ತೇಲುವ ವಸ್ತುಗಳು

ನೀರಿನಲ್ಲಿ ಕರಗದೆ ತೇಲಾಡುತ್ತಾ ಇರುವ ಕಣಗಳು ತುಂಬಾ ಸಾಮಾನ್ಯವಾದ ಕಶ್ಮಲ. ಇವು ಚರಂಡಿ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಎರಡರಲ್ಲೂ ಇರುತ್ತವೆ. ಕರಗದ ಕಣಗಳಲ್ಲಿ ನಿರವಯವ ಸಂಯುಕ್ತಗಳೂ ಇರುತ್ತವೆ, ಸಾವಯವ ಸಂಯುಕ್ತಗಳೂ ಇರುತ್ತವೆ. ಕಲ್ಲು ಮರಳು, ಚೈನಾ-ಕ್ಲೇ, ಕಾಗದ ಇತ್ಯಾದಿ ಕಾರ್ಖಾನೆಗಳು ನಿರವಯವ ಕಣಗಳನ್ನು ಹೊರಚೆಲ್ಲುತ್ತವೆ. ಚರಂಡಿ ತ್ಯಾಜ್ಯ ಮತ್ತು ಕಲ್ಲಿದ್ದಲಿಗೆ ಸಂಬಂಧಿಸಿದ ತ್ಯಾಜ್ಯಗಳು ಸಾವಯವ ಸ್ವಭಾವದ ಕರಗದ ಕಣಗಳನ್ನು ನೀರಿಗೆ ಸೇರಿಸುತ್ತವೆ. ಕರಗದ ಕಣಗಳು ನೇರವಾಗಿ ಅಪಾಯಕಾರಿಯಲ್ಲದಿದ್ದರೂ ಇವು ದ್ಯುತಿಸಂಶ್ಲೇಷಣ ಕ್ರಿಯೆಗೆ ಅಡ್ಡಿ ಉಂಟುಮಾಡುವುದರಿಂದ ನೀರಿನ ಸ್ವಯಂಶುದ್ಧೀಕರಣ ಸಾಮರ್ಥ್ಯವನ್ನು ಕುಗ್ಗಿಸುತ್ತವೆ; ಮೀನುಗಳ ಕಿವುರುಗಳಿಗೆ ಘಾಸಿ ಮಾಡುತ್ತವೆ. ದಡದಲ್ಲಿ ಸಂಗ್ರಹವಾದ ಕರಗದ ಕಣಗಳು ಚಿಕ್ಕ ಪುಟ್ಟ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ನಾಶ ಮಾಡುತ್ತವೆ. ಇದರಿಂದಾಗಿ ಮೀನುಗಳಿಗೆ ಆಹಾರ ಸರಬರಾಜು ಕಡಿಮೆಯಾಗುತ್ತದೆ. ಕಲ್ಲಿದ್ದಲ ಕಣಗಳು ನೀರನ್ನು ಕಪ್ಪಾಗಿಸುತ್ತವೆ ಮತ್ತು ಬಹಳಷ್ಟು ಬಳಕೆಗೆ ಅಸಾಧ್ಯವಾಗಿಸುತ್ತವೆ. ಬೇಸಿಗೆಯಲ್ಲಿ ಸಾವಯವ ಕಣಗಳು ಕೊಳೆಯುತ್ತವೆ. ಇದರಿಂದ ಉತ್ಪನ್ನವಾಗುವ ಅನಿಲಗಳು ತಳದಲ್ಲಿರುವ ಘನ ಪದಾರ್ಥಗಳನ್ನು ಮೇಲಕ್ಕೆ ತಳ್ಳುತ್ತವೆ. ಪರಿಣಾಮವಾಗಿ ದುರ್ನಾತ ಬೀರುವ ತೇಲುಗಸಿ ನಿರ್ಮಾಣವಾಗುತ್ತದೆ.

. ಕೃಷಿ ತ್ಯಾಜ್ಯ

ನೀರನ್ನು ಕಲುಷಿತಗೊಳಿಸುವ ಮನುಷ್ಯನ ಮತ್ತೊಂದು ಮುಖ್ಯ ಚಟುವಟಿಕೆ ಕೃಷಿ ಬೆಳೆದ ಬೆಳೆಯಿಂದ ತಿನ್ನಲು ಯೋಗ್ಯವಾಗ ಸಸ್ಯಭಾಗವನ್ನೆಲ್ಲ ಸಂಗ್ರಹಿಸಿಕೊಂಡ ಮೇಲೆ ಉಳಿಯುವ ಕಸಕಡ್ಡಿ ಎಲ್ಲವೂ ನೀರನ್ನು ಕಲುಷಿತಗೊಳಿಸುತ್ತವೆ. ಈಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ಅಗಾಧ ಪ್ರಮಾಣದ ರಾಸಾಯನಿಕಗಳನ್ನು  ಉಪಯೋಗಿಸಲಾಗುತ್ತಿದೆ. ಈ ರಾಸಾಯನಿಕಗಳಲ್ಲಿ ಮುಖ್ಯವಾಗಿ ಗೊಬ್ಬರಗಳು ಮತ್ತು ಪೀಡೆನಾಶಕಗಳು ಸೇರಿವೆ. ಇವೂ ಕೂಡ ನೀರಿಗೆ ಕಶ್ಮಲವನ್ನು ಸೇರಿಸುತ್ತವೆ. ಇವುಗಳ ಜೊತೆಗೆ ಪಶು ಸಂಗೋಪನ ತ್ಯಾಜ್ಯಗಳೂ ನೀರನ್ನು ಮಲಿನಗೊಳಿಸುತ್ತವೆ.

ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ತಯಾರಿಕಾ ಹಂತದಲ್ಲೆ ಕೈಗಾರಿಕಾ ತ್ಯಾಜ್ಯವನ್ನು ಸೃಷ್ಟಿಸಿ ಸ್ವಲ್ಪ ಮಟ್ಟಿಗೆನೀರಿನ ಮಾಲಿನ್ಯಕ್ಕೆ ಕಾರಣವಾಗುತ್ತವೆ ಜೊತೆಗೆ ಕೃಷಿಯಲ್ಲಿ ಸಿದ್ಧ ಗೊಬ್ಬರಗಳು ಮತ್ತು ಪೀಡೆನಾಶಕಗಳನ್ನು ಬಳಸುವಾಗ ಸಹ ನೀರು ಕಲುಷಿತಗೊಳ್ಳುತ್ತದೆ.

ರಾಸಾಯನಿಕ ಗೊಬ್ಬರಗಳು

ಗೊಬ್ಬರಗಳು ಬೆಳೆಯ ವೃದ್ಧಿಗೆ ಅಗತ್ಯವೇನೋ ಹೌದು. ಆದರೆ ಹೆಚ್ಚುವರಿಯಾದ ರಾಸಾಯನಿಕ ಗೊಬ್ಬರಗಳು ತ್ಯಾಜ್ಯವಾಗುತ್ತವೆ – ನೀರಿನ ಆಕರಗಳನ್ನು ಮಲಿನಗೊಳಿಸುತ್ತವೆ.

ಕೃಷಿ ರಾಸಾಯನಿಕ ಗೊಬ್ಬರಗಳು ನೈಟ್ರೇಟ್‌ (ಸಾರಜನಕ), ಪಾಸ್ಫರಸ್‌ (ರಂಜಕ) ಅಥವ ಪೊಟಾಸಿಯಮ್‌ಗಳನ್ನು ಗಣನೀಯ ಪ್ರಮಾಣದಲ್ಲಿ ಹೊಂದಿರುತ್ತವೆ. ಕೃಷಿ ಭೂಮಿಗೆ ಎರಚಿದ ಎಲ್ಲ ಗೊಬ್ಬರವನ್ನು ಸಸ್ಯಗಳು ಉಪಯೋಗಿಸಿಕೊಳ್ಳುವುದಿಲ್ಲ. ಒಂದಷ್ಟನ್ನು ಉಳಿಸಿಬಿಡುತ್ತವೆ. ಈ ಉಳಿಕೆ ಗೊಬ್ಬರವನ್ನು ಸಸ್ಯಗಳು ಸಾಮಾನ್ಯವಾಗಿ ಮಣ್ಣಿನಲ್ಲೆ ಹಿಡಿದಿಟ್ಟುಕೊಂಡಿರುತ್ತವೆ. ಆದರೆ ಕೆಲವು ನೈಟ್ರೇಟ್‌ಗಳು ಮಳೆ, ನೆರೆ ಇತ್ಯಾದಿಗಳ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನದಿ ಸರೋವರಗಳನ್ನು ಸೇರಿ ಅನಪೇಕ್ಷದಣೀಯ ಪರಿಣಾಮವನ್ನು ಉಂಟುಮಾಡುತ್ತವೆ.

ಕುಡಿಯುವ ನೀರಿನಲ್ಲಿ ನೈಟ್ರೇಟ್‌ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ ಅದು ಮಿತಿ ಮೀರಿದರೆ ಆಗುವ ಪರಿಣಾಮವನ್ನು ಈಗಾಗಲೆ ನೋಡಿದ್ದೇವೆ; ಅದು ನೀಲಿ ಮಕ್ಕಳಿಗೆ ಕಾರಣವಾಗುತ್ತದೆ.

ಸಸ್ಯ ಪೋಷಕಾಂಶಗಳು ನೀರನ್ನು ಯುಟ್ರೊಫೀಕರಣ (ನೀರಿನ ಮೂಲಗಳು ಫಾಸ್ಫೇಟ್‌ ಮತ್ತು ನೈಟ್ರೇಟ್‌ಗಳಿಂದ ಸಮೃದ್ಧವಾಗುವ ಕ್ರಿಯೆ) ಗೊಳಿಸಿ ಮಾನವ ಉಪಯೋಗಕ್ಕೆ ಅನರ್ಹಗೊಳಿಸುತ್ತವೆ. ಸಸ್ಯ ಪೋಷಕಾಂಶಗಳಾದ ನೈಟ್ರೊಜನ್‌ ಮತ್ತು ಪಾಸ್ಫರನ್‌ ಶೈವಲಗಳು ಮತ್ತು ಇತರೆ ಜಲಸಸ್ಯಗಳ ಬೆಳವಣಿಗೆಯನ್ನು ಪ್ರಚೋದಿಸುತ್ತವೆ. ಇವುಗಳು ಎದ್ವಾತದ್ವಾ ವೇಗದಲ್ಲಿ ಬೆಳೆದು ಬೇರೆ ಯಾವಗ ಜೀವಿಗಳ ಬೆಳವಣಿಗೆಗೂ ಅವಕಾಶ ಮಾಡಿಕೊಡುವುದಿಲ್ಲ. ಜೊತೆಗೆ ಇವುಗಳ ಅಧಿಕ ಬೆಳೆ ನೀರನ್ನು ಸರಾಗವಾಗಿ ಉಪಯೋಗಿಸಿಕೊಳ್ಳುವ ಕ್ರಿಯೆಯಲ್ಲಿ ಅಡ್ಡಿ ಉಂಟುಮಾಡುತ್ತದೆ. ಮುಂದೆ ಇವು ಕೊಳೆತು ದುರ್ವಾಸನೆ ಬೀರುತ್ತವೆ; ಬಿ.ಓ.ಡಿಯನ್ನು ಹೆಚ್ಚಿಸುತ್ತವೆ.

ದಶಕೋಟಿಯಲ್ಲಿ ಒಂದು ಭಾಗ ನೈಟ್ರೇಟ್‌ ಇದ್ದರೂ ಅದು ನೀರಿನಲ್ಲಿರುವ ಆಮ್ಲಜನಕದ ಪ್ರಮಾಣ ಕುಗ್ಗಿಸಿ ಸಸ್ಯಗಳು ಕೊಳೆಯುವಂತೆ ಮತ್ತು ಮೀನುಗಳು ಸಾಯುವಂತೆ ಮಾಡುತ್ತವೆ. ನೈಟ್ರೇಟ್‌ಗಳ ನಿಯಂತ್ರಣ ಹೆಚ್ಚು ಕಷ್ಟಕರ ಎಂದು ಈಚಿನ ವರದಿಗಳು ತಿಳಿಸುತ್ತವೆ.

೧೯೦೮ ಕ್ಕೆ ಮುಂಚೆ ಈ ಗೊಬ್ಬರಗಳು ಅಸ್ತಿತ್ವದಲ್ಲೇ ಇರಲಿಲ್ಲ. ಇಂದು ರಸಗೊಬ್ಬರಗಳಿಲ್ಲದೆ ಕೃಷಿ ಸಾಯವೇ ಇಲ್ಲ ಎಂಬಷ್ಟು ರಸಗೊಬ್ಬರಗಳ ಮೇಲಿನ ಅವಲಂಬನೆ ಬೆಳೆದಿದೆ ಮತ್ತು ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ೧೯೬೦-೬೧ ರಲ್ಲಿ ಒಟ್ಟು ೨.೯೨ ಲಕ್ಷ ಟನ್‌ ರಸಗೊಬ್ಬರವನ್ನು ರೈತರು ಭೂಮಿಗೆ ಸುರಿದಿದ್ದರು. ೧೯೯೪-೯೫ ರ ಹೊತ್ತಿಗೆ ಅದರ ಪ್ರಮಾಣ ೧೪೦ ಲಕ್ಷ ಟನ್‌ಗಳನ್ನು ದಾಟಿತ್ತು – ೩೪ ವರ್ಷಗಳಲ್ಲಿ ಸುಮಾರು ೫೦ ಪಟ್ಟು ಹೆಚ್ಚಳ.

ಪೀಡೆನಾಶಕಗಳು

ಇವುಗಳನ್ನು ಮನೆ ಮಠಗಳಲ್ಲಿ, ಕೈಗಾರಿಕೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ತೋಟಗಾರಿಕೆಯಲ್ಲಿ ಮತ್ತು ಒಟ್ಟಾರೆ ಕೃಷಿಯಲ್ಲಿ ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಮನುಷ್ಯನಿಗೆ ಪೀಡೆ ಎನಿಸಿರುವ ಎಲ್ಲ ಸಜೀವಿಗಳನ್ನು ಕೊಲ್ಲುವ ಶಕ್ತಿ ಹೊಂದಿರುವ ಈ ರಾಸಾಯನಿಕಗಳೆಲ್ಲಲ ಕಳೆದ ೫೦ ವರ್ಷಗಳಲ್ಲಷ್ಟೆ ಅಭಿವೃದ್ಧಿಗೊಂಡು ಬಳಕೆಗೆ ಬಂದಿವೆ. ಈ ಐವತ್ತು ವರ್ಷಗಳಲ್ಲೆ ಪ್ರಪಂಚ ಬಳಸುತ್ತಿರುವ ಕ್ರಿಮಿನಾಶಕವೊಂದರ ಪ್ರಮಾಣವೇ ೫೦ ಲಕ್ಷ ಟನ್ನುಗಳಿಗೂ ಹೆಚ್ಚಾಗಿದೆ.

ಎಲ್ಲ ಸಜೀವಿ ನಾಶಕಗಳನ್ನು ಪೀಡೆನಾಶಕಗಳೆಂದು ಕರೆಯಲಾಗುತ್ತದೆ. ಪೀಡೆನಾಶಕಗಳಲ್ಲಿ ಕೀಟನಾಶಕಗಳು, ಶಾಕನಾಶಕ, ಶಿಲೀಂದ್ರನಾಶಕ, ಇಲಿನಾಶಕ, ಜಂತುನಾಶಕಗಳು ಸೇರಿವೆ. ಇವುಗಳೆಲ್ಲ ವಿಷಗಳು.

ಪೀಡೆನಾಶಕಗಳಲ್ಲಿ ಎರಡು ಮುಖ್ಯ ಗುಂಪುಗಳು: (೧) ಆರ್ಗ್ಯಾನೋ – ಕ್ಲೋರಿನ್‌ ಸಂಯುಕ್ತಗಳು (

೨) ಆರ್ಗ್ಯಾನೋ – ಪಾಸ್ಫರಸ್‌ ಸಂಯುಕ್ತಗಳು. ಮೊದಲನೆಯದು ಎರಡನೆಯದಕ್ಕಿಂತ ಹೆಚ್ಚು ವಿಷಕರ ಮತ್ತು ಬಳಕೆಯಲ್ಲೂ ಹೆಚ್ಚು ವ್ಯಾಪಕ.

ಎಲ್ಲ ಪೀಡೆನಾಶಕಗಳೂ ನಮಗೆ ಹೆಚ್ಚು ಪರಿಚಿತವಿರುವ ಮತ್ತು ಪರಿಸರದಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿಕೊಂಡಿರುವ ಡಿ.ಡಿ.ಟಿಯಂತೆಯೇ ವರ್ತಿಸುತ್ತವೆ; ಪರಿಣಾಮ ಬೀರುತ್ತವೆ.

ನೀರಿನಲ್ಲಿ ಡಿ.ಡಿ.ಟಿ ಅರೆಬರೆ ಕರಗುತ್ತದೆ; ಕೊಬ್ಬು ಮತ್ತು ಎಣ್ಣೆಯಲ್ಲಿ ಹೆಚ್ಚು ಕರಗುತ್ತದೆ. ಇವು ಜಲಚರಗಳಿಗೆ ಅಪಾಯಕಾರಿ. ಕೆಲವು ಜಲಜೀವಿಗಳು ಡಿ.ಡಿ.ಟಿ.ಗೆ ತುಂಬಾ ಸೂಕ್ಷ್ಮ ಕಡಿಮೆ ಸಾರದ ಡಿ.ಡಿ.ಟಿ.ಯಿಂದಲೂ ಅವು ಜೀವ ಕಳೆದುಕೊಳ್ಳುತ್ತವೆ. ಉದಾಹರಣಂಎಗೆ ಕೇವಲ ಪಿ.ಪಿ.ಎಂ. ಸಾರತೆ ಕೂಡ ಉಪ್ಪುನೀರು ಸೀಗಡಿಗಳನ್ನು ಕೊಲ್ಲುತ್ತದೆ. ಪ್ರಯೋಗ ಶಾಲೆಯಲ್ಲಿ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದಿರುವಂತೆ ಡಿ.ಡಿ.ಟಿ. ಪ್ಲವಕಗಳಲ್ಲಿ ದ್ಯುತಿಸಂಶ್ಲೇಷಣೆಯನ್ನು ಕುಂಠಿತಗೊಳಿಸುತ್ತವೆ. ಪ್ಲವಕಗಳು ಸಾಗರದ ಆಹಾರ ಸರಪಳಿಯ ಮೂಲಾಧಾರ. ಅದಕ್ಕೆ ಧಕ್ಕೆಯಾದರೆ ಇತರೆಲ್ಲ ಜೀವಿಗಳ ಬದುಕೂ ದುರ್ಬರವಾಗುತ್ತದೆ. ಡಿ.ಡಿ.ಟಿ. ಮೀನುಗಳು ಕಡಿಮೆ ಉಷ್ಣತೆಯನ್ನು ತಾಳಿಕೊಳ್ಳದಂತೆಯೂ ಮಾಡುತ್ತವೆ; ಚಳಿಗಾಲದಲ್ಲಿ ಅವು ನರಳುವಂತಾಗುತ್ತದೆ. ಪಕ್ಷಿಗಳ ಮೊಟ್ಟೆಯ ಚಿಪ್ಪು ತುಂಬಾ ತೆಳುವಾಗುವಂತೆ ಮಾಡುತ್ತದೆ: ಮರಿಯಾಗುವುದಕ್ಕೆ ಮುಂಚೆಯೇ ಒಡೆದುಹೋಗುತ್ತವೆ. ಗಿಡುಗಗಳು ಡಿ.ಡಿ.ಟಿ. ಧಾಳಿಗೆ ಸಾಯುತ್ತವೆ. ಮತ್ತು ಅವುಗಳಲ್ಲಿ ಜನನ ಸಂಬಂಧಿ ಸಮಸ್ಯೆಗಳು ತಲೆದೋಋಉತ್ತವೆ.

ಪೀಡೆನಾಶಕಗಳು ಮನುಷ್ಯ ಮತ್ತು ಪ್ರಾಣಿಗಳಿಗೆ ಅತ್ಯುಗ್ರ ವಿಷಗಳು – ಸಸ್ಯಗಳಲ್ಲಿ ಕ್ರೋಮೋಸೋಮುಗಳ ವಿಕೃತಿ ಉಂಟುಮಾಡುತ್ತವೆ. ಇವುಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದರಿಂದ, ಉದಾಹರಣೆಗೆ ಈ ಪೀಡೆನಾಶಕಗಳನ್ನು ಸಿಂಪಡಿಸುವ ಕೆಲಸದಲ್ಲಿ ತೊಡಗಿದ ಕೃಷಿಕೂಲಿಗಳಲ್ಲಿ ನಪುಂಸಕತ್ವ ಬರುತ್ತದೆ ಎಂಬ ವರದಿಗಳಿವೆ.

ಕ್ಲೋರೀನೇಟೆಡ್‌ ಹೈಡ್ರೊ ಕಾರ್ಬನ್‌ಗಳು ಕಶೇರುಕ ಮತ್ತು ಅಕಶೇರುಕಗಳೆರಡರ ಕೇಂದ್ರ ನರಮಂಡಲವನ್ನು ಪ್ರಭಾವಿಸುತ್ತವೆ. ಇವುಗಳೆಲ್ಲ ದೀರ್ಘಕಾಲ ಪರಿವರ್ತನೆಗೊಳ್ಳದೆ ಪರಿಸರದಲ್ಲಿ ಉಳಿಯುವ ಸಾಮರ್ಥ್ಯವನ್ನು ಪಡೆದಿವೆ. ಹೀಗಾಗಿ ಅವು ಹೆಚ್ಚು ಸಂಖ್ಯೆಯ ವಿವಿಧ ಪ್ರಭೇದಗಳ ಮೇಲೆ ಪರಿಣಾಮ ಬೀರುತ್ತವೆ. ವ್ಯಾಪಕ ಬಳಕೆಯಲ್ಲಿರುವ ಕ್ಲೊರೀನೇಟೆಡ್‌ ಹೈಡ್ರೊಕಾರ್ಬನ್‌ ಗುಂಪಿಗೆ ಸೇರಿದ ಕೀಟನಾಶಕಗಳು: ಡಿ.ಡಿ.ಟಿ., ಬಿ.ಎಚ್‌.ಸಿ., ಡೈಎಲ್ಡ್ರಿನ್‌, ಆಲ್ಡ್ರಿನ್‌, ಎನ್ಡಿನ್‌ ಮುಂತಾದವು. ಆರ್ಗ್ಯಾನೋ ಪಾಸ್ಫರಸ್‌ ಸಂಯುಕ್ತಗಳಲ್ಲಿ ಪರಾಥಿನ್‌, ಮಲಾಥಿನ್‌, ಮತ್ತು ಟೆಟ್ರಾ ಈಥೈಲ್‌ ಪಾಸ್ಪೇಟ್‌ಗಳು ಮುಖ್ಯವಾದವುಗಳು. ಇವು ಮನುಷ್ಯ ಮತ್ತು ಪ್ರಾಣಿಗಳಿಗೆ ತುಂಬಾ ವಿಷ. ಇವುಗಳಲ್ಲಿ ಬಹಳಷ್ಟು ಜೈವಿಕ ವಿಘಟನೆಗೆ ಒಳಗಾಗುತ್ತವೆ; ದೀರ್ಘಕಾಲ ಪರಿಸರದಲ್ಲಿ ಉಳಿಯುವುದಿಲ್ಲ. ಇವು ಕೂಡ ನರಮಂಡಲವನ್ನು ಬಾಧಿಸುತ್ತವೆ.

ಪೀಡನಾಶಕಗಳು ಮನುಷ್ಯನಿಗೆ ಮತ್ತು ಬೆಳೆಗಳಿಗೆ ಹಾನಿ ಮಾಡುವ ಪೀಡೆಗಳನ್ನಷ್ಟೆ ಕೊಲ್ಲದೆ ಮನುಷ್ಯನಿಗೆ ಮತ್ತು ಬೆಳೆಗಳಿಗೆ ಉಪಕಾರಿಯಾದ ಜೀವಿಗಳನ್ನು ಕೊಲ್ಲುತ್ತವೆ. ಸಸ್ಯಗಳನ್ನು ಕೊಲ್ಲಲು ಬಳಸುವ ಶಾಕನಾಶಕಗಳಲ್ಲಿ ಕೆಲವು ಆಯ್ದ ಸಸ್ಯಗಳನ್ನಷ್ಟೆ ಕೊಲ್ಲುತ್ತವೆ. ಉದಾಹರಣೆಗೆ ಫೆರಸ್‌ ಸಲ್ಫೇಟ್‌ ಕೇವಲ ಹಳದಿಯ ಹೂ ಬಿಡುವ ಡ್ಯಾಂಡಿಲೈಅನ್‌ ಎಂಬ ಒಂದು ಜಾತಿಯ ಗಿಡವನ್ನು ಮಾತ್ರ ಕೊಲ್ಲುತ್ತದೆ. ಮತ್ತೆ ಕೆಲವು ಶಾಕನಾಶಕಗಳು ಸಂಪರ್ಕಕ್ಕೆ ಬಂದ ಎಲ್ಲ ಸಸ್ಯಗಳನ್ನು ವಿವೇಚನೆಯಿಲ್ಲದೆ ಕೊಲ್ಲುತ್ತವೆ. ಉದಾಹರಣೆಗೆ ಸೋಡಿಯಮ್‌ ಆರ್ಸೆನೈಟ್‌. ಮತ್ತೊಂದು ವಿಪರ್ಯಾಸದ ಸಂಗತಿಯೆಂದರೆ ಯಾವ ಜೀವಿಗಳನ್ನು ಕೊಲ್ಲುವ ಉದ್ದೇಶದಿಂದ ಈ ನಾಶಕಗಳನ್ನು ಬಳಸಲಾಗುತ್ತಿದೆಯೋ ಅದೇ ಜೀವಿಗಳು ಸಾಯದೆ, ತಮ್ಮನ್ನು ಕೊಲ್ಲಲು ಸಿಂಪಡಿಸಿದ ಪೀಡೆನಾಶಕಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಮತ್ತಷ್ಟು ಬಲಿಷ್ಠವಾಗಿ ವಿಜ್ಞಾನಿಗಳನ್ನು ಅಣಕಿಸುತ್ತಿವೆ. ಹೀಗಾಗಿ ಪೀಡೆನಾಶಕಗಳೇನಿದ್ದರೂ ತಾತ್ಕಾಲಿಕ ಪರಿಹಾರವನ್ನು ಒದಗಿಸುತ್ತವೆ. ಆದರೆ ಶಾಶ್ವತ ಪ್ರತಿಕೂಲ ಪರಿಸರ ಪರಿಣಾಮವನ್ನು ಬೀರುತ್ತವೆ. ಒಂದು ವರದಿಯ ಪ್ರಕಾರ, ೧೯೩೩ ರಿಂದ ಈವರೆಗೆ ನೂರಕ್ಕೂ ಹೆಚ್ಚು ನೈಸರ್ಗಿಕ ವಿಕೋಪಗಳು ರಾಸಾಯನಿಕ ಕ್ರಿಮಿನಾಶಕಗಳಿಂದ ಸಂಭವಿಸಿದೆ. ಇವುಗಳಲ್ಲಿ ವಿಷಪೂರಿತ ನೀರಿನಿಂದಾದ ಅನಾಹುತಗಳೂ ಸೇರಿವೆ.

ಪಶುಸಂಗೋಪನ ತ್ಯಾಜ್ಯ

ಇದು ಮಣ್ಣನ್ನು ಫಲವತ್ತುಗೊಳಿಸುವ ಮುಖ್ಯ ಆಕರವೆಂದು ಪರಿಗಣಿಸಲಾಗಿದೆ. ಅದೇ ಕಾಲಕ್ಕೆ ಅವು ವಾಸನೆ ಮತ್ತು ಜಲ ಮಾಲಿನ್ಯದ ಗಂಭೀರ ಸಮಸ್ಯೆಗಳನ್ನು ಒಡ್ಡುತ್ತವೆ. ಪ್ರಾಣಿತ್ಯಾಜ್ಯಗಳು ನೀರನ್ನು ಸೇರಿದಾಗ ರೋಗಕಾರಕ ಜೀವಿಗಳು ಮನುಷ್ಯನಿಗೆ ವರ್ಗಾವಣೆಯಾಗುತ್ತವೆ. ಜೊತೆಗೆ ಅವುಗಳ ಬಿ.ಓ.ಡಿ. ಕೂಡ ಅತಿ ಹೆಚ್ಚಾಗಿದ್ದು ಇವು ನದಿ ತೊರೆಗಳ ನೀರನ್ನು ಸೇರಿದಾಗ ಆ ನೀರು ಕೆಡುವುದಲ್ಲದೆ ಮೀನುಗಳು ಅಧಿಕ ಪ್ರಮಾಣದಲ್ಲಿ ನಾಶವಾಗುತ್ತವೆ.

ದನಕರುಗಳು, ಹಂದಿ, ಆಡು, ಕುರಿ, ಕೋಳಿಗಳ ಸಂಖ್ಯೆಯಲ್ಲಾಗಿರುವ ಹೆಚ್ಚಳದಿಂದಾಗಿ ಅವುಗಳ ಕೊಟ್ಟಿಗೆಗಳು ಹೆಚ್ಚಾಗಿವೆ. ಅವುಗಳನ್ನು ಸ್ವಚ್ಛ ಮಾಡಲು ಅಗಾಧ ಪ್ರಮಾಣದ ನೀರನ್ನು ಉಪಯೋಗಿಸಲಾಗುತ್ತದೆ. ಈ ನೀರಿನ ಜೊತೆಗೆ ಅವುಗಳ ಗೊಬ್ಬರವೂ ಕೊಚ್ಚಿಕೊಂಡು ಹೋಗಿ ನೆಲದ ಮೇಲೆ ಗಸಿಯಾಗಿ ನಿಲ್ಲುತ್ತದೆ ಅಥವ ನೀರಿನ ಆಕರಗಳನ್ನು ಸೇರುತ್ತವೆ. ದನಕರುಗಳು ಮತ್ತು ಹಂದಿಗಳು ಉತ್ಪತ್ತಿ ಮಾಡುವ ಸಾವಯವ ತ್ಯಾಜ್ಯ ಪ್ರಮಾಣ ತುಂಬಾ ಜಾಸ್ತಿ. ದನವೊಂದು ೧೬ ಜನರು ಉತ್ಪತ್ತಿ ಮಾಡುವಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತದೆ; ಹಂದಿಯೊಂದು ಮೂವರು ಮನುಷ್ಯರು ಮಾಡುವಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತದೆ. ಈ ತ್ಯಾಜ್ಯ ಮುಖ್ಯವಾಗಿ ಪಾಸ್ಫೇಟ್‌ಗಳನ್ನು ಒಳಗೊಂಡಿರುತ್ತದೆ. ನೀರಿನಲ್ಲಿ ಇವುಗಳ ಆಧಿಕ್ಯ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸಿ ಸಸ್ಯಗಳು ಕೊಳೆಯುವಂತೆ ಮತ್ತು  ಮೀನುಗಳು ಸಾಯುವಂತೆ ಮಾಡುತ್ತವೆ.

ಮಡ್ಡಿ

ಇವು ಮಣ್ಣು ಮತ್ತು ಖನಿಜ ಕಣಗಳು.  ನೆರೆಯ ನೀರು ಮತ್ತು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಕೃಷಿ ಭೂಮಿ ಮತ್ತು ಪೂರ್ಣವಾಗಿ ಬೋಳಿಸಿದ ನೆಲದ ಮೇಲಿಂದ ಕೊಚ್ಚಿಕೊಂಡು ಹೋಗುವ ಮಡ್ಡಿ ನೀರಿನ ಆಕರಗಳನ್ನು ಸೇರುತ್ತವೆ. ಹೀಗೆ ನೀರಿನ ಆಕರಗಳನ್ನು ಸೇರಿದ ಮಡ್ಡಿ ಅನೇಕ ದುಷ್ಪರಿಣಾಮಗಳನ್ನು  ಉಂಟುಮಾಡುತ್ತದೆ.

ಮಡ್ಡಿ ನೀರಿನ ಸಂಗ್ರಹಾಗಾರಗಳನ್ನು ತುಂಬಿಕೊಂಡು ಅವುಗಳ ಸಂಗ್ರಹ ಸಾಮರ್ಥ್ಯವನ್ನು ಕಡಿತಗೊಳಿಸುತ್ತವೆ. ನೀರು ಮಡ್ಡಿಯಾದಾಗ ಸೂರ್ಯ ಕಿರಣಗಳು ನೀರನ್ನು ಪ್ರವೇಶಿಸದೆ ಜಲಸಸ್ಯಗಳು ತೊಂದರೆಗೀಡಾಗುತ್ತವೆ. ಇದು ಮೀನುಗೂಡುಗಳು, ಮೃದ್ವಂಗಿಗಳು ಮತ್ತು ಆಹಾರ ಸರಬರಾಜನ್ನು ಮುಚ್ಚಿ ಹಾಕಿ ಮೀನುಗಳು ಮತ್ತು ಚಿಪ್ಪು ಮೀನುಗಳ  ಸಂತತಿಯನ್ನು ಕಡಿಮೆ ಮಾಡುತ್ತದೆ. ಒಂದು ಅಂದಾಜು ತಿಳಿಸುವಂತೆ ನೆಲದ ಮೇಲ್ಮೈನಿಂದ ಕೊಚ್ಚಿಕೊಂಡು ಹೋಗುವ ಘನಪದಾರ್ಥಗಳ ಒಟ್ಟು ತೂಕ ಚರಂಡಿ ತ್ಯಾಜ್ಯಕ್ಕಿಂತ ಹೆಚ್ಚಾಗಿರುತ್ತದೆ.

ಶಾಖ ಮಾಲಿನ್ಯ

ಈವರೆಗೆ ನಾವು ಚರ್ಚಿಸಿದ ಮಾಲಿನ್ಯಗಳೆಲ್ಲ ಹೊರಗಿನಿಂದ ಬಂದು ನೀರನ್ನು ಸೇರುವ ಕಶ್ಮಲಗಳನ್ನು ಕುರಿತದ್ದು. ಈಗ ನೀರಿನೊಳಗೆ ಉಷ್ಣತೆಯಲ್ಲಿ ಉಂಟಾಗುವ ಏರಿಳಿತದಿಂದಾಗುವ ಗುಣವ್ಯತ್ಯಯವನ್ನು ಚರ್ಚಿಸೋಣ.

ಉಷ್ಣ ವಿದ್ಯುತ್‌ ಸ್ಥಾವರಗಳು, ತೈಲ ಸಂಸ್ಕರಣ ಕೇಂದ್ರಗಳು, ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳು, ಪರಮಾಣು ವಿದ್ಯುತ್‌ ಸ್ಥಾವರಗಳು ಹಾಗು ಇನ್ನಿತರೆ ಕಾರ್ಖಾನೆಗಳು ಅಧಿಕ ಪ್ರಮಾಣದ ನೀರನ್ನು ಉಪಯೋಗಿಸುತ್ತವೆ. ಈ ಕೈಗಾರಿಕೆಗಳು ಆಕರದಿಂದ ಸೆಳೆದುಕೊಂಡ ಒಟ್ಟು ನೀರಿನಲ್ಲಿ ಶೇ. ೮೦ ರಷ್ಟು ನೀರನ್ನು ಸಲಕರಣೆಗಳನ್ನು ತಂಪಾಗಿಸುವ ಮತ್ತು ತೊಳೆಯುವ ಕಾರ್ಯಗಳಿಗೆ ಬಳಸುತ್ತವೆ. ಈ ನೀರು ಬೇರಾವ ಭೌತ ಬದಲಾವಣೆಗೆ ಒಳಗಾಗದಿದ್ದರೂ ಅದರ ಉಷ್ಣತೆಯಲ್ಲಿ ಅಗಾಧ ಹೆಚ್ಚಳವಾಗಿರುತ್ತದೆ – ೫೦ ರಿಂದ ೭೦ ಡಿಗ್ರಿ ಸೆಲ್ಸಿಯಸ್‌ವರೆಗೆ. ಇಷ್ಟು ಉಷ್ಣತೆಯುಳ್ಳ ಅಧಿಕ ಪ್ರಮಾಣದ ನೀರು ನದಿ ಸರೋವರಗಳನ್ನು ಸೇರಿದಾಗ ಆ ಆಕರಗಳು ಉಷ್ಣತೆ ದಿಢೀರ್ ಹೆಚ್ಚುತ್ತದೆ.

ಮೀನುಗಳು ಮತ್ತು ಇತರೆ ಜಲಚರಗಳು ಸಾಕಷ್ಟು ದೊಡ್ಡ ವ್ಯಾಪ್ತಿಯ ಉಷ್ಣತೆಯಲ್ಲಿ ಬದುಕುವುದನ್ನು ರೂಢಿಸಿಕೊಂಡಿರುತ್ತವೆ – ಉಷ್ಣ ಬದಲಾವಣೆ ನಿಧಾನವಾಗಿ ಆದರೆ ಮಾತ್ರ; ದಿಢೀರನೆ ಆದರೆ ಒದ್ದಾಡಿ ಸಾಯುತ್ತವೆ.

ಉಷ್ಣತೆಯ ಹೆಚ್ಚಳ ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುತ್ತದೆ. ಉದಾಹರಣೆಗೆ ೦ ಡಿಗ್ರಿಯಲ್ಲಿ ಕರಗಿದ ಆಮ್ಲಜನಕ ೨೪.೬ ಪಿ.ಪಿ.ಎಂ. ಇರುತ್ತದೆ. ೩೫ ಡಿಗ್ರಿ ಯಲ್ಲಿ ೧೭.೧ ಪಿ.ಪಿ.ಎಂ. ಇರುತ್ತದೆ. ಕರಗಿದ ಆಮ್ಲಜನಕದ ಈ ತರದ ಇಳಿಕೆ ಇಡೀ ಜಲಪರಿಸರವನ್ನು ಬಿಗಡಾಯಿಸುತ್ತದೆ; ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಉಷ್ಣತೆ ಹೆಚ್ಚಿದಾಗ ಮೀನುಗಳ ದೇಹದಲ್ಲಿ ನಡೆಯುವ ಉಪಾವಚಯ ಪ್ರಕ್ರಿಯೆ ಮತ್ತು ಉಸಿರಾಟದ ವೇಗ ಹೆಚ್ಚುತ್ತದೆ; ಆಮ್ಲಜನಕದ ಬೇಡಿಕೆ ವೃದ್ಧಿಸುತ್ತದೆ. ಉಷ್ಣತೆ ಒಂದು ಮಿತಿಗಿಂತ ಮೇಲೆ ಹೋದಾಗ ಅವುಗಳ ನರಮಂಡಲ ವ್ಯವಸ್ಥೆ, ಉಸಿರಾಟ ವ್ಯವಸ್ಥೆ, ಜೀವಕೋಶಗಳ ಅಗತ್ಯ ಪ್ರಕ್ರಿಯೆಗಳು ಕುಸಿದು ಬೀಳುತ್ತವೆ.

ಜಲಪರಿಸರದ ವ್ಯವಸ್ಥೆಯನ್ನು ಶೈವಲಗಳ ಬೆಳವಣಿಗೆ ಬಹುವಾಗಿ ಪ್ರಭಾವಿಸುತ್ತದೆ. ನೀರಿಗೆ ಸೇರಿದ ಹೆಚ್ಚುವರಿ ನೈಟ್ರೇಟ್‌ನಂತ ಪೋಷಕಾಂಶಗಳ ಜೊತೆಗೆ ಅಧಿಕ ಉಷ್ಣತೆಯೂ ಸೇರಿದರೆ ಶೈವಲಗಳ ಬೆಳವಣಿಗೆಯೂ ಅಧಿಕವಾಗುತ್ತದೆ. ಇದರಿಂದ ಯುಟ್ರೋಫೀಕರಣ ಮತ್ತು ಇತರೆ ಅನಪೇಕ್ಷಣೀಯ ಪರಿಣಾಮಗಳುಂಟಾಗುತ್ತವೆ. ಅಲ್ಲದೆ ಹೆಚ್ಚಿನ ಉಷ್ಣತೆಯಲ್ಲಿ ರೋಗಾಣುಗಳ ಬೆಳವಣಿಗೆಯ ವೇಗ ಕೂಡ ಹೆಚ್ಚುತ್ತದೆ. ರೋಗಾಣುಗಳು ಒಂದೆಡೆ ಸಮೃದ್ಧವಾದಂತೆ ಮೀನುಗಳ ರೋಗ ನಿರೋಧಕ ಶಕ್ತಿ ಕುಂದಿ ಅಶಕ್ತವಾಗುತ್ತವೆ.

ಕಲುಷಿತವಲ್ಲದ ನೀರಿನಲ್ಲಿ ಆಹಾರ ಸರಪಳಿಯ ಪ್ರಮುಖ ಉತ್ಪಾದಕ ಹಂತವದ, ಪತ್ರ ಹರಿತ್ತನ್ನು ಹೊಂದಿರುವ, ಏಕಕೋಶ ಪಾಚಿಗಳು ೧೮ ರಿಂದ ೨೦ ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಚೆನ್ನಾಗಿ ಬೆಳೆಯುತ್ತವೆ. ಹಸಿರು ಪಾಚಿಗಳು ೩೦ ರಿಂದ ೩೫ ಡಿಗ್ರಿ ಉಷ್ಣತೆಯಲ್ಲಿ ಮತ್ತು ನೀಲಿ-ಹಸಿರು ಪಾಚಿಗಳು ೩೫ ರಿಂದ ೪೦ ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಹುಲುಸಾಗಿ ಬೆಳೇಯುತ್ತವೆ. ಆದರೆ ಹಸಿರು-ನೀಲಿ ಪಾಚಿಗಳು ಒಳ್ಳೆಯ ಆಹಾರವಲ್ಲ, ಒಮ್ಮೆಮ್ಮೆ ಮೀನುಗಳಿಗೆ ಅವು ಪಾಷಾಣ ಕೂಡ ಆಗುತ್ತವೆ.

ಮೊದಲೇ ಶಾಖ ಮಾಲಿನ್ಯದಿಂದ ಬಸವಳಿದ ನೀರಿಗೆ ಚರಂಡಿ ತ್ಯಾಜ್ಯವೂ ಸೇರಿದರೆ ನೀರಿನ ಗುಣಮಟ್ಟ ಮತ್ತೂ ವೇಗವಾಗಿ ಕೆಡುತ್ತದೆ. ಚರಂಡಿ ತ್ಯಾಜ್ಯದ ಉಷ್ಣತೆ ಕೂಡ ಹೆಚ್ಚಾಗಿರುತ್ತದೆ. ಜೊತೆಗೆ ಅದು ಸಾವಯವ ತ್ಯಾಜ್ಯವನ್ನು ಒಳಗೊಂಡಿರುತ್ತದೆ. ಹೀಗಾಗಿ, ಒಂದೆಡೆ ಶಾಖದಿಂದಾಗಿ ಆಮ್ಲಜನಕದ ಪ್ರಮಾಣ ಕುಸಿಯುತ್ತದೆ, ಮತ್ತೊಂದೆಡೆ ವಾಯುಜೀವಿಗಳು ಸಾವಯವ ಪದಾರ್ಥಗಳನ್ನು ವಿಘಟಿಸಲು ಆಮ್ಲಜನಕವನ್ನು ಬೇಡುತ್ತವೆ. ಈ ಎರಡು ಪ್ರಕ್ರಿಯೆಗಳಿಂದ ಬಿ.ಓ.ಡಿ.ಯ ಮೌಲ್ಯ ವೇಗವಾಗಿ ಮೀತಿ ಮೀರುತ್ತದೆ. ನೀರು ದುರ್ಗಂಧಯುಕ್ತವಾಗುತ್ತದೆ. ಪ್ರೊಟೊಜೋಅಗೆ ಆಹಾರವಾಗಬಲ್ಲ ಬ್ಯಾಕ್ಟೀರಿಯಾಗಳೂ ನಶಿಸುತ್ತವೆ. ಪ್ರೊಟೊಜೋಅಗಳು ಹೊಟ್ಟೆಗಿಲ್ಲದೆ ಸಾಯುತ್ತವೆ. ಪ್ರೊಟೊಜೋಅಗಳು ಮೇಲು ಸ್ತರದ ಜಲಜೀವಿಗಳಿಗೆ ಆಹಾರ. ಪ್ರೊಟೊಜೋಅಗಳ ನಾಶದಿಂದ ಈ ಮೇಲು ಸ್ತರದ ಜೀವಿಗಳಿಗೆ ಆಹಾರದ ಕೊರತೆಯುಂಟಾಗುತ್ತದೆ. ಒಟ್ಟಾರೆ ಜಲಸಂಕುಲವೇ ನಶಿಸಿಹೋಗುವ ಅಪಾಯ ಉಂಟಾಗುತ್ತದೆ.

ವಿಕಿರಣ ಮಾಲಿನ್ಯ

ವಿಕಿರಣ ಮಾಲಿನ್ಯ ಅನ್ಯ ವಸ್ತು ಸೋರಿಕೆಯಿಂದುಂಟಾಗುವ ಮಾಲಿನ್ಯವೇ ಆದರೂ ಅದರ ವಿಶಿಷ್ಟ ಸ್ವಭಾವದಿಂದಾಗಿ ಪ್ರತ್ಯೇಕ ಸ್ಥಾನವನ್ನು ಪಡೆಯುತ್ತದೆ.

ಕೆಲವು ವಸ್ತುಗಳಿವೆ. ಅವು ಸುಮ್ಮನಿರುವುದಿಲ್ಲ. ಸದಾ ತಮ್ಮ ಒಡಲಿಂದ ಕಣ್ಣಿಗೆ ಕಾಣಿಸದ ಶಕ್ತಿಯುತ ಕಣಗಳು ಯಾ ಕಿರಣಗಳನ್ನು ಕಕ್ಕುತ್ತಿರುತ್ತವೆ. ಇವನ್ನು ಒಟ್ಟಾರೆಯಾಗಿ ವಿಕಿರಣ ಎನ್ನುತ್ತಾರೆ. ಈ ವಿಕಿರಣಗಳಿಗೆ ವಿಧ್ವಂಸಕ ಗುಣವಿದೆ. ಅವು ನಮ್ಮ ದೇಹವನ್ನು ಪ್ರವೇಶಿಸಿದಾಗ ಅನೇಕ ಬಗೆಯ ಕ್ಯಾನ್ಸರ್, ದೃಷ್ಟಿದೋಷ, ಷಂಡತ್ವ, ರೋಗ ನಿರೋಧಕ ಶಕ್ತಿಯ ನಾಶ ಮುಂತಾದ ಪೀಡೆಗಳನ್ನು ಉಂಟುಮಾಡುತ್ತವೆ. ಇವುಗಳ ಅತ್ಯಂತ ಭಯಾನಕ ಮತ್ತು ವಿಶಿಷ್ಟ ದುರ್ಗುಣವೆಂದರೆ ಅವು ತಾವು ತಗುಲಿದ ವ್ಯಕ್ತಿಯನ್ನಷ್ಟೆ ಕಾಡಿ ಬಿಟ್ಟು ಹೋಗದೆ ಆತನ ಮುಂದಿನ ಪೀಳಿಗೆಗಳನ್ನು ಅಟ್ಟಿಕೊಂಡು ಹೋಗುತ್ತವೆ, ನರಳಿಸುತ್ತವೆ, ವಿಕೃತ ಮಕ್ಕಳ ಜನನಕ್ಕೆ ಕಾರಣವಾಗುತ್ತವೆ. ಏಕೆಂದರೆ ಅನೇಕ ವಿಕಿರಣಶೀಲ ವಸ್ತುಗಳು ಅರ್ಧದಷ್ಟು ನಷ್ಟವಾಗುವುದಕ್ಕೇ ಶತಶತಮಾನಗಳನ್ನು ತೆಗೆದುಕೊಳ್ಳುತ್ತವೆ; ಅವುಗಳಿಗೆ, ಮನುಷ್ಯನ ವಯೋಮಾನದ ಲೆಕ್ಕದಲ್ಲಿ, ಸಾವೇ ಇಲ್ಲ.

ಮನುಷ್ಯ ಯಾವತ್ತೂ ಕಡಿಮೆ ಮಟ್ಟದ ನೈಸರ್ಗಿಕ ಹಿನ್ನೆಲೆ ವಿಕಿರಣದ ನಡುವೆಯೇ ಬದುಕುತ್ತಾ ಬಂದಿದ್ದಾನೆ. ಆದರೆ ಈಚೆಗೆ, ವಿಶೇಷವಾಗಿ ಪರಮಾಣು ಬಾಂಬು ಮತ್ತು ಶಕ್ತಿ ಉತ್ಪಾದನೆಯ ಕ್ಷೇತ್ರಗಳಲ್ಲಿ, ನೈಸರ್ಗಿಕವಾಗಿ ಲಭ್ಯವಿರುವ (ಯುರೇನಿಯಮ್‌, ಥೋರಿಯಮ್‌) ಮತ್ತು ಕೃತಕವಾಗಿ ಉತ್ಪನ್ನ ಮಾಡಿದ (ಫ್ಲುಟೋನಿಯಮ್‌) ವಿಕಿರಣಶೀಲ ವಸ್ತುಗಳ ಬಳಕೆಯನ್ನು ಹೆಚ್ಚು ಮಾಡಿರುವುದರಿಂದ ಹಿನ್ನೆಲೆ ವಿಕಿರಣದ ಮಟ್ಟ ಹೆಚ್ಚಾಗಿ ಆತಂಕ ಉಂಟುಮಾಡುತ್ತಿದೆ.

ವಿಕಿರಣಶೀಲ ವಸ್ತುಗಳು ನೀರನ್ನು ಸೇರುವ ದಾರಿಗಳು ಅನೇಕ. ಪರಮಾಣು ಬಾಂಬು ಅಥವ ಪರಮಾಣ ವಿದ್ಯುತ್‌ ಉತ್ಪಾದನೆಯ ಮೊದಲ ಹಂತದಲ್ಲಿ ಅದಕ್ಕೆ ಅಗತ್ಯವಾದ ನ್ಯೂಕ್ಲಿಯರ್ ಇಂಧನವನ್ನು ಪಡೆಯಲು ಗಣಿಗಾರಿಕೆ ಮತ್ತು ಅದುರಿನ ಸಂಸ್ಕರಣ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಗಾಧ ಪ್ರಮಾಣದ ನೀರನ್ನು ಬಳಸಲಾಗುತ್ತದೆ. ಹೀಗೆ ಬಳಸಿ ಬಿಟ್ಟ ನೀರಿನಲ್ಲಿ ವಿಕಿರಣ ಕಶ್ಮಲ ಇರುತ್ತದೆ. ಇದು ಯಾವುದೇ ನೀರಿನ ಆಕರವನ್ನು ಸೇರಿದಾಗ ಆ ಆಕರವೂ ವಿಕಿರಣ ಮಾಲಿನ್ಯಕ್ಕೆ ತುತ್ತಾಗುತ್ತದೆ.

ಪರಮಾಣು ಪರೀಕ್ಷೆಗಳನ್ನು ಮಾಡಿದಾಗ ಅನೇಕ ಅಲ್ಪಾಯುಷಿ ಮತ್ತು ದೀರ್ಘಾಯುಷಿ ವಿದಳನ ಉತ್ಪನ್ನಗಳು ಎಲ್ಲಡೆ ಉದುರಿ ಬೀಳುತ್ತವೆ. ಇವುಗಳಲ್ಲಿ ಕೆಲವು ನೀರಿನಲ್ಲಿ ಕರಗುತ್ತವೆ; ನೀರಿನೊಂದಿಗೆ ತುಂಬಾ ದೂರದವರೆಗೆ ಹರಿದು ಹೋಗುತ್ತವೆ. ಮತ್ತೆ ಕೆಲವು ಕರುಗುವುದಿಲ್ಲ; ಕಣ ರೂಪದಲ್ಲಿ ನೀರಿನ ತಳವನ್ನು ಸೇರಿ ತಮ್ಮ ಚಮಕ್‌ ತೋರುತ್ತವೆ.

ವೈದ್ಯಕೀಯ, ಕೈಗಾರಿಕೆ, ಕೃಷಿ ಮತ್ತು ಜೀವರಸಾಯನ ವಿಜ್ಞಾನ ಕ್ಷೇತ್ರಗಳಲ್ಲೂ ವಿಕಿರಣಶೀಲ ವಸ್ತುಗಳನ್ನು ಮಾರ್ಗಸೂಚಕಗಳಾಗಿ ಉಪಯೋಗಿಸಲಾಗುತ್ತದೆ. ಇವುಗಳಿಂದ ಹೊರಬಿದ್ದ ನೀರಿನಲ್ಲಿ ವಿಕಿರಣಶೀಲ ವಸ್ತುಗಳಿರುತ್ತವೆ. ಈ ತ್ಯಾಜ್ಯ ನೀರು ತಾನು ಸೇರಿದ ಜಲಸಂಪನ್ಮೂಲವನ್ನು ಮಲಿನಗೊಳಿಸುತ್ತದೆ.

ನೀರನ್ನು ಸೇರಿದ ವಿಕಿರಣ ಜಲಚರಗಳು ಮತ್ತು ಸಸ್ಯಗಳ ಒಡಲನ್ನು ಸೇರುತ್ತವೆ. ಮುಂದೆ ಅವು ಆಹಾರ ಸರಪಳಿಯ ಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸುತ್ತವೆ ಮತ್ತು ಮೇಲೆ ವಿವರಿಸಿರುವ ಎಲ್ಲ ಭಯಾನಕ ಪರಿಣಾಮಗಳನ್ನು ಉಂಟುಮಾಡುತ್ತವೆ.

ತ್ಯಾಜ್ಯ ಪರಿಮಾಣ

ಮುನಿಸಿಪಲ್‌ ತ್ಯಾಜ್ಯೋತ್ಪತ್ತಿ ಅನಿವಾರ್ಯ. ಮನುಷ್ಯ ಇದ್ದಲ್ಲೆಲ್ಲ ಈ ತ್ಯಾಜ್ಯೋತ್ಪತ್ತಿ ಇರುತ್ತದೆ. ಕಾಲ-ದೇಶ ಯಾವುದಾದರೂ ಆಗಿರಲಿ: ಕಛೇರಿಯಾಗಲಿ – ಕಾಲೇಜಾಗಲಿ, ಹಾಸ್ಟೆಲ್ಲಾಗಲಿ- ಹೋಟೆಲ್ಲಾಗಲಿ, ನದಿ ಸರೋವರವಾಗಲಿ – ಗುಡ್ಡಗಾಡಾಗಲಿ, ಬಯಲಾಗಲಿ – ಕಣಿವೆಯಾಗಲಿ ಯಾವ ಕಟ್ಟಳೆಯೂ ಇಲ್ಲ, ಏಕೆಂದರೆ ಮುನಿಸಿಪಲ್‌ ತ್ಯಾಜ್ಯೋತ್ಪತ್ತಿ ಮನುಷ್ಯನ ಉಸಿರಾಟದಷ್ಟೆ ಸಹಜ ಕ್ರಿಯೆ.ಮುನಿಸಿಪಲ್‌ ತ್ಯಾಜ್ಯದಿಂದ ಹೊಲಸಾದ ನೀರಿನ ಪರಿಮಾಣ ನೇರವಾಗಿ ಜನಸಂಖ್ಯೆಯನ್ನು, ಸ್ವಲ್ಪ ಮಟ್ಟಿಗೆ ಜನರ ಜೀವನ ಶೈಲಿಯನ್ನು, ಅವಲಂಬಿಸಿದೆ. ಜನಸಂಖ್ಯೆ ಹೆಚ್ಚಿದಂತೆ ಅದೂ ಹೆಚ್ಚುತ್ತದೆ.

ಕೈಗಾರಿಕಾ ತ್ಯಾಜ್ಯೋತ್ಪತ್ತಿ ಅನಿವಾರ್ಯವೇನಲ್ಲ – ಕನಿಷ್ಟ ಈವತ್ತಾಗುತ್ತಿರುವ ಪ್ರಮಾಣದಲ್ಲಂತೂ ಅಲ್ಲ, ಏಕೆಂದರೆ ಎಲ್ಲ ಕೈಗಾರಿಕೆಗಳೂ ಆಹಾರದಂತ ಜೀವನಾವಶ್ಯಕ ವಸ್ತುಗಳನ್ನೆ ತಯಾರು ಮಾಡುವುದಿಲ್ಲ. ಅವು ಮನುಷ್ಯನ ಐಷಾರಾಮಕ್ಕೆ, ಶೋಕಿಗೆ, ಆಡಂಬರದ ಮೆರವಣಿಗೆಗೆ ಸಲ್ಲುವಂಥ ಅಧಿಕಾಧಿಕ ವಸ್ತುಗಳನ್ನು ತಯಾರಿಸುತ್ತವೆ. ಆದ್ದರಿಂದಲೇ ಕೈಗಾರಿಕಾ ತ್ಯಾಜ್ಯೋತ್ಪತ್ತಿ ಜನಸಂಖ್ಯೆಯಷ್ಟೇ ಜನರ ಜೀವನ ಶೈಲಿಯನ್ನೂ ಅವಲಂಬಿಸಿದೆ. ಜನ ತಮ್ಮ ಜೀವನ ಶೈಲಿಯನ್ನು ಸರಳಗೊಳಿಸಿಕೊಳ್ಳುವುದರ ಮೂಲಕ ಕೈಗಾರಿಕಾ ತ್ಯಾಜ್ಯದ ಗಾತ್ರವನ್ನು ಮತ್ತು ಅದರ ವಿಷಕಾರಿತ್ವವನ್ನು ಕಡಿಮೆ ಮಾಡಬಹುದು.

ಕೃಷಿ ಚಟುವಟಿಕೆಯಂತೂ ಅನಿವಾರ್ಯ ಅದಿಲ್ಲದೆ ಹೋದರೆ ಮನುಷ್ಯ ಹೊಟ್ಟೆಗಿಲ್ಲದೆ ಸಾಯುತ್ತಾನೆ. ಆದರೆ ಈಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲೂ ಎಗ್ಗಿಲ್ಲದೆ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಗಣನೀಯ  ಪ್ರಮಾಣದ ನೀರು ಮಲಿನವಾಗುತ್ತಿದೆ. ಜೊತೆಗೆ, ಕೃಷಿಗೆ ಬಳಕೆಯಾಗುತ್ತಿರುವ ನೀರು ಶುದ್ಧೀಕರಣಕ್ಕೆ ಮತ್ತು ಮರುಬಳಕೆಗೆ ದಕ್ಕುವಂತದ್ದಲ್ಲ.

ಇಂದು ಜಗತ್ತು ಬಳಸುತ್ತಿರುವ ಒಟ್ಟು ನೀರಿನಲ್ಲಿ ಶೇ. ೫ ರಷ್ಟು ನೀರನ್ನು (ಸುಮಾರು ೨ ಕೋಟಿ ಕೋಟಿ ಲೀಟರುಗಳಷ್ಟು) ಗೃಹಕೃತ್ಯಗಳಿಗೆ, ಸುಮಾರು ಶೆ. ೨೨ ರಷ್ಟು (ಸುಮಾರು ೮ ಕೋಟಿ ಕೋಟಿ ಲೀಟರುಗಳಷ್ಟು) ಕೈಗಾರಿಕೆಗಳಿಗೆ ಬಳಕೆಯಾಗುತ್ತಿದೆ.. ಇದಿಷ್ಟೂ ನೀರು (೧೧ ಕೋಟಿ ಕೋಟಿ ಲೀಟರುಗಳಷ್ಟು) ಕೊಳಕಾಗಿ ನದಿ ಸರೋವರಗಳನ್ನು ಸೇರುತ್ತವೆ. ಈ ಕೊಳಕು ನೀರೆ ಜಲಮೂಲಗಳಿಗೆ ದೊಡ್ಡ ಮುಳ್ಳಾಗಿರುವುದು.

ಕುತೂಹಲಕ್ಕಗಿ ನಮ್ಮ ದೇಶವನ್ನು ಗಮನಿಸಿ: ಪ್ರತಿ ಪೂಜೆ ಪ್ರತಿದಿನ ಸರಾಸರಿ ೫೦ ಲೀಟರ್ ನೀರನ್ನು ಬಳಸುತ್ತಾನೆ ಎಂದಿಟ್ಟುಕೊಂಡರೂ ಪ್ರತಿದಿನ ಕಲುಷಿತಗೊಳ್ಳುವ ಒಟ್ಟು ನೀರು ೫೦೦೦ ಕೋಟಿ ಲೀಟರ್. ಇದರೊಂದಿಗೆ ಪ್ರಾಣಿಜನ್ಯ ಗಲೀಜು ನೀರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟು ಪ್ರಮಾಣ ಮತ್ತಷ್ಟು ಜಾಸ್ತಿಯಾಗುತ್ತದೆ. ನಮ್ಮ ದೇಶದಲ್ಲಿ ಜಾನುವಾರುಗಳ ಸಂಖ್ಯೆಯೂ ಜಾಸ್ತಿ: ಜಗತ್ತಿನ ೧/೪೦ ರಷ್ಟು ನೆಲ ಮಾತ್ರ ಭಾರತದಲ್ಲಿದ್ದರೂ ಅದು ಜಗತ್ತಿನ ಅರ್ಧದಷ್ಟು ಎಮ್ಮೆ ಕೋಣಗಳನ್ನೂ, ಶೇ. ೧೫ ರಷ್ಟು ದನಕರುಗಳನ್ನು, ಶೇ.೧೫ ರಷ್ಟು ಆಡುಗಳನ್ನೂ, ಶೇ. ೪ ರಷ್ಟು ಕುರಿಗಳನ್ನೂ ಸಾಕುತ್ತಿದೆ. ಈ ಎಲ್ಲ ಸಾಕು ಪ್ರಾಣಿಗಳ ಒಟ್ಟು ಸಂಖ್ಯೆ ಸುಮರು ೪೦೦ ದಶಲಕ್ಷ. ಒಂದೊಂದು ಪಶುವಿನಿಂದ ಪ್ರತಿ ದಿನ ೧೦ ಲೀಟರ್ ಗಲೀಜುನೀರು ಉತ್ಪನ್ನವಾಗುತ್ತದೆ ಎಂದಿಟ್ಟುಕೊಂಡರೂ ಒಟ್ಟು ತ್ಯಾಜ್ಯ ನೀರು ೪೦೦೦ ಕೋಟಿ ಲೀಟರುಗಳಷ್ಟಾಗುತ್ತದೆ. ಇಲ್ಲಿ ಇನ್ನಿತರೆ ಪ್ರಾಣಿ ಪಕ್ಷಿಗಳಾದ ಹಂದಿಗಳು, ಕುದುರೆಗಳು, ಒಂಟೆಗಳು, ಕೋಳಿಗಳು ಮುಂತಾದುವನ್ನು ಗಣನೆಗೆ ತೆಗೆದುಕೊಂಡಿಲ್ಲ. ಇವುಗಳೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಕಲುಷಿತಗೊಳ್ಳುವ ನೀರಿನ ಒಟ್ಟು ಪರಿಮಾಣ ನಮ್ಮ ತಲೆತಿರುಗಿಸುವುದು ಖಂಡಿತ.

ಹೀಗೆ ಕಲುಷಿತಗೊಂಡ ನೀರು ಚರಂಡಿಯ ಮೂಲಕ ಕೆರೆ ಕುಂಟೆ ನದಿ ಸರೋವರ ಇತ್ಯಾದಿ ಆಕರಗಳನ್ನು ಸೇರಿ ಅವುಗಳನ್ನು ಮಲಿನಗೊಳಿಸುತ್ತದೆ.

ಕೈಗಾರಿಕಾ ತ್ಯಾಜ್ಯ ನೀರಿನ ಗಾತ್ರ ಮತ್ತು ಗುಣ ಆಯಾ ಪ್ರದೇಶದಲ್ಲಿರುವ ಕೈಗಾರಿಕೆಗಳು ಮತ್ತು ಅವು ಉತ್ಪನ್ನ ಮಾಡುವ ವಸ್ತುಗಳನ್ನು ಅವಲಂಬಿಸಿದೆ. ಇದೂ ಕೂಡ ಒಂದಲ್ಲ ಒಂದು ದಾರಿ ಹಿಡಿದು ಕೊನೆಗೆ ಯಾವುದಾದರೊಂದು ಜಲಮೂಲವನ್ನು ಸೇರಿಕೊಳ್ಳುತ್ತದೆ.

ಈವತ್ತು ‘ಶುದ್ಧ’ ತ್ಯಾಜ್ಯ ಎಂಬುದು ಅಪರೂಪ. ಎಲ್ಲ ತ್ಯಾಜ್ಯಗಳು ಅಂತಿಮವಾಗಿ ಸೇರುವುದು ಕೆರೆಕುಂಠೆ ನದಿ ಸಾಗರ ಯಾವುದಾದರೊಂದು ನೀರಿನ ಆಕರವನ್ನೆ. ಹೀಗಾಗಿ ನಮಗೆ ತಿಳಿದು ಬರುವುದು ಒಟ್ಟಾರೆ ತ್ಯಾಜ್ಯ ನೀರಿನ ಪರಿಮಾಣ ಮತ್ತು ಪರಿಣಾಮ. ಬೇರೆ ಬೇರೆ ಮೂಲಗಳಿಂದ ಹೊರಟ ತ್ಯಾಜ್ಯಗಳು ಬೇರೆ ಬೇರೆ ದಾರಿ ಹಿಡಿದು ನೀರನ್ನು ಸೇರಬಹುದು ಅಥವ ಎಲ್ಲೋ ಒಂದೆಡೆ ಅವು ಒಗ್ಗೂಡಿ ಮುಂದುವರಿದು ನೀರನ್ನು ಸೇರಬಹುದು. ವಿಶೇಷವಾಗಿ ಮುನಿಸಿಪಲ್‌ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಚರಂಡಿಗಳಲ್ಲಿ ಒಗ್ಗೂಡಿ ಮುಂದುವರಿಯುತ್ತವೆ. ಈ ಎಲ್ಲಾ ಮಾಲಿನ್ಯಗಳ ಒಗ್ಗೂಡುವಿಕೆಯಿಂದ ಆಗುವ ಫಲಿತ ಪರಿಣಾಮ ಮತ್ತೂ ಭಯಂಕರ.

ಹೊಲಸುಗೊಂಡು ಒಗ್ಗೂಡಿದ ಅಗಾಧ ಪ್ರಮಾಣದ ನೀರು ನಮ್ಮ ನದಿ ಸರೋವರಗಳನ್ನು ಎಷ್ಟರಮಟ್ಟಿಗೆ ಪಾಷಾಣಗೊಳಿಸುತ್ತವೆ ಎಂಬುದು ನಾವು ಈ ಗಲೀಜು ನೀರನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದನ್ನು ಅವಲಂಬಿಸಿದೆ.

ಚರಂಡಿ ನೀರಿನಲ್ಲಿ ಒಣಗಿದ ನಿರವಯ ಮತ್ತು ಸಾವಯವ ಪದಾರ್ಥಗಳ ತೂಕ ಕೇವಲ ಶೇ.  ೦.೧ ರಷ್ಟಿರುತ್ತದೆ. ಉಳಿದ ಶೆ.೯೯.೯ ರಷ್ಟು ಬರೀ ನೀರು. ಈ ನೀರನ್ನು ಶುದ್ಧಗೊಳಿಸುವುದು ಮತ್ತು ಮರುಬಳಸುವುದು ಸಾಧ್ಯ. ಅದೇ ರೀತಿ ಕೈಗಾರಿಕೆಗಳಿಂಧ ಹೊರಟ ತ್ಯಾಜ್ಯ ನೀರಿನಿಂದ ಸುಮಾರು ಶೇ. ೮೦ ರಷ್ಟು ನೀರನ್ನು ಶುದ್ಧಗೊಳಿಸುವುದು ಸಾಧ್ಯ. ಹೀಗೆ ಎರಡೂ ಮೂಲಗಳಿಂದ ಬಂದ ತ್ಯಾಜ್ಯ ನೀರನ್ನು ಶುದ್ಧಗೊಳಿಸಿ ಮರು ಬಳಸಿದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಎಲ್ಲ ಗಲೀಜು ನೀರನ್ನು ಹಾಗೆಯೇ ನದಿ ಸರೋವರಗಳಿಗೆ ಬಿಟ್ಟರೆ ಪರಿಣಾಮ ಕೆಟ್ಟದ್ದಾಗುತ್ತದೆ.

ನಮ್ಮ ದೇಶದಲ್ಲಿ ನೀರಿನ ಶುದ್ದೀಕರಣ ಎಲ್ಲೂ ಸಂಪೂರ್ಣವಾಗಿ ನಡೆಯುತ್ತಿಲ್ಲ. ರಾಜಧಾನಿ ದೆಹಲಿಯೊಂದರ ಉದಾಹರಣೆ ಇದನ್ನು ಸ್ಪಷ್ಟಪಡಿಸುತ್ತದೆ. ದೆಹಲಿ ಯಮುನಾ ನದಿಯಿಂದ ಸುಮರು ೨೫೦ ಕೋಟಿ ಲೀಟರುಗಳಷ್ಟು ನೀರನ್ನು ಪಡೆದು ೨೦೦ ಕೋಟಿ ಲೀಟರುಗಳಿಗಿಂತಲೂ ಹೆಚ್ಚು ಹೊಲಸು ನೀರನ್ನು ನದಿಗೆ ಮರಳಿಸುತ್ತಿದೆ. ಇದರಲ್ಲಿ ಹೆಚ್ಚು ಕಮ್ಮಿ ಅರ್ಧದಷ್ಟು ಮಾತ್ರ ಸಂಸ್ಕರಿಸಿದ್ದು; ಉಳಿದದ್ದು ಗಲೀಜು ಗಲೀಜು. ಈ ನೀರಿನಲ್ಲಿ ೮,೫೦೦,೦೦೦ ಕ್ಕೂ ಹೆಚ್ಚು ಜನರ ಮಲಮೂತ್ರ ಹಾಗೂ ಸುಮಾರು ೭೦,೦೦೦ ಚಿಕ್ಕ ದೊಡ್ಡ ಕಾರ್ಖಾನೆಗಳ ತ್ಯಾಜ್ಯ ನೀರು ಸೇರಿರುತ್ತದೆ. ಹೀಗಾಗಿ ಯಮುನೆಯ ನೀರು ಈವತ್ತು ರೋಗ ಬರಿಸುವ ಪೇಯವಾಗಿದೆ.

ಇದು ಒಂದು ಯುಮುನೆಯ ಕಥೆ. ಇತರೆ ನದಿ ಸರೋವರಗಳ ಪಾಡು ಇದಕ್ಕಿಂತ ಭಿನ್ನವಾಗಿಲ್ಲ. ನಮ್ಮ ದೇಶದ ಒಟ್ಟು ನೀರಿನ ಶೇಕಡ ೭೦ ಭಾಗ ಇಂದು ಕಲುಷಿತವಾಗಿದೆ ಎಂಬುದು ಪರಿಣಿತರ ಅಭಿಪ್ರಾಯ. ಇಂಥ ಕಲುಷಿತ ನೀರನ್ನು ಸೇವಿಸಿ ಉಂಟಾಗುತ್ತಿರುವ ವಿವಿಧ ರೋಗಗಳಿಂದ ಪ್ರತಿವರ್ಷ ೭.೩ ದಶಲಕ್ಷ ದಿನಗಳ ಕೆಲಸ ವ್ಯರ್ಥವಾಗುತ್ತಿದೆ. ಅಂಧರೆ ಸುಮಾರು ೬೦೦ ಕೋಟಿ ರೂಪಾಯಿಗಳಷ್ಟು ಹಣ ನಷ್ಟವಾಗುತ್ತಿದೆ.

ತ್ಯಾಜ್ಯ ಪರಿಣಾಮ

ಜಲಮಾಲಿನ್ಯದಿಂದ ನಿಜಕ್ಕೂ ಅಪಾಯವಿದೆಯೆ? ಇದೆ. ಇದಕ್ಕೆ ಅನೇಕಾನೇಕ ಘಟನೆಗಳು ಸಾಕ್ಷಿಯಾಗಿವೆ. ಜಲಮಾಲಿನ್ಯ ಕೇವಲ ಹಿಂದೆ ತಿಳಿದಿದ್ದ ಕಾಲರ, ವಾಂತಿ, ಭೇದಿಯಂಥ ರೋಗಗಳನ್ನಷ್ಟೆ ಅಲ್ಲದೆ ಹಿಂದೆಂದೂ ಕಂಡುಕೇಳರಿಯದ ಹೊಸ ಆರೋಗ್ಯ ಸಮಸ್ಯೆಗಳನ್ನೂ ಹುಟ್ಟುಹಾಕಿದೆ. ಇದಕ್ಕೆ ಪ್ರಾತಿನಿಧಿಕ ಉದಾಹರಣೆಯಾಗಿ ಮಿನಮಾಟ ಪ್ರಕರಣವನ್ನು ತೆಗೆದುಕೊಳ್ಳಬಹುದು.

ಜಗತ್ತಿನ ಗಮನ ಸೆಳೆದ ಈ ಪ್ರಕರಣ ನಡೆದದ್ದು ಜಪಾನಿನ ಮಿನಮಾಟಾ ಎಂಬ ಒಂದು ಪಟ್ಟಣದಲ್ಲಿ, ೫೦ ರ ದಶಕದವರೆಗೂ ಯಾರ ಗಮನಕ್ಕೂ ಬಾರದೆ ತನ್ನ ಪಾಡಿಗೆ ತಾನು ಪ್ರಶಾಂತ ಮತ್ತು ಆರೋಗ್ಯಕರ ಜೀವನ ನಡೆಸುತ್ತಿದ್ದ ಈ ಸುಂದರ ಪಟ್ಟಣದಲ್ಲಿ ಒಮ್ಮೆಲೆ ಗೊಂದಲ, ಆತಂಕ, ಭಯ, ನೋವು, ನರಳಾಟ ಮಡುಗಟ್ಟಿತು. ೧೯೫೬ರ ಸುಮಾರಿಗೆ ಇಲ್ಲಿನ ಅನೇಕ ಜನರ ಬುದ್ಧಿ ಕೆಟ್ಟಿತು. ಕೈಕಾಲು, ನಾಲಗೆಗಳು ಬಿದ್ದು ಹೋದವು. ಕಣ್ಣು ಮಂಜಾದವು. ಈ ಅವಾಂತರ ಕಾಣಿಸಿಕೊಂಡ ಸ್ವಲ್ಪ ದಿನಗಳಲ್ಲೆ ಸುಮರು ೪೦೦ ಜನ ಪ್ರಾಣ ಕಳೆದುಕೊಂಡರು. ಅದಾಗಿ ೪೫ ವರ್ಷಗಳು ಕಳೆದಿದ್ದರೂ ದುರಂತದ ಛಾಪು ಇನ್ನೂ ಮಾಸಿಲ್ಲ. ಒಂದು ಅಂದಾಜಿನ ಪ್ರಕಾರ ಈವರೆಗೆ ಸುಮಾರು ೧೫೦೦ ಜನ ಮಿದುಳಿನ ಕಾಯಿಲೆಯಿಂದ ಗೋರಿ ಸೇರಿದ್ದಾರೆ. ಸುಮಾರು ಅಷ್ಟೇ ಸಂಖ್ಯೆಯ ಜನ ಶಾಶ್ವತ ವಿಕಲತೆಯಿಂದ ಸಂಕಟ ಅನುಭವಿಸುತ್ತಿದ್ದಾರೆ. ತಾಯಿಯ ಗರ್ಭದಲ್ಲಿ ಸುರಕ್ಷಿತವೆಂದು ತಿಳಿದ ಭ್ರೂಣಗಳೂ ಬೆಳಕು ಕಾಣುವುದಕ್ಕೆ ಮುಂಚೆ ಈ ಪೀಡೆಗೆ ಬಲಿಯಾಗುತ್ತಿವೆ.

ಮಿನಮಾಟದ ಈ ಘಟನೆ ಸಾಮಾನ್ಯ ಜನರು, ವೈದ್ಯರು ಮತ್ತು ವಿಜ್ಞಾನಿಗಳನ್ನು ಗೊಂದಲಕ್ಕೀಡು ಮಾಡಿತು. ಆವರೆಗೆ ಕಾಣಬರದಿದ್ದ ಈ ದುರಂತದ ಸರಮಾಲೆ ಪ್ರಾರಂಭವಾದದ್ದು ಹೇಗೆ? ಯಾಕೆ? ಮತ್ತು ಎಲ್ಲಿಂದ? ಎಂಬ ಪ್ರಶ್ನೆಗಳು ಎಲ್ಲರನ್ನು ಕಾಣತೊಡಗಿದವು. ೧೯೫೯ ರಲ್ಲಷ್ಟೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಯಿತು. ಜನರ ನೆಮ್ಮದಿ ಕೆಡಿಸಿದ್ದು ಅವರ ದೇಹದಲ್ಲಿ ಸಂಚಯವಾಗಿದ್ದ ಪಾದರಸ ಎಂಬುದು ತಿಳಿಯಿತು. ಮಿನಮಾಟದಲ್ಲಿ ಚೆಸ್ಸೊ ಎಂಬ ಕಾರ್ಖಾನೆ ಅಸಿಟಾಲ್ಡಿಹೈಡ್‌ ಮತ್ತು ವಿನೈಲ್‌ ಕ್ಲೋರೈಡ್‌ ತಯಾರಿಸುತ್ತಿತ್ತು. ಅದು ತನ್ನ ತ್ಯಾಜ್ಯ ನೀರನ್ನು ಮಿನಮಾಟಾ ಸರೋವರಕ್ಕೆ ಹರಿಯಬಿಡುತ್ತಿತ್ತು. ಈ ತ್ಯಾಜ್ಯದಲ್ಲಿ ಹೇರಳ ಪ್ರಮಾಣದಲ್ಲಿ ಪಾದರಸ ಇರುತ್ತಿತ್ತು. ಈಗಾಗಲೇ ವಿವರಿಸಿರುವಂತೆ ನೀರಿನಲ್ಲಿ ಕರಗದ ನಿರವಯವ ಪಾದರಸ ಅಷ್ಟೇನು ವಿಷಕಾರಿಯಲ್ಲ. ಆದರೆ ಸರೋವರದ ತಳದಲ್ಲಿರುವ ಸೂಕ್ಷ್ಣ ಜೀವಾಣುಗಳು ಪಾದರಸವನ್ನು ನೀರಿನಲ್ಲಿ ಕರಗುವ ಮಿಥೈಲ್‌ ಮರ್ಕ್ಯುರಿಯಾಗಿ ಪರಿವರ್ತಿಸುತ್ತವೆ. ನೀರಿನಲ್ಲಿ ಕರಗಿದ ಮಿಥೈಲ್‌ ಪಾದರಸ ಸುಲಭವಾಗಿ ಆಹಾರ ಸರಪಳಿಯನ್ನು ಸೇರುತ್ತದೆ. ಮೊದಲಿಗೆ ಸಸ್ಯ ಅಥವ ಸೂಕ್ಷ್ಮಜೀವಿಗಳು. ಅಲ್ಲಿಂದ ಸಣ್ಣ ಮೀನುಗಳು. ಮುಂದೆ ದೊಡ್ಡ ಮೀನುಗಳಲು. ಕೊನಗೆ ಮನುಷ್ಯ ದೇಹದಲ್ಲಿ ಸಂಚಯವಾಗುತ್ತದೆ. ಒಮ್ಮೆ ದೇಹವನ್ನು ಪ್ರವೇಶಿಸಿ ಕುಳಿತ ಪಾದರಸ ತನ್ನ ಕುಕೃತ್ಯಗಳ ಸರಮಾಲೆಯನ್ನು ಬಿಚ್ಚುತ್ತದೆ. ಮಿದುಳನ್ನು ಘಾಸಿಗೊಳಿಸುತ್ತದೆ; ಮೂತ್ರಕೋಶಗಳಿಗೆ ಕೇಡುಂಟು ಮಾಡುತ್ತದೆ; ಯಕೃತ್ತಿನಲ್ಲಿ ಊತ ಉಂಟುಮಾಡುತ್ತದೆ. ಗರ್ಭಿಣಿಯರ ಭ್ರೂಣಕ್ಕೂ ನುಸುಳಿ ತನ್ನ ಕೈವಾಡ ತೋರಿಸುತ್ತದೆ.

ಮಿನಮಾಟದಲ್ಲಿ ಆದದ್ದೂ ಇದೆ. ಈಗ ಇದನ್ನು ಮಿನಮಾಟ ಕಾಯಿಲೆ ಎಂದೇ ಹೆಸರಿಸಲಾಗಿದೆ.

ನಮ್ಮ ದೇಶದಲ್ಲೂ ಒಂದು ಮಿನಮಾಟ ಪ್ರಕರಣ ನಡೆದಿರುವುದು ವರದಿಯಾಗಿದೆ. ಮಹಾರಾಷ್ಟ್ರದ ಮುಂಬಯಿ ನಗರದ ಹೊರವಲಯದಲ್ಲಿರುವ ಸುಮಾರು ೧೫೦ ಕಾರ್ಖಾನೆಗಳ ತ್ಯಾಜ್ಯವನ್ನು ಹೊತ್ತ ನೀರು ಕಲು ನದಿ ನೀರನ್ನು ಸೇರುತ್ತದೆ. ಈ ತ್ಯಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಪಾದರಸ, ಸೀಸ, ತಾಮ್ರ ಮತ್ತು ಕ್ಯಾಡ್ಮಿಯಮ್‌ಗಳೊಡನೆ ಕ್ಲೋರೈಡುಗಳು, ಬಣ್ಣ ಮತ್ತು ಸಾವಯವ ಆಮ್ಲಗಳು ಇರುವುದು ಪತ್ತೆಯಾಗಿದೆ. ಇವುಗಳ ಪ್ರಭಾವದಿಂದ ಕಲು ದಂಡೆಯ ಮೇಲಿನ ಅಂಬಿವಾಲಿಯ ಜನ ಮಿನಮಾಟ ಕಾಟಕ್ಕೆ ಒಳಗಾಗಿದ್ದಾರೆ.