ಮಾಳಿಂಗರಾಯನ ಕಾವ್ಯದ ಕಲಾವಿದ ಅಡಿವೆಪ್ಪ ಒಡೆಯರರೊಂದಿಗೆ ಸಂದರ್ಶನ
ಸಂದರ್ಶಿಸಿದವರು
: ಗಂಗಾಧರ ದೈವಜ್ಞ

ದೈವಜ್ಞ : ನಿಮ್ಮ ಪೂರ್ತಿ ಹೆಸರೇನು?

ಅಡಿವೆಪ್ಪ : ಅಡಿವೆಪ್ಪ ಮಾಳಪ್ಪ ಸೋಮುತ್ತೆ ಒಡೆಯರ

ದೈವಜ್ಞ : ಅಡಿವೆಪ್ಪ ಎಂದು ಕರೆಯುವುದಕ್ಕಿಂತ ಮೊದಲು ನಿಮ್ಮ ಹುಟ್ಟಿದ ಹೆಸರೇನಾದ್ರೂ ಇತ್ತೆ?

ಅಡಿವೆಪ್ಪ : ಜನ್ಮ ಹೆಸರು ರೀತ್ಯಪ್ಪಾ ಅಂತಿತ್ತು. ಅಡಿವೆಪ್ಪ ಅಂತ ನಮ್ಮಲ್ಲಿ ಹೆಸರು ವಂಶಪರಂಪರಾನುಗತವಾಗಿ ಇದ್ದೇ ಇವೆ. ಎರಡ್ಮೂರು ಮಕ್ಕಳೆಲ್ಲ ತೀರಿಕೊಂಡ ಮೇಲೆ ನಾನು ಹುಟ್ಟಿದ್ನಿ ಹಿಂಗಾಕರ ಇವ ಅಡವಿ ಗಿಡದಲ್ಲಿ ಬಾಳಲಿ ಅಂತ ಅಡಿವೆಪ್ಪ ಅಂತ ಕರದ್ರು.

ದೈವಜ್ಞ : ನೀವು ಎಷ್ಟು ಜನ ಅಣ್ಣತಮಂದಿರು?

ಅಡಿವೆಪ್ಪ : ನಾನೊಬ್ನೆ

ದೈವಜ್ಞ : ಹೆಣ್ಣು ಮಕ್ಕಳು?

ಅಡಿವೆಪ್ಪ : ಒಬ್ಬಾಕಿ ಇದ್ಳು ಆಕಿ ತೀರ್ಕೊಂಡಬಿಟ್ಳು

ದೈವಜ್ಞ : ನಿಮಗೆ ವಯಸ್ಸು ಎಷ್ಟು?

ಅಡಿವೆಪ್ಪ : ೫೩ ವಯ್ಯಸ್ಸು

ದೈವಜ್ಞ : ನಿಮ್ಮ ತಾಯಿಯ ಹೆಸರೇನು?

ಅಡಿವೆಪ್ಪ : ನಮ್ಮ ತಾಯಿಯ ಹೆಸರು ದ್ರುಪತಿ

ದೈವಜ್ಞ : ನಿಮ್ಮ ತಾಯಿ ತೌರು ಮನೆ ಯಾವುದು?

ಅಡಿವೆಪ್ಪ : ಅವರ ತೌರು ಮನೆ ನಂದೀಶ್ವರ ಅದು ಮಂಗಳವೇಡ ತಾಲ್ಲೂಕಿನಲ್ಲಿದೆ

ದೈವಜ್ಞ : ನೀವು ಶಾಲೆಯನ್ನು ಕಲಿತಿದ್ದು ಎಲ್ಲಿಯವರೆಗೆ?

ಅಡಿವೆಪ್ಪ : ಹುಲಜಂತಿಯಲ್ಲಿ ಒಂದನೇ ಇಯತ್ತೆಯಿಂದ ಏಳನೇ ಇಯತ್ತೆವರೆಗೆ ಮರಾಠಿ ಶಾಲೆ

ದೈವಜ್ಞ : ನಿಮ್ಮ ಅಜ್ಜನ ಹೆಸರೇನು?

ಅಡಿವೆಪ್ಪ : ಅಜ್ಜನ ಹೆಸರು ದೊಂಡಪ್ಪ ಸೊಮುತ್ತೆ ಒಡೆಯರ

ದೈವಜ್ಞ : ನಿಮ್ಮ ಅಜ್ಜ ಮತ್ತು ತಂದೆಯವರು ಮಾಳಿಂಗರಾಯನ ಹಾಡು, ಡೊಳ್ಳಿನ ಹಾಡುತ್ತಿದ್ದರೆ?

ಅಡಿವೆಪ್ಪ : ಮಾಳಿಂಗರಾಯರಿಗಿ ನಾಲ್ಕು ಜನಾ ಮಕ್ಳು. ಅವರಿಗಿ ಏಳು ಜನಾ ಏಳು ಜನದಿಂದ ಈ ನಮ್ಮ ಹುಲಜಂತಿ ಮಠದಲ್ಲಿ ನಾಲ್ಕು ತಕ್ಷಿಮ. ನಾಲ್ಕು ತಕ್ಷಿಮ ಅಂದ್ರ ನಾಲ್ಕು ಬಡ್ಡಿಗಳು. ಆ ನಾಲ್ಕು ಬಡ್ಡಿಗಳಿಗೆ ಹಿರಿಬಡ್ಡಿ ಆ ನಂತ್ರ ಎರಡನೇ ಬಡ್ಡಿ ಮೂರನೇ ಬಡ್ಡಿ. ಇದು ನಮ್ದು ಕೊನೇ ಬಡ್ಡಿ. ಕೊನೇ ಮಗಾ ಸೋಮರಾಯನ ವಂಶಸ್ಥರು ನಾವು.

ದೈವಜ್ಞ : ಮಾಳಿಂಗರಾಯನಿಗೆ ನಾಲ್ಕು ಜನ ಮಕ್ಕಳು. ಅವರಲ್ಲಿ ನೀವು ಕೊನೆಯ ಮಗ ಸೋಮರಾಯನ ವಂಶಸ್ಥರು. ಉಳಿದವರೆಲ್ಲ ಎಲ್ಲೆಲ್ಲಿ ಇದ್ದಾರೆ?

ಅಡಿವೆಪ್ಪ : ಮಾಳಿಂಗರಾಯನ ನಾಲ್ಕು ಮಕ್ಕಳ ವಂಶಸ್ಥರೆಲ್ಲಾ ಹುಲಜಂತಿಯಲ್ಲೇ ಇದ್ದಾರೆ.

ದೈವಜ್ಞ : ಈಗ ಸದ್ಯೆ ಮಾಳಿಂಗರಾಯನ ವಂಶಸ್ಥರು ಎನ್ನುವವರು, ಹುಲಜಂತಿಯಲ್ಲಿ ಎಷ್ಟು ಜನರು ಇದ್ದಾರೆ.

ಅಡಿವೆಪ್ಪ : ಸುಮಾರು ಎರಡುನೂರು ಜನಾ ಅದಾರ. ಇವರೆಲ್ಲ ಹುಲಜಂತಿ, ಹನೂರು, ಎಣಕಿ, ಶಿರಾಡೋಣದ ಕೆಲಭಾಗಗಳಲ್ಲಿ ಇದ್ದಾರೆ. ಇವರಿಗೆ ನಾಲ್ಕು ಮಠದ ಅಧಿಕಾರ ಗೌಡಕಿ ಐತಿ.

ದೈವಜ್ಞ : ಮಾಳಿಂಗರಾಯನಿಗೆ ಸಂಬಂಧಿಸಿದ ದೇವಸ್ಥಾನಗಳು ಎಲ್ಲೆಲ್ಲಿವೆ? ಈ ಹುಲಜಂತಿ ಹುನೂರು ಬಿಟ್ಟು?

ಅಡಿವೆಪ್ಪ : ಮಾಳಿಂಗರಾಯನಿಗೆ ಸಂಬಂಧಪಟ್ಟ ದೇವಸ್ಥಾನಗಳು ಎಣಿಕೇರಿ ಅಣ್ಣ ಜಕ್ಕಪ್ಪರಾಯ ಹುನೂರದಲ್ಲಿ ಗುರು ಬೀರಲಿಂಗೇಶ್ವರ, ಶಿರಡೋಣದಲ್ಲಿ ಶೀಲವಂತಿ ಹಾಗೂ ಬೀರಲಿಂಗೇಶ್ವರ, ಉಂಬ್ಳಾಠಾಣಾ ಉಂಬರ್ಜಿಯಲ್ಲಿ ತಂದಿ ತುಕ್ಕಪ್ಪರಾಯಾ, ಊರು ಮೇಲ್ಕಡೆ ಪಶ್ಚಿಮಕ್ಕೆ, ಇರುವಂತಾ ಗುಡಿಗಿ ಈಗ ಲಿಂಗಾಯತ ಜನಾ ತಮ್ಮ ದಿನ ಬಳಕೀಲಿ ರೂಢಿಯಲ್ಲಿ ರೇವಣ್ಣಸಿದ್ಧೇಶ್ವರ ಅಂತ ಕರಿತಾ ಇದ್ದಾರ. ಈಗ ಹತ್ತಿಪ್ಪತ್ತು ವರ್ಷ ಆಯ್ತು. ಆದಿಕಾಲ ಹಿಡಕೊಂಡ ಬಂದ ರೂಢಿ ಈಗ ಸಧ್ಯದಲ್ಲಿ ಇದ್ದ ರೂಢಿ ಆ ಊರಲ್ಲಿ ಜನರ ಸಹಿತ ತುಕ್ಕಪ್ಪರಾಯನ ಮಂದಿರ ಅಂತ ಅದಕ್ಕ ಕರಿತಾ ಇದ್ದಾರ.

ದೈವಜ್ಞ : ಮಾಳಿಂಗರಾಯನ ವಂಶಸ್ಥರು ಸಿಡಿಯಾಣ ಮತ್ತು ಉಳಿದ ಕಡೆ ಹೋದವರು ಮಾಳಿಂಗರಾಯ, ಬೀರಪ್ಪನ ಪೂಜೆ ಮಾಡಿಕೊಂಡು ಇದ್ದಾರೊ ಹೇಗೆ? ಬೇರೆ ವೃತ್ತಿ ಏನಾದ್ರು ಮಾಡ್ತಾರಾ. ಮಾಳಪ್ಪನ ವಂಶಸ್ಥರು ಇಲ್ಲಿಂದ ಬಿಟ್ಟು ಹೋಗಲಿಕ್ಕೆ ಬೇರೆ ವೃತ್ತಿಗಳು ಕಾರಣಗಳಾಗಿವೆಯೆ?

ಅಡಿವೆಪ್ಪ : ಅವರವರ ಇಚ್ಚೆ ಪ್ರಕಾರ ಹೋಗಿದ್ದಾರೆ. ಅಂತ ಕಲವರು ಹೇಳ್ತಾರೆ. ಇನ್ನು ಕೆಲವರು ಜಗಳಾ ತಗದ ಹೋದ್ರು ಅಂತ ಹೇಳ್ತಾರ. ಕೆಲವರು ಅವರ ಉದರ ನಿರ್ವಹಣೆಗಾಗಿ ಹೋಗ್ಯಾರಂತ ಹೇಳ್ತಾರ. ಅವರು ಅಲ್ಲೇ ಭೂಮಿ ಸೀಮಿಗಳನ್ನು ಮಾಡಿಕೊಂಡು ಅಲ್ಲೇ ಅವರು ಕಾಲಹರಣ ಮಾಡ್ತಾ ಇದ್ದಾರ

ದೈವಜ್ಞ : ನಿಮ್ಮ ತಂದೆ ಮತ್ತು ಅಜ್ಜ ಇವರ ಗಮನಕ್ಕೆ ಬಂದಂತೆ ಮಾಳಿಂಗರಾಯನು ಮೂಲ ಉದ್ಯೋಗ ಏನು ಮಾಡಿಕೊಂಡಿದ್ದಾ?

ಅಡಿವೆಪ್ಪ : ಮಾಳಿಂಗರಾಯ ಮೂಲ ಉದ್ಯೋಗ ಕುರಿಗಳನ್ನ ಕಾಯ್ತಿದ್ದಾ.

ದೈವಜ್ಞ : ಅದರ ಜೊತೆಗೆ ಒಕ್ಕಲುತನ ಮಾಡ್ತಾ ಇದ್ದನೆ?

ಅಡಿವೆಪ್ಪ : ಹೌದು, ಅದರ ಜೊತೆಗೆ ಭೂಮಿ ಸೀಮಿಗಳನ್ನೂ ಮಾಡಿಕೊತಾ ಇದ್ದಾ.

ದೈವಜ್ಞ : ಈಗ ಆ ಭೂಮಿ ಎಲ್ಲಿ ಇದೆ. ಆ ದೇವಸ್ಥಾನ ಇರುವ ಭೂಮಿ ಯಾವುದು?

ಅಡಿವೆಪ್ಪ : ಬೇರೆ ಕಡೆ ಸಾಕಷ್ಟು ಭೂಮಿ ಇತ್ತು

ದೈವಜ್ಞ : ಬೇರೆ ಕಡೆ ಅಂದ್ರೆ ಎಲ್ಲೆಲ್ಲಿತ್ತು?

ಅಡಿವೆಪ್ಪ : ಈ ನಾಲ್ಕು ಮಠಗಳೇನದಾವ ನಾಲ್ಕ ಮಠಗಳಲ್ಲಿ ಇತ್ತು. ಹುಲಜಂತಿಯಲ್ಲಿ ಸಾಕಷ್ಟು ಇನಾಮದ ಭೂಮಿ ಇತ್ತು.

ದೈವಜ್ಞ : ಈಗ ಇನಾಮದ ಭೂಮಿ ಎಲ್ಲಿ ಇದೆ?

ಅಡಿವೆಪ್ಪ : ಈ ಊರ ಸುತ್ತಗಟ್ಟಿ ಇದ್ದದ್ದೆಲ್ಲ ಇನಾಮದ ಭೂಮಿನೆ

ದೈವಜ್ಞ : ಆ ಭೂಮಿಯನ್ನು ನೀವ ಉಪಯೋಗಿಸ್ತಾ ಇದ್ದಿರೊ, ನಿಮ್ಮ ಅಣ್ಣತಮ್ಮಂದಿರು ಉಪಯೋಗಿಸ್ತಾ ಇದ್ದಿರೊ ಅಥವಾ ಹಾಳು ಬಿದ್ದಿದ್ದೆಯೋ?

ಅಡಿವೆಪ್ಪ : ಅಣ್ಣ ತಮ್ಮರಲ್ಲಿ ಹೋಗಿ ಬಿಟ್ಟಾವ. ಕೆಲವೇ ಇನಾಮಗಳು ಕೆಲವನ್ನ ಬೇರೆ ಸಮಾಜದವರು ತಮ್ಮ ಬಳಕೇಲಿ ಇಂದು ಮಾಡ್ಕೊಂಡು ತಮ್ಮ ಹಕ್ಕುಗಳನ್ನು ಉಪಯೋಗಿಸ್ತಾರ. ಮಾನೇದ ಹೊಲಾ ಅಂತ ಊರ ಹಳ್ಳದ ದಡದಲ್ಲಿದ್ದದ್ದು ಹಿರೀ ಬಡ್ಡೆನ್ನವ ಒಬ್ಬನೇ ಅವನ ನುಂಗಿಕುಂತಾನ. ಉಳಿದ ಜನರಿಗಿ ಏನೂ ಕೊಟ್ಟಿಲ್ಲ

ದೈವಜ್ಞ : ಮಾಳಿಂಗರಾಯನ ಭೂಮಿಗೆ ಸಂಬಂಧಪಟ್ಟ ದಾಖಲೆಗಳೇನಾದ್ರು ಈಗ ನಿಮ್ಮಲ್ಲಿ ಇರುವವೇ?

ಅಡಿವೆಪ್ಪ : ಇಲ್ಲ

ದೈವಜ್ಞ : ಸೊಲ್ಲಾಪುರದಲ್ಲಿ ಭೂಮಿಗೆ ಸಂಬಂಧಿಸಿದ ರಜಿಸ್ಟ್ರೇಶನ ಇದೀಯಾ?

ಅಡಿವೆಪ್ಪ : ಅದನ್ನ ಹಿರ್ಯಾರು ಒಬ್ರು ಹ್ರಾಹ್ಮಣರ ತಾಯ್ಬೇಕ್‌ ಕೊಟ್ಟಿದ್ರು. ಕಾಗ್ದ ಪತ್ರಾ ಕೊಟ್ಟಿದ್ರು. ನೀಲಕಂಠ ಎಂಬ ಬ್ರಾಹ್ಮಣನ ತಾಯ್ಬೆಕ್‌ ಆತ ಎಲ್ಲಾ ಸುಟ್ಟಕ್ಯಾಸ ಬಿಟ್ಟಾನಂತ ಹೇಳೊ ವಿಷ್ಯಾ ಐತಿ

ದೈವಜ್ಞ : ಆ ಬ್ರಾಹ್ಮಣ ವಂಶಸ್ಥರ ಹತ್ತಿರ ನೀವು ಹೋಗಿ ಕೇಳಿದ್ಧೀರಾ?

ಅಡಿವೆಪ್ಪ : ಏನಿಲ್ಲ ಎಲ್ಲಾ ಮೂಢ ಜನಾ ಅದನ್ನ ಕೇಳಿಲ್ಲ

ದೈವಜ್ಞ : ಮಾಳಿಂಗರಾಯನ ನಾಲ್ಕು ಜನ ಗಂಡು ಮಕ್ಕಳು ಏನು ಉದ್ಯೋಗ ಮಾಡಿಕೊಂಡಿದ್ರು?

ಅಡಿವೆಪ್ಪ : ಅವರೂ ಪವಾಡ ಪುರುಷರಾಗಿದ್ರು. ಅಡ್ಡ ಪಲ್ಲಕ್ಕಿಯಲ್ಲಿಯೂ ಅವರ ಮೆರವಣಿಗಿ ಆಯ್ತು. ಮಾಳಿಂಗರಾಯ ಜಗತ್ತ ತುಂಬ ಭಕ್ತರ ಗಳಿಸಿಟ್ಟದ್ದಾ. ಅವರು ಮಾಳಿಂಗರಾಯನಂತೆ ಧರ್ಮ ಕಾರ್ಯಗಳನ್ನೇ ಮಾಡ್ತಾ ಇದ್ರು. ಕುರುಬ ಜನಾಂಗಕ್ಕೆ ಗುರುಗಳಾಗಿ ಕೆಲ್ಸಾ ಮಾಡ್ತಾ ಇದ್ರು.

ದೈವಜ್ಞ : ಮಾಳಿಂಗರಾಯನ ಮೊಮ್ಮಗ ಬರಗಾಲಿ ಸಿದ್ಧ ಮದುವೆಯಾಗಲಿಲ್ಲವೇ?

ಅಡಿವೆಪ್ಪ : ಬರಗಾಲಿ ಸಿದ್ಧರು ಬ್ರಹ್ಮಚಾರಿಗಳು. ಅವರು ಬ್ರಹ್ಮಚಾರಿ ಆಶ್ರಮ ತಾಳಿ ಮೊಗಲೈನ್‌ ಎಲ್ಲಾ ಉದ್ಧಾರ ಮಾಡಿ ಕಸ್ಕಿವಾಡಿ ಅಂದ್ರ ಬೆಣ್ಣೀತುರ ನದಿ ದಡದಲ್ಲಿ ಈ ಸದ್ಯದಲ್ಲಿರೊ ತಾಲೂಕು ಉಮರಗಾ ಜಿಲ್ಲಾ ಉಸ್ಮಾನಾಬಾದದಲ್ಲಿ ಜೀವಂತ ಸಮಾಧಿ ಹೊಂದಿದಾ. ಅಂದ್ರ ಮುಸಲ್ಮಾನರು ಆ ಗ್ರಾಮದಲ್ಲಿ ಆಲೀ ಮಸ್ತಾಕ ಅಥವಾ ಅಲೀಸಾಬ ಆ ರಾಜನಿಗೆ ಗುರುಗಳಾಗಿ ಇದ್ದ ಸಮಯದಲ್ಲಿ ಆ ರಾಜನೇ ಒಂದು ಮಂದಿರ ಕಟ್ಟಿದ. ದೊಡ್ಡ ಪ್ರಮಾಣದ ಮಂದಿರ ಇದೆ. ಈ ನಮ್ಮ ಹಾಲಮತದಲ್ಲೇ ಆ ಮಂದಿರ ನೋಡತಕ್ಕಂತದ್ದು. ರೆಬ್ಬರಾಯ, ಬೀರಮುತ್ಯ, ಕಣ್ಣುಮುತ್ಯಾ, ಸೋಮರಾಯ ಈ ನಾಲ್ಕು ಜನರ ಸಮಾಧಿಗಳು ಹುಲಜಂತಿಯಲ್ಲೇ ಅದಾವ. ಇನ್ನು ಏಳು ಮಂದಿ ಮೊಮ್ಮಕ್ಕಳ ಪೈಕಿ ಬರಗಾಲು ಸಿದ್ಧನು ಕಸ್ಕಿವಾಡಿಯಲ್ಲಿ ಜೀವಂತ ಸಮಾಧಿ ಆದ. ಆ ನಂತರ ಮುದ್ದುಗೌಡಪ್ಪ ಇಲ್ಲಿ ಹುಲಜಂತಿಯಲ್ಲಿ ಸಮಾಧಿ ಇದೆ. ಕೆಂಚಮಾಳಪ್ಪ ಸಿಡಿಯಾಣದಲ್ಲಿ ಬೀರ ಲಿಂಗನ ಸೇವಾ ಮಾಡಿ ಬೀರಲಿಂಗನ ಎಡಗಡೆ ಜೀವಂತ ಸಮಾಧಿ ಇದೆ. ಆ ನಂತರ ರೂಪಾಜಿ ಎಂಬಾವಾ ಕೆಂಚಮಾಳಪ್ಪನ ತಮ್ಮಾ ಅವನು ಹುಲಜಂತಿಯಲ್ಲಿ ಐಕ್ಯ ಆದ. ಆ ನಂತರ ಗೌರಪ್ಪ ಕರಿಜಕ್ಕಪ್ಪ ಇವರಿಬ್ರು ಅಣ್ಣತಮ್ಮಗೋಳು ಹುಲಜಂತಿಯಲ್ಲೇ ಐಕ್ಯ ಆದ್ರು. ಬರಗಾಲಸಿದ್ಧನ ಅಣ್ಣ ಅಂದ್ರ ಅವಳಿ ಜವಳಿ ಹುಟ್ಟಿ ಬಂದಿದ್ರು. ಕಾರಲೆ ಬೀರಮುತ್ಯಾ, ಬರಗಾಲ ಸಿದ್ಧ. ಬರಗಾಲ ಸಿದ್ಧ ಬ್ರಹ್ಮಚಾರಿಯಾಗಿ ಉಳಿದುಕೊಂಡಾ ಕಾರಲೆ ಬೀರಮುತ್ಯಾ ಮುಂದ ಇವರ ವಂಶಸ್ಥರು ತಯಾರಾಯ್ತು ಹುಲಜಂತಿಯಲ್ಲಿ ಅವನ ಸಮಾಧಿ ಆಯ್ತು.

ದೈವಜ್ಞ : ಮಾಳಿಂಗರಾಯನನ್ನು ಹತ್ತು ಕಂಕಣದವರೆಂದು ಹೇಗೆ ಗುರುತಿಸುತ್ತೀರಿ?

ಅಡಿವೆಪ್ಪ : ಬೆಡಗಿ ಹೊನ್ನಗೌಡನೂರು ಅಂತ ಕರಿತಾ ಇದ್ದಾರ. ಪಟ್ಟದ ಒಡಿಯರು ರೂಢಿಯಲ್ಲಿ ಸಾವಿರ ಕಂಬಳಿಯವರು ಅಥವಾ ಮಹಾರಾಯರು ಒಡರೇಗಳು ಒಡೆಯರು ಇಂತಾ ಶಬ್ಧದಿಂದ ಕರೀತಿದ್ರು

ದೈವಜ್ಞ : ನಿಮ್ಮ ವಂಶಾವಳಿಯನ್ನು ಗುರುತಿಸಿದಾಗ ಅಥವಾ ಮಾಳಿಂಗರಾಯನ ವಂಶಸ್ಥರನ್ನೆಲ್ಲಾ ಹತ್ತಿ ಕಂಕಣ ಒಡೆಯರು, ಸಾವಿರ ಕಂಬಳಿಯವರು ಎಂದೇ ಗುರುತಿಸುತ್ತಾರೊ ಅಥವಾ ಬೇರೆ ಹೆಸರು ಏನಾದರು ಇದೆಯೋ?

ಅಡಿವೆಪ್ಪ : ಸಾಮಾನ್ಯವಾಗಿ ಎಲ್ಲರದೂ ಒಂದೇ ಐತಿ. ಕೆಲವೊಬ್ಬರ್ಗಿ ತಮ್ಮ ತಮ್ಮ ರೂಢಿಯಲ್ಲಿ ಅವರವರ ಕಾರ್ಯ ಮಾಡೊದ್ರಿಂದ ಸೋಮರಾಯನ ವಂಶಿಕರಿದ್ದವರಿಗೆ ಸೋಮತ್ತೆ ಒಡೆಯರ ಅಥವಾ ಕುರಿ ಕಾಯುದರಿಂದ ಕುರುಮುತ್ತೆ ಒಡೆಯರು, ಮಹಾರಾಯರು ಅಂತ ಕರೀತಾ ಇದ್ದಾರ. ಮಾಳಿಂಗರಾಯನ ಪೂಜೆ ಅರ್ಚನೆಗಳನ್ನ ಮಾಡುವವರಿಗೆ ಪೂಜೇರಿ ಅಂತ ಕರೀತಾ ಇದ್ದಾರ.

ದೈವಜ್ಞ : ಮಾಳಿಂಗರಾಯನ ವಂಶಸ್ಥರನ್ನು ಅತ್ಯಂತ ಸೂಕ್ಷ್ಮವಾಗಿ ಗುರುತಿಸಲಿಕ್ಕೆ ಯಾವ ಬೆಡಗನ್ನು ಹೇಳುತ್ತೀರಿ?

ಅಡಿವೆಪ್ಪ : ಹೊನ್ನಗೌಡನೂರು

ದೈವಜ್ಞ : ಹೊನ್ನಗೌಡನೂರು ಅಂತ ಬೆಡಗ ಯಾಕೆ ಬಂದಿತು?

ಅಡಿವೆಪ್ಪ : ಅದಿಕಾಲದಲ್ಲಿ ಪಾರ್ವತಿ ಪರಮೇಶೂರರು ಬಂದು ಮಣ್ಣಿನ ಗೊಂಬಿಯನ್ನು ಮಾಡಿ ಹಾಲಿನಲ್ಲಿ ತಯಾರ ಮಾಡಿದ್ದಕ್ಕ. ಮುದ್ದವ್ವನ ಬೆಡಗು ಬನ್ನಿನೂರ ಅಂತ ಪಾರ್ವತಿ ಕರದ್ಳು. ಮುದ್ದಗೌಡನ ಬೆಡಗು ಹೊನ್ನಗೌಡನೂರು ಅಂತ ಪರಮೇಶ್ವರ ಕರದ. ಇಬ್ರಿಗೂ ಸತಿ ಪತಿ ಮಾಡ್ಸಿಂದ ಭೂಲೋಕದಲ್ಲಿ ಬಿಟ್ಟ್ರು. ಅವರು ಹುಟ್ಟಿದಂಥ ಸ್ಥಾನ ಯಾವುದು ಇದೇ ಹುಲಜಂತಿನೇ. ಇದೇ ಹುಲಜಂತಿಗೆ ಪ್ರಥಮದಲ್ಲಿ ಜಾಗೃತಿಪುರ ಅಂತ ಕರಿತಾ ಇದ್ರು. ಕೆಲ ದಿನಗಳಲ್ಲಿ ಪರಮಾತ್ಮನ ಜೊತೆ ನಂದಿ ಬಂದ. ನಂದಿ ಬಂದದ್ದಾಕ್ಕಾಗಿ ‘ಜತೆ’ ಅಂತ ಹೆಸರ ಬತ್ತು. ನಂದಿಕೇಶ್ವರನಿಂದ ಜತೆ ಹೋಗಿ ಕೆಲವೇ ದಿನಗಳಲ್ಲಿ ಅಪಬ್ರಂಶ ಆಗಿ ಜತಿ ಹೋಗಿ ಜಿತ್ತಿ ಅಂತ ಕರದ್ರು. ಮುಂದ ಆದಿನಾರಾಯಣರು ಬಂದು ವಾಸ ಮಾಡಿದ ಕಾಲಕ ಅದಕ್ಕ ಜಿತ್ತ ನಾರಾಯಣಪುರ ಅಂತ ಕರದ್ರು. ಮುಂದ ಮಾಳಿಂಗರಾಯರು ಹುಲಿ ಹಿಡಿದು ಹುಲಿಗಿಣ್ಣವನ್ನು ತಂದು ಅಂದ್ರ ಎಲ್ಲಾ ಮಾನವರು ಜಯಂತಿ ಮಾಡ್ತಾ ಇದ್ರು. ದೇವಾದಿಗಳ ಜಯಂತಿ ಮಾಡ್ತಾ ಇದ್ದಾರ ಇದನ್ನ ನಾನು ಮೂಕ ಪ್ರಾಣಿ ಜಯಂತಿ ಮಾಡಬೇಕು. ಪರಾಮಾತ್ಮ ಒಬ್ಬ ಅದಾನ. ಅಂದ್ರ ಗುರು ಸ್ವರೂಪ ಒಂದೇ ಐತಿ ಅಂತ ತಿಳಿದುಕೊಂಡು ಆ ಮೂಕು ಪ್ರಾಣಿದು ಹುಲೀದು ಜಯಂತಿ ಅಂತ ಮಾಡಿದಾ. ಆಗ ಬ್ರಹ್ಮ, ವಿಷ್ಣು, ಮಹೇಶ್ವರ ಪಂಢರಪುರ ಪಾಂಡುರಂಗಾ ಬಾಳಬರಮಲಿಂಗಾ, ಗುರುಸೋನಾರಸಿದ್ಧಾ, ಸಂತರು, ಮಹಾ ಮುನಿಗಳು ನಾರ್ಯಾಣಪೂರದಲ್ಲಿ ಕೂಡಿ, ಏಳು ದಿನದ ಸಪ್ತಾಹ ಕಾರ್ಯ ಇಟ್ಟಗೊಂಡು ಆ ಸಪ್ತಾಹ ಕಾರ್ಯ ಅನ್ನೂದೇ ಹಟ್ಟಿ ಹಬ್ಬಾ. ಹಟ್ಟಿ ಹಬ್ಬಾ ಅನ್ನೂದೇ ದೀಪಾವಳಿ. ಅದೇ ಟಾಯಮದಲ್ಲಿ ಇಟ್ಟುಗೊಂಡು ಆ ನಾಡಾನ ಸಿದ್ಧರಿಗೆಲ್ಲಾ ಅವರವರ ಪಾತ್ರ ನೋಡಿ ಆ ಮಾಳಿಂಗರಾಯರು ಒಬ್ಬೊಬ್ಬ ಸಿದ್ಧರಿಗೆ ಒಂದೊಂದು ಜಾಡಿಯನ್ನು ದಾನ ಕೊಟ್ಟಾ. ಈ ಜಾಡಿಯಿಂದ ಹೊಟ್ಟಿ ತುಂಬಿಸಿಕೊಂತ ನಿಮ್ಮ ನಿಮ್ಮ ಬಾಳೆ ಮಾಡ್ರಿ ಅಂತ ಹೇಳ್ದಾ. ಪ್ರಪಂಚಗಾರರಿಗಿ ಐದೈದ ಕುರಿಗಳನ್ನ ಕೊಟ್ಟಾ. ಬೀಜಮರಿ ಒಯ್ದು ಸಾಕಿ ಸಂರಕ್ಷಣ ಮಾಡ್ರಿ. ಉಪಜೀವನ ಮಾಡ್ಕೋರಿ ಅಂತ ಕೊಟ್ಟಾಗ, ದೇವಾನು ದೇವತೆಗಳು ಹಿಂತಾ ಮಾಳಿಂಗರಾಯ ಹಿಂತಾ ದೊಡ್ಡ ಕಾರ್ಯ ಮಾಡಿದಾರು. ಅಂದ್ರ ಈ ಭೂಮಿಗಿ ಏನು ಹೆಸರಿಡಬೇಕಂತಂದ್ರ ಮಾಳಿಂಗರಾಯರು ಹುಲಿ ಹುಟ್ಟಬ್ಬಾ ಮಾಡ್ಯಾರ ಅನ್ನು ಸಲುವಾಗಿ ಇದಕ್ಕ ಹುಲಿ ಜಯಂತಿ ಅಂತ ಸಾರಬೇಕಂತ ಹೇಳಿ ಹ್ವಾದ್ರು. ಅದು ಹುಲಿ ಜಯಂತಿ ಅನ್ನೂದು ಹೋಗಿ ಹುಲಜಂತಿ ಅಂತ ಶಬ್ಧ ಬಂದೈತಿ.

ದೈವಜ್ಞ : ನಿಮ್ಮ ಅಜ್ಜ ಮುತ್ತಜ್ಜ ಅವರ ಮೂಲ ಉದ್ಯೋಗ ಯಾವುದಿತ್ತು?

ಅಡಿವೆಪ್ಪ : ಕುರಿ ಸಾಕಾಣಿಕೆ, ಭೂಮಿ ಒಕ್ಕಲುತನ, ಅವರವರ ಇಚ್ಚಾ ಪ್ರಕಾರ ಮಾಡ್ತಾ ಇದ್ದರು. ಶಿಷ್ಯರಿದ್ದಲ್ಲಿ ಬಿಕ್ಷೆಗೆ ಹೋಗುವುದು, ಶಿಷ್ಯರ ಲಗ್ನ ಕಾರ್ಯಗಳಲ್ಲಿ ಕಂಕಣ ಕಟ್ಟುವುದು, ಆಯಿಂದ ಅವರ ಕಡಿಂದ ಕಾಣಿಕಿ ತೊಗೊಳ್ಳುವುದು, ಆಗಲೂ ಕಾಣಿಕೆ ಬರತಿತ್ತು. ಈಗಲೂ ತರ್ತೇವಿ.

ದೈವಜ್ಞ : ಮಾಳಿಂಗರಾಯನ ವಂಶಸ್ಥರಾದ ನೀವು ಎಲ್ಲ ಕುರುಬ ಜನಾಂಗದವರಿಗೆ ಗುರುಗಳ ಸ್ಥಾನದಲ್ಲಿಯೇ ಮುಂದುವರಿದಿದ್ದೀರೋ ಹೇಗೆ?

ಅಡಿವೆಪ್ಪ : ಮಾಳಿಂಗರಾಯನ ವಂಶಸ್ಥರು ಇಡೀ ಕುರುಬ ಜನಾಂಗದವರಿಗೆಲ್ಲ ಗುರುಗಳು ಯಾಕ ಗುರುಸ್ಥಾನ ಅಂದ್ರ, ಜಗದ ಗುರು ರೇವಣಸಿದ್ಧೆಶ್ವರನ ಶಿಷ್ಯ ಬೀರಲಿಂಗೇಶ್ವರ. ಬೀರಲಿಂಗೇಶ್ವರನ ಶಿಷ್ಯ ಮಾಳಿಂಗರಾಯ. ಮಾಳಿಂಗರಾಯನ ಶಿಷ್ಯ ಬುಳ್ಳರಾಯ ಅಥವಾ ಬುಳ್ಳಪ್ಪ. ಇವನು ಬಿಜ್ಜರಗಿಗೆ ಇದ್ದಾ. ಅವಾ ಬಾಲಬ್ರಹ್ಮಚಾರಿ. ಅವ ಬಿಜ್ಜರಗೇರಿಯಲ್ಲಿ ಸಮಾಧಿ ಹೊಂದಿದಾ. ಮುಂದ ಅವನ ಗಾದಿಗಿ ಅಧಿಪತಿಯಾದಂತವರು ಮಾಳಪ್ಪನ ನಾಲ್ಕು ಮಕ್ಕಳು. ಅವರ ವಂಶಸ್ಥರೇ ಇದಕ ಅಧಿಪತ್ಯ ಆದ್ರು. ಮುಂದ ಕಾಲನುಕ್ರಮದಲ್ಲಿ ಗಾದಿ ಪೀಠಗಳನ್ನ ತಗದ ಒಕ್ಕೊಟ್ರು. ನಾವು ಯಾವಾಗ್ಲೂ ಗುರು ಮನೆಯವರೆದ್ದೇವೆ. ಅದನ್ನೆಲ್ಲ ಉಳಿಕೀದ ಯಾಕ ಬಳಸೂದು ಅಂತಂದು ಮೂರ ಜನಾ ಹೆಚ್ಚಾಕಿಸಿಂದ ಅದು ಮಹಾರಾಷ್ಟ್ರದಲ್ಲಿ ಇರೂದ್ರಿಂದ ಗುರುತಾಗಲಿಲ್ಲ. ಯಾಕ ಗುರುತಾಗಲಿಲ್ಲಂದ್ರ ಆ ಕೆಲವೊಂದು ಬೆಡಗಗಳಿಗೆ ನೆಂಟತನಾ ಆದ ಮೇಲೆ ಕೆಲ ಭಾಗದಲ್ಲಿ ಗುರು ಅನ್ನು ಮನೆತನಾ ಮುಳಗೇದ. ಕೆಲ ಭಾಗದಲ್ಲಿ ಐತಿ.

ದೈವಜ್ಞ : ನಿಮಗೆ ಹಾಡುವುದು, ಪ್ರವಚನ ಮಾಡುವುದು ಹೇಗೆ ಅಂಟಿಕೊಂಡಿತು?

ಅಡಿವೆಪ್ಪ : ಬಾಯಿಂದ ಬಾಯಿಗಿ ಬಂದಂತ ಶಬ್ದಗಳು. ಮೊದಲ ಬುಳ್ಳಪ್ಪನು ರಟ್ಟ ಬರದಿದ್ದ. ಅವೆಲ್ಲ ನಾಶಾಗಿ ಹೋಗ್ಯಾವ. ಬುಳ್ಳಪ್ಪಂದ್ರ ಹೊನ್ನುಟುಗಿಗೌಡ. ಯಂಕಪ್ಪಗೌಡ ಶಿವಲಿಂಗಮ್ಮ ಅವರ ಉದರದಿಂದ ಮಾಳಿಂಗರಾಯ ಅವನಿಗೆ ಸಾಕಿ ಸಲಹಿ ಜೋಪಾನ ಮಾಡ್ದಾ. ಮುಂದ ಅವ್ರು ಗನಾರಸಿಂಧಗಿ ನಾಡಿನಲ್ಲಿ ಸಿದ್ಧಾಟ್ಗಿ ಮಾಡಿ ಕೆಲವೇ ಭಾಗಗಳ ಉದ್ಧಾರ ಮಾಡಿ ಕೊಣ್ಲೂರು ಕರಿದೇವರ ಸೇವಾ ಮಾಡಿ ಬಿಜ್ಜರಿಗಿ ಗ್ರಾಮದಲ್ಲಿ ಅವರು ಸಮಾಧಿ ಹೊಂದಿದ್ರು. ಇಷ್ಟು ಮಾಳಿಂಗರಾಯರ ಗದ್ಯರೂಪದಾಗ ಚರಿತ್ರೆ ಐತಿ. ಅದನ್ನ ಬುಳ್ಳಪ್ಪ ಒಟ್ಟು ಕೂಡಿಸಿ ಕತೀ ತಯ್ಯಾರ ಮಾಡ್ದಿ ಕೂಡಲೇ ಆ ನಂತರ ಸೋಮರಾಯನ ವಂಶಸ್ಥ ಚುಂಗಿನ ಸೋಮರಾಯ ಅದನ್ನ ಒಟ್ಟುಗೂಡ್ಸಿ ಬರೆದ. ಅದನ್ನ ಲೇಖರೂಪದಾಗ ಬಿಡುಗಡೆ ಮಾಡಿಸ್ಬೇಕಂತ ತಯ್ಯಾರ ಮಾಡುದ್ರೊಳಗಾಗಿ ಬ್ರಾಹ್ಮಣರು ಇವರ ಅಣ್ಣತಮ್ರ ಕಿವಿ ತುಂಬಿಸಿ ಬಿಟ್ರು. ಇಂತಾ ಮನುಷಾ ಹಿಂಗ ಲೇಖ ತಯಾರ ಮಾಡಿ ನಿಮ್ದ ಇಡೀ ದೇವಸ್ಥಾನ ಎಲ್ಲಾ ನುಂಗಿಬಿಡ್ತಾನೆ ಒಬ್ನೆ. ಅಂದ್ರ ಇವ್ನ ಏನ್‌ ಮಾಡ್ತೀರಿ ನೋಡ್ರಿ ಅಂದ ಕಾಲಕ್ಕ ಆ ಬ್ರಾಹ್ಮಣರ ಮಾತ ಕೇಳಿ ಈ ಚುಂಗಿನ ಸೋಮರಾಯ್ಗ ಅಣ್ಣತಮ್ಮರು ಮೂರು ಬಡ್ಡೆನ್ನವರು ಕೂಡಿ ಅವನಿಗೆ ಹುನ್ನೂರು ಕೆಳಗಡೆ ಅಲ್ಲಿ ಒಂದು ಹಳ್ಳದಲ್ಲಿ ಕರಿಚಿನ ಮಡ ಅಂತ ಹೆಸರೈತಿ. ಅಲ್ಲಿ ಅವ್ಗ ಕಡಿದ ಹಾಕಿದ್ರು. ಕಡಿದಹಾಕಿದ್ಕೂಡ್ಲೆ ಆಯಿಂದ ಭರ್ತಿ ಆಗಿತ್ತು. ಬಸುಜಯಂತಿ ಟೈಂದಲ್ಲಿ ಬ್ಯಾಸಗಿ ದಿವಸದಲ್ಲಿ ಕಡಿದ ಸಮಯದಲ್ಲಿ ಅವ್ನ ಸಂಗಡ ಒಬ್ಬ ಹೊಲೆಯ ಇದ್ದ. ಹೊಲೆಯನ್ಗೂ ಕಡಿದ್ರು. ಕಡ್ದು ಇವನಿಗೆ ಒಂದು ಜಾಡಿ ಮಟ್ಟಿ ಕಟ್ಟಿದ್ರು. ಎಲ್ಲಾ ಕಡ್ದ ಚೂರ ಮಾಡಿ ಕಟ್ಟಿ ಗಂಟು ಮಾಡಿದ್ರು. ಆ ಹೊಲಿಯಾಗೊಂದು ಹೊಲ್ಲಿ ಅಂದ್ರ ಧೋತರದಲ್ಲಿ ಗಂಟು ಕಟ್ಟಿಟ್ರು. ಅಂದಿಟ್ಟ ಸಮಯದಲ್ಲಿ ಹೊಂಟ ಹೋಗಿಬಿಟ್ರು ಅವರು ಪರಾರಿಯಾಗಿ. ಆಯಿಂದ ಹಂತಾ ಬ್ಯಾಸಿಗಿಯಲ್ಲಿ ಆಗಿಂದಾಗ ಮಾಳಿಂಗರಾಯ್ಗ ಅರುವಾಯ್ತು. ಇವ್ರ ಸಮಾಧಿ ಹೊಂದಿ ಎಷ್ಟೋ ಕಾಲ ಗತಿಸಿ ಹೋದ್ರು ಕೂಡ ಮಾಯದಿಂದ ಅಲ್ಲಿ ಮಳೆ ಕರದ್ರು. ಎರಡು ಹಳ್ಳ ತುಂಬಿ ಬತ್ತು. ಅವು ತೇಲ್ಕೋತ್ತ ತೇಲ್ಕೋತ್ತ ಆ ಹುಲಜಂತಿ ಮುಂದಿರದ ಅದೇ ಹಳ್ಳದಿಂದ ಹಾಯ್ದು ಎರಡೂ ಗಂಟುಗಳು ಹೋಗ್ಬಿಟ್ಟುವು. ಎಲ್ಲಿ ಭೀಮಾ ನದಿ ಕೂಡೀ. ಮುಂದ ಭೀಮಾನದಿ ದಡದಲ್ಲಿ ಹತ್ತರಸಂಕ ಎಂಬ ಊರೈತಿ. ಹತ್ತರಸಂಕ ಊರ ಗೌಡನ ಕನಸಿನ್ಯಾಗ ಚುಂಗಿನ ಸೋಮರಾಯ ಹೋಗಿ ಏನಂದ ಎಲೋ ಮಗನ ಮುಂದೊಂದು ಮಟ್ಟಿ ಬರ್ತದ. ಗಂಟೈತಿ ಅದನ್ನ ತದ್ದೇವಾಡಿ ಸೀಮಿಗಿ ತರ್ತದ. ನಂದೊಂದ ಗಂಟ ಬರ್ತದ. ನಿನ್ನ ಹೊಲದ ದಡೀಗೆ ಬರ್ತದ. ಮಾನ್ಯದ ಹೊಲದ ದಡೀಗೆ ಅಂದ್ರ ಸೂರ್ಯ ಉದು ಆಗೋದ್ರೊಳಗಾಗಿ ನೀ ಅಲ್ಲಿ ಬಂದು ದಡಿ ಮ್ಯಾಲ ನಿಂದ್ರು. ನಾ ಮಾಳಿಂಗರಾಯನ ಮೊಮ್ಮಗನ ಮಗ ಇದ್ದೀನಿ. ಚುಂಗಿನ ಸೋಮರಾಯ ಅಂತ ನನ್ನ ಹೆಸರೈತಿ. ಅಂದ್ರ ನನಗ ಪ್ರಾಣ ಹೊಡದು ಮಟ್ಟಿ ಕಟ್ಯಾರ. ಕಟ್ಟಿ ಇಟ್ಟ ಬಿಟ್ಟಾರ. ನಾನು ಹರಕೊಂತ ಇಲ್ಲಿ ಬರ್ತಾ ಇದ್ದೀನಿ. ಈ ಗಂಟ ಒಯ್ದು ಸಮಾಧಿ ಕಟ್ಟಿ ಆ ಸಮಾಧಿಯಲ್ಲಿ ಇಟ್ಟು ಅದರ ಮ್ಯಾಲ ಗುಡಿ ಕಟ್ಟಿ ಪೂಜೆ ಮಾಡ್ಕೋತ ನಡಿ. ನಿಂದು ಚೊಲೊ ಆಕೈತಂತ ಕನಸಿನ್ಯಾಗ ಹೇಳಾಕರ, ಹತ್ತರಸಂಕ ಊರಗೌಡ ಇದೇನ ಸೋಜಿಕಂತ ಅಂದು ಸೂರ್ಯೋದಯ ಆಗುದ್ರೊಳಗಾಗಿಯೇ ಅಲ್ಲಿ ಬಂದು ದಡಿಮ್ಯಾಲ ನಿಂತು ನೋಡುವಾಗ್ಗೆ ಈ ಗಂಟು ಆ ಭಗವಂತನ ಲೀಲಾ ಏನು ಆಗಾದೈತೆಂದು ಬದಿಗಿ ಕೂಡ್ಲೆ ತಗೊಂಡ ಬಿಚ್ಚಿ ನೋಡ್ತಾನ ಹೆಣಾ ಇತ್ತು. ಅದನ್ನ ಕಂಡು ಆಶ್ಚರ್ಯ ಚಕಿತನಾಗಿ ಹೊಲದಲ್ಲಿ ಒಯ್ದು ಬನ್ನಿಗಿಡದ ಬುಡಕ್ಕ ಸಮಾಧಿಯನ್ನು ತೆಗೆದು ಆ ಸಮಾಧಿ ಒಳಗಿಟ್ಟು ಅದರ ಮ್ಯಾಲ ಮಂದಿರ ಕಟ್ಟಿ ಚುಂಗಿನ ಮಾಳಿಂಗರಾಯ ಉರುಪ್‌ ಮಾಳಿಂಗರಾಯ ಅಂತ ಹೆಸರಿಟ್ಟು ಕರದ್ರು. ಪೂಜಿ ಸೇವಾ ಮಾಡ್ಕೋತ ಹೊಂಟ. ಆ ಹತ್ತರಸಂಕ ಗ್ರಾಮದಾಗ ಚುಂಗಿನ ಸೋಮರಾಯಂದ ಈಗಲಾದ್ರೂ ದೊಡ್ಡ ಜಾತ್ರಿ ದೊಡ್ಡ ಸಿದ್ಧಾಟ್ಗಿ ನಡಿತದ. ಆ ವಿಷಯನ್ನ ಒಬ್ಬರ ಬಾಯಿಂದ ಒಬ್ರು ಜೋಪಾನ ಮಾಡಿಕೋತ ಬಂದ್ರು. ನಮ್ಮ ಹಿರಿಯಾರು ಮಾಡಿದಂತಾ ಹಿಂತಾ ಮಾರ್ಗಗಳದಾವು. ಇವು ನಾಲ್ಕು ಮಾರ್ಗಗಳದಾವು. ಈ ನಾಲ್ಕ ಮಾರ್ಗಗಳು ಯಪಾ ಮಾಳಪ್ಪ ಹಿಂಗ ಮಾಡ್ಯಾನ ಅಥವಾ ಬೀರಪ್ಪಾ ಹಿಂಗ ಮಾಡ್ಯಾನ. ಅಮುಕ ಇಷ್ಟ ಅವತಾರ ತಾಳ್ಯಾರ ಅಮುಕ ಹಿಂತಾ ವಂಶಸ್ಥರಲ್ಲಿ ಜನನ ಆಗೇದ ಇಂಥಾ ಭಕ್ತರ ಉದ್ಧಾರ ಮಾಡ್ಯಾರ ಹಿಂಗ ಅಪ್ಪ ಮಗನಿಗಿ ಹೇಳ್ಕೋತ ಬಂದ. ಮುಂದಿನವ ತನ್ನ ಮಗನಿಗಿ ಹೇಳ್ಕೋತ ಬಂದ. ಹಿಂಗ ಬಾಯಿಂದ ಬಾಯಿಗಿ ಬಂದಂತಾ ಶಬ್ಧಗಳು ಇದನ್ನ ತ್ರಿವಾರ ಸತ್ಯ ಐತಿ. ಯಾಕಂದ್ರ ಬಾಯಿಂದ ಬಾಯಿಗಿ ಬಂದಂತಾ ಶಬ್ಧಗಳು ಲೇಖನದಲ್ಲಿ ಒಂತರಾ ತಪ್ಪು ತಡೆ ಆಗಬಹುದು. ಬಾಯಿಂದ ಬಾಯಿಗಿ ತಪ್ಪತಡೆಗಳಾಗಂಗಿಲ್ಲ. ಹ್ಯಾಗ ಮೆಣಸಿನಕಾಯಿ ಇರ್ತೈತೊ ಆ ಮೆಣಸಿನಕಾಯಿಗಿ ಇಂಗಾ, ಜೀರಿಗಿ, ದೂಂಡಪುಲಾ, ಕೊತ್ತಂಬರಿಕಾಳ, ಉಪ್ಪಾ ವಗೈರೆ ಕೂಡ್ಸಿ ಅದನ್ನ ಒಳ್ಳಲ್ಲಿ ಹಾಕಿ, ಮ್ಯಾಲ ಹಾರೀಲೇ ಜಜ್ಜಿದಾಗ ಮಸಾಲೆ ಅನಿಸುತ್ತದೆ. ಕಾರ ಅನಿಸುತ್ತದೆ. ಅದೇ ಪ್ರಕಾರ ಇದು ಲೇಖ ರೂಪದಲ್ಲಿರುತ್ತದೆ. ಇದು ಮಾಳಿಂಗರಾಯನ ಕತೀ ಸಾರು ಅಥವಾ ಹಾಲಮತದ ಜಗತ್ತೇಲ್ಲ ಹೇಳೂದು ಬ್ಯಾರೆ ಆಗತೈತಿ.

ದೈವಜ್ಞ : ಈ ಕಥೆ, ಹಾಡು ನಿಮಗೆ ಕಲಿಸಿದ ಗುರುಗಳು ಯಾರು?

ಅಡಿವೆಪ್ಪ : ನಮಗೆ ಗುರುಗಳಂದ್ರ ನಮ್ಮ ಅಣ್ಣತಮ್ಮರಲ್ಲೇ ಒಬ್ರು ಅಕ್ಕಾರು

ದೈವಜ್ಞ : ಜಮೀನು ಇಲ್ಲದೆ ಇದ್ದವರು ಏನು ಉದ್ಯೋಗ ಮಾಡ್ತಾರೆ?

ಅಡಿವೆಪ್ಪ : ಜಮೀನು ಇಲ್ಲದೆ ಇದ್ದವರು ಜಾಡಿ ಹೆಗಲಿಗೆ ಹಾಕಿಕೊಂಡು ಬೆತ್ತ ಕೈಯಾಗ ಹಿಡದು ಭಕ್ತರ ಮನಿಗಿ ಹೋಗೋದು ತರೂದು ತಿನ್ನೂದು ಇದೆ ಕೆಲ್ಸ

ದೈವಜ್ಞ : ನಿಮ್ಮ ವಂಶಸ್ಥರಲ್ಲಿ ಎಲ್ಲಿಯವರೆಗೆ ವಿದ್ಯೆ ಕಲಿತಿದ್ದಾರೆ?

ಅಡಿವೆಪ್ಪ : ಕೆಲವೊಬ್ರು ಬಿ. ಎ. ಕಲ್ತಾವರು ಅದಾರ. ಕೆಲವರು ಎಂ. ಬಿ. ಎ. ಮಾಡ್ಯಾರ. ಅಂದ್ರ ಪೂರ್ವದಲ್ಲಿ ವಿಚಾರ ಮಾಡಬೇಕಾದ್ರ ಶಿಕ್ಷಣ ನಮ್ಮಲ್ಲಿ ಕಡಿಮೆ. ಯಾಕಂದ್ರ ಇವರು ಸಿದ್ಧಾಟ್ಗಿ ಹೇಳುವುದೆ ಒಂದು ಕಾರ್ಯ. ಅಂದ್ರ ‘ನಿಂದ ಹಿಂಗ ಆಗ್ತದಲೇ ಮಗನಿಂದ ಸತ್ಯಾನಾಶ ಆಗ್ತದಲೇ ಮಗನ ಅಂದಾಗ ಸತ್ಯಾನಾಶ ಆಗೋದು’ ಯಾಕಂದ್ರ ಬೀರಲಿಂಗೇಶ್ವರನು ಮಾಳಿಂಗಾಯಾರನಿಗೆ ಏನ್ ಹೇಳ್ಯಾನಂದ್ರ ಯಪಾ ಮಾಳಿಂಗರಾಯ ನಿನಗ ನಾಕ ಮಮ್ದಿ ಮಕ್ಕಳ ಹುಟ್ಯಾರ. ಅವರ ವಂಶಸ್ಥರಿಗೆ ಬಾಯಲ್ಲಿ ಬತ್ತೀಸ ಹಲ್ಲುಗಳ ಪೈಕಿ ಒಂದ ಹಲ್ಲ ವಿಷಾ ಒಂದು ಹಲ್ಲ ಅಮೃತ ಕೋಡತೇನಂತ ಹೇಳ್ಯಾರ. ಅವರಲ್ಲಿ ಜರ್ ಕಡತಾ ನಡಿ ನುಡಿ ತೊಡಿ ಸುದ್ದಾಗಿದ್ರ ಅವ್ರ ವಚನಾ ಇಲ್ಲೇ ಹಿಂತವರಿಗಿ ನೀ ನಷ್ಟ ಮಾಡಂದ್ರ ನಾ ಮಾಡ್ತೇನು. ಅವರಿಗೆ ಕಾಪಾಡಂದ್ರ ಕಾಪಾಡತೇನು. ಅವರಿಗಿ ಹೆಚ್ಚೆಗೊಮ್ಮೆ ಪ್ರಸನ್ನಾಗಿ ನಾ ಮಾತಾಡ್ತೇನು. ಅವರ ವಂಶಸ್ಥರಿಗೆ ಅಂದು ಬೀರಲಿಂಗೇಶ್ವರ ವಚನ ಕೊಟ್ಟ ವಿಷ್ಯಯ. ಆ ಕಾರಣಕ್ಕಾಗಿ ಅವರವರ ಪತ್ತೆ ಹೆಂಗೈತಿ ಆ ಪ್ರಕಾರ ಭಗವಂತನು ಸಹಾಯಾಗಿರತಾನ. ಆ ಪ್ರಕಾರ ಹೆಚ್ಚಾನ್ಹೆಚ್ಚ ಅವರು ಸುಮಾರ ಇದ್ರು ಕೂಡಾ ಅದನ್ನು ಒಂಧಲ್ಲ ವಿಷಾ, ಒಂಧಲ್ಲ ಅಮೃತ ಎನೈತಿ ಅವರ ಬಾಯಲ್ಲಿ ಏನೋ ಹತ್ತ ಶಬ್ಧಗಳಾ ಒಳಗಿನ ಒಂದ ಶಬ್ಧ ಕರೆಕ್ಟ ಭಕ್ತರಿಗೆ ಬಡಕೋತದ. ಭಕ್ತರು ಇವರಿಗೆ ಹುಲಜಂತಿ ಮಠದನ್ನವರು ಕರಿ ಬಾಯನ್ನವರದಾರಂತ, ಕೆಟ್ಟ ಬಾಯನ್ನವರದಾರಂತ, ತಿಳಿಕೊಂಡು ಭಕ್ತರೆಲ್ಲ ಅಂಜಿ ನಡೀತಾ ಇದ್ದಾರೆ.

ದೈವಜ್ಞ : ಈ ಹುಲಜಂತಿಯಲ್ಲಿ ನಿಮ್ಮ ವಂಶಸ್ಥರ ಮನೆಗಳು ಎಷ್ಟಿವೆ?

ಅಡಿವೆಪ್ಪ : ಹುಲಜಂತಿಯಲ್ಲಿ ಸುಮಾರು ನೂರಾ ಐವತ್ತು ಮನೆಗಳಿವೆ. ಸಿರಡೋಣಕ್ಕ ಹತ್ತಿಪ್ಪತ್ತು ಮನೆತನಗಲು. ಹುನ್ನೂರ್ಕ ಹತ್ತಿಪ್ಪತ್ತು ಮನೆಗಳು. ಎಣಕಿಗಿ ಎರಡ ಮೂರು ಮನೆ ತನಗಳು. ಆಯಿಂದ ನಾಡಾಗ ಹೋಗಿರುವವು ಹತಿಪ್ಪತ್ತು ಮನೆತನಗಳು. ಹೀಮ್ಗ ಮಾಳಿಂಗರಾಯನ ವಂಶಸ್ಥರ ಆದ್ಭುತವಾದ. ಹುಲಜಂತಿಯ ಸುಮಾರು ಶೇಕಡಾ ಅರವತ್ತೈದರಷ್ಟು ಕುರುಬರು ಇರಬಹುದು.

ದೈವಜ್ಞ : ದೀಪಾವಳಿಯಲ್ಲಿ ನಡೆಯುವ ಮಾಳಿಂಗರಾಯನ ಜಾತೆಯನ್ನು ಯಾರು ಯಾರು ಸೇರಿ ಮಾಡುತ್ತೀರಿ?ಅಡಿವೆಪ್ಪ : ಮಾಳಿಂಗರಾಯನ ಜಾತ್ರೆಯನ್ನು ನಮ್ಮ ವಂಶಸ್ಥರೆಲ್ಲ ಕೂಡೇ ಜಾತ್ರೆ ಮಾಡುತ್ತೇವೆ. ಭಕ್ತರು ಕೊಟ್ಟ ಉತ್ಪನ್ನ ಏನೈತಿ ಅದನ್ನ ಪೂಜೇರಿಗೊಳು ಯಾರು ತೋಗೊಳಂಗಿಲ್ಲ. ಅದನ್ನ ದೇವಾಲಯದ ಕಟ್ಟಡಕ್ಕ ಅಥವಾ ದೇಚರ ಕೆಲಸಕ್ಕ ಉಪಯೋಗ ಮಾಡ್ಕೋತೇವಿ. ನಾವು ಸ್ವಂತ ಜಾಡಿ ಹಾಕ್ಕೊಂಡು ಭಕ್ತರ ಮನಿಗಿ ಹೋಗಿ ಏನ್ ತೆಗೆದುಕೊಂಡು ಬರ್ತೇವೊ ಅದನ್ನೇ ನಾವು ಊಟ ಮಾಡುವುದು.

ದೈವಜ್ಞ : ಮಾಳಿಂಗರಾಯನ ಗುಡಿಗೆ ಸಂಬಂಧಿಸಿದ ಟ್ರಸ್ಟ್ ಕಮೀಟಿ ಇದೆಯಾ?

ಅಡಿವೆಪ್ಪ : ಟ್ರಸ್ಟ ಸಲುವಾಗಿ ಪ್ರಯತ್ನ ನಡದೈತಿ. ಶೇಕದಾ ಎಪ್ಪತ್ತೈದು ಅಜ್ಞಾನ ಇಪ್ಪತ್ತೈದು ಸುಜ್ಞಾನ ಇರೋದ್ರಿಂದ ಇಲ್ಲೆಲ್ಲಾ ಶಿವಾಯನಮ ನಡದೈತಿ. ಕಲ್ತವರಿದ್ರು ಕೂಡ ಇದು ನಮ್ಮ ಬಡ್ಡಿ. ನನ್ನ ಬಡ್ದಿ. ನಾ ಶ್ರೇಷ್ಠ ಇವನಿಗ್ಯಾಕ ಈ ಕಾರೆ ಮಾಡಕ ಬಿಡಬೇಕು ಎಂಬ ರಾಜಕಾರಣೈವರಲ್ಲಿದೆ. ಮಾಳಿಂಗರಾಯನ ಪೂಜೆಯನ್ನ ನಾಲ್ಕು ಬಡ್ಡೆನ್ನವರು ಮಾಡ್ತಾರ. ಅವರವರ ಇಸೆ ಹೆಂಗ ಇರ್ತದ ಹಂಗಂಗ ಅವರ ಮನಿಪ್ರಕಾರ ಇಸಾ ಮಾಡೂದು ಅದು ರೂಢಿಯಲ್ಲಿ. ಈಗ ನಮ್ಮ ಬಡ್ಯಾಗಇವ ಚೊಲೊ ಮಾಡ್ತಾನಂದ್ರ ಅವನಿಗೆ ಎರಡ್ವರ್ಷ ಬಿಟ್ಟ ಬಿಡೋದೈತಿ. ಇನ್ನ ಕೆಲವೇ ದಿನಗಳಲ್ಲಿ ಆ ರೂಢಿ ಬದಲಾಯಿಸುವುದೈತಿ. ಇನ್ನ ಎಂಟೇ ದಿವ್ಸ ಬರ್ಲಿ ನಾಕೇ ದಿವ್ಸ ಬರ್ಲಿ ಅವರ ಇಸಾಕ ಹೆಂಗ ಬರ್ತದ ಹಂಗ ಮಾಡೂದು.

ದೈವಜ್ಞ : ಮಾಳಿಂಗರಾಯನ ಜಾತ್ರೆ ಹೇಗೆ ಮಾಡುತ್ತೀರಿ?

ಅಡಿವೆಪ್ಪ : ದೀಪಾವಳಿಗಿಂತ ಮೊದಲು ಮಾಳಿಂಗರಾಯ ಗುರು ಬೀರೇಶ್ವರರು ಜಗತ್ತೇಲ್ಲ ಐವತ್ತೆಂಟು ದಿವ್ಸಗಳವರೆಗೆ ತಿರ್ಗಾಡಿ ರಾಯ ಹುನ್ನೂರು ಅಂದ್ರ ಎಷ್ಟೋ ಹುನ್ನೂರದಾವ ರಾಯಹುನ್ನೂರು ಗುರಿ ಮಠದಲ್ಲಿ ಅವಾ ಜೀವಂತ ಸಮಾಧಿ ಹೊಂದಿದ ಪ್ರಥಮ ಗುರುವಿನ ಭೆಟ್ಟಿ ಮಾಡಿಕೊಂಡ ಬರ್ಬೇಕಂತ ಆ ಗುರುವಿನ ಭೇಟ್ತಿಗಿ ಅಲ್ಲಿಗಿ ಹೋಗಿರ್ತಾನ. ಸೀಗಿ ಹುಣವಿ ಆಗಿ ಏಳನೇ ದಿವಸಕ್ಕ ಹೋಗಿ ಮೂರು ದಿವ್ಸ ಅಲ್ಲಿ ಜಾತ್ರಿ ಮಾಡ್ಕೋತಾನ. ಬೀರಲಿಂಗೇಶ್ವರಂದು ಪ್ರತಿ ತಿಂಗಳು ಜಾತಿ. ಅಮಾಸಿಗೂ ದೊಡ್ದ ಜಾತ್ರಿ ಇರ್ತದ. ಜಾತ್ರಿ ಮಾಡಿಕೊಂಡ ಬಮ್ದ ಮುಂದ ಅಮಾಸಿ ಎರಡ ದಿನಾ ಇರ್ಲಾಕಾಗಿ ಶಿರಡೋಣ ಮಠದಲ್ಲಿ ಶಿಲವಂತಿ ಬೀರಪ್ಪನ ಮುಖ್ಯ ತಲಾ ಅಂತ ಅಲ್ಲಿ ಭೆಟ್ಟಿ ಮಾಡಿರ್ತಾನ. ಆನಂತರ ಆ ಹುಲಜಂತಿ ಸೀಮಿಯಲ್ಲಿ ಪೂರ್ವ ಬಾಗದಲ್ಲಿ ಅಣ್ಣ ಜಕ್ಕಪ್ಪರಾಯಂತದಾನ. ಮರಡಿ ಮೇಲೆ ಆ ಜಕ್ಕಪ್ಪರಾಯನ ದರ್ಶನ ಮಾಡಿಕೊಂಡು ಪಲ್ಲಕ್ಕಿಯಲ್ಲಿ ಮಾಳಿಂಗರಾಯ ಕುತ್ತು ಚೆಂಜಿ ಹೊತ್ತ ಆ ಗುಡಿಯಲ್ಲಿ ಬಂದಿರ್ತಾನ. ತನ್ನ ಸಮಾಧಿ ಮಂದಿರದಲ್ಲಿ ಮೂರ್ತಿ ಇಟ್ಟು ಜನ ಅಪಾರ ಕೂಡಿರ್ತದ. ಆ ದಿನ ಪರಮಾತ್ಮನು ಅಂದ ಮುಂಡಾಸ ಸುತ್ತತಾನ. ಆ ವೇಳ್ಯಾಕ ಸೂರ್ಯ ಉದಯ ಆಗು ಕಾಲಕ ಜನಾಂಗದವರು ಮುಂಡಾಸ ದರ್ಶನ ಪಡಿತಾರ. ನಾಲ್ಕು ಗಂಟೆಗೆ ಏಳೂರು ಪಲ್ಲಕ್ಕಿಗಳು ಕೂಡ್ತಾವ. ಶಿರಡೋಣ ಬೀರಪ್ಪಾ ಬೀರಪ್ಪಾ, ಶೀಲವಂತಿ, ಜೀರಂಕಲಿಗಿ ಬೀರಪ್ಪ, ಊಟಗಿ ಬರಮಲಿಂಗಾ, ಬಿಜ್ಜೂರಿಂದ ಜಗ್ ಅಂತ ಬರ್ತದ. ಸಾಕಿದ ಮಗಾ ಬುಳ್ಳಪ್ತಂದು ಹುನ್ನೂರಿಂದ ಬೇರೇಶ್ವರನ ಪಾಲಕಿ, ಸೋನ್ಯಾಳದಿಂದ ವಿಠಲನ ಪಾಲಕಿ ವಿಠ್ರಾಯ ಅಂತ ಕರಿತಾರ. ಇವು ಏಳು ಪಲ್ಲಕ್ಕಿಗಳು ಅಮಾವಾಸ್ಯೆ ಮರುದಿವ್ಸ ಮುಂಡಾಸ ಆದ ಮರುದಿನಚೆಂಜಿ ಮೂರು ಗಂಟೆಗೆ ದಿಡಕೊಂಡು ಆರ ಗಂಟೆವರೆಗೆ ಆ ನದಿಯಲ್ಲಿ ಹಾಲಹಳ್ಳ ಅಂತ ಕೆಲವೊಬ್ರ ಅಂತಾರ. ಮೂಲತಃ ವಿಚಾರ ಮಾಡ್ಬೇಕಂದ್ರ ತೀರ್ಥನದಿನೇ ಹೌದು. ಅದು ಎಲ್ಲಿ ಉಗಮ ಆಗೇದ ಅಲ್ಲಿಂದ ಹಿಡಕೋಂಡು ಎಲ್ಲಾ ಜಾಗೃತಾ ದೇವಸ್ಥಾನ ಐತಿ. ನದಿ ಕೂಡುವರೆಗಿ ಅದಕ್ಕ ತೀರ್ಥನದಿ ಅಂತ ಕರದದ್ದೇ ಘನವಾದ ವಿಷಯ. ಇದಕ್ಕ ಹಾಲಳ್ಳ ಅಂತ ಕರದಿದ್ದ ವಿಷಯಂದ್ರ ಹಾಲಮತದ ಜನಾಂಗ ಹೆಚ್ಚ ಇರೂದ್ರಿಂದ ಇದಕ್ಕ ಹಾಲಳ್ಳ ಅಂತ ಕರದಿದ್ದಾರ. ಈ ಹಳ್ಳ ಉಗಮ ಆಗಿದ್ದರೀಂದ ಹಿಡಿದು ಬೀಮಾನದಿಗೆ ಕೂಡುವವರೆಗೆ ಬರೇ ಈ ಕುರುಬ ಪರಂತು ಮುಖ್ಯಾತಾ ವಿಚಾರ ಮಾಡಬೇಕಂದ್ರ ಅದು ತೀರ್ಥ ನದಿ.

ದೈವಜ್ಞ : ಹಾಲಳ್ಳ ಅಂತ ಕರೆಯುವ ಈ ಹಳ್ಳದ ದಡದಲ್ಲಿ ಮಾಳಪ್ಪನ ದೇವಾಸ್ಥಾನವಿದೆ. ಮುಂದೆ ಹೋದಹಾಗೆ ಯಾವ ಯಾವ ದೇವಸ್ಥಾನಗಳು ಹಳ್ಳದ ದಡದಲ್ಲಿದೆ?

ಅಡಿವೆಪ್ಪ : ಈ ಹಳ್ಳ ಪ್ರಥಮದಲ್ಲಿ ಜತ್ ದಲ್ಲಿ ಉಗಮ ಆಗೇದ. ಅಲ್ಲಿ ಎಲ್ಲಮ್ಮನ ದೇವಾಸ್ಥಾನ ಐತಿ. ಉಗಮ ಆಗಿದ್ದ ಸ್ಥಾನಕ ಮುಂದ ಅದೇ ಹಳ್ಳ ಬರ್ಕೋತ ಬರ್ಕೋತ ಹುನ್ನೂರದಲ್ಲಿ ಬೀರಲಿಂಗೇಶ್ವರ ಆದ. ಮುಂದ ಅದ ಹಳ್ಳದ ದಡದ ಮ್ಯಾಲ ಶರಣಾಂದ್ಗಿ ಅಂತ ಊರೈತಿ, ಮಾಳಿಂಗರಾಯರ ಏಳ್ತೆಲಿ ಗುರುಗಳ ಸೋನಾರಿ ಮಠ ಸದ್ಯದಲ್ಲಿ ಪರಂಗಾ ತಾಲೂಕು ಉಸ್ಮಾರ್ಣಾಸುರ ದೈತ್ಯನ ಮರ್ಧನ ಮಾಡಿ ಸುವರ್ಣಾಸುರನ ಶಿರಾ ಹೊಡ್ಡಾನ ಅನ್ನು ಸಲುವಾಗಿ ಶಿರಣಾಂದ್ಗಿ ಎಂಅ ಹೆಸರಿಟ್ರು, ಶಿರಣಾಂದ್ಗಿ ಗ್ರಾಮದಲ್ಲಿ ತನ್ನ ಮಡದಿ ಜೋಗುಬಾಯಿನ್ನ ತಕ್ಕೊಂಡು ಆ ಸ್ಥಾಯಿಕ್ಕ ಉಳದದ್ದರಿಂದ ಆ ಹಳ್ಳದ ದಡದಲ್ಲಿ ಸೋನಾರಿ ಸಿದ್ಧ ಅಂತ ದೊಡ್ಡ ಸ್ಥಾನೈತಿ. ಎಲ್ಲಿ ಶಿರಣಾಂದ್ಗಿಯಲ್ಲಿ. ಅಲ್ಲಿ ಅಶೋಕನ ಬ್ರಾಹ್ಮಿ ಲಿಪಿಯ ಬಂಡೆಗಲ್ಲು ಐತಿ. ಒಂದು ಹಳೆಗನ್ನಡ ಶಾಸನ ಐತಿ. ಆ ಸ್ಥಾನದಲ್ಲಿ ಹಳ್ಳ ಮುಂದ ಹರದು ಬಂದು ಮಾಳಿಂಗರಾಯ ಇದ್ದ ಕಾಲದಲ್ಲಿ ಏಳಂಪುರ ಅಂತ ಕರಿತಾ ಇದ್ರು. ಆಗ ಆನಿ ಒಂಟಿ ಇಂಥಾ ದೊಡ್ಡ ಪ್ರಾಣಿಗಳನ್ನು ಮಾರುವಂತಾ ದೊಡ್ಡ ಪೇಟೆ ಇತ್ತು. ಈಗ ಅದಕ್ಕ ಏಳಗಿ ಅಂತ ಕರಿತಾರ. ಈಗ ಸದ್ಯದಲ್ಲಿ ಅದು ಹಾಳಾಗಿ ಅಲ್ಲಿ ಹತ್ತ ಹದಿನೈದು ಮನಿಗಳಿದ್ದಾವೆ. ಅಲ್ಲಿ ಎಲ್ಲಮ್ಮನ ಸ್ಥಾನ ಐತಿ. ಅಲ್ಲಿಂದ ಹುಲಜಂತಿಯಲ್ಲಿ ಮಾಳೀಂಗರಾಯ ಜೀವಂತ ಸಮಾಧಿ ಆದ್ರು. ಇದರ ಮುಂದ ಸಿರಡೋಣದಲ್ಲಿ ಮಾಳಿಂಗರಾಯರು ಭಕ್ತಿ ಮಾಡಿ ಭಗವಂತನ ಕೈಲಾಸ ಇಳಿಸಿದ ಸ್ಥಾನ ಸೀಗಿಮಠ ಸಿಡಿಯಾಣ. ಸದ್ಯದಲ್ಲಿ ಸಿರಾಡೋಣ ಅಂತ ಕರಿತಾ ಇದ್ದಾರ. ಅದರ ಮುಂದ ರೇವುತಗಾವ ಅಂತ ಐತಿ. ಆದಿ ಕಾಲದಲ್ಲಿ ಅದಕ್ಕ ರಂಬ್ಯರಹಟ್ಟಿ ಅಂತ ಕರೀತಾ ಇದ್ರು. ಅಲ್ಲಿ ಆದಿಕಾಲದ್ದು ಮಾದೇವಂದು ಹೇಮಾಡಪಂತಿ ಅಂತ ಮಂದಿರ ಐತಿ. ಈಗ ಸದ್ಯದಲ್ಲಿ ಶಿವಗೊಡ್ಡ ಮಹಾರಾಜರಂತ ಒಬ್ಬರ್ದು ಸಮಾಧಿ ಐತಿ. ಮುಂದ ನೀವುರಗಿ ಬರ್ತದ. ನೀವುರಂಗಿಯಲ್ಲಿ ಆದಿ ಶಕ್ತಿ ಲಗುಮದೇವಿ ಅಲ್ಲಿ ಒಂದು ದೊಡ್ಡ ಸ್ಥಾನ. ಕುರುಬ ಜನಾಂಗದವರು ನಮ್ಮ ಬೀಗರೆ ಪೂಜಾ ಮಾಡ್ತಾರ. ನೀವುರಗಿ ಗ್ರಾಂಅ ಬಿಟ್ತು ಮುಂದ ತುಕ್ಕಪ್ಪರಾಯಂದು ಮೂರು ಕಣ್ಣೀನಾ ಹುತ್ತಿಗಿ ತೆಲಿ ಕೊಟ್ಟ ಮಲಗಿದ್ದ ಇದು ತುಕ್ಕಪ್ಪರಾಯಂದು ಮೂರು ಕಣ್ಣಿನ ಹುತ್ತಿಗಿ ತೆಲಿ ಕೊಟ್ಟ ಮಲಗಿದ್ದ ಇದು ತುಕ್ಕಪ್ಪರಾಯನ ಕೂನ ತಂದು ಅಲ್ಲಿ ಸಂಗಮನಾಥನ ಮುರಿ ಅಂತಂದು ಮುಂದ ಬೋರಿ ನದಿಗಿ ಈ ಹಳ್ಳ ಕೂಡಿದಾಕರ ಮುಂದ ಅದು ಭೀಮಾ ನದಿಗೆ ಕೂಡಿರ್ತದ ಅಲ್ಲಿ ತುಕ್ಕಪ್ಪರಾಯ ಹುತ್ತಿಗೇನ ತೆಲಿಕೊಟ್ಟ ಮಲಗಿದ್ದಾ ಆ ಮಲಗಿದ್ದ ಹುತ್ತಿಗೆ ಸಂಗಮನಾಥ ದೇವಾಲಯ ಮುಂದ ನಿರ್ಮಾಣ ಆಗೇದ.

ದೈವಜ್ಞ : ಈ ಹಳ್ಳದ ಉಗಮ ಸ್ಥಾನದಿಂದ ನದಿ ಕೂಡುವವರೆಗೆ ಸುಮಾರು ಎಷ್ಟು ಕಿ. ಮೀ. ಉದ್ದವಿದೆ?

ಅಡಿವೆಪ್ಪ : ಈ ಹಾಲಹಳ್ಳ ಸುಮಾರು ಇನ್ನೂರರಿಂದ ಇನ್ನೂರು ಐವತ್ತು ಕಿ. ಮೀ. ಉದ್ದವಿದೆ. ನನಗೆ ಇಲ್ಲಿಯವರೆಗೆ ಅನೇಕ ಮಾಹಿತಿಗಳನ್ನ ಕೊಟ್ಟಿದ್ದೀರಿ ಅದಕ್ಕೆ ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಮತ್ತು ನನ್ನ ಪರವಾಗಿ ನಿಮಗೆ ಧನ್ಯವಾದಗಳು.

* * *