ನೀರು ಅಮೂಲ್ಯ ಏಕೆಂದರೆ ಅದೊಂದು ಜೀವನಾವಶ್ಯಕ ವಸ್ತು. ಅದರಂಥ ವಸ್ತು ಬೇರೊಂದಿಲ್ಲ. ಅದರ ಸಂಗ್ರಹ ಕೂಡ ಅಲ್ಪ. ಹೀಗಾಗಿ ಎಲ್ಲರೂ ಅದನ್ನು ಸಂರಕ್ಷಿಸುವ ಮತ್ತು ಶುದ್ಧವಾಗಿಡುವ ಕಡೆ ಗಮನ ಹರಿಸಬೇಕಾಗಿದೆ. ನೀರಿನ ವಿಷಯದಲ್ಲಿ ಬೇಜಾವಾಬ್ದಾರಿ ವರ್ತನೆ ಜಗತ್ತಿನ ಎಲ್ಲ ಜನರಿಗೆ ಸಂಕಷ್ಟವನ್ನು ತರುತ್ತದೆ.
ಜಗತ್ತಿನ ಜನರು ನೀರಿನ ಅತಿಬಳಕೆ ಮಾಡುತ್ತಿರುವ ಬಗ್ಗೆ ವರ್ಲ್ಡ್ ವಾಚ್ ಇನ್ಸಿಟ್ಯೂಟ್ನ ವೈಟಲ್ ಸೈನ್ಸ್ ೨೦೦೦ ಎಂಬ ವರದಿ ಆತಂಕ ವ್ಯಕ್ತಪಡಿಸಿದೆ. ಜಗತ್ತು ಪ್ರತಿ ವರ್ಷ ೧೬೦ ಬಿಲಿಯನ್ ಕ್ಯೂಬಿಕ್ ಮೀಟರ್ (೧೬ ಲಕ್ಷ ಕೋಟಿ ಕೋಟಿ ಲೀಟರ್) ನಷ್ಟು ನೀರ೫ನ್ನು ಉಪಯೋಗಿಸುತ್ತಿದೆ. ನೀರಿನ ಈ ಅಧಿಬಳಕೆಯಿಂದ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮತ್ತು ಬದುಕಲು ಅಗತ್ಯವಾದ ಮೂಲಭೂತ ಸೌಕರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವರದಿ ಎಚ್ಚರಿಸಿದೆ. ನೀರಿನ ಅಧಿಬಳಕೆಯ ಜೊತೆ ಜೊತೆಗೆ ಮನುಷ್ಯನ ಅಸಂಖ್ಯ ಚಟುವಟಿಕೆಗಳು ಅಗಾಧ ಪ್ರಮಾಣದ ಮಾಲಿನ್ಯಕಾರಕಗಳನ್ನು ಜಲಮೂಲಗಳಿಗೆ ಸೇರಿಸುತ್ತಿವೆ. ಇದು ಜಗತ್ತಿನ ಮೂರನೆ ಒಂದು ಭಾಗದಷ್ಟು ಜನರಿಗೆ ಸ್ವಚ್ಛ ನೀರು ಸಿಗದಂತೆ ಮಾಡುವ ರೀತಿಯಲ್ಲಿ-ಅದೂ ಸರಿಪಡಿಸಲಾಗದ ರೀತಿಯಲ್ಲಿ – ಜಲಸಂಪನ್ಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಇದರ ಸೂಚನೆಗಳು ಈಗಾಗಲೆ ಅನೇಕ ಕಡೆಗಳಲ್ಲಿ ಸಿಗುತ್ತಿವೆ. ನಮ್ಮ ದೇಶದಲ್ಲೇ ೨ ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವು ನೀರಿನ ದುಂದು ವೆಚ್ಚವನ್ನು ತಡೆಯಬೇಕಾಗಿದೆ ಮತ್ತು ನೀರನ್ನು ಕಲುಷಿತಗೊಳಿಸುವ ನಮ್ಮೆಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.
ನೀರಿಗೆ ಸಂಬಂಧಿಸಿದಂತೆ ಈವತ್ತಿನ ಮನುಷ್ಯನ ಸ್ಥಿತಿ ಹೇಗಿದೆ?
ಒಮ್ಮೆ ಒಬ್ಬಾತ ತನ್ನ ಪುಟ್ಟ ದೋಣಿಯಲ್ಲಿ ನೀರು, ಆಹಾರ ಇತ್ಯಾದಿ ಅಗತ್ಯ ವಸ್ತುಗಳನ್ನು ತುಂಬಿಕೊಂಡು ಸಮುದ್ರಯಾನ ಹೊರಟ. ಅವನಲ್ಲಿ ಹುರುಪಿತ್ತು. ಉತ್ಯಾಹವಿತ್ತು; ಜೊತೆಗೆ ಧಿಮಾಕು ಕೂಡ. ಏಕೆಂದರೆ ಅವನಿಗೆ ಅಗತ್ಯವಾದುದೆಲ್ಲವೂ ಅವನ ಕಾಲಬುಡದಲ್ಲಿತ್ತು. ದೋಣಿ ಸಮುದ್ರ ಮಧ್ಯೆ ಬರುವ ಹೊತ್ತಿಗೆ ಅವನ ಧಿಮಾಕು ನೆತ್ತಿಗೇರಿತ್ತು. ಅಟ್ಟಹಾಸದಿಂದ ಕೈಕಾಲುಗಳನ್ನು ಒದರುತ್ತಿದ್ದ. ಒದರಾಟದಲ್ಲಿ ಆಯ ತಪ್ಪಿದ ದೋಣಿ ಮುಗುಚಿಕೊಂಡಿತು. ದೋಣಿಯಲ್ಲಿದ್ದುದೆಲ್ಲವು ನೀರು ಪಾಲಾಯಿತು. ಅದೃಷ್ಟವಶಾತ್ ಅವನ ಕೈಯಲ್ಲಿ ಆಗೊಂದು ಪುಟ್ಟ ಬಾಟಲಿ ಇತ್ತು. ಅದರೊಳಗೆ ಕುಡಿಯುವ ನೀರಿತ್ತು.
ಆಧುನಿಕ ಮನುಷ್ಯನ ಪರಿಸ್ಥಿತಿ ಮೇಲೆ ವಿವರಿಸಿರುವ ದುರಹಂಕಾರಿ ಸಮುದ್ರಯಾನಿಗಿಂತ ಭಿನ್ನವಾಗಿಲ್ಲ.
ಕುಡಿಯಲು ಯೋಗ್ಯವಾಗಿರುವ ನೀರು ಬಾಟಲಿಯಲ್ಲಿರುವಷ್ಟೆ; ದುರಹಂಕಾರದಿಂದ ತನ್ನಲ್ಲಿದ್ದ ನೀರಿನ ದಾಸ್ತಾನನ್ನು ಕಳೆದುಕೊಂಡಿದ್ದಾನೆ. ನೀರಿನ ನಡುವೆ ಇದ್ದೂ ನೀರಿಲ್ಲದ ಪರಿಸ್ಥಿತಿ. ಅವನು ತನ್ನ ಕೈಯಲ್ಲಿರುವ ಬಾಟಲಿ ನೀರನ್ನು ಹೇಗೆ ಉಪಯೋಗಿಸಬೇಕು?
ಕೈಯಲ್ಲಿರುವ ನೀರನ್ನು ಹಿತಮಿತವಾಗಿ ಬಳಸಿದರೆ ಒಂದಷ್ಟು ದಿನ ಬದುಕುಳಿಯುತ್ತಾನೆ; ದುಂದು ಅಥವ ಹಾಳು ಮಾಡಿದರೆ ಬೇಗ ಸಾಯುತ್ತಾನೆ. ಗತಿಗೆಟ್ಟು ಸಮುದ್ರದ ನೀರನ್ನೆ ಕುಡಿದರೆ ಇನ್ನೂ ಬೇಗೆ ಸಾಯುತ್ತಾನೆ.
ಈವತ್ತು ಮನುಷ್ಯ ತನ್ನ ಅನೇಕ ವಿವೇಚನಾರಹಿತ ಮತ್ತು ದುರಹಂಕಾರದ ನಡೆಯಿಂದ ಉಪಯೋಗಕ್ಕೆ ಅರ್ಹವಾದ ನೀರನ್ನು ಕಲುಷಿತಗೊಳಿಸುತ್ತಿದ್ದಾನೆ. ಇರುವ ಅಲ್ಪವೇ ನೀರನ್ನು ದುಂದು ಮಾಡುತ್ತಿದ್ದಾನೆ. ಒಂದೆಡೆ, ನೀರು ಕಲುಷಿತಗೊಳ್ಳುತ್ತಿದೆ; ಮತ್ತೊಂದೆಡೆ, ವೇಗವಾಗಿ ಬರಿದಾಗುತ್ತಿದೆ.
ಮನುಷ್ಯನೂ ಅಷ್ಟೆ . ದುರಹಂಕಾರಿ ಸಮುದ್ರಯಾನಿಯಂತೆ ಇರುವ ನೀರನ್ನು ಹಿತಮಿತವಾಗಿ ಬಳಸಿದೆ ಒಂದಿಷ್ಟು ದಿನ ಹೆಚ್ಚಾಗಿ ಬದುಕುತ್ತಾನೆ; ಗತಿಗೆಟ್ಟು ಮಲಿನ ನೀರನ್ನೆ ಕುಡಿದರೆ ಬೇಗ ಸಾಯುತ್ತಾನೆ.
Leave A Comment