾ ….. . . ||

ಯೋಗಿ ಅಮೋಘಿ ಅಂತಾನ ಬೋಗೀs
ಕೇಳರಿ ಮೆಜಕೂರಾs
ಮಳಿಕೀಲಿ ಬೆಳೆಕೀಲಿ ಇಬ್ಬರ ಹಂತೀಲಿs
ಐತೆಪ್ಪ ಏಕ ಪ್ರಕಾರಾs
ಇಬ್ಬರು ಕೂಡಿ ನಾವು ಮಳಿಯ ಕರೆವೂನಂತs
ಆಗ ಜೋಡಿಲಿ ನಿಂತರಾs
ಈರವ್ವ ಶರಣಿ ಹೊಳ್ಳಿ ಬಂದ ಅಲ್ಲೀs
ನೋಡುತ ನಿಂತವರಾs || ಈರವ್ವ ….. . . ||

ಸೂಕ್ಷ್ಮ ಅಹಂಕಾರದಿಂದ ಅಮೋಘಸಿದ್ಧ ಬಂದs
ಮುಂದ ನಿಂತವರಾs
ಕಂಬಳಿ ಬೀಸಿ ಮರತ್ಯಾಕ ಮಳಿ ಮಾರs
ತಾವೇ ಕರದವರಾs

12_83_ABHMK-KUH

ಸಿಡಿಲ ಮಿಂಚ ಗುಡಗ ಗಾಳಿ ದೇವರುs
ಓಡಿನೇ ಬಂದವರಾs
ಗಡಗಡ ಅವಾಜ ಮಾಡಿದವರಾs
ಇಬ್ಬನಿ ಹಂಗ ಮಳಿ ಹನಿ ಬೀಳತಿತ್ತುs
ಕೇಳರಿ ಮಜಕೂರಾs || ಇಬ್ಬನಿ ….. . . ||

ಕುಡಿಬೇಕಂದರ ನೀರ ಸಿಗದಂಗಾಯ್ತೋs
ಹೆಂತಾ ಚಮತಕಾರಾs
ಮೂರು ಮಾತುಗಳ ಕೇಳಿ ಅಮೋಘಸಿದ್ಧs
ಹಿಂದಕ ಸರದವರಾs
ಅಷ್ಟರಲ್ಲಿ ವೀರ ಪುರುಷ ಮಾಳಿಂಗರಾಯs
ಮುಂದೆ ಬಂದವರಾs
ಗುರುವ ಬೀರಲಿಂಗನ ಧ್ಯಾನವ ಮಾಡಿs
ಕಂಬಳಿ ಬೀಸ್ಯಾರಾs || ಗುರುವ ….. . . ||

ಕಂಬಳಿ ಬೀಸಿ ಮರತ್ಯಕ ಮಳಿಗಳs
ತಾವೇ ಕರದವರಾs
ಭೂಮಿ ಬುಬ್ಬಾರಿ ಎಲ್ಲ ನೀರ ಹರಿತಿತ್ತೊs
ಕೇಳರಿ ಭಯಂಕರಾs
ಹಳ್ಳ ಹರಿವು ತುಂಬಿ ಹರಿಯತಾವs
ಎಂತಾ ಚಮತಕಾರಾs
ಆಗಿಂದಾಗ್ಗೆ ತೋರ್ಯಾನು ಚಮತಕಾರಾs
ಹೆಚ್ಚಿನ ಮಾಳಿಂಗರಾಯ ಮರತ್ಯಕ ಮಳಿಗಳs
ತಾವೇ ಕರದಾರಾs  || ಹೆಚ್ಚಿನ ….. . . ||

ಅಮೋಘಸಿದ್ಧನ ಕರ್ಕೊಂಡ ಮಾಳಪ್ಪs
ಊಟದಲ್ಲಿ ಮಾಡ್ಯಾರಾs
ಐದು ಬೀಜ ಮರಿ ಅಮೋಘಸಿದ್ಧs
ಮಾಳಪ್ಗ ಬೇಡ್ಯಾರಾs
ಐದು ಮರಿಗಳ ಸಿದ್ಧ ಮಾಳಿಂಗರಾಯs
ಕೊಟ್ಟಲ್ಲಿ ಕಳುಹ್ಯಾರಾs
ಅಹಾs ಕೊಟ್ಟಲ್ಲಿ ಕಳುಹ್ಯಾರಾs

ಎಣಗಿ ಮಠದಾಗ ಜಂಬೂ ನೀಲ ಜಕ್ಕರಾಯs
ಅಡ್ದ ಬಂದಾರಾs
ಅಡ್ಡಗಟ್ಟ ಅಮೋಘಸಿದ್ಧಗs
ಕರ್ಕೊಂಡ ಒಯ್ದಾರಾs
ಮಾಳಪ್ಪ ಕೊಟ್ಟಿದ್ದ ಐದು ಮರಿಗಳ
ಪ್ರಾಣ ಬಿಡಿಸ್ಯಾರಾs
ಪ್ರಾಣ ಬಿಟ್ಟ ಮರಿ ಅಮೋಘಸಿದ್ಧ ಎಬ್ಸಲಿಲ್ಲs
ಕೇಳರಿ ಮಜಕೂರಾs
ಜಕ್ಕಪ್ಪರಾಯ ಮರಿಯ ಎಬ್ಬಿಸಿ
ಕೆರಿ ಕುರಿಯಾಗ ಕೂಡಿಸ್ಯಾರಾs || ಜಕ್ಕಪ್ಪರಾಯ ….. . . ||

ಕಂಬಳಿ ಬೆತ್ತ ಕುಂಡ್ರವ ನಂದಿ
ಅಮ್ಸಿದ್ಧ ಬಿಟ್ಟಾರಾs
ಎಣಕಿ ಮಠದಲ್ಲಿ ಜಾಡಿ ಅಮೋಘಸಿದ್ಧ
ಬಿಟ್ಟಲ್ಲಿ ಬಂದಾರಾs
ಕ್ಯಾವಿಯ ಕಂತ್ಯಾಗಿ ಬಣ್ಣದ ಜೋಳಗೀs
ಡ್ರೆಸ್ಸು ತೊಟ್ಟಾರಾs
ಅವರು ಡ್ರೆಸ್ಸು ತೊಟ್ಟಾರಾs
ಮೃತ್ಯುಲೋಕದಾಗ ಮುಮ್ಮೆಟ್ಟ ಗಿರಿಮ್ಯಾಲs
ಅಮಸಿದ್ಧ ಇರತಾರಾs || ಮೃತ್ಯುಲೋಕದಾಗ ….. . . ||

ಅಮಸಿದ್ಧ ಮಾಳಪ್ಪ ಸೌಗಾದಿ ಸಿದ್ಧರಂತs
ತಿಳಿಸ್ಯಾರೋ ಹಿರಿಯರಾs
ಹಾಲಮತಕ ಮೇಲ ಗದ್ದಗಿ ಹುಲಜಂತಿ
ಅಡಿವೆಪ್ಪ ಹೇಳ್ಯಾರಾs

* * *

ಶಿವಸಿದ್ಧ ಮಾಳಪ್ಪ ಇದ್ದs
ಗುರುವಿನ ಭಕ್ತಿ ಮಾಡಿದ್ದೋs
ಭಕ್ತಿ ಮಾಡಿದ್ದ ಭವ ಗೆದ್ದಿದ್ದs
ಮರತ್ಯಾಕ ಮಿಗಿಲಾಗಿದ್ದs || ಭಕ್ತಿ ….. . . ||

ಬೀಜಗುಂತಿಯ ಮ್ಯಾಲ ತಾ ಇದ್ದಾs
ನಿತ್ಯ ಕುರಿಗಳ ಹಿಂಡ ಕಾಯ್ತಿದ್ದಾs

ಅಂಗದಲ್ಲಿ ಲಿಂಗ ತಿಳದಿದ್ದಾs
ಇಷ್ಟಲಿಂಗದ ಸೇವೆ ಮಾಡದ್ದಾs
ಯಜ್ಞ ಹೂಡಿದಾ ಧೂಪ ಹಾಕಿದಾs
ಹೊಗಿಯ ಎದ್ದಿತಪಾ ಮುಂದs || ಯಜ್ಞ ….. . . ||

ಸಿದ್ಧ ಮಾಳಪ್ಪನ ಭಕ್ತಿಯಿಂದs
ಭೂಮಿ ನಡುಗಿತು ಕೇಳರಿ ಆವತ್ತೋs
ಗಗನ ನಡುಗಿತು ಕೇಳರಿ ಆವತ್ತೋs
ಒಡ್ಡಿ ವಾಲಗ ಆವಾಜದಿಂದs
ಕೈಲಾಸದ ಲೀಲಾ ಲಾಯವ್ವ
ದೈತ್ಯರ್ಗಿ ತಿಳಿಸ್ಯಾಳೋ ಬಂದೋs
ಕೈಲಾಸ್ದ ಸಿರಿ ಲಾಯವ್ವs
ದೈತ್ಯರ್ಗಿ ತಿಳಿಸ್ಯಾಳೊ ಬಂದೋs
ನಾಲ್ಕು ಮಂದಿ ದೈತ್ಯರು ಬಂದs
ಹಾವಿನ ಲಡ್ಡಕ ಎಲಿ ಹಿಡದs
ಸಿದ್ಧ ಮಾಳಪ್ಪಗ ತರತೇವ ಅಂದಾರಾs
ಸರ್ಪಿನ ಬಲಿಗಳ ತಾವೇ ಗೊಂಡs
ದೈತ್ಯರೆಲ್ಲ ಕೈಲಾಸದಿಂದs
ಮರತ್ಯಕೆ ಬಂದವರಾs  || ದೈತ್ಯರೆಲ್ಲ  ….. . . ||

ಸಿಡಿಯಾಣ ಮಠಕೆ ಬಂದುs
ಬಾಗಲ್ಕ ಬಲಿಗಳ ಒಗದಾರಾs
ಮಾಳಪ್ಪ ಗುಡಿಯಾಗೆ ಇದ್ದಾರಾs
ಗುರು ಸೇವೆ ತಾನು ಮಾಡ್ತಿದ್ದಾs
ಅರುವ ಆದಿತ ಅಲ್ಲೀ
ಎತ್ತಿ ಆರುತಿ ಬೆಳಗಿದ್ದಾs
ಹೊರಗ ಬಂದಾಗ ಮಾಡಿದ್ದಾs
ಮಾಯಿಂದ ಬಲಿಗಳ ಹೊಳಿಸಿದ್ದಾs
ದೈತ್ಯರ್ಗಿ ಬಲಿಗಳ ಹಾಕಿದ್ದಾs
ಬನ್ನಿ ಗಿಡಕ ಒಯ್ದು ಕಟ್ಟಿದ್ದಾs
ಹಾವಿನ ಲಡ್ಡ ಕೈಯಲ್ಲಿ ಹಿಡದಾs
ಮೂಗಣ್ಣಗ ಮುಳ್ಳ ಹಾಸಿದ್ದಾs || ಹಾವಿನ ….. . . ||

ದೈತ್ಯರ ಹಂತೀ ಕಟ್ಟಿದ್ದಾs
ಮೂಗಣ್ಣಗ ಮುಳ್ಳ ತುಳಸಿದ್ದಾs
ಹಾವಿನ ಲಡ್ಡಲ್ಲಿ ತಾನೇ ಹೊಡಿತಿದ್ದಾs
ಹುಣಸಿನ ಜರಲಲಿ ಕರಿ ತಗದಿದ್ದಾs
ದೈತ್ಯರದು ದುಬ್ಬದ ಹುರೀs
ಬಡಿದು ತೊಗಲ ತ್ವಾಟಿ ತಗದಾs || ದೈತ್ಯರದು ….. . . ||

ಗಾಬರಿಯಾಗಿ ದೈತರು ಬಾಯಿ ತೆರೆದುs
ಹೊಟ್ಟಿ ಹಸದಾವು ನಮ್ಮದು ಅಂದಾರಾs
ಅಂಗಾಲ ಬೆಂಕಿ ಆಗಿs
ದುಬ್ಬ ಉರಿಸಿಕೊಂತs
ಶರಣ ಬಂದ್ರು ಮಾಳಪ್ಪಗ ಅಲ್ಲೀs
ಹೋಗ್ತೀವಿ ನಾವು ಕೈಲಾಸ್ಕ ಅಂದಾರಾs || ಶರಣ ….. . . ||

ಮಾಯದ ಕರುಣದಿಂದಾs
ಹಂತಿ ಬಿಡಿಸಿ ಮಠಕ್ಕೆ ತಂದಾs
ಹಾಲುಬಾನ ಹೊಟ್ಟಿಗಿ ಹಾಕಿದ್ದಾs
ದೈತರ ಗರ್ವ ತೊಳದಿದ್ದಾs
ಮಾಳಪ್ಪ ಜ್ಞಾನ ಹೇಳಿ
ಹೋಗಿ ಬರಬೇಕ ಅಂದಾs || ಮಾಳಪ್ಪ ….. . ||

ಬಿಟ್ಟರ ಸಾಕು ಅಂದs
ಬಿಡ್ಡ ದೈತ್ಯರು ಓಡಿ ಹೋದಾರಾs
ಹೋಗಿ ಹೇಳ್ತಾರ ಸಿರಿದೇವಿ ಮುಂದs
ನೀವು ಹೋಗಬ್ಯಾಡ್ರಿ ಅಲ್ಲಿಗಿ ಅಂದಾರಾs
ಮಾಯದಾಟದಲಿ ಮಾಳಪ್ಪ
ಮರತ್ಯಕ ಮಿಗಿಲದಾನಂದಾರಾs || ಮಾಯದಾಟದಲಿ ….. . . ||

ಹುಲಜಂತಿ ಗ್ರಾಮ ನುಡಿ ಚಂದಾs
ಕವಿ ಅಡಿವೆಪ್ಪನ ನುಡಿಯಿಂದಾs
ಕೇಳಿದವರೆಲ್ಲ ಆದಾರು ದಂಗಾs
ದೇಶಾದ ಮ್ಯಾಲ ಪದಗಳs
ಕೊಟ್ಟ ಕಳವ್ಯಾರೋ ಚಂದಾs || ದೇಶಾದ ….. . . ||

* * *

ಮಾಯಿನ ಮೀರಿ ನಡೆದವನೆ ಜಾಣಾs
ಮಾಯಿ ಹತ್ರ ಬಿದ್ದವ ಅನಸ್ಯಾನ ಕ್ವಾಣಾs
ಮಾಯಿ ಕತಿ ಕೇಳ್ರೆಪ್ಪ ನೀವು ಪೂರ್ಣಾs
ಶಿವನ ಮಗಳು ಶ್ರೀದೇವಿ ಲಾಯವ್ವನ ಕತಿ
ಕೇಳರೆಪ್ಪಾ ಸಂಪೂರ್ಣಾs

ದೈತ್ಯರ ಮಾತ ಕೇಳಿ ಹೊಂಟ ನಿಂತರೇನಾs
ಕ್ವಾಣಿನ ಬಂಡಿ ಹೂಡಿ ಸಮಾನಾs
ಇಸದ ಕೊಡಾ ಒಂದು ಬದೀಲಿ ಇಟ್ಟುಕೊಂಡು
ಹೊಂಟ ನಡೆದಾರೇನಾs

ಲಾಯವ್ವ ಮುಂದ ಸಿರಿದೇವಿ ಹಿಂದs
ಹಿಡಿದ ಒಯ್ಯಬೇಕೆಂದ್ರೊ ಸಿದ್ಧ ಮಾಳಪ್ಪನಾs
ಹಾವಿನ ಲಡ್ದ ಕೈಯಾಗ ಹಿಡಿದರೇನಾs
ಪೊತ್ರ ಜನಕ ಬಂಡಿ ಹೊಡಿಲಾಕ ಹಚ್ಚೀs
ಕೈಲಾಸ ಬಿಟ್ಟಾರೇನಾs

ಕೊಲ್ಲಾಪೂರ್ಕ ಇಳಿತೊ ಬಂಡಿ ಎನಾs
ಸಾಗಿ ಮುಂದಕೆ ಬಂದ್ರು ಅವರೇನಾs
ಮಾಳಪ್ಗ ಅರುವ ಆದಿತೇನಾs
ಮಾಯ್ದಿಂದ ಬಂಡಿಗಾಲಿ ಒಡದಾನ
ಬಂಡಿ ಹಳ್ಳಕೇನಾs

ಬಂಡಿಗಾಲಿ ತಯ್ಯಾರ ಮಾಡುವs
ಕೆಲಸದಲ್ಲಿ ತೊಡಗಿಸಿ ಕುಂತ್ರೋ ಸುಮ್ಮನಾs
ಮಾಳಪ್ಪ ಹೇಳಿ ಹ್ವಾದೊ ಗುರುವಿನಾs
ಬಂಡಿಗಾಲಿ ಹಾಯ್ಸಿಗೊಂಡು ಬಂದಾರ ಅವರು
ಕಂಡಾರು ಸಿಡಿಯಾಣಾs

ಬಂದು ಕೇಳತಾರ ಅವರು ಲಿಂಗ ಬೀರಪ್ಪನಾs
ಎಲ್ಲಿ ಹೋಗ್ಯಾನ ನಿನ್ನ ಶಿಷ್ಯ ಮಾಳಣ್ಣಾs
ಅವಸರ ಮಾಡಿ ಹೇಳಬೇಕೊ ಸುಮ್ಮನಾs
ಅಕ್ರಾಳ ವಿಕ್ರಾಳ ಇವರ ರೂಪ ನೋಡಿs
ಗುರುವ ತಿಳಿಸ್ಯಾನ ಅವಸರಲೇs

ಶಿಷ್ಯ ಹೋಗ್ಯಾನ ಕ್ವಾಣೂರ ಸ್ಥಳಕೇನಾs
ಅಲ್ಲಿಗಿ ಹೋದರ ನಿಮಗ ಸಿಗ್ತಾನ ಶರಣಾs
ಗುರ್ತ ಕೇಳಿ ಮುಂದಕ ಸಾಗ್ಯಾರೇನಾs
ಇಲ್ಲಿಗಿ ಒಂದು ಸಂದ ಮುಗದಿತೋs

ಕತಿ ಉಳಿತೊ ಕೇಳರಿ ಸಂಪೂರ್ಣಾs
ಹಲಜಂತಿ ಗ್ರಾಮಾ ಕವಿಗಳ ಠಿಕಾಣಾs
ಅಡಿವೆಪ್ಪ ಮಾರಾಯ್ರು ತಿಳಿಸ್ಯಾರ ಪುರಾಣಾs
ಹಾಲಮತ ಬೆಳಸಂದೊ ಪರಿಪೂರ್ಣಾs
ಹಿಂಡ ವೈರಿ ಗಂಡ ಚೆಂಡ ಆಡಿನ ಪುಂಡs
ಮಾಳಪ್ಪ ದೇವರ ಪುರಾಣಾs

* * *

ಲಾಯವ್ವ ಕರದಾಳೊ ಏ ದೇವ ನಿನಗs
ಲಾಯವ್ವ ಕರದಾಳೊ ಏ ಅಣ್ಣ ನಿನಗs
ಹಾದಿ ನೋಡುತ ದಾರಿ ಕೇಳುತs
ಬಂದಾಳೊ ತಳಕs

ಮಾಳಪ್ಪ ಹೋಗ್ಯಾನ ಕ್ವಾಣೂರದಾಗs
ಲಾಯವ್ವ ಬಂಡಿ ಬಿಟ್ಟಾಳೋ ಭವದಾಗs
ಬಂಡಿ ಹೋದಿತೊ ಕ್ವಾಣೂರ ಮಠದಾಗs

ಲಾಯವ್ವ ಕರದಾಳೊ ಏ ಅಣ್ಣ ನಿನಗs
ಕರಿ ದೇವರಿಗಿ ಕೇಳತಾಳೊ ಆಗs
ಶರಣ ಮಾಳಪ್ಪನ ಸುದ್ದಿ ಹೇಳೊ ನನಗs
ಕರೀ ದೇವರ ಅಂತಾನೊ ಅವಳೀಗೀs
ಶರಣ ಇದೆ ಈಗ ಹೋಗ್ಯಾನs
ಹಗರಗಿ ಮಠದಾಗs

ಬಂಡಿ ಹೊಳಸ್ಯಾಳ ಕೇಳರಿ ಆಕಾಶದಾಗs
ಗಾಲಿ ಬಡದಿತೊ ಕಳಸೀಗೀs
ಕರಿ ದೇವರ ಕಳಸ ಬಿತ್ತೊ ಆಗs
ಕಳಸ ಇಲ್ಲೊ ನೋಡ್ರಿ ಗುಡಿಗೀಗs

ಸಾಗಿ ಬಂದಳೊ ಹಂಗರಗಿ ಭೂಮ್ಯಾಗs
ಗಲಲಿಂಗನ ಕೇಳ್ಯಾಳೊ ಆಗs
ಸಿದ್ಧ ಮಾಳಪ್ಪ ಎಲ್ಲಿ ಇರತಾನೋs
ಹೇಳೊ ನನಗೀಗs
ಗಜಲಿಂಗ ಹೇಳತಾನ ಅವರೀಗೀs
ಮಾಳಪ್ಪ ಹೋಗ್ಯಾನೊ ಹುನ್ನೂರ ಮಠದಾಗs
ಅಲ್ಲಿ ಹೋಗ್ಬೇಕು ತಾಯಿ ಬೇಗs

ಮಾತ ಕೇಳಿ ಹೊಂಟಾರ ಆವಾಗs
ಹುನ್ನೂರ ಮಠಕ ಬಂದಾರ ತಾವು ಬೇಗs
ಅಲ್ಲಿ ಕುಂತಿದ್ದೊ ಭೀರಣ್ಣ ಆಗs
ಮತ್ತು ಹೇಳ್ತಾನ ಕೇಳರಿ ಅವರೀಗೀs
ಶರಣಾಂದ್ಗಿ ಮಠಕ ಹೋಗರಿ ಬೇಗs
ಗುರು ಸೋನಾರ ಸಿದ್ಧನ ಹಂತೇಕs
ಅಲ್ಲಿ ಇದ್ದಾನ ಮಾಳಪ್ಪ ಭಕ್ತಿ ಜಂಬರದಾಗs
ಹೋಗಿ ಕೇಳರೆವ್ವ ಸಿಗತಾನ ನಿಮಗs

ಬಂಡಿ ಬಿಟ್ಟಾರ ಭೂಮಿಯ ಮ್ಯಾಗs
ಸಾಗಿ ಬಂದಾರೋ ಶರಣಾಂದ್ಗಿ ಒಳಗs
ಗುರು ಸೊನಾರ ಸಿದ್ಧನ ಕೇಳ್ಯಾರ ಆಗs
ಸೊನ್ನಾರ ಸಿದ್ಧ ಹೇಳ್ತಾನ ಅವರೀಗೀs
ಇದೆ ಈಗ ಹೋದ ಸಿಡಿಯಾಣದಾಗs
ಅವರು ಹೇಳ್ಯಾರ ಕೇಳ್ರಿ ಆವಾಗs

ಬಂಡಿ ಬಿಟ್ರೊ ಭೂಮಿ ತೆಲಿಮ್ಯಾಗs
ಬರರರ ನಡಿಸ್ಯಾರೊ ಆವಾಗs
ಹೊಳ್ಳಿ ಬಂದಾರೊ ಸಿಡಿಯಾಣದೊಳಗs

* * *