ನೀರು ಪ್ರಾಣಾಧಾರಂ

ನೀರು ಮನುಷ್ಯನ ಒಂದು ಪ್ರಾಣಾಧಾರ ವಸ್ತು. ಮನುಷ್ಯ ತಿಂಗಳಾದರೂ ಆಹಾರವಿಲ್ಲದೆ ಬದುಕಿರಬಲ್ಲ. ಆದರೆ ನೀರಿಲ್ಲದೆ ಒಂದೆರಡರು ದಿನಗಳಿಗಿಂತ ಹೆಚ್ಚು ಕಾಲ ಅವನು ಬದುಕಿರಲಾರ. ಮನುಷ್ಯ ಬದುಕುಳಿಯಲು ಗಾಳಿಯನ್ನು ಬಿಟ್ಟರೆ ಅತ್ಯಂತ ಅವಶ್ಯಕ ವಸ್ತು ನೀರು. ಮನುಷ್ಯನಿಗಷ್ಟೆ ಅಲ್ಲ ಈ ಗ್ರಹದ ಮೇಲಿನ ಸಕಲ ಜೀವರಾಶಿಗಳಿಗೂ ನೀರು ಪ್ರಾಣದಾಯಿ. ನೀರಿಲ್ಲದಿದ್ದರೆ ಪಶು ಪಕ್ಷಿಗಳು ಬಾಯಾರಿ ಸತ್ತು ಹೋಗುತ್ತವೆ; ಸಸ್ಯಗಳು ಒಣಗಿ ನೆಲ ಕಚ್ಚುತ್ತವೆ.

ಜೀವ ಉಗಮ ಆದದ್ದೇ ಜಲೀಯ ವಾತಾವರಣದಲ್ಲಿ; ಮೂರೂವರೆ ಬಿಲಿಯನ್‌ ವರ್ಷಗಳ ಹಿಂದೆ ಪಾಚಿ ಮತ್ತು ಬ್ಯಾಕ್ಟೀರಿಯಾಗಳಂಥ ಏಕಕೋಶ ಜೀವಿಗಳು ಮೊದಲು ಕಣ್ಣು ಬಿಟ್ಟಿದ್ದೆ ನೀರಿನಲ್ಲಿ ತಮ್ಮ ಬದುಕಿಗಾಗಿ ಜೀವಿಗಳು ಅಂದಿನಿಂದ ಇಂದಿನವರೆಗೆ, ತಮ್ಮ ವಿಕಾಸದುದ್ದಕ್ಕೂ, ನೀರನ್ನು ಬಹುವಾಗಿ ಅವಲಂಬಿಸಿವೆ. ನೀರಿಲ್ಲದೆ ಯಾವ ಜೀವರಾಶಿಯೂ ಇಲ್ಲ. ಜೀವಿಗಳ ಉದ್ಭವದಿಂದ ಹಿಡಿದು ಅವುಗಳ ಬದುಕು, ಸಂತಾನ, ವಿಕಾಸ ಮತ್ತು ಪ್ರಸರಣದವರೆಗೆ ಎಲ್ಲದರಲ್ಲೂ ನೀರು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ನೀರಿಗೊಂದು ಅದ್ಭುತ ಶಕ್ತಿ ಇದೆ. ನೀರಿದ್ದಲ್ಲಿ ಜೀವ ‘ಹುಟ್ಟು’ತ್ತದೆ. ಮೊದಲು ಮಣ್ಣಿನಲ್ಲಿ ವಿಲಿವಿಲಿಗುಟ್ಟುವ ಹುಳುಗಳು ಕಾಣಿಸಿಕೊಳ್ಳುತ್ತವೆ. ಹಿಂದೆಯೇ ಅವುಗಳನ್ನು ತಿಂದು ಬದುಕುವ ಸಣ್ಣ ಸಣ್ಣ ಪ್ರಾಣಿಗಳು ಬರುತ್ತವೆ. ಹೀಗೆ ಸರಪಳಿ ಬೆಳೆಯುತ್ತದೆ – ಜೀವಚಕ್ರವೊಂದು ಸ್ಥಾಪನೆಯಾಗುತ್ತದೆ., ಎಲ್ಲಾ ಬಗೆಯ ನೀರಿಗೂ – ಅದು ನಿಂತಿರಲಿ, ಹರಿಯುತ್ತಿರಲಿ – ತುಂಬಾ ಸೃಷ್ಟಿ ಶಕ್ತಿ ಇದೆ, ಉತ್ಪಾದಕ ಶಕ್ತಿ ಇದೆ. ನೀರು ಮತ್ತು ಸಾವಯವ ಪದಾರ್ಥಗಳ ಸರಿ ಸಂಯೋಜನೆಯಿಂದ ಯಾವುದಾದರೊಂದು ಬಗೆಯ ಜೀವದ್ರವ್ಯ ಉತ್ಪತ್ತಿಯಾಗುತ್ತದೆ.

ಜೀವಕ್ಕೆ ಜೀವ ನೀರು

ನೀರಿಗೆ ತುಂಬಾ ಜೈವಿಕ ಮಹತ್ವವಿದೆ. ಎಲ್ಲ ಜೀವಿಗಳ ಬದುಕು ಮತ್ತು ಉಳಿಕೆಗೆ ನೀರು ಅತ್ಯಗತ್ಯವಾಗಿ ಬೇಕಾದ ಒಂದು ಮುಖ್ಯ ದ್ರವ. ಎಲ್ಲಾ ಜೀವಿಗಳ ಆಂತರ್ಯದಲ್ಲಿ ಅನೇಕ ಜೈವಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಆ ಎಲ್ಲಾ ಕ್ರಿಯೆಗಳಲ್ಲಿ ನೀರು ಒಂದು ಮಾಧ್ಯಮದಂತೆ ವರ್ತಿಸುತ್ತಿರುತ್ತದೆ.

ಎಲ್ಲಾ ಜೀವಿಗಳು ಜೀವಕೋಶಗಳೆಂಬ ಮೂಲ ಘಟಕಗಳಿಂದಾಗಿವೆ. ಈ ಜೀವಕೋಶಗಳೊಳಗೆ ನಾನಾ ಬಗೆಯ ಅತ್ಯಾವಶ್ಯಕ ಉಪಾವಚನಯ ಕ್ರಿಯೆಗಳು ಸತತವಾಗಿ ನಡೆಯುತ್ತಿರುತ್ತವೆ. ಈ ಕ್ರಿಯೆಗೆ ಒಂದು ಕನಿಷ್ಠ ಪ್ರಮಾಣದ ನೀರು ಇರಲೇಬೇಕು – ಶೇ.೪೦ ರಷ್ಟು. ಅದಕ್ಕಿಂತಲೂ ಕಡಿಮೆಯಾದರೆ ಆ ಜೀವಕೋಶಗಳು ಸಾಯುತ್ತವೆ. ಜೀವಕೋಶಗಳ  ಸಾವು ಜೀವಿಯ ಸಾವಿನಲ್ಲಿ ಪರ್ಯವಸನವಾಗುತ್ತದೆ.

ನೀರು ಎಲ್ಲ ಜೀವಿಗಳಲ್ಲಿ ಅತಿ ಹೆಚ್ಚು ಸಮೃದ್ಧವಾಗಿ ಕಂಡುಬರುವ ನಿರವಯವ ಸಂಯುಕ್ತ. ಜೀವಂತ ಪದಾರ್ಥಗಳಲ್ಲೆಲ್ಲಾ ಸುಮರು ಶೇ. ೭೦ ರಿಂದ ೯೦ ರಷ್ಟು ನೀರೇ ಇದೆ. ಆದ್ದರಿಂದಲೆ ಜೀವದ ರಸಾಯನಶಾಸ್ತ್ರವನ್ನು ‘ಜಲ ರಸಾಯನ ವಿಜ್ಞಾನ’ ಎಂದು ಒಮ್ಮೆಮ್ಮೆ ಕರೆಯಲಾಗುತ್ತದೆ.

ಹುಟ್ಟಿನಿಂದ ಸಾವಿನವರೆಗೆ ನೀರು ಮನುಷ್ಯನ ಪ್ರಾಣ ರಕ್ಷಣೆ ಮಾಡುತ್ತದೆ. ಬೀಜಾಕುಂರವಾಗುವುದು ತಾಯಿಯ ಗರ್ಭದಲ್ಲಿ – ಜಲೀಯ ವಾತಾವರಣದಲ್ಲಿ ಭ್ರೂಣ ಬೆಳೆಯುವುದು ಗರ್ಭದಲ್ಲಿ – ನೀರಿನಲ್ಲೆ ತೇಲಾಡುತ್ತಾ ಗರ್ಭದಲ್ಲಿರುವವರೆಗೂ ನೀರಿನ ಸಂರಕ್ಷಣೆ. ಹೊರಗೆ ಬಂದ ಮೇಲೆ?

ಮನುಷ್ಯನ ಒಟ್ಟು ತೂಕದಲ್ಲಿ ಸುಮಾರು ಶೇ. ೬೫ ರಷ್ಟು ನೀರಿದೆ; ಅವನೊಂದು ನೀರಿನ ಬುರುಡೆ. ಅವನ ಪ್ರತಿ ಜೀವಕೋಶದಲ್ಲಿ ಶೇ. ೮೦ ರಷ್ಟು ನೀರೇ ತುಂಬಿಕೊಂಡಿದೆ. ೬೦ ಕೆ.ಜಿ. ತೂಕದ ಮನುಷ್ಯನಲ್ಲಿ ಸುಮಾರು ೪೦ ಲೀಟರ್ ನೀರಿರುತ್ತದೆ. ಅತಿಸಾರ, ಆಮಶಂಕೆ, ಕಾಲರಾ ಮುಂತಾದ ರೋಗಸ್ಥಿತಿಗಳಲ್ಲಿ ಅತಿ ಭೇದಿ ಅಥವ ವಾಂತಿ ಉಂಟಾದಾಗ ಮನುಷ್ಯ ನೀರನ್ನು ಕಳೆದುಕೊಳ್ಳುತ್ತಾನೆ. ಅದೇ ರೀಥಿ ಬೆಂಗಾಡಿನಲ್ಲಿ ಸಿಕ್ಕಿ ಹಾಕಿಕೊಂಡು ನೀರು ಸಿಗದೆ ಅಲೆಯುವಾಗ ಕೂಡ ಬೆವರಿನ ರೂಪದಲ್ಲಿ ಅಗಾಧ ಪ್ರಮಾಣದಲ್ಲಿ ದ್ರವನಷ್ಟ ಉಂಟಾಗುತ್ತದೆ. ಇಂಥ ಸ್ಥಿತಿಯನ್ನು ವೈದ್ಯರು ನಿರ್ಜಲೀಯತೆ (ಡೀಹೈಡ್ರೇಷನ್‌) ಎನ್ನುತ್ತಾರೆ. ಆದರೆ ಯಾವುದೇ ವ್ಯಕ್ತಿಯಲ್ಲಿ ಪೂರ್ಣ ನಿರ್ಜಲೀಯತೆ ಸಾಧ್ಯವೇ ಇಲ್ಲ. ಏಕೆಂದರೆ ಸುಮಾರು ೩-೪ ಲೀಟರಿನಷ್ಟು ನೀರು ನಷ್ಟವಾದರೂ ಮನುಷ್ಯ ಅಸ್ವಸ್ಥನಾಗುತ್ತಾನೆ; ೬-೮ ಲೀಟರಿನಷ್ಟು ನಷ್ಟವಾದರೆ ತೀವ್ರ ಅಸ್ವಸ್ಥತೆಯಿಂದ ಹಾಸಿಗೆ ಹಿಡಿಯುತ್ತಾನೆ. ೧೨-೧೩ ಲೀಟರಿನಷ್ಟು ನಷ್ಟವಾದರಂತೂ ಗೋರಿ ಸೇರುತ್ತಾನೆ.

ದಿನ ನಿತ್ಯದ ಸಾಮಾನ್ಯ ಬದುಕಿನಲ್ಲೆ ವಯಸ್ಕ ವ್ಯಕ್ತಿಯೊಬ್ಬ ಪ್ರತಿದಿನ ೩ ಲೀಟರಿನಷ್ಟು ನೀರನ್ನು ಉಸಿರು, ಬೆವರು ಮತ್ತು ಮೂತ್ರಗಳ ಮೂಲಕ ಹೊರಕ್ಕೆ ಬಸಿಯುತ್ತಿರುತ್ತಾನೆ. ನೀರು, ಆಹಾರ ಹಾಗೂ ಇತರೆ ಪಾನೀಯಗಳ ಮೂಲಕ ಈ ನಷ್ಟವನ್ನು ತುಂಬಿಸಿಕೊಳ್ಳುತ್ತಿರುತ್ತಾನೆ. ಹಾಗೊಂದು ವೇಳೆ ಯಾವುದೇ ಕಾರಣಕ್ಕೆ ಈ ನಷ್ಟವನ್ನು ತುಂಬಿಸಿಕೊಳ್ಳದಿದ್ದರೆ ಕೇವಲ ಒಂದೆರಡು ದಿನಗಳಲ್ಲೆ ನೀರಿನ ಕೊರತೆಯ ಪರಿಣಾಮ ಕಾಣಿಸಿಕೊಳ್ಳುತ್ತದೆ. ಆದ್ದರಿಂದಲೇ ಆಹಾರವಿಲ್ಲದೆ ೩-೪ ವಾರಗಳಾದರೂ ಇರಬಹುದು. ಆದರೆ, ನೀರಿಲ್ಲದೆ ಒಂದೆರಡು ದಿವನ ಕೂಡ ಇರಲಾಗದು.

ನೀರಿನ ಕೊರತೆ ಉಂಟಾದಾಗ ನಮಗೆ ಆಗುವ ಹಿಂಸೆಯನ್ನು ಕಲ್ಪಿಸಿಕೊಳ್ಳಿ. ಬಾಯಾರಿಕೆಯಾಗಿ ನಿಶ್ಯಕ್ತರಾಗುತ್ತೇವೆ. ಆಗ ತಲೆ ಸುತ್ತುತ್ತದೆ; ವಾಕರಿಕೆ ಬರುವಂತಾಗುತ್ತದೆ. ತುಟಿ ನಾಲಗೆ ಬಾಯಿ ಒಣಗಿ ಒದ್ದಾಡುವಂತಾಗುತ್ತದೆ. ಚರ್ಮ ಒಣಗುತ್ತದೆ; ಜಿವುಟಿ ಬಿಟ್ಟರೆ ಸುಕ್ಕುಗಟ್ಟುತ್ತದೆ. ಇಡೀ ದೇಹ ಬಿಳಚಿಕೊಳ್ಳುತ್ತದೆ; ಅಥವಾ ನೀಲಿಗಟ್ಟುತ್ತದೆ. ಮೈ ತಣ್ಣಗಾಗುತ್ತದೆ ಅಥವಾ ಕಾವೇರುತ್ತದೆ. ಕಣ್ಣು ಗುಳಿ ಬೀಳುತ್ತದೆ. ರಕ್ತದ ಸಾಂದ್ರತೆ ಹೆಚ್ಚಿ ಧಮನಿಗಳಲ್ಲಿ ಅದರ ಹರಿದಾಡುವಿಕೆ ಮಂದವಾಗುತ್ತದೆ. ಈ ವ್ಯತ್ಯಾಸಗಳಿಂದ ಗುಂಡಿಗೆ ಮತ್ತು ಮೂತ್ರಪಿಂಡಗಳ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಮೂತ್ರೋತ್ಪತ್ತಿ ದಿನನಿತ್ಯಕ್ಕಿಂತ ಅರ್ಧದಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಕಶ್ಮಲಗಳು ದೇಹದಿಂದ ಪೂರ ಹೊರಹೋಗದೆ ಅಲ್ಲೇ ಸಂಚಯವಾಗುತ್ತವೆ. ಇದರಿಂದ ದೇಹಸ್ಥಿತಿ ಹದಗೆಡುತ್ತದೆ. ಇವಿಷ್ಟು ನೀರಿನ ಕೊರತೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳು. ಈ ಎಲ್ಲಾ ಪರಿಣಾಮಗಳು ಮಕ್ಕಳಲ್ಲಿ ಇನ್ನೂ ತೀವ್ರವಾಗಿ ಕಾಣಿಸಿಕೊಳ್ಳುತ್ತವೆ.

ಸಸ್ಯಗಳ ಉಳಿವಿಗೆ ಮತ್ತು ಬೆಳವಣಿಗೆಗೆ ನೀರು ತೀರ ಅತ್ಯಗತ್ಯ ನೀರಿಲ್ಲದಿದ್ದರೆ ಸಸ್ಯಗಳ ಸಮಾಧಿ ಖಂಡಿತ. ಸಸ್ಯಗಳಿಲ್ಲದೆ ಬೇರಾವ ಜೀವಿಯೂ ಉಳಿಯದು. ಸಸ್ಯ ಸಂಜೀವಿನಿಯೇ ಎಲ್ಲ ಜೀವಿಗಳ ಉಳಿವಿನ ತಳದಲ್ಲಿರುವ ಮೂಲ ಆಹಾರ – ಯಾವುದೇ ಆಹಾರ ಸರಪಳಿ ತೆಗೆದುಕೊಂಡರೂ ಈ ಮಾತು ಸತ್ಯ. ಹುಲ್ಲು ತಿನ್ನುವ ಹುಲ್ಲೆ ಹುಲಿಗೆ ಆಹಾರ. ಹುಲ್ಲಿಲ್ಲ ಹುಲ್ಲೆ ಇಲ್ಲ; ಹುಲ್ಲೆ ಇಲ್ಲ ಹುಲಿ ಇಲ್ಲ. ಅಂದರೆ, ಪ್ರಾಣಿ ಪ್ರಪಂಚ ಉಳಿಯಬೇಕಾದರೆ ಸಸ್ಯ ಪ್ರಪಂಚ ಉಳಿಯಬೇಕು; ಸಸ್ಯ ಪ್ರಪಂಚ ಉಳಿಯಲು ಜಲಜಾಲ ಎಲ್ಲೆಡೆಯೂ ಸಮೃದ್ಧವಾಗಿ ಹರಿದಾಡುತ್ತಿರಬೇಕು.

ಸಸ್ಯಗಳ ಜೀವದ್ರವ್ಯದ ಒಟ್ಟು ತೂಕದಲ್ಲಿ ಶೇ. ೯೫ ರವರೆಗೆ ನೀರು ಇರುತ್ತದೆ. ಸಸ್ಯಗಳು ತಮಗೆ ಅಗತ್ಯವಾದ ಆಹಾರವನ್ನು ದ್ಯುತಿಸಂಶ್ಲೇಷಣ ಕ್ರಿಯೆಯಿಂದ ತಯಾರಿಸಿಕೊಳ್ಳುತ್ತವೆ. ದ್ಯುತಿಸಂಶ್ಲೇಷಣ ಕ್ರಿಯೆಗೆ ನೀರು ಅತ್ಯಗತ್ಯ. ಸಸ್ಯಗಳಲ್ಲಿ ಅಗತ್ಯ ಪೋಷಕಾಂಶಗಳು ಹಾಗು ಇತರೆ ಪದಾರ್ಥಗಳ ಸಾಗಾಣಿಕೆ ಸಾಧ್ಯವಾಗುವುದು ನೀರಿನ ಮಾಧ್ಯಮದಿಂದ ಮಾತ್ರ.

ಇನ್ನು ಜಲಚರಗಳು ಮತ್ತು ಜಲಸಸ್ಯಗಳಿಗೆ ಜಲವೇ ಸರ್ವಸ್ವ. ನೀರಿಲ್ಲವೆಂದರೆ, ಅಥವ, ವಿಷವಾದರೆ, ಈ ವರ್ಗದ ಜೀವಿಗಳ ಇಡೀ ಕುಲನಾಶವಾಗುತ್ತದೆ.

ಪ್ರಾಣಿ ಮತ್ತು ಸಸ್ಯಗಳ ಜೀವಕೋಶಗಳಲ್ಲಿ ಇನ್ನೂ ಅನೇಕ ಅತ್ಯಾವಶ್ಯಕ ಸಂಯುಕ್ತಗಳೂ ಇರುತ್ತವೆ. ಯಾವ್ಯಾವುದು ಎಷ್ಟೆಷ್ಟು ಎಂಬುದನ್ನೂ ಕೆಳಗಿನ ಕೋಷ್ಟಕದಲ್ಲಿ ಕೊಟ್ಟಿದೆ.

ಸಂಯುಕ್ತಗಳು ಸಸ್ಯಕೋಶ ಪ್ರಾಣಿ ಕೋಶ
ನೀರು ೭೫% ೭೦-೯೦%
ಕಾರ್ಬೊಹೈಡ್ರೇಟ್‌ ೨೦% ೧-೨%
ಪ್ರೊಟೀನ್‌  ೨% ೧೫%
ಕೊಬ್ಬು ೧% ೧೩%
ಇತರೆ ೨% ೪%

ಮೇಲಿನ ಕೋಷ್ಟಕದಿಂದ ನೀರು ಜೀವಕೋಶಗಳಲ್ಲಿ ಎಷ್ಟು ಸಮೃದ್ಧ ಮತ್ತು ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ.

ನಮ್ಮ ಪೂರ್ವಜರ ದೃಷ್ಟಿಯಲ್ಲಿ ನೀರು

ನಮ್ಮ ಪೂರ್ವಜರು ನೀರಿನ ಮಹತ್ವನ್ನು ಬಹು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಬದುಕಿಗೆ ನೀರು ಎಷ್ಟು ಅನಿವಾರ್ಯ ಎಂಬುದನ್ನು ಅನುಭವದಿಂದ ತಿಳಿದುಕೊಂಡಿದ್ದರು. ಆದ್ದರಿಂದಲೇ ಅವರು ತಮ್ಮೆಲ್ಲ ಚಟುವಟಿಕೆಗಳನ್ನು ನೀರಿನ ಆಸರೆಯ ಬಳಿಯೇ ಪ್ರಾರಂಭಿಸಿದರು: ನದಿ ದಡಗಳಲ್ಲಿಯೇ ಬದುಕು ನೆಟ್ಟರು; ನಾಗರಿಕತೆಗಳನ್ನು ಕಟ್ಟಿದರು. ಪ್ರಾಚೀನ ನಾಗರಿಕತೆಗಳಾದ ಈಜಿಪ್ಟ್‌, ಬ್ಯಾಬಿಲೋನಿಯಾ, ಚೀನಾ, ಸಿಂಧೂ ಮುಂತಾದ ಪ್ರಸಿದ್ಧ ನಾಗರಿಕತೆಗಳೆಲ್ಲ ಹುಟ್ಟಿ ಬೆಳೆದದ್ದು ನದಿ ಪಾತ್ರಗಳಲ್ಲೆ ಅತ್ಯಂತ ಪ್ರಾಚೀನ ಹಾಗು ತುಂಬಾ ಮುಂದುವರೆದ ಪಟ್ಟಣಗಳೆಲ್ಲ ಇರುವುದು ದೊಡ್ಡ ದೊಡ್ಡ ನದಿ ತೀರದಲ್ಲೇ ಎಂಬುದು ಆಕಸ್ಮಿಕವಲ್ಲ. ಲಂಡನ್‌, ಫ್ಲಾರೆನ್ಸ್ ಕೈರೋ, ದೆಹಲಿ ಮುಂತಾದ ಪಟ್ಟಣಗಳು ಇದಕ್ಕೆ  ಉದಾಹರಣೆಗಳಾಗಿವೆ. ಈ ಪಟ್ಟಣಗಳ ಸರ್ವತೋಮುಖ ಬೆಳವಣಿಗೆಗೆ ಅವುಗಳ ಮೂಲಕ ಹರಿಯುವ ನೀರು ಅನೇಕ ರೀತಿಯಲ್ಲಿ ಕಾರಣವಾಗಿದೆ.

ನಮ್ಮ ಪೂರ್ವಜರು ತಮ್ಮ ಬಹಳಷ್ಟು ಶ್ರೇಷ್ಠ ಪುರಾಣ ಮತ್ತು ಧರ್ಮಗ್ರಂಥಗಳಲ್ಲಿ ನೀರಿಗೆ ಕೇಂದ್ರ ಸ್ಥಾನವನ್ನು ಕೊಟ್ಟಿದ್ದಾರೆ. ನಮ್ಮೆಲ್ಲ ಪ್ರಮುಖ ನದಿಗಳಾದ ಗಂಗೆ, ಯಮುನೆ , ಕಾವೇರಿ ಮುಂತಾದವುಗಳಿಗೆಲ್ಲ ಪೂಜನೀಯ ಸ್ಥಾನವನ್ನು ಕೊಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಂತೂ ನೀರು ಪಂಚಭೂತಗಳಲ್ಲೊಂದಾಗಿದೆ; ಪವಿತ್ರ ನದಿಗಳೆಲ್ಲವೂ ಪಾಪನಾಶಿನಿಗಳಾಗಿವೆ. ತಮ್ಮನ್ನು ಪೋಷಿಸಿ ಬೆಳೆಸುವ ಜೀವಜಲದ ಬಗ್ಗೆ ಅವರು ಭಯ ಭಕ್ತಿ ಬೆಳೆಸಿಕೊಂಡು ಹಾಡಿ ಹೊಗಳಿದ್ದರಲ್ಲಿ ಮತ್ತು ನೀರನ್ನು ದೈವತ್ವಕ್ಕೇರಿಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.

ನೀರಿಗಾಗಿ ಎಷ್ಟೋ ಯುದ್ಧಗಳು ನಡೆದಿವೆ. ಇಂದಿಗೂ ಅನೇಕ ಜಲವಿವಾದಗಳು ಜೀವಂತ ಇವೆ. ಏಕೆಂದರೆ ನೀರೊಂದು ಅತ್ಯಂತ ಬೆಲೆ ಬಾಳುವ ವಸ್ತು.

ಜಲರಾಶಿಯ ಲಾಭಗಳು

ಇಂದು ನಾವು ಉಪಯೋಗಿಸುತ್ತಿರುವ ಅನೇಕ ವಸ್ತುಗಳನ್ನು ನೀಡುತ್ತಿರುವುದು ಜಲಸಾಗರ ಗರ್ಭ. ಒಂದರ್ಥದಲ್ಲಿ ನೀರಿನಿಂದ ನಮಗೆ ಸಕಾಲವೂ ಲಭ್ಯ: ವಿದ್ಯುಚ್ಛಕ್ತಿಯಿಂದ ಹಿಡಿದು ಸಮುದ್ರಯಾನದವರೆಗೆ, ಆಹಾರದಿಂದ ಹಿಡಿದು ಮುತ್ತು ಹವಳದವರೆಗೆ.

ಜಲರಾಶಿಯ ಚಲನಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸಿ ಮನುಕುಲದ ಅನುಕೂಲಕ್ಕೆ ಬಳಸಿಕೊಳ್ಳುವ ಕಾರ್ಯ ಕಳೆದ ಶತಮಾನದ ಆದಿಯಿಂದ ವ್ಯಾಪಕವಾಗಿ ನಡೆಯುತ್ತಿದೆ. ಇಂದು ಜಗತ್ತು ಉಪಯೋಗಿಸುತ್ತಿರುವ ಒಟ್ಟು ವಿದ್ಯುತ್ತಿನಲ್ಲಿ ಶೇ.  ೨೦ ರಷ್ಟನ್ನು ಜಲವಿದ್ಯುತ್‌ ಒದಗಿಸುತ್ತಿದೆ. ನಮ್ಮ ದೇಶದಲ್ಲಿ ಜಲವಿದ್ಯುತ್ತಿನ ಕಾಣಿಕೆ ಒಟ್ಟು ಬಳಕೆಯ ಶೇ. ೧೭೫.

ಯಾನಕ್ಕೂ ಜಲರಾಶಿಲಯು ಆದರ್ಶ ಮಾಧ್ಯಮವನ್ನು ಒದಗಿಸಿದೆ. ಅನೇಕ ಕಡೆಗಳಲ್ಲಿ ಜನ ಮತ್ತು ಸರಕು ಸಾಗಾಣಿಕೆಗೆ ಅಗ್ಗವಾದ ಮಾರ್ಗಗಳನ್ನು ನೀರು ತೆರೆದಿಟ್ಟಿದೆ. ಇದು ವ್ಯಾಪಾರ ವ್ಯವಹಾರಗಳ ವೃದ್ಧಿಗೂ ಮಹತ್ವದ ಕಾಣಿಕೆಯನ್ನು ಸಲ್ಲಿಸುತ್ತಿದೆ.

ಕಳೆದ ಸುಮರು ೪೦೦೦ ವರ್ಷಗಳಿಂದಲೂ ನಮ್ಮ ಊಟಕ್ಕೆ ಉಪ್ಪನ್ನು ಸಾಗರಗಳು ಒದಗುಸುತ್ತಿವೆ. ಉಪ್ಪು ಎಂಥ ಅಗತ್ಯವಸ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಊಟಕ್ಕೆ ಉಪ್ಪಿಲ್ಲದಿದ್ದರೆ ರುಚಿಯೇ ಹತ್ತದು.

ಉಪ್ಪಿನ ಜೊತೆಗೆ ಸಾಗರಗಳು ಅಪರಿಮಿತ ವಸ್ತುಗಳನ್ನು ತಮ್ಮೊಡಲೊಳಗೆ ಹುಗಿಸಿಕೊಂಡಿವೆ. ನಮಗೆ ತಿಳಿದಿರುವ ೨/೩ ಭಾಗದಷ್ಟು ಮೂಲವಸ್ತುಗಳು ಸಾಗರದ ನೀರಿನಲ್ಲಿ ಸಿಗುತ್ತವೆ. ಸಾಗರದ ನೀರಿನಲ್ಲಿ ಸೋಡಿಯಂ ಕ್ಲೋರೈಡ್‌, ಮೆಗ್ನೀಷಿಯಂ ಕ್ಲೋರೈಡ್‌, ಪೊಟಾಸಿಯಂ ಕ್ಲೋರೈಡ್‌, ಸೋಡಿಯಂ ಬ್ರೋಮೈಡ್‌, ಮೆಗ್ನೀಷಿಯಂ ಸಲ್ಫೇಟ್‌ನಂಥ ಅನೇಕ ಲವಣಗಳು ಕರಗಿವೆ. ಸಾಗರಗಳು ಕರಗಿಸಿಕೊಂಡಿರುವ ಲವಣಗಳ ಒಟ್ಟು ತೂಕ ೫೦,೦೦,೦೦೦ ಬಿಲಿಯನ್‌ ಟನ್ನುಗಳಾಗಬಹುದೆಂದು ಅಂದಾಜು ಮಾಡಲಾಗಿದೆ.

ಸಾಗರದಲ್ಲಿ ಅಡಕವಾಗಿರುವ ಎಲ್ಲಾ ಚಿನ್ನವನ್ನು ‘ಗಟ್ಟಿ’ ಮಾಡಿದರೆ ಅದರ ಗಾತ್ರಗಳ ೫,೦೦೦,೦೦೦ ಘನ ಮೀಟರ್ ಗಳಷ್ಟಾಗಬಹುದೆಂದು ಲೆಕ್ಕಮಾಡಲಾಗಿದೆ. ಜೊತೆಗೆ, ಸಾಗರಗಳು ಬೆಲೆ ಬಾಳುವ ಮುತ್ತು ಮತ್ತು ಹವಳಗಳನ್ನು ನೀಡುವ ಕಾಮಧೇನು ಕೂಡ ಹೌದು.

ಮೆಗ್ನೀಷಿಯಂ ಉತ್ಪಾದನೆಯ ಶೇ. ೬೦ ಭಾಗ ನಮಗೆ ಸಾಗರದ ನೀರಿನಿಂದ ಲಭ್ಯವಾಗುತ್ತಿದೆ. ಸಮುದ್ರಕಳೆಯಿಂದ ಗಣನೀಯ ಪ್ರಮಾಣದ ಅಯೋಡಿನ್‌ ದೊರಕುತ್ತದೆ. ಇದೇ ರೀತಿ ತಾಮ್ರ, ನಿಕ್ಕಲ್‌, ಮ್ಯಾಂಗನೀಸ್‌ , ಕೋಬಾಲ್ಟ್‌ ಮುಂತಾದ ಲೋಹಗಳು ಕೂಡ ಭೂಮಿಯ ಮೇಲಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಸಾಗರಗಳಲ್ಲಿ ಇವೆ.

ಪರಮಾಣು ಶಕ್ತಿ ಉತ್ಪಾದನೆಗೆ ಅಗತ್ಯವಾದ ಯುರೇನಿಯಮ್ಮನ್ನು ಕೂಡ ಸಾಗರದ ನೀರಿನಿಂದ ಪಡೆಯುವ ಯತ್ನಗಳು ಜಪಾನ್ ನಲ್ಲಿ ನಡೆಯುತ್ತಿವೆ. ಭೂಮಿಯ ಮೇಲಿರುವ ಯುರೇನಿಯಂ ನಿಕ್ಷೇಪಕ್ಕಿಂತ ಸುಮಾರು ೨೦೦೦ ಪಟ್ಟು ಅಧಿಕ ಯುರೇನಿಯಂ ಸಾಗರಗಳಲ್ಲಿದೆ. ಅಗಾಧ ಪ್ರಮಾಣದ ತೈಲ ಮತ್ತು ಅನಿಲ ಕೂಡ ಸಾಗರ ತಳದಲ್ಲಿ ಅಡಕವಾಗಿದೆ. ಇವುಗಳನ್ನು ಹೊರತೆಗೆಯುವ ಪ್ರಯತ್ನಗಳು ಅನೇಕ ಕಡೆ ನಡೆಯುತ್ತಿವೆ. ಸಮುದ್ರದ ಅಲೆಗಳಿಂದಲೂ ಮತ್ತು ಸಮುದ್ರ ನೀರಿನಲ್ಲಿ ಆಳಕ್ಕೆ ಇಳಿದಂತೆ ಕಂಡುಬರುವ ತಾಪ ವ್ಯತ್ಯಾಸದಿಂದಲೂ ಶಕ್ತಿ ಉತ್ಪಾದಿಸುವುದು ಸಾಧ್ಯವಾಗುತ್ತಿದೆ. ಶಕ್ತಿಗಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಇವು ಸಾಗರದ ಅತ್ಯಮೂಲ್ಯ ಕೊಡುಗೆಗಳೆನ್ನಬಹುದು.

ಸಾಗರಗಳು ವೈವಿಧ್ಯಮಯವಾದ, ವರ್ಣಮಯವಾದ ಮತ್ತು ಅತ್ಯಾಕರ್ಷಕವಾದ ಪ್ರಾಣಿ ಮತ್ತು ಸಸ್ಯ ಸಂಪತ್ತನ್ನು ಒಳಗೊಂಢಿವೆ. ಇದರ ಸಮೃದ್ಧಿ ನಮ್ಮನ್ನು ಬೆರಗುಗೊಳಿಸುವಷ್ಟು ಅಗಾಧವಾಗಿದೆ. ಸಾಗರಗಳಲ್ಲಿ ಸುಮರು ೨೦೦೦ ಕ್ಕೂ ಹೆಚ್ಚು ವಿವಿಧ ರೀತಿಯ ಮೀನುಗಳೂ ಸೇರಿದಂತೆ ೧,೬೦,೦೦೦ ಕ್ಕೂ ಹೆಚ್ಚು ವಿವಿಧ ರೀತಿಯ ಪ್ರಾಣಿ ಮತ್ತು ಸಸ್ಯಗಳು ಉಸಿರಾಡುತ್ತಿವೆ ಎಂದು ಅಂದಾಜು ಮಾಡಲಾಗಿದೆ. ಮೀನುಗಳು ಅನೇಕ ಜನರ ಆಹಾರ; ಜೀವನೋಪಾಯ.

ಸಮುದ್ರದಾಶ್ರಯದಲ್ಲಿಲ ಉತ್ಪನ್ನವಾಗುವ ಅನೇಕ ರೀತಿಯ ಪಾಚಿ ಮತ್ತು ಕಳೆಗಳು ಉತ್ಪಾದಿಸುವ ಆಲ್ಗನೇಟ್‌ ಸಂಯುಕ್ತಗಳನ್ನು ಪ್ಲಾಸ್ಟಿಕ್‌, ಮೇಣ, ಪಾಲಿಷ್‌, ಸೋಪು ಮತ್ತು ಮಾರ್ಜಕಗಳು, ವಾಸನೆ ನಿವಾರಕಗಳು, ಶಾಂಪೂಗಳು, ಬಣ್ಣಗಳು ಮುಂತಾದವುಗಳನ್ನು ತಯಾರಿಸಲು ಬಳಸಲಾಗುತ್ತದೆ.

ಸಕಲಕ್ಕೂ ನೀರು ಬೇಕು

ಪಶು ಪಕ್ಷಿಗಳು ಮತ್ತು ಸಸ್ಯಗಳಿಗೆ ಬದುಕುಳಿಯಲು ಅವುಗಳಲ್ಲಿ ನಡೆಯಲೇಬೇಕಾದ ಅನೇಕ ಕ್ರಿಯೆಗಳಿಗೆ ನೀರು ಬೇಕು. ಮನುಷ್ಯನಿಗಾದರೋ ಸಕಲಕ್ಕೂ ನೀರು ಬೇಕು! ಒಂದು ದಿನ ನೀರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಿ! ಎಂಥಾ ಚಡಪಡಿಕೆ ಉಂಟಾಗುತ್ತದೆ. ಬೆಳಿಗ್ಗೆ ಎದ್ದ ಕ್ಷಣದಿಂದ ಮಲಗುವವರೆಗೆ ನಮಗೆ ನೀರು ಬೇಕು. ಬಾಯಿ ತೊಳೆಯಲು – ಬಾಯಾರಿಕೆ ನೀಗಿಸಲು, ಬಟ್ಟ ಒಗೆಯಲು – ಸ್ನಾನ ಮಾಡಲು, ಅಡಿಗೆ ಮಾಡಲು – ಪಾತ್ರೆ ತೊಳೆಯಲು, ಕೃಷಿಗೆ – ಕೈಗಾರಿಕೆಗೆ… ಹೀಗೆ, ನೀರು ಮನುಷ್ಯನ ಸಕಲ ಚಟುವಟಿಕೆಗೂ ಅಗತ್ಯ.

ಮನುಷ್ಯನ ಸಕಲ ಚಟುವಟಿಕೆಗಳನ್ನು ಮತ್ತು ಅವನ ನೀರಿನ ಅಗತ್ಯಗಳನ್ನು ಮೂರು ವಿಂಗಡಣೆಯಲ್ಲಿ ಅಡಕ ಮಾಡಬಹುದು.  ೧. ದಿನ ನಿತ್ಯದ ಅಗತ್ಯ ೨. ಕೈಗಾರಿಕಾ ಅಗತ್ಯ ೩. ಕೃಷಿ ಅಗತ್ಯ.

ದಿನ ನಿತ್ಯದ ಅಗತ್ಯ

ಒಬ್ಬ ವ್ಯಕ್ತಿ ಸಹ್ಯ ನಾಗರಿಕ ಜೀವನ ನಡೆಸಲು ಅವನ ದಿನನಿತ್ಯದ ನೀರಿನ ಅಗತ್ಯ ಕನಿಷ್ಟ ೧೩೫ ಲೀಟರ್. ಇದರ ಬಳಕೆ ಹೀಗೆ:

ಕುಡಿಯಲು ೨.೫ ಲೀ.
ಅಡುಗೆಗೆ ೩.೫ ಲೀ.
ಸ್ನಾನಕ್ಕೆ ೨೫.೦ ಲೀ.
ಬಟ್ಟೆ ಒಗೆಯಲು ಪಾತ್ರೆ ತೊಳೆಯಲು ೪೦ ಲೀ.
ವ್ಯಾಪಾರ, ಉದ್ಯೋಗ, ಕೈಗಾರಿಕೆ, ಸಾರ್ವಜನಿಕ ಕಛೇರಿಗಳು, ಶಾಲೆ ಕಾಲೇಜುಗಳು, ಆಸ್ಪತ್ರೆಗಳು ಇತ್ಯಾದಿ ೩೦ ಲೀ.
ಬೀದಿ ಚರಂಡಿ ಮತ್ತು ಇತರೆ ೨೦ ಲೀ.
ಕಕ್ಕಸು (ಫ್ಲಷ್‌) ೧೫ ಲೀ.

ಬೇಸಿಗೆಯಲ್ಲಿ ಇದೇ ಅಗತ್ಯ ೧೬೦ ಲೀಟರ್ ಆಗುತ್ತದೆ. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ  ಇದು ಇನ್ನೂ ಹೆಚ್ಚುತ್ತದೆ. ಭಾರತದ ಪರಿಸರ ಆರೋಗ್ಯ ಸಮಿತಿಯವರು ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ದೈನಂದಿನ ನೀರಿನ ಅವಶ್ಯಕತೆ ತಲಾ ೨೦೦ – ೨೨೫ ಲೀಟರ್ ಎಂದು ಅಂದಾಜು ಮಾಡಿದ್ದಾರೆ.

ಒಬ್ಬ ವ್ಯಕ್ತಿ ದಿನನಿತ್ಯ ಬಳಸುವ ನೀರಿನ ಪ್ರಮಾಣಕ್ಕೂ ಅವನ ನಾಗರಿಕ ಮಟ್ಟಕ್ಕೂ ಸಂಬಂಧವಿದೆ. ಮನುಷ್ಯ ಹೆಚ್ಚು ಹೆಚ್ಚು ನಾಗರಿಕನಾದಂತೆ ಅವನ ನೀರಿನ ಅಗತ್ಯ ಕೂಡ ಹೆಚ್ಚುತ್ತಾ ಸಾಗಿರುವುದನ್ನು ಇತಿಹಾಸದಲ್ಲಿ ನೋಡಬಹುದು. ನೀರಿನ ಸರಾಸರಿ ಬಳಕೆ ಬಡತನದ ಮಾನದಂಡ ಕೂಡ ಆಗಿದೆ.

ಜಗತ್ತಿನ ದೇಶಗಳಲ್ಲಿ ಕನಿಷ್ಠ ನೀರನ್ನು ಬಳಸುತ್ತಿರುವ ನಾಗರಿಕರು ಇರುವ ದೇಶ ಮೆಡಗಾಸ್ಕರ್. ಅಲ್ಲಿನ ತಲಾ ನೀರಿನ ಬಳಕೆ ಸರಾಸರಿ ೫.೪ ಲೀ. ಗರಿಷ್ಠ ನೀರನ್ನು ಬಳಸುತ್ತಿರುವ ನಾಗರಿಕರು ಇರುವುದು ಅಮೆರಿಕದಲ್ಲಿ ಅಲ್ಲಿನ ತಲಾ ಬಳಕೆ ೫೦೦ ಲೀ. ಬ್ರಿಟನ್ನಿನಲ್ಲಿ ೧೫೦ ಲೀ. ಭಾರತದ ಬಳಕೆ ೨೫ ಲೀ. ಅಮೆರಿಕದಲ್ಲಿ ಮೂರು ಜನರಿಗೆ ಒಂದು ಕೊಳಾಯಿ ಇದೆ. ಬ್ರಿಟನ್ನಿನಲ್ಲಿ ನಾಲ್ಕು ಜನರಿಗೆ ಒಂದು. ನಮ್ಮ ನಗರ ಪ್ರದೇಶಗಳಲ್ಲೇ ೫೦ ಜನರಿಗೆ ಒಂದರಂತೆ ಕೂಡ ಕೊಳಾಯಿ ಇರುವಂತಿಲ್ಲ .

ಕೃಷಿಗೆ

ಮನುಷ್ಯನಿಗೆ ಹೊಟ್ಟೆ ತುಂಬಿಸುವುದು ಕೃಷಿ. ಅವನು ಕೃಷಿಯಿಂದ ಬೆಳೆ ಬೆಳೆದರೆ ಅವನಿಗೆ ತಿನ್ನಲು ಆಹಾರವುಂಟು. ಇಲ್ಲದಿದ್ದರೆ ಇಲ್ಲ. ಮನುಷ್ಯನ ಕೃಷಿ ಚಟುವಟಿಕೆಗಳಿಗೆ ಕೂಡ ಅಗತ್ಯವಾಗಿ ನೀರು ಬೇಕು. ನೀರಿದ್ದರೆ ಕೃಷಿ, ಬೆಳೆ ಇಲ್ಲದಿದ್ದರೆ ಇಲ್ಲ. ನೀರಿಲ್ಲದೆ ಯಾವ ಬೀಜವೂ ಕೊನರದು.

ಮನುಷ್ಯ ತನ್ನ ಅಸ್ತಿತ್ವಕ್ಕೆ ಬಳಸಿಕೊಳ್ಳುವ ಒಟ್ಟು ನೀರಿನಲ್ಲಿ ಸುಮಾರು ಶೇ. ೭೫ ಭಾಗ ಕೃಷಿಗೆ ಬಳಕೆಯಾಗುತ್ತದೆ.

ಕೈಗಾರಿಕೆಗೆ

ಮನುಷ್ಯ ಇಂದು ಸಹಸ್ರಾರು ವಸ್ತುಗಳನ್ನು ಉಪಯೋಗಿಸುತ್ತಿದ್ದಾನೆ. ಈ ಎಲ್ಲಾ ವಸ್ತುಗಳು ತಯಾರಾಗುವುದು ಕಾರ್ಖಾನೆಗಳಲ್ಲಿ ಈ ಎಲ್ಲಕ್ಕೂ ನೀರು ಬೇಕು. ಕೈಗಾರಿಕೆಗೆ ಅಧಿಕ ಪ್ರಮಾಣದ ನೀರು ಬೇಕು – ಮನುಷ್ಯ ಬಳಸುವ ಒಟ್ಟು ನೀರಿನಲ್ಲಿ ಸುಮಾರು ಶೇ. ೨೫ ರಷ್ಟು. ನೀರಿಲ್ಲದೆ ಯಾವ ವಸ್ತುವಿನ ತಯಾರಿಕೆಯೂ ಸಾಧ್ಯವಿಲ್ಲ. ಒಂದಲ್ಲ ಒಂದು ಹಂತದಲ್ಲಿ ಎಲ್ಲಾ ವಸ್ತು ತಯಾರಿಕೆಯೂ ನೀರಿನ ಬಳಕೆಯನ್ನು ಒಳಗೊಂಡಿರುತ್ತದೆ. ಒಂದು ಕೆ.ಜಿ. ಕೃತಕ ನೂಲನ್ನು ತಯಾರಿಸಲು ಸುಮಾರು ೨೦,೦೦೦ ಲೀಟರ್ ನೀರು ಬೇಕಲು. ಒಂದು ಕಿಲೋ ಗೋಧಿ ಬೆಳೆಯಲು ೫೦೦ ಲೀ. ನೀರು ಅಗತ್ಯವಾದರೆ ಅದೇ ಒಂದು ಕಿಲೋ ಕೃತಕ ಪಾಲಿಯೆಸ್ಟರ್ ದಾರ ತಯಾರಿಸಲು ೨೦,೦೦೦ ಲೀ. ಅಗತ್ಯವಾಗುತ್ತದೆ. ಚರ್ಮ ಹದ ಮಾಡುವ/ ಭಟ್ಟಿ ಇಳಿಸುವ / ಸಕ್ಕರೆ / ಬಟ್ಟ / ಸ್ಟೀಲ್‌ ಮುಂತಾದ ಕಾರ್ಖಾನೆಗಳು ಪ್ರತಿ ದಿನ ಉಪಯೋಗಿಸುವ ನೀರಿನ ಪ್ರಮಾಣ ಸುಮಾರು ೨,೨೮೨,೦೦೦ ಲೀ.

ನೀರೆಂಬ ಆನಂದ ಸಾಗರ

ನೀರನ್ನು ನೋಡುವುದೇ ಒಂದು ಆನಂದ. ನೀರಿನ ಆಕರ ಚಿಕ್ಕದಿರಲಿ, ದೊಡ್ಡದಿರಲಿ; ನಿಂತಿರಲಿ, ಹರಿಯುತ್ತಿರಲಿ; ಹರಿವು ರಭಸವಾಗಿರಲಿ ಅಥವ ಧುಮ್ಮಿಕ್ಕುತ್ತಿರಲಿ; ನಿಶ್ಯಬ್ಧವಾಗಿರಲಿ ಅಥವ ಬೋರ್ಗರೆಯುತ್ತಿರಲಿ. ಅದರ ಯಾವ ರೂಪವೂ ಆನಂದದಾಯಕವೇ.

ಮನುಷ್ಯನಿಗೆ ಸಂತೋಷವನ್ನುಂಟು ಮಾಡುವ ವಸ್ತುಗಳಲ್ಲಿ ನೀರಿಗೆ ಮಹತ್ವದ ಸ್ಥಾನವಿದೆ. ಕುಡಿಯುವುದರಲ್ಲಿರುವ ಆನಂದದೊಂದಿಗೆ ಅದರೊಡನಾಡುವ ಆನಂದವೇ ಆನಂದ. ಚಿಕ್ಕವರಿರಲಿ ದೊಡ್ಡವರಿರಲಿ ನೀರಿನಲ್ಲಿ ಕಾಲುಗಳನ್ನು ಇಳಿಬಿಟ್ಟು ನಿಲ್ಲುವುದು – ಕೂರುವುದು, ಕುಣಿದು ಕುಪ್ಪಳಿಸುವುದು, ಈಜುವುದು, ಕಾಗದದ ದೋಣಿಗಳನ್ನು ತೇಲಿಬಿಟ್ಟು ನಲಿಯುವುದು, ತೆಪ್ಪ – ದೋಣಿಗಳಲ್ಲಿ ವಿಹರಿಸುವುದು – ಎಲ್ಲವೂ ಮನಸ್ಸಿಗೆ ಮುದನೀಡುವ ಕ್ರಿಯೆಗಳೇ. ಇವೆಲ್ಲಕ್ಕೂ ನೀರು ಬೇಕು.

ನೀರಿನಂಥ ಚಿಮ್ಮುವ, ಪುಟಿಯುವ, ಬಳುಕುವ, ನಮ್ಮ ಇಷ್ಟಾಕಾರವನ್ನು ಪಡೆಯುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಮೃದ್ಧವಾಗಿರುವ ಮತ್ತು ಎಲ್ಲೆಡೆ ಲಭ್ಯವಿರುವ ವಸ್ತು ಬೇರಾವುದಿದೆ. ಹೇಳಿ? ಅದರ ಈ ಎಲ್ಲಾ ಗುಣಗಳಿಂದಾಗಿ ನೀರು ಮನುಷ್ಯನಿಗೆ ಸದಾ ಆನಂದದಾಯಿ. ಚೈತನ್ಯದಾಯಿ.

ಇಷ್ಟೆಲ್ಲಾ ಅಗತ್ಯವನ್ನು ಪೂರೈಸಬೇಕಾದ ನೀರಿನ ಸಂಗ್ರಹವೆಷ್ಟು?

ನೀರಿನ ಲಭ್ಯತೆ

ಭೂಗೋಲದ ಮುಕ್ಕಾಲು ಪಾಲು ನೀರೆ. ಆದರೆ ನಮಗೆ ಲಭ್ಯವಿರುವ ನೀರು ಮಾತ್ರ ಅತ್ಯಲ್ಪ. ಭೂಮಿಯಲ್ಲಿರುವ ಒಟ್ಟು ಸಂಗ್ರಹದಲ್ಲಿ ಶೆ. ೯೩.೯೩ ರಷ್ಟು ಸಮುದ್ರ ನೀರು: ಉಪ್ಪುಪ್ಪು;  ಉಪಯೋಗಕ್ಕೆ ಬಾರದು. ನಾವು ಉಪಯೋಗಿಸಬಹುದಾದ ಆದರೆ ನಮಗೆ ದಕ್ಕದಷ್ಟು ನೀರು ಧೃವ ಪ್ರದೇಶದಲ್ಲಿ ಹಾಗು ಎತ್ತರವಾದ ಪರ್ವತಗಳ ಮೇಲಿನ ಬಂಡೆಗಳಲ್ಲಿ ಬಂಧಿ (ಹಿಮಗಡ್ಡೆಗ ಳಲು – ಶೇ. ೧.೬೩ ರಷ್ಟು). ಮನುಷ್ಯ ಕಷ್ಟಪಟ್ಟಾದರೂ ಬಳಸಿಕೊಳ್ಳಬಹುದಾದಷ್ಟು ನೀರು ವಸುಂಧರೆಯ ಗರ್ಭದಲ್ಲಿದೆ (ಅಂತರ್ಜಲ -ಶೇ. ೪.೩೯). ಇನ್ನು ಮನುಷ್ಯ ಸುಲಭವಾಗಿ ಬಳಸಿಕೊಳ್ಳಬಹುದಾದ ಸಿಹಿನೀರಿನ ಸಂಗ್ರಹ ಇರುವುದು ನದಿ, ಸರೋವರ, ತೊರೆ, ಕೆರೆ, ಕುಂಟೆಗಳಲ್ಲಿ. ಈ ಮೇಲ್ಮೈ ಜಲಸಂಪನ್ಮೂಲದ ಪ್ರಮಾಣ ಕೇವಲ ಶೇ.  ೦.೦೧೬೧ ರಷ್ಟು ಮಾತ್ರ. ಉಳಿದದ್ದು ಮಣ್ಣಿನ ತೇವಾಂಶ (ಶೆ.೦.೦೦೧) ಮತ್ತು ವಾಯುಮಂಡಲದ ತೇವಾಂಶ (ಶೇ. ೦.೦೦೦೧) ರೂಪದಲ್ಲಿದೆ. ಅಂದರೆ, ಮನುಷ್ಯ ಉಪಯೋಗಿಸಿಕೊಳ್ಳಬಹುದಾದ ನೆಲದೊಳಗಿನ ಮತ್ತು ನೆಲದ ಮೇಲಿನ ಒಟ್ಟು ನೀರಿನ ಸಂಗ್ರಹ ಇರುವುದು ಅತ್ಯಲ್ಪವೇ: ನೂರು ಚೊಂಬು ನೀರಿನಲ್ಲಿ ಕೇವಲ ನಾಲ್ಕು ಚೊಂಬು ಮಾತ್ರ. ಇಷ್ಟು ಮಿತವಾಗಿರುವ ನೀರಾದರೂ ಎಲ್ಲರಿಗೂ ಸಮರ್ಪಕವಾಗಿ ಸಿಗುತ್ತಿದೆಯೇ?

ನೀರಿಗೆ ಕಷ್ಟ

ಒಂದು ಅಂದಾಜಿನಂತೆ ಸರೋವರಗಳು, ಅಣೆಕಟ್ಟೆಗಳು ಹಾಗು ನದಿ ಮೂಲಗಳಿಂದ ವಾರ್ಷಿಕ ೧೪,೦೦೦ ಘ.ಕಿ.ಮೀ.ನಷ್ಟು ನೀರು ಸಿಗುತ್ತಿದೆ. ಈ ನೀರು ಸದ್ಯಕ್ಕೆ ಎಲ್ಲಾ ಮನುಷ್ಯರ ಮೂಲಭೂತ ಅಗತ್ಯಗಳನ್ನು ಪೂರೈಸಲು ಶಕ್ಯವಾಗಿದೆ. ಆದರೆ, ಇಂದಿಗೂ ಅಸಂಖ್ಯಾತ ಜನ ನೀರಿಗಾಗಿ ಬಾಯಿಬಾಯಿ ಬಿಡುತ್ತಿದ್ದಾರೆ. ಇದಕ್ಕೆ ಕಾರಣ ನೀರಿನ ಸಂಗ್ರಹ ಎಲ್ಲೆಡೆಯೂ ಸಮನಾಗಿ ಹಂಚಿಕೆಯಾಗಿಲ್ಲ. ಜಲಮೂಲಗಳಿಂದ ತುಂಬಾ ದೂರದವರೆಗೂ ಜನವಸತಿ ಹರಡಿದೆ. ಅಲ್ಲಿಗೆಲ್ಲ ನೀರು ಸರಬರಾಜು ಮಾಡುವುದು ಎಲ್ಲ ಸರ್ಕಾರಗಳಿಗೂ ಕಷ್ಟವಾಗುತ್ತಿದೆ. ಇದರ ಜೊತೆಗೆ ನೀರಿನ ವಿವೇಚನಾರಹಿತ ಬಳಕೆ ಮತ್ತು ವ್ಯಾಪಕ ಜಲಮಾಲಿನ್ಯ ಕೂಡ ನೀರಿನ ಲಭ್ಯತೆಗೆ ಕತ್ತರಿ ಹಾಕುತ್ತಿವೆ. ಮೂರನೆ ಜಗತ್ತಿನ ಅನೇಕ ದೇಶಗಳಲ್ಲಿ ಜನ ಒಂದು ಕೊಡ ಕುಡಿಯುವ ನೀರಿಗಾಗಿಯೇ ಅನೇಕ ಮೈಲುಗಳು ಅಲೆದಾಡಬೇಕಾಗಿದೆ. ಕರ್ನಾಟಕದಲ್ಲೇ ಸುಮಾರು ೨೨,೦೦೦ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವವಿದೆ ಎಂದು ಒಂದು ವರದಿ ತಿಳಿಸುತ್ತದೆ.