ಸಾರಜನಕ (ನೈಟ್ರೊಜನ್) ಸಸ್ಯಗಳ ಬೆಳವಣಿಗೆಯಲ್ಲಿ ಮತ್ತು ಇಳುವರಿಯಲ್ಲಿ ಪ್ರಾಮುಖ್ಯ ಪಡೆದಿದೆ. ಸಾರಜನಕವನ್ನು ಯೂರಿಯ ಅಥವಾ ಡೈ ಅಮೋನಿಯಂ ಫಾಸ್ಫೇಟ್ ರೂಪದಲ್ಲಿ ಬಹುತೇಕ ರೈತರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಇದರ ಬೆಲೆ ಹೆಚ್ಚು. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗಿ ಮನುಷ್ಯರ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ನಿಸರ್ಗದಲ್ಲಿರುವ ಅನೇಕ ಅಣುಜೀವಿಗಳು ಜೈವಿಕವಾಗಿ ಸಾರಜನಕವನ್ನು ಪೂರೈಸುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅವುಗಳ ದೇಹದಲ್ಲಿರುವ ನೈಟ್ರೊಜಿನೇಸ್ ಎನ್ನುವ ಕಿಣ್ವ. ವಾತಾವರಣದಲ್ಲಿ ಅನಿಲ ರೂಪದಲ್ಲಿರುವ ಸಾರಜಕವನ್ನು ಘನರೂಪಕ್ಕೆ ಪರಿವರ್ತಿಸುವುದನ್ನು ‘ಜೈವಿಕ ಸಾರಜನಕ ಸ್ಥಿರೀಕರಣ’ ಎನ್ನುತ್ತೇವೆ. ಯಾವುದೇ ಸಸ್ಯ ಪೋಷಕಾಂಶ ಎರಡು ಗುಣ ಹೊಂದಿರಬೇಕು. ಒಂದು ಅದು ಘನರೂಪದಲ್ಲಿರಬೇಕು ಮತ್ತು ಎರಡನೆಯದು ಅದು ನೀರಿನಲ್ಲಿ ಕರಗುವ ಗುಣ ಹೊಂದಿರಬೇಕು.

ಸಾರಜನಕವನ್ನು ಪೂರೈಸುವ ಅಣುಜೀವಿಗಳು

 ಅಣುಜೀವಿ ಬೆಳೆ
 ರೈಜೋಬಿಯಂ ದ್ವಿದಳ ಬೆಳೆ (ಶೇಂಗಾ, ಕಡಲೆ, ತೊಗರಿ, ಅವರೆ, ಸೋಯಾ ಅವರೆ, ಹೆಸರು ಉದ್ದು, ಅಲಸಂದೆ)
 ಅಜೋಸ್ಪಿರಿಲಂ ಏಕದಳ ಧಾನ್ಯಗಳು, ವಾಣಿಜ್ಯ ಬೆಳೆಗಳು ಮತ್ತು ಕಾಯಿಪಲ್ಲೆ (ಜೋಳ, ರಾಗಿ, ಗೋವಿನಜೋಳ, ಗೋಧಿ, ಕಬ್ಬು, ಹತ್ತಿ, ಸೂರ್ಯಕಾಂತಿ ಕುಸುಬೆ, ಮೆಣಿಸಿನ ಕಾಯಿ, ಟೊಮೆಟೊ ಇತ್ಯಾದಿ)
 ಅಜೊಲ್ಲ-ನೀಲಿ ಹಸಿರುಪಾಚಿ ಬತ್ತ
ಫ್ರಾಂಕಿಯ ಅರಣ್ಯ ಸಸ್ಯಗಳು

ರೈಜೋಬಿಯಂ ಬ್ಯಾಕ್ಟೀರಿಯಾ ಗುಂಪಿಗೆ ಸೇರಿದ್ದು ದ್ವಿದಳ ಧಾನ್ಯಗಳ ಮೇಲೆ ಗಂಟುಗಳನ್ನು ಉತ್ಪಾದಿಸಿ ಸಾರಜನಕದ ಶೇಖರಣೆ ಮಾಡುತ್ತದೆ. ಪ್ರತಿ ದ್ವಿದಳ ಬೆಳೆಗೂ ನಿರ್ದಿಷ್ಟ ರೈಜೋಬಿಯಂ ತಳಿಯನ್ನು ಉಪಯೋಗಿಸಬೇಕು. ಇದನ್ನು ‘ಆತಿಥೇಯ ನಿರ್ದಿಷ್ಟ’ ಎಂದು ಕರೆಯುತ್ತಾರೆ. ಪ್ರತಿ ಹೆಕ್ಟೇರಿನಲ್ಲಿ ಪ್ರತಿವರ್ಷ 60-180 ಕಿಲೊ ಸಾರಜನಕವನ್ನು ಪೂರೈಸುವ ಶಕ್ತಿ ರೈಜೋಬಿಯಂಗೆ ಇದೆ.

ಅಜೋಸ್ಪಿರಿಲಂ ಡೊಂಕಾದ ದೇಹವುಳ್ಳ ಬ್ಯಾಕ್ಟೀರಿಯಾ ಆಗಿದೆ. ಇದು ತನ್ನ ದೇಹದಲ್ಲೇ ಸಾರಜನಕದ ಶೇಖರಣೆ ಮಾಡಿ ಮಣ್ಣಿಗೆ ಬಿಡುಗಡೆಗೊಳಿಸುತ್ತದೆ. ಇದನ್ನು ಏಕದಳ ಧಾನ್ಯಗಳು ಮತ್ತು ವಾಣಿಜ್ಯ ಬೆಳೆಗಳಿಗೆ ಉಪಯೋಗಿಸಬಹುದು. ಇದರಿಂದ ಪ್ರತಿ ಹೆಕ್ಟೇರಿನಲ್ಲಿ ಪ್ರತಿವರ್ಷ 30 – 40 ಕಿಲೊ ಸಾರಜನಕದ ಪೂರೈಕೆಯಾಗುತ್ತದೆ.

ಅಜೊಲ್ಲ ಎನ್ನುವುದು ನೀರಿನ ಮೇಲೆ ತೇಲಾಡಿಕೊಂಡು ಬೆಳೆಯುವ ಹಸಿರು ಸಸ್ಯ (ಚಿತ್ರ ನೋಡಿ). ಇದರ ಎಲೆಗಳ ರಂಧ್ರಗಳಲ್ಲಿ ಲಕ್ಷಾಂತರ ನೀಲಿ ಹಸಿರು ಪಾಚಿ ಗುಂಪಿಗೆ ಸೇರಿದ ಅಣುಜೀವಿಗಳಿವೆ. ಈ ನೀಲಿ ಹಸಿರು ಪಾಚಿಯ ಹೆಟಿರೋಸಿಸ್ಟ್ ಎನ್ನುವ ಕೋಶಗಳಲ್ಲಿ ‘ನೈಟ್ರೋಜಿನೇಸ್’ ಕಿಣ್ವವಿದ್ದು ಅದು ಸಾರಜನಕದ ಶೇಖರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಗದ್ದೆಯಲ್ಲಿ ಬೆಳೆಯುವ ಬತ್ತಕ್ಕೆ ಅಜೊಲ್ಲ ಎಂಬ ನೀಲಿ ಹಸಿರು ಪಾಚಿಯನ್ನು ಉಪಯೋಗಿಸಿದಾಗ ಪ್ರತಿ ಹೆಕ್ಟೇರಿನಲ್ಲಿ ಪ್ರತಿ ವರ್ಷ 80-100 ಕಿಲೊ ಸಾರಜನಕ ಪೂರೈಕೆಯಾಗುತ್ತದೆ. ಇದಲ್ಲದೆ ಅಜೊಲ್ಲ ಹಸಿರೆಲೆ ಗೊಬ್ಬರವಾಗಿಯೂ ಬತ್ತದ ಬೆಳೆಗೆ ಉಪಯುಕ್ತವಾಗಿದೆ. ಅಜೊಲ್ಲವನ್ನು ದನದ ಆಹಾರದಲ್ಲಿ ಸೇ. 25 ಭಾಗ ಉಪಯೋಗಿಸಿದರೆ ಹಾಲಿನಲ್ಲಿರುವ ಪ್ರೋಪ್ರಮಾಣ ಅಧಿಕವಾಗುವುದು. ಇದನ್ನು ಮೀನಿನ ಆಹಾರವಾಗಿಯೂ ಉಪಯೋಗಿಸುತ್ತಾರೆ.

ಫ್ರಾಂಕಿಯ ಎನ್ನುವ ಆಕ್ಟಿನೋಮೈಸಿಸ್ ಗುಂಪಿಗೆ ಸೇರಿದ ಅಣುಜೀವಿ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳ ಬೇರಿನ ಮೇಲೆ ಗಂಟುಗಳನ್ನು ಉತ್ಪಾದಿಸಿ 30 ಕಿಲೊ ಸಾರಜನಕವನ್ನು ಸ್ಥಿರೀಕರಿಸುವುದು.

ಹೀಗೆ ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಅಮೂಲ್ಯ ಪೋಷಕಾಂಶವಾದ ಸಾರಜನಕವನ್ನು, ಎಲ್ಲಾ ಬೆಳೆಗಳಿಗೂ ಪೂರೈಸಿ ಆಹಾರೋತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ನಿಸರ್ಗದ ವಿಸ್ಮಯ. ಈ ಅಣುಜೀವಿಗಳು ಪರಿಸರ ಸ್ನೇಹಿಯಾಗಿವೆ ಎಂಬುದನ್ನು ಗಮನಿಸಬೇಕು.

ಸಾರಜನಕ ಸ್ಥಿರೀಕರಿಸುವ ಸೂಕ್ಷ್ಮಜೀವಿಗಳು

– ರೈಜೋಬಿಯಂ

– ಅಜಟೋಬ್ಯಾಕ್ಟರ್

– ಅಜೋಸ್ಪಿರಿಲಂ

– ಅಸಿಟೋಬ್ಯಾಕ್ಟರ್

– ಅಜೊಲ್ಲ

ಕಡಲೆ ಬೆಳೆಯ ಬೇರಿನ ಗಂಟುಗಳು

 

ಅಜೊಲ್ಲ