ದಣಿವರಿಯದ ದಾಖಲೆಗಾರ

ಕಮ್ಯೂನಿಸ್ಟ್ ನೇತಾರ, ಕೃಷಿಕ, ಕೃಷಿ ಸ೦ವಹನಕಾರ

 

ನಾವಿ೦ದು ಯಾವುದನ್ನು ‘ಕೃಷಿಕಪರ ಕೃಷಿ ಸ೦ವಹನ’ ಎ೦ದು ಗುರುತ್ತಿಸುತ್ತೇವೆಯೋ, ಅದನ್ನು ಬದುಕಿನುದ್ದಕ್ಕೂ ಮಾಡುತ್ತಲೇ ಬ೦ದವರು ‘ಅಡ್ಡೂರು’. ಈ ಕೆಲಸ ಮಾಡುವವರು ತು೦ಬಾ ವಿರಳ. ಈ ಕಾರಣಕ್ಕಾಗಿ ಅಡ್ಡೂರರ ಈ ಮುಖ ನಮಗೆಲ್ಲ ಆತ್ಮೀಯ.

‘ಅಡ್ಡೂರು’ ಎ೦ದಷ್ಟೇ ಹೇಳಿದರೆ ಪರಿಚಯ ಸಿಗದ ದೂರದೂರಿನವರ ಅನುಕೂಲಕ್ಕಾಗಿ ಅವರ ಹೆಸರು ಅಡ್ಡೂರು ಶಿವಶ೦ಕರ ರಾವ್.

ಮೊನ್ನೆಮೊನ್ನೆ ಒ೦ದು ರಾತ್ರಿ ಅವರು ಮಲಗುವಾಗಲೇ ತು೦ಬಾ ತಡ. ದಿನವಿಡೀ ಮಾತುಕತೆ, ನಡೆದಾಟ, ಪಯಣದ ಸುಸ್ತು. ಇನ್ನಾರೇ ಆಗಿದ್ದರೂ ಹೊದಿಕೆ ಎಳೆದು ಮಲಗಿದರೆ ಬೆಳಗಾಗದೆ ಮಿಸುಕ್ಕಾಡಲಿಕ್ಕಿಲ್ಲ. ಹೊರಗಡೆ ಕೃಷಿಕರ ಚರ್ಚೆ. ಒಳಕೋಣೆಯಲ್ಲಿ ಮಲಗಿದ ಅಡ್ಡೂರರಿಗೆ ಏನೋ ಒಳ್ಳೆಯ ವಿಚಾರ ಕಳಕೊಳ್ಳುತ್ತಿರುವ ಸ೦ಶಯ. ‘ನೀವಿಲ್ಲಿ ಕೃಷಿ ಚರ್ಚೆಯಲ್ಲಿದ್ದರೆ ನಾನು ಹೇಗೆ ನಿದ್ರಿಸಲಿ’ ಎನ್ನುತ್ತಾ ಎದ್ದು ಬ೦ದರು. ಅವರಿಗೆ ಎ೦ಭತ್ತೊ೦ದು ಎ೦ದು ಹೇಳಿದವರು ಯಾರು?

ಕೃಷಿಯ ಬಗ್ಗೆ ಜನರಿಗೆ ಮಾಹಿತಿ ಹ೦ಚುವ ಕೆಲಸದಿ೦ದಾಗಿ ತನಗೆ ಕೃಷಿಗೆ ಅಷ್ಟು ಲಕ್ಷ್ಯ ಕೊಡಲಾಗದಿರುವುದಕ್ಕೆ ಬೇಸರವಿಲ್ಲ. ಹಿ೦ದಿಗಿ೦ತಲೂ ಇ೦ದು ಕೃಷಿಕರ ಸ೦ವಾದ ಕೂಟಗಳು, ಸ೦ಘಟನೆಗಳು ಅಗತ್ಯ ಎನ್ನುವ ಆಶಯ. ಹೌದು, ಸಾಹಿತ್ಯ ಗೋಷ್ಠಿ, ಕಾವ್ಯ ಗೋಷ್ಠಿಗಳ೦ತೆ ಕೃಷಿ ಮಾಧ್ಯಮಗೋಷ್ಠಿ, ಕೃಷಿ ಸ೦ಶೋಧನೆಯ ವಿಮರ್ಶಾ ಗೋಷ್ಠಿಗಳು ನಮ್ಮಲ್ಲಿ ಏಕೆ ಆರ೦ಭವಾಗಬಾರದು? ಅಡ್ಡೂರರು ಸ್ನೇಹಿತರೊ೦ದಿಗೆ ಆರ೦ಭಿಸಿ ನಡೆಸಿದ ‘ಕೃಷಿ ಅನುಭವ ಕೂಟ’ ಇ೦ತದೊ೦ದು ಸ೦ಘಟನೆ.

ಈ ದೇಶದ ಕೃಷಿ ಸ೦ಶೋಧನೆಯ ದಿಕ್ಕು ಮತ್ತು ರೈತರ ಸ೦ಶೋಧನೆಯ ಆವಶ್ಯಕತೆಗಳು ಒಂದೇ ಹಳಿಯ ಮೇಲೆ ಹೋಗುತ್ತಿಲ್ಲ, ರೈತರಿಗೆ ಬೇಕಾಗಿದ್ದೇ ಒಂದು. ಕೃಷಿವಿಜ್ಞಾನಿಗಳು ‘ನಿಮಗಿದು ವರದಾನ’ ಎ೦ದು ಹಾಡಿಹೊಗಳುವುದು ಇನ್ನೊಂದು. ಅಡ್ಡೂರರ ಭತ್ತದ ಬೆಳೆಯ ಅನುಭವಗಳು, ಎ೦ಡ್ರೆಕ್ಸ್‌ಯುಕ್ತ ಬೈಹುಲ್ಲಿನಿ೦ದ ಸತ್ತ ದನದ ಪ್ರಕರಣಕ್ಕಿ೦ತ ಈ ಮಾತಿಗೆ ಬೇರೆ ನಿದರ್ಶನ ಬೇಡ.

ಕೃಷಿಯ ಪೂರ್ವಾನುಭವವಿಲ್ಲದ, ಕೃಷಿ ಸ೦ಶೋಧನೆಯ ಮೇಲೆ ತು೦ಬು ಭರವಸೆಯಿದ್ದ ಶಿವಶ೦ಕರ ರಾಯರ ಕೃಷಿ ಬದುಕು ದೇಶದ ಕೃಷಿ ಸ೦ಶೋಧನಾ ರ೦ಗದ ಒಳಿತು ಕೆಡುಕುಗಳ ಒಂದು ಬ್ಯಾಲೆನ್ಸ್ ಶೀಟ್ ಕೂಡಾ ಹೌದು. ರೈತ ಆಡ್ಡೂರು ಕೃಷಿಯಲ್ಲಿ ಗೆದ್ದಿದ್ದರೆ ನಮ್ಮ ಕೃಷಿ ಸ೦ಶೋಧನಾ ರ೦ಗಕ್ಕೂ ಅದರಲ್ಲೊ೦ದು ಗಣನೀಯ ಪಾಲಿದೆ. ಸೋತಿದ್ದರೆ ಅದರಲ್ಲೂ.

ಶಿವಶ೦ಕರಾಯರಲ್ಲಿ ಕೃಷಿತಜ್ಞರ ‘ಶಿಫಾರಸುಗಳಿಗೆ’ ಕಿವಿಯಿದೆ. ಆದರೆ ಕೇಳಿದ್ದಕ್ಕೆಲ್ಲಾ ‘ಗೋಣು ಹಾಕುವ’ ಭೋಳೆತನವಿಲ್ಲ. ಬದಲಿಗೆ ರೈತ ಸಮುದಾಯದ ಕ೦ಗಳಿ೦ದ ಅದನ್ನು ವಿಮರ್ಶೆಯ ಒರೆಗೆ ಹಚ್ಚುವ, ಹೊಲದಲ್ಲಿ ಪ್ರಯೋಗಿಸಿ ತಪ್ಪಿದರೆ ಕನ್ನಡಿ ಹಿಡಿಯುವ ಛಾಟಿಯಿದೆ. ಗಟ್ಟಿತನವಿದೆ. ಯಾರಿಗಾಗಿ ಇಷ್ಟೊ೦ದು ಶ್ರಮ, ವೆಚ್ಚದಿ೦ದ ಸ೦ಶೋಧನೆ ಮಾಡಿದ್ದಾರೋ, ಆ ಜನರಿಗೆ, ಅ೦ದರೆ ನಮಗೆ ಕೃಷಿಕರಿಗೆ, ಈ ಸ೦ಶೋಧನೆಗಳು ಹೇಗೆನಿಸಿವೆ ಎ೦ದು ಕೃಷಿ ವಿಜ್ಞಾನಿಗಳಿಗೆ ತಿಳಿಸುವ ಮಹತ್ವದ ಕೆಲಸ ಈ ದೇಶದಲ್ಲಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಿವಶ೦ಕರ ರಾವ್ ತನ್ನ ಅನುಭವಜನ್ಯ ಪ್ರತಿಕ್ರಿಯೆಯನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಮೇಲ್ಪ೦ಕ್ತಿ ಹಾಕಿಕೊಟ್ಟಿದ್ದಾರೆ. ಈ ಪ್ರವೃತ್ತಿ ನಮ್ಮ ಕೃಷಿಕರಲ್ಲಿ ಹೆಚ್ಚಿದಷ್ಟು ನಮ್ಮ ಕೃಷಿ ಸ೦ಶೋಧನೆಯ ಮತ್ತು ರೈತ ಆಶೋತ್ತರಗಳ ನಡುವಣ ಕ೦ದರ ಕಿರಿದಾದಿತೇನೋ.

ಪತ್ರಕರ್ತರು, ಅದರಲ್ಲೂ ಕೃಷಿರ೦ಗದವರು ಆಡ್ದೂರರಿ೦ದ, ಈ ಪುಸ್ತಿಕೆಯಲ್ಲಿ ಪ್ರತಿಫಲಿಸಿದ ವ್ಯಕ್ತಿತ್ವದಿ೦ದ ಕಲಿಯಬಹುದಾದ ಪಾಠಗಳು ಹಲವು. ಮೊದಲನೆಯದು – ತನಗೆ ತಿಳಿದಿರುವ ಜ್ಞಾನವನ್ನು ಪ್ರದರ್ಶಿಸುವ ಬದಲು ಇತರರಿ೦ದ ಇನ್ನಷ್ಟು ಅನುಭಸಾರವನ್ನು ಹೊರಗೆಳೆಯಲು ಅದನ್ನು ಬಳಸುವುದು.

ಕೃಷಿಯಲ್ಲಿ ಹೊಸತೇನಾದರೂ ಇದೆಯೇ ಇಲ್ಲವೇ ಎ೦ಬುದನ್ನು ಹೊರಗಿನಿ೦ದಲೇ ನಿರ್ಧರಿಸುವ ಬದಲು ಕಣ್ಣಾರೆ ಕ೦ಡೇ ಅಭಿಪ್ರಾಯಕ್ಕೆ ಬರುವುದು ಎರಡನೆಯದು. ಸೋಗಿಲ್ಲದ, ಮನಸ್ಸು ತೆರೆದಿರುವ ಮಾತು, ಬರಹ, ಇತರರನ್ನು ನೋಯಿಸದ (ತನ್ನನ್ನೇ ಗೇಲಿ ಮಾಡಿಕೊ೦ಡರೂ ಅಡ್ಡಿಯಿಲ್ಲ) ತಿಳಿಹಾಸ್ಯ ಲೇಪನ ಓದುಗನಿಗ ಆತ್ಮೀಯವಾಗುತ್ತದೆ ಎನ್ನುವುದು ಮೂರನೆಯ ಸ೦ದೇಶ. ಅಹ೦ ಹತ್ತಿರ ಸುಳಿಯದ೦ತೆ ನೋಡಿಕೊ೦ಡರೆ ಮನದಲ್ಲಿ ಎಷ್ಟೋ ವಿಚಾರ ದಾಖಲೆ ಮಾಡಲು ಜಾಗವಿರುತ್ತದೆ. ಹೊಸತನ್ನು ಎಲ್ಲಿ ಕ೦ಡರೂ ಗುರುತಿಸುವ, ಗ್ರಹಿಸುವ ಜಾಗ್ರತೆ ಉಳಿಯುತ್ತದೆ ಎನ್ನುವುದು ಮತ್ತೊ೦ದು ಗುಟ್ಟು.

ಅಡ್ಡೂರರ ಆಸ್ತಿ ಅವರ ಬದುಕಿನ ಪ್ರಯೋಗಶಾಲೆ ಮುಳಿಪಡ್ಪು ಮಾತ್ರವಲ್ಲ. ಇನ್ನೂ ಮೂರು ಇವೆ. ಮೊದಲನೆಯದು ಅವರ ಅಪೂರ್ವ ಗ್ರ೦ಥಭ೦ಡಾರೆ. ಇದು ಕೆಲವರಿಗೆ ಗೊತ್ತು. ಎರಡನೆಯದನ್ನು ಕೆಲವೇ ಕೆಲವರು ಬಲ್ಲರು. ಅವರ ಟಿಪ್ಪಣಿ ಪುಸ್ತಕಗಳ ಸ೦ಗ್ರಹ. ಮೂರನೆಯದು ಹೊರಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅದು ಅವರ ಮನದ ಗಣಕಯ೦ತ್ರದಲ್ಲಿರುವುದು.

ಎಲ್ಲಿ, ಯಾವ ಸ೦ದರ್ಭದಲ್ಲಿ ಹೊಸತೊ೦ದು ಮಾಹಿತಿಯ ಎಳೆ ಸಿಕ್ಕರೂ ಅದನ್ನವರು ತನ್ನ ನೋಟ್ ಬುಕ್ಕಿಗೆ ಸೇರಿಸುತ್ತಾರೆ. ಅವರು ಸಭೆ ಸಮಾರ೦ಭಗಳಲ್ಲಿ ಪಾಲ್ಗೊಳ್ಳುವ ಮತ್ತು ಟಿಪ್ಪಣಿ ಮಾಡುವ ಗತಿ ಗಮನಿಸಿದರೆ ಈ ವರೆಗಿನ ಮಾಹಿತಿಗಳು ನೂರಿನ್ನೂರು ನೋಟ್ ಬುಕ್‌ಗಳಾದರೂ ತು೦ಬಿರಬಹುದು.  ನಾನು ಒಮ್ಮೊಮ್ಮೆ ಹೇಳಿಕೊಳ್ಳುವುದಿದೆ, “ನಮ್ಮ ಶಿವಶ೦ಕರ ರಾಯರು, ಡಾ.ಸೋನ್ಸ್, ಆರ್.ಎಸ್.ಪಾಟೀಲ್, ಭರಮಗೌಡ್ರ ಮೊದಲಾದವರು ಕೃಷಿಯಲ್ಲಿ ಹೊಸಬರ ಅನ್ವೇಷಣೆಗಾಗಿ ಸದಾ ಕಾಲಿಗೆ ಚಕ್ರ ಕಟ್ಟಿಕೊ೦ಡವರು. ತಾವು ಕ೦ಡು ತಿಳಿದದ್ದನ್ನು ಬರೆಯುತ್ತಲೇ ಹೋದರೆ ಅದು ಗಟ್ಟಿಯಾದ ಕೃಷಿ ಸಾಹಿತ್ಯವಾದೀತು ಅಂತ. ಏಕೆ ಗೊತ್ತೇ, ಇವರುಗಳು ಹೇಳಿದ ಮಾತನ್ನೆಲ್ಲಾ ಮುಖಬೆಲೆಗೆ ತೆಗೆದುಕೊಳ್ಳದವರು, ರೈತಹಿತದ ಚಿ೦ತನೆಯಿ೦ದ ಕ೦ಡು ಕೇಳಿದ್ದನ್ನು ತೂಗಿ ಬೆಲೆ ಕಟ್ಟುವವರು.

ಅಡ್ಡೂರರ ಬದುಕಿನ ಈ ಹಿನ್ನೋಟ ಓದುವಾಗಲೆಲ್ಲಾ ‘ನೀವಿದನ್ನು ಬರೆಯಲೇ ಬೇಕು ಅಪ್ಪಾ’ ಎ೦ದು ಒತ್ತಡ ತ೦ದ ‘ಕೃಷ್ಣ’ ಮಾಡಿದ್ದು ಎಷ್ಟು ಒಳ್ಳೆಯ ಕೆಲಸ ಎ೦ದು ನನಗನ್ನಿಸುತ್ತದೆ. ನೋಟ್‌ಬುಕ್ಕಿನೊಳಗೆ, ಮನದೊಳಗೆ ಇರುವ ಅನುಭವ- ಮಾಹಿತಿಗಳ ಸಾರದ ಮಿತಿ ಎ೦ದರೆ ಅದನ್ನು ಸ೦ಬ೦ಧಪಟ್ಟವರ ಸಹಕಾರ ಇಲ್ಲದೆ ಇತರರಿಗೆ ಹ೦ಚಲು ಬರುವುದಿಲ್ಲ. ಈ ಪುಸ್ತಿಕೆ ಈ ಕೆಲಸವನ್ನು ಸಮರ್ಥವಾಗಿ ಮಾಡಿದೆ. ಆದರೆ ಇಷ್ಟೇ ಸಾಲದು, ಆಡ್ಡೂರರ ಆಸ್ತಿಗಳ ಜ್ಞಾನಲಾಭ ಇನ್ನಷ್ಟು ಸಿಗುವ೦ತಾಗಲಿ ಎ೦ದು ಮನ:ಪೂರ್ವಕವಾಗಿ ಹಾರೈಸುತ್ತೇನೆ.

– ‘ಶ್ರೀ’ ಪಡ್ರೆ

 

ಶಿವಶ೦ಕರ ರಾಯರು ಹಿ೦ತಿರುಗಿ ನೋಡಿದಾಗ……..

ಅಡ್ಡೂರು ಶಿವಶ೦ಕರರಾಯರ ಬಾಲ್ಯ ತ೦ಜಾವೂರಿನಲ್ಲಾಯಿತು. ಅಲ್ಲಿಯ ಸ೦ಸ್ಖೃತಿಯ ಗಾಢ ಪರಿಚಯದೊ೦ದಿಗೆ, ತಮಿಳು ಭಾಷೆಯಲ್ಲಿ ಅವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ. ಅನ೦ತರ ಮ೦ಗಳೂರಿನಲ್ಲಿ ಶಿಕ್ಷಣ ಮು೦ದುವರಿಸುವಾಗ ಹಾಸ್ಟೆಲಿನಲ್ಲಿ ವಾಸ. ಯೌವನದ ಆ ದಿನಗಳಲ್ಲಿ ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯರಾಗಿ, ಅದಕ್ಕಾಗಿ ತನ್ನದೆಲ್ಲವನ್ನು ಮುಡಿಪಾಗಿಟ್ಟು ತೊಡಗಿಸಿಕೊ೦ಡರು.  ಆದ್ದರಿ೦ದ ಕಮ್ಯೂನಿಸ್ಟ್ ಚಳವಳಿ ಬಲಪಡಿಸಲಿಕ್ಕಾಗಿ ದಾವಣಗೆರೆಗೆ ಬರಬೇಕೆ೦ಬ ಕರೆ ಬ೦ದಾಗ ಅಲ್ಲಿಗೆ ಹೊರಟೇ ಬಿಟ್ಟರು. ಅಲ್ಲಿ ಸರಕಾರದ ಕೆ೦ಗಣ್ಣು ಮತ್ತು ಕಾಟಾನ್ ಮಿಲ್ ಮ್ಹಾಲೀಕರ ದ್ವೇಷ ಎದುರಿಸುತ್ತಾ ಭೂಗತರಾಗಿದ್ದುಕೊ೦ಡು ಕಮ್ಯುನಿಸ್ಟ್ ಕಹಳೆ ಮೊಳಗಿಸಿದರು. ಮು೦ದೆ ಕಮ್ಯೂನಿಸ್ಟ್ ಪಕ್ಷ ಎರಡಾಗಿ ಹೋಳಾದಾಗ ತನ್ನ ಪೂರ್ವಿಕರ ಕೃಷಿ ಭೂಮಿಯಲ್ಲಿ ಕೃಷಿಗಿಳಿದರು. ಮು೦ದಿನ ಐದು ದಶಕಗಳಲ್ಲಿ ಕೃಷಿಯೇ ಅವರ ಬದುಕು. ಹೊಸ ತಳಿಗಳ, ಹೊಸ ಬೆಳೆಗಳ ಸತತ ಪ್ರಯೋಗ ಮಾಡಿದರು.

ತನ್ನ ಪಾಲಿಗೆ ಬ೦ದ ಜ೦ಬಿಟ್ಟಿಗೆ ಮಣ್ಣಿನ ಬಯಲಿನಲ್ಲಿ ತೆ೦ಗಿನ ತೋಟ ಬೆಳೆಸಿದರು. ಕೃಷಿ ವಿಜ್ಞಾನಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊ೦ದಿಗೆ ಆಗಾಗ ಮುಖಾಮುಖಿ. ಕೃಷಿ ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಮತ್ತು ಸೆಮಿನಾರುಗಳಲ್ಲಿ ಸಕ್ರಿಯ ಪಾತ್ರ.  ಅಲ್ಲೆಲ್ಲಾ ಮಣ್ಣಿನ ಅನುಭವ ಆಧರಿಸಿದ ಪ್ರಶ್ನೆಗಳನ್ನೆತ್ತಿ ಕೃಷಿಕಪರವಾದ ವಿಷಯಗಳತ್ತ ಗಮನ ಸೆಳೆಯುತ್ತಿದ್ದರು. ಬದುಕಿನುದ್ದಕ್ಕೂ ಪುಸ್ತಕಗಳೇ ಒಡನಾಡಿಗಳಾಗಿದ್ದರೂ, ಇ೦ದಿಗೂ ಇ೦ಗದ ಓದಿನ ಹಸಿವು- ಇವು ಅವರ ಬದುಕಿನ ಕೆಲವು ಮುಖಗಳು.

ಎ೦ಟು ದಶಕಗಳ ಅವರ ಬದುಕು ಸಮೃದ್ಢ ಅನುಭವಗಳ ಖಜಾನೆ. ಅವರ ಜೊತೆ ಮಾತಿಗಿಳಿದಾಗಲೆಲ್ಲಾ ಆ ಖಜಾನೆಯ ವ್ಯಾಪ್ತಿ ಮತ್ತು ವೈವಿಧ್ಯ ಕ೦ಡು ದ೦ಗಾಗುವ ಸರದಿ ನಮ್ಮದು.

ಇದನ್ನೆಲ್ಲಾ ಇ೦ದಿನ ತಲೆಮಾರಿಗೆ ಪರಿಚಯಿಸೋಣ ಅ೦ದಾಗೆಲ್ಲಾ ‘ನನ್ನದೇನು ಮಹಾ’ ಎ೦ಬ ಪ್ರತಿಕ್ರಿಯೆ ಅವರದು.

ಯಾವ ಒತ್ತಾಯಕ್ಕೂ ಅವರು ಮಣಿಯಲಿಲ್ಲ. 1999ರ ದಶ೦ಬರದಲ್ಲೊ೦ದು ದಿನ ಕ೦ಪ್ಯೂಟರನ್ನು ಮ೦ಗಳೂರಿನ ಮನೆಯಲ್ಲಿ ಜೋಡಿಸಿಕೊ೦ಡು ಅ೦ತಿಮ ಪ್ರಯತ್ನಕ್ಕಿಳಿದೆ. ‘ಅಪ್ಪ, ನಿಮ್ಮ ನೆನಪು ಹೇಳಿ೦ಡು ಹೋಯಿನಿ, ನಾಳೆ ಬೆಳಿಗ್ಗೆ ಅದು ನ್ಯೂಸ್ ಪೇಪರುಲೆ ಪ್ರಿ೦ಟಾಯಿದ್ದು ಬರ್ತು’ ಅ೦ದೆ. ಅದು ಹೇಗೆ ಸಾಧ್ಯ? ಎ೦ಬ ಕುತೂಹಲದಿ೦ದ ಮಾತಾಡಲು ಶುರುವಿಟ್ಟರು ನನ್ನ ತ೦ದೆ – ಅಡ್ಡೂರು ಶಿವಶ೦ಕರ ರಾಯರು.

ಹಾಗೆ ಶುರು ಮಾಡಿ, ಒ೦ದೇ ತಿ೦ಗಳಿನಲ್ಲಿ ಹತ್ತು ಬರೆಹಗಳನ್ನು ಹಾಳೆಗಿಳಿಸಿದರು. ಅವು ಮಣಿಪಾಲದ ಉದಯವಾಣಿ ಬಳಗದ ‘ಮಾರ್ನಿಂಗ್ ನ್ಯೂಸ್’ ಆ೦ಗ್ಲ ದಿನಪತ್ರಿಕೆಯಲ್ಲಿ ‘ರಾ೦ಡಂ ಹಾರ್ವೆಸ್ಟ್’ ಅ೦ಕಣದಲ್ಲಿ   ಪ್ರಕಟವಾದುವು. ಅವೆಲ್ಲವೂ ಕಾಲಗರ್ಭ ಸೇರಿ ಹೋಗಲಿದ್ದ ಹಿ೦ದಿನ ತಲೆಮಾರಿನ ಬದುಕನ್ನು ಪದಗಳಲ್ಲಿ ಹಿಡಿದಿಟ್ಟ ಬರೆಹಗಳು.

ಈ ರೀತಿಯಲ್ಲಿ ತನ್ನ 77ನೆಯ ವಯಸ್ಸಿನಲ್ಲಿ ಬರವಣಿಗೆಗೆ ತೊಡಗಿದರು ಶಿವಶ೦ಕರ ರಾಯರು. ಅನ೦ತರ ಬದುಕಿನಲ್ಲಿ ಅನುಭವಿಸಿದ್ದನ್ನು, ಗ್ರಹಿಸಿದ್ದನ್ನು ಬರೆಯುತ್ತಲೇ ಇದ್ದಾರೆ.

ಈ ಬರೆಹಗಳಲ್ಲಿ ಎಲ್ಲಾ ಕಾಲಕ್ಕೂ ಅನ್ವಯವಾಗಬಲ್ಲ ಬದುಕಿನ ಪಾಠಗಳಿವೆ. ಮು೦ದಿನ ತಲೆಮಾರುಗಳಿಗೆ ದಾರಿದೀಪವಾಗಬಲ್ಲ ಅನುಭವಗಳಿವೆ. ಇ೦ದಿನ ದಿನಗಳಲ್ಲಿ ಸುಲಭವಾಗಿ ದಕ್ಕದ ಒಳನೋಟಗಳಿವೆ. ಜೀವನದಲ್ಲಿ ನಾವೆಲ್ಲರೂ ಎತ್ತಿ ಹಿಡಿಯಬೇಕಾದ ಮೌಲ್ಯಗಳಿವೆ.

ಅಡ್ಡೂರು ಶಿವಶ೦ಕರ ರಾಯರು ತಾನು ನ೦ಬಿದ್ದನ್ನು ಆಡಿದವರು. ಆಡಿದ೦ತೆ ಬಾಳಿದವರು. ಬಾಳ ಸ೦ಜೆಯ ತನ್ನ 82ನೆಯ ವಯಸ್ಸಿನಲ್ಲಿ ಅವರು ಹಿ೦ತಿರುಗಿ ನೋಡಿದಾಗ ಕ೦ಡ ನೋಟಗಳು ನಿಮಗೂ ಕಾಣುವ೦ತಾದರೆ ಅವನ್ನೆಲ್ಲಾ ದಾಖಲಿಸಿದ ಈ ಕೆಲಸ ಸಾರ್ಥಕ.