ಕ್ವಾಣೂರ ಮಠದಾಗs
ದೇಗೊಂಡ ಗೌಡಾss
ಹಬ್ಬ ಹುಟ್ಟಿಸಿದ್ದೇನೋss
ಆಹಾss ಹಬ್ಬ ಹುಟ್ಟಿಸಿದ್ದೇನೋss
ಇದ್ದಕೋರ ಮೋಡಿಕೋರ
ಮೂಲ ಮಲ್ಲಡ್ಯಾರs
ಜನ ಕೊಡ್ಸಿದಾನೋss || ಇದ್ದಕೋರ ….. . . . ||

ಕಂಟೀ ಕೇಳರಿ
ಕಾಮಣ್ಣನ ಕೈಯಾಗs
ಭಂಡಾರ ಕಳವಿದೇನೋss
ಬೀಜದಗುಂತಿ ಬಯಲಾಗ ಮಾಳಪ್ಪs
ಮೆಟ್ಟ ಮಾಡಿದೇನೋss
ಸಿದ್ಧ ಮಾಳಪ್ಪನ
ಹಂತೇಲಿ ಕಾಮಣ್ಣಾs
ಸಾಗಿ ಬಂದನೇನೋss
ಆವಾಗ ಸಾಗಿ ಬಂದನೇನೋss
ದೇಗೊಂಡ ಗೌಡರು
ಹೇಳಿದ ಸುದ್ಧಿss
ತಾನೇ ತಿಳಸ್ಯಾನೇನೋss || ದೇಗೊಂಡ ….. . . . ||

ಜತ್ತನಾರ್ಯಾಣ ಪೂರಕ ಮಾಳಪ್ಪs
ಸಾಗಿ ಬಂದನೇನೋss
ಕಾಮಣ್ಣ ಕರಕೊಂಡs
ಮನಿಯಾಗ ಬಂದೂs
ಭಂಡಾರ ಹಿಡಿದಾನೇನೋss || ಕಾಮಣ್ಣ ….. . . . ||

ಕ್ವಾಣೂರ ಮಠಕ ಬರ್ತೇನಂತs
ತಾನು ಹೇಳ್ಯಾನೇನೋss
ಕಾಮಣ್ಣಗ ತಾನು ಹೇಳ್ಯಾನೇನೋss
ಹೇಳಿಕೊಟ್ಟು ಮಾಳಿಂಗರಾಯಾs
ತಯ್ಯಾರಾದನೇನೋss
ಬೀಜಗುಂತಿ ಬೈಲಾಗ ಮಾಳಪ್ಪs
ತಾನು ಇರತಾನೇನೋss || ಬೀಜಗುಂತಿ ….. . . . ||

ಮಾಡೋಳಿ ಮಲ್ಯಾಗ
ಕರಸಿ ಮಾಳಿಂಗರಾಯs
ತಾನು ಹೇಳ್ಯಾನೇನೋss
ಹಬ್ಬಕ್ಕ ಹೊಂಟಿದ್ದೆs
ನನ ಹೊತಿಗಿ ಮಾಸ್ಯಾನs
ಒಕ್ಕೊಂಡ ಬರಬೇಕ ನೀನೂss
ತಮ್ಮಾ ಒಕ್ಕೊಂಡ
ಬರಬೇಕು ನೀನೂs
ಮಾಡೋಳಿ ಉಣಸಿs
ಹಾಲಬಾನ ಉಣಸಿs
ವಸ್ತ್ರಾ ಕೊಟ್ಟನೇನೋ  || ಮಾಡೋಳಿ ….. . . . ||

ಊಟ ಮಾಡಿ ಮಾಡೋಳಿ ಮಲ್ಯಾ
ಅಲ್ಲಿ ವಸ್ತ್ರ ಗೊಂಡನೇನೋss

ಸಿದ್ಧ ಮಾಳಪ್ನ ಅರಬಿಯಲ್ಲಾs
ಬಿಂಡಿ ಕಟ್ಯಾನೇನೋs

ಕಮಾಯಿ ಬಿಂಡಿ
ಕಟಗೊಂಡ ಮಲ್ಯಾs
ಸಾಗಿ ನಡೆದಾನೇನೋss
ಆಹಾs ಸಾಗಿ ನಡೆದಾನೇನೋss
ಕುಂದದ ಮಾತs
ನಿಂದ್ಯದ ಮಾತs
ಆಡುತ ಬಂದಾನೇನೋs || ಕುಂದದ ….. . . . ||

ಮಳ್ಳ ಕುರಬ ಇವ
ಆಡುತ ಮಾತs
ನಾನು ಕೇಳಲಾರೇನೋss
ಇಷ್ಟ ಮಾತs
ಪಣಾ ತೊಟ್ಟುs
ಮಲ್ಲಣ್ಣಾ ಮನಿಗಿ ಬಂದಾನೇನೋss || ಇಷ್ಟ ….. . . . ||

ಮನಿಯಲ್ಲ್ಲಿ ಬಂದು
ಸುಣ್ಣದ ಟೊಳ್ಯಾಗs
ವಸ್ತ್ರ ಎದ್ಯಾನೇನೋss
ಮಲ್ಲಣ್ಣ ವಸ್ತ್ರ ಉದ್ಯಾನೇನೋss
ಸುಣ್ಣದ ಟೊಳ್ಯಾಗs
ಬಟ್ಟಿ ಮಲ್ಲಣ್ಣಾs
ತಾನು ಎದ್ಯಾನೇನೋss
ಅಹಾs ತಾನು ಎದ್ಯಾನೇನೋss || ತಾನು ….. . . . ||

ಹೊತ್ತೇರಿ ಮುಂಜಾನೆ
ಮಾಣಿಕ ಶೆಟ್ಟಿ
ಮ್ಯಾಲಿ ಹೇರ್ಯಾನೇನೋss
ಕತ್ತಿಮ್ಯಾಲ ಹೊತಿಗೊಂಡು ಮಲ್ಲಣ್ಣಾs
ಹಳ್ಳಕ ಬಂದಾನೇನೋss
ಹಾಸಗಲ್ಲಿನ ಮ್ಯಾಲs
ಬೀಸ್ಯಾಡಿ ಹೊತ್ತಗಿ
ತಾನು ಒಗದಾನೇನೋss || ಹಾಸಗಲ್ಲಿನ ….. . . . ||

ಬೀಜದಗುಂತಿ ಬಯಲಾಗ ಮಾಳಪ್ಪಗss
ಅರುವ ಆರಿತೇನೋss
ಅವಗ ಅರುವ ಆದಿತೇನೋss
ಹೇಳಿದ ಮಾತ ಕೇಳಲಿಲ್ಲ ಮಲ್ಯಾs
ಮಾಡೂದು ಇನ್ನ ನೀನೂs || ಹೇಳಿದ ….. . . . ||

ಅಷ್ಟರೊಳಗ ಗಾಳಿಯ ದೇವರುs
ಆದಾನೊ ಪ್ರಸನ್ನೋss
ಯಾಕ ಮಾಳಿಂಗರಾಯs
ಚಿಂತಿಯ ಮಾಡತೀs
ಹೇಳಬೇಕ ನೀನೂss ||ಯಾಕ  ….. . . . ||

ಅಂತರ್ಲೆ ಒಗೆದುs
ಅಂತರ್ಲೆ ಒಣಗಿಸಿs
ಹೇಳಿದ್ದೆಪ್ಪ ನಾನೂss
ಹೊತಿಗಿ ಹೇಳಿದ್ದೆಪ್ಪ ನಾನೂss
ಅದನ್ನ ಬಿಟ್ಟು
ಸುಣ್ಣದ ಟೊಳ್ಯಾಗs
ಹೊತಿಗಿ ಎದ್ಯಾನೇನೋss  || ಸುಣ್ಣದ ….. . . . ||

ಕತ್ತಿ ಮ್ಯಾಲ ಮಲ್ಯಾs
ಹಿಡಕೊಂಡ ಹೊತ್ತಿಗಿs
ಹಳ್ಳಕ ಬಂದಾನೇನೋss
ಹಾಸಗಲ್ಲಿನ ಮ್ಯಾಲs
ಬೀಸ್ಯಾಡಿ ಬಟ್ಟೆs
ತಾನು ಒಗೆದಾನೇನೋss || ಬೀಸ್ಯಾಡಿ ….. . . . ||

ಏನೇನು ಮಾಡೂದುs
ನಿನಗೆ ಗೊತ್ತುs
ಮಾಳಪ್ಪ ಅಂದಾನೇನೋss
ಗಾಳಿದೇವ್ಗs
ಮಾಳಪ್ಪ ಅಂದಾನೇನೋss
ಅಷ್ಟರೊಳಗೆ ಕೋಪಾಗಿ ಗಾಳಿದೇವಾs
ಹೊಳ್ಳಿ ಬಂದಾನೇನೋss  || ಅಷ್ಟರೊಳಗೆ ….. . . . ||

ಹಾಸಗಲ್ಲಿನ ಮ್ಯಾಲs
ಹಾಡ್ಯಾಡಿ ಮಲ್ಯಾs
ಬಟ್ಟೆ ಒಗಿತ್ತಿದನೇನೋss
ಸುಂಟರಗಾಳ್ಯಾಗಿs
ಸುಳಿದು ವಾಸುದೇವಾs
ಮಲ್ಯಾಗ ಎತ್ತಿ
ಅಂತ್ರಾಳ್ಕ ಒಯ್ದು
ತೆಳಗ ಬಿಟ್ಟನೇನೋss
ಹಗ್ಗ ಇಲ್ಲದೆ
ಹೆಡಗೂಡಿ ಕಟ್ಟಿಸಿ
ತಾನೂ ಬಿಟ್ಟನೇನೋss || ಹಗ್ಗ  ….. . . . ||

ಬಾಯೀಲಿ ಮೂಗೀಲಿ
ಮುಕಳ್ಯಲ್ಲೀ ನೈಂತ್ರ್ಯs
ಮಲ್ಯಾಂದ ಜಿಗದನೇನೋss
ಊರ ಜನರೆಲ್ಲs
ಮಲ್ಯಾನ್ನ ಹೊತಗೊಂಡs
ಮನಿಗಿ ಒಯ್ದಾರೇನೋss || ಊರ ….. . . . ||

ನಾಡ ವೈದ್ಯಗಾರs
ಆಗ ಮುಗದಾರs
ಕೇಳರೆಪ್ಪ ಇನ್ನೂss
ಆಹಾ ಕೇಳರೆಪ್ಪ ಇನ್ನೂss
ಎನೂ ಮಾಡಿದರs
ಮಲ್ಯಾನ ಬ್ಯಾನೀss
ಹಂಗ್ಲಿಲ್ಲಂದನೇನೋss || ಮಲ್ಯಾನ ….. . . . ||

ಶಿವನ ಮನಿಯ
ಸಿದ್ಧ ಮಾಳಿಂಗರಾಯಾಗs
ಅರುವ ಆದಿತೇನೋss
ಅರುವ ಆಗಿ ಗುರು
ಮಾಯದ ಕರುಣಾs
ಆಗ ಬಂದಿತೇನೋss || ಮಾಯದ ….. . . . ||

ಕೈಲಾಸದಿಂದ ಶಿವನ್ಮನಿ ಕೊರವಿಗೀs
ತಾನೇ ಕರಸ್ಯಾನೇನೋss
ಮಾಳಣ್ಣಾ ತಾನೇ ಕರಸ್ಯಾನೇನೋss
ಹುಲಜಂತಿ ಮಠದಲ್ಲಿ
ಶಕುನಾ ಸಾರ ಅಂತs
ತಾನು ತಿಳಿಸ್ಯಾನೇನೋss || ಹುಲಜಂತಿ ….. . . . ||

ಗೋಪಾಳ ಬುಟ್ಟಿ
ಹೊತಗೊಂಡ ಕೊರವೀss
ಸಾಗಿ ನಡದಾಳೇನೋss
ನಾರ್ಯಾಣಪುರದಲ್ಲಿ
ಬಂದು ಹೊಯ್ಕಾs
ತಾನು ನುಡದಾಳೇನೋss || ಬಂದು ….. . . . ||

ರಾಣಿ ರೈತರು
ಮಕ್ಕಳು ಕೊರವಿನs
ಕರ್ಕೊಂಡೊಯ್ದರೇನೋss
ಆಗ ಕರ್ಕೊಂಡೊಯ್ದರೇನೋss
ಮಲ್ಯಾನ ಭವಿಷಾ
ಕೇಳುತ ಜನಾs
ತಾವೇ ನಿತ್ತಾರೇನೋss || ಮಲ್ಯಾನ ….. . . . ||

ಶಿವನ್ಮನಿ ಕೊರವಿ
ಹಾಸಿ ರಂಗ ಹಾಕೀs
ತಾನು ನಿತ್ತಾಳೇನೋss
ಹಾಸಿ ರಂಗಹಾಕಿ
ಕೂಗ್ಯಾಡಿ ದೇವರುs
ತಾನು ಕರದಾಳೇನೋss || ಹಾಸಿ ರಂಗ ….. . . . ||

ಬಾರೋ ಮಲ್ಯಾ ನೀನು
ಮಾಳಪ್ಪನ ಮಾತs
ನೀನು ಮೀರಿದಿಯೇನೋss
ತಮ್ಮಾ ನೀನು ಮೀಂದಿಯೇನೋss
ಹೊಸ ಬಟ್ಟೆ ಈಗ
ಆಯಾರ ಮಾಡಬೇಕು
ತಾನು ಅಂದಾಳೇನೋss || ಹೊಸ ….. . . . ||

ಅಂಗಾರ ಹಚ್ಚಿದಾಗs
ಬಂಗಾರ ಆದೀತs
ಕೇಳರಪ್ಪಾ ಬ್ಯಾನೋss
ಸಂದಿಗಿ ಸೂಲ ತೊಳದs
ಮತ್ತ ಬ್ಯಾನೀss
ಅಲ್ಲಿ ಹೋದಿತೇನೋss || ಸಂದಿಗಿ….. . . . ||

ಮಾಡೊಳ್ಳಿ ಮಲ್ಯಾs
ಗಾಬ್ರ್ಯಾಗಿ ಏಳಂಪುರs
ಬಾಜಾರ್ಕ ಹೋಗ್ಯಾನೇನೋss
ಆಹಾ ಬಾಜಾರ್ಕಾ ಹೋಗ್ಯಾನೇನೋss
ಏಳಂಪುರದಲ್ಲಿ ಹೊಸ ಬಟ್ಟೆಗಳ
ತಾನೇ ಕೊಂಡಾನೇನೋss || ಏಳಂಪುರದಲ್ಲಿ ….. . . . ||

ಬಟ್ಟೆ ಕೊಂಡ ತಾs
ಮಾಯಿ ಬಿಂಡಿಕಟ್ಟಿ
ತಾನು ನಡದಾನೇನೋss
ತಾಯಿ ಮಕ್ಕಳು
ಸಾಗಿ ಬಂದಾರೋss
ಬೀಜಗುಂತಿಗೇನೋss || ಸಾಗಿ  ….. . . . ||

ಹೋಸ ಆಯಾರಾs
ಮಾಳಪ್ಪಗ ಮಾಡ್ಯಾರಾs
ಕೇಳರೆಪ್ಪ ಈಗs
ಆಹಾ ಕೇಳರಪ್ಪ ಈಗs
ಹಳಿಯ ಬಟ್ಟೆಗಳ
ಹಾಕಿದ ಮಲ್ಯಾs
ಮಾಳ್ಯಪ್ಪಗ ಮಾಡ್ಯಾರೇನೋss || ಹಳಿಯ  ….. . . . ||

ಮಾಳಿಂಗರಾಯಾ ತನ್ನ ಮಹಿಮಾದಿಂದs
ಪವಾಡ ಮಾಡ್ಯಾನೇನೋss
ಮಲ್ಯಾನ ಬ್ಯಾನಿ
ಆಗಿಂದ ಆಗs
ಬೈಲ ಮಾಡ್ಯಾನೇನೋss || ಮಲ್ಯಾನ ….. . . . ||

ಸತ್ಯಯುಗದಲ್ಲಿ ಸತ್ಯುಳ್ಳ ಮಾಳಣ್ಣss
ಕೀರ್ತಿ ಪಡದಾನೇನೋss
ಆಗ ಕೀರ್ತಿ ಪಡದಾನೇನೋss
ಸಿದ್ಧ ಮಾಳಪ್ಪs
ಚರಣ ಕಮಲದಲ್ಲೀs
ಅಡಿವೆಪ್ಪ ಹೇಳ್ಯಾನೇನೋss

* * *

ಮಾಳಿಂಗರಾಯ ಏಳ್ನೂರ s
ಬ್ಯಾಡರ್ನ ಹೊಡಿದುs
ಪಾತಾಳ ಹಿಡಿದು
ಪಾಯಾ ಸೋಸಿs
ಒಳಗ ಪಾಯಾದಲ್ಲಿ ಚಂಡಹಾಕಿ
ಚಂಡಿನ ಮ್ಯಾಲ
ಚಕ್ರಗಟ್ಟಿ ಕಟ್ಟಿ
ಅದಕ್ಕ ರುದ್ರಗಟ್ಟಿ ಅನಿಸಿ
ಮುಂದ ಆಗ ಹೋಗುಗಳ ಭವಿಷ್ಯಗಳನ್ನs
ವರುಷಕ್ಕೊಮ್ಮೆ ಆರಸ್ ಭಾರತs ಹುಣ್ಣಿಮೆಗೆ
ಮಾಡ್ತೇನಂತ ಹೇಳಿ
ತಾನು ಸತ್ಯುಳ್ಳ ಭೂಮಿ ಸಿಡಿಯಾಣದಲ್ಲಿs
ತನ್ನ ಗುರು ಬೀರೇಶನ ಇಟ್ಟು
ನಾರ್ಯಾಣಪುರದಲ್ಲಿ ಬಂದು
ತಾನು ಇರು ಸ್ಥಳಕ
ಮೆಟ್ಟನ್ನು ಮಾಡಿಕೊಂಡು
ತಾಯಿ ಕಣ್ಣವ್ವನ ಅಲ್ಲಿಟ್ಟು
ಆ ನಾರ್ಯಾಣಪುರದಿಂದs
ಮೂರು ಮೈಲು ಅಂತರದಲ್ಲಿ
ಕುರಿ ದಡ್ಡಿಗಳನ್ನ ನಿರ್ಮಾಣ ಮಾಡಿ
ಆ ಕುರಿ ದೊಡ್ಡಿ ಬಿಟ್ಟು
ಮೂರು ಮೈಲು ಅಂತರದಲ್ಲಿ
ಮರದಡ್ಡಿಯನ್ನು ಹಾಕಿ
ದಿನಂಪ್ರತಿ ಬನ್ನಿ ಸಾವಿರ
ಬಾಗಿಗಳನ್ನ ಕಾಯ್ತ ಇದ್ದಾs
ಆಗ ಮಾಳಿಂಗರಾಯನು
ಅಂಗೈಗೆ ಮುನ್ನೂರು ಲಿಂಗs
ಮಂಡಿಗಿ ಸಾವಿರ ಲಿಂಗs
ಸಾವಿರ ಏಳ್ನೂರು ಒಂದು ಲಿಂಗದs
ಬಗತೀ ಒಂದೇ ರಾತ್ರಿಯಲ್ಲಿs
ಮಾಡ್ತಾ ಇದ್ದs
ಹಿಂಗ ಎಷ್ಟೋ ಕಾಲ
ಗತಿಸಿ ಹೋದ ನಂತರs
ತಾಯಿ ಕಣ್ನವ್ವ ತನ್ನ ಮನಸ್ಸಿನಲ್ಲಿ
ಚಿಂತೆ ಮಾಡ್ತಾ ಇದ್ಳುs
ಅದು ಏನಂತs
ಅಂದ್ರ ಹಿರಿ ಮಗನಾದ
ಜಂಬೂಲನೀಲ ಜಕ್ಕಪ್ಪನು
ಸ್ವಾದರ ಮಾವನ ಮಗಳಾದs
ಬಾಕಾಬಾಯಿಯನ್ನ ಲಗ್ನವಾಗಿs
ತಾನು ಏಣಕಿ ಎಂಬ ಗ್ರಾಮದಲ್ಲಿ
ಬರಮಲಿಂಗನ ಸೇವೆ ಮಾಡುತ್ತಾs
ಆನಂದದಿಂದ ಕಾಲ ಕಳೀತಾ ಇದ್ದಾs
ಸಣ್ಣ ಮಗಾ ಮಾಳಿಂಗರಾಯಂದೂs
ಲಗ್ನ ಮದಿ ಕಾಲ ಕಳಿಯಬೇಕಂತ
ಹಿಂಗ ಆಕಿ ಮಾವಗ್ಲೂ
ಚಿಂತೆ ಮಾಡ್ತಾ ಇದ್ದಾಗs
ಒಂದಾನ ಒಂದ ಕಾಲದಲ್ಲಿ
ಒಂದಾನ ಒಂದ ದಿನದಲಿ
ಲಿಂಗ ಬೀರಯ್ಯ ದೇವರು
ಪಂಚರ ಗಾಂಜೀ ಸೇದಿ
ಆ ಸಿಡಿಯಾಣ ಮಠದಲ್ಲಿ
ತಮ್ಮ ಗದ್ದಗಿ ಮ್ಯಾಲ ಕುತ್ತಿದ್ದಾಗs
ಅರುವ ಸಂಜಿನಾಯ್ತು
ಆಗ ಮಾಳಿಂಗರಾಯನು
ಗುರುಸೇವೆ ಮಾಡಿ ಕಡೇಕಾಗಿ
ಗುರುವಿನ ಪಾದಕ ಹೊಂದಿದಾಗs
ಗುರು ಬೀರೇಶ್ವರನು
ಮಾಳಿಂಗರಾಯಗ ಏನಂತಾನs
ಎಪ್ಪಾs ಮಾಳಿಂಗರಾಯಾs
ನೀನು ನಂದು ಆಜ್ಞೆಯನ್ನು ಪಾಲಿಸಬೇಕಾಗೇತಿ
ಅಂದ ಸಮಯದಲ್ಲಿ
ಮಾಳಿಂಗರಾಯ ತ್ರಿಕಾಲ ಜ್ಞಾನಿಯದ್ದs
ಗುರು ಏನ್ ಹೇಳ್ತಾನಂಬುದು
ಇವನ ಮನಸ್ಸಿನಲ್ಲಿ ತಿಳೀತುs
ಆ ಗುರುನ ವಾಕ್ಯ ಮೀರ್ದಂಗಾಗಿ
ಮಾಳಿಂಗರಾಯನು
ಎಪ್ಪಾs ನೀವೇನು ಹೇಳತೀರಿ
ಅದನ್ನ ನಾ ಪಾಲಿಸ್ತಾ ಇದ್ದೀನಿ
ಅಂತ ಅಂದ ಕೂಡ್ಲೆ
ಆಗ ಬೀರೇಶ್ವರನು ಮನಸ್ಸಿನಲ್ಲಿ
ಹರ್ಷವಾದಾs
ಅಷ್ಟರಲ್ಲಿ ಸೋನಾರಿ ಎಂಬ ಸ್ಥಳದಲ್ಲಿ
ಏಳು ತೆಲಿ ಗುರುಗಳಾದಂತವರು
ಕಾಳ ಭೈರವನಾಥ
ಪಂಚರ್ ಗಾಂಜೀ ಸೇದಿ
ತನ್ನ ಹವಳದ ಹರಿ
ಗದ್ದಗಿ ಮ್ಯಾಲ ಕುಂತಿದ್ದಾs
ಕುಂತ ಸಮಯದಲ್ಲಿ
ತಾಯಿ ಕಣ್ಣವ್ವ ಚಿಂತಿ ಮಾಡ್ತಿದ್ದುದು
ಆತನಲ್ಲಿ ಕೂಡ ಅರುವುಂಟಾಯ್ತು
ಅರುವುಂಟಾದ ಸಮಯದಲ್ಲಿ
ಶಿಶು ಮಗ ಸೋಮರಾಯನಿಗೆ
ಕರದ ಏನ್ ಹೇಳ್ತಾ ಇದ್ದಾನs
ಎಲೋ ಮಗನ ಸೋಮರಾಯಾs
ಈಗ ಸದ್ಯದಲ್ಲಿ ಮಾಳಿಂಗರಾಯ್ನ
ಲಗ್ಗನಾ ಮಾಡಬೇಕಾಗೇದs
ಹುಲಜಂತಿ ಸ್ಥಳಕ್ಕ ಹೋಗಬೇಕಾಗೇದs
ಅಂದ ಸಮಯದಲ್ಲಿ ಸೋಮರಾಯನು
ಯಾಕಾಗವಲ್ದಪ್ಪ ಅಂತಂದs
ಆಗ ಗುರುವಿನ ಪಾದಕs ಎರಗಿದಾs
ಗುರು ಸೋನಾರ ಸಿದ್ಧs
ಅಲಕ್ಷ ಅಂತಂದ ಮಾಯಾದಾs
ಶಿಷ್ಯನ ಕರಕೊಂಡುs
ಅವರಿಬ್ಬರೂ ಕೂಡಿ ಎಲ್ಲಿಗೆ ಉದಯಾದ್ರು
ಜಿತ್ತನಾರಾಯಣಪುರ ಗ್ರಾಮs
ಹುಲಜಂತಿಯಲ್ಲಿ ಬಂದ್ರು
ಅಷ್ಟರಲ್ಲಿ ಲಿಂಗಬೀರೇಶನು ಹಾಗೂ ಮಾಳಿಂಗರಾಯನು
ಹುಲಜಂತಿಗೆ ಬಂದ್ರುs
ಅವರು ನಾಲ್ಕು ಜನಾ ಕೂಡಿ
ಆ ಹುಲಜಂತಿ ಮಠದಲ್ಲಿ
ಬಣ್ಣದ ಅಗಸಿಯಲ್ಲಿ ಹಾಯ್ದು
ಆ ಮಾಳಿಂಗರಾಯ್ರು ಸ್ಥಳಕ ಬಂದ್ರು
ತಳಕ ಬಂದ ಕಾಲಕs
ತಾಯಿ ಕಣ್ಣವ್ವ ಇದ್ದಾಕಿ
ಗುರುಗೋಳ ಬಂದ್ರಂತ ತಿಳಕೊಂಡು
ಕಂಚಿನಾರತಿ ಹಚ್ಚಿಕೊಂಡು
ಮುತ್ತಿನ ಶರಗ ಮರಿ ಮಾಡಿ
ಆ ಗುರುಗಳಿಗೆ ತನ್ನ ಪತಿ ಸೋಮರಾಯ್ಗ
ಬೆಳಗಿ ಅವರ ಪಾದಕ್ಕೆರೆಗಿದಳು
ಆಗ ಅಷ್ಟೂರು ಕೂಡಿ
ಹಿಮ್ಮೇಳ ಮುಮ್ಮೇಳ
ತಾಯದ ಪಡಸಲಿಗ್ಯಾಗ ಕುತ್ತು
ಮಾಳಿಂಗರಾಯನ ಬಗ್ಗೆ ವಿಚಾರ ಮಾಡಿ
ಎಲ್ಲಿಗೆ ಹೋಗಿರ್ತಾರು
ತಾಂಬಾ ಎಂಬ ಗ್ರಾಮದಲ್ಲಿ ಹೋಗ್ತಾರು
ತಾಂಬಾ ಎಂಬ ಗ್ರಾಮಕ್ಕ ಹೋಗ್ತಾರು,
ತಾಂಬಾ ಎಂಬ ಗ್ರಾಮದಲ್ಲಿ ಹೋಗಿ
ತಾಂಬಾ ಗೌಡನ ಉದರದಲ್ಲಿ ಹುಟ್ಟಿದಂತಾ
ಲಕ್ಷಿ ಬಾಯೀನ ಗಟ್ಟಿಮಾಡಿ
ಹೊಳ್ಳಿ ಹುಲಜಂತಿ ಮಠದಲ್ಲಿ
ಒಂದು ಶುಭ ಮೂಹೂರ್ತ ನೋಡಿ
ಅಷ್ಟೂರು ಕೂಡಿ ಮಾಳಿಂಗರಾಯನs
ಲಗ್ನ ಮಾಡತಾರs
ಆ ಲಗ್ನಾ ಮಾಡಿ
ತಮ್ಮ ತಮ್ಮ ಸ್ಥಾನಕ ಹೋಗಿ ಮುಟ್ಟಿರ್ತಾರ
ಆಗ ಮಾಳಿಂಗರಾಯನು
ನಿತ್ಯ ಕಾಲದಲ್ಲಿ ಏನ್‌ ಮಾಡ್ತಾನ್‌
ದಿನಂಪ್ರತಿ ಬನ್ನಿಗಿ ಸಾವಿರ
ಬಾಗಿಗಳನ್ನ ಕಾಯ್ತಾ ಇದ್ದಾನs
ಗುರು ಸೇವೆ ಮಾಡ್ತಾ ಇದ್ದಾನs
ಪ್ರಪಂಚ ಹಾಗೂ ಪಾರಮಾರ್ಥ
ಎರಡೂ ಮಾಡುತ್ತs
ಸಾಗಿ ನಡಿತಾ ಇದ್ದಾನs

* * *