ಅತಿ ಹೆಚ್ಚು ನೀರು ಯಾವುದಕ್ಕೆ ಬೇಕು ಎಂದು ಕೇಳಿದರೆ ಕರ್ನಾಟಕದವರು “ಭತ್ತ”ಕ್ಕೆ ಎನ್ನುತ್ತಾರೆ.  ಮಹಾರಾಷ್ಟ್ರದವರು “ಕಬ್ಬು” ಎನ್ನುತ್ತಾರೆ.  ಜಲಾಶಯಗಳ ಶೇಕಡಾ ೬೦ ಪಾಲು ನೀರು ಇವುಗಳಿಗೆ ಮೀಸಲು.  ಭತ್ತಕ್ಕಾಗಲಿ, ಕಬ್ಬಿಗಾಗಲಿ ನಿಜವಾಗಿಯೂ ಇಷ್ಟು ನೀರು ಬೇಕೇ? ಅಥವಾ ನಮ್ಮ ಕೃಷಿ ವಿಧಾನ, ನೀರು ನಿರ್ವಹಣೆಯಲ್ಲಿ ತಪ್ಪಿದೆಯೇ? ಕಡಿಮೆ ನೀರು ಬಳಸುವ, ಹೆಚ್ಚು ಫಸಲು ಪಡೆಯುವ ಕೃಷಿ ತಂತ್ರಜ್ಞರನ್ನು ಹುಡುಕುವುದು ಸುಲಭವಲ್ಲ.  ಒಂದೊಮ್ಮೆ ಅವರು ಕಡಿಮೆ ನೀರು ಬಳಸಿ ಕೃಷಿ ಮಾಡುತ್ತಿದ್ದರೂ ಮಾದರಿಯಾಗಿರದೇ, ಜನಪ್ರಿಯರಾಗಿರದೇ ಇರುವ ಸಾಧ್ಯತೆ ಹೆಚ್ಚು.

ಕಡಿಮೆ ನೀರು ಬಳಕೆಯಾಗುವ ತುಂತುರು ನೀರಾವರಿ, ಹನಿ ನೀರಾವರಿ ತಂತ್ರಜ್ಞಾನಗಳೆಲ್ಲಾ ದುಬಾರಿ.  ಹಳೆಯ ಸಾಂಪ್ರದಾಯಿಕ ಪದ್ಧತಿಗಳು ನೆನಪಿಲ್ಲ.  ಇದೆಲ್ಲದರೊಂದಿಗೆ ಯಥೇಚ್ಛ ನೀರು ಇರುವಾಗ ಕಡಿಮೆ ಏಕೆ ಬಳಸಬೇಕು ಎನ್ನುವ ಉಡಾಫೆ.

ಕಬ್ಬು ಕೃಷಿಯಲ್ಲಂತೂ ನೀರುಳಿತಾಯದ ವಿಧಾನಗಳನ್ನು ರೈತರು ಹುಡುಕುತ್ತಲೇ ಇಲ್ಲ.  ಕಾವೇರಿ ನೀರಿಗಾಗಿ ಪ್ರತಿವರ್ಷ ನಡೆಯುವ ಹೋರಾಟ, ಆತ್ಮಹತ್ಯೆ, ಸರ್ಕಾರದ ಪತನ ಇದನ್ನೆಲ್ಲ ಕಡಿಮೆ ಮಾಡಲು ನೀರುಳಿತಾಯದ ಕೃಷಿಯಿಂದ ಮಾತ್ರ ಸಾಧ್ಯ.  ಬೇಡಕಿಹಾಳದ ಸುರೇಶ್‌ ದೇಸಾಯಿಯವರ ವಿಧಾನ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮಾನ್ಯತೆ ಪಡೆದಿದೆ.  ಇನ್ನಷ್ಟು ಹೊಸ ವಿಧಾನಗಳಿದ್ದರೆ ಅದಕ್ಕೂ ಆಹ್ವಾನವಿದೆ.  ಕಬ್ಬು ಬೆಳೆವ ಶ್ರೀಮಂತ ರೈತರೇ, ನೀರುಳಿತಾಯದ ವಿಧಾನಗಳನ್ನು ಅವಿಷ್ಕರಿಸಲು ಇದು ಸವಾಲಾಗಲಿ.

ಕಬ್ಬು ವಾಣಿಜ್ಯ ಅಥವಾ ಹಣದ ಬೆಳೆ.  ಖಾಸಗಿ ರಂಗದಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿದಂತೆ ಕಬ್ಬಿಗೂ ಬೆಲೆ ಹೆಚ್ಚುತ್ತಿದೆ.  ಆದರೆ ಕಬ್ಬನ್ನು ಕೇವಲ ಆರು ತಿಂಗಳಲ್ಲಿ ಬೆಳೆಯಲಾಗದು.  ಪೂರ್ತಿ ಒಂದು ವರ್ಷ ಬೇಕು.  ಅದಕ್ಕಾಗಿಯೇ ಅನೇಕ ಸಕ್ಕರೆ ಕಾರ್ಖಾನೆಗಳು ವರ್ಷದ ಬಹುದಿನಗಳು ಮುಚ್ಚಿಯೇ ಇರುತ್ತವೆ.  ಆದರೂ ಇದು ಲಾಭದಾಯಕ.  ಕಾರಣಗಳು ಹಲವು.  ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಕಬ್ಬು ಕೃಷಿಕರು ಹೆಚ್ಚಿದ್ದು ಸುಳ್ಳಲ್ಲ.  ಅದರೊಂದಿಗೆ ನೀರಿನ ಬಳಕೆಯೂ ಮಿತಿ ಮೀರಿ ಹೆಚ್ಚಿತು.  ತುಂಗಭದ್ರೆಯಾಗಲಿ, ಕಾವೇರಿಯಾಗಲಿ, ಕೃಷ್ಣಾ, ಭೀಮಾ, ಘಟಪ್ರಭ, ಮಲಪ್ರಭ ಹೀಗೆ ಯಾವುದೇ ನದಿಯ ಜಲಾಶಯಗಳ ನೀರೆಲ್ಲಾ ಬರಿದಾಗುವುದೇ ಈ ಕಬ್ಬಿನ ದಾಹಕ್ಕೆ.  ಕಬ್ಬಿಗೆ ನೀರುಣಿಸುವದಕ್ಕಾಗಿಯೇ, ಹನಿ ನೀರಾವರಿ, ತುಂತುರು ನೀರಾವರಿ ಮುಂತಾದವುಗಳೂ ಈಗ ಲಭ್ಯ.  ಒಟ್ಟಾರೆ ವರ್ಷಾವಧಿ ನೀರು ಬೇಕೇ ಬೇಕು.  ಎಷ್ಟು ಬೇಕು ಎಂದು ಕೇಳಬೇಡಿ.  ಎಷ್ಟಿದ್ದರೂ ಬೇಕು.

ನಮ್ಮ ರಾಜ್ಯಕ್ಕಿಂತಲೂ ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆಯುವ ಪ್ರಮಾಣ ಹೆಚ್ಚು.  ಅವರ ನೀರಾವರಿ ಯೋಜನೆಯ ಶೇ.೬೦ ಪಾಲು ನೀರು ಕಬ್ಬಿಗೆ ಮೀಸಲಾಗಿದೆ.  ೫೦೦ ಹೆಕ್ಟೇರು ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಅದಕ್ಕಾಗಿ ನೀರಾವರಿ ವ್ಯವಸ್ಥೆ ಒದಗಿಸಲಾಗಿದೆ.  ಬೇರೆ ಬೆಳೆಗಳಿಗೆ ನೀರು ಇಲ್ಲವೇ ಇಲ್ಲವೆನ್ನುವಷ್ಟು ಅತ್ಯಲ್ಪ.  ಇನ್ನೂ ಡ್ಯಾಂಗಳನ್ನು, ಚಾನೆಲ್‌ಗಳನ್ನು ಅಥವಾ ಏತ ನೀರಾವರಿ ಪದ್ಧತಿಯನ್ನು ಕಬ್ಬು ಬೆಳೆಗಾರರಿಗೆ ಒದಗಿಸುತ್ತಲೇ ಇರುವುದು ಸುಲಭದ ಕೆಲಸವಲ್ಲ.  ಕಬ್ಬು ಬೆಳೆಗಾರರು ಅಲ್ಲಲ್ಲಿ ತಾವೇ ಚಿಕ್ಕ ಚಿಕ್ಕ ಬ್ಯಾರೇಜುಗಳನ್ನು ನಿರ್ಮಿಸಿಕೊಂಡು ನೀರಾವರಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.  ಅದಕ್ಕೆ ಆಗುವ ಖರ್ಚುವೆಚ್ಚಗಳನ್ನೂ ಒಂದೇ ವರ್ಷದಲ್ಲಿ ದುಡಿಯುತ್ತಿದ್ದಾರೆ.  ಆದರೆ ನದಿ, ಹಳ್ಳಗಳು ಇಲ್ಲದ ಒಣಭೂಮಿ ರೈತರ ಪಾಡು ಹೇಗೆ?  ಇಷ್ಟು ಪ್ರಮಾಣದ ನೀರು ಕೊಳವೆಬಾವಿಗಳಿಂದಲೂ ಸಿಗದು.  ಮಳೆ ನಂಬಿ ಕೃಷಿ ಮಾಡಲಾಗದು.

ಅತಿಯಾದ ನೀರು ಬಳಕೆಯಿಂದ ಪರಿಸರದ ಮೇಲೆ ತೀವ್ರವಾಗಿ ಹಾನಿಯಾಗುತ್ತಿದೆ.  ಅಂತರ್ಜಲ ಬತ್ತುತ್ತಿರುವುದು ಒಂದೆಡೆ, ಮಣ್ಣು ಸವಳು-ಜವಳಾಗುತ್ತಿರುವುದು, ಮಣ್ಣು ತನ್ನೆಲ್ಲಾ ಫಲವತ್ತತೆ ಕಳೆದುಕೊಂಡು ದುರ್ಬಲವಾಗಿರುವುದು, ರೋಗಗ್ರಸ್ತವಾಗಿರುವುದು, ಹೀಗೆ ದಿನೇ ದಿನೇ ಕೃಷಿ ಸಮಸ್ಯೆಯಾಗುತ್ತಿದೆ.  ಇದರೊಂದಿಗೆ ಅಧಿಕ ಇಳುವರಿಗೋಸ್ಕರ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯೂ ಸಹ ಭೂಮಿ ಅತಿಯಾಗಿ ನೀರು ಬಯಸಲು ಕಾರಣವಾಗಿದೆ.

ಕಬ್ಬಿಗೆ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ಹೊಲದ ಜೀವವೈವಿಧ್ಯವೇ ನಾಶವಾಗುತ್ತಿದೆ.  ಫಲವತ್ತತೆ ಕಡಿಮೆಯಾದಂತೆ ಹೆಚ್ಚಿದ ರಾಸಾಯನಿಕ ಗೊಬ್ಬರದ ಬಳಕೆಯು ನೀರನ್ನು ಇನ್ನಷ್ಟು ಬಳಸಲು ಕಾರಣವಾಗುತ್ತಿದೆ.  ಇದರಿಂದಾಗಿ ಕಬ್ಬು ರೋಗಪೀಡಿತವಾಗುತ್ತಿದೆ.  ಅದಕ್ಕೋಸ್ಕರ ಕೀಟನಾಶಕಗಳು, ಶಿಲೀಂದ್ರನಾಶಕಗಳು, ರಾಸಾಯನಿಕ ವಿಷಗಳ ಬಳಕೆ ಹೆಚ್ಚುತ್ತಿದೆ.  ಭೂಮಿ, ಇನ್ನಷ್ಟು ವಿಷಮಯವಾಗುತ್ತಿದೆ.

ಕಬ್ಬು ಕಟಾವಾದ ಮೇಲೆ ಉಳಿದ ಎಲೆಗಳು, ಕಸಕಡ್ಡಿಗಳನ್ನು ಹೊಲದಲ್ಲಿಯೇ ಸುಡುವುದರಿಂದ ವಾಯುಮಾಲಿನ್ಯವೊಂದೇ ಅಲ್ಲ, ಮಣ್ಣಿಗೆ ಸೇರಬೇಕಾದ ಪೋಷಕಾಂಶಗಳೆಲ್ಲ ಪೂರ್ತಿ ನಾಶವಾಗುತ್ತಿವೆ.  ಮಣ್ಣು ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದೆ.  ಹೀಗೆ ಕಬ್ಬಿನಿಂದಾಗುತ್ತಿರುವ ಪರಿಸರ ಹಾನಿ ಅತಿ ಹೆಚ್ಚು.

ಇದನ್ನೆಲ್ಲಾ ಪರಿಗಣಿಸಿದ ಬೆಳಗಾವಿ ಜಿಲ್ಲೆಯ ಬೇಡಕಿಹಾಳದ ಪ್ರಗತಿಪರ ಕೃಷಿಕ ಸುರೇಶ್‌ ದೇಸಾಯಿಯವರು ಕಬ್ಬಿನ ಮೇಲೆ ಅನೇಕ ಪ್ರಯೋಗಗಳನ್ನು ನಡೆಸತೊಡಗಿದರು.

ಸುಮಾರು ೧೨ ವರ್ಷಗಳ ಹಿಂದೆ ಸಾವಯವ ಕೃಷಿಗೆ ತೊಡಗಿದ ದೇಸಾಯಿಯವರು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಿಟ್ಟರು.  ಕಬ್ಬಿನ ಎಲೆಗಳು, ಕಸಕಡ್ಡಿಗಳನ್ನು ಸುಡುವುದನ್ನು ಬಿಟ್ಟರು.  ಅದನ್ನೆಲ್ಲಾ ಮರಳಿ ಕಬ್ಬಿನ ಹೊಲಕ್ಕೆ ನೀಡತೊಡಗಿದರು.  ಅದೇ ರೀತಿ ಮುಚ್ಚಿಗೆ ಬೆಳೆ ಹಾಗೂ ಮಿಶ್ರಬೆಳೆಯನ್ನೂ ಬೆಳೆಯತೊಡಗಿದರು.

ಬೆಳಗಾವಿ ಜಿಲ್ಲೆಯ ಹೊಲಗಳೆಲ್ಲಾ ಕಬ್ಬಿಗೆ ಮೀಸಲು.  ನೀರಾವರಿ ಹೊಂದಿರುವ ಪ್ರತಿ ಹೊಲವೂ ನೀರಿನ ಕಾಲುವೆಗಳ ಆಗರ.  ಕಬ್ಬಿಗಾಗಿ ಪ್ರತಿ ಸಾಲಿಗೊಂದು ಕಾಲುವೆಗಳು ಇಲ್ಲಿ ಸಾಮಾನ್ಯ.  ನೀರು ಕೊಟ್ಟಷ್ಟೂ ಇಳುವರಿ ಹೆಚ್ಚುತ್ತದೆನ್ನುವ ನಂಬಿಕೆ.  ದೇಸಾಯಿಯವರಿಗೆ ಅತಿ ನೀರಿನ ಬಳಕೆ ತಪ್ಪಿಸಬೇಕೆಂಬ ಬಯಕೆ.  ಅದಕ್ಕಾಗಿ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ದೇಸಾಯಿಯರಿಗೆ ಮೊದಲು ತಿಳಿದದ್ದು, ಕಬ್ಬಿಗೆ ಅವಶ್ಯಕವಾಗಿ ಬೇಕಾಗಿರುವುದು ನೀರಲ್ಲ!!?  ತೇವಾಂಶ…ಮಾತ್ರ.  ಮಣ್ಣಿಗೆ ಅತಿಯಾಗಿ ನೀರು ಕೊಡುವುದರಿಂದ ಬೇರುಗಳಿಗೆ ಸಿಗುವ ಗಾಳಿ ಕಡಿಮೆಯಾಗುತ್ತದೆ.  ಮಣ್ಣು ಹುಳಿಯಾಗುತ್ತದೆ.  ಬೆಳೆ ರೋಗಪೀಡಿತವಾಗುತ್ತದೆ.  ಇದನ್ನೆಲ್ಲಾ ಸರಿಪಡಿಸುವುದಕ್ಕಾಗಿ ರೈತರು ಕಟಾವಾದ ಮೇಲೆ ಉಳಿದ ಕಸಕಡ್ಡಿಗಳನ್ನೆಲ್ಲಾ ಸೇರಿಸಿ ಬೆಂಕಿ ಕೊಡುವುದು ರೂಢಿಸಿಕೊಂಡಿದ್ದಾರೆ ಎಂಬುದು ತಿಳಿಯಿತು.

ಸಾಂಪ್ರದಾಯಿಕವಾದ ಪದ್ಧತಿಯ ಪ್ರಕಾರ ಕಬ್ಬನ್ನು ಕಾಲುವೆಗಳಲ್ಲಿಯೇ ನೆಡುತ್ತಾರೆ.  ಆಚೆ ಈಚೆ ಬದುಗಳು ಇರುತ್ತವೆ.  ಕಾಲುವೆಗಳಲ್ಲಿ ಪ್ರತಿ ವಾರಕ್ಕೊಮ್ಮೆ ನೀರು ಹಾಯಿಸಲಾಗುತ್ತದೆ.  ದೇಸಾಯಿಯವರು ಈ ಪದ್ಧತಿಯನ್ನು ಮುರಿದರು.

ಈ ರೀತಿ ಕಾಲುವೆಗಳಲ್ಲಿ ಸಸಿಗಳನ್ನು ನೆಡುವ ಬದಲು ಪಕ್ಕದ ಬದುಗಳ ಅಂಚಿನಲ್ಲಿ ನೆಟ್ಟರೆ ಪ್ರತಿ ಸಾಲಿಗೆ ನೀರು ಬಿಡುವ ಬದಲು ಎರಡು ಸಾಲು ಸಸಿಗಳಿಗೆ ಒಂದೇ ಕಾಲುವೆಯಲ್ಲಿ ನೀರು ಹರಿಸಬಹುದೆಂದು ಯೋಚಿಸಿದರು.  ಇದರಿಂದ ನೀರಿನ ಕಾಲುವೆಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಯಿತು.  ಅಂದರೆ ನೀರನ್ನು ನೀಡುವಿಕೆ ಅರ್ಧಪ್ರಮಾಣದಷ್ಟು ತಗ್ಗಿತು.  ಆದರೆ ಬರೀ ಮಣ್ಣಾದರೆ ನೀರನ್ನು ಹಿಡಿದಿಟ್ಟುಕೊಳ್ಳದೇ ಇಂಗಿಸಬಹುದು ಅಥವಾ ಆರಿಹೋಗಬಹುದು.  ಅದಕ್ಕಾಗಿ ದಪ್ಪಗೆ ಹಾಸಿಗೆಯಂತೆ ಸಸಿಗಳ ಸುತ್ತಲೂ ಮುಚ್ಚಿಗೆ ಮಾಡಿದರು.  ಮುಚ್ಚಿಗೆಯ ದಪ್ಪ ಹೆಚ್ಚಿಸಿದಂತೆ ನೀರಿನ ಧಾರಣಶಕ್ತಿಯು ಹೆಚ್ಚಿ ಹತ್ತು ದಿನಗಳು ನೀರಿಲ್ಲದಿದ್ದರೂ ತೇವಾಂಶ ಉಳಿದಿರುವುದು ಕಾಣಿಸಿತು.  ಇಡೀ ಹೊಲವು ಅಧಿಕ ತೇವಾಂಶದಿಂದ ಕೂಡಿದೆ ಎಂಬು ತಿಳಿಯಿತು.  ಇದರಿಂದ ಕಬ್ಬಿನ ಬೆಳವಣಿಗೆಯ ವೇಗವೂ ಹೆಚ್ಚಿತು.

ಸಸಿ ನಾಟಿ ಕ್ರಮ ಬದಲಿಸಿದ್ದರಿಂದ ನೀರಿನ ಬಳಕೆ ಶೇಕಡಾ ೫೦ ಕಡಿಮೆಯಾಯಿತು.  ಅಷ್ಟೇ ಅಲ್ಲ, ಜೈವಿಕ ಅಂಶಗಳು ಮುಚ್ಚಿಗೆಯಲ್ಲಿ ಹೆಚ್ಚಿದ್ದರಿಂದ ಎರೆಹುಳುಗಳು ಹೆಚ್ಚಿದವು.  ಅಷ್ಟೇಕೆ ಅನೇಕ ರೀತಿಯ ಜೀವಿಗಳು ಮುಚ್ಚಿಗೆ ಅಡಿಯಲ್ಲಿ ಕಾಣಿಸುತ್ತಿದ್ದವು.  ಇವೆಲ್ಲಾ ಮುಚ್ಚಿಗೆಯನ್ನೇ ಜೈವಿಕ ಕ್ರಿಯೆಗೊಳಪಡಿಸಿ ಗೊಬ್ಬರವಾಗಿ ಮಾಡುತ್ತಿದ್ದವು.  ಅದಕ್ಕೆ ಪೂರಕವಾಗಿ ಒಮ್ಮೆ ಸೆಗಣಿ, ಬೆಲ್ಲ ಹಾಗೂ ಈಸ್ಟನ್ನು ಸೇರಿಸಿ ನೀಡಿದಾಗ ಇಡೀ ಹೊಲದಲ್ಲಿ “ಬಯೋಫಿಲ್ಮ್” ಪದರ ರೂಪುಗೊಂಡಿತು ಎಂದು ಈಗಲೂ ಇರುವ ಪದರವನ್ನು ನೆಲದಡಿಯಿಂದ ಬಗೆದು ತೋರಿಸುತ್ತಾರೆ ಸುರೇಶ್‌ ದೇಸಾಯಿ.

ಬಯಲುಸೀಮೆಯ ಕಪ್ಪು ಮಸರಿ ಮಣ್ಣಿನ ಹೊಲದಲ್ಲಿ ಮಳೆ ಬಂದಾಗ ಕಾಲಿಟ್ಟರೆ ಕಾಲಿಗೆ ನಾಲ್ಕಿಂಚು ಮಣ್ಣು ಮೆತ್ತಿಕೊಳ್ಳುತ್ತದೆ.  ಪಕ್ಕದ ಹೊಲದ ಬದುಗಳ ಮೇಲೆ ನಡೆದು ಜಾರುತ್ತಾ, ಬೀಳುತ್ತಾ, ಕಾಲುಪೂರ್ತಿ ಮಣ್ಣು ಮೆತ್ತಿಕೊಂಡರೂ ದೇಸಾಯಿಯವರ ಹೊಲಕ್ಕೆ ಬರುತ್ತಿದ್ದಂತೆ ಮೆತ್ತನೆಯ ಹಾಸಿಗೆಯ ಮೇಲೆ ಕಾಲಿಟ್ಟ ಅನುಭವ.  ಹೊಲ ಪೂರ್ತಿ ಬರಿಗಾಲಿನಲ್ಲಿ ಅಡ್ಡಾಡಿದರೂ ಮಣ್ಣು ಸ್ವಲ್ಪವೂ ಮೆತ್ತಲಿಲ್ಲ.  ಕಾಲಿಟ್ಟ ಕಡೆಯಲ್ಲಿ ಅರ್ಧ ಇಂಚು ಕೆಳಕ್ಕೆ ಕುಸಿಯುವಷ್ಟು ಮುಚ್ಚಿಗೆ.  ಹೊಲದ ಮಧ್ಯೆ ಒಂದು ವಿಶಾಲ ಬಾವಿ.  ಬಾವಿಯ ಸುತ್ತಲೂ ಸಾಕಷ್ಟು ಮರಗಳು, ಬಿದಿರು ಇತ್ಯಾದಿ.  ಬಾವಿಯ ನೀರು ಬತ್ತಿದ ದಾಖಲೆಯೇ ಇಲ್ಲ ಎನ್ನುವ ದೇಸಾಯಿಯವರಿಗೆ ನೀರು, ಕೃಷಿಗೆ ಸಮಸ್ಯೆಯಾಗಿಯೇ ಇಲ್ಲ.  ಈಗ ಈ ರೀತಿಯ ನಾಟಿಯಿಂದ ಹೊಲ ಪೂರ್ತಿ ತೇವಾಂಶಭರಿತವಾಗಿ ನೀರು ಮುಟ್ಟದ ಜಾಗವೇ ಇಲ್ಲವೆಂಬಂತಾಯಿತು.  ನೀರು ಹೊಲದ ಸುತ್ತಲೂ ಹರಡಿದಂತಾಯಿತು.

ಮತ್ತೆ ಮೂರು ತಿಂಗಳು ಕಳೆದ ಮೇಲೆ ದೇಸಾಯಿಯವರಿಗೆ ಮತ್ತಷ್ಟು ಆಲೋಚನೆ ಬಂತು.  ನೀರಿನ ಕಾಲುವೆಗಳನ್ನು ಇನ್ನಷ್ಟು ಕಡಿಮೆ ಮಾಡಿದರೆ ಹೇಗೆ/  ನೀರುಳಿತಾಯವೊಂದೇ ಅಲ್ಲ, ಕಬ್ಬಿನ ಬೇರಿನ ಶಕ್ತಿಯೂ ಹೆಚ್ಚಬಹುದಲ್ಲಾ ಎನ್ನುವ ಏನೆಲ್ಲಾ ಚಿಂತನೆಗಳು ಬಂದದ್ದೇ ಕೆಲಸ ಪ್ರಾರಂಭಿಸಿಯೇಬಿಟ್ಟರು.  ಮೂರು ಕಾಲುವೆಯಲ್ಲಿ ಮಧ್ಯದ ಕಾಲುವೆಯನ್ನು ಜೈವಿಕ ಮುಚ್ಚಿಗೆಯಿಂದ ಮುಚ್ಚಿಯೇಬಿಟ್ಟರು.  ಸಾಮಾನ್ಯವಾಗಿ ಪ್ರತಿ ಸಾಲಿಗೂ ಒಂದು ನೀರಿನ ಕಾಲುವೆ ಬೇಕಾದರೆ ಇವರು ಎರಡು ನೀರಿನ ಕಾಲುವೆಗಳ ಮಧ್ಯೆ ನಾಲ್ಕು ಸಾಲು ಕಬ್ಬಿನ ಸಸಿಗಳನ್ನು ಅಳವಡಿಸಿದರು, ಕಬ್ಬುಗಳು ಹೆದರಲಿಲ್ಲ, ಸೊರಗಲಿಲ್ಲ, ಒಣಗಲಿಲ್ಲ, ನೀರಿಗಾಗಿ ಕಾತರಿಸಲೂ ಇಲ್ಲ, ಮುಚ್ಚಿಗೆಯಿಂದಾಗಿ ತೇವಗೊಂಡ ನೀರೆಲ್ಲಾ ಬೆಳಗಿನ ಬಿಸಿಲಿಗೆ ನೀರಾವಿಯಾಗುತ್ತಿತ್ತು.  ಇಡೀ ಹೊಲದಲ್ಲಿ  ಮುಸುಕಿದ ನೀರಾವಿಯಿಂದ ನೀರನ್ನು ಹೀರಿಕೊಳ್ಳತೊಡಗಿದವು.  ದಕ್ಷಿಣೋತ್ತರವಾಗಿ ಇದ್ದ ಸಾಲುಗಳಿಂದಾಗಿ ಸಿಗುವ ಸೂರ್ಯನ ಬೆಳಕು, ಗಾಳಿಯು ಹೊಲದೊಳಗೊಂದು ಅಗೋಚರ ಹಸಿರುಮನೆಯನ್ನು ಸೃಷ್ಟಿಸಿತ್ತು.  ಇದರಿಂದ ಹರಿಯುವ ನೀರಿಗಿಂತಲೂ, ಅದರಿಂದಾದ ನೀರಾವಿ ಕಬ್ಬಿಗೆ ಅಗತ್ಯ ನೀರನ್ನು ನೀಡಿತ್ತು.

ಆದರೆ ತಕ್ಷಣದಲ್ಲಿ ಈ ರೀತಿ ಕಾಲುವೆಗಳನ್ನು ಕಡಿಮೆ ಮಾಡಬಾರದು ಎನ್ನುವ ಸೂಚನೆ ದೇಸಾಯಿಯವರು ನೀಡುತ್ತಾರೆ.  ಹೊಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಹೊಂದಿರಬೇಕು.  ಅಂದರೆ ಮುಚ್ಚಿಗೆಯಾಗಿ ಸಾವಯವ ವಸ್ತುಗಳನ್ನು ತುಂಬಿರಬೇಕು.  ಆಮೇಲೆ ಮೊದಲ ಹಂತದಲ್ಲಿ ಎರಡು ಸಾಲಿನ ಮಧ್ಯೆ ಕಾಲುವೆ ನಿರ್ಮಿಸಿ ನೀರಿನ ಬಳಕೆ ಶೇ.೫೦ರಷ್ಟು ಕಡಿಮೆ ಮಾಡಬೇಕು.  ಹೊಲ ಸಾಕಷ್ಟು ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದ್ದರೆ ಮಾತ್ರ ಮುಂದಿನ ಹಂತದ ನೀರು ನಿರ್ವಹಣೆ ಮಾಡಬಹುದು, ಇಲ್ಲದಿದ್ದರೆ ಇಷ್ಟಕ್ಕೇ ನಿಲ್ಲಿಸಿದರೂ ಆದೀತು.

ದೇಸಾಯಿಯವರ ಹೊಸ ನೀರಾವರಿ ಪದ್ಧತಿಯಿಂದ ಕಬ್ಬಿನ ಬೇರುಗಳು ನೀರನ್ನು ಬಯಸಿ ಸಾಕಷ್ಟು ದೂರ ಬೆಳೆದಿದ್ದನ್ನು ಗಮನಿಸಿದಾಗ, ಕಬ್ಬು ಇನ್ನಷ್ಟು ಸದೃಢವಾಗುವುದಕ್ಕೆ ಇದು ಪೂರಕವೆಂದು ತಿಳಿಯಲಾಯಿತು.  ಎರೆಹುಳು ಹೆಚ್ಚಿದ್ದು, ಮಣ್ಣು ಇನ್ನಷ್ಟು ಫಲವತ್ತಾದದ್ದು ಹಾಗೂ ತೇವಾಂಶ ಸದಾ ಇರುವುದು ಹೊಲಕ್ಕೆ ಪುಷ್ಠಿ ದೊರೆತಂತಾಯಿತು.  ಕೊನೆಗೆ ಇಳುವರಿಯಲ್ಲೂ ಸಮಾಧಾನ ಸಿಕ್ಕಾಗ ಹೊಸ ನೀರಾವರಿ ಪದ್ಧತಿ ಯಶಸ್ವಿಯೆಂದು ತೀರ್ಮಾನಿಸಲಾಯಿತು.  ಊರಿನ ಅನೇಕ ರೈತರು ಯಥೇಚ್ಛ ನೀರು, ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಕೀಟನಾಶಕ ಹೀಗೆ ಏನೆಲ್ಲಾ ಬಳಸಿ ಒಂದು ಎಕರೆಗೆ ಸುಮಾರು ೬೦ ಟನ್ ಕಬ್ಬು ಬೆಳೆಯುತ್ತಾರೆ.  ಅವರಿಗಿಂತ ಶೇ.೭೫ರಷ್ಟು ಕಡಿಮೆ ನೀರು, ಯಾವುದೇ ಗೊಬ್ಬರವಿಲ್ಲದೆ, ಕೀಟನಾಶಕಗಳಿದಲ್ಲದೆ ಒಂದು ಎಕರೆಗೆ ಸುಮಾರು ೪೦ ಟನ್‌ ಕಬ್ಬು ಸಿಗುವುದು, ಜೊತೆಗೆ ಮಿಶ್ರಬೆಳೆಗಳ ಆದಾಯ ಇವೆಲ್ಲಾ ಎಷ್ಟೆಲ್ಲಾ ರೀತಿಯಲ್ಲಿ ಲಾಭವೇ ತಾನೇ?

ಸ್ವಾಭಾವಿಕವಾಗಿ ಎರಡನೇ ಕೂಳೆ ಬೆಳೆ ಪಡೆದ ಮೇಲೆ ಹೊಲವನ್ನೆಲ್ಲಾ ಒಮ್ಮೆ ಸುಡುವುದು ಸಾಮಾನ್ಯ.  ಮತ್ತೆ ಕಬ್ಬಿನಬೀಜ, ನಾಟಿ ಹೀಗೆ ಸಾವಿರ ರೂಪಾಯಿಗಳ ಖರ್ಚು.

ದೇಸಾಯಿಯವರದು ಈಗಲೇ ಆರನೇ ಕೂಳೆಬೆಳೆ ಕಟಾವಾಗಿದೆ ಹಾಗೂ ೧೨ಕ್ಕೂ ಹೆಚ್ಚು ಕೂಳೆಬೆಳೆ ಪಡೆಯುವ ಯೋಜನೆಯಿದೆ.  ಯಾವುದೇ ರೀತಿಯ ಖರ್ಚಿಲ್ಲದೇ ಕೇವಲ ಆದಾಯ ಮಾತ್ರ ಸಿಗುತ್ತಿದೆ.  ಅದೂ ಪ್ರತಿಸಾರಿಯೂ ಸುಮಾರು ೪೦ ಟನ್‌ ಕಬ್ಬು, ಆಳು ಲೆಕ್ಕದಲ್ಲೂ ಶೇಕಡಾ ೩೦ರಷ್ಟು ಉಳಿತಾಯ.  ಹೀಗೆ ವಾರ್ಷಿಕ ಬೆಳೆಯಾಗಿದ್ದ ಕಬ್ಬು ಇವರ ಹೊಲದಲ್ಲಿ ಬಹುವಾರ್ಷಿಕ ಬೆಳೆಯಾಗಿದೆ.  ಒಂದು ಟನ್‌ ಕಬ್ಬಿಗೆ ೧೨೦ ಕಿಲೋಗ್ರಾಂ ಸಕ್ಕರೆ ಸಿಗುತ್ತಿದೆ.  ಒಂದು ಟನ್‌ ಕಬ್ಬಿಗೆ ಸುಮಾರು ೧೭೨ ಕಿಲೋಗ್ರಾಂ ಬೆಲ್ಲ ಸಿಗುತ್ತದೆ.  ಸಾಂಪ್ರದಾಯಿಕ ಹೊಲಗಳಲ್ಲಿ ಒಂದು ಟನ್‌ ಕಬ್ಬಿಗೆ ಕೇವಲ ೧೦೦ಕಿಲೋಗ್ರಾಂ ಸಕ್ಕರೆ ಮಾತ್ರ ಸಿಗುತ್ತದೆ.