ಅರುಂಧತಿ, ಸೀತೆ, ಸಾವಿತ್ರಿ ಮೊದಲಾದ ಮಹಿಳಾ ಮಣಿಗಳನ್ನು ನಾವು ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ನನೆಪಿಸಿಕೊಳ್ಳುತ್ತೇವೆ. ಇವರು ತಮ್ಮ ಬಾಳನ್ನು ಒಂದು ಗುಣ ವಿಶೇಷದಿಂದ ಬೆಳಗಿದರು. ಬದುಕಿನಲ್ಲಿ ಒಂದು ಆದರ್ಶವನ್ನು ಸಾಧಿಸಿದರು. ಮಾನವರಿಗೆ ಪ್ರಾತಃಸ್ಮರಣೀಯರಾದರು. ಇವರು ಪುರಾಣ ವ್ಯಕ್ತಿಗಳು.

ಅವರ ಗುಣಸಮೂಹವನ್ನೇ ಜೀವನದಲ್ಲಿ ತಂದು ಅಪೂರ್ವವಾದ ಬದುಕನ್ನು ಬಾಳಿದ ಚಾರಿತ್ರಿಕ ವ್ಯಕ್ತಿಯೊಬ್ಬಳನ್ನು ನಾವು ಕೇಳಿದ್ದೇವೆ. ಅವಳ ಹೆಸರೂ ಪ್ರಾತಃಸ್ಮರಣೀಯವೇ! ಅವಳು ಬಾಳಿದ್ದು ಕನ್ನಡದ ನೆಲದಲ್ಲಿ, ಜೀವಿಸಿದ್ದು ಕನ್ನಡಿಗರಿಗಾಗಿ. ಉದ್ಧಾರ ಮಾಡಿದ್ದು ಕನ್ನಡಿಗರನ್ನು. ಅವಳೇ ಅತ್ತಿಮಬ್ಬೆ, ಸುಮಾರು ಒಂದು ಸಾವಿರ ವರ್ಷದ ಹಿಂದೆ ಬಾಳಿದವರು.

ಅಪೂರ್ವ ಅಣ್ಣತಮ್ಮಂದಿರು

ಕ್ರಿ.ಶ. 939 ರಿಂದ 967ರವರೆಗೆ ರಾಷ್ಟ್ರಕೂಟರ ಪ್ರಸಿದ್ಧನಾದ ರಾಜ ಮುಮ್ಮಡಿಕೃಷ್ಣ ರಾಜ್ಯಭಾರ ಮಾಡಿದನು.

“ಶಾಂತಿಪುರಾಣ”ವೆಂಬ ಪುರಾಣ ಚೂಡಾಮಣಿಯನ್ನು ಬರೆದ ಪೊನ್ನನಿಗೆ “ಕವಿಚಕ್ರವರ್ತಿ” ಎಂಬ ಬಿರುದನ್ನು ಕೊಟ್ಟವನು ಅವನೇ. ಆದರೆ ಪೊನ್ನನಿಂದ ಶಾಂತಿ ಪುರಾಣವನ್ನು ಬರೆಸಿದವರು ರಾಷ್ಟ್ರಕೂಟ ಕೃಷ್ಣನ ಮಹಾಸಾಮಂತಾಧಿಪತಿಯಾದ ನೂರ್ಮಡಿ ತೈಲಪನ ಮಹಾಸೇನಾಧಿಪತಿಗಳಾದ ಮಲ್ಲಪ್ಪ-ಪೊನ್ನಮಯ್ಯಂದಿರು.

ವೆಂಗಿಮಂಡಲವೆಂಬುದು ಆಗಿನ ಕಾಲಕ್ಕೆ ಸಂಪದ್ಭರಿತವಾದ ನಾಡು. ಅದೊಂದು ಸಮೃದ್ಧ ಭೂಮಿ. ತುಂಬಿದ ಕಾಲುವೆಗಳು, ಬೆಳೆದು ನಿಂತ ಗದ್ದೆ-ತೋಟಗಳು, ಪುಪ್ಪೋದ್ಯಾನಗಳು, ತೆಂಗಿನ ತೋಟಗಳು, ಬಾಳೆಯ ತೋಪುಗಳು-ಹೀಗೆ ಬೆಳೆಗಳಿಂದ ಸಮೃದ್ಧವಾದ ನಾಡು ಅದು. ಅಲ್ಲದೆ ಅದು ದಾನಧರ್ಮಕ್ಕೆ ಬೀಡು. ಸಜ್ಜನರ ತವರು. ಆ ನಾಡಿನಲ್ಲಿ ಕಮ್ಮೆ ದೇಶ ಒಂದು ಭಾಗ. ಆ ಭಾಗದ ತಿಲಕದಂತಿತ್ತು ಪುಂಗನೂರು. ಅದಕ್ಕೆ ಒಡೆಯನೆಂದರೆ ನಾಗಮಯ್ಯ.

ನಾಗಮಯ್ಯ ಬಹುಶತ್ರುವಾಗಿ, ವಿದ್ಯಾನಿಧಿಯಾಗಿ ಯಾಜ್ಞವಲ್ಕ್ಯ, ಸದೃಶನಾಗಿ ಕೀರ್ತಿ ಗಳಿಸಿದ್ದನು. ಅವನ ಸ್ನೇಹಿತನೇ ಜಿನಚಂದ್ರ ಮುನಿ. ನಾಗಮಯ್ಯ ಸಂಸಾರಿಯಾದರೂ ವ್ರತಶೀಲ. ಮುನಿಮಿತ್ರನ ಪ್ರಭಾವವೇ ಇದಕ್ಕೆ ಕಾರಣ. ಅವರ ಮಕ್ಕಳೇ ಮಲ್ಲಪ್ಪ-ಪೊನ್ನಮಯ್ಯರು. ನಾಗಮಯ್ಯ ನೂರ್ಮಡಿ ತೈಲಪನ ಮಹಾಮಂತ್ರಿ. ಅವನು ವಿನಯವಂತ ಮತ್ತು ಧರ್ಮಶೀಲ; ಜನಹಿತಕರನಾಗಿ ಜೈನಾಗಮ ಪಂಡಿತನಾಗಿದ್ದನು.

ನಾಗಮಯ್ಯನ ಮಕ್ಕಳು ತಂದೆಯ ಎಲ್ಲ ಸದ್ಗುಣಗಳನ್ನು ಪಡೆದಿದ್ದರು. ಮಲ್ಲಪ್ಪ ಹಿರಿಯವನು; ವಿದ್ಯಾವಂತ. ಅವನು ರಾಜ್ಯಶಾಸ್ತ್ರಕ್ಕೆ ಮನೆ; ಶೌರ್ಯಕ್ಕೆ ನೆಲೆ. ಅವನು ಒಳ್ಳೆಯ ಗುಣಕ್ಕೆ ತವರು; ಜೈನಾಚಾರ ಸಂವರ್ಧನೆಗೆ ಸ್ಫೂರ್ತಿ. ಅವನ ತಮ್ಮನಾದ ಪೊನ್ನಮಯ್ಯನೂ ಅಷ್ಟೆ. ಗುಣ ಅಣ್ಣ ತಮ್ಮಂದಿರು ರಾಮ-ಲಕ್ಷ್ಮಣರಂತೆ ವಾತ್ಸಲ್ಯಪೂರ್ಣರು. ಭೀಮಾರ್ಜುನರಂತೆ ಶೌರ್ಯ ಚಾರತ್ರ್ಯವುಳ್ಳವರು.

ಆದರ್ಶ ಸಂಸಾರ

ಈ ಸಹೋದರರ ಮನೆ ಕವಿಗಳಿಗೆ ತವರು ಮನೆಯಾಗಿತ್ತು. ರಾಜಸಭೆಯಲ್ಲಿ ಅವರ ಮಾತು ಆಜ್ಞೆಯಾಗಿತ್ತು. ಅವರದೊಂದು ಆದರ್ಶ ಸಂಸಾರ. ಇಬ್ಬರೂ ಮಹಾ ಸಾಮಂತಾಧಿಪತಿಯಾದ ತೈಲಪನ ಸೈನ್ಯಾಧಿಕಾರಿಗಳಾಗಿ ಲೌಕಿಕ ವೃತ್ತಿಯನ್ನು ಕೈಗೊಂಡಿದ್ದರು. ಜಿನಚಂದ್ರ ಮುನಿಗಳ ಶಿಷ್ಯರಾಗಿ ಅವರ ಅನುಗ್ರಹದಿಂದ ಸುಖಸಂಸಾರ ನಡೆಸುತ್ತಿದ್ದರು. ಧರ್ಮ ಪಕ್ಷಪಾತಿಗಳಾಗಿದ್ದರು.

ಮಲ್ಲಪ್ಪನ ಹೆಂಡತಿ ಅಬ್ಬಕಬ್ಬೆ. ಅವಳು ನಾಗಮಯ್ಯನ ಸೋದರ ಸೊಸೆ. ಗುಣಶೀಲಳೂ, ವಿನಯಮತಿಯೂ, ಧರ್ಮಬೀರವೂ ಆದ ಆಕೆ ಈ ಸಂಸಾರದ ಆಧಾರಸ್ತಂಭವಾಗಿದ್ದಳು. ಅವರಿಗೆ ಐದು ಜನ ಗಂಡು ಮಕ್ಕಳು; ಗುಂಡಮಯ್ಯ, ಎಳಮಯ್ಯ, ಪೊನ್ನಮಯ್ಯ, ಅಹವಮಲ್ಲ ಮತ್ತು ವಲ್ಲ. ಮೂವರು ಹೆಣ್ಣುಮಕ್ಕಳು; ಅವರಲ್ಲಿ ಅತ್ತಿಮಬ್ಬೆ-ಗುಂಡಮಬ್ಬೆ ಅವಳಿಜವಳಿಗಳು, ಮೂರನೆಯವಳೇ ನಾಗಿಯಬ್ಬೆ. ಗಂಡುಮಕ್ಕಳೆಲ್ಲ ಶೌರ್ಯ ಪ್ರದೀಪರೇ. ರಾಜನ ಸೈನ್ಯದಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿದ್ದರು. ಪೊನ್ನಮಯ್ಯನಿಗೆ ಮಕ್ಕಳಿಲ್ಲ. ಆದರೆ ಅವನಿಗೂ ಅವನ ಹೆಂಡತಿಗೂ ಈ ಬಗ್ಗೆ ಚಿಂತೆಯೇ ಇರಲಿಲ್ಲ. ಅಣ್ಣನ ಮಕ್ಕಳೇ ತನ್ನ ಮಕ್ಕಳೆಂದು ತಿಳಿದು ತಮ್ಮ ಸಂಸಾರವನ್ನು ಅನುಭವಿಸುತ್ತಿದ್ದರು. ಈ ಅವಿಭಕ್ತ ಕುಟುಂಬ ಅಂದು ಜನರ ಮೆಚ್ಚುಗೆಯನ್ನು ಪಡೆದಿತ್ತು. ರಾಜಮನ್ನಣೆ ಹೊಂದಿತ್ತು.

ನಾಗಮಯ್ಯನ ಧರ್ಮಾಚರಣೆ ಮಕ್ಕಳಲ್ಲಿ ಯಥೇಷ್ಟವಾಗಿ ಧರ್ಮಬುದ್ದಿಯನ್ನು ಬೆಳೆಸಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮನೆಯಲ್ಲಿ ಹಬ್ಬ ಹರಿದಿನಗಳು, ವ್ರತಾದಿ ನೋಂಪಿಗಳು ಹೆಚ್ಚು ನೇಮದಿಂದ ನಡೆಯುತ್ತಿದ್ದವು. ಯತಿವರರಿಗೆ, ಕವಿ ಪಂಡಿತರಿಗೆ ಆ ಮನೆ ತೆರೆದ ಬಾಗಿಲು. ದಾನ-ಧರ್ಮಗಳಿಗೆ ಹಿಡಿ ತಡೆಯಿಲ್ಲ. ಅನ್ನದಾನಕ್ಕೆ ಮಿತಿಯಿಲ್ಲ. ಬಡಬಗ್ಗರ ಪ್ರೋತ್ಸಾಹಕ್ಕೆ ಅಳತೆಯಿಲ್ಲ. ಅವರು ಧರ್ಮದಲ್ಲಿ ಅಹಿಂಸಾಚರಣೆಯ ಜೈನರಾದರೂ ವೃತ್ತಿಯಲ್ಲಿ ಕ್ಷತ್ರಿಯರು, ಶತ್ರುವನ್ನು ಕೊಲ್ಲುವಾಗ, ರಾಜನನ್ನು ಸೇವಿಸುವಾಗ ಹಿಂದೆ ಒಂದು ಅವಶ್ಯಕತೆ. ಸಂಸಾರ ನಿರ್ವಹಿಸುವಾಗ ಅಹಿಂಸೆ ಒಂದು ವ್ರತ.

ಮಲ್ಲಪ್ಪ ಶ್ರೀಮಂತ; ದೊಡ್ಡ ಅಧಿಕಾರಿ. ಅಲ್ಲದೆ ಅವನ ಒಡೆಯ ಅಹವಮಲ್ಲ ಮಂಡಲಾಧಿಪತಿ ಸ್ಥಾನದಿಂದ ಚಕ್ರವರ್ತಿಯ ಸ್ಥಾನಕ್ಕೆ ಏರುತ್ತಿದ್ದ ಕಾಲ. ಸಹಜವಾಗಿ ಅಣ್ಣ ತಮ್ಮಂದಿರ ಮಕ್ಕಳ ಅಧಿಕಾರ ಸ್ಥಾನಗಳೂ ಏರುತ್ತಾ ಹೋಗುತ್ತಿದ್ದವು. ಆದರೆ ಒಂದೇ ಯೋಚನೆ. ಬಿಡುವಿಲ್ಲದ ಯುದ್ಧಗಳು. ಆ ಯುದ್ಧಗಳೆಲ್ಲ ಬಂಧುಗಳ ಮೇಲೆಯೇ. “ದಂಡಿನಲ್ಲಿ ಸೋದರೆ ಮಾವನೆ?” ಎಂಬ ಗಾದೆ ಈ ಸಂದರ್ಭದಲ್ಲಿ ಅರ್ಥಪೂರ್ಣವಾಗಿದೆ. ಮಾವ-ಅಳಿಯ, ಅಕ್ಕತಂಗಿಯ ಗಂಡಂದಿರು, ಒಬ್ಬ ಗುರುವಿನ ಶಿಷ್ಯರು-ಒಬ್ಬರಿಗೊಬ್ಬರು ವಿರುದ್ಧವಾಗಿ ಕಾದಾಡಬೇಕಾಯಿತು. ಬಂಧುತ್ವದಿಂದ ಕತ್ತಿ ಮೊಂಡಾದೀತೆ? ಇಂಥ ಪರಿಸ್ಥಿತಿಯಲ್ಲಿ ಅಣ್ಣ ತಮ್ಮಂದಿರು ಮನೆಯಲ್ಲಿರುವುದೇ ಅಪರೂ. ಅವರು ಊರೂರು ಸುತ್ತುವುದೇ ಹೆಚ್ಚಾಯಿತು.

ಅಪೂರ್ವ ಅಕ್ಕತಂಗಿಯರು

ಆದ್ದರಿಂದ ನಾಗಮಯ್ಯನೇ ಮೊಮ್ಮಕ್ಕಳ ಕ್ಷೇಮ ಚಿಂತನೆ ಮಾಡಬೇಕಾಗಿತ್ತು. ಅವನ ವಿಶೇಷವಾದ ವಾತ್ಸಲ್ಯ ಅವಳಿ ಮಕ್ಕಳಾದ ಅತ್ತಿಮಬ್ಬೆ-ಗುಂಡಮಬ್ಬೆಯರ ಮೇಲೆ. ಅವರೂ ಅಜ್ಜನನ್ನು ಅಗಲಿ ಇರುತ್ತಿರಲಿಲ್ಲ. ಅಜ್ಜನಿಗೆ ಸಹಜವಾಗಿ ಧರ್ಮದ ಕಡೆ ಒಲವು. ಯಾವ ಧರ್ಮಕಾರ್ಯಕ್ಕಾಗಲಿ, ಜಿನಪೂಜೆಗಾಗಲಿ, ಗುರುಗಳ ಸಂದರ್ಶನಕ್ಕಾಗಲಿ, ಅವನು ಹೋದರೆ ಅವನೊಡನೆ ಈ ಹೆಣ್ಣುಮಕ್ಕಳು. ಅವರಿಗೆ ಜಿನಚಂದ್ರಮುನಿಗಳಿಂದಲೇ ವಿದ್ಯಾಭ್ಯಾಸ ಮಾಡಿಸಿದನು. ಧರ್ಮವೇ ಜೀವನದ ಸುಖದ ದಾರಿ ಎಂದು ನಂಬಿದ್ದ ಅವನು ಮನೆಯಲ್ಲಿ ಧರ್ಮದ ವಾತಾವರಣವನ್ನು ಕಲ್ಪಿಸಿದ್ದ.

ಅತ್ತಿಮಬ್ಬೆ-ಗುಂಡಮಬ್ಬೆಯರು ಜೈನಧರ್ಮವನ್ನು ಚೆನ್ನಾಗಿ ಅರಿತರೂ ಅವರು ಜಡರಾಗಲಿಲ್ಲ. ಅಪ್ಪ ಚಿಕ್ಕಪ್ಪಂದಿರಂತೆ, ಅಣ್ಣ ತಮ್ಮಂದಿರಂತೆ ಶಸ್ತ್ರಾಭ್ಯಾಸವನ್ನು ಮಾಡಿ ನಿಪುಣರಾದರು. ಕುದುರೆ ಸವಾರಿ, ಕತ್ತಿವರಸೆ, ಬಿಲ್ಲು ವಿದ್ಯೆ ಮೊದಲಾದ ಯುದ್ಧ ವಿದ್ಯೆಗಳಲ್ಲಿಯೂ ಪರಿಣತರಾದರು. ಧರ್ಮಕ್ಕೆ ಕರ್ತವ್ಯದ ಮೆರಗುಕೊಟ್ಟರು. ಧರ್ಮಕ್ಕೆ ಅಲಂಕಾರವೆಂಬಂತೆ ಇವು ಅವರಿಗೆ ತೊಡವುಗಳಾದವು. ಮನೆಯಲ್ಲಿ ಸೇರುವ ಧರ್ಮಗೋಷ್ಠಿ, ಕವಿಗೋಷ್ಠಿಗಳಿಂದ ಸಾಹಿತ್ಯಪ್ರಿಯರಾದರು. ಅವರ ಗುರುಗಳಾದ ಜಿನಚಂದ್ರ ಮುನಿಗಳ ಒಂದು ಆಸೆ ಅವರು ಬದುಕಿದ್ದಾಗ ನೆರವೇರಲಿಲ್ಲ. ಅವರ ಆಸೆ ಎಂದರೆ ಶಾಂತಿ ಪುರಾಣವನ್ನು ಕನ್ನಡದಲ್ಲಿ ಕೇಳಬೇಕು ಎನ್ನುವುದು. ಇದು ನಡೆಯಲಿಲ್ಲ ಎಂದು ಮಲ್ಲಪ್ಪ-ಪೊನ್ನಮಯ್ಯರಿಗೆ ಬೇಸರ. ಶಾಂತಿನಾಥನ ಚರಿತ್ರೆ ಬರೆಯಲು ಸಮರ್ಥವಾದ ಕವಿ ಎಂದರೆ ಪೊನ್ನ. ಅವನನ್ನು ಪ್ರಾರ್ಥಿಸಿ, ಒಪ್ಪಿಸಿ ಪುರಾಣ ಚೂಡಾಮಣಿಯನ್ನು ಬರೆಸಿ ಗುರುಗಳ ಆಸೆಯನ್ನು ಪೂರ್ಣಗೊಳಿಸಿದರು ಈ ಸಹೋದರರು. ಅವರ ಈ ಕರ್ತವ್ಯನಿಷ್ಠೆ ಅತ್ತಿಮಬ್ಬೆಯ ಮೇಲೆ ತುಂಬ ಪರಿಣಾಮವನ್ನುಂಟು ಮಾಡಿತು.

ಹೆಣ್ಣುಮಕ್ಕಳ ಮದುವೆ

ಹೆಣ್ಣು ಮಕ್ಕಳಿಬ್ಬರೂ ವಿವಾಹದ ವಯಸ್ಸಿಗೆ ಬಂದರು. ರೂಪಸಂಪನ್ನೆಯರೂ ಗುಣಶೀಲೆಯರೂ ಆದ ಅವರಿಗೆ ಗಂಡುಗಳನ್ನು ಹುಡುಕುವುದು ಕಷ್ಟವೂ ಹೌದು, ಸುಲಭವೂ ಹೌದು. ಅವರೇನು ಅಂತಃಪುರದಲ್ಲಿಯೇ ಬೆಳೆಯಲಿಲ್ಲ. ವಿದ್ಯಾವಂತರಾದ ಈ ಶೂರ ಕನ್ಯೆಯರ ಕೀರ್ತಿ ಸಾಕಷ್ಟು ಪ್ರಸಿದ್ಧವಾಗಿಯೂ ಇತ್ತು. ಕೆಲವು ರಾಜರ ಉನ್ನತಾಧಿಕಾರಿಗಳು ಜೈನ ಸಂಪ್ರದಾಯನಿಷ್ಠ ಈ ಮಕ್ಕಳನ್ನು ಸೊಸೆಯಂದಿರಾಗಿ ತಂದುಕೊಳ್ಳಲು ಇಚ್ಛಿಸಿದ್ದೂ ಉಂಟು. ಈ ಮಕ್ಕಳ ಮದುವೆಯ ಚಿಂತೆಯನ್ನು ತಂದೆ ಮಲ್ಲಪ್ಪ ಅಷ್ಟಾಗಿ ಹಚ್ಚಿಕೊಳ್ಳಲಿಲ್ಲ ಎಂದು ಕಾಣುತ್ತದೆ. ಹಾಗೆಯೇ ಚಿಕ್ಕಪ್ಪನಾದ ಪೊನ್ನಮಯ್ಯನೂ ಕೂಡ. ಸಾಮ್ರಾಟನಾಗುವ ಅಹವಮಲ್ಲನ ಸಮರ ಪರಂಪರೆಯಲ್ಲಿ ಅವರು ತಲ್ಲೀನರಾಗಿದ್ದರು. ಅಬ್ಬಕಬ್ಬೆಗೆ ಮಾತ್ರ ಇದೊಂದು ಚಿಂತೆಯಾಯಿತು. ಕ್ಷಾತ್ರಯುಗದಂತೆ ಕನ್ಯೆಯರೇ ತಮ್ಮ ಗಂಡಂದಿರನ್ನು ಹೆಸರಿಸುವ ಹಂಬಲವನ್ನು ಪಡೆದಿದ್ದರೋ ಏನೋ! ಅತ್ತಿಮಬ್ಬೆ ಧರ್ಮದ ಗೊಡ್ಡು ಮಾತ್ರ ಆಗಿರಲಿಲ್ಲ. ಅವಳಿಗೆ ಸಮಕಾಲೀನ ಪ್ರಜ್ಞೆಯೂ ಇತ್ತು. ತಾನು ವರಿಸುವ ಗಂಡು ಎಂಥವನಿರಬೇಕೆಂದು ಅವಳು ಆಲೋಚಿಸಿ ನಿರ್ಧರಿಸಿಕೊಂಡಿದ್ದರೂ ಆಶ್ಚರ್ಯವಿಲ್ಲ.

ನೂರ್ಮಡಿ ತೈಲಪನ ಮಹಾಮಂತ್ರಿ ಧಲ್ಲಪ. ಅವನ ಹೆಂಡತಿ ಪದ್ಮಬ್ಬೆ. ಮಲ್ಲಪ್ಪ-ಪೊನ್ನಮಯ್ಯರು ಧಲ್ಲಪನ ಕೈಕೆಳಗಿನ ಅಧಿಕಾರಿಗಳಾಗಿದ್ದರು. ಇಬ್ಬರದೂ ಸಮಾನ ಸ್ಥಾನದ ಹುದ್ದೆ. ಧಲ್ಲಪ ಅವರನ್ನು ಸ್ನೇಹದಿಂದಲೇ ಕಾಣುತ್ತಿದ್ದನು. ಅವನು ವಿವೇಕದಲ್ಲಿ ಬೃಹಸ್ಪತಿ. ರಾಮನಂತೆ ಶೀಲಸಂಪನ್ನ. ಅರ್ಜುನನಂತೆ ಶೌರ್ಯಗುಣಾನ್ವಿತ. ಗುಣೈಕ ಪಕ್ಷಪಾತಿಯಾದ ಧಲ್ಲಪ ಅತ್ತಿಮಬ್ಬೆಯನ್ನು ತಮ್ಮ ಮಗನಾದ ನಾಗದೇವನಿಗೆ ತಂದುಕೊಳ್ಳುವ ವಿಚಾರವನ್ನು ಹೊಂದಿದ್ದರು. ನಾಗದೇವನೂ ಸಾಮಾನ್ಯನಲ್ಲ. ಅವನು ಗಂಗರ ಮಾರಸಿಂಹನ ಅನಂತರ ಅವನ ಉತ್ತರಾಧಿಕಾರಿಯೆಂದು ಘೋಷಿಸಿಕೊಂಡು ತೈಲಪನನ್ನು ಎದುರಿಸಿದ ಗಂಗರ ಪಾಂಚಲನನ್ನು ಕಾಳಗದಲ್ಲಿ ಸೋಲಿಸಿ “ಒರಟರ ಮಲ್ಲ” ಎಂಬ ಬಿರುದನ್ನೂ ಪಡೆದಿದ್ದನು. ಅವನ ವಿಚಾರ ತಿಳಿದಿದ್ದ ಮಲ್ಲಪ್ಪನಿಗೆ ಧಲ್ಲಪನ ಆಸೆ ಸೂಕ್ಷ್ಮವಾಗಿ ತಿಳಿದಾಗ ಮಗಳನ್ನು ನಾಗದೇವನಿಗೆ ಧಾರೆಯೆರೆಯಲು ಸಂತೋಷದಿಂದ ಒಪ್ಪಿಕೊಂಡನು.

ಬೇರೆಯಾಗಲು ಹೇಗೆ ಸಾಧ್ಯ?

ನಾಗದೇವನ ಕೈ ಹಿಡಿಯಲು ಅತ್ತಿಮಬ್ಬೆಗೂ ಸಂತೋಷವೇ. ಈ ಮದುವೆಗೆ ತೊಡಕೊಂದು ಇರುವಂತೆ ಕಾಣಿಸಿತು. ಅತ್ತಿಮಬ್ಬೆಯ ಪ್ರತಿರೂಪವಾದ ಗುಂಡಮಬ್ಬೆ ಅಕ್ಕನನ್ನು ಬಿಟ್ಟಿರುತ್ತಿರಲಿಲ್ಲ. ತಾಯಿ ತಂದೆಗಳು ಅವಳಿಗೂ ಗಂಡನ್ನು ಹುಡುಕುತ್ತಿದ್ದರು. ಅವಳಿಗೆ ಮಾತ್ರ ಆ ಚಿಂತೆ ಇರಲಿಲ್ಲ. ಅವಳು ಮನಸ್ಸಿನಲ್ಲೇ ಒಂದು ಅಭಿಪ್ರಾಯವನ್ನು ನಿಶ್ಚಯ ಮಾಡಿಕೊಂಡಿದ್ದಳು. ತಾನು ಅಕ್ಕನನ್ನು ಬಿಟ್ಟು ಬೇರೆ ಹೋಗುವುದಿಲ್ಲ ಎಂದು. ಎಂದರೆ ತನ್ನ ಮನೋನಿಶ್ಚಯದಂತೆ ಅತ್ತಿಮಬ್ಬೆಯ ಗಂಡನೇ ತನ್ನ ಪತಿಯೂ ಆಗಬೇಕು. ಏಕೆಂದರೆ ತಾವು ಅವಳಿಜವಳಿ. ತಮ್ಮಲ್ಲಿ ಎರಡಿಲ್ಲ; ತೋರಿಕೆ ಮಾತ್ರ ಎರಡು ದೇಹ, ಎರಡು ರೂಪ. ಆದರೆ ತಾವು ಒಂದು. ಇದುವರೆಗೆ ಹಾಗೆಯೆ ನಡೆದುಕೊಂಡು ಬಂದಿದ್ದರು. ಈಗ ಹೇಗೆ ಬೇರೆಯಾಗಲು ಸಾಧ್ಯ? ಅತ್ತಿಮಬ್ಬೆಗೆ ಗಂಡು ನಿಶ್ಚಯವಾದಾಗ ತನಗೂ ನಿಶ್ಚಿತವಾದಂತೆ ಅಪ್ಪ-ಅಮ್ಮನಿಗೆ ತಿಳಿಸುವುದು ಹೇಗೆ? ಅವರು ಒಪ್ಪುತ್ತಾರೆಯೇ? ಮಾವ ಧಲ್ಲಪನ ಒಪ್ಪಿಗೆ ಬೇಡವೇ? ನಾಗದೇವನ ಮನಸ್ಸು? ಗುಂಡಮಬ್ಬೆಗೆ ಇವು ಯಾವುವೂ ಹೊಳೆಯಲೇ ಇಲ್ಲ. ತನ್ನ ನಿಶ್ಚಯ ಅಚಲವಾದದ್ದು. ಉಳಿದದ್ದನ್ನು ಸರಿಪಡಿಸುವುದು ಹಿರಿಯರ ಹೊಣೆ ಎಂದುಕೊಂಡಳು. ಅಂತೂ ವಿಚಾರವನ್ನು ತನ್ನ ಪ್ರತಿಬಿಂಬ ಸ್ವರೂಪಳಾದ ಅಕ್ಕ ಅತ್ತಿಮಬ್ಬೆಗೆ ಸೂಕ್ಷ್ಮವಾಗಿ ತಿಳಿಸಿದಳು.

ನಾನು ಒಬ್ಬಳಲ್ಲ ಇಬ್ಬರು”

ಅತ್ತಿ ಅಮ್ಮನಿಗೆ ಹೇಳಿದರು: “ಅಮ್ಮ, ಅವರು ನನ್ನನ್ನು ಮೆಚ್ಚಿದರೆ ಇಬ್ಬರನ್ನು ಮೆಚ್ಚಿದಂತಾಗುವುದಿಲ್ಲವೇ?” ಅಬ್ಬಕಬ್ಬೆ: “ಏನು ಹಾಗೆಂದರೆ?” ಅತ್ತಿಮಬ್ಬೆ: “ನಾನು ಒಬ್ಬಳಲ್ಲ ಇಬ್ಬರು, ಅತ್ತಿ, ಗುಂಡು.” ಅಮ್ಮನಿಗೆ ಅರ್ಥವಾಯಿತು. ಅಪ್ಪನಿಗೆ ಸಮಸ್ಯೆಯಾಯಿತು ಧಲ್ಲಪನಿಗೆ ಸಮಸ್ಯೆಯ ಅರ್ಥವಾಯಿತು. ನಾಗದೇವನಿಗೆ ತಿಳಿದಾಗ ಆನಂದ ಇಮ್ಮಡಿಯಾಯಿತು. ವಿವಾಹ ವಿಜೃಂಭಣೆಯಿಂದ ನಡೆಯಿತು. ನಾಗದೇವನಿಗೆ ಇಬ್ಬರು ಹೆಂಡಿರಾದರು. ಮಲ್ಲಪ ಅಳಿಯನಿಗೆ ಕೊಟ್ಟ ಬಳುವಳಿಗಳನ್ನು ಬಂಡಿಗಳಲ್ಲಿ ತುಂಬಿ, ಆನೆಗಳ ಮೇಲೆ ಹೇರಿ ಸಾಗಿಸಲಾಯಿತು. ಈ ಸಂಪತ್ತು ಗಂಡಹೆಂಡಿರನ್ನಾಗಲಿ ಅತ್ತೆ ಮಾವಂದಿರನ್ನಾಗಲಿ ಕರ್ತವ್ಯ ಚ್ಯುತರನ್ನಾಗಿ ಮಾಡಲಿಲ್ಲ. ಏಕೆಂದರೆ ಅವರು ತಿಳಿದದ್ದು ಅರ್ಥವಿವರಣೆ ಧರ್ಮದ ಅಧೀನ ಎಂದು.

ಸುಖ-ದುಃಖ

ಅತ್ತಿಮಬ್ಬೆ ಗುಂಡಮಬ್ಬೆಯರಿಗೆ ಬಾಗೆವಾಡಿಯಲ್ಲಿದ್ದ ಅತ್ತೆ ಮಾವಂದಿರ ಮನೆ ತವರು ಮನೆಯಿಂದ ಬೇರೆ ಎಂದೇ ತೋರಲಿಲ್ಲ. ತಂದೆಯಂತೆ ಇರುವ ಮಾವ ಧಲ್ಲಪ, ಅಮ್ಮನಂತಿರುವ ಅತ್ತೆ ಪದ್ಮಬ್ಬೆ, ಪ್ರೀತಿಸುವ ಗಂಡ ನಾಗದೇವ. ತೃಪ್ತಜೀವಿಗಳಿಗೆ ಇದಕ್ಕಿಂತ ಹೆಚ್ಚಿನ ಸಂಸಾರ ಸುಖವೇನು ಬೇಕು? ಅತ್ತೆ ಮಾವಂದಿರ ಸೇವೆ, ಪತಿ ಸೇವೆ, ಜಿನಧರ್ಮ ಸೇವೆ-ಇವೇ ಅವರ ಬದುಕಿನ ಸೂತ್ರಗಳಾದವು.

ಸುಖದ ಸರೋವರದಲ್ಲೂ-ಅವರು ಪುಣ್ಯಜೀವಿಗಳಾದರೂ-ಒಮ್ಮೊಮ್ಮೆ ಅಲೆಗಳೇಳುವುದು ಉಂಟು.

ಅತ್ತಿಮಬ್ಬೆಯ ಚಿಕ್ಕಪ್ಪ ಪೊನ್ನಮಯ್ಯ ಕಾಳಗ ಒಂದರಲ್ಲಿ ಮರಣ ಹೊಂದಿದ. ಯಜಮಾನನಿಗಾಗಿ ಪ್ರಾಣತೆತ್ತು ಕೃತಾರ್ಥನಾದ.

ಪ್ರೀತಿಯ ಚಿಕ್ಕಪ್ಪನ ಸಾವು ಅತ್ತಿಮಬ್ಬೆಗೆ ಭರಿಸಲಾಗದ ದುಃಖವನ್ನುಂಟು ಮಾಡಿತು. ತನ್ನ ಮನೆಯ ಗಂಡಸರೆಲ್ಲರೂ ಸಮರವೀರರೇ ನಿ. ಸಮರಾಂಗಣವೇ ಅವರ ಮರಣ ಭೂಮಿ ಎಂಬುದೂ ನಿಜವೇ. ಆದರೂ ಸಾವು-ಪ್ರಿಯರ ಸಾವು-ದುಃಖಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಾವನ್ನು ಗೆಲ್ಲುವುದಂತೂ ಸಾಧ್ಯವಿಲ್ಲ; ಸಾವಿನ ದುಃಖವನ್ನಾದರೂ ಗೆಲ್ಲಲು ಕಲಿಯಬೇಕಲ್ಲ? ಅದಕ್ಕೇ ಮನಸ್ಸನ್ನು ಧರ್ಮದಲ್ಲಿ ನೆಲೆಗೊಳಿಸಬೇಕು ಎಂಬ ಜ್ಞಾನವನ್ನು ಅತ್ತಿಮಬ್ಬೆ ಅರಿತಿದ್ದಳು. ತನ್ನ ಜೀವನದಲ್ಲಿ ಧರ್ಮ ಕಾರ್ಯಗಳನ್ನು ಹೆಚ್ಚಿಸುತ್ತಾ ಹೋದಳು. ಈಗ ಅವಳ ಗುರುಗಳು ಅಜಿತಸೇನಾಚಾರ್ಯರು. ಅವರ ಉಪದೇಶಾಮೃತದಲ್ಲಿ ಮೈಮರೆತಳು. ಹಾಗೆಂದು ಗಂಡನನ್ನು ಅಲಕ್ಷಿಸಲಿಲ್ಲ. ಅವನೊಡನೆಯೂ ಆಗಾಗ ಯುದ್ಧಭೂಮಿಗೆ ಹೋಗಿದ್ದುಂಟು.

ಕವಿಜನಾಶ್ರಯ

ತನ್ನ ತಂದೆ, ಚಿಕ್ಕ ತಂದೆ ಪೊನ್ನನಿಂದ ಪುರಾಣ ಚೂಡಾಮಣಿಯನ್ನು ಬರೆಸಿದ್ದನ್ನು ಅವಳು ಅರಿತಿದ್ದಳು. ಅದು ಕವಿ ಬರೆದ ಪ್ರತಿಯಾಗಿ ಉಳಿದು ಸಾರ್ವಜನಿಕರಿಗೆ ದುರಕುವುದು ಕಷ್ಟವಾಯಿತು. ಅದರ ಪ್ರಕಾಶಕ್ಕೆ ಆಗೇನಾದರೂ ಮುದ್ರಾಣಾಲಯವಿತ್ತೆ? ಇಲ್ಲ. ಅತ್ತಿಮಬ್ಬೆ ಚಿಕ್ಕಪ್ಪನ ನೆನಪಿಗಾಗಿ ಎನ್ನುವಂತೆ ಕವಿಚಕ್ರವರ್ತಿಯ “ಶಾಂತಿಪುರಾಣ”ವನ್ನು ಸಹಸ್ರ ಪ್ರತಿ ಮಾಡಿಸಿ ದಕ್ಷಿಣೆ ಸಹಿತವಾಗಿ ಸತ್ಪ್ರಾತ್ರರಿಗೆ ಹಂಚಿದಳು. ಸಾವಿರ ಪ್ರತಿ ಮಾಡಿಸುವುದು ಎಂದರೆ ಆಗಿನ ಕಾಲದಲ್ಲಿ, ಅದೂ ತಾಳೆಯೋಲೆಯಲ್ಲಿ ಸುಲಭದ ಮಾತಲ್ಲ. ತಾಳೆಯ ಹಾಳೆಗಳೆಷ್ಟು! ಬರೆಯುವ ಕಂಠಗಳೆಷ್ಟು! ಬರೆಯುವ ಜನವೆಷ್ಟು? ನಿಧಾನವಾಗಿ ತಾಳೆಯೋಲೆಯ ಮೇಲೆ ಬರೆಯುವ ಜನವೆಷ್ಟು? ನಿಧಾನವಾಗಿ ತಾಳೆಯೊಲೆಯ ಮೇಲೆ ಬರೆಯಬೇಕು. ಕೈಗೆ, ಕಣ್ಣಿಗೆ ಕಷ್ಟದ ಕೆಲಸ. ಆದುದರಿಂದ ನೂರಾರು ಜನರು ಮಾಡಬೇಕಾದ ಕೆಲಸ. ಆದರೆ ಅತ್ತಿಮಬ್ಬೆ ಜನ ನಿಬ್ಬೆರಗಾಗುವಂತೆ ಆ ಕೆಲಸ ಮಾಡಿಸಿ ಕೃತಕಾರ್ಯಳಾದಳು. ಸಾಹಿತ್ಯ ಪ್ರಿಯೆಯಾದ ಅವಳ ಮನೆ ತಂದೆಯ ಮನೆಯಂತೆ ಕವಿಜನಾಶ್ರಯವಾಯಿತು. ಪಂಡಿತ ಸಮ್ಮೇಳನದ ವೇದಿಕೆಯಾಯಿತು. ಮುಂದೆ ಕನ್ನಡದ ಹಿರಿಯ ಕವಿಯಾದ ರನ್ನನನ್ನು ಅವಳು ಬಹುಶಃ ಆಗಲೇ ಕಂಡಿರಬೇಕು. ಅವನ ವಿದ್ಯಾಭ್ಯಾಸಕ್ಕೆ ಬಿಚ್ಚು ಮನಸ್ಸಿನಿಂದ ಸಹಾಯ ನೀಡಿದಳು. ಅಜಿತಸೇನಾಚಾರ್ಯರಲ್ಲಿ ಅವನನ್ನು ಬಿಟ್ಟು ಅವನ ವಿದ್ಯಾಭ್ಯಾಸ ಮುಂದುವರಿಯಲು ನೆರವಾದಳು. ಅಲ್ಲಿ ಅವನಿಗೆ ಅಜಿತಸೇನಾಚಾರ್ಯರ ಶಿಷ್ಯರಾದ ಚಾವುಂಡರಾಯನ ಪರಿಚಯವಾಗಿ ಅವನ ಪ್ರೋತ್ಸಾಹವೂ ದೊರಕಿತು. ಚಾವುಂಡರಾಯನ ತಾಯಿ ಕಾಳಲಾದೇವಿ ಅತ್ತಿಮಬ್ಬೆಗೆ ಗುರುವಿನಂತೆ. ಅವಳೊಬ್ಬಳು ಕಾರಣಕನ್ಯೆ. ಅವಳೂ ಧರ್ಮದೇವತೆ. ಅವಳ ಸಂಪರ್ಕ-ಸಾಮೀಪ್ಯಗಳು ಅತ್ತಿಯ ಮನಸ್ಸನ್ನು ಮತ್ತಷ್ಟು ಸಂಸ್ಕರಿಸಿದವು.

"ಶಾಂತಿ ಪುರಾಣ"ದ ಸಾವಿರ ಪ್ರತಿಗಳನ್ನು ಸತ್ಪ್ರಾತ್ರರಿಗೆ ಹಂಚಿದಳು.

ಅಸಾಧಾರಣ ಭಕ್ತಳು

 

ಅತ್ತಿಮಬ್ಬೆ ಸಂಸಾರದಲ್ಲಿ ಸುಖವನ್ನು ಕಂಡಳು; ಉಂಡಳು. ಆಕೆಗೆ ಅಣ್ಣಿಗದೇವ ಎಂಬ ಮಗನಾದನು. ಅತ್ತಿಮಬ್ಬೆ ಗರ್ಭಿಣಿಯಾಗಿದ್ದಾಗ ಅವಳು ತೋರಿಸಿದ ಬಯಕೆಗಳು ಅವಳ ಮತ್ತು ಮಗನ ಗುಣಗಳು ಮಹತ್ತ್ವವನ್ನು ತೋರಿಸುತ್ತವೆ. ಸಾವಿರ ಜಿನ ಪ್ರತಿಮೆಗಳ ದಾನಪೂಜೆ, ಸಾವಿರ ಮುನಿಗಳಿಗೆ ಭಿಕ್ಷ, ಸಾವಿರ ಗ್ರಂಥಗಳ ದಾನ-ಹೀಗೆ ಎಲ್ಲವೂ ಸಾವಿರಗಟ್ಟಲೆ. ಅವಳ ಬಯಕೆಯನ್ನು ನೆರವೇರಿಸುವ ತಾಯಿತಂದೆಗಳೂ ಅತ್ತೆಮಾವಂದಿರೂ ಇದ್ದರು. ಅಜಿತಸೇನಾಚಾರ್ಯರು ಬಾಗೆವಾಡಿಗೆ ಬಂದಾಗ ಅವರು ಅತ್ತಿಮಬ್ಬೆಯ ಅತಿಥಿಗಳಾಗಿದ್ದರು. ಅವರ ಜೊತೆಗೆ ಬಂದ ನೂರಾರು ಜನ ಶಿಷ್ಯರಿಗೆ ಆಕೆ ಆತಿಥ್ಯ ನೀಡಿದಳು. ಅವರ ಚಾತುರ್ಮಾಸ ಅಲ್ಲಿಯೇ ನಡೆದಂತೆ ಆಯಿತು. ತಾನೂ ಅವರ ಉಪದೇಶದಿಂದ ಪುನೀತಳಾದಳು. ಅವಳ ತಂಗಿ ಗುಂಡಮಬ್ಬೆಯ ಚರಿತ್ರೆಯನ್ನು ಬೇರೆ ಹೇಳಬೇಕಾಗಿಯೇ ಇಲ್ಲ. ಇವಳ ಚರಿತ್ರೆಯೇ ಅವಳ ಚರಿತ್ರೆ.

ಪ್ರಾಣಪದಕ ನುಚ್ಚುನೂರಾಯಿತು

ಅತ್ತಿಮಬ್ಬೆ ಯುದ್ಧವಿದ್ಯೆಯನ್ನೂ ಕಲಿತಿದ್ದಳು ಎಂದು ಹೇಳಿದೆ. ಅವಳು ಅದರ ಉಪಯೋಗವನ್ನು ಪಡೆಯದೆ ಇರಲಿಲ್ಲ. ಗಂಡನೊಡನೆ ಆಗಾಗ ಯುದ್ಧರಂಗಕ್ಕೆ ಹೋಗುತ್ತಿದ್ದಳು. ಅವನಿಗೆ ಉತ್ಸಾಹ ತುಂಬುತ್ತಿದ್ದಳು. ಅವನ ಜಯಕ್ಕೆ ಸ್ಫೂರ್ತಿ ನೀಡುತ್ತಿದ್ದಳು. ಸಮರ ಕ್ಷೇತ್ರದಲ್ಲಿ ಪತಿಯ ರಕ್ಷಾಮಣಿಯಾಗಿದ್ದಳು. ಗಂಡ ಕೈಗೊಂಡ ಯುದ್ಧಗಳಿಗೆ ಲೆಕ್ಕವಿಲ್ಲ. ಪ್ರತಿಯುದ್ಧದ ಜಯಾಪಜಯಗಳು ದೈವಾಧೀನವೇ. ಆದರೂ ತೈಲಪನ ಅದೃಷ್ಟ ಚೆನ್ನಾಗಿದ್ದುದರಿಂದ ಅವನ ಸೇನೆ ಶತ್ರುಗಳನ್ನು ಸದೆಬಡಿದು ಜಯದ ಮೇಲೆ ಜಯವನ್ನು ಗಳಿಸುತ್ತಿತ್ತು. ಇಂಥ ಅನೇಕ ಸಮರಗಳಲ್ಲಿ ನಾಗದೇವ ಭಾಗವಹಿಸಿದ್ದನು. ಅವುಗಳಲ್ಲೆಲ್ಲ ವಿಜಯಿಯಾಗಿ ಒಡೆಯನ ಮೆಚ್ಚುಗೆ ಪಡೆದನು. ಮಾಸವಾಡಿ 140ನ್ನು ಉಂಬಳಿಯಾಗಿ ಪಡೆದನು.

ಆದರೆ ಒಂದು ಯುದ್ಧ ನಾಗದೇವನಿಗೆ ಮಾರಕವಾಯಿತು. ಅಲ್ಲಿ ಶತ್ರುವಿನ ಬಾಣಾಘಾತಕ್ಕೆ ಜೀವ ತೆತ್ತನು. ಅತ್ತಿಮಬ್ಬೆ, ಗುಂಡಮಬ್ಬೆಯರ ಪ್ರಾಣಪದಕ ನುಚ್ಚುನೂರಾಯಿತು.

ಸುಖದ ಸಂಸಾರ ದುಃಖದ ಆಗರವಾಯಿತು. ಮನೆಯಲ್ಲಿ ಯಾರಿಗೂ ಯಾರೂ ಸಮಾಧಾನ ಮಾಡುವಂತೆಯೇ ಇರಲಿಲ್ಲ. ತಮ್ಮ ದುಃಖ ಶಮನವಾದ ಮೇಲೆ ತಾನೆ ಇನ್ನೊಬ್ಬರಿಗೆ ಸಮಾಧಾನ ಹೇಳುವುದು. ಇಂಥ ದೇಶಭಕ್ತನ, ಅಸಮಾನ ವೀರನ ಸಾವು ರಾಜ್ಯಕ್ಕೇ ದುಃಖದ ಪೂರವನ್ನು ತಂದಿತು.

ಅಕಾಲದಲ್ಲಿ ಮಳೆ ಸುರಿಯಿತು. ಅತ್ತಿಮಬ್ಬೆಗೆ ಶಕ್ತಿ ಕೂಡಿ ಬಂತು.

ಈಗ ಒಬ್ಬಳೇ

 

ಅತ್ತಿಮಬ್ಬೆ ಗುಂಡಮಬ್ಬೆಯರು ಪತಿಯೊಡನೆ ಸಹಗಮನ ಮಾಡಲು ನಿಶ್ಚಯಿಸಿದರು. ಗುಂಡಮಬ್ಬೆಗೆ ಅಕ್ಕ ಸಾಯುವುದು ಇಷ್ಟವಿರಲಿಲ್ಲ. ಅವಳ ಮಗು ಚಿಕ್ಕದು, ಅದು ತಾಯಿಯಿಲ್ಲದ ತಬ್ಬಲಿಯಾಗುವುದನ್ನು ಅವಳು ಯೋಚಿಸಲಾರಳು. ಆದುದರಿಂದ ಅಕ್ಕನ ಸಹಗಮನಕ್ಕೆ ಅವಳು ಒಪ್ಪಲಿಲ್ಲ. ಆಕೆ ಅಕ್ಕನನ್ನು ಕುರಿತು, “ಅಕ್ಕ, ಜಗತ್ತಿಗೆ ತಿಲಕಪ್ರಾಯನಾದ ಮಗ ನಿನಗಿದ್ದಾನೆ. ಅವನು ಇನ್ನೂ ಎಳೆಯ ಮಗು, ಅವನು ಸಮರ್ಥನಾಗಿ ಬೆಳೆಯುವವರೆಗೂ ನೀನು ಬದುಕಿರಬೇಕು. ನಾನು ಪತಿಯೊಡನೆ ಸಹಗಮನ ಮಾಡುತ್ತೇನೆ, ನನಗೆ ಅನುಮತಿ ಕೊಡು” ಎಂದು ಬೇಡಿಕೊಂಡಳು. ಅವಳ ಅಪ್ಪಣೆ ಪಡೆದು, ಬಾಳಿನ ಯಾವ ಆಸೆಯನ್ನೂ ಹೊಂದದೆ, ಇಹದಲ್ಲಿ ಪತಿ ಸೇವೆ ಕುಲವಧುವಿನ ಕರ್ತವ್ಯ, ಅವನು ಸತ್ತ ನಂತರ ತಾನು ಬದುಕಿದ್ದರೆ ಜಿನದೀಕ್ಷೆ, ಜಿನಭಕ್ತರ ಚರಣ ಸೇವೆ ಮತ್ತು ಶುಭಚರಿತ್ರೆಯಿಂದ ಜೀವನ ಅಥವಾ ಸಹಗಮನ ಎಂದು ನಿರ್ಧರಿಸಿಕೊಂಡಳು. ಗುಂಡಮಬ್ಬೆ ಇವುಗಳಲ್ಲಿ ಒಂದನ್ನು ತಾನು ಆಚರಿಸಿ ಇನ್ನೊಂದನ್ನು ಅತ್ತಿಮಬ್ಬೆಗೆ ಬಿಟ್ಟುಕೊಟ್ಟಳು.

ಅತ್ತಿಮಬ್ಬೆ ವಿಧವೆಯಾದಳು. ಆದರೆ ವಿರಕ್ತಿ ಪಡೆದಳು. ಯುದ್ಧದಲ್ಲಿ ವೀರಮರಣ ಪಡೆದ ನಾಗದೇವನಿಗೆ ಸ್ವರ್ಗ ಲಭಿಸಿರಬಹುದು; ಪತಿಯೊಡನೆ ಚಿತೆಯೇರಿದ ಗುಂಡಮಬ್ಬೆಗೆ ಮಹಾಸತಿತ್ವದ ಸದ್ಗತಿ ಲಭಿಸಿರಬಹುದು. ಮಗನಿಗಾಗಿಯೇ ಲೋಕದ ಮಕ್ಕಳಿಗಾಗಿಯೋ ಬದುಕಿ ಉಳಿದ ಅತ್ತಿಮಬ್ಬೆಯ ಕರ್ತವ್ಯವೇನು? ಅವಳು ಮೋಕ್ಷ ಸಂಪಾದಿಸುವುದು ಹೇಗೆ? ಜಿನದೀಕ್ಷೆಯನ್ನು ಕೈಗೊಂಡು ಉಳಿದ ಕಾಲವನ್ನು ಶುಭಚಾರಿತ್ರ್ಯದಿಂದ ಕಳೆಯುವುದು. ಅವಳು ಸಂನ್ಯಾಸವನ್ನು ಸ್ವೀಕರಿಸಲಿಲ್ಲ. ಜೈನ ವ್ರತನಿಷ್ಠೆಯ ಉಗ್ರದೀಕ್ಷೆಯನ್ನು ಕೈಗೊಂಡು ಬದುಕನ್ನು ಪವಿತ್ರವನ್ನಾಗಿ ಮಾಡಿದಳು. ತಂಗಿಯು ಗಂಡನೊಡನೆ ಬೆಂಕಿಯಲ್ಲಿ ಸುಮುಹೂರ್ತದಲ್ಲಿ ಬೆಂದು ಹೋದಳು. ಅವಳಿಗೆ ಹಿರಿಯಳಾದವಳು ಇವಳು. ಪ್ರತಿದಿನ ದೇಹಶೋಷಣೆ ಮಾಡುತ್ತಾ, ಸುಖದ ಆಸೆಗಳನ್ನು ವಿರೋಧಿಸುತ್ತ ಜಿನಧ್ಯಾನಸಕ್ತಳಾದಳು. ತನ್ನ ಶರೀರವನ್ನು ಉಪವಾಸಾದಿ ವ್ರತಗಳಿಂದ ಬಾಡಿಸುತ್ತ ಬಂದಳು. ತನ್ನ ಒಡವೆ, ಐಶ್ವರ್ಯಗಳನ್ನು ಸತತವಾದ ದಾನಗಳಿಂದ ಸವೆಸುತ್ತಾ ಬಂದಳು.

ಜೈನ ಧರ್ಮಶಾಸ್ತ್ರದ ಪ್ರಕಾರ ಯಾವುದೇ ದಾನ ಸಹಸ್ರ ಸಂಖ್ಯೆಯಿಂದ ಕೂಡಿರಬೇಕು. ಧರ್ಮದ ಆಚರಣೆ ತ್ಯಾಗದಿಂದ ತುಂಬಿರಬೇಕು. ದನ ಸಂಗ್ರಹಿಸುವುದು ದಾನಕ್ಕಾಗಿ, ದೀನದಲಿತರ ಕ್ಷೇಮಾಭ್ಯುದಯಕ್ಕಾಗಿ. ಅತ್ತಿಮಬ್ಬೆ ಹೀಗೆ ಧರ್ಮದೀಕ್ಷೆಯನ್ನು ಕೈಗೊಂಡ ಮೇಲೆ ದಾನನಿರತಳಾಗಿ ಅತ್ತೆ-ಮಾವಂದಿರಿಗೆ, ತಾಯಿ-ತಂದೆಗಳಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಶಾಂತಿಯನ್ನು ಪಡೆದಿದ್ದಳಲ್ಲದೆ, ತಪಸ್ವಿನಿಯ ಬಾಳನ್ನೇ ನಡೆಸತೊಡಗಿದಳು.

ಅತ್ತಿಮಬ್ಬೆ ಮಗನ ವಿದ್ಯಾಭ್ಯಾಸವನ್ನು ಮರೆಯಲಿಲ್ಲ. ಹುಡುಗ ಅಜ್ಜ-ಅಜ್ಜಿಯರ, ಮುತ್ತಜ್ಜ-ಮುತ್ತಜ್ಜಿಯರ ಕಣ್ಮಣಿಯಾಗಿ ಬೆಳೆಯತೊಡಗಿದ್ದನ್ನು ಅವಳು ಕಂಡಳು.

ದಾನ ಚಿಂತಾಮಣಿ”

ಆದರೂ ಅತ್ತಿಮಬ್ಬೆಯ ದೃಷ್ಟಿ ಜಿನಸಾಕ್ಷಾತ್ಕಾರದ ಕಡೆಗೆ. ಆಕೆಯ ಕಣ್ಣಿಗೆ ಅವನು ಎಲ್ಲೆಲ್ಲೂ, ಎಲ್ಲರಲ್ಲಿಯೂ ಕಾಣಿಸುತ್ತಿದ್ದ. ಅಂಥ ಮೂರ್ತಿಯನ್ನು ಸಾವಿರಕ್ಕೆ ಮಿಕ್ಕು ಎಂದರೆ ಒಂದು ಸಾವಿರದ ಐನೂರ ಮಣಿ ಕನಕಖಚಿತ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದಳು. ಒಂದೊಂದು ಪ್ರತಿಮೆಯನ್ನೂ ಮಣಿಯ ಘಂಟೆ ಮೇಲ್ಕಟ್ಟು, ದೀಪಮಾಲೆ, ರತ್ನತೋರಣಗಳಿಂದ ಅಲಂಕರಿಸಿದ್ದಳು. ಯೋಗಿಶ್ರೇಷ್ಠಳ ದಾನ ಮಹತ್ವದ ಕೀರ್ತಿ ದಿಕ್ಕುದಿಕ್ಕಿಗೆ ಹರಡಿತು. ಗಂಗರಾಜ್ಯದ ಚಾವುಂಡರಾಯನ ತಾಯಿ ಕಾಳಲದೇವಿ ಆಗಿನ ಒಬ್ಬ ಜಿನಭಕ್ತೆ; ಅತ್ತಿಮಬ್ಬೆಯ ವ್ರತೋಪವಾಸನಿಷ್ಠೆಯ ಕೀರ್ತಿ ಅವಳಿಗೂ ತಿಳಿದು ತನಗಿಂತ ದೊಡ್ಡ ಭಕ್ತಳಿರುವುದನ್ನು ಅವಳು ಕಂಡಳು. ಅವಳಿಗೆ ಗೌರವದಿಂದ ತಲೆ ಬಾಗಿದಳು.

ಜಿನಪದ ಭಕ್ತೆಯಾದ ಅತ್ತಿಮಬ್ಬೆ ಜಿನಶಾಸನ (ಧರ್ಮ)ವನ್ನು ಪ್ರಸಾರ ಮಾಡುತ್ತಾ, ಧರ್ಮದ ಕಲ್ಪವೃಕ್ಷದಂತೆ ಮೆರೆಯುತ್ತ ಜಗತ್ತಿನ ಜನರ ಹೊಗಳಿಕೆಗೆ ಪಾತ್ರಳಾಗಿ ಜಿನಧರ್ಮದ ಬಾವುಟವನ್ನು ಎತ್ತಿಹಿಡಿದಿದ್ದಳು. ಅವಳ ಶೀಲದ ಶಕ್ತಿ ಎಷ್ಟರಮಟ್ಟಿಗಿತ್ತೆಂದರೆ ಬೆಂಕಿ ಅವಳನ್ನು ಸ್ಪರ್ಶಿಸುತ್ತಿರಲಿಲ್ಲ, ವಿಷಸರ್ಪ ಅವಳನ್ನು ಕಚ್ಚಲಾರದು, ಅವಳಿದ್ದ ದೇಶ ಸುಭಿಕ್ಷದಿಂದ ಕೂಡಿದ್ದಿತು, ಸಕಾಲದಲ್ಲಿ ಮಳೆ ಸುರಿಯುತ್ತಿತ್ತು ಎಂದು ಹೇಳುತ್ತಾರೆ. ಅಂಥವಳನ್ನು ನೆನೆಯುವುದೇ ಪುಣ್ಯ ಭಾಜನ ಎಂದು ಜನ ತಿಳಿದಿದ್ದರು. ಅತ್ತಿಮಬ್ಬೆಯ ದಾನಗುಣವನ್ನು ಕವಿ ರನ್ನ ಬಹುಸುಂದರವಾಗಿ ವರ್ಣಿಸಿದ್ದಾನೆ.

ದಾನ ಬೇಸರದಿಂದ ಕೊಡುವುದಲ್ಲ; ಚಿಂತೆಯಿಂದ, ಕೊಡಬೇಕಲ್ಲಪ್ಪಾ ಎಂದುಕೊಂಡು ನೀಡುವುದಲ್ಲ, ಅತ್ತಿಮಬ್ಬೆಯ ದಾನ ಪ್ರೀತಿಯಿಂದ ಬಂದದ್ದು. ಔದಾರ್ಯದಿಂದ ಬಂದದ್ದು, ಸಂತೋಷದಿಂದ ನೀಡಿದ್ದು.

ಬಾಹುಬಲಿ ದರ್ಶನ

ಅತ್ತಿಮಬ್ಬೆಗೆ ಜೈನಧರ್ಮದ ಮಹತ್ತ್ವ ಅರಿವಾಗಿತ್ತು. ಆಗ ಧರ್ಮಕ್ಕೆ ತೊಂದರೆ ಬಂದಿದೆ ಎಂಬುದೂ ಅವಳಿಗೆ ತಿಳಿದಿತ್ತು. ಆ ಧರ್ಮವನ್ನು ನಾಡಿನಾದ್ಯಂತ ಹರಡಲು ನಿಶ್ಚಯಿಸಿದಳು. ಅವಳದು ಬರಿಯ ಪ್ರಚಾರ ಕಾರ್ಯ ಮಾತ್ರವಲ್ಲ. ಆ ಧರ್ಮದ ಉಪದೇಶದಂತೆ ನಡೆದು ಮಾರ್ಗದರ್ಶನ ಮಾಡುವ ಯೋಜನೆ. ತನ್ನ ಗುರಿಯನ್ನು ಮುಟ್ಟಲು ಸತತ ಪ್ರಯತ್ನ ನಡೆಸಿದಳು.

ಚಾವುಂಡರಾಯ ಅಜಿತಸೇನಾಚಾರ್ಯರ ಶಿಷ್ಯ. ಗಂಗರ ಮಾರಸಿಂಹನ ಸೇನಾಪತಿಯಾಗಿದ್ದು, ಅನಂತರ ಅವನ ಮಕ್ಕಳಾದ ರಕ್ಕಸಗಂಗ ರಾಚಮಲ್ಲರ ಮಹಾಮಂತ್ರಿ ಸೇನಾಪತಿಯಾಗಿ “ಅಣ್ಣ” ಎಂದು ಹೆಸರು ಪಡೆದಿದ್ದನು. ಅವನು ತಾಯಿಗೆ (ಬಹುಶಃ ಅವನಿಗೂ) ಬಿದ್ದ ಕನಸನ್ನು ನನಸನ್ನಾಗಿ ಮಾಡಲು ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಉನ್ನತ ವಿಗ್ರಹವನ್ನು ಸ್ಥಾಪಿಸಿದನು. ಅದೊಂದು ಅದ್ಭುತ ಸಾಧನೆ. ಹಿಂದೆ ಆಗಿರಲಿಲ್ಲ ಮುಂದೆ ಆಗಲಾರದು ಅಂಥ ಕಾರ್ಯ. ಆ ಬೃಹನ್‌ಮೂರ್ತಿಯ ಪೂಜೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಕುಕ್ಕುಟೇಶ್ವರ (ಬಾಹುಬಲಿ) ಜಿನನ ಪೂಜೆಗೆ ಅತ್ತಿಮಬ್ಬೆ ಹೋಗದೆ ಇರುತ್ತಾಳೆಯೇ? ಆ ಜಿನಭಕ್ತ ಬಾಹುಬಲಿಯ ಪೂಜೆಯ ವಿಷಯ ಕಿವಿಗೆ ಬಿದ್ದ ತಕ್ಷಣ ವ್ರತವೊಂದನ್ನು ಕೈಗೊಂಡಳು. ಪೂಜೆಯನ್ನು ಕಣ್ಣಾರೆ ನೋಡುವವರೆಗೆ ಊಟ ಮಾಡುವುದಿಲ್ಲ ಎಂಬುದೇ ಆ ವ್ರತ. ಉಪವಾಸದಿಂದ ನಿಶ್ಶಕ್ತಳಾದರೂ ಪೂಜೆಯ ವೇಳೆಗೆ ಹೋಗಬೇಕೆಂಬ ಹಟ. ಅವಳು ಇದ್ದುದು ಮಾಸವಾಡಿಯಲ್ಲಿ. ಬೆಳಗೊಳದವರೆಗೆ ಪ್ರಯಾಣ. ಅಲ್ಲಿ ಬೆಟ್ಟ ಹತ್ತುವ ಪ್ರಯಾಸ ವ್ರತ ಎಂದರೆ ಹಗುರವೇ? ಅದೂ ಒಂದು ತಪಸ್ಸು. ಅದನ್ನು ಸಾಧಿಸುವ ಛಲ ಅತ್ತಿಮಬ್ಬೆಯದು. ಅವಳು ಮೀಸೆ ಹೊತ್ತ ಅಣ್ಣಂದಿರಿಗಿಂತ ಸಾಹಸದಲ್ಲಿ ಇಮ್ಮಡಿ ಶಕ್ತಳು. ವಯಸ್ಸಿಗೆ ದೈಹಿಕ ಶಕ್ತಿ ಸೋಲುತ್ತದೆ, ನಿಜ. ಜೊತೆಗೆ ನಿರಾಹಾರದಿಂದ ತತ್ತರಿಸುತ್ತಿದ್ದ ಶರೀರ. ಅಂತೂ ಬೆಟ್ಟವನ್ನು ಹತ್ತಿದಳು. ದೂರದಲ್ಲಿ ಕುಕ್ಕುಟೇಶ್ವರ ಕಾಣಿಸುತ್ತಿದ್ದಾನೆ. ಶಕ್ತಿ ಕುಂದಿತು. ಕೈಕಾಲು ನಡುಗತೊಡಗಿದವು. ಮುಂದಿನ ಮೆಟ್ಟಲು ಹತ್ತಲಾರದೆ ಹೋದಳು, ಕುಸಿದು ಬಿದ್ದಳು. ಪರಿವಾರದವರು ಅವಳನ್ನು ಕೈಹಿಡಿದು ನಡೆಸುವುದಾಗಿ ಹೇಳಿದರು. ವರ್ತಮಾನ ತಿಳಿದು ಪಲ್ಲಕ್ಕಿಗಳು ಬಂದವು. ಮೇನೆಗಳು ಬಂದವು. ಸೇರಿದ್ದ ಜನ ನೆರವಿಗೆ ಬಂದಿತು. ಅತ್ತಿಮಬ್ಬೆ ವ್ರತಭಂಗ ಮಾಡಲು ಒಪ್ಪಲಿಲ್ಲ. ತನ್ನ ಪುಣ್ಯ ಅಷ್ಟೇ ಎಂದು ತೃಪ್ತಿಗೊಂಡಳು. ಕುಕ್ಕುಟೇಶ್ವರನ ದರ್ಶನ ಅಲ್ಲಿಂದ ಲಭಿಸಿದಷ್ಟೇ ಸಾಕು ಎಂದುಕೊಂಡಳು.

ಆದರೆ ಪೂಜಿಸಿಕೊಂಡ ಜಿನ, ಭಕ್ತಳ ಕೈಬಿಡುತ್ತಾನೆಯೇ? ಆ ಸಮಯದಲ್ಲಿ ಒಂದು ಆಶ್ಚರ್ಯಕರ ಸಂಗತಿ ನಡೆಯಿತು ಎಂದು ಭಕ್ತರು ಹೇಳುತ್ತಾರೆ. ಸೋತು ಬಿದ್ದಿದ್ದ ಭಕ್ತಶಿರೋಮಣಿಯನ್ನು ನೋಡುತ್ತಿದ್ದ ಗುಂಪಿಗೆ ಆಶ್ಚರ್ಯವಾಗುವ ಘಟನೆ ಸಂಭವಿಸಿತು. ಮೋಡವಿಲ್ಲದ ಆಕಾಶದಲ್ಲಿ ಮೋಡ ಕವಿಯಿತು. ಕ್ಷಣದಲ್ಲಿ, ಅಕಾಲದಲ್ಲಿ ಮಳೆ ಸುರಿಯಿತು. ಅಲೌಕಿಕವಾದ ಅಭಿಷೇಕ ಕುಕ್ಕುಟೇಶ್ವರನಿಗೆ; ಆಯಾಸ ಪರಿಹರಿಸುವ ಶೈತ್ಯೋಪಚಾರ ದರ್ಶನ ಕಾತರಳಾದ ಅತ್ತಿಮಬ್ಬೆಗೆ! ಭಕ್ತಳ ವ್ರತದ ಫಲವೆಂಬಂತೆ ಮಳೆ ಬಂದಿತಂತೆ. ಅವಳಿಗೆ ಅದು ಜಿನ ಅನುಗ್ರಹಿಸಿದ ಪುಷ್ಪವೃಷ್ಟಿಯಾಯಿತು. ಮಳೆಯಲ್ಲಿ ನೆನೆದ ಅತ್ತಿಮಬ್ಬೆಗೆ ಶಕ್ತಿ ಕೂಡಿಬಂದಿತು. ಬೆಟ್ಟವನ್ನು ಹತ್ತಿದಳು, ಕುಕ್ಕುಟೇಶ್ವರನ ಪೂಜಾ ವೈಭವವನ್ನು ಕಣ್ತುಂಬ ನೋಡಿದಳು. ಮನಸಾರೆ ಆನಂದಿಸಿದಳು.

ಜಿನಭಕ್ತೆಯ ಕೀರ್ತಿ ದಿಕ್ಕುದಿಕ್ಕುಗಳಿಗೆ ವ್ಯಾಪಿಸಿತು. ಅವಳ ಶೀಲ ಬಿಳಿಯ ಹತ್ತಿಯಂತೆ ಅಕಳಂಕ; ಗಂಗಾಜಲದಂತೆ ಪವಿತ್ರ. ಅಜಿತಸೇನಾಚಾರ್ಯರ ಗುಣಸಮೂಹದಂತೆ ಮಹಿಮಾಪೂರ್ಣ; ಕೊಪಾಣಾಚಳದಂತೆ ಸ್ಥಿರ. ಅದು ಬೆಳೆಯುತ್ತಲೇ ಇತ್ತು. ತನ್ನ ಸುತ್ತಮುತ್ತಲಿನವರ ಮೇಲೆ ಅಪಾರವಾದ ಪ್ರಭಾವವನ್ನು ಬೀರುತ್ತಲೇ ಇತ್ತು.

ತೈಲಪನ ರಕ್ಷಾಮಣಿ

ಅತ್ತಿಮಬ್ಬೆ ಸುಮ್ಮನೆ ಕೂಡುವ ವ್ಯಕ್ತಿಯಲ್ಲ. ಅವಳು ರತ್ನಖಚಿತ ಜಿನ ಪ್ರತಿಮೆಗಳನ್ನು ಸಾವಿರ ಸಂಖ್ಯೆಯಲ್ಲಿ ದಾನ ಮಾಡಿ ಮನೆ ಮನೆಗಳಲ್ಲಿ ಪೂಜೆ ನಡೆಯುವಂತೆ ಮಾಡಿದಳು. ಅಲ್ಲದೆ ಒಂದು ಸಾವಿರದ ಐನೂರ ಜೈನ ಬಸದಿಗಳನ್ನು ನಿರ್ಮಿಸಲೂ ಅವಳು ಭಾಷೆ ತೊಟ್ಟಳು. ಅದರಂತೆ ಬೇರೆ ಬೇರೆ ಊರುಗಳಲ್ಲಿ ಜಿನಬಸದಿಗಳನ್ನು ಕಟ್ಟಲು ವೈಯಕ್ತಿಕವಾಗಿಯೇ ಪ್ರಯತ್ನಪಟ್ಟಂತೆ ಕಾಣುತ್ತದೆ. ತವರು ಮನೆಯಿಂದ ಬಂದ ಹಣ, ಗಂಡ ಸಂಪಾದಿಸಿದ ಆಸ್ತಿ, ಮಗ ತರುವ ಹಣ ಎಲ್ಲವನ್ನೂ ಈ ಕಾರ್ಯಕ್ಕೇ ಮೀಸಲಿಡುತ್ತ ಬಂದಳು. ಇಲ್ಲಿ ಅತ್ತಿಮಬ್ಬೆ ಹಾಗೂ ಕಾಳಲದೇವಿಯರ ಭಕ್ತಿಯ ಕ್ರಮದಲ್ಲಿ ಕಾಣುವ ವ್ಯತ್ಯಾಸವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ಕಾಳಲದೇವಿ ತನ್ನ ದೈವದ ಔನ್ನತ್ಯವನ್ನು, ಶಕ್ತಿ ಪ್ರಭಾವವನ್ನು ಒಂದೇ ರೂಪದಲ್ಲಿ ಕಾಣುವ ಸಾಮರ್ಥ್ಯವುಳ್ಳವಳು. ಅತ್ತಿಮಬ್ಬೆ ಆ ರೂಪವನ್ನು ವ್ಯಾಪಕವಾಗಿ ಕಾಣುವ ಶಕ್ತಿ ಉಳ್ಳವಳು. ಆದ್ದರಿಂದ ಅವಳ ಗುರಿ ಸಾವಿರ ಜಿನಪ್ರತಿಮೆಗಳ ದಾನ ಮತ್ತು ಸಾವಿರ ಜಿನಬಸದಿಗಳ ನಿರ್ಮಾಣ.

ಒಂದು ಸಲ ಒಂದು ಜಿನಬಸದಿಯ ಕಾರ್ಯ ಎಲ್ಲಿಯವರೆಗೆ ನಡೆದುಕೊಂಡು ಬಂದಿದೆ ಎಂದು ನೋಡಲು ಅತ್ತಿಮಬ್ಬೆ ಮಿತಪರಿವಾರದೊಡನೆ ಸಂಚಾರ ಹೊರಟಿದ್ದಳು. ಆ ಸ್ಥಳದ ಸಮೀಪದಲ್ಲಿಯೇ ಚಾಲುಕ್ಯರಿಗೂ ಬಹುಶಃ ಪರಮಾರರಿಗೂ ಭೀಕರ ಯುದ್ಧ ನಡೆಯುತ್ತಿತ್ತು. ಆ ಯುದ್ಧದಲ್ಲಿ ಚಾಲುಕ್ಯರ ತೈಲಪನಿಗೆ ಜಯ ದೊರಕುವ ಸೂಚನೆಗಳು ಕಂಡುಬರಲಿಲ್ಲ. ಸೈನ್ಯಕ್ಕೆ ಕಾಲಕಾಲಕ್ಕೆ ಆಹಾರ, ಆಯುಧಗಳು ಬರುವುದು ಕಷ್ಟವಾಗಿತ್ತು. ಗೋದಾವರಿಯಲ್ಲಿ ಪ್ರವಾಹ ತುಂಬಿ ಬಂದುಬಿಟ್ಟಿತ್ತು. ಸರಬರಾಜು ನಿಂತೇ ಹೋಯಿತು. ರಾಜನೂ ಸೈನ್ಯದೊಡನೆ ಹಿಂದಿರುಗುವಂತಿಲ್ಲ. ಪ್ರವಾಹದ ಭರಾಟೆ ತಗ್ಗಲಿಲ್ಲ. ಮೇಲಿನಿಂದ ಪರಮಾರ ಸಿಂಧುರಾಜನ ದಾಳಿ, ತೈಲಪನ ಅವಸ್ಥೆ ಹೇಳತೀರದು. ಆಗ ಜಿನಬಸದಿಯ ನಿರ್ಮಾಣ ಕಾರ್ಯ ನೋಡಿಕೊಂಡು ಹಿಂತಿರುಗುತ್ತಿದ್ದ ಅತ್ತಿಮಬ್ಬೆ ಅವನಲ್ಲಿ ಜಯಲಕ್ಷ್ಮಿ ಬಂದಂತೆ ಬಂದಳು. ಮಗ, ರಾಜ, ಸೈನ್ಯ ಎಲ್ಲರೂ ಅವಳಿಗೆ ಮೊರೆಹೊಕ್ಕರು. “ನಮ್ಮನ್ನು ಉಳಿಸುವ ಭಾರ ನಿಮ್ಮದು ತಾಯಿ” ಎಂದು ಪ್ರಾರ್ಥಿಸಿದರು.

ಅತ್ತಿಮಬ್ಬೆ ಚಾಲುಕ್ಯ ಸೈನ್ಯವನ್ನು ಉಳಿಸಿದ್ದೊಂದು ಅದ್ಭುತ ಕಥೆ. ಅದನ್ನು ಭಕ್ತರು ಹೀಗೆ ವಿವರಿಸುತ್ತಾರೆ.

ಅತ್ತಿಮಬ್ಬೆಗೆ ಸಂದರ್ಭದ ಅರಿವಾಯಿತು. ತಾನು ತಂದಿದ್ದ ಜಿನಪ್ರತಿಮೆಯನ್ನು ತಲೆಯ ಮೇಲೆ ಹೊತ್ತಳು. ಜಿನನಲ್ಲಿ ಮನಸ್ಸನ್ನು ಅಚಲವಾಗಿ ನೆಟ್ಟಳು. ತನ್ನನ್ನು ಹಿಂಬಾಲಿಸುವಂತೆ ರಾಜನಿಗೆ, ರಾಜಪರಿವಾದವರಿಗೆ ಹೇಳಿದಳು. ಗೋದಾವರಿ ನದಿಯೊಳಗೆ ಇಳಿದು ನಡೆದಳು. ಅವಳು ಮುಂದೆ; ರಾಜ ತೈಲಪ, ಸೇನಾಧಿಪತಿ ಅಣ್ಣಿಗೆ ಹಿಂದೆ; ಅವರ ಹಿಂದೆ ಸೈನ್ಯ. ಇವರು ನಡೆಯುವ ನದಿಯ ದಾರಿಯಲ್ಲಿ ಪ್ರವಾಹವೇ ಇಲ್ಲವೇನೋ ಎಂಬಷ್ಟು ನೀರು ಕಡಿಮೆಯಾಯಿತು. ನಿರಾಯಾಸವಾಗಿ ತೈಲಪ ಶತ್ರುವಿನ ಕಾಟ ತಪ್ಪಿಸಿಕೊಂಡ. ಅತ್ತಿಮಬ್ಬೆಗೆ ಇದು ಯಾವುದೂ ತಿಳಿಯದು. ಅವಳು ನದಿಗೆ ಇಳಿದದ್ದು ಗೊತ್ತು. ಈಚೆ ದಡಕ್ಕೆ ಬಂದು ನಿಂತದ್ದು ಗೊತ್ತು. ತೈಲಪನಿಗೆ ಆಶ್ಚರ್ಯ. ಅವನು ಮಾತನಾಡಲಾರದೆ ಮೂಕನಾಗಿಬಿಟ್ಟಿದ್ದ. ತನ್ನನ್ನು ಉದ್ಧಾರ ಮಾಡಿದ ದೇವತೆಗೆ ಅವನು ಅರ್ಪಿಸಿದ ಕಾಣಿಕೆಗೆ ಅಳತೆಯೇ ಇಲ್ಲ.

ಇತ್ತಲಾಗಿ ಪರಮಾರ ಸಿಂಧುರಾಜ ಶತ್ರುಸೈನ್ಯ ಸೋತು ಹಿಮ್ಮೆಟ್ಟುತ್ತಿರುವುದನ್ನು ನೋಡಿದನು. “ಅವರು ನದಿಯನ್ನು ದಾಟಲಾರರು. ಅವರ ಹುಟ್ಟನ್ನು ಅಡಗಿಸಬಹುದು” ಎಂದು ಆಶಿಸಿದನು. ಅವನ ಸೈನಿಕರು ಅವರನ್ನು ಹಿಂಬಾಲಿಸಿಯೇ ನದಿ ದಂಡೆಯತನಕ ಬಂದರು. ಅವರು ಹೊರಟ ಜಾಗದಲ್ಲಿ ನದಿಗೆ ಇಳಿಯಲು ನೋಡಿದರು. ಆದರೆ ಅಲ್ಲಿ ನೀರು ತುಂಬಿ ಕೊಚ್ಚಿ ಹರಿಯುತ್ತಿದೆ. ಹೊಳೆ ತುಂಬಿದೆ. ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಬೇರೆ ದಾರಿ ಕಾಣದೆ ಹಿಂದಿರುಗಬೇಕಾಯಿತು ಎಂದು ಹೇಳುತ್ತಾರೆ.

ಮಹಾಜಿನಭಕ್ತೆಯ ಇಂಥ ಕಾರ್ಯಗಳು ಪವಾಡವಾಗಿ, ಜನರ ಮನಸ್ಸಿನಲ್ಲಿ ಆಕೆಯ ಮೂರ್ತಿ ಕಡೆದು ನಿಂತಿತು. ಅವಳ ಧ್ಯಾನ, ಅವಳ ನಾಮಸ್ಮರಣೆ, ಅವಳ ದರ್ಶನ ಜನರಿಗೆ ಪುಣ್ಯ ಫಲದಾಯಕವಾಯಿತು. ಅವಳ ಬದುಕು, ದಾನ, ಪೂಜೆ, ಶೀಲ, ಉಪವಾಸಗಳಿಂದ ನಿಬಿಡವಾಗಿ ಅವಳ ಕೀರ್ತಿ ಹತ್ತು ದಿಕ್ಕುಗಳಿಗೂ ವ್ಯಾಪಿಸಿತ್ತು.

ಜಿನಾಲಯದ ನಿರ್ಮಾಣವನ್ನು ನೋಡಿಕೊಳ್ಳುವ ಹೊಣೆಹೊತ್ತಳು.

ಲಕ್ಕುಂಡಿಯಲ್ಲಿ

ಅತ್ತಿಮಬ್ಬೆ ಒಂದು ಸಾವಿರದ ಐನೂರು ಜೈನ ಬಸದಿಗಳನ್ನು ನಿರ್ಮಿಸಿದಳು. ಅಲ್ಲಿಗೂ ಅವಳಿಗೆ ತೃಪ್ತಿಯಾಗಲಿಲ್ಲ. ಲಕ್ಕುಂಡಿ (ಲೊಕ್ಕಿಗುಂಡಿ)ಯಲ್ಲಿ ಒಂದು ಅಪೂರ್ವ ಜಿನಾಲಯವನ್ನು ಕಟ್ಟಿಸಲು ನಿಶ್ಚಯಿಸಿದಳು. (ಈ ಹಳ್ಳಿ ಧಾರವಾಡ ಜಿಲ್ಲೆಯ ಗದಗ ತಾಲೂಕಿನಲ್ಲಿದೆ) ಅದಕ್ಕೆ ತೈಲಪನ ಬೆಂಬಲ, ಸಹಾಯವೂ ಇದ್ದಿತು. ತಾನೇ ಖುದ್ದಾಗಿ ನಿಂತು ಅದರ ನಿರ್ವಹಣೆಯನ್ನು ನೋಡಿಕೊಳ್ಳುವ ಹೊಣೆಯನ್ನು ಹೊತ್ತಳು. ಲಕ್ಕುಂಡಿಯಲ್ಲೇ ಆಲಯದ ಕಾರ್ಯ ಮುಗಿದು ಪೂಜೆ ಆರಂಭವಾಗುವವರೆಗೆ ನಿಲ್ಲಲು ತಕ್ಕ ಏರ್ಪಾಡಾಯಿತು. ದೇವಾಲಯದ ಕೆಲಸ ಭರದಿಂದ ಸಾಗತೊಡಗಿತು.

ಮದವೇರಿದ ಆನೆ

ಕೆಲಸ ನಡೆಯುತ್ತಿದ್ದ ಒಂದು ದಿನ ಚಕ್ರವರ್ತಿ ಮಿತ ಪರಿವಾರದೊಡನೆ ಲಕ್ಕುಂಡಿಗೆ ಬಂದು ಬಿಡಾರ ಹೂಡಿದ. ಅತ್ತಿಮಬ್ಬೆಯನ್ನು ಕಾಣುವ ಮತ್ತು ಕೆಲಸದ ಪ್ರಗತಿಯನ್ನು ವಿಚಾರಿಸುವ ಉದ್ದೇಶ ಅವನದು. ಅವನ ಶಿಬಿರದಲ್ಲಿದ್ದ ಒಂದು ಆನೆ ಮದವೇರಿ ಹುಚ್ಚೆದ್ದು ಬಂಧನವನ್ನು ಕಿತ್ತು ಹೊರಬಂದಿತು. ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಮಾವುತನಿಗೆ ದಿಕ್ಕೇ ತೋಚದಾಯಿತು. ಆನೆ ತನ್ನ ಎದುರಿಗೆ ಸಿಕ್ಕಿದ್ದನ್ನೆಲ್ಲ, ಸಿಕ್ಕಿದವರನ್ನೆಲ್ಲ ಧ್ವಂಸ ಮಾಡುತ್ತ ನಡೆಯಿತು. ಜನ ಹೆದರಿ ಓಡಿದರು. ಸೈನಿಕರ ಪ್ರಯತ್ನಗಳೆಲ್ಲ ನಿಷ್ಪಲವಾದವು. ವರ್ತಮಾನ ರಾಜನಿಗೆ ತಿಳಿಯಿತು. ಅವನಿಗೂ ಮದಹಸ್ತಿಯ ಸ್ಥಿತಿ ಭಯವನ್ನುಂಟು ಮಾಡಿತು. ಆನೆಯನ್ನು ಪಳಗಿಸುವ ಗಜವೀರರನ್ನು ಕರೆಯಿಸಲಾಯಿತು. ಆನೆ ಸಮಾಧಾನ ಹೊಂದುವಂತೆ ಕಾಣಿಸಲೇ ಇಲ್ಲ.

ಅತ್ತಿಮಬ್ಬೆಗೆ ಸುದ್ದಿ ತಿಳಿಯಿತು. ಕೈಯಲ್ಲಿದ್ದ ಜಿನ ಪ್ರತಿಮೆಯನ್ನು ಎತ್ತಿಕೊಂಡು ಆನೆ ಬರುತ್ತಿರುವ ರಸ್ತೆಗೇ ಬಂದಳು. ಆನೆಯ ಮುಂದೆ ಸ್ವಲ್ಪ ದೂರದಲ್ಲಿ ಪದ್ಮಾಸನ ಹಾಕಿ ಕುಳಿತಳು. ಎದುರಿಗೆ ಜಿನಪ್ರತಿಮೆ. ಅದನ್ನೇ ಸಂಬೋಧಿಸಿ ಮಾತನಾಡುವಂತೆ, “ಏಕಪ್ಪಾ ಇಷ್ಟೊಂದು ಕೋಪ? ಏನಾಯಿತು? ಯಾರಾದರೂ ರೋಷ ಉಕ್ಕುವಂತೆ ಮಾಡಿದರೆ? ಸಮಾಧಾನ ತಂದುಕೋ. ನಿನ್ನ ಶಕ್ತಿಯ ಮುಂದೆ ಯಾರ ಶಕ್ತಿ ನಿಂತೀತು? ನೀನು ಹೀಗೆ ಹುಚ್ಚೆದ್ದರೆ ಹುಲು ಮನುಷ್ಯರ ಪಾಡೇನು? ಶಾಂತಿ ಇರಬೇಕಪ್ಪ, ಶಾಂತಿ ತಾಳಬೇಕು” ಎಂದು ಮಾತನಾಡತೊಡಗಿದಳು. ಈ ಮಾತುಗಳು ಆನೆಗೆ ಕೇಳಿಸಿದವು. ನಿಧಾನವಾಗಿ ಹೆಜ್ಜೆ ಹಾಕುತ್ತ ಅತ್ತಿಮಬ್ಬೆಯ ಬಳಿಗೆ ಬಂದಿತು. ಅಡಗಿ ನೋಡುತ್ತಿದ್ದ ಜನ ಅತ್ತಿಮಬ್ಬೆಯ ಕೊನೆ ಸಮೀಪಿಸಿತೆಂದು ಹೆದರಿ ಕಣ್ಮುಚ್ಚಿದರು. ಹಿಂಬಾಲಿಸಿ ಬರುತ್ತಿದ್ದ ಸೈನಿಕರು, ಗದ್ದಲವೆಬ್ಬಿಸಿದರೆ ಹೇಗೋ ಸುಮ್ಮನಿದ್ದರೆ ಹೇಗೋ ಎಂದು ದಿಘ್ಮೂಢರಾಗಿ ನಿಂತಿದ್ದರು. ಆನೆ ಮುಂದಿನ ಎರಡು ಕಾಲುಗಳನ್ನು ಮಡಿಸಿ, ಸೊಂಡಿಲನ್ನು ಮೇಲೆತ್ತಿ ಜಿನ ಪ್ರತಿಮೆಗೆ ನಮಸ್ಕರಿಸುವಂತೆ ಅತ್ತಿಮಬ್ಬೆಗೆ ನಮಸ್ಕರಿಸಿತು. ಅತ್ತಿಮಬ್ಬೆ ಅದರ ಮುಖವನ್ನು ಸವರಿ, “ನನ್ನಪ್ಪ! ಎಷ್ಟು ಹೆದರಿಸಿದೆಯಪ್ಪ ಜನರನ್ನು. ಕೋಪವನ್ನು ಬಿಡಬೇಕಪ್ಪ!” ಎಂದು ಹೇಳಿ ಅದಕ್ಕೆ ಹಣ್ಣುಕಾಯಿಗಳನ್ನು ತರಿಸಿಕೊಟ್ಟು ಕಳುಹಿಸಿಕೊಟ್ಟಳು. ಹೀಗೆಂದು ಭಕ್ತರು ಹೇಳುತ್ತಾರೆ.

ಬ್ರಹ್ಮ ಜಿನಾಲಯ

ಪ್ರಾಣಿಗಳಲ್ಲಿ, ಮಾನವರಲ್ಲಿ ಸಮಾನದೃಷ್ಟಿಯುಳ್ಳ ಅತ್ತಿಮಬ್ಬೆ ಲಕ್ಕುಂಡಿಯ ಬ್ರಹ್ಮ ಜಿನಾಲಯದ ನಿರ್ಮಾಣ ಕಾರ್ಯದಲ್ಲಿ ಪೂರ್ಣವಾಗಿ ಮುಳುಗಿಹೋದಳು. ಅವಳ ದಿನದಿನದ ಕಾರ್ಯಕ್ರಮಗಳೆಂದರೆ ಧ್ಯಾನ, ಪೂಜೆ ಮತ್ತು ದಾನ. ಗುಣದ ಖನಿಯಾದ, “ದಾನಚಿಂತಾಮಣಿ” ಎಂದು ಪ್ರಖ್ಯಾತಳಾದ ಅತ್ತಿಮಬ್ಬ ಸಜ್ಜನೈಕ ಚೂಡಾಮಣಿಯಾಗಿ ತನ್ನ ವಿಮಲ ಚಾರಿತ್ರ್ಯವನ್ನು ಬೆಳಗತೊಡಗಿದಳು. ಲಕ್ಕುಂಡಿಯ ಬ್ರಹ್ಮ ಜಿನಾಲಯದ ಕೆಲಸ ಮುಗಿಯುತ್ತ ಬಂದಿತು. ಅದರ ಆರಂಭೋತ್ಸವ ವಿಶಿಷ್ಟ ವಿಜೃಂಭಣೆಯಿಂದ ನೆರವೇರಿತು.

ಗರ್ಭಗುಡಿಯಲ್ಲಿ ತೀರ್ಥಂಕರನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ಒಳ ಮಂಟಪದಲ್ಲಿ ಬ್ರಹ್ಮನ ವಿಗ್ರಹವಿದೆ. ತೀರ್ಥಂಕರನ ಎರಡೂ ಪಾರ್ಶ್ವಗಳಲ್ಲಿ ಒಂದು ಕೈಯಲ್ಲಿ ಚವರಿ, ಮತ್ತೊಂದು ಕೈಯಲ್ಲಿ ಮಾದಳಹಣ್ಣು ಹಿಡಿದಿರುವ ಗಂಧರ್ವರು ದ್ವಾರಪಾಲಕರಂತೆ ನಿಂತಿದ್ದಾರೆ. ಒಳಮಂಟಪದ ಇನ್ನೊಂದು ಕಡೆ ಪದ್ಮಾವತಿಯ ವಿಗ್ರಹವಿದೆ. ದೇವಾಲಯದ ಸುತ್ತಲೂ ಅನೇಕ ಸಣ್ಣ ಸಣ್ಣ ಗೂಡುಗಳಿದ್ದು, ಅಲ್ಲೆಲ್ಲ ಜಿನಪ್ರತಿಮೆಗಳು ಕೆತ್ತಲ್ಪಟ್ಟಿವೆ. ಗುಡಿ ಕಲೆಯ ಬೀಡಾಗಿ ಸುಂದರವಾಗಿದೆ. ಅತ್ತಿಮಬ್ಬೆ ನಿರ್ಮಿಸಿದ ಒಂದು ಸಾವಿರದ ಐನೂರು ಜಿನಬಸದಿಗಳನ್ನು ಈಗ ಕಾಣಲು ಸಾಧ್ಯವಾಗುವುದಿಲ್ಲ. ಆದರೆ ಅವಕ್ಕೆಲ್ಲ ಕಳಶಪ್ರಾಯವಾದ ಈ ಬ್ರಹ್ಮಜಿನಾಲಯವನ್ನು ಇಂದೂ ನೋಡಬಹುದು. ದೇವಾಲಯದ ಆರಂಭೋತ್ಸವಕ್ಕೆ ಸ್ವತಃ ಚಾಲುಕ್ಯ ಚಕ್ರವರ್ತಿಯೇ ಬಂದಿದ್ದು, ಜಿನಾಲಯದ ಕಳಶಕ್ಕೆ ಬಂಗಾರದ ತಗಡನ್ನು ಹೊದಿಸಿ, ಅತ್ತಿಮಬ್ಬೆಯ ಗುಣಗಾನ ಮಾಡುವ ಶಾಸವನ್ನು ಹಾಕಿಸಿದ್ದಾನೆ. ಜಿನಾಲಯ ಇಂದಿಗೂ ಅತ್ತಿಮಬ್ಬೆಯ ಕೀರ್ತಿ ಕಳಶದಂತೆ ಶೋಭಿಸುತ್ತಿದೆ.

ಜಿನನಿಗೆ ನನ್ನಲ್ಲಿ ಕೃಪೆ ಇದ್ದರೆ”

ಜಿನವ್ರತ ದೀಕ್ಷೆಯನ್ನು ಕೈಗೊಂಡ ಮಹಾಸತಿಯ ಬದುಕು ಇದೇ ರೀತಿ ಮುಂದುವರಿಯುತ್ತಾ ಹೋಯಿತು. ಅವಳ ಪೂಜೆ-ಪುನಸ್ಕಾರಗಳಿಗೆ ಅಡೆತಡೆಯೇ ಇರಲಿಲ್ಲ. ಅವಳ ದಾನಧರ್ಮಗಳಿಗೆ ಮಿತಿಯೇ ಇರಲಿಲ್ಲ. ಮಠಗಳಿಗೆ, ಶಾಲೆಗಳಿಗೆ, ವಿದ್ಯಾಮಂದಿರಗಳಿಗೆ ಅವಳು ಕೊಟ್ಟ ದಾನದ ಪ್ರಮಾಣವನ್ನು ಊಹಿಸುವುದೇ ಕಷ್ಟ.

ಒಮ್ಮೆ ನದಿ ತೀರದಲ್ಲಿ ಕುಳಿತು ಜಿನಪೂಜೆಯನ್ನು ಮಾಡುತ್ತಿದ್ದಳು. ಪೂಜೆ ಮುಕ್ತಾಯವಾಗುವ ವೇಳೆಗೆ ಜನರ ಗುಂಪು ಸೇರಿತು. ಪೂಜೆ ಮಾತ್ರ ಏಕಾಂತದಲ್ಲಿ ನಡೆಯುವಂತೆಯೇ ನಡೆಯಿತು. ಆದರೆ ವಿನಾಕಾರಣ ಧ್ಯಾನಭಂಗವಾಯಿತೋ ಏನೋ! ಪೂಜಿತವಾಗುತ್ತಿದ್ದ ವಿಗ್ರಹ ಅಲುಗಾಡಿ ನೀರಿನೊಳಕ್ಕೆ ಬಿದ್ದು ಹೋಯಿತು. ಅತ್ತಿಮಬ್ಬೆಯ ಮನಸ್ಸಿಗೆ ನೋವಾಯಿತು. ಪೂಜೆ ಪೂರ್ಣವಾಗದೆ ಅಲ್ಲಿಂದ ಏಳುವುದಿಲ್ಲ ಎಂದು ನಿಶ್ಚಯಿಸಿದಳು. ಸೇರಿದ್ದ ಜನ ಬೇರೆ ವಿಗ್ರಹ ತಂದುಕೊಡುವುದಾಗಿ ಹೇಳಿದರು. ಆಕೆ ಒಪ್ಪಲಿಲ್ಲ. “ಅದೇ ಜಿನ ಪ್ರತಿಮೆ ಬೇಕು. ಅದಕ್ಕೆ ಮಾಡಿದ ಅರ್ಧ ಪೂಜೆ ಪೂರ್ಣವಾಗಬೇಕು. ಅಲ್ಲಿಯವರೆಗೆ ಇಲ್ಲಿಂದ ಏಳುವುದಿಲ್ಲ. ಜಿನನಿಗೆ ನನ್ನಲ್ಲಿ ಕೃಪೆಯಿದ್ದರೆ ತಾನಾಗಿಯೇ ಬಂದು ನನ್ನ ಪೂಜೆ ಸ್ವೀಕರಿಸುತ್ತಾನೆ. ನೋಡೋಣ! ಆತ ಏಕೆ ಬರುವುದಿಲ್ಲ? ಅವನು ಬರುವವರೆಗೆ ಕಾಯುತ್ತೇನೆ” ಎಂದು ಪದ್ಮಾಸನ ಹಾಕಿ ಕುಳಿತೇಬಿಟ್ಟಳು. ನದಿಯಲ್ಲಿ ಮುಳುಗಿದ ವಿಗ್ರಹ ತಾನಾಗಿಯೇ ತೇಲಿಬರುತ್ತದೆಯೇ? ಬರುತ್ತದೆ ಎಂಬುದು ಅತ್ತಿಮಬ್ಬೆಯ ಭಕ್ತಿ. ಬಂದೇ ಬರುತ್ತದೆ ಎಂಬುದು ಜನರ ನಂಬಿಕೆ. ಆದರೆ ಜನರು ಅವಳಂತೆ ಊಟ-ತಿಂಡಿ ಬಿಟ್ಟು ಸುಮ್ಮನೆ ಕುಳಿತಿರಲು ಸಾಧ್ಯವೆ? ಮಡುವಿನಲ್ಲಿ ಮುಳುಗಿದ ಪ್ರತಿಮೆಯನ್ನು ಎತ್ತಲು ಈಜುಗಾರರು, ಬಲೆಗಾರರು ಸಾಹಸಪಟ್ಟರು. ಭಕ್ತಿಯ ಕರೆಗೆ ಓಗೊಡದ ಜಿನ ಈಜುಗಾರರ ಸಾಹಸಕ್ಕೆ ಸುಲಭದಲ್ಲಿ ದೊರಕುತ್ತಾನೆಯೇ? ದಿನಗಳು ಕಳೆದವು. ವಿಗ್ರಹ ದೊರಕಲಿಲ್ಲ. ಜನರ ಶ್ರದ್ಧೆ, ಸಾಹಸ ನಿಲ್ಲಲಿಲ್ಲ. ಚಿಂತಾಮಣಿಯ ಅನಸನ ವ್ರತ ಮುಂದುವರಿಯಿತು. ಅವಳ ವ್ರತದ ಫಲವೆಂಬಂತೆ, ಅವಳ ಭಕ್ತಿಯ ರೂಪವೆಂಬಂತೆ, ಅವಳ ಶ್ರದ್ಧೆಯ ನಿಧಾನವೆಂಬಂತೆ ಎಂಟನೆಯ ದಿನ ಜಿನವಿಗ್ರಹ ಅವಳ ಕೈಗೆಟುಕಿತು. ಅತ್ತಿಮಬ್ಬೆಯ ಆಗಿನ ಆನಂದವನ್ನು ವರ್ಣಿಸುವುದು ಕಷ್ಟ. ಅಪೂರ್ಣವಾಗಿದ್ದ ಜಿನನ ಪೂಜೆ ಪೂರ್ಣ ಮಾಡಿ ಅತ್ತಿಮಬ್ಬೆ ತಾನು ಹಿಡಿದ ಹಟವನ್ನು ಸಾಧಿಸಿದಳು. ಭಕ್ತಿಯ ಶಕ್ತಿಯನ್ನು ಲೋಕಕ್ಕೆ ತೋರಿಸಿಕೊಟ್ಟಳು.

ಅತ್ತಿಮಬ್ಬೆಯ ಬಾಳಿನಲ್ಲಿ ಇಂತಹ ಅನೇಕ ಆಶ್ಚರ್ಯಕರ ಸಂಗತಿಗಳು ನಡೆದವು ಎಂದು ಭಕ್ತರು ನಂಬುತ್ತಾರೆ.

ಸೈನ್ಯಕ್ಕೆ ಬೆಂಕಿ ಬಿದ್ದಾಗ, ಜಿನಮೂರ್ತಿಗೆ ಅಭಿಷೇಕ ಮಾಡಿದ ತೀರ್ಥದಿಂದ ಸಂಪ್ರೋಕ್ಷಿಸಿ ಬೆಂಕಿಯನ್ನು ಆರಿಸಿದಳು. ಸವತಿ ಕಾಟದಿಂದ ಹೆಣ್ಣುಮಗಳೊಬ್ಬಳು ನೀರಿಗೆ ಧುಮುಕಿದಾಗ ಅವಳನ್ನು ರಕ್ಷಿಸಿ ಅವಳಿಗೆ ಸವತಿ ಕಾಟವನ್ನು ತಪ್ಪಿಸಿದಳು-ಇಂತಹ ಹಲವು ಘಟನೆಗಳನ್ನು ವಿವರಿಸುತ್ತಾರೆ.

ಅಜಿತ ಪುರಾಣ

ಅಜಿತಸೇನಾಚಾರ್ಯರು ಆಗಿನ ಕಾಲದಲ್ಲಿ ಪ್ರಖ್ಯಾತರಾದ ಹಿರಿಯ ಗುರುಗಳು. ಚಾವುಂಡರಾಯ, ರನ್ನ ಅವರ ಶಿಷ್ಯರು. ಹಾಗೆಯೇ ಅತ್ತಿಮಬ್ಬೆ ಕೂಡ. ಅವರ ಅವಸಾನದಿಂದ ಅತ್ತಿಮಬ್ಬೆಗೆ ಬಹು ವ್ಯಥೆಯಾಗಿರಬೇಕು. ಅವನ ನೆನಪು ಅಚಂದ್ರಾರ್ಕವಾಗಿ ಉಳಿಯಬೇಕೆಂದು ಆಕೆ ಒಂದು ಯೋಚನೆ ಮಾಡಿದಳು. ಅವಳ ಪ್ರೀತಿಯ ಕವಿಯಾದ, ಆಕೆಯ ಆಶ್ರಯದಲ್ಲಿ ಬೆಳೆದ ಅಚಾರ್ಯರ ಭಕ್ತಶಿಷ್ಯನಾದ, ಇಮ್ಮಡಿ ತೈಲಪನಿಂದ “ಕವಿ ಚಕ್ರವರ್ತಿ” ಬಿರುದು ಪಡೆದ, ಸರಸ್ವತಿ ಭಂಡಾರವನ್ನು ಸೂರೆಗೊಂಡ ಕವಿ ರನ್ನನಿಂದ ಗುರುಗಳ ಹೆಸರಿನ ತೀರ್ಥಂಕರನಾದ ಅಜಿತತೀರ್ಥಂಕರ ಪುರಾಣವನ್ನು ಬರೆಯಿಸಿದಳು. ರನ್ನನಿಗೆ ಗುರುವರ್ಯರ, ಆಶ್ರಯದಾತಳ ಸ್ಮರಣೆಗೆ ಒಳ್ಳೆಯ ಅವಕಾಶ ಸಿಕ್ಕಿದಂತಾಯಿತು. ಅಜಿತಪುರಾಣವನ್ನು ಕವಿ ರಚಿಸಿದ. ಪುರಾಣದ ಕೊನೆಯಲ್ಲಿ ಭರತವಾಕ್ಯ ಹೇಳುವಾಗ ಅತ್ತಿಮಬ್ಬೆಯ ಸ್ತೋತ್ರವನ್ನು ತುಂಬುಹೃದಯದಿಂದ ಮಾಡಿದ್ದಾನೆ.

ಪುಣ್ಯಚರಿತ್ರೆ

ಕೆಲವರು ದಾನದಿಂದ ಶುದ್ಧರಾದರು. ಕೆಲವರು ಸಮೃಕ್ತ್ವದರ್ಶನ ಶುದ್ಧಿಯಿಂದ ಪವಿತ್ರರಾದರು. ಇನ್ನು ಕೆಲವರು ಧರ್ಮಾಚರಣೆಯಿಂದ ಶ್ರೇಷ್ಠರಾದರು. ಮತ್ತೆ ಕೆಲವರು ಶೀಲ ವ್ರತಾಚಾರದಿಂದ ಪುಣ್ಯ ಗಳಿಸಿದರು. ಆದರೆ ಅತ್ತಿಮಬ್ಬೆ ದಾನ, ದರ್ಶನಶುದ್ಧಿ, ಧರ್ಮಶೀಲ, ವ್ರತಾಚಾರ ಈ ಎಲ್ಲ ಗುಣಗಳಿಂದ ಲೋಕದಲ್ಲಿ ಕೀರ್ತಿವಂತಳಾದಳು.

ಹುಟ್ಟಿದ ಮನೆಗೆ, ಸೇರಿದ ಮನೆಗೆ ಕೀರ್ತಿ ತಂದ ಮಹಿಳಾಮಣಿ ಅತ್ತಿಮಬ್ಬೆ, ಭುವನದ ಆರಾಧ್ಯ ದೇವತೆಯಾದ, ಜಿನಭಕ್ತಿ ಶಿರೋಮಣಿಯಾದ, ಜೈನಧರ್ಮದ ಉದ್ಧಾರಕ್ಕೆ ಜೀವನವನ್ನು ಮುಡಿಪಾಗಿಟ್ಟ ಅತ್ತಿಮಬ್ಬೆಯ ಚರಿತ್ರೆ ಪುಣ್ಯಚರಿತ್ರೆ. ಅವಳ ಸ್ಮರಣೆ ದೇವತಾಸ್ವರಣೆ.

ಎಲ್ಲಿ ಜಿನಪೂಜೆ ಆಗಲಿ, ಎಲ್ಲಿ ಜಿನಕಥಾಶ್ರವಣ ನಡೆಯಲಿ, ಎಲ್ಲಿ ಜಿನ ತೀರ್ಥೋತ್ಸವ ನೆರವೇರಲಿ, ಜಿನ ಮುನಿಗಳ ಸಂಘೋತ್ಸವಗಳು ಎಲ್ಲಿಯೇ ಏರ್ಪಾಡಾಗಲಿ, ಜಿನಮಂದಿರಗಳ ಪ್ರತಿಷ್ಠಾಪನೆ ಎಲ್ಲಿಯೇ ಕೂಡಿ ಬರಲಿ, ಜಿನಮಹಾದಾನೋತ್ಸವ ಯಾವ ಮೂಲೆಯಲ್ಲೇ ನಡೆಯಲಿ, ಅಲ್ಲಿಗೆಲ್ಲ ಧನವನ್ನು ಒದಗಿಸುವ ವ್ರತವನ್ನು ಕೈಗೊಂಡ ಹಿರಿಯ ದಾನಿ ದಾನಚಿಂತಾಮಣಿ ಅತ್ತಿಮಬ್ಬೆ.