ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಆರು ಕಲಾ ಪ್ರಕಾರಗಳಲ್ಲಿ ಹಿಂದುಸ್ತಾನಿ ಸಂಗೀತವೂ ಒಂದು. ಇತರ ಸಂಗೀತ ಪ್ರಕಾರಗಳಂತೆ ಹಿಂದುಸ್ತಾನಿ ಸಂಗೀತಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ. ಯಾವುದೇ ಕಲೆ ಬೆಳಕಿಗೆ ಬರಬೇಕಾದಲ್ಲಿ ಅದರ ಕ್ರಿಯಾ ಪಕ್ಷ ಹಾಗೂ ಶಾಸ್ತ್ರ ಪಕ್ಷ ಸಮೃದ್ಧವಾಗಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಎರಡೂ ಅಂಗಗಳನ್ನು ಸಮನಾಗಿ ಗೌರವಿಸುತ್ತ ಬಂದಿದೆ.

ಹಿಂದುಸ್ತಾನಿ ಸಂಗೀತದಲ್ಲಿ ಪ್ರಾಯೋಗಿಕ ಅಂಗ ಬೆಳೆದಷ್ಟು ಶಾಸ್ತ್ರ ಅಂಗ ಬೆಳದಿಲ್ಲವೆಂಬುದನ್ನು ಗಮನದಲ್ಲಿರಿಸಿಕೊಂಡ ಅಕಾಡೆಮಿಯು ಹಿಂದುಸ್ತಾನಿ ಸಂಗೀತ ಕುರಿತ ಲೇಖನಗಳ ಗ್ರಂಥವೊಂದನ್ನು ಪ್ರಕಟಿಸಲು ನಿರ್ಧರಿಸಿತು. ಈ ಗ್ರಂಥಕ್ಕೆ ಅಕಾಡೆಮಿಯ ಸರ್ವ ಸದಸ್ಯರ ಸರ್ವಾನುಮತದಂತೆ ಹಿಂದುಸ್ತಾನಿ ಸಂಗೀತದ ಲೇಖನ ಕುರಿತ ಅಪರೂಪದ ಒಂದು ಆಕರ ಗ್ರಂಥದ ಸಂಪಾದಕರನ್ನಾಗಿ ಬಾಗಲಕೋಟೆಯ ಬಸವೇಶ್ವರ ಕಲಾಮಹಾವಿದ್ಯಾಲಯ ಸಂಗೀತ ವಿಭಾಗದ ಮುಖ್ಯಸ್ಥ  ಜನಪ್ರಿಯ ಹಿಂದುಸ್ತಾನಿ  ಗಾಯಕ ಹಾಗೂ ಸಂಗೀತಜ್ಞ  ಪ್ರೊ. ಸಿದ್ಧರಾಮಯ್ಯ ಮಠಪತಿ ಗೋರಟಾ ಅವರನ್ನು ಆಯ್ಕೆ ಮಾಡಿ, ಈ ಪುಸ್ತಕ ಪ್ರಕಟಣೆಗೆ ಸಹಾಯಕವಾಗಲೆಂದು ಮೂರು ಜನ ಸಂಗೀತಜ್ಞರನ್ನು ಸಂಪಾದಕ ಮಂಡಳಿಯ ಸದಸ್ಯರನ್ನಾಗಿಸಿತು. ಅವರೆಲ್ಲರ ಪರಿಶ್ರಮದ ಫಲವೇ ಈ ಗ್ರಂಥ.

ಅಕಾಡೆಮಿಯ ವಿನಂತಿಯನ್ನು ಮನ್ನಿಸಿ, ಸಂಗೀತದ ವಿವಿಧ ಲೇಖನಗಳನ್ನು ಆಯ್ಕೆ ಮಾಡಿ, ಅವಶ್ಯವೆನಿಸಿದ ಲೇಖಕರಿಂದ ಬರೆಯಿಸಿ ಅಕಾಡೆಮಿಯ ಪ್ರಕಟಣೆಗೆ ನೀಡಿರುವ ಸಂಪಾದಕ ಪ್ರೊ. ಸಿದ್ಧರಾಮಯ್ಯ ಮಠಪತಿ ಗೊರಟಾ ಹಾಗೂ ಸಂಪಾದಕೀಯ ಮಂಡಳಿಯ ಸದಸ್ಯರಾದ ಪಂ. ವಸಂತ ಕನಕಾಪೂರ, ಡಾ. ಶ್ರೀಮತಿ ಕಮಲ ರಾಜೀವ ಪುರಂದರೆ ಹಾಗೂ ಡಾ.ಕೆ.ಗಣಪತಿ ಭಟ್ ಅವರಿಗೆ ಹಾಗೂ ಹಿಂದುಸ್ತಾನಿ ಸಂಗೀತದ ವಿವಿಧ ವಿಷಯ ಕುರಿತು ಲೇಖನ ಪ್ರಕಟಿಸಲು ಅನುಮತಿ ನೀಡಿದ ಲೇಖಕರಿಗೆ, ಅಂದವಾಗಿ ಹಾಗೂ ಸಕಾಲದಲ್ಲಿ ಗ್ರಂಥ ಮುದ್ರಿಸಿಕೊಟ್ಟ ಕೃತಿಕ ಪ್ರಿಂಟ್ ಆಯ್ಡ್ ಪ್ರೆಸ್ಸಿನ ಮಾಲಕರಿಗೆ ಅಕಾಡೆಮಿಯ ಅನಂತ ವಂದನೆಗಳು. ಅಕಾಡೆಮಿಯ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಬಲವಂತರಾವ್ ಪಾಟೀಲರಿಗೆ ವಂದನೆಗಳು.

ಕರ್ನಾಟಕದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈ ಗ್ರಂಥ ಪ್ರಕಟಗೊಳ್ಳುತ್ತಿರುವುದು ಸಂತಸದ ಸಂಗತಿ. ಸಂಗೀತಗಾರರು ಹಾಗೂ ಸಮಸ್ತ ಕನ್ನಡಿಗರು ಈ ಗ್ರಂಥದ ಸದುಪಯೋಗ ಪಡೆದುಕೊಳ್ಳುವರೆಂದು ಆಶಿಸುವೆ.

ಪಂ. ರಾಜಶೇಖರ ಮನ್ಸೂರ
ಅಧ್ಯಕ್ಷರು