ನಾವು ಉಪಯೋಗಿಸುವ ನೀರು ಶುದ್ಧವಾಗಿರಬೇಕು. ಕಶ್ಮಲಗಳು ಸೇರಿದ ಅಶುದ್ಧಗೊಂಡ ನೀರಿನಿಂದ ಏನೆಲ್ಲ ಕಾಯಿಲೆಗಳು ಲಮತ್ತು ತೊಂದರೆಗಳು ಉಂಟಾಗುತ್ತವೆ ಎಂಬುದನ್ನು ಈವರೆಗೆ ಚರ್ಚಿಸಿದ್ದೇವೆ.

ಮನುಷ್ಯನಿಗೆ ಬರುವ ಒಟ್ಟು ಕಾಯಿಲೆಗಳಲ್ಲಿ ಶೇ. ೬೦ ರಷ್ಟು ಕಾಯಿಲೆಗಳು ಅಶುದ್ಧ ನೀರಿನ ಸೇವನೆಯಿಂದಲೇ ಬರುತ್ತವೆ. ಇದರಿಂದ ಶುದ್ಧ ನೀರು ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ; ನೀರಿನ ಶುದ್ಧೀಕರಣ ಎಷ್ಟು ಮಹತ್ವದ್ದು ಎಂಬುದು ಸ್ಪಷ್ಟವಾಗುತ್ತದೆ.

ಸಾರ್ವಜನಿಕ ಉಪಯೋಗಕ್ಕೆ ಸರಬರಾಜು ಮಾಡುವ ನೀರಿನ ಶುದ್ಧೀಕರಣ ಎಷ್ಟು ಮುಖ್ಯ ಎಂಬುದು ಕಳೆದ ಶತಮಾನದ ಮಧ್ಯಭಾಗದಲ್ಲಿ ಜಗತ್ತಿನ ಅರಿವಿಗೆ ಬಂತು. ೧೮೪೯ ಮತ್ತು ೧೮೫೬ ರಲ್ಲಿ ಲಂಡನ್‌ ನಗರವನ್ನು ಕಾಲರ ಸಾಂಕ್ರಾಮಿಕ ರೋಗ ಅಮರಿಕೊಂಡಿತು: ೨೦,೦೦೦ ಜನ ಬಲಿಯಾದರು. ಥೇಮ್ಸ್‌ ನದಿ ನೀರಿಗೆ ಸೇರಿದ ಕಶ್ಮಲಗಳು ಈ ದುರ್ಘಟನೆಗೆ ಕಾರಣವಾಗಿತ್ತು. ೧೮೯೨ ರಲ್ಲಿ ಕಾಲರಾ ಜರ್ಮನಿಯ ಹ್ಯಾಂಬರ್ಗನ್ನು ಧೂಳೀಪಟ ಮಾಡಿತು. ಆದರೆ ಪಕ್ಕದ ಅಬ್ಬೊನ ನಗರಕ್ಕೆ ಕಾಲರ ಕಾಲಿಡಲಿಲ್ಲ. ಕಾರಣ: ಅಬ್ಬೊನ ನಗರದಲ್ಲಿ ನೀರು ಶುದ್ಧೀಕರಣ ವ್ಯವಸ್ಥೆ ಚಾಲೂ ಇತ್ತು. ಇದರಂತೆ ಪಶ್ಚಿಮ ಯುರೋಪು ಮತ್ತು ಅಮೇರಿಕಾದ ಅನೇಕ ಕಡೆಗಳಲ್ಲಿ ಜನರನ್ನು ಪೀಡಿಸಿದ ಕಾಲರ ಮತ್ತು ವಿಷಮಜ್ವರ ಪ್ರಪಂಚದ ಎಲ್ಲ ನಗರಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡುವ ಶುದ್ಧೀಕರಣ ಸ್ಥಾವರಗಳು ತಲೆ ಎತ್ತುವಂತೆ ಮಾಡಿದವು.

ಶುದ್ಧ ನೀರು ಹೇಗಿರಬೇಕು?

ನಾವು ನೀರನ್ನು ಯಾವುದಕ್ಕೆ ಬಳಸುತ್ತೇವೆ ಎಂಬುದರ ಮೇಲೆ ಅದರ ಅಗತ್ಯ ಗುಣ ಲಕ್ಷಣಗಳನ್ನು ನಿರ್ಧರಿಸಲಾಗುತ್ತದೆ. ಕುಡಿಯುವ ನೀರಿನ ಶುದ್ಧತೆಯ ಮಾನಕವೇ ಬೇರೆ; ಬಟ್ಟೆ ತೊಳೆಯಲು ಬಳಸುವ ನೀರಿನ ಶುದ್ಧತೆಯ ಮಾನಕವೇ ಬೇರೆ. ಬಟ್ಟೆ ಒಗೆಯಲು ಬಳಸುವ ನೀರು ವರ್ಣರಹಿತವಾಗಿರಬೇಕು. ಕೈಗಳು ಮತ್ತು ಬಟ್ಟೆಗೆ ಹಾನಿ ಮಾಡುವ ರಾಸಾಯನಿಕಗಳಿರಬಾರದು; ಗಡುಸಾಗಿರಬಾರದು. ಇಷ್ಟಾದರೆ ಸಾಕು. ಆದರೆ ಕುಡಿಯುವ ನೀರಿನ ಶುದ್ಧತೆ ಇಷ್ಟಕ್ಕೆ ಸೀಮಿತವಾಗಿದ್ದರೆ ಸಾಲದು. ಅದಕ್ಕೆ ಇನ್ನೂ  ಅನೇಕ ಲಕ್ಷಣಗಳಿರಬೇಕು.

ಕುಡಿಯುವ ನೀರು ಬಣ್ಣ, ವಾಸನೆ ಮತ್ತು ರುಚಿ ರಹಿತವಾಗಿರಬೇಕು. ಸ್ವಲ್ಪ ‘ಸಿಹಿ’ ರುಚಿ ಇದ್ದರೂ ನಡೆಯುತ್ತದೆ; ಉಳಿದೆರಡು ಇರಲೇಬಾರದು. ತೇಲುವ ಮತ್ತು ಕರಗಿದ ಘನ ಪದಾರ್ಥಗಳು ದಶಲಕ್ಷ ಭಾಗದಲ್ಲಿ ೧೦೦೦ಕ್ಕಿಂತ ಹೆಚ್ಚಿರಬಾರದು. ಉಪ್ಪು ಮೊದಲಾದ ಕ್ಲೊರೈಡುಗಳು ದಶಲಕ್ಷ ಭಾಗದಲ್ಲಿ ೨೦೦-೨೫೦ಕ್ಕಿಂತ ಕಡಿಮೆ ಇರಬೇಕು. ಸಾರಜನಕ ಸಂಯುಕ್ತಗಳು ಮತ್ತು ಅಮೋನಿಯಾ ದಶಲಕ್ಷ ಭಾಗದಲ್ಲಿ ೨೦ಕ್ಕಿಂತ ಕಡಿಮೆ ಇರಬೇಕು. ಪ್ರಾಣಿ ಮತ್ತು ಮಾನವ ತ್ಯಾಜ್ಯದಿಂದ ನೀರನ್ನು ಸೇರಿದ ಅಮೋನಿಯಾ ೩೦ ಕ್ಕಿಂತ ಹೆಚ್ಚು ಇರಬಾರದು. ಮೆದುವಾಗಿರಬೇಕು. ಕಬ್ಬಿಣ, ಸೀಸ, ಮೆಗ್ನೀಸಿಯಮ್‌, ಮ್ಯಾಂಗನೀಸ್‌, ಪ್ಲೊರೀನ್‌, ತಾಮ್ರ, ಸತುವು, ಗಂಧಕ ಅತ್ಯಲ್ಪ ಪ್ರಮಾಣದಲ್ಲಿ ಇರಬಹುದು.

ನೀರಿನಲ್ಲಿ ಸೂಕ್ಷ್ಣಾಣುಗಳು ಇರಬಾರದು. ಇದ್ದರೂ ಹಾನಿಕಾರಕ ಮಟ್ಟವನ್ನು ಮೀರಿರಬಾರದು. ಅಲ್ಪ ಪ್ರಮಾಣದ ಸೂಕ್ಷ್ಮಾಣುಗಳನ್ನು ನಮ್ಮ ದೇಹದ ನಿರೋಧಕ ಶಕ್ತಿ ವಿಚಾರಿಸಿಕೊಳ್ಳುತ್ತದೆ. ಭಾರತೀಯ ಮಾನಕ ಸಂಸ್ಥೆ ಕೋಲಿಫರಂ ಬ್ಯಾಕ್ಟೀರಿಯಗಳಿಗೆ ನಿಗಧಿಪಡಿಸಿರುವ ಮಿತಿ ಒಂದು ಘನ ಸೆಂಟಿಮೀಟರ್ ಗೆ ೫೦೦೦.

ಕುಡಿಯುವ ನೀರಿನ ಶುದ್ಧೀಕರಣ: ಸಣ್ಣ ಪ್ರಮಾಣದಲ್ಲಿ

ನೀರಿನಲ್ಲಿರುವ ಕಶ್ಮಲಗಳನ್ನು ಹೊರಹಾಕುವ ಕ್ರಿಯೆಯನ್ನು ಶುದ್ದೀಕರಣ ಎನ್ನುತ್ತೇವೆ. ಇದನ್ನು ಅನೇಕ ವಿಧಾನಗಳಿಂದ ಸಾಧಿಸಬಹುದು.

ನೀರಿನ ಶುದ್ಧೀಕರಣಕ್ಕೆ ಸೋಸುವಿಕೆ ಮತ್ತು ಸಂಗ್ರಹ ವಿಧಾನವನ್ನು ಇಂದಿಗೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದೊಂದು ಅತ್ಯಂತ ಸರಳ ವಿಧಾನ: ಯಾವುದೇ ಖರ್ಚಿಲ್ಲ; ಜಂಜಾಟವಿಲ್ಲ.

ನೀರನ್ನು ಮೊದಲು ಶುದ್ಧವಾದ ಬಟ್ಟೆಯ ಮೂಲಕ ಸೋಸಬೇಕು. ಇದರಿಂದ ಎಲೆಚೂರು, ಕಸಕಡ್ಡಿ, ಮಣ್ಣು, ಪ್ಲಾಸ್ಟಿಕ್‌ ವಸ್ತುಗಳು, ತಂತಿ, ಮೊಳೆ ಇತ್ಯಾದಿ ಅನೇಕ ಘನ ಕಶ್ಮಲಗಳು ಬೇರೆಯಾಗುತ್ತವೆ.

ಸೋಸಿದ ನೀರನ್ನು ಒಂದು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿ ೨೪ ಗಂಟೆಗಳು ಕದಡದೆ ಬಿಡಬೇಕು. ಇದರಿಂದ ನೀರಿನಲ್ಲಿ ತೇಲಾಡುವ ಅನೇಕ ಕಶ್ಮಲ ಕಣಗಳು ತಳ ಸೇರುತ್ತವೆ. ಮೇಲೆ ನಿಂತ ನೀರನ್ನು ಬೇರ್ಪಡಿಸಿಕೊಂಡರೆ ತಿಳಿಯಾದ ನೀರು ಸಿಗುತ್ತದೆ.

ನೀರಿನಲ್ಲಿ ತುಂಬಾ ನುಣ್ಣನೆಯ ಧೂಳು ಸೇರಿದ್ದರೆ ಇದು ಕೇವಲ ಸೋಸುವಿಕೆ ಮತ್ತು ಸಂಗ್ರಹಣೆಯಿಂದಷ್ಟೆ ಬೇರೆಯಾಗುವುದಿಲ್ಲ. ಇದಕ್ಕೆ ಪಟಿಕವನ್ನು ನೀರಿಗೆ ಸೇರಿಸಿ ಚೆನ್ನಾಗಿ ಕಲಕಬೇಕು. ಸ್ವಲ್ಪ ಸಮಯದ ನಂತರ ನೀರು ಕಶ್ಮಲವನ್ನು ಕಳೆದುಕೊಂಡು ತಿಳಿಯಾಗುತ್ತದೆ.

ಮೇಲಿನ ಕ್ರಮಗಳಿಂದ ಕೆಲವೊಂದು ಸೂಕ್ಷ್ಮ ಕಶ್ಮಲಗಳು ಹಾಗೇ ಉಳಿದುಬಿಟ್ಟಿರುತ್ತವೆ. ಅವುಗಳನ್ನು ಬೇರ್ಪಡಿಸಲು ನೀರನ್ನು ಶೋಧನೆಗೆ ಒಳಪಡಿಸಬೇಕು. ಶೋಧನೆಯಲ್ಲಿ ನೀರನ್ನು ಸಣ್ಣ ಮರಳಿನ ದಪ್ಪ ಹಾಸಿನ ಮೂಲಕ ಹಾಯಿಸಲಾಗುತ್ತದೆ. ಇದರಿಂದ ಮೇಲಿನ ಕ್ರಮಗಳಿಂದ ಬೇರೆಯಾಗದಿದ್ದ ಅನೇಕ ಸೂಕ್ಷ್ಮ ಕಶ್ಮಲಗಳು ಜೊತೆಗೆ ಅನೇಕ ಬ್ಯಾಕ್ಟೀರಿಯ ಮತ್ತು ವೈರಸ್ಸುಗಳೂ ನೀರಿನಿಂದ ಬೇರ್ಪಡುತ್ತವೆ.

ನೀರು ಕೇವಲ ನಿರ್ಜೀವಿ ಕಶ್ಮಲಗಳಿಂದ ಹೊರತಾಗಿದ್ದು ನೋಡಲು ತಿಳಿಯಾಗಿದ್ದರಷ್ಟೆ ಸಾಲದು. ಅದು ರೋಗಕಾರಕ ಸೂಕ್ಷ್ಮ ಜೀವಿಗಳಿಂದಲೂ ಮುಕ್ತವಾಗಿರಬೇಕು. ಇಂಥ ನೀರು ಮಾತ್ರ ಸೋಂಕು ರಹಿತವಾಗಿರುತ್ತದೆ; ಆರೋಗ್ಯಕ್ಕೆ ಕ್ಷೇಮವಾದುದಾಗಿರುತ್ತದೆ.

ನೀರನ್ನು ಸೋಂಕುರಹಿತಗೊಳಿಸಲು ಎರಡು ವಿಧಾನಗಳಿವೆ.

೧. ನೀರನ್ನು ೧೦ ರಿಂದ ೧೫ ನಿಮಿಷಗಳವರೆಗೆ ಚೆನ್ನಾಗಿ ಕುದಿಸುವುದರಿಂದ ಎಲ್ಲ ಸೂಕ್ಷ್ಮಜೀವಿಗಳೂ ನಾಶವಾಗುತ್ತವೆ. ಅನಂತರ ನೀರನ್ನು ಆರಿಸಿ ಕುಡಿಯುವುದು ಕ್ಷೇಮ.

೨. ಕ್ಲೋರಿನ್‌ಗೆ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನು ಕೊಲ್ಲುವ ಶಕ್ತಿ ಇದೆ. ಕ್ಲೋರಿನನ್ನು ಬಹು ಸುಲಭವಾಗಿ ಬ್ಲೀಚಿಂಗ್‌ ಪುಡಿಯಿಂದ ಪಡೆಯಬಹುದು. ಬ್ಲೀಚಿಂಗ್ ಪುಡಿಯಲ್ಲಿ ಶೆ. ೩೩ ರಷ್ಟು ಕ್ಲೋರೀನ್‌ ಇರುತ್ತದೆ. ಒಂದು ಲೀಟರ್ ನೀರಿಗೆ ಒಂದು ಮಿಲಿಗ್ರಾಮ್‌ ಬ್ಲೀಚಿಂಗ್‌ ಪುಡಿ ಹಾಕಿದರೆ ಸಾಕು ಅದು ನೀರನ್ನು ಅರ್ಧ ಗಂಟೆಯೊಳಗಾಗಿ ರೋಗಾಣುರಹಿತವಾಗಿಸುತ್ತದೆ. ಸುಮಾರು ೨೦೦ ಲೀಟರ್ ನೀರನ್ನು ಹೀಗೆ ಕ್ಲೋರನೀಕರಣ ಮಾಡಲು ತಗಲುವ, ವೆಚ್ಚ ಸುಮಾರು ಒಂದು ಪೈಸೆ ಮಾತ್ರ. ಕುಡಿಯುವ ನೀರಿನಲ್ಲಿ ೦.೨ ಪಿ.ಪಿ.ಎಂ. ಕ್ಲೋರಿನ್‌ ಇದ್ದರೆ ರೋಗಾಣುಗಳು ಇರುವುದಿಲ್ಲವೆಂದು ತಿಳಿದುಬಂದಿದೆ.

ನೀರಿನಲ್ಲಿ ಕೆಲವು ಕರಗಿದ ಕಶ್ಮಲಗಳು ಇರುತ್ತವೆ. ಅವುಗಳು ಒಂದು ಮಿತಿಗಿಂತ ಹೆಚ್ಚಿಗೆ ಇದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ನೀರನ್ನು ರಾಸಾಯನಿಕ ಕ್ರಿಯೆಗೊಳಪಡಿಸಿ ಅವುಗಳನ್ನು ತಹಬಂದಿಗೆ ತರಬೇಕಾಗುತ್ತದೆ.

ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಒಂದು ಸರಿ ಪ್ರಮಾಣದಲ್ಲಿ ಇರಬೇಕು. ಈ ಪ್ರಮಾಣ ಪ್ರತಿ ಒಂದು ಲೀಟರ್ ನೀರಿನಲ್ಲಿ ೦.೬ ರಿಂದ ೧.೨ ಮಿ.ಗ್ರಾಂ. ಕಡಿಮೆಯಾದರೆ ದಂತಕ್ಷಯ, ಜಾಸ್ತಿಯಾದರೆ ಫ್ಲೋರೋಸಿಸ್‌ ಬರುತ್ತದೆ.

ಹೆಚ್ಚಿನ ಫ್ಲೋರೈಡನ್ನು ಬೇರ್ಪಡಿಸಲು ಒಂದು ಲೀಟರ್ ನೀರಿಗೆ ೩೦ ಮಿ.ಗ್ರಾಂ ಸುಣ್ಣ ಮತ್ತು ೫೦೦ ಮಿ.ಗ್ರಾಂ ಪಟಿಕವನ್ನು ಸೇರಿಸಿ ಚೆನ್ನಾಗಿ ಕಲಕಿ ತಿಳಿಯಾಗಲು ಬಿಡಬೇಕು. ನಾಲ್ಕು ಗಂಟೆಗಳ ನಂತರ ಮೇಲಿನ ತಿಳಿನೀರನ್ನು ಬಳಕೆ ಮಾಡಿದರೆ ಅದರಲ್ಲಿ ಹೆಚ್ಚಿನ ಪ್ಲೋರೈಡು ಇರುವುದಿಲ್ಲ.

ಕುಡಿಯುವ ನೀರಿನಲ್ಲಿ ಹೆಚ್ಚಿನ ಕಬ್ಬಿಣವಿದ್ದರೆ ಅದು ನಮ್ಮ ರಕ್ತ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ. ನೀರಿನ ಬಣ್ಣವೂ ಕೆಟ್ಟಿರುತ್ತದೆ: ಕಂದು ಅಥವ ಕೆಂಪಾಗಿರುತ್ತದೆ. ರುಚಿಯೂ ಕಹಿಯಾಗಿರುತ್ತದೆ. ಇಂಥ ನೀರಿನಲ್ಲಿ ಬಟ್ಟೆ ಒಗೆದರೆ ಕೊಳೆ ಕಳೆದು ಶುಭ್ರವಾಗುವ ಬದಲು ಮಾಸಿದಂತೆ ಕಾಣುತ್ತದೆ.

ಒಂದು ಲೀಟರ್ ನೀರಿನಲ್ಲಿ ೭ ಮಿ. ಗ್ರಾಂಗಿಂತಲೂ ಹೆಚ್ಚು ಕಬ್ಬಿಣ ಇರಬಾರದು. ಇದರ ನಿವಾರಣೆಗೆ ನೀರಿಗೆ ಗಾಳಿ ಸೇರುವಂತೆ ಮಾಡಬೇಕು.

ಹೆಚ್ಚಿನ ಲವಣಗಳನ್ನು ತಹಬಂದಿಗೆ ತರಲು ನೀರನ್ನು ಕುದಿಸಿ ತಂಪುಗೊಳಿಸುವುದೊಂದೇ ಮಾರ್ಗ.

ನೀರನ್ನು ಶುದ್ಧಗೊಳಿಸಲು ಇನ್ನೂ ಅನೇಕ ಮಾರ್ಗಗಳಿವೆ. ನೀರನ್ನು ಗಾಜಿನ ಅಥವ ಪ್ಲಾಸ್ಟಿಕ್‌ ಪಾತ್ರೆಯಲ್ಲಿ ಸಂಗ್ರಹಿಸಿ ಬಿಸಿಲಿಗೆ ಒಡ್ಡುವುದರಿಂದ ಅನೇಕ ರೋಗಾಣುಗಳು ನಾಶವಾಗುತ್ತವೆ. ಇದಕ್ಕೆ ಸೂರ್ಯನ ಶಾಖ ಹೆಚ್ಚಾಗಿರಬೇಕು-ಸುಮರು ೩೫ ರಿಂದ ೪೫ ಡಿಗ್ರಿ ಸೆಲ್ಸಿಯಸ್ಸಿರಬೇಕು. ಆದ್ದರಿಂದ ಈ ವಿಧಾನ ಎಲ್ಲ ಕಾಲಕ್ಕೂ ಉಪಯುಕ್ತವಲ್ಲ. ಇದ್ದಿಲು ನೀರಿನಲ್ಲಿರುವ ಬಣ್ಣ, ವಾಸನೆ ಮತ್ತು ಸ್ವಲ್ಪ ಮಟ್ಟಿಗೆ ಸೂಕ್ಷ್ಮಾಣುಗಳನ್ನು ಕಳೆಯುತ್ತದೆ.

ಚರಂಡಿ ನೀರಿನ ಸಂಸ್ಕರಣೆ

ಚರಂಡಿ ನೀರಿನಲ್ಲಿ ಸಾವಯವ ಕಶ್ಮಲಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಅವುಗಳಲ್ಲಿ ಅನೇಕ ಘನ ಪದಾರ್ಥಗಳು, ತೇಲುವ ಕಶ್ಮಲಗಳೂ ಇರುತ್ತವೆ. ಕೆಳಗೆ ವಿವರಿಸಿರುವ ಸಂಸ್ಕರಣ ಹಂತಗಳ ಮೂಲಕ ಚರಂಡಿ ತ್ಯಾಜ್ಯದಿಂದ ಕಲುಷಿತವಾದ ನೀರನ್ನು ಹಾಯಿಸುವುದರಿಂದ ಈ ಕಶ್ಮಲಗಳೆಲ್ಲ ಬೇರೆಯಾಗುತ್ತವೆ.

ಹಂತ ೧. ಜರಡಿ ಹಿಡಿಯುವುದು (ಸ್ಕೀನಿಂಗ್‌): ಮೇಲಿನ ನೀರಿನಲ್ಲಿರುವ ಪ್ಲಾಸ್ಟಿಕ್‌ ವಸ್ತುಗಳು, ಕಾಗದದ ಉಂಡೆಗಳು, ಮರದ ತುಂಡುಗಳು, ಕಲ್ಲು ಚೂರುಗಳು, ಕಸ ಕಡ್ಡಿ ಮುಂತಾದ ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ಘನ ಪದಾರ್ಥಗಳನ್ನೆಲ್ಲ ಬೇರ್ಪಡಿಸಲು ನೀರನ್ನು ಜರಡಿಗಳ ಮೂಲಕ ಹಾಯಿಸಲಾಗುತ್ತದೆ. ಇದನ್ನು ಸ್ಕ್ರೀನಿಂಗ್‌ ಎನ್ನುತ್ತಾರೆ.

ಸ್ಕ್ರೀನಿಂಗ್‌ ಎರಡು ಘಟಕಗಳನ್ನು ಒಳಗೊಂಡಿದೆ. ಮೊದಲನೆಯದರಲ್ಲಿ ಲೋಹದ ಸರಳುಗಳು ಅಥವ ದಪ್ಪ ತಂತಿಗಳಲಿಂದ ಮಾಡಿದ ಜರಡಿ ಇರುತ್ತದೆ. ಇದಕ್ಕೆ ೨೫ ರಿಂದ ೫೦ ಮಿ.ಮಿ. ಅಗಲದ ಕಿಂಡಿಗಳಿರುತ್ತವೆ. ಇದನ್ನು ಹಾದು ಬಂದ ನೀರು ಎರಡನೆಯ ಘಟಕವನ್ನು ಪ್ರವೇಶಿಸುತ್ತದೆ. ಇದು ಹೆಚ್ಚು ನಯವದ ಜರಡಿ. ಇದರ ಕಣ್ಣುಗಳ ಅಗಲ ೦.೮ ಮಿ.ಮೀ. ಇರುತ್ತದೆ.

ಈ ಎರಡೂ ಘಟಕಗಳಿಂದ ನೀರು ಸೋಸಿ ಹೋದ ಮೇಲ ಜರಡಿಗಳ ಮೇಲೆ ಉಳಿಯುವ ಕಚಡಾವನ್ನು ಸಾಮಾನ್ಯವಾಗಿ ದಹನ ಕುಂಡಗಳಲ್ಲಿ ಸುಟ್ಟು ಹಾಕಲಾಗುತ್ತದೆ.

ಈ ಮಧ್ಯೆ ಚೂಪಾದ ಹಲ್ಲುಗಳನ್ನೊಳಗೊಂಡ ಚಕ್ರವೊಂದು ವೇಗವಾಗಿ ತಿರುಗುತ್ತಾ ದೊಡ್ಡ ದೊಡ್ಡ ಘನ ಪದಾರ್ಥಗಳನ್ನು ೬ ಮಿ.ಮೀ. ಗಿಂತ ಚಿಕ್ಕ ಗಾತ್ರಕ್ಕೆ ಕತ್ತರಿಸುತ್ತಿರುತ್ತದೆ.

ಹಂತ ೨. ಒಂದುಗೂಡಿಸುವಿಕೆ (ಕೊಆಗುಲೇಷನ್‌): ಮೇಲಿನ ಹಂತ ದಾಟಿದ ನೀರಿನಲ್ಲಿ ತೇಲಾಡುವ ಸೂಕ್ಷ್ಮ ಕಣಗಳಿರುತ್ತವೆ. ಇವುಗಳನ್ನು ತೆಗೆಯಲು ಕೊಆಗುಲೇಷನ್‌ ವಿಧಾನವನ್ನು ಬಳಸಲಾಗುತ್ತದೆ. ಇದರಲ್ಲಿ ನೀರಿಗೆ ಫೆರಸ್‌ ಸಲ್ಫೇಟ್‌, ಕ್ಯುಪ್ರಸ್‌ ಸಲ್ಫೇಟ್‌ ಅಥವ ಆಲ್ಯೂಮಿನಿಯಮ್‌ ಸಲ್ಫೇಟನ್ನು ಸೇರಿಸಿ ಚೆನ್ನಾಗಿಸ ಕಲಕಿ ಬಿಡಲಾಗುತ್ತದೆ. ಆಗ ಸೂಕ್ಷ್ಮಕಣಗಳೆಲ್ಲ ಒಗ್ಗೂಡಿ ದೊಡ್ಡ ದೊಡ್ಡ ಉಂಡೆಗಳಾಗುತ್ತವೆ. ಇವು ಗುರುತ್ವಾಕರ್ಷಣೆಯಿಂದಾಗಿ ತಮ್ಮದೇ ಭಾರಕ್ಕೆ ಕೆಳಗಿಳಿದು ತಳ ಸೇರುತ್ತವೆ.

ತಳ ಸೇರಿದ ಸೂಕ್ಷ್ಮಕಣಗಳ ಮುದ್ದೆಯನ್ನು ಸ್ಲಡ್ಜ್‌ ಎನ್ನುತ್ತಾಋಎ. ಇದರಿಂದ ಶಕ್ತಿ ಉತ್ಪಾದನೆ ಸಾಧ್ಯ; ಜೈವಿಕ ಅನಿಲವನ್ನೂ ತಯಾರಿಸಬಹುದು.

ಹಂತ ೩. ಮೇಲಿನ ಎರಡು ಹಂತಗಳನ್ನು ದಾಟಿದ ನೀರಿನಲ್ಲಿ ಸಾವಯವ ವಸ್ತುಗಳು ಹಾಗೆಯೇ ಉಳಿದುಬಿಟ್ಟಿರುತ್ತವೆ. ಇವುಗಳನ್ನು ವಿಭಜಿಸಬೇಕು. ಈ ಕೆಲಸವನ್ನು ಬ್ಯಾಕ್ಟೀರಿಯಾಗಳಿಂಧ ಮಾಡಿಸಬೇಕು.

ಇದರಲ್ಲಿ ಎರಡು ವಿಧಾನಗಳಿವೆ. ಒಂದು, ಸೋಸುಕಗಳ ಮೂಲಕ ನೀರನ್ನು ಜಿನುಗಿಸುವಿಕೆ. ಎರಡು, ಕ್ರಿಯಾಶೀಲಗೊಳಿಸಿದ ಸ್ಲಡ್ಜ್

ಸೋಸುಕಗಳ ಮೂಲಕ ನೀರನ್ನು ಜಿನುಗಿಸುವಿಕೆ ಪ್ರಮುಖವಾಗಿ ನೀರಿನಲ್ಲಿರುವ ಕರಗಿದ ಮತ್ತು ತೇಲುವ ಕಶ್ಮಲಗಳನ್ನು ಅಪಶೋಷಣೆ ಮತ್ತು ಅಧಿಶೋಷಣೆಯ ಮೂಲಕ ತೆಗೆಯುತ್ತದೆ. ಇದಕ್ಕೆ ಒಂದು ರೀತಿಯ ಬಂಕೆ ಅಥವ ಲೋಳೆಯನ್ನು ಉಪಯೋಗಿಸಲಾಗುತ್ತದೆ. ಜೊತೆಗೆ, ಮರಳು ಮುಂತಾದ ಹಾಸುಗಳ ಮೂಲಕ ನೀರು ಹಾದುಹೋಗುವಾಗ ಸಾವಯವ ಪದಾರ್ಥಗಳ ವಿಘಟನೆಯಾಗುತ್ತದೆ. ಈ ಕಾರ್ಯವನ್ನು ಬ್ಯಾಕ್ಟೀರಿಯಾಗಳು ಮಾಡುತ್ತವೆ.

ಕ್ರಿಯಾಶೀಲಗೊಳಿಸದ ಸ್ಲಡ್ಜ್‌ ಉಪಚಾರ ಮೊದಲ ವಿಧಾನಕ್ಕಿಂತ ಹೆಚ್ಚು ಜನಪ್ರಿಯ. ಇದರ ಮೂಲತತ್ವ ನೀರಿನ ಸ್ವಯಂ ಶುದ್ದೀಕರಣವನ್ನೇ ಹೋಲುತ್ತದೆ. ವ್ಯತ್ಯಾಸವೆಂದರೆ ಇದರಲ್ಲಿ ಕೃತಕ ವಿಧಾನಗಳಿಂದ ತ್ಯಾಜ್ಯ ನೀರನ್ನು ಬಿರುಸು ಗಾಳಿಯಾಡುವಿಕೆಗೆ ಒಳಪಡಿಸಲಾಗುತ್ತದೆ. ಇದರಿಂದ ನೀರಿಗೆ ಯಥೇಚ್ಛ ಆಮ್ಲಜನಕ ಸಿಗುತ್ತದೆ. ಈ ಆಮ್ಲಜನಕವನ್ನು ಬಳಸಿಕೊಂಡು ವಾಯುಜೀವಿಗಳು ವಿಘಟನ ಕಾರ್ಯವನ್ನು ಮಾಡುತ್ತವೆ. ಈ ಕ್ರಿಯೆಯನ್ನು ಪ್ರೇರಿಸಲು ಅತ್ಯಲ್ಪ ಪ್ರಮಾಣದಲ್ಲಿ ಸ್ಲಡ್ಜನ್ನು ನೀರಿಗೆ ಬೆರೆಸಲಾಗುತ್ತದೆ. ಹೀಗೆ ಕ್ರಿಯಾಶೀಲಗೊಳಿಸಿದ ವಾಯುಜೀವಿಗಳು ಸಾವಯವ ವಸ್ತುಗಳನ್ನು ವಿಭಜಿಸಿ ಇಂಗಾಲದ ಡೈ ಆಕ್ಸೈಡ್‌, ಸಲ್ಫೇಟ್‌, ಅಮೋನಿಯಾ , ನೈಟ್ರೇಟ್‌ಗಳನ್ನು ಉತ್ಪಾದಿಸುತ್ತವೆ. ಹೆಚ್ಚು ಗಾಳಿಯೂದುವಿಕೆಯಿಂದ ಅಮೋನಿಯೊಆ ನೈಟ್ರಸ್‌ ಮತ್ತು ನೈಟ್ರಿಕ್‌ ಆಮ್ಲವಾಗಿ ಬದಲಾಗುತ್ತದೆ. ಈ ಆಮ್ಲವು ನೀರಿನಲ್ಲಿ ಕರಗಿರುವ ಪ್ರತ್ಯಾಮ್ಲೀಯ ವಸ್ತುಗಳೊಡನೆ ವರ್ತಿಸಿ ನೈಟ್ರೇಟ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ನೀರಿನ ಪ್ರತ್ಯಾಮ್ಲೀಯ ಗುಣ ನಾಶವಾಗುತ್ತದೆ.

ಮೇಲಿನ ಮೂರು ಹಂತಗಳ ಉಪಚಾರದಿಂದ ಬಿ.ಓ.ಡಿ. ಸುಮಾರು ಶೆ. ೯೦ ರಷ್ಟು ಕಡಿಮೆಯಾಗುತ್ತದೆ. ಸಾರಜನಕ ಮತ್ತು ರಂಜಕದ ಪ್ರಮಾಣದಲ್ಲಿ ಕೂಡ ಕ್ರಮವಾಗಿ ಶೆ. ೫೦ ಮತ್ತು ೩೦ ರಷ್ಟು ಇಳಿಕೆಯಾಗುತ್ತದೆ. ತೇಲು ಕಶ್ಮಲಗಳು ಸುಮಾರು ಶೆ. ೯೦ ರಷ್ಟು ಕಡಿಮೆಯಾಗುತ್ತದೆ.

ಹಂತ ೪. ಕ್ಲೋರಿನೀಕರಣ: ಮೇಲಿನ ಮೂರು ಹಂತಗಳನ್ನು ದಾಟಿದ ನೀರಿನಲ್ಲಿ ಸೂಕ್ಷ್ಮಾಣುಗಳು ಹಾಗೆಯೇ ಇರುತ್ತವೆ. ಜೊತೆಗೆ ದುರ್ನಾತ ಬೀರುವ ಅಮೋನಿಯಾ ಮತ್ತು ಹೈಡ್ರೊಜನ್‌ ಸಲ್ಪೈಡ್‌ ಕೂಡ ಇರುತ್ತವೆ. ಇವುಗಳನ್ನು ನಿರ್ಮೂಲಿಸುವ ಕಾರ್ಯವನ್ನು ಕ್ಲೋರಿನ್‌ ಮಾಡುತ್ತದೆ.

ಕೈಗಾರಿಕಾ ಮಲಿನ ನೀರಿನ ಸಂಸ್ಕರಣೆ

ನೀರನ್ನು ಸೇರಿದ ಕೈಗಾರಿಕಾ ಮಾಲಿನ್ಯವನ್ನು ಸಂಸ್ಕರಿಸುವ ವಿಧಾನ ಮಲಿನಕಾರಕಗಳು ಯಾವುವು ಎಂಬುದನ್ನು ಅವಲಂಬಿಸಿದೆ. ಮಲಿನಕರಕಗಳು ಯಾವುವು ಎಂಬುದು ಅವು ಯಾವ ಯಾವ ಕಾರ್ಖಾನೆಗಳಿಂದ ಬಂದಿವೆ ಎಂಬುದನ್ನು ಅವಲಂಬಿಸಿರುತ್ತದೆ. ಒಂದೊಂದು ಕೈಗಾರಿಕೆಯೂ ತಾನು ಉತ್ಪನ್ನ ಮಾಡುವ ವಸ್ತುವಿಗೆ ಅನುಗುಣವಾಗಿ ಭಿನ್ನ ಕಚ್ಚಾ ವಸ್ತುಗಳನ್ನು ಮತ್ತು ರಾಸಾಯನಿಕಗಳನ್ನು ಉಪಯೋಗಿಸುತ್ತವೆ. ಹೀಗಾಗಿ ಸಂಸ್ಕರಣ ವಿಧಾನಗಳೂ ಭಿನ್ನವಾಗುತ್ತವೆ. ಆದರೂ ಸಾಮಾನ್ಯವಾಗಿ ಅನುಸರಿಸುವ ವಿಧಾನಗಳನ್ನು ಹೀಗೆ ವಿವರಿಸಬಹುದು.

ಹಂತ ೧.  ಕೊಳೆ ಹಾಕುವುದು (ಲಗೂನಿಂಗ್‌): ಕೈಗಾರಿಕೆಯ ತ್ಯಾಜ್ಯ ನೀರನ್ನು ದೊಡ್ಡ ದೊಡ್ಡ ಸಿಮೆಂಟ್‌ ತೊಟ್ಟಿಗಳಲ್ಲಿ ಮೊದಲು ಸಂಗ್ರಹಿಸಿ ಕೆಲವು ದಿನಗಳವರೆಗೆ ಕೊಳೆ ಹಾಕಲಾಗುತ್ತದೆ. ಇದರಿಂದ ಅನೇಕ ಮಲಿನ ವಸ್ತುಗಳು ತಳ ಸೇರುತ್ತವೆ. ಮೇಲಿನ ತಿಳಿ ನೀರನ್ನು ಬೇರೊಂದೆಡೆಗೆ ವರ್ಗಾಯಿಸಿ ಎರಡನೆ ಹಂತದ ಉಪಚಾರಕ್ಕೆ ಒಳಪಡಿಸಲಾಗುತ್ತದೆ.

ಹಂತ ೨. ಒಂದುಗೂಡಿಸುವಿಕೆ: ಫೆರಸ್‌ ಸಲ್ಫೇಟ್‌ ಅಥವ ಸ್ಪಟಿಕವನ್ನು ನೀರಿಗೆ ಸೇರಿಸಲಾಗುತ್ತದೆ. ತೇಲುವ ವಸ್ತುಗಳು ಒಗ್ಗೂಡಿ ತಳ ಸೇರುತ್ತವೆ.

ಇಲ್ಲಿಂದಾಚೆ ನೀರಿನಲ್ಲಿರುವ ಹೆಚ್ಚಿನ ಕಶ್ಮಲಗಳು ಸಾವಯವವೇ ಅಥವ ನಿರವಯವವೇ ಎಂಬುದನ್ನು ಅನುಸರಿಸಿ ಅದಕ್ಕೆ ತಕ್ಕನಾದ ಉಪಚಾರ ಮಾಡಲಾಗುತ್ತದೆ.

ಸಾವಯವ ತ್ಯಾಜ್ಯಗಳು: ಆಹಾರ ಸಂಸ್ಕರಣ ಘಟಕಗಳು, ಡೈರಿಗಳು, ಮದ್ಯ ಸಂಸ್ಕರಣ ಘಟಕಗಳು, ಬಟ್ಟೆ ಮತ್ತು ಕಾಗದ ಕಾರ್ಖಾನೆಗಳು, ಸಾವಯವ ರಾಸಾಯನಿಕಗಳನ್ನು ತಯಾರು ಮಾಡುವ ಕೇಂದ್ರಗಳಿಂದ ಹೊರಬಿದ್ದ ತ್ಯಾಜ್ಯದಲ್ಲಿ ಸಾವಯವ ಕಶ್ಮಲಗಳು ಪ್ರಧಾನವಾಗಿರುತ್ತವೆ. ಆದ್ದರಿಂದ ಇವುಗಳನ್ನು ಜೀವಶಾಸ್ತ್ರೀಯ ಉಪಚಾರಕ್ಕೆ ಒಳಪಡಿಸಲಾಗುತ್ತದೆ.

ತ್ಯಾಜ್ಯದಲ್ಲಿರುವ ಸಾವಯವ ಕಶ್ಮಲ ಸುಲಭವಾಗಿ ಕೊಳೆಯುವಂತದ್ದಾಗಿದ್ದರೆ ಅದಕ್ಕೆ ಗಾಳಿ ಊದಲಾಗುತ್ತದೆ. ನಿರವಯವ ಕಶ್ಮಲಗಳೂ ಗಣನೀಯ ಪ್ರಮಾಣದಲ್ಲಿ ಇದ್ದರೆ ಅವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ತೆಗೆಯಲಾಗುತ್ತದೆ. ಬಿಸಿ ಇದ್ದರೆ ಅದನ್ನು ತಣ್ಣಗೆ ಮಾಡಲಾಗುತ್ತದೆ. ಪ್ರಬಲ ಆಮ್ಲೀಯತೆ ಅಥವ ಪ್ರತ್ಯಾಮ್ಲೀಯತೆ ಇದ್ದರೆ ಅವುಗಳನ್ನು ತಟಸ್ಥಗೊಳಿಸಲಾಗುತ್ತದೆ. ನಿರವಯವ ವಿಷಕರ ಲೋಹಗಳನ್ನು ಅವುಗಳಿಗೆ ಸೂಕ್ತವಾದ ರಾಸಾಯನಿಕ ಕ್ರಿಯೆಗಳಿಂದ ತೆಗೆಯಲಾಗುತ್ತದೆ. ಇದಾದ ನಂತರ ಹಿಂದೆಯೆ ವಿವರಿಸಿದ ಆಕ್ಟಿವೇಟೆಡ್‌ ಸ್ಲಡ್ಜ್‌ ಮತ್ತು ಕ್ಲೋರಿನೇಷನ್‌ಗೆ ನೀರನ್ನು ಒಳಪಡಿಸಿ ಶುದ್ಧ ನೀರನ್ನು ಪಡೆಯಲಾಗುತ್ತದೆ.

ನಿರವಯವ ಕಶ್ಮಲಗಳು: ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆಗಳು, ವಿದ್ಯುಲೇಪನ ಮಾಡುವ ಘಟಕಗಳು ಮತ್ತು ಇದೇ ತರದ ಇನ್ನೂ ಅನೇಕ ಕೈಗಾರಿಕೆಗಳು ನಿರವಯವ ಕಶ್ಮಲಗಳನ್ನು ಹೊರಹಾಕುತ್ತವೆ. ಇವುಗಳನ್ನು ರಾಸಾಯನಿಕ ಕ್ರಿಯೆಗೊಳಪಡಿಸಿ ಶುದ್ಧಗೊಳಿಸಲಾಗುತ್ತದೆ. ಈ ಕಶ್ಮಲಗಳು ಹೆಚ್ಚಿನ ಸಂದರ್ಭಗಳಲ್ಲಿ ಆಮ್ಲೀಯವಾಗುತ್ತವೆ. ಕ್ಯಾಲ್ಸಿಯಮ್‌ ಆಕ್ಸೈಡ್‌ ಬಳಸಿ ಇವುಗಳನ್ನು ತಟಸ್ಥಗೊಳಿಸಲಾಗುತ್ತದೆ. ಆಮ್ಲೀಯ ತ್ಯಾಜ್ಯಗಳನ್ನು ತಟಸ್ಥಗೊಳಿಸಿದಂತೆ ಪ್ರತ್ಯಾಮ್ಲೀಯ ತ್ಯಾಜ್ಯಗಳನ್ನು ತಟಸ್ಥಗೊಳಿಸಾಲಗುತ್ತದೆ. ಚರ್ಮ, ಬಟ್ಟೆ, ರಾಸಾಯನಿಕ ಕಾರ್ಖಾನೆಗಳ ತ್ಯಾಜ್ಯ ನೀರನ್ನು ಸಲ್ಫೂರಿಕ್‌ ಆಮ್ಲದಿಂದ ಉಪಚರಿಸಲಾಗುತ್ತದೆ. ಒಟ್ಟಲ್ಲಿ ನೀರಿನಲ್ಲಿರುವ ಆಮ್ಲೀಯತೆ ಅಥವ ಪ್ರತ್ಯಾಮ್ಲೀಯತೆನ್ನು ತಟಸ್ಥಗೊಳಿಸಿ ಅದರ pH ಬೆಲೆಯನ್ನು ಸಾಮಾನ್ಯ ಮಟ್ಟಕ್ಕೆ ತರಲಾಗುತ್ತದೆ.

ಉಳಿದಂತೆ ತ್ಯಾಜ್ಯದಲ್ಲಿರುವ ರಾಸಾಯನಿಕಗಳ ಗುಣಲಕ್ಷಣಗಳನ್ನು ಅನುಸರಿಸಿ ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳಿಂದ ಅವುಗಳನ್ನು ತೆಗೆಯಲಾಗುತ್ತದೆ. ಉದಾಹರಣೆಗೆ ನೀರಿನಲ್ಲಿ ಸೈಯನೈಡ್‌ ತ್ಯಾಜ್ಯವಿದ್ದರೆ ಅದನ್ನು ಪ್ರತ್ಯಾಮ್ಲೀಯ ಪರಿಸ್ಥಿತಿಯಲ್ಲಿ ಕ್ಲೊರಿನೀಕರಣ ಮಾಡುತ್ತಾರೆ. ಹೀಗೆ ಹೆಚ್ಚು ಕಮ್ಮಿ ಎಲ್ಲ ಕಶ್ಮಲಗಳನ್ನು ರಾಸಾಯನಿಕ ಉಪಚಾರದಿಂದ ತೆಗೆಯಬಹುದು. ಆದರೂ ಕೆಲವೊಂದು ಕಶ್ಮಲಗಳನ್ನು ನಿವಾರಿಸುವ ವಿಧಾನಗಳು ಇನ್ನೂ ಗೊತ್ತಿಲ್ಲ ಅಥವ ಅವುಗಳಿಗೆ ತಗಲುವ ಖರ್ಚು ತುಂಬಾ ಜಾಸ್ತಿ. ಉದಾಹರಣೆಗೆ ಕೆಲವೊಂದು ರಾಸಾಯನಿಕಗಳು ಮತ್ತು ತೈಲೋತ್ಪನ್ನ ಘಟಕಗಳಿಂದ ಬರುವ ತ್ಯಾಜ್ಯ ಇದರಲ್ಲಿರುವ ಕ್ಲೋರೈಡ್‌ ಅಯಾನುಗಳನ್ನು ತೆಗೆಯುವುದಾಗಲಿ ಅಥವ ನಾಶಮಾಡುವುದಾಗಲಿ ಸುಲಭವಲ್ಲ; ಅಧಿಕ ಖರ್ಚು ತಗಲುತ್ತದೆ. ಇದೇ ರೀತಿ ವಿಕಿರಣ ಮಾಲಿನ್ಯ ಕೂಡ’ ನಿವಾರಣೆ ಹೆಚ್ಚು ಕಮ್ಮಿ ಅಸಾಧ್ಯ.

ಹೀಗೆ ಸಂಸ್ಕರಿಸಿದ ನೀರನ್ನು ವ್ಯವಸಾಯಕ್ಕೆ ಹಾಗೂ ಕಾರ್ಖಾನೆಗಳಲ್ಲಿ ಕೆಲವು ನಿರ್ದಿಷ್ಟ ಕೆಲಸಗಳಿಗೆ ಉಪಯೋಗಿಸಬಹುದು.