ಸಾವಿರದ ೧೯೬೭ ಇಸವಿಯ ನವೆಂಬರ ತಿಂಗಳು ಇರಬೇಕು. ನಾನು ನನ್ನ ಅಕ್ಕ ಡಾ.ಶಶಿಕಲಾ ಆಚಾರ್ಯಳಿಗೆ ದಕ್ಷಿಣಕನ್ನಡದ ಶೀರೂರು ಗ್ರಾಮದಲ್ಲಿ ತೋಟಮಾಡಿ ಕೊಡುವ ಕಾಯಕಕ್ಕೆ ತೊಡಗಿದ್ದೆ. ಕಾಡು ಸವರಿ ಇಪ್ಪತ್ತು ಎಕರೆಯಲ್ಲಿ ತೆಂಗಿನ ಸಸಿ ನೆಟ್ಟು ಆಗಿತ್ತು. ಅಷ್ಟರಲ್ಲಿ ನನ್ನ ಅಕ್ಕ ಮತ್ತು ಭಾವನವರು ಉಳಿದ ಜಾಗೆಯಲ್ಲಿ ರಬ್ಬರ್ ನೆಟ್ಟರೆ ಹೇಗೆ? ಎಂಬ ಆಲೋಚನೆ ಮಾಡತೊಡಗಿದರು. ನಾನು ಪುತ್ತೂರಿನ ರಬ್ಬರ್ ಬೋರ್ಡ್ ಕಛೇರಿಗೆ ಧಾವಿಸಿ, ರಬ್ಬರ್ ಬೆಳೆಯ ಬಗ್ಗೆ ದೊರಕುವ ಎಲ್ಲಾ ಮಾಹಿತಿಯ ಪುಸ್ತಕಗಳನ್ನು ತಂದೆ. ಪ್ರಕಟಿಸಲ್ಪಟ್ಟ ಮಾಹಿತಿಯ ಪ್ರಕಾರ ರಬ್ಬರ್ ಬೆಳೆ ಲಾಭದಾಯಕ ಎಂದು ಕಂಡಿತು. ಆದರೆ, ಹೊಸ ಬೆಳೆಯಾದ ರಬ್ಬರು ನಾನು ಅದುವರೆಗೆ ಕಂಡು ಕೇಳರಿಯದ ಬೆಳೆ. ಈ ಬೆಳೆಯನ್ನು ಬೆಳೆಯುವ ಮೊದಲು ಅದರ  ಪರಿಚಯ ಮಾಡಿಕೊಳ್ಳಲೇಬೇಕು ಅನ್ನಿಸಿತು. ನನಗೆ ರಬ್ಬರ್ ಬೆಳೆಯ ಪರಿಚಯ ಮಾಡಿಕೊಡಬೇಕೆಂದು ಪುತ್ತೂರಿನ ರಬ್ಬರ್ ಬೋರ್ಡಿನ ಸಂಪರ್ಕ ಅಧಿಕಾರಿಗಳನ್ನು ಕೇಳಿಕೊಂಡೆ. ಅವರು ನನಗೊಂದು ಕಾಗದ ಕೊಟ್ಟು ಶಿರಾಡಿ ಘಾಟಿಯಲ್ಲಿರುವ ಒಂದು ಕಿರುಹಳ್ಳಿಯಾದ ನೆಲ್ಯಾಡಿ ಎಂಬ ಊರಿನ ಸಮೀಪದ ಸರಕಾರೀ ರಬ್ಬರ್ ತೋಟಕ್ಕೆ ಹೋಗಿ ಅಲ್ಲಿನ ಫೀಲ್ಡ್ ಸುಪರ್ವೈಸರನ್ನು ಕಾಣಲು ಹೇಳಿದರು.

ಸರಿ, ಹೊರಟಿತು ನೆಲ್ಯಾಡಿಗೆ ನನ್ನ ಸವಾರಿ. ನೆಲ್ಯಾಡಿಯ ಏಕೈಕ ಕಾಕಾ ಹೋಟೆಲ್‌ನಲ್ಲಿ ರಬ್ಬರ್ ತೋಟದ ಬಗ್ಗೆ ವಿಚಾರಿಸಲು, ಅದು ಅಲ್ಲಿಂದ ಐದು ಮೈಲಿ ದೂರದ ಕಾಡಿನಲ್ಲಿದೆ ಎಂದು ತಿಳಿಯಿತು. ಸಾಯಂಕಾಲದವರೆಗೆ ಅಲ್ಲೇ ಕಾದು ಕುಳಿತರೆ, ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಫೀಲ್ಡ್ ಸೂಪರ್ವೈಸರ್ ಸಿಗುತ್ತಾರೆ ಅಂತ ಹೋಟೆಲ್ ಕಾಕನಿಂದ ತಿಳಿಯಿತು. ನಾನು ಕಾದು ಕುಳಿತೆ. ಸಾಯಂಕಾಲವಾಯಿತು. ಸುಮಾರು ಐದು ಗಂಟೆಗೆ ಫೀಲ್ಡ್ ಸುಪರ್ವೈಸರ್ ಶ್ರೀ ಕರುಣಕರನ್ ಅವರ ಸವಾರಿ ಹೋಟೆಲ್ ಹತ್ತಿರಕ್ಕೆ ಚಿತ್ತೈಸಿತು. ಚಹಾದ ಸತ್ಕಾರವಾದ ನಂತರ, ಅವರಿಗೆ ನಾನು ತಂದ ಪತ್ರ ಹಾಗೂ ನನ್ನ ಬೇಡಿಕೆ ಸಲ್ಲಿಸಿದೆ.

ಆ ಕಾಲದ ವಿದ್ಯಾರ್ಥಿಗಳು ಧರಿಸುತ್ತಿದ್ದ ಟೈಟ್‌ಪ್ಯಾಂಟ್ ಟೀ-ಶರ್ಟ್ ಧರಿಸಿದ್ದ ನನ್ನ ವೇಷಭೂಷಣ ನೋಡಿ ಅವರಾಗಲೇ ನಾನೊಬ್ಬ ತಲೆಕೆಟ್ಟ ಪೇಟೆಯ ಹುಡುಗ ಎಂದು ನಿರ್ಧರಿಸಿಬಿಟ್ಟಿದ್ದರು. ನನ್ನ ಪೂರ್ವಾಪರ ಹಾಗೂ ನನ್ನ ಒಂದು ವರ್ಷದ ಸಾಗುವಳಿಯ ಅನುಭವ ಕೇಳಿದ ನಂತರ ಅವರು ನಗುತ್ತಾ, ರಬ್ಬರು ತೋಟ ಮಾಡುವುದು ಬಿಡಿ, ಇಲ್ಲಿನ ರಬ್ಬರು ತೋಟವನ್ನು ನೀವು ನನ್ನ ಜತೆಗೆ ಬಂದು ನೋಡಲು ಕೂಡ ನಿಮಗೆ ಕಷ್ಟವಾದೀತು! ಎಂದರು. ಅದಕ್ಕೆ ನಾನು ಹಾಗೇನಿಲ್ಲ, ನಾನು ಕಾಡು ಕಡಿದು ಇಪ್ಪತ್ತು ಎಕರೆಯಲ್ಲಿ ತೆಂಗಿನಗಿಡಗಳನ್ನು ನೆಟ್ಟು ಈಗ ತಾನೇ ಮುಗಿಸಿದ್ದೇನೆ. ಕಾಡಿನ ಮಧ್ಯೆ ನಿರ್ಜನ ಜಾಗದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಒಂಟಿಯಾಗಿ ವಾಸಿಸುತ್ತಿದ್ದೇನೆ ಎಂಬ ವಿವರಗಳನ್ನೆಲ್ಲಾ ನೀಡಿ ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೂ, ಅವರು ಹೊಸದಾಗಿ ಆರಂಭವಾಗಿದ್ದ ಆ ಪ್ಲಾಂಟೇಶನ್ ಮಾಡುವಾಗಿನ ಅವರ ಸ್ವಂತ ಕಷ್ಟಗಳನ್ನು ನನಗೆ ವಿವರಿಸಿದರು.

ನೆಲ್ಯಾಡಿಯಲ್ಲಿ ಬಿಡಾರ ಮಾಡಿ, ಅವರು ದಿನಾ ಐದು ಮೈಲು ದೂರದ ಪ್ಲಾಂಟೇಶನ್ನಿಗೆ ಹೋಗಿ ಬರಬೇಕಾಗಿತ್ತು. ಅಲ್ಲಿ ಸರಕಾರ ವಾಸದಮನೆ ಇನ್ನೂ ಕಟ್ಟಿಸಿರಲಿಲ್ಲ. ಜತೆಗೆ ನೆಲ್ಯಾಡಿಯಿಂದಲೇ ಕೂಲಿಯಾಳುಗಳನ್ನು ಅವರು ಕೆಲಸಕ್ಕೆ ಕರೆದುಕೊಂಡು ಹೋಗಬೇಕಾಗಿತ್ತು. ಅಕಸ್ಮಾತ್ ಮಳೆ ಬಂದರೆ, ಹಳ್ಳಕೊಳ್ಳಗಳು ತುಂಬಿ ಹರಿದು, ಆ ಕಾಡಿನ ಕಚ್ಚಾದಾರಿ ದುರ್ಗಮವಾಗುತ್ತಿತ್ತು. ಕಷ್ಟಪಟ್ಟು ಸುಮಾರು ನಲ್ವತ್ತು ಎಕರೆ ಕಾಡು ಕ್ಲೀಯರ್ ಮಾಡಿ ದೂರದ ಕೇರಳದಿಂದ ರಬ್ಬರಿನ ನರ್ಸರಿ ಗಿಡಗಳನ್ನು ತಂದು ಆ ಜಾಗದಲ್ಲಿ ನೆಟ್ಟು ಕಾಪಾಡುತ್ತಿದ್ದರು.  ಅವರು ಬೆಳಗ್ಗೆ ನೆಲ್ಯಾಡಿಯಿಂದ ಹೊರಟು ತೋಟವಿರುವ ಆ ಜಾಗ ತಲುಪಬೇಕಾದರೆ ಗಂಟೆ ಹತ್ತಾಗುತ್ತಿತ್ತು. ಸಾಯಂಕಾಲ ನಾಲ್ಕು ಗಂಟೆಯಾಗುತ್ತಲೇ ಅವರು ಹೊರಟು ಹಿಂದಿರುಗಿ ಬರಬೇಕಾಗುತ್ತಿತ್ತು. ವಾಹನ ಓಡಾಡುವ ರಸ್ತೆ ಬೇರೆ ಅದಾಗಿರಲಿಲ್ಲ. ಆ ಜಾಗದಲ್ಲಿ ಕಾಡುಪ್ರಾಣಿಗಳ ಹಾಗೂ ಹಾವುಗಳ ಉಪದ್ರ ಬೇರೆ! ಆದರೂ, ನನ್ನ ಉಮೇದನ್ನು ನೋಡಿ ಅವರು ನನ್ನನ್ನು ಮರುದಿನ ಆ ಜಾಗಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದರು. ನೆಲ್ಯಾಡಿಯದಲ್ಲಿ ವಸತಿ ಸೌಕರ್ಯವಿರದ ಕಾರಣ ನಾನು ರಾತ್ರಿ ಉಳಿಯಲು ಪುತ್ತೂರಿಗೇ ಮರಳಬೇಕಾಯಿತು. ಮರುದಿನ ಮೊದಲ ಬಸ್ಸಿನಲ್ಲೇ ನೆಲ್ಯಾಡಿ ತಲುಪಿದೆ. ಶ್ರೀ ಕರುಣಾಕರನ್ ಕಾಯುತ್ತಾ ಇದ್ದರು. ಅವರ ಪಂಗಡಕ್ಕೆ ನಾನೂ ಸೇರಿಕೊಂಡು ನಡೆಯತೊಡಗಿದೆ. ಮಧ್ಯಾಹ್ನದ ಊಟಕ್ಕೆ ಬದಲಾಗಿ ಕಾಕನ ಹೋಟೆಲ್‌ನಿಂದ ಎರಡು ಬನ್ ಕಟ್ಟಿಸಿಕೊಂಡಿದ್ದೆ. ದಾರಿಯಲ್ಲಿ ಹಲವಾರು ನೀರಿನ ತೊರೆಗಳಿದ್ದುದರಿಂದ ಕುಡಿಯುವ ನೀರು ಹೊರಬೇಕಾಗಿರಲಿಲ್ಲ. ಅಂತೂ, ಹೆಮ್ಮರಗಳ ದಟ್ಟವಾದ ಕಾಡಿನ ನಡುವೆ ನಡೆಯುತ್ತಾ ಹತ್ತು ಗಂಟೆಗೆ ಪ್ಲಾಂಟೇಶನ್ನಿನ ಬೌಂಡರಿ ತಲುಪಿದೆವು.

ಆ ನಲ್ವತ್ತು ಎಕರೆಗಳ ಹೊಸ ಪ್ಲಾಂಟೇಷನ್‌ಗೆ ಸುತ್ತಲೂ ಕಂದಕ ತೋಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಗಳು ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಬೇಲಿಯ ಬಂದೋಬಸ್ತು ಮಾಡಿದ್ದರು. ಕಂದಕದ ಉಬ್ಬಿನ ಮೇಲೆ ಕತ್ತಾಳಿ ಗಿಡಗಳನ್ನು ನೆಟ್ಟಿದ್ದರು. ನಾವು ಬಿದಿರಿನ ಗಳುಗಳನ್ನು ಅಡ್ಡವಾಗಿ ಇರಿಸಿದ ತೊಡಮೆ ಎಂದು ಮಲೆನಾಡಿನಲ್ಲಿ ಕರೆಯಲ್ಪಡುವ ಗೇಟ್‌ವೊಂದನ್ನು ದಾಟಿ ಆ ರಬ್ಬರ್ ತಾಕನ್ನು ಪ್ರವೇಶಿಸಿದೆವು.

ಕರುಣಾಕರನ್ ರಬ್ಬರ್ ಗಿಡಗಳ ನಡುವೆ ಬೆಳೆದ ಹಸುರು ಹುಲ್ಲನ್ನು ಒಂದುಬದಿಯಿಂದ, ಆಳುಗಳ ಕೈಯಲ್ಲಿ ಕೀಳಿಸಲು ಶುರುಮಾಡಿದರು. ಸ್ವಲ್ಪ ಹೊತ್ತಿನ ನಂತರ, ನನ್ನನ್ನು ಕರೆದುಕೊಂಡು ಆ ಇಡೀ ನಲ್ವತ್ತು ಎಕರೆಯ ರಬ್ಬರ್ ತಾಕಿನ ಪರಿಧಿಯಲ್ಲಿ ನನ್ನನ್ನು ಸುತ್ತಾಡಿಸಿದರು. ಹಸುರಾಗಿದ್ದ ಹುಲ್ಲಿನ ಆಸೆಗೆ, ಜಿಂಕೆಗಳ ಒಂದು ಹಿಂಡು ಅಲ್ಲಿಗೆ ಬಂದು ಮೇಯುತ್ತಿತ್ತು. ನಮ್ಮನ್ನು ಕಂಡು ಅವು ಚಂಗನೆ ನೆಗೆಯುತ್ತಾ ಕಾಡಿನ ಕಡೆ ಓಡಿ ಮರೆಯಾದುವು. ಸರಕಾರ ಹಾಕಿದ ಅಗಳನ್ನು ಅವು ಲೀಲಾಜಾಲವಾಗಿ ಹಾರಿಕೊಂಡು ದಾಟಿಹೋದುವು. ಕರುಣಕರನ್ ಅವರು ನನಗೆ ಯಾವ ಪ್ರಾಣಿಯೂ ರಬ್ಬರ್ ಗಿಡಗಳನ್ನು ತಿನ್ನುವುದಿಲ್ಲ ಎಂದು ತಿಳಿಸಿದರು. ಮುಂದಕ್ಕೆ ಆ ದಾರಿಯಲ್ಲಿ ಕೆಲವು ಹಾವುಗಳ ದರ್ಶನವೂ ಆಯಿತು. ಅವು ಕೂಡಾ ನಮ್ಮನ್ನು ಕಂಡೊಡನೆ, ಅವುಗಳ ಪಾಡಿಗೆ ಪಕ್ಕಕ್ಕೆ ಹರಿದು ಹೋದುವು.

ಮಧ್ಯಾಹ್ನದ ಹೊತ್ತಿಗೆ ನಾವು ಪ್ಲಾಂಟೆಶನ್ನಿನ ಮಧ್ಯೆ ಹರಿಯುತ್ತಿದ್ದ ತೊರೆಯ  ತಂಪಾದ ನೀರು ಕುಡಿದೆವು. ಆ ನಂತರ, ನಾವು ತಂದ ಊಟದ ಬುತ್ತಿಗಳನ್ನು ಬಿಚ್ಚಿದೆವು. ನಾನು ಬ್ರೆಡ್ ತಿಂದೆ. ಉಳಿದವರು ತಮ್ಮ ಮನೆಗಳಿಂದ ಊಟದ ಕ್ಯಾರಿಯರ್ ತಂದಿದ್ದರು. ನಾವು ಊಟಮಾಡಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದಾಗ ಆ ಕಾಡಿನ ಕೊರಕಲು ಹಾದಿಯಲ್ಲಿ ಒಂದು ಟಿಂಬರ್ ಲಾರಿ ಪ್ರತ್ಯಕ್ಷವಾಯಿತು. ಅದರಲ್ಲಿ ಸುಮಾರು ಇಪ್ಪತ್ತು ಜನರು ಆ ರಬ್ಬರ್  ತೋಟದ ಗೇಟಿನ ಬಳಿಯಲ್ಲೇ ತೊರೆಯ ಬಳಿ ಇಳಿದುಕೊಂಡು ತಮ್ಮ ಹತ್ಯಾರಿ, ಹಗ್ಗ, ಗರಗಸ ಮೊದಲಾದ ಸಾಮಾನುಗಳು, ಪಾತ್ರೆಪಗಡಿ ಹಾಗೂ ಇತರೇ ಸರಂಜಾಮುಗಳನ್ನು ಇಳಿಸಿಕೊಂಡರು. ನಾವು ಅವರನ್ನು ವಿಚಾರಿಸಲು ಅವರು ರಬ್ಬರ್ ಪ್ಲಾಂಟೇಶನ್ ವಿಸ್ತರಣೆಗಾಗಿ ಇನ್ನೂ ಐವತ್ತು ಎಕರೆ ಕಾಡನ್ನು ಕ್ಲೀಯರ್ ಮಾಡಲು ಬಂದ ಟಿಂಬರ್ ಕೂಪ್ ಕಂಟ್ರಾಕ್ಟ್‌ದಾರನ ಪಾರ್ಟಿಯವರೆಂದು ಹೇಳಿದರು. ಅವರಲ್ಲಿ ಹೆಚ್ಚಿನವರು ಮಳೆಯಾಳಿ ಹಾಗೂ ತುಳುಭಾಷೆಗಳಲ್ಲಿ ನಗುನಗುತ್ತಾ ಮಾತನಾಡಿಕೊಳ್ಳುತ್ತಾ ಇದ್ದರು. ಅಷ್ಟರಲ್ಲಿ ಅವರು ಬಂದ ಲಾರಿ ಹಿಂತಿರುಗಿತು. ಒಂದು ದೊಡ್ಡ ಹರವಾಗಿದ್ದ ಶಿಲೆ ಕಲ್ಲಿನ ಬಳಿ ಅವರು ಒಂದು ತಾರ್ಪಾಲಿನ ಗುಡಾರ ಹಾಕಿಕೊಂಡರು. ಕೆಲ ನಿಮಿಷಗಳಲ್ಲೇ, ಅವರು ಮೂರು ಕಲ್ಲು ಒಟ್ಟಿ ಒಲೆಗಳನ್ನು ತಯಾರಿಸಿ ಮಧ್ಯಾಹ್ನದ ಊಟಕ್ಕೆ ಕುಸುಬುಲಕ್ಕಿಯ ಗಂಜಿ ಮತ್ತು ಒಣಮೀನಿನ ಚಟ್ನಿಯ ತಯಾರಿಯಲ್ಲಿ ನಿರತರಾದರು. ಅವರೆಲ್ಲಾ ನಗುನಗುತ್ತಾ ಮಾತಾಡಿಕೊಳ್ಳುತ್ತಾ ಊಟದ ನಿರೀಕ್ಷೆಯಲ್ಲಿರುವಾಗ, ನಾನು ಮತ್ತು ಕರುಣಾಕರನ್ ಕೆಲಸದ ಆಳುಗಳಿದ್ದ ತಾಕಿಗೆ ಹುಲ್ಲು ತೆಗೆಯುವ ಕಾರ್ಯ ವೀಕ್ಷಿಸಲು ಹೋದೆವು.

ಎತ್ತರವಾಗಿ ಮತ್ತು ಸೊಂಪಾಗಿ ಬೆಳೆದ ಆ ಹುಲ್ಲಿನ ಮೆಲೆ ನಡೆಯುತ್ತಿದ್ದಾಗ, ಕಾಡಿನ ಇಲಿಗಳು ತೋಡಿದ ಒಂದು ಬಿಲದ ಬಾಯಿಗೆ ನನ್ನ ಎಡಕಾಲಿನ ಪಾದ ಸಿಕ್ಕಿಕೊಂಡು ಕುಸಿಯಿತು. ಆಯತಪ್ಪಿ ನಾನು ಬಿದ್ದುಬಿಟ್ಟೆ! ಅಲ್ಲೇ ಸಾವರಿಸಿಕೊಂಡು ನೆಲದ ಮೇಲೆ ಕುಳಿತೆ. ನನ್ನ ಮಣಿಗಂಟು ತುಂಬಾ ನೋಯ ಹತ್ತಿತು. ಕರುಣಾಕರನ್ ನೀರಿನ ಬಳಿಗೆ ಓಡಿ ಹೋಗಿ, ತನ್ನ ಕರ್ಚೀಫ್ ಒದ್ದೆಮಾಡಿ ತಂದು ನನ್ನ ಮಣಿಗಂಟಿಗೆ ಬಿಗಿದರು. ತಣ್ಣೀರಿನ ಪಟ್ಟಿ ನೋವಿಗೆ ಸ್ವಲ್ಪ ಹಾಯೆನಿಸಿದರೂ, ನೋಡುತ್ತಾ ಇದ್ದಂತೆಯೇ, ನನ್ನ ಎಡ ಮಣಿಗಂಟು ಚೆನ್ನಾಗೇ ಊದಿಕೊಂಡುಬಿಟ್ಟಿತು. ಕಾಲನ್ನು ನೆಲಕ್ಕೆ ಊರಲು ಪ್ರಯತ್ನಿಸಿದಾಗ, ನೋವು ತಾಳಲಾರದೇ ನನ್ನ ಕಣ್ಣುಗಳಲ್ಲಿ ಗಂಗಾವತರಣವಾಯಿತು. ವಾಚ್ ನೋಡಿದಾಗ ಗಂಟೆ ಮಧ್ಯಾಹ್ನದ ಮೂರು ದಾಟಿದೆ..!

ಈ ಕಾಡಿನಿಂದ ಕುಂಟುತ್ತಾ ಹೇಗೆ ನೆಲ್ಯಾಡಿ ಸೇರಲಿ? ಅಲ್ಲಿಂದ ಹೇಗೆ ಐವತ್ತು ಮೈಲಿ ದೂರದ ನನ್ನ ಮನೆ ಸೇರಲಿ? ಎಂಬ ಚಿಂತೆ ಶುರುವಾಯಿತು. ಕರುಣಾಕರನ್ ನನಗೆ ಹೆದರಬೇಡಿ! ನಿಮಗೆ ನಾನು ನನ್ನ ಹೆಗಲಿನ ಆಧಾರ ಕೊಟ್ಟು ನಡೆಸಿ ನೆಲ್ಯಾಡಿಯ ತನ್ನ ಬಿಡಾರದಲ್ಲಿ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡುತ್ತೇನೆ ಎಂದರು. ನನಗೆ ಕುಂಟುತ್ತಾ ಐದು ಮೈಲು ಸಾಗುವುದೇ ದೊಡ್ಡ ಚಿಂತೆಯಾಗಿ ಕಂಡಿತು. ಕರುಣಾಕರನ್ ಜತೆಗೆ ಬಂದ ಆಳುಗಳು ನನ್ನನ್ನು ಎತ್ತಿಕೊಂಡು ಹೋಗಿ ಅವರ ಮನೆ ತಲುಪಿಸುವುದಾಗಿಯೂ ಹೇಳಿದರು. ಅಷ್ಟರಲ್ಲೇ ಟಿಂಬರ್ ಕೂಪಿನ ಕಣ್ಣನ್ ಮೇಸ್ತ್ರಿ ನಾವಿದ್ದಲ್ಲಿಗೆ ಬಂದರು.

ಅವರು ಗೌರವವರ್ಣದ, ಸುಮಾರು ಐದಡಿ ಎಂಟು ಇಂಚು ಎತ್ತರದ ಕೃಶಕಾಯದ ವ್ಯಕ್ತಿ. ಮುಖದ ಮೇಲೆ ಮೀಸೆ ಮತ್ತು ಗಿಡ್ಡಕ್ಕೆ ಕತ್ತರಿಸಿದ ಗುಂಗುರು ಕೂದಲನ್ನು ಹೊಂದಿದ್ದರು. ಅವರ ಕಣ್ಣುಗಳು ಮತ್ತು ದೇಹ ಬಹಳ ಚುರುಕಾಗಿ ಇದ್ದುವು. ನೋಡಿದರೆ ಒಳ್ಳೆಯ ಕ್ರೀಡಾಳುವಿನ ತರಹ ಇದ್ದರು. ಅವರ ದೇಹದಲ್ಲಿ ಎಲ್ಲೂ ಮೇದಸ್ಸಿನ ಅಂಶ ಕಂಡುಬರುತ್ತಿರಲಿಲ್ಲ. ಉಬ್ಬಿದ ಸ್ನಾಯುಖಂಡಗಳು ಅವರ ದೈಹಿಕಬಲವನ್ನು ಸಾರುತ್ತಿದ್ದುವು. ಬರಿಯ ಬಿಳಿ ಮುಂಡು (ನಾಲ್ಕು ಮೊಳದ ಬಿಳಿಪಂಚೆ) ಮತ್ತು ಸ್ಯಾಂಡೋ ಬನಿಯನ್‌ಗಳನ್ನು ಅವರು ಧರಿಸಿದ್ದರು. ಕಾಲಿಗೆ ರಬ್ಬರಿನ ಹವಾಯಿ ಚಪ್ಪಲಿ ತೊಟ್ಟು ನಿಶ್ಯಬ್ದವಾಗಿ ಸರಸರನೆ ಓಡಾಡುತ್ತಿದ್ದರು. ಅವರದು ಶ್ರೀಮದ್ಗಾಂಭೀರ್ಯದ ಮುಖ ಚರ್ಯೆಯಾದರೂ, ಅವರ ಮುಖದಲ್ಲಿ ಸದಾ ಮಂದಹಾಸದ  ಕಳೆ ಲಾಸ್ಯವಾಡುತ್ತಿತ್ತು. ಅವರನ್ನು ನೋಡಿದೊಡನೇ ಅವರು ಆ ಮರಕಡಿಯುವ ಗುಂಪಿನ ಮುಂದಾಳು ಎಂಬ ಅಂಶ ತಿಳಿದು ಬರುತ್ತಿತ್ತು. ನನ್ನ ಕಾಲಿನ ಅವಸ್ಥೆಯನ್ನು ಜಾಗರೂಕತೆಯಿಂದ ಪರೀಕ್ಷಿಸಿ ನೋಡಿದ ಕಣ್ಣನ್ ಮೇಸ್ತ್ರಿಯವರು ನಗುತ್ತಾ ಸಾರೂ…!(=ಸಾರ್!) ಚಿಂತೆ ಬೇಡ! ಎಂದರು.

ಈಗ ನಿಮ್ಮ ಕಾಲಿಗೆ ಬೇಕಾಗಿರುವುದು ನಮ್ಮ ನೋವಿನ ಎಣ್ಣೆ ಹಾಗೂ ನಾಟಿ ಔಷಧದ ಉಪಚಾರ. ಎರಡು ದಿನ ಕಾಲಿನ ಮೇಲೆ ಭಾರ ಹಾಕದಿದ್ದರೆ ಶೆರಿ (=ಸರಿ). ನಮ್ಮ ಜತೆಗೆ ಎರಡು ದಿನ ಆರಾಮವಾಗಿ ಇದ್ದುಬಿಡಿ, ಮೂರನೇ ದಿನ ಟಿಂಬರ್ ಲಾರಿ ಬರುತ್ತೆ. ಅದರಲ್ಲಿ ನೀವು ಮಂಗಳಾಪುರದ ತನಕ (=ಮಂಗಳೂರು) ಹೋಗಬಹುದು! ಎಂದು ಮಳೆಯಾಳ ಬೆರೆತ ತುಳುಭಾಷೆಯಲ್ಲಿ ಹೇಳಿ ತನ್ನ ಕ್ಯಾಂಪಿನ ಕಡೆಗೆ ಓಡುತ್ತಾ ಹೋದರು. ಅವರು ಎರಡೇ ನಿಮಿಷದಲ್ಲಿ ಒಂದು ಸ್ಟೀಲ್ ಲೋಟದಲ್ಲಿ ಕೆಂಬಣ್ಣದ ನೋವಿನ ಎಣ್ಣೆಯನ್ನು ಕೆಂಡದ ಮೇಲೆ ಬಿಸಿಮಾಡಿ ತಂದಿದ್ದರು. ಬಿಸಿಬಿಸಿ ಎಣ್ಣೆಯನ್ನು ನನ್ನ ಕಾಲಿಗೆ ನಾಜೂಕಾಗಿ ಹಚ್ಚಿ, ಇಲ್ಲೇ ಕೂತಿರು ಈಗ ಬಂದೆ ಎನ್ನುತ್ತಾ, ಪುನಃ ತಮ್ಮ ಕ್ಯಾಂಪಿಗೆ ನಡೆದರು. ಎರಡು ನಿಮಿಷದಲ್ಲೇ ಊಟದ ಸ್ಟೀಲ್‌ಬಟ್ಟಲು ತುಂಬಾ ಬಿಸಿಬಿಸಿ ಚಾ ಸೊಪ್ಪಿನ ಕಷಾಯ (ಬ್ಲ್ಯಾಕ್ ಟೀ ಎನ್ನಬಹುದು) ಮತ್ತು ಒಂದು ಚಿಕ್ಕ ತುಂಡು ಅಚ್ಚುಬೆಲ್ಲ ತಂದರು.

ಸಾರೂ..! ಈ ಚಾಯದ ಕಣ್ಣ (=ಡಿಕಾಕ್ಷನ್) ಕುಡಿ! ಕಹಿ ಎನಿಸಿದರೆ ಈ ವೆಲ್ಲ (=ಬೆಲ್ಲ) ಕಚ್ಚಿಕೊಂಡು ಕಣ್ಣ ಎಲ್ಲಾ ಕುಡಿದು ಮುಗಿಸು. ಸುಮ್ಮನೆ ಮಂಡೆ ಬಿಸಿ ಮಾಡಬೇಡ. ಎರಡು ದಿನದಲ್ಲಿ ನಿನಗೆ ಗುಣಮಾಡಿ ಮಂಗಳಾಪುರಕ್ಕೆ ಕಳುಹಿಸುತ್ತೇನೆ! ಎಂದರು. ನನ್ನ ಜನ್ಮದಲ್ಲಿ ಮೊದಲನೇ ಬಾರಿಗೆ ಬಿಸಿಬಿಸಿಯಾದ ಕಪ್ಪು ಚಹಾವನ್ನು ಅಗಲವಾದ ಊಟದ ತಟ್ಟೆಯಿಂದ ಹೀರಿ ಹೀರಿ ಕುಡಿದೆ. ಚಾ ಸ್ವಲ್ಪ ಕಡು ಕಹಿ ಎನಿಸಿದರೂ ಬೆಲ್ಲ ಕಚ್ಚಿಕೊಂಡು ಕುಡಿದಾಗ ಬಹಳ ಮುದವೆನಿಸಿತು.

ಸುಮಾರು ಅರುವತ್ತು ಕೇಜಿ ತೂಗುತ್ತಿದ್ದ ನನ್ನನ್ನು ಕಣ್ಣನ್ ಮೇಸ್ತ್ರಿ ಚಿಕ್ಕ ಮಗು ಎತ್ತುವಂತೆ ಎತ್ತಿಕೊಂಡು ನಡೆಯತೊಡಗಿದರು. ಸುಮಾರು ಒಂದು ಫರ್ಲಾಂಗ್ ದೂರದಲ್ಲಿದ್ದ ತಮ್ಮ ತರ್ಪಾಲಿನ ಕ್ಯಾಂಪ್‌ನಲ್ಲಿ ಅದಾಗಲೇ ಸಿದ್ಧಪಡಿಸಿಟ್ಟಿದ್ದ ಚಿಗುರು ಎಲೆಗಳ ಹಾಸಿಗೆಯ ಮೇಲೆ ಹಾಸಿದ್ದ ಬಿಳಿಯ ವೇಸ್ಟಿಯ ಮೇಲೆ ಮಲಗಿಸಿಬಿಟ್ಟರು. ಅವರು ನನ್ನನ್ನು ತನ್ನ ಎರಡು ಕೈಗಳ ಮೇಲೆ ಹೊತ್ತು ಅಷ್ಟು ದೂರ ವೇಗವಾಗಿ ನಡೆದಿದ್ದರೂ, ಅವರ ಉಸಿರಾಟದ ವೇಗವು ಸ್ವಲ್ಪವೂ ಹೆಚ್ಚಾಗಿರಲಿಲ್ಲ. ನಾನು ಅವರಿಗೆ ಒಂದು ಮಗುವಿನಷ್ಟು ಹಗುರ ಅನ್ನಿಸಿರಬೇಕು. ನನಗೆ ಕಣ್ಣನ್ ಮೇಸ್ತ್ರಿಗಳ ಅಪಾರ ದೈಹಿಕ ಸಾಮರ್ಥ್ಯ ಕಂಡು ಅಚ್ಚರಿಯಾಯಿತು. ತಂಪಾದ ಹಾಸಿಗೆಯ ಮೇಲೆ ಮಲಗಿದ್ದೇ ತಡ, ತುಂಬಾ ನೋವು ಅನುಭವಿಸಿದ್ದ ನನಗೆ ಗಾಢ ನಿದ್ರೆ ಆವರಿಸಿಬಿಟ್ಟಿತು.

ರಾತ್ರಿ ಸುಮಾರು ಎಂಟುಗಂಟೆಯ ಹೊತ್ತಿಗೆ ಮೇಸ್ತ್ರಿ ನನ್ನನ್ನು ಸಾರೂ…! ಸಾರೂ…! ಏಳು. ಊಟ ಮಾಡೊಣ! ಎಂದು ಎಬ್ಬಿಸಿದರು.

ನಿನ್ನನ್ನು ನೋಡಿದರೆ ಪೋತಿ (ದಕ್ಷಿಣಕನ್ನಡದ ಬ್ರಾಹ್ಮಣರನ್ನು ಕೇರಳದಲ್ಲಿ ಪೋತಿ ಎಂದು ಕರೆಯುತ್ತಾರೆ) ತರಹ ಕಾಣುತ್ತಿ. ನೀನು ಶಾಖಾಹಾರಿ ತಾನೇ? ಎಂದು ಪ್ರಶ್ನಿಸಿದರು. ನಾನು ಹೌದೆಂದು ತಲೆ ಅಲ್ಲಾಡಿಸಿದೆ. ಹಂಗಾದರೆ ಶೆರಿ!, ನಿನಗೆ ನಮ್ಮ ಒಣಮೀನಿನ ಚಟ್ನಿಯೊಂದನ್ನು ಬಿಟ್ಟು ಉಳಿದುದೆಲ್ಲವೂ ಆಗುತ್ತೆ. ನಿನಗೋಸ್ಕರ ಕೆಂಡದ ಮೇಲೆ ಸುಟ್ಟ ಕೆಂಪು ಮೆಣಸಿನ ಚಟ್ನಿ ಮಾಡಿಸಿದ್ದೇನೆ. ಊಟಕ್ಕೆ ಎಲ್ಲರಿಗೂ ಮಾಡಿದ ಇನ್ನೊಂದು ಆಲೂಗೆಡ್ಡೆಯ  ಪದಾರ್ಥವಿದೆ. ದಾಕ್ಷಿಣ್ಯ ಮಾಡದೆ ಶೆರಿಯಾಗಿ ಊಟಮಾಡು ಎಂದು ಹೇಳಿದರು.

ಸ್ಟೀಲ್‌ತಟ್ಟೆಯಲ್ಲಿ ಗಂಜಿ ಬಸಿಯದ ಕುಸುಬಲಕ್ಕಿಯ ಅನ್ನ (ಅರ್ಥಾತ್ ದಕ್ಷಿಣಕನ್ನಡದ ಗಂಜಿ=ಮಳೆಯಾಲದ ಬೆಜ್ಜ) ಆಲೂಗಡ್ಡೆಯ ವ್ಯಂಜನದ ಜೊತೆಗೆ ಒಂದು ಕಾಡು ಎಲೆಯ ಮೇಲೆ ಬಡಿಸಿಟ್ಟ ಕೆಂಪು ಮೆಣಸಿನ ಚಟ್ನಿ ಇದ್ದುವು. ಆ ರಾತ್ರಿ ನನಗೆ ಚೆನ್ನಾಗೇ ಹಸಿವೆಯಾಗಿತ್ತು. ಊಟವು ಬಹಳ ರುಚಿಯಾಗಿಯೇ ಇದ್ದಿತು. ಸ್ವಲ್ಪ ಹೆಚ್ಚಾಗೇ ಉಂಡೆ.

ನಮ್ಮ ಕೂಪಿನಲ್ಲಿ ದಿನರಾತ್ರಿಯ ಇಪ್ಪತ್ತನಾಲ್ಕು ಗಂಟೆಯೂ ಚಾಯದ ಕಣ್ಣ ಕುದಿಯುತ್ತಾ ಇರುತ್ತೆ. ರಾತ್ರಿ ಕೂಡಾ ಗಂಜಿಯ ಪಾತ್ರೆ ಬಿಸಿಯಾಗೇ ಇಟ್ಟಿರುತ್ತೇವೆ. ಅವನ್ನು ಯಾರು ಯಾವಾಗ ಬೇಕಾದರೂ ತೆಗೆದುಕೊಂಡು ಉಣ್ಣಬಹುದು..! ಎಂದು ಮೇಸ್ತ್ರಿ ಹೇಳಿದರು. ಮತ್ತೊಂದು ವಿಚಾರ ಉಂಟು..! ಎನ್ನುತ್ತಾ, ಈ ಕಣ್ಣಮೇಸ್ತ್ರಿಯ ಕೂಪಿನಲ್ಲಿ ಕಳ್ಳು, ಶರಾಬು ನಿಷಿದ್ಧ. ಇಲ್ಲಿ ಕುಡಿಯುವವರಿಗೆ ಅಥವಾ ಕುಡಿದು ಬರುವವರಿಗೆ ಪ್ರವೇಶವಿಲ್ಲ. ಕುಡಿಯಬೇಕೆನ್ನಿಸಿದವರು ರಜಾಮಾಡಿ ಅವರವರ ಊರಿಗೆ ಹೋಗಿ ಕುಡಿದು ಅದರ ಅಮಲು ಇಳಿದಮೇಲೆ ಬರಬಹುದು ಎಂದು ನಾನು ಹೇಳುತ್ತೇನೆ ಎಂದು ಹೆಮ್ಮೆಯಿಂದ ಹೇಳಿದರು. ನನಗೆ ಈ ಜಾಗದಲ್ಲಿ ಕುಡುಕರ ಕಾಟವಿಲ್ಲ ಎಂದು ಸಮಾಧಾನವಾಯಿತು. ನನ್ನ ಊಟವಾದ ನಂತರ ಸ್ವಲ್ಪ ಚಾಯ ಕುಡಿ ಎಂದರು ಮೇಸ್ತ್ರಿ. ನನಗೆ ರಾತ್ರಿಯ ನಿದ್ದೆಗೆ ತೊಂದರೆಯಾಗಬಹುದೇನೋ ಎಂದೆನಿಸಿ ಚಾಯ ನಿರಾಕರಿಸಿದೆ.

ಸ್ವಲ್ಪ ಹೊತ್ತಿನಲ್ಲಿ ಒಂದು ಬಿಳಿಯ ಬಟ್ಟೆಯ ಪಟ್ಟಿ ತಯಾರಿಸಿಕೊಂಡು ಬಂದ ಮೇಸ್ತ್ರಿ ಅದನ್ನು ನನ್ನ ನೋವಿನ ಮಣಿಗಂಟಿಗೆ ಬಿಗಿಯಾಗಿ ಬ್ಯಾಂಡೇಜ್‌ನಂತೆ ಸುತ್ತಿದರು. ಸುತ್ತುವಾಗ ಸ್ವಲ್ಪ ನೋವೆನ್ನಿಸಿತು. ಪುನಃ ಸ್ವಲ್ಪ ನೋವಿನ ಎಣ್ಣೆಯನ್ನು ಹದವಾಗಿ ಬಿಸಿಮಾಡಿ ತಂದು ಬಟ್ಟೆಯ ಪಟ್ಟಿಗೆ ಉಣ್ಣಿಸಿದರು. ಬೆಚ್ಚಗಿನ ಔಷಧದ ಎಣ್ಣೆಯು ಪಟ್ಟಿಯ ಮೇಲೆ ಬೀಳಲು ತುಂಬಾ ಆರಾಮ ಎನ್ನಿಸಿತು.

ಊಟದ ನಂತರ ಎಲ್ಲರೂ ಸ್ವಲ್ಪಹೊತ್ತು ಮಾತನಾಡುತ್ತಾ ಕುಳಿತರು. ಆಮೇಲೆ ಒಬ್ಬೊಬ್ಬರೇ ಕಂಬಳಿ ಹೊದೆದು ಉರಿಯುತ್ತಿದ್ದ ಬೆಂಕಿಯ ಸುತ್ತ ಅಡ್ಡಾಗಿ ಮಲಗತೊಡಗಿದರು. ನನಗೂ ಹೊದೆಯಲು ಹೊಸದಾದ ಕಂಬಳಿಯನ್ನು ತಂದುಹೊದೆಸಿ ಮೇಸ್ತ್ರಿ, ಬೆಂಕಿ ಉರಿಯುತ್ತಾ ಇರುತ್ತದೆ. ಬೆಂಕಿ ಇದ್ದಲ್ಲಿ ಯಾವ ಕಾಡು ಪ್ರಾಣಿಯೂ ಬರಲಾರದು. ನೀನು ನಿಶ್ಚಿಂತೆಯಿಂದ ನಿದ್ದೆಮಾಡು, ಸಾರೂ.. ರಾತ್ರಿ ಏನಾದರೂ ಬೇಕಾದರೆ ನನ್ನನ್ನು ಎಬ್ಬಿಸು ಎಂದು ನನ್ನಿಂದ ಸ್ವಲ್ಪ ದೂರದಲ್ಲಿ ಮಲಗಿ ನಿದ್ದೆಹೋದರು.

ರಾತ್ರಿಹೊತ್ತು ಕಾಡಿನ ವಿಚಿತ್ರವಾದ ಶಬ್ದಗಳು ಕೇಳಿಸಹತ್ತಿದುವು. ನಾನು ಕೂಡಾ ಕಾಡಿನ ಪಕ್ಕದಲ್ಲೇ ವಾಸಿಸುತ್ತಾ ಇದ್ದವನಾದುದರಿಂದ ನನಗೇನೂ ಗಾಬರಿ ಎನಿಸಲಿಲ್ಲ. ದೂರದಲ್ಲೆಲ್ಲೋ ನರಿಗಳು ಊಳಿಡುತ್ತಿದ್ದ ಸದ್ದು ಕೇಳಿಸಿತು. ನನಗೆ ಕಾಡಿನಲ್ಲಿ ಕೇಳುವ ಈ ಸಾಮಾನ್ಯ ಸದ್ದಿನಿಂದ ಗಾಬರಿ ಆಗಲಿಲ್ಲ. ಅನಂತರ ಸ್ವಲ್ಪ ಹೊತ್ತಿನಲ್ಲಿ ಗೂಬೆಯೊಂದು ಹತ್ತಿರದ ಮರದ ಮೇಲೆ ಕುಳಿತು ಕೂಗತೊಡಗಿತು. ಅದರ ಕೂಗು ಅನಿಷ್ಟವಂತೆ..! ಇದು ಭಾರತೀಯರಾದ ನಮಗೆ ಮಾತ್ರ ಅನಿಷ್ಟ, ಇಂಗ್ಲಿಷ್ ದೊರೆಗಳು ಗೂಬೆ ಕೂಗಿದ್ದು ಕೇಳಿಸಿಕೊಂಡರೆ ಅದು ಲಕ್ಕಿ ಔಲ್ ಎಂದು ಪುಳಕಗೊಳ್ಳುತ್ತಿದ್ದರಂತೆ..! ಈ ವಿಚಾರ ನನಗೆ ಚಿಕ್ಕಂದಿನಲ್ಲಿ ನನ್ನ ಅಜ್ಜ ತಿಳಿಸಿದ್ದರು. ನಾನು ಗೂಬೆಯ ವಿಚಾರ ಯೋಚಿಸುತ್ತಾ ನಿದ್ರಿಸಲು ಪ್ರಯತ್ನಿಸುತ್ತಿದ್ದೆ.

ಸ್ವಲ್ಪ ಸಮಯದ ನಂತರ ಅನತಿ ದೂರದಲ್ಲಿ ಹುಲಿಯ ಗುರುಟು ಕೇಳಿಬಂತು. ಮೊದಲು ನಾಲ್ಕೈದು ಗುರುಟು ಹಾಕಿ ನಂತರ ಕಾಡೇ ನಡುಗುವಂತೆ ಹುಲಿ ನಾಲ್ಕಾರು ಸಲ  ಘರ್ಜಿಸಿತು. ಕಾಡಿನ ಮರಗಳಲ್ಲಿ ಮನೆಮಾಡಿದ್ದ ಮಂಗಗಳು ಗಾಬರಿಯಿಂದ ಕಿರಿಚಿದವು. ನಂತರ ಎಲ್ಲೆಲ್ಲೂ ಭಯಾನಕ ನೀರವ ಕವಿಯಿತು, ಹುಲಿ ಪುನಃ ಘರ್ಜಿಸಿತು.

ನಾನು ಮೆಲ್ಲಗೆ ಮೇಸ್ತ್ರಿ…! ಎಂದೆ. ಹುಲಿಯ ಘರ್ಜನೆಯ ಶಬ್ದಕ್ಕೆ ಆತನಿಗಾಗಲೇ ಎಚ್ಚರವಾಗಿತ್ತು. ಸಾರೂ, ಅದು ಪುಲಿ (=ಹುಲಿ), ಅದರ ಪಾಡಿಗೆ ಅದು ಹೋಗುತ್ತೆ. ನೀನು ಏನೂ ಚಿಂತೆ ಮಾಡಬೇಡ. ಈಗ ಮಲಗು ಎಂದು ನನ್ನನ್ನು ನಿದ್ರಿಸಹೇಳಿದರು. ಆದರೆ, ನನಗೆಲ್ಲಿಯ ನಿದ್ರೆ ಬರಬೇಕು? ಹುಲಿಯ ಬಗ್ಗೆಯೇ ಆಲೋಚಿಸುತ್ತಾ ಎಚ್ಚರವಾಗೇ ಮಲಗಿದ್ದೆ. ಸ್ವಲ್ಪ ಹೊತ್ತಿನಲ್ಲಿ ಕಾಡಿನಲ್ಲಿ ಮರಗಳ ರೆಂಬೆಗಳು ಮುರಿದ ಶಬ್ದ ಕೇಳಿಸಿತು. ನಾನು ಪುನಃ ಮೇಸ್ತ್ರಿ…..ಮೇಸ್ತ್ರೀ ಎಂದು ಕರೆದೆ. ಅವರೂ ಎಚ್ಚರವಾಗೇ ಇದ್ದರು ಎಂದುಕಾಣುತ್ತೆ. ಸಾರೂ, ಅದು ಯಾನೆ! (=ಆನೆ). ಅವು ನಮ್ಮ ನೀರಿನ ತೊರೆಯಲ್ಲೇ ಇಲ್ಲೆ ಸ್ವಲ್ಪ ಕೆಳಗೆ ನೀರು ಕುಡಿಯಲು ಬಂದಿವೆ. ನೀರು ಕುಡಿದು ವಾಪಾಸ್ ಹೋಗುತ್ತವೆ, ನೀನು ನೆಮ್ಮದಿಯಿಂದ ನಿದ್ದೆಮಾಡು ಎನ್ನುತ್ತಾ ತಿರುಗಿ ಮಲಗಿದರು.

ಮೊದಲು ಹುಲಿ, ಈಗ ಆನೆ….! ನನಗೆಲ್ಲಿಂದ ನಿದ್ದೆ ಬಂದೀತು? ಕಣ್ಣು ಬಿಟ್ಟುಕೊಂಡೇ ಬೆಳಗಿನ ತನಕ ಅಲ್ಲಾಡದೆ ಮಲಗಿದ್ದೆ. ಅಂತೂ ಸೂರ್ಯೋದಯಕ್ಕೆ ಮೊದಲು ನಿದ್ದೆ ಬಂತು.                    ಎಂಟು ಗಂಟೆಗೆ ಊಟದ ಬಟ್ಟಲಲ್ಲಿ ಚಾಯ ಹಿಡಿದು ಬಂದು ಮೇಸ್ತ್ರಿ ನನ್ನನ್ನು ಎಬ್ಬಿಸಿದ್ದರು. ಬೆಲ್ಲದ ತುಂಡು ಕಚ್ಚುತ್ತಾ ಕಡು ಚಾಯ ಹೀರಿದೆ. ಸ್ವಲ್ಪ ನಿದ್ದೆಯ ಮಂಪರು ಕಡಿಮೆಯಾಯಿತು. ಕೂಪಿನ ಜನರಾಗಲೇ ಬೆಳಗಿನ ಗಂಜಿ ಊಟಮಾಡಿ  ಕಾಡಿನ ಮರಗಳನ್ನು ಉರುಳಿಸುವ ಕಾಯಕಕ್ಕೆ ಹೋಗಿದ್ದರು. ಮೇಸ್ತ್ರಿ ದೊಡ್ಡ ನಾಟಾ ಮರಗಳನ್ನು ಕಡಿದು ಸರಿಯಾಗಿ ದಡೆಯ ಮೇಲೆ ಬೀಳಿಸಲು ಅಡ್ಡಮುರಿ (ಟಿಂಬರಿನವರ ದೊಡ್ಡ ಗರಗಸ) ಹಾಕಿ ಕೊಯ್ಸುವ ಹವಣಿಕೆಯಲ್ಲಿದ್ದರು. ದೊಡ್ಡ ಮರಗಳನ್ನು ಮೊದಲೇ ಸಿದ್ಧಪಡಿಸಿದ ದಡೆಗಳ ಮೇಲೆ ಮಲಗುವಂತೆ ಅವನ್ನು ಕಡಿದು ಬೀಳಿಸುವ ಕಾರ್ಯಕ್ಕೆ ಪೂರ್ವಸಿದ್ಧತೆ ಆಗುತ್ತಿತ್ತು. ಸ್ವಲ್ಪಹೊತ್ತು ಮರಗಳ ಹತ್ತಿರ ಹೋಗಿ ಬಂದು ಆಮೇಲೆ ನನಗೆ ಬೆಳಗಿನ ಊಟ ಕೊಡುವುದಾಗಿ ಹೇಳಿ ಮೇಸ್ತ್ರಿ ಕಾಡಿನಲ್ಲಿ ಮರೆಯಾದರು. ಸ್ವಲ್ಪ ಹೊತ್ತಿನಲ್ಲೇ ಕೊಡಲಿ ಮತ್ತು ಗರಗಸದ ಶಬ್ದ ನನಗೆ ಕೇಳಿಸತೊಡಗಿತು. ತದನಂತರ ದೊಡ್ಡ ಮರವೊಂದು ಉರುಳಿದ ಸದ್ದು…! ಆ ನಂತರ ಇನ್ನೊಂದು…, ಮತ್ತೊಂದು.

ಮರಗಳು ಶೆರಿಯಾಗಿ ದಡೆಯ ಮೇಲೆಯೇ ಕೂತಿವೀಂದು ಸಂತೋಷದಿಂದ ಉಲಿಯುತ್ತಾ ಮೇಸ್ತ್ರಿ ಕ್ಯಾಂಪಿಗೆ ಬಂದರು. ಒಂದು ಊಟದ ತಟ್ಟೆಗೆ ಗಂಜಿ ಬಡಿಸಿಕೊಂಡು ಬಂದು ನನ್ನ ಮುಂದಿಟ್ಟರು. ಪಕ್ಕದಲ್ಲಿ ಇಟ್ಟ ಕಾಡು ಎಲೆಯ ಮೇಲೆ ಕೆಲವು ಹಸಿ ನೀರುಳ್ಳಿಯ ಚೂರುಗಳು ಮತ್ತು ಎಣ್ಣೆ ಹಚ್ಚಿ ಕೆಂಡದಮೆಲೆ ಸುಟ್ಟ ಒಣಮೆಣಸಿನ ಚಟ್ನಿ ಇದ್ದುವು. ಇದನ್ನು ಹೇಗೆ ತಿನ್ನಲಪ್ಪಾ! ಎಂದು ಚಿಂತಿಸುತ್ತಾ ಬೆಳಗಿನ ಉಪಹಾರಕ್ಕೆ ಮೊದಲಿಟ್ಟೆ. ಚಟ್ನಿ ಮತ್ತು ನೀರುಳ್ಳಿಯ ಚೂರುಗಳ ಕಾಂಬಿನೇಶನ್ ಅಪ್ಯಾಯಮಾನವಾಗಿ ಕಂಡಿತು. ಎರಡನೇ ಸಲ ಗಂಜಿ ಹಾಕಿಸಿಕೊಂಡು ಭರ್ಜರಿಯಾಗಿ ಊಟಮಾಡಿದೆ.

ಆ ನಂತರ ಮೇಸ್ತ್ರಿ ಸ್ವಲ್ಪ ಎದ್ದು ನಿಲ್ಲು ನೋಡೋಣ.. ಎನ್ನುತ್ತಾ ನನ್ನನ್ನು ಕೈ ಕೊಟ್ಟು ಎಬ್ಬಿಸಿದರು. ಕಾಲು ಊರುವಾಗ ಸ್ವಲ್ಪವೇ ನೋವು ಎನಿಸಿತು. ಕುಂಟುತ್ತಾ ನಾಲ್ಕು ಹೆಜ್ಜೆ ಕೂಡಾ ನಡೆದೆ. ನಿನಗೆ ಆಧಾರಕ್ಕೆ ದೊಣ್ಣೆ ಮಾಡಿ ತರಲಾ? ಎಂದರು ಮೇಸ್ತ್ರಿ. ಅದಕ್ಕೆ ನಾನು ಬೇಡ, ನಾನೇ ನಡೆಯಬಲ್ಲೆ ಎಂದೆ.

ಹಾಗಾದರೆ ಸ್ವಲ್ಪ ನಡೆ. ನಡೆದರೆ ನಿನ್ನ ಕಾಲಿನ ಉಳುಕು ಶೀಘ್ರ ಗುಣವಾಗುತ್ತೆ.  ಹಾಗೆಯೇ ನೀರಿನ ಕಡೆ ನಡೆದು ನಿನ್ನ ಪ್ರಾಥರ್ವಿಧಿ ಮುಗಿಸಿ ಬಾ. ಇಂದು ಸಾಯಂಕಾಲ ನಿನಗೆ ಬಿಸಿನೀರು ಸ್ನಾನ ಮಾಡಿಸುತ್ತೇನೆ ಎಂದು ಹೇಳಿದರು. ಏನಾದರೂ ತೊಂದರೆಯಾದರೆ ಕೂಗಿ ಕರೆ, ಇಲ್ಲೇ ಇರುತ್ತೇನೆ ಎನ್ನುತ್ತಾ ನನ್ನ ಕೈಗೆ ಒಂದು ಅಲ್ಯುಮಿನಿಯಮ್ ತಂಬಿಗೆ ಹಾಗೂ ನಂಜನಗೂಡಿನ ಹಲ್ಲುಜ್ಜುವ ಪುಡಿ ಇತ್ತರು. ನಾನು ಸ್ವಲ್ಪ ಕುಂಟುತ್ತಲೇ ಸಾಗಿ ನನ್ನ ಪ್ರಾಥರ್ವಿಧಿಗಳನ್ನು ಪೂರೈಸಿಬಂದೆ.

ನಾನು ಹಿಂದಿರುಗುತ್ತಲೇ ಇಷ್ಟು ನಡೆದಿದ್ದು ಸಾಕು. ಇನ್ನು ಮಧ್ಯಾಹ್ನದ ತನಕ ನೀನು ಮಲಗಿಯೇ ಇರಬೇಕು! ಎಂದು ಆಣತಿ ಕೊಟ್ಟು ಮೇಸ್ತ್ರಿ ಕಾಡಿನಲ್ಲಿ ಮರೆಯಾದರು. ಮಧ್ಯಾಹ್ನ ಎಲ್ಲರೊಂದಿಗೆ ಕುಳಿತು ನೀರುಳ್ಳಿ ಸಾಂಬಾರ್, ಕುಚ್ಚಿಲಕ್ಕಿಯ ಇಂಗಲು ಅನ್ನ, ಕೆಂಡದ ಮೇಲೆ ಸುಟ್ಟ ಉದ್ದಿನ ಖಾರ ಹಪ್ಪಳಗಳ ಜತೆಗೆ ಭರ್ಜರಿ ಊಟವೇ ಆಯಿತು. ಕೂಪಿನ ಎಲ್ಲವರೊಂದಿಗೆ ಒಟ್ಟಾಗಿ ಕುಳಿತು ಎಲ್ಲರೂ ನಗುನಗುತ್ತಾ ಊಟಮಾಡಿದೆವು. ಎಲ್ಲರೂ ಒಂದೇ ಟೀಮಿನ ಆಟಗಾರರಂತೆ ಮೇಲು ಕೀಳು ಭಾವವಿಲ್ಲದೆ ಒಟ್ಟಾಗಿ ಬಾಳುತ್ತಿದ್ದುದನ್ನು  ನೋಡಿ ನನ್ನ ಮನ ಹರುಷದಿಂದ ನಲಿಯಿತು.

ಸಾಯಂಕಾಲ ಹೊತ್ತು ಕಂತುವ ವೇಳೆಗೆ ಮೇಸ್ತ್ರಿ ನನ್ನ ತಲೆಗೆ ಮತ್ತು ಮೈಗೆ ಬೇಡವೆಂದರೂ ಕೇಳದೆ ಕೊಬ್ಬರಿ ಎಣ್ಣೆ ಹಚ್ಚಿ ಮಾಲಿಶ್ ಮಾಡಿದರು. ಕಾಲಿನ ಬ್ಯಾಂಡೆಜ್ ಬಿಚ್ಚಿ ಕಾಲಿಗೆ ಹದವಾಗಿ ಔಷಧದ ಎಣ್ಣೆ ಲೇಪಿಸಿ, ನನಗೋಸ್ಕರ ದೊಡ್ಡ ಪಾತ್ರೆಯೊಂದರಲ್ಲಿ ಬಿಸಿನೀರು ತಯಾರಿಸಿದ ಮೇಲೆ ಚಂದ್ರಿಕಾ ಆಯುರ್ವೇದಿಕ್ ಸೋಪ್ ಹಚ್ಚಿ ನನ್ನ ತಲೆ ಬೆನ್ನುಗಳನ್ನು ಉಜ್ಜಿ ಸ್ವತಃ ಮೇಸ್ತ್ರಿಯೇ ನನಗೆ ಸ್ನಾನ ಮಾಡಿಸಿದರು. ನನ್ನ ಮಣಿಗಂಟಿಗೆ ಬೆಚ್ಚಗಿನ ನೀರೆರೆದು ಉಪಚರಿಸಿದರು. ನಾನದರೋ ದೀಪಾವಳಿಗೊಮ್ಮೆ ಎಣ್ಣೆ ಹಚ್ಚಿದ ಶಾಸ್ತ್ರ ಮಾಡಿಕೊಳ್ಳುವ ಪೈಕಿಯವನು. ಈ ಉಪಚಾರದಿಂದ ಬಹಳ ನಾಚಿಕೊಂಡೇಬಿಟ್ಟೆ. ಆದರೂ ನನ್ನ ಮೈಮನಗಳಿಗೆ ಈ ಅಭ್ಯಂಜನ ಹೊಸ ಚೈತನ್ಯ ತಂದಿತು. ನನಗೆ ತೊಟ್ಟುಕೊಳ್ಳಲು ಹೊಸ ಒಂದು ಅಡ್ಡ ಪಂಚೆ ಮತ್ತು ಒಂದು ಹೊಸ ಬಿಳಿಯ ಬನಿಯನ್ ಮೇಸ್ತ್ರಿ ಒತ್ತಾಯ ಮಾಡಿಯೇ ನೀಡಿದರು. ಬೇಡವೆಂದರೂ ನನ್ನ ಪ್ಯಾಂಟ್, ಶರ್ಟ್‌ಗಳನ್ನು ತನ್ನ ಕಡೆಯ ಹುಡುಗರ ಕೈಗೆ ಕೊಟ್ಟು ಒಗೆಸಿ ಹಾಕಿದರು. ಆ ಮೇಲೆ, ನನ್ನ ಕಾಲಿಗೆ ಹೊಸಪಟ್ಟಿ ಸುತ್ತಿ ಬಿಸಿ ಎಣ್ಣೆಯ ಉಪಚಾರ ಮಾಡಿದರು.

ಆದಿನ ರಾತ್ರಿ ಊಟಕ್ಕೆ ಎಲ್ಲರಿಗೂ ಕೇರಳ ಪರೋಟ ಮತ್ತು ಒಣ ಬಟಾಣಿಯ ವ್ಯಂಜನ ತಯಾರಾಗಿತ್ತು. ಮಾಮೂಲಿನ ಗಂಜಿ ಚಟ್ನಿಗಳೂ ಇದ್ದುವು. ಭರ್ಜರಿ ಊಟವಾಗಿದ್ದೇ ತಡ ನನಗೆ ಕಣ್ಣೇ ಮುಚ್ಚಿಬಂತು. ಅಭ್ಯಾಂಗ ಮಾಡಿಸಿದ್ದರಿಂದಲೋ ಏನೋ…! ಆ ರಾತ್ರಿ ಗಾಢವಾದ ನಿದ್ರೆಯೇ ಬಂತು. ಆ ರಾತ್ರಿ ನಮ್ಮ ಕ್ಯಾಂಪಿನ ಸನಿಹ ಹುಲಿ ಬಂದಿತ್ತೋ?  ಅಥವಾ ಆನೆಗಳು ಬಂದಿದ್ದುವೋ? ನನಗೆ ಅದರ ಅರಿವೇ ಆಗಲಿಲ್ಲ! ಮರುದಿನ ಕಣ್ಣುಬಿಟ್ಟಾಗ ಸೂರ್ಯನಾಗಲೇ ಉದಯಿಸಿದ್ದ. ಎದ್ದು ನಡೆದುನೋಡಿದರೆ, ಕಾಲಿನ ಊತ ತಗ್ಗಿತ್ತು. ಕಾಲು ಊರಿ ನಡೆದಾಗ ಸ್ವಲ್ಪ ಮಾತ್ರವೇ ನೋವಿತ್ತು. ನಾನು ಕುಂಟುತ್ತಾ ನಡೆಯಬೇಕಾಗಿರಲಿಲ್ಲ.

ನಾನು ಪರಮವೈದ್ಯ ಮೇಸ್ತ್ರಿಗೆ ಧನ್ಯವಾದ ಹೇಳಿದರೆ, ಆತ ಸಾರೂ, ನೀನು ಧನ್ಯವಾದ ಹೇಳಬೇಕಾಗಿರುವುದು ನಮ್ಮ ಕಣ್ಣಾನೂರಿನ ಕೇಳು ಪಂಡಿತರಿಗೆ ಎಂದರು. ಅವರ ಔಷಧಗಳನ್ನು ತಾನು ಪ್ರತಿಸಾರಿ ದೊಡ್ಡ ಕೂಪುಗಳಿಗೆ ಬರುವ ಮೊದಲು ತರುವುದಾಗಿ ಹೇಳಿದರು. ಶೀತ, ಜ್ವರ, ಕೆಮ್ಮು, ದಮ್ಮು. ವಾಂತಿ ಭೇದಿ, ಗಾಯ, ಉಳುಕು ಮೊದಲಾದುವಕ್ಕೆ  ಕಣ್ಣಾನೂರಿನ ಕೇಳು ಪಂಡಿತರು ಕೊಡುವ ಔಷಧಗಳು ರಾಮಬಾಣ ಎಂದು ನನಗೆ ತಿಳಿಸಿದರು.

ಆದಿನ ಸ್ವಲ್ಪ ಮಾತ್ರವೇ ನೋವಿರುವುದರಿಂದ ನಾನು ಅದೇ ದಿನದ ಸಾಯಂಕಾಲದ ಹೊತ್ತಿಗೆ ಕರುಣಾಕರನ್ ಅವರ ಜತೆಗೆ ನೆಲ್ಯಾಡಿಗೆ ಹೊರಡುವುದಾಗಿ ಹೇಳಿದೆ. ಹೇಗಿದ್ದರೂ, ಪ್ರತಿದಿನ ಕರುಣಾಕರನ್ ನನ್ನನ್ನು ಬೆಳಗ್ಗೆ ಸಾಯಂಕಾಲ ವಿಚಾರಿಸಿಕೊಳ್ಳುತ್ತಿದ್ದರು. ದಿನವೂ ನನಗೆ ಓದಿಕೊಳ್ಳಲು ಅವರಲ್ಲಿದ್ದ ರಬ್ಬರ್ ವ್ಯವಸಾಯದ ಬಗೆಗಿನ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಅವರ ಮನದಲ್ಲಿ ತಾನು ಇವನನ್ನು ಕಾಡಿಗೆ ಕರೆದುಕೊಂಡು ಬಂದುದರಿಂದ ಹೀಗಾಯಿತು..! ಎಂಬ ವೇದನೆ ಹೊಮ್ಮುತ್ತಿತ್ತು. ಅವರು ನಿಮ್ಮ ಮನೆಯಲ್ಲಿ ನಿಮ್ಮ ಬರವನ್ನು ಕಾಯುತ್ತಿರಬಹುದಲ್ಲವೇ? ಅದಕ್ಕಾಗಿ ಹತ್ತಿರದ ಉಪ್ಪಿನಂಗಡಿಗೆ ಹೋಗಿ ನನ್ನ ತಾಯಿಯವರಿಗೆ ಒಂದು ತಂತಿ ಸಂದೇಶ ಕಳುಹಿಸುವುದಾಗಿ ಹೇಳಿದರು.

ಅದಕ್ಕೆ ನಾನು ಅವರಿಗೆ ದಯವಿಟ್ಟು ನೀವು ಆ ಕೆಲಸ ಮಾಡುವುದು ಬೇಡ! ಏಕೆಂದರೆ,  ನಾನು ಒಬ್ಬಂಟಿಯಾಗಿ ಫಾರಂನಲ್ಲಿ ವಾಸವಾಗಿ ಇರುವವನು. ನನ್ನ ಬರವನ್ನು ಯಾರೂ ಕಾಯುವುದಿಲ್ಲ ಎಂದು ನನ್ನ ಪರಿಸ್ಥಿತಿಯನ್ನು ವಿವರಿಸಿ ಹೇಳಿದೆ.

ನಮ್ಮ ಮಾತನ್ನು ಕೇಳಿಸಿಕೊಂಡ ಮೇಸ್ತ್ರಿ ನಮ್ಮ ಹತ್ತಿರಕ್ಕೆ ಬಂದು ಸಾರೂ, ನೀನು ಈ ದಿವಸ ನಡೆಯಬೇಡ. ನಾಳೆಗೆ ಲಾರಿ ಬರಲು ಹೇಗೂ ನಾನು ಹೇಳಿದ್ದೇನೆ. ನಾಳೆಗೆ ಮೂರುಕಡೆ ಹಾಕಿದ ದಡೆಯಲ್ಲಿನ ಮರಗಳ ದಿಮ್ಮಿಗಳಿಂದ ಒಂದು ಲೋಡು ಮರ ರೆಡಿಯಾಗುತ್ತೆ. ಆ ಲಾರಿಯಲ್ಲಿ ನೀನು ಮಂಗಳಾಪುರಕ್ಕೆ ಆರಾಮಾಗಿ ಹೋಗು ಎಂದು ಹೇಳಿದರು. ನಾನು ಕೂಡಾ ಅವರ ಮಾತನ್ನು ಒಪ್ಪಿ ಅಲ್ಲೇ ಉಳಿದೆ. ಆ ರಾತ್ರಿ ಊಟಕ್ಕೆ ಘಮಘಮಿಸುವ ಚಿತ್ರಾನ್ನ ಮತ್ತು ಹೆಸರು ಬೇಳೆ ಪಾಯಸ ತಯಾರಾಗಿತ್ತು. ಹೆಸರು ಬೇಳೆಯ ಪಾಯಸವನ್ನು ವಾರಕ್ಕೊಂದು ಬಾರಿಯಾದರೂ ಟಿಂಬರ್ ಕೂಪಿನವರು ಮೈಗೆ ತಂಪೆಂದು ತಯಾರಿಸಿ ಕುಡಿಯುತ್ತಾರಂತೆ. ಆ ರಾತ್ರಿ ನಾವೆಲ್ಲಾ ಬೆಂಕಿಯ ಸುತ್ತ ಕುಳಿತು, ಬಹಳ ಹೊತ್ತು ಹರಟೆ ಹೊಡೆದು ನಗುತ್ತಾ ಮಾತನಾಡಿದ ಮೇಲೆ ನಿದ್ದೆಹೋದೆವು. ಆ ದಿನ ನನ್ನ ಚಿಗುರೆಲೆಗಳ ಹಾಸಿಗೆ ಕೂಡಾ ಚೆನ್ನಾಗಿ ಬಾಡಿ ನೆಲಕಚ್ಚುವ ತಯಾರಿಯಲ್ಲಿತ್ತು.

ಮರುದಿನ ಬೆಳಗ್ಗೆ ಹತ್ತರ ಹೊತ್ತಿಗೆ ಮೊದಲ ಲೋಡಿಗೆ ಟಿಂಬರ್ ಲಾರಿ ಪ್ರತ್ಯಕ್ಷವಾಯಿತು. ಎಲ್ಲ ಜನರೂ ಸೇರಿ ದೊಡ್ಡ ದೊಡ್ದ ದಿಮ್ಮಿಗಳನ್ನು ಲಾರಿ ಏರಿಸಿ ಲೋಡ್ ಮಾಡಿದರು. ನಾನು ನನ್ನ ಆಪದ್ಭಾಂಧವರಿಗೆ ಕೈಮುಗಿದು ಹೊರಡಲು ಅನುವಾದೆ. ವಿದಾಯ ಹೇಳುವ ಆ ಕ್ಷಣದಲ್ಲಿ ನನ್ನ ಕಣ್ಣುಗಳಲ್ಲಿ ನೀರು ಬಂತು. ಮೇಸ್ತ್ರಿಯವರ ಕಣ್ಣಲ್ಲಿ ಕೂಡಾ ನೀರಾಡಿತು. ಮೇಸ್ತ್ರಿ ನಾನು ಉಟ್ಟುಬಿಟ್ಟಿದ್ದ ಬಿಳಿಯ ಲುಂಗಿ, ಬನಿಯಾನ್ ಮತ್ತು ನಾನು ಉಪಯೋಗಿಸಿದ ಟವಲ್ ಇವನ್ನು ಒಂದು ಕಾಗದದಲ್ಲಿ ಸುತ್ತಿ ನನ್ನ ಕೈಯಲ್ಲಿ ಕೊಟ್ಟರು.

ಇದೇಕೆ ಮೇಸ್ತ್ರಿ? ಎಂದರೆ, ಇವು ನಮ್ಮ ಕೂಪಿನ ನೆನಪಿಗೋಸ್ಕರ ನಿನ್ನ ಹಸ್ತ ಇರಲಿ ಎಂದರು. ನಾನು ಅವರ ಘನತೆಯ ಮುಂದೆ ಬಹಳ ಸಣ್ಣವನಾಗಿ ಹೋದೆ.

ಎಂದಾದರೊಂದು ದಿನ ಸಿಗೋಣ. ನಿಮ್ಮ ಅಡ್ರಸ್ ನನಗೆ ಕೊಡಿರಿ ಎಂದೆ. ಅದಕ್ಕವರು ನಾವು ಕೆಲಸದ ಮೇಲೆ ಊರಿಂದೂರಿಗೆ ತಿರುಗುವ ಪೈಕಿ ಅಲ್ಲದಿದ್ದರೂ, ಖಂಡಿತವಾಗಿ ಕಾಡಿನಿಂದ ಕಾಡಿಗೆ ಅಲೆಯುತ್ತಿರುತ್ತೇವೆ. ನನಗೆ ಪತ್ರ ಬರೆಯಬೇಕೆನಿಸಿದರೆ ‘ಮಿಸ್ಟರ್ ಕಣ್ಣನ್ ಮೇಸ್ತ್ರಿ, ಕೇರ್ ಆಫ್ ಕಾಡು ಎಂಬ ಅಡ್ರಸ್ ಬರೆದು ಹರಿಯುತ್ತಿರುವ ಹೊಳೆಗೆ ಹಾಕಿ ‘ಟಪ್ಪಾಲ್ ಕಳುಹಿಸಿಬಿಡು ಎಂದು ನಕ್ಕುಬಿಟ್ಟರು. ಅವರ ಜತೆಗಾರರೂ ನಕ್ಕರು. ನಾನು ಕೂಡಾ ನಕ್ಕುಬಿಟ್ಟೆ.

ಲಾರಿ ಹತ್ತುವ ಮುನ್ನ ಕಣ್ಣನ್ ಮೇಸ್ತ್ರಿಯನ್ನು ಒತ್ತಟ್ಟಿಗೆ ಕರೆದು, ನನ್ನ ಕೈಯಲ್ಲಿದ್ದಎನಿಕಾರ್ ಎಂಬ ಸ್ವಿಸ್ ಮೇಕ್‌ನ ಕೈಗಡಿಯಾರವನ್ನು ಬಿಚ್ಚಿ ಅವರ ಕೈಗೆ ಕೊಟ್ಟು ಈ ಗಡಿಯಾರವನ್ನು ನನ್ನ ನೆನಪಿಗೆ ನೀವು ಇಟ್ಟುಕೊಳ್ಳಲೇಬೇಕು ಎಂದು ಒತ್ತಾಯಿಸಿದೆ. ಅವರು ನಿರಾಕರಿಸಿದಾಗ, ನಾನು ಅತ್ತು ಗೋಗರೆದೇಬಿಟ್ಟೆ! ಕೊನೆಗೂ, ಕೈಗಡಿಯಾರವನ್ನು ಅವರು ಪಡೆದುಕೊಂಡು, ತನ್ನ ಕಣ್ಣಿಗೊತ್ತಿಕೊಂಡು ತನ್ನ ಜೇಬಿಗೆ ಇಳಿಸಿಬಿಟ್ಟರು. ನನಗೆ ಮನಸ್ಸಿಗೆ ಸ್ವಲ್ಪ ಸಮಾಧಾನವೆನ್ನಿಸಿತು.

ಕೆಲವೇ ನಿಮಿಷಗಳಲ್ಲಿ ಲಾರಿ ಏರಿ ಡ್ರೈವರನ ಪಕ್ಕಕ್ಕೆ ಕುಳಿತು, ನಮ್ಮ ಆಪದ್ಭಾಂಧವ ಮಿತ್ರರಿಗೆ ಕೈಯಾಡಿಸಿದೆ. ಮೂರು ದಿನಗಳ ಕಾಲ ನನಗೆ ಆಸರೆ ಕೊಟ್ಟ ಜೀವನದಿಯಾದ ಆ ತಿಳಿನೀರಿನ ತೊರೆಯ ಚಿತ್ರವನ್ನು ಮತ್ತು ನನ್ನ ಆಪದ್ಭಾಂದವರ ಮುಖಗಳನ್ನು ಮನಃಪಟಲದಲ್ಲಿ ಚಿತ್ರಿಸಲು ಯತ್ನಿಸಿದೆ. ಆ ಚಿತ್ರವು ಈಗಲೂ ನನ್ನ ಮನದಾಳದಲ್ಲಿ ನಿಚ್ಚಳವಾಗಿ ಉಳಿದಿದೆ.

ಕೊನೆಗೊಮ್ಮೆ ಟಿಂಬರ್ ಲಾರಿ ಕಾಡುದಾರಿಯನ್ನು ಸುತ್ತಿ ಬಳಸಿ, ಎಲ್ಲೋ ಒಂದು ಕಡೆ ಹಾಸನ-ಮಂಗಳೂರು ರಸ್ತೆ ಸೇರಿತು. ನಾವು ಚಾ ಸೇವನೆಗೆ ಉಪ್ಪಿನಂಗಡಿ ಬಸ್‌ಸ್ಟಾಂಡ್ ಹತ್ತಿರದ ಹೋಟೆಲಿಗೆ ಹೋದಾಗ, ಲಾರಿಡ್ರೈವರ್ ನನ್ನ ಕೈಗೆ ಒಂದು ಹಳೇ ನ್ಯೂಸ್ ಪೇಪರಲ್ಲಿ ಸುತ್ತಿದ ಒಂದು ಪೊಟ್ಟಣ ಕೈಗಿತ್ತ. ಅದೇನೆಂದು ಬಿಚ್ಚಿ ನೋಡಿದರೆ ಅದರಲ್ಲಿ ನನ್ನ ಕೈಗಡಿಯಾರವಿತ್ತು!

ನೀವು ಬೇಡವೆಂದರೂ ಈ ಕೈಗಡಿಯಾರವನ್ನು ನಮ್ಮ ಮೇಸ್ತ್ರಿಯ ಮೇಲೆ ಹೇರಿದಿರಂತೆ. ಅದರ ಭಾರ ಅವರು ತಾಳಲಾರರಂತೆ..! ಅದಕ್ಕೇ ಮೇಸ್ತ್ರಿಯು ಉಪ್ಪಿನಂಗಡಿ ದಾಟಿದ ಮೇಲೆ ಇದನ್ನು ನಮ್ಮ ಸಾರ್ ಕೈಗೆ ಕೊಡು..! ಎನ್ನುತ್ತಾ ಡ್ರೈವರ್ ಕೂಪಿನಿಂದ ಲಾರಿ ಹೊರಡಿಸುವ ಮುನ್ನ ಈ ಪೊಟ್ಟಣವನ್ನು ಆತನ ಕೈಗೆ ಕೊಟ್ಟಿದ್ದರಂತೆ..!

ನಾನು ಪುನಃ ಆ ಕೈಗಡಿಯಾರವನ್ನು ಧರಿಸಿಕೊಂಡೆ. ಅದನ್ನು ನಾನು ಆ ದಿನದಿಂದ ಕಣ್ಣನ್ ಮೇಸ್ತ್ರಿಯ ಉಡುಗೊರೆ…! ಎಂದು ತಿಳಿದು ಧರಿಸಿದೆ. ಆ ಗಡಿಯಾರವನ್ನು ಮುಂದಕ್ಕೆ ಬಹಳ ವರ್ಷಗಳ ಕಾಲ ಧರಿಸಿದೆ.

ನನ್ನ ಜೀವಮಾನದಲ್ಲಿ ಇನ್ನೊಮ್ಮೆ ಕಾಣಸಿಗಲು ಅಸಂಭವನೀಯವಾದ ಆ ಕಣ್ಣನ್ ಮೇಸ್ತ್ರಿಯ ಉನ್ನತ ವ್ಯಕ್ತಿತ್ವವನ್ನು ನಾನು ಎಂದಿಗೂ ಮರೆಯಲಾರೆ. ಮನೆ ಸೇರಿದೊಡನೇ ಅವರಿಗೆ ಒಂದು ಪತ್ರ ಬರೆಯುವ ನಿರ್ಧಾರ ಕೂಡಾ ಮಾಡಿದೆ. ಆದರೆ.., ಆ ಪತ್ರವನ್ನು ಪೋಸ್ಟ್ ಮಾಡುವ ವಿಧಾನದ ಬಗ್ಗೆ ಆಲೋಚಿಸುತ್ತಾ ಘೊಳ್ಳನೇ ನಕ್ಕು, ಅವರಿಗೆ ಮನದಲ್ಲೇ ನಮಿಸಿದೆ.

ಈ ಅಪರೂಪದ ಘಟನೆಯನ್ನು ಇಂದು, ಅಂದರೆ ಸುಮಾರು ನಲ್ವತ್ತನಾಲ್ಕು ವರುಷಗಳ ನಂತರ ಇಲ್ಲಿ ದಾಖಲಿಸುತ್ತಿದ್ದೇನೆ.

***

ನೋಟ್ : ಕ್ರಮೇಣ ರಬ್ಬರ್ ಬೆಲೆ ಇಳಿಮುಖವಾಗಿ, ತೆಂಗಿನ ಬೆಳೆಯೇ ಲಾಭದಾಯಕವಾಗಿ ಕಂಡುದರಿಂದ ನನ್ನ ಅಕ್ಕ ಮತ್ತು ಭಾವನವರು ರಬ್ಬರ್ ಬೆಳೆ ಬೆಳೆಯಲಿಲ್ಲ.