ಮೊನ್ನೆದಿನ ತಾನೇ ತೆರಳಿದರು ಅತಿಥಿಗಳು
ಈ ಮನೆಯ ತೊರೆದು
ಇದರೆದೆಯ ಕೊರೆದು !

ಇದ್ದಕಿದ್ದಂತೆ ಹೇಳದೇ ಕೇಳದೇ
ಬಂದರವರು.
ತಾವು ಬರಲಿಹೆವೆಂದು ಒಂದು ಪತ್ರವ ಕೂಡ
ಹಾಕಲಿಲ್ಲ.
ವಾರವೊಂದರ ಹಿಂದೆ ತಾವಾಗಿಯೇ ಬಂದು
ನುಗ್ಗಿದರು ಒಳಗೆ,
ಬಲು ಸಲಿಗೆಯೊಳಗೆ !

ಮೊನ್ನೆ ದಿನ ತಾನೇ ತೆರಳಿದರು ಅತಿಥಿಗಳು
ಈ ಮನೆಯ ತೊರೆದು,
ಇದರೆದೆಯ ಕೊರೆದು.
ತಿಂಗಳೆರಡಾದರೂ ಬೇಕು ಈ ಮನೆ ಮತ್ತೆ
ಮೊದಲಿದ್ದ ರೀತಿಯಲಿ ನಿಲ್ಲುವುದಕೆ
ಮೊದಲಿನಾರೋಗ್ಯವನು ಗೆಲ್ಲುವುದಕೆ.
ಹೇಗೊ ಏನೊ ಅಂತು ತೆರಳಿದರು ಅತಿಥಿಗಳು,

ಅಲ್ಲ-ಆಗಂತುಕರು, ಬಂದ ಹಾಗೇ,
ಬಂದ ದಾರಿಗೆ ಸುಂಕ ಪಡೆದ ಹಾಗೆ,
(ಪ್ರಾಯಶಃ ಮತ್ತೊಂದು ಮನೆಗೆ!)
‘ಡಾಕ್ಟರ ಬಿಲ್ಲು’ ಔಷಧಿಯ ಶೀಶೆಗಳ
ಸುತ್ತ ಕಾವಲಿಗಿರಿಸಿ,
ತೆರಳಿದರು, ಮೊನ್ನೆ ದಿನ ತಾನೇ ತೆರಳಿದರು
ಈ ಮನೆಯ ತೊರೆದು,
ಇದರೆದೆಯ ಕೊರೆದು.