ಆರೋಗ್ಯಕರ ಮನರಂಜನೆ ಮತ್ತು ವಿನೋದಮಯ ಸನ್ನಿವೇಶ ಸೃಷ್ಟಿಗಾಗಿ ಇನ್ನೊಬ್ಬರ ಹಾವಭಾವ, ಮಾತಿನ ಶೈಲಿ, ಧ್ವನಿ, ಪ್ರಾಣಿ ಪಕ್ಷಿಗಳ ಸ್ವರ, ಕೂಗು, ಹಾಡು ಮತ್ತು ಕೃತಕ ಮೂಲದ ಸದ್ದುಗಳನ್ನು ಯಥಾವತ್ ಅನುಕರಿಸುವ ಪ್ರತಿಭೆಯನ್ನು ಅಣಕು ಕಲೆ (Mimicry)ಯೆಂದು ಕರೆಯಲಾಗುತ್ತದೆ. ನಮ್ಮ ನಡುವೆ ಹಲವು ಮಂದಿ ಅಣಕು ಕಲಾವಿದ (Mimicry Artist)ರನ್ನು ನೋಡಿರುತ್ತೇವೆ. ಅವರ ಅಣಕು ಪ್ರದರ್ಶನವನ್ನು ಮೆಚ್ಚಿ ಚಪ್ಪಾಳೆ ತಟ್ಟಿರುತ್ತೇವೆ. ಈ ಹಿನ್ನೆಲೆಯಲ್ಲಿ ಒಂದು ಪ್ರಶ್ನೆ ನಮ್ಮೊಳಗೆ ಏಳಬಹುದು. ಅಣಕು ಕಲೆ ಮನುಷ್ಯನ ಅನ್ವೇಷಣೆಯೆ?

ಖಂಡಿತ ಅಲ್ಲ!ಈ ಪ್ರಶ್ನೆಯನ್ನು ಉತ್ತರ ಅಮೆರಿಕ ಖಂಡದಲ್ಲಿ ಕಾಣಬರುವ ಅಣಕು ಹಕ್ಕಿ (CommonಅಥವಾNorthern mocking Bird, Mimus Polyglottus)ಗೆ ಕೇಳಿನೋಡಿ. ಮನುಷ್ಯರಂತೆ ಮಾತನಾಡುವಂತಿದ್ದರೆ ಅದು ಮುಖ ತಿರುವಿ “ನಮ್ಮ ಹಕ್ಕಿ ಕುಲದಲ್ಲೆ ಪ್ರತಿಭಾವಂತ ಅಣಕು ಕಲಾವಿದರಿದ್ದಾರೆ. ನೀವು ಮನುಷ್ಯರಾಗಿ ವಿಕಾಸಹೊಂದುವ ಎಷ್ಟೋ ಮುಂಚೆ ನಾವು ಅಣಕು ಕಲೆಯನ್ನು ಸಾಧಿಸಿದ್ದೇವೆ”ಎಂದು ಕಡ್ಡಿ ಮುರಿದಂತೆ ಹೇಳುತ್ತಿತ್ತೇನೊ.

ನಿಜ, ಅಮೆರಿಕದ ಅಣಕು ಹಕ್ಕಿಯು ಹಕ್ಕಿ ಬಳಗದ ಅಪ್ರತಿಮ ಅಣಕು ಕಲೆಗಾರನೆಂದು ಖ್ಯಾತವಾಗಿದೆ. ಇತರ ಹಕ್ಕಿಗಳ ವೈವಿಧ್ಯಮಯ ಧ್ವನಿಗಳನ್ನಲ್ಲದೆ, ಕೀಟಗಳು ಹೊರಡಿಸುವ ಸದ್ದನ್ನು, ಕೋಳಿಯ ಕೇಕೆಯನ್ನು, ನಾಯಿಯ ಬೌ ಬೌ ಸ್ವರವನ್ನು ಮತ್ತು ಕಪ್ಪೆಯ ವಟಗುಟ್ಟವಿಕೆಯನ್ನು, ಪಿಯಾನೋದ ಸ್ವರಗಳನ್ನು, ಬಾಗಿಲು ಕಿರ್ರೆನ್ನುವ ಸದ್ದನ್ನು, ಸೈರನ್ನಿನ ನೀಳ ಸಿಳ್ಳೆಯನ್ನು, ಇತರ ಮಾನವ ನಿರ್ಮಿತ ಉಪಕರಣಗಳು ಹೊರಡಿಸುವ ಸದ್ದನ್ನು ಇದು ಅನುಕರಿಸಬಲ್ಲದು!ನಿರಂತರ ಹತ್ತು ನಿಮಿಷಗಳವರೆಗೆ ದಣಿವು ಹಾಗೂ ಗೊಂದಲವಿಲ್ಲದೆ ಕನಿಷ್ಠ ಇಪ್ಪತ್ತು ಬಗೆಯ ಹಕ್ಕಿಗಳ ಸ್ವರವನ್ನು ಅನುಕರಣೆ ಮಾಡಿ, ನಮ್ಮ ಸುತ್ತಮುತ್ತ ಹಲವು ಜಾತಿಯ ಹಕ್ಕಿಗಳು ಹಾರಾಡಿಕೊಂಡಿವೆಯೋ ಏನೋ ಎಂಬ ಭಾವನೆಯನ್ನು ಅಣಕು ಹಕ್ಕಿ ಮೂಡಿಸುತ್ತದೆ.

ಹವ್ಯಾಸಿ ಪಕ್ಷಿಶಾಸ್ತ್ರಜ್ಞರು ಮತ್ತು ಜೀವವಿಜ್ಞಾನಿಗಳಿಂದ ಅಣಕುಹಕ್ಕಿಯು ವ್ಯಾಪಕ ಅಧ್ಯಯನಕ್ಕೆ ಒಳಪಟ್ಟ ಹಕ್ಕಿಯಾಗಿದೆ. ಈವರೆಗೆ ವಿಜ್ಞಾನಿಗಳು ಅಣಕುಹಕ್ಕಿಗಳು, ಬೇರೆ ಜಾತಿ ಹಕ್ಕಿಗಳ 39ಬಗೆಯ ಹಾಡನ್ನು ಮತ್ತು 50ಬಗೆಯ ದನಿ (call)ಯನ್ನು ಅನುಕರಿಸುವುದನ್ನು, ಅವುಗಳ ಧ್ವನಿಯ ಆವೃತ್ತಿ (frequency)ಯ ಆಧಾರದ ಮೇಲೆ ದಾಖಲಿಸಿದ್ದಾರೆ. ಅಂದಹಾಗೆ ಬೇರೆ ಯಾವ ಸದ್ದನ್ನೂ ಅನುಕರಿಸದೆ ಇರುವಾಗ ಅಣಕುಹಕ್ಕಿ ‘ಚೀ ಚೀ ಚೀ ಚೂ’ಎಂಬ ಕೀಚನ್ನು ಹೊರಡಿಸುತ್ತಿರುತ್ತದೆ. ಇದೇ ಅದರ ಮೂಲ ದನಿ ಎಂದು ಭಾವಿಸಲಾಗಿದೆ. ಹಾಡಿನ ಸಂಖ್ಯೆಯ ವಿಚಾರಕ್ಕೆ ಬಂದಾಗ ಗಂಡು ಅಣಕು ಹಕ್ಕಿ ಹೆಣ್ಣಿಗಿಂತ ಹೆಚ್ಚು ಹಾಡು ಹೇಳುತ್ತದೆ. ಘನಗಂಭೀರ ಉದಾಸೀನತೆಯಿಂದ ವರ್ತಿಸುವ ಹೆಣ್ಣನ್ನು ಒಲಿಸಿಕೊಳ್ಳಲು ಗಂಡು ಹಾರಾಟದ ಹಲವು ಕಸರತ್ತುಗಳನ್ನು ಮಾಡುವುದರ ಜೊತೆ ಹಾಡುತ್ತ ಒನಪು, ವೈಯ್ಯರದಲ್ಲಿ ತೊಡಗುತ್ತದೆ. ತನ್ನೆಲ್ಲ ಪ್ರತಿಭೆಯನ್ನು ಬಳಸಿ ಹಾಡುತ್ತದೆ. ಅನುಕರಣೆಯ ಹಾಡುಗಳನ್ನು ಹೊರತುಪಡಿಸಿ ಗಂಡು ಹಾಡುವ ವೈವಿಧ್ಯಮಯ ಸ್ವರ ಪ್ರಸಾರಗಳು 200ಕ್ಕಿಂತಲೂ ಹೆಚ್ಚಿರಬಹುದು!

ಹೊಂದಾಣಿಕೆಗೆ ಇನ್ನೊಂದು ಹೆಸರು

ಅಣಕು ಹಕ್ಕಿ ಮಧ್ಯಮ ಗಾತ್ರದ ಹಕ್ಕಿ. ನಮ್ಮ ಸುತ್ತಮುತ್ತ ಸದಾ ಗದ್ದಲ ಮಾಡಿಕೊಂಡಿರುವ ಸಾಮಾನ್ಯ ಮೈನಾ (ಉಣ್ಣೆಗೊರವ, ಗೊರವಂಕ)ದಷ್ಟು ಇದು ದೊಡ್ಡದು. ಗಂಡಿನ ಗಾತ್ರ ಹೆಣ್ಣಿಗಿಂತ ಕೊಂಚ ಹೆಚ್ಚು ಅಷ್ಟೆ.

ಈ ಹಕ್ಕಿಗಳು ಹೊಂದಿಕೊಳ್ಳದ ಜಾಗ, ಪ್ರದೇಶ, ಆವಾಸಸ್ಥಾಗಳೇ ಇಲ್ಲ ಎನ್ನಬಹುದು. ಹಾಡುಗಾರರು ಎಲ್ಲಿದ್ದರೂ ಸಲ್ಲುತ್ತಾರಲ್ಲವೆ?ತಮ್ಮ ಹಾಡನ್ನು ಮೆಚ್ಚುಗೆಯಿಂದ ಆಲಿಸುವವರಿದ್ದಾರೆ ಎಂದರೆ ಹಾಡುಗಾರರು ಇನ್ನಷ್ಟು ಸ್ಫೂರ್ತಿಯಿಂದ ಹಾಡುತ್ತಾರೆ. ಅಣಕುಹಕ್ಕಿಗಳು ಮನುಷ್ಯನಿಗಾಗಿ ಹಾಡದಿದ್ದರೂ ಹಾಡುಗಾರರಂತೆ ಹೆಚ್ಚು ಉಲ್ಲಾಸದಿಂದ ಹಾಡುತ್ತವೆ. ಎಲ್ಲಿದ್ದರೂ ತೆರೆದ ವಿಸ್ತಾರ ಪ್ರದೇಶ ಕಾಣುವಂತೆ ಕುಳಿತು ಹಾಡಲು, ಅಣಕವಾಡಲು ಬಯಸುತ್ತವೆ. ಹುಲ್ಲುಗಾವಲು, ಅರಣ್ಯದಂಚು, ಹೊಲಗದ್ದೆಗಳೆಡೆಯಲ್ಲಿ, ಕುರುಚಲು ಬಯಲು, ಮರುಭೂಮಿ, ಬಂಡೆಕಲ್ಲುಗಳ ಮೇಲೆ, ಕರಾವಳಿಗಳಲ್ಲಿ ವಾಸಿಸುವಷ್ಟೆ ಸಲೀಸಾಗಿ ಮನೆಯ ಕೈತೋಟ, ನಗರಗಳ ಉದ್ಯಾನವನ, ರಸ್ತೆಗಳಂಚಿನ ಮರಗಳು, ಬೀದಿ ದೀಪ, ಟೆಲಿಫೋನ್ ತಂತಿಗಳು, ಎತ್ತರದ ಕಟ್ಟಡಗಳ ಮೇಲೆ ಕುಳಿತು ಆತ್ಮವಿಶ್ವಾಸದಿಂದ ಹಾಡುವ, ಅಣಕವಾಡುವ ಅಣಕುಹಕ್ಕಿಗಳು ಮನುಷ್ಯರ ನಡುವೆ ಬದುಕುತ್ತವೆ. ಮನುಷ್ಯರಿಂದ ಸಲ್ಲಲ್ಪಡುತ್ತವೆ.

ಗಂಡು ಅಣಕು ಹಕ್ಕಿ ಜೀವನಪೂರ್ತಿ ಬಹುಪಾಲು ಒಂದೇ ಹೆಣ್ಣಿನೊಂದಿಗೆ ಸಂಸಾರ ಹೂಡಿದರೂ ಅಪರೂಪಕ್ಕೆ ಇತರ ಹೆಣ್ಣುಗಳೊಂದಿಗೆ ಸ್ನೇಹ ಹೊಂದಿರಬಹುದು. ಮರಿಗಳಿಗೆ ಅಪ್ಪ, ಅಮ್ಮ ಇಬ್ಬರೂ ಊಟ ತಂದು ಕೊಡುತ್ತವೆ. ಹಾರಾಟದ ಪಾಠಗಳನ್ನು ತಂದೆ ಹಕ್ಕಿ ಕಲಿಸುತ್ತದೆ. ತಾಯಿಯದು ಶತ್ರುಗಳನ್ನು ಗಮನಿಸುವ ಕೆಲಸ;ದಾಳಿಗೆ ಸೂಚನೆ ನೀಡುವ ಕೆಲಸ.

ಧೈರ್ಯಕ್ಕೆ ಎಣೆಯಿಲ್ಲ

ಗೂಡು, ಮೊಟ್ಟೆ ಮತ್ತು ಮರಿಗಳ ರಕ್ಷಣೆಯ ವಿಷಯಕ್ಕೆ ಬಂದಾಗ ಅಣಕು ಹಕ್ಕಿಗಳು ತಮ್ಮ ಜೀವದ ಹಂಗು ತೊರೆದು ಹೋರಾಡಲು ರೆಡಿ. ತಮಗಿಂತಲೂ ಗಾತ್ರದಲ್ಲಿ ದೊಡ್ಡದಾದ ಗಿಡುಗ, ಡೇಗೆ, ಹದ್ದಿನಂತಹ ಬೇಟೆಗಾರ ಹಕ್ಕಿಗಳ ಮೇಲೂ ದಾಳಿ ಮಾಡಲು ಸಿದ್ಧ. ಶತ್ರು ಪ್ರಬಲ ಎನಿಸಿದರೆ ಇತರ ಅಣಕು ಹಕ್ಕಿಗಳು ಹೋರಾಡುತ್ತಿರುವ ಅಣಕು ಹಕ್ಕಿಗಳ ಬೆಂಬಲಕ್ಕೆ ಧಾವಿಸುತ್ತವೆ. ಇವೆಲ್ಲ ಸೇರಿ ಶತ್ರುವನ್ನು ಹಿಮ್ಮೆಟ್ಟಿಸುವ ಪ್ರಹಸನವನ್ನು ನೋಡಲು ಒಮ್ಮೊಮ್ಮೆ ಇತರ ಜಾತಿಯ ಹಕ್ಕಿಗಳು ಆ ಸಂದರ್ಭದಲ್ಲಿ ಜಮಾಯಿಸುವುದುಂಟು. ಅಣಕು ಹಕ್ಕಿಗಳ ಧೀರ ದಾಳಿ ಬರಿಯ ಹಕ್ಕಿಗಳಿಗೆ ಸೀಮಿತವಾಗಿಲ್ಲ. ಬೆಕ್ಕು, ನಾಯಿ, ಮನುಷ್ಯರೇನಾದರೂ ಇವುಗಳ ಗೂಡಿನ ಬಳಿ ಸುಳಿದರೆ ಅವರ ಮೇಲೂ ದಾಳಿ ಮಾಡಲು ಅವು ಹಿಂಜರಿಯುವುದಿಲ್ಲ. ಅಗತ್ಯ ಬಿದ್ದರೆ ರಾತ್ರಿ ವೇಳೆಯೂ ಎಚ್ಚರವಿದ್ದು ಅಪ್ಪ, ಅಮ್ಮ, ಅಣಕುಹಕ್ಕಿಗಳು ಮೊಟ್ಟೆ ಮರಿಗಳ ರಕ್ಷಣೆಗೆ ಮುಂದಾಗುತ್ತವೆ. ಸಂತಾನೋತ್ಪತ್ತಿಯ ಋತುವಿನಲ್ಲಿ ಮಾತ್ರ ಉಗ್ರವಾಗಿರುವ ಅಣಕು ಹಕ್ಕಿಗಳು ಉಳಿದಂತೆ ಸೌಮ್ಯವಾಗಿದ್ದು ಉಲ್ಲಾಸದಿಂದಿರುತ್ತವೆ.

ಅಣಕು ಹಕ್ಕಿಗಳು ಮಿಶ್ರಾಹಾರಿಗಳು, ಅವುಗಳ ಆಹಾರ ಬಹುಪಾಲು ಕೀಟಗಳು, ಬೀಜಕಾಳುಗಳು ಮತ್ತು ಪುಟ್ಟ ಗಾತ್ರದ ಹಣ್ಣುಗಳಿಗೆ ಸೀಮಿತಗೊಂಡಿರುತ್ತದೆ. ಹಲ್ಲಿ, ಕಪ್ಪೆ ಮುಂತಾದವನ್ನೂ ತಿನ್ನುವುದುಂಟು. ಸ್ವತಃ ಅಣಕು ಹಕ್ಕಿಗಳೇ ಅದೆಷ್ಟೊ ಬಗೆಯ ಜೀವ ಸಂಕುಲಗಳಿಗೆ ಆಹಾರವಾಗಿವೆ. ದೊಡ್ಡವು ಡೇಗೆ, ಗಿಡುಗ, ಕೀಚು ಗೂಬೆ, ಕೊಂಬಿನಗೂಬೆ ಮುಂತಾದವುಗಳಿಗೆ ಆಹಾರ. ಇವುಗಳ ಮೊಟ್ಟೆ, ಮರಿಗಳನ್ನು ಹಾವು, ಅಳಿಲು, ಕಾಗೆ, ನೀಲಿ ಜೇ (Blue Jey)ಯಂತಹವು ಕಬಳಿಸುತ್ತವೆ. ಅಣಕು ಹಕ್ಕಿಗಳಿಗೆ ಶತ್ರುಗಳ ಪಟ್ಟಿ ದೊಡ್ಡದೇ. ಆದರೆ ಇದು ಅಳಿವಿನಂಚಿನಲ್ಲಿರುವ ಹಕ್ಕಿಯಲ್ಲ. ಅಮೆರಿಕ ಖಂಡದಾದ್ಯಂತ 4.5ಕೋಟಿ ಅಣಕು ಹಕ್ಕಿಗಳಿವೆ ಎಂಬುದು ಒಂದು ಅಂದಾಜು!

ಅಣಕು ಹಕ್ಕಿ ಮೈಮಿಡೇ (Mimidae)ಎಂಬ ಪುರಾತನ ಹಕ್ಕಿ ಕುಟುಂಬಕ್ಕೆ ಸೇರಿದೆ. ನಮ್ಮ ದೇಶದಲ್ಲಿ ಈ ಕುಟುಂಬಕ್ಕೆ ಸೇರಿದ ಹಕ್ಕಿ ಜಾತಿಯೇ ಇಲ್ಲ. ಆದರೆ ಬೆಟ್ಟದ ಮೈನಾ, ರಾಕೆಟ್ ಬಾಲದ ಕಾಜಾಣದಂತಹ ಹಕ್ಕಿಗಳು ಇತರ ಹಕ್ಕಿಗಳ ಸ್ವರವನ್ನು ಅನುಕರಿಸಬಲ್ಲವು ಎಂದು ಹೆಸರಾಗಿವೆ. ಆದರೆ ಅವು ಅಮೆರಿಕದ ಅಣಕುಹಕ್ಕಿಯ ಜೊತೆ ಅಣಕು ಸ್ಪರ್ಧೆಗಿಳಿದರೆ ಖಂಡಿತ ಸೋಲುತ್ತವೆ.

ಗೊಣಗಾಡಿದರೂ …..

ಅಣಕುಹಕ್ಕಿಗಳು ಆಹಾರ ಹಾಗೂ ವಾಣಿಜ್ಯ ಬೆಳೆಗಳಿಗೆ ಹಾನಿ ಎಸಗುವ ಮಿಡತೆ, ಕಂಬಳಿ ಹುಳು, ಜೀರುಂಡೆ ಮುಂತಾದವನ್ನು ಯಥೇಚ್ಛ ತಿಂದು ನಮಗೆ ಒಳ್ಳೆಯದನ್ನೇ ಮಾಡುತ್ತವೆ ಸರಿ.  ಒಂದು ವಿಚಾರದಲ್ಲಿ ಮಾತ್ರ ಅವು ಮನುಷ್ಯನ ಗೊಣಗಾಟಕ್ಕೆ ಗುರಿಯಾಗುತ್ತವೆ. ಹಲವು ವೇಳೆ ಹೊತ್ತುಗೊತ್ತಿಲ್ಲದೆ ಹಾಡುತ್ತ, ಅಣಕಿಸುತ್ತ ಕಾಲ ಕಳೆಯುವ ಅಣಕು ಹಕ್ಕಿಗಳು ಮನುಷ್ಯನ ಏಕಾಂತ, ನಿದ್ರೆ, ವಿಶ್ರಾಂತಿ ಹಾಗೂ ಖಾಸಗೀತನಕ್ಕೆ ಭಂಗ ತರುತ್ತವೆ! ಹಳ್ಳಿಯಿರಲಿ, ನಗರವಿರಲಿ ಮನೆಗಳ ಹತ್ತಿರದ ಗಿಡಮರಗಳ ಮೇಲೆ ಗೂಡುಕಟ್ಟಿ ಮರಿ ಮಾಡುವುದನ್ನು ಅವು ಬಯಸುತ್ತವೆ. ಶತ್ರುಗಳಿಂದ ಮೊಟ್ಟೆ ಮರಿಗಳನ್ನು ರಕ್ಷಿಸಿಕೊಳ್ಳುವಾಗ, ತನ್ನ ಪ್ರದೇಶದ ಮೇಲಿನ ಒಡೆತನ (Territorial Behaviour) ವನ್ನು ವ್ಯಕ್ತಪಡಿಸುವಾಗ ಅಣಕುಹಕ್ಕಿಗಳು ಎಬ್ಬಿಸುವ ಗದ್ದಲದಿಂದ ಈ ಹಕ್ಕಿಗಳು ಯಾಕಾದರೂ ಕಿರುಚುತ್ತವೋ, ಯಾಕಾದರೂ ಹಾಡುತ್ತವೋ ಎಂದು ಜನ ಗೊಣಗುತ್ತಾರೆ.

ಅಣಕು ಹಕ್ಕಿಗಳ ಇನ್ನೊಂದು ವಿಚಿತ್ರ, ವಿಶಿಷ್ಟ ವರ್ತನೆಯೆಂದರೆ ಹುಣ್ಣಿಮೆಯ ರಾತ್ರಿಯಲ್ಲಿ ವಿಶೇಷವಾಗಿ ಹಾಡುವುದು! ಹುಣ್ಣಿಮೆಯ ಚಂದ್ರನಿಂದ ಅವಕ್ಕೆ ಅದೇನು ಪ್ರೇರಣೆ ಸಿಗುವುದೋ.  ಅವಂತೂ ಹಾಡುತ್ತ ಕುಳಿತವೆಂದರೆ ಸಾಕು, “ಇವಕ್ಕೆ ಹಾಡಲು ಈ ಹೊತ್ತೇ ಬೇಕೆ?ತಾವೂ ನಿದ್ದೆ ಮಾಡುವುದಿಲ್ಲ. ನಮಗೂ ನಿದ್ದೆ ಮಾಡಲು ಬಿಡುವುದಿಲ್ಲ” ಎಂದು ಒಂದು ಬಾರಿಯಾದರೂ ಕಿಟಕಿಯ ಬಳಿ ಬಂದು ಜನ ಗೊಣಗಾಡಿ ಸುಮ್ಮನಾಗುತ್ತಾರೆ. ಸಂತಾನೋತ್ಪತ್ತಿಯ ಕಾಲದಲ್ಲಿ ಇವುಗಳ ಇನ್ನೊಂದು ಕತೆ ಶುರುವಾಗುತ್ತದೆ. ಹೆಣ್ಣಿನ ಒಡನಾಟ ದಕ್ಕದ ಅಥವಾ ಹೆಣ್ಣನ್ನು ಒಲಿಸಿಕೊಳ್ಳಲಾಗದ ವಿರಹಿ ಗಂಡು ರಾತ್ರಿ ವೇಳೆಯೇ (ಹೆಚ್ಚು ದುಃಖ ಭರಿತವಾಗಿ)ಹಾಡತೊಡಗುತ್ತದೆ. ಒಂಟಿತನವನ್ನು ಕ್ರಮೇಣ ಮರೆಯಲು ಪ್ರಾಯಶಃ ಹಾಡು ಅದಕ್ಕೆ ಸಹಕಾರಿಯಾಗಬಹುದು. ಆದರೆ ಹತ್ತಿರದ ಮನೆಗಳಲ್ಲಿರುವ ಜನರ ಪಾಡು ಏನು? ಮತ್ತೇನು, ನಿದ್ದೆಗೆಡುವ ಗೊಣಗಾಡುವ ನಾಯಿಪಾಡು. ಅಮೆರಿಕದ ಪಕ್ಷಿತಜ್ಞ ಜಾನ್ ಲಿಂಡೆನ್ ಅವರ ಇ-ಮೇಲ್‌ಗೆ ಬರುವ ಪ್ರಶ್ನೆಗಳಲ್ಲಿ ಸೇಕಡ50ಭಾಗ ಅಣಕುಹಕ್ಕಿಗಳ ಹಾಡಿನಿಂದಾಗುವ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಇರುತ್ತದಂತೆ. ಎಲ್ಲರಿಗೂ ಗೊತ್ತು, ಸಹಿಸಿಕೊಳ್ಳುವುದು ಬಿಟ್ಟು ಮತ್ತೇನೂ ಮಾಡುವಂತಿಲ್ಲ ಎಂದು. ಅಮೆರಿಕನ್ನರ ನಿತ್ಯ ಜೀವನದಲ್ಲಿ ಅಣಕುಹಕ್ಕಿ ಬೆರೆತುಹೋಗಿರುವಷ್ಟು ಮತ್ಯಾವ ಹಕ್ಕಿಯೂ ಬೆರೆತುಹೋಗಿಲ್ಲ.  ಜನ ಅಣುಕುಹಕ್ಕಿಗಳ ಬಗ್ಗೆ ಗೊಣಗುತ್ತಾರೆ. ಆದರೆ ಅವುಗಳ ಸಾಂಗತ್ಯವನ್ನು ಇಷ್ಟಪಡುತ್ತಾರೆ. ಅಮೆರಿಕನ್ನರು ತಮ್ಮ ಸಂಸ್ಕೃತಿಯಲ್ಲಿ ಅಣಕುಹಕ್ಕಿಗಳಿಗೆ ಮಹತ್ವದ ಸ್ಥಾನವನ್ನೇ ಕಲ್ಪಿಸಿದ್ದಾರೆ.

ಅಮೆರಿಕದ ಹಳ್ಳಿಗಾಡಿನ ಒಂದು ಬಹು ಜನಪ್ರಿಯ ಜೋಗುಳದ ಹಾಡು, ‘ಹುಶ್! ಪುಟ್ಟಮಗು’ಅಣಕುಹಕ್ಕಿಯ ಪ್ರಸ್ತಾಪದಿಂದಲೇ ಶುರುವಾಗತ್ತದೆ. ಜೋಗುಳದ ಆರಂಭದ ಕೆಲವು ಸಾಲುಗಳು ಹೀಗಿವೆ:

ಹುಶ್ !ಪುಟ್ಟಮಗು !
ಸದ್ದು ಬೇಡ,
ಸುಮ್ಮನೆ ನಿದ್ದೆ ಹೋಗು
ಅಮ್ಮನಿನಗೊಂದು
ಅಣಕುಹಕ್ಕಿಯ ಕೊಂಡು ತರಲು
ಹೊರಗೆ ಹೋಗಿರುವಳು
ಒಂದು ವೇಳೆ
ಅದು ಹಾಡದಿದ್ದರೆ
ನಿನಗೊಂದು
ವಜ್ರದುಂಗುರ ತರುವಳು …

ಹೀಗೆ ಸಾಗುತ್ತದೆ ಈ ಹಾಡು. ಈ ಹಾಡು ಅದೆಷ್ಟು ಜನಪ್ರಿಯವೆಂದರೆ ಅಮೆರಿಕದ ಹಲವಾರು ಜನಪರ ಹಾಗೂ ಪಾಪ್ ಗಾಯಕರು ಅದನ್ನು ವೈವಿಧ್ಯಮಯ ರಾಗಗಳಲ್ಲಿ, ವಾದ್ಯ ಸಂಯೋಜನೆಗಳೊಂದಿಗೆ ಹಾಡಿದ್ದಾರೆ.

ಹಾರ್ಪರ್ ಲೀ ಬರೆದ ಜಗತ್ಪ್ರಸಿದ್ಧ ಕಾದಂಬರಿ To Kill a Mocking bird ಸಿನೆಮಾ ಆಗಿಯೂ ಯಶಸ್ವಿಯಾಗಿದೆ. ಅಣಕುಹಕ್ಕಿಯನ್ನು ಒಂದು ರೂಪಕವಾಗಿ ಕಾದಂಬರಿಯಲ್ಲಿ ಲೇಖಕ ಬಳಸಿಕೊಂಡಿದ್ದಾನೆ.

ರೇಮಂಡ್ ಸ್ಮೂಲ್‌ಯಾನ್ ‘ಅಣಕುಹಕ್ಕಿಯನ್ನು ಅಣಕಿಸುವುದು’ಎಂಬ ತಬ್ಬಿಬ್ಬುಗೊಳಿಸುವ ಒಗಟು (Puzzle)ಗಳಿರುವ, ತರ್ಕವನ್ನು ಹರಿತಗೊಳಿಸುವ ಪುಸ್ತಕವನ್ನು ಬರೆದಿದ್ದಾನೆ.  ಜನಮಾನಸದಲ್ಲಿ ಆಳವಾಗಿ ಬೆರೆತುಹೋಗಿರುವ ಅಣಕುಹಕ್ಕಿಯ ಹೆಸರಿಟ್ಟರೆ ಪುಸ್ತಕದ ಮಹತ್ವವನ್ನು ಕೊಳ್ಳುವವರು ಬೇಗ ಗ್ರಹಿಸಬಹುದು ಎಂಬ ಲೆಕ್ಕಾಚಾರ ಲೇಖಕನಿಗಿದ್ದಿರಬಹುದು.

ಅಮೆರಿಕದ ಸುಪ್ರಸಿದ್ಧ ಕವಿ ವಾಲ್ಟ್ ವ್ಹಿಟ್‌ಮನ್ ಬರೆದ ಕವನ ಸಂಕಲನ Out of the Cradle Endlessly Rockingದಲ್ಲಿ ಒಂದರ ರಚನೆಗೆ, ಲವಲವಿಕೆಯಿಂದ ಹಾಡುತ್ತ, ವಿಹರಿಸುತ್ತಿದ್ದ ಅಣಕು ಹಕ್ಕಿಗಳ ಜೋಡಿಯೇ ಸ್ಫೂರ್ತಿಯಾಗಿತ್ತಂತೆ. ಕವಿತೆಯಲ್ಲಿ ಅವುಗಳ ಪ್ರಸ್ತಾಪವಿದೆ.

ಸಂಗೀತ ಕ್ಷೇತ್ರದಲ್ಲಿ ಹೊಚ್ಚ ಹೊಸ ವಿಧಾನಗಳನ್ನು ಮತ್ತು ಸುಮಧುರ ಸ್ವರ ಹೊರಡಿಸುವ ವಿದ್ಯುತ್ ಗಿಟಾರ್‌ನ ಒಂದು ಮಾದರಿಯನ್ನು ಆವಿಷ್ಕರಿಸಿದ ಸಂಗೀತಗಾರ ಲೆಸ್ ಪಾಲ್ (1915-2009) ತನ್ನ ಮಡದಿ ಮೇರಿ ಫೋರ್ಡ್ ಜೊತೆಗೆ ಹಾಡಿದ, ‘ಅಣಕುಹಕ್ಕಿಯ ಬೆಟ್ಟ’ ಎಂಬ ಹಾಡು 1951ರಲ್ಲಿ ಅಮೆರಿಕದ ವರ್ಷದ ಅತಿ ಜನಪ್ರಿಯ ಗೀತೆಗಳಲ್ಲಿ ಮೊದಲ ಸ್ಥಾನ ಪಡೆದಿತ್ತು.  ಅಣಕು ಹಕ್ಕಿಯ ಕುರಿತಾದ ಈ ಲಯಬದ್ಧ ಹಾಡನ್ನು ಇವತ್ತಿಗೂ ಮೈಮರೆತು ತಾಳ ಹಾಕುತ್ತ, ಆಲಿಸಿ ಖುಷಿ ಪಡಬಹುದು (ಈ ಹಾಡನ್ನು ಕೇಳಿದ ಮೇಲೆಯೇ ನನಗೆ ಅಣಕು ಹಕ್ಕಿಗಳಲ್ಲಿ ಕುತೂಹಲ ಹುಟ್ಟಿ ಈ ಲೇಖನ ಬರೆಯಲು ಪ್ರೇರಣೆ ಸಿಕ್ಕಿದ್ದು). ಮತ್ತೊರ್ವ ಗಾಯಕ ಚಾರ್ಲ್ಸ್ ಡಿ ಆಲ್‌ಮೇನ್ ‘ಅಣಕುಹಕ್ಕಿಯನ್ನು ಆಲಿಸುವುದು’ಎಂಬ ಸಂಗೀತ ಸಂಯೋಜನೆಯನ್ನು ಗ್ರಾಮಾಫೋನಿನಲ್ಲಿ ದಾಖಲಿಸಿದ್ದರು (ಥಾಮಸ್ ಆಲ್ವ ಎಡಿಸನ್ ಅವರ ಧ್ವನಿ ಮುದ್ರಣ ಕಂಪೆನಿಯಲ್ಲೇ ಈ ಸಂಯೋಜನೆ ಮುದ್ರಿತಗೊಂಡಿತ್ತು). 1902ರಲ್ಲಿ ಧ್ವನಿ ಮುದ್ರಣಗೊಂಡ ಇದನ್ನು ಇಂದಿಗೂ ಸುಸ್ಥಿತಿಯಲ್ಲಿ ಆಲಿಸಬಹುದು (ಸದರಿ ಲೇಖಕರ ಸಂಗೀತ ಸಂಗ್ರಹದಲ್ಲಿ ಈ ಸಂಯೋಜನೆಯಿದೆ). ಪ್ರಾಯಶಃ ಇದು ಹಕ್ಕಿಯೊಂದರ ಅತಿ ಹಳೆಯ ಧ್ವನಿ ಮುದ್ರಿತ ಸಂಯೋಜನೆ ಇರಬಹುದು.

ಅಮೆರಿಕದ ಐದು ರಾಜ್ಯಗಳು (ಅರ್ಕನ್‌ಸಾಸ್, ಫ್ಲಾರಿಡಾ, ಮಿಸಿಸಿಪಿ, ಟೆನೆಸ್ಸಿ ಮತ್ತು ಟೆಕ್ಸಸ್) ಅಣಕು ಹಕ್ಕಿಯನ್ನು ರಾಜ್ಯ ಪಕ್ಷಿಯಾಗಿ ಪರಿಗಣಿಸಿವೆ (ಕರ್ನಾಟಕ ರಾಜ್ಯ ಪಕ್ಷಿ ನೀಲಕಂಠ – Blue Jay – ಎಂದು ಎಷ್ಟು ಮಂದಿ ಕನ್ನಡಿಗರಿಗೆ ಗೊತ್ತು?). ಟೆನೆಸ್ಸಿ ವಿಶ್ವವಿದ್ಯಾನಿಲಯದ ಚಿಹ್ನೆಯೂ ಅಣಕುಹಕ್ಕಿಯೇ ಆಗಿದೆ. ಅಮೆರಿಕದ ಅಂದಿನ ಅಧ್ಯಕ್ಷ ಥಾಮಸ್ ಜೆಫರ್‌ಸನ್ ‘ಡಿಕ್’ಎಂಬ ಹೆಸರಿನ ಅಣಕುಹಕ್ಕಿಯನ್ನು ಮುದ್ದಿನ ಪ್ರಾಣಿಯಾಗಿ ಸಾಕಿಕೊಂಡಿದ್ದರಂತೆ. ಇವು ಕೆಲವು ಉದಾಹರಣೆಗಳು ಅಷ್ಟೆ. ಅಮೆರಿಕನ್ನರ ನಡುವೆ ಇರುವ ಸಾಮಾಜಿಕ ಹಕ್ಕಿಗಳಲ್ಲಿ ನಿಸ್ಸಂಶಯವಾಗಿ ಮೊದಲ ಸ್ಥಾನ ಅಣಕು ಹಕ್ಕಿಗಳಿಗೇ ಸಲ್ಲಬೇಕು.

ಅಮೆರಿಕಕ್ಕೆ ಹೋಗಿಬಂದ ನಮ್ಮವರು ಬರೆದ ಲೇಖನ, ಪ್ರವಾಸ ಕಥನಗಳನ್ನು ನಾನು ಬೇಕಾದಷ್ಟು ಓದಿದ್ದೇನೆ. ಆದರೆ ಯಾರೊಬ್ಬರೂ ಅಣಕುಹಕ್ಕಿಯ ಬಗ್ಗೆ ಬರೆದ ಉದಾಹರಣೆಯಿಲ್ಲ.  ಗಗನಚುಂಬಿ ಕಟ್ಟಡಗಳು, ವಿಶಾಲ ರಸ್ತೆಗಳು, ವೇಗವಾಗಿ ಓಡುವ ಅಸಂಖ್ಯ ಕಾರುಗಳು, ಐಷಾರಾಮಿ ಜೀವನ ಶೈಲಿ ಮುಂತಾದವುಗಳಲ್ಲಿ ಅಮೆರಿಕನ್ನರ ಸಂಸ್ಕೃತಿಯನ್ನು ವಿವರಿಸುವ ನಮ್ಮ ಪ್ರವಾಸಿಗರು ಇವುಗಳಾಚೆಗೂ ನೋಡಬೇಕಾದ ಅನಿವಾರ್ಯತೆಯನ್ನು ಅಣಕುಹಕ್ಕಿಗಳು ಸೃಷ್ಟಿಸಿವೆ. ದೇಶವೆಂದರೆ ಬರಿಯ ಜನರಲ್ಲ. ಅಚ್ಚರಿ ತುಂಬಿದ ನಿಸರ್ಗವೂ ಅಲ್ಲಿರುತ್ತದೆ.  ನಿಸರ್ಗವೆಂದರೆ ಬರಿಯ ಜೀವಿ, ನಿರ್ಜೀವಿಗಳ ವರ್ಗೀಕರಣವಲ್ಲ. ಅಣಕು ಹಕ್ಕಿಗಳಂತಹ ಸ್ವಾರಸ್ಯಗಳಿಂದ ಕೂಡಿದ ಕುತೂಹಲದ ಕಣಜವೂ ಆಗಿರುತ್ತದೆ.

ಚಾರ್ಲ್ಸ್ ಡಾರ್ವಿನ್ ಸಂಚರಿಸಿದ ಗಾಲಾಪಗೋಸ್ ದ್ವೀಪಗಳಲ್ಲಿ, 1835ರಲ್ಲಿ ಮೈಮಸ್ ಥೆಂಕಎಂಬ ಅಣಕು ಹಕ್ಕಿಯನ್ನು ಕಂಡುದನ್ನು ದಾಖಲಿಸಿದ್ದಾನೆ.