[ಪ್ರಜಾಪ್ರಭುತ್ವ ವಿಫಲವಾಗಿ ಸರ್ವಾಧಿಕಾರ ಪ್ರಭುತ್ವಗಳು ತಲೆಯೆತ್ತಿದವು] (ಅಥಾರಿಟೇರಿಯನಿಸಂ).

ವಿಶ್ವದ ಮೊದಲ ಮಹಾಯುದ್ಧದ ತರುವಾಯ ಯೂರೋಪಿನಲ್ಲಿ ಹಲವೆಡೆ, ಇಟಲಿಯಲ್ಲಿ ಪ್ಯಾಸಿಸ್ಟ್ ಆಳ್ವಿಕೆಯೂ ಜರ್ಮನಿಯಲ್ಲಿ ಹಿಟ್ಲರನ ಆಳ್ವಿಕೆಯೂ, ಆನಂತರ ರಷ್ಯದಲ್ಲಿ ಕಮ್ಯೂನಿಸ್ಟ್ ಆಳ್ವಿಕೆಯೂ ಅಸ್ತಿತ್ವದಲ್ಲಿ ಬಂದವು. ವಿಶ್ವದ ಎರಡನೆಯ ಮಹಾಯುದ್ಧದ ನಂತರ ಪ್ರಪಂಚದ ಇನ್ನೂ ಅನೇಕ ಕಡೆ ಈ ವ್ಯವಸ್ಥೆ ಆವಿರ್ಭವಿಸಿತು. ಚೀನ, ಬರ್ಮ, ಇಂಡೋನೇಷ್ಯ, ಈಜಿಪ್ಟ್, ಯುಗೋಸ್ಲೇವಿಯ, ಜಕೋಸ್ಲೊವೇಕಿಯ ಮೊದಲಾದ ದೇಶಗಳಲ್ಲಿ ಅಧಿಕಾರಪ್ರಾಬಲ್ಯವಾದ ತಲೆ ಎತ್ತಿತು.
ಒಂದು ದೇಶದ ರಾಜಕೀಯ ಅನಿಶ್ಚಿತತೆ, ಆರ್ಥಿಕಮುಗ್ಗಟ್ಟು, ದುರಾಡಳಿತ ಮುಂತಾದ ಸನ್ನಿವೇಶಗಳು ಸರ್ವಾಧಿಕಾರಪ್ರಭುತ್ವಕ್ಕೆ ನಾಂದಿಯಾಗಬಹುದು; ಮುರಿದುಬೀಳುತ್ತಿರುವ ಸಂವಿಧಾನವನ್ನು ಬದಿಗಿರಿಸಿ ಹೊಸರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಂಡು ಮಹತ್ವಾಕಾಂಕ್ಷೆ ಹೊಂದಿದ ಕೆಲ ಜನ ತಮ್ಮ ಅಧಿಕಾರ ಸ್ಥಾಪಿಸಬಹುದು. ಪ್ರಜಾಮುಖಂಡರೇ ಸರ್ವಾಧಿಕಾರಿಗಳಾಗಿ ಮುಂದೆ ಬರಬಹುದು; ಇಲ್ಲವೇ ಸೇನಾಧಿಪತಿಗಳು ತಾವೇ ಸರ್ಕಾರದ ಸೂತ್ರಗಳನ್ನು ಹಿಡಿದು ತಮ್ಮ ಪ್ರಭುತ್ವ ಸ್ಥಾಪಿಸಬಹುದು. ಮತ, ಧರ್ಮ, ಜಾತಿ ಮುಂತಾದ ಒಡಕುಗಳು ಹೆಚ್ಚಾಗಿರುವ, ಶಿಕ್ಷಣಾಭಾವವಿರುವ ಹಿಂದುಳಿದ ಸಮಾಜದಲ್ಲಿ ಸರ್ವಾಧಿಕಾರಪ್ರಭುತ್ವ ತಲೆ ಎತ್ತಿ ಬಹುದಿನ ಬಾಳಬಲ್ಲದು. ಜನರಲ್ಲಿ ಸ್ವಾತಂತ್ಯ್ರ ಪ್ರೇಮವಿರದಿದ್ದರೆ ಸರ್ವಾಧಿಕಾರಿಗಳು ಅಡೆತಡೆಯಿಲ್ಲದೆ ಜನರ ಮೇಲೆ ಅಧಿಕಾರವನ್ನು ನಡೆಸಬಹುದು. ಸರ್ವಾಧಿಕಾರವೇರ್ಪಟ್ಟ ಮೇಲೆ ಸರ್ಕಾರಕ್ಕೆ ತಲೆಬಾಗಿ ನಡೆಯದ ವ್ಯಕ್ತಿ ಮತ್ತು ಪಕ್ಷಗಳನ್ನು ಹತ್ತಿಕ್ಕಲಾಗುವುದರಿಂದ ಪ್ರಜಾಸ್ವಾತಂತ್ರ್ಯ ಮಾಯವಾಗುತ್ತದೆ. ಹೀಗಾಗಿ ಅಧಿಕಾರ ಪ್ರಾಬಲ್ಯವಾದವಿರುವಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಅಸ್ಪದವಿಲ್ಲ; ವ್ಯಕ್ತಿ ಮತ್ತು ಸಂಘಸ್ವಾತಂತ್ರ್ಯಗಳಿಗೆ ಅವಕಾಶವಿಲ್ಲ. ಕ್ರಾಂತಿಯಿಂದ ಮಾತ್ರ ಸರ್ಕಾರವನ್ನು ಬದಲಾಯಿಸಬೇಕಾಗುತ್ತದೆ. ಆದರೆ ಸರ್ವಾಧಿಕಾರ ಪ್ರಭುತ್ವದಲ್ಲಿ ಆಡಳಿತದಕ್ಷತೆಯುಂಟು. ಸರ್ಕಾರ ಜನರ ಆರ್ಥಿಕ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯವಿದೆ. ಉದಾ: ಜರ್ಮನಿ, ಇಟಲಿ, ಮುಂತಾದ ದೇಶಗಳಲ್ಲಿ ಆರ್ಥಿಕಸ್ಥಿತಿಯನ್ನು ಅಲ್ಪಕಾಲದಲ್ಲಿ ಯಶಸ್ವಿಯಾಗಿ ಸುಧಾರಿಸಲಾಯಿತು. ಅಧಿಕಾರವಾದವು ಸಂವಿಧಾನಾತ್ಮಾಕ ಅಥವಾ ನೈತಿಕ ಪರಿಮಿತಿಗಳನ್ನು ಅಂಗೀಕರಿಸುವುದಿಲ್ಲ. ಅಧಿಕಾರದಲ್ಲಿರುವವರು ಹೇಳಿದ್ದೇ ಮಾತು; ನಡೆದದ್ದೇ ದಾರಿ. ಅವರ ಮಾತನ್ನಾಗಲೀ ಕೃತಿಯನ್ನಾಗಲೀ ಪ್ರಶ್ನಿಸುವಂತಿಲ್ಲ. ಪ್ರಜಾಸತ್ತಾತ್ಮಕರಾಜ್ಯದಲ್ಲಿ ಕೂಡ ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ. ಆದರೆ ಇಲ್ಲಿ ಅಧಿಕಾರ ಚಲಾಯಿಸುವಾಗ ಸಂವಿಧಾನಾತ್ಮಕ ಅಥವಾ ಬೇರೆ ವಿಧವಾದ ಪರಿಮಿತಿಗಳನ್ನು ಗಮನಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಅಧಿಕಾರವಾದ ಹಾಗೂ ಪ್ರಜಾಪ್ರಭುತ್ವ ವಾದಗಳ ಮಧ್ಯ ವೈರುಧ್ಯವನ್ನು ಕಾಣಬಹುದು.
ಸರ್ವಾಧಿಕಾರಿಗಳ ಆಳ್ವಿಕೆಯಿಂದ ತಾತ್ಕಾಲಿಕಪರಿಹಾರ ದೊರೆತರೂ ಜನರ ಸ್ವಾತಂತ್ಯ್ರದಾಹವನ್ನು ಅನಂತಕಾಲ ಹತ್ತಿಕ್ಕಲು ಸಾಧ್ಯವಿಲ್ಲ. ಮುಸಲೋನಿ ಮತ್ತು ಹಿಟ್ಲರನ ಪ್ರಭುತ್ವಗಳೂ ಕಡೆಗೊಮ್ಮೆ ಕುಸಿದುಬಿದ್ದುವು. ಸೋವಿಯೆತ್ ಯುನಿಯನ್‌ದಲ್ಲೂ ಸ್ಟಾಲಿನ್‌ರ ಸರ್ವಾಧಿಕಾರಿ ಪ್ರವೃತ್ತಿಯು ಪ್ರಬಲವಾದ ಪ್ರಭುತ್ವವನ್ನು ರಚಿಸಿ ಯಶಸ್ವಿಯಾಗಿ ಅಧಿಕಾರ ನಡೆಸಿದರೂ ಮುಂದೆ ಒಂದು ದಿನ ಮಹಾಪತನವನ್ನು ನೋಡಬೇಕಾಯಿತು. ಏನೇ ಆಗಲಿ ವ್ಯಕ್ತಿಯ ಆರೋಗ್ಯ ಕೆಟ್ಟಾಗ ಮರಳಿ ತನ್ನ ಆರೋಗ್ಯವನ್ನು ಪಡೆಯುವ ತನಕ ತಾತ್ಕಾಲಿಕ ಸ್ಥಿತ್ಯಂತರವನ್ನು ಅನುಭವಿಸುವಂತೆ ಒಂದು ಸಮಾಜದ ಪರಿಸ್ಥಿತಿ ಕೆಟ್ಟಾಗ ಸರ್ವಾಧಿಕಾರ ಪ್ರಭುತ್ವದ ಮೊರೆ ಹೋಗಬೇಕಾಗಬಹುದು. ಆದರೆ ಅದು ಶಾಶ್ವತ ವ್ಯವಸ್ಥೆಯಾಗಲಾರದು.
ಆಡಳಿತದಲ್ಲಿ ಕ್ಷಮತೆ, ರಾಜಕೀಯದಲ್ಲಿ ಸ್ಥಿರತೆ, ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ವಾಧಿಕಾರತ್ವ/ಅಧಿಕಾರ ಪ್ರಾಬಲ್ಯತ್ವ ಎಷ್ಟೇ ಹೆಣಗಾಡಿದರೂ ಜನರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ. ಅವರು ಸ್ವಾತಂತ್ರ್ಯವನ್ನು ಕಡೆಗಣಿಸುವಂತೆ ಮಾಡಲು ಯಾವುದಾದರೊಂದು ತೀವ್ರ ವೈಚಾರಿಕ ಇಲ್ಲವೆ ಭಾವುಕ ಪ್ರಚೋದನೆಯನ್ನು ಹರಿಬಿಡಲಾಗುವುದು. ತಮ್ಮ ಜನರನ್ನು ಗುಣಾತ್ಮಕವಾಗಿ ಹುರಿದುಂಬಿಸುವುದು, ಇಲ್ಲವೇ ಅದಕ್ಕೂ ಸುಲಭವಾಗಿ ಕಾಲ್ಪನಿಕ ಶತ್ರುವೊಂದನ್ನು ನಿರ್ಮಿಸುವುದು ಅನಿವಾರ್ಯವಾಗುತ್ತದೆ. ತಮ್ಮನ್ನು ವಿರೋಧಮಾಡಿದವರು ಅಥವಾ ವಿಮರ್ಶೆ ಮಾಡಿದವರೆಲ್ಲರೂ ರಾಷ್ಟ್ರವಿರೋಧಿಗಳು, ಸಮಾಜ-ಘಾತಕರು, ಬಂಡುಕೋರರೆಂದು ಬಣ್ಣಿಸಿ ಅವರೆಲ್ಲರನ್ನೂ ದಂಡಿಸುವುದು ಮಾಮೂಲಿ ವಿಷಯವಾಗುತ್ತದೆ. ಇದರಿಂದ “ಸರ್ವಾಧಿಕಾರಿ ಜೈ ಹೋ” ವಾತಾವರಣ ನಿರ್ಮಾಣವಾಗುತ್ತದೆ. ಪ್ರಜಾಪ್ರಭುತ್ವ, ವೈಚಾರಿಕ ಸ್ವಾತಂತ್ರ್ಯ, ಮುಕ್ತವಾತಾವರಣವೆಲ್ಲವೂ ನಾಶವಾಗಿ, ಜನರು ಪುನಃ ಪ್ರಜಾಪ್ರಭುತ್ವದತ್ತ ವಾಲುತ್ತಾರೆ. ಕ್ರಾಂತಿಯಿಂದ ಅಧಿಕಾರಕ್ಕೆ ಬಂದವರಿಗೆ ಪ್ರತಿ-ಕ್ರಾಂತಿಯು ಉತ್ತರವಾಗಿ ಮೂಡಿಬರುತ್ತದೆ. ಅಧಿಕಾರ ಪ್ರಾಬಲ್ಯ/ಸರ್ವಾಧಿಕಾರವು ಕ್ಷಣಿಕ ಸುಖಕೊಟ್ಟರೂ ಅಗಣಿತ ಹಾನಿಯುಂಟುಮಾಡಿ ದುರಂತದಲ್ಲಿ ಕೊನೆಗೊಳ್ಳುವುದು ಇತಿಹಾಸದಲ್ಲಿ ಪುನರಾವೃತ್ತಿಯಾಗುವುದು ಬಲ್ಲವರಿಗೆ ತಿಳಿದ ವಿಷಯವೇ.