೮. ಅತಿಶಯೋಕ್ತಿ
ಮೇರೆಗಳೆದಿರೆ ವಿಶೇಷ-ವಿಚಾರಮನಧಿಕೋಕ್ತಿಯೊಳ್ ತಗುಳ್ಚುವುದಕ್ಕುಂ |
ಸಾರ-ತರಮತಿಶಯಾಲಂಕಾರಂ ಮತ್ತದರ ಲಕ್ಷ್ಯಮೀ ತೆ[1]ಱನಕ್ಕುಂ ||೯೨||
೮೯. *ಆದರೆ ಉಪಮಾನ ಹೀನವಾಗಿ ಉಪಮೇಯವೇ ಅಧೀಕವೆನಿಸಿಬಿಟ್ಟರೆ, ಎಂದರೆ ಸಾಮಾನ್ಯನಿಯಮಕ್ಕೆ ವಿಪರ್ಯಾಸವುಂಟಾದರೆ, ಅದು ‘ಹೀನೋಪಮೆ’ಯೆಂಬ ದೋಷವೇ ಸರಿ. ಅದಕ್ಕೆ ಉದಾಹರಣೆ-* ‘ಆಕಾಶವು ಕೊಳದಂತೆ ಅತಿ ನಿರ್ಮಲವಾಗಿದೆ’, ‘ಇವನು ಪೃಥ್ವಿಯಲ್ಲಿ ನಾಯಿಯಂತೆ ಸ್ವಾಮಿನಿಷ್ಠನು’ ಎಂಬುದು ಪ್ರಬಲವಾದ ‘ಹೀನೋಪಮಾ’ ದೋಷ. *ಏಕೆಂದರೆ ಇಲ್ಲಿ ‘ಕೊಳ’, ‘ನಾಯಿ’ ಎಂಬ ಉಪಮಾನಗಳು ‘ಆಕಾಶ’, ‘ಮನುಷ್ಯ’ ಎಂಬ ಉಪಮೇಯಗಳಿಗಿಂತ ಹೀನವಾಗಿವೆ ಎಂದರೆ ಕೀಳಾಗಿವೆ. ಹೋಲಿಸಿ ದಂಡಿ, II -೫೫.*
೯೦. ‘ಈಕೆ ಗಂಡಸಿನಂತೆ ಪುರುಷಾಕೃತಿಯಾಗಿದ್ದಾಳೆ’ ಎನ್ನುವಾಗ ‘ಲಿಂಗಭೇದ’ವಿದೆ. *‘ಈಕೆ’ ಎಂಬ ಉಪಮೇಯ ಸ್ತ್ರೀಲಿಂಗ; ‘ಗಂಡಸಿನಂತೆ’ ಎಂಬ ಉಪಮಾನ ಪುಲ್ಲಿಂಗ; ಹೀಗೆ ಉಪಮಾನೋಪಮೇಯಗಳು ಭಿನ್ನಲಿಂಗಗಳಾದರೂ ಇಲ್ಲಿ ಔಚಿತ್ಯ ತಪ್ಪದೆ ಇರುವುದರಿಂದ ಇಲ್ಲಿ ದೋಷವೇನೂ ಇಲ್ಲ. ಹೋಲಿಸಿ-ದಂಡಿ, MM-೫೨.* ‘ರಾಜನು ಪ್ರಾಣಗಳಂತೆ ಪ್ರಿಯನಾಗಿರುವನು’ ಎಂದಾಗ ‘ವಚನಭೇದ’ವಿದೆ. *‘ರಾಜನು ಎಂಬ ಉಪಮೇಯ ಏಕವಚನ; ‘ಪ್ರಾಣಗಳಂತೆ’ ಎಂಬ ಉಪಮಾನ ಬಹುವಚನ ಆಗಿರುವುದರಿಂದ. ಇಲ್ಲಿಯೂ ಸಹೃದಯರಿಗೆ ಉದ್ವೇಗವೇನೂ ಬಾರದ ಕಾರಣ ದೋಷವಿಲ್ಲ.*
೬೧. ಹೀಗೆ ಉಪಮಾಲಂಕಾರದ ನಾನಾ ಬಗೆಗಳನ್ನೂ, ಅದರ ಅನಂತ ಗುಣಾವಳಿಯನ್ನೂ ತಿಳಿದುಕೊಂಡು (ಎಂದರೆ ದೋಷಕ್ಕೆ ಎಡೆಗೊಡದೆ) ಕವೀಶ್ವರರು ಕಾವ್ಯರಚನೆ ಮಾಡಬೇಕು. ಇನ್ನು ಅತಿ ರಮಣೀಯವಾದ ಅತಿಶಯೋಕ್ತಿಯ ಲಕ್ಷ್ಯ ಲಕ್ಷಣಗಳು ಹೀಗಿರುತ್ತವೆ-
೬೨.(ಲೋಕವ್ಯವಹಾರದ) ಮೇರೆಯನ್ನು ತುಂಬಾ ಮೀರಿದ ವಿಶೇಷಾಂಶವೊಂದನ್ನು ವರ್ಣ್ಯಮಾನ ವಿಷಯದಲ್ಲಿ ತಂದು ಸೇರಿಸುವುದೇ ‘ಅತಿಶಯೋಕ್ತಿ’ ಅದರ ಉದಾಹರಣೆ ಈ ರೀತಿಯಿರುತ್ತದೆ.
ಗೈರಿಕ-ರಸಾರ್ದ್ರಮಂ ಸಿಂ[2]ದೂರದೆ ತ[3]ಲೆವಱದುದಂ ಕರಂ ಕಂಡಾಂ ಸಂ- |
ಧ್ಯಾರಾದೊಳಱಯದೆ ಮದ-ವಾರಣಮಂ ಸೋಂಕಿ ಕೆಲದೊಳೊಯ್ಯನೆಪೋದೆಂ ||೯೩||
ಮಲಯಜ-ಚರ್ಚಿತೆಯಂ ಕೇವಲ-ಧವಳಾಭರಣೆಯಂ ದುಕೂಲಾಂಬರೆಯಂ |
ಕೆಲದೊಳ್ ನಿಲೆಯಂ ಜ್ಯೋತ್ಸಾ-ವಿಲಾಸದೊಳ್ ಬಗೆದೆನಿಲ್ಲ ನಲ್ಲಳನಿ[4]ನಿಸುಂ ||೯೪||
ಆಶಾ-ವಳಯಿತ-ಲೋಕಾಕಾಶಮಿದೇನತಿ-ವಿಶಾಲಮೋ ಯಶೋ- |
ರಾಶಿಯನಿಂದು-ದ್ಯುತಿಯ ನಿಕಾಶಮನೊಳಕೊಳ್ಗುಮೞವಿಗೞದಿರ್ದುದುಮಂ ||೯೫||
೯೩. *ಇದು ಸಂಧ್ಯಾರಾಗದ ವರ್ಣನಾಪದ್ಯ-* ‘ಗೈರಿಕ’ ಎಂಬ ಕೆಂಪಾದ ಶಿಲಾಧಾತುವಿನಿಂದ ಮೈಯೆಲ್ಲಾ ತೊಯ್ದಿದ್ದ, ತಲೆಯ ಮೇಲೆಲ್ಲ ಸಿಂಧೂರದ ಕೆಂಪು ಬಣ್ಣ ಬಳಿಯಲಾಗಿದ್ದ ಮದ್ದಾನೆಯನ್ನು ಸಂಧ್ಯಾರಾಗದ ಸಮಯದಲ್ಲಿ ನಾನು ಕಂಡರೂ, ಆನೆಯೆಂದರಿಯಲಾರದೆ, ಅದನ್ನು ಹಾಯ್ದುಕೊಂಡೇ ಪಕ್ಕದಲ್ಲಿ ಹೇಗೋ ಹೋದೆನು. *ಇಲ್ಲಿ ಸಂಧ್ಯಾರಾಗವು ಎಷ್ಟೊಂದು ಕೆಂಪಾಗಿತ್ತೆಂಬುದರ ವಿಶೇಷ ನಿದರ್ಶನವಾಗಿ ಅದೇ ಬಣ್ಣ ಬಳಿದ ಆನೆ ಕೂಡ ಆನೆಯೆಂದು ತಿಳಿಯುತ್ತಿರಲಿಲ್ಲವೆಂದು ವರ್ಣಿಸಲಾಗಿರುವುದರಿಂದ ಅತಿಶಯೋಕ್ತಿ. ಎಷ್ಟೇ ಕೆಂಬಣ್ಣ ಬಳಿದರೂ ಆನೆಯನ್ನು ಸಂಜೆಗೆಂಪಿನ ಕಾರಣ ಆನೆಯೆಂದರಿಯದೆ ಹೋಗುವುದು ಲೋಕಾತಿಕ್ರಾಂತವಾದ ವಿಚಾರವಾದ್ದರಿಂದ ಇದಕ್ಕೆ ಅತಿಶಯೋಕ್ತಿಯೆಂಬ ಹೆಸರು ಅನ್ವರ್ಥಕವಾಗಿದೆ.
೯೪. *ಅತಿಶಯೋಕ್ತಿಗೆ ಇನ್ನೊಂದು ಉದಾಹರಣೆ-* ‘ಗಂಧದಿಂದ ಅನುಲಿಪ್ತೆಯೂ, ಕೇವಲ ಬಿಳಿಯ ಆಭರಣಗಳನ್ನು ಧರಿಸಿದವಳೂ, ಬಿಳಿಯ ರೇಶ್ವೆಯ ಸೀರೆಯುಟ್ಟವಳೂ ಆದ ನಲ್ಲೆ ಪಕ್ಕದಲ್ಲಿಯೇ ನಿಂತರೂ, ಆ ಬೆಳುದಿಂಗಳ ಪ್ರಭಾವದಿಂದ ನಲ್ಲೆಯೆಂದರಿಯಲಾರದೆ ಹೋದೆನು’. *ಈ ಬೆಳುದಿಂಗಳ ವರ್ಣನೆಯಲ್ಲಿ, ಬಿಳಿಯ ಬಣ್ಣದ ಕಾರಣ, ನಲ್ಲೆ ಕೂಡ ಅರಿವಿಗೆ ಬರಲಿಲ್ಲವೆಂಬ ಲೋಕಾತಿಕ್ರಾಂತ ವಿಷಯ ವರ್ಣಿತವಾಗಿರುವುದರಿಂದ ಅತಿಶಯೋಕ್ತಿ. ಹೋಲಿಸಿ-ದಂಡಿ, II -೨೧೫-೬.*
೯೫. ದಿಕ್ಕುಗಳಿಂದ ಬಳಸಲ್ಪಟ್ಟಿರುವ ಈ (ತ್ರಿ)ಲೋಕಾಂತರ್ಗತ ಆಕಾಶವು ಅದೆಷ್ಟೊಂದು ವಿಶಾಲವಾಗಿದೆ! ಅಳೆಯಲು ಅಶಖ್ಯವೆನಿಸಿರುವ ನಿನ್ನ ಶಶಿಧವಳ ಯಶೋರಾಶಿಯನ್ನು ಕೂಡ ಅದು ತನ್ನಲ್ಲಿ ಒಳಗೊಳ್ಳುತ್ತಿದೆಯಲ್ಲ ! *ಇಲ್ಲಿ ವರ್ಣಿತ ರಾಜನ ಧವಳಯಶಸ್ಸು ತ್ರಿಲೋಕವನ್ನೂ ವ್ಯಾಪಿಸಿದೆಯೆಂಬುದನ್ನು ಲೋಕಾದ್ಭುತ ರೀತಿಯಿಂದ ಹೇಳಿರುವ ಕಾರಣ ಅತಿಶಯೋಕ್ತಿ. ಹೋಲಿಸಿ-ದಂಡಿ, II -೨೧೯.*
೯. ಸದೃಶಯೋಗಿತಾ
ಸ್ತುತಿ-ನಿಂದೆಗಳಿಂ ಸ-ವಿವಕ್ಷಿತ-ಗುಣದೊಳ್ ಸದೃಶಮಾಗಿ ಪೇೞ್ವುದು ಪೆಱತಂ |
ನುತ-ಸದೃಶ-ಯೋ[5]ಗಿತಾಂಲಕೃತಿ-ಲಕ್ಷಣಮಕ್ಕುಮಿಂತು ತದುದಾಹರಣಂ ||೯೬||
ಅಮರಾಧಿರಾಜ-ಹುತವಹ-ಯಮ-ನೈಋತ-ವರುಣ-ವಾಯು-ಯಕ್ಷೇಶಾನ- |
ಕ್ರಮದಿನವರೆಣ್ಬರಂತುತ್ತಮನಯ್ ನೀಂ ನವಮ-ಲೋಕಪಾಳನೆ[6]ಅವರೊಳ್ ||೯೭||
ಜಲದದ ನೆೞಲುಂ ಪರ[7]ಪುಂ ವಿಲಾಸಮುಂ ಬೆಳಗುವುದಿತ-ವಿದ್ಯುಲ್ಲತೆಯುಂ |
ನೆಲಸವು ಚಲಂಗಳಾದಂ ವಿಲಾಸಿನೀಜನದ ನಲ್ಮೆಯುಂ ಸಂಗಮಮುಂ ||೯೮||
ಉಪಮಿತ-ಭೇದೋಕ್ತಿ-ಕ್ರಮಮಪರಿಮಿತಾಖ್ಯಾ-ಕೃತಿ-ಪ್ರಯೋಗಾನುಗತಂ |
ನೃಪತುಂಗ-ದೇವ-ಮತದಿಂದುಪಮಾ-ಭೇದಂಗಳಿಂದೆ ತ[8]ಱಸಲ್ಗಱವಂ ||೯೯||
೯೬. ಸ್ತುತಿ ಇಲ್ಲವೆ ನಿಂದೆಗಳ ಅಭಿವ್ಯಕ್ತಿಗಾಗಿ ಪ್ರಕೃತ ವಸ್ತುವನ್ನು ವಿವಕ್ಷಿತ ಗುಣಾತಿಶಯವಿರುವ ಇತರ (ಅಪ್ರಕೃತ) ವಸ್ತುಗಳೊಂದಿಗೆ ಸಮೀಕರಿಸಿ ಹೇಳುವುದೇ ಸದೃಶಯೋಗಿತೆ. *ಹೋಲಿಸಿ-ದಂಡಿ, II -೩೩೦*
೯೭. ಇಂದ್ರ, ಅಗ್ನಿ, ಯಮ, ನೈಋತ, ವರುಣ, ವಾಯು, ಯಕ್ಷ, ಈಶಾನ-ಈ ಅನುಕ್ರಮದಲ್ಲಿರುವ ಎಂಟು ದಿಕ್ಪಾಲರೊಂದಿಗೆ ನೀನು ಒಂಬತ್ತನೆಯ ದಿಕ್ಪಾಲಕನೇ ಆಗಿರುವೆ ! *ಹೀಗೆ ರಾಜನನ್ನು ದಿಕ್ಪಾಲರೊಂದಿಗೆ ಸಮೀಕರಿಸಿ ಹೇಳುವುದರಿಂದ ಅವನು ದಿಕ್ಪಾಲರಿಗೆ ಸಮಾನನೆಂಬ ಔಪಮ್ಯ ವ್ಯಂಗ್ಯ. ಇಲ್ಲಿ ರಾಜ ಪ್ರಶಂಸೆಯಿದೆ.*
೯೮. ಮೋಡದ ನೆಳಲು, ಹರಹು ಹಾಗು ವಿಲಾಸಗಳೂ, ಬೆಳಗುವ ಬಳ್ಳಿ ಮಿಂಚೂ, ವಿಲಾಸಿನಿಯರ ನಲ್ಮೆ ಹಾಗೂ ಸಮಾಗಮಗಳೂ ಸ್ಥಿರವಲ್ಲ; ತುಂಬಾ ಚಂಚಲ! *ಇಲ್ಲಿ ಸ್ತೀನಿಂದೆ ಅಭಿವ್ಯಕ್ತವಾಗಿದೆ, ಸ್ತ್ರೀಯರ ನಲ್ಮೆ, ಕೂಟಗಳನ್ನು ತುಂಬಾ ಕ್ಷಣಿಕವಾದ ಉಪಮಾನಗಳೊಂದಿಗೆ ಸಮೀಕರಿಸಿ ಹೇಳಿರುವುದರಿಂದ. ಹೋಲಿಸಿ-ದಂಡಿ, II -೩೩೨.*
೯೯. ಉಪಮೆಯ ಭೇದಗಳ ಪರಿ ಅನಂತವಾಗಿ ಕವಿಪ್ರಯೋಗಗಳಲ್ಲಿ ಕಂಡು ಬರುತ್ತದೆ. ನೃಪತುಂಗನ ಮತದಂತೆ ಯಾವದು ಯಾವ ಪ್ರಭೇದವೆಂಬುದನ್ನು ಬಲ್ಲವರು ನಿರ್ಣಯಿಸಿಕೊಳ್ಳಬೇಕು.
೧೦. ಆಕ್ಷೇಪ
ವಿದಿತಾರ್ಥ-ವಿಪರ್ಯಾಸಾಸ್ಪದಮೆ ದಲಾಕ್ಷೇಪಮೆಂಬಳಂಕಾರಂ ಮ- |
ತ್ತದಱ ವಿಶೇಷ-ವಿಭಾಗಮನುದಾಹರಣ-ಮಾರ್ಗದಿಂ ಪ್ರಯೋಗಿಸಿ ತೋರ್ಪೆಂ ||೧೦೦||
i) ವೃತ್ತಾಕ್ಷೇಪ
ಮೃದುತರ-ಮಾರ್ಗದೆ ಕೆನ್ನಂ ಮದನ-ಶರಾನೀಕಮೊಯ್ಕನೊಲವಂ ಪಡೆಗುಂ |
ಹೃದಯಮ[9]ನದವೞಲಿಂದುಱೆ ವಿದಾರಿಸುವುದಿಂತು ಕುಸುಮ-ಮಯಮಲ್ತದಱಂ ||೧೦೧||
ii) ಅನುಶಯಾಕ್ಷೇಪ
ಧನಮಂ ನೆರಪದೆ ವಿದ್ಯಾ-ಧನಮಂ ಮಾಡದೆ ತಗುಳ್ದು ನೆ[10]ಗೞದೆ ತಪದೊಳ್ |
ಮನುಜತ್ವಮಫಲಮಾಯ್ತೆಂತೆನಗೆಂಬುದನಱವುದನುಶಯಾಕ್ಷೇಪಕಮಂ ||೧೦೨||
೧೦೦. ಹೇಳಿದ ಅರ್ಥ ಎಂದರೆ ಸಂಗತಿಯನ್ನು ಅಲ್ಲವೆನ್ನುವುದೇ ‘ಆಕ್ಷೇಪ’ ಎಂಬ ಅಲಂಕಾರ. ಅದರ ವಿಶೇಷ ಪ್ರಕಾರಗಳನ್ನು ಉದಾಹರಣೆಗಳ ಮೂಲಕ ಬಿಡಿಸಿ ತೋರಿಸುವೆನು. *ಹೋಲಿಸಿ-ದಂಡಿ, II -೧೨೦.*
೧೦೧. ಮೃದುತರವಾದ ಮಾರ್ಗದಿಂದಲೇ ಮನ್ಮಥನ ಕುಸುಮಬಾಣವು ತಪ್ಪದೆ ಒಲವನ್ನು ಪಡೆಯುವುದು; ಹೃದಯವನ್ನು ದುಸ್ಸಹ ನೋವಾಗುವಂತೆ ಸೀಳುತ್ತದೆಯಾದ ಕಾರಣ ಅದು ಹೂವಲ್ಲವೇ ಅಲ್ಲ. *ಇಲ್ಲಿ ಮನ್ನಥನ ಬಾಣವು ಮೃದುವಾದ ಹೂವೇ ಎಂದು ಮೊದಲು ಹೇಳಿ, ಆಮೇಲೆ ಮತ್ತೊಂದು ಕಾರಣದ ಪ್ರಯುಕ್ತ ಅದು ಹೂವೇ ಅಲ್ಲವೆನ್ನುವುದು ‘ಆಕ್ಷೇಪ’. ಇದು ಮೊದಲು ಹೇಳಿಯಾದುದರ ಆಕ್ಷೇಪವಾದ್ದರಿಂದ (=ಭೂತಕಾಲದ ಸಂಗತಿಯನ್ನು ಅಲ್ಲವೆನ್ನುವುದರಿಂದ) ‘ವೃತ್ತಾಕೇಪ’ವೆನಿಸುವುದು. ಹೋಲಿಸಿ-ದಂಡಿ, II -೧೨೨.*
೧೦೨. ‘ಧನವನ್ನು ಸಂಗ್ರಹಿಸದೆ, ವಿದ್ಯಾಧನವನ್ನೂ ಗಳಿಸದೆ, ತಪೋನುಷ್ಠಾನವನ್ನೂ ಸಾಧಿಸದೆ ನನ್ನ ಮನುಷ್ಯಜನ್ಮ ನಿಷ್ಫಲವಾಯಿತು’ ಎಂಬುದನ್ನು ‘ಅನುಶಯಾಕ್ಷೇಪ’ವೆಂದರಿಯಬೇಕು. *ಹೋಲಿಸಿ-ದಂಡಿ, II-೧೬೧-೧೬೨. ‘ಅನುಶಯ’ ಎಂದರೆ ಪಶ್ಚಾತ್ತಾಪ.*
iii) ಶ್ಲೇಷಾಕ್ಷೇಪ
ಸರಸಿಜ-ವಿರೋಧಿ ಕಾಂತ್ಯಾಕರಮಮೃತಮಯಂ ತ್ವದೀಯ-ಮುಖ-ಶಶಿಯುಂಟಾ- |
ಗಿರೆ ಶಶಿಯದೇವುದೆಂಬುದು ನಿರುತಂ ಶ್ಲೇಷಾನುವಿದ್ಧಮಪ್ಪಾಕ್ಷೇಪಂ ||೧೦೩||
iv) ಉಪಮಾಕ್ಷೇಪ
ವರ-ಹಂಸ-ಕದಂಬಕಮದು ಶರದಂಬುದಮಲ್ತು ಮುಖರ-ನೂಪುರ ಸಂವಾ- |
ದಿ-ರವಂ ನೆಗೞ್ದಪ್ಪುದು ಬಂಧುರಮದಱಂದಿದಱೊಳೆಂಬುದುಪಮಾಕ್ಷೇಪಂ ||೧೦೪||
v) ಸಂಶಯಾಕ್ಷೇಪ
ಮದ-ಕರಿಯೋ ಘನ-ಸಮಯಾಂಬುದಮೋ ಘನಮಲ್ತು ನೆಗ[11]ೞ್ವುದದಱೊಳ್ಸಪ್ತ- |
ಚ್ಛದ-ಗಂಧ-ಸುರಭಿ ಪದುಳಂ ಮದಕರಿಯೆನೆ ನೆನೆಗೆ ಸಂಶಯಾಕ್ಷೇಪಕಮಂ ||೧೦೫||
೧೦೩. ‘ಕಮಲವೈರಿಯೂ ಕಾಂತಿಯ ಆಕರವೂ ಅಮೃತಮಯವೂ ಆದ ನಿನ್ನ ಮುಖಚಂದ್ರ ದೊರೆತಿರುವಾಗ ಆ ಚಂದ್ರನಿನ್ನೇಕೆ ಅಗತ್ಯ ಎಂಬುದು ಶ್ಲೇಷೆಯಿಂದ ಸಮೇತವಾದ ಆಕ್ಷೇಪ. *ಇಲ್ಲಿ ‘ಕಮಲವೈರಿ’ ಮುಂತಾದ ವಿಶೇಷಣಗಳು ಚಂದ್ರನಿಗೂ ಮುಖಕ್ಕೂ ಸಮವಾಗಿ ಅನ್ವಯಿಸುವಂತೆ ಎರಡರ್ಥಗಳನ್ನು ಹೊಂದಿವೆ. ಚಂದ್ರನು ಕಮಲಗಳನ್ನು ಮೊಗ್ಗಾಗಿಸುವುದರಿಂದ ಕಮಲವೈರಿಯಾದರೆ, ಮುಖವು ಕಮಲದ ಚೆಲುವನ್ನು ಸೋಲಿಸುವುದರಿಂದ ಕಮಲವೈರಿ, ಇತ್ಯಾದಿಯಾಗಿ ಊಹಿಸಿಕೊಳ್ಳಬಹುದು. ಮುಖಚಂದ್ರ ಸಾಕು; ಬರಿಯ ಚಂದ್ರ ಬೇಡ ಎಂಬಾಗ ಅಕ್ಷೇಪ. ಹೋಲಿಸಿ-ದಂಡಿ, MM-೧೫೬-೧೬೦.*
೧೦೪. ‘ಇದು ಹಂಸಗಳ ಗುಂಪೇ ಸರಿ, ಶರತ್ಕಾಲದ ಮೇಘವಲ್ಲ; ಏಕೆಂದರೆ ಕಾಂತೆಯ ಕಾಲ್ಗೆಜ್ಜೆಗಳ ಇಂಚರದಂತಹ ಮಧುರಧ್ವನಿ ಕೇಳಿಬರುತ್ತಿದೆ’ ಎಂಬುದು ಉಪಮಾಕ್ಷೇಪ. *ಇದೇ ಪದ್ಯದ ಅಭಿಪ್ರಾಯವನ್ನು ದಂಡಿ ‘ಸಂಶಯಾಕ್ಷೇಪ’ವೆಂದಿದ್ದಾನೆ; ಏಕೆಂದರೆ ಇದು ಹಂಸವೋ ಮೋಡವೋ ಎಂಬ ಸಾದೃಶ್ಯಮೂಲ ಸಂಶಯವು ಹಂಸಧ್ವನಿಯ ಶ್ರವಣದಿಂದ ನಿರಾಕೃತವಾಗುತ್ತದೆ. ಇಲ್ಲಿಯೂ ‘ಉಪಮಾಕ್ಷೇಪ’ವೆಂಬ ಗ್ರಂಥಕಾರನ ಮಾತಿಗೆ ಉಪಮಾಮೂಲ ಸಂಶಯಾಕ್ಷೇಪವೆಂದೇ ತಾತ್ಪರ್ಯವನ್ನು ಕಲ್ಪಿಸಬೇಕು. ಇಲ್ಲವೆ ಸಂಶಯ ಮೂಲವಾದ ‘ಉಪಮಾಕ್ಷೇಪ’ವೆಂದು ಕಲ್ಪಿಸಬೇಕು; ಮುಂದೆ ಪ್ರತ್ಯೇಕವಾಗಿ ‘ಸಂಶಯಾಕ್ಷೇಪ’ವೂ ಉಕ್ತವಾಗಿರುವುದರಿಂದ. ಹೋಲಿಸಿ-ದಂಡಿ, II -೧೬೩-೧೬೪.*
೧೦೫. ಇದು ಮದ್ದಾನೆಯೋ ಇಲ್ಲವೆ ಮಳೆಗಾಲದ ಮೋಡವೋ? ಮೋಡವಲ್ಲ; ಏಕೆಂದರೆ ಅದರಲ್ಲಿ ಸಪ್ತಚ್ಛದದ ಸುಗಂಧ ಸುಖಾವಹವಾಗಿದೆ; ಆದ್ದರಿಂದ ಮದ್ದಾನೆಯೇ’ ಎಂದರೆ ‘ಸಂಶಯಾಕ್ಷೇಪ’. *ಹಿಂದಿನ ಉದಾಹರಣೆಯಲ್ಲಿ ಸಂಶಯ ಸೂಚ್ಯವಾಗಿದೆಯೇ ಹೊರತು ವಾಚ್ಯವಾಗಿ ಉಕ್ತವಾಗಿಲ್ಲ. ಇಲ್ಲಾದರೆ ಸಂಶಯ ಮೊದಲು ವಾಚ್ಯವಾಗಿ ಉಕ್ತವಾಗಿದ್ದು, ಅದನ್ನು ವಾಚ್ಯವಾಗಿಯೇ ಸಕಾರಣವಾಗಿ ಪರಿಹರಿಸಲಾಗಿದೆ. ಅಷ್ಠೇ ವ್ಯತ್ಯಾಸ.*
vi) ಹೇತ್ವಾಕ್ಷೇಪ
ಮಾನಧನಾ ಪೊಗೞಸಲೇಂ ದಾನಿಯೇ ನೀನುಂತೆ ನಿನ್ನ ಕಸವರಮೆಂದುಂ |
ದೀ[12]ನಾನಾಥರ ಕೆಯ್ಯದು ದಾನಿಯದೆಂತೆಂಬುದಿಂತು ಹೇತಾಕ್ಷೇಪಂ ||೧೦೬||
ವ್ಯತಿರೇಕ-ವಿಕಲ್ಪಮಿದೆಂದತಿಶಯ-ಧವಳೋಪದೇಶ-ಮಾರ್ಗ-ಕ್ರಮದಿಂ- |
ದತಿ-ನಿಪುಣರಱದುಕೊಳ್ಗ[13]ನುಮಿತಿಯಿಂದಾಕ್ಷೇಪಮೆಂಬಳಂಕಾರಮುಮಂ ||೧೦೭||
ಗೀತಿಕೆ || ಪ್ರತಿಪದಾರ್ಥ-ತತ್ತ್ವ-ಭೇದದೊಳ್
ಪ್ರತಿಷೇಧಮಂ ನೆಗೞ್ಗುಮನಿತೆ ಮಾೞ್ಕೆಯಿಂ- |
ದತಿಶಯಾಕ್ಷೇಪ-ಗಣನಾ-ವ್ಯತಿ-
ಗತಿನೃಪತುಂಗದೇವ-ಮಾರ್ಗದೊಳ್ ||೧೦೮||
[1] ತೆಱನೆಂದುಂ ‘ಕ’.
[2] ಸಿಂಧೂರದೆ ‘ಬ’.
[3] ತಲೆವಱದುದಂ ‘ಪಾ, ಮ,; ಸೀ’ ಸೂಚಿತಪಾಠ ಮೇಲೆ ಅಂಗೀಕೃತ.
[4] ನಿನಿಸಂ ‘ಪಾ, ಮ, ಸೀ’.
[5] ಯೋಗ್ಯತಾ ‘ಅ’, ಬ’.
[6] ನೆಯವರೊಳ್ ‘ಅ’
[7] ಪರಮಂ ‘ಪಾ’, ಪರಮುಂ ‘ಮ’, ಪರವುಂ ‘ಅ,ಬ’.
[8] ತಱಸಲಱವಂ ‘ಅ’.
[9] ಇದು ‘ಸೀ’ ಸೂಚಿತಪಾಠ, ಅರ್ಥವೈಶದ್ಯಕಾರಿಯಾಗಿದೆ; ಮಿಕ್ಕವೆಂದರೆ. ಮನಳವಳವಿಂದುಱೆ ‘ಪಾ’, ಮನಳವಳಲಿಂದುಱೆ ‘ಮ’.
[10] ವೇಗದೆ ‘ಅ’.
[11] ನೆಗೞ್ವದಂ ‘ಪಾ, ಅ, ಬ’.
[12] ದೀನಾನಾದರ ‘ಅ’.
[13] ನುಮತಿ ‘ಪಾ, ಮ’; ಇದು ‘ಸೀ’ ಸೂಚಿತ.
Leave A Comment