ಜಗದಾಗ ಜಾಹೀರಾs
ಹೆಚ್ಚಿನ ಸ್ಥಾನಂದಾs
ಮುಂಡಗನೂರಾs
ಜಗದಾಗ ಜಾಹೀರಾs
ಸಿದ್ಧ ಮಾಳಿಂಗರಾಯ
ಮಹಿಮಾ ತೋರಿದಾs
ಕೇಳರೆಪ್ಪ ಬಂದೋs || ಸಿದ್ಧ  ….. . . . ||

ಹಬ್ಬ ಕಾರ್ಯ ಅಲ್ಲಿ
ಮುಗಸಿ ಮಾಳಿಂಗರಾಯs
ಕರಸಿದ್ಧಗ ಹೇಳಿದ್ದೋs
ಬುವ್ವಪ್ಗ ಭಕ್ತೀಗಿ
ಅಲ್ಲಿಟ್ಟು ಮಾಳಿಂಗರಾಯಾs
ಸಾಗಿನಿ ನಡದಿದ್ದೋs || ಬುವಪ್ಗೆ ….. . . . ||

ಭಕ್ತರ್ನ ಉದ್ಧಾರ ಮಾಡಿದ್ದೋs
ಸತ್ತ ಜೀವಿಗಳ ಪ್ರಾಣವೆ ಪಡಿಸೀs
ಮುಂದ ನಡದಿದ್ದೋs || ಸತ್ತ ಜೀವಿಗಳ ….. . . . ||

ಸಾವಳಗಿ ಗ್ರಾಮದಲ್ಲೀs
ಬರಮಪ್ಪ ಎಂಬಾವs
ಸತ್ತ ಬಿಟ್ಟಿದ್ದೋs
ಭಂಡಾರ ಹೊಡದು
ಸಿದ್ಧ ಮಾಳಿಂಗರಾಯs
ಪ್ರಾಣ ಪಡಿಸಿದ್ದೋs || ಭಂಡಾರ ….. . . . ||

ಹಾಲಮತಕ ಮೇಲ
ಗದ್ದಗಿ ಹುಲಜಂತಿ
ಮೆಟ್ಟವೇ ಮಾಡಿದ್ದೋs
ಖಾಯಂ ಆಗಿ
ಮಠದಲ್ಲಿ ಮಾಳಪ್ಪs
ತಾನೇ ಇರತಿದ್ದೋs || ಖಾಯಂ ….. . . . ||

* * *

ಹಿರಿಯರಾ ಕೇಳರಿ ಜರಾss
ಕತಿ ಕುಳಿತಂತ ಪಂಡಿತರಾs || ಹಿರಿಯರಾ ….. . . . ||

ಮಾನವರಲ್ಲಿ ಮಾಳಪ್ಪ ಬಂದವರಾs
ಮಾದೇವರಾಗಿ ಮರತ್ಯಾಕ ಮೆರದವರಾs
ಹೆಚ್ಚಿನವರಾs ಬಂದವರಾs
ತಾವು ದೇವರಾಗಿ ಮೆರೆದವರಾs || ಹೆಚ್ಚಿನವರಾs ….. . . . ||

ಹೆಂಡಿ ದ್ಯಾಮವ್ವನ ಭಕ್ತಿಗಿ ಒಲಿದಾರಾs
ಸಿರಿ ಸಂಪತ್ತು ಬೇಕಾದ್ದ ಕೊಟ್ಟವರಾs
ತಿರಿಗ್ಯಾರಾs ಸರಿ ಸಂಚಾರಾs
ಮಾಡಿ ಮಾಡಿನೇ ಬಂದವರಾs || ತಿರಗ್ಯಾರಾ ….. . . . ||

ಕೊಲ್ಲಿ ಪಾಕಿಯಲ್ಲಿ ಮಾಳಪ್ಪ ಹೋದಾರಾs
ಸತ್ತ ಬೂತಾಳ ಪ್ರಾಣಾ ಪಡದಾರಾs
ರೇವಣ ಸಿದ್ಧರಾs ತಾವು ಕಂಡರಾs
ಗುರು ಭೆಟ್ಟಿಯಾಗಿ ಬಂದವರಾs || ರೇವಣ ….. . . . ||

ಚಪ್ಪನ್ನ ದೇಶ ತಿರಗುತ ನಡದಾರಾs
ಬಂಗಾಲ ದೇಶಕ್ಕs ಮಾಳಣ್ಣ ಬಂದಾರಾs
ಜಯಪಾಲರಾs ವಿದ್ಯಾಗಾರರಾs
ನೋಡಿ ಮಾಳಣ್ಣ ನಿಂತವರಾs || ಜಯಪಾಲರಾs ….. . . . ||

ಆತನ ವಿದ್ಯಾ ಬಂದ ಮಾಡಿದವರಾs
ಕಾಜಿ ಮುಲ್ಲಾನ ಮನಿಗಳ ಹೊಕ್ಕರಾs
ಮುಸಲ್ಮಾನರಾs ನೋಡಿ ಚಮತ್ಕಾರಾs
ಧನ್ಯ ಧನ್ಯ ಅಲ್ಲಾ ಅಂದಾರಾs || ಮುಸಲ್ಮಾನರಾs ….. . . . ||

ಕುರುಡ ಇದ್ದವ್ಗ ಕಣ್ಣ ಕೊಟ್ಟರಾs
ಕಾಲ ಇಲ್ಲದವಗ ನಡಸಿ ಕಳಿಸ್ಯಾರಾs
ನಾನಾ ತರಾ ಬ್ಯಾನಿ ಬಂದವರಾs
ಬಂದು ಮಾಳಪ್ಪಗs ಭೆಟ್ಟಿಯಾದಾರಾs || ನಾನಾ ತರಾ ….. . . . ||

ಅನೇಕ ತರದ ಮಹಾರೋಗ ಹೊಡದವರಾs
ನೋಡಿ ಮಾಳಪ್ಪ ಬೈಲ ಮಾಡ್ಯಾರಾs
ಭಂಡಾರಾs ಮ್ಯಾಲ ಧರಿಸ್ಯಾರಾs
ಬಂದ ವಿಗ್ನ ಬೈಲ ಮಾಡ್ಯಾರಾs || ಭಂಡಾರಾs ….. . . . ||

ಎಷ್ಟು ಹೇಳಲಿ ಇವನ ಕತೀ ಸಾರಾs
ಕೇಳಿದವರಿಗಿ ಇಲ್ಲೋ ಬ್ಯಾಸರಾs
ಮಾರಾಯರಾs ತಿಳಿಸ್ಯಾರಾs
ಹಿಂಗ ಅಡಿವೆಪ್ಪ ಕವಿಗಾರಾs || ಮಾರಾಯರಾs ….. . . . ||

* * *

ಅಜ್ಞಾನ ಹುಡುಗರು ಕೂಡೆವಪ್ಪಾ ಇಲ್ಲೀs
ದಿಮ್ಮಿಟ್ಟ ಹಾಡ್ತೇವು ನೆರದ ಸಭೆಯಲ್ಲೀs
ಹೇಳುವೆ ಕೇಳರಿ ಜನರಿಲ್ಲೀs

ಸಿದ್ಧ ಮಾಳಿಂಗರಾಯ ಕ್ವಾಣೂರ ಮಠಕs
ಹಬ್ಬಕ್ಕ ಹೊರಟಾನಲ್ಲೀs
ಮರಚಿಕ್ಲಿ ಎಂಬ ಗ್ರಾಮದಲ್ಲೀs
ಕೂಡು ಒಕ್ಕಲಿಗ್ಯಾರ ಹೆಣ್ಣಮಗಳುs
ನೀರು ಒಯ್ಯುದಕ್ಕ ಬಂದಳಲ್ಲೀs

ತಂದಿಯ ದಂಡ ನೋಡೀs
ಹೆಣ ಮಗಳು ಓಡಿ ಬಂದಾಳಲ್ಲೀs
ನೀರ ಸುರುವುತಾಳ ಮಾಳಪ್ಪನ ಬಲ್ಲೀs
ಹೋಗಿ ನಮಸ್ಕಾರ ಮಾಡತಾಳ ಅಲ್ಲೀs
ತಂದಿ ನೀನು ಮನಿಗಿ ಬರಬೇಕಿಲ್ಲೀs

ಬಾರವ್ವ ಮಗಳ ನನ್ನ ದಂಡ ಬಾಳs
ಇರತೀನಿ ಹೊಲದಲ್ಲೀs
ಇಷ್ಟು ಮಾತು ತಾನು ಹೇಳ್ಯಾನು ಅಲ್ಲೀs
ಹೆಣಮಗಳು ಹೊಳ್ಳಿ ಹ್ವಾದಳೊ ಅಲ್ಲೀs
ಅಡಗಿ ಅಂಬಲಿ ಮಾಡ್ಯಾಳಲ್ಲೀs
ಹೆಡಗಿ ಹೊತಕೊಂಡು ಸಾಗಿ ಬಂದಾಳೋs
ಮಾನೇದ ತಳ ಹೊಲದಲ್ಲೀs
ಮಾಳಿಂಗರಾಯ ಊಟಾ ಮಾಡ್ತಾನಲ್ಲೀs

ಹೆಣಮಗಳಿಗೆ ಹೇಳತಾನ ಅಲ್ಲೀs
ಬಾರವ್ವ ಮಗಳ ನಿನ್ನ ಮಗನೀಗೀs
ಕರಿಯಬೇಕ ಅಂದನಲ್ಲೀs
ಎಮನವ್ವಬಾಯಿ ಅಂತಾಳ ಅಲ್ಲೀs
ಸಣ್ಣ ಕೂಸು ಐತಿ ತೊಟ್ಟಿಲದಲ್ಲೀs
ತಂದಿ ಅದ್ಹೆಂಗ ಬರ್ತದಿಲ್ಲೀs

ಇಷ್ಟ ಮಾತ ಕೇಳಿ ಮಹಿಮಾ ತೋರಿ
ಮಾಳಪ್ಪ ಹೇಳ್ಯನಲ್ಲೀs
ಮೂರ ಕಣ್ಣಿನ ಹುತ್ತಿನ ಬಲ್ಲೀ
ಕೂಗ್ಹೊಡದು ಒದರವ್ವ ನಿನ್ನ ಮಗಗಲ್ಲೀs
ಹೆಣ್ಣು ಮಗಳು ಒಳ್ಳೇದಂದಳದಲ್ಲೀs
ಮೂರು ಕಣ್ಣಿನ ಹುತ್ತಿನ ಬಲ್ಲೀ
ಹೋಗಿ ನಿಂತಳಲ್ಲೀs

ಮಗನ ಹೆಸರ್ಗೊಂಡ ಒದರ್ಯಾಳಲ್ಲೀs
ಹುತ್ತಿನಿಂದ ಮಗಾ ಎದ್ದು ಬಂದಾನಲ್ಲೀs
ಮಾಳಪ್ಪ ಎದ್ದು ಹೋಗ್ಯಾನಲ್ಲೀs
ಮೂರು ತುತ್ತು ಅನ್ನಾ ಕೂಸಿನ ಬಾಯಾಗs
ಮಾಳಪ್ಪ ಕೊಟ್ಟಾನಲ್ಲೀs
ಬಾಯಾಗ ಅನ್ನಾ ಕೂಟ್ಟು ಮಾಯಾ ಮಾಡ್ಯಾನಲ್ಲೀs

ಊಟಾ ಮಾಡ್ಸ್ಯಾನ ದಂಡಿಗಿ ಅಲ್ಲೀs
ಹೆಂತಾ ಲೀಲಾ ಇತ್ತೋ ಚಂದೋ ಅಲ್ಲೀs
ಒಂದು ಎಡಿಯಾಗ ಹನ್ನೆರಡ ಸಾವಿರ ದಂಡಾs
ಊಟಾ ಮಾಡ್ಯಾರಲ್ಲೀs

ಸಿದ್ಧರ ಕತಿ ಭಾಗ ಸಿದ್ಧಾಂತದಲ್ಲೀs
ಕವಿ ಹುಟ್ಟಿ ಬರತಾವ ಹುಲಜಂತಿಯಲ್ಲೀs
ಅಡಿವೆಪ್ಪ ಮಾರಾಯ್ರ ಹೇಳ್ಯಾರಲ್ಲೀs
ಸಿದ್ಧ ಮಾಳಪ್ಪನ ಚರಣ ಕಮಲದಲ್ಲೀs
ಕಾಲಗಳಿದಾರಲ್ಲೀs

* * *

ತಿಳದ ನೋಡ್ರಿ ಕುಳಿತಂತ ಪಂಡಿತರಾs
ಭೇದ ಹುಟ್ಯಾವ ದೇವ ದೇವರಲ್ಲಿ ಪೂರಾs
ಚೌಕಾಸಿ ಮಾಡ್ಯಾನs ಪರಮೇಶೂರಾs
ಯಾರೆಷ್ಟು ದುಡದರ ದುಡದಷ್ಟು ಪಗಾರs
ಕೊಡತಾನ ಪರಮೇಶೂರಾss

ಕೈಲಾಸದಾಗ ಇದ್ದೋ ಭವಳೇ ಶಂಕರಾs
ಪ್ರಥಮದಲ್ಲಿ ಬಾಳ ಬ್ರಹ್ಮ
ಭಕ್ತಿ ಮಾಡ್ಯಾರಾs
ಭಕ್ತಿ ಮಾಡಿ ಕೈಲಾಸ ಇಳದಾರಾs
ಸೇವಾಕ ನಿಂತಾರಾs
ನಿತ್ಯ ಮಾಲಿ ಹೂವಾs
ಅಮಸಿದ್ಧ ಒಯ್ತಾರಾs || ನಿತ್ಯ  ….. . . . ||

ಬಗೀಚಕ ಕಾವಲ ಶಿವ ಇಟ್ಟಾರಾs
ಅಜಾನು ವೃಕ್ಷ ಕೈಲಾಸ್ಕ ಬೆಳಿಸ್ಯಾರಾs
ಬಾರಾ ವರ್ಷ ಭಕ್ತಿ ಮಾಡ್ಯಾನೊ ದೇವರಾs
ಕೇಳರಿ ಭಯಂಕರಾs

ಭಕ್ತಿ ಶ್ರೇಷ್ಠ ಆಯ್ತೊ ಶಿವನಲ್ಲಿ ಜೋರಾs
ಸತ್ವ ಪರೀಕ್ಷೆ ಆಗೊದು ಬಂತು ಅವನಲ್ಲಿ ಪೂರಾs
ಮನದಲ್ಲಿ ತಂದಾನೊ ಅಹಂಕಾರಾs
ನನ್ನ ಹೊರತು ಇಂತಾ ಭಕ್ತಿ ಮಾಡವರ್ಯಾರುs
ಇಲ್ಲಂದೋ ತಾ ಚತುರಾs

ಹಂಕಾರ ಮಾತು ತಿಳಕೊಂಡು ಶಂಕರಾs
ಯಾಳೆ ಎಂದು ಬರತದಂದೊ ನೋಡ್ಯಾನು ದೇವರಾs
ಮಾಳಿಂಗರಾಯ ಮರತ್ಯಾಕ ಇದ್ದವರಾs
ಲಿಂಗ ಬೀರಪ್ನ ಭಕ್ತಿ ಮಾಡಿ ಕೀರ್ತಿ
ಬೆಳಸಿದ ಭಯಂಕರಾs

ಅರುವ ಆಯ್ತೊ ಇವನ ಮನದಲ್ಲಿ ಪೂರಾs
ಪಾಂಡವರ ಕ್ವಾಟೀ ಹೂವಾ ಗುರವಿಗೆ ಏರ್ಸ್ಯಾರಾs
ಅನೇಕ ತರಾ ಭಕ್ತಿ ಮಾಡ್ಯಾನೊ ದೇವರಾs
ಮತ್ತೇನ ಬೇಡತಿ ಬೇಡಪಾ ಗುರವೇs
ಅಂದೋ ಮಾಳಪ್ಪ ದೇವರಾss

ಗುರುವ ಮನದಲ್ಲಿ ಮಾಡಿ ವಿಚಾರಾs
ಕೈಲಾಸ ಅಜಾನು ವೃಕ್ಷ ಹೂವ ಬೇಡ್ಯಾರಾs
ಮಾಳಿಂಗರಾಯಾ ತರತಿನೊ ಅಂದವರಾs
ನಿನ್ನ ವರವ ಇದ್ದರ ಸಾಕು ನನಗs
ಹೋಗ್ತೀನಿ ಅಂದಾರಾss

ಇಲ್ಲಿಗಿ ಒಂದ ಸಂದ ಮುಗಸುವೆ ಪೂರಾs
ಮುಂದ ಕೇಳರಿ ಕೈಲಾಸ ಕತಿ ಸಾರಾs
ಕಾಯಗೊಂಡು ಕೈಲಾಸ್ಕ ಹೋಗ್ಯಾರಾs
ಹುಲಜಂತಿ ಅಡಿವೆಪ್ಪs
ತಿಳಸ್ಯಾರೊ ಕವಿಗಾರಾss

* * *

ಸಿದ್ಧ ಸಿದ್ಧರಲ್ಲಿ ಭೇದ ಹುಟ್ಟಿ ಮುಂದs
ಬೆಳದದ ಗುದಮುರಗೀss
ಬಿ.ಎ ಕಲಿತವನ ಜೋಡಿ ಬಿನ್ನೆತ್ತೆ ಕಲಿತವs
ನಿಂತಾನ ಕುಸ್ತೀಗೀss || ಬಿ.ಎ ….. . . . ||

ರಾವಣ ಇದ್ದಲ್ಲಿ ರಾಮ ಹುಟ್ಯನೊ ಅವನs
ಹಂಕಾರ ಮುರಿದುಕ್ಕಾಗೀss
ದೈತ್ಯರು ಇದ್ದಲ್ಲಿ ದೇವರು ಹುಟ್ಯಾರೋss
ಸೊಕ್ಕ ಮುರಿದುಕ್ಕಾಗೀss || ದೈತ್ಯರ ….. . . . ||

ಅಮಲಸಿದ್ಧ ಬಂದಲ್ಲಿ ಮಾಳಪ್ಪ ಹುಟ್ಯಾನೋss
ಗರ್ವ ಮುರಿದುಕ್ಕಾಗೀss
ಗರ್ವ ಮುರಿದು ಅವಗ ಅರುವ ಕೊಡತಾನೋss
ಕೇಳಿರಿ ಶಿವಯೋಗೀss || ಗರ್ವ ….. . . . ||

ಬ್ರಹ್ಮ ಜ್ಞಾನಿ ಮಾಹಾ ಮಹಿಮಾ ಪುರುಷ ಹಾನೋss
ಕೇಳರಿ ಮಹಾಯೋಗೀss
ಹರ ಮುನಿದರೆ ಗುರು ಕಾಯಾವ ಬ್ಯಾರೆ ಅಂತs
ತಿಳಿದಿದ್ದ ಮನಸೀಗೀss || ಹರ ….. . . . ||

ಇಷ್ಟ ಮಾತ ತಾ ವಿಚಾರ ಮಾಡೀss
ನಡದಾನಪ್ಪ ಸಾಗೀss
ಅಂತರ ಮಾರ್ಗಲೇ ಆಕಾಶಕ್ಕ ಹೋಗ್ಯಾನೋss
ಮಹಿಮಾ ತೋರುದಕಾಗೀss || ಅಂತರ ….. . . . ||

ಕೋಳಿ ಕೂಗಿ ಬೆಳ್ಳಿ ಚಿಕ್ಕಿ ಉದೀನಾಯ್ತೋs
ಕೈಲಾಸದ ಗಿರಿಗೀss
ಅಜಾನ ವೃಕ್ಷ ಬನಕ ಕಾವಲs
ಇದ್ದರೊ ಸರಿಯಾಗೀss || ಅಜಾನ ….. . . . ||

ಮನಗಿರುವ ಜನಕ ಎಚ್ಚರ ಮಾಡಿ ಹೂವs
ಹರಿಬೇಕೆಂದ ಹೋಗೀss
ಕೂಗ ಹೊಡದ ಹಿಂದಕ್ಕ ಸರದ ನಿಂತೋs
ಭಂಡಾರ ಹೊಡದ ಹೋಗೀss || ಕೂಗ ….. . . . ||

ಎದ್ರೊ ಶಿವಗಣಾ ತಂದ್ರೊ ಬಿಲ್ಲ ಬಾಣಾs
ಮಾಳಪ್ಪನ ಕೊಲ್ಲುದಕ್ಕಾಗೀss
ಯಾವ ಲೋಕದ ಸಿದ್ಧ ಇಲ್ಲಿಗಿ ಬಂದಾನೋs
ಹೂವ ಒಯ್ಯುದಕ್ಕಾಗೀss || ಯಾವ ….. . . ||

ಭಂಡಾರ ಹೊಡದ ಜನಾ ಜಬರ ಮಾಡ್ಯಾನೋss
ಬಿದ್ದರೊ ಧರಣಿಗೀss
ಅಜಾನು ವೃಕ್ಷ ಹೂವ ಹರಿಕೊಂಡುs
ನಡದಾನಪ್ಪ ಸಾಗೀss || ಅಜಾನು ….. . . ||

ಅಷ್ಟರೊಳಗೆ ಯೋಗಿ ಅಮೋಘಿಸಿದ್ಧs
ಬಂದಾನೊ ಹೂವಿಗೀss
ಯಾವ ಲೋಕದ ಸಿದ್ಧ ಇಲ್ಲಿಗಿ ಬಂದಾನೋs
ಹೂವ ಒಯ್ಯುದಕ್ಕಾಗೀss || ಯಾವ ….. . . ||

ಹಂಕಾರದಿಂದ ಅಮಲಸಿದ್ಧ ಬಂದ ಇವನs
ಅಡ್ಡ ಆದ ಯೋಗೀss
ಜ್ಞಾನ ದೃಷ್ಟಿಲೆ ಮಾಳಪ್ಪ ತಿಳಕೊಂಡೋss
ತನ್ನ ಮನಸೀಗೀss || ಜ್ಞಾನ ….. . . ||

ಬಂದ ಗುರುವಿನ ಭಕ್ತಿ ಮಾಡ್ಯಾನೊ ಗುರವs
ಕುಂತೊ ಆನಂದವಾಗೀss
ತೆಳಗ ಬಿದ್ದಿರೊ ಹೂವ ಒಯ್ದ ಅಮಲಸಿದ್ಧs
ನಿಂತಾನ ಪೂಜಿಗೀss || ತೆಳಗ ….. . . ||

ಮೂರ ಲೋಕದ ಒಡೆಯಾ ಮುಕ್ಕಣ್ಣ ಶಿವರಾಯಾs
ಅಂತಾನೊ ಅನನೀಗೀss
ಪಜೀತಿಯಾಗಿ ಬಂದಿ ಅಮೋಘೀss
ನೀ ನನ ಭಕ್ತೀಗೀss || ಪಜೀತಿಯಾಗಿ ….. . . ||

ಬಂದರ ಬರಲ್ಯಾಕ ಹಂಕಾರ ತರಬ್ಯಾಡೋs
ನೀ ನಿನ ಮನಸೀಗೀss
ಹಂಕಾರ ಮುರದು ಮಾಳಪ್ಪ ಹೋಗ್ಯಾನೋs
ಮೃತ್ಯುಲೋಕಕ ಸಾಗೀss || ಹಂಕಾರ ….. . . ||

ಅಂದಿನ ದಿವಸ ಭಕ್ತಿ ಮಾಡ್ಯಾನ ಸಿದ್ಧs
ಮಸಸೀಗಿ ಹುಚ್ಚಾಗೀss
ಹಿಂತಾ ಮಾಳಪ್ಪನ ಸ್ವಂತ ನೋಡಬೇಕಂತೋs
ತನ್ನ ಮನಸೀಗೀss || ಹಿಂತಾ ….. . . ||

ಇಲ್ಲಿಗಿ ಒಂದ ಸಂದ ಮುಗಸಿದೆವೋs
ಹೇಳೆವೊ ಮುಂದಿನ ಸಂದಿಗೀss
ಹುಲಜಂತಿ ಊರಾ ಮತಿ ಕೊಟ್ಟ ಮಾಳಿಂಗರಾಯಾs
ಹಾಡುವ ಹುಡಗರಿಗೀss || ಹುಲಜಂತಿ ….. . . ||

ಹಾಡಿನ ಮ್ಯಾಳಾ ವರವ ಬೇಡತೆವೋs
ಕೈ ಮುಗಿದು ದೇವರಿಗೀss
ಹಾಲಮತಕ ಮೇಲ ಗದ್ದಗಿ ಹುಲಜಂತಿs
ಅಡಿವೆಪ್ಪ ಹೇಳ್ಯಾರೊ ಕೂಗೀss || ಹಾಲಮತಕ ….. . . ||

* * *

ಪಂಡಿತ ಪಂಡಿತರಿಗಿs
ಕಂಡಿತ ಹೇಳತೇವರೀss
ತಪ್ಪ ತಡಿ ನುಡಿಗಳು
ಒಪ್ಪಿ ನಿಮ್ಮಲ್ಲಿರಲೀss
ಗಲಲಲಾ ಗಲ್ಲತಿ ಮಾಡಬ್ಯಾಡರೀss
ಶಾಂತ ಸಭಾ ಚಂದವಾಗಿ ಕುಂಡರಬೇಕೋs
ಕೈ ಮುಗದ ಕೇಳತೇವರೀss

ಕೈಲಾಸದಾಗ ಇದ್ದ ಭವಳೆ ಶಂಕರಾs
ಅಮಸಿದ್ಧ ದೇವರಿಗಿ ವಾಗ್ವಾದ ನಡದಾವರೀs
ಅಮೋಘಸಿದ್ಧ ದೇವರಿಗಿ ಅಂತಾನರೀss
ನಿನ್ನಂತ ಗುರುವ ನನ್ನಂತಾ ಶಿಶುಮಗs
ಜಗದೊಳಗಿಲ್ಲಂದರೀss

ಹಂಕಾರ ಮಾತ ತಿಲಿಕೊಂಡ ಶಂಕರಾs
ಯಾಳೆ ಎಂದ ಬರತದ ನೋಡೂನಂದರೀs
ಮಾಳಿಂಗರಾಯಾ ಮರತ್ಯಾಕ ಇದ್ದಾನರೀss

ಕೈಲಾಸದಾಗ ನಿನ್ನ ಗರವ ಮುರದ ಹೂವಾs
ಒಯ್ದವ ಮಾಳಪ್ಪಾ ಅಂದರೀs
ಮಾಳಿಂಗರಾಯಾ ಮರತ್ಯಾಕ ಇದ್ದಾನರೀss

ಆಗ ಅಮಸಿದ್ಧಗ ಅಂತಾನ ಶಂಕರs
ಚಿತ್ತಿಟ್ಟ ಕೇಳಬೇಕರೀss

ಬೀಜಗುಂತಿ ಮ್ಯಾಲ ಮಾಳಪ್ಪ ಹಾನರೀs
ಅವನಕ್ಕಿಂತ ಹೆಚ್ಚ ಮರತ್ಯಾಕಿಲ್ಲರೀs
ಸುಳ್ಳ ನೀನು ಗುದ್ಯಾಡ ಬ್ಯಾಡಂದರೀs
ಆಗ ಅಮೋಘಸಿದ್ಧ ದೇವರಿಗೆಂತಾನs
ಕೇಳರೆಪ್ಪ ಇಂದರೀss

ಹೆಂತ ಮಾಳಪ್ಪ ಹಾನs
ಸ್ವಂತ ನೋಡ್ತೇನಂದರೀs
ಕೈಲಾಸ ಬಿಟ್ಟು ಸಾಗಿ ನಡದಾನರೀs
ವೇಷ ಬದಲಾಸಿ ಬಂದಾನರೀs
ಹಾಲಮತಕ ಮೇಲ ಗದ್ದಗಿ ಹುಲಜಂತಿs
ಅಡಿವೆಪ್ಪ ಹೇಳ್ಯಾನರೀss

* * *