ಕುಂತ ಕೇಳರಿ ನೆರದ ಪಂಡಿತರಾs
ಮಾಳಿಂಗರಾಯನ ಆದ ಕತಿ ಸಾರಾs
ಮಾಳಿಂಗರಾಯಾ ಕಂತೀಯ ಕಳದವರಾs
ಮಾಳಿಂಗರಾಯ್ಗ ಏಳ ಮಂದಿ ಮಮ್ಮಕ್ಳು
ಅಲ್ಲೇ ಇದ್ದವರಾs

ಏಳಮಂದಿತಲ್ಲಿ ಬರಗಾಲಿ ಸಿದ್ಧರಾs
ಬ್ರಹ್ಮಚಾರಿ ಆಗಿ ತಾವೇ ಇದ್ದವರಾs
ಸಿದ್ಧ ಪುರುಷಾಗಿ ಮೆರೆದವರಾs
ಕ್ಯಾದಗಿ ಒತನಾಗ ಬರಗಾಲಿ ಸಿದ್ಧs
ತಪಗಳ ಮಾಡಿದವರಾs

ಅವನ ಭಕ್ತಿಗೆ ಮಾಳಪ್ಪ ಒಲಿದವರಾs
ಕ್ಯಾದಗಿ ಒತನಾಗ ಪ್ರಕಟ ಆದವರಾs
ಬರ್ಗಾಲ್ಗಿ ಕರದಲ್ಲಿ ಹೇಳಿದವರಾss
ಬಾರೋ ಬರಗಾಲಿ ಮೊಗಲಾಯಿದಲ್ಲೀs
ಹೋಗ್ಬೇಕೊ ಅಂದವರಾs

ಮೊಗಲಾಯಿದಲ್ಲಿ ಮುಸಲ್ಮಾನರಾs
ದುಷ್ಟ ಜನಾ ಅಲ್ಲಿ ಹೆಚ್ಚ ಬೆಳದರಾs
ಅವರನ ಉದ್ಧಾರ ಮಾಡ ಅಂದಾರಾs
ಉದ್ಧಾರ ಮಾಡಿ ಕಸ್ಕಿಯ ಗ್ರಾಮದಲ್ಲೀs
ನೆನೆಬೇಕ ಅಂದವರಾs

ಇಷ್ಟ ಮಾತ ಮಾಳಪ್ಪ ಹೇಳ್ಯಾರಾs
ಮಾಯಾಗಿ ಅಲ್ಲಿಂದ ತಾವೇ ಹೋಗ್ಯಾರಾs
ಬರಗಾಲಿ ತಿಳದಾನೊ ಮಜಕೂರಾs
ಹುಟ್ಟಿದ ಊರಾ ಹುಲಜಂತಿ ಬಿಟ್ಟ ಮುಂದs
ಸಾಗಿನಿ ನಡದಾರಾs

ಜಗ ಉದ್ಧಾರ ಮಾಡುತ ನಡದಾರಾs
ಅನೇಕ ಜನರಿಗಿ ಉದ್ದಾರ ಮಾಡಿದವರಾs
ಸೊಲ್ಲಾಪುರದಲಿ ಸಾಗಿ ಹೋಗ್ಯಾರಾs
ಸೊಲ್ಲಾಪುರದ ಸಿದ್ಧ ರಾಮೇಶೂರಗs
ಭೇಟ್ಟಿಯಾದರಾs

ಮುತ್ಯಾನ ಧ್ಯಾನಾ ಅಲ್ಲಿ ಮಾಡ್ಯಾರಾs
ಸಿದ್ಧ ರಾಮೇಶೂರಗ ಕರದ ಹೇಳ್ಯಾರಾs
ಇಲ್ಲಿ ಐತಿ ನೋಡ್ರಿ ದೇವರ ನೇರಾs
ಜೀವಂತ ಜಲಾ ತಗದಕೊಟ್ಟಾನ ಅಲ್ಲೀs

ಕೆರಿಯ ತುಂಬ ನೀರಾs
ಕೆರಿಯು ತುಂಬಿ ಹೊರಚೆಲ್ಲಿ ನೀರಾs
ಬರಗಾಲಿ ಸಿದ್ಧ ಕೊಟ್ಟು ಮುಂದ ಹೋಗ್ಯಾರಾs
ಮೊಗಲಾಯಿ ಹದ್ದೆಲ್ಲ ತಿರಗ್ಯಾರಾs
ಅಲ್ಲೆಲ್ಲಿ ಧ್ಯಾನಾ ಮಾಡಿದ್ರ ಮಾಳಪ್ಪs
ಭೆಟ್ಟಿಯಾದಾರಾs

ಅನೇಕ ಪವಾಡ ತಾವೆ ಮಾಡಿದವರಾs
ಹತ್ಯಂಟ್ಸಾರಿ ಮುತ್ಯಗ ನೆನದಾರಾs
ಮಾಳಪ್ಪ ಭೆಟ್ಯಲ್ಲಿ ಆದಾರಾs
ಭೆಟ್ಟಿ ಆಗಿ ಬರಗಾಲ ಸಿದ್ಧಗs
ವರಗಳ ನೀಡ್ಯಾರಾs

ಬರಗಾಲಿ ಸಿದ್ಧ ಸಾಗಿ ಹೋಗ್ಯಾರಾs
ಬೆಣ್ಣಿ ನದಿ ಹೋಗಿ ಕಂಡರಾs
ಮುತ್ಯಾನ ಆಶೀರ್ವಾದ ಗೊಂಡಾರಾs
ಕಸಗಿವಾಡಿಯಲಿ ಹೋಗಿ ನೆನದರಾs
ಕೇಳರಿ ತಾ ದೇವರಾs

ಮಾಳಿಂಗರಾಯನ ಮೊಮ್ಮಗನ ಚಮತ್ಕಾರಾs
ಹಿಂತಾ ಪವಾಡಗಳ ಎಷ್ಟಂತ ಹೇಳ್ಯಾರಾs
ಅಡಿವೆಪ್ಪ ಮಾರಾಯರಾs

* * *