ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಅಧ್ಯಕ್ಷರು

ಕನ್ನಡ ಪುಸ್ತಕ ಪ್ರಾಧಿಕಾರವು ನಾಡಿನ ಎಲ್ಲ ಬಗೆಯ ಜ್ಞಾಣ ಸಂಪತ್ತನ್ನು ಉಳಿಸಿ-ಬೆಳೆಸುವ ತುಂಬು ಹಂಬಲವನ್ನು ಹೊತ್ತಿದೆ. ಇದು ಒಂದು ಬಗೆಯಲ್ಲಿ ಲೇಖಕ, ಪ್ರಕಾಶಕ, ಓದುಗ ಈ ಮೂವರ ಜತೆ ಸುಸಂಬದ್ಧವಾದ ಅಂತರ್ ಜಾಲವನ್ನು ಪೋಷಿಸುವ ಸಾಂಸ್ಕೃತಿಕ ಚೈತನ್ಯದ ಸಂಸ್ಥೆಯಾಗಿದೆ. ನಮ್ಮ ನಾಡಿನ ಜ್ಞಾನ ಸಂಪತ್ತು ಅಕ್ಷಯವಾದುದು. ನಾವು ಬಗೆದಷ್ಟು ಮುಗಿಯದ ತವನಿಧಿ ಇದು. ಈ ನಿಧಿಯ  ರಕ್ಷಣೆ-ಪಾಲನೆ ಮತ್ತು ಪೋಷಣೆ ಎಂದೆಂದೂ ಬೇಕು. ಅಕ್ಷರನಿಧಿಯು ಎಂದೆಂದೂ ಅಳಿಯುವುದಿಲ್ಲ. ಈ ನಿಧಿಗೆ ಒಡೆಯರಾದವರು ನಮ್ಮ ಓದುಗರು. ಪಾರಂಪರಿಕ ಜ್ಞಾನಕ್ಕೂ ಆಧುನಿಕ ಕಾಲದ ಜ್ಞಾನಕ್ಕೂ ಓದುಗರೇ ವಾರಸುದಾರರು. ಈ ವಾರಸುದಾರರಿಗೆ ನಿಧಿಯ ಮೌಲ್ಯವನ್ನೂ, ಮಹತ್ವವನ್ನೂ ತೆರೆದು ತೋರಿಸುವುದು ಪುಸ್ತಕ ಪ್ರಾಧಿಕಾರದ ಕರ್ತವ್ಯಗಳಲ್ಲಿ ಒಂದೆಂದು ನಾನು ತಿಳಿದಿದ್ದೇನೆ. ನಮ್ಮ ಕರ್ತವ್ಯವನ್ನು ನಾವು ಮಾಡುವುದು ಬೇಡವೇ? ಈ ಕರ್ತವ್ಯಕ್ಕೆ ಹಲವು ದಾರಿಗಳಿವೆ. ಕೇವಲ ಪ್ರಕಟಣೆ ಮಾತ್ರ ನಮ್ಮ ಏಕೋದ್ದೇಶ್ಯವಲ್ಲ. ಪ್ರಕಟಣೆಯ ಜೊತೆಗೆ ಅಕ್ಷರ ಸಂಸ್ಕೃತಿ ದೀಪಗಳನ್ನು ಕತ್ತಲೆಯ ಮೂಲೆಮುಡುಕುಗಳಲ್ಲಿ ಇಡುವುದು ನಮ್ಮ ಕರ್ತವ್ಯದ ಭಾಗವೇ ಆಗಿದೆ. ಪ್ರತಿಯೊಂದು ತಾಲ್ಲೂಕುಗಳನ್ನುಇಂಥ ದೀಪಗಳಿಂದ ಬೆಳಗಿಸಬೇಕಾಗಿದೆ. ನಗರ, ಪಟ್ಟಣ ಪ್ರದೇಶಗಳು ಅಕ್ಷರ ಬೆಳಕಿನಿಂದ ಬೆಳಗಿವೆ. ಆದರೆ, ದೂರದೂರದ ಕತ್ತಲೆಯ ಜಾಗಗಳೂ ಅಜ್ಞಾತವಲಯಗಳೂ ಬೆಳಗುವುದು ಪ್ರಜಾಪ್ರಭುತ್ವದ ಕಾಲದಲ್ಲಿ ಅತಿಮುಖ್ಯವಲ್ಲವೆ? ಈಗ ನಮ್ಮೆಲ್ಲರ ಕಣ್ಣು ಮತ್ತು ಮನಸ್ಸು ಗ್ರಾಮ-ಗ್ರಾಮಾಂತರಗಳಿಗೂ ತಾಲ್ಲೂಕು – ತಾಲ್ಲೂಕಾಂತರಗಳ ಕಡೆಗೂ ಚಾಚಬೇಕಾಗಿದೆ. ಅಲ್ಲಿರುವ ಸಹಸ್ರಾರು ಜ್ಞಾನದಾಹಿಗಳ ಮನಸ್ಸನ್ನು ಅರಳಿಸುವ, ಅಕ್ಷರಲೋಕಕ್ಕೆ ಕರೆದೊಯ್ಯುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ಪುಸ್ತಕ ಪ್ರಕಟಣೆಯ ಜತೆಗೆ, ಪುಸ್ತಕ ಮೇಳ, ಪುಸ್ತಕ ಜಾತ್ರೆ ಆಗುವುದು ಅಗತ್ಯ. ಇದು ನೆರವೇರಿದಾಗ ಕನ್ನಡ ಪುಸ್ತಕ ಪ್ರಾಧಿಕಾರ ಎಂಬ ಮಾತಿಗೆ ಬೆಲೆ ಬರುತ್ತದೆ; ಅದಕ್ಕೊಂದು ಸಾಂಸ್ಕೃತಿಕ ಮೌಲ್ಯ ಪ್ರಾಪ್ತವಾಗುತ್ತದೆಂಬ ನಂಬುಗೆ ನನ್ನದು!

ಜ್ಞಾನದ ಹಂಬಲ ಪ್ರತಿಯೊಬ್ಬರಿಗೂ ಉಂಟು! ಈ ಜ್ಞಾನವು ಹಲವು ರೂಪಗಳಲ್ಲಿ ತೋರುತ್ತದೆ. ‘ಜ್ಞಾನದ ಬಲದಿಂದ ಅಜ್ಞಾನದ ಕೇಡು’ ಎಂದು ಬಸವಣ್ಣನವರು ಹೇಳಿದ್ದುಂಟು! ಇದು ಆಧುನಿಕ ಜ್ಞಾನಕ್ಕೂ ಅವಲಂಬಿಸುತ್ತದೆ. ಇಪ್ಪತ್ತನೆಯ ಶತಮಾನ ಕಳೆದು ಹೊಸ ಸಹಸ್ರಮಾನದಲ್ಲಿರುವ ನಮಗೆ ಹಲವು ಬಗೆಯ ತೊಡಕುಗಳಲ್ಲಿ ಮತ್ತು ಸಂಕಟಗಳಲ್ಲಿ ನಾವಿದ್ದೇವೆ. ಒಂದು ಕಡೆ ಇಪ್ಪತ್ತನೆಯ ಶತಮಾನ ಸಾಹಿತ್ಯಕವಾಗಿ ಸಮೃದ್ಧವಾದ ಕಾಲವೇನೋ ನಿಜ. ಮೂಲಜ್ಞಾನದ ಬೇರುಗಳು ಹೊರಹೊಮ್ಮಿ ಹಲವು ಬಗೆಯ ವೈವಿಧ್ಯಗಳಿಂದ ವಿರಾಜಮಾನವಾದ ಕಾಲವೂ ಆಗಿದೆ! ಸಾಹಿತ್ಯವಾಗಿ ಎಷ್ಟು ಸಮೃದ್ಧವೋ ಸಾಂಸ್ಕೃತಿಕವಾಗಿಯೂ ಅಷ್ಟೇ ಬಗೆಯ ವಾಗ್ವಾದ ಮತ್ತು ಸಂವಾದಗಳಿಂದ ಕೂಡಿದ ಕಾಲವಾಗಿದೆ! ಅನೇಕ ತಳವರ್ಗದ ಜನಸ್ಥಾನಗಳು ಮೊದಲ ಬಾರಿಗೆ ಅಕ್ಷರಸೂರ್ಯನಿಗೆ ನಮಸ್ಕರಿಸಿದ್ದುಂಟಷ್ಟೆ. ಜ್ಞಾನಾರ್ಜನೆ ಎಂಬುದುಎಂದು ಶೈಕ್ಷಣಿಕ ಶಿಸ್ತಾಗಿದೆ. ಆದರೆ, ಇದು ಸಮಾಜದ ಅವಿರತ ಹಾಗೂ ಸದಾಕಾಲವೂ ಹಂಬಲಿಸುವ ಆಶಯ ಆಗಬೇಕು. ಈ ಆಶಯ, ಹಂಬಲ ಹಲವು ಬಗೆಯ ಸಂಕೇತಗಳಲ್ಲೊ ರೂಪಕಗಳಲ್ಲೊ ಕಾಣಿಸುತ್ತದೆ. ಪಾರಂಪರಿಕ ಜ್ಞಾನ ಮತ್ತು ಆಧುನಿಕ ಜ್ಞಾನ ಇವೆರಡು ಬೇರುಗಳನ್ನು ಕಸಿ ಹಾಕುವ ಅಗತ್ಯ ನಮ್ಮ ಮುಂದಿದೆ. ಪಾರಂಪರಿಕ ಜ್ಞಾನವು ಕೇವಲ ಸಾಹಿತ್ಯಕ ಸಮೃದ್ಧತೆಯ ಕಡೆಗೆ ಮಾತ್ರ ಬೊಟ್ಟು ಮಾಡಿ ತೋರಿಸುತ್ತಿದೆಯೆಂದು ನಾವು ತಿಳಿಯುವಂತಿಲ್ಲ. ಸಮಾಜ-ಸಮುದಾಯಗಳಿಗೆ ಬೇಕಾದ ಹಲವು ಬಗೆಯ ಜ್ಞಾನದ ಕೌಶಲ್ಯಗಳು ನಮ್ಮಲ್ಲಿ ಹಿಂದೆ ಇದ್ದುವು. ೧೮೨೦ರಲ್ಲಿ ಅತ್ಯುತ್ತಮ ತಾಂತ್ರಿಕಜ್ಞಾನ ನಮ್ಮಲ್ಲಿದ್ದುದನ್ನು ಹೇಗೋ ಈಗ ಉಳಿದುಕೊಂಡಿರುವ ವಿಲಿಯಂ ಆಯಡಂ ವರದಿಗಳಲು ನಮಗೆ ತಿಳಿಸುತ್ತವೆ. ಆದರೆ, ನಾವಿಂದು ಈ ಬಗೆಯ ಸ್ಮತಿಗಳಿಂದ ಹೊರಗುಳಿದಿದ್ದೇವೆ. ನಮ್ಮ ನಮ್ಮ ಸಂಸ್ಕೃತಿ ಸಮುದಾಯಗಳು ಪಡೆದಿರುವ ಜ್ಞಾನ ಕೌಶಲ್ಯ ಜ್ಞಾನಸಂಪತ್ತನ್ನು – ಈ ಕಾಲದ ಅಗತ್ಯಗಳಿಗೆ ತಕ್ಕಂತೆ ಮರುಜೋಡಣೆ ಮಾಡುವ ಅಗತ್ಯವಿದೆ. ಇಲ್ಲದೆ ಹೋದರೆ, ಕಳೆದು ಹೋದ ಕಾಲವು ನಿರ್ವಾತವಾಗಿತ್ತೆಂದೊ ಬರುವ ಕಾಲ ಈ ನಿರ್ವಾತವನ್ನು ತುಂಬುವ ಹಂಬಲವನ್ನು ಹೊತ್ತಿರುವುದೆಂದೊ ತಿಳಿಯುವ ಕ್ಲೈಬ್ಯದಲ್ಲಿ ಮುಳುಗಬೇಕಾಗುತ್ತದೆ! ಈ ಅಜ್ಞಾನದಿಂದ ನಾವು ಎಚ್ಚರಗೊಳ್ಳಬೇಕಾಗಿದೆ. ಹೀಗೆ ಎಚ್ಚರಿಸುವ ಕಾರ್ಯವನ್ನು ನಾಡಿನ ಹಲವಾರು ಸಾಂಸ್ಕೃತಿಕ ಸಂಸ್ಥೆಗಳು ಮಾಡುತ್ತಿವೆ. ಆದರೆ, ಕನ್ನಡ ಪುಸ್ತಕ ಪ್ರಾಧಿಕಾರವು ತನ್ನದೇ ಆದ ಕೆಲವು ನಿರ್ದಿಷ್ಟ ಯೋಜನೆ ಮತ್ತು ಪ್ರಕಟಣ ನೀತಿಸಂಹಿತೆಯಿಂದ ಹೊಸ ಆಕಾರವನ್ನು ಪಡೆಯುವ ಹಂಬಲವನ್ನು ಹೊತ್ತಿದೆ.

ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಾರಂಭಗೊಂಡು ಹತ್ತು ವರ್ಷಗಳು ಸಂದಿವೆ. ಅದು ಪ್ರಾರಂಭಗೊಂಡಾಗ ಹಲವು ಮಾಲೆಗಳನ್ನು ಕಾಲಕಾಲಕ್ಕೆ ಪ್ರಾರಂಭಿಸಿತು. ಈ ಬಗೆಯ ಮಾಲೆಗಳಲ್ಲಿ ಜಾಗತಿಕ ಚಿಂತಕರ ಮಾಲೆಯೂ ಒಂದು. ಇದೊಂದು ಹೊಸ ಕ್ರಮ, ನಮ್ಮ ಕಾಲಕ್ಕೆ ತಕ್ಕಂತೆ ಹೊಸಹೊಸ ಚಿಂತನೆಗಳಿಗೆ ಅನುಕೂಲವಾಗಿ ಜಾಗತಿಕ ಚಿಂತಕರನ್ನು ಕುರಿತು ಯೋಚಿಸುವುದೂ ತಿಳಿಯುವುದೂ ಅಗತ್ಯವಷ್ಟೆ. ವಿಶ್ವದ ಪ್ರತಿಯೊಬ್ಬ ಚಿಂತಕನನ್ನು ಸಿದ್ಧಾಂತಿಯನ್ನು ನಮ್ಮ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ನಾವು ಓದುತ್ತೇವೆ. ಅವರೊಬ್ಬ ತತ್ತ್ವಜ್ಞಾನಿಯೊ, ವಿಜ್ಞಾನಿಯೊ, ಸಮಾಜಪ್ರಜ್ಞನೊ, ಭಾಷಾವಿಜ್ಞಾನನೊ, ಯಾರಾದರು ಆಗಿರಬಹುದು. ಆದರೆ, ಅವರು ನಡೆದ ಹಾದಿ ನಮಗೆ ಕನ್ನಡಿಯಾಗಬೇಕು ಅಷ್ಟೆ.

ಡಾ. ಎ.ಓ. ಆವಲಮೂರ್ತಿ ಭೌತಶಾಸ್ತ್ರದ ಅಧ್ಯಾಪಕರು. ಅವರು ಕನ್ನಡದಲ್ಲಿ ಈಗಾಗಲೇ ಹಲವು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಬರೆದಿದ್ದಾರೆ. ಅವು ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಬೆಲೆಯುಳ್ಳ ಕೊಡುಗೆಗಳೆನಿಸಿವೆ. ಭೌತಶಾಸ್ತ್ರದ ವಿವಿಧಾಂಗಗಳ ಬಗೆಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳಿಲ್ಲ. ಆ ಕೊರೆತೆಯನ್ನು ನೀಗಿಸುವಲ್ಲಿ ಈ ಪುಸ್ತಕವು ಒಂದು ನಿರ್ದಿಷ್ಟ ಹೆಜ್ಜೆಯಾಗಿದೆ.

ನಾವು ಕುಡಿಯುವ ನೀರು ಒಂದು ಪದಾರ್ಥ. ಆದರೆ, ಇಂದು ಅದು ಸಾಮಾಜಿಕ ಪದಾರ್ಥವಾಗಿದೆ. ಭೌತ ಪದಾರ್ಥ ಪ್ರಪಂಚದ ನೀರಿನ ನೆಲೆಯನ್ನು ಹಿಡಿದು ಅದರ ಸ್ವರೂಪ, ಗುಣ, ವಿಸ್ತಾರ,ಬಳಕೆ, ಅನ್ವಯಗಳನ್ನು ತುಂಬಾ ಔಚಿತ್ಯವಾಗಿ ಡಾ. ಎ.ಓ. ಆವಲಮೂರ್ತಿ ಅವರು ನಿರೂಪಿಸಿದ್ದಾರೆ. ನೀರಿನ ಪರಿಕಲ್ಪನೆಯನ್ನು ಕೋಷ್ಟಕಗಳ ಮೂಲಕವೂ, ಚಿತ್ರಗಳ ಮೂಲಕವೂ ತಿಳಿಯಾಗಿ ಬಿಡಿಸಿ ವಿವರಿಸಿದ್ದಾರೆ. ಅವರ ಬರೆಹವು ಖಚಿತವೂ ಹಾಗೂ ನಿರ್ದಿಷ್ಟವೂ ಆಗಿದೆ. ಈ ಪುಸ್ತಕ ಮಾಹಿತಿ ಮತ್ತು ವಿವರಣೆಗಳ ಮೇಲೆ ನಿಂತಿದೆ. ಈ ಬಗೆಯ ಪುಸ್ತಕಗಳು ವಿಜ್ಞಾನ ಸಾಹಿತ್ಯಕ್ಕೂ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ವಿಜ್ಞಾನಾಸಕ್ತರಿಗೂ ಏಕಕಾಲಕ್ಕೆ ಉಪಯೋಗವಾಗುತ್ತವೆಂಬ ನಂಬುಗೆ ನಮ್ಮದು. ಈ ಬಗೆಯ ಪುಸ್ತಕ, ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹೊರಬರಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಲೇಖಕರನ್ನು ನಾನು ಅಭಿನಂದಿಸಬೇಕು. ಹಿಂದಿನ ಸಂಪಾದಕ ಸಮಿತಿ ಹಾಗೂ ವಿಭಾಗ ಸಂಪಾದಕರು ಹಸ್ತಪ್ರತಿಯನ್ನು ಪರಿಶೀಲಿಸಿ ನೀಡಿರುತ್ತಾರೆ. ಈ ಕಾರ್ಯಕ್ಕಾಗಿ ನಮ್ಮ ಕೃತಜ್ಞತೆಗಳು ಅವರಿಗೆ ಸಲ್ಲುತ್ತವೆ. ಕನ್ನಡ ಜನ ಪ್ರೀತಿಯಿಂದ ಈ ಪುಸ್ತಕವನ್ನು ಸ್ವಾಗತಿಸುತ್ತಾರೆಂಬ ನಂಬುಗೆ ನಮ್ಮದು.