ಗುರು ಶಿಷ್ಯರು ಇಬ್ರು ಜೋಡಣ್ಣಾss
ಅನಾದಿಯಿಂದ ಅವರವರ ಅವತಾರss
ಯಾವುದಿತ್ತು ಕೇಳ್ರಣ್ಣss
ನಿರ್ವಿಕಾರಾಗಿ ಇದ್ದ ಬೀರಣ್ಣs
ಜ್ಞಾನಾಗಿ ಬೆಳದಿದ್ದೋ ಮಾಳಣ್ಣಾs

ಪಂಚತತ್ವ ಪರಿಪೂರ್ಣಾs
ಕೂಡಿದಾಗs
ಬಯಲಿನ ಬಯಲಿದ್ದಾರೇನಾs
ಪರಬ್ರಹ್ಮ ಅನಿಸಿದ ಬೀರಣ್ಣಾs
ಆದಿ ಬಸವಣ್ಣಾಗಿ ಮಾಳಣ್ಣಾs

ನೀರೇ ನಿರಂಕಾರದಲೀ
ನಿಜ ರೂಪ ತೋರಿ ಬಂದ್ರುs
ಅವರೇನಾs

ಎಷ್ಟೋ ಕಾಲ ಕೂಡಿ ಬಂದಾರೇನಾs
ಗುರು ಶಿಷ್ಯರ ಕೇಳರಿ ವರಣಾs
ಎಷ್ಟು ಪರೀಲಿ ಹಾಡಿದರಪ್ಪಾs
ಸದಾ ಶಿವ ಒಬ್ಬ ತಾನs
ಹಾಲಮತಕs
ಮೂಲ ದೇವರೇನಾs

ಪದ್ಮಗೊಂಡಾಗಿ ಬಂದೋs
ಮಾಳಣ್ಣಾs
ಪದುಮಗೊಂಡನ ಗುರುs
ಆದಿನಾಥಾಗಿ ಬಂದಿದ್ದs
ಗುರುವ ಬೀರಣ್ಣಾs

ಶಿವಗೇನೊ ಅನಿಸಿದ ಮಾಳಣ್ಣಾs
ವೀರಭದ್ರಾಗಿ ಇದ್ದೋs
ಬೀರಣ್ಣಾs
ಶಿವಗಣದ ಅಧಿಪತಿ ಆಗಿ
ಇರತಿದ್ರೋs
ಕೈಲಾಸ ಅವರ ಠಿಕಾಣಾs

ದೇವಗೇನೋ ಅನಿಸಿದ ಮಾಳಣ್ಣಾs
ದೇವ ಲೋಕಕೆ ಅವನ ವರನಾs
ವರನ ಕೇಳೀs
ಗುರು ಅಗ್ನಿಸುರನಾದಾs
ಕೇಳರಿ ಗುರು ಬೀರಣ್ಣಾs

ಅವತಾರ ಕಳಿತ ಬಂದಾರೇನಾs
ಜಗ ಉದ್ದಾರ ಕರ್ತ್ರೃ ಅವರೇನಾs
ವೀರಭ್ದ್ರನ ಅವತಾರ ಬಿಟ್ಟು
ಹುಟ್ಟಿ ಬಂದುs
ಅವತರಿಸಿದ ಬೀರಣ್ಣಾs

ಗಿಳಿರಾಮ ಆಗಿದ್ದ ಮಾಳಣ್ಣಾs
ನೋಡಿ ಕೊದಲಿಗಿ ನಂದ್ಯಾನ ವನಾs
ನಂದ್ಯಾನ ವನದಾಗs
ಬೀರಪ್ನ ಸಂಗಡಾss
ಜೋಡಾಗಿ ಇದ್ದೋ ಮಾಳಣ್ಣಾs

ದೇವರ ಗೆಳೆಯs
ಬಪ್ಪಣ್ಣಾ ಮಾಳಣ್ಣಾs
ಶಿವಗೊಂಡಿದ ಗುರು ಬೀರಣ್ಣಾs
ಮುಂಗಿ ಪಟ್ಟಣ ಊರs
ಮೂರೂರ ಸೀಮಿಯಲೀs
ಐಕ್ಯ ಆಗಿದ್ದೊ ಬಪ್ಪಣ್ಣಾs

ಅವತಾರ ಮುಗಸಿದೋ ಬಪ್ಪಣ್ಣಾs
ಮುಂದ ಅನಸಿದ ಸಿದ್ಧ ಮಾಳಣ್ಣಾs
ಆದಿಕಾಲದಿಂದs
ಗುರುವ ಶಿಷ್ಯರುs
ಜೋಡಾಗಿ ಇದ್ರು ಅವರೇನಾs
ಗುರು ಶಿಷ್ಯರ ವರಣಾs

ಕವಿ ಅಡಿವೆಪ್ಪ ಮಾರಾಯ್ರ ಕೂನಾs
ಹುಲಜಂತಿ ಮಠದಲೀs
ಸಾರಿ ಹೇಳ್ತಾರs
ಕೇಳರಿ ಅವರ ಕಥನಾs

* * *

ಹಾಲಮತ
ಹೆಂಗಾಯ್ತು ಹಾಲಮತೋs
ತಿಳಿಕೊಂಡಿದ್ರ ಮಾತಿನ ಮರ್ಮಾs
ತಿಳಿದೀತೋ

ಬಲ್ಲವರೆಲ್ಲ ತಿಳಕೋರೀs
ಇದರ ಮಾತಿನ ಅರ್ಥೋs
ಅರ್ಥ ತಿಳಿಯದೇs
ವ್ಯರ್ಥ ಹಾಡಿದರs
ಗುರುತೆಂಗ ಆಗೋದೋs

ಪ್ರಥಮದಲ್ಲಿ ಸೃಷ್ಟಿ
ನಿರ್ಮಾಣ ಆದೀತೋss
ಎಂಬತ್ನಾಲ್ಕು ಲಕ್ಷ
ಜೀವರಾಶಿ ಹುಟ್ಟೀತೋss
ನಾಲ್ಕು ಕಾಣಿ ತಯಾರಾಗಿ ಬತ್ತೋss
ಅಂಡಜಾ ಪಿಂಡಾಜಾs
ಜಲಜಾ ಉದ್ವಿಜಾs
ಬೆಳಿ ಬಾರಲೇ ಬತ್ತೋss

ಸೋಸಿ ನೋಡಿ
ಜಾತಿ ಮಾಡಿ
ಪರ ಪರತೋss
ಗಂಡಕ ಹೆಣ್ಣ ಒಂದs
ಜೋಡಿ ಆದೀತೋss

ಇಪ್ಪತ್ತೊಂದು ಲಕ್ಷ
ಪಿಂಡಾಂಡ ಪರತೋss
ಪಿಂಡಾಂಡ ಜಾತಿ
ಹಾಲ ಕುಡಿದ ಮುಂದs
ಅನಸಿತೋ ಹಾಲಮತೋss

ಯಾವ್ಯಾವ ಜಾತಿ
ಹೆಂಗ ಆದೀತೋss
ಕುರಬರಗಿ ಯಾಕs
ಹಾಲಮತದವರಂತೋss
ತಿಳಿದಷ್ಟು ಹಿರಿಯರು
ಹೇಳೀದ ಮಾತೋss

ದಂದೆದಿಂದ ಮುಂದss
ಜಾತಿ ಪಂಗಡವಾಯ್ತೋss
ಮಾನವ ಕುಲಕಂತೋss
ಮೂಲ ಬಡ್ಡಿಯಲ್ಲಿs
ಆದ ಹಾಲಮತೋss

ಪಿಂಡಾಂಡ ಜಾತೀs
ಹಾಲುಕುಡದ ಬೆಳೆದಿತೋs
ಮಾನವನಲ್ಲಿ ಭೇದs
ಸುರುವ ನಡದಿತೋss
ನಾ ಶ್ರೇಷ್ಟ ನೀ ಶ್ರೇಷ್ಟ ಅನ್ನುತs
ಜನ ಮುಂದs
ಮತಗಳ ಬೆಳೆಸೀತೋss
ದಂಧೆದಿಂದ ಅವರs
ಜಾತಿನ ಎಬಿಸಿತೋss
ತಮ್ಮ ತಮ್ಮಲ್ಲಿ ತಾವೂs
ವಿಚಾರ ಮಾಡೂತೋss

ಶಿವನ ಧ್ಯಾನಾ ಯಾವತ್ತಿತ್ತೋss
ಮುಕೈಸುರನ ಕುರು
ತಿಳಿದವನೆ ಜಾಣಾs
ಕರದರ ಕುರು ಬಂತೋss

ಭಗವಂತನ ಮ್ಯಾಲ
ಭಕ್ತಿ ಯಾವತ್ತೋss
ನಂಬಿದ ಕುರುಬನs
ನೀತಿ ಸುದ್ದಿತ್ತೋss
ಗುರುವಿನ ಮೇಲೆs
ಹಂಬಲಾ ಬಾಳಿತ್ತೋss

ಹಾಲಿನಂತ ಇವನs
ಅಂತಃಕರಣ ನೋಡಿ
ಅಂದಾರ ಹಾಲಮತೋss

ಇಲ್ಲಿಗಿ ಒಂದ ಸಂಧ ಮುಗದಿತೋss
ಕುರು ತಿಳಿದವನs
ಕತಿ ಮುಂದ ಉಳದಿತೋss

ಅಡಿವೆಪ್ಪ ಮಾರಾಯಾs
ಹೇಳಿದ ಮಾತೋss
ಹಾಲಮತಕ ಮೇಲs
ಗದ್ದಗಿ ಹುಲಜಂತಿs
ಹಿರಿಯರು ಕೊಟ್ಟ ಮಾತೋss

* * *

ದೇವರ ಮಾತೋs
ಆಡ್ವವರs ತಂತೋss
ಶಿವ ಪಾರ್ವತೀs

ಕೂಡ್ಯಾರೋ ಕಾಂತೋss
ಪಾರ್ವತಿ ಶಂಭುಗs
ಹೇಳ್ಯಾಳೋ ಮಾತೋss

ಭೂಮಂಡಲದಾಗ
ಕಾಡ ರುದ್ರ ಭೂಮಿ
ನೋಡಿ ಬರುವುನಂತೋss

ಶಿವ ಪಾರ್ವತಿ
ಜೋಡಿ ಸತಿ ಪತಿ
ಇಳಿದ ಬಂದರೋs
ಸತ್ಯ ಯುಗದ ಮಾತೋss

ಹಕ್ಕಿ ಪಿಕ್ಕಿ
ಸುಳುವ ಇಲ್ಲ ದಂಗಾಯ್ತೋss
ಕೆಟ್ಟ ಕಾಡ ರುದ್ರ ಭೂಮಿ
ನೋಡ್ಯಾಳೊ ದೇವೀs
ಮನಾ ನಿರಾಶವಾಯ್ತೋss

ಅಂತರ ಜ್ಞಾನದಿಂದs
ತಿಳಿಕೊಂಡ ಮಾತೋss
ಮಾಯಾದ ವನಾs
ಒಂದು ಮಾಡಬೇಕಂತೋss
ಆಗಿಂದಾಗ ವನಾ ತೈಯಾರಾಯ್ತೋss

ಮಾಯದ ವನಾ ನೋಡಿs
ಸಂತೋಷ ಪಡದಾಳ ದೇವಿ
ಮನಾ ಹರುಷವಾಯ್ತೋss
ದೇವರ ಮಹಿಮಾs
ಕೇಳುವವರ ತಂತೋss

ಶಿವನ ಚೈತನ್ಯ
ಕುಲಮಿ ಇಂಚ ಹೊಡದಂಗಾಯ್ತೋss
ಪಾರ್ವತಿಗೆ ಮೋಹ ಹೆಚ್ಚವಾಯ್ತೋss
ಮೋಹ ಹೆಚ್ಚಾಗೀs
ಮಲಿಹಾಲ ಸುರಿತಾವೋs
ಇದು ಹೆಂತ ವಿಪರೀತೋss

ದೇವರs ಮಾತೋss
ಕೇಳ್ರಿ ಇವತ್ತೋss
ಪಾರ್ವತಿ ಮನಕ
ಹುಚ್ಚ ಹಿಡಿದೀತೋss
ಭೂದೇವಿ ಕರದ
ಹೇಳ್ಯಾಳೋ ಶಾಂತೋss
ಮೋಹ ಹೆಚ್ಚಾಗಿ
ಮಲಿಹಾಲ ಸುರಿತಾವೋss
ಹೆಂಗ ಮಾಡುನಂತೋss

ಇಬ್ಬರು ಕೂಡಿ ಮಾತಾಡಿಕೋತೋss
ಮಣ್ಣಿನ ಕಾಯಾ
ಮಣ್ಣಿಗಿ ಕೊಡುವುನಂತೋss
ಹುಟ್ಟಿಸಿ ಬಿಡುವುನಂದ
ಮಾತೋss

ಮೂರ ತರದ ಮಣ್ಣ
ತಗೊಂಡ ಜೋಡು ಗೊಂಬಿ
ತಯ್ಯಾರ ಮಾಡ್ಯಾಳ ಸ್ವಂತೋss
ಮಾಯಕ ಮಾದೇವ
ಮೆಚ್ಚಿದ ಮಸ್ತೋss
ಜೀವಕಳೆ ತುಂಬಿಸಿ ಬಿಟ್ಟ
ಆ ಹೊತ್ತೋss

ಹೆಸರ ಇಟ್ಟಾಳ ಹಾಡುತೋss
ಮೋಹ ಹಾಲಿನಲ್ಲಿ
ಹುಟ್ಟಿ ಬಂದೀರಿ ನೀವು
ಮುದಗೊಂಡ ಮುದ್ದವ್ವಂತೋss

ಭಗವಂತನ ಮ್ಯಾಲ
ಭಕ್ತಿ ಯಾವತ್ತೋss
ಸತಿ ಪತಿ ಮಾಡೀs
ಬಿಟ್ಟ ಭಗವಂತೋss

ದೇವರ ಮಹಿಮಾ
ಮಾನವಗ್ಹೆಂಗ ತಿಳದಿತೋss
ಮುದಗೊಂಡ ಮುದ್ದವ್ವ
ಈಶ್ವರನ ಕುರು
ತಿಳಕೊಂಡ್ರೊ ಸ್ವಂತೋss

ಹಾಲಿನಂತ ನನ್ನ
ಅಂತಃ ಕರುಣಿತ್ತೋss
ಹಾಲಿನಲ್ಲಿ ನಿಮ್ಮ
ಜಲ್ಮ ಆಗೈತ್ತೋss
ನಿಮ್ಮ ಹಿಂದೆ
ಬೆಳಿಲೆಪ್ಪ ಹಾಲಮತೋss

ಇಷ್ಟ ಮಾತ್ರ ವರವ ಕೊಟ್ಟು
ಪರಮೇಶೂರ ಹೋಗಿದs
ಭಗವಂತೋss

ಇಲ್ಲಿಗೆ ಒಂದು
ಸಂಧ ಮುಗದಿತೋss
ಮುದ್ದಗೊಂಡನ ಕತಿ
ಮುಂದ ಉಳಿದಿತೋss

ನುಡಗಿ ನುಡಿ
ಪೋಣಿಸಿದಂಗ ಬಂತೋss
ಹಾಲುಮತಕ ಗದ್ದಗೀs
ಹುಲಜಂತಿ ಅಡಿವೆಪ್ಪ
ಹೇಳಿದ ಮಾತೋss

* * *

ಆದಿ ಕಾಲದಲ್ಲಿ
ಮುದ್ದವ್ವ ಮುದಗೊಂಡs
ಪರಮೇಶ್ವರನs
ಮಾನಸ ಪುತ್ರರಾಗಿ
ಬೆಳಿತಾ ಇದ್ದಾಗs
ಆರೇಳ್ನೂರು ವರುಷ
ದಿನಾ ಉಡುಗಿದವು
ಮುದ್ದವ್ಗ ಸಂತಾನಿಲ್ಲದ್ದಕ್ಕಾಗಿ
ಸತತ ಅಕೀ ಮನಾ
ಮರಗತಾ ಇತ್ತು
ಭಗವಂತಾ ಅವರs
ಭಕ್ತೀಗೀ ಪ್ರಸನ್ನ ವಾಗೀs
ಆ ಜಾಗೃತಪುರವೆಂಬ
ಪಟ್ಟಣದಲ್ಲಿ ಬಂದs
ಅವರ ಭಕ್ತಿಗಿ ಒಲಿದುs
ಏಳು ಉತ್ತತ್ತಿ ಹಣ್ಣನ್ನು
ಆ ಮುದ್ದವ್ನ ಉಡಿಯಲ್ಲಿ ನೀಡೀs
ಬಕ್ಷಣ ಮಾಡು ತಾಯಿ
ಅಂತ್ಹೇಳಿ ಅವ ಸ್ವರ್ಗಲೋಕಕ್ಕs
ಹೋಗಿ ಬಿಟ್ಟು
ಆ ಏಳು ಉತ್ತತ್ತಿ ಹಣ್ಣನ್ನs
ಬಕ್ಷಣ ಮಾಡಿದ ಕೂಡ್ಲೇs
ಅವಳ ಉದರದಿಂದs
ಯೋಳು ಮಂದಿs
ಪುತ್ರರು ಹುಟ್ಟಿದ್ರು
ಅವರು ಯಾರು ಅಂದ್ರs
ಆದಿಗೊಂಡ ಅನಾದಿಗೊಂಡ
ಕಾಲಿಲಕ್ಕೊಂಡ ಕೂಡು ಒಕ್ಕಲಿಗ್ಯಾ ಖ್ಯಾಮಗೊಂಡ
ದ್ಯಾಮಗೊಂಡ ನ್ಯಾಮಗೊಂಡ
ಕಡೀ ಹುಟ್ಟ ಕತೃ
ಉಂಡಾಡಿ ಗೌಡ ಪದುಮಗೊಂಡs
ಆ ಉಂಡಾಡಿ ಪದುಮಗೊಂಡ
ಎಂಬುವನೇ ಆ ಮಾಳಿಂಗರಾಯನs
ಮುಂದಿನ ಅವತಾರs
ಆದಿಕಾಲದಲ್ಲಿ ಬಸವಣ್ಣಾs
ಅದಿ ಅವತಾರ ಬಿಟ್ಟು
ಪದುಮಗೊಂಡನs ಅವತಾರ ತೋಟ್ಟಾs

* * *