ದೇವತೆಗಳು ಮಾಳಪ್ಪನನ್ನು ಪರೀಕ್ಷೆಗೊಳಪಡಿಸುವ ಈ ಸನ್ನಿವೇಶವನ್ನು ಹೀಗೂ ಪರಿಭಾವಿಸಬಹುದು. ದೈತ್ಯರು ಸೋತು ಕೈಲಾಸಕ್ಕೆ ಬಂದು

            ಮಾಯದಾಟದಲಿ ಮಾಳಪ್ನ ಬಲೀs
ಮರಿತ್ಯಕ ಮಿಗಿಲಾದನಂದಾ
s…..

ಎಂದು ಹೇಳುವುದನ್ನು ನೋಡಿದರೆ ಇಲ್ಲಿ ಮಾಯದಾಟ ಎಂದರೆ ಮೋಡಿಕಾರ ಆಟ ಆಗಿರಬಹುದು. ಮಾಳಪ್ಪ ಕ್ವಾಣೂರ ಮಠದಲ್ಲಿ ನಡೆದ ಸ್ಪರ್ಧೆಯಲ್ಲಿ ಮೋಡಿಕಾರರ ಆಟವನ್ನು ವಿಫಲಗೊಳಿಸಿದ್ದ ಎಂಬುದನ್ನು ಗಮನಿಸಿದಾಗ, ಇದು ಮೋಡಿಕಾರರ ಆಟವೇ ಆಗಿದೆ. ಸ್ತ್ರೀಯರೂ ಮೋಡಿಕಾರರ ಆಟ ಆಡುತ್ತಾರೆ ಎಂಬುದು ಗೊತ್ತಿರುವ ಸಂಗತಿ, ಈ ಕಾವ್ಯದಲ್ಲಿ ಶಿವನ ಮಕ್ಕಳೆಂದು ಗುರುತಿಸಿದ ಶ್ರೀದೇವಿ ಮತ್ತು ಲಾಯವ್ವ ಸಾಮಾನ್ಯ ಸ್ತ್ರೀಯರೆ. ಇವರು ಮಾಳಪ್ಪನ ಜೊತೆ ಮೋಡಿಯಾಟ ಆಡಿರಬೇಕು. ಇವರು ಕ್ವಾಣಿನ ಬಂಡಿಯಲ್ಲಿ ವಿಷದ ಮತ್ತು ಅಮೃತ ಕೊಡ ಇಟ್ಟುಕೊಂಡು ಬರುವುದು, ಚಕ್ಕಡಿಯ ಬಂಡಿಗಾಲಿ ಒಡದು ಹಳ್ಳಕ್ಕೆ ಬೀಳುವಂತೆ ಮಾಡುವುದು, ಮೂಗುತಿ ಮಾಯವಾಗಿ ಮೆಟ್ನಾಲ್ಗಿ ಹಚ್ಚಿ ಹುಡುಕುವ ಮತ್ತು ಮಣ್ಣು ತೂರುವ, ಶರಣಾಗುವ ಈ ಎಲ್ಲ ಸನ್ನಿವೇಶಗಳು ಮೋಡಿಕಾರ ಆಟದ ಕಲ್ಪನೆಯನ್ನು ಹುಟ್ಟಿಸುತ್ತವೆ. ವಿಷದ ಕೊಡ ಎಂದರೆ ಇದರಲ್ಲಿ ಮೋಡಿಯಾಟಕ್ಕೆ ಸಿದ್ಧಪಡಿಸಿದ ರಸಾಯನ ಇರಬಹುದು. ಮೋಡಿ ಮಾಡಿದ ತಕ್ಷಣ ಅದರಿಂದಾಗುವ ದುಷ್ಟರಿಣಾಮಗಳನ್ನು ತಪ್ಪಿಸಲು ಬಳಸುವ ರಸಾಯನ ಅಮೃತ ಕೊಡದಲ್ಲಿರಬಹುದು. ಮೋಡಿಕಾರರು ಆಟಕ್ಕೆ ಮೊದಲೇ ರಸಾಯನ ಸಿದ್ಧಪಡಿಸಿ ತಂದಿರುತ್ತಾರೆ. ಇವರ ರಣ ಮೋಡಿಗಳಲ್ಲಿ ಬಂಡಿ, ಬಂಡಿಗಾಲಿಗಳನ್ನು ಬಳಸುತ್ತಾರೆ. ಮೂಗುತಿ ಮಾಯವಾಗಿ ಹುಡುಕಾಡುವುದು. ಇದು ಎದುರಾಳಿ ಮೋಡಿಕಾರ ಅವರ ವಿದ್ಯೆಗೆ ಸಂಬಂಧಿಸಿದ ಮೂಲ ವಸ್ತು ಮಾಯಮಾಡುವುದೆ ಆಗಿರಬೇಕೆಂದು ನಾನು ಭಾವಿಸಿದ್ದೇನೆ.

ಮಾಳಪ್ಪ ದುಷ್ಟ ದೇವತೆಗಳ ಗರ್ವ ಮುರಿದು ಬುದ್ಧಿ ಕಲಿಸಿ ಅವರಿಗೆ ಸಹಾಯ ಮಾಡುವ ಪರಸಂಗಗಳು ಈ ಕಾವ್ಯದಲ್ಲಿವೆ. ಮಾಳಿಂಗರಾಯನೊಂದಿಗೆ ಸ್ಪರ್ಧೆಗಿಳಿಯುವ ದೇವತೆಗಳು, ದೈತ್ಯರು ಸಾಮಾನ್ಯ ಮನುಷ್ಯರೆ, ಇವರು ಮಾಳಿಂಗರಾಯನಿಗೆ ಅಪಕಾರ ಮಾಡಿದ್ದನ್ನು ಈ ಕಾವ್ಯದಲ್ಲಿ ಹೇಳಲಾಗಿದೆ.

ಸಿದ್ಧರು ಮತ್ತು ಮಾತೃದೇವತೆಗಳ ನಂತರ ಪಿತೃ ದೇವತೆಗಳು ಮಾಳಿಂಗರಾಯನನ್ನು ಪರೀಕ್ಷಿಸಲು ಬರುತ್ತಾರೆ. ಮಾಳಪ್ಪ ಸಿರಡೋಣದಲ್ಲಿ ತನ್ನ ಗುರುವಿನ ಪೂಜೆ ಮಾಡುತ್ತಿದ್ದ ಧೂಪದ ಸುವಾಸನೆ ಕೈಲಾಸದಲ್ಲಿದ್ದ ಪಾರ್ವತಿ-ಪರಮೇಶ್ವರರ ಮೂಗು ಮುಟ್ಟುತ್ತದೆ. ಈ ಸುವಾಸನೆ ಎಲ್ಲಿಂದ ಬಂದಿತು ಎಂದು ಪಾರ್ವತಿ ಕೇಳುತ್ತಾಳೆ. ಮಾಳಪ್ಪನ ಭಕ್ತಿ ಕುರಿತು ಶಿವ ಹೇಳುತ್ತಾನೆ. ಶಿವ – ಪಾರ್ವತಿ ಮಾಳಪ್ಪನನ್ನು ಪರೀಕ್ಷಿಸಲು ಭೂಲೋಕಕ್ಕೆ ಬರುತ್ತಾರೆ. ಶಿವ – ಪಾರ್ವತಿ ಮಾರುವೇಷದಲ್ಲಿ ಬಂದ ವಿಷಯ ಮಾಳಪ್ಪನಿಗೆ ಗೊತ್ತಾಗುತ್ತದೆ. ಮಾಳಪ್ಪ ಚಪಗೊಡ್ಲಿ ಮತ್ತು ಧೂಪಾರ್ಥಿ ತೆಗೆದುಕೊಂಡು ಅವರಿದ್ದಲ್ಲಿಗೆ ಹೋಗುತ್ತಾನೆ. ಶಿವನ ದೇಹದಿಂದ ಕೀವು, ರಕ್ತ ಸೋರುತ್ತಿರುತ್ತದೆ. ಪಾರ್ವತಿ ನೊಣಗಳನ್ನು ಹೊಡೆಯುತ್ತ ಕಾಡಿನಲ್ಲಿ ಕುಳಿತಿರುತ್ತಾಳೆ. ಮಾಳಪ್ಪ ಅವರಿಬ್ಬರನ್ನು ಎತ್ತಿಕೊಂಡು ಬೇರೆ ಸ್ಥಳಕ್ಕೆ ಹಾಕಿ ಶಿವನ ರೋಗ ವಾಸಿಯಾಗಲು ಮಾಳಪ್ಪ ಅಲಗ ಹಿಡಿದು ಆಟವಾಡುತ್ತಾನೆ. ಕೊನೆಗೆ ತನ್ನ ದೇಹದ ಕರಳು ತೆಗೆದು ಕೈಗೆ ಸುತ್ತಿಕೊಳ್ಳುತ್ತಾನೆ. ರಕ್ತ ಒಂದೇ ಸವನೆ ಸುರಿಯುತ್ತಿರುತ್ತದೆ. ಪಾರ್ವತಿ – ಪರಮೇಶ್ವರರು ಅವನ ಭಕ್ತಿ ಕಂಡು ಮನದಲ್ಲಿ ಸಂತೋಷಗೊಂಡು ಕರುಳು ರಕ್ತ ದೇಹದಲ್ಲಿ ಸೇರಿಸಿ ನಿನಗೇನು ವರ ಬೇಕು ಎಂದು ಕೇಳುತ್ತಾರೆ. ಆಗ ಮಾಳಪ್ಪ ಬಡವರಿಗೆ ಭಾಗ್ಯ, ವರುಷಕ್ಕೊಮ್ಮೆ ನನಗೆ ನಿಮ್ಮ ದರ್ಶನ ಭಾಗ್ಯಬೇಕೆಂದು ಕೇಳುತ್ತಾನೆ. ಮಾಳಿಂಗರಾಯ ದೇಹತ್ಯಾಗ ಮಾಡಿದ ನಂತರವೂ ಶಿವ – ಪಾರ್ವತಿ  ಮಾಳಿಂಗರಾಯನಿಗೆ ದರ್ಶನ ನೀಡುತ್ತಾರೆ. ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆ ದಿನ ಹುಲಜಂತಿಯಲ್ಲಿ ಮಾಳಿಂಗರಾಯನ ಉತ್ಸವ ನಡೆಯುತ್ತದೆ. ಅಂದು ರಾತ್ರಿ ಹನ್ನೆರಡು ಗಂಟೆಗೆ ಶಿವ – ಪಾರ್ವತಿ ಮಾಳಿಂಗರಾಯನ ಸಮಾಧಿ ಸ್ಥಳಕ್ಕೆ ಬಂದು ಮಾಳಪ್ಪನಿಗೆ ಮಾತ್ರ ಭೇಟಿಯಾಗಿ ಅವನಿಗೆ ಪಟಗಾಸುತ್ತಿ ಮುಂಡಾಸ ಕೊಟ್ಟು ಹೋಗುತ್ತಾರೆ ಎಂಬ ನಂಬಿಕೆ ಇದೆ. ಈ ಮುಂಡಾಸ ದರ್ಶನ ಪಡೆಯಲು ಲಕ್ಷಾಂತರ ಜನ ಅಲ್ಲಿ ಸೇರುತ್ತಾರೆ.

ನಾರಾಯಣಪುರ ಪ್ರದೇಶಕ್ಕೆ ಒಮ್ಮೆ ಬರಗಾಲ ಬೀಳುತ್ತದೆ. ಪರಮೇಶ್ವರ ವೇಷ ಮರೆಸಿಕೊಂಡು ನಾರಾಯಣಪುರಕ್ಕೆ ಬರುತ್ತಾನೆ. ಮತ್ತು ಮಾಳಪ್ಪನಿಗೆ ಭೇಟಿಯಾಗುತ್ತಾನೆ. ಇವರಿಬ್ಬರ ಮಧ್ಯೆ ಮಳೆ ನಿರೀಕ್ಷೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಮಾಳಪ್ಪ ನುಡಿದಂತೆಯೆ ಮಳೆಯಾಗುತ್ತದೆ. ಶಿವ ಹೇಳಿದ ಭವಿಷ್ಯ ಸುಳ್ಳಾಗುತ್ತದೆ. ಶಿವ ಸೋಲುತ್ತನೆ. ಅಥವಾ ಶಿಷ್ಯ ಮಾಳಪ್ಪನ ಕೀರ್ತಿ ಹಬ್ಬಲಿ ಎಂದು ಶಿವ ಸೋತಿರಲೂಬಹುದು. ಒಟ್ಟಿನಲ್ಲಿ ಈ ಕಾವ್ಯ ಗುರುವಿಗಿಂತ ಶಿಷ್ಯ ಹೆಚ್ಚಿನವ ಎಂದು ಹೇಳುತ್ತದೆ.

ಮಹಾರಾಷ್ಟ್ರ ಪ್ರದೇಶವನ್ನು ಆರನೆಯ ಶತಮಾನದವರೆಗೆ ಶೈವ ಮತದ ವಾಕಾಟಕರು ಆಳುತ್ತಿದ್ದರು. ಇದಕ್ಕಿಂತ ಮುಂಚೆ ಮೌರ್ಯರು ಈ ಪ್ರದೇಶವನ್ನಾಳುತ್ತಿದ್ದರು. ವಾಕಾಟಕರ ನಂತರ ಎಂಟನೆಯ ಶತಮಾನದವರೆಗೆ ಈ ಪ್ರದೇಶ ಬಾದಾಮಿ ಚಾಲುಕ್ಯರ ಆಡಳಿತಕ್ಕೊಳಪಟ್ಟಿತ್ತು. ಇವರು ಶೈವ ಪಾಲಿಸುತ್ತಿದ್ದರು ರಾಷ್ಟ್ರಕೂಟರು ಈ ರಾಜ್ಯವನ್ನಾಳಿದ್ದಾರೆ. ಇವರ ಆಳ್ವಿಕೆಯಲ್ಲಿ ಶೈವ ಮತ್ತು ಜೈನ ಧರ್ಮಗಳೆರಡೂ ಪ್ರಚಲಿತದಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ವೇರೂಳದ ಗುಹಾಂತದೇವಾಲಯಗಳು ನಿರ್ಮಿಸಲ್ಪಟ್ಟವು. ಇವರ ಕಾಲದಲ್ಲಿ ಪ್ರಸಿದ್ಧ ಕೈಲಾಸ ಗುಹೆಯನ್ನು ಒಂದನೆಯ ಕೃಷ್ಣರಾಜ ಕೊರೆಸಿದ. ಅಲ್ಲಿ ಇನ್ನೊಂದು ಚಿಕ್ಕ ಗುಹಾಂತದೇವಾಲಯವಿದೆ. ಈ ದೇವಾಲಯಗಳಲ್ಲಿ ಅದ್ಬುತವಾದ ಶೈವ ವಿಗ್ರಹವಿದೆ. ಮತ್ತು ಶಿವನ ಲೀಲೆಗಳನ್ನು ತೋರಿಸುವ ಅನೇಕ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಿದ್ದನ್ನು ನೋಡಿದರೆ ಈ ಪ್ರದೇಶದಲ್ಲಿ ಶೈವ ಮತ ಅತ್ಯಂತ ಪ್ರಬಲವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರದೇಶವನ್ನಾಳಿದ ರಾಜರು ಮತ್ತು ಜನರು ಎಲ್ಲರೂ ಹೆಚ್ಚಾಗಿ ಶೈವ ಮತ ಪಾಲಕರಾಗಿದ್ದರೆಂಬುದು ತಿಳಿಯುತ್ತದೆ. ಪಂಢರಪುರ ಆದಿಕಾಲದಿಂದ ಹೆಸರಾದ ವೈಷ್ಣವ ಕೇಂದ್ರ. ಇಲ್ಲಿ ವಿಠ್ಠಲನು ಪಾಂಡುರಂಗನೆಂಬ ಹೆಸರಿನಿಂದ ಪ್ರಸಿದ್ಧನಾಗಿದ್ದ. ಆದರೆ ಈ ಪ್ರದೇಶದಲ್ಲಿ ಶೈವರು ಪ್ರಬಲರಾಗಿದ್ದರಿಂದ ಆ ಕಾಲಕ್ಕೆ ವೈಷ್ಣವ ಮತ ಬೆಳೆಯಲಿಕ್ಕೆ ಅವಕಾಶಗಳಿರಲಿಲ್ಲ. ಮುಂದೆ ಚಕ್ರಧರನಿಂದ ಹನ್ನೆರಡು ಅಥವಾ ಹದಿಮೂರನೆಯ ಶತಮಾನದಲ್ಲಿ ವೈಷ್ಣವ ಧರ್ಮ ಬೆಳೆಯಲಾರಂಭಿಸಿತು.

ಶೈವ ಧರ್ಮ ಪ್ರಬಲವಾಗಿದ್ದ ಈ ಪ್ರದೇಶಕ್ಕೆ ಉತ್ತರದಿಂದ ದಕ್ಷಿಣಕ್ಕೆ ಗೋರಖನಾಥ ಪಂಥವು ಬಂದು ಮಹಾರಾಷ್ಟ್ರದಲ್ಲಿ ತಮ್ಮ ಕೇಂದ್ರ ಸ್ಥಾಪಿಸಿರಬಹುದು. ತಾಂತ್ರಿಕ ಪಂಥಗಳು ಪೂರ್ವ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ತಾಂತ್ರಿಕ ಪಂಥಗಳಿಗೆ ವಾಸಿಸಲು ನೀರು ಮತ್ತು ಬೆಟ್ಟದ ತಪ್ಪಲು ಪ್ರದೇಶಗಳು ಪ್ರಶಸ್ತ ಸ್ಥಳಗಳು. ಇಂಥ ಸ್ಥಳಗಳಲ್ಲೇ ಅವರು ಸಿದ್ಧಿ ಸಾಧನೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ಜನವಸತಿಗೆ ಪೂರಕವಲ್ಲದ ಸ್ಥಳಗಳನ್ನು ಅವರು ಆಯ್ಕೆ ಮಾಡಿ ಕೊಂಡಿದ್ದರು. ಮಹಾರಾಷ್ಟ್ರ ಪ್ರದೇಶಕ್ಕೆ ಕಾಲಿಟ್ಟ ಗೋರಖನಾಥ ಪಂಥವು ನಿಶಾಚರ ಪ್ರದೇಶಗಳಲ್ಲಿ ತನ್ನ ನೆಲೆ ಸ್ಥಾಪಿಸಿಕೊಂಡಿರಬಹುದು. ಮಹಾರಾಷ್ಟ್ರದ ಪ್ರದೇಶ ಅನೇಕ ಬೆಟ್ಟ ಗುಡ್ಡಗಳಿಂದ ಕೂಡಿದೆ. ಈ ಪ್ರದೇಶದ ಅನೇಕ ಗುಡ್ಡಗಳಲ್ಲಿ ಗುಹೆಗಳು ಇವೆ. ಕಾರ್ತಿ, ಕನ್ನೇರಿ, ನಾಸಿಕೆ, ಎಲಿಫೆಂಟ್‌, ಅಜಂತಾ ಎಲ್ಲೋರಾ ಮುಂತಾದ ಗುಹೆಗಳಲ್ಲಿ ಈ ಗೋರಖನಾಥ ಪಂಥ ನೆಲೆಗೊಂಡಿರಬಹುದು.

ಈ ಪಂಥಕ್ಕೆ ಗೋರಖನಾಥ ಮೂಲ ಪುರುಷ. ಇವನ ಜೊತೆ ಏಳುನೂರು ಜನ ಅನುಯಾಯಿಗಳಿದ್ದರೆಂಬುದು ತಿಳಿಯುತ್ತದೆ. ಇವರು ಸಿದ್ಧ ವೈದ್ಯದ ಪಂಡಿತರೂ ಆಗಿದ್ದರು. ಇವರು ಮಾಟ, ಮಂತ್ರ, ಮೋಡಿ, ಪವಾಡ ಮಾಡುವುದರಲ್ಲಿ ನಿಪುಣರು. ಇವರು ಸಾಧಿಸಿದ ಸಿದ್ಧಿಯ ಮೂಲಕ ಅನೇಕ ಪವಾಡಗಳನ್ನು ಮಾಡುತ್ತ ಜನರನ್ನು ಆಕರ್ಷಿಸುತ್ತಿದ್ದರು. ಸಮಾಜದ ಕೆಳವರ್ಗದ ಜನರೇ ಹೆಚ್ಚಾಗಿ ಇವರ ಪ್ರಭಾವಕ್ಕೊಳಗಾಗಿ, ಆ ಪಂಥವನ್ನು ಸೇರಿರಬೇಕು. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಪಶುಪಾಲನೆಯಲ್ಲಿ ನಿರತರಾದ ಸಮುದಾಯವೂ ಇವರ ಆಕರ್ಷಣೆಗೊಳಗಾಗಿ ತಮ್ಮ ಸಮುದಾಯದ ಸಾಂಸ್ಕೃತಿಕ ವೀರರನ್ನು ಗೋರಖನಾಥ ಪಂಥದ ಸಿದ್ಧರಂತೆ ಪ್ರಕಟಪಡಿಸಿರಬೇಕು. ಮತ್ತು ನಮ್ಮಲ್ಲಿರುವ ಈ ಪಶು ಸಂಪತ್ತಿಗೆ ಸಿದ್ಧರೇ ಕಾರಣರು ಎಂಬ ಪ್ರಜ್ಞೆ ಪಶುಪಾಲಕರಲ್ಲಿ ಬೆಳದಿರಬೇಕು.

‘ಮಹಾರಾಷ್ಟ್ರದ ಖಾನದೇಶ ಜಿಲ್ಲೆಯ ವಾಘ್ಲೆಯಲ್ಲಿ ಇರುವ ಯಾದವ ಸೇವುಣ ಚಂದ್ರನ ಕಾಲದ (ಕ್ರಿ. ಶ. ೧೦೬೯) ಸಿದ್ಧೇಶನಾಥ ಅಥವಾ ಸಿದ್ಧೇಶ್ವರ ಗುಡಿಯು ನಾಥ ಪಂಥದ ಪ್ರಸಿದ್ಧ ಶಿವಾಲಯವಾಗಿರಬೇಕು. ಖಾನದೇಶ, ಅಹಮ್ಮದನಗರ ಮತ್ತು ನಾಶಿಕ ಜಿಲ್ಲೆಗಳಲ್ಲಿ ಹಳೆಯ ದೇವಾಲಯಗಳಿವೆ. ಇವು ೧೦-೧೩ನೇ ಶತಮಾನದ ಮಧ್ಯದಲ್ಲಿ ಯಾದವರ ಅಧಿಪತ್ಯದಲ್ಲಿ ಕಟ್ಟಲ್ಪಟ್ಟಿವೆ. ಅವುಗಳಲ್ಲಿ ಶಿವಾಲಯಗಳೆ ಹೆಚ್ಚಾಗಿವೆ. ಮಹಾಮಾರಿ, ಪಾರ್ವತಿ, ಮಹಿಷಾಸುರ ಮರ್ದಿನಿ, ಮಹಾಕಾಳಿ, ಗಣಪತಿ, ಮಲ್ಲಿಕಾರ್ಜುನ, ನಟೇಶ್ವರ ಮತ್ತು ಲಿಂಗಗಳು ಪೂಜೆಯ ವಿಗ್ರಹಗಳು. ಅಲ್ಲಲ್ಲಿ ನರಸಿಂಹ ವರಾಹಾದಿ ವಿಷ್ಣು ವಿಗ್ರಹಗಳು ಕಂಡರೂ ಅವು ಅಂಗದೇವತೆಗಳಾಗಿ ಪ್ರತಿಷ್ಠಾಪಿಸಲ್ಪಟ್ಟಿವೆ’ (ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆ, ಸಂ : ೩೩-೩೪;೧೯೪೮-೪೯) ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಮಹಾರಾಷ್ಟ್ರದಲ್ಲಿ ನಾಥ ಪಂಥ ಹತ್ತನೆಯ ಶತಮಾನದಲ್ಲಿತ್ತು ಎಂಬುದು ತಿಳಿಯುತ್ತದೆ.

ಗೋರಖನಾಥ ಪಂಥದ ಸಿದ್ಧರು ತಾವು ಸಿದ್ಧಿಸಿದ ನಾಗಬೆತ್ತವನ್ನು ಕೈಯಲ್ಲಿಟ್ಟುಕೊಂಡೇ ಸುತ್ತುತ್ತಿದ್ದರು. ಈ ಕಾವ್ಯದಲ್ಲಿ ಮಾಳಿಂಗರಾಯ ನಾಗಸರ್ಪವನ್ನು ಬೆತ್ತವಾಗಿ ಪಡೆದುಕೊಳ್ಳುವ ಪ್ರಸಂಗವಿದೆ. ಮಾಳಪ್ಪ ಚಿಕ್ಕವನಿದ್ದಾಗ ಗೆಳೆಯರೊಂದಿಗೆ ಆಟವಾಡುತ್ತಿದ್ದ ಸರ್ಪವೊಂದು ಗೆಳೆಯನಿಗೆ ಕಚ್ಚುತ್ತದೆ. ಮಾಳಪ್ಪ ಸರ್ಪವನ್ನು ಕೈಯಲ್ಲಿ ಹಿಡಿದು ತನ್ನ ಕಣ್ಣನಿಂದ ಕಿಡಿಕಾರಿ ಅದರ ಸೊಕ್ಕು ಮುರಿದು ನಾನು ದೊಡ್ಡವನಾದ ಮೇಲೆ ನಾಗಬೆತ್ತವಾಗಿರಬೇಕು ಎಂದು ಆಜ್ಞೆ ಮಾಡುತ್ತಾನೆ. ಗೋರಖನಾಥ ಪಂಥದ ನಾಗನಾಥ ಮಹಾರಾಷ್ಟ್ರದಲ್ಲಿ ದೈವವಾಗಿದ್ದಾನೆ. ಸೊಲ್ಲಾಪುರ ಜಿಲ್ಲೆಯ ಬತ್ತಿಸಿರಾಳ ಮತ್ತು ವಡವಾಳದಲ್ಲಿ ಇವನ ದೇವಸ್ಥಾನಗಳಿವೆ. ಜನ ಇವನನ್ನು ಪೂಜಿಸುತ್ತಾರೆ.

ಈ ಕಾವ್ಯದಲ್ಲಿ ಬರುವ ಸೋನಾರ ಸಿದ್ಧನನ್ನು ಎಳುತಲೆ ಗುರು ಸೋನಾರಿ ಸಿದ್ಧ, ಕಾಲಭೈರವನಾಥ ಗೌಡಬಂಗಾಲ ಜೋಗಿ ಎಂದು ಕರೆದಿದ್ದಾರೆ. ಈ ಸಿದ್ಧನ ಮಠ ಸಿರಣಾಂದ್ಗಿಯಲ್ಲಿದೆ. ಈ ಸಿದ್ಧರು ಬಂಗಾಳ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಬಂದಿರಬಹುದು. ಸೋನಾರ ಸಿದ್ಧನೇ ಈ ಸಮುದಾಯದ ಮೂಲ ಗುರುವಾಗಿ ಚಿತ್ರಿತನಾಗಿದ್ದಾನೆ. ಈ ಕಾವ್ಯದ ಪ್ರತಿ ಹಂತದಲ್ಲೂ ಈ ಸೋನಾರ ಸಿದ್ಧ ಭೆಟ್ಟಿಯಾಗಿ ಮಾರ್ಗದರ್ಶನ ಮಾಡುತ್ತಾನೆ. ಅವರನ್ನು ಪರೀಕ್ಷೆಗೊಳಪಡಿಸುತ್ತಾನೆ. ಈ ಸಿದ್ಧನ ವೇಷಭೂಷಣಗಳನ್ನು ಈ ಕಾವ್ಯ ಚಿತ್ರಿಸಿದೆ. ‘ಈ ಸಿದ್ಧ ಕಿನ್ನರಿ ಕಿರಿ ಜಡಿ ಕಟ್ಟಿದ ಕ್ಯಾಮಿ ಬಣ್ಣದ ಕಂತಿ ತೊಟ್ಟಿದ್ದ. ಬಣ್ಣದ ಜೋಳಿಗೆ ಹಾಕಿದ್ದ. ಬಂಗಾರದ ಸಿಂಗನಾಥನ್ನು ಜೋಳಿಗಿ ಒಳಗ ಇಟ್ಟಿದ್ದ ರುಮ್ಮು ಚೂರಿ ಬಗಲಾಗ ಹಿಡಿದಿದ್ದ ಶಂಖಾ, ತ್ರಿಶೂಲಾ, ಕಿನ್ನರಿ ಕಾಯಿ ಅವನಲ್ಲಿತ್ತು’ ಎಂದು ಹೇಳುತ್ತದೆ. ಈ ಸಿದ್ಧರು ಹಿಪ್ಪಿಸಾರಂಗಗುಡ್ಡ, ಶಾಡಬಾಬಾನ ಗುಡ್ಡದಲ್ಲಿ ವಾಸಿಸುತ್ತಿದ್ದರು. ಪಶುಪಾಲನೆಯಲ್ಲಿ ತೊಡಗಿಸಿಕೊಂಡಿದ್ದ ತುಕ್ಕಪ್ಪ, ಸೋಮರಾಯ, ಕಣ್ಣವ್ವ, ಜಕ್ಕಪ್ಪ, ಮಾಳಪ್ಪ ಇವರೂ ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿಯೇ ಕಾಲಕಳೆಯುತ್ತಿದ್ದರು. ಬಿಲ್ಲಾಲಗುಡ್ಡ, ನಾಥೇಪೂತೆ, ಹಿಪ್ಪಿಸಾರಂಗಗುಡ್ಡ, ಕರಸುಂಡಿಬೆಟ್ಟ, ಸಂಗಮನಾಥ ಮುರಿ, ಬಾಲಿಗುಬ್ಬಿ, ಬಂಗಾರ ಕಿಣಗಿ, ನಿಟ್ಟೂರು, ನೊಲಂಗಾ, ಹಾಲಹವಲಿ, ಶಾಲಬಿದರಿ, ಶಾಡಬಾಬಾನಗುಡ್ಡ ಮುಂತಾದವುಗಳೆಲ್ಲ ಕಾಡು ಬೆಟ್ಟಗಳಿಂದ ಕೂಡಿದ ಸ್ಥಳಗಳು. ಈ ಸ್ಥಳಗಳಲ್ಲಿ ಸಿದ್ಧರು ಈ ಪಶುಪಾಲಕರಿಗೆ ಭೆಟ್ಟಿಯಾಗುವ ಮತ್ತು ಪಶುಪಾಲಕರು ಹೆಜ್ಜೆ ಹೆಜ್ಜೆಗೂ ಈ ಸಿದ್ಧರು ಸಮೂಹ ಸ್ಮರಿಸುವುದನ್ನು ಗಮನಿಸಿದರೆ, ಪಶುಪಾಲಕರ ಮೇಲೆ ಸಿದ್ಧರು ಅತ್ಯಂತ ಗಾಢವಾದ ಪ್ರಭಾವ ಬೀರಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರದೇಶದ ಪಶುಪಾಲಕರು ಶೈವಾರಾಧಕರಾಗಿದ್ದರು. ಅವರನ್ನ ಈ ಪಂಥದ ಸಿದ್ಧರು ಪತ್ತಷ್ಟು ಪ್ರಬಲಗೊಳಿಸಿರಬೇಕು. ಮಾಳಿಂಗರಾಯ ಕಾವ್ಯ ಗೋರಖನಾಥ ಪಂಥದ ಹಿನ್ನಲೆಯಲ್ಲಿ ರೂಪ ಪಡೆದುಕೊಂಡಿದೆಯೊ ಅಥವಾ ಕಾವ್ಯ ಕಟ್ಟು ಹಂತದಲ್ಲಿ ಈ ನಾಥ ಪರಂಪರೆ ಪ್ರಭಾವ ಬೀರಿರಬಹುದೆ ಎಂಬುದರ ಬಗೆಗೆ ಸಂಶೋಧನೆ ಚರ್ಚೆಗಳಾಗಬೇಕಾಗಿದೆ.

            ಈ ಶಾಡಬಾಬಾನ ಗುಡದಲ್ಲಿ
ಆ ಮುಂದ ಕಾಣು ಬೆಟ್ಟದಲ್ಲಿ
ನೀನು ಗರಡಿನ ಮನಿ ತಯಾರ ಮಾಡಂತ ಹೇಳ್ದಾs
ಸೋಮರಾಯ ತನ್ನ ಕೈಯಲ್ಲಿ ಇರತಕ್ಕಂತಾ
ರಾಯಬಾರಿ ಬಡಗಿನ್ನ ಹಿಡಿದು
ಆ ಗರಡಿನ ಮನಿಗಳ ತಗದಾ
ಆ ಸಮಯದಲ್ಲಿ
ಗೌಡ ಬಂಗಾಲಿ ಜೋಗಿ
ಸೋನಾರ ಸಿದ್ಧ ಭೈರಿ ಇದ್ದಂತವರು
ಆ ಸೋಮರಾಯನಿಗೆ
ಬಾವಾನ ಬಂಡೀ ವಿದ್ಯಾ ಕಲಿಸಿದರು…..

            ಶಾಡಬಾಬಾನ ಗುಡಾದಾಗ ಅಲ್ಲೀs
ಗೋರುಖ ವಿದ್ಯಾ ಕಲತರ ಅಲ್ಲೀs
ಗುರುವ ಸೋನಾರ ಸಿದ್ಧನ ಬಲ್ಲೀs….. .

ಶಾಡಬಾಬಾನ ಗುಡ್ಡದಲ್ಲಿ ಸೋನಾರ ಸಿದ್ಧ ಸೋಮರಾಯ, ಜಕ್ಕಪ್ಪ ಮತ್ತು ಮಾಳಪ್ಪನಿಗೆ ಗೋರುಖ ವಿದ್ಯೆ ಹೇಳಿಕೊಟ್ಟಿದ್ದ ಎಂಬುದನ್ನು ಮೇಲಿನ ಪದ್ಯ ಸ್ಪಷ್ಟವಾಗಿ ಹೇಳುತ್ತದೆ. ಗೋರುಖ ವಿದ್ಯೆ ಕಲಿತು ಆ ಮೂಲಕ ಮಾಳಪ್ಪ, ಜಕ್ಕಪ್ಪ ಪವಾಡಗಳನ್ನು ಮಾಡುತ್ತ ಶಿಷ್ಯರನ್ನು ಸಂಪಾದಿಸಸಿದ್ದರು ಎಂಬುದು ಸ್ಪಷ್ಟ. ಅದಕ್ಕಾಗಿ ಮಾಳಪ್ಪನನ್ನು ‘ಸಿದ್ಧ ಮಾಳಪ್ಪ, ಸಿದ್ಧ ಸಿದ್ಧರಲ್ಲಿ ಹೆಚ್ಚಿನ ಸಿದ್ಧ’ ಎಂದು ಕರೆದಿದ್ದಾರೆ. ಮಾಳಪ್ಪ, ಜಕ್ಕಪ್ಪ ಮಾಡಿರುವ ಎಲ್ಲ ಪವಾಡಗಳ ಹಿಂದೆ ಗೋರುಖ ವಿದ್ಯೆ ಅಡಗಿದೆ. ಮಾಳಪ್ಪ, ಜಕ್ಕಪ್ಪ ಗೋರಖನಾಥ ಪಂಥಕ್ಕೆ ಸೇರಿದವರಾಗಿರಬಹುದು. ಪಶುಪಾಲಕರು ಸೋನಾರ ಸಿದ್ಧನನ್ನು ಕಂಡರೆ ಅಂಜುತ್ತಿದ್ದರು. ಸಿದ್ಧರು ಹೇಳಿದ ಕೆಲಸಗಳನ್ನು ಮಾಡದಿದ್ದರೆ ನಮ್ಮನ್ನು ಕಷ್ಟಕ್ಕೆ ಗುರಿಮಾಡಬಲ್ಲರು ಎಂದು ತಿಳಿದುಕೊಂಡಿದ್ದರು. ಈ ಸಿದ್ಧರು ಅವಗುಣಗಳನ್ನು ಬೆಳೆಸಿಕೊಂಡಿದ್ದರು.

ಅಲ್ಲದವುಗುಣ ದೇವರುs
ಸ್ವಾಮಿಘಾತಕ ದೇವರs
ಜೀವಕ ಮುಣುಗು ದ್ಯಾವರ
ಗಾರುಡಿಗಿ ವಿದ್ಯಾ ಗಾಂಜಿಖೋರs
ದಂದಲ್
ಖೋರ್ ದೇವರದಾನs….. .

ಎಂಬುದನ್ನು ಈ ಪದ್ಯ ತಿಳಿಸುತ್ತದೆ.

‘೧೨ನೇ ಶತಮಾನಕ್ಕೆ ವೈಷ್ಣವರಲ್ಲಿ ಮೊದಲು ಮಹಾನುಭವ ಪಂಥ ಹುಟ್ಟಿತು. ಈ ಪಂಥವನ್ನು ಚಕ್ರಧರ ಹುಟ್ಟುಹಾಗಿದೆ. ಚಕ್ರಧರ ಮಹಾರಾಷ್ಟ್ರದಲ್ಲೆಲ್ಲ ಸಂಚರಿಸಿದ. ಇವನು ದೇವಗಿರಿ ಯಾದವ ರಾಜರ ಆಶ್ರಯವನ್ನು ಪಡೆದುಕೊಂಡ. ಮಹಾನುಭವ ಪಂಥದ ನಂತರ ನಾಥಪಂಥ ಹುಟ್ಟಿತು. ನಾಥ ಪಂಥದ ಹರಿಕಾರನೇ ಆದಿನಾಥ. ಈ ನಾಥಪಂಥವನ್ನು ಮತ್ಸೇಂದ್ರನಾಥ, ಗೋರಕ್ಷಕನಾಥ, ಗಹಿನೀನಾಥ, ನಿವೃತ್ತಿನಾಥ ಮತ್ತು ಜ್ಞಾನದೇವ ಮುಂದುವರೆಸುತ್ತಾರೆ. ಜ್ಞಾನದೇವನ ಕಾಲದಿಂದ ವೈಷ್ಣವ ಮತ ಚೇತರಿಸಿಕೊಳ್ಳುತ್ತದೆ. ಜ್ಞಾನದೇವ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದ ಜನರ ಮತ್ತು ಸಂತ ಪರಂಪರೆಯ ಮೇಲೆ ವಿಶೇಷ ಪ್ರಭಾವ ಬೀರುತ್ತಾನೆ. ಇವನ ಸಮಕಾಲೀನ ನಾಮದೇವ, ಜನಾಬಾಯಿ, ಏಕನಾಥ, ದಾಸೋಪಂಥ, ತುಕಾರಾಮ, ರಾಮದಾಸ ಮುಕ್ತೇಶ್ವರ, ಮೊರೋಪಂಥ ಮೊದಲಾದ ಸಂತರು ‘ಜ್ಞಾನದೇವನನ್ನು ಜ್ಞಾನದ ಆಗರವೆಂದು ಗುರುಭಕ್ತಿಯಿಂದ ಹೊಗಳುತ್ತಾರೆ’ ಸಂತರು ಮಹಾರಾಷ್ಟ್ರದಲ್ಲಿ ವರ್ಣಾಶ್ರಮಗಳ ಕಠೋರವಾದ ಕಟ್ಟುನಿಟ್ಟುಗಳನ್ನು ಅಳಿಸಿ ಅದ್ವೈತದ ತಳಹದಿಯ ಮೇಲೆ ಭಕ್ತಿಯ ಮಂಟಪವನ್ನು ಕಟ್ಟಿದರು.

ಮಹಾನುಭವ ಮತ್ತು ನಾಥ ಪಂಥಕ್ಕಿಂತ ಮೊದಲು ಪಂಢರಪುರದಲ್ಲಿ ‘ವಾರಕಾರಿ’ ಪಂಥವಿತ್ತು. ಈ ಪಂಥವು ಪ್ರಬಲವಾಗಿತ್ತು. ಇದು ಭಾಗವತ ಸಂಪ್ರದಾಯಕ್ಕೆ ಸೇರಿದ್ದರೂ ಅದ್ವೈತೋಪಾಸನೆ ಇದರ ಮುಖ್ಯ ಗುರಿ. ಶ್ರೀಕೃಷ್ಣ-ಪಾಂಡುರಂಗ ಇವರ ಆರಾಧ್ಯ ದೇವತೆ. ಜ್ಞಾನದೇವ ನಾಥಪಂಥದ ಕೃಷ್ಣಭಕ್ತ. ಹೀಗಾಗಿ ಈ ಪಂಥದ ಮೇಲೆ ಅವನಿಗೆ ಹೆಚ್ಚು ಗೌರವವಿತ್ತು.

ವೈಷ್ಣವ ಧರ್ಮದ ಜನಪ್ರಿಯತೆಯ ಪ್ರಭಾವ ಈ ಕಾವ್ಯದ ಮೇಲಾಗಿದೆ. ಮಾಳಿಂಗರಾಯ ಪಾಂಡವರ ಕೋಟೆಗೆ ಹೋಗಿ ಕೋಟೆಯನ್ನು ಭೇದಿಸಿ ಅಲ್ಲಿರುವ ಹೂವು ಕಾಯಿಗಳನ್ನು ತರುವ ಮತ್ತು ಧರ್ಮರಾಜನಿಗೆ ಬುದ್ಧಿವಾದ ಹೇಳುವುದನ್ನು ಇಲ್ಲಿ ಸಾಂಕೇತಿಕವಾಗಿ ಬಳಸಿದ್ದಾರೆ. ಭಕ್ತಿ ಪಂಥದ ಚಳುವಳಿಯಿಂದ ಶೈವ ಧರ್ಮದ ಬಂಧ ಸಡಿಲವಾಯಿತು. ಮಹಾಭಾರತದ ಮತ್ತು ಜನಪದ ಕಥೆಗಳು ಧರ್ಮರಾಜ ಸತ್ಯ ನ್ಯಾಯ ಧರ್ಮಕ್ಕಾಗಿ ಹೋರಾಡಿದ ವ್ಯಕ್ತಿ ಎಂದು ಚಿತ್ರಿಸುವೆ. ಧರ್ಮರಾಜ ಯಾವ ತಪ್ಪನ್ನು ಮಾಡಿದವನಲ್ಲ. ಇಲ್ಲಿ ಧರ್ಮರಾಜನಿಗೆ ಮಾಳಿಂಗರಾಯ ಹೊಯ್ಕಳ (ಭವಿಷ್ಯ) ಹೇಳುವುದನ್ನು ಮತ್ತು ಧರ್ಮರಾಜ ಸಿದ್ಧರನ್ನು ಬಂಧಿಸಿಟ್ಟಿದ್ದ ಎಂದು ಚಿತ್ರಿಸಿರುವುದನ್ನು ಗಮನಿಸಿದಾಗ, ಧರ್ಮರಾಜ ಶ್ರೀಕೃಷ್ಣನ ಭಕ್ತ. ವೈಷ್ಣವ ಮತ ಪಾಲಕ ಎಂಬ ಕಾರಣದಿಂದಲೊ ಅಥವಾ ಧರ್ಮರಾಜನ ಸ್ವಭಾವಗಳನ್ನುಳ್ಳ ವೈಷ್ಣವ ಪಂಥ ಆರಾಧಿಸುವ ರಾಜ ಅಥವಾ ಮಾಂಡಳಿಕ ಆ ಪ್ರದೇಶದಲ್ಲಿದ್ದಿರಬಹುದು. ಅವನು ಪವಾಡ ಪುರುಷರಂತೆ ಜನರನ್ನು ಸೆಳೆಯುವ ಸಿದ್ಧರನ್ನು ಬಂಧಿಸಿರಬಹುದು. ‘ಹುಳು ಮುಟ್ಟದ ಹೂವು ಕಾಯಿ’ ಎಂದರೆ ಶ್ರೇಷ್ಠರು ಬಳಸುವ ವಸ್ತುಗಳು ಎಂದು ಅರ್ಥೈಸಿಕೊಳ್ಳಬಹುದು. ಅಂತಹ ಶ್ರೇಷ್ಠ ಹೂ ಕಾಯಿಗಳನ್ನು ತರಲು ಹೋದ ಶೈವ ಮತದ ಮಾಳಪ್ಪ, ಸಿದ್ಧರನ್ನು ಬಿಡಿಸಿ ಆ ರಾಜನ ಸೊಕ್ಕು ಮುರಿದು, ಮುಂದಿನ ಆಗು-ಹೋಗುಗಳು ಬಗೆಗೆ ಅವನಿಗೆ ತಿಳಿಸಿ ಬಂದಿರಬೇಕು ಎಂಬ ಅಭಿಪ್ರಾಯವನ್ನು ತಾಳಬಹುದು.

ಭಕ್ತಿಪಂಥದ ಚಳುವಳಿ ಅದರ ಮೂಲಕ ವೈಷ್ಣವ ಧರ್ಮ ಮತ್ತು ವಿಠ್ಠಲನ ಕಡೆಗೆ ಸಾಗಿದ ಸಂತರು ಮತ್ತು ಸಮಾಜದ ಎಲ್ಲ ಕೆಳ ಮತ್ತು ಮೇಲ್ಜಾತಿ ವರ್ಗದ ಭಕ್ತರ ಸಮೂಹ ಪಂಢರಪುರಕ್ಕೆ ಬರಲಾರಂಭಿಸಿತು. ಶೈವ ಧರ್ಮ ಅದನ್ನು ಸಹಿಸಲಿಲ್ಲ. ಆ ಸಂದರ್ಭದಲ್ಲಿ ಶೈವಮತ ವಿಠ್ಠಲನನ್ನು ಕೌತುಕ ದೃಷ್ಟಿಯಿಂದ ನೋಡಿದರೂ ಸಾಕು. ಭಕ್ತಿಪಂಥದ ಮೂಲಕ ಪುನರುತ್ಥಾನ ಪಡೆದ ಪಂಢರಪುರದ ವಿಠ್ಠಲನನ್ನು ಮಾಳೀಂಗರಾಯನ ಮೂಲಕ ಶಿವನ ಶಿಷ್ಯನನ್ನಾಗಿ ರೂಪಿಸಿದ್ದಾರೆ. ಶೈವಮತಕ್ಕೆ ವಿಠ್ಠಲನಿಗಿಂತ ಶಿವನೇ ಶ್ರೇಷ್ಠ ಎಂಬುದನ್ನು ವ್ಯಕ್ತಪಡಿಸಬೇಕಾಗಿತ್ತು. ಅದನ್ನು ಈ ಕಾವ್ಯದಲ್ಲಿ ಸಾಧಿಸಿದೆ.

            ಹರಿಯು ಇದ್ದರ ಸಹಿತ
ಗುರು ಬೇಕೋ ಅವಗs
ಭವಕ ಬಂದ ಮ್ಯಾಲೀs
ಸದ್ಗುರವಿನ ಹೊರತs
ಸುಖಾ ಸಿಗುವುದಿಲ್ಲೋs
ಸರವ ಲೋಕದಲ್ಲೀs
ಹತ್ತು ಅವತಾರ ತಾಳಿದ ವಿಷ್ಣು
ಭೂಮಂಡಲದಲ್ಲೀs
ಪ್ರತ್ಯೇಕವತಾರದಲ್ಲಿ ಒಬ್ಬೊಬ್ಬ ಗುರುವಿನ
ಪಡಕೊಂಡೊ ಕ್ಷಣದಲ್ಲೀss …..

            ಸಿದ್ಧರಲ್ಲಿ ಸಿದ್ಧಾ ಹೆಚ್ಚಿನ ಸಿದ್ಧs
ಬೀಜಗುಂತಿ ಮ್ಯಾಲೀss
ಅವನ ಹಂತೇಲಿ ಹೋಗ್ಬೇಕೊ ಅಲ್ಲೀs
ಬೀಜಗುಂತಿ ಮ್ಯಾಲೀs
ಅವನ ಹಂತೇಲಿ ಹ್ವಾದರs
ಗುರು ನನಗ ಭೆಟ್ಟಿಯಾದಾನಲ್ಲೀ …..

ಹರಿ ಬೆಳೆಯಲಿಕ್ಕೆ ಹರನ ಅವಶ್ಯಕತೆ ಇದೆ. ಹರ ನೇರವಾಗಿ ಹರಿಯ ಕೈಗೆ ಸಿಗುವಂತವನಲ್ಲ ಹರಿಯು ಹರನನ್ನು ಭೆಟ್ಟಿಯಾಗಬೇಕಾದರೆ ಅವನ ಶಿಷ್ಯನ ಮೂಲಕವೇ ಬರಬೇಕು ಎಂಬುದನ್ನು ಹೇಳುತ್ತದೆ. ಪಾಂಡುರಂಗ ಹುಲಜಂತಿಗೆ ಬ್ರಾಹ್ಮಣ ವೇಷದಲ್ಲಿ ಬರುತ್ತಾನೆ. ಮಾಳಿಂಗರಾಯನ ನಾಲ್ಕು ಮಕ್ಕಳು ಅನ್ನ ಮತ್ತು ವಸ್ತ್ರದಾನ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಪಾಂಡುರಂಗ ನನಗೆ ಅನ್ನ, ವಸ್ತ್ರದಾನಗಳು ಬೇಕಾಗಿಲ್ಲ

            ಚಿನ್ನದಾನ ಜ್ಞಾನದಾನ ಇದ್ದರ ತಮ್ಮಾs
ದಾನ ಮಾಡಿರಿ ಇಲ್ಲೀss …..

ಎಂದು ಕೇಳುತ್ತಾನೆ. ಮಾಳಿಂಗರಾಯನ ಮಕ್ಕಳು ನಮ್ಮ ತಂದೆಯ ಹತ್ತಿರ ಹೋಗಿ ಅಲ್ಲಿ ನೀವು ಕೇಳುವ ಚಿನ್ನ ಮತ್ತು ಜ್ಞಾನದಾನ ಸಿಗುತ್ತದೆ ಎಂದು ಹೇಳುತ್ತಾರೆ. ಪಾಂಡುರಂಗ ಮಾಳಪ್ಪನಿದ್ದಲ್ಲಿಗೆ ಹೋಗುತ್ತಾನೆ. ಮಾಳಪ್ಪನಿಗೆ ವಿಷಯ ತಿಳಿದು ಪಾಂಡುರಂಗನ ಹತ್ತಿರ ಹೋಗಿ ಕಾಲು ಹಿಡಿದುಕೊಳ್ಳುತ್ತಾನೆ. ಕಾಲು ಬಿಡು ಎಂದರೂ ಮಾಳಪ್ಪ ಬಿಡುವುದಿಲ್ಲ.

            ನಿನ್ನ ಹಸ್ತ ನನ್ನ ತೆಲಿಮ್ಯಾಲ ಇಟ್ಟರೆs
ಪಾದ ಬಿಡ್ತೀನಿಲ್ಲೀs …..
ಎಂದಾಗ ವಿಠ್ಠಲ ಮಾಳಪ್ಪನ ತಲೆಯ ಮೇಲೆ ಹಸ್ತ ಇಡುತ್ತಾನೆ.
ಕಲಿಯುಗದಲ್ಲಿ ನಂದು ನಿಂದು ಭೇಟಿ
ದೀಪಾವಳಿ ಹಬ್ಬದಲ್ಲೀss
ಕಾಲಾನುಕಾಲಾ ವಂಶಪರಂಪರಾs
ಭೇಟಿಯಾಗುದಿಲ್ಲೀss …..

ಎಂದು ಪಾಂಡುರಂಗ ಮಾಳಪ್ಪನಿಗೆ ಹೇಳುತ್ತಾನೆ. ಬೊಬ್ಬಲಿವನದಲ್ಲಿ ಮಾಳಪ್ಪನ ಭೆಟ್ಟಿಯ ಕುರುಹುಗಾಗಿ ನೆಲೆಸುತ್ತಾನೆ. ಹುಲಜಂತಿಯಲ್ಲಿ ಮಾಳಪ್ಪನ ಸಮಾಧಿ ಹತ್ತಿರ ವಿಠ್ಠಲನ ಚಿಕ್ಕ ದೇವಸ್ಥಾನವಿದೆ. ಪಾಂಡುರಂಗ ಮಾಳಪ್ಪನ ಭಕ್ತಿ ಪರೀಕ್ಷಿಸಲು ತನಗೊಬ್ಬನಿಗೆ ಮಾಡಿರುವ ಅಡಿಗೆಯಲ್ಲಿ ಊರ ಜನರೆಲ್ಲರಿಗೂ ಊಟಕ್ಕೆ ಹಾಕು ಎಂದು ಮಾಳಪ್ಪನಿಗೆ ಹೇಳುತ್ತಾನೆ. ಪಾಂಡುರಂಗನ ಅಪೇಕ್ಷೆಯಂತೆ ಊರವರಿಗೆಲ್ಲ ಊಟ ಹಾಕಿ ತನ್ನಲ್ಲಿದ್ದ ಗುರುಭಕ್ತಿಯನ್ನು ತೋರಿಸುತ್ತಾನೆ. ಊರ ಜನರೆಲ್ಲ ಊಟ ಮಾಡಿದರೂ ಇನ್ನೂ ಅಡಿಗೆ ಉಳಿದಿರುತ್ತದೆ. ಮಾಳಪ್ಪ ಮಕ್ಕಳನ್ನು ಕರೆದು ‘ಉಳಿದು ಎಡಿ ಇದು ಎಂಜಲಾಯ್ತುಂತ’ ಹೇಳಿ ಅದನ್ನು ನೀರಿನಲ್ಲಿ ಹಾಕಿಸಿ

            ಮತ್ತೊಮ್ಮೆ ಸಾಮಾನ ತರಿಸೀs
ಪಂಚಾಮೃತ ಅಡಗಿಯ ಮಡ್ಸ್ಯಾರಾs ….. .

ಎಂದು ಹೇಳುವ ಮೂಲಕ ಇಲ್ಲಿ ವೈದಿಕರ ಮಂಡಿವಂತಿಕೆ ಬಗೆಗೆ ಮಾಳಪ್ಪ ಅರಿತುಕೊಂಡಿರುತ್ತಾನೆ.

ಪಾಂಡುರಂಗ ಊಟ ಮಾಡಿ ಮಾಳಪ್ಪನ ದಿನಚರಿ ಬಗೆಗೆ ವಿಚಾರಿಸುತ್ತಾನೆ. ದಿನ ನಿತ್ಯ ಹನ್ನೆರಡು ತಾಸು ಕುರಿ ಕಾಯುತ್ತೇನೆ. ಸಾವಿರದ ಏಳ್ನೂರಾ ಒಂದು ಲಿಂಗ ಮಾಡಿ ಪೂಜೆ ಮಾಡುತ್ತೇನೆಂದು ಮಾಳಪ್ಪ ತಿಳಿಸಿದಾಗ ಪಾಂಡುರಂಗ ಹುಚ್ಚಾಗಿ ನಿಲ್ಲುತ್ತಾನೆ ಮತ್ತು

            ಒಂದ ಲಿಂಗ ನನ್ಗ ಕೊಡಬೇಕಂದರಾs
ನಾನು ಲಿಂಗದ ಸೇವಾ ಮಾಡ್ತಿನಂದರಾs …..
ಲಿಂಗ ನೀನು ಕೊಡಬೇಕ ಅಂದಾರಾs
ಲಿಂಗ ಕೊಡದಿದ್ರೆ ನಾನು ಹೋಗೋದಿಲ್ಲs
ಕೇಳಪ್ಪ ಅಂದಾರಾs ….. .

ಪಾಂಡುರಂಗ ನನ್ನ ಪರೀಕ್ಷೆ ಮಾಡಲು ಲಿಂಗ ಕೇಳುತ್ತಿರಬಹುದೆಂದು ಭಾವಿಸಿ ಮಾಳಪ್ಪ, ತನ್ನ ಗುರು ಲಿಂಗಬೀರಪ್ಪನ ಧ್ಯಾನ ಮಾಡುತ್ತಾನೆ. ಲಿಂಗಬೀರಪ್ಪ ಹೇಳಿದಂತೆ ಮಾಳಪ್ಪ ‘ಹೊನ್ನ ಹಗರಣೆ ದಡಿಮ್ಯಾಗ, ಮೂರು ಗುಂಡಿಯಲ್ಲಿ’ ಲಿಂಗ ಕೊಡುತ್ತನೆಂದು ಪಾಂಡುರಂಗನಿಗೆ ತಿಳಿಸಿ, ಪಾಂಡುರಂಗನನ್ನು ಏಳಂಪೂರ ಮೇಲಿಂದ ಹಾಯ್ದು ಸೊನ್ಯಾಳ ಗುಡ್ಡಕ್ಕೆ ಕರೆತರುತ್ತಾನೆ.

            ಅಷ್ಟರಲ್ಲಿ ತೋರಿದ ಅವತಾರಾs
ಉಗ್ರ ಮಿಂಚ ಆಗಿ ಬೀರಣ್ಣ ದೇವ್ರs
ಕೋಲ ಮಿಂಚ ಹೊಡದವರಾs
ಕೈ ಮಾಡಿ ಮಾಳಪ್ಪ ದೇವ್ರ ತೋರ್ಸ್ಯಾರಾs
ಪಾಂಡುರಂಗ ಓಡಿ ಓಡಿ ಹ್ವಾದಾರs
ಮುಟ್ಟಿಗೆಲ್ಲಿ ಲಿಂಗಾs ಹಿಡಿದಾರಾs
ಮೂರು ಲೋಕ ಬ್ರಹ್ಮಾಂಡ ಅಳಗ್ಯಾಡೇದs
ಕೇಳರಿ ಮಜಕೂರಾss
ಲಿಂಗ ಬರಲಿಲ್ಲಾ ಮ್ಯಾಲಕ ಪೂರಾs
ಲಿಂಗಿಗಿ ಸ್ಥಾಪನೆ ಅಲ್ಲೆ ಮಾಡ್ಯಾರಾs
ಮುರುಸಿದ್ಧಂತ ಹೆಸರಿಟ್ಟ ಕರದಾರಾs
ಹನ್ನೆರಡು ವರ್ಷ ಬೀರಲಿಂಗನ ಸೇವಾs
ಪಾಂಡುರಂಗ ಮಾಡ್ಯಾರಾs
ಮಾಳಪ್ಪನಿಂದ ಲಿಂಗ ಪಡದಾರಾs
ಅದೇ ಲಿಂಗ ತೆಲಿಮ್ಯಾಲ ಹೊತ್ತಾರಾs ….. . . .

ಶೈವ ಮತ್ತು ವೈಷ್ಣವ ಧರ್ಮಗಳನ್ನು ಮುಖಾಮುಖಿಯಾಗಿ ನಿಲ್ಲಿಸಿದರೆ, ಅದರ ಪರಿಣಾಮಗಳು ಏನಾಗುತ್ತವೆ ಎಂಬುದರ ಚಿತ್ರಣ ಇಲ್ಲಿದೆ. ಶೈವ ಧರ್ಮ ತನ್ನ ದೈವ ಮತ್ತು ತತ್ವಗಳನ್ನು ವೈಷ್ಣವ ಧರ್ಮದ ದೈವದ ತಲೆಯ ಮೇಲೆ ಹೇರುವ ಮತ್ತು ಹನ್ನೆರಡು ವರ್ಷಗಳವರೆಗೆ ಸೇವೆ ಮಾಡಿಸಿಕೊಳ್ಳುವುದರ ಮೂಲಕ, ಶೈವ ಮತ ನಾನೇ ಶ್ರೇಷ್ಠ ಎಂದು ಪ್ರಕಟಪಡಿಸಿರುವುದನ್ನು ಇಲ್ಲಿ ಕಾಣುತ್ತೇವೆ. ಪಾಂಡುರಂಗ ಲಿಂಗ ಪಡೆಯಲು ಹೋದಾಗ ಲಿಂಗ ಸಿಗುವುದಿಲ್ಲ. ಲಿಂಗಕ್ಕೆ ಅಲ್ಲಿಯೇ ಸ್ಥಾಪನೆ ಮಾಡಿ ‘ಮುರುಸಿದ್ಧ’ ಎಂದು ಹೆಸರಿಸಿ ಸೇವೆ ಮಾಡುತ್ತಾನೆ. ರಾವಣ ಶಿವನಿಂದ ಆತ್ಮಲಿಂಗ ಪಡೆದು ಬರುವಾಗ ದಾರಿ ಮಧ್ಯದಲ್ಲಿ ಗಣಪತಿಯ ಮೂಲಕ ಲಿಂಗವನ್ನು ಗೋಕರ್ಣದಲ್ಲಿ ಪ್ರತಿಷ್ಠಾಪನೆ ಮಾಡಿಸಿದ ಕಥೆ ಇಲ್ಲಿ ನೆನಪಾಗುತ್ತದೆ.

ಮಾಳಿಂಗರಾಯನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ತಾಂಬಾ ಗೌಡನ ಮಗಳು ಲಕ್ಷ್ಮಿ. ಇವಳು ತೀರಿಕೊಂಡ ಮೇಲೆ ತುರಬಿ ಹಟ್ಟಿ ಕೋರಿ ಚಂದ್ರಯ್ಯನ ಮಗಳು ಈರವ್ವನನ್ನು ಮದುವೆಯಾಗುತ್ತಾನೆ. ಈರವ್ವ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಈ ಮಕ್ಕಳು ದೈವಬಲದಿಂದಲೇ ಜನಿಸುತ್ತವೆ. ಪುರಾಣ ಕಥೆಗಳಲ್ಲಿ ಸಂತಾನ ಭಾಗ್ಯ ಲಭಿಸುವಂತೆ ಈ ಕಾವ್ಯದಲ್ಲಿಯೂ ಈರವ್ವ ತನ್ನ ಜಡೆಯಿಂದ ಉದುರಿದ ನಾಲ್ಕು ಮಲ್ಲಿಗೆ ಹೂವುಗಳನ್ನು ಸೇವಿಸಿ ಮಕ್ಕಳ ಭಾಗ್ಯ ಪಡೆದುಕೊಳ್ಳುತ್ತಾಳೆ.

            ನಾಲ್ಕು ಮಲ್ಲಿಗಿ ನಾಲ್ಕು ಮಂದಿ ಧರಮರs
ಹುಟ್ಟಿ ಬಂದಾರಮ್ಮೋss
ರೆಬ್ಬರಾಯ, ಬೀರಮುತ್ಯಾ
ಕಣಮುತ್ಯಾ ಸೋಮರಾಯಾs
ಹುಟ್ಟಿದರೊ ಧರಮೋs
ಅದೇ ಧರಮರಿಗಿ ಏಳಮಂದಿ ಧರಮರು
ಜನಿಸಿ ಬಂದರಮ್ಮೋs
ಏಳಮಂದಿ ಧರಮರಿಗಿ ಸಾವಿರ ಕಂಬಳಿ
ಲೆಕ್ಕ ಆಯ್ತೋs ತಮ್ಮೋs
ಅಂದಿನಿಂದ ಹಿಡ್ಕೊಂಡು ಇಂದಿನವರೆಗೆ
ಇದ್ದಾರಪ್ಪೊ ಧರಮೋss ….. . .

ಮಾಳಿಂಗರಾಯನ ನಾಲ್ಕು ಮಕ್ಕಳಿಂದ ಬೆಳೆದ ಸಂತತಿಯೇ ಈಗ ಹುಲಜಂತಿಯಲ್ಲಿರುವುದು. ದೈವದ ಬಲದಿಂದ ಮಾಳಿಂಗರಾಯನ ವಂಶ ಇಷ್ಟು ದೊಡ್ಡದಾಗಿ ಬೆಳೆದಿದೆ. ಇಡೀ ಹಾಲುಮತ ಸಮುದಾಯ ಇವರನ್ನು ಗುರುಸ್ಥಾನದಲ್ಲಿಟ್ಟು ನೋಡುತ್ತದೆ ಎಂಬುದನ್ನು ಅಡಿವೆಪ್ಪ ಒಡೆಯರ ಹೇಳುತ್ತಾರೆ.

ಮಾಳಿಂಗರಾಯ ಅನೇಕ ಪವಾಡಗಳನ್ನು ಮಾಡುತ್ತ ಹುಲಜಂತಿ ಊರಿನಿಂದ ಮೂರು ಮೈಲು ದೂರದಲ್ಲಿ ಬೊಬ್ಬಲಿವನದಲ್ಲಿ ದಡ್ಡಿ ನಿರ್ಮಿಸಿಕೊಂಡು ಕಾಲ ಕಳೆಯುತ್ತಾನೆ. ಮಾಳಪ್ಪನ ಗುರು ಬೀರಪ್ಪ ಹುನ್ನೂರು ಗ್ರಾಮದಲ್ಲಿ ಐಕ್ಯವಾದ ವಿಷಯ ತಿಳಿದು ‘ಶ್ರಾವಣ ಅಮಾವಾಸ್ಯೆ ಆದಿತ್ಯವಾರ ತನ್ನ ಬಂದು ಬಳಗಕ್ಕೆಲ್ಲ ಹೇಳಿಕಳಿಸುತ್ತಾನೆ. ಅಣ್ಣನಾದ ಜಕ್ಕಪ್ಪನು ಬರುತ್ತಾನೆ. ನಾಲ್ಕು ಜನ ಮಕ್ಕಳು ಸೇರಿರುತ್ತಾರೆ. ಅಂದು ಮಧ್ಯರಾತ್ರಿ ಮಾಳಪ್ಪ ಜೀವಂತ ಸಮಾಧಿ ಸೇರಿಕೊಳ್ಳುತ್ತಾನೆ.

ಮಾಳಿಂಗರಾಯ ವಾಸಿಸುತ್ತಿದ್ದ ಮತ್ತು ಐಕ್ಯವಾದ ಹುಲಜಂತಿಯ ಬೊಬ್ಬಲಿವನದ ಸ್ಥಳಕ್ಕೂ ಒಂದು ಶಕ್ತಿ ಇದೆ ಎಂದು ಭಾವಿಸುತ್ತಾರೆ. ಮಾಳಿಂಗರಾಯನ ನಂತರ ಜಕ್ಕಪ್ಪ ಏಣಕಿ ಮಠದಲ್ಲಿ ಸಮಾಧಿ ಸೇರಿಕೊಳ್ಳುತ್ತಾನೆ. ಮಾಳಿಂಗರಾಯ ಮರಣದ ನಂತರವೂ ಅನೇಕ ಪವಾಡಗಳನ್ನು ಮಾಡಿರುವುದನ್ನು ಈ ಕಾವ್ಯ ಹೇಳುತ್ತದೆ. ಮಾಳಿಂಗರಾಯನ ಮೊಮ್ಮಗ ಬರಗಾಲ ಸಿದ್ಧ ಇವನೂ ಅನೇಕ ಪವಾಡಗಳನ್ನು ಮಾಡಿದ್ದ ಎಂದೂ ಈ ಕಾವ್ಯ ಹೇಳುತ್ತದೆ.

ಮಾಳಿಂಗರಾಯನನ್ನು ಕುರಿತು ಅನೇಕ ಐತಿಹ್ಯಗಳು ಪ್ರಚಾರದಲ್ಲಿವೆ. ಐತಿಹ್ಯಗಳು ಸತ್ಯ ಎಂದು ಪ್ರಕಟಪಡಿಸಲು ಅನೇಕ ಭೌತಿಕ ವಸ್ತುಗಳನ್ನು ತೋರಿಸುತ್ತಾರೆ. ಮಾಳಿಂಗರಾಯನ ಮೊದಲನೆಯ ಅವತಾರವೆಂದು ಬಸವಣ್ಣನ ಗದ್ದಿಗೆ ತೋರಿಸುತ್ತಾರೆ. ಪಾಂಡುರಂಗ ಮಾಳಿಂಗರಾಯನ ಭೆಟ್ಟಿಗೆ ಬೊಬ್ಬಲಿ ವನಕ್ಕೆ ಬಂದದ್ದರ ಕುರುಹು ಎಂದು ವಿಠ್ಠಲನ ದೇವಸ್ಥಾನ, ಸಿಡಿಯಾಣದಲ್ಲಿ ಶೀಲವಂತಿ, ಬೊಬ್ಬಲಿವನದಲ್ಲಿ ಮಾಳಿಂಗರಾಯ ನೆಟ್ಟ ಗಿಡ, ಮಾಳಿಂಗರಾಯ ಹುಲಿ ಉಗುರಿನಿಂದ ಕಟ್ಟಿದ ಅಗಸೆ ಬಾಗಿಲು, ಮಾಳಿಂಗರಾಯ ಕುರಿ ಕಾಯಲು ತಿರುಗುವ ಸಂದರ್ಭದಲ್ಲಿ ಅವನು ಕುಳಿತುಕೊಂಡಿರುವ ಸ್ಥಳಗಳು ಹೀಗೆ ಹತ್ತುಹಲವಾರು ಭೌತಿಕ ವಸ್ತುಗಳನ್ನು ತೋರಿಸುತ್ತಾರೆ. ಈ ಕಾವ್ಯ ಹಾಡುವ ಕಲಾವಿದರು ಇಲ್ಲಿಯ ಐತಿಹ್ಯಗಳನ್ನು ವಿವರಿಸುತ್ತ ಇದು ಸತ್ಯ ಸಂಗತಿ ಎಂದು ಹೇಳುತ್ತಾರೆ. ಕಾವ್ಯದುದ್ದಕ್ಕೂ ಸರಿಯಾದ ಸ್ಥಳ, ಸಮಯ, ಘಟನೆಗೆ ಸಂಬಂಧಿಸಿದ ಆಧಾರ ಕೊಡುವುದರ ಮೂಲಕ ಅದು ಇಲ್ಲಿ ನಡೆದದ್ದು ಎಂದು ಪ್ರಕಟಿಸುತ್ತಾರೆ.

ಹೀಗೆ ಮಾಳಿಂಗರಾಯ ಸಂಶೋಧಕರಿಗೆ ಒಂದು ಸಮುದಾಯದ ಸಾಂಸ್ಕೃತಿಕ ವೀರನಾಗಿ ಕಂಡರೆ, ಕುರುಬ ಮತ್ತಿತರ ಸಮುದಾಯದವರಿಗೆ ಅವನೊಬ್ಬ ಸಿದ್ಧನಾಗಿ, ಮಹಾತ್ಮನಾಗಿ ಕಾಣುತ್ತಾನೆ.

ಗಿರಿಸೀಮೆ
ವಿದ್ಯಾರಣ್ಯ
ಗಂಗಾಧರ ದೈವಜ್ಞ