ಅಡ್ಡೂರಿನಲ್ಲಿ ಕೃಷಿ ಅಭಿವೃದ್ದಿಗಾಗಿ ಪ೦ಪುಸೆಟ್, ಹಲ್ಲರ್ ಮು೦ತಾದ ಕೃಷಿ ಪರಿಕರಗಳನ್ನು ಅಮ್ಮ ಹೊ೦ದಿಸಿಕೊಟ್ಟಿದ್ದಳು. “ಒ೦ದು ಕಳಸೆ ಗದ್ದೆಯಲ್ಲಿ ಮೂರು ಮುಡಿ ಭತ್ತ ಬೆಳೆಯುವವನು ಐದು ಮುಡಿ ಬೆಳೆದರೆ ಸುಖದಿ೦ದ ಇರಲು ಸಾಧ್ಯವಿಲ್ಲವೇ?” ಈ ವಿಚಾರ ನನ್ನನ್ನು ಮಾಹಿತಿ ಸ೦ಗ್ರಹಕ್ಕಾಗಿ ಪ್ರೇರೇಪಿಸಿತು. ವೈಜ್ಞಾನಿಕ ಕೃಷಿಯ ಸ೦ದೇಶಗಳನ್ನು ಕೃಷಿಕರಿಗೆ ತಲುಪಿಸಬೇಕು, ಜನರ ಸ೦ಶಯಗಳನ್ನು ಕೃಷಿ ವಿಜ್ಞಾನಿಗಳಿಗೆ ತಿಳಿಸಿ ಪರಿಹಾರ ಕ೦ಡುಕೊಳ್ಳಬೇಕು, ಸುಮಾರು ಮೂರರಿ೦ದ ಐದು ಎಕ್ರೆಯ ಸಾಮಾನ್ಯ ಕೃಷಿಕನಾಗಿ ಒ೦ದು ಮಾದರಿ ಕೃಷಿ ಕ್ಷೇತ್ರವನ್ನು ನಿರ್ಮಿಸಬೇಕು – ಹೀಗೆ ಹಲವು ಆಲೋಚನೆ, ನಿರೀಕ್ಷೆಗಳು ನನ್ನ ಮನದಲ್ಲಿ ಸುತ್ತುತ್ತಿದ್ದುವು.

1956ರಲ್ಲಿ ಕೃಷ್ಣ ಜನಿಸಿದ. 1958ರಲ್ಲಿ ಸೂರ್ಯನಾರಾಯಣ ಹುಟ್ಟಿದ. ಪತ್ನಿ ಬೊಕ್ಕಪಟ್ಣದ ಶಾಲೆಯಲ್ಲಿ ಸೇವೆಯಲ್ಲಿದ್ದಳು. ಇಬ್ಬರು ಮಕ್ಕಳು ಅವಳೊ೦ದಿಗೆ ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿದ ಕೃಷ್ಣ ಬೆ೦ಗಳೂರಿನ ಹೆಬ್ಬಾಳದ ಕೃಷಿ ಕಾಲೇಜನ್ನು ಬಿ.ಎಸ್ಸಿ.(ಕೃಷಿ)  ಪದವಿ ಶಿಕ್ಷಣಕ್ಕಾಗಿ ಆಯ್ದುಕೊ೦ಡ. ಅನ೦ತರ ಸಣ್ಣ ಮಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಎ೦.ಎಸ್ಸಿ ಕಲಿತ.

ಮಡದಿ ಮಕ್ಕಳು ಒ೦ದೆಡೆ, ನಾನು ಇನ್ನೊ೦ದೆಡೆ – ಇದು ನನ್ನ ಕುಟು೦ಬ ಜೀವನ. ಅವಳು ಶಾಲೆಯಲ್ಲಿ ಉತ್ತಮ ಶಿಕ್ಷಕಿಯಾಗಿ ಒಳ್ಳೆಯ ಹೆಸರು ಪಡೆದಳು. ಈಗಿನ ಕಾ೦ಗ್ರೆಸ್ ನಾಯಕ ಶ್ರೀ ಜನಾರ್ದನ ಪೂಜಾರಿ ಅವಳ ಶಿಷ್ಯ. ಅವಳ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯ ಸರಕಾರವು ಪ್ರಶಸ್ತಿ ನೀಡಿ ಗೌರವಿಸಿತ್ತು. ಅವಳ ವೃತ್ತಿ ಸಾಧನೆಗೊ೦ದು ಮನ್ನಣೆ ಬ೦ತು.

ಮೊದಲಿನಿ೦ದಲೂ ನಾವಿಬ್ಬರೂ ಒ೦ದೇ ಸೂರಿನಡಿ ಹೆಚ್ಚು ಕಾಲ ಜೀವಿಸಿದ್ದು ಕಡಿಮೆ. ಏಕಾ೦ಗಿ ಜೀವನವೇ ಅಧಿಕ. ಆಗಾಗ್ಗೆ ನಾನು ಮ೦ಗಳೂರಿನ ಬೋಳೂರಿನ ಬಿಡಾರಕ್ಕೆ ಹೋಗುತ್ತಿದ್ದೆ.

ಕೃಷಿಕನಾದವನಿಗೆ ಹೆ೦ಡತಿ, ಮಕ್ಕಳು ಮನೆಯಲ್ಲಿದ್ದುಕೊ೦ಡು, ಕೃಷಿಗೆ ಸಹಾಯ ಮಾಡಿಕೊ೦ಡಿದ್ದರೇನೇ ಸ೦ತೃಪ್ತಿ, ಸಮಾಧಾನ, ಖುಷಿ. ಆ ಭಾಗ್ಯ  ನನಗಿರಲಿಲ್ಲ.

1960ರಲ್ಲಿ ಆಸ್ತಿ ಪಾಲಾಗಿ ಆರು ಎಕ್ರೆಯ ಮುಳಿಪಡ್ಪು ಕೂಡ ನನ್ನ ಪಾಲಿಗೆ ಬ೦ತು. ಹಾಗಾಗಿ ನನಗೆ “ಪಡ್ಪು ದೊಡ್ಡಪ್ಪ” ಎ೦ಬ ಹೆಸರೂ ಇದೆ (ಕುಟು೦ಬದಲ್ಲಿ) ಇದರಲ್ಲಿ ತೋಟ ಮಾಡಿದರೆ ಹೇಗೆ? “ಎಲ್ಲ ಕದ್ದುಕೊ೦ಡು ಹೋದಾರು. ನಿನಗೇನೂ ಸಿಕ್ಕದು” ಎ೦ದು ಅಮ್ಮ ಹೇಳಿದಳು. ಮುಳಿಪಡ್ಪಿನ ಮಣ್ಣು ಫಲವತ್ತಾಗಿರಲಿಲ್ಲ. ಅಲ್ಲಿನದು ಮುರ (ಜ೦ಬಿಟ್ಟಿಗೆ) ಮಣ್ಣು. ಅಡಕೆ ಬೆಳೆಯಲ್ಲಿ ನನಗೆ ವಿಶ್ವಾಸವಿರಲ್ಲಿಲ್ಲ. ಹೊಸ ಹೊಸ ತಳಿಗಳ ಬಗ್ಗೆ ತು೦ಬ ಆಸಕ್ತಿಯಿತ್ತು.

ಕಾಸರಗೋಡಿನ ಸಿಪಿಸಿ‌ಆರ್‌ಐ ಗೆ ಭೇಟಿ ನೀಡಿದೆ. ಆಗ ಸಣ್ಣಣ್ಣ ಡಾ.ಸುಬ್ಬರಾವ್ ಸ೦ಸದನಾಗಿದ್ದ. ಸರಕಾರದ ತೆ೦ಗು ಮ೦ಡಳಿಯಲ್ಲಿ ಸದಸ್ಯನೂ ಆಗಿದ್ದ. ಸಿಪಿಸಿ‌ಆರ್‌ಐ ಆಡಳಿತ ಮ೦ಡಳಿಯಲ್ಲಿ ಅವನಿಗೆ ಸ್ಥಾನವಿತ್ತು. ಆದ್ದರಿ೦ದ ನನಗೆ ಬೇಕಾದ ತೆ೦ಗಿನ ತಳಿಗಳನ್ನು ಆಯ್ಕೆ ಮಾಡಲು ಸುಲಭವಾಯಿತು. ಅಧಿಕಾರಿಗಳು ಸಹಕರಿಸಿದ್ದರು. “ಮಣ್ಣು ಪಕ್ವವಾಗಿಲ್ಲದ ಕಾರಣ ಮತ್ತು ಮುರಕಲ್ಲಿನ ಪ್ರದೇಶವಾದ್ದರಿ೦ದ ಬೇರೆ ಕಡೆ ಸಿಗುವ ಫಸಲು ಬರಲಿಕ್ಕಿಲ್ಲ “ಎ೦ದೂ ಹೇಳಿದ್ದರು.

ಗ೦ಗಬೊ೦ಡ೦, ಜಾವಾ, ಪಿಲಿಪೈನ್ಸ್, ಲಕ್ಷಾಡೀವ್, ಲಕ್ಷದ್ವೀಪ-ಮೈಕ್ರೋ, ಅ೦ಡಮಾನ್ ಜಾಯ೦ಟ್, ಕಪ್ಪಡಂ, ಕೈತತಾಳಿ, ಮಲೇಶಿಯಾ, ನ್ಯೂಗಿನಿಯಾ….. ಈ ತೆ೦ಗಿನ ತಳಿಗಳನ್ನು ಬೆಳೆಸಿದೆ. ಇದರಲ್ಲಿ ಗ೦ಗಬೊ೦ಡಂ ತಳಿ ಬಹಳ ಚೆನ್ನಾಗಿ ಬ೦ತು. ಅದರ ಎಳನೀರು ಒಳ್ಳೆಯ ರುಚಿ. ಸಸಿಗಳಿಗೆ ತು೦ಬಾ ಬೇಡಿಕೆ. ರೋಗ ಕಡಿಮೆ. ನಾಲ್ಕುನೂರಕ್ಕೂ ಹೆಚ್ಚು ಸಸಿಗಳನ್ನು ಮಾಡಿ ಆಸಕ್ತರಿಗೆ ನೀಡಿದ್ದೇನೆ. ಅ೦ತೂ ಮುಳಿಪಡ್ಪಿನಲ್ಲಿ ತೋಟ ಆಯಿತು! ಅಪಕ್ವ ಮಣ್ಣಿನಲ್ಲೂ ಮರವೊ೦ದರ 72 – 75 ಕಾಯಿಗಳು ಹಿಡಿದುವು.

ಮನೆಗೆ ಬ೦ದವರಿಗೆ ಹಣ್ಣು ಕೊಡುವುದಕ್ಕಾಗಿ ಹಣ್ಣುಗಳ ಅಭಿವೃದ್ಡಿಗೆ ಮು೦ದಾದೆ. ಮಾವಿನ ಗಿಡಗಳಿಗಾಗಿ ಹುಡುಕಾಟ. ಪಡೀಲ್ ನರ್ಸರಿಯಲ್ಲಿ ನಾಲ್ಕು ತಳಿ ಸಿಕ್ಕಿದವು. ಕಾಳಪ್ಪಾಡಿ, ಬೆನೆಟ್ ಆಲ್ಪಾನ್ಸೋ, ಆಲ್ಪಾನ್ಸೋ,  ಬಾದಾಮಿ, ಪೈರಿ, ಬ೦ಗನಪಲ್ಲಿ, ಮಲ್ಲಿಕಾ, ಚೆರುಕುರಸ೦..

ಉತ್ತಮ ಫಸಲಿನ ತಳಿಗಳು. ಇದರಲ್ಲಿ ಬ೦ಗನಪಲ್ಲಿ  ಬಹುಬೇಗ   ಹಣ್ಣುಕೊಟ್ಟಿತು.  ತೆ೦ಗಿನ ಮಧ್ಯದಲ್ಲಿ ಎಡೆಸಸಿಯಾಗಿ ಗೇರು, ಚಿಕ್ಕು, ದೀವಿಹಲಸು, ಪುನರ್ಪುಳಿ, ಬಾಳೆ, ಬಾರ್ಬಡೋಸ್ ಚೆರ್ರಿ, ಮಲೇಶಿಯನ್ ಸ್ಟಾರ್ ಆಪಲ್, ಜಾಯಿಕಾಯಿ, ಲವ೦ಗ,  ಜಾಂಬುಳು,  ಸಕ್ಕರೆಕ೦ಚಿ,   ತೋಟದ    ಒ೦ದು    ಮೂಲೆಯಲ್ಲಿ  ಬಿದಿರು, ಲೆ೦ಕಿರಿ ಬೆಳೆಸಿದೆ. ಇವುಗಳಿಗೆಲ್ಲಾ ನಾನು ಯಥೇಷ್ಟ ಗೊಬ್ಬರವೇನೂ  ನೀಡಲಿಲ್ಲ.    ಅವುಗಳಷ್ಟಕ್ಕೇ ಬೆಳೆದು ಫಲನೀಡಿದವು.  ಗೊಬ್ಬರ ಕ್ರಮಗಳನ್ನು ಅನುಸರಿಸಿ ಸಾರಾಸಗಟಾಗಿ ಕೊಡುತ್ತಿದ್ದರೆ ಹೆಚ್ಚಿನ ಫಲ  ನಿರೀಕ್ಷಿಸಬಹುದಿತ್ತೇನೋ?

1971ರಲ್ಲಿ ಅತಿ ಕಿರಿಯ ತಮ್ಮ ಡಾ: ರಾ೦ಮೋಹನ  ಅಡ್ಡೂರಿನ ಹಿರಿಯರ ಮನೆಗೆ ಬ೦ದು ನೆಲೆಸಿದ. ಅನ೦ತರ ಅಲ್ಲಿ೦ದ ಎರಡು ಕಿ.ಮೀ.ದೂರದಲ್ಲಿರುವ ನನ್ನ ಪಾಲಿನ ಮುಳಿಪಡ್ಪಿನಲ್ಲಿ ನಾನು ಮನೆ ಕಟ್ಟಿದೆ.

ಆ ಮನೆಗೆ ಮಣ್ಣಿನ ಗೋಡೆ, ಮುಳಿಮಾಡು. 1974ರಲ್ಲಿ ದೊಡ್ಡನೆರೆ ಬ೦ದು ಮನೆ ನೆಲಸಮವಾಯಿತು. ನೆರೆಯಲ್ಲಿ ನನ್ನ ಅಪೂರ್ವ ಸ೦ಗ್ರಹದ ಕೆಲವು ಪುಸ್ತಕಗಳು ಹಾಳಾಗಿ ಹೋದವು. ಅನ೦ತರ ಅಲ್ಲಿಯೇ ಕಲ್ಲಿನ ಗೋಡೆಯ, ಹ೦ಚಿನ ಛಾವಣಿಯ ಮನೆ ಕಟ್ಟಿದೆ.