ಇತರ ಭೌತ ಗುಣಗಳು

ನೀರು ಹೆಚ್ಚು ಕಮ್ಮಿ ಬಣ್ಣ ರಹಿತ. ಇದು ವಿಶೇಷವಾಗಿ ತುಂಬ ಅನುಕೂಲಕರ ಗುಣಾಗಿದೆ. ಇದರಿಂದ ಸೂರ್ಯ ರಶ್ಮಿ ನೀರಿನ ಮೂಲಕ ತುಂಬಾ ಆಳದವರೆಗೆ ಹೋಗಬಲ್ಲದು. ಈ ರಶ್ಮಿಯನ್ನು ಬಳಸಿಕೊಂಡೆ ಆಳದ ಜಲಸಸ್ಯಗಳು ದ್ಯುತಿಸಂಶ್ಲೇಷಣ ಕ್ರಿಯೆಯನ್ನು ನಡೆಸುತ್ತವೆ, ಉಳಿಯುತ್ತವೆ.

ಮೇಲ್ಮೈ ಕರ್ಷಣ ಎಲ್ಲ ದ್ರವಗಳಿರುವುದು ಒಂದು ಗುಣ. ಪಾದರಸವೊಂದನ್ನು ಬಿಟ್ಟು ಉಳಿದ ಎಲ್ಲಾ ಸಾಮಾನ್ಯ ದ್ರವಗಳಲ್ಲಿ ಅತಿ ಹೆಚ್ಚು ಮೇಲ್ಮೈ ಕರ್ಷಣವಿರುವುದು ನೀರಿಗೆ. ಆದ್ದರಿಂದಲೇ ಲೋಮನಾಳದ ಮೂಲಕ ನೀರು ಬೇರೆಲ್ಲಾ ದ್ರವಗಳಿಗಿಂತ ಹೆಚ್ಚು ಎತ್ತರಕ್ಕೆ ಏರುತ್ತದೆ – ಲೋಮನಾಳದ ಗೋಡೆಯನ್ನು ಏಣಿಯಂತೆ ಮಾಡಿಕೊಂಡು. ಲೋಮನಾಳ ಹೆಚ್ಚು ಹೆಚ್ಚು ನವಿರಾದಷ್ಟು ನೀರು  ಏರುವ ಎತ್ತರ ಕೂಡ ಹೆಚ್ಚಾಗುತ್ತದೆ. ೦.೦೧ ಮಿ.ಮೀ ವ್ಯಾಸದ ಗಾಜಿನ ಕೊಳವೆಯ ಮೂಲಕ ನೀರು ಮೂರು ಮೀಟರ್. ಎತ್ತರದವರೆಗೆ ಏರಬಲ್ಲದು. ಇದೇ ರೀತಿಯಾಗಿ ಸಸ್ಯಗಳ ಕೋಶಗೋಡೆಗಳಲ್ಲಿರುವ ಕಿರಿದು ಕ್ಯಾವಿಟಿಗಳ ಮೂಲಕ ಎಲ್ಲೆಡೆಯನ್ನು ತಲುಪುತ್ತದೆ. ಮಣ್ಣಿನ ಮೂಲಕವೂ ಇದೇ ರೀತಿಯಾಗಿ ನೀರಿನ ಪ್ರಸರಣ ನಡೆಯುತ್ತದೆ. ಇದಕ್ಕೆ ಮಣ್ಣಿನಲ್ಲಿರುವ ಕುಳಿಗಳು ನೆರವಾಗುತ್ತವೆ.

ಮೇಲಿನೆಲ್ಲಾ ಕಾರಣಗಳಿಗಾಗಿ ಪ್ರಾಣಿ ಮತ್ತು ಸಸ್ಯಗಳಲ್ಲಿ ನಡೆಯುವ ಸಕಲ ಕ್ರಿಯೆಗಳಿಗೂ ನೀರು ಆದಶ್ರಪ್ರಾಯವಾಗಿದೆ. ಇದು ಹೀಗೂ ಸರಿ: ಪ್ರಾಣಿ ಮತ್ತು ಸಸ್ಯಗಳು ತಮ್ಮ ವಿಕಾಸದ ಹಾದಿಯಲ್ಲಿ ನೀರಿನ ಎಲ್ಲ ವಿಶಿಷ್ಟ ಗುಣಗಳನ್ನು ತಮ್ಮ ಗರಿಷ್ಠ ಅನುಕೂಲಕ್ಕೆ ತಕ್ಕಂತೆ ದುಡಿಸಿಕೊಳ್ಳುವುದನ್ನು ರೂಢಿಸಿಕೊಂಡಿವೆ.

ಮಾನಕವಾಗಿ ನೀರು

ನೀರು ಸರ್ವವ್ಯಾಪಿಯಾದುದರಿಂದಲೂ, ಸಮೃದ್ಧವಾಗಿರುವುದರಿಂದಲೂ ಮತ್ತು ಅದರ ಅನೇಕ ಗುಣಗಳು ಅನುಕೂಲಕರವಾಗಿರುವುದರಿಂದಲೂ, ನೀರಿನ ಹಲವಾರು ಭೌತ ಗುಣಗಳನ್ನು ವಿಜ್ಞಾನದಲ್ಲಿ ಮಾನಕವಾಗಿ ಅಂಗೀಕರಿಸಲಾಗಿದೆ.

ಸೆಲ್ಸಿಯಸ್‌ ಉಷ್ಣ ಮಾಪಕದಲ್ಲಿ ಇದರ ಘನೀಭವನ ಬಿಂದುವನ್ನು ೦ ಡಿಗ್ರಿ ಸೆಲ್ಸಿಯಸ್‌ ಎಂದೂ ಕುದಿಬಿಂದುವನ್ನು  ೧೦೦ ಡಿಗ್ರಿ ಸೆಲ್ಸಿಯಸ್ಸೆಂದು ನಿಗದಿಪಡಿಸಿಕೊಳ್ಳಲಾಗಿದೆ.

೪ ಡಿಗ್ರಿ ಸೆಲ್ಸಿಯಸ್ಸಿನಲ್ಲಿ ನೀರಿನ ಸಾಂದ್ರತೆಯನ್ನು ೧ ಗ್ರಾಮ್‌ / ಘನಸೆಂಟಿಮೀಟರ್ ಎಂದು ಇಟ್ಟುಕೊಳ್ಳಲಾಗಿದೆ. ಅದರಂತೆಯೇ ಗ್ರಾಹ್ಯೋಷ್ಣದ ಮಾನಕವನ್ನು ೧ ಎಂದು ತೆಗೆದುಕೊಳ್ಳಲಾಗಿದೆ. ಇವೆಲ್ಲವೂ ಸ್ವೇಚ್ಛೆಯಿಂದ ಆಯ್ದುಕೊಂಡ ಮಾನಕಗಳಾಗಿವೆ.

ಕೆಲವು ಭೌತ ಪರಿಮಾಣಗಳು

ದ್ರವನ ಗುಪ್ತೋಷ್ಣ (ಲೇಟೆಂಟ್‌ ಹೀಟ್‌ ಆಫ್‌ಫ್ಯೂಷನ್‌) = ೮೦ ಕ್ಯಾಲೊರಿ /ಗ್ರಾಮ್‌

ಆವೀಕರಣ ಗುಪ್ತೋಷ್ಣ (ಲೇಟೆಂಟ್‌ ಹೀಟ್‌ ಆಫ್‌ ವೇಪರೈಸೇಷನ್‌) = ೫೪೦ ಕ್ಯಾಲೊರಿ / ಗ್ರಾಮ್‌

ಸ್ನಿಗ್ದತೆ (ವಿಸ್ಯಾಸಿಟಿ) = ೦.೦೧೭೬೯ ಪಾಯಿಸ್‌ (೦ ಡಿಗ್ರಿ ಸೆಲ್ಸಿಯಸ್ಸಿನಲ್ಲಿ)

ವಿದ್ಯುದ್ವಾಹಕತೆ (ಕಂಡಕ್ವಿವಿಟಿ) = ೦.೦೪ ಮ್ಹೋಸ್‌ (೧೮ ಡಿಗ್ರಿ ಸೆಲ್ಸಿಯಸ್ಸಿನಲ್ಲಿ)

ಸಂಧಿಸ್ಥ ಉಷ್ಣತೆ (ಕ್ರಿಟಿಕಲ್‌ ಟೆಂಪರೇಚರ್) = ೭೭೪. ಇದಕ್ಕೂ ಹೆಚ್ಚಿನ ಉಷ್ಣತೆಯಲ್ಲಿ ಎಷ್ಟೇ ಒತ್ತಡ ಹಾಕಿದರೂ ನೀರು ದ್ರವ ಸ್ಥಿತಿಗೆ ಬರುವುದಿಲ್ಲ.

ಸಂಧಿಸ್ಥ ಒತ್ತಡ (ಕ್ರಿಟಿಕಲ್‌ ಪ್ರಷರ್)= ೨೧೭೭ ವಾಯುಮಾನಗಳು. ಇದು ಸಂಧಿಸ್ಥ ಉಷ್ಣತೆಯಲ್ಲಿ ನೀರನ್ನು ದ್ರವ ಸ್ಥಿತಿಗೆ ತರಲು ಅಗತ್ಯವಾದ ಒತ್ತಡ.

ಸಂಧಿಸ್ಥ ಗಾತ್ರ = ೪೫ ಘ.ಸೆಂ.ಮೀ. ಸಂಧಿಸ್ಥ ಒತ್ತಡ ಮತ್ತು ಸಂಧಿಸ್ಥ ಉಷ್ಣತೆಯಲ್ಲಿ ಒಂದು ಮೋಲ್‌ ನೀರಿನ ಗಾತ್ರ.

ರಾಸಾಯನಿಕ ಗುಣಗಳು

ರಸಾಯನ ವಿಜ್ಞಾನದ ಇತಿಹಾಸದಲ್ಲಿ ನೀರಿನ ರಾಸಾಯನಿಕ ಸಂಯೋಜನೆಯನ್ನು ಕುರಿತ ಅಧ್ಯಯನಗಳಿಗೆ ತುಂಬಾ ಮಹತ್ವ ನೀಡಲಾಗಿದೆ.

ನೀರು ಅತ್ಯಂತ ಕ್ರಿಯಾಶೀಲ ರಾಸಾಯನಿಕ ವಸ್ತು. ತೀರ ಪರಿಚಿತವಾದ ಅನೇಕ ರಾಸಾಯನಿಕ ಮತ್ತು ಭೌತ ಪ್ರಕ್ರಿಯೆಗಳಿಂದ ನೀರನ್ನು ಮರಳಿ ಪಡೆಯಬಹುದು. ಈ ಕಾರಣಕ್ಕಾಗಿ ಬಹುದಿನಗಳವರೆಗೆ ನೀರು ಒಂದು ಧಾತು ಎಂದು ತಪ್ಪಾಗಿ ಭಾವಿಸಲಾಗಿತ್ತು. ಇದು ೧೮ ನೇ ಶತಮಾನದ ಕೊನೆಯವರೆಗೂ ಮುಂದುವರಿದಿತ್ತು. ೧೭೮೧ ರಲ್ಲಿ ಕ್ಯಾವೆಂಡಿಷ್‌ ಈ ತ ಪ್ಪನ್ನು ತೊಡೆದು ಹಾಕಿದ. ಆತ ಜಲಜನಕವನ್ನು  ಆಮ್ಲಜನಕದಲ್ಲಿ ಉರಿಸಿ ನೀರು ಉತ್ಪತ್ತಿಯಾಗುವುದನ್ನು ತೋರಿಸಿದ.

ಮುಂದೆ ಲೇವಾಸ್ಯೇ ನೀರನಲ್ಲಿರುವ ಜಲಜನಕ ಮತ್ತು ಆಮ್ಲಜನಕಗಳ ತೂಕ ಪ್ರಮಾಣ ೮೫:೧೫ ಭಾಗ ಎಂದು ಪ್ರಯೋಗದ ಮೂಲಕ ಅಂದಾಜು ಮಾಡಿದ. ಲೇವಾಸ್ಯೇಯ ಈ ಅಂದಾಜು ಸರಿ ಇರಲಿಲ್ಲ. ಆದರೂ ಇದು ನೀರು ಜಲಜನಕ ಮತ್ತು ಆಮ್ಲಜನಕ ಎಂಬೆರಡು ಮೂಲವಸ್ತುಗಳಿಂದಾದ ಸಂಯುಕ್ತವೆಂಬುದನ್ನು ಸಂಶಯಕ್ಕೆಡೆಯಿಲ್ಲದಂತೆ ಸ್ಥಾಪಿಸಿತು.

ಲೇವಾಸ್ಯೇ ಕಾಲದಿಂದ ಈಚಿನವರೆಗೆ ಜಲಜನಕ – ಆಮ್ಲಜನಕಗಳ ತೂಕ ಪ್ರಮಾಣವನ್ನು ಕರಾರುವಾಕ್ಕಾಗಿ ನಿರ್ಧರಿಸುವ ಅನೇಕ ಪ್ರಯೋಗಗಳು ನಡೆದಿವೆ. ಇಂದು ರಸಾಯನ ವಿಜ್ಞಾನದ ಅಂತರಾಷ್ಟ್ರೀಯ ಸಂಘದ ಪರಮಾಣು ತೂಕಗಳ ಸಮಿತಿ ಅಂಗೀಕರಿಸಿರುವ ಪ್ರಮಾಣ ೮:೧.೦೦೮.

ನೀರು ಸಂಯುಕ್ತವೆಂದು ತಿಳಿದ ಮೇಲೂ, ಮೊದಮೊದಲಿಗೆ, ಅನಿಲಗಳ ಪರಮಾಣು ತೂಕ ಮತ್ತು ಅಣು ತೂಕಗಳ ಬಗ್ಗೆ ಇದ್ದ ಗೊಂದಲದಿಂದಾಗಿ ನೀರಿನ ಆಣು ಸೂತ್ರವನ್ನು H20 ಗೆ HO ಎಂದೇ ತಿಳಿಯಲಾಗಿತ್ತು. ೧೮೧೧ ರಲ್ಲಿ ಅವೊಗ್ಯಾಡ್ರೋ ನೀರಿನ ಅಣುಸಿದ್ಧಾಂತವನ್ನು ವಿವರಿಸಿದ ಇದರ ಪ್ರಕಾರ, ನೀರಿನ ಅಣುವಿನಲ್ಲಿ ಜಲಜನಕ ಮತ್ತು ಆಮ್ಲಜನಕಗಳು ಗಾತ್ರಾನುಸಾರ ೨:೧ ರ ಪ್ರಮಾಣದಲ್ಲಿರುತ್ತವೆ. ಆದ್ದರಿಂದ ನೀರಿನ ಅಣು ಸೂತ್ರ H20 ಆಗಿರಬೇಕೆಂದು ಖಚಿತಪಡಿಸಿದ.

ಸಾರ್ವತ್ರಿಕ ದ್ರಾವಕ

ಈಚೆಗೆ ಅನೇಕಾನೇಕ ರೀತಿಯ ರಾಸಾಯನಿಕಗಳನ್ನು ಸತತವಾಗಿ ಸಂಸ್ಕರಿಸಲಾಗುತ್ತಿದೆ. ಆದರೆ ಈವತ್ತಿಗೂ ನೀರು ಒಂದು ಅತ್ಯುತ್ತಮ ದ್ರಾವಕವಾಗಿ ಉಳಿದಿದೆ. ಅದು ಅನೇಕ ಪದಾರ್ಥಗಳನ್ನು ತನ್ನಲ್ಲಿ ಕರಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅದರ ಈ ಸಾಮರ್ಥ್ಯ ಎಷ್ಟು ಹೆಚ್ಚಾಗಿದೆ ಎಂದರೆ ಅದನ್ನು ಸಾಮಾನ್ಯವಾಗಿ ಸಾರ್ವತ್ರಿಕ ದ್ರಾವಕ ಎಂದು ಕರೆಯಲಾಗುತ್ತದೆ. ಎಲ್ಲವನ್ನು ತನ್ನೊಳಗೆ ಕರಗಿಸಿಕೊಳ್ಳಬಲ್ಲ ದ್ರಾವಕವೊಂದರ ಪತ್ತೆಯಲ್ಲಿ ಹಿಂದಿನ ಕಾಲದ ರಸವಾದಿಗಳು ತಲೆ ಕೆಡಿಸಿಕೊಂಡಿದ್ದರು. ನೀರು ಅದಕ್ಕೆ ಸಮೀಪವಾದ ಒಂದು ದ್ರಾವಕ. ಎಲ್ಲ ರಾಸಾಯನಿಕ ವಸ್ತುಗಳು ನೀರಿನಲ್ಲಿ ಒಂದು ನಿರ್ದಿಷ್ಟ ವಿಲೀನತೆಯನ್ನು ಹೊಂದಿವೆ – ಎಲ್ಲ ಅನುಪಾತದಲ್ಲೂ ನೀರಿನಲ್ಲಿ ಸಂಪೂರ್ಣವಾಗಿ ವಿಲೀನವಾಗುವ ಎಥನಾಲ್‌ನಿಂದ ಹಿಡಿದು ಕನಿಷ್ಟ ವಿಲೀನತೆಯನ್ನು ಹೊಂದಿರುವ ಮರ್ಕ್ಯುರಿಕ್‌ ಸಲ್ಫೈಡ್‌ವರೆಗೆ.

ಸಮುದ್ರ, ಚಿಲುಮೆಗಳು ಮತ್ತು ಬಾವಿಗಳಂತ ನೈಸರ್ಗಿಕ ಮೂಲಗಳಿಂದ ದೊರಕುವ ನೀರಿನಲ್ಲಿ ಅನೇಕ ಲವಣಗಳು ಮತ್ತು ಖನಿಜಗಳು ಕರಗಿರುತ್ತವೆ. ಅತ್ಯಂತ ಶುದ್ಧವಾದ ನೀರಿನಲ್ಲಿ ಕರಗಿದ ಅಶುದ್ಧತೆಗಳು ಶೆ. ೦.೦೦೫ ರಷ್ಟಿರುತ್ತವೆ. ಸಮುದ್ರ ನೀರಿನಲ್ಲಿ ಈ ಪ್ರಮಾಣ ಶೆ. ೩.೬ ರಷ್ಟಿರುತ್ತದೆ.

ನೀರಿನಲ್ಲಿ ಕರಗುವ ವಸ್ತುಗಳಲ್ಲಿ ಕೆಲವು ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ; ಮತ್ತೆ ಕೆಲವು ಅಯಾನುಗಳನ್ನು ಉತ್ಪತ್ತಿ ಮಾಡುವುದಿಲ್ಲ. ರಾಸಾಯನಿಕ ದೃಷ್ಟಿಯಲ್ಲಿ ಆಮ್ಲಗಳು,ಪ್ರತ್ಯಾಮ್ಲಗಳು, ಮತ್ತು ಲವಣಗಳು ಮೊದಲ ಗುಂಪಿಗೆ ಸೇರುತ್ತವೆ. ಹೈಡ್ರೋಕಾರ್ಬನ್‌ ಬಂಧದಿಂದ ನೀರಿನೊಂದಿಗೆ ವರ್ತಿಸಬಲ್ಲ ಮೀಥೈಲ್‌, ಈಥೈಲ್‌ ಆಲ್ಕೋಹಾಲ್‌ಗಳಂಥ ಕಡಿಮೆ ತೂಕದ ಆಲ್ಕೋಹಾಲ್‌ಗಳು, ಅಮೋನಿಯಾ ಮುಂತಾದವುಗಳು ಎರಡನೆ ಗುಂಪಿಗೆ ಸೇರುತ್ತವೆ.

ಈ ಎರಡೂ ರೀತಿಗಳಲ್ಲಿಯೂ ರಾಸಾಯನಿಕವಾಗಿ ಪರಿವರ್ತನೆಗೆ ಒಳಗಾಗದ ಸಂಯುಕ್ತಗಳು ನೀರಿನಲ್ಲಿ ಕರಗುವುದಿಲ್ಲ. ಉದಾಹರಣೆಗೆ ಚಕ್ರೀಯ ಹೈಡ್ರೋಕಾರ್ಬನ್‌ಗಳು (ಬೆನ್‌ಜೀನ್‌, ಟಾಲೀನ್‌ ಮೊದಲಾದವು).

ನೀರು ಸಾರ್ವತ್ರಿಕ ದ್ರಾವಕವಾಗಿರುವುದಕ್ಕೆ ಅದರ ಅಣು ಸರಳ ರೇಖೀಯವಾಗಿರದೆ ಬಾಗಿರುವುದೂ ಒಂದು ಕಾರಣ ಎಂದು ತಿಳಿಯಲಾಗಿದೆ.

ಆಯಾನೀಕರಣ

ನೀರಿನ ಸ್ವಯಂ ಅಯಾನೀಕರಣವು ತುಂಬಾ ಕಡಿಮೆ. ಆದರೆ ತುಂಬಾ ಮುಖ್ಯ ನೀರಿನ ಅಣುವು ಅಯಾನೀಕರಣಗೊಂಡಾಗೊಂದು ಜಲಜನಕದ ಅಯಾನು (H+) ಮತ್ತು ಒಂದು ಹೈಡ್ರಾಕ್ಸಿಲ್‌ ಅಯಾನು (OH) ಉತ್ಪತ್ತಿಯಾಗುತ್ತವೆ. ಮತ್ತು ಈ ಕ್ರಿಯೆ ಪರಾವರ್ತ್ಯ. ಅಂದರೆ, ಈ ಅಯಾನುಗಳು ಮತ್ತೆ ಕೂಡಿ ನೀರಿನ ಅಣುವಾಗುತ್ತದೆ. ಈ ಕ್ರಿಯೆ ಪರಾವರ್ತ್ಯ ಎಂಬುದನ್ನು ಈ ಸಮೀಕರಣದಿಂದ ಸೂಚಿಸಬಹುದು:

(H2o) = = =(H+) + (OH).

ಒಂದು ವ್ಯವಸ್ಥೆಯಲ್ಲಿ ಈ ಎರಡೂ ವಿರುದ್ಧ ಕ್ರಿಯೆಗಳು (ಇಲ್ಲಿ ನೀರಿನಿಂದ ಅಯಾನುಗಳು ಮತ್ತು ಅಯಾನುಗಳಿಂದ ನೀರು ಉತ್ಪತ್ತಿಯಾಗುವ ಕ್ರಿಯೆ) ಸಮಾನ ದರದಲ್ಲಿ ಸಾಗುತ್ತಿದ್ದರೆ ಅಂಥ ವ್ಯವಸ್ಥೆ ಸಮಸ್ಥಿತಿಯಲ್ಲಿದೆ ಎನ್ನುತ್ತೇವೆ. ಸಮಸ್ಥಿತಿಯಲ್ಲಿರುವ ನೀರಿನಲ್ಲಿ ಎರಡೂ ಅಯಾನುಗಳ ಸಾಂದ್ರತೆ ಸಮವಾಗಿರುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ನೀರು ತುಂಬಾ ಕಡಿಮೆ ವಿಭಜನೆಯಾಗುವುದರಿಂದ ಅಯಾನುಗಳ ಸಾಂದ್ರತೆಗೆ ಹೋಲಿಸಿದರೆ ಅಣುಗಳ ಸಾಂದ್ರತೆ ತುಂಬಾ ಹೆಚ್ಚಾಗಿರುತ್ತದೆ.

H+ನ ಸಾಂದ್ರತೆ ಒಂದು ದ್ರಾವಣದ ಆಮ್ಲತೆಯನ್ನು ನಿರ್ಧರಿಸುತ್ತದೆ. ಹಾಗೆಯೇ, OHನ ಸಾಂದ್ರತೆ ಅದರ ಪ್ರತ್ಯಾಮ್ಲತೆಯನ್ನು ನಿರ್ಧರಿಸುತ್ತದೆ. ಒಂದು ತಟಸ್ಥ ದ್ರವಾಣದಲ್ಲಿ ಅಥವಾ ಶುದ್ಧ ನೀರಿನಲ್ಲಿ ಅವುಗಳ ಸಾಂದ್ರತೆ ಒಂದು ಮೋಲ್‌ ಪ್ರತಿ ಲೀಟರಿನಲ್ಲಿ ಯಾವುದೇ ದ್ರಾವಣದಲ್ಲಿ H+ ನ ಸಾಂದ್ರತೆ ಹೆಚ್ಚಾದರೆ ಆ ದ್ರಾವಣಕ್ಕೆ  ಆಮ್ಲೀಯ ಲಕ್ಷಣ ಲಭಿಸುತ್ತದೆ; ಕಡಿಮೆಯಾದರೆ ಪ್ರತ್ಯಾಮ್ಲೀಯ ಲಕ್ಷಣವನ್ನು ಹೊಂದುತ್ತದೆ. ಆಮ್ಲೀಯತೆ ಅಥವ ಪ್ರತ್ಯಾಮ್ಲೀಯತೆಯನ್ನು ಸೂಚಿಸಲು pH ಬೆಲೆಯನ್ನು ಬಳಸಲಾಗುತ್ತದೆ. ತಟಸ್ಥ ನೀರಿನ pH ಬೆಲೆಯನ್ನು ೭ ಎಂದು ಪರಿಗಣಿಸಲಾಗಿದೆ. ದ್ರಾವಣ ಆಮ್ಲೀಯವಾದಂತೆ ಅದರ H+ ಸಾಂದ್ರತೆ ಹೆಚ್ಚುತ್ತದೆ; pH ಬೆಲೆ ೭ ಕ್ಕಿಂತ ಕಡಿಮೆಯಾಗುತ್ತದೆ. ಅಂದರೆ, pH ಬೆಲೆ ೭ಕ್ಕಿಂತ ಕಡಿಮೆ ಇರುವ ದ್ರಾವನ ಆಮ್ಲೀಯವಾಗಿರುತ್ತದೆ. ಅದೇ, ದ್ರಾವಣ ಪ್ರತ್ಯಾಮ್ಲೀಯವಾದಂತೆ H+ ನ ಸಾಂದ್ರತೆ ಕಡಿಮೆಯಾಗುತ್ತದೆ; pH ನ ಬೆಲೆ ೭ ಕ್ಕಿಂತ ಹೆಚ್ಚಾಗುತ್ತದೆ. pH ನ ಬೆಲೆ ೭ ಕ್ಕಿಂತ ಹೆಚ್ಚಾಗಿರುವ ದ್ರಾವಣಗಳೆಲ್ಲ ಪ್ರತ್ಯಾಮ್ಲೀಯ ಲಕ್ಷಣವನ್ನು ಹೊಂದಿರುತ್ತದೆ.

pH = Log10 (1/

[H+]) = Log10(1/10-7) = 7

ಉತ್ಕರ್ಷಣಅಪಕರ್ಷಣ

ರಾಸಾಯನಿಕ ಕ್ರಿಯೆಗಳಲ್ಲಿ ಆಮ್ಲ – ಪ್ರತ್ಯಾಮ್ಲ ಕ್ರಿಯೆಗಳು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತವೆ. ಹಾಗೆಯೇ, ಉತ್ಕರ್ಷಣೆ ಮತ್ತು ಅಪಕರ್ಷಣೆಗಳೂ ಕೂಡ.

ಒಂದು ವಸ್ತು ಇಲೆಕ್ಟ್ರಾನನ್ನು ಕಳೆದುಕೊಂಡರೆ ಅದನ್ನು ಉತ್ಕರ್ಷಣೆ ಎನ್ನುತ್ತೇವೆ. ಇದನ್ನೂ ಹೀಗೂ ಹೇಳಬಹುದು: ಯಾವುದೇ ವಸ್ತುವಿಗೆ ಆಮ್ಲಜನಕವನ್ನು ಸೇರಿಸುವುದು ಅಥವಾ ಅದರಿಂದ ಜಲಜನಕವನ್ನು ತೆಗೆಯುವುದು. ಇದಕ್ಕೆ ವಿರುದ್ಧವಾಗಿ, ಒಂದು ವಸ್ತು ಇಲೆಕ್ಟ್ರಾನನ್ನು ಪಡೆದುಕೊಂಡರೆ ಅದನ್ನು ಅಪಕರ್ಷಣೆ ಎನ್ನುತ್ತೇವೆ. ಇನ್ನೊಂದು ರೀತಿಯಲ್ಲಿ: ಜಲಜನಕ ಸೇರಿಸುವುದು; ಆಮ್ಲಜನಕ ತೆಗೆಯುವುದು.

ನೀರಿಗೆ ಉತ್ಕರ್ಷಕ ಗುಣ ಕಡಿಮೆ; ಅಪಕರ್ಷಕ ಗುಣ ಇನ್ನೂ ಕಡಿಮೆ. ಆದರೂ ಅದು ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಉತ್ಕರ್ಷಣೆ

ತೀವ್ರ ಕ್ರಿಯಾಕಾರಿ ವಸ್ತುವಾದ ಸೋಡಿಯಮ್‌ನೊಂದಿಗೆ ಬಹು ತೀವ್ರವಾಗಿ ಮತ್ತು ರಭಸವಗಿ ವರ್ತಿಸಿ Na+,OH; ಮತ್ತು ಹೈಡ್ರೀಜನ್‌ ಅನಿಲವನ್ನು ಉತ್ಪತ್ತಿ ಮಾಡುತ್ತದೆ.

Na + H2O –> Na+ + OH + H+

2Na + 2H2O –> 2NaOH + H2 (l)

ಸೋಡಿಯಮ್‌ನಂತೆ ಪ್ರಬಲ ವಿದ್ಯುದ್ಧನ ಸ್ವಭಾವದ ಲೋಹಗಳಾಗಿರುವ ಪೊಟ್ಯಾಸಿಯಮ್‌, ಕ್ಯಾಲ್ಸಿಯಮ್‌, ಬೇರಿಯಮ್ಮುಗಳೊಂದಿಗೆ ಕೂಡ ನೀರು ಸಾಮಾನ್ಯ ಪರಸ್ಥಿತಿಯಲ್ಲಿಯೂ ವರ್ತಿಸಿ ಜಲಜನಕ ಅನಿಲವನ್ನು ಕೊಡುತ್ತದೆ.

Ba + 2H2O –> Ba(OH)2 + H2(g),

2K + 2H2O –> 2KOH + H2(g)

Ca + 2H2O –> Ca(OH)2 + H2(g)

ಮೇಲಿನ ಕ್ರಿಯೆಗಳೆಲ್ಲವೂ ನೀರಿನ ಉತ್ಕರ್ಷಕ ಗುಣವನ್ನು ಸೂಚಿಸುತ್ತವೆ.

ಕಡಿಮೆ ಕ್ರಿಯಶೀಲವಾದ ಕಬ್ಬಿಣದಂಥ ಲೋಹಗಳ ಮೇಲೆ ನೀರು ತುಂಬಾ ನಿಧಾನವಾಗಿ ವರ್ತಿಸುತ್ತದೆ. ಅದೇ ಹಬೆಯೊಂದಿಗೆ ವೇಗವಾಗಿ ವರ್ತಿಸಿ ಕಬ್ಬಿಣದ ಆಕ್ಸೈಡ್‌ ಮತ್ತು ಜಲಜನಕ ಅನಿಲವನ್ನು ಉತ್ಪತ್ತಿ ಮಾಡುತ್ತದೆ.

3F3 + 4H2O –> Fe3O4 + 4H2(9)(g)

ಕಾರ್ಬನ್‌, ಸಿಲಿಕಾನ್‌ ಮುಂತಾದ ಅಲೋಹಗಳ ಮೇಲೆ ಹಬೆಯನ್ನು ಹಾಯಿಸಿದಾಗ ಜಲಜನಕ ಅನಿಲ ಉತ್ಪತ್ತಿಯಾಗುತ್ತದೆ.

C + H2O —-CO + H2(g)

ಮೇಲಿನ ರಾಸಾಯನಿಕ ಕ್ರಿಯೆಗೆ ಕೈಗಾರಿಕಾ ಮಹತ್ವವಿದೆ. ಕಾರ್ಬನ್‌ ಮಾನಾಕ್ಸೈಡ್‌ (CO) ಮತ್ತು ಜಲಜನಕ (H2) ಮಿಶ್ರಣಕ್ಕೆ ಜಲಾನಿಲ (ವಾಟರ್ ಗ್ಯಾಸ್‌) ಎಂದು ಹೆಸರು. ಇದೊಂದು ಅನಿಲ ರೂಪದ ಇಂಧನ ಜೊತೆಗೆ, ಭಾರಿ ಪ್ರಮಾಣದಲ್ಲಿ ಜಲಜನಕ ಮತ್ತು ಸಂಶ್ಲೇಷಿತ ಪೆಟ್ರೋಲ್‌ ತಯಾರಿಕೆಯಲ್ಲಿ ಜಲಾನಿಲದ ಉಪಯೋಗವಿದೆ.

ಅಪಕರ್ಷಣೆ

ಹ್ಯಾಲಜನ್ನಗಳೊಂದಿಗೆ, ಮುಖ್ಯವಾಗಿ ಪ್ಲೋರೀನು ಮತ್ತು ಕ್ಲೋರೀನುಗಳೊಂದಿಗೆ, ನೀರು ವರ್ತಿಸುವುದು ಅಪಕರ್ಷಕ್ಕೆ ಉದಾಹರಣೆಯಾಗುತ್ತದೆ.

ಕ್ಲೋರೀನು ನೀರಿನೊಂದಿಗೆ ವಿಲೀನವಾದಾಗ ಪರಾವರ್ತ್ಯ ಕ್ರಿಯೆ ಜರುಗಿ ಹೈಡ್ರೊಕ್ಲೋರಿಕ್‌ ಮತ್ತು ಹೈಪೊಕ್ಲೊರಸ್‌ ಆಮ್ಲಗಳ ಮಿಶ್ರಣ ಉತ್ಪತ್ತಿಯಾಗುತ್ತದೆ.

H2O+Cl2 ==== HCl + HOCl

ಈ ದ್ರಾವಣದಿಂದ ನಿಧಾನವಾಗಿ ಆಕ್ಸಿಜನ್‌ ಹೊರಬಿದ್ದು ಕೊನೆಯಲ್ಲಿ ಹೈಡ್ರೋಕ್ಲೋರಿಕ್‌ ಆಮ್ಲ ಮಾತ್ರ ದ್ರಾವಣದಲ್ಲಿ ಉಳಿಯುತ್ತದೆ.

ಪ್ರಬಲ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳುಳ್ಳ ಸಂಯುಕ್ತಗಳು ನೀರಿನೊಂದಿಗೆ ವರ್ತಿಸುತ್ತವೆ. ಉದಾಹರಣೆಗೆ ಗಂಧಕದ ಟೈಆಕ್ಸೈಡು ನೀರಿನೊಂದಿಗೆ ವರ್ತಿಸಿ ಸಲ್ಫೂರಿಕ್‌ ಆಮ್ಲವನ್ನು ಕೊಡುತ್ತದೆ.

SO3(g) + H2O –> H2SO4

ಈ ಕ್ರಿಯೆ ಸಲ್ಪ್ಯೂರಿಕ್‌ ಆಮ್ಲವನ್ನು ತಯಾರಿಸುವ ಸಂಪರ್ಕ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕೆಲವು ಕ್ರಿಯೆಗಳಲ್ಲಿ ನೀರು ತನ್ನಲ್ಲಿರುವ OH ಪುಂಜವನ್ನು ನೀಡಿ ಬೇರೊಂದು ಪರಮಾಣುವನ್ನೋ ಅಥವ ಪರಮಾಣು ಪುಂಜವನ್ನೋ ಪಡೆದುಕೊಳ್ಳುತ್ತದೆ.

CaC2 + 2HOH –> Ca(OH)2 + C2H2

ಕ್ರಿಯಾವರ್ಧಕ

ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ನೀರು ಕ್ರಿಯಾವರ್ಧಕವಾಗಿ (ಕೆಟಲಿಸ್ಟ್) ವರ್ತಿಸುತ್ತದೆ.

ಜಲಜನಕ ಮತ್ತು ಆಮ್ಲಜನಕ ಮಿಶ್ರಣಕ್ಕೆ ಬೆಂಕಿ ತಗುಲಿಸಿದರೆ ಆಸ್ಫೋಟನೆಯೊಡನೆ ಎರಡೂ ಕೂಡಿ ನೀರು ಉತ್ಪತ್ತಿಯಾಗುತ್ತದೆ. ಆದರೆ, ಆಶ್ಚರ್ಯವೆಂದರೆ, ಎರಡೂ ಅನಿಲಗಳು ಸಂಪೂರ್ಣ ತೇವಾಂಶರಹಿತವಾಗಿದ್ದರೆ ಈ ಕ್ರಿಯೆ ನಡೆಯುವುದಿಲ್ಲ ಎಂದು ಕಂಡುಬಂದಿದೆ. ಅದೇ ರೀತಿ, ಸಾಮಾನ್ಯ ಪರಿಸ್ಥಿತಿಯಲ್ಲಿ ಆಸ್ಫೋಟನೆಯೊಡನೆ ಸಂಯೋಗಗೊಳ್ಳುವ ಜಲಜನಕ ಮತ್ತು ಕ್ಲೋರೀನುಗಳು ಹಾಗೂ ಅಮೋನಿಯಾ ಮತ್ತು ಹೈಡ್ರೋಕ್ಲೋರೈಡುಗಳು ನೀರಿಲ್ಲದಾಗ ಸಂಯೋಗೊಳ್ಳುವುದಿಲ್ಲ. ಹೀಗೆ ಇನ್ನೂ ಅನೇಕ ರಾಸಾಯನಿಕ ಕ್ರಿಯೆಗಲಲ್ಲಿ ಅತ್ಯಲ್ಪ ಪ್ರಮಾಣದಲ್ಲಾದರೂ ನೀರು ಇರಲೇಬೇಕು ಎಂಬುದನ್ನು ಸಮರ್ಥಿಸುವ ಕೆಲವು ವಿಚಿತ್ರ ನಿದರ್ಶನಗಳು ಇವೆ: ಸಾಮಾನ್ಯ ಗಾಳಿಯಲ್ಲಿ ಧಗಧಗನೆ ಹೊತ್ತಿ ಉರಿಯುವ ಸೋಡಿಯಮ್‌ ತುಂಡು ಜಲರಹಿತ ಆಕ್ಸಿಜನ್‌ನಲ್ಲಿ ತಕ್ಷಣ ಆರಿಹೋಗುತ್ತದೆ.

ಕೆಲವೊಂದು ವಸ್ತುಗಳನ್ನು ದೀರ್ಘ ಕಾಲ ಒಣಗಿಸಿದಾಗ ಅವುಗಳ ಕುದಿ ಬಿಂದು ಏರುತ್ತದೆ ಎಂದು ಬೇಕರ್ ವರದಿ ಮಾಡಿದ್ದಾರೆ. ಅವರ ಪ್ರಕಾರ ೮ ವರ್ಷಗಳ ಕಾಲ ಒಣಗಿಸಿದ ಬ್ರೋಮೀನಿನ ಕುದಿ ಬಿಂದು ೬೩ ಡಿಗ್ರಿ ಸೆಲ್ಸಿಯಸ್ಸಿನಿಂದ ೧೧೮ ಡಿಗ್ರಿ ಸೆಲ್ಸಿಯಸ್ಸಿಗೆ ಏರುತ್ತದೆ. ೮.೫ ವರ್ಷ ಒಣಗಿಸಿದ ಬೆನ್‌ಜೀನಿನ ಕುದಿ ಬಿಂದು ೮೦ ಡಿಗ್ರಿ ಸೆಲ್ಸಿಯಸ್ಸಿನಿಂದ ೧೦೧ ಡಿಗ್ರಿ ಸೆಲ್ಸಿಯಸ್ಸಿಗೆ ಏರುತ್ತದೆ. ಈಥೈಲ್‌ ಆಲ್ಕೋಹಾಲನ್ನು ೯ ವರ್ಷ ಒಣಗಿಸಿದರೆ ಅದರ ಕುದಿ ಬಿಂದು ೨೮.೫ ಡಿಗ್ರಿ ಸೆಲ್ಸಿಯಸ್ಸಿನಿಂದ ೧೨೮ ಡಿಗ್ರಿ ಸೆಲ್ಸಿಯಸ್ಸಿಗೆ ಏರುತ್ತದೆ.

ನೀರು ಉಷ್ಣೀಯವಾಗಿ ತುಂಬಾ ಸ್ಥಿರವಾದುದಾಗಿದೆ. ೨೭೦೦ ಡಿಗ್ರಿ ಸೆಲ್ಸಿಯಸ್ಸಿನಲ್ಲಿ ಅದು ಕೇವಲ ೧೧% ನಷ್ಟು ಮಾತ್ರ ಜಲಜನಕ ಮತ್ತು ಆಮ್ಲಜನಕವಾಗಿ ವಿಭಜನೆ ಹೊಂದುತ್ತದೆ. ಈ ಸಮೀಕರಣದ ಪ್ರಕಾರ: 2H2O === 2H2 + O2

ನೀರಿನ ವಿದ್ಯುದ್ವಿಶ್ಲೇಷಣೆ

ಸ್ವಲ್ಪವೇ ಸಲ್ಪ್ಯೂರಿಕ್‌ ಆಮ್ಲವನ್ನು ಸೇರಿಸಿದ ನೀರಿನ ಮೂಲಕ ನೇರವಾಗಿ ವಿದ್ಯುತ್ತನ್ನು ಹಾಯಿಸಿದರೆ ಅದು ಜಲಜನಕ ಮತ್ತು ಆಮ್ಲಜನಕವಾಗಿ ವಿಭಜನೆ ಹೊಂದುತ್ತದೆ.

2H2O(l) –> 2H2(g) + O2(g)

ನೀರನ್ನು ವಿದ್ಯುತ್ತಿನಿಂದ ವಿಭಜಿಸಿ ಜಲಜನಕ ಮತ್ತು ಆಮ್ಲಜನಕದ ಅನಿಲಗಳನ್ನು ಉತ್ಪತ್ತಿ ಮಾಡಲು ಉಪಯೋಗುಸವ ವ್ಯವಸ್ಥೆಯನ್ನು ಚಿತ್ರ. ೧೨ ರಲ್ಲಿ ತೋರಿಸಿದೆ.

ಮೆದುಗಡಸು

ನೀರಿನಲ್ಲಿ ಎರಡು ವಿಧ. ೧. ಮೆದು ನೀರು. ೨. ಗಡಸು ನೀರು. ಯಾವ ನೀರಿನಲ್ಲಿ ಸೋಪು ಸಮೃದ್ಧ ನೊರೆಯನ್ನು ಕೊಡುತ್ತದೆಯೋ ಅಂಥ ನೀರನ್ನು ಮೆದು ನೀರು ಎನ್ನುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಯಾವ ನೀರು ಸೋಪಿನಲ್ಲಿ ಸಮೃದ್ಧ ನೊರೆಯನ್ನು ಕೊಡುವುದಿಲ್ಲವೋ ಅದನ್ನು ಗಡಸು ನೀರು ಎನ್ನುತ್ತೇವೆ.

ಮಳೆಯ ನೀರು ಮೆದುವಾಗಿಯೇ ಇರುತ್ತದೆ. ಭೂಮಿಗಿಳಿದು ನೆಲದ ಮೇಲೆ ಹರಿಯುವಾಗ ಮತ್ತು ಇಳಿಯುವಾಗ ಅದು ಅನೇಕ ಲವಣಗಳನ್ನು ವಿಲೀನಗೊಳಿಸಿಕೊಳ್ಳುತ್ತದೆ. ಅದು ವಿಲೀನಗೊಳಿಸಿಕೊಂಡ ಲವಣಗಳು ಯಾವುವು ಎಂಬುದರ ಮೇಲೆ ಅದರ ಮೆದುತನ ಉಳಿಯುತ್ತದೆ ಅಥವ ಅಳಿದು ಗಡಸಾಗುತ್ತದೆ.

ನೀರಿನಲ್ಲಿ ಕರಗಿರುವ ಲವಣಗಳನ್ನಾಧರಿಸಿ ಎರಡು ರೀತಿಯ ಗಡಸು ನೀರನ್ನು ಪರಿಗಣಿಸಬಹುದು. ೧. ತಾತ್ಕಾಲಿಕ ಗಡಸು ನೀರು. ೨. ಶಾಶ್ವತ ಗಡಸು ನೀರು.

ತಾತ್ಕಾಲಿಕ ಗಡಸು ನೀರು: ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ ಬೈಕಾರ್ಬೊನೇಟುಗಳು ಮತ್ತು ಕಬ್ಬಿಣದ ಕಾರ್ಬೊನೇಟ್‌ಗಳು ಕರಗಿದ್ದರೆ ನೀರು ತಾತ್ಕಾಲಿಕ ಗಡಸುತನವನ್ನು ಪಡೆದುಕೊಳ್ಳುತ್ತದೆ.

ಶಾಶ್ವತ ಗಡಸು ನೀರು:  ನೀರಿನಲ್ಲಿ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಸಲ್ಫೇಟುಗಳಲು ಕರಗಿದ್ದರೆ ನೀರು ಶಾಶ್ವತ ಗಡಸುತನವನ್ನು ಪಡೆದುಕೊಳ್ಳುತ್ತದೆ.

ನೀರಿನಲ್ಲಿ ಕರಗಿರುವ ಕಾರ್ಬೊನೇಟುಗಳು ಮತ್ತು ಸಲ್ಫೇಟುಗಳು ದಶಲಕ್ಷ ಭಾಗಗಳಲ್ಲಿ ೫೦ ಕ್ಕಿಂತ ಕಡಿಮೆ ಇದ್ದರೆ ಆ ನೀರನ್ನು ಮೆದು ಎಂದು ಪರಿಗಣಿಸಲಾಗುವುದು; ೧೦೦ ಕ್ಕಿಂತ ಹೆಚ್ಚಾದರೆ ಗಡಸು.

ತೊಂದರೆಗಳು

ಗಡಸು ನೀರು ಅನೇಕ ಕ್ಷೇತ್ರಗಳಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ.

ಮನೆ ಬಳಕೆಯಲ್ಲಿ : ಬಟ್ಟೆಗಳನ್ನು ಶುಭ್ರಗೊಳಿಸುವುದಕ್ಕೆ ಗಡಸು ನೀರನ್ನು ಉಪಯೋಗಿಸಿದರೆ ಹೆಚ್ಚು ಸೋಪು ವ್ಯಯವಾಗುತ್ತದೆ. ಜೊತೆಗೆ, ಬಟ್ಟೆಗಳ ಮೇಲೆ ಗೆರೆಗಳು ಮತ್ತು ಕಲೆಗಳನ್ನು ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ಗಳು ಮೂಡಿಸುತ್ತವೆ. ಕಬ್ಬಿಣವು ಬಟ್ಟೆಗಳನ್ನು ಮಾಸಲು ಬಣ್ಣಕ್ಕೆ ತಿರುಗಿಸುತ್ತವೆ. ಇದೇ ಕಾರಣಕ್ಕೆ ಬಟ್ಟೆ ಗಿರಣಿಗಳಲ್ಲಿ ಗಡಸು ನೀರನ್ನು ಉಪಯೋಗಿಸುವುದಿಲ್ಲ. ಸ್ನಾನಕ್ಕೆ ಉಪಯೋಗಿಸುವ ನೀರಿನ ತೊಟ್ಟಿಯಲ್ಲಿ ಗಡಸು ನೀರು ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಕಶ್ಮಲಗಳು ಅಂಟಿಕೊಳ್ಳುತ್ತವೆ.

ಗಡಸು ನೀರನ್ನು ಅಡಿಗೆ ಮಾಡಲು ಉಪಯೋಗಿಸದರೆ ಧಾನ್ಯಗಳನ್ನು ಮತ್ತು ಕಾಳುಗಳನ್ನು ಮೆದುವಾಗಿಸಲು ಹೆಚ್ಚು ಇಂಧನ ಬೇಕಾಗುತ್ತದೆ. ಗಡಸು ನೀರು ಕಾಫಿ ಟೀಯಲ್ಲಿ ಅಹಿತಕರ ರುಚಿಯನ್ನು ಉಳಿಸುತ್ತದೆ. ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಂ ಬೈಕಾರ್ಬೊನೇಟುಗಳು ಕಾರ್ಬೊನೇಟುಗಳಾಗಿ ಪರಿವರ್ತನೆಗೊಂಡು ಪಾತ್ರೆಗಳ ಒಳಭಾಗದಲ್ಲಿ ನಿಕ್ಷೇಪಗೊಳ್ಳುತ್ತವೆ. ಇದರಿಂದ ಪಾತ್ರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

ಗಡಸು ನೀರನ್ನು ಕುಡಿಯಲು ಬಳಸಿದರೆ ಅದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕ್ಯಾಲ್ಸಿಯಮ್‌ ಆಕ್ಸಲೇಟ್‌ ಹರಳುಗಳು ಮೂತ್ರ ಪಿಂಡಗಳಲ್ಲಿ ಅಥವ ಮೂತ್ರ ಕೋಶಗಳಲ್ಲಿ ಹೆಚ್ಚಾಗಿ ಸಂಗ್ರಹವಾಗಿ ಕಲ್ಲುಗಳು ಉಂಟಾಗುತ್ತವೆ. ಚರ್ಮದ ಮೇಲೆ ಬಿದ್ದರೆ ಚರ್ಮವು ಶುಷ್ಕವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಕಾಗದ ಕಾರ್ಖಾನೆಗಳಲ್ಲಿ: ಕಾಗದ ತಯಾರಿಕೆಯಲ್ಲಿ ಗಡಸು ನೀರನ್ನು ಬಳಸಿದರೆ ಅದರಲ್ಲಿರುವ ಕ್ಯಾಲ್ಸಿಯಮ್‌, ಮೆಗ್ನಿಸಿಯಮ್‌ ಮತ್ತು ಕಬ್ಬಿಣದ ಲವಣಗಳು ಕಾಗದದಲ್ಲಿ ಬಳಸುವ ರಾಸಾಯನಿಕಗಳ ಜೊತೆ ವರ್ತಿಸಿ ಕಾಗದದ ಬಣ್ಣವನ್ನು ಕೆಡಿಸುತ್ತವೆ, ನುಣುಪು ಮತ್ತು ಹೊಳೆಯುವ ಗುಣವನ್ನು ಹಾಳುಮಾಡುತ್ತವೆ.

ಬೇಕರಿಗಳಲ್ಲಿ: ಗಡಸು ನೀರಿನಲ್ಲಿರುವ ಬೂಸ್ಟುಗಳು, ಬ್ಯಾಕ್ಟೀರಿಯಾಗಳು ಈಸ್ಟ್‌ನೊಂದಿಗೆ ವರ್ತಿಸುವುದರಿಂದ ಬೇಕರಿಗಳಲ್ಲಿ ತಯಾರಾಗುವ ತಿಂಡಿ ತಿನಿಸುಗಳ ಗುಣ ಮಟ್ಟ ಕಡಿಮೆಯಾಗುತ್ತದೆ.

ಔಷಧ ತಯಾರಿಕೆಯಲ್ಲಿ: ಔಷಧ ತಯಾರಿಕೆಯಲ್ಲಿ ಗಡಸು ನೀರನ್ನು ಬಳಸಿದರೆ ಅದರಲ್ಲಿರುವ ಲವಣಗಳು ಔಷಧಗಳಲ್ಲಿರುವ ಇತರೆ ರಾಸಾಯನಿಕಗಳೊಂದಿಗೆ ವರ್ತಿಸಿ ಅಗತ್ಯವಿಲ್ಲದ ವಸ್ತುಗಳನ್ನು ಉತ್ಪಾದಿಸುತ್ತವೆ. ಇದರಿಂದ ಔಷಧಗಳು ಮನುಷ್ಯನ ಮೇಲೆ ಹಾನಿಕರ ಪರಿಣಾಮಗಳನ್ನು ಉಂಟುಮಾಡುತ್ತವೆ.

ಗಡಸು ನೀರಿನಿಂದ ಇಷ್ಟಲ್ಲಾ ತೊಂದರೆಗಳಿರುವುದರಿಮದ ಅನೇಕ ಸಂದರ್ಭಗಳಲ್ಲಿ ಗಡಸು ನೀರನ್ನು ಮೆದುಗೊಳಿಸಬೇಕಾಗುತ್ತದೆ. ಅದಕ್ಕಾಗಿ ಅನೇಕ ವಿಧಾನಗಳಿವೆ.

ಗಡಸ ನೀರನ್ನು ಮೆದುಗೊಳಿಸುವಿಕೆ

ಗಡಸು ನೀರಿನಲ್ಲಿ ಕರಗಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ ಲವಣಗಳನ್ನು ತೆಗೆಯುವುದರಿಂದ ನೀರನ್ನು ಮೆದುಗೊಳಿಸಬಹುದು.

೧. ತಾತ್ಕಾಲಿಕ ಗಡಸು ನೀರನ್ನು ಕಾಯಿಸಿದರೆ ಕ್ಯಾಲ್ಸಿಯಮ್‌ ಮತ್ತು ಮೆಗ್ನೀಸಿಯಮ್‌ ಬೈಕಾರ್ಬೊನೇಟ್‌ಗಳು ಕಾರ್ಬೊನೇಟ್‌ಗಳಾಗುತ್ತವೆ. ಈ ಕಾರ್ಬೊನೇಟ್‌ಗಳನ್ನು ಶೋಧಿಸುವುದರಿಂದ ಹೊರತೆಗೆಯಬಹುದು.

Ca(HCO3)2 –> CaCo3 + H2O + Co2

Mg(HCO3)2 –> MgCo3 +H2O + Co2

೨. ಸುಣ್ಣದ ನೀರನ್ನು ಗಡಸು ನೀರಿಗೆ ಹಾಕಿದರೆ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಬೈಕಾರ್ಬೊನೇಟುಗಳು ಕಾರ್ಬೋನೇಟುಗಳಾಗುತ್ತವೆ. ಈ ಕಾರ್ಬೊನೇಟುಗಳು ನೀರಿನಲ್ಲಿ ಕರಗದೆ ತಳದಲ್ಲಿ ಉಳಿಯುತ್ತವೆ. ಇದನ್ನು ಶೋಧಿಸುವುದರಿಂದ ಬೇರ್ಪಡಿಸಬಹುದು.

Ca (HCO3)2 + –> Ca(OH) –> 2CaCo3 + 2H2O

Mg(HCO3)2 + Ca(OH)2 –> MgCo3 + CaCo3 + 2H2O

೩. ನೀರಿಗೆ ವಾಷಿಂಗ್‌ ಸೋಡ ಹಾಕುವುದರಿಂದ ಶಾಶ್ವತ ಮತ್ತು ತಾತ್ಕಾಲಿಕ ಗಡಸುತನವನ್ನು ನೀರಿನಿಂದ ತೆಗೆದು ಮೆದುಗೊಳಿಸಬಹುದು. ವಾಷಿಂಗ್‌ ಸೋಡ ನೀರಿನಲ್ಲಿರುವ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಬೈಕಾರ್ಬೊನೇಟ್‌, ಸಲ್ಫೇಟ್‌ ಮತ್ತು ಕ್ಲೋರೈಡ್‌ನೊಂದಿಗೆ ವರ್ತಿಸಿ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಕಾರ್ಬೊನೇಟುಗಳಾಗುತ್ತವೆ.

CaSo4 + Na2CO3 –> CaCo3 + Na2So4

CaCl2 + Na2CO3 –> CaCo3 + 2NaCl

MgCl2 + Na2CO3 –> MgCO3 + 2NaCl

Ca(HCO3)2 + Na2CO3 –>CaCO3 + 2NaHCO3

೪. ಪರ್ಮುಟೈಟ್‌ ಅಥವ ಜಿಯೋಲೈಟ್‌ ವಿಧಾನ: ರಾಸಾಯನಿಕವಾಗಿ ಜಿಯೋಲೈಟ್‌ ಎಂದರೆ ಸೋಡಿಯಂ ಅಲ್ಯೂಮಿನಿಯಂ ಹೈಡ್ರೇಟೆಡ್‌ ಸಿಲಿಕೇಟ್‌. ಈ ಜಿಯೋಲೈಟ್‌ ತನ್ನಲ್ಲಿರುವ ಪ್ರತ್ಯಾಮ್ಲ ಅಥವ ಧನಾತ್ಮಕ ಅಯಾನನ್ನು ಬೇರೆ ಪ್ರತ್ಯಾಮ್ಲ  ಅಥವ ಧನಾತ್ಮಕ ಅಯಾನೊಂದಿಗೆ ವಿನಿಮಯ ಮಾಡಿಕೊಳ್ಳುವ ಗುಣವನ್ನು ಹೊಂದಿದೆ. ಈ ಗುಣದಿಂದಾಗ ಜಿಯೋಲೈಟ್‌ ಗಡಸು ನೀರಿನೊಂದಿಗೆ ವರ್ತಿಸಿ ಧನಾತ್ಮಕ ಅಯಾನುಗಳಾದ Ca, Mg ಅಯಾನನ್ನು ಸೋಡಿಯಂ ಅಯಾನು ಬೇರ್ಪಡಿಸುತ್ತದೆ. ಇದರಿಂದ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಜಿಯೋಲೈಟುಗಳಾಗಿ ಪರಿವರ್ತನೆ ಹೊಂದುತ್ತವೆ; ಗಡಸು ನೀರು ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಲವಣಗಳಿಂದ ಮುಕ್ತವಾಗಿ ಮೆದುವಾಗುತ್ತದೆ.

CaCl2 + Na2Ze –> CaZe + 2NaCl

MgSO4 + Na2Ze –> MgZe + Na2So4

Ca(HCO3)2 + Na2Ze –> CaZe + 2NaHCO3

[Na2Ze = ಸೋಡಿಯಂ ಜಿಯೋಲೈಟ್‌]

ಮೇಲಿನ ಕ್ರಿಯೆಯಲ್ಲಿ ಹೊರಹಾಕಲ್ಪಟ್ಟ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯ್‌ ಜಿಯೋಲೈಟನ್ನು ಸಾರಯುಕ್ತ ಸೋಡಿಯಂ ಕ್ಲೋರೈಡ್‌ನ ಮೂಲಕ ಹಾಯಿಸಿದಾಗ ಸೋಡಿಯಂ ಜಿಯೋಲೈಟಾಗುತ್ತದೆ. ಇದನ್ನು ಪುನಃ ಉಪಯೋಗಿಸಬಹುದು.

ಈ ವಿಧಾನದ ಅನುಕೂಲಗಳು: (೧) ಅತಿ ಕನಿಷ್ಠ ಗಡಸುತನ ಹೊಂದಿರುವ ನೀರನ್ನು ಲಪಡೆಯಬಹುದು. (೨) ಅತಿ ಕಡಿಮೆ ಹಣದಿಂದ ಮೆದು ನೀರನ್ನು ಪಡೆಯಬಹುದು. (೩) ಅತಿ ಸುಲಭ ವಿಧಾನ. (೪) ಇದು ನಿರಂತರ ಮತ್ತು ಸ್ವಯಂ ಚಾಲಿತ ಪ್ರಕ್ರಿಯೆ.

೫. ಅಯಾನ್‌ ವಿನಿಮಯ ವಿಧಾನ: ಇತ್ತೀಚಿನ ದಿನಗಳಲ್ಲಿ ನೀರಿನಲ್ಲಿರುವ ಎಲ್ಲಾ ಲವಣಗಳನ್ನು ತೆಗೆಯಲು ಈ ವಿಧಾನವನ್ನು ಬಳಸುತ್ತಿದ್ದಾರೆ. ಈ ವಿಧಾನದಲ್ಲಿ ಗಡಸು ನೀರಿಗೆ ರೆಸಿನ್‌ ಹಾಕಿದಾಗ ಕ್ಯಾಲ್ಸಿಯಮ್‌, ಮೆಗ್ನಿಸಿಯಮ್‌, ಕ್ಲೋರೈಡ್‌ ಮತ್ತು ಸಲ್ಫೇಟ್‌ ಅಯಾನುಗಳು ನೀರಿನಿಂದ ಬೇರ್ಪಡುತ್ತವೆ.

ಆಮ್ಲೀಯ ಗುಂಪನ್ನು ಹೊಂದಿರುವ ರೆಸಿನ್‌ ನೀರಿನಲ್ಲಿರುವ ಕ್ಯಾಲ್ಸಿಯಮ್‌ ಮತ್ತು ಮೆಗ್ನಿಸಿಯಮ್‌ ಅಯಾನುಗಳನ್ನು ಹೊರಹಾಕುತ್ತವೆ.

RH2 + Ca2 –> R-Ca + 2H+

RH2 + Mg2+-> R-Mg + 2H+

ಪ್ರತ್ಯಾಮ್ಲೀಯ ಗುಂಪನ್ನು ಹೊಂದಿರುವ ರೆಸಿನ್‌ ನೀರಿನಲ್ಲಿರುವ ಸಲ್ಫೇಟ್‌, ಕ್ಲೋರೈಡ್‌ ಮತ್ತು ಕಾರ್ಬೊನೇಟುಗಳನ್ನು ಹೊರಹಾಕುತ್ತವೆ.

R-(OH)2+SO42 –> RSO4+2OH

R-(OH)2 + 2Cl –> R-Cl2 + 2OH

R-(OH)2 + Co32 –> R-Co3 + 2OH

ಹೀಗೆ ಹೊರಹಾಕಲಾದ ರೆಸಿನ್‌ವಸ್ತುಗಳಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಹಾಕಿ ರೆಸಿನನ್ನು ಬೇರ್ಪಡಿಸಿ ಪುನಃ ಬಳಸಬಹುದು.

ಈ ವಿಧಾನದ ಅನುಕೂಲಗಳು: ಈ ವಿಧಾನದಿಂದ ಅತಿ ಕಡಿಮೆ ಗಡಸುತನ ಹೊಂದಿರುವ ನೀರನ್ನು ಪಡೆಯಬಹುದು. (೨) ಈ ವಿಧಾಣನವನ್ನು ಹೆಚ್ಚು ಆಮ್ಲ ಅಥವ ಪ್ರತ್ಯಾಮ್ಲ ಹೊಂದಿರುವ ನೀರನ್ನು ಮೆದುಗೊಳಿಸಲು ಬಳಸಬಹುದು.

ಅನಾನುಕೂಲಗಳು: (೧) ಈ ವಿಧಾನದಲ್ಲಿ ಉಪಯೋಗಿಸುವ ಉಪಕರಣಗಳು ಮತ್ತು ರಾಸಾಯನಿಕ ವಸ್ತುಗಳ ಬೆಲೆ ಹೆಚ್ಚು. ಆದ್ದರಿಮದ ಇದು ದುಬಾರಿ. (೨) ನೀರು ಹೆಚ್ಚು ರಾಡಿಯಾಗಿದ್ದರೆ ಈ ವಿಧಾನವು ಬಹಳ ನಿಧಾನವಾಗುತ್ತದೆ. ಇದರಲ್ಲಿ ೧೦ ಪಿಪಿಎಂಗಿಂತ ಕಡಿಮೆ ರಾಡಿಯನ್ನು ಹೊಂದಿರುವ ನೀರನ್ನು ಬಳಸಬೇಕು.