ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಯಾವುದೇ ಶುಭಕಾರ್ಯ ಜರುಗಲಿ ಅದು ಕುರುಬರಿಂದಲೇ ಮೊದಲು ಬೋಣಿಗಿಯಾಗಬೇಕು. ಈ ಪರಂಪರೆ ಪ್ರಾಚೀನವಾದುದು ಹಾಗೂ ಇಂದಿಗೂ ಜೀವಂತವಾಗಿದೆ. ಮನೆ ಕಟ್ಟಲು ಬುನಾದಿ ಹಾಕಬೇಕಾದರೆ ತೊಲೆ ಹೇರಬೇಕಾದರೆ, ಬಾಗಿಲು ಕೂಡ್ರಿಸಬೇಕಾದರೆ ಕುರುಬರು ಬೇಕು. ಕೃಷಿಗೆ ಸಂಬಂಧಿಸಿದಂತೆ ಬಿತ್ತುವಾಗ ಮೊದಲು ಐದು ಸಾಲುಗಳನ್ನು ಕುರುಬರಿಂದಲೇ ಪ್ರಾರಂಭಿಸುತ್ತಾರೆ. ಇದರಂತೆ ರಾಶಿ ಮಾಡುವಾಗ ಕುರುಬರು ಇರಲೇಬೇಕು. ಹೀಗೆ ಹತ್ತು ಹಲವಾರು ಶುಭ ಕೆಲಸಗಳಿಗೆ ಕುರುಬ ಸಮುದಾಯವನ್ನು ಎಲ್ಲ ಜನಾಂಗದವರು ಬಯಸುವುದು ಸಾಮಾನ್ಯವಾಗಿದೆ. ಪ್ರಾರಂಭಿಸಿದ ಕೆಲಸ ಕುರುಬರಿಂದ ಬೋಣಿಗಿಯಾದರೆ ಹುಲುಸಾಗಿರುತ್ತದೆ. ಎಂಬ ನಂಬಿಕೆ ನಮ್ಮ ಗ್ರಾಮೀಣ ಸಂಸ್ಕೃತಿಯಲ್ಲಿ ಅಚ್ಚಾಗಿ ಉಳಿದಿದೆ. ಹಳ್ಳಿಗಳಲ್ಲಿ ವಾಸಿಸುವ ಈ ಸಮುದಾಯದ ಜನ ಸಾಮಾನ್ಯವಾಗಿ ಮುಗ್ಧರು ಮತ್ತು ಸ್ನೇಹ ಜೀವಿಗಳು. ಇವರು ಚಿಂಚಲಿ ವಾಯವ್ವ, ಬೀರಪ್ಪ, ಮೈಲಾರ, ಸಿದ್ಧೇಶ್ವರ, ಮಾಳಿಂಗರಾಯ ಮುಂತಾದ ದೇವ-ದೇವತೆಗಳನ್ನು ಅನನ್ಯ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷ ನಡೆಯುವ ಜಾತ್ರೆಗಳಿಗೆ ಹೋಗಿ ಶ್ರದ್ಧೆ ಭಕ್ತಿಯಿಂದ ಪೂಜಿಸಿ ಹರಕೆ ಮತ್ತು ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಇಂತಹ ಒಂದು ಜನಾಂಗದಲ್ಲಿ ಜನಿಸಿದವನೆ ಮಾಳಿಂಗರಾಯ. ಇವನಿಗೆ ವೀರ ಮಾಳಪ್ಪ, ಕರಿಹುಲಿ ಮಾಳಪ್ಪ ಎಂದೂ ಕರೆಯುತ್ತಾರೆ.

ಮಾಳಿಂಗರಾಯ ಬೀರಪ್ಪ, ಸಿದ್ಧಪ್ಪನಂತೆ ಪವಾಡ ಪುರುಷನನ್ನಾಗಿ ಚಿತ್ರಿಸಿರುವುದನ್ನು ಹುಲಜಂತಿಯ ಸಮಾಧಿ ಮತ್ತು ಅವನ ಭಕ್ತರ ಸಮೂಹವನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹುಲಿಜಂತಿಯಲ್ಲಿ ಮಾಳಿಂಗರಾಯನ ಸಮಾಧಿ ಇದೆ. ಇಲ್ಲಿ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ಜಾತ್ರೆ ನಡೆಯುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಸುಮಾರು ಐದು ಲಕ್ಷಕ್ಕಿಂತ ಹೆಚ್ಚು ಜನ ಕುರುಬರು ಮತ್ತು ಇತರೆ ಜನಾಂಗದವರು ಸೇರುತ್ತಾರೆ. ಈ ಮಾಳಿಂಗರಾಯನನ್ನು ಕುರಿತು ಜಾತ್ರೆ ಉತ್ಸವ ಮತ್ತು ಇತರೆ ಸಂದರ್ಭಗಳಲ್ಲಿ ಬೆಳ್ಳ ಬೆಳತನಕ ಹಾಡುತ್ತಾರೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಎಂ. ಎಂ. ಕಲಬುರ್ಗಿ ಅವರು ಕುಲಪತಿಗಳಾಗಿ ಬಂದ ಹೊಸತರಲ್ಲಿ ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿ, ವಿಭಾಗವು ಈಗಾಗಲೇ ಪ್ರಕಟಿಸಿರುವ ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪ ಹಾಗೂ ಕುಮಾರರಾಮ ಮತ್ತು ಕೃಷ್ಣಗೊಲ್ಲರ ಕಾವ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ೧೯೯೮-೯೯ನೇ ಸಾಲಿನ ವಿಭಾಗದ ಸಾಂಸ್ಥಿಕ ಯೋಜನೆಯಲ್ಲಿ ಅಳಿದು ಹೋಗುತ್ತಿರುವ ಕಾವ್ಯಗಳನ್ನು ಸಂಗ್ರಹಿಸಿ ಸಂಪಾದಿಸಲು ಸೂಚಿಸಿದರು. ಈ ಯೋಜನೆಯ ಮುಂದುವರಿಕೆಯ ಅವಶ್ಯಕತೆಯನ್ನು ನಮ್ಮ ವಿಭಾಗದ ಮುಖ್ಯಸ್ಥರಾದ  ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಅನೇಕ ಸಂದರ್ಭಗಳಲ್ಲಿ ನಮಗೆಲ್ಲ ಹೇಳುತ್ತಿದ್ದರು. ವಿಭಾಗದ ಮುಖ್ಯಸ್ಥರ ಮತ್ತು ಎಲ್ಲ ಸಹೋದ್ಯೋಗಿಗಳ ಆಕಾಂಕ್ಷೆಯಂತೆ ಬಹುಮುಖ್ಯವಾದ ಈ ಕೆಲಸಕ್ಕೆ ಕುಲಪತಿಗಳು ಒಪ್ಪಿಗೆ ಸೂಚಿಸಿದರು. ನನಗೆ ಮಾಳಿಂಗರಾಯ ಕಾವ್ಯ ಸಂಪಾದಿಸುವ ಜವಾಬ್ದಾರಿಯನ್ನು ಮುಖ್ಯಸ್ಥರು ವಹಿಸಿದರು. ಅಂದಿನಿಂದ ಮಾಳಿಂಗರಾಯನ ಕಾವ್ಯ ಹಾಡುವ ಕಲಾವಿದರನ್ನು ಹುಡುಕುವ ಕಾರ್ಯದಲ್ಲಿ ನಿರತನಾದೆ. ಬೆಳಗಾಂವ, ಬಿಜಾಪುರ, ಗುಲಬರ್ಗಾ ಜಿಲ್ಲೆಯ ಅನೇಕ ಕಲಾವಿದರನ್ನು ಭೆಟ್ಟಿಯಾಗುತ್ತ, ಸಮಗ್ರಕಾವ್ಯ ಹಾಡುವ ಕಲಾವಿದನ ಪತ್ತೆ ಕಾರ್ಯ ಮುಂದುವರಿಸಿದೆ. ಸಾಮಾನ್ಯವಾಗಿ ಹಾಡುಗಾರರೆಲ್ಲ ಹಾಲುಮತ ಪುರಾಣದಲ್ಲಿಯೇ ಮಾಳಿಂಗರಾಯನ ಸಂಧಿ ಹಾಡುತ್ತಿದ್ದರು. ಮಾಳಿಂಗರಾಯನನ್ನೇ ಕುರಿತಾದ ಪ್ರತ್ಯೇಕ ಕಾವ್ಯ ಅದಾಗಿರಲಿಲ್ಲ, ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಸಿದ್ಧಪ್ಪ ಮೇಟಿ, ಸೈದಾಪುರ, ಹನುಮಂತರಾಯ ಸಾಹಿಬಗೊಳ, ಹುಲಕಲ್ಲ ಮುಂತಾದವರನ್ನು ಭೆಟ್ಟಿಯಾಗಿ ಚರ್ಚಿಸಿದೆ. ಹುಲಕಲ್ಲಿನ ಶ್ರೀ ಶಂಕರಗೌಡರು ಮಾಳಿಂಗರಾಯನ ನಾಟಕ ರಚಿಸಿ ಆಟ ಆಡಿಸಿದ್ದು ತಿಳಿಯಿತು. ಅವರು ಸಿಗಲಿಲ್ಲ. ನಾಟಕದ ಪ್ರತಿಯೂ ದೊರೆಯಲಿಲ್ಲ. ನಂತರ ಬಿಜಾಪುರ ಜಿಲ್ಲೆಯ ಕೊಣ್ಣೂರು ಮತ್ತು ಅದರ ಸುತ್ತಮುತ್ತಲಿನ ಊರುಗಳಲ್ಲಿ ಸಂಚರಿಸಿದೆ. ಅಲ್ಲಿಯೂ ಕೂಡ ಮಾಳಿಂಗರಾಯನನ್ನು ಕುರಿತು ಬಿಡಿಬಿಡಿಯಾಗಿ ಹಾಡುವ ಕಲಾವಿದರು ಕಂಡರು. ಕೊನೆಗೆ ಮಾಳಿಂಗರಾಯನ ಸಮಾಧಿ ಇರುವ ಹುಲಜಂತಿ ಅದರ  ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಸುತ್ತಾಡಿದೆ. ಜತ್ತ ತಾಲ್ಲೂಕಿನ ಸೊನ್ಯಾಳ ಗ್ರಾಮದ ಶ್ರೀ ಹನುಮಂತಗೌಡ ಬಿರಾದಾರ ಅವರು ಮಾಳಿಂಗರಾಯನನ್ನು ಕುರಿತು ಹಾಡುತ್ತಾರೆಂಬುದು ತಿಳಿಯಿತು. ಅವರನ್ನು ಭೆಟ್ಟಿಯಾಗಿ ಚರ್ಚಿಸಿದೆ. ಸಹ ಕಲಾವಿದರು ನಮ್ಮ ಧ್ವನಿ ಚೆನ್ನಾಗಿಲ್ಲ ಎಂದು ಮೊದಮೊದಲು ನಿರಾಕರಿಸಿದರು. ನಾನು ಅವರನ್ನು ಬಿಡಲಿಲ್ಲ. ಸೊನ್ಯಾಳದ ಹೈಸ್ಕೂಲ ಹೆಡ್‌ ಮಾಸ್ತರ ಶ್ರೀ ಗಾಣಿಗೇರ ಅವರನ್ನು ಭೆಟ್ಟಿಯಾಗಿ ನನ್ನ ಉದ್ದೇಶ ತಿಳಿಸಿದೆ. ಅವರು ಶ್ರೀ ಹನುಮಂತಗೌಡರ ಜೊತೆ ಚರ್ಚಿಸಿ ಕಾವ್ಯ ಹಾಡಲು ಒಪ್ಪಿಸಿ ತಮ್ಮ ಶಾಲೆಯ ಆವರಣದಲ್ಲಿಯೇ ಹಾಡಲು ಮತ್ತು ಧ್ವನಿಮುದ್ರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟರು.

ಸಣ್ಣ ಪುಟ್ಟ ಸಮಸ್ಯೆಗಳ ಮಧ್ಯದಲ್ಲಿಯೇ ಅಂದು ಧ್ವನಿ ಮುದ್ರಿಸಿಕೊಳ್ಳಲು ತಯಾರಿ ನಡೆಯಿತು. ಹೈಸ್ಕೂಲ ಆವರಣದಲ್ಲಿ ಗುಡಾರ, ಅದರ ಮೇಲೆ ಕಂಬಳಿ ಹಾಸಿ ಡೊಳ್ಳನ್ನಿಟ್ಟು, ಎಲ್ಲರೂ ಕೈಮುಗಿದು ಸೊನ್ಯಾಳದ ಮಿಠ್ಠಲನನ್ನು ಸ್ಮರಿಸಿದರು. ಸಹ ಕಲಾವಿದರು ಡೊಳ್ಳು ನುಡಿಸುವವನನ್ನು ಮಧ್ಯ ಮಾಡಿಕೊಂಡು ಕೈಯಲ್ಲಿ ತಾಳ ಹಿಡಿದು ಕುಳಿತರು. ಮುಖ್ಯ ಕಲಾವಿದ ಡೊಳ್ಳು ನುಡಿಸುವ ಧರೆಪ್ಪ ಬಿರಾದಾರ, ಡಗ್ಗಾ ಬಾರಿಸುವ ಪ್ರಕಾಶ ಕೆಂಗಾರ ಇಬ್ಬರು ಚಿಕ್ಕವರು. ಆದರೆ ವಾದ್ಯ ನುಡಿಸುವಾಗಿನ ಅವರ ಕೈಚಳಕ, ತಾಳಗಳ ಪರಿಜ್ಞಾನ, ಹಾಡಿನ ನಡುನಡುವೆ ಕೇಕೆ ಹಾಕುತ್ತಾ ಹಿಮ್ಮೇಳದಲ್ಲಿ ಅತ್ಯಂತ ಎತ್ತರದ ಧ್ವನಿಯಲ್ಲಿ ಆಲಾಪ ಮಾಡುವ ಅವರನ್ನು ಕಂಡರೆ, ಅವರ ಪಳಗಿದವರೆಂದು ನಿಸ್ಸಂದೇಹವಾಗಿ ಹೇಳಬಹುದು. ಈ ತಂಡದಲ್ಲಿ ಅಕ್ಷರ ಜ್ಞಾನವುಳ್ಳವರು ಕಡಿಮೆ. ಎಲ್ಲರೂ ಕೃಷಿಯನ್ನೇ ಅವಲಂಬಿಸಿದ್ದಾರೆ.

ಸೊನ್ಯಾಳದ ಹೈಸ್ಕೂಲ ಆವರಣದಲ್ಲಿ ಮಾಳಿಂಗರಾಯ ಕಾವ್ಯವನ್ನು ಧ್ವನಿಮುದ್ರಿಸಿ ಕೊಳ್ಳುವ ವಿಚಾರ ಹನುಮಂತಗೌಡರ ಮತ್ತು ಅವರ ಸಂಗಡಿಗರ ಆಲಾಪ, ಡೊಳ್ಳು ತಾಳಗಳ ಶಬ್ದ ಮಲಗಿರುವ ಊರವರನ್ನೆಲ್ಲ ಎಬ್ಬಿಸಿತು. ಜನರು ಶಾಲೆಯ ಆವರಣಕ್ಕೆ ಬರಲಾರಂಭಿಸಿದರು. ಅವರನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟವೇ ಆಯ್ತು. ಜನ ಮಾತನಾಡುತ್ತಿದ್ದರೆ ಅವರ ಧ್ವನಿಯನ್ನು ನನ್ನ ಟೇಪರಿಕಾರ್ಡರ್ ಸೆರೆ ಹಿಡಿಯುತ್ತಿತ್ತು. ಜನರನ್ನು ದೂರದಲ್ಲಿ ಕುಳ್ಳಿರಿಸಿ ಕಾವ್ಯ ಧ್ವನಿಮುದ್ರಿಸಿಕೊಳ್ಳಲು ನಾವು ಪರದಾಡಬೇಕಾಯಿತು. ಒಂದು ಅಂಕ ಮುಗಿದ ತಕ್ಷಣ ಕಲಾವಿದರು ಎಲೆ ಅಡಿಕೆ ತಿನ್ನಲೋ ಅಥವಾ ಬೀಡಿ ಸೇದಲೋ ಏಳುತ್ತಿದ್ದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಕರೆಯದೆ ಬಂದ ಪ್ರೇಕ್ಷಕರು. ಸಂತೋಷದಿಂದ ಹನುಮಂತಗೌಡರಿಗೆ, ಡೊಳ್ಳು ನುಡಿಸುವವನಿಗೆ ಆಯಾರ ಮಾಡುತ್ತಿದ್ದರು ಅಲ್ಲಿಯ ಜನರಿಗೆ ಡೊಳ್ಳಿನ ಹಾಡು ಕೇಳುವುದೆಂದರೆ ಎಲ್ಲಿಲ್ಲದ ಸಂತೋಷ. ಹನುಮಂತಗೌಡರ ಹಾಡಕಿಯ ಪ್ರಭಾವ ಕೇವಲ ಜನರ ಮೇಲೆ ಮಾತ್ರವಲ್ಲ ನನ್ನ ಮೇಲೆ ಆಗಿ, ನಾನು ಗೌಡರ ಲಯದಲ್ಲಿಯೆ ಒಂದೆರಡು ನುಡಿ ಹಾಡಿದೆ. ಆಗ ಹನುಮಂತಗೌಡರು ‘ಪರವಾಗಿಲ್ಲ ನೀವು ಚೆನ್ನಾಗಿನೆ ಹಾಡ್ತೀರಿ ಬಿಡ್ರಿ’ ಎಂದು ಅಂದದ್ದು ಕಾವ್ಯದ ಧ್ವನಿಸುರುಳಿಯನ್ನು ಬರಹಕ್ಕಿಳಿಸುವಾಗ ಪದೇ ಪದೇ ಕೇಳಿ ನಾನು ಸಂತೋಷ ಪಟ್ಟದ್ದು ಅಷ್ಟಿಷ್ಟಲ್ಲ. ಮಾಳಿಂಗರಾಯನ ಕಾವ್ಯವನ್ನು ಓದುವುದಕ್ಕಿಂತ ಹಾಡಿನ ರೂಪದಲ್ಲಿ ಕೇಳುವುದು ಹೆಚ್ಚು ಸೂಕ್ತ.

ಡೊಳ್ಳಿನ ಮೇಲೆ ಕೈಪೆಟ್ಟು ಹಾಕುತ್ತಾ ಅದನ್ನೆ ತಾಳವಾಗಿ ಪರಿವರ್ತಿಸಿಕೊಂಡು ಮುಮ್ಮೇಳದ ಕಲಾವಿದರಾದ ಹನುಮಂತಗೌಡರು

ಶಿವನೇ ನಮ್ಮಯ ದೇವರು ಬಂದಾನ ಬನ್ನಿರೇss
            ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇss. . . .

ಎಂದು ರಾಗಬದ್ದವಾಗಿ ಹಾಡುತ್ತಾ ಕಥೆ ಪ್ರಾರಂಭಿಸಿದರು. ಹಿಮ್ಮೇಳದಲ್ಲಿದ್ದ ಆರೇಳು ಜನ ಸಹ ಕಲಾವಿದರು ಮುಮ್ಮೇಳದವ ಹಾಡಿರುವುದನ್ನೇ ರಾಗಬದ್ಧವಾಗಿ ಹಾಡುತ್ತಿದ್ದರು. ರಾತ್ರಿ ಒಂಬತ್ತು ಗಂಟೆಗೆ ಪ್ರಾರಂಭವಾದ ಮಾಳಿಂಗರಾಯನ ಕಾವ್ಯ ಬೆಳ್ಳ ಬೆಳತನಕ ಸಾಗಿತು. ಹಿಮ್ಮೇಳದವರ ಕೈಯಲ್ಲಿದ್ದ ತಾಳಗಳ ಶಬ್ಧ, ಡೊಳ್ಳಿನ ಕೈಪೆಟ್ಟು, ರಾಗಬದ್ಧವಾಗಿ ಹಾಡುವ ಅವರ ಹಾಡುಗಾರಿಕೆ ನಡು ನಡುವೆ ವ್ಯಕ್ತವಾಗುವ ಹಾವ-ಭಾವಗಳು ಕೇಳಲು ನೋಡಲು ಸೊಗಸಾಗಿತ್ತು. ನಡು ನಡುವೆ ಏಯ್‌! ಎಂದು ರಾಗಬದ್ಧವಾಗಿ ಕೂಗುವ ಸಹಕಲಾವಿದರ ಶಬ್ಧವಂತು ಕೇಳುಗರನ್ನು ಎಚ್ಚರಿಸುತ್ತಿತ್ತು. ಪ್ರತಿಯೊಂದು ಅಂಕವನ್ನು ಭಿನ್ನ ಭಿನ್ನ ರಾಗ ತಾಳಗಳಿಂದ ಹಾಡುವುದರಿಂದ ಕಾವ್ಯ ಕೇಳುಗರಿಗೆ ಮುದ ನೀಡುತ್ತಿತ್ತು. ಕೆಲ ಸಂದರ್ಭಗಳಲ್ಲಿ ಕೇಳುಗರೂ ಹಾಡಿನ ತಾಳ ಲಯಕ್ಕೆ ಮಾರು ಹೋಗಿ ತಲೆಯಾಡಿಸುತ್ತಾ ತಾವೇ ಗುನು ಗುನು ಗುಟ್ಟುತ್ತಿದ್ದರು. ಕಾವ್ಯ ಕೇಳಿದ ನಂತರ ನಾಲ್ಕೈದು ದಿನಗಳವರೆಗೆ ಆ ಡೊಳ್ಳಿನ ಪೆಟ್ಟು, ತಾಳಗಳ ಕಿರುಚಾಟ ಒಂದೇ ಸಮನೆ ಕಿವಿಯಲ್ಲಿ ಗುಂಯ್‌ ಗುಡುತ್ತಿರುತ್ತದೆ.

ಹಾಲುಮತ ಪುರಾಣ ಮತ್ತು ಮಾಳಿಂಗರಾಯನ ಕಾವ್ಯ ಹಾಡುವಾಗ ಸ್ಪರ್ದೆಗಳೂ ಏರ್ಪಡುತ್ತವೆ. ಎರಡು ತಂಡಗಳಿಗೆ ಪೈಪೋಟಿ ಬಿದ್ದಾಗ, ಎರಡೂ ತಂಡದ ಕಲಾವಿದರು ಒಬ್ಬರಿಗಿಂತ ಒಬ್ರು ಅತ್ಯಂತ ಸುಂದರವಾಗಿ ಹಾವ-ಭಾವ ಮಾಡುತ್ತಾ ಜನರನ್ನು ಆಕರ್ಷಿಸುತ್ತಾರೆ. ಸ್ಪರ್ಧಾತ್ಮಕವಾಗಿ ಹಾಡುವಾಗ ಪ್ರೇಕ್ಷಕರಿಗೆ ಎದ್ದು ಹೋಗಬೇಕೆನ್ನುವ ಮನಸ್ಸು ಎಂದಿಗೂ ಬರುವುದಿಲ್ಲ. ಹಾಡಿನ ಮಧ್ಯ ಗದ್ಯವೂ ಇರುತ್ತದೆ. ಮೌಖಿಕ ಪರಂಪರೆಯಲ್ಲಿಯೇ ಸಾಗಿ ಬಂದ ಈ ಕಾವ್ಯವನ್ನು ಹನುಮಂತಗೌಡರು ಅನೇಕರಿಗೆ ಕಲಿಸುತ್ತಿದ್ದಾರೆ. ಮೂಲ ಧಾಟಿಗಳನ್ನು ಬಿಟ್ಟು ಜನಪ್ರಿಯ ಹಾಡುಗಳ, ಹಿಂದಿ ಚಲನ ಚಿತ್ರ ಗೀತೆಗಳ ಲಯ-ರಾಗಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಪ್ರೇಕ್ಷಕರು ಬಯಸಿದಂತೆ ಹಾಡುತ್ತೇವೆಂದು ಹನುಮಂತಗೌಡರು ಹೇಳುತ್ತಾರೆ.

ಹನುಮಂತಗೌಡರು ಹಾಡುವ ಕಾವ್ಯದಲ್ಲಿ ಕೊರತೆ ಇದೆ ಎಂದು ಕೆಲ ಹಿರಿಯರು ಅಭಿಪ್ರಾಯ ಪಟ್ಟರು. ಹುಲಜಂತಿ ಅಡಿವೆಪ್ಪನವರು ಈ ಕಾವ್ಯವನ್ನು ಇನ್ನೂ ಸುಧೀರ್ಘವಾಗಿ ಹಾಡಬಲ್ಲರು ಎಂಬ ಮಾತುಗಳು ಕೇಳಿಬಂದವು. ಅಡಿವೆಪ್ಪನವರು ಅನೇಕರಿಗೆ ಹಾಡಲು ಕಲಿಸಿದ್ದಾರೆಂಬುದೂ ತಿಳಿಯಿತು. ನಾನು ಹುಲಜಂತಿಗೆ ಹೋದೆ. ಅಡಿವೆಪ್ಪನವರು ಇರಲಿಲ್ಲ. ಅಡಿವೆಪ್ಪನವರು ಊರಲ್ಲಿರುವುದು ಅಪರೂಪ. ಹುಲಜಂತಿಯಲ್ಲಿ ಇರುವ ಕುರುಬರಲ್ಲಿ ಶೇಕಡಾ ಐವತ್ತರಷ್ಟು ಜನ ಮಾಳಿಂಗರಾಯನ ವಂಶಸ್ಥರು ಎಂಬುದು ತಿಳಿಯಿತು. ಇವರು ಕುರುಬರ ಜನಾಂಗಕ್ಕೆ ಗುರುಗಳು. ಈ ಮಾಳಿಂಗರಾಯನ ವಂಶಸ್ಥರನ್ನು ‘ಮಹಾರಾಯರು ಮತ್ತು ಒಡೆಯರು’ ಎಂದು ಗುರುತಿಸಿದ್ದಾರೆ. ಕುರುಬ ಸಮಾಜ ಇವರನ್ನು ಭಕ್ತಿಯಿಂದ ಕಾಣುತ್ತದೆ. ದಾರಿಯಲ್ಲಿ ಈ ಮಹಾರಾಯರು ಕಂಡರೆ ಅವರ ಕಾಲಿಗೆ ನಮಸ್ಕರಿಸಿ ಭಂಡಾರ ಹಚ್ಚಿಕೊಂಡು ಮುಂದೆ ಸಾಗುತ್ತಾರೆ. ಈ ಒಡೆಯರು ಸದಾ ಭಕ್ತರ ಊರುಗಳನ್ನು ಸುತ್ತುತ್ತಿರುತ್ತಾರೆ. ಕುರುಬರಲ್ಲಿ ನಡೆಯುವ ಪ್ರತಿಯೊಂದು ಮಂಗಲಕಾರ್ಯಕ್ಕೆ ಒಡೆಯರು ಬೇಕೇ ಬೇಕು. ಒಡೆಯರು ಸಿಗದಿದ್ದರೆ ಮಾತ್ರ ಲಿಂಗಾಯತ ಗುರುಗಳನ್ನು ಕರೆಯುತ್ತಾರೆ. ಒಡೆಯರ ಜೀವನ ಕುರುಬರ ಸಮಾಜವನ್ನೇ ಅವಲಂಬಿಸಿದೆ. ಪ್ರತಿ ವರ್ಷ ಇವರು ಊರೂರು ಅಲೆದಾಡಿ ಕುರುಬರಿಂದ ಹಣ, ಕುರಿಗಳನ್ನು ಪಡೆಯುತ್ತಾರೆ. ಇವರಲ್ಲಿ ಕೆಲವರಿಗೆ ಜಮೀನು ಇದೆ.

ಮಾಳಿಂಗರಾಯನ ಬಗೆಗೆ ಹೆಚ್ಚು ತಿಳಿದುಕೊಂಡು ಕಥೆ ಮತ್ತು ಹಾಡು ಹೇಳುವವರಲ್ಲಿ ಅಡಿವೆಪ್ಪನವರು ಪ್ರಮುಖರು. ಅಂದು ಸಾಯಂಕಾಲ ನನಗೆ ಅಡಿವೆಪ್ಪನವರ ಭೆಟ್ಟಿಯಾಯ್ತು. ಅವರ ಆರೋಗ್ಯ ಸರಿ ಇರಲಿಲ್ಲ. ಅವರಿಗೆ ಮೇಳದಲ್ಲಿ ಹಾಡುವಷ್ಟು ಶಕ್ತಿ ಇರಲಿಲ್ಲ. ನಾನು ನನ್ನ ಉದ್ದೇಶವನ್ನೆಲ್ಲ ಅವರ ಮುಂದೆ ಹೇಳಿದೆ. ಆಗ ಅಡಿವೆಪ್ಪನವರು ನಾನು ಕಾವ್ಯವನ್ನು ವಾದ್ಯಗಳಿಲ್ಲದೆ ಬೇಕಾದರೆ ಹಾಡುಬಲ್ಲೆ ಎಂದಾಗ ನಾನು ಒಪ್ಪಿಕೊಂಡೆ. ರಾತ್ರಿ ಅಡಿವೆಪ್ಪನವರು ತಮ್ಮ ಸೋದರ ಸಂಬಂಧಿ ದೇವಪ್ಪನನ್ನು ಕರೆಸಿ ಕಾವ್ಯ ಹಾಡತೊಡಗಿದರು. ಹನುಮಂತಗೌಡರ ಕಥೆ ಮತ್ತು ಕಾವ್ಯಕ್ಕಿಂತ ಅಡಿವೆಪ್ಪನವರ ಕಾವ್ಯ ಸುಧೀರ್ಘವಾಗಿತ್ತು. ಅಡಿವೆಪ್ಪನವರು ಕಾವ್ಯದ ಮಧ್ಯೆ ಅನೇಕ ವಿಷಯಗಳನ್ನು ನನ್ನ ಗಮನಕ್ಕೆ ತಂದರು. ಅವುಗಳನ್ನೆಲ್ಲ ಪ್ರವೇಶಿಕೆಯಲ್ಲಿ ವ್ಯಕ್ತಪಡಿಸಿದ್ದೇನೆ. ಅಡಿವೆಪ್ಪನವರ ಕಾವ್ಯ ಹೆಚ್ಚು ಸುದೀರ್ಘವಾದದ್ದರಿಂದ ಅದನ್ನೆ ಬರೆಹರೂಪಕ್ಕೆ ತಂದಿದ್ದೇನೆ.

ಹುಲಜಂತಿ ಗ್ರಾಮಕ್ಕೆ ಮೊದಲು ‘ಜಾಗ್ರತಪುರ’ ಎಂದು ಹೆಸರಿತ್ತು. ಒಂದು ಸಲ ಶಿವ-ಪಾರ್ವತಿಯ ಜೊತೆ ನಂದಿ ಬರುತ್ತಾನೆ. ಶಿವ-ಪಾರ್ವತಿಯರ ನಂತರ ಅಲ್ಲಿ ಆದಿ ನಾರಾಯಣ ಬಂದು ವಾಸಿಸುತ್ತಾನೆ. ಆಗ ‘ಜತ್ತಿ ನಾರಾಯಣಪುರ’ ಎಂದು ಕರೆಯುತ್ತಿದ್ದರು ಎಂದು ಹೇಳುತ್ತಾರೆ. ಹುಲಜಂತಿಯಲ್ಲಿ ನಾರಾಯಣನ ದೇವಸ್ಥಾನದ ಸ್ಥಳವಿದೆ. ದೇವಸ್ಥಾನ ಬಿದ್ದು ಹೋಗಿದೆ. ಇದೇ ಸ್ಥಳದಲ್ಲಿ ಮಾಳಿಂಗರಾಯ ಹುಲಿಹಾಲ ತಂದು ಗಿಣ್ಣ ಮಾಡಿ ಬೀರಪ್ಪನಿಗೆ ಊಟಕ್ಕೆ ಹಾಕುತ್ತಾನೆ. ಮಾಳಪ್ಪ ಎರಡು ಹುಲಿ ಮರಿಗಳನ್ನು ಸಾಕಿರುತ್ತಾನೆ. ಒಂದು ಸಲ ಊರವರೆಲ್ಲ ಸೇರಿ ಶ್ರೀಮನ್ನಾರಾಯಣ ಮತ್ತು ಇತರ ದೇವ-ದೇವತೆಗಳ ಹುಟ್ಟಿದ ಹಬ್ಬವನ್ನು ಆಚರಿಸುತ್ತಿರುತ್ತಾರೆ. ಆಗ ಮಾಳಪ್ಪ ತಾನು ಸಾಕಿದ ಹುಲಿ ಮರಿಗಳ ಹುಟ್ಟು ಹಬ್ಬವನ್ನು ಮಾಡುತ್ತಾನೆ. ಹುಲಿಗಳ ಜಯಂತಿಯನ್ನು ಮಾಡಿದ್ದಕ್ಕಾಗಿ ಈ ಊರಿಗೆ ‘ಹುಲಿಜಂತಿ’ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವನ್ನು ಈ ಊರ ಜನರು ಹೇಳುತಾರೆ.

ಹುಲಜಂತಿ ಊರಿನಿಂದ ಸುಮಾರು ಒಂದು ಕಿಲೋಮೀಟರ ದೂರದಲ್ಲಿ ಮಾಳಿಂಗರಾಯನ ಸಮಾಧಿ ಇದೆ. ಈ ಸ್ಥಳವನ್ನು ‘ಬೊಬ್ಬಲಿವನ’ ಎಂದು ಕರೆಯುತ್ತಾರೆ. ಸಮಾಧಿ ಪೂರ್ವ ದಿಕ್ಕಿನಲ್ಲಿದೆ. ಸಮಾಧಿ ಅಕ್ಕ-ಪಕ್ಕ ಸುಮಾರು ಇನ್ನೂರಕ್ಕೂ ಹೆಚ್ಚು ಸಮಾಧಿಗಳಿವೆ. ಪಂಢರಪುರದ ವಿಠ್ಠಲ ಮಾಳಿಂಗರಾಯನ ಭೇಟಿಗೆ ಬಂದಿದ್ದನಂತೆ. ಅದರ ಕುರುಹಾಗಿ ವಿಠ್ಠಲನ ಚಿಕ್ಕ ದೇವಸ್ಥಾನವಿದೆ. ಮಾಳಿಂಗರಾಯನ ಸಮಾಧಿ ಸುತ್ತಲೂ ಇರುವ ಸಮಾಧಿಗಳೆಲ್ಲ ನಮ್ಮ ಪೂರ್ವಜರ ಮತ್ತು ವಂಶಸ್ಥರವೇ ಇವೆ ಎಂದು ಅಡಿವೆಪ್ಪನವರು ಹೇಳುತ್ತಾರೆ. ಮಾಳಿಂಗರಾಯ ಮೊದಲು ಬಸವಣ್ಣನ ಅವತಾರ ತಾಳಿದ್ದನೆಂದು ಹೇಳುತ್ತಾರೆ. ಅದರ ಕುರುಹಾಗಿರುವ ನಂದಿಮೂರ್ತಿ ಇರುವ ಪೀಠ ತೋರಿಸುತ್ತಾರೆ. ಬೊಬ್ಬಲಿ ವನದಲ್ಲಿ ಮಾಳಿಂಗರಾಯ ಸದಾ ಕುಳಿತಿರುತ್ತಿದ್ದ ಸ್ಥಳವನ್ನು ‘ಮಾಲಕಂಬ’ ಎಂದು ಕರೆಯುತ್ತಾರೆ. ಸಿಡಿಯಾಣ ಸಿದ್ಧ, ರೋಗಿ ಜಟ್ಟಿಂಗರಾಯ, ಬೀರಪ್ಪನ ತಂದೆ ಬರಮಲಿಂಗ, ಮಾಳಿಂಗರಾಯನ ಮೊಮ್ಮಗ ಕರಿಜಕ್ಕಪ್ಪ, ಕರಿಜಕ್ಕಪ್ಪನ ಮಗ ಮಾಳಮುತ್ಯಾ, ಮಾಳಿಂಗರಾಯನ ಮಕ್ಕಳಾದ ರೆಬ್ಬರಾಯ, ಬೀರಮುತ್ಯಾ, ಕಣ್‌ಮುತ್ಯಾ, ಸ್ವಾಮರಾಯ, ಮಾಳಿಂಗರಾಯನ ಎರಡನೆಯ ಹೆಂಡತಿ ಈರವ್ವ ಶರಣಿ ಮುಂತಾದವರ ಸಮಾಧಿಗಳು ಎಂದು ತೋರಿಸುತ್ತಾರೆ. ಮಾಳಿಂಗರಾಯನ ಸಮಾಧಿಯ ಹಿಂದೆ ಒಂದು ಹೋಮದ ಕಟ್ಟೆ ಇದೆ. ಅದರ ಪಕ್ಕಕ್ಕೆ ಒಂದು ಮರವಿದೆ. ಅದಕ್ಕೆ ‘ಭಂಡಾರದ ಮರ’ ಎಂದು ಕರೆಯುತ್ತಾರೆ. ಮರದಲ್ಲಿ ಸದಾಕಾಲ ಚಿಕ್ಕ ಚಿಕ್ಕ ಹಳದಿ ಬಣ್ಣದ ಹೂಗಳು ಕಾಣುತ್ತವೆ. ಹೂವುಗಳೆಲ್ಲ ನೆಲದ ಮೇಲೆ ಬಿದ್ದಾಗ ಭಂಡಾರ ಚೆಲ್ಲಿದಂತೆ ಕಾಣುತ್ತದೆ. ಆ ಮರವನ್ನು ಮಾಳಿಂಗರಾಯ ನೆಟ್ಟಿದ್ದನೆಂದು ಹೇಳುತ್ತಾರೆ. ಹುಲಜಂತಿಯಲ್ಲಿ ಮಾಳಿಂಗರಾಯನ ವಂಶಸ್ಥರೆನ್ನಿಸಿ ಕೊಳ್ಳುವವರು ತೀರಿಕೊಂಡರೆ ಅವರನ್ನು ಬೊಬ್ಬಲಿವನದಲ್ಲಿ ಹೂಳುತ್ತಾರೆ. ಹುಲಜಂತಿಯಲ್ಲಿ ಮಾಳಿಂಗರಾಯನ ಎರಡು ದೇವಸ್ಥಾನಗಳಿವೆ. ಊರ ಹೊರಗೆ ಇರುವುದು ಮೂಲ ಸಮಾಧಿ. ಇಲ್ಲಿಯೇ ಜಾತ್ರೆ ನಡೆಯುತ್ತದೆ. ಊರಲ್ಲಿ ಒಂದು ಗದ್ದಿಗೆ ಇದೆ. ಇಲ್ಲಿ ಮಾಳಿಂಗರಾಯನ ಪಲ್ಲಕ್ಕಿಯನ್ನಿಟ್ಟಿರುತ್ತಾರೆ. ಭಕ್ತರು ಪ್ರತಿದಿನ ಎರಡೂ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುತ್ತಾರೆ.

ಹುಲಜಂತಿ ಊರ ಸುತ್ತ ಕೋಟೆ ಇದೆ. ಊರು ಪ್ರವೇಶಿಸಲು ಎರಡು ಕೋಟೆ ಬಾಗಿಲುಗಳಿವೆ. ಕೋಟೆ ಬಾಗಿಲುಗಳಿಗೆ ‘ಹುಲಿ ಮುಖದಗಸಿ ಬಾಗಿಲು’ ಎಂದು ಕರೆಯುತ್ತಾರೆ. ಎರಡೂ ಕೋಟೆ ಬಾಗಿಲ ತೋಳಗಳಲ್ಲಿ ಹುಲಿಯ ಚಿತ್ರಗಳಿವೆ. ಕೋಟೆಗೆ ಅಂಟಿಕೊಂಡು ಒಂದು ದೊಡ್ಡ ಹಳ್ಳವಿದೆ. ಹಳ್ಳದಲ್ಲಿ ಸದಾ ನೀರು ಹರಿಯುತ್ತಿರುತ್ತದೆ. ಊರ ಒಳಗಿನಿಂದ ಮೂಲ ಸಮಾಧಿಗೆ ಹೋಗಲು ಹಳ್ಳವನ್ನು ದಾಟಬೇಕಾಗುತ್ತದೆ. ಈ ಹಳ್ಳಕ್ಕೆ ‘ಹಾಲಹಳ್ಳ, ಮಾಳಿಂಗರಾಯನ ಹಳ್ಳ, ತೀರ್ಥನದಿ’ ಎಂದು ಕರೆಯುತ್ತಾರೆ. ಹಳ್ಳದ ಉಗಮ ಸ್ಥಾನದಿಂದ ಭೀಮಾನದಿ ಕೂಡವ ಸ್ಥಳದ ಅಕ್ಕಪಕ್ಕದ ದಡಗಳಲ್ಲಿ ಹಾಲಮತ ಜನಾಂಗದವರೇ ಹೆಚ್ಚಾಗಿ ವಾಸಿಸುತ್ತಾರೆ. ಈ ಕಾರಣಕ್ಕಾಗಿ ಹಾಲುಮತದವರ ಹಳ್ಳ ಎಂದು ಕರೆದಿಬಹುದು. ಸದಾ ಹರಿಯುವ ಈ ಹಳ್ಳ ಅದರ ಪ್ರದೇಶ ಪಶುಪಾಲನೆಗೆ ಯೋಗ್ಯ ಸ್ಥಳವಾಗಿದೆ. ಪಶುಪಾಲನೆ ನಂಬಿ ಬದುಕುತ್ತಿರುವ ಈ ಕುರಬ ಜನಾಂಗದವರಿಗೆ ಈ ಪ್ರದೇಶ ಅತ್ಯಂತ ಉಪಯುಕ್ತವಾಗಿದೆ. ಹೀಗಾಗಿ ಹಳ್ಳದ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವುದನ್ನು ಕಾಣುತ್ತೇವೆ. ಹಳ್ಳದುದ್ದಕ್ಕೂ ಅನೇಕ ದೇವಸ್ಥಾನಗಳಿವೆ. ಈ ಹಳ್ಳ ‘ಜತ್ತ’ ಪ್ರದೇಶದಲ್ಲಿ ಹುಟ್ಟಿದೆ. ಅಲ್ಲಿ ಎಲ್ಲಮ್ಮನ ದೇವಸ್ಥಾನವಿದೆ. ಹುನ್ನೂರಿನಲ್ಲಿ ಬೀರಲಿಂಗೇಶ್ವರನ ದೇವಸ್ಥಾನ ಹಳ್ಳದ ದಡದಲ್ಲಿದೆ. ಈ ಹಳ್ಳದ ದಂಡೆಯ ಮೇಲೆ ಶರಣಾಂದ್ಗಿ ಎಂಬ ಊರಿದೆ. ಅಲ್ಲಿ ಮಾಳಿಂಗರಾಯನ ಗುರು ಏಳ್ತಲಿ ಸೋನಾರ ಸಿದ್ಧರ ಮಠವಿದೆ. ಸಿಡಿಯಾಣದಲ್ಲಿ ಬೀರಪ್ಪ ಮತ್ತು ಶೀಲವಂತಿ ದೇವಸ್ಥಾನವಿದೆ. ರೇವುತಗಾಂವದಲ್ಲಿ (ಕಾವ್ಯದಲ್ಲಿ ರಂಬ್ಯಾರಹಟ್ಟಿ) ಮಹಾದೇವರ ಹೇಮಾಡಪಂತಿ ಎಂಬ ಗುಡಿ ಇದೆ. ಹಳ್ಳದ ದಂಡೆಯಲ್ಲಿ ನೀವುರಗಿ ಎಂಬ ಊರಿದೆ. ಅಲ್ಲಿ ಆದಿಶಕ್ತಿ ಲಗುಮಾದೇವಿ ದೇವಸ್ಥಾನವಿದೆ. ಈ ಹಳ್ಳ ಬೋರಿನದಿಗೆ ಕೂಡುವಲ್ಲಿ (ತುಕ್ಕಪ್ಪರಾಯ ಮೂರು ಹುತ್ತಿಗೆ ತಲೆ ಕೊಟ್ಟು ಮಲಗಿದ ಸ್ಥಾನ) ಸಂಗಮನಾಥನ ದೇವಸ್ಥಾನವಿದೆ. ಈ ಹಾಲಹಳ್ಳ ಸುಮಾರು ಎರಡು ನೂರರಿಂದ ಎರಡನೂರಾ ಐವತ್ತು ಕಿ. ಮೀ. ಉದ್ದವಿದೆ. ಮಾಳಿಂಗರಾಯ ಈ ಹಳ್ಳದ ದಡದಲ್ಲಿಯೇ ಕುರಿಗಳನ್ನು ಕಾಯುತ್ತ ವಾಸಿಸುತ್ತಿದ್ದ ಎಂಬುದು ಕಾವ್ಯದ ಮೂಲಕ ತಿಳಿಯುತ್ತದೆ.

* * *

ಮಾಳಿಂಗರಾಯನ ಜಾತ್ರೆ : ಕುರುಬರ ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿಕ ಉತ್ಸವಗಳಲ್ಲಿ ಮಾಳಿಂಗರಾಯನ ಜಾತ್ರೆಯೂ ಅತ್ಯಂತ ದೊಡ್ಡದು. ಮಾಳಿಂಗರಾಯನ ಜಾತ್ರೆಯ ಮರು ದಿನ ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಸಿದ್ಧೇಶ್ವರನ ಜಾತ್ರೆ ನಡೆಯುತ್ತದೆ. ಹುಲಜಂತಿ ಉತ್ಸವ ಮುಗಿದ ತಕ್ಷಣ ಕುರುಬ ಜನಾಂಗದವರೆಲ್ಲ ಕೊಣ್ಣೂರಿಗೆ ತಪ್ಪದೆ ಹೋಗುತ್ತಾರೆ.

ಮಾಳಿಂಗರಾಯನ ಪಲ್ಲಕ್ಕಿ ಸೀಗಿ ಹುಣ್ಣಿಮೆಯಾದ ಏಳು ದಿನಕ್ಕೆ ಮೊದಲಿಗೆ ತನ್ನ ಗುರು ಬೀರೇಶ್ವರವನ್ನು ಭೆಟ್ಟಿಯಾಗಲು ಹೊರಡುತ್ತದೆ. ಗುರು ಬೀರೇಶ್ವರನ ಸಮಾಧಿ ರಾಯಹುನ್ನೂರಿನ ಗೌರಿ ಮಠದಲ್ಲಿದೆ. ಹುಲಜಂತಿ ಊರಿನ ಮಧ್ಯದಲ್ಲಿರುವ ‘ಮಾಳಿಂಗರಾಯನ ಪಲ್ಲಕ್ಕಿ ಮನೆ’ ಯಿಂದ ಪಲ್ಲಕ್ಕಿ ಹೊರತಂದು, ಪಲ್ಲಕ್ಕಿಯನ್ನು ಶೃಂಗರಿಸಿ ಅದಕ್ಕೆ ಕೆಂಪು ಬಟ್ಟೆಯ ಹೊದಿಕೆ ಹಾಕುತ್ತಾರೆ. ಪಲ್ಲಕ್ಕಿಯಲ್ಲಿ ಮಾಳಿಂಗರಾಯನ ಉತ್ಸವ ಮೂರ್ತಿಯನ್ನಿಡುತ್ತಾರೆ. ಪೂಜಾರಿ ಪೂಜೆಮಾಡಿ ಹಣ್ಣು ಏರಿಸಿ ಕಾಯಿ ಒಡೆಯುತ್ತಾನೆ. ನಿಗದಿಪಡಿಸಿದ ಎತ್ತಿನ ಮೇಲೆ ನಗಾರಿ ಹೇರುತ್ತಾರೆ. ಎತ್ತಿನ ಮೇಲೆ ಒಬ್ಬನನ್ನು ಕುಳ್ಳಿರಿಸುತ್ತಾರೆ. ಅವನು ನಗಾರಿ ಬಾರಿಸುತ್ತಾ ಮುಂದೆ ಸಾಗುತ್ತಾನೆ. ಅವನ ಹಿಂದಿನಿಂದ ಪಲ್ಲಕ್ಕಿ ಜೊತೆಗೆ ಐವತ್ತರಿಂದ ಅರವತ್ತು ಜನರು ಮತ್ತು ಮಹಾರಾಯರು ಹೋಗುತ್ತಾರೆ.

ಹುಲಜಂತಿಯಿಂದ ಹೊರಟ ಮಾಳಿಂಗರಾಯನ ಪಲ್ಲಕ್ಕಿ ನಾಲ್ಕು ಕಿ. ಮೀ ದೂರದಲ್ಲಿರುವ ‘ಬುಹ್ಯಾರ’ ದ ಪವುಟ ಹನುಮಂತ ದೇವರ ಗುಡಿಗೆ ಹೋಗುತ್ತದೆ. ಅಲ್ಲಿ ಪಲ್ಲಕ್ಕಿ ಐದು ಸುತ್ತು ಪ್ರದಕ್ಷಣೆ ಹಾಕುತ್ತದೆ. ಬುಹ್ಯಾರದ ಜನ ಪಲ್ಲಕ್ಕಿಗೆ ಬಾನ ಮತ್ತು ಶಾವಿಗೆ ನೈವೇದ್ಯ ಮಾಡುತ್ತಾರೆ. ಎಲ್ಲರೂ ಪ್ರಸಾದ ಸ್ವೀಕರಿಸುತ್ತಾರೆ. ಅಲ್ಲಿಂದ ನಗಾರಿ ಬಾರಿಸುತ್ತ ಪಲ್ಲಕ್ಕಿಯನ್ನು ಹೊತ್ತು ಮುಂದೆ ಸಾಗಿಸುತ್ತಾರೆ. ಬಾಗಾಡೆ ಮಹಾರಾಜನ ಮಠಕ್ಕೆ ಹೋಗಿ ಮಾಳಿಂಗರಾಯನ ಪಲ್ಲಕ್ಕಿ ಕುಳಿತುಕೊಳ್ಳುತ್ತದೆ. ಮಠದಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಬುಹ್ಯಾರದಿಂದ ಐದು ಕಿ.ಮೀ ದೂರದಲ್ಲಿರುವ ‘ಗುಂಡಿ ಗಿಡಕ್ಕೆ’ ಪಲ್ಲಕ್ಕಿ ಹೋಗುತ್ತದೆ. ಗುಂಡಿ ಗಿಡದ ಕೆಳಗೆ ಬಸವಣ್ಣನ ಮೂರ್ತಿ ಇದೆ. ಅಲ್ಲಿ ಐದು ಸುತ್ತು ಪ್ರದಕ್ಷಣೆ ಹಾಕುತ್ತಾರೆ. ಅಲ್ಲಿಂದ ಐದು ಕಿ. ಮೀ. ದೂರದಲ್ಲಿರುವ ‘ಕರಚಿ ಮಡ’ (ಹಾಲಹಳ್ಳದಲ್ಲಿರುವ ಮಡ) ದಲ್ಲಿ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಪಲ್ಲಕ್ಕಿ ಇಡುತ್ತಾರೆ. ಮಾಳಿಂಗರಾಯ ಆ ಹಳ್ಳದಲ್ಲಿ ಜಾವ ಜಳಕ ಮತ್ತು ನಿತ್ಯ ಪೂಜೆ ಮಾಡಿಕೊಂಡು ತನ್ನ ಪೀಠದಲ್ಲಿ ವಿಶ್ರಮಿಸುತ್ತಾನೆ. ಸುತ್ತ ಮುತ್ತಲಿನ ಭಕ್ತರೆಲ್ಲ ಬಂದು ದರ್ಶನ ಪಡೆಯುತ್ತಾರೆ. ಬಾನದ ನೈವೇದ್ಯ ಮಾಡಿ ಪಲ್ಲಕ್ಕಿ ಜೊತೆ ಬಂದವರಿಗೆಲ್ಲ ಊಟಕ್ಕೆ ಹಾಕುತ್ತಾರೆ. ಮಾಳಿಂಗರಾಯನು ಅಲ್ಲಿ ಒಂದು ಗಂಟೆ ಇದ್ದು ಭಕ್ತರಿಗೆ ಆಶೀರ್ವಾದ ಮಾಡಿ ಹೊರಡುತ್ತಾನೆ. ಮಾಳಿಂಗರಾಯನ ಪಲ್ಲಕ್ಕಿ ಹೊರಟರೆ ಅದು ಜಾತ್ರೆಯ ದಿನದ ಸೂಚನೆ ಎಂದು ಭಾವಿಸುತ್ತಾರೆ. ಕರಚಿನ ಮಡದಿಂದ ಹೊರಟ ಪಲ್ಲಕ್ಕಿ ಮೂರು ಕಿ. ಮೀ. ದೂರದಲ್ಲಿರುವ ‘ಮೋರಿಹಾಳ’ ಕ್ಕೆ ಬರುತ್ತದೆ. ಅಲ್ಲಿ ಜಾವ ಜಳಕ, ನೇಮ ನಿಷ್ಠೆ ಮಾಡಿಕೊಂಡು ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾನೆ. ಹುನೂರಿನ ಜನರೆಲ್ಲ ಬಾನ, ಹೋಳಿಗೆ ತಂದು ನೈವೇದ್ಯ ಮಾಡುತ್ತಾರೆ. ಎಲ್ಲರಿಗೂ ಹೋಳಿಗೆ ಊಟ  ಹಾಕುತ್ತಾರೆ. ಅಲ್ಲಿ ಭಕ್ತರೆಲ್ಲ ಡೊಳ್ಳಿನ ಹಾಡು ಹಾಡುತ್ತಾರೆ. ನಂತರ ಹುನೂರು ಮಠದಲ್ಲಿ ಮಾಳಿಂಗರಾಯ ಗುರು ಬೀರಣ್ಣನನ್ನು ಭೆಟ್ಟಿಯಾಗುತ್ತಾನೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಸಿದ್ಧಾಟ್ಗಿ ನುಡಿಗಳು ನಡೆಯುತ್ತವೆ. ಸುಮಾರು ನೂರು ಜನ ಜಡಿ ಇದ್ದವರು, ಮಹಾರಾಯರು ಮತ್ತು ಪೂಜಾರಿಗಳು ಸಿದ್ಧಾಟ್ಗಿ ನುಡಿಗಳನ್ನು ಹೇಳುತ್ತಾರೆ. ನಂತರ ಮಾಳಿಂಗರಾಯನ ಪಲ್ಲಕ್ಕಿ ಬೀರಪ್ಪನ ಗುಡಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಕುಳಿತುಕೊಳ್ಳುತ್ತದೆ. ಮಾಳಿಂಗರಾಯನಿಗೆ ಪೂಜೆ ಮಾಡುತ್ತಾರೆ. ಹುನೂರಿನಲ್ಲಿ ಮಾಳಪ್ಪ ಮತ್ತು ಬೀರಪ್ಪ ಮೂರು ದಿನಗಳವರೆಗೆ ಜಾತ್ರೆ ಮಾಡಿಸಿಕೊಳ್ಳುತ್ತಾರೆ. ಭಕ್ತರೆಲ್ಲ ಬಂದು ಅನೇಕ ವಿಧದಲ್ಲಿ ಪೂಜೆ ಸಲ್ಲಿಸುತ್ತಾರೆ. ಜಾತ್ರೆಗೆ ಬಂದ ಭಕ್ತರಿಗೆಲ್ಲ, ಮಹಾರಾಯರು ‘ಶಿವ ಶಿವಾ ಹರಹರಾ ಪಂತಪರ್ಶ ಕೊಡು ಸತ್ಯಂ ಭಾಗ್ಯಂ ಕೊಡು, ಆಡು ಮಕ್ಕಳಿಗೆ ತೊಟ್ಲ ಕೊಡು. ಒಂದನೂರಾ ಒಂದು ಕೋಮಾರ (ಮಕ್ಕಳ) ಕೊಡು. ಹಾಕದೈ ಕೊಡು ಬಿತ್ತಿ ಬೆಳೆವಂತ ಬದುಕು ಕೊಡು’ ಎಂದು ಆರ್ಶಿವಾದ ಮಾಡಿ ಭಂಡಾರ ಹಣೆಗೆ ಹಚ್ಚುತ್ತಾರೆ.

ಜಾತ್ರೆಯ ಮಾರನೆಯ ದಿನ ಹನ್ನೊಂದು ಗಂಟೆಗೆ ಮಾಳಪ್ಪನ ಪಲ್ಲಕ್ಕಿ ಬೀರಪ್ಪನ ಮಠಕ್ಕೆ ಪ್ರದಕ್ಷಣೆ ಹಾಕುತ್ತದೆ. ಅಲ್ಲಿಂದ ಹನುಮಂತ ದೇವರ ಗುಡಿಗೆ ಬಂದು ಐದು ಸುತ್ತು ಪ್ರದಕ್ಷಣೆ ಹಾಕಿ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತದೆ. ಗೌಡಪ್ಪ, ಬರಮಪ್ಪ ಮತ್ತು ಪೂಜಾರಿ ಮುಂತಾದವರಿಗೆ ಸಜ್ಜಿ ರೊಟ್ಟಿ ಮೆಣಸಿನಕಾಯಿ ಪಲ್ಯ ಊಟಕ್ಕೆ ಹಾಕುತ್ತಾರೆ. ಅಲ್ಲಿ ನಾಲ್ಕು ದಿನ ಕಾಲ ಕಳೆಯುತ್ತಾರೆ. ಮಾಳಿಂಗರಾಯನ ಪಲ್ಲಕ್ಕಿ ‘ಗುಂಡ ಗಿಡಕ್ಕೆ’ ಬಂದು ಕುಳಿತುಕೊಳ್ಳುತ್ತದೆ. ಜಾಡರು ಮತ್ತು ಬಬಲಾದಿ ಜನ ಬಾನ ತಂದು ನೈವೇದ್ಯ ಮಾಡಿ ಆರ್ಶೀವಾದ ಪಡೆದುಕೊಳ್ಳುತ್ತಾರೆ. ಪಲ್ಲಕ್ಕಿ ಬುಹ್ಯಾರಕ್ಕೆ ಬರುತ್ತದೆ. ಬಾವಿ ದಂಡೆಯ ಮೇಲಿರುವ ಕಟ್ಟೆಯ ಮೇಲೆ ಪಲ್ಲಕ್ಕಿ ಇಡುತ್ತಾರೆ. ಹನುಮದೇವರ ಪವುಟದಲ್ಲಿ ಕುಳಿತು ಊಟ ಮಾಡಿಕೊಂಡು ಹುಲಜಂತಿಯ ಹುಲಿಮುಖದ ಅಗಸಿಯಿಂದ ಹಾಯ್ದು ಪಲ್ಲಕ್ಕಿ ಬರುತ್ತದೆ. ನಂತರ ಬೀರಪ್ಪನ ತಂದೆ ಬರಮದೇವರ ಗುಡಿಯಲ್ಲಿ ಒಂದು ಗಂಟೆ ಮಾಳಿಂಗರಾಯ ಕುಳಿತುಕೊಳ್ಳುತ್ತಾನೆ. ಅಲ್ಲಿ ಡೊಳ್ಳಿನ ಪದಗಳನ್ನು ಹಾಡುತ್ತಾರೆ. ಊರ ಹಿರಿಯರೆಲ್ಲ ಸೇರಿ ಊಟ ಮಾಡುತ್ತಾರೆ. ಮಾಳಿಂಗರಾಯ ಗುರುವಿನ ದರ್ಶನ ಪಡೆದುಕೊಂಡು, ಜಾತ್ರೆ ಮಾಡಿ ಬಂದಿದ್ದಾನೆಂದು ಊರವರೆಲ್ಲ ಪಲ್ಲಕ್ಕಿಗೆ ನೀರು ಹಾಕಿ ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ. ಮಾಳಿಂಗರಾಯನ ಪಲ್ಲಕ್ಕಿ ಪಾಲ್ಕಿ ಮನೆಗೆ ಬಂದು ಕುಳಿತುಕೊಳ್ಳುತ್ತದೆ.

ನಂತರ ಊರಿನ ಪಂಚರೆಲ್ಲ ಕೂಡಿ ಸಿಡಿಯಾಣ ಮಠದ ಜಾತ್ರೆಯ ಬಗೆಗೆ ಸಮಾಲೋಚಿಸುತ್ತಾರೆ. ದೀಪಾವಳಿ ಅಮಾವಾಸ್ಯೆಗಿಂತ ಎರಡು ದಿನ ಮೊದಲು ಸಿಡಿಯಾಣದಲ್ಲಿ ಶೀಲವಂತಿ ಮತ್ತು ಬೀರಪ್ಪನ ಜಾತ್ರೆ ಇರುತ್ತದೆ. ಆಗ ಮಾಳಿಂಗರಾಯನ ಪಲ್ಲಕ್ಕಿ ಹುಲಜಂತಿಯ ದೊಡ್ಡ ಅಗಸಿ ಬಾಗಿಲಿನಿಂದ ಹಾಯ್ದು ಸಿಡಿಯಾಣ ಊರ ಸಮೀಪಕ್ಕೆ ಹೋಗಿ ಕುಳಿತುಕೊಳ್ಳುತ್ತದೆ. ಸಿಡಿಯಾಣದಲ್ಲಿ ಮಾಳಿಂಗರಾಯನ ಕಟ್ಟೆ ಇದೆ. ಆ ಕಟ್ಟೆಯ ಮೇಲೆ ಪಲ್ಲಕ್ಕಿ ಇಡುತ್ತಾರೆ. ಸಿಡಿಯಾಣದ ಜನರು ಬಾನದ ನೈವೇದ್ಯ ಮಾಡುತ್ತಾರೆ. ಸಾಯಂಕಾಲ ಐದು ಗಂಟೆಗೆ ಕರಿಹುಲಿ ಮಾಳಿಂಗರಾಯ, ಬೀರಪ್ಪ ಮತ್ತು ಸಿಡಿಯಾಣ ಶೀಲವಂತಿ ಪರಸ್ಪರ ಭೆಟ್ಟಿಯಾಗುತ್ತಾರೆ. ಸಿದ್ಧರು ಸಿದ್ಧಾಟ್ಗಿ ನುಡಿಗಳನ್ನು ಹೇಳುತ್ತಾರೆ. ಐದು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಊರ ಜನರು ಮಹಾರಾಯರಿಗೆ ಊಟ ಹಾಕುತ್ತಾರೆ. ಆರು ಗಂಟೆಗೆ ಡೊಳ್ಳಿನ ಮತ್ತು ಹರಿದಿಮ ಪದಗಳನ್ನು ಹಾಡುತ್ತಾರೆ. ಜಾತ್ರೆ ಮುಗಿಸಿ ಮಾಳಿಂಗರಾಯನ ಪಲ್ಲಕ್ಕಿ ರಾತ್ರಿ ಒಂಬತ್ತು ಗಂಟೆಗೆ ಹುಲಜಂತಿಗೆ ಬರುತ್ತದೆ.

ಮಾರನೇ ದಿನ ಪಲ್ಲಕ್ಕಿ ಊರ ಹನುಮಂತ ದೇವರಿಗೆ ಪ್ರದಕ್ಷಿಣೆ ಹಾಕಿ ಮರಡಿ ಜಕ್ಕಪ್ಪರಾಯನ ಭೆಟ್ಟಿಗೆ ಹೋಗುತ್ತಾನೆ. ಜಕ್ಕಪ್ಪರಾಯ ಮಾಳಿಂಗರಾಯನ ಅಣ್ಣ. ಮಾಳಿಂಗರಾಯ ಸಾಯಂಕಾಲ ಐದು ಮೂವತ್ತಕ್ಕೆ ಹೋಗಿ ಅಣ್ಣನಿಗೆ ಭೆಟ್ಟಿಯಾಗಿ ಗುಡಿಗೆ ಪ್ರದಕ್ಷಿಣೆ ಹಾಕಿ ಕುಳಿತುಕೊಳ್ಳುತ್ತಾನೆ. ಮಡ್ದಿ ವಸ್ತಿ ಭಕ್ತರೆಲ್ಲ ಹೋಳಿಗೆ, ಹುಗ್ಗಿ, ಬಾನದ ನೈವೇದ್ಯ ಮಾಡುತ್ತಾರೆ. ಪೂಜಾರಿಗಳಿಗೆ ಊಟಕ್ಕೆ ಹಾಕುತ್ತಾರೆ. ಅಲ್ಲಿ ಮಾಳಿಂಗರಾಯನ ಪಲ್ಲಕ್ಕಿ ಒಂದು ಗಂಟೆ ಕುಳಿತುಕೊಳ್ಳುತ್ತದೆ. ಅಲ್ಲಿ ಡೊಳ್ಳಿನ ಹಾಡು ಹಾಡುತ್ತಾರೆ. ವಾಲಗ ನುಡಿಸುತ್ತಾರೆ. ನಂತರ ನಗಾರಿ ಬಾರಿಸುತ್ತಾ ಮಾಳಿಂಗರಾಯನ ಪಲ್ಲಕ್ಕಿಯನ್ನು ಹುಲಜಂತಿಯ ಊರ ಹೊರಗಿನ ಸಮಾಧಿ ಮಂದಿರಕ್ಕೆ ತರುತ್ತಾರೆ. ಅಂದು ದೀಪಾವಳಿಯ ಅಮಾವಾಸ್ಯೆಯ ದಿನ. ಸುಮಾರು ನಾಲ್ಕೈದು ಲಕ್ಷ ಜನರು ಬೊಬ್ಬಲಿವನದಲ್ಲಿ ಸೇರಿರುತ್ತಾರೆ. ರಾತ್ರಿ ಹನ್ನೆರಡು ಗಂಟೆಗೆ ಪಾರ್ವತಿ-ಪರಮೇಶ್ವರರು ಬಂದು ಮಾಳಿಂಗರಾಯನಿಗೆ ಮುಂಡಾಸ ಕೊಟ್ಟು, ಪಟಗಾ ಸುತ್ತಿ, ನಗಾರಿ ಹೊಡೆದು ಹೋಗುತ್ತಾರೆ. ಮಾಳಿಂಗರಾಯನ ಸಮಾಧಿ ಮಂದಿರದ ಮೇಲಿರುವ ಐದು ಕಳಸಗಳಿಗೆ ಪಟಗಾ ಸುತ್ತಿ ಹೋಗಿರುತ್ತಾರೆಂದು ಹೇಳುತ್ತಾರೆ. ಪಾರ್ವತಿ-ಪರಮೇಶ್ವರರು  ಮಾಳಿಂಗರಾಯನಿಗೆ ಪಟಗಾ ಸುತ್ತುವುದನ್ನು ಯಾರೂ ನೋಡಬಾರದು, ನೋಡಿದರೆ ಸಾವು – ನೋವುಗಳು ಸಂಭವಿಸುತ್ತವೆ ಎಂದು ಹೇಳುತ್ತಾರೆ. ಜಾತ್ರೆಗೆ ಬಂದ ಭಕ್ತರೆಲ್ಲ ಮುಂಡಾಸ ದರ್ಶನ ಪಡೆಯುತ್ತಾರೆ. ಬೊಬ್ಬಲಿ ವನಕ್ಕೆ ನಾಲ್ಕು ಗಂಟೆಗೆ ಏಳು ಊರುಗಳ ಪಲ್ಲಕ್ಕಿಗಳು ಬರುತ್ತವೆ. ಸಿರಿಡೋಣ ಬೀರಪ್ಪಾ ಶೀಲವಂತಿ, ಜೀರಂಕಲಿಗಿ ಬೀರಪ್ಪಾ, ಉಟಗಿ ಬರಮಲಿಂಗ, ಜಿಜ್ಜೂರಿನ ಜಗ್ ಮಾಳಿಂಗರಾಯನ ಸಾಕು ಮಗಾ ಬುಳ್ಳಪ್ಪಾ, ಹುನೂರಿನ ಬೀರಪ್ಪ ಮತ್ತು ಸೋನ್ಯಾಳದ ವಿಠ್ಠಲ ಪಲ್ಲಕ್ಕಿಯಲ್ಲಿ ಬರುತ್ತಾರೆ. ಇವರೆಲ್ಲರೂ ಮಾಳಿಂಗರಾಯನೊಂದಿಗೆ ಪರಸ್ವರ ಭೇಟ್ಟಿಯಾಗುವ ಸಂದರ್ಭದಲ್ಲಿ ಭಕ್ತರು ಕುರಿ ಉಣ್ಣೆ, ಭಂಡಾರ, ಕೊಬ್ಬರಿ ಮತ್ತು ಉತ್ತತ್ತಿ ತೂರುತ್ತಾರೆ. ಭಕ್ತರು ತೂರಿದ ಉಣ್ಣೆ ಮತ್ತು ಭಂಡಾರ ಲಾರಿಗಟ್ಟಲ್ಲೇ ಬೊಬ್ಬಲಿ ವನದಲ್ಲಿ ಬಿದ್ದಿರುತ್ತದೆಂದು ಹೇಳುತ್ತಾರೆ. ನಂತರ ಏಳು ಊರುಗಳ ಪಲ್ಲಕ್ಕಿಗಳು ಹಾಲಹಳ್ಳದಲ್ಲಿ ನಿಂತಿರುತ್ತವೆ. ಮಹಾರಾಯರು ಭವಿಷ್ಯ ಹೇಳುತ್ತಾರೆ. ನಂತರ ಎಲ್ಲ ಪಲ್ಲಕ್ಕಿಗಳು ಮಾಳಿಂಗರಾಯನ ಗುಡಿಗೆ ಪ್ರದಕ್ಷಣೆ ಹಾಕಿ ಕುಳಿತುಕೊಳ್ಳುತ್ತವೆ. ಹೊರಗಿನಿಂದ ಬಂದ ಭಕ್ತರು ಬಾನದ ಊಟ ಹಾಕುತ್ತಾರೆ. ಏಳೂರು ಪಲ್ಲಕ್ಕಿಗಳು ಮಾರನೆಯ ದಿನ ಊಟ ಮಾಡಿಕೊಂಡು ತಮ್ಮ ಸ್ಥಳದಲ್ಲೆಯೇ ಹೋಗುತ್ತಾರೆ. ಜಾತ್ರೆ ಮುಗಿದ ಏಳನೇ ದಿವಸಕ್ಕೆ ಮಾಳಿಂಗರಾಯ ಪಾರ್ವತಿ – ಪರಮೇಶ್ವರರು ಸುತ್ತಿರುವ ಮುಂಡಾಸನ್ನು ತೆಗೆದುಕೊಂಡು ಸುಮಾರು ಹನ್ನೊಂದು ಗಂಟೆಗೆ ಅದೇ ಊರಿನ ಹೂಗಾರನ ತಲೆಗೆ ಸುತ್ತುತ್ತಾನೆ. ಹೂಗಾರರ ವಂಶಸ್ಥರು ಮಾಳಿಂಗರಾಯ ಜೀವಿತ ಕಾಲದಲ್ಲಿ ಅತ್ಯಂತ ಭಕ್ತಿಯಿಂದ ಹೂವುಗಳನ್ನು ತಂದು ನೀಡುತ್ತಿದ್ದರು. ಆ ಕಾರಣಕ್ಕಾಗಿ ಮಾಳಿಂಗರಾಯ ತನಗೆ ಸುತ್ತಿರುವ ಮುಂಡಾಸನ್ನು ಹೂಗಾರನಿಗೆ ಸುತ್ತುತ್ತಾನೆ ಎಂದು ಹೇಳುತ್ತಾರೆ. ನನಗೆ ಸುತ್ತಿರುವ ಮುಂಡಾಸು ಇನ್ನೊಬ್ಬರ ಕೈಗೆ ಸಿಕ್ಕು ಅಪವಿತ್ರವಾಗದಿರಲೆಂದು ಅದನ್ನು ಕೃಷ್ಣಾನದಿಗೆ ಬಿಡುವ ಸಂಪ್ರದಾಯ ಹೂಗಾರರಲ್ಲಿ ಇದೆ. ಅಂದು ಸಾಯಂಕಾಲ ಮಾಳಿಂಗರಾಯ ಹುಲಿ ಮುಖದ ಅಗಸೆ ಬಾಗಲಿಗೆ ಪ್ರದಕ್ಷಣಿ ಹಾಕುತ್ತಾನೆ. ಊರವರೆಲ್ಲರೂ ಸೇರಿ ಡೊಳ್ಳು, ವಾಲಗ ನುಡಿಸುತ್ತಾ ಮಾಳಿಂಗಾಯನನ್ನು ಪಲ್ಲಕ್ಕಿಯಲ್ಲಿ ಕರೆತಂದು ಊರಿನ ಮಧ್ಯವಿರುವ ಪಲ್ಲಕ್ಕಿ ಮನೆಯಲ್ಲಿ ಕುಳ್ಳಿರಿಸುತ್ತಾರೆ.

ಮಾಳಿಂಗರಾಯ ಜಾತ್ರೆಯ ನಂತರ ಆರು ತಿಂಗಳಾದ ಮೇಲೆ ತನ್ನ ಅಣ್ಣನಾದ ಜಕ್ಕರಾಯನ ಭೆಟ್ಟಿಗೆ ಹೋಗುತ್ತಾನೆ. ಹುನೂರಿನಿಂದ ಬೀರಪ್ಪನು ಜಕ್ಕಪ್ಪನ ಭೆಟ್ಟಿಗೆ ಬರುತ್ತಾನೆ. ಮಾಳಿಂಗರಾಯ ಏಣಗಿ ಮಠಕ್ಕೆ ಹೋಗುವಾಗ ಮೊದಲು ನಂದೂರು ಕಟ್ಟೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಾನೆ. ನಂತರ ಅಳಗಿ ಮೇಲಿಂದ ಹಾಯ್ದು ಸಿದ್ಧಾಪುರದಲ್ಲಿ ಹರಿದ ಭೀಮಾನದಿಯಲ್ಲಿ ಕುಳಿತು ಜಾವ-ಜಳಕ, ನೇಮ ನಿಷ್ಠೆ ಮಾಡಿಕೊಳ್ಳುತ್ತಾನೆ. ಅಲ್ಲಿಂದ ಏಣಗಿ ಮಠದ ಸಮೀಪಕ್ಕೆ ಹೋಗಿ ಕುಳಿತುಕೊಳ್ಳುತ್ತಾನೆ. ಸುಮಾರು ಹನ್ನೊಂದು ಗಂಟೆಗೆ ಊರ ಜನರೆಲ್ಲ ಹುಗ್ಗಿ ಕಡಾಯಿ ದಾನ ಮಾಡುತ್ತಾರೆ. ಎಲ್ಲರಿಗೂ ಊಟ ಬಡಿಸುತ್ತಾರೆ. ಡೊಳ್ಳಿನ ಹಾಡು ಹಾಡುತ್ತಾರೆ. ಸುಮಾರು ನಾಲ್ಕು ಗಂಟೆಗೆ ಬೀರಪ್ಪನು ಬರುತ್ತಾನೆ. ಮಾಳಪ್ಪ, ಜಕ್ಕಪ್ಪ ಮತ್ತು ಬೀರಪ್ಪ ಪರಸ್ಪರ ಭೆಟ್ಟಿಯಾಗುತ್ತಾರೆ. ಮೂವರು ಸೇರಿ ಜಕ್ಕಪ್ಪನ ಗುರು ಬರಮದೇವರ ಗುಡಿಗೆ ಪ್ರದಕ್ಷಣೆ ಹಾಕುತ್ತಾರೆ. ಆವಾಗ ಸಿದ್ಧರು ಸಿದ್ಧಾಟ್ಗಿ ನುಡಿಗಳನ್ನು ಹೇಳುತ್ತಾರೆ. ಎಲ್ಲರೂ ಸೇರಿ ಜಕ್ಕಪ್ಪನ ಗುಡಿಗೆ ಹೋಗುತ್ತಾರೆ. ಮಾರನೆಯ ದಿನ ಊರ ಮತ್ತು ಪರ ಊರಿನ ಜನತೆ ಬಾನ ತಂದು ನೈವೇದ್ಯ ಹಿಡಿಯುತ್ತಾರೆ. ಬರಮದೇವರ ಗುಡಿ ಮುಂದೆ ನಂದಿಮೂರ್ತಿ ಇದೆ. ಪೂಜಾರಿ ನಂದಿಗೆ ಬೆಲ್ಲ ಹಚ್ಚುತ್ತಾನೆ. ಮಕ್ಕಳಾಗದ ಹೆಂಗಸರು ನಂದಿಯ ಮುಂದೆ ಉಡಿ ಒಡ್ಡಿ ನಿಲ್ಲುತ್ತಾರೆ. ಯಾರ ಉಡಿಯಲ್ಲಿ ಬೆಲ್ಲ ಬೀಳುತ್ತದೆಯೋ ಅವರಿಗೆ ಮಕ್ಕಳ ಭಾಗ್ಯ ಲಭಿಸುತ್ತದೆ ಎಂದು ಹೇಳುತ್ತಾರೆ. ಏಣಗಿ ಮಠದಲ್ಲಿ ನಾಲ್ಕು ಹೋಮಗಳನ್ನು ಮಾಡುತ್ತಾರೆ. ಜಾತ್ರೆಗೆ ಬಂದ ಜನ ಹೋಮಕ್ಕೆ ನಮಸ್ಕರಿಸಿ ತಮ್ಮ ಊರುಗಳಿಗೆ ಹೋಗುತ್ತಾರೆ. ಜಕ್ಕಪ್ಪ, ಬೀರಪ್ಪ ಮತ್ತು ಮಾಳಪ್ಪನನ್ನು ಕಳಿಸಲು ಊರ ಹೊರಗಿನ ಅಗಸಿವರೆಗೆ ಬರುತ್ತಾನೆ. ಬೀರಪ್ಪ ನೇರವಾಗಿ ಹುನೂರಿಗೆ ಹೋಗುತ್ತಾನೆ. ಮಾಳಪ್ಪ ಏಣಗಿ ಬಿಟ್ಟು ಮಾರನೆಯ ದಿನ ಹಿರಿಮಾಳ ಹೊಲದಲ್ಲಿ ಕುಳಿತುಕೊಳ್ಳುತ್ತಾನೆ. ಬರಗಾಲ ಸಿದ್ಧ ತೋಡಿಸಿದ ಬಾವಿಯಿಂದ ಮಾಲಗಾರರು ನೀರು ತಂದು ಮಾಳಪ್ಪನನ್ನು ಪೂಜಿಸುತ್ತಾರೆ. ಬಾನ, ಹುಗ್ಗಿ ನೈವೇದ್ಯ ಮಾಡುತ್ತಾರೆ. ಎಲ್ಲರೂ ಊಟ ಮಾಡುತ್ತಾರೆ. ಡೊಳ್ಳಿನ ಹಾಡು ಹಾಡುತ್ತಾರೆ. ಭಂಡಾರ ತೂರುತ್ತಾರೆ. ಅಲ್ಲಿಂದ ಮಾಳಿಂಗರಾಯ ಹುಲಜಂತಿಗೆ ಬಂದು ತನ್ನ ಪಲ್ಲಕ್ಕಿ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ.

ಸುಮಾರು ನಾಲ್ಕೈದು ಲಕ್ಷ ಜನ ಸೇರುವ ಮಾಳಿಂಗರಾಯನ ಜಾತ್ರೆಯನ್ನು ವಿಶ್ಲೇಷಿಸುವುದು ಕಷ್ಟ ಸಾಧ್ಯ. ಒಬ್ಬರಿಂದಲೇ ಈ ಧಾರ್ಮಿಕ ಆಚರಣೆಯ ಕ್ಷೇತ್ರ ಕಾರ್ಯ ಮಾಡುವುದು ಅಸಾಧ್ಯ. ಕ್ಷೇತ್ರಕಾರ್ಯ ಕೈಗೊಂಡಾಗ ಸಿಕ್ಕ ಮಾಹಿತಿಗಳನ್ನೆಲ್ಲ ಇಲ್ಲಿ ಹೇಳಲೆತ್ನಿಸಿದ್ಧೇನೆ. ಮಾಳಿಂಗರಾಯನ ಅಧ್ಯಯನ ಮಾಡುವವರಿಗೆ ಈ ಜಾತ್ರೆ ಪ್ರಮುಖ ಆಕರ ಸಾಮಗ್ರಿ.

* * *

ಸಾಮಾನ್ಯವಾಗಿ ಪ್ರತಿಯೊಂದು ಸಮುದಾಯದಲ್ಲಿ ಕಥೆ, ಪುರಾಣ, ಕಥನಕಾವ್ಯ, ಮಹಾಕಾವ್ಯಗಳಿವೆ. ಎಲ್ಲ ಸಮುದಾಯಗಳಲ್ಲೂ ಅನೇಕ ಕಟ್ಟುಪಾಡುಗಳಿವೆ. ಅವುಗಳನ್ನು ನಮ್ಮ ಸಮುದಾಯಗಳು ಜತನದಿಂದ ಕಾಪಾಡಿಕೊಂಡು ಬಂದಿರುತ್ತವೆ. ಅವರವರ ಸಮುದಾಯಗಳಲ್ಲಿ ಕಂಡು ಬರುವ ಸಂಸ್ಕೃತಿಯ ಲಕ್ಷಣಗಳನ್ನು ಹೊರಗಿನ ಜಗತ್ತಿಗೆ ತಿಳಿಸಲು ಅವಕಾಶಗಳು ಕಡಿಮೆ. ಒಬ್ಬ ಸಾಂಸ್ಕೃತಿಕ ವ್ಯಕ್ತಿ ಒಂದು ಸಮುದಾಯದಲ್ಲಿ ಹುಟ್ಟಿ ಸಂದುಹೋದ ಮೇಲೆ ಅವನ ಮೂಲಕ ಸಂಸ್ಕೃತಿಯನ್ನು ಹೊರ ಹಾಕುತ್ತಾರೆ. ನಮ್ಮ ಚರಿತ್ರೆಯುದ್ದಕ್ಕೂ ಅನೇಕ ಸಮುದಾಯಗಳಲ್ಲಿ ಸಾಂಸ್ಕೃತಿಕ ವ್ಯಕ್ತಿಗಳು ಜನಿಸಿ ಬಾಳಿ ಹೋಗಿದ್ದಾರೆ. ಅವರು ಆ ಸಮುದಾಯಕ್ಕೆ ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾದದ್ದು. ಸಣ್ಣ ಪುಟ್ಟ ಜನಾಂಗಗಳಲ್ಲಿ ಜನಿಸಿ ಇಲ್ಲವಾದ ಸಾಂಸ್ಕೃತಿಕ ವೀರರ ಚರಿತ್ರೆಗಳು ಮಧ್ಯಕಾಲಿನ ಇತಿಹಾಸದಲ್ಲಿ ನಡೆದ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಸಂಘರ್ಷಗಳಿಂದ ಮಾಯಾವಾದವು. ಈ ಸಂದರ್ಭದಲ್ಲಿ ಅನೇಕ ಮೌಖಿಕ ಸಂಪ್ರದಾಯದ ಆಕರಗಳು ನಾಶವಾದವು. ಆದರೆ ಆ ವೀರರ ಚರಿತ್ರೆ, ಆ ಸಮುದಾಯದ ಜನರ ಬಾಯಿಯಲ್ಲಿ ಮಾತ್ರ ಸದಾ ಇತ್ತು.

ಇತಿಹಾಸ ಸಂಶೋಧಕರು ಹಸ್ತಪ್ರತಿ, ಶಾಸನ, ಕಟ್ಟಡ ಮತ್ತು ಸ್ಮಾರಕಗಳನ್ನು ಅವಲಂಬಿಸಿ ಹೇಳುವ ಅಥವಾ ಬರೆದಿರುವ ಚರಿತ್ರೆ, ಇತಿಹಾಸದ ಒಂದು ಭಾಗ. ಅದರ ಇನ್ನೊಂದು ಭಾಗ ಜನಪದರಲ್ಲಿದೆ. ಡಾ. ಪುರುಷೋತ್ತಮ ಬಿಳಿಮಲೆ ಹೇಳುವಂತೆ ‘ಜನಪದರಲ್ಲಿ ಇತಿಹಾಸ ಅಥವಾ ಚರಿತ್ರೆ ಎಂಬುದಿಲ್ಲ. ಅವರಲ್ಲಿ ಪುರಾಣ, ಕಥೆ, ಕಾವ್ಯ ಮತ್ತು ಐತಿಹ್ಯಗಳಿವೆ. ಇದನ್ನೆ ಅವರು ಇತಿಹಾಸ ಎಂದು ತಿಳಿದುಕೊಂಡಿದ್ದಾರೆ. ಮತ್ತು ಅದನ್ನೇ ಅವರು ನಿರೂಪಿಸುತ್ತಾರೆ.’ ಇತಿಹಾಸ ಸಂಶೋಧಕರಂತೆ ಜನಪದ ನಿರೂಪಕರಿಗೆ ದಾಖಲೆಗಳು ಬೇಕಾಗಿಲ್ಲ. ಅದರ ಅವಶ್ಯಕತೆಯೂ ಅವರಿಗಿಲ್ಲ. ಅವರು ನಿರೂಪಿಸುವುದನ್ನೇ ಸತ್ಯ ಎಂದು ನಂಬಿದ್ದಾರೆ. ಸತ್ಯ ಎಂದೇ ಪ್ರತಿಪಾದಿಸುತ್ತಾರೆ. ಪ್ರತಿಯೊಂದು ಸಮುದಾಯದಲ್ಲಿರುವ ಪುರಾಣ, ಕಥೆ, ಕಾವ್ಯದ ಅಧ್ಯಯನಕ್ಕೆ ತೊಡಗಿಕೊಂಡಾಗ ಆ ಸಮುದಾಯದ ಸಂಸ್ಕೃತಿ, ಮೂಲ ನೆಲೆ ಸಾಂಸ್ಕೃತಿಕ ವೀರರ ಚರಿತ್ರೆ ಮುಂತಾದ ವಿಷಯಗಳು ತಿಳಿಯುತ್ತವೆ.

ಆಳುವ ಸಮುದಾಯಗಳಲ್ಲಿಯ ಕಥೆ ಕಾವ್ಯ ಮತ್ತು ಪುರಾಣಗಳಲ್ಲಿರುವ ಸಾಂಸ್ಕೃತಿಕ ವೀರರ ಚರಿತ್ರೆಗಳು ಜನಪದ ಪುರಾಣ, ಕಥೆ, ಕಾವ್ಯಗಳ ಮೇಲೆ ಅನೇಕ ಪ್ರಭಾವಗಳನ್ನು ಆಂಶಿಕವಾಗಿ ಬೀರಿವೆ. ಇದರಿಂದಾಗಿ ಜನಪದ ಮತ್ತು ಬುಡಕಟ್ಟು ಕಾವ್ಯ ಕಥೆಗಳು ತಮ್ಮ ಮೂಲ ಸ್ವರೂಪ ಲಕಷಣಗಳನ್ನು ಬದಲಾಯಿಸಿಕೊಂಡಿವೆ. ಸಣ್ಣ ಪುಟ್ಟ ಸಮುದಾಯಗಳು ತಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವ್ಯಕ್ತಿಗಳನ್ನು ಅದರೊಂದಿಗೆ ಹೋಲಿಸುವ ಅಥವಾ ಪ್ರತಿಸ್ಪರ್ಧೆಗಿಳಿಯುವ ಕಾರ್ಯದಲ್ಲಿ ತೊಡಗಿಸಿದವು. ಈ ಕಾರಣದಿಂದ ಚಿಕ್ಕ ಚಿಕ್ಕ ಸಮುದಾಯಗಳಲ್ಲಿ ಜನಿಸಿದ ಸಾಂಸ್ಕೃತಿಕ ವೀರರ ನಿಜವಾದ ಚರಿತ್ರೆ ಮಾಯವಾಗ ತೊಡಗಿತು. ಆ ವೀರನ ಸುತ್ತ ಅನೇಕ ಪುರಾಣ, ಕಥೆ, ಪವಾಡಗಳು ಹುಟ್ಟಿದವು. ಸಾಂಸ್ಕೃತಿಕ ವ್ಯಕ್ತಿಯ ಚರಿತ್ರೆ ಹಂತ ಹಂತವಾಗಿ ಸಂಕೀರ್ಣವಾಗುತ್ತ ನಡೆಯಿತು. ಪ್ರಬಲವಾದ ಸಂಸ್ಕೃತಿಯೊಂದು ತನ್ನ ಪ್ರಭಾವ ಬೀರುವುದಕ್ಕಿಂತ ಮೊದಲು ಈ ಸಣ್ಣ ಸಣ್ಣ ಸಮುದಾಯಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೀರರ ಚರಿತ್ರೆಗಳು ಆ ಸಮುದಾಯಗಳಲ್ಲಿ ಮಾತ್ರ ಪ್ರಚಾರದಲ್ಲಿದ್ದವು. ಪ್ರಬಲ ಸಂಸ್ಕೃತಿಯ ಪ್ರಭಾವ ಪ್ರೇರಣೆಯಿಂದ, ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕೃತಿ ವೀರರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಲು ಹವಣಿಸಿದವು. ಜನರ ಮನ್ನಣೆಗಳಿಸಿಕೊಳ್ಳಲು ತನ್ನ ಮೂಲ ಸ್ವರೂಪಗಳನ್ನು ಬದಲಾಯಿಸಿಕೊಂಡವು. ಆಳುವ ವರ್ಗದಲ್ಲಿ ಹುಟ್ಟಿದ ಅನೇಕ ಪುರಾಣ ವಿಷಯಗಳನ್ನು ಎತ್ತಿಕೊಂಡು ತನ್ನ ಸಂಸ್ಕೃತಿಗೆ ಒಗ್ಗುವಂತೆ ಮಾರ್ಪಡಿಸಿಕೊಂಡಿತು. ಪ್ರಬಲ ಕೋಮಿನ ಬೆನ್ನು ಹತ್ತಿದ ನಮ್ಮ ಕಾವ್ಯಗಳಲ್ಲಿನ ವೀರರು ತಮ್ಮತನವನ್ನು ಕಳೆದುಕೊಂಡು ಆ ಜನಾಂಗ ಮತ್ತು ಆ ಪರಿಸರದಲ್ಲಿ ಪುರಾಣ ವ್ಯಕ್ತಿಯಾಗಿ, ದೈವವಾಗಿ ನಿಂತುಕೊಂಡರು. ಸಮುದಾಯದ ಸಾಂಸ್ಕೃತಿಕ ವೀರರು ಮರು ಹುಟ್ಟು ಪಡೆದುಕೊಂಡರು. ಒಂದು ಸಮುದಾಯ ತನ್ನ ಸಾಂಸ್ಕೃತಿಕ ವೀರರನ್ನು ‘ಒಂದು ಸಲ ಪುರಾಣ ವ್ಯಕ್ತಿಯನ್ನಾಗಿ ಅಥವಾ ದೈವವನ್ನಾಗಿ ಚಿತ್ರಿಸಿದ ಮೇಲೆ ಅಥವಾ ಒಪ್ಪಿದ ಮೇಲೆ ಅವನನ್ನು ಯಾವ ಕಾರಣಕ್ಕೂ ಮನುಷ್ಯ ಸಹಜ ರೂಪದಲ್ಲಿ ನೋಡುವುದಕ್ಕೆ ಆ ಸಮುದಾಯ ಒಪ್ಪುವುದಿಲ್ಲ. ಬೇರೊಂದು ಸಂಸ್ಕೃತಿ ಅವನನ್ನು ಮನುಷ್ಯ ಸಹಜ ರೂಪದಲ್ಲಿ ನೋಡಿದರೆ, ಸಹಿಸುವುದೂ ಇಲ್ಲ’. ಭಾರತೀಯ ಸಂಸ್ಕೃತಿಯಲ್ಲಿ ಪೌರಾಣಿಕ ವ್ಯಕ್ತಿಗಳನ್ನು ಚಾರಿತ್ರಿಕ ವ್ಯಕ್ತಿಗಳನ್ನಾಗಿ ರೂಪಿಸುವ ಮತ್ತು ಚಾರಿತ್ರಿಕ ವ್ಯಕ್ತಿಗಳನ್ನು ಪೌರಾಣಿಕ ವ್ಯಕ್ತಿಗಳನ್ನಾಗಿಸುವುದು ಕಂಡುಬರುತ್ತದೆ. ಪ್ರಬಲವಾದ ಸಮುದಾಯಗಳು ಪೌರಾಣಿಕ ವ್ಯಕ್ತಿಗಳನ್ನು ಚಾರಿತ್ರಿಕ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ. ಇದಕ್ಕೆ ವಿರುದ್ಧವಾಗಿ ಬುಡಕಟ್ಟು ಮತ್ತು ಜನಪದ ಸಾಂಸ್ಕೃತಿಕ ವೀರರನ್ನು ಪೌರಾಣಿಕ ವ್ಯಕ್ತಿಯನ್ನಾಗಿ, ದೈವವಾಗಿ ಚಿತ್ರಿಸಿರುವುದನ್ನು ಅವರ ಈ ಕಾವ್ಯಗಳಲ್ಲಿ ಕಾಣುತ್ತೇವೆ. ಒಂದು ಸಣ್ಣ ಸಮುದಾಯದ ಸಾಂಸ್ಕೃತಿಕ ವೀರರನ್ನು ಪುರಾಣ ವ್ಯಕ್ತಿಯನ್ನಾಗಿಸಿದರೆ, ದೈವದ ಪಟ್ಟಗಟ್ಟಿದರೆ ಆ ಮೂಲಕ ಒಂದು ಸಂಸ್ಕೃತಿಯ ಜನರನ್ನು ಒಟ್ಟುಗೂಡಿಸಲು ಹೆಚ್ಚು ಅನುಕೂಲವಾಗುತ್ತದೆ. ಸಾಂಸ್ಕೃತಿಕ ವ್ಯಕ್ತಿಯನ್ನೇ ಕೇಂದ್ರವಾಗಿಟ್ಟುಕೊಂಡು ಅನೇಕ ಧಾರ್ಮಿಕ ಆಚರಣೆಗಳನ್ನು ಹೆಣೆದು ಎಲ್ಲ ಆಚರಣೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಸಮುದಾಯದ ಜನರಿಗೆ ಸೂಚಿಸುವ ಮೂಲಕ, ತನ್ನ ಸಂಸ್ಕೃತಿಯನ್ನು ಹೆಚ್ಚು ಪ್ರಬಲಗೊಳಿಸಲು ಸಾಧ್ಯವಾಗುತ್ತದೆ. ಸಾಂಸ್ಕೃತಿಕ ವೀರನ ಹೆಸರಿನಲ್ಲಿ ನಡೆಯುವ ಧಾರ್ಮಿಕ ಆಚರಣೆ, ಉತ್ಸವಗಳಲ್ಲಿ ಸಮುದಾಯದ ಜನರನ್ನೆಲ್ಲ ಒಟ್ಟು ಗೂಡಿಸುವ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹೇಗೆ ನಾವು ಬೆಳೆಯಬಹುದು ಎಂಬುದರ ಬಗೆಗೆ ಚಿಂತನೆ ಮಾಡುತ್ತಾರೆ. ಇಂದು ಅನೇಕ ಸಮುದಾಯಗಳಲ್ಲಿ ಕಂಡುಬರುವ ಕಾವ್ಯಗಳು ‘ಒಂದು ಸಮುದಾಯದ ಭೂತ ಕಾಲದಲ್ಲಿ ನಡೆದ ಸಾಂಸ್ಕೃತಿಕ ವೀರನ ಕಥೆ ಹೇಳುವ ಈ ಮಹಾಕಾವ್ಯಗಳು ಪ್ರಬಲ ಕೋಮಿನ ಪುರಾಣ ಸಂಸ್ಕೃತಿಯ ಪ್ರಭಾವಕ್ಕೊಳಗಾದದ್ದರಿಂದ ಸಾಂಸ್ಕೃತಿಕ ವೀರರು ಆ ಸಮುದಾಯದ ದೈವವಾಗಿ ನಿಂತಿದ್ದಾರೆ.’