ಒಂದು ಜನಾಂಗದ ಸಾಂಸ್ಕೃತಿಕ ವೀರ, ದೈವವಾದ ಮೇಲೆ ಹಂತಹಂತವಾಗಿ ನಮ್ಮ ಸಮುದಾಯ ಅತ್ಯಂತ ಪ್ರಾಚೀನ ಕಾಲದ್ದು, ವೇದ ಪುರಾಣಗಳಿಗಿಂತಲೂ ಹಳೆಯದು, ದೈವಿ ಶಕ್ತಿಯಿಂದ ನಮ್ಮ ಜನಾಂಗ ಬೆಳೆದು ಬಂದಿದೆ ಎಂಬ ಅನೇಕ ಸಂಗತಿಗಳು ಬೆಳೆಯುತ್ತವೆ. ಮಾಳಿಂಗರಾಯ ಕಾವ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಈ ಕಾವ್ಯ ಪುರಾಣದ ಕಲ್ಪನೆಯಲ್ಲಿಯೇ ಬೆಳೆದಿದೆ. ‘ಮಾಳಿಂಗರಾಯ ಬಸವಣ್ಣನ ಅವತಾರ. ಇದು ಅವನ ಏಳನೇ ಅವತಾರ’ ಎಂದು ಹೇಳುತ್ತಾರೆ. ಹುಲಜಂತಿಯಲ್ಲಿ ಮಾಳಿಂಗರಾಯನ ಸಮಾಧಿ ಹತ್ತಿರ ‘ಆದಿ ಬಸವಣ್ಣನ’ ಪೀಠವಿದೆ. ಮಾಳಿಂಗರಾಯ ಮೊದಲು ಬಸವಣ್ಣನಾಗಿದ್ದ. ಇಲ್ಲಿಗೆ ಬರುವ ಭಕ್ತರೆಲ್ಲ ಮೊದಲು ಈ ಬಸವಣ್ಣನ ಪೀಠಕ್ಕೆ ಪೂಜೆ ಸಲ್ಲಿಸಿ, ಮಾಳಿಂಗರಾಯನ ಗದ್ದಿಗೆಗೆ ಹೋಗುತ್ತಾರೆ ಎಂದು ಹೇಳುತ್ತಾರೆ.

‘ಯಾವ ಸಂಸ್ಕೃತಿ ಪ್ರಬಲವಾಗಿರುತ್ತದೊ ಯಾವ ಧೋರಣೆಗಳು ಬದುಕನ್ನು ಮುಖ್ಯವಾಗಿ ರೂಪಿಸುತ್ತದೊ ಅದು ಪುರಾಣಗಳ ತಿರುಳನ್ನು ನಿರ್ಧರಿಸುತ್ತದೆ. ಬೇಟೆ ಅಥವಾ ಆಹಾರ ಸಂಗ್ರಹಣೆ ಬದುಕಿನ ಮುಖ್ಯ ವಿಧಾನವಾಗಿದ್ದ ಸಮಾಜಗಳಲ್ಲಿ ಪ್ರಪಂಚ ಹೇಗೆ ಹುಟ್ಟಿತು ಎಂಬುವ ಪುರಾಣ ಪ್ರಾಣಿಗಳ ಹುಟ್ಟಿಗೆ ಪ್ರಾಮುಖ್ಯತೆ ನೀಡುತ್ತದೆ. ವ್ಯವಸಾಯ ಮುಖ್ಯವಾದ ಸಮಾಜದ ಪುರಾಣಗಳಲ್ಲಿ ಬೇಸಾಯದ ಕೆಲಸಗಳಿಗೆ ಪ್ರಾಮುಖ್ಯತೆ ಸಲ್ಲುತ್ತದೆ. ಅಷ್ಟೇ ಅಲ್ಲ ಈ ಸಂಗತಿಯನ್ನು ಅತ್ಯಂತ ಪ್ರಾಚೀನ ಕಾಲದ ಆರಂಭದಿಂದ ಅಥವಾ ಅನಾಧಿಯಿಂದ ಬೆಳೆದು ಬಂದಂತೆ ಚಿತ್ರಿಸುತ್ತವೆ’. (‘ಪುರಾಣ’, ಓ. ಎಲ್‌. ನಾಗಭೂಷಣಸ್ವಾಮಿ) ಎಂಬುದನ್ನು ಈ ಕಾವ್ಯದಲ್ಲಿಯೂ ನೋಡಬಹುದು.

            ಪ್ರಥಮದಲ್ಲಿ ಸೃಷ್ಟಿ ನಿರ್ಮಾಣ ಆದಿತೊs
ಎಂಬತ್ನಾಲ್ಕು ಲಕ್ಷ ಜೀವರಾಶಿ ಹುಟ್ಟಿತೊs
ನಾಲ್ಕು ಕಾಣೆ ತಯಾರಾಗಿ ಬತ್ತೊs
ಅಂಡಜಾ-ಪಿಂಡಜಾ ಜಲಜಾ-ಉದ್ವಿಜಾ
ಬೆಳೆ ಬಾರಲೆ ಬತ್ತೋs . . . .

ಮಾಳಿಂಗರಾಯನ ಕಾವ್ಯ ಪಶುಪಾಲನೆಯನ್ನಾಧರಿಸಿದ ಅಲೆಮಾರಿ ಜೀವಿಗಳ ಚರಿತ್ರೆ. ಈ ಕಾವ್ಯದಲ್ಲಿ ಜರಗುವ ಪ್ರಮುಖ ಘಟನೆ ಪಶು ಸಂಪತ್ತಿಗೆ ಸಂಬಂಧಿಸಿರುವಂತಹದ್ದು. ಪಶುಪಾಲನೆಯನ್ನೇ ಅವಲಂಬಿಸಿ ಬದುಕುತ್ತಿದ್ದ ಈ ಸಮುದಾಯ ಭೂಮಿಯಲ್ಲಿನ ನೀರು ಮತ್ತು ಪಶುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಹೀಗಾಗಿ ಈ ಸಮುದಾಯದ ಮೂಲ ಪುರುಷ ಮಣ್ಣಿನ ಮೂಲಕ ಹುಟ್ಟುತ್ತಾನೆ. ಅದು ದೈವೀಶಕ್ತಿ ಪ್ರೇರಣೆಯಿಂದ ಎಂದು ಈ ಕಾವ್ಯ ತಿಳಿಸುತ್ತದೆ.

            ದೇವರ ಮಾತೋ ಆಡ್ವರ ತಂತೋs
ಶಿವ ಪಾರ್ವತಿ ಕೂಡ್ಯಾರ ಕಾಂತೋs
ಪಾರ್ವತಿ ಶಂಭೋಗ ಹೇಳ್ಯಾಳ ಮಾತೋs
ಭೂಮಂಡಲದಾಗ ಕಾಡ ರುದ್ರಭೂಮಿ
ನೋಡಿ ಬರುವುನಂತೋs . . . .

‘ಇದು ಸತ್ಯಯುಗದ ಮಾತು. ಶಿವ-ಪಾರ್ವತಿ ಭೂಲೋಕಕ್ಕೆ ಇಳಿದು ಬರುತ್ತಾರೆ. ಪಾರ್ವತಿಗೆ ಕಾಡು ರುದ್ರಭೂಮಿ ನೋಡಿ ಮನಸ್ಸಿಗೆ ನಿರಾಸೆಯಾಗುತ್ತದೆ. ಅಲ್ಲಿ ಒಂದು ಮಾಯದ ವನ ನಿರ್ಮಾಣ ಮಾಡುತ್ತಾಳೆ. ಅದನ್ನು ನೋಡಿ ಪಾರ್ವತಿ ಮನಕ್ಕೆ ಹುಚ್ಚು ಹಿಡಿದು, ಮೋಹ ಹೆಚ್ಚಾಗಿ ಮೊಲೆ ಹಾಲು ಸುರಿಯುತ್ತವೆ. ಭೂದೇವಿಗೆ ಕರೆದು ಈಗ ಏನು ಮಾಡೋಣ ಎಂದಾಗ, ಅವಳ ಸಲಹೆಯಂತೆ ಮೂರು ವಿಧದ ಮಣ್ಣನ್ನು ತೆಗೆದುಕೊಂಡು ಮಲಿಹಾಲಿನಲ್ಲಿ ಮಣ್ಣು ಕಲಸಿ ಒಂದು ಹೆಣ್ಣು ಒಂದು ಗಂಡು ಗೊಂಬಿ ತಯಾರಿಸುತ್ತಾಳೆ. ಪರಮೇಶ್ವರ ಅವುಗಳಿಗೆ ಜೀವ ತುಂಬುತ್ತಾನೆ. ಅವರಿಗೆ ಮುದ್ದವ್ವ ಮುದಗೊಂಡ ಎಂದು ಹೆಸರಿಡುತ್ತಾರೆ. ಮುದ್ದವ್ವ, ಮುದಗೊಂಡರಿಂದ ಹಾಲಮತ ಬೆಳೆಯುತ್ತದೆ. ಇವರಿಬ್ಬರೂ ಪಾರ್ವತಿ-ಪರಮೇಶ್ವರರ ಮಾನಸ ಪುತ್ರರೆಂದು ಕಾವ್ಯ ಹೇಳುತ್ತದೆ.

ಈ ಕಾವ್ಯದಲ್ಲಿ ಜಕ್ಕಪ್ಪರಾಯ ಮತ್ತು ಮಾಳಿಂಗರಾಯ ಪ್ರಮುಖರು. ಇವರ ತಂದೆ ತುಕ್ಕಪ್ಪರಾಯ. ತಾಯಿ ಅಮೃತಬಾಯಿ. ಇವರು ಸಂತಾನವಿಲ್ಲದೆ ಕೊರಗುತ್ತಿರುತ್ತಾರೆ. ಸಂತಾನ ಪಡೆಯುವುದಕ್ಕೋಸ್ಕರ ಹನ್ನೆರಡು ವರ್ಷಗಳವರೆಗೆ ಕಾಡಿನಲ್ಲಿ ತಪಸ್ಸು ಮಾಡುತ್ತಿರುತ್ತಾರೆ. ಇವರ ತಪಸ್ಸು ಕಂಡು ದೇವೇಂದ್ರನಿಗೆ ನಡುಕ ಹುಟ್ಟುತ್ತದೆ. ನನ್ನ ಪದವಿಯನ್ನು ತುಕ್ಕಪ್ಪರಾಯ ಕಿತ್ತುಕೊಳ್ಳುತ್ತಾನೆಂಬ ಭೀತಿಯಿಂದ ರಂಭೆಗೆ ತಪಸ್ಸು ಭಂಗಪಡಿಸಲು ತಿಳಿಸುತ್ತಾನೆ. ರಂಭೆ ಇಪ್ಪತ್ತೊಂದು ದಿನ ಸತತವಾಗಿ ಗುಡುಗು ಸಿಡ್ಲಿನ ಮಳೆ ಬೀಳಿಸುತ್ತಾಳೆ. ಅವಳಿಂದ ತಪಸ್ಸು ಭಂಗ ಪಡಿಸಲಾಗುವುದಿಲ್ಲ. ಅವರ ತಪಸ್ಸಿಗೆ ಪರಮೇಶ್ವರ ಮೆಚ್ಚಿ ಒಂದು ಜಪಮಣಿ ಮತ್ತು ಮಾಣಿಕಮಣಿ ನೀಡುತ್ತಾನೆ. ಇವುಗಳನ್ನು ಪೂಜಿಸಿದರೆ ಎರಡು ಮಕ್ಕಳು ಹುಟ್ಟುತ್ತವೆ ಎಂದು ಹೇಳುತ್ತಾನೆ. ಜಪಮಣಿ ಪೂಜೆಯಿಂದ ಜಗನ್ನಾಥನ ಅವತಾರವಾದ ಜಕ್ಕಪ್ಪರಾಯ, ಮಾಣಿಕಮಣಿ ಪೂಜೆಯಿಂದ ಬಸವಣ್ಣನ ಅವತಾರವಾದ ಮಾಳಪ್ಪರಾಯ ಹುಟ್ಟುತ್ತಾರೆ. ಜಕ್ಕಪ್ಪ ಮತ್ತು ಮಾಳಪ್ಪ ಇಬ್ಬರೂ ವೀರರಾಗಲು ದೈವದ ಅವತಾರವೇ ಕಾರಣ. ದೈವೀಶಕ್ತಿಯಿಂದ ಜನಿಸಿದ ಇವರು ಪ್ರಾರಂಭದಿಂದಲೇ ಅನೇಕ ಪವಾಡಗಳನ್ನು ಮಾಡುತ್ತಾರೆ. ಮಾಳಪ್ಪ ಮೂರು ವರ್ಷ ಚಿಕ್ಕವನಿದ್ದಾಗ ಹಾವು ಕಡಿದ ಬಾಲಕನನ್ನು ಬದುಕಿಸುತ್ತಾನೆ. ಹಾವನ್ನು ಕೈಯಲ್ಲಿ ಹಿಡಿದು ಅದರ ಸೊಕ್ಕಡಗಿಸಿ ಸದಾ ನನ್ನ ಕೈಯಲ್ಲಿ ನಾಗಬೆತ್ತವಾಗಿ ಇರಬೇಕಂದು ಆಜ್ಞೆ ಮಾಡುತ್ತಾನೆ. ಏಳತಲಿ ಗುರು ಸೋನಾರ ಸಿದ್ಧ ಇವರನ್ನು ಕಂಡು ಇವರಿಬ್ಬರು ಅವತಾರ ಪುರುಷರು ಎಂದು ಹೊಗಳುತ್ತಾನೆ. ಮಾಳಪ್ಪ ಚಿಕ್ಕವನಿದ್ದಾಗಲೇ ಭವಿಷ್ಯ ಹೇಳುತ್ತಾನೆ.

            ಮಾಳಪ್ಪ ಹೇಳ್ತಾನ ಅಣ್ಣ ಜಕ್ಕಪ್ಪನ ಬಲ್ಯಕs
ಬರಗಾಲ ಬೀಳೊದು ಅಣ್ಣಾ ಬಾರಾಮತಿ ಭಾಗಕs . . . .

ಜನಪದ ಮತ್ತು ಬುಡಕಟ್ಟು ಕಾವ್ಯಗಳಲ್ಲಿ ಬರುವ ಸಾಂಸ್ಕೃತಿಕ ವೀರರನ್ನು ಚಿತ್ರಿಸುವಾಗ ಅವರು ಸಣ್ಣ ಬಾಲಕರಿದ್ದಾಗಲೇ ಅನೇಕ ಶಕ್ತಿ ಪಡೆದುಕೊಂಡಿರುವುದನ್ನು ಅವರಲ್ಲಿ ಅಡಗಿರುವ ದೈವೀಶಕ್ತಿಯನ್ನು ಪ್ರಾರಂಭದಿಂದಲೇ ಪ್ರಕಟಪಡಿಸತೊಡಗಿರುವುದನ್ನು ಕಾಣುತ್ತೇವೆ.

ತುಕ್ಕಪ್ಪರಾಯ, ಸೋಮರಾಯ ಅಣ್ಣ ತಮ್ಮಂದಿರು. ಬಾರಾಮತಿ ಮತ್ತು ತೇರಾಮತಿ ಪಟ್ಟಣಗಳನ್ನು ಆಳುತ್ತಿರುತ್ತಾರೆ. ಇವರು ಪಾಳೆಗಾರರಾಗಿರಬಹುದು ಅಥವಾ ಗೌಡರಾಗಿ ಕಾರ್ಯನಿರ್ವಹಿಸುತ್ತಿರಬಹುದು. ಗೋವು ಸಾಕಾಣಿಕೆ ಇವರ ಪ್ರಧಾನ ಕಸುಬಾಗಿತ್ತು. ಪಶುಗಳೇ ಅವರ ಪ್ರಧಾನ ಸಂಪತ್ತು. ಪಶುಗಳೇ ಅವರ ಜೀವನಾಧಾರ. ಪಶುಗಳ ಲಾಲನೆ-ಪಾಲನೆ ಅವರಲ್ಲಿ ಕಂಡುಬರುವುದು ಸಹಜ. ಒಂದು ಸಲ ಇವರು ಸಾಕಿದ ಏಳುನೂರು ಗೋವುಗಳಿಗೆ ಉಚಕಿಬೇನೆ, ಮಬ್ಬುಬೇನೆ, ಸಂದಗಿ ಶೂಲಬೇನೆ ಬಂದು ಹುಲ್ಲು ನೀರು ಮುಟ್ಟದೆ ರಕ್ತವನ್ನೇ ಹಿಂಡುತ್ತಿರುತ್ತವೆ. ಸೋಮರಾಯ ಗೌಳಿಗರು ಆರಾಧಿಸುತ್ತಿದ್ದ ದೇವತೆಯ ಭಸ್ಮವನ್ನು ಆಕಳುಗಳ ಮೇಲೆ ಹಾಕಿ ಶುಕ್ರವಾರ ದಿವಸ ದೇವಿಗೆ ನರಬಲಿ ಕೊಡುತ್ತೇನೆಂದು ಬೇಡಿಕೊಳ್ಳುತ್ತಾನೆ ಮತ್ತು ತಾಮಟಗೇರಿ ಹೆಣ್ಣಿನ ಒಬ್ಬ ಮಗನನ್ನು ಬಲಿ ಕೊಡುತ್ತಾನೆ. ಇವರು ಪಶು ಸಂಪತ್ತು ಕಾಪಾಡಿಕೊಳ್ಳಲು ಯಾವ ಕಾರ್ಯಕ್ಕೂ ಸಿದ್ಧರಾಗಿದ್ದರು.

ಆ ಪ್ರದೇಶಕ್ಕೆ ಬರಗಾಲ ಬಿದ್ದಾಗ ಪಶುಪಾಲನೆಗಾಗಿ ತುಕ್ಕಪ್ಪರಾಯ ಹೊರಡುತ್ತಾನೆ. ಅವರು ಈ ಪಶುಪಾಲನೆಯೇ ನಮ್ಮ ಗುರುವಿನ ಸೇವೆ ಎಂದು ನಂಬಿರುತ್ತಾರೆ.

            ಗುರುವಿನ ಕಿಲ್ಹಾರ ಈಗ ನಮ್ಹಂತೇಕs
ಮರುಗತಾವ ನೋಡ ತಮ್ಮಾ ಹೊಟ್ಟಿಗಿ ಇಲ್ಲದಕs
ಅಷ್ಟ ಐಶ್ವರೀ ಬೇಕೋ ಯಾತಕs
ಕಿಲ್ಲಾರ ಸಲುವಾಗಿ ನಾವು ಊರ ಬೀಡಬೇಕs
ತುಕ್ಕಪ್ಪ ಹೇಳ್ತಾನ ಸೋಮರಾಯನ ಬಲ್ಲೇಕs
ನಿಷ್ಟುರಾಗಿ ಹೊಂಟಾರ ಕಿಲ್ಲಾರ ಮೇಸುದಕs…..

ಪಶುಪಾಲಕರಾದ ತುಕ್ಕಪ್ಪರಾಯ ಮತ್ತು ಸೋಮರಾಯ ಕಾಡುಗಳಲ್ಲಿಯೇ ಹೆಚ್ಚು ಅಲೆದಾಡುತ್ತಿದ್ದರು. ಕಾಡುಪ್ರಾಣಿಗಳಿಂದ ಗೋವುಗಳ ರಕ್ಷಣೆಗೋಸ್ಕರ ಬಿಲ್ಲು ಬಾಣಗಳನ್ನು ಒಯ್ಯುತ್ತಿದ್ದರು. ಬಿಲ್ಲು ವಿದ್ಯೆಯನ್ನು ಚೆನ್ನಾಗಿ ಅರಿತವರಾಗಿದ್ದರು. ಸೋಮರಾಯ ತನ್ನ ಮಕ್ಕಳಾದ ಜಕ್ಕಪ್ಪ ಮಾಳಪ್ಪನನ್ನು ಪಶುಪಾಲನೆಗಾಗಿ ಕರೆದುಕೊಂಡು ಹೋಗಿರುತ್ತಾರೆ. ಹಸುಗಳನ್ನು ಮಾನ ನದಿಯ ದಂಡೆಯಲ್ಲಿ ಮೇಯಿಸುತ್ತಾ ಉಪಧ್ಯಾರ ಹಟ್ಟಿಗೆ ಬರುತ್ತಾರೆ. (ಉಪಧ್ಯಾರ ಹಟ್ಟಿಗೆ ಉಮ್ರಜ ಎಂದು ಕರೆಯುತ್ತಾರೆಂದು ಅಡಿವೆಪ್ಪನವರ ಹೇಳಿಕೆ) ಅಲ್ಲಿಂದ ಬೋರಿನದಿ ಮತ್ತು ಭೀಮಾ ನದಿ ಸಂಗಮದಲ್ಲಿ ವಾಸಿಸುತ್ತಾರೆ. ಈ ಪ್ರದೇಶವನ್ನು ‘ಸಂಗನಾಥನ ಮುರಿ’ ಎಂದು ಕರೆಯುತ್ತಾರೆ. ಸಂಗಮನಾಥನ ಮುರಿ ಸಮೀಪದಲ್ಲಿದ್ದ ಕಳ್ಳರ ಹಟ್ಟಿಯಲ್ಲಿ ಏಳುನೂರು ಜನ ಬೇಡರು ವಾಸವಾಗಿರುತ್ತಾರೆ. ಬೇಡರು ಸೋಮರಾಯ ತುಕ್ಕಪ್ಪರಾಯರ ಪಶುಸಂಪತ್ತನ್ನು ಅಪಹರಿಸಲು ಯೋಚಿಸುತ್ತಾರೆ. ತುಕ್ಕಪ್ಪರಾಯ ಒಬ್ಬನೆ ಇದ್ದದ್ದನ್ನು ಕಂಡು ಬೇಡರು ಹಸುಗಳನ್ನು ಅಪಹರಿಸುತ್ತಾರೆ. ತುಕ್ಕಪ್ಪರಾಯ ಹಸುಗಳನ್ನು ರಕ್ಷಿಸಲು ಅಸಹಾಯಕನಾಗಿ ಬೇಡರಿಂದ ಸಾಯುವುದಕ್ಕಿಂತ ನಾನೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸೋಮರಾಯನಿಗೆ ವಿಷಯ ತಿಳಿದು ಅಣ್ಣನ ಹತ್ತಿರ ಬರುತ್ತಾನೆ. ಜಕ್ಕಪ್ಪ ಮತ್ತು ಮಾಳಪ್ಪ ಹಸುಗಳನ್ನು ಅಪಹರಿಸಿದ ಬೇಡರ ತಲೆ ಕಡಿಯುತ್ತೇವೆ ಎಂದು ತಂದೆಗೆ ವಚನ ಕೊಡುತ್ತಾರೆ.

ಬ್ಯಾಡರ್ನ ಹುಡುಕ್ಯಾಡಿ ಚಂಡ ಕಡಿತೇವ ಕೂಗ್ಯಾಡೀs
ಚಂಡಿನ ಮೇಲೆ ಚಕ್ರಗಟ್ಟಿ ಕಟ್ಟಿತೆವೋs
ರುದ್ದರ ಗಟ್ಟಿ ಮ್ಯಾಲ ಮಾಡೀs
ಆಗು ಹೋಗುವ ಭವಿಷ್ಯ ಹೇಳತೇವ ತಂದೀs
ಕೇಳಪ್ಪ ಮುಂದಿನ ನುಡಿ ನುಡೀs……

ಪಶುಸಂಪತ್ತು ಅಪಹರಿಸಲು ಮತ್ತು ತಂದೆಯ ಸಾವಿಗೆ ಕಾರಣರಾದ ಬೇಡರನ್ನು ಸಂಹರಿಸಲು ಜಕ್ಕಪ್ಪ ಮಾಳಪ್ಪ ಪಣ ತೊಡುತ್ತಾರೆ (ಕಳ್ಳರಕವುಟಿ-ಬೇಡರು ವಾಸಿಸುತ್ತಿದ್ದ ಸ್ಥಳ. ಇದಕ್ಕೆ ಸಾಳೇರ ಹಟ್ಟಿ (ಸೊಲ್ಲಾಪುರ ಜಿಲ್ಲೆ) ಎಂದು ಕರೆಯುತ್ತಾರೆಂದು ಅಡಿವೆಪ್ಪ ಹೇಳುತ್ತಾರೆ) ಏಳ್ನೂರು ಬೇಡರನ್ನು ಸಂಹರಿಸಲು ಸೈನ್ಯವನ್ನು ಕೂಡಿಸಲು ಪ್ರಯತ್ನಿಸುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಸೋನಾರಿ ಸಿದ್ಧ ಇವರನ್ನು ಪರೀಕ್ಷಿಸಲು ಶಾಡಬಾಬಾನ ಗುಡ್ಡಕ್ಕೆ ಬರುತ್ತಾನೆ. ಬಂಜೆ ಕಪಿಲೆ ಆಕಳ ಹಾಲುಬೇಕೆಂದು ಸೋಮರಾಯನಿಗೆ ಕೇಳುತ್ತಾನೆ. ಈ ಸಿದ್ಧರಿಗೆ ಗಾಂಜಾದ ನಶೆ ಏರಿದೆರೆ ಯಾರನ್ನು ಯಾವ ಕಾಲಕ್ಕೆ ಹೇಗೆ ಪರೀಕ್ಷೆಗೊಳಪಡಿಸುತ್ತಿದ್ದರೆಂಬುದು ತಿಳಿಯುತ್ತದೆ.

ನಿನ್ನ ಯೋಳು ನೂರು ಆಕಳುಗಳಲ್ಲಿ
ಒಂದು ಕರಿ ಕಾಮದೇನು ಕಪಿಲೆ ಆಕಳೈತಿ
ಅದಕ್ಕ ಹುಟ್ಟಿದವರೆಗಿನಿಂದ ಹೋರಿ ಹಾರಿಲ್ಲಾs
ಇನ್ನ ಅದಕ್ಕ ಹೋರಿ ಮುಟ್ಟಿಲ್ಲಾs
ಅದು ಕಪಿಲೆ ಆಕಳೈತಿ
ಆ ಕಪಿಲೆ ಆಕಳ ಜರ್ ಕಡತಾ
ನೀ ಹಿಂಡಿ ನನಗೆ ಹಾಲು ಕೊಟ್ಟಿದ್ರs
ಮಗನ ನಂದು ಹಸಿವು ತೃಪ್ತಿ ಆಕೈತೆಂದು…..

ಕಪಿಲೆ ಆಕಳ ಹಾಲನ್ನು ಸೋನಾರಿ ಸಿದ್ಧ ಮತ್ತು ಅವನ ಏಳುನೂರು ಶಿಷ್ಯರು ಕುಡಿದು ತೃಪ್ತರಾಗಿ ಸೋಮರಾಯನ ಹೆಂಡತಿ ಕಣ್ಣವ್ವನನ್ನು ಪರೀಕ್ಷಿಸಲು ಯತ್ನಿಸುತ್ತಾನೆ. ಆ ಸಂದರ್ಭದಲ್ಲಿ ಏಳುನೂರು ಆಕಳುಗಳನ್ನು ಗುಡ್ಡದಲ್ಲಿ ಬಿಟ್ಟು ಮನೆಗೆ ಹೋಗೋಣ ಎಂದಾಗ ಸೋಮರಾಯ ಒಪ್ಪುವುದಿಲ್ಲ. ಪಶುಸಂಪತ್ತೇ ಅವರ ಮೂಲ ಆಸ್ತಿಯಾದದ್ದರಿಂದ ನಿರಾಕರಿಸುತ್ತಾನೆ. ಸೋನಾರಿ ಸಿದ್ಧ “ಎಲ್ಲೋ ಮಗನs ಅವು ಗೋವು ನಿನ್ನವಾ ಅಥವಾ ನನ್ನುವ ಅಂದಾಕರs ಅವು ಗೋವುಗಳೆಲ್ಲಾ ನಿನ್ನವೇ ಅವುಗಳ ಸಂರಕ್ಷಣ ಮಾಡು ಕರ್ತವ್ಯನಂದು ನೀನು ನನಗೆ ಬಂಗಾರದ ಕರಾ ಕೊಡಬಹುದು ಆದ್ರ ನಾ ಬರೋದಿಲ್ಲ” ಎಂದು ಗುರುವಿಗೆ ಹೇಳುತ್ತಾನೆ. ಸೋಮರಾಯನಲ್ಲಿ ‘ಗುರುವಿಗಿಂತ ಪಶು ಸಂಪತ್ತೇ ದೊಡ್ಡದು’ ಎಂಬ ಭಾವನೆ ಇರುವುದನ್ನು ಗಮನಿಸಬಹುದು.

ಈ ಕಾವ್ಯದಲ್ಲಿ ಪುರುಷ ಪಾತ್ರಗಳು ಪಿತೃಪ್ರಧಾನ ದೇವತೆಗಳನ್ನು ಆರಾಧಿಸಿದರೆ. ಸ್ತ್ರೀ ಪಾತ್ರಗಳು ಮಾತೃಪ್ರಧಾನ ಶಕ್ತಿದೇವತೆಗಳ ಆರಾಧನೆ ಮಾಡುವುದನ್ನು ಕಾಣುತ್ತೇವೆ. ‘ಶಿಲಾಯುಗದ ಎಲ್ಲ ದೇವತೆಗಳೂ ಸ್ತ್ರೀಯರೇ. ಪಶುಪಾಲನೆ ಆರಂಭಗೊಂಡು ಪುರುಷರ ಕೈಗೆ ಪಶು ಸಂಪತ್ತು ಸೇರಿಹೋಗಿ ಪಿತೃಸ್ವಾಮ್ಯ ಸಮಾಜ ಹುಟ್ಟಿಕೊಂಡ ನಂತರವಷ್ಟೇ ಪುರುಷ ದೇವತೆಗಳು ಬಂದದ್ದು’ (ಪ್ರಾಚೀನ ಭಾರತ ಚರಿತ್ರೆ, ಮೂಲ : ಬಾಲಗೋಪಾಲ ಅನು: ಎಚ್‌. ಎಸ್‌. ಶ್ರೀಮತಿ) ಮಹಾರಾಷ್ಟ್ರದಲ್ಲಿ ಮಾತೃದೇವತೆಗಳ ಆರಾಧನೆಯೇ ಹೆಚ್ಚು ಪ್ರಬಲವಾಗಿತ್ತು. ಕೊಲ್ಲಾಪುರದ ಮಹಾಲಕ್ಷ್ಮಿ, ತುಳಜಾಪುರದ ಅಂಬಾಭವಾನಿ. ಸವದತ್ತಿ ಎಲ್ಲಮ್ಮ ಮತ್ತು ಜಗದಂಬೆ ಇವರು ಮಹಾರಾಷ್ಟ್ರದಲ್ಲಿ ಪ್ರಬಲ ಶಕ್ತಿ ದೇವತೆಗಳು. ಪ್ರತಿ ಹಳ್ಳಿಗಳಲ್ಲಿಯೂ ಅನೇಕ ಮಾತೃದೇವತೆಗಳು ಇದ್ದರೂ ಪಶುಪಾಲನೆಯ ಕಾಲಕ್ಕೆ ಮಾತೃ ಪ್ರಧಾನ ವ್ಯವಸ್ಥೆಯೇ ಹೆಚ್ಚು ಪ್ರಚಲಿತವಿತ್ತು. ಸ್ತ್ರೀಯರಲ್ಲಿ ಲೌಕಿಕ ಜ್ಞಾನದ ಬಗೆಗೆ ತಿಳುವಳಿಕೆ ಹೆಚ್ಚಿತ್ತು. ಹೀಗಾಗಿ ಸ್ತ್ರೀಯರನ್ನು ಲೌಕಿಕವಾದಿಗಳು ಎಂದು ಕರೆದಿರಬಹುದು. ಸ್ತ್ರೀಯರು ವಿದ್ಯೆಗಿಂತ ಜೀವನಾನುಭವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದರು. ಸಂಸಾರದ ಪ್ರತಿಯೊಂದು ಜವಾಬ್ದಾರಿಯನ್ನು ಇವಳೇ ನಿಭಾಯಿಸುತ್ತಿದ್ದಳು. ಹೀಗಾಗಿ ಮಾತೃಪ್ರಧಾನ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿತ್ತು. ಈ ಕಾವ್ಯದಲ್ಲಿ ಮಾತೃಪ್ರಧಾನ ವ್ಯವಸ್ಥೆಯ ಬಗೆಗೆ ಚಿತ್ರಣವಿದೆ. ‘ಬಾರಾಮತಿ ತೇರಾಮತಿ ಪಟ್ಟಣದ ಅರಸರಾದ ತುಕ್ಕಪ್ಪರಾಯ ಸೋಮರಾಯ ಬರಗಾಲ ಬಿದ್ದಾಗ ಪಶುಗಳನ್ನು ರಕ್ಷಿಸುವ ಸಲುವಾಗಿ ಊರು ಬಿಟ್ಟು ಹೋಗುತ್ತಾರೆ. ತುಕ್ಕಪ್ಪರಾಯ ತನ್ನ ಎರಡೂ ಪಟ್ಟಣಗಳ ಆಡಳಿತ ಜವಾಬ್ದಾರಿಯನ್ನು ತನ್ನ ಹೆಂಡತಿ ಅಮೃತಬಾಯಿಗೆ ನಿರ್ವಹಿಸಲು ತಿಳುಸುತ್ತಾನೆ.’ ಛತ್ರಪತಿ ಶಿವಾಜಿ ಮಹಾರಾಜನಿಗೆ ಅಂಬಾಭವಾನಿ ಖಡ್ಗ ನೀಡಿದ್ದನ್ನು. ಇಲ್ಲಿ ನೆನಪಿಸಿಕೊಳ್ಳಬಹುದು. ಪಶುಪಾಲನೆ ಪುರುಷರ ಕೈಗೆ ಸೇರಿ ಕೃಷಿ ಆರಂಭವಾದ ಮೇಲೆ ಮಾತೃಪ್ರಧಾನ ವ್ಯವಸ್ಥೆ ಕುಂಟಿತಗೊಳ್ಳತೊಡಗಿತು. ಪುರುಷರು ಸ್ತ್ರೀಗಿಂತ ಹೆಚ್ಚು ಶಕ್ತಿವಂತರು. ಶತೃಗಳ ಜೊತೆ ಹೋರಾಡಲು ಶಕ್ತರಾದವರು. ಶಕ್ತಿಯುತ ಕೆಲಸಗಳನ್ನು ಮಾಡಲು ಪುರುಷರೇ ಸಮರ್ಥರು. ವಿದ್ಯೆ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಈ ಎಲ್ಲ ಅಂಶಗಳಿಂದಲೇ ಪಿತೃಪ್ರಧಾನ ವ್ಯವಸ್ಥೆ ಜಾರಿಯಲ್ಲಿ ಬರತೊಡಗಿತು. ಇದರ ಜೊತೆಯಲ್ಲೇ ಪಿತೃಪ್ರಧಾನ ದೇವತೆಗಳ ಆಚರಣೆಯೂ ಪ್ರಾರಂಭವಾಯ್ತು. ಸಿದ್ಧರು ಹೆಣ್ಣನ್ನು ತಮ್ಮ ಶಕ್ತಿಯನ್ನು ವೃದ್ಧಿಸುವುದಕ್ಕೋಸ್ಕರ ಬಳಸುತ್ತಿದ್ದರು. ಜಗತ್ತನ್ನಾಳುವ ಶಕ್ತಿ, ಕ್ಷುದ್ರ ದೇವತೆಗಳಲ್ಲಿದೆ ಎಂಬ ಕಾರಣಕ್ಕಾಗಿ ಅವಳನ್ನು ಆರಾಧಿಸುತ್ತಿದ್ದರು.

ಈ ಕಾವ್ಯದಲ್ಲಿ ಸೋನಾರಿ ಸಿದ್ಧ ಕಣ್ಣವ್ವನನ್ನು ಪರೀಕ್ಷಿಸಲು ಬರುವುದರ ಬಗೆಗೆ ತುಳಜಾಪುರದ ಅಂಬಾಭವಾನಿ ಎಚ್ಚರಿಕೆ ನೀಡುತ್ತಾಳೆ. ಕಣ್ಣವ್ವ ನಿದ್ದೆಯಿಂದೆದ್ದು ಹುಲ್ಲಕ್ಕಿ ತೆಗೆದುಕೊಂಡು ನೆಲ್ಲಕ್ಕಿ ಬಾನ ಮಾಡಿ ಸೋನರಿ ಸಿದ್ಧರಿಗೆ ಊಟಕ್ಕೆ ಬಡಿಸಲು ಸಿದ್ಧಳಾಗುತ್ತಾಳೆ. ಅವಳನ್ನು ಪರೀಕ್ಷಿಸುವುದಕ್ಕೋಸ್ಕರ ತನ್ನ ಮಾಯೆಯಿಂದ ಏಳುನೂರು ಜನ ಸಿದ್ಧರು ಉದ್ಭವಿಸುವಂತೆ ಮಾಡಿ ಅವರಿಗೂ ಊಟಕ್ಕೆ ಬಡಿಸಲು ಹೇಳುತ್ತಾನೆ. ಕಣ್ಣವ್ವನಿಗೆ ಆಘಾತವಾಗುತ್ತದೆ. ಅಂಬಾಭವಾನಿ ಅವಳನ್ನು ರಕ್ಷಿಸುವುದಕ್ಕೋಸ್ಕರ ತಾನೇ ಸ್ವತಃ ಬಂದು ಅವಳ ಕಷ್ಟ ಪರಿಹಾರ ಮಾಡುತ್ತಾಳೆ. ಈ ಕಾವ್ಯದುದ್ದಕ್ಕೂ ಸಿದ್ಧರು, ದೇವ – ದೇವತೆಗಳು ಸೋಮರಾಯ, ಕಣ್ಣವ್ವ, ಜಕ್ಕಪ್ಪ, ಮಾಳಪ್ಪನನ್ನು ಒಂದಲ್ಲ ಒಂದು ರೀತಿಯ ಪರೀಕ್ಷೆಗೆ ಒಳಪಡಿಸುತ್ತಾ, ಆ ಪರೀಕ್ಷೆಗಳ ಮೂಲಕ ಅವರಲ್ಲಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸುತ್ತಾರೆ. ಸೋನಾರಿ ಸಿದ್ಧ ಶಾಡಬಾಬಾನ ಗುಡ್ಡದಲ್ಲಿ ಎಲ್ಲರಿಗೂ ಗಾರುಡಿ ವಿದ್ಯೆ ಕಲಿಸುತ್ತಾನೆ.

ಜಕ್ಕಪ್ಪ ಮಾಳಪ್ಪ ದಿಲ್ಲಿ ಬಾದಶಾನ ಅರಮನೆಯಲ್ಲಿ ತಮ್ಮ ಪವಾಡ ತೋರಿಸುತ್ತಾರೆ. ಮುಂದೆ ಹರನಾಪುರ ಎಂಬ ಪಟ್ಟಣ ಕಟ್ಟಿ ಹನ್ನೆರಡು ವರ್ಷ ರಾಜ್ಯವಾಳಿ ಇಪ್ಪತ್ನಾಲ್ಕು ಸಾವಿರ ಸೈನ್ಯ ತಿಗೆದುಕೊಂಡು ಭೀಮಾನದಿ ದಾಟಿ ಮಂಗ್ಯಾನಹಟ್ಟಿಗೆ (ಮಂಗ್ಯಾನಹಟ್ಟಿ > ಮಂಗಳವೇಡ) ಬರುತ್ತಾರೆ. ಅಲ್ಲಿ ಅಡಗಿದ್ದ ಏಳನೂರು ಜನ ಬೇಡರ ತಲೆ ಕಡಿದು, ರುಂಡಗಳನ್ನು ಉಪದ್ಯಾರ ಹಟ್ಟಿಗೆ ತಂದು, ತಗ್ಗಿನಲ್ಲಿ ರುಂಡಗಳನ್ನು ಹಾಕಿ, ಅದರ ಮೇಲೆ ಚಕ್ರಗಟ್ಟಿ ಕಟ್ಟಿ ಭಾರತ ಹುಣ್ಣಿಮೆಯ ದಿನ ಬೆಳಿಗ್ಗೆ ನಾಲ್ಕು ಗಂಟೆ ಮೂವತ್ತ ನಿಮಿಷಕ್ಕೆ ಹನ್ನೊಂದು ಜನ ರುದ್ರರೊಂದಿಗೆ ಸೇರಿಕೊಂಡು ಮಾಳಿಂಗರಾಯ ಭವಿಷ್ಯ ಹೇಳುತ್ತಾನೆ. ಹಸುಗಳನ್ನು ಅಪಹರಿಸಲು ಯತ್ನಸುವುದರ ಮೂಲಕ ತುಕ್ಕಪ್ಪರಾಯನ ಸಾವಿಗೆ ಕಾರಣರಾದ ಬೇಡರ ನಿರ್ನಾಮ ಮಾಡಲು ಶಪಥ ಮಾಡಿರುವುದೆ ಕಾವ್ಯದ ಮೂಲ ಕಥೆ.

ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಉಮ್ರಜ ಗ್ರಾಮದಲ್ಲಿರುವ ರೇವಣ ಸಿದ್ದೇಶ್ವರ ದೇವಸ್ಥಾನ ಅದು ಮೊದಲಿಗೆ ತುಕ್ಕಪ್ಪರಾಯನ ದೇವಸ್ಥಾನವೇ ಆಗಿತ್ತು. ಈ ಮಂದಿರದ ಮುಂದೆಯೆ ಏಳುನೂರು ಜನ ಬೇಡರ ತಲೆ ಕಡಿದು ಚಕ್ರಗಟ್ಟಿ ಕಟ್ಟಲಾಗಿತ್ತು ಎಂದು ಅಡಿವೆಪ್ಪ ಒಡೆಯರ ಅಭಿಪ್ರಾಯ ಪಡುತ್ತಾರೆ.

ತಂದೆ ತುಕ್ಕಪ್ಪರಾಯರಿಗೆ ನೀಡಿದ ವಚನ ಪೂರೈಸಿ, ಜಕ್ಕಪ್ಪ ತನ್ನ ಗುರು ಸೀಗಿ ಮಠದಲ್ಲಿರುವ ಬರಮಲಿಂಗನ ಹತ್ತಿರ ಹೋಗಿ ಸೇವೆಗೆ ನಿಲ್ಲುತ್ತಾನೆ. ಮಾಳಪ್ಪ ಬೀರಣ್ಣನ ಹತ್ತಿರ ಹೋಗಿ ಸೇವೆ ಮಾಡುತ್ತಾನೆ. ಮಾಳಪ್ಪನಿಗೆ ಸಿಡಿಯಾಣ ಶಿವಮನೆ, ಹುನ್ನೂರು ಗುರು ಮನೆಯಾಗಿರುತ್ತದೆ. ಈ ಕಾವ್ಯದ ಕಥೆ ಪಾಂಡವರ ಚರಿತ್ರೆಯ ಹತ್ತಿರವೂ ಸುಳಿಯುತ್ತದೆ. ಬೀರಣ್ಣ ತನ್ನ ಶಿಷ್ಯನ ಭಕ್ತಿ ಮತ್ತು ಶಕ್ತಿ ಪರೀಕ್ಷಿಸಲು ನನಗೆ ಪಾಂಡವರ ಕೋಟೆಯಲ್ಲಿರುವ ಹುಳು ಮುಟ್ಟದ ಹೂವು ಕಾಯಿಗಳಿಂದ ಪೂಜೆ ಮಾಡಬೇಕೆಂದು ಹೇಳುತ್ತಾನೆ. ಗುರುವಿನ ಆಜ್ಞೆಯನ್ನು ಪಾಲಿಸಲು ಮಾಳಿಂಗರಾಯ ಪಾಂಡವರ ಕೋಟೆಗೆ ಹೋಗುತಿರುತ್ತಾನೆ. ಮಾಳಪ್ಪನನ್ನು ತಡೆಯಲು ಬೀರಣ್ಣ ಹಾವು ಚೇಳು ಸೃಷ್ಟಿ ಮಾಡಿ ವಿಷದ ಮಳೆ ಸುರಿಸುತ್ತಾನೆ. ಮಾಳಪ್ಪ ಭಕ್ತಿ ಧೈರ್ಯದಿಂದ ಎದುರಿಸಿ ಪಾಂಡವರ ಕೋಟೆಗೆ ನುಗ್ಗಿ ಅಲ್ಲಿಯ ಹುಳು ಮುಟ್ಟದ ಹೂವು ಕಾಯಿ ತೆಗೆದುಕೊಂಡು, ಬಂದಿಖಾನೆಯಲ್ಲಿಟ್ಟಿದ್ದ ಸಿದ್ಧರನ್ನು ಬಿಡಿಸಿ, ಧರ್ಮರಾಜನಿಗೆ ಹೊಯ್ಕಳ ಹೇಳಿ ಸಿಡಯಾಣಕ್ಕೆ ಬಂದ, ಗುರುವಿನ ಪೂಜೆ ಮಾಡುತ್ತಾನೆ. ತನ್ನ ಭಕ್ತಿ ಶಕ್ತಿಯಿಂದ ಗುರುವಿನ ಪ್ರೀತಿಗೆ ಪಾತ್ರನಾಗುತ್ತಾನೆ. ಬೀರಪ್ಪ ಮಾಳಪ್ಪನ ಶಕ್ತಿಯನ್ನು ಇನ್ನಷ್ಟು ಪ್ರಕಟಗೊಳಿಸುವುದಕ್ಕೋಸ್ಕರ ನನಗೆ ಹುಲಿಗಿಣ್ಣ ತಿನ್ನುವ ಆಶೆಯಾಗಿದೆ. ಎಂದು ಹೇಳುತ್ತಾನೆ.

            ಹುಲಿ ಗುಡ್ಡಕ್ಕೆ ಹೋಗಿದ್ದ ಮಾಳಣ್ಣಾs
ಹುಲಿಯಾಗ ಕೂಗ್ಯಾನ ಗುಡದಾಗೇನs
ಗುಡಗಿನ ಸಪ್ಪಳ ಕೇಳಿ ಹುಲಿ ಬಂತೇನs
ಹುಲಿ ಹಾಲ ಹಿಂಡಿ ಕೊಂಡಾನs
ಹುಲಿಗಿ ವರವ ತಾ ಕೊಟ್ಟಾನs
ಗುರುವಿಗಿ ಉಣಸ್ಯಾನs
ತಂದ ಹುಲಿಗಿಣ್ಣಾs……

ಮಾಳಪ್ಪನನ್ನು ‘ವೀರ ಮಾಳಪ್ಪ, ವೀರ ಮಾಳಿಂಗರಾಯ, ಕರಿ ಹುಲಿ ಮಾಳಿಂಗರಾಯ’ ಎಂದೂ ಕರೆದಿದ್ದಾರೆ. ಹುಲಿಗಿಣ್ಣ ಉಣಿಸುವ ಮತ್ತು ಹುಲಿಗಳನ್ನು ಸಾಕುವುದರ ಮೂಲಕ ಇವನೊಬ್ಬ ವೀರನಾಗಿದ್ದ ಎಂದು ಹೇಳಬಹುದು. ಗುರುವಿನ ಇಷ್ಟಾರ್ಥ ಪೂರೈಸಿ ಮಾಳಿಂಗರಾಯ

            ನಾರಾಯಣಪುರಕ್ಕೆ ಬಂದು
ಹುಲಿ ಉಗರ ತೆಗೆದು ಅಗಸಿ ಕಟ್ಟಿಸ್ಯಾನಾs
ಹುಲಿ ಮುಖದಾಗ ಶ್ರೀ ಹುಲಜಂತಿ ಅನಿಸಿ
ನೆಲಿಸಿದೊ ತಾ ಮಾಳಣ್ಣಾs…..

ಹುಲಿ ಉಗುರನ್ನು ಮಕ್ಕಳ ಕೊರಳಲ್ಲಿ ಕಟ್ಟುವ ಸಂಪ್ರದಾಯವಿದೆ. ಮಕ್ಕಳಿಗೆ ಧೈರ್ಯ ಬರಲಿ ಮತ್ತು ದುಷ್ಟರ ಕಣ್ಣುಗಳು ಅವರ ಮೇಲೆ ಬೀಳದಿರಲಿ ಎಂಬ ಉದ್ದೇಶಕ್ಕಾಗಿ. ಹುಲಿ ದುಷ್ಟ ಪ್ರಾಣಿ. ಹುಲಿ ಸ್ವರೂಪದ ಮಾನವರ ಸಂತತಿಯನ್ನು ನಾಶ ಮಾಡಿ, ಅವರ ದೃಷ್ಟಿ ನಾರಾಯಣಪುರಕ್ಕೆ ತಟ್ಟದಿರಲಿ ಮತ್ತು ಅವರ ಪ್ರವೇಶ ನಿಷೇದಿಸಲು ಹುಲಿ ಉಗುರು ತೆಗೆದು ಅಗಸಿ ಕಟ್ಟಿಸುತ್ತಾನೆ.

ಹುಲಿಯ ಬಾಯಿಲೇ ವೇದ ಓದಿಸೀs
ತೋರಿದ ಅಷ್ಟು ಭವಕೋs
ವೇದ ಓದಿಸಿ ಶ್ರವಣ ಮಾಡಿಸೀs
ತೋರಿದ ನಿಜ ಬೆಳಕೋs…..

ಹುಲಿಯನ್ನು ಕ್ರೌರ್ಯದ ಸಂಕೇತವಾಗಿ ಬಳಸಿರಬಹುದು. ಈ ಹುಲಿಯ ಕ್ರೌರ್ಯವನ್ನು ಮಾಳಪ್ಪ ಸೌಮ್ಯವಾಗಿ ಪರಿವರ್ತಿಸುತ್ತಾನೆ. ಅಜ್ಞಾನಿಗಳನ್ನು ಜ್ಞಾನಿಯನ್ನಾಗಿ ಮಾಳಪ್ಪ ಮಾಡುತ್ತಾನೆ. ಮಾಳಿಂಗರಾಯ ಹುಲಜಂತಿಗೆ ಬಂದು, ಅಲ್ಲಿಂದ ಮೂರು ಮೈಲು ದೂರದಲ್ಲಿ ಕುರಿದೊಡ್ಡಿ ಹಾಕಿ ಕುರಿ ಕಾಯಲು ಹುಲಿಗಳಿಗೆ ಹೇಳುತ್ತಾನೆ. ಕ್ರೌರ್ಯಕ್ಕೆ ವಿವೇಕ ಇರುವುದಿಲ್ಲ. ಕ್ರೌರ್ಯವನ್ನು ಮಾಳಪ್ಪ ವಿವೇಕಕ್ಕೆ ಪರಿವರ್ತಿಸುತ್ತಾನೆ. ಮಾಳಿಂಗರಾಯ ಪ್ರತಿದಿನ ರಾತ್ರಿ

ಅಂಗೈಗೆ ಐನೂರು ಲಿಂಗ
ಮುಂಗೈಗೆ ಮುನ್ನೂರು ಲಿಂಗ
ಮಂಡಿಗೆ ಸಾವಿರ ಲಿಂಗ ಮಾಡಿ…..

ಭಕ್ತಿಯಿಂದ ಶಿವಪೂಜೆ ಮಾಡುತ್ತಿದ್ದ. ಇವನೊಬ್ಬ ನಿಷ್ಠಾವಂತ ಶಿವಭಕ್ತನಾಗಿದ್ದ ಎಂದು ತಿಳಿಯುತ್ತದೆ.

ತನ್ನ ಶಿಷ್ಯ ಮಾಳಿಂಗರಾಯನ ಕೀರ್ತಿ ಭೂಲೋಕದಲ್ಲಿ ಮಾತ್ರವಲ್ಲ, ಕೈಲಾಸದಲ್ಲಿಯೂ ಪಸರಿಸಬೇಕು. ಕೈಲಾಸದಲ್ಲಿ ಗರ್ವದಿಂದ ಶಿವನ ಸೇವೆ ಮಾಡುತ್ತಿದ್ದ ಅಮೋಘಸಿದ್ಧನ ಸೊಕ್ಕು ಮುರಿಯಬೇಕೆಂದು ಲಿಂಬೇರಪ್ಪ ತನ್ನ ಶಿಷ್ಯ ಮಾಳಿಂಗರಾಯನಿಗೆ ಕೈಲಾಸದಲ್ಲಿರುವ ಅಜಾನುವೃಕ್ಷದ ಹೂವುಗಳನ್ನು ತಂದು ನನಗೆ ಪೂಜೆ ಮಾಡಬೇಕೆಂದು ಹೇಳುತ್ತಾನೆ. ಕೃಷ್ಣನು ಪಾರಿಜಾತದ ಹೂವು ತರಲು ಇಂದ್ರಲೋಕಕ್ಕೆ ಹೋಗಿ, ಹೂವು ಕೊಡಲು ನಿರಾಕರಿಸಿದ ಇಂದ್ರನ ಸೊಕ್ಕು ಮುರಿದು, ಪಾರಿಜಾತದ ಹೂವು ತಂದು ಸತ್ಯಭಾಮೆಗೆ ನೀಡಿದ ಪ್ರಸಂಗ ನೆನಪಿಗೆ ಬರುತ್ತದೆ. ಈ ಕಾವ್ಯದಲ್ಲಿ ಅಜಾನುವೃಕ್ಷದ ಹೂವುಗಳಿಗಾಗಿ ಇಬ್ಬರು ಭಕ್ತರು ಮಧ್ಯೆ ಸ್ಪರ್ಧೆ ಏರ್ಪಡುತ್ತದೆ.

            ಸಿದ್ಧ ಸಿದ್ಧರಲ್ಲಿ ಭೇದ ಹುಟ್ಟಿ ಮುಂದs
ಬೆಳದದ ಗುದಮುರಗೀs
ಬಿ.ಎ. ಕಲಿತವನ ಜೋಡಿ ಬಿನ್ನೆತ್ತಿ ಕಲತಾವs
ನಿಂತಾನ ಕುಸ್ತಿಗೀs
ರಾವಣ ಇದ್ದಲ್ಲಿ ರಾಮ ಹುಟ್ಯಾನ ಅವ್ನs
ಹಂಕಾರ ಮುರಿದುಕ್ಕಾಗೀs
ದೈತ್ಯರು ಇದ್ದಲ್ಲಿ ದೇವರು ಹುಟ್ಯಾರೋs
ಸೊಕ್ಕ ಮುರಿದುಕ್ಕಾಗೀs
ಅಮಲಸಿದ್ಧ ಬಂದಲ್ಲಿ ಮಾಳಪ್ಪ ಹುಟ್ಯಾನೋs
ಗರವ ಮುರಿದುಕ್ಕಾಗೀs……

ಅಮಲಸಿದ್ಧ ಒಂಬತ್ತು ಜನ ಸಿದ್ಧರಲ್ಲಿ ಇವನು ಒಬ್ಬ. ಅಮಲಸಿದ್ಧ, ಶಿವಗಿನಿಸಿದ್ಧ, ಮಣಿಸಿದ್ಧ, ಗುಗ್ಗರಿಸಿದ್ಧ, ಕೊಳಲಸಿದ್ಧ, ಗೆರೆಸಿದ್ಧ, ಏಕಸಿದ್ಧ, ಜೋಗಸಿದ್ಧ ಮತ್ತು ರೇವೂಸಿದ್ಧ. ಇವರೆಲ್ಲರೂ ಶಿವನಿಂದಲೇ ಜನ್ಮ ಪಡೆದವರು. ಇವರಲ್ಲಿ ಅಮಲಸಿದ್ಧ ಮತ್ತು ಶಿವಗಿನಿಸಿದ್ಧ ಇಬ್ಬರೂ ಶಿವ-ಪಾರ್ವತಿಯರ ಸೇವೆ ಮಾಡುವುದಕ್ಕಾಗಿ ಕೈಲಾಸದಲ್ಲಿ ಉಳಿದುಕೊಳ್ಳುತ್ತಾರೆ. ಉಳಿದ ಸಿದ್ಧರು ಲೋಕ ಕಲ್ಯಾಣಕ್ಕಾಗಿ ಭೂಲೋಕಕ್ಕೆ ಬರುತ್ತಾರೆ.

ಅಮಲಸಿದ್ಧ ಅಜಾನುವೃಕ್ಷದ ಹೂವುಗಳಿಂದ ಪ್ರತಿನಿತ್ಯ ಶಿವನನ್ನು ಪೂಜಿಸುತ್ತಿರುತ್ತಾನೆ. ಪ್ರತ್ಯಕ್ಷ ಶಿವನ ಪೂಜೆ ಮಾಡುವ ನಾನೇ ಶ್ರೇಷ್ಠ ಸಿದ್ಧ ಎಂಬ ಅಹಂಕಾರ ಅವನಲ್ಲಿರುತ್ತದೆ. ಮಾಳಿಂಗರಾಯ ಕೈಲಾಸಕ್ಕೆ ಬಂದು ಅಜಾನುವೃಕ್ಷ ಕಾಯುತ್ತಿದ್ದ ಶಿವಗಣವನ್ನು ಎಚ್ಚರಿಸುತ್ತಾನೆ. ಅವರೆಲ್ಲ ಮಾಳಿಂಗರಾಯನ ಮೇಲೆ ಯುದ್ಧಕ್ಕೆ ಬರುತ್ತಾರೆ. ಭಂಡಾರ ಎಸೆದು ಅವರನ್ನು ಮೂರ್ಛೆಗೊಳಿಸಿ, ಅಜಾನುವೃಕ್ಷದ ಹೂವುಗಳನ್ನು ತೆಗೆದುಕೊಂಡು ಭೂಲೋಕಕ್ಕೆ ಮಾಳಿಂಗರಾಯ ಹೋಗುತ್ತಾನೆ. ಅಮಲಸಿದ್ಧ ಕೆಳಗೆ ಬಿದ್ದಿರುವ ಹೂವುಗಳನ್ನು ತೆಗೆದುಕೊಂಡು ಹೋಗಿ ಶಿವನ ಪೂಜೆ ಮಾಡುತ್ತಾನೆ. ಬಾಡಿದ ಅಮಲಸಿದ್ಧನ ಮುಖ ನೋಡಿ ಮನಸ್ಸಿನಲ್ಲಿ ನಕ್ಕು ಮಾಳಿಂಗರಾಯನೇ ಹೆಚ್ಚಿನ ಸಿದ್ಧ ಎಂದು ಹೇಳುತ್ತಾನೆ. ಅಮಲಸಿದ್ಧ  ಮಾಳಿಂಗರಾಯನನ್ನು ಪರೀಕ್ಷಿಸಲು ಮಾರು ವೇಷದಲ್ಲಿ ಬರುತ್ತಾನೆ. ಇಬ್ಬರ ಮಧ್ಯೆ ಕಂಬಳಿ ಬೀಸಿ ಮಳೆ ಕರೆಯುವ ಪ್ರಸಂಗ ಏರ್ಪಡುತ್ತದೆ. ಅಮಲಸಿದ್ಧ ಸೋಲುತ್ತಾನೆ. ಅವನ ಅಹಂಕಾರವೂ ಇಳಿಯುತ್ತದೆ.

ಸಾರಂಗ ಮುನಿಯ ಶಿಷ್ಯ, ಏಕದಂಡಿಗಿ ಪದುಮಣ್ಣಯೋಗಿ ಸಾವಿರಾರು ಆಕಳುಗಳನ್ನು ಸಾಕಿ ಆ ಹಾಲಿನಲ್ಲಿ ಹೆಂಡಿ ಕಲಿಸಿ, ಮೂರು ಸಾವಿರ ಕುಳ್ಳು ತಯಾರಿಸಿ ದಿನ ನಿತ್ಯ ಉರಿಸುತ್ತಿದ್ದ. ಇವನ ಆಶ್ರಮದಲ್ಲಿ ಸದಾ ದಾಸೋಹ ನಡೆಯುತ್ತಿತ್ತು. ಇವನು ರಾಕ್ಷಸರನ್ನು ಕಟ್ಟಿಹಾಕಿದ. ದೆವ್ವ ಕಟ್ಟಿ ದೆವ್ವ ಆಳಿದ ವೀರ. ಇವನು ಒಂಟಿ ದೀವಟಿಗೆ ಹಚ್ಚಿಕೊಂಡು, ಒಂಟಿ ದಂಡಗಿ ಪಲ್ಲಕ್ಕಿ ಏರಿ, ಆಕಾಶ ಮಾರ್ಗದಲ್ಲಿ ಹೊರಟಿರುತ್ತಾನೆ. ಮಾಳಿಂಗರಾಯನ ಸೊಸೆಯಂದಿರು ಪದುಮಣ್ಣ ನಮ್ಮ ಮಾವನಿಗಿಂತ ಹೆಚ್ಚಿನ ಶರಣ ಎಂದು ಮಾತನಾಡಿಕೊಳ್ಳುತ್ತಿರುವುದನ್ನು ಮಾಳಪ್ಪ ಕೇಳಿ ಸಿಟ್ಟಿಗೆದ್ದು, ಪದುಮಣ್ಣನ ಪಲ್ಲಕ್ಕಿಯನ್ನು ಆಕಾಶದಲ್ಲೇ ತಡೆಯುತ್ತಾನೆ. ಆಗ ಪದುಮಣ್ಣ ಮಾಳಿಂಗರಾಯನಿಗೆ ನಮಸ್ಕರಿಸಿ ನನಗಿಂತ ಹೆಚ್ಚಿನ ಶರಣ. ನೀನು ಎಂದು ಹೇಳಿ ಅವನಿಂದ ಮೋಕ್ಷದ ಮಾರ್ಗ ತಿಳಿದುಕೊಳ್ಳುತ್ತಾನೆ. ಮಾಳಿಂಗರಾಯ ತನ್ನ ಸೊಸೆಯಂದಿರಿಗೆ ತಕ್ಕ ಪಾಠ ಕಲಿಸುತ್ತಾನೆ.

ಕ್ವಾಣೂರ ಮಠದಲ್ಲಿದ್ದ ದೇಗೊಂಡ ಗೌಡನ ಆಹ್ವಾನದಂತೆ ಅವನ ಜೊತೆ ಸ್ವರ್ಧೆಗಿಳಿಯಲು ಮಾಳಪ್ಪ ಭಂಡಾರ ಹಿಡಿದು, ತನ್ನ ಶಿಷ್ಯರೊಂದಿಗೆ ಹೋಗುತ್ತಾನೆ. ನೀರಿನ ಮೇಲೆ ಕಂಬಳಿ ಹಾಸಿ ತಾನು ಮತ್ತು ಇಪ್ಪತ್ತಾಲ್ಕು ಸಾವಿರ ಶಿಷ್ಯರನ್ನು ಅದರ ಮೇಲೆನಡೆದಾಡಿಸುವ ಮೂಲಕ ತನ್ನಲ್ಲಿದ್ದ ಶಕ್ತಿಯನ್ನು ಮಾಳಿಂಗರಾಯ ಲೋಕಕ್ಕೆ ತಿಳಿಸುತ್ತಾನೆ. ಮಾಳಿಂಗರಾಯ ಕ್ವಾಣೂರ ಕರಿಸಿದ್ಧಪ್ಪನ ಮಠದಲ್ಲಿ ಎಲ್ಲ ಸಿದ್ಧರನ್ನು ಸೋಲಿಸುತ್ತಾನೆ.

ಕ್ವಾಣೂರ ಮಠದಾಗ ದೇಗೊಂಡ ಗೌಡಾs
ಅಲ್ಲೇ ಇದ್ದಾನರೀss
ಚಾಡಿಕ್ವಾರ ಮೊಡಿಕಾರ ಬಂಗಾಲಿ ಮಂದೀs
ಅಲ್ಲೇ ಕೂಡಿತರೀs
ಕುಟಿಲ ಸಿದ್ಧರನ ಮಾಳಿಂಗರಾಯಾs
ನಮೋ ನಮೋ ಮಾಡ್ಯಾನರೀs
ಏಳ ಬಂಡಿ ಅಲ್ಲಿ ತುಂಡ ಮಾಡಿ ಮಾಳಪ್ಪ
ತಾನೇ ಒಗದಾನರೀs
ಚಮೂಲಿ ರಂಗಾ ಹೊಯ್ತಾನ ಹೆಂಗಾs
ಜನರೆಲ್ಲಾ ನೋಡೋಣ ಬರೈಂದರೀs….

ಮಾಳಪ್ಪ ದೇಗೊಂಡಗೌಡನ ಜೊತೆ ಮೋಡಿಕಾರ ಆಟ ಆಡಿ ಅವನನ್ನು ಸೋಲಿಸುತ್ತಾನೆ. ಮತ್ತು ಮಾಳಪ್ಪ ಮೋಡಿಕಾರ ಆಟ ಆಡುವುದರಲ್ಲಿ ನಿಪುಣನಾಗಿದ್ದ ಎಂಬುದು ಸ್ವಷ್ಟ.

ಸಿದ್ಧರ ನಂತರ ಮಾತೃ ದೇವತೆಗಳು ಮಾಳಿಂಗರಾಯನನ್ನು ಪರೀಕ್ಷೆಗೊಳಪಡಿಸುತ್ತಾರೆ. ಈ ಕಾವ್ಯದ ಮೇಲೆ ವೈದಿಕ ಸಂಪ್ರದಾಯ ತನ್ನ ಪ್ರಭಾವ ಬೀರಿದೆ. ಋಷಿಮುನಿಗಳು, ಬ್ರಾಹ್ಮಣರು ಯಜ್ಞ ಯಾಗಾದಿಗಳನ್ನು ಮಾಡುವಂತೆ, ಮಾಳಿಂಗರಾಯ ಯಜ್ಞ ಮಾಡುತ್ತಿರುತ್ತಾನೆ. ಇವನು ಹೂಡಿದ ಯಜ್ಞ ಆಕಾಶ ಭೂಮಿಯನ್ನು ನಡುಗಿಸುತ್ತದೆ. ಯಜ್ಞವನ್ನು ಕಂಡಕೈಲಾಸದಲ್ಲಿದ್ದ ಲಾಯವ್ವ ಮಾಳಪ್ಪನನ್ನು ಬಂಧಿಸಿ ತರಲು ದೈತ್ಯರಿಗೆ ಆಜ್ಞೆ ಮಾಡುತ್ತಾಳೆ. ಸರ್ಪದ ಬಲಿಗಳನ್ನು ಹಿಡಿದ ದೈತ್ಯರು ಸಿಡಿಯಾಣ ಮಠಕ್ಕೆ ಬಂದು ಮಾಳಪ್ಪನನ್ನು ಹಿಡಿಯಲು ಬಲೆ ಬೀಸುತ್ತಾರೆ. ಅದೇ ಬಲೆಯಿಂದ ಮಾಳಪ್ಪ ದೈತ್ಯ್ರರನ್ನು ಕಟ್ಟಿ ಹಾಕುತ್ತಾನೆ. ದೈತ್ಯರು ಶರಣಾಗತರಾಗುತ್ತಾರೆ. ದೈತ್ಯರು ಕೈಲಾಸಕ್ಕೆ ಬಂದು ನಡೆದ ಘಟನೆಯನ್ನು ಲಾಯವ್ವ ಮತ್ತು ಶ್ರೀದೇವಿಗೆ ಹೇಳಿ. ಮಾಳಪ್ಪನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ತಿಳಿಸುತ್ತಾರೆ. ಶಿವನ ಮಕ್ಕಳಾದ ಶ್ರೀದೇವಿ ಮತ್ತು  ಲಾಯವ್ವರೇ  ಮಾಳಪ್ಪನನ್ನು ಬಂಧಿಸಲು ಹೊರಡುತ್ತಾರೆ.

            ದೈತ್ಯರ ಮಾತ ಕೇಳಿ ಹೊಂಟ ನಿಂತರೇನಾs
ಕ್ವಾಣಿನ ಬಂಡಿ ಹೂಡಿ ಸಾಮಾನುs
ಇಸದ ಕೊಡಾ ಗಾಡ್ಯಾಘೇರ್ಯಾರೇನಾವs
ಅಮೃತ ಕೊಡಾ ಬದಿಯಲ್ಲಿ ಇಟ್ಟುಕೊಂಡು
ಹೊಂಟ ನಡದಾರೆನಾs…..

ಕ್ಷುದ್ರ ರೂಪ ಧರಿಸಿದ ದೇವತೆಗಳು ಕೈಯಲ್ಲಿ ಹಾವಿನ ಲಡ್ಡ ಹಿಡಿದುಕೊಂಡು ಕೈಲಾಸದಿಂದ ಕೊಲ್ಲಾಪುರಕ್ಕೆ ಬರುತ್ತಾರೆ. ಮಾಳಪ್ಪ ತನ್ನ ದಿವ್ಯ ಜ್ಞಾನದಿಂದ ಈ ದೇವತೆಗಳು ಬಂದದ್ದನ್ನು ತಿಳಿದುಕೊಳ್ಳುತ್ತಾನೆ. ಮತ್ತು ನಡುದಾರಿಯಲ್ಲೇ ಆವರ ಬಂಡಿಯ ಗಾಲಿ ಮುರಿದು ಹಳ್ಳಕ್ಕೆ ಬೀಳುವಂತೆ ಮಾಡುತ್ತಾನೆ. ದೇವತೆಗಳಿಬ್ಬರೂ ಸಿಡಿಯಾಣಕ್ಕೆ ಬಂದು ಮಾಳಪ್ಪ ಎಲ್ಲಿದ್ದಾನೆಂದು ಗುರು ಬೀರಪ್ಪನನ್ನು ಪ್ರಶ್ನಿಸುತ್ತಾರೆ. ಕ್ವಾಣೂರ ಮಠಕ್ಕೆ ಹೋಗಿರುವ ವಿಷಯ ತಿಳಿದುಕೊಂಡು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಕರಿದೇವರಿಗೆ ಕೇಳುತ್ತಾರೆ. ಅಲ್ಲಿಯೂ ಮಾಳಪ್ಪ ಇವರ ಕೈಗೆ ಸಿಗುವುದಿಲ್ಲ. ಅಲ್ಲಿಂದ ಈ ದೇವತೆಗಳ ಬಂಡಿ ಆಕಾಶ ಮಾರ್ಗವಾಗಿ ಹೋಗುತ್ತಿರುವಾಗ, ಬಂಡಿಗಾಲಿ ಕರಿಸಿದ್ಧಪ್ಪನ ಗುಡಿಯ ಕಳಸಕ್ಕೆ ಬಡಿದು ಕಳಸ ಮುರಿಯುತ್ತದೆ. ಹೀಗಾಗಿ ಈ ದೇವಸ್ಥಾನಕ್ಕೆ ಕಳಸವಿಲ್ಲ ಎಂಬ ಐತಿಹ್ಯವಿದೆ. ಅಲ್ಲಿಂದ ಗಜಲಿಂಗ, ಹುನ್ನೂರಿನ ಬೀರಣ್ಣ, ಶರಣಾಂದ್ಗಿ ಗುರು ಸೋನಾರ ಸಿದ್ಧರ ಕೇಳುತ್ತಾ ಹಿಂದಿರುಗಿ ಸಿಡಿಯಾಣಕ್ಕೆ ಬರುತ್ತಾರೆ. ಆಗ ಮಾಳಪ್ಪ ಈ ದೇವತೆಗಳ ಮೂಗುತಿ ಮಾಯ ಮಾಡುತ್ತಾನೆ.

            ಮೆಟ್ನಾಲ್ಗಿ ಹಚ್ಚಿ ಮಣ್ಣು ತೂರತಾರs
ಕೇಳರಿ ಅವಾಗs
ಎತ್ತ ತೂರಿದರ ಸಿಗವೆಲ್ದ ಮೂಗತಿs
ಗಾಬರಿಯಾದಾರಾಗs ……

ಅಷ್ಟೋತ್ತಿಗೆ ಮಾಳಪ್ಪನೆ ಬಂದು ನಿಮ್ಮ ಮೂಗುತಿ ನಿಮ್ಮ ಉಡಿಯಲ್ಲಿಯೇ ಇದೆಯಲ್ಲಾ ಎಂದು ತೋರಿಸುತ್ತಾನೆ. ಮುದುಕನ ವೇಷಧರಿಸಿದ ನಾನೇ ಮಾಳಪ್ಪ ಎಂದು ಅವರಿಗೆ ತಿಳಿಸುತ್ತಾನೆ. ನೀನು ತಕ್ಷಣ ನಮ್ಮ ಜೊತೆ ಕೈಲಾಸಕ್ಕೆ ಬರಬೇಕೆಂದು ದೇವತೆಗಳು ಹೇಳಿದಾಗ ನಿಮ್ಮ

            ಮೂಗುತಿ ಭೂಮಿಗಿ ಬಿದ್ದರ ಮುತ್ತೈದಿತನ
ಎಲ್ಲಿ ಐತಿ ನಿಮಗs……

ಎಂದು ಮಾಳಪ್ಪ ಪ್ರಶ್ನಿಸುತ್ತಾನೆ. ಆಗ ದೇವತೆಗಳಿಗೆ ಅರಿವು ಮೂಡಿ ಅಹಂಕಾರ ಮಾಯವಾಗುತ್ತದೆ. ಮಾಳಪ್ಪನ ಶಕ್ತಿ ಕಂಡು ಅವನ ಆಜ್ಞೆಯಂತೆ ಸಿಡಿಯಾಣದಲ್ಲಿ ವಾಸಿಸಲು ಒಪ್ಪಿಕೊಳ್ಳುತ್ತಾರೆ. ಸಿಡಿಯಾಣದಲ್ಲಿ ಶೀಲವಂತೆ ದೇವಸ್ಥಾನ ಇದೆ. ಈ ದೇವತೆಗಳ ಮೂಗುತಿ ಭೂಮಿಗೆ ಸ್ವರ್ಶವಾದದ್ದರಿಂದ ಅವರು ಕೈಲಾಸಕ್ಕೆ ಹೋಗಲು ಅನರ್ಹರಾಗಿರುತ್ತಾರೆಂಬ ಕಾರಣದಿಂದ ಸಿಡಿಯಾಣದಲ್ಲಿ ಇರುತ್ತಾರೆ ಮತ್ತು ಪ್ರತಿ ವರ್ಷ ನಡೆಯುವ ನಿನ್ನ ಜಾತ್ರೆಗೆ ನಾವು ತಪ್ಪದೆ ಹುಲಜಂತಿಗೆ ಬಂದು ಭೇಟಿಯಾಗುತ್ತೇವೆಂದು ಮಾಳಪ್ಪನಿಗೆ ವಚನ ಕೊಡುತ್ತಾರೆ. ದೇವ – ದೇವತೆಗಳು, ಗಂಧರ್ವರು, ಋಷಿಮುನಿಗಳು ಮತ್ತು ಮಹಾತ್ಮರ ಸತ್ವ ಪರೀಕ್ಷೆ ಮಾಡಲು ಬಂದು ಸೋತು ಅವರ ಶಾಪದಿಂದಲೋ ಅಥವಾ ಅವರನ್ನು ಗುರುತಿಸುವ ಅಮೂಲ್ಯ ವಸ್ತು ಕಳೆದುಕೊಂಡೋ ಭೂಲೋಕದಲ್ಲಿ ನೆಲೆಸಿರುವ ಅನೇಕ ಪುರಾಣ ಕಥೆಗಳು ನೆನಪಿಗೆ ಬರುತ್ತದೆ.