ಸಿದ್ಧ ಮಾಳಪ್ಪನ ಕತಿ ಕೇಳರಿ
ಹೇಳುವೆ ನಾ ನಿಮಗs

ಸಿಡಿಯಾಣ ಮಠದಾಗ ಮಾಯದ್ಲಿ ನಿಂತಾನs
ಕೇಳ್ರೆಪ್ಪ ಆವಾಗs
ಮಾಯ್ದಿಂದ ಮೂಗುತಿ ಮಾಯ ಮಾಡ್ಯಾನಾs
ಕೇಳರಿ ಆವಾಗs
ಮೆಟ್ನಾಲ್ಗಿ ಹಚ್ಚಿ ಮಣ್ಣ ತೂರತಾರs
ಕೇಳರಿ ಆವಾಗs
ಎತ್ತ ತೂರಿದರ ಸಿಗವಲ್ದ ಮೂಗುತಿs
ಗಾಬರಿಯಾದಾರಾಗs
ಇಬ್ಬರು ಗಾಬರ್ಯಾದಾರಾಗs
ನೀರು ಕುಡ್ದ ಕೇಳ್ರಿ ಹೊಳ್ಳಿ ನಿಂತಾರೊs
ಮಣ್ಣ ತೂರುದಕs
ಹೊಳ್ಳಿ ಬಂದ ಸಿದ್ಧ ಮಾಳಪ್ಪ ಹೇಳ್ತಾನs
ಕೇಳರಿ ತಾಯಂದ್ಯಾರ್ಗೀಗs
ನಿಮ್ಮ ಮೂಗುತಿ ನಿಮ್ಮ ಉಡಿಯಾಗ ಲಾಯವ್ವ
ಹೈರಣ್ಯಾಕ ಭವದಾಗs || ನಿಮ್ಮ ಮೂಗುತಿ ….. . . ||

ಉಡಿಯ ಜಾಡಿಸಿದಾಗ ಮೂಗುತಿ ಉದುರಿತೊs
ಬಿತ್ತೊ ಧರಣಿಮ್ಯಾಗೋs
ಆವಾಗ ಬಿತ್ತೊ ಧರಣಿಮ್ಯಾಗೋs
ಮೂಗಿನ ಮೂಗುತಿ ಮೂಗ್ನ್ಯಾಗ ಇಟ್ಟಕೊಂಡು
ಕೇಳ್ತಾರ ಅವನಿಗೀs || ಮೂಗಿನ ….. . ||

ಸಿದ್ಧ ಮಾಳಪ್ಪಾ ಎಂಬಾವ ಎಲ್ಲೀs
ಹೇಳಬೇಕೊ ನಮಗs
ಮುಪ್ಪಾನ ಮುದುಕಾಗಿ ಬಂದಿದ್ದೊ ಮಾಳಣ್ಣಾs
ಹೇಳಿದ್ದೋ ಅವರಿಗೀs

ಬಾರವ್ವಾ ತಾಯ್ದ್ಯಾರ ನಾನೇ ಮಾಳಣ್ಣಾs
ಇದ್ದೀನಂದನಾಗs
ಅವನು ಇದ್ದೀನಂದನಾಗs
ಇಷ್ಟ ಮಾತು ಕೇಳಿ ಹುಚ್ಚಾಗಿ ಇಬ್ಬರು
ನಿತ್ತಾರ ಇದರೀಗೀs

ಬೇಗ ಬರಬೇಕ ನೀನು ಕೈಲಾಸ್ಕ ಹೋಗೂದುs
ಐತಿ ನೋಡೊ ಈಗs

ಮಾಳಿಂಗರಾಯ ಅಂತಾನ ಅವರೀಗೀs
ಕೇಳರೆಪ್ಪ ಈಗs

ಹೈರಾಣಾಗಿ ಮೂಗುತಿ ಕಳಕೊಂಡು
ಹೋಗೀರಿ ಭವದಾಗs
ತಾಯವ್ವ ಹೋಗೀರಿ ಭವದಾಗs
ಮೂಗುತಿ ಭೂಮಿಗಿ ಬಿದ್ದರ ಮುತ್ತೈದಿತನs
ಎಲ್ಲಿ ಐತಿ ನಿಮಗs

ಮಾಳಪ್ಪನ ಭಕ್ತೀಗಿ ಒಲಿತಾರೊ ಇಬ್ಬರುs
ನಿಂತಾರ ಭವದಾಗs
ಅವರು ನಿಂತಾರs ಬವದಾಗs
ಸಿದ್ಧರಲ್ಲಿ ಶೀಲವಂತಿ ಆಗಿ
ಮೆರಿತಾರೋ ಜಗದಾಗs

ಸಿಡಿಯಾಣದಲ್ಲಿ ವಾಸ ಮಾಡ್ಯಾರೊs
ಕೇಳರಿ ಆವಾಗs
ಸಿದ್ಧ ಮಾಳಪ್ಪನ ಭೆಟ್ಟಿಗಿ ಬರತಾರs
ಹುಲಜಂತಿ ಊರೀಗೀs
ವರುಷಕ್ಕ ಒಮ್ಮೆ ದೀಪಾವಳಿ ದಿನಾs
ಭೆಟ್ಟಿ ಕೊಡತಾರಾಗs
ಅವರು ಭೆಟ್ಟಿ ಕೊಡತಾರಾಗs
ಹೆಚ್ಚಿನ ಮಾಳಪ್ಪ ಹೆಚ್ಚ ಹಾನಂತs
ತಿಳಿದರೊ ಮನದಾಗs

* * *

ಮೂರು ಲೋಕದಾಗ ಮೂಡಿ ಮಾಳಿಂಗರಾಯs
ಹುಟ್ಟಿನಿ ಬಂದವರಾ ಕೀರ್ತಿ ಪಡದವರಾs
ಜಗವೆಲ್ಲ ಉದ್ದಾರ ಮಾಡಿದವರಾs
ಹುನ್ನೂರು ಮಠದಲ್ಲಿ ಬೀರಲಿಂಗನs
ಸೇವಾ ಮಾಡಿದವರಾs

ಗುರುವ ಬೀರಲಿಂಗ ಮಾಳಿಂಗರಾಯಾಗs
ಕರದ ಹೇಳವರಾs
ದೇಶ ಸಂಚರಾ ಮಾಡುದಕ ನಾವುs
ಹೋಗೂನು ಅಂದವರಾs

ಮಂಗಳ ಮಾರಿ ತೇಜಿ ಮಾಳಣ್ಣಾs
ಹಿಡಕೊಂಡ ತಂದವರಾs
ತೇಜಿ ತಯಾರ ಮಾಡಿ ತೇಜಿಯ ಇಟ್ಟುs
ಗುರವೀಗಿ ಕರದವರಾs

ಗುರುವ ಬೀರಲಿಂಗ ತೇಜಿಯ ಮ್ಯಾಲೆs
ಮೂರುತಿ ಆದವರಾs
ಆಹಾ ಮೂರುತಿ ಆದವರಾs
ತೇಜಿಯ ಮುಂದ ಮಾಳಿಂಗರಾಯಾs
ಸಾಗಿ ನಡದವರಾs

ಗುರುವಿನ ತೇಜಿ ಮಾಳಪ್ನ ಹಿಂಬಾಲs
ಬೆನ್ಹತ್ತಿ ಬಿಟ್ಟವರಾs
ಅಲ್ಲೆಲ್ಲಿ ಪವಾಡ ಮಾಡುತs ಮಾಳಣ್ಣs
ಸಾಗಿನಿ ನಡದವರಾs

ಹುಟ್ಟಿಯ ಬಂದವರಾs
ಜಗವೆಲ್ಲ ಉದ್ದಾರ ಮಾಡಿದವರಾs
ಅಂಗ ವಂಗ ಮಲಿಯಾಳ ದೇಶಾs
ತಿರುಗುತ ನಡದವರಾs
ಭಕ್ತಗ ಬಾಗ್ಯಾ ಬಂಜೀಗಿ ಮಕ್ಕಳs
ಕೊಡುಕೊತ್ತ ಬಂದವರಾs

ಭಾರತದಲ್ಲಿ ಬಾರಾ ಜೋತಿರ್ಲಿಂಗs
ದರ್ಶನ ಮಾಡಿದವರಾs
ಇಬ್ಬರು ಕೂಡಿ ದರ್ಶನ ಮಾಡಿದವಾರಾs
ಅಲ್ಲೆಲ್ಲಿ ಮೆಟ್ಟಾ ಮಾಡುತ ಭಕ್ತಾರ್ನಾs
ಉದ್ಧಾರ ಮಾಡಿದವರಾs

ತಿರಗೂತ ವಿದರ್ಭದಲ್ಲಿs
ಸಾಗಿನಿ ಬಂದವರಾs
ಕೋರಿಯ ಶೆಟ್ಟಿ ಭಕ್ತೀಗಿ ಒಲಿದು
ತಾವೇ ನಿಂತವರಾs
ಅಲ್ಲಿ ತಾವೇ ನಿಂತವರಾs

ಪಳಸ ಎಂಬ ಗುಡ್ದದ ಮೇಲೇs
ಮೆಟ್ಟ ಮಾಡಿದವರಾs
ಬೀರಲಿಂಗ ಮಹಿಮಾ ರೂಪದಿಂದs
ಲಿಂಗಾಗಿ ಕುಂತವರಾs

ಸಿದ್ಧ ಮಾಳಿಂಗರಾಯ ಕೆಲವೊಂದು ದಿವಸs
ಭಕ್ತಿಯ ಮಾಡಿದವರಾs
ಅಲ್ಲಿ ಭಕ್ತಿಯ ಮಾಡಿದವರಾs
ಕೋರಿ ಶೆಟ್ಟಿಗಿ ವರಗಳ ನೀಡೀs
ಮುಂದಕ್ಕ ನಡದವರಾs

ಪಳಸ ಎಂಬ ಗ್ರಾಮವೆ ಬಿಟ್ಟುs
ಸಾಗಿನಿ ಬಂದವರಾs
ಮಾನ ದೇಸದಲ್ಲಿ ಮಹಿಮಾ ತೋರಿ
ಕೀರ್ತಿನೇ ಪಡದವರಾs

ಆಹಾ ಉದ್ಧಾರ ಮಾಡಿದವರಾs
ಜಗವೆಲ್ಲ ಪವಾಡ ಮಾಡಿದವರಾs

ಅಲ್ಲೆಲ್ಲೆ ತಿರಗೂತ ಹಾಲಬಾವಿಗೀs
ಸಾಗಿನೆ ಬಂದವರಾs
ಹಾಲ ಬಾವಿಯಲ್ಲಿ ದ್ಯಾಮವ್ನ ಭಕ್ತಿಗೀs
ತಾವೇ ಒಲಿದವರಾs
ಸಿರಿಯ ಸಂಪತ್ತು ಅಷ್ಟ ಐಶ್ವರೀs
ಬೇಕಾದ್ದ ಕೊಟ್ಟವರಾs
ಕೇಳರಿ ಇದ್ದಂತ ಮಜಕೂರಾs

ಹೆಂಡಿ ದ್ಯಾಮವ್ಗ ಗರ್ವ ಬಂದರs
ಹೊಳ್ಳಿನೆ ಹೋದವರಾs
ಗರ್ವ ಬಂದಾಗ ಆರುವ ಕೊಟ್ಟs
ಮೋಕ್ಷ ನೀಡಿದವರಾs
ಹೆಂಡಿ ದ್ಯಾಮವ್ವ ಹೋಗೀs
ದೇವರ ದ್ಯಾಮವ್ವ ಅಂತs
ಕೀರ್ತೀನೇ ಸಾರವರಾs
ಅಲ್ಲಿ ಕೀರ್ತೀನೆ ಸಾರವರಾs

ಅಲ್ಲೆಲಿ ಮೆಟ್ಟ ಮಾಡುತ ಬೀರಲೀಂಗs
ಹೊಳ್ಳಿನೆ ಬಂದವರಾs
ಹುನ್ನೂರು ಸ್ಥಳದಲ್ಲಿ ಬೀರಲೀಂಗಗ ತಾನು
ನಿಜವಾಗಿ ಉಳಿದವರಾs

ಹುಲಜಂತಿ ಸ್ಥಳದಲ್ಲಿ ಮಾಳಿಂಗರಾಯs
ವಾಸ ಮಾಡಿದವರಾs
ಅಂದಿನಿಂದ ಇಂದಿಗಿ ಅನೇಕ ಪವಾಡಾs
ಮಾಡುತ ಬಂದವರಾs
ಜಗ ವೆಲ್ಲ ಕೀರ್ತೀನೇ ಬೆಳಸವರಾs

* * *

ಪಾರ್ವತಿ ಶಂಭಾ ಇಬ್ಬರು ಜೋಡೀಲೀs
ಪಗಡಿ ಆಟ ಕೈಲಾಸದಲ್ಲಿ ಹೂಡಿದವರಾs
ಆಟ ಬಾಳ ನಡದಿತಲ್ಲೀs
ಮಾಳಪ್ಪ ಗುರುವಿನ ಭಕ್ತಿ ಮಾಡತಿದ್ದೊs
ಆದೆ ಯಾಳೆದಲ್ಲೀs

ಗುರುವಿನ ಸ್ಥಾನ ಇತ್ತೊ ಸಿರಡೋಣದಲ್ಲೀs
ಭಕ್ತಿ ಮಾಡತಿದ್ದೊ ಗುರವಿಂದ ಅಲ್ಲೀs
ಧೂಪದ ಹೋಗಿ ಕೈಲಾಸದಲ್ಲಿ
ಹಂತಾ ಭಕ್ತಿ ಮಾಳಪ್ಪ ಮಾಡತಿದ್ದೊs
ಸತ್ಯುಳ್ಳ ಸಿರಡೋಣದಲ್ಲೀs

ಪಾರ್ವತಿ ಅಂತಾಳೊ ಕಒಲಾಸದಲ್ಲೀs
ಊದಿನ ಹೊಗಿ ಎಲ್ಲಿಂದ ಬಂತರೀs
ಶಂಕರ ಸುಳ್ಳ ಆಡಬ್ಯಾಡರಿಲ್ಲೀs

ಸತ್ಯ ಹೇಳರಿ ಸ್ವಾಮಿ
ಸತ್ಯುಳ್ಳ ಶರಣಾs
ಯಾವನು ಮರತ್ಯದಲ್ಲೀs

ಶಂಕರ ಹೇಳ್ತಾನೊ ಪಾರ್ವತಿಗಲ್ಲೀs
ಮಾಳಪ್ಪ ಹೆಚ್ಚಿನವ ಮರತ್ಯಾದಲೀs
ಇಷ್ಟ ಮಾತ ಪಾರ್ವತಿ ಕೇಳ್ಯಾಳಲ್ಲೀs
ಹೆಂತಾ ಮಾಳಪ್ಪ ಹಾನ
ಸ್ವಂತ ನೋಡುನಂತs
ಪಾರ್ವತಿ ಹೇಳ್ಯಾಳಲ್ಲೀs

ಪಾರ್ವತಿ ಶಂಭಾ
ಇಬ್ಬರು ಜೋಡೀಲೀs
ಕೈಲಾಸ ಇಳದಾರೊ
ಸಿರಡೋಣದಲ್ಲೀs
ಮಾಳಪ್ನ ಭಕ್ತಿಗಾಗಿ ಅಲೀs
ಮಾರ್ವಾಡಿ ವೇಷ ತೊಟ್ಟು
ಮಾದೇವ ಕುಂತಾನೋs
ಕಾಂತರ ವನದಲ್ಲೀs

ಮಾದೇವ ಬಂದ
ಸುದ್ದಿ ಮಾಳಪ್ಪಗಲ್ಲೀs
ಆರವ ಆಯ್ತೋs
ತನ್ನ ಮನದಲ್ಲೀs
ಮಾದೇವಿ ಕುಂತಾನs ಕಾಂತರದಲ್ಲಿs
ಚಂದರಮ ಚಪಗೊಡ್ಲಿ
ಧೂಪಾರ್ಥಿ ಹಿಡಿಕೊಂಡುs
ಸಾಗಿ ನಡದಾನಲ್ಲೀs
ಚಂದರಮ ಚಪಗೊಡ್ಲಿ
ಹಿಡಿದಾನ ಕೈಯಲ್ಲೀs
ಕಾಂತರದಲ್ಲೀs
ಗಿಡ ಬಳ್ಳಿ ಕಡದಾನೊ ಅಲ್ಲೀs
ಮಾಳಪ್ಪ ಸಾಗಿ ನಡದಾನಲ್ಲೀs
ಲಾಗ ಬೇಗದಿಂದs
ತನ್ನ ಗುರುವೀಗೀs
ಆರತಿ ಬೆಳಗ್ಯಾನಲ್ಲೀs

ಕೀವು ನೆಂತ್ರ ಸೋರತಿತ್ತೊs
ಮಾದೇವಂದದಲ್ಲೀs
ಪಾರ್ವತಿ ನೊಣಾs
ಹೊಡಿತಿದ್ದಳಲ್ಲೀs
ಧನ್ಯ ಧನ್ಯ ದೇವ್ರ
ಬಂದ ಕುಂತಿರೀs
ಹೆಂತಾ ಕಾಂತರದಲ್ಲೀs

ಎತಗೊಂಡ ಒಯ್ದೋs
ಸಿದ್ಧ ಇಬ್ಬರಿಗಲ್ಲೀs
ನಾನಾ ಪರೀಲೆ ಭಕ್ತಿ
ಮಾಡ್ಯಾನೊ ಅಲ್ಲೀs
ಮಾಳಪ್ಪ ಕುಂತಾನೋs
ಭವದಲ್ಲೀs
ಶೂರ ಮಾಳಪ್ಪ
ಅಲಗ ಹಿಡಿದುs
ಆಟ ಆಡ್ಯಾನಲ್ಲೀs

ಸಿದ್ಧರ ಕತಿ ಭಾಗ
ಸಿದ್ಧಾಂತದಲ್ಲೀs
ಕವಿ ಹುಟ್ಟಿ ಬರತಾವೊs
ಹುಲಜಂತ್ಯಲ್ಲೀs
ಕವಿ ನುಡಿ
ಅಡಿವೆಪ್ಪ ಹೇಳ್ಯಾನಿಲ್ಲೀs
ಗಂಡ ಮೆಟ್ಟ ಹುಲ್ಜಂತಿ ಮಾಳಪ್ಪs
ಒಲದಯ್ಯ ನಮ್ಮ ಮ್ಯಾಲೀs

* * *

ಪಾರ್ವತಿ ಮಾದೇವ್ಗ ಅಂತಾಳಲ್ಲೀs
ನಿನ ಮಗಾ ಮಾಳಪ್ಪ ಭೂಲೋಕದಲ್ಲೀs
ಅಲಗಿನ ಆಟ ಆಡ್ಯಾನಲ್ಲೀs

ಕಳ್ಳ ಕರಚು ತಗದs
ಮುಂಗೈಗೆ ಸುತ್ಯಾನೋs
ದೇವಿ ನೋಡ್ಯಾಳಲ್ಲೀs
ಪಾರ್ವತಿ ಮಾತ ಕೇಳ್ಯಾನಲ್ಲಿs
ಓಡಿ ಹೋಗಿ ಶಿವ
ಹಿಡದಾನೋ ಮಾಳಪ್ಪಗಲ್ಲೀs

ಕಳ್ಳ ಹಿಡದಾನೊ ಕೈಯಲ್ಲೀs
ಸೋರ್ತಿತ್ತೊ ರಗತಾs
ಮಾಳಪ್ಪಂದಲ್ಲೀs
ನಂದನವನದಲ್ಲೀs
ಕಳ್ಳ ಹಾಕ್ಯಾನೋs
ಮಾಳಪ್ನ ಹೊಟ್ಟೆಯಲ್ಲೀs
ಕಳ್ಳಗಿ ಕಳ್ಳs
ಮಾದೇವ ಜೋಡ್ಸ್ಯಾನೊ ಅಲ್ಲೀs

ಹೊಟ್ಟಿಯ ಮ್ಯಾಲs
ಕೈಯ ಎಳದಾನಲ್ಲೀs
ಮಾಳಪ್ಪ ಎದ್ದು
ಶಿವ ಶಿವ ಅಂದೂs
ಪಾದ ಹಿಡದಾನಲ್ಲೀs

ಪಾರ್ವತಿ ಅಂತಾಳೋ ಶಂಕರಗಲ್ಲೀs
ಮಾಳಪ್ಪ ಹೆಚ್ಚಿನವ ಮರತ್ಯದಲ್ಲೀs
ಬೇಡಿದ್ದು ಕೊಡುವುನು ಅವನಿಗಿಲ್ಲೀs

ಏನ ಬೇಡತಿ ಬೇಡೋ ಮಾಳಪ್ಪಾs
ಕೊಡುವೆನೊ ನಾನಿಲ್ಲೀs
ಮಾಳಪ್ಪ ಕೈಯ ಜೋಡ್ಸಿ ನಿಂತಾನಲ್ಲೀs
ಬಡವರ್ಗಿ ಭಾಗ್ಯ ಬೇಡ್ಯಾನೊ ಅಲ್ಲೀs

ವರುಷಕ ಒಮ್ಮೆ ದರಶನ ಕೊಡಬೇಕs
ಅಂತ ವಚನ ಕೊಡಬೇಕಲ್ಲೀs
ಮಾಳಪ್ಪ ಕೈಯ ಜೋಡ್ಸಿ ನಿಂತಾನಲ್ಲೀs

ಮಾದೇವ ತಿಳಿದಾನ ತನ್ನ ಮನದಲ್ಲೀs
ಭಕ್ತಿವಾನ ಮಾಳಪ್ಪ ಮರತ್ಯಾದಲ್ಲೀs
ಮಾಳಪ್ನ ಭಕ್ತಿಗಿ ವಿಚಾರ ನಡಿಸ್ಯಾರೊs
ಕೈಯಲ್ಲಿ ಗಿರಿಯಲ್ಲೀs

ಪಾರ್ವತಿ ಪರಮೇಶೂರ ಕೈಲಾಸದಲ್ಲೀs
ಆನಂದವಾಗಿ ಕುಳಿತಾರೊ ತಮ್ಮ ಮನದಲ್ಲೀs

ಸಿದ್ಧರ ಕತಿ ಭಾಗ ಸಿದ್ಧಾಂತದಲ್ಲೀs
ಕವಿ ಹುಟ್ಟಿ ಬಂದಾವೊ ಹುಲಜಂತ್ಯದಲ್ಲೀs
ಕವಿ ನುಡಿ ಆಡಿವೆಪ್ಪ ಹೇಳ್ಯಾನಿಲ್ಲೀs
ಗಂಡ ಮೆಟ್ಟ ಹುಲಜಂತಿ ಮಾಳಪ್ನs
ದಯ ನಮ್ಮ ಮ್ಯಾಲೀs

* * *

ಜೀವಲೋಕ ಇದು ಮರತ್ಯದಲ್ಲೀs
ಪವಾಡ ಮಾಡ್ಯಾನೊ ಈ ಜಗದಲ್ಲೀs
ಮಾಳಪ್ಪ ಸಾಗಿ ನಡದಾನಲ್ಲೀs

ಬೀಜಗುಂತಿಗಿ ಬಂದು ಬಾಗೀs
ತಾನೇ ನೋಡ್ಯಾನಲ್ಲೀs
ಬೀಜಗುಂತಿ ಮ್ಯಾಲ ಕುಂತಾನೋ ಅಲ್ಲೀs
ಮರಿಗೋಳು ಆಡೂದು ನೋಡ್ಯಾನಲ್ಲೀs
ಹೂಡಾಕ ಮರಿಯ ತಗೊಂಡ್ಯಾನಲ್ಲೀs
ಎತ್ತಾಡಿ ಮುದ್ದಾ ಕೊಟ್ಟಾನ ಮರಿಗೊಳಿಗೀs
ಆನಂದವಾಯ್ತೋ ಅಲ್ಲೀs

ಬಾಗಿಗಿ ಆನಂದ ಪಡಿಸ್ಯಾನೊ ಅಲ್ಲೀs
ಬೀಜಗುಂತಿ ಬಿಟ್ಟು ಮಾಳಪ್ಪ ನಡದಾನೋs
ಬಂದಾನೊ ಬಬ್ಬುಲಿ ವನದಲ್ಲೀs
ಬನ್ನಿ ಮಾಹಾಕಾಳಿ ಹತ್ತಿರ ಬಂದುs
ನಿಂತಾನೊ ನೋಡಲ್ಲೀs

ನಾಲ್ಕು ದಿಕ್ಕ ಸೋಸಿ ನೋಡ್ಯಾನಲ್ಲೀs
ಮನಸಿನ ವಿಚಾರ ತಾನು ಮಾಡ್ಯಾನಲ್ಲೀs
ಹೋಮಿಗಿ ಕೊರಡಾ ತಂದಾನಲ್ಲೀs
ಚಂದನ ಪಿಂಪಳ ಶ್ರೀಗಂಧ ಬನ್ನಿ
ತಂದ ಒಟ್ಯಾನಲ್ಲೀs

ಎಳ್ಳ ಬದಾಮ ಕೊಬರಿ ಒಗದಾನೊ ಅಲ್ಲೀs
ನೂಲ ಹತ್ತಿ ಎಳಿ ಸುತ್ಯಾನೊ ಅಲ್ಲೀs
ಪೂಜಿಗಿ ತಯ್ಯಾರಾದನಲ್ಲೀs
ಅರಿಷಿಣ ಕುಂಕುಮ ಹಚ್ಚಿ ಮಾಳಪ್ಪs
ಕಾಯಿ ಒಡೆದಾನಲ್ಲೀs

ಹೋಮದ ಪೂಜಾ ಮುಗಸ್ಯಾನಲ್ಲೀs
ಕಪ್ಪರ್ಲೆ ಲೋಬಾನ ಹೊತ್ತಿಸ್ಯಾನಲ್ಲೀs
ಹಾಲು ತುಪ್ಪಾ ಮ್ಯಾಲ ಹೊಡದಾನಲ್ಲೀs
ಹೋಮಿನ ಮ್ಯಾಲ ಹೂವಿನ ಮಗ್ಗೀs
ಚೆಲ್ಲಿ ಬಿಟ್ಟಾನಲ್ಲೀs

ಬನ್ನಿ ಮಾಂಕಾಳಿ ಮರ ಏರ್ಯಾನಲ್ಲೀs
ಸುತ್ತ ಮುತ್ತ ಮಾಳಪ್ಪ ನೋಡ್ಯಾನಲ್ಲೀs
ಗುರುವಿನ ಧ್ಯಾನಾ ಮಾಡ್ಯಾನಲ್ಲೀs
ಹೂವಿನ ಮಗ್ಗಿ ಅರಳಿದ್ದ ನೋಡೀs
ಕೊಂಡ ಹಾರ್ಯಾನಲ್ಲೀs
ಮಾಳಪ್ಪ ಕೊಂಡ ಹಾರ್ಯಾನಲ್ಲೀs

ಮುಂದ ಒಂದು ಹಸ್ತಾ ತೋರ್ಯಾನಲ್ಲೀs
ಸೋಮರಾಯ್ಗ ಅರುವ ಆದಿತಲ್ಲೀs
ಬೀಜಗುಂತಿ ಬಿಟ್ಟು ನಾಲ್ಕು ಮಂದಿ ಮಕ್ಕಳುs
ಓಡಿ ಬಂದರಲ್ಲೀs

ಸಿದ್ಧರ ಕತಿ ಭಾಗ ಸಿದ್ಧಾಂತದಲ್ಲೀs
ಕವಿ ಹುಟ್ಟಿ ಬರತಾವೊ ಹುಲಜಂತ್ಯಲ್ಲೀs
ಅಡಿವೆಪ್ಪ ಮಾರಾಯ್ರು ಹೇಳ್ಯರಿಲ್ಲೀs
ಗಂಡ ಮೆಟ್ಟ ಹುಲಜಂತಿ ಮಾಳಪ್ಪನs
ದಯಾ ನಮ್ಮ ಮ್ಯಾಲೀs

* * *