ಶರಣರ ಲೀಲಾs
ಮರಣ ನಂತರ ನೋಡೋs
ತಿಳಿಸುವೆ ಜನರಲ್ಲೀs
ತಮ್ಮಾ ತಿಳಿಸುವೆ ಜನರಲ್ಲೀs

ಸಿದ್ಧ ಮಾಳಿಂಗರಾಯ
ಐಕ್ಯ ಆದಾನೋs
ಬಬ್ಬುಲಿ ಬನದಲ್ಲೀs ||ಸಿದ್ಧ . . . . ||

ನಾಕ ಮಂದಿ ಧರಮರುs
ಏಳ ಮಂದಿ ಗೆಳಿಯರುs
ದುಃಖ ಮಾಡ್ಯಾರಲ್ಲೀs
ಬಂದ ಜನಾ
ಬೋರ್ಯಾಡಿ ಆಳತಾರೋs
ಕೇಳರಿ ಆವಾಗಲ್ಲೀs ||ಬಂದ . . . . ||

ಸಿದ್ಧ ಮಾಳಪ್ಪನ
ಅಣ್ಣ ಜಕ್ಕರಾಯs
ಜನಕ ಹೇಳ್ಯಾನಲ್ಲೀs
ಆಗ ಜನಕ ಹೇಳ್ಯಾನಲ್ಲೀs
ಮಾಯದ ಬಾಜಾರs
ಯಾರೀಗಿ ಬಿಟ್ಟಿಲ್ಲ ತಮ್ಮಾs
ಅಳಬ್ಯಾಡ್ರೊ ಬನದಲ್ಲೀs ||ಮಾಯದ . . . . ||

ಸತ್ಯ ಶರಣ ಅವs
ಸಿದ್ಧ ಮಾಳಿಂಗರಾಯಾs
ಹೆಚ್ಚಿನ್ಯಾವ ಮರತ್ಯದಲ್ಲೀs
ನಿಮ್ಮ ಭಕ್ತಿಗವs
ಯಾವತ್ತು ಇರತಾನs
ಕೇಳರಿ ಮಾಳಪ್ಪಲ್ಲೀs ||ನಿಮ್ಮ. . . . ||

ಇಷ್ಟು ಮಾತು
ಜಕ್ಕಪ್ಪ ತಿಳಿಸ್ಯಾನೋs
ತಿಳಿಸಿ ಹೇಳಿ
ತಿಳಿ ಮಾಡಿ ಜಕ್ಕಪ್ಪs
ಸಮಾಧಾನ ಪಡಿಸ್ಯಾನಲ್ಲೀs
ಬಂದ ಜನಾ ಎಲ್ಲಾs
ಹೊಂಟ ಹೋಗಿತೋs
ತಮ ತಮ ಸ್ಥಳಗಳೀಗೀs ||ಬಂದ . . . . ||

ಮಡದಿನ್ನ ಕರ್ಕೊಂಡು
ಜಕ್ಕಪ್ಪ ನಡದಾನೋs
ಎಣಕಿಯ ಗ್ರಾಮ ಕಡೀs
ಆಗ ಎಣಕಿಯ ಗ್ರಾಮ ಕಡೀs
ಗಂಗಾಧಾರತಿ ಹಚ್ಚಿ ನಡದಿದ್ದೋs
ದುಃಖಿತ ಮನದಲ್ಲೀs ||ಗಂಗಾಧಾರತಿ . . . . ||

ಹುಲಜಂತಿ ಬಿಟ್ಟು ಗಾರಿಗುಂತಿಯs
ಮೇಲಿಂದ ಹಾಯ್ದಾನಲ್ಲೀs
ನಂದೂರ ಆಳಗೀ
ಮಿರಿಯ ಮತಾಳಿ ಬಳೀs
ತಾನು ಹೋದಾನಲ್ಲೀs
ಮಿರಿಯ ಮತಾಳಿ ಬಳೀs
ಭೀಮಾನದಿಯಲ್ಲೀs
ಮಾಳಪ್ಪ ಕುಳಿತಿದ್ದಲ್ಲೀs
ಆಗ ಮಾಳಪ್ಪ ಕುಳಿತಿದ್ದಲ್ಲೀs
ಅಣ್ಣ ಜಕ್ಕಪ್ಪ ಹೋಗಿ ನೋಡತಾನೋs
ಮುಂದ ತಮ್ಮ ಕಂಡನಲ್ಲೀs ||ಅಣ್ಣ . . . . ||

ಯಾಕ ಮಾಳಿಂಗರಾಯs
ಇದೇ ಈಗs
ನೀನು ಕಂತೀ ಕಳದಿದ್ಯೆಲ್ಲೀs
ಕಂತಿ ಕಳದ ನೀನು
ಹೆಂಗ ಬಂದಿದ್ಯೋs
ತಮ್ಮಾ ತಿಳಿಸಪ್ಪಾ ನನಬಲ್ಲೀs
ಇಷ್ಟು ಮಾತು ತಾನು ಕೇಳಿ ಮಾಳಿಂಗರಾಯಾs
ಕುಲುಕುಲು ನಕ್ಕಾನಲ್ಲೀs
ಆಗ ಕುಲುಕುಲು ನಕ್ಕಾನಲ್ಲೀs
ಬಾರಪ್ಪಾ ಆಣ್ಣಾs
ಕಲಿಯ ಬತ್ತ ಈಗs
ಕಂತಿ ಕಳಿಯಲಿಕ್ಕಲ್ಲೀs ||ಬಾರಪ್ಪಾ . . . . ||

ಕಲಿಯುಗದಲ್ಲಿ ಕೆಟ್ಟ ಜನಾ ಈಗs
ನಿರ್ಮಾಣದರಿಲ್ಲೀs
ಕೆಟ್ಟ ಜನಕ ನಾವು ಬೋಧೆ ಮಾಡಿದೆವುs
ಸಾಕಷ್ಟು ಜನರಲ್ಲೀs
ಎಷ್ಟು ದಿವಸs
ನಾವು ಇದ್ದರ ಏನs
ಬಿಡೂದು ಮಂಡಲ ಇಲ್ಲೀs
ಲಾಗಬೇಗದಿಂದ ಹೋಗಪ್ಪ ನೀನುs
ಎಣಕಿಯ ಮಠದಲ್ಲೀs
ಎಣಕಿಯ ಮಠದಾಗ
ಹೋಗಿಯ ನೀನುs
ಕಂತೀ ಕಳಿಯಪ್ಪಾ ಅಲ್ಲೀs
ನೀನು ಬರುವುತನಕ
ನಾನು ಇರತೇನೋs
ಭೀಮಾ ನದಿಯಲ್ಲೀs ||ನೀನು . . . . ||

ಎಷ್ಟು ಮಾತ ಕೇಳಿ
ಜಕ್ಕಪ್ಪ ಹೋಗ್ಯಾನs
ಎಣಿಕಿಯ ಮಠದಲ್ಲೀs
ಆಗ ಎಣಿಕಿಯ ಮಠದಲ್ಲೀs
ಬೆಂಕಿ ಇಲ್ಲದೇs
ಹೋಮ ತಯ್ಯಾರ ಮಾಡೀs
ಸಮಾಧಿ ಹೊಂದ್ಯಾನಲ್ಲೀs ||ಬೆಂಕಿ . . . . ||

ಸಮಾಧಿ ಹೊಂದಿ ಸಾಗಿ ಬಂದಾನೋs
ಮಾಳಪ್ಪನ ಬಲ್ಲೀs
ಅಷ್ಯೊರೊಳಗ ಯೋಗಿ ಅಮೋಘೀs
ಮುಮ್ಮೆಟ್ಟ ಗಿರಿಯಲ್ಲೀs
ಮುಮ್ಮೆಟ್ಟಗಿರಿ ಮ್ಯಾಲ ಸಮಾಧಿಹೊಂದೀs
ಸಾಗಿ ಬಂದಾನಲ್ಲೀs
ಹೌದು ಸಾಗಿ ಬಂದಾನಲ್ಲೀs
ಮೂರ ಮಂದಿ ಶರಣರು ಕೂಡ್ಯಾರುs
ಭೀಮಾ ನದಿಯಲ್ಲೀs ||ಮೂರ  . . . . ||

ಭೀಮಾ ನದಿಯಲ್ಲಿ ಕೂಡಿಕೊಂಡುs
ಮುಂದ ನಡದಾರಲ್ಲೀs
ಉಳಿಯ ಉತ್ತರ ದೇಶ ಕಂಡರೋs
ಕೇಳರಿ ಭವದಲ್ಲೀs ||ಉಳಿಯ . . . . ||

ಅವರವರ ಭಕ್ತಿಗಿ ಸಾಟಿ ಆಗ್ತಾರುs
ಆಗ ಚರದಲ್ಲೀs
ತಮ್ಮಾ ಸದ್ಯ ಕಾಲದಲ್ಲೀs
ಸಿದ್ಧ ಮಾಳಪ್ಪನs
ಚರಣ ಕಮಲದಲ್ಲೀs
ಅಡಿವೆಪ್ಪ ಹೇಳ್ಯಾನಲ್ಲೀs ||ಸಿದ್ಧ  . . . . ||

* * *

ಸತ್ಯಕೆ ಸಾವಿಲ್ಲ ಸುಳ್ಳಿಗಿ ಸುಖವಿಲ್ಲs
ಸತ್ಯವಂತರ ಮಾತೋs
ಈಗ ಸತ್ಯವಂತರ ಮಾತೋs
ಸತ್ಯವಂತರ ಮಾತ ಸಿಸ್ತಾಗಿ ಕೇಳರೀs
ಶಾಂತ ನೀವು ಕುಂತs ||ಸತ್ಯವಂತರ  . . . . ||

ಮಾಳಿಂಗರಾಯ ಕಂತಿಯ ಕಳದುs
ಪವಾಡ ಮಾಡ್ಯಾರ ಮಸ್ತಾs
ನಿಬನ್ಯಾಳ ಮಾನಮಿ
ಮೆಳವಂಕಿ ಎಂಬs
ಗ್ರಾಮದ ಕತಿ ಇತ್ತೋs
ನಿಬನ್ಯಾಳ ಗ್ರಾಮದಲ್ಲಿ
ಉಪ್ಪಾರ ಸಿದ್ಧಪ್ಪs
ಇದ್ದಾನೊ ನಿಜ ಭಕ್ತೋs
ಮಾಳಿಂಗರಾಯನ ಸೇವೆ ಮಾಡುತಿದ್ದೋs
ದಿನಕ ಎರಡ ಹೊತ್ತೋs ||ಮಾಳಿಂಗರಾಯನ . . . . ||

ಅಲ್ಲಿಯ ಕುರುಬರು
ಊರ ಬಿಟ್ಟ ಹೋಗಿದ್ರುs
ಬರಗಾಲ ಬಿದ್ದುದಕ್ಕಾಗೀs
ಬರಗಾಲ ಮುಗಿದ ಮೇಲೆ
ಹೊಳ್ಳಿ ಬಂದ ಕುರುಬರುs
ನ್ಯಾಯಾ ಮಾಡಿದ್ರಂತೋs ||ಬರಗಾರ  . . . . ||

ನಮ್ಮ ಪೂಜೆ ನೀವು ಬಿಡಬೇಕಂತೋs
ಸಿದ್ಧಪ್ಗ ಕೇಳ್ಯಾರೊ ಮಾತೋs
ಆಗ ಸಿದ್ಧಪ್ಗ ಕೇಳ್ಯಾರೊ ಮಾತೋs
ಉಪ್ಪಾರ ಸಿದ್ಧಪ್ಗ ಬಂದ ಹೇಳತಾನs
ದೈವದ ಮುಂದ ನಿಂತೋs ||ಉಪ್ಪಾರ  . . . . ||

ದೈವೆಲ್ಲ ಕೂಡಿ ಪೂಜಿ
ಕಟ್ಟೀರಿ ನಮ್ಗs
ಮಾಳಿಂಗರಾಯಂದು ಆ ಹೊತ್ತೋs
ಬಡು ಅಂದ್ರ ಬಿಡತೇನೋs
ಹೋಗಂದ್ರ ಹೋಗತೇನೋs
ನನ್ನ ಊರಿಗಂತೋs ||ಹೋಗಂದ್ರ  . . . . ||

ಇಷ್ಟ ಮಾತ ಆಗ
ಕೇಳಿ ಜನರೆಲ್ಲs
ಅಂದಾರೊ ಆ ಹೊತ್ತೋs
ಆಗ ಅಂದಾರೊ ಆ ಹೊತ್ತೊs
ಸಿದ್ಧ ಮಾಳಪ್ಪನ ಲಿಂಗದ ಕಲ್ಲಾs
ಮಡವಿನ್ಯಾಗ ಒಗೀತೇವಂತೋs ||ಸಿದ್ಧ . . . . ||

ಜಕಣ್ಯಾರ ಮಡದಾಗs
ಮಾಳಪ್ನ ಲಿಂಗದ ಕಲ್ಲs
ಒಯ್ದು ಒಗದಾರಂತೋs
ಭಕ್ತಿವಾನ ನೀವು ಇದ್ದರ ತಾವುs
ಹೊಳ್ಯಾಗ ಹೋಗಿ ತರಬೇಕಂತೋs
ಏಳು ವರುಷದಿಂದ ನುಲುಕಿ ಬಿಟ್ಟಿದ್ದರs
ನೆಲ್ಯ ಇರಲಿಲ್ಲವಂತೋs
ನೀರಿಗಿ ನೆಲಿಯ ಇರಲಿಲ್ಲವಂತೋs
ಕುರುಬರ ಗ್ರಹಸ್ತಾ ಉಪ್ಪಾರ ಸಿದ್ಧಪ್ಪಾs
ನೀರಾಗ ಜಿಗದಾರಂತೋs ||ಕುರುಬರ . . . . ||

ಮೂರು ದಿನಾ ಅವ್ರು
ನೀರಾಗ ಮುಳಗೀs
ಪಾತಾಳಕ ಹೋಗ್ಯಾರಂತೋs
ಮೂರು ದಿನದ ಮ್ಯಾಲ
ಉಪ್ಪಾರ ಸಿದ್ಧಪ್ಗs
ಲಿಂಗ ದೊರಿತಂತೋs
ಕೈಯಲ್ಲಿ ಲಿಂಗ
ಮಾಳಪ್ಪಂದು ಹಿಡಕೊಂಡುs
ಮ್ಯಾಲ ಬಂದನಂತೋs
ಆಗ ಮ್ಯಾಲ ಬಂದನಂತೋs
ಬೋರ್ಗೊಂಡೆ ಕುರುಬಾs
ಸತ್ತ ಹೆಣಾ ಆಗೀs
ನೀರ ಮ್ಯಾಲ ತೇಲ್ಯಾನಂತೋs ||ಬೋರ್ಗೊಂಡೆ. . . . ||

ಚಿಂಚಲಿ ಸರಕಾರs
ಕುಕನೂಡಿ ದೇಸಾಯಿs
ಅಲ್ಲಿ ಬಂದರಂತೋs
ನ್ಯಾಯ ಮಾಡತಾರ
ಮಾಳಿಂಗರಾಯಂದುs
ಕೇಳರಿ ಆವತ್ತೋs
ಸತ್ಯವಾನ ಮಾಳಪ್ಪ
ಸತ್ಯಾಗಿ ಬಂದಾನುs
ಉಪ್ಪಾರ ಸಿದ್ಧಗಂತೋs
ಆಗ ಉಪ್ಪಾರ ಸಿದ್ಧಗಂತೋs
ನಂಬಿದ ಭಕ್ತಾ ನಿಜವಾಗಿ ಇದ್ದರs
ಸಿದ್ಧಪ್ಪ ಇವತ್ತೋ ||ನಂಬಿದ. . . . ||

ಕರೆ ಮಾಳಿಂಗರಾಯs
ಇದ್ದರ ಈಗ
ಪ್ರಕಟವಾಗ್ಬೇಕಂತೋs
ಚಿಂಚಲಿ ಸರಕಾರs
ಕುಕನೂಡಿ ದೇಸಾಯಿs
ಬಂದು ಆಡ್ಯಾರೊ ಮಾತೋs ||ಚಿಂಚಲಿ . . . . ||

ಇಷ್ಟ ಮಾತು ಅಲ್ಲೀs
ಕೇಳಿ ಮಾಳಿಂಗರಾಯಾs
ಪ್ರಕಟವಾಗಿ ನಿಂತೋs
ಕಲ್ಲಿನ್ಯಾಗ ಪ್ರಕಟವಾಗಿ ನಿಂತೋs
ಹೋಮದ ಕಂಬಳಿ ಹೊತ್ತುs
ನೇಮದ ಬೆತ್ತಾ ಹಿಡದೋs
ರೂಪ ತೋರ್ಯಾನೊ ಮಸ್ತೋs ||ಹೋಮದ . . . . ||

ಬಂದ ಭಕ್ತರಿಗೆಲ್ಲs
ಉದ್ದಾರ ಮಾಡೀs
ಮಾಯವಾದನಂತೋs
ನಿಬನ್ಯಾಳ ಗ್ರಾಮದಲ್ಲಿ
ಆಗಿದ್ದ ಪವಾಡs
ಕಲಿಯುಗದ ಮಾತೋs ||ನಿಬನ್ಯಾಳ . . . . ||

ಕಲಿಯುಗದಲ್ಲಿ ಕರ್ತೃ ಮಾಳಿಂಗರಾಯs
ಪವಾಡ ಮಾಡ್ಯಾನ ಮಸ್ಸ್ತೋss
ಜಗದಲ್ಲಿ ಪವಾಡ ಮಾಡ್ಯಾನ ಮಸ್ತೋs
ಹಳ್ಳಿ ಹಳ್ಳಿಗಿ ಅವ್ನ ಹುಡಿಗಳ ಇದ್ದಾವs
ಕೇಳರಿ ಇವತ್ತೋs ||ಹಳ್ಳಿ . . . . ||

ಪವಾಡ ಮಾಡಿದ ಜಗದಲ್ಲಿ ಸ್ಥಾನs
ಮೆರೆತಿದ್ದ ಇವತ್ತೋs
ಹಾಲಮತಕ ಮೇಲ ಗದ್ದಗಿ ಹುಲಜಂತಿs
ಅಡಿವೆಪ್ಪ ಹೇಳಿದ ಮಾತೋs ||ಹಾಲಮತಕ . . . . ||

ಸುಳ್ಳನಂದರ ನೀವು ಹೋಗಿ ನೋಡಬೇಕುs
ಹೇಳ್ತೇವ ಇವತ್ತೋss
ಸಿದ್ಧ ಮಾಳಪ್ಪನ ಚರಣ ಕಮಲದಲ್ಲೀs
ಕಾಲ ಕಳದೆವೋ ಶಿಸ್ತೋss ||ಸಿದ್ಧ  . . . . ||

* * *