ಇಷ್ಟೆಲ್ಲಾ ಜೀವನಾವಶ್ಯಕವಾದ ನೀರು ಬದುಕಿಗೆ ಮಾರಕವಾಗದೆ ಪೂರಕವಾಗಬೇಕಾದರೆ ಅದು ಶುದ್ಧ ರೂಪದಲ್ಲಿ ದೊರೆಯಬೇಕು. ಮೋಡಗಳಿಂದ ಸುರಿಯುವ ಮಳೆಯ ನೀರು ಪರಿಶುದ್ಧ ಹಾಗೂ ಸುರಕ್ಷಿತವಾಗಿರುತ್ತದೆ. ಆದರೆ ಈ ನೀರು ಭೂಮಿಯೆಡೆಗೆ ಬೀಳುವಾಗ ಗಾಳಿಯಲ್ಲಿರುವ ಸ್ವಲ್ಪ ಪ್ರಮಾಣದ ಆಕ್ಸಿಜನ್‌, ಕಾರ್ಬನ್‌ ಡೈ ಆಕ್ಸೈಡ್‌, ಸಲ್ಫರ್ ಡೈ ಆಕ್ಸೈಡ್‌ ಇತ್ಯಾದಿ ಅನಿಲಗಳನ್ನು ತನ್ನೊಳಗೆ ಕರಗಿಸಿಕೊಳ್ಳುತ್ತದೆ. ಇದರ ಜೊತೆಗೆ ಗಾಳಿಯಲ್ಲಿ ತೇಲುತ್ತಿರುವ ಧೂಳು ಹಾಗೂ ಸೂಕ್ಷ್ಮಜೀವಿಗಳನ್ನು ಒಳಗೊಳ್ಳುತ್ತದೆ. ಭೂಮಿಯನ್ನು ತಲುಪಿದ ಮೇಲೆ ಅಸಂಖ್ಯ ಆಕರಗಳು ನೀರನ್ನು ಮಾಲಿನಗೊಳಿಸುತ್ತವೆ. ಈ ಎಲ್ಲ ಆಕರಗಳ ಹಿಂದನಚಾಲಕ ಶಕ್ತಿ ಮನುಷ್ಯ ಚಟುವಟಿಕೆ. ಈವತ್ತು ನೀರಿಗಿಂತ ನೀರಿನ ಮಾಲಿನ್ಯ ಹೆಚ್ಚು ಪ್ರಾಮುಖ್ಯ ಗಳಿಸಿದೆ; ಆತಂಕ ಮೂಡಿಸಿದೆ. ಏಕೆಂದರೆ ಅದು ಲಭ್ಯವಿರುವ ಅಲ್ಪ ನೀರನ್ನು ಕಲುಷಿತಗೊಳಿಸಿ ಉಪಯೋಗಕ್ಕೆ ಬಾರದಂತೆ ಮಾಡುತ್ತಿದೆ.

ಮಾಲಿನ್ಯ ಮುಖ್ಯವಾಗಿ ಎರಡು ರೀತಯಲ್ಲಾಗುತ್ತದೆ. ಒಂದು ಕಶ್ಮಲ ಮಾಲಿನ್ಯ ಮತ್ತೊಂದು ಶಾಖ ಮಾಲಿನ್ಯ. ಈ ಎಲ್ಲಾ ಮಾಲಿನ್ಯಗಳು ನೀರಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣದಲ್ಲಿ ಪರಿವರ್ತನೆ ತರುತ್ತವೆ. ಇದರಿಂದಾಗ ನೀರು ನಂಜಾಗಿ ಜೀವಿಗಳ ಬದುಕಿಗೆ ಮಾರಕವಾಗುತ್ತದೆ.

ಕಶ್ಮಲ ಮಾಲಿನ್ಯ

ನೀರಿನ ಕಶ್ಮಲ  ಮಾಲಿನ್ಯ ನೀರನ್ನು ಸೇರುವ ಕಶ್ಮಲಗಳಿಂದಾಗುತ್ತದೆ. ಎಲ್ಲ ಹಾನಿಕಾರಕ ಪರಕೀಯ ವಸ್ತುಗಳು ಕಶ್ಮಲಗಳೆ. ಕಶ್ಮಲಗಳಲ್ಲಿ ಸಜೀವಿ ಮತ್ತು ನಿರ್ಜೀವಿಗಳೆರಡೂ ಇರುತ್ತವೆ. ಸಜೀವಿ ಕಶ್ಮಲಗಳಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್ಸುಗಳದೇ ದರ್ಬಾರು. ನಿರ್ಜೀವಿ ಕಶ್ಮಲಗಳಲ್ಲಿ ಅನೇಕ ಸಾವಯವ ಮತ್ತು ನಿರವಯವ ವಸ್ತುಗಳು ಸೇರಿವೆ. ಈ ಎಲ್ಲಾ ಕಶ್ಮಲಗಳು ತ್ಯಾಜ್ಯಗಳ ಮೂಲಕ ನೀರನ್ನು ಸೇರುತ್ತವೆ. ಮನುಷ್ಯನ ಎಲ್ಲ ಚಟುವಟಿಕೆಗಳೂ ಕೊನೆಗೊಳ್ಳುವುದು ತ್ಯಾಜ್ಯ ಉತ್ಪತ್ತಿಲಯಿಂದ. ತ್ಯಾಜ್ಯಗಳ ಉತ್ಪತ್ತಿಯಿಲ್ಲದೆ ಅವನು ಏನನ್ನೂ ತಯಾರಿಸಲಾರ; ಅಷ್ಟೇ ಏಕೆ ಉಸಿರನ್ನೂ ಆಡಲಾರ. ಅವನ ಅಸ್ತಿತ್ವದ ಜೊತೆಗೆ ತ್ಯಾಜ್ಯೋತ್ಪಿತ್ತಿ ಕ್ರಿಯೆ ಜೋಡಣೆಯಾಗಿದೆ. ನೀರು ಸಾರ್ವತ್ರಿಕ ದ್ರವವಾಗಿರುವುದು ಒಂದು ರೀತಿಯಲ್ಲಿ ವರವಾಗಿರುವಂತೆ ಶಾಪವೂ ಆಗಿದೆ. ಅದು ಕಶ್ಮಲಗಳನ್ನೂ ಉದಾರತೆಯಿಂದ ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತದೆ.

ಮೂರು ರಂಗಗಳಲ್ಲಾಗುತ್ತಿರುವ ತ್ಯಾಜ್ಯೋತ್ಪತ್ತಿ ನೀರಿಗೆ ಕಂಟಕ ತರುತ್ತಿವೆ: (೧) ಮುನಿಸಿಪಲ್‌ ತ್ಯಾಜ್ಯ (೨) ಕೈಗಾರಿಕಾ ತ್ಯಾಜ್ಯ (೩) ಕೃಷಿ ತ್ಯಾಜ್ಯ.

. ಮುನಿಸಿಪಲ್ ತ್ಯಾಜ್ಯ

ಮನುಷ್ಯ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವ ಮತ್ತು ತಾನು ಉಪಯೋಗಿಸುವ ಸಕಲ ವಸ್ತುಗಳನ್ನು ಸ್ವಚ್ಛಗೊಳಿಸುವ ಕ್ರಿಯೆಯಲ್ಲಿ ಅಗಾಧ ಪ್ರಮಾಣದ ತ್ಯಾಜ್ಯವನ್ನು ಸೃಷ್ಟಿಸುತ್ತಾನೆ. ಇದೆಲ್ಲವೂ ಚರಂಡಿಯ ಮೂಲಕ ಹರಿದು ಹೋಗುತ್ತದೆ. ಇದರಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಮಲ ಮೂತ್ರ, ಸ್ನಾನ ಮಾಡಿದ ಸೋಪು ನೀರು, ಪಾತ್ರೆ-ಪರಟೆ , ಮನೆ-ಮಠ ತೊಳೆದ ಗಲೀಜು ನೀರು, ಕೊಳೆತ ತರಕಾರಿ, ಹಣ್ಣು – ಸಿಪ್ಪೆ ಕಗದ ಹೀಗೆ ನೂರಾರು ವಸ್ತುಗಳೆಲ್ಲವೂ ಸೇರಿರುತ್ತವೆ. ಒಮ್ಮೆಮ್ಮೆ ಮಾನವರ ಮತ್ತು ಪ್ರಾಣಿಗಳ ಶವಗಳೂ ಸೇರಿರುತ್ತವೆ. ಇವೆಲ್ಲಾಳ ನಿರ್ಜೀವಿ ಕಶ್ಮಲಗಳು. ಇವುಗಳ ಜೊತೆಗೆ, ಮಾನವರು ಮತ್ತು ಪ್ರಾಣಿಗಳು ವಿಸರ್ಜಿಸಿದ ಕಶ್ಮಲದಲ್ಲಿ ಕೆಲವು ಹಾನಿಕಾರಕ ಸೂಕ್ಷ್ಮಾಣುಗಳೂ ಇರುತ್ತವೆ. ಇವೆಲ್ಲಾ ಸಜೀವಿ ಕಶ್ಮಲಗಳು. ಈ ಎಲ್ಲಾ ಕಶ್ಮಲಗಳನ್ನೊಳಗೊಂಡ ಹೊಲಸು ನೀರು – ವ್ಯರ್ಥ ನೀರು – ನದಿ ತೊರೆ ಸರೋವರಗಳ ಶುದ್ಧ ನೀರನ್ನು ಸೇರಿದಾಗ ಅವುಗಳೂ ಮಲಿನಗೊಂಡು ಉಪಯೋಗಕ್ಕೆ ಅನರ್ಹವಾಗುತ್ತವೆ. ಇದು ಒಂದು ರೀತಿಯಲ್ಲಿ ಕೋತಿ ತಾನು ಕೆಡವುದರೊಂದಿಗೆ ವನವನ್ನೆಲ್ಲಾ ಕೆಡಿಸಿದಂತೆ.

ನಿರ್ಜೀವಿ ಕಶ್ಮಲಗಳು

ಮುನಿಸಿಪಲ್‌ ತ್ಯಾಜ್ಯದಲ್ಲಿ ಪ್ರೋಟೀನ್‌ ಮತ್ತು ಕಾರ್ಬೊಹೈಡೇಟ್‌ಗಳನ್ನೊಳಗೊಂಡ ಸಾವಯವ ಪದಾರ್ಥಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಅನೇಕ ದೊಡ್ಡ ದೊಡ್ಡ ಅಣುಗಳಿಂದಾದ ಸಂಕೀರ್ಣ ಸಂಯುಕ್ತಗಳು. ಇವುಗಳನ್ನು ವಿಘಟಿಸುವ ಶಕ್ತಿ ಕೆಲವು ಬ್ಯಾಕ್ಟೀರಿಯಾಗಳಿಗಿವೆ.

ನದಿ ಸರೋವರಗಳ ನೀರಿನಲ್ಲಿ ವಾಯುಜೀವಿಗಳು ಮತ್ತು ಅವಾಯುಜೀವಗಳೆಂಬ ಎರಡು ವಿಧದ ಸೂಕ್ಷ್ಮಜೀವಿಗಳಿರುತ್ತವೆ. ವಾಯುಜೀವಿಗಳು  ನೀರಿನಲ್ಲಿ ಕರಿಗಿರುವ ಆಮ್ಲಜನಕದ ನೆರವು ಪಡೆದು ಸಾವಯವ ಪದಾರ್ಥಗಳನ್ನು ನಿರವಯವ ಪದಾರ್ಥ, ನೀರು ಮತ್ತು ಅನಿಲಗಳನ್ನಾಗಿ ವಿಭಜಿಸುತ್ತವೆ. ಈ ಕ್ರಿಯೆಯಿಂದ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ನೀರಿನಲ್ಲಿ ಹಲವು ಬಗೆಯ ಏಕಕೋಶಜೀವಿ ಪ್ರೊಟೋಜೋಆಗಳೂ ಇರುತ್ತವೆ. ಇವು ವ್ಯರ್ಥ ಪದಾರ್ಥಗಳೊಂದಿಗೆ ನೀರನ್ನು ಸೇರಿದ ರೋಗಕಾರದ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಸ್ತುತ್ಯ ಕಾರ್ಯವನ್ನು ಮಾಡುತ್ತಿರುತ್ತವೆ. ಅದೇ ಕಾಲಕ್ಕೆ ಪ್ರೊಟೋಜೋಅಗಳ ಚಟುವಟಿಕೆಯಿಂದಲೂ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿರುತ್ತದೆ.

ಮತ್ತೊಂದೆಡೆ, ನೀರಿನಲ್ಲಿ ಶೈವಲಗಳು (ಪಾಚಿಗಳು) ಮತ್ತು ಕೆಲವು ಪ್ರಭೇದದ ಜೀವಿಗಳು ದ್ಯುತಿಸಂಶ್ಲೇಷಣ ಕ್ರಿಯೆ ನಡೆಸುತ್ತಿರುತ್ತವೆ. ಇದರಿಂದ ಆಮ್ಲಜನಕದ ಬಿಡುಗಡೆ ಆಗುತ್ತಿರುತ್ತದೆ.

ಹೀಗೆ ನೀರಿನಲ್ಲಿ ಆಮ್ಲಜನಕ ನಷ್ಟವಾಗುವ ಮತ್ತು ಅದು ಭರ್ತಿಯಾಗುವ ಕ್ರಿಯೆಗಳು ಏಕಕಾಲದಲ್ಲಿ ನಡೆಯುತ್ತಿರುತ್ತವೆ. ಈ ನಷ್ಟ – ಭರ್ತಿ ಕ್ರಿಯೆಗಳಲ್ಲಿ ಸಮತೋಲನವಿರುವವರಿಗೆ ನೀರು ಆರೋಗ್ಯದಿಂದಿರುತ್ತದೆ; ಇಲ್ಲವಾದರೆ ರೋಗಕಾರಕವಾಗುತ್ತದೆ. ಕೆಟ್ಟರೂ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವ ಸಾಮರ್ಥ್ಯ ನೀರಿಗಿದೆ. ಇದು ನೀರಿನ ಶಾಶ್ವತ ಸಂಗಾತಿಗಳಾದ ಕೆಲವು ಸೂಕ್ಷ್ಮಜೀವಿಗಳ ಕೃಪೆ. ಈ ಸೂಕ್ಷ್ಮಜೀವಿಗಳಿರುವವರೆಗೂ ನೀರಿಗೆ ಭಯವಿಲ್ಲ.

ತಮ್ಮ ಉಳಿವಿಗೆ ಆಮ್ಲಜನಕವನ್ನು ಅವಲಂಬಿಸಿರುವ ವಾಯುಜೀವಿಗಳು ಸದಾ ನೀರಿನ ಮೇಲ್ಮೈ ಮೇಲೆ ವಾಸಿಸುತ್ತಾ ತಮ್ಮ ಕಾರ್ಯ ನಿರ್ವಹಿಸುತ್ತಿರುತ್ತವೆ. ವಾಯುಜೀವಿಗಳು ನುಂಗಿ ಮುಗಿಸುವ ಆಮ್ಲಜನಕದ ಪ್ರಮಾಣ ನೀರಿನಲ್ಲಿರುವ ಕೊಳಕಿನ ಪ್ರಮಾಣವನ್ನು ಅವಲಂಬಿಸಿದೆ: ಕೊಳಕು ಹೆಚ್ಚಾದಂತೆಲ್ಲಾ ಹೆಚ್ಚು ಹೆಚ್ಚು ಆಮ್ಲಜನಕ ಖಾಲಿಯಾಗುತ್ತಿರುತ್ತದೆ. ಆದರೆ ನೀರಿನಲ್ಲಿ ಕರಗಿರುವ  ಆಮ್ಲಜನಕಕ್ಕೆ ಒಂದು ಮಿತಿ ಇದೆ. ವಾಯುಜೀವಿಗಳು ಬಳಸಿಕೊಳ್ಳುವ ಆಮ್ಲಜನಕದ ಪ್ರಮಾಣ ಈ ಮಿತಿಯನ್ನು ಮೀರುವಷ್ಟಾದರೆ ನೀರಿನಲ್ಲಿರುವ ಆಮ್ಲಜನಕವೆಲ್ಲವು ಶೀಘ್ರವಾಗಿ ಖಾಲಿಯಾಗುತ್ತದೆ. ಇದರಿಂದ ಆಮ್ಲಜನಕವನ್ನು ನಂಬಿ ಬದುಕುವ ವಾಯುಜೀವಿಗಳು  ಮತ್ತು ಪ್ರೊಟೋಜೋವುಗಳು ಸಾಯುತ್ತವೆ.

ಇಲ್ಲಿಂದಾಚೆಗೆ ಅವಾಯುಜೀವಿಗಳು ಸಕ್ರಿಯವಾಗುತ್ತವೆ. ಇವುಗಳಿಗೆ ಆಮ್ಲಜನಕದ ಅವಶ್ಯಕತೆ ಇಲ್ಲವಾದ್ದರಿಂದ ಅವು ನೀರಿನ ಆಳದಲ್ಲಿ ಬದುಕುತ್ತಿರುತ್ತವೆ. ಒಮ್ಮೆ ಆಮ್ಲಜನಕ ಖಾಲಿಯಾಗಿ ವಾಯುಜೀವಿಗಳು ಕೊನೆಯುಸಿರೆಳೆದ ಮೇಲೆ ಅವಾಯುಜೀವಿಗಳು ಪುಟಿದೆದ್ದು ನೀರಿನ ಮೇಲ್ಪದರಕ್ಕೆ ಲಗ್ಗೆ ಹಾಕುತ್ತವೆ; ನೀರಿನ ಮೇಲ್ಪದರದಲ್ಲಿರುವ ತ್ಯಾಜ್ಯ ವಸ್ತುಗಳ ಮೇಲೆ ಆಕ್ರಮಣ ಮಾಡಿ ಅವುಗಳಲ್ಲಿರುವ ಜಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗೆ ಬಿಡುಗಡೆಗೊಂಡ ಜಲಜನಕವು ತ್ಯಾಜ್ಯದಲ್ಲಿರುವ ಗಂಧಕದೊಡನೆ ವರ್ತಿಸಿ ದುರ್ನಾತ ಕಕ್ಕುವ ಹೈಡ್ರೊಜನ್‌ ಸಲ್ಪೈಡ್‌ ಮತ್ತು ಮರ್ ಕ್ಯಾಪ್ಟನ್‌ ಅನಿಲಗಳನ್ನು ಉತ್ಪತ್ತಿ ಮಾಡುತ್ತದೆ.,

ಇಲ್ಲಿಂದಾಚೆಗೆ ನೀರು ಬಗ್ಗಡವಾಗುತ್ತದೆ; ಗಬ್ಬೆದ್ದು ಹೋಗುತ್ತದೆ. ಸೂರ್ಯರಶ್ಮಿ ನೀರಿನೊಳಗೆ ನುಸುಳುವುದು ಅಸಾಧ್ಯವಾಗುತ್ತದೆ. ಸೂರ್ಯ ರಶ್ಮಿಯ ಗೈರುಹಾಜರಿಯಲ್ಲಿ ದ್ಯುತಿಸಂಶ್ಲೇಷಣೆಯಿಂದ ಆಮ್ಲಜನಕ ಉತ್ಪತ್ತಿ ಮಾಡುವ ಶೈವಲಗಳು ಸಾಯುತ್ತವೆ. ಶೈವಲಗಳು ಜಲಚರಗಳ ಆಹಾರ ಸರಪಳಿಯ ತಳದಲ್ಲಿರುವ ಮೂಲ ಆಹಾರವೂ ಹೌದು. ಹೇಗೆ ನಾವು ನೆಲದ ಮೇಲೆ ಹುಲ್ಲು ಇಲ್ಲದಿದ್ದರೆ ನೆಲಚರಗಳ ಸಾವು ಖಂಡಿತವೆಂದು ಹೇಳುತ್ತವೆಯೋ ಹಾಗೆ ನೀರಿನಲ್ಲಿ ಪಾಚಿಗಳಿಲ್ಲದ್ದಿರೆ ಜಲಚರಗಳು ಸಾಯುತ್ತವೆ. ಅದಕ್ಕೆ ಮೊದಲ ಬಲಿ ಮೀನುಗಳು. ಹೀಗಾಗಿ ಇಡೀ ನೀರು ಸ್ಮಶಾನವಾಗುತ್ತದೆ. ಇಂಥ ನೀರನ್ನು ಸೇವಿಸಿದ ಇತರ ಜೀವಿಗಳೂ ಅದೇ ದಾರಿ ಹಿಡಿಯುವಂತಾಗುತ್ತದೆ.

ವಾಯುಜೀವಿಗಳ ವಿಘಟನ ಕಾರ್ಯಕ್ಕೆ ಬೇಕಾಗುವ ಆಮ್ಲಜನಕ ಪ್ರಮಾಣವನ್ನು Biochemical Oxygen Demand-BOD ಎನ್ನುತ್ತಾರೆ. ನೀರಿನಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಿದಂಥೆ ಈ ಬೇಡಿಕೆಯೂ ಹೆಚ್ಚಾಗುತ್ತದೆ. ಬಿ.ಓ.ಡಿ.ಯು ಒಂದು ಲೀಟರ್ ತ್ಯಾಜ್ಯದ ವಿಘಟನೆಗೆ ಎಷ್ಟು ಮಿಲಿ ಗ್ರಾಮ್‌ ಆಮ್ಲಜನಕ ಬೇಕು ಎಂಬುದನ್ನು ಸೂಚಿಸುತ್ತದೆ. ಉದಾಹರಣೆಗೆ ಸಕ್ಕರೆ ಕಾರ್ಖಾನೆಯ ತ್ಯಾಜ್ಯದ ಬಿ.ಓ.ಡಿ.ಯ ಬೆಲೆ ೩೦೦ ರಿಂದ ೨೦೦೦. ಇದರರ್ಥ ಸಕ್ಕರೆ ಕಾರ್ಖಾನೆಯಿಂದ ಬರುವ ಒಂದು ಲೀಟರ್ ತ್ಯಾಜ್ಯದಲ್ಲಿರುವ ಸಾವಯವ ಪದಾರ್ಥವನ್ನು ನಿರವಯ ಪದಾರ್ಥವನ್ನಾಗಿ ವಿಘಟಿಸಲು ವಾಯುಜೀವಿಗಳು ೩೦೦ ರಿಂದ ೨೦೦೦ ಮಿಲಿಗ್ರಾಮ್‌ಗಳಷ್ಟು ಆಮ್ಲಜನಕವನ್ನು ಉಪಯೋಗಿಸಿಕೊಳ್ಳುತ್ತವೆ ಎಂದಾಗುತ್ತದೆ.

ಬಿ.ಓ.ಡಿ. ಬೆಲೆಯ ಆಧಾರದ ಮೇಲೆ ನೀರಿನ ಮಲಿನತೆಯ ಮಟ್ಟುವನ್ನು ನಿರ್ಧರಿಸಲಾಗುತ್ತದೆ. ಬಿ.ಓ.ಡಿ. ಬೆಲೆ ಲೀಟರೊಂದಕ್ಕೆ ೧೫೦ ಮಿಲಿಗ್ರಾಮ್‌ಗಳಿಗಿಂತ ಕಡಿಮೆ ಇದ್ದರೆ ಮಲಿನತೆಯ ಮಟ್ಟ ಕಡಿಮೆ. ಇದು ಸಹ್ಯ ೧೫೦ ರಿಂದ ೪೦೦ ಮಿಲಿಗ್ರಾಮ್‌ಗಳ ನಡುವೆ ಇದ್ದರೆ ಸಾಧಾರಣ. ಇದು ಅಪಾಯಕಾರಿ. ೪೦೦ ಮಿಲಿಗ್ರಾಮ್‌ಗಳಿಗಿಂತ ಹೆಚ್ಚಾಗಿದ್ದರೆ ತೀವ್ರ. ಇದು ಮರಕ. ಇಂಥ ನೀರಿನಲ್ಲಿ ಯಾವ ಜೀವಿಯೂ ಬದುಕುಳಿಯದು.

ಸಜೀವಿ ಕಶ್ಮಲಗಳು

ಮುನಿಸಿಪಲ್‌ ತ್ಯಾಜ್ಯದಲ್ಲಿ ಸಜೀವಿ ಕಶ್ಮಲಗಳು (ಜೈವಿಕ ಕಶ್ಮಲಗಳು) ಪ್ರಧಾನ ಪಾತ್ರವನ್ನು ವಹಿಸುತ್ತವೆ.

ಜೈವಿಕ ಕಶ್ಮಲಗಳಲ್ಲಿ ಎರಡು ವಿಧ: ಪ್ರಾಥಮಿಕ ಮತ್ತು ಅನುಮಿತ ಕಶ್ಮಲಗಳು (Praimary and Corollary polutants). ಪ್ರಾಥಮಿಕ ಕಶ್ಮಲಗಳು ಮನುಷ್ಯ ಚಟುವಟಿಕೆಯಿಂದ ನೇರವಾಗಿ ನೀರನ್ನು ಸೇರುತ್ತವೆ. ಉದಾಹರಣೆ: ಬ್ಯಾಕ್ಟೀರಿಯಾಗಳು ಮತ್ತು ವೈರಸ್ಸುಗಳು. ಇವು ಅಲ್ಪಾಯುಷಿಗಳು. ಅನುಮಿತ ಕಶ್ಮಲಗಳು ಸ್ಥಳಜನ್ಯ: ಸರಿಯಾದ ಪರಿಸ್ಥಿತಿ – ಸಂದರ್ಭ ನಿರ್ಮಾಣವಾದಾಗ ಅಲ್ಲೆ ಹುಟ್ಟುವಂಥವು. ಇವು ಮನುಷ್ಯನ ಚಟುವಟಿಕೆಯಿಂದ ನೇರವಾಗಿ ನೀರನ್ನು ಸೇರುವುದಿಲ್ಲ. ಆದರೆ ಮನುಷ್ಯನ ಕೆಲವು ಚಟುವಟಿಕೆಗಳು ಅವುಗಳ ಹುಟ್ಟಿಗೆ ಅಗತ್ಯವಾದ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ಅನುಮಿತ ಕಶ್ಮಲಗಳಿಗೆ ಉದಾಹರಣೆಗಳು: ಶೈವಲಗಳು, ಕಳೆಗಳು. ಇವು ದೀರ್ಘಾಯುಷಿಗಳು.

ಮೇಲೆ ಹೆಸರಿಸಿರುವ ಕಶ್ಮಲಗಳಲ್ಲಿ ಅಸಂಖ್ಯ ಜಾತಿಗಳಿವೆ. ಇಲ್ಲಿ ಕೆಲವನ್ನು ಚರ್ಚಿಸಲಾಗಿದೆ.

ಬ್ಯಾಕ್ಟೀರಿಯಾಗಳು: ಬ್ಯಾಕ್ಟೀರಿಯಾಗಳು ಇಲ್ಲದ ಜಾಗವೆ ಇಲ್ಲ. ಆದರೆ ವಿಘಟನೆಯಾಗುವ ಸಾವಯವ ಪದಾರ್ಥಗಲನ್ನು ವಿಪುಲವಾಗಿ ಒಳಗೊಂಡ ಚರಂಡಿ ತ್ಯಾಜ್ಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಉತ್ತಮ ಮಾಧ್ಯಮವನ್ನೊದಗಿಸುತ್ತದೆ. ಇದರಿಂದಾಗಿ ಚರಂಡಿ ತ್ಯಾಜ್ಯದಲ್ಲಿ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿರುತ್ತವೆ.

ಕೆಲವು ಬ್ಯಾಕ್ಟೀರಿಯಾಗಳು ಸತ್ತ ಮತ್ತು ಕೊಳತ ಇತರ ಜೀವಿಗಳ ದೇಹದಿಂದ ಆಹಾರವನ್ನು ದ್ರವರೂಪದಲ್ಲಿ ಪಡೆದು ಜೀವಿಸುತ್ತವೆ; ಮತ್ತೆ ಕೆಲವು ಜೀವಂತ ಸಾವಯವ ಪದಾರ್ಥಗಳ ಮೇಲೆ. ಮೊದಲ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾಗಳು (ಸಾವಯೋಪಜೀವಿ – Saprophyte) ಅಪಾಯಕಾರಿಯಲ್ಲ; ಬದಲಿಗೆ ಉಪಕಾರಿ. ಎರಡನೆ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾಗಳು ಮಾತ್ರ ತುಂಬಾ ಅಪಾಯಕಾರಿ; ಮನುಷ್ಯ ಮತ್ತು ಪ್ರಾಣಿಗಳಲ್ಲಿ ರೋಗಕಾರಕಗಳು (Pathogens). ಅವು ತಮ್ಮ ಅಲ್ಪ ಜೀವಿತಾವಧಿಯಲ್ಲೆ ಉಂಟು ಮಾಡುವ ಪರಿಣಾಮ ಭೀಕರ. ಮನುಷ್ಯನಿಗೆ ಬರುವ ಬಹಳಷ್ಟು ಕಾಯಿಲೆಗಳಿಗೆ ಈ ಬ್ಯಾಕ್ಟೀರಿಯಾಗಳೆ ಕಾರಣ. ಈ ಬ್ಯಾಕ್ಟೀರಿಯಾಗಳಲ್ಲಿ ವೈಬ್ರಿಯೊ ಕಾಲರ, ಸಾಲ್ಮೊನೆಲ್ಲಾ ಟೈಫಿ ಮತ್ತು ಶಿಗೆಲ್ಲಾ ಬ್ಯಾಸಿಲ್ಲಿ ಮುಖ್ಯವಾದವು. ಇವು ಕ್ರಮವಾಗಿ ಕಾಲರ, ವಿಷಮಜೀತಜ್ವರ ಮತ್ತು ರಕ್ತಭೇದಿಯನ್ನುಂಟು ಮಾಡುತ್ತವೆ. ಅಷ್ಟೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮತ್ತೊಂದು ಕಾಯಿಲೆ ಕರುಳುಬೇನೆ. ಇವುಗಳ ಜೊತೆಗೆ ಅಷ್ಟೇನು ಸಾಮಾನ್ಯವಲ್ಲದ ಕಾಯಿಲೆಗಳೂ ಬರುತ್ತವೆ. ಅಂಥವುಗಳಲ್ಲಿ ಬ್ರುಸೆಲ್ಲಾ ರೋಗ ಒಂದು. ಮನುಷ್ಯ ಮತ್ತು ಪ್ರಾಣಿಗಳೆರಡರಲ್ಲೂ ಕಾಣಿಸಿಕೊಳ್ಳುವ ಈ ರೋಗ ಪ್ರಾಣಿ ತ್ಯಾಜ್ಯದಿಂದ ಕಲುಷಿತಗೊಂಡ ನೀರಿನಿಂದ ಮನುಷ್ಯನಿಗೂ ಬರಬಹುದು.

ವೈರಸ್ಸುಗಳು: ವೈರಸ್ಸುಗಳ ಸಮಸ್ಯೆ ಇನ್ನೂ ಗಂಭೀರವಾದದ್ದು. ಏಕೆಂದರೆ ಅವು ಸಸ್ಯ ಮತ್ತು ಪ್ರಾಣಿಗಳೆರಡರ ಜೀವಕೋಶಗಳಿಗೂ ಸೋಂಕುಕಾರಗಳು.

ಮನುಷ್ಯನಿಗೆ ರೋಗ ತರಬಲ್ಲ ಸುಮಾರು ೭೬ ವೈರಸ್ಸುಗಳಿವೆ. ಇವುಗಳಲ್ಲಿ ಮೈಲೆಟಿಸ್‌ ತುಂಬಾ ಭಯಾನಕವಾದ ಮತ್ತು ಪ್ರಪಂಚಾದ್ಯಂತ ಇರುವ ವೈರಸ್‌. ಇದು ಸ್ನಾಯುಗಳನ್ನು ನಿಯಂತ್ರಿಸುವ ನರಮಂಡಲ ಕೋಶಗಳನ್ನು ನಾಶಮಾಡುವುದರ ಮೂಲಕ ದೇಹದ ಒಂದು ಅಥವ ಹೆಚ್ಚು ಭಾಗಗಳನ್ನು ಲಕ್ವ ಪೀಡಿತವಾಗಿಸಬಲ್ಲದು. ಇದರ ಜೊತೆಗೆ ಕರುಳುಬೇನೆ, ವಾಂತಿ ಇತ್ಯಾದಿ ರೋಗಗಳನ್ನು ಉಂಟುಮಾಡುತ್ತವೆ.

ಶೈವಲಗಳು: ಇವು ಸರಳ ದೇಹ ರಚನೆಯುಳ್ಳ ಪತ್ರಹರಿತ್ತನ್ನು ಹೊಂದಿರುವ ಕೆಳಮಟ್ಟದ ಸಸ್ಯಗಳ ಒಂದು ಗುಂಪು. ಇವು ಗತಿಶೀಲ ಅಥವ ಅಗತಿಶೀಲವಾಗಿರಬಹುದು.

ಶೈವಲಗಳು ನೀರಿನಲ್ಲಿ ಎರಡು ರೀತಿಯ ಕೆಲಸಗಳನ್ನು ನಿರ್ವಹಿಸುತ್ತವೆ. ಒಂದು ಅಪೇಕ್ಷಣೀಯ; ಮತ್ತೊಂದು ಅನಪೇಕ್ಷಣೀಯ.

ಶೈವಲಗಳು ದ್ಯುತಿಸಂಶ್ಲೇಷಣೆಯ ಮೂಲಕ ನೀರಿನಿಂದ ಕಾರ್ಬನ್‌ ಡೈಆಕ್ಸೈಡನ್ನು ತೆಗೆದು ಆಮ್ಲಜನಕವನ್ನು ಸೇರಿಸುತ್ತವೆ. ಜೊತೆಗೆ ಅವು ಕೆಲವು ಜಲಜೀವಿಗಳಿಗೆ ಅಗತ್ಯವಾದ ಆಹಾರವನ್ನು ತಯಾರಿಸುತ್ತವೆ. ಇದು ಅವುಗಳ ಸ್ವಾಗತಾಹ್ ಕಾರ್ಯಗಳು.

ಶೈವಲಗಳುನೀರಿನ ರುಚಿ, ಬಣ್ಣ ಮತ್ತು ವಾಸನೆಯನ್ನು ಕೆಡಿಸುತ್ತವೆ. ರಾಡಿ ಎಬ್ಬಿಸುತ್ತವೆ. ಪರೋಕ್ಷವಾಗಿ ಕರುಳುಬೇನೆ ಉಂಟುಮಾಡುತ್ತವೆ. ಕೆಲವು ಶೈವಲಗಳು ಮನುಷ್ಯರ ಕೇಂದ್ರ ನರಮಂಡಲ ಮತ್ತು ಚರ್ಮದ ಮೇಲೆ ದುಷ್ಪರಿಣಾಮ ಬೀರಬಲ್ಲ ವಿಷವನ್ನೊಳಗೊಂಡಿವೆ. ಮತ್ತೆ ಕೆಲವು ಯಕೃತ್ತಿನ ರೋಗ ತರಬಲ್ಲವು. ರೋಗ ನಿರೋಧಕ ಶಕ್ತಿಯನ್ನು ಕುಂದಿಸಬಲ್ಲವು.

ಶೈವಲಗಳ ವಿಷ ಮೀನುಗಳಿಗೂ ಮಾರಕ. ಅವು ನೀರಿನ ಆಮ್ಜಜನಕವನ್ನು ಸಂಪೂರ್ಣ ಖಾಲಿ ಮಾಡಬಹುದು; ಅಥವಾ ಪರ್ಯಾಪ್ತಗೊಳಿಸಬಹುದು. ಇದರಿಂದುಂಟಾಗುವ ಆಮ್ಲಜನಕದ ಅಸಮತೋಲನದಿಂದ ಮೀನುಗಳು ಸಾಯಬಹುದು. ಸತ್ತ ಶೈವಲಗಳು ಮೀನುಗಳು ಕಿವುರುಗಳಿಗೆ ಅಂಟಿಕೊಂಡು ಮೀನುಗಳ ಸಾವಿಗೆ ಕಾರಣವಾಗುತ್ತವೆ. ಅಲ್ಲದೆ, ಮೇಲ್ಮೈಯಲ್ಲಿ ಅಟ್ಟೆ ಕಟ್ಟಿಕೊಂಡು ಆಮ್ಲಜನಕ ತೂರುವುದನ್ನು ತಡೆಯುತ್ತವೆ.

ಇತರ ಜೈವಿಕ ಕಶ್ಮಲಗಳಲು: ಇವುಗಳಲ್ಲಿ ಪರೋಪಜೀವಿಗಳು ಮುಖ್ಯವಾದವು. ಜಂತುಹುಳುಗಳು, ಲಾಡಿಹುಳುಗಳು ಮತ್ತು ಗಿನಿಯಾ ಹುಳುಗಳು ನೀರಿನಲ್ಲಿ ಸಾಮಾನ್ಯವಾಗಿರುವ ಪರೋಪಜೀವಿಗಳು. ಇವುಗಳಿಂದ ಮನುಷ್ಯ ಮತ್ತು ಪ್ರಾಣಿಗಳಿಗೆ ಅಪಾಯವಿದೆ. ಅಮೀಬಿಕ್‌ ರಕ್ತಭೇದಿ, ಅಸ್‌ಕಾರಿಯಾಸಿಸ್‌ ಮುಂತಾದ ರೋಗಗಳನ್ನು ಇವು ಉಂಟುಮಾಡುತ್ತವೆ.

. ಕೈಗಾರಿಕಾ ತ್ಯಾಜ್ಯ

ಮನುಷ್ಯ ಕೇವಲ ಗಾಳಿ, ನೀರು, ಆಹಾರಗಳಿಂದಷ್ಟೆ ಬದುಕುತ್ತಿಲ್ಲ. ಜೊತೆಗೆ ಸಹಸ್ರಾರು ವಸ್ತುಗಳನ್ನು ತನ್ನ ಬದುಕಿಗಾಗಿ ಅವಲಂಬಿಸಿದ್ದಾನೆ. ಮನೆ-ಮಠಗಳ ಹೊರಗೆ, ಗಿರಣಿ-ಕಾರ್ಖಾನೆಗಳಲ್ಲಿ ಮನುಷ್ಯನ ಅಗತ್ಯಗಳನ್ನು ಪೂರೈಸುವ ಈ ವಸ್ತುಗಳು ತಯಾರಾಗುತ್ತವೆ.

ವಸ್ತು ತಯಾರಿಕೆಗೆ ಕಾರ್ಖಾನೆಗಳು ಮುಖ್ಯವಾಗಿ ಯಂತ್ರಗಳು ಮತ್ತು ರಾಸಾಯನಿಕಗಳನ್ನು ಉಪಯೋಗಿಸುತ್ತವೆ. ಮನುಷ್ಯನ ಸಂಯೋಜಕ ಶಕ್ತಿ – ಹೊಸ ವಸ್ತುಗಳನ್ನು ತಯಾರಿಸುವ ತಂತ್ರಜ್ಞಾನ – ಈಚಿನ ದಿನಗಳಲ್ಲಿ ದಿಢೀರನೆ ಹೆಚ್ಚಿದ್ದರಿಂದ ಅವನು ತಯಾರಿಸುತ್ತಿರುವ, ಬಳಸುತ್ತಿರುವ ಮತ್ತು ವರ್ಜಿಸುತ್ತಿರಿವ ಅನ್ಯವಸ್ತುಗಳ ಸಂಖ್ಯೆ ಸಾವಿರಾರು ಪಟ್ಟು ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳೂ ಅಸಂಖ್ಯವಾಗಿವೆ; ಅಗಾಧವಾಗಿವೆ. ಕೈಗಾರಿಕಾ ತ್ಯಾಜ್ಯವೆಂದು ಕರೆಯಲಾಗುತ್ತಿರುವ ಇವುಗಳಲ್ಲಿ ವಿವಿಧ ಸಂಯೋಜನೆಯಿಂದ ರೂಪುಗೊಂಡ ರಾಸಾಯನಿಕಗಳದ್ದೇ ಕಾರುಬಾರು.

ಈವತ್ತು ಮನುಷ್ಯನಿಗೆ ೭ ದಶಲಕ್ಷ ರಾಸಾಯನಿಕಗಳು ಗೊತ್ತಿವೆ. ಇವುಗಳಲ್ಲಿ ಸುಮಾರು ೮೦,೦೦೦ ರಾಸಾಯನಿಕಗಳು ಸಾಮಾನ್ಯ ಬಳಕೆಯಲ್ಲಿವೆ. ಬಳಕೆಯಲ್ಲಿರುವ ರಾಸಾಯನಿಕಗಳಲ್ಲಿ ಅನೇಕವು ಅತ್ಯುಗ್ರ ವಿಷಗಳು. ಶೇ.೯೮ ರಷ್ಟು ರಾಸಾಯನಿಕಗಳನ್ನು ಅವುಗಳ ದೀರ್ಘಕಾಲಿನ ಪರಿಸರ ಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವಿಲ್ಲದೆಯೇ ಬಳಸಲಾಗುತ್ತಿದೆ! ಮನುಷ್ಯನ ಸಂಯೋಜಕ ಶಕ್ತಿ ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ಕರಾಳವಾಗಿ ವಿಜೃಂಭಿಸಿದೆ.

ಕೈಗಾರಿಕಾ ತ್ಯಾಜ್ಯ ಅನೇಕ ತರದ – ಕರಗದ ಮತ್ತು ತೇಲುವ- ಕಾರ್ಬಾನಿಕ ಮತ್ತು ಅಕಾರ್ಬಾನಿಕ ಕಶ್ಮಲಗಳನ್ನು ಒಳಗೊಂಡಿರುತ್ತದೆ. ಈ ಕಶ್ಮಲಗಳ ಪಟ್ಟ ತುಂಬಾ ದೊಡ್ಡದು. ಇವುಗಳಲ್ಲಿ ಮುಖ್ಯವಾದ ಕೆಲವು ರಾಸಾಯನಿಕಗಳ ಉತ್ಪತ್ತಿ ಸ್ವಭಾವ ಮತ್ತು ಪರಿಣಾಮಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ಆಮ್ಲಗಳು

ರಾಸಾಯನಿಕಗಳು, ರಸಗೊಬ್ಬರ, ಬ್ಯಾಟರಿ, ಡಿ.ಡಿ.ಟಿ. ವಿದ್ಯುಲೇಪನ, ಬಟ್ಟೆಗಣಿ,ಕಬ್ಬಿಣ, ತಾಮ್ರ ಮದ್ಯ ಇತ್ಯಾದಿಗಳನ್ನೊಳಗೊಂಡ ಕೈಗಾರಿಕಾ ಚಟುವಟಿಕೆಯಿಂದ ಅಕಾರ್ಬನಿಕ ಆಮ್ಲಗಳಿರುವ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ರೇಯಾನ್‌, ಹುದುಗಿಸುವಿಕೆ, ಆಸವನ, ಬಣ್ಣ, ಚರ್ಮ, ರಾಸಾಯನಿಕಗಳು ಇತ್ಯಾದಿ ಕಾರ್ಖಾನೆಗಳಿಂದ ಕಾರ್ಬಾನಿಕ ಆಮ್ಲ ತ್ಯಾಜ್ಯ ವಿಸರ್ಜನೆಯಾಗುತ್ತದೆ. ಇವುಗಳಲ್ಲಿ ಅಕಾರ್ಬನಿಕ ಆಮ್ಲ ತ್ಯಾಜ್ಯ ಹೆಚ್ಚು ಅಪಾಯಕಾರಿ. ಮುಖ್ಯ ಪಾತಕಿ: ಸಲ್ಫೂರಿಕ್‌ ಆಮ್ಲ.ಜೊತೆಗೆ ನೈಟ್ರಿಕ್‌ ಆಮ್ಲ, ಹೈಡ್ರೋಕ್ಲೋರಿಕ್‌ ಆಮ್ಲ ಮತ್ತು ಪಾಸ್‌ಫಾರಿಕ್‌ ಆಮ್ಲಗಳು ಸೇರಿವೆ.

ಪ್ರತ್ಯಾಮ್ಲಗಳು

ರಾಸಾಯನಿಕ ಕಾರ್ಖಾನೆಗಳು, ಮರ, ಚರ್ಮ, ಹತ್ತಿ ಸಂಸ್ಕರಣಾ ಘಟಕಗಳಿಂದ ಹೊರಬೀಳುವ ತ್ಯಾಜ್ಯ ನೀರು ಪ್ರತ್ಯಾಮ್ಲ (ಕ್ಷಾರ)ಗಳ ಪ್ರಮುಖ ಆಕರ. ಆಮ್ಲದಂತೆ ಪ್ರತ್ಯಾಮ್ಲಗಳೂ ಸೂಕ್ಷ್ಮಜೀವಿಗಳನ್ನು ಕೊಂದು ನೀರಿನ ಸ್ವಯಂ ಶುದ್ಧೀಕರಣ ವ್ಯವಸ್ಥೆಯನ್ನು ನಾಶಪಡಿಸುತ್ತವೆ. ಪ್ರಬಲ ಪ್ರತ್ಯಾಮ್ಲಗಳು ಮೀನುಗಳಲ್ಲಿ ಶ್ವಾಸಬಂಧ ಉಂಟುಮಾಡುತ್ತವೆ.

ನೀರಿನ ಆಮ್ಲೀಯತೆಯಾಗಲಿ ಪ್ರತ್ಯಾಮ್ಲೀಯತೆಯಾಗಲಿ ದಿಢೀರನೆ ಬದಲಾದರೆ ಮೀನುಗಳ ಬದುಕು ನರಕವಾಗುತ್ತದೆ.

ಅನಿಲಗಳು: ಮುಖ್ಯ ಕಂಟಕಗಳು: ಅಮೋನಿಯಾ, ಕ್ಲೊರೀನ್‌, ಹೈಡ್ರೋಜನ್‌ ಸಲ್ಪೈಡ್‌, ಓಜೋನ್‌ ಮತ್ತು ಪಾಸ್ಪ್ರೆನ್‌.

ಅಮೋನಿಯಾ: ರಾಸಾಯನಿಕಗಳು, ರಾಸಾಯನಿಕ ಗೊಬ್ಬರಗಳು,ಅಡಿಗೆ ಅನಿಲ, ಕೋಕ್‌ ಇತ್ಯಾದಿಗಳ ತಯಾರಿಕೆಯಲ್ಲಿ ಉತ್ಪತ್ತಿಯಾಗುವ ಅಮೋನಿಯಾ ಅತ್ಯಂತ ವಿಷಕಾರಿ. ನೀರಿನಲ್ಲಿ ಸುಲಭವಾಗಿ ಕರಗುವ ಇದಕ್ಕೆ ವಿಶಿಷ್ಟವಾದ ಮೂಗಿರಿಯುವ ಘಾಟುವಾಸನೆ ಇದೆ. ಗಣನೀಯ ಪ್ರಮಾಣದಲ್ಲಿ ಅಮೋನಿಯಾವನ್ನು ಉಸಿರೆಳೆದುಕೊಂಡರೆ ಶ್ವಾಸಕೋಶನಾಳ ದ್ವಾರದಲ್ಲಿ ಸೆಡೆತ ಉಂಟಾಗುತ್ತದೆ; ಸಾವೂ ಸಂಭವಿಸಬಹುದು.

ಅಮೋನಿಯಾ ಮೀನುಗಳಿಗೂ ವಿಷ. ೨.೫ ಪಿ.ಪಿ.ಎಂ.ನಷ್ಟು ಅಮೋನಿಯಾ ಕೂಡ ಮೀನುಗಳಿಗೆ ಮರಣಾಂತಿಕ ಎಂದು ಒಂದು ವರದಿ ತಿಳಿಸುತ್ತದೆ.

ಕ್ಲೋರಿನ್: ಬಟ್ಟೆ ಗಿರಣಿಗಳು, ಕಾಗದ ಕಾರ್ಖಾನೆಗಳು ಮತ್ತು ದೋಬಿಕಾನೆಗಳು ಕ್ಲೋರಿನ್ ಉತ್ಪತ್ತಿಯ ಕೇಂದ್ರಗಳು. ಇದು ಗಾಳಿಗಿಂತ ಭಾರವಾಗಿರುವ ಅತಿ ವಿಷಕಾರಿ ಅನಿಲ. ಮೊದಲನೆಯ ಮಹಾಯುದ್ಧದಲ್ಲಿ ಇದನ್ನು ಅಸ್ತ್ರವಾಗಿ ಬಳಸಲಾಗಿತ್ತು. ಪ್ರಬಲ ಉದ್ರೇಚಕವಾದ ಕ್ಲೋರಿನ್‌ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರಬಾರದು: ಮನುಷ್ಯರಲ್ಲಿ ಶ್ವಾಸಕೋಶ ಸಂಬಂಧಿರೋಗ ತರುತ್ತದೆ. ಮೀನುಗಳು ಸೇರಿದಂತೆ ಇಡೀ ಜಲಚರ ಸಂಕುಲಕ್ಕೆ ಸಂಕಟ ತರುತ್ತದೆ. ಲೋಹ ಮತ್ತು ಕಟ್ಟಡ ರಚನೆಗಳನ್ನು ಕೊರೆದು ಶಿಥಿಲಗೊಳಿಸುತ್ತದೆ.

ಹೈಡ್ರೊಜನ್ ಸಲ್ಪೈಡ್: ಬ್ಯಾಕ್ಟೀರಿಯಾ ಚಟುವಟಿಕೆ, ಸಲ್ಫೇಟ್‌ ಮತ್ತು ಸಲ್ಫೈಡ್‌ ಉಳ್ಳ ವಸ್ತುಗಳ ತಯಾರಿಕಾ ಘಟಕಗಳಿಂದ ಹೊರಬರುವ ತ್ಯಾಜ್ಯಗಳಿಂದ ಉಂಟಾಗುವ pH ವ್ಯತ್ಯಯದಿಂದ ಹೈಡ್ರೊಜನ್‌ ಸಲ್ಫೈಡ್‌ ಉತ್ಪತ್ತಿಯಾಗುತ್ತದೆ. pH ಬೆಲೆ ಕಡಿಮೆಯಾದಷ್ಟು ಹೈಡ್ರೊಜನ್‌ ಉತ್ಪಾದನೆ ಜಾಸ್ತಿಯಾಗುತ್ತದೆ.

ಹೈಡ್ರೊಜನ್‌ ಸಲ್ಪೈಡ್‌ ಬಣ್ಣವಿಲ್ಲದ, ಕೆಟ್ಟವಾಸನೆಯ ಬಹು ನಂಜಿನ ಅನಿಲ. ನದಿ ಸರೋವರಗಳ ನೀರಿನಿಂದ ಬರುವ ಹೆಚ್ಚು ಕಡಿಮೆ ಎಲ್ಲಾ ವಾಸನಾ ಅನಿಷ್ಟಗಳಿಗೆ ಅವುಗಳಲ್ಲಿರುವ ಸಲ್ಪೈಡ್‌ಗಳೇ ಕಾರಣ. ಅವು ಎಷ್ಟು ತೀಕ್ಷ್ಣ ಎಂದರೆ ೦.೦೦೧ ಪಿ.ಪಿ.ಎಂ. ನಷ್ಟು ಹೈಡ್ರೊಜನ್‌ ಸಲ್ಪೈಡ್‌ ಇದ್ದರೂ ಅದು ಕೊಳೆತ ಮೊಟ್ಟೆಯ ದುರ್ವಾಸನೆಯನ್ನು ಸೂಸುತ್ತದೆ.

ಹೈಡ್ರೊಜನ್‌ ಸಲ್ಪೈಡ್‌ ಸ್ಥಳೀಯ ಉದ್ರೇಚಕ: ಮೂಗಿನಲ್ಲಿ ಕೆರಳಿಕೆಯನ್ನುಂಟು ಮಾಡುತ್ರತದೆ. ವಾಕರಿಕೆ ಬರಿಸುತ್ತದೆ. ಮನುಷ್ಯನ ಶ್ವಾಸಕೋಶಗಳ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ನೀರಿನಲ್ಲಿ ೧ ಪಿ.ಪಿ.ಎಂ. ಗಿಂತ ಹೆಚ್ಚು ಹೈಡ್ರೊಜನ್‌ ಸಲ್ಪೈಡ್‌ ಇದ್ದಲ್ಲಿ ಮೀನುಗಳು ಉಳಿಯಲಾರವು.

ಓಜೋನ್: ಇದು ಮೀನುಗಳಿಗೆ ತುಂಬಾ ವಿಷಕರ ಎಂದು ತಿಳಿಯಲಾಗಿದೆ. ೧ ಪಿ.ಪಿ.ಎಂ . ಗಿಂತ ಹೆಚ್ಚು ಓಜೋನ್‌ ಸಾಂದ್ರತೆ ಇದ್ದರೆ ಮೀನುಗಳ ಸಂತತಿ ನಾಶವಾಗುತ್ತದೆ.

ಫಾಸ್ಪೈನ್: ಕಾರ್ಬಾನಿಕ ಪಾಸ್ಫರಸ್‌ ಸಂಯುಕ್ತಗಳು ಅವಾಯು ವಾತಾವರಣದಲ್ಲಿ ವಿಘಟಿಸಿ ಪಾಸ್ಫೈನ್‌ ಉತ್ಪತ್ತಿಯಾಗುತ್ತದೆ. ಇದು ಕೂಡ ಮೀನುಗಳಿಗೆ ಮಾರಕ.

ಉಳಿದಂತೆ ಕಾರ್ಬನ್‌ ಡೈ ಆಕ್ಸೈಡ್‌ ಮತ್ತು ಕಾರ್ಬನ್‌ ಮಾನಾಕ್ಸೈಡ್‌ ಮೀನುಗಳ ಮೇಲೆ ದುಷ್ಪರಿಣಾಮ ಬೀರುವ ಅನಿಲಗಳು.

ವಿಷಕರ ಲೋಹಗಳು

ಬ್ಯಾಟರಿ, ಪೈಂಟ್‌, ವಿದ್ಯುತ್‌ ಲೇಪನ, ವಿಸ್ಕೋಸ್‌ – ರೇಯಾನ್‌ , ತಾಮ್ರ ಊರಿಕೆ, ಗ್ವಾಲ್ವನೀಕರಣ ಮತ್ತು ರಬ್ಬರ್ ಸಂಸ್ಕರಣ ಇತ್ಯಾದಿ ಕಾರ್ಖಾನೆಗಳು ಗಣನೀಯ ಪ್ರಮಾಣದ ಲೋಹಯುಕ್ತ ದ್ರಾವಣಗಳನ್ನು ವಿಸರ್ಜಿಸುತ್ತವೆ.

ಲೋಹೀಯ ದ್ರಾವಣಗಳು ಸಜೀವಿಗಳಿಗೆ ವಿಷಕರ. ಹೆಚ್ಚಿನ ಪ್ರಮಾಣದಲ್ಲಿ ಇವುಗಳು ನೀರನ್ನು ಶುದ್ಧೀಕರಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಸೂಕ್ಷ್ಮಜೀವಿಗಳನ್ನು ಕೊಂದು ನೀರಿನ ಸ್ವಯಂಶುದ್ಧೀಕರಣ ಸಾಮರ್ಥ್ಯ ಕ್ಷೀಣಿಸುವಂತೆ ಮಾಡುತ್ತವೆ. ವಿಷಕರ ಲೋಹಗಳೆಂಧು ಪರಿಗಣಿತವಾಗಿರುವ ಲೋಹಗಳಲ್ಲಿ ಆರ್ಸೆನಿಕ್‌, ಸೀಸ, ತಾಮ್ರ, ಕ್ಯಾಡ್ಮಿಯಮ್‌, ಪಾದರಸ ಮತ್ತು ನಿಕ್ಕಲ್‌ ಮುಖ್ಯವಾದವುಗಳು.

ಆರ್ಸೆನಿಕ್‌ ಮತ್ತು ಸೀಸ ಬೆರೆತ ನೀರು ಕ್ರೊಮೋಸೋಮುಗಳಿಗೆ ಕೇಡುಂಟು ಮಾಡುತ್ತವೆ; ಅನುವಂಶೀಯ ಗುಣಗಳಲ್ಲಿ ವ್ಯತ್ಯಯ ತರುತ್ತವೆ. ವಯಸ್ಕ ಮನುಷ್ಯನ ೧೦೦ ಗ್ರಾಮ್‌ ರಕ್ತದಲ್ಲಿ ೮೦ ಮೈಕ್ರೊ ಗ್ರಾಮಿಗಿಂತ ಹೆಚ್ಚು ಆರ್ಸೆನಿಕ್‌ ಇದ್ದರೆ ಸಾಕು ಅದು ವಿಷವಾಗುತ್ತದೆ. (ಮೈಕ್ರೊ=ದಶಲಕ್ಷದಲ್ಲಿ ಒಂದು ಭಾಗ). ಅದೇ ಸೀಸ ೧೦೦ ಗ್ರಾಮ್‌ ರಕ್ತದಲ್ಲಿ ೪೦ ಮೈಕ್ರೊ ಗ್ರಾಮಿಗಿಂತ ಹೆಚ್ಚಾದರೆ ಮಕ್ಕಳಲ್ಲಿ ಮಿದುಳಿಗೆ ಘಾಸಿ ಉಂಟುಮಾಡುತ್ತದೆ. ಒಂದು ನೂರು ದಶಲಕ್ಷದಲ್ಲಿ ಒಂದು ಭಾಗ ತಾಮ್ರವಿದ್ದರೂ ಮುಳ್ಳು ಮೀನುಗಳಿಗೆ ಮಾರಕ. ಹಾಗೆಯೇ ನಿಕ್ಕಲ್‌ ಮತ್ತು ಸತುವು ದಶಲಕ್ಷದಲ್ಲಿ ಒಂದು ಭಾಗಕ್ಕಿಂತ ಮೇಲಿದ್ದರೆ ಅಪಾಯ.

ತೈಲಗಳು

ತೈಲಗಳು ನೀರಿನ ಮೇಲೆ ಹರಡಿಕೊಂಡು ಆಮ್ಲಜನಕ ಒಳ ಇಳಿಯುವುದನ್ನು ತಡೆಯುತ್ತವೆ. ನೀರಿನ ಮೇಲೆ ಹರಡಿದ ತೈಲ ಪದರದ ದಪ್ಪ ೦.೦೦೧ ಮಿಲಿಮೀಟರ್ ನಷ್ಟಿದ್ದರೂ ನೀರು ಗಾಳಿಯಿಂದ ಆಮ್ಮಜನಕವನ್ನು ಹೀರಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಎಣ್ಣೆಯು ಮೀನುಗಳ ಕಿವುರುಗಳಿಗೆ ಲೇಪನವಾಗುತ್ತದೆ. ಮತ್ತು ಅವುಗಳ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಎಣ್ಣೆಯ ಕಾಟದಿಂದ ಸಮುದ್ರ ತೀರಗಳು ಕುಲಗೆಟ್ಟು ಅಲ್ಲಿ ಸ್ನಾನ ಮಾಡುವುದು ಕಷ್ಟವಾಗುತ್ತದೆ. ಬ್ರಿಟನನ್ನಿನ ಸಮುದ್ರ ಪಕ್ಷಿಗಳು ತೈಲ ಕಶ್ಮಲದಿಂದ ತುಂಬಾ ತೊಂದರೆಗೆ ಈಡಾಗಿವೆ ಎಂದು ವರದಿಯಾಗಿದೆ.

ನೀರಿನಲ್ಲಿ ಕರಗುವ ಮತ್ತು ಕರಗದಿರುವ ಎಣ್ಣೆಗಳೆರಡೂ ಗಂಭೀರ ಮಾಲಿನ್ಯ ಸಮಸ್ಯೆಯನ್ನೊಡ್ಡುತ್ತವೆ. ಎಣ್ಣೆಯನ್ನು ಇಂಜಿನಿಯರಿಂಗ್‌ ಕಾರ್ಖಾನೆಗಳಲ್ಲಿ ಲೋಹ ಮತ್ತು ಲೂಬ್ರಿಕೆಂಟ್‌ಗಳಾಗಿ ಬಳಸಲಾಗುತ್ತದೆ. ಸಮುದ್ರ ಯಾನದಲ್ಲಿ ಅಯಿಲ್‌ ಟ್ಯಾಂಕ್‌ಗಳಿಗೆ ಸಂಭವಿಸುವ ಅವಘಡಗಳಿಂದ, ಸೋರಿಕೆಯಿಂದ, ತೈಲ ನೀರನ್ನು ಸೇರುತ್ತದೆ.

ಕರಗಿದ ಘನ ಪದಾರ್ಥಗಳು

ಸೋಡಿಯಮ್‌, ಪೊಟಾಸಿಯಮ್‌, ಕ್ಯಾಲ್ಸಿಯಮ್‌, ಮೆಗ್ನೀಸಿಯಮ್‌, ಕಬ್ಬಿಣ ಮತ್ತು ಮ್ಯಾಂಗನೀಸ್‌ಗಳ ಕ್ಲೋರೈಡ್‌, ಸಲ್ಫೇಟ್‌, ನೈಟ್ರೇಟ್‌, ಬೈಕಾರ್ಬೊನೇಟ್‌ ಮತ್ತು ಪಾಸ್ಫೇಟ್‌ ಲವಣಗಳು ಹಾಗು ಕೆಲವು ಫ್ಲೋರೈಡ್‌ಗಳು ನೀರಿನಲ್ಲಿ ಕರಗುತ್ತವೆ. ಹಲವು ಕೈಗಾರಿಕೆಗಳಲ್ಲಿ ಇಂಥ ಲವಣಗಳು ತ್ಯಾಜ್ಯರೂಪದಲ್ಲಿ ಬಂದು ನದಿ ಸರೋವರದ ನೀರನ್ನು ಸೇರುತ್ತವೆ. ನೀರಿನಲ್ಲಿ ಫ್ಲೋರೈಡ್‌ ಮತ್ತು ನೈಟ್ರೇಟ್‌ಗಳು ಒಂದು ಮಿತಿಗಿಂತ ಹೆಚ್ಚಾಗಿದ್ದರೆ ವಿಷಕರ.

ಪ್ಲೋರೈಡ್: ಎಲ್ಲಾ ನೀರಿನಲ್ಲೂ ಫ್ಲೋರೈಡ್‌ ಇರುತ್ತದೆ. ಇದರ ಜೊತೆಗೆ ತ್ಯಾಜ್ಯದ ಮೂಲಕ ಇನ್ನಷ್ಟು ಫ್ಲೋರೈಡ್‌ ಸೇರಿದರೆ ಅದರ ಸಾರೆತೆ ಹೆಚ್ಚುತ್ತದೆ. ಕುಡಿಯುವ ನೀರಿನಲ್ಲಿ ಇದರ ಸಾರತೆ ಒಂದು ದಶಲಕ್ಷದಲ್ಲಿ ೦.೫ ಭಾಗಕ್ಕಿಂತ ಕಡಿಮೆ ಇದ್ದರೆ ಹಲ್ಲು ಹುಳುಕಾಗುತ್ತದೆ; ೧.೫ ಭಾಗಕ್ಕಿಂತ ಹೆಚ್ಚಾದರೆ ಹಲ್ಲುಗಳ ಮೇಲೆ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇನ್ನೂ ಹೆಚ್ಚಾದರೆ ಸ್ಕೆಲಿಟಲ್‌ ಫ್ಲೊರೋಸಿಸ್‌ (ಮೂಳೆಯ ಎದ್ವಾತದ್ವಾ ಬೆಳವಣಿಗೆ) ಎಂಬ ಕಾಯಿಲೆ ಬರುತ್ತದೆ. ಇದರಿಂದ ಮೊಳಕಾಳು ಮತ್ತು ಮೂಳೆಯ ಕೀಲುಗಳ ವರ್ತನೆ ಮತ್ತು ನಿಯಂತ್ರಣದಲ್ಲಿ ಏರುಪೇರಾಗುತ್ತದೆ. ಕೇವಲ ಮನುಷ್ಯರಲ್ಲಷ್ಟೆ ಅಲ್ಲ ದನಕರು ಇನ್ನಿತರೆ ಜಾನುವಾರುಗಳೂ ದಂತ ಮತ್ತು ಮೂಳೆಯ ಫ್ಲೋರೋಸಿಸ್‌ಗೆ ಬಲಿಯಾಗುತ್ತವೆ.

ಫ್ಲೋರೈಡುಗಳು ಸಸ್ಯಗಳನ್ನೂ ಬಾದಿಸುತ್ತವೆ.

ನೈಟ್ರೇಟ್: ಕುಡಿಯುವ ನೀರಿನ ದಶಲಕ್ಷ ಭಾಗದಲ್ಲಿ  ೨೦ ಭಾಗಕ್ಕಿಂತ ಹೆಚ್ಚು ನೈಟ್ರೇಟ್‌ ಇರಬಾರದು. ೨೦ ರಿಂದ ೪೦ ಪಿ.ಪಿ.ಎಂ. ನಷ್ಟಿದ್ದರೆ ಎಳೆ ಮಕ್ಕಳಲ್ಲಿ ನೀಲಿಕಾಮಾಲೆಯಂಥ ಕಾಯಿಲೆ ಉಂಟಾಗುತ್ತದೆ. ಮಕ್ಕಳ ಉದರದಲ್ಲಿ ನೈಟ್ರೇಟ್‌ಗಳು ನೈಟ್ರೈಟ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ. ನೈಟ್ಟ್ರೈಟ್‌ಗಳಿಗೆ ರಕ್ತದಲ್ಲಿರುವ ಹೀಮೊಗ್ಲೊಬಿನ್‌ ಕಂಡರೆ ಒಲವು ಜಾಸ್ತಿ. ಅವು  ಹೀಮೊಗ್ಲೊಬಿನ್‌ನನ್ನು ಮೇಥೀಮೊಗ್ಲೊಬಿನ್‌ ಆಗಿ ಪರಿವರ್ತಿಸುತ್ತದೆ. ಮೇಥೀಮೊಗ್ಲೊಬಿನ್‌ ಆಮ್ಲಜನಕದ ಸರಬರಾಜಿಗೆ ತಡೆಯೊಡ್ಡುತ್ತದೆ ಮತ್ತು ನೀಲಿಕಾಮಾಲೆಗೆ ಕಾರಣವಾಗುತ್ತದೆ. ಇದೇ ಪ್ರಕ್ರಿಯೆ ಜಾನುವಾರುಗಳಲ್ಲಿ ಕೂಡ ಕೇಡುಂಟುಮಾಡುತ್ತದೆ.

ಸಲ್ಫೇಟ್ಗಳು: ಸಲ್ಫೇಟ್‌ಗಳು ಆಮ್ಲವಾಗಿ ಪರಿವರ್ತನೆಗೊಂಡು ಪೈಪ್‌ಲೈನ್‌, ಪಂಪುಗಳು ಮತ್ತು ಇತರೆ ಲೋಹ ಹಾಗು ಕ್ಯಾಂಕ್ರೀಟ್‌ ರಚನೆಗಳನ್ನು ಕೊರೆದುಹಾಕುತ್ತದೆ. ಅವು ಸಲ್ಪೈಡ್‌ ಆಗಿ ಪರಿವರ್ತನೆಗೊಂಡಾಗ ದುರ್ನಾತ ಬೀರುತ್ತದೆ.

ಇತರೆ ಲವಣಗಳು ನದಿ ನೀರನ್ನು ಸೇರಿದರೆ ನೀರು ಚೌಳಾಗುತ್ತದೆ. ಚೌಳು ನೀರಿನಲ್ಲಿ ಸಿಹಿ ನೀರಿನ ಮೀನುಗಳು ಸಾಯುತ್ತವೆ.

ಇತರೆ ನಿರವಯವ ಮತ್ತು ಸಾವಯವ ಕಶ್ಮಲಗಳು

ಪಾದರಸ ಮತ್ತು ಪಾದರಸ ಸಂಯುಕ್ತಗಳು: ಈಚಿನ ದಿನಗಳಲ್ಲಿ ಪಾದರಸ ವಿಷ ಒಂದು ಪ್ರಮುಖ ಸಮಸ್ಯೆಯಾಗಿದೆ. ಪಾದರಸವು ಅನೇಕ ಕೈಗಾರಿಕಾ ಚಟುವಟಿಕೆಗಳಿಂದ ಹೊಮ್ಮುವ ತ್ಯಾಜ್ಯಗಳ ಮೂಲಕ ನೀರನ್ನು ಸೇರುತ್ತದೆ. ಕಾಗದ ಮತ್ತು ಪಲ್ಪ್ ಮಿಲ್‌ಗಳು, ತೈಲ ಸಂಸ್ಕರಣ ಸ್ಥಾವರಗಳು, ಪ್ಲಾಸ್ಟಿಕ್‌ ಮತ್ತು ಟ್ಯಾಟರಿ ಕೈಗಾರಿಕೆಗಳು ಪಾದರಸ ವಿಷವನ್ನು ವಿಸರ್ಜಿಸುತ್ತವೆ. ಪಾದರಸ ಸಂಯುಕ್ತಗಳನ್ನು ಬೀಜಗಳು ಕೊಳೆಯದಂತೆ ತಡೆಯಲು ಮತ್ತು ಸಸ್ಯಗಳ ಸಂರಕ್ಷಣೆಗೂ ಶಿಲೀಂಧ್ರ ನಾಶಕವಾಗಿಯೂ ಬಳಸಲಾಗುತ್ತದೆ. ಅವುಗಳ ತೀಕ್ಷ್ಣ ವಿಷಕಾರಿತ್ವದಿಂದಾಗಿ ಈಚೆಗೆ ಇವುಗಳನ್ನು ಶಿಲೀಂಧ್ರನಾಶಕ ಮತ್ತು ಬಳಸಲಾಗುತ್ತದೆ. ಅವುಗಳ ತೀಕ್ಷ್ಣ ವಿಷಕಾರಿತ್ವದಿಂದಾಗಿ ಈಚೆಗೆ ಇವುಗಳನ್ನು ಶಿಲೀಂಧ್ರನಾಶಕ ಮತ್ತು ಕೀಟನಾಶಕವಾಗಿ ಬಳಸುವುದು ಕಡಿಮೆಯಾಗಿದೆ.

ದ್ರವರೂಪದ ಪಾದರಸ ವಿಷಕರವಲ್ಲ. ಆದರೆ ಅದು ಬಾಷ್ಪ ನರಮಂಡಲವನ್ನು ಪ್ರಭಾವಿಸುತ್ತದೆ. ವ್ಯಾಪಕ ಬಳಕೆಯಲ್ಲಿರುವ ಪಾದರಸದ ಸಾವಯವ ಸಂಯುಕ್ತವೆಂದರೆ ಮಿಥೈಲ್‌ ಪಾದರಸ ನದಿ ಸರೋವರಗಳ ತಳದ ಮಣ್ಣಿನಲ್ಲಿರುವ ಅವಾಯುಜೀವಿಗಳು ನಿರವಯವ ಪಾದರಸವನ್ನು ಮಿಥೈಲ್‌ ಪಾದರಸವನ್ನಾಗಿ ಪರಿವತಿಸುತ್ತವೆ. ಹೀಗಾಗಿ ನೀರತಳದಲ್ಲಿ ಶೇಖರವಾಗುವ ಪಾದರಸವನ್ನು ಕೇವಲ ನಿರುಪಾಯಕಾರಿ ಗಸಿ ಎಂದು ಕಡೆಗಣಿಸುವಂತಿಲ್ಲ. ಅವು ಜೈವಿಕ ಪರಿವರ್ತನೆಗೆ ಒಳಗಾಗಿ ಆಹಾರ ಸರಪಳಿಯನ್ನು ಸೇರಿ ವಿಷವಾಗಬಲ್ಲದು.

ಕ್ಯಾಡ್ಮಿಯಮ್ ಮತ್ತು ಅದರ ಸಂಯುಕ್ತಗಳು: ಪಾದರಸ ಬಿಟ್ಟರೆ ಕ್ಯಾಡ್ಮಿಯಮ್‌ ಅತ್ಯಂತ ವಿಷಕರ. ಇದು ಪ್ರಮುಖವಾಗಿ ವಿದ್ಯುಲೇಪನ ಕಾರ್ಖಾನೆಯ ಕಾಣಿಕೆ. ಕ್ಯಾಡ್ಮಿಯಮ್‌ ಮನುಷ್ಯ ಮತ್ತು ಪ್ರಾಣಿಯ ಯಕೃತ್ತು, ಮೂತ್ರಪಿಂಡ ಮತ್ತು ಥೈರಾಯಿಡ್‌ಗಳಲ್ಲಿ ಶೇಖರವಾಗುತ್ತದೆ. ಒಮ್ಮೆ ಇದು ದೇಹವನ್ನು ಪ್ರವೇಶಿಸಿದರಾಯಿತು. ಅದು ಅಲ್ಲೇ ಶಾಶ್ವತವಾಗಿ ಉಳಿದು ಬಿಡುತ್ತದೆ. ಕ್ಯಾಡ್ಮಿಯಮ್‌ ಸೇವನೆ ಸೆಡೆತ, ಓಕರಿಕೆ, ವಾಂತಿ ಮತ್ತು ಭೇದಿ ಉಂಟುಮಾಡುತ್ತದೆ.

ಪಾಲಿ ಕ್ಲೋರಿನೇಟೆಡ್ ಬೈಫೀನೈಲ್ಗಳು: ಇವನ್ನು ಪ್ಲಾಸ್ಟಿಕ್‌ಗಳು ಡೈಇಲೆಕ್ಟ್ರಿಕ್‌ಗಳು ಮತ್ತು ಲ್ಯೂಬ್ರಿಕೇಟ್‌ಗಳಲ್ಲಿ ಉಪಯೋಗಿಸಲಾಗುತ್ತದೆ. ಸಾಗರ ಜಲಚರಗಳ ಆಹಾರ ಸರಪಳಿಯಲ್ಲಿ ಸಂಗ್ರಹವಾಗಬಲ್ಲ ಇವು ಡಿಡಿಟಿಯ ಪರಿಣಾಮವನ್ನು ಉಂಟುಮಾಡುತ್ತವೆ.

ಆಲ್ಟಿಹೈಡ್ಗಳು: ಇವುಗಳಡಿಯಲ್ಲಿ ಬರುವ ಮುಖ್ಯ ಸಂಯುಕ್ತಗಳು: ಅಸಿಟಾಲ್ಡಿಹೈಡ್‌, ಬೆಂಜಾಲ್ಡಿಹೈಡ್‌, ಫಾರ್ಮಲ್ಡಿಹೈಡ್‌, ಫರ್ಫರಾಲ್‌ ಮತ್ತು ವಾನಿಲಿನ್‌. ಇವು ನೀರಿಗೆ ವಾಸನೆ ನೀಡುತ್ತವೆ; ಮೀನುಗಳಿಗೆ ವಿಷಕರ.