ಮಾನ್ಯ ಕುಲಪತಿಗಳೇ, ಸ್ವಾಗತಾಧ್ಯಕ್ಷರಾದ ಡಾ. ಕಲಬುರ್ಗಿ ಅವರೇ ಮಹನೀಯರೇ-

ಬೆಳಗಾವಿ ಕರ್ನಾಟಕದ ಒಂದು ಮಹತ್ವಪೂರ್ಣ ಪಟ್ಟಣ. ಪ್ರಾಚೀನತೆ-ಆಧುನಿಕತೆ ದೃಷ್ಟಿಯಿಂದ, ಶಿಷ್ಟಪದ- ಜನಪದ ದೃಷ್ಟಿಯಿಂದ ಇದು ಅತ್ಯಂತ ಗಮನಾರ್ಹ ನಗರವೆನಿಸಿದೆ. ಲಿಂಗರಾಜ ಕಾಲೇಜ ಸ್ಥಾಪನೆ ಈ ನಗರದ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಹಿಂದೆ ಈ ಕಾಲೇಜಿನ ಆವರಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಲನದ ಅಂಗವಾಗಿ ಜಾನಪದ ಸಾಹಿತ್ಯ ಗೋಷ್ಠಿ ಜರುಗಿದ್ದಿತು. ಇಂದು ಬೆಳಗಾವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಸ್ತರಣ ನೆಲೆಯೂರಿ ನಿಂತಿದೆ. ಈ ಪ್ರಸಂಗದಲ್ಲಿ ಒಂದು ಸ್ವತಂತ್ರ ಜಾನಪದ ಸಮ್ಮೇಲನ ನಡೆಯುತ್ತಿರುವುದು ಅತ್ಯಂತ ಸೂಕ್ತವೆನಿಸಿದೆ.

ಮಾನವ ಜನಾಂಗದ ಚರಿತ್ರೆ ರಾಜಸತ್ತೆಯಿಂದ ಪ್ರಾರಂಭವಾಗಿ ಈಗ ಪ್ರಚಾಸತ್ತೆಯವರೆಗೆ ಬಂದು ನಿಂತಿದೆ. ಹಿಂದೆ ರಾಜಮಹಾರಾಜರ ಚರಿತ್ರೆಗೆ ಸಾಹಿತ್ಯದಲ್ಲಿ ಅಗ್ರಸ್ಥಾನವಿತ್ತು. ಸಾಮಾನ್ಯ ಮಾನವನ ಚರಿತ್ರೆ ಅನಷಂಗಿಕವಾಗಿ ಬರಬಹುದಾಗಿದ್ದಿತು. ಶಿಷ್ಟ ಜೀವನವೇ ಶ್ರೇಷ್ಠ ಜೀವನವೆಂಬ ನಂಬುಗೆ ಆಗ ಪ್ರಬಲವಾಗಿದ್ದಿತು. ಶಿಷ್ಟ ಸಾಹಿತ್ಯ ಈ ನಂಬುಗೆಯಲ್ಲಿ ಇಂಬುವಡೆದಿದ್ದಿತು. ಈ ಶಿಷ್ಟ ಸಾಹಿತ್ಯ ಹೀಗೆ ಸೃಷ್ಟಿಗೊಂಡಿದ್ದರೂ ಶ್ರೀಸಾಮಾನ್ಯರಲ್ಲಿ ಶ್ರೇಷ್ಠ ಸಾಹಿತ್ಯ ಅಭಿವ್ಯಕ್ತಗೊಂಡುದುಂಟು. ಜನಸಾಮಾನ್ಯರ ನೋವು ನಲಿವು, ಸುಖ ದುಃಖ ಅವರ ನಿತ್ಯಜೀವನದ ಉಕ್ತಿಯಲ್ಲಿ ವ್ಯಕ್ತಗೊಂಡಿವೆ. ಜೀವನ ಸೌಂದರ್ಯಾನುಭೂತಿಯಲ್ಲಿ ಉದಯವಾದ ಈ ಸಹಜ ಸಾಹಿತ್ಯವೇ ಜಾನಪದ ಸಾಹಿತ್ಯ. ಈ ಜಾನಪದ ಸಾಹಿತ್ಯವನ್ನು ಪಂಡಿತ ಕವಿಗಳು ಗ್ರಾಮ್ಯವೆಂದು ಕಡೆಗಣಿಸಿದ್ದುಂಟು. ಮಧುರ ಕವಿಯ ಉಕ್ತಿ ಈ ಮಾತನ್ನು ಸ್ಪಷ್ಟಪಡಿಸುತ್ತದೆ.

“ಪಂಡಿತರುಂ ವಿವಿಧ ಕಲಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ಡುಂಡುಚಿಯೇ ಬೀದಿವರೆಯೆ ಬೀರನ ಕಥೆಯೇ”

ಬೀರರ ಕಥೆಗಳನ್ನು ಶಿಷ್ಟಪಂಡಿತರು ಹೀಗೆ ಹೀಗಳೆಯುತ್ತಿದ್ದರು. ಆದರೆ ಶಿಷ್ಟ ಸಾಹಿತ್ಯಕ್ಕೆ ಮೂಲ ಸೆಲೆಯೆಂದರೆ ಜಾನಪದ ಸಾಹಿತ್ಯ. ಇಷ್ಟೇ ಏಕೆ ಮಾರ್ಗಕ್ಕೆ ದೇಸಿಯೇ ಮೂಲ. ಮಾರ್ಗ ಸಂಗೀತದ ವಿವಿಧ ರಾಗಗಳ ಮೂಲವನ್ನು ದೇಸಿಯ ಹಾಡುಗಳಲ್ಲಿ ಕಾಣಬಹುದು. ಶಿಲ್ಪ, ಚಿತ್ರಕಲೆಗಳ ಮೂಲ ರೂಪಗಳನ್ನು ಆದಿಮಾನವನು ಗುಹೆಗಳಲ್ಲಿ ಲೇಖಿಸಿದ ವಿನ್ಯಾಸಗಳಲ್ಲಿ ಕಾಣಬಹುದು.

ನಮ್ಮ ಅನೇಕ ಮಹಾಕಾವ್ಯ ವಸ್ತುಗಳು ಜನತೆಯ ಬಾಯಿಂದ ಬಾಯಿಗೆ, ಕರ್ಣೋಪಕರ್ಣವಾಗಿ ಬಂದ ಕಥೆಗಳಾಗಿವೆ. ಇತಿಹಾಸವೆನಿಸಿದ ರಾಮಾಯಣ ಮಹಾಭಾರತಗಳು ಇದಕ್ಕೆ ನಿದರ್ಶನವೆನಿಸಿವೆ. ಅವು ಮೊದಲು ಜಾನಪದ ವಸ್ತುಗಳಾಗಿದ್ದವೆಂದು ಸಂಶೋಧಕರ ಮತ. ಮಹಾಕವಿಗಳು ಜಾನಪದ ವಸ್ತು, ಕಲ್ಪನೆ, ಭಾವನೆ, ಆಲೋಚನೆಗಳನ್ನೆತ್ತಿಕೊಂಡುದಕ್ಕೆ ವಿಫುಲ ನಿದರ್ಶನಗಳಿವೆ. ಪಂಪನು ವಿಕ್ರಮಾರ್ಜುನ ವಿಜಯದಲ್ಲಿ “ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೋಳ್ ಪುಗುವುದು, ಪೊಕ್ಕ ಮಾರ್ಗದೊಳೆ ತಳ್ವುದು, ತಳ್ತೊಡೆಕಾವ್ಯ ಬಂಧವೊಪ್ಪುಗುಂ.” ಎಂದು ಹೇಳಿದ್ದಾನೆ. ಕಾವ್ಯ ಮೊದಲು ದೇಸಿಯಲ್ಲಿ ಪೊಕ್ಕು, ಮಾರ್ಗದಲ್ಲಿ ಮುಂದುವರೆಯಬೇಕೆಂದು ಆತನ ಅಭಿಪ್ರಾಯ. ವಿಕ್ರಮಾರ್ಜುನ ವಿಜಯ ಈ ಸೂತ್ರಕ್ಕೆ ವ್ಯಾಖ್ಯಾನದಂತಿದೆ. ಇಲ್ಲಿಯ ಭಾವ-ಭಾಷೆಗಳಲ್ಲಿ ಜಾನಪದದ ಜೀವ ತುಂಬಿತುಳುಕುತ್ತದೆ. ಮುಂದೆ ಬಂದ ಬಸವಾದಿ ಪ್ರಂಥರಿಗೆ ಶ್ರೀಸಾಮಾನ್ಯವೇ ‘ಕೂಡಲಸಂಗಮನಾಥ’ ನೆನಿಸಿದನು. ಶಿವಶರಣರ ಜೀವನದ ಸಮಗ್ರ ಹೋರಾಟ ಆತನ ಮೃಣ್ಮಯ ಬದುಕನ್ನು ಚಿನ್ಮಯಗೊಳಿಸುವುದಕ್ಕಾಗಿ ನಡೆದಿದೆ. “ಅಪ್ಪನು ನಮ್ಮ ಮಾದರ ಚೆನ್ನಯ್ಯ. ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯ ನೆಮ್ಮಯ್ಯ ಕಾಣಿರೋ” ಎಂದು ಸಾರಿ ಸಮಾಜದ ಕೊನೆಯ ಸ್ತರದಲ್ಲಿದ್ದವರನ್ನು “ಹಿರಿಯ ಕುಲದ ಮಾಹೇಶ್ವರ”ರೆಂದು ಶಿರದ ಮೇಲಿಟ್ಟುಕೊಂಡರು – ಶಿವಶರಣರು. ಅದೊಂದು ಅದ್ಭುತ ಸಾಮಾಜಿಕ ಕ್ರಾಂತಿ. ಆ ಕ್ರಾಂತಿಯಲ್ಲಿ ಜಾನಪದ ಬದುಕು ಸಾಹಿತ್ಯದ ತುತ್ತ ತುದಿಗೇರಿತು. ವಚನ ಸಾಹಿತ್ಯದ ಮೂಲಪ್ರಣವ ಜಾನಪದದಲ್ಲಿದೆ. ಹರೀಶ್ವರ ರಾಘವಾಂಕರು ಈ ಕ್ರಾಂತಿಯನ್ನು ಮುಂದುವರಿಸಿ, ಮಹಾಕಾವ್ಯದ ಸೀಮೆಗೆ ತಂದರು. ಜಾನಪದ ಜೀವನಕ್ಕೆ, ಭಾವ-ಭಾಷೆಗಳಿಗೆ ಅವರು ಕಾವ್ಯದೀಕ್ಷೆಯಿತ್ತರು. ಹೀಗೆ ಶಿಷ್ಟ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ನೆಲೆಯಾಗಿದೆ; ಸೆಲೆಯಾಗಿದೆ.

ಜಾನಪದ ಕೇವಲ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿಲ್ಲ. ಅದು ಸಾಹಿತ್ಯದ ಎಲ್ಲೆಯನ್ನು ಮೀರಿ ‘ಅತ್ಯತಿಷ್ಠದ್ದಶಾಂಗುಲ’ವಾಗಿ ಚೆಲ್ಲುವರಿದಿದೆ. ಮಾನವ ವಿಜ್ಞಾನ ಮನೋವಿಜ್ಞಾನ ಮುಂತಾದ ಕ್ಷೇತ್ರಗಳನ್ನು ಅದು ಆವರಿಸಿ ನಿಂತಿದೆ.

ಜನಪದ, ಜನಪದ ಸಾಹಿತ್ಯ, ಜಾನಪದ ಎಂಬ ಪದಗಳು ಈಗ ಕನ್ನಡದಲ್ಲಿ Folk, Folk Literature, Folk lore ಎಂಬ ಮೂರು ಪದಗಳಿಗೆ ಸಂವಾದಿಯಾಗಿ ಬಳಕೆಯಲ್ಲಿವೆ. ವಿಚಾರಿಸಿ ನೋಡಿದರೆ ಜನಪದ, ಜಾನಪದ ಎಂಬ ಎರಡೂ ಪದಗಳಲ್ಲಿ ಅರ್ಥವ್ಯತ್ಯಾಸವಿಲ್ಲ. ಆದಿದೀಘ್ ಅಲ್ಲಿ ಅರ್ಥ ವ್ಯತ್ಯಾಸವನ್ನುಂಟು ಮಾಡಿಲ್ಲ; ಮಾಡಲಾರದು. ಸಂಸ್ಕೃತದಲ್ಲಿ ಇಂತಹ ಅನೇಕ ಪ್ರಯೋಗಗಳುಂಟು. ದ್ರವಿಡ-ದ್ರಾವಿಡ, ಧರಣಿ-ಧಾರಿಣಿ, ನರಕ-ನಾರಕ, ಪ್ರದೇಶ-ಪ್ರಾದೇಶ, ಪ್ರಪಂಚ-ಪ್ರಾಪಂಚ ಇಂತಹ ಪದ ಜೋಡುಗಳನ್ನು ನೋಡಬಹುದು. ಕನ್ನಡದಲ್ಲಿಯೂ ಮೇದರ ಕೇತಯ್ಯ – ಮೇದಾರ ಕೇತಯ್ಯ, ಮಾದರ ಚೆನ್ನಯ್ಯ – ಮಾದಾರ ಚೆನ್ನಯ್ಯ – ಇಂತಹ ಪ್ರಯೋಗಗಳಲ್ಲಿ ಅರ್ಥವ್ಯತ್ಯಾಸವೇನಿಲ್ಲ. ಹೀಗೆ ಜನಪ ಸಾಹಿತ್ಯ – ಜಾನಪದ ಸಾಹಿತ್ಯ ಎಂಬ ಪ್ರಯೋಗಗಳೆರಡೂ ಒಂದೇ ಅರ್ಥವನ್ನು ಕೊಡುತ್ತವೆ. ಆದುದರಿಂದ ‘ಜನಪದ’ವನ್ನು Folk ಕೈ, ಜಾನಪದವನ್ನು Folk-lore ಕ್ಕೆ ಸಂವಾದಿಯಾಗಿ ಬಳಸುವುದು ಸಮಂಜಸವಲ್ಲ. Folk-lore ಎಂದರೆ Land held by the rural people. Folke-lore ಎಂದರೆ Knowledge (Superstitions, beliefs, customs, Traditions) held by the rural people ಎಂಬರ್ಥವಿದೆ. Folk-lore ಎಂದರೆ The Lore that belongs to the Folk. ಆದುದರಿಂದ ಜನಪದ ಅಥವಾ ಜಾನಪದ ಶಬ್ದದ ವಿಶೇಷಣ ರೂಪದಿಂದ ಈ ಅರ್ಥವನ್ನು ಸಾಧಿಸಿಕೊಳ್ಳುವುದು ಶಾಸ್ತ್ರ ಸಮ್ಮತ. ಕಾರನ ಜನಪದೀಯ ಅಥವಾ ಜಾನಪದೀಯ ಎಂಬ ಪದ Folk-Lore  ಎಂಬುದಕ್ಕೆ ಸರಿಯಾದ ಸಂವಾದಿಯಾಗಬಲ್ಲದು.

ಜಾನಪದೀಯ ಸಂಶೋಧನೆ ಸಂಗ್ರಹಣೆಗೆ ಮಾತ್ರ ಸೀಮಿತವಾಗಿರದ ವಿಶ್ಲೇಷಣೆ, ವ್ಯಾಖ್ಯಾನಗಳನ್ನೊಳಗೊಂಡಿರಬೇಕು. ಜಾನಪದೀಯ ಶಿಷ್ಟರೂಪ ಪಡೆದ ಪರಿಯನ್ನು ಬರೆದು ನೋಡಬೇಕಾಗುತ್ತದೆ. ಜತ್ತಿನ ವಿವಿಧ ಭಾಗಗಳಲ್ಲಿ ವೈವಿಧ್ಯಪೂರ್ಣವಾಗಿ ಕಂಡುಬರುವ ಜಾನಪದ ಆಣಿಮುತ್ತುಗಳು ಒಂದೇ ಸೂತ್ರದ ಮಣಿಮಾಲೆಯಾಗಿರುವುದನ್ನು ಕಾಣಬಹುದು. ಅಲ್ಲಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಸತ್ವದಲ್ಲಿ ಒಂದೇ ಆಗಿರುವುದನ್ನು ಅರಿತುಕೊಳ್ಳಬಹುದು. ಆ ಒಂದು ಯಾವುದು? ಎಲ್ಲಿಂದ ಪ್ರವಹಿಸಿತು? ಹೇಗೆ ವ್ಯತ್ಯಾಸವಾಯಿತು? ಎಂಬುದನ್ನು ತಿಳಿದುಕೊಳ್ಳುವುದೇ ಜಾನಪದೀಯಲ್ಲಿ ಮುಖ್ಯ ಅಭ್ಯಾಸ. ಒಂದು ಭಾಷೆ ಕಾಲಾಂತರದಲ್ಲಿ ಹೆಚ್ಚು ಪ್ರದೇಶಗಳನ್ನು ವ್ಯಾಪಿಸುತ್ತ ವಿವಿಧ ರೂಪಗಳನ್ನು ಪಡೆಯುತ್ತದೆ. ಹಾಗೆಯೇ ಮೂಲತಃ ಮಾನವನ ವಿಚಾರಗಳು ಒಂದೆಡೆ ಒಂದು ರೂಪದಲ್ಲಿ ಮೈದೋರಿ, ನೀರ ಮೇಗಣ ಎಣ್ಣೆಯಂತೆ ಅವು ಸುತ್ತೆಲ್ಲ ಕ್ಷಿಪ್ರದಲ್ಲಿಯೇ ಪಸರಿಸುವುವು. ವ್ಯವಹಾರ, ರಾಜಕೀಯ, ಪ್ರವಾಸ ಮುಂತಾದವುಗಳಿಗಾಗಿ ಜನ ಸುತ್ತೆಲ್ಲ ಸಂಚರಿಸುತ್ತಿರುತ್ತಾರೆ. ಅವರು ಕಣ್ಣಾರೆ ಕಂಡ, ಕೆ. ವಿಯಾರೆ ಕೇಳಿದ, ಮನಸಾರೆ ನಂಬಿದ ಕೆಲವು ವಸ್ತು, ವಿಚಾರಗಳು ವ್ಯಕ್ತವಾಗಿಯೂ ಅವ್ಯಕ್ತವಾಗಿಯೂ ಅವರೊಡನೆ ಸಂಚರಿಸುತ್ತವೆ; ಅಲ್ಲಲ್ಲಿಯ ಪರಿಸರಕ್ಕೆ ತಕ್ಕಂತೆ ವ್ಯತ್ಯಸ್ತವಾಗುತ್ತವೆ. ಹೀಗೆ ಸಾಂಸ್ಕೃತಿಕ ಪ್ರಸರಣ (cultural diffusion) ನಿರಂತರ ನಡೆದಿರುತ್ತದೆ. ಜಾನಪದೀಯ ಅಧ್ಯಯನವೆಂದರೆ ಈ ಪ್ರವಾಹಗಳಲ್ಲಿ ಈಜಿ, ಮುಳುಗಿ ಆಳದಲ್ಲಿದ್ದ ಸಂಸ್ಕೃತಿಯ ಪಳೆಯುಳಿಕೆಗಳನ್ನು ಮೇಲೆತ್ತಿ ತರುವುದು; ಮೂಲ ಮಾತೃಕೆಯನ್ನು ಪರಿಶೋಧಿಸಿ ಕಂಡುಹಿಡಿಯುವುದು. ‘The many change and one remains’ ಎಂದು ಹೇಳುವುದುಂಟು. ಬಹುತ್ವವು ಪರಿವರ್ತನೆ ಹೊಂದಿ ಏಕತ್ವವಾಗುತ್ತದೆ. ಏಕೆಂದರೆ ಒಂದು ಹಲವಾಗಿದೆ. ಒಂದು ಹಲವಾದ ಬಗೆಯನ್ನು, ಹಲವು ಒಂದಾದ ರೀತಿಯನ್ನು ‘ಕಂಡು ಹಿಡಿಯಬೇಕು. ಹಲವನ್ನು ಮಥಿಸಿ, ಅವುಗಳಲ್ಲಿ ಹುದುಗಿದ್ದ ಒಂದನ್ನು ನಿಷ್ಕರ್ಷಿಸಬೇಕಾಗುತ್ತದೆ. ಈ ಕಾರ್ಯಕ್ಕೆ ಪ್ರಪತ್ತಿ, ವ್ಯವಧಾನ, ವಿವೇಚನಶಕ್ತಿ, ವಿಮರ್ಶ ನಶಕ್ತಿ ಅತ್ಯಾವಶ್ಯಕ. ಜಾನಪದೀಯವು ವ್ಯಾಪಿಸಿದ ವಿವಿಧ ಕ್ಷೇತ್ರಗಳ ಪರಿಜ್ಞಾನವೂ ಇದಕ್ಕೆ ಅವಶ್ಯ.

ಪ್ರಾಕೃತಿಕ ಘಟನೆಗಳು ಜಾನಪದೀಯದಲ್ಲಿ ಬಗೆಬಗೆಯ ಬಣ್ಣ ತಳೆಯುತ್ತವೆ. ಗ್ರಹಣ ಒಂದು ಪ್ರಾಕೃತಿಕ ಘಟನೆ. ಪೃಥ್ವಿ ತನ್ನ ಅಕ್ಷದ ಸುತ್ತು ತಾನು ತಿರುಗುತ್ತ ಸೂರ್ಯನ ಸುತ್ತು ಪ್ರದಕ್ಷಿಣೆ ಹಾಕುವಾಗ, ಚಂದ್ರ ಪೃಥ್ವಿಯ ಸುತ್ತ ತಿರುಗುತ್ತಿರುವಾಗ ಸೂರ್ಯ, ಚಂದ್ರ, ಪೃಥ್ವಿ, ಇವು ಮೂರೂ ಒಂದೇ ರೇಖೆಯಲ್ಲಿ ಬಂದಾಗ ಒಂದರ ಛಾಯೆ ಇನ್ನೊಂದರ ಮೇಲೆ ಬಿದ್ದು ಗ್ರಹಣವಾಗುತ್ತದೆಯೆಂಬುದು  – ವೈಜ್ಞಾನಿಕ ವಿಚಾರ. ಈ ಪ್ರಾಕೃತಿಕ ಘಟನೆ ವಿವಿಧ ಸಂಸ್ಕೃತಿಗಳಲ್ಲಿ ಬಗೆಬಗೆಯ ಕಲ್ಪನೆ ನಂಬುಗೆಗಳಿಗೆ ಇಂಬುಕೊಟ್ಟಿದೆ.

ಗ್ರಹಣ ಸಮಯದಲ್ಲಿ ಸೂರ್ಯ-ಚಂದ್ರರನ್ನು ಬೇರೊಂದು ನುಂಗುತ್ತದೆಯೆಂಬುದು ಪ್ರಾಚೀನ ಜಗತ್ತಿನ ಸರ್ವಸಾಮಾನ್ಯ ಕಲ್ಪನೆಯಾಗಿದ್ದಿತು. ಆ ಬೇರೊಂದು ರಾಹುಕೇತುವೆಂದು ಭಾರತೀಯರು ನಂಬಿದರೆ; ಅದು ಡ್ರೇಗನ್ ಸರ್ಪವೆಂದು ಚೀನಿಯರ ಭಾವನೆಯಾಗಿದ್ದಿತು. ಉತ್ತರ ಭಾರತದ ಗಾರೊ ಎಂಬ ಜನಾಂಗ ಗ್ರಹಣ ಕಾಲದಲ್ಲಿ ಸೂರ್ಯ-ಚಂದ್ರರನ್ನು ಒಬ್ಬ ರಾಕ್ಷಸನು ನುಂಗುವನೆಂದು ನಂಬುತ್ತಾರೆ. ಈಸ್ಟ್-ಇಂಡಿಯನ್ನರೂ ರಾಕ್ಷಸನೆಂದೇ ತಿಳಿಯುತ್ತಾರೆ. ಪೇರು ದೇಶದ ಸೆನ್ಸಿ ಜನಾಂಗ ಸೂರ್ಯ-ಚಂದ್ರರನ್ನು ಹಿಡಿಯುವ ವಸ್ತು ರಾಕ್ಷಸನೆಂದು ಹೇಳುತ್ತಾರೆ. ನೀಲಗಿರಿಯ ತೋಡರೂ, ಡಕೋಟಾ ಜನರೂ ಅದು ಸರ್ಪವೆಂದೇ  ನಂಬುತ್ತಾರೆ. ರೆಡ್ ಇಂಡಿಯನ್ ಜನಾಂಗ ಯಾರೋ ಬಂದು ಗ್ರಹಣ ಕಾಲದಲ್ಲಿ ಸೂರ್ಯ-ಚಂದ್ರರನ್ನು ಮುತ್ತುತ್ತಾರೆಂದು ತಿಳಿದರೆ, ಸ್ಕ್ಯಾಂಡಿನೆವಿಯನ್ನರು ಎರಡು ತೋಳಗಳು ಬಂದು ಗ್ರಹಣ ಕಾಲದಲ್ಲಿ ಸೂರ್ಯ-ಚಂದ್ರರನ್ನು ನುಂಗುತ್ತವೆಯೆಂದು ಭಾವಿಸುತ್ತಾರೆ. ಗಿರ‍್ಹಾ ಎಂಬ ದೇವತೆ ಸೂರ್ಯ-ಚಂದ್ರರನ್ನು ನುಂಗುತ್ತದೆಯೆಂದು ಕೊಂಕಣದಲ್ಲಿ ಸಾಮಾನ್ಯ ತಿಳಿವಳಿಕೆ.

ಈ ಗ್ರಹಣಗಳಿಂದ ಅನಿಷ್ಟಗಳು ಪ್ರಾಪ್ತವಾಗುತ್ತವೆಯೆಂದು ಅನೇಕ ಜನಾಂಗಗಳ ಕಲ್ಪನೆ. ಗ್ರಹಣಗಳು ಅಶುಭ ಸೂಚಕ ಎಂದು ಮೆಸೊಪೊಟೋಮಿಯಾ ಜನಾಂಗದವರು ತಿಳಿದಿದ್ದರು. ದೈವಾಜ್ಞೆಯ ಉಲ್ಲಂಘನೆಯಿಂದ ಗ್ರಹಣ ಪ್ರಾಪ್ತವಾಗಿ ಅನಿಷ್ಟ ಉಂಟಾಗುತ್ತದೆಯೆಂದು ಚೀನಿಯರು ಬಗೆದಿದ್ದರು. ಸೂರ್ಯ-ಚಂದ್ರರನ್ನು ನುಂಗಲು ಬಂದ ಕೇತು ರೋಗರುಜಿನಗಳನ್ನು ತರುತ್ತದೆಯೆಂದು ಆ ಜನ ತಿಳಿದಿದ್ದರು. ಟ್ಲಂಗಿಚ್ ಎಂಬ ಜನಾಂಗವೂ ಹೀಗೆಯೇ ಭಾವಿಸಿದ್ದಿತು. ಎಸ್ಕಿಮೊ ಜನರು ಗ್ರಹಣ ಕಾಲದಲ್ಲಿ ಅನಿಷ್ಟ ಬಂದು ಪ್ರವೇಶಿಸುತ್ತದೆಯೆಂದು ತಿಳಿಯುತ್ತಾರೆ. ೧೮ನೆಯ ಶತಮಾನದಲ್ಲಿ ಇಂಗ್ಲೆಂಡ್‌ದ ಜನ ಗ್ರಹಣ ಕಾಲದಲ್ಲಿ ವಿಷವಾಯು ಬೀಸುತ್ತದೆ ಎಂದು ಬಗೆದಿದ್ದರು. ಗ್ರಹಣಗಳಿಂದ ವಿಪತ್ತು ಗಂಡಾಂತರಗಳು ಪ್ರಾಪ್ತವಾಗುತ್ತವೆಯೆಂದು ಸಿಂಹಳೀಯರ ನಂಬುಗೆ. ದೈವೀ ಕೋಪದಿಂದ ಅನೇಕ ವಿಪತ್ತುಗಳು ಪ್ರಾಪ್ತವಾಗುತ್ತವೆಯೆಂದು ಭಾರತೀಯರ ನಂಬುಗೆ.

ಗ್ರಹಣ ಸಮಯದಲ್ಲಿ ಸೂರ್ಯ-ಚಂದ್ರರನ್ನು ಆ ವಿಪತ್ತಿನಿಂದ ಪಾರು ಮಾಡಲು ಈ ಜನಾಂಗಗಳು ಬೇರೆಬೇರೆ ಕ್ರಿಯೆಗಳನ್ನೆಸಗುತ್ತಾರೆ. ಸ್ಕ್ಯಾಂಡಿನೇವಿಯನ್‌ರು ತೋಳಗಳಿಂದ ಸೂರ್ಯ-ಚಂದ್ರರನ್ನು ಬಿಡಿಸಲೋಸುಗ ಡಬ್ಬಿಗಳನ್ನು ಬಡಿದು, ಕೋಲುಗಳನ್ನು ಬೀಸಿ ಗದ್ದಲ ಮಾಡುತ್ತಾರೆ. ಅದರಿಂದ ತೋಳಗಳು ಓಡಿಹೋಗಿ ಸೂರ್ಯ-ಚಂದ್ರರು ಪಾರಾಗುತ್ತಾರೆಂದು ಅವರ ತಿಳಿವಳಿಕೆ. ಉತ್ತರ ಅಮೇರಿಕೆಯ ರೆಡ್ ಇಂಡಿಯನ್ ಜನರು ಬಾಣಗಳ ತುದಿಗೆ ಉರಿಹಚ್ಚಿ ಆಕಾಶಕ್ಕೆ ಬಿಡುತ್ತಾರೆ; ನಾಯಿಯ ಬಾಲ ಮುರಿದು ಗದ್ದಲ ಮಾಡುತ್ತಾರೆ. ಪೇರುವಿನ ಪೆನ್ಸಿಗಳೂ ಉರಿಯುವ ಬಾಣಗಳನ್ನು ಆಕಾಶಕ್ಕೆ ಬಿಡುತ್ತಾರೆ. ನೀಲಗಿರಿಯ ತೋಡರು ಆಕಾಶಕ್ಕೆ ಗುಂಡು ಹಾರಿಸುತ್ತಾರೆ; ಬಾಣ ಬಿಡುತ್ತಾರೆ. ಉತ್ತರ ಭಾರತದ ಗಾರೊ ಜನಾಂಗ ಕೊಂಬು ಕಹಳೆ ಊದಿ, ತಮಟೆ-ನಗಾರಿ ಬಡಿದು ರಾಕ್ಷಸರನ್ನು ಹೊಡೆದೋಡಿಸಲು ಯತ್ನಿಸುತ್ತಾರೆ. ಭೂತಿಜನ ಗುಂಡು ಹಾರಿಸುತ್ತಾರೆ.

ತಮಗೆ ಬರಬಹುದಾದ ಅನಿಷ್ಟಗಳನ್ನು ತಡೆಗಟ್ಟಲು ಜನಾಂಗಗಳು ಬೇರೆ ಬೇರೆ ಉಪಾಯಗಳನ್ನು ಕೈಕೊಳ್ಳುತ್ತವೆ. ಕೊಂಕಣಿಗರು ಚಂದ್ರಗ್ರಹಣದಂದು ರಾಹುವನ್ನೂ ಸೂರ್ಯಗ್ರಹಣದಂದು ಕೇತುವನ್ನೂ ಪೂಜಿಸುತ್ತಾರೆ. ಎಸ್ಕಿಮೊ ಜನ ಗ್ರಹಣ ಸಮಯದಲ್ಲಿ ಅನಿಷ್ಟ ಅನಾಹುತ ಬಾರದಿರಲೆಂದು ಮನೆಯೊಳಗಿನ ಪಾತ್ರೆಗಳನ್ನು ಡಬ್ಬ ಹಾಕುತ್ತಾರೆ. ೧೮ನೆಯ ಶತಮಾನದ ಒಬ್ಬ ಆಂಗ್ಲ ವೈದ್ಯ, ಗ್ರಹಣ ಕಾಲದಲ್ಲಿ ವಿಷಯವಾಯು ಸೇರದಿರಲೆಂದು ಊರೊಳಗಿನ ಬಾವಿಗಳನ್ನು ಹಲಗೆಗಳಿಂದ ಮುಚ್ಚಿಸಿದನು. ಟ್ಲಂಗಿಚ್ ಜನ ಉಸಿರು ಊದಿ ಅನಿಷ್ಟವನ್ನು ನಿವಾರಿಸುತ್ತಿದ್ದರು. ಶಾಂತಿ ಪೂಜೆ ಹವನಗಳನ್ನು ಭಾರತೀಯರು ಮಾಡುತ್ತಾರೆ.

ಗ್ರಹಣದಂತಹ ಒಂದು ಪ್ರಾಕೃತಿಕ ಘಟನೆ ಎಂತಹ ಪ್ರತಿಕಿರಯೆ ಪಡೆದಿದೆಯೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಈ ವಿವಿಧ ಪ್ರತಿಕ್ರಿಯೆಗಳಲ್ಲಿ ಏಕಸೂತ್ರತೆಯಿರುವುದು ಸ್ಪಷ್ಟವಿದೆ. ಮಾನವ ಜನಾಂಗದ ಮಾನಸಿಕ, ಸಾಂಸ್ಕೃತಿಕ ಚರಿತ್ರೆಗಳ ಆಧಾರದಿಂದ ಈ ಸಾಂಸ್ಕೃತಿಕ ಪ್ರಸರಣ ಕಾರ್ಯದ ಕ್ರಮವನ್ನು ನಿರ್ಧರಿಸಬಹುದು.

ಈ ಹಿನ್ನೆಲೆಯಲ್ಲಿ ನಮ್ಮ ಜಾನಪದೀಯ ಕ್ಷೇತ್ರದಲ್ಲಿ ಇದುವರೆಗೆ ನಡೆದ ಕಾರ್ಯವನ್ನು ಸಮೀಕ್ಷಿಸಬೇಕಾಗುತ್ತದೆ. ಇಂದಿನ ವೈಜ್ಞಾನಿಕಯುಗದಲ್ಲಿ ವಿಜ್ಞಾನದ ಗಂಡುದಾಳಿ ಎಲ್ಲಡೆ ರಭಸದಿಂದ ಬೀಸುತ್ತದೆ. ಆ ಗಂಡುದಾಳಿಗೆ ಪಂಚಮಹಾಭೂತಗಳೂ ತಲ್ಲಣಗೊಂಡು ತಲೆವಾಗಿನಿಂತಿವೆ. ನಗರೀಕರಣ (Urbanisation) ವಿಲಕ್ಷಣ ಗತಿಯಿಂದ ಮುನ್ನಡೆದಿದೆ. ಹಳ್ಳಿಪಳ್ಳಿಗಳೆಲ್ಲ ಹಾಳಾಗಿ ನಗರಗಳು ಬೆಳೆಯತೊಡಗಿವೆ. ಹಲವೆಡೆ ಹಳ್ಳಿಗಳು ನಗರಗಳಾಗಿ ಮಾರ್ಪಡುವ ಹಾದಿಯಲ್ಲಿವೆ. ಹಿಂದೆ ನಮ್ಮ ಹಳ್ಳಿಗಳಲ್ಲಿ ಕಾಣುತ್ತಿದ್ದ ಬಯಲಾಟ, ಜಾನಪದ ಹಾಡುಗಳು, ಸಾಂಪ್ರದಾಯಿಕ ಪದಗಳು, ವಿವಿಧ ಸಾಂಸ್ಕೃತಿಕ ಕಲೆಗಳು ಕಾಣದಾಗಿವೆ. ಬಯಲಾಟಗಳ ಸ್ಥಾನವನ್ನು ಚಲನಚಿತ್ರ, ನಾಟಕಗಳು ಆಕ್ರಮಿಸತೊಡಗಿವೆ. ಮದುವೆ, ಮುಂಜಿವೆ ಮೊದಲಾದ ಸಂದರ್ಭಗಳಲ್ಲಿ ಕೇಳುತ್ತಿದ್ದ ಹಾಡುಗಳು ಇಂದು ಕಿವಿಮರೆಯಾಗಿವೆ. ಇದು ನಾಗರೀಕರಣದ ಒಂದು ಪರಿಣಾಮವೆಂದು ಹೇಳಬೇಕು. ಅನಾದಿಕಾಲದಿಂದ, ಜನಾಂಗ ಜನಾಂಗಗಳಿಂದ ಅನುಸ್ಯೂತವಾಗಿ ಹರಿದುಬಂದ ಸಾಂಸ್ಕೃತಿಕ ಪರಂಪರೆಗೆ ಅನರ್ಥವುಂಟಾಗುತ್ತದೆ. ಮಾನವರು ವಿಕಾಸಶೀಲ. ಮಾನವ ಜನಾಂಗ ವಿಕಾಸಹೊಂದಲೇಬೇಕು. ವಿಕಾಸಹೊಂದುತ್ತ ನಡೆದಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಅವನೊಡನೆ ನಿರಂತರ ಹರಿದು ಬಂದ ಸಾಂಸ್ಕೃತಿಕ ಪ್ರವಾಹ ಹರಿಗಡೆಯಬಾರದು, ಅದಕ್ಕೆ ತಡೆಯುಂಟಾಗಬಾರದು. ವಿಕಾಸವಾಗುವ ಮಾನವನೊಡನೆ ಅವೂ ವಿಕಾಸಹೊಂದಿದರೆ ಯಾವ ಅಭ್ಯಂತರವೂ ಇಲ್ಲ. ಆದರೆ ಅವುಗಳನ್ನು ಹೊರತಳ್ಳಿ, ಮತ್ತೊಂದು ಅವುಗಳ ಸ್ಥಾನವನ್ನು ಆಕ್ರಮಿಸಿ ನಿಂತರೆ ಮೂಲಸಂಸ್ಕೃತಿಯ ಅವಶೇಷ ವಿನಾಶವಾಗುತ್ತದೆ. ಪ್ರಾಚೀನ ಸಂಸ್ಕೃತಿ ಅರ್ವಾಚೀನದದಲ್ಲಿ ಮೈದೋರುವುದಕ್ಕೆ ಪ್ರತಿಯಾಗಿ ಅದು ನಾಶವಾಗುತ್ತಿರುವುದನ್ನು ಅಭ್ಯಸಿಸಲೆಂದೇ ಜಾನಪದೀಯ ಅಧ್ಯಯನ ಪ್ರಾರಂಭವಾಯಿತು. ಮೊದಮೊದಲು ವಿಶ್ವವಿದ್ಯಾಲಯದ ಹೊರಗಡೆಗೆ ಹಲವಾರು ವ್ಯಕ್ತಿಗಳಿಂದ ನಡೆದುಬಂದ ಈ ಕಾರ್ಯ ಅತ್ಯಂತ ಸ್ತುತ್ಯವಾಗಿದ್ದಿತು. ಉತ್ತರ ಕರ್ನಾಟಕದಲ್ಲಿ ಮಧುರ ಚೆನ್ನರ ನೇತೃತ್ವದಲ್ಲಿ ಪಡೆದ ಹಲಸಂಗಿ ಗೆಳೆಯರ ಗುಂಪು ಜಾನಪದ ಸಾಹಿತ್ಯಕ್ಷೇತ್ರದಲ್ಲಿ ಸಂಸ್ಮರಣೀಯ ಕಾರ್ಯವನ್ನೆಸಗಿದೆ. ಅವರು ಸಂಗ್ರಹಿಸಿ ಪ್ರಕಟಿಸಿದ ‘ಗರತಿಯ ಹಾಡು’ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಮಾರುಹೋದ ನಮ್ಮ ಹಿರಿಯ ಕವಿ ದ.ರಾ.ಬೇಂದ್ರ ಜಾನಪದವನ್ನು ಮಹಾಕಾವ್ಯದ ಎತ್ತರದಲ್ಲಿ ತಂದು ನಿಲ್ಲಿಸಿದುದು ಅದ್ಭುತ ಘಟನೆ. ಪದ್ಯದಲ್ಲಿ ಬೇಂದ್ರೆ ನಡೆದ ಹಾದಿಯನ್ನು ಗದ್ಯದಲ್ಲಿ ಗೊರೂರು ರಾಮಸ್ವಾಮಿ ತುಳಿದಿದ್ದಾರೆ. ಇದಲ್ಲದೆ ಪ್ರತ್ಯಕ್ಷ ಜನಪದ ಸಾಹಿತ್ಯ ಸಂಗ್ರಹ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಕಳೆದ ಎರಡು ದಶಕಗಳಲ್ಲಿ ಅನೇಕ ಸಂಸ್ಥೆಗಳು, ವ್ಯಕ್ತಿಗಳು ಕಾರ್ಯವನ್ನೆಸಗಿದ್ದಾರೆ. ಡಾ|| ಬಿ.ಎಸ್. ಗದ್ದಿಗಿಮಠ, ಡಾ|| ಎಂ.ಎಸ್. ಸುಂಕಾಪುರ, ಡಾ|| ಎಲ್.ಆರ್. ಹೆಗಡೆ, ಡಾ|| ಜೀ. ಶಂ. ಪರಮ ಶಿವಯ್ಯ, ಶ್ರೀಮತಿ ಘಟ್ಟ, ಕೃಷ್ಣಮೂರ್ತಿ, ಡಾ| ಎನ್.ಆರ್. ನಾಯಕ, ಡಾ|| ಎಚ್.ಎಲ್. ನಾಗೇಗೌಡ, ಡಾ|| ಎಸ್.ಜಿ. ಇಮ್ರಾಪುರ, ಡಾ|| ಎಂ.ಎಸ್. ಲಠ್ಠೆ, ಡಾ|| ಡಿ.ಎಸ್. ಹಕಾರಿ, ಡಾ|| ಬಸವರಾಜ ಮಲಶೆಟ್ಟಿ, ಶ್ರೀರಾಮ ಇಟ್ಟಣ್ಣವರ ಮುಂತಾದವರ ಹೆಸರುಗಳನ್ನು ಇಲ್ಲಿ ಹೇಳಬಹುದು. ಇವರ ತಂಡ ಇನ್ನೂ ಬೆಳೆದು ಜಾನಪದೀಯ ಸಂಶೋಧನೆ ವ್ಯಾಪಕವಾಗಿ ನಡೆಯಬೇಕು. ಈ ಉದ್ದೇಶದಿಂದಲೇ ಜಾನಪದ ಅಧ್ಯಯನವನ್ನು ವಿಶ್ವವಿದ್ಯಾಲಯದ ಮಟ್ಟಕ್ಕೆ ತರಲಾಗಿದೆ. ಶಿಷ್ಟಸಾಹಿತ್ಯದೊಡನೆ ಜನಪದ ಸಾಹಿತ್ಯದ ಅಧ್ಯಯನವೂ ನಡೆಯಬೇಕು. ಜನಪದದ ಆಚಾರ ವಿಚಾರಗಳನ್ನು ಸಂಗ್ರಹಿಸಿ, ಮಥಿಸಿ ಅದರ ನಿಜಸ್ವರೂಪವನ್ನು ಕಾಣುವ ಉದ್ದೇಶದಿಂದ ಈ ಅಧ್ಯಯನವನ್ನು ಪ್ರಾರಂಭಿಸಲಾಗಿದೆ. ಒಂದೆರಡು ದಶಕಗಳಲ್ಲಿ ಸಂಗ್ರಹಕಾರ್ಯ ತೃಪ್ತಿಕರವಾಗಿ ಸಾಗಿದೆ. ವಿಚಾರಮಥನ, ತೌಲನಿಕ ಅಧ್ಯಯನ ಆಳ ಅಗಲದಲ್ಲಿ ಹೆಚ್ಚಾಗಿ ನಡೆಯಬೇಕು. ಅದರಿಂದ ಜಾನಪದ ಅಧ್ಯಯನಕ್ಕೆ ಹೆಚ್ಚು ಕೆಚ್ಚು ಬರುತ್ತದೆ.

ಈ ಮಹತ್ಕಾರ್ಯವನ್ನು ವರುವರುಷ ವೀಕ್ಷಿಸಿ, ವಿಚಾರ ಒರಗಲ್ಲಿಗೆ ಹೆಚ್ಚುವ ಉದ್ದೇಶದಿಂದ ಕರ್ನಾಟಕ ವಿಶ್ವವಿದ್ಯಲಯದಲ್ಲಿ ಈ ಜಾನಪದ ಸಮ್ಮೇಲನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಲನಗಳಲ್ಲಿ ಒಂದೆಡೆ ವಿಚಾರ ವಿಮರ್ಶೆಗಳ ಸಂಕಿರಣ ನಡೆದರೆ, ಮತ್ತೊಂದೆಡೆ ಜಾನಪದ ರಂಗದರ್ಶನ ನಡೆಯುತ್ತದೆ. ಅಳಿದು ಹೋಗುತ್ತಿರುವ ಕಲೆಗಳಿಗೆ ವಿಶ್ವವಿದ್ಯಾಲಯ ಜೀವಕಳೆಯನ್ನೀಯುತ್ತಿದೆ. ತೊಗಲು ಗೊಂಬೆಯ ಆಟ ನಮ್ಮ ರಂಗಭೂಮಿಯ ಮೂಲಮಾತೃಕೆ. ಆ ಕಲಾವಿದರು ಇಂದು ಬಹು ವಿರಳವಾಗಿ ಕಾಣುತ್ತಾರೆ. ಇದನ್ನು ಗಮನಿಸಿ ಈ ವರ್ಷ ಕನ್ನಡ ಅಧ್ಯಯನ ಪೀಠ, ಈ ಕಲೆಯ ಪ್ರಾಯೋಗಿಕ ಅಭ್ಯಾಸ ನಡೆಸಿದುದು ತೀರ ಸ್ತುತ್ಯ. ಇಂತಹ ಉಪಯುಕ್ತ ಕಾರ್ಯವನ್ನೆಸಗುತ್ತ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಕಳೆದ ೧೨ ವರ್ಷಗಳಿಂದ ಜಾನಪದ ಸಮ್ಮೇಲನಗಳನ್ನು ನಡೆಸುತ್ತ ಬಂದಿದೆ. ಪ್ರತಿವರ್ಷ ನಾಡಿನ ನಾನಾ ಭಾಗದಿಂದ ಬಂದ ಜಾನಪದೀಯ ವಿದ್ವಾಂಸರು ವಿಚಾರಪೂರಿತ ಪ್ರಬಂಧಗಳನ್ನು ಮಂಡಿಸಿ, ಚರ್ಚಿಸುತ್ತಾರೆ. ಮುಂದೆ ಆ ಪ್ರಬಂಧಗಳು ಗ್ರಂಥರೂಪದಲ್ಲಿ ಹೊರಹೊಮ್ಮುತ್ತವೆ. ಈಗಾಗಲೇ ಆ ಮಾಲೆಯಲ್ಲಿ ಹತ್ತೆಂಟು ಗ್ರಂಥಗಳು ಪ್ರಕಟವಾಗಿ ಜಾನಪದೀಯ ಕ್ಷೇತ್ರದಲ್ಲಿ ಮೈಲುಗಲ್ಲಾಗಿ ನಿಂತಿವೆ. ರಂಗದರ್ಶನಕ್ಕಾಗಿ ಕನ್ನಡನಾಡಿನ ಮೂಲೆಮೂಲೆಗಳಿಂದ ಜಾನಪದ ಕಲಾವಿದರನ್ನು ಕರೆಯಿಸಿ, ಅವರ ಕಲೆಗಳ ಪ್ರದರ್ಶನವನ್ನೇರ್ಪಡಿಸಲಾಗಿದೆ. ಈ ಮಹತ್ಕಾರ್ಯಕ್ಕೆ ಪ್ರೋತ್ಸಾಹವಿತ್ತ ಕರ್ನಾಟಕ ವಿಶ್ವ ವಿದ್ಯಾಲಯವನ್ನೂ ಅದನ್ನು ನಡೆಸಿಕೊಂಡು ಬಂದ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ವೃಂದವನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಇಲ್ಲಿಯವರೆಗೆ ಈ ಪರಂಪರೆಯ ಮುನ್ನಡೆಗೆ ಧನಸಹಾಯನೀಡಿ, ಪ್ರೋತ್ಸಾಹವಿತ್ತ ಅಂದಿನಿಂದ ಇಂದಿನವರೆಗಿನ ಎಲ್ಲ ಕುಲಪತಿಗಳನ್ನೂ, ಸಿಂಡಿಕೇಟ್ ಸದಸ್ಯರನ್ನೂ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಇನ್ನು ಮುಂದೆಯೂ ಈ ಸಮ್ಮೇಲನಗಳು ನಿಲ್ಲದೆ ಮುನ್ನಡೆದುಕೊಂಡು ಹೋಗುವಂತೆ ಧನಸಹಾಯ ನೀಡಬೇಕೆಮದು ಪ್ರಾರ್ಥಿಸುತ್ತೇನೆ. ಇನ್ನು ಮುಂದೆ ಈ ಸಮ್ಮೇಲನಗಳ ನಿರ್ವಹಣೆಗೆ ೫೦ ಸಹಸ್ರ ರೂಪಾಯಿಗಳಷ್ಟಾದರೂ ಹಣ ಬೇಕಾಗುವುದು. ವಿಚಾರ ಸಂಕಿರಣಕ್ಕೆ ಯು.ಜಿ.ಸಿ. ಇಲ್ಲವೆ ಐ.ಸಿ.ಎಸ್.ಎಸ್.ಆರ್. ಇವುಗಳನ್ನು ಕೇಳಿಕೊಳ್ಳಬೇಕು. ರಾಜ್ಯ ಸರಕಾರಕ್ಕೆ ಈ ಹಣವನ್ನು ವಿಶೇಷ ಅನುದಾನವಾಗಿ ಕೊಡಬೇಕೆಂದು ಒತ್ತಾಯಿಸಬೇಕು. ಇವು ಸಫಲವಾದರೆ ಸಿರ; ಇಲ್ಲವಾದರೆ ಇದುವರೆಗೆ ಉದಾರಭಾವನೆಯನ್ನು ತೋರಿದ ವಿಶ್ವವಿದ್ಯಾಲಯ ತನ್ನ ಔದಾರ್ಯವನ್ನು ಮುಂದುವರಿಸಿ ಈ ಧನಸಹಾಯವನ್ನು ನೀಡಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ಕಳೆದ ಒಂದೆರಡು ವರ್ಷಗಳಿಂದ ಈ ಜಾನಪದ ಸಮ್ಮೇಲನ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ನಡೆದಿರುವುದು ಸ್ತುತ್ಯಾರ್ಹ. ಕಳೆದ ವರ್ಷ ಸವದತ್ತಿಯಲ್ಲಿ ದೇವದಾಸಿ ಪದ್ಧತಿಯನ್ನು ಕುರಿತು ಏರ್ಪಡಿಸಿದ ವಿಚಾರ ಸಂಕಿರಣ ಅತಿ ಮಹತ್ವಪೂರ್ಣವಾದುದು. ದೇವದಾಸಿ ಪದ್ಧತಿ ಐದು-ಆರು ಸಾವಿರ ವರ್ಷಗಳ ಹಿಂದೆ ಸುಮೇರಿಯನ್ ಹಾಗೂ ಬಾಬಿಲೋನಿಯನ್ ಸಂಸ್ಕೃತಿಗಳಲ್ಲಿ ಕಂಡುಬಂದಿದೆ. ಮಾತೃದೇವತೆಯ (ಮದರ್ ಗಾಡೆಸ್) ಆರಾಧನಾ ಸಂಪ್ರದಾಯದೊಡನೆ ಈ ದೇವದಾಸಿ ಪದ್ಧತಿಗೆ ಆಗ ಒಂದು ಧಾರ್ಮಿಕ ಹಿನ್ನೆಲೆಯಿದ್ದಿತು. ಅದು ಮುಂದೆ ಶಾಕ್ತಸಂಪ್ರದಾಯಗಳಲ್ಲಿ ಪಂಚ ’ಮ’ಕಾರಗಳಲ್ಲೊಂದಾಗಿ ಪರಿಣಮಿಸಿತು. ಸವದತ್ತಿಯ ವಿಚಾರ ಸಂಕಿರಣದಲ್ಲಿ ದೇವದಾಸಿ ಪದ್ಧತಿಯನ್ನು ಮನಶ್ಯಾಸ್ತ್ರ-ಧಾರ್ಮಿಕ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿ ವಿವೇಚನೆ ಮಾಡಿ ಮಂಡಿಸಿದ ಪ್ರಬಂಧಗಳು ಗಮನಾರ್ಹವಾಗಿವೆ.

ಈ ಸಮ್ಮೇಲನ ಆಕಾಶದತ್ತ ಕಣ್ಣೆತ್ತಿದೆ. ಆಕಾಶ ಜಾನಪದೀಯ (Sky-lore) ವಿಚಾರ ಸಂಕಿರಣದ ವಿಷಯವಾಗಿದೆ. ದ್ಯಾವಾಪೃಥಿವಿಗಳೆರಡು ಮಾನವನಿಗೆ ತಂದೆ ತಾಯಿಗಳಾಗಿ ನಿಂತಿವೆ. ಪೃಥ್ವಿ ಮಾತೃಸ್ಥಾನದಲ್ಲಿದೆ. ಪೃಥ್ವಿಯ ಪೂಜೆ ಬಗೆ-ಬಗೆಯಾಗಿ ನಡೆದಿದೆ. ನದಿ, ಸರೋವರ, ಬಾವಿ ಮುಂತಾದ ಜಲಾಶಯಗಳ ಪೂಜೆ, ಗಿಡ-ಮರಗಳ ರೂಪದಲ್ಲಿ ಸಸ್ಯಪೂಜೆ ವ್ಯಾಪಕವಾಗಿ ಕಂಡುಬರುತ್ತದೆ. ಮದುವೆಯ ಹಂದರಗಳಲ್ಲಿ ಮರದ ಕೊಂಬೆಯನ್ನು ನೆಟ್ಟು ಅದನ್ನು ಪ್ರಥಮವಾಗಿ ಪೂಜಿಸುವುದುಂಟು. ಅದನ್ನು ’ಹಂದರ ಹಾಲಗಂಬ’ವೆಂದು ಕರೆಯುತ್ತಾರೆ. ಅದು ಹಾಲಗಂಬವಲ್ಲ; ಆಲಗಂಬ, ’ಆ’ ಕಾರವನ್ನು ’ಹಾ’ ಕಾರ ಸಹಿತವಾಗಿ ಉಚ್ಛರಿಸಿ ಹಾಲಗಂಬಹವಾಗಿದೆ. ಆಲದ ಮರದ ಪೂಜೆ ದಕ್ಷಿಣ ಭರತಖಂಡದಲ್ಲಿ ಅನೇಕ ಕಡೆಗೆ ಕಂಡುಕೊಳ್ಳುತ್ತದೆ. ಆಲವು ತನ್ನ ಜಡೆಯನ್ನು ಬಿಟ್ಟು ಸ್ಥಿರವಾಗಿ ನಿಲ್ಲುವಂತೆ ಈ ವಂಶವೃಕ್ಷವು ಬೆಳೆಯಲೆಂದು ಆಲದ ಮರದ ಪೂಜೆ ವಿವಾಹದಲ್ಲಿ ನಡೆಯುತ್ತಿರಬೇಕು. ಹೀಗೆ ಪೃಥ್ವಿದೇವತಾ ಪೂಜೆ ಅನಂತರೂಪದಲ್ಲಿ ನಡೆದಿರುತ್ತದೆ’

ಆಕಾಶಪೂಜೆ ದ್ಯಾವಾಪೂಜೆಯಾಗಿ ಅನಾದಿಕಾಲದಿಂದಲೂ ನಡೆದುಬಂದಿದೆ. ಆಕಾಶವು ಆದಿಮಾನವನ ಮನಸ್ಸನ್ನು ಮೊದಲಿನಿಂದಲೂ ಸೆಳೆದುಕೊಂಡಿರುವುದು; ಅಲ್ಲಿರುವ – ಸೂರ್ಯ, ಚಂದ್ರ, ನಕ್ಷತ್ರ, ಸಿಡಿಲು, ಮಿಂಚು, ಮುಗಿಲು, ಮಳೆಗಳಿಂದ, ’ಲೋಕದ ಚೇಷ್ಟೆಗೆ ರವಿ ಬೀಜ’ ವಾಗಿರುವನು. ಕತ್ತಲೆಯನ್ನು ಭೇದಿಸಿ ಸೂರ್ಯನ ಹೊಂಗಿರಣಗಳು ಪೃಥ್ವಿಯ ಮೇಲೆ ಬಿದ್ದೊಡನೆಯೇ ಲೋಕದ ಜಾಗೃತಿಯಾಗುತ್ತುದೆ. ಸೂರ್ಯೋದಯವನ್ನು ಕಂಡ ಆದಿಮಾನವರು ಸಂಭ್ರಮದಿಂದ ಕುಣಿದಾಡಿದ್ದಾನೆ. ಸೂರ್ಯ ಆದಿಮಾನವನ ಅನೇಕ ಕಲೆಗಳಲ್ಲಿ ಅಭಿವ್ಯಕ್ತವಾದ, ಚಿತ್ರ, ಲಿಪಿ, ಬೆಳಕು ಇವುಗಳಿಗೆಲ್ಲಾ ಅವನೇ ಸಂಕೇತವಾದ, ಕೊನೆಗೆ ನರನಿಗೆ ಸೂರ್ಯನಾರಾಯಣನಾದ, ಸೂರ್ಯೋದಯ ಸೂರ್ಯಾಸ್ತ್ರಗು ಆದಿಮಾನವನ ಜೀವನದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿವೆ. ಅವನಿಂದಲೇ ಅವರಿಗೆ ಹಗಲು-ರಾತ್ರಿ, ಜಾನಪದ ಅವನಿಗೆ ಸಪ್ತಾಶ್ವಗಳನ್ನು ಸಾರಥಿಯನ್ನು ಕೊಟ್ಟರು. ಅವರ ದೃಷ್ಟಿಯಲ್ಲಿ ರವಿರಥಕ್ಕೊಮ್ಮೆ ಪೂಡಿದ ತುರಂಗಗಳು ಇನ್ನೂ ಬಳಲ್ದು ನಿಂತಿಲ್ಲ; ಹಾಗೆಯೇ ಮುನ್ನಡೆದಿವೆ. ಅಂದರೆ ಕಾಲಕ್ಕೆ ತಡೆಯಿಲ್ಲ; ಕೊನೆಯಿಲ್ಲ ಎಂದು ಅರ್ಥ.

ಆಕಾಶದ ಇನ್ನೊಂದು ಅನರ್ಘ್ಯರತ್ನವೆಂದರೆ ಚಂದ್ರ. ಚಂದ್ರನ ಶೈತ್ಯ, ಬೆಳಗು ಎಂದೆಂದಿಗೂ ಮಾನವನ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತಬಂದಿದೆ. ಸೂರ್ಯನಂತೆ ಚಂದ್ರಮನು ಆದಿಮಾನವನ ಮನಸ್ಸಿನಲ್ಲಿ ಅನಾದಿಕಾಲದಿಂದ ನೆಲೆಯೂರಿ ನಿಂತಿರುವನು. ಚಂದ್ರನ ಬಗೆಗೆ ಆತ ಬಗೆಬಗೆಯ ಕಲ್ಪನೆಗಳನ್ನು ಕಟ್ಟಿಕೊಂಡ. ಚಂದ್ರ ಚೆಲುವಿನ ಸಂಕೇತವಾಗಿ ನಿಂತ. ಆಕಾಶದಲ್ಲಿ ಚೆಲ್ಲವರಿದ ನಕ್ಷತ್ರಗಳಂತೂ ಆದಿಮಾನವನ ಮನಸ್ಸನ್ನು ನಿಮಿಷ ನಿಮಿಷಕ್ಕೂ ಸೆಳೆಯುತ್ತ ಬಂದಿವೆ. ಸೂರ್ಯ, ಚಂದ್ರ, ನಕ್ಷತ್ರ- ಮೊದಲಾದ ಗ್ರಹಗಳ ಗತಿಯನಾರೈವ ಜ್ಯೋತಿಷ್ಯಶಾಸ್ತ್ರ ವೃತ್ಪತ್ತಿಯಾದುದು, ಬೆಳೆದು ಬಂದುದು. ಆದಿ ಮಾನವನ ವಿಚಾರ-ಧಾರೆಯ ಮೇಲೆ ಜ್ಯೋತಿಷ್ಯವು ಕರೆವ ಸಪ್ತಿರ್ಷಿ ಮಂಡಲ ಉತ್ತರ ಕರ್ನಾಟಕದ ಜಾನಪದದಲ್ಲಿ ಚೆನ್ನಮ್ಮನ ದಂಡೆಯಾಗಿದೆ. ಇನ್ನೊಂದು ನಕ್ಷತ್ರ ಪುಂಜವನ್ನು ರೈತನು ತನ್ನ ವೃತ್ತಿಯನುಭಕ್ಕನುಸರಿಸಿ ಆರೆತ್ತಿನ ಕೂರಿಗೆ ತಾಳೆಂದು ಕರೆದನು. ಸಿಡಿಲು-ಮಿಂಚುಗಳಂತು ಆದಿಮಾನವನ ಮನಸ್ಸನ್ನು ಸದಾ ತಮ್ಮತ್ತ ಸೆಳೆದುಕೊಂಡಿವೆ, ಅಲೆಮಾರಿಯಾಗಿ ಅಲೆಯುತ್ತಿದ್ದ ಮೂಲಮಾನವ ಒಂದೆಡೆ ನೆಲೆ ನಿಂತು ಕೃಷಿವ್ಯವಸಾಯಕ್ಕೆ ಆಣಿಯಾದ ಮೇಲೆ ಮೇಘಗಳು ಆತನ ಜೀವನಕ್ಕೆ ಹತ್ತಿರದ ವಸ್ತುಗಳಾದವು. ಮಳೆಯನ್ನು ನಿರೀಕ್ಷಿಸುತ್ತ ತನ್ನ ಕತ್ತನ್ನು ಮೇಲಕ್ಕೆತ್ತಿ ಅನೇಕ ಉದ್ಗಾರಗಳನ್ನು ತೆಗೆದಿರುವನು. ಆಕಾಶದಲ್ಲಿ ಒಡೆದುಕಾಣುತ್ತಿರುವ ಬೆಳಕಿನ ಒಂದು ಪ್ರವಾಹವನ್ನು ಆಕಾಶಗಂಗೆ (Milkyway) ಎಂದು ಕರೆದರು – ಆದಿ ಮಾನವರು.

ತನ್ನ ತಲೆಯ ಮೇಲಿದ್ದ ಆಕಾಶವನ್ನು ಆದಿಮಾನವನು ಅನೇಕ ದೃಷ್ಟಿಯಿಂದ ಕಂಡಿದ್ದಾನೆ. ಅವನಿಗೆ ಆಕಾಶವನ್ನು ಕಂಡು ಸ್ವರ್ಗ-ನರಕಗಳ ಕಲ್ಪನೆಯುಂಟಾಯಿತು. ಆಕಾಶವು ಪರಮಾತ್ಮನ ಅಧಿಷ್ಠಾನವಾಯಿತು. ಸ್ವರ್ಗ ಆಕಾಶದಲ್ಲಿಯೇ ಕಲ್ಪಿತವಾಯಿತು. ಸತ್ಕಾರ್ಯವನ್ನೆಸಗಿದವರು ಸತ್ತು, ಸ್ವರ್ಗಕ್ಕೇರಿ ದೇವಸನ್ನಿಧಿಯಲ್ಲಿರುತ್ತಾರೆ. ದುಷ್ಕೃತ್ಯಗಳನ್ನೆಸಗಿದವರು ನರಕಕ್ಕೆ ಹೋಗುತ್ತಾರೆ. ಸ್ವರ್ಗ-ನರಕಗಳಿಗೆ ಆಕಾಶ ಪಾತಾಳಗಳು ನೆಲೆಯಾದವು. ಪುಣ್ಯಪಾಪಗಳಿಗೂ ಅವುಗಳಿಗೂ ಸಂಬಂಧವುಂಟಾಯಿತು. ಮಾನವನ ಭವ್ಯವಾದ ಈ ಕಲ್ಪನೆಗಳ ಆಧಾರದ ಮೇಲೆ ಮಹಾಕಾವ್ಯಗಳು ಹುಟ್ಟಿ ಬಂದಿವೆ. ಮೆಸೊಪೊಟೋಮಿಯಾದ ’ಗಿಲ್‌ಗುಮೇಶ್’ ಮತ್ತು ’ಸಷ್ಟಿಯ ವ್ಯುತ್ಪತ್ತಿ’ […] ಎಂಬೆರಡು ಮಹಾಕಾವ್ಯಗಳು ಮಾನವನ ಆಕಾಶ-ಪಾತಾಳಗಳ ಕಲ್ಪನೆಯ ಪಾತಳಿಯಲ್ಲಿ ನಿಂತಿವೆ. ಡಾಂಟೆ ಕವಿಯ ’ಡಿವಾಯಿನ್ ಕಾಮೆಡಿ’, ಮಿಲ್ಟನ್ನನ ’ಪ್ಯಾರಾಡಾಯಿಜ್ ಲಾಸ್ಟ್‌’, ನಮ್ಮ ಅನೇಕ ಪುರಾಣಗಳು ಸ್ವರ್ಗ-ನರಕಗಳ ಕಲ್ಪನೆಯ ನೆಲೆಯಲ್ಲಿ ನಿಂತಿವೆ.

ಕಾಲವೆಂಬ ಮಹಾತತ್ವದ ಪರಿಕಲ್ಪನೆ ಆರಂಭವಾದುದು ಸೂರ್ಯಚಂದ್ರಮರಿಂದ ಹಗಲು ರಾತ್ರಿ, ಹುಣ್ಣಿಮೆ ಅಮವಾಸ್ಯೆ,  ವಾರ, ತಿಥಿ, ಪಕ್ಷ, ಮಾಸ, ನಕ್ಷತ್ರ, ದಕ್ಷಿಣಾಯಣ, ಉತ್ತರಾಯಣಗಳ ಬೃಹತ್ ಕಲ್ಪನೆ ಮಾನವನಿಗೆ ಸಾಧ್ಯವಾದುದು ಆಕಾಶದ ಅದ್ಭುತ ಕಾಯಗಳ ಮೂಲಕ. ಸೂರ್ಯ-ಚಂದ್ರ ಹಾಗೂ ಮಿಕ್ಕ ಐದು ಗ್ರಹಗಳು ಮನುಷ್ಯನ ಬದುಕನ್ನು ನಿಯಂತ್ರಿಸುತ್ತವೆಯಂದು ಬಾಬಿಲೋನಿಯನ್ನರು ನಂಬಿದ್ದರು. ಮನುಷ್ಯ ಕಾಯಕ್ಕೆ ಬರುವ ರೋಗರುಜಿನಗಳ ನಿವಾರಣೆಗೆ ಮೂಲಮಾನವ ಆಕಾಶ ಕಾಯಗಳನ್ನೇ ಆಧರಿಸಿದನು. ಮಂತ್ರ, ತಂತ್ರ, ಯಂತ್ರಗಳನ್ನು ಪ್ರಾರಂಭಿಸಿದನು. ಯಂತ್ರಗಳನ್ನು ಬರೆಯುವುದಕ್ಕೂ ಗ್ರಹಣಕಾಲವೇ ಸರಿಯೆಂದು ನಿರ್ಧರಿಸಿಕೊಂಡರು. ಸಣ್ಣಪುಟ್ಟ ಮಂತ್ರಸಿದ್ಧಿಗೆ ದಕ್ಷಿಣಾಯಣ, ಉತ್ತರಾಯಣ, ಅಮವಾಸ್ಯೆ- ಮುಂತಾದ ದಿನಗಳನ್ನು ಬಳಸಿಕೊಂಡರು. ಯಂತ್ರಗಳನ್ನು ಗುರುವಾರ, ಆದಿತ್ಯವಾರ, ಅಮವಾಸ್ಯೆ – ಎಂದು ಬರೆಯತೊಡಗಿದರು. ಹೀಗೆ ಯಂತ್ರ, ಮಂತ್ರ, ಮಾಟಗಳ ಪ್ರಪಂಚ ಹುಣ್ಣಿಮೆ, ಅಮವಾಸ್ಯೆ, ಗ್ರಹಣಗಳೆಂದು ಜಾಗರೂಕತೆಯಿಂದ ಕಾರ್ಯತತ್ಪರವಾಗಿರುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ಸತ್ತರೆ ಸೂರ್ಯಲೋಕಕ್ಕೆ ಹೋಗುವರೆಂಬ ಕಲ್ಪನೆ ಒಂದು ಕಾಲಕ್ಕೆ ಪ್ರಬಲವಾಗಿದ್ದಿತು. ಅಂತೆಯೇ ಸೂರ್ಯಗ್ರಹಣ ಸಮಯದಲ್ಲಿ ಪ್ರಾಣತ್ಯಾಗ ಮಾಡಿದ ಅನೇಕ ನಿದರ್ಶನಗಳಿವೆ. ಮಕರ ಸಂಕ್ರಮಣದ ದಿವಸ ಅಂದರೆ ಉತ್ತರಾಯಣ ಪ್ರಾರಂಭದ ದಿವಸ ಅಗ್ನಿಪ್ರವೇಶ ಮಾಡಿ ಸೂರ್ಯಲೋಕಕ್ಕೆ ಸಂದರೆಂಬ ಉಲ್ಲೇಖಗಳಿವೆ.

ಸಿಡಿಲು, ಮಿಂಚು, ದೇವರ ಕೈಯೊಳಗಿನ ಅಗ್ನಿ ಆಯುಧಗಳೆಂದು ನ್ಯೂಆರ್ ಜನಾಂಗದ ನಂಬುಗೆ. ಇವನ್ನು ಆಕಾಶ ಶಕ್ತಿ (Spirits of Sky or Air) ಎಂದು ಅವರು ಕರೆದರು. ಸಿಡಿಲು ಹೊಡೆದು, ಬಿರುಗಾಳಿ ಬಡಿದು, ಮಿಂಚು ತಾಗಿ ಜನ ಸತ್ತರೆ ದೇವರ ಆಯುಧಗಳ ಮೂಲಕ ದೇವಸನ್ನಿಧಿಗೆ ಹೋದರೆಂದು ನ್ಯೂಆರ್ ಜನರ ಶ್ರದ್ಧೆ. ಹೀಗೆ ಸತ್ತವರ ಸಲುವಾಗಿ ಜನ ಅತ್ತರೆ ದೇವರು ಕೋಪಿಷ್ಟನಾಗುತ್ತಾನೆಂದು ಅವರ ಭಾವನೆ. ಈ ರೀತಿಯಾಗಿ ಮರಣವನ್ನಪ್ಪಿದವರನ್ನು ಹೂಳುತ್ತಿರಲಿಲ್ಲ. ಅವರ ಸಲುವಾಗಿ ಸಾಂಕೇತಿಕ ಸ್ಮಾರಕಗಳನ್ನು ನಿರ್ಮಿಸುತ್ತಾರೆ.

ಮಳೆ ಮಾನವನ ಜೀವನಾಧಾರ, ವರುಣ ಭಾರತದಲ್ಲಿ ಮಳೆಯ ದೇವತೆ. ಮಳೆ ಬಾರದಿದ್ದಾಗ ರೈತ ಮುಗಿಲಕಡೆ ನೋಡುತ್ತ ದೇವರ ಧ್ಯಾನ ಮಾಡುತ್ತಾನೆ. ಮಳೆಗೂ ನಕ್ಷತ್ರಗಳಿಗೂ ದೃಢವಾದ ಸಮಬಂಧವನ್ನು ಜ್ಯೋತಿಷ್ಯ ಕಲ್ಪಿಸಿದೆ. ಇಪ್ಪತ್ತೇಳು ನಕ್ಷತ್ರಗಳನ್ನು ಕಲ್ಪಿಸಿ ಒಂದೊಂದು ಮಳೆಯನ್ನು ಒಂದೊಂದು ನಕ್ಷತ್ರದ ಹೆಸರಿನಲ್ಲಿ ಕರೆದುರ. ಆ ನಕ್ಷತ್ರಗಳ ಕೂಟದಿಂದ ಮಳೆಗಾಲ ಹೇಗೆ ಆಗುವುದೆಮದು ಕಂಡುಕೊಳ್ಳುತ್ತಿದ್ದರು. ಜನಸಾಮಾನ್ಯರ ಹಾಗೂ ಜ್ಯೋತಿಷಿಗಳ ಇಂತಹ ಒಂದು ನಂಬುಗೆಯನ್ನು ಸರ್ವಜ್ಞ ಹೀಗೆ ಹೇಳಿದ್ದಾನೆ:

“ಆಗಿಯ ಹುಣ್ಣೆವೆ ಹೋದ| ಮಿಗೆ ಮೂರು ದಿವಸಕ್ಕೆ
ಮೃಗಧರನ ಕೂಡ ಮೃಗವಿರಲು| ಮಳೆಗಾಲ
ಜಗದಣಿಯಲಕ್ಕು ಸರ್ವಜ್ಞ||

ಆಗಿ ಹುಣ್ಣಿವೆ ಹೋದ ಮೂರನೆಯ ದಿವಸಕ್ಕೆ ಸೋಮವಾರ ಬಂದು, ಆ ದಿನ ಮೃಗ ನಕ್ಷತ್ರ ಪ್ರಾರಂಭವಾದರೆ ಮಳೆಗಾಲ ಸಮೃದ್ಧಿ – ಎಂದು ಅನುಭವ ಶಾಸ್ತ್ರ ಹೇಳಿತು; ಜನ ಶ್ರದ್ಧೆಯಿಂದ ಕೇಳಿತು.

ದೂರ… ಬಹುದೂರವಿದ್ದ ಆಕಾಶ ಮಾನವ ಜೀವನದಲ್ಲಿ ಇಷ್ಟುಮಹತ್ವದ ಪಾತ್ರವನ್ನಾಡಿದೆ! ಆಕಾಶದಲ್ಲಿದ್ದ ಸೂರ್ಯ-ಚಂದ್ರ- ನಕ್ಷತ್ರಾದಿಗಳು ಅವನ ಭಾವನಾ ಪ್ರಪಂಚವನ್ನು ಗಾಢವಾಗಿ ವ್ಯಾಪಿಸಿ, ನಂಬಿಗೆ, ಪ್ರೇರಣೆ, ಪರಂಪರೆಗಳಿಗೆ ಕಾರಣವಾಗಿವೆ.

ಆಕಾಶ ಜಾನಪದೀಯವನ್ನು ಕುರಿತು ನಡೆವ ಈ ವಿಚಾರಸಂಕಿರಣ ಒಂದು ಗಗನ ಯಾತ್ರೆ. ಇನ್ನೊಂದು ದೃಷ್ಟಿಯಿಂದ ಭೂವ್ಯೋಮ ಪಾತಾಳಗಳ ಪ್ರದಕ್ಷಿಣೆ, ಆಕಾಶವನ್ನು ಕುರಿತು, ಆಕಾಶಕಾಯಗಳನ್ನುದ್ದೇಶಿಸಿ ಜಗತ್ತಿನ ವಿವಿಧ ಭಾಗದ ಜನಾಂಗಗಳು ತಳೆದಿದ್ದ ಭಾವನೆ, ನಂಬಿಗೆ, ಶ್ರದ್ಧೆ, ಸಂಪ್ರದಾಯಗಳನ್ನು ಸಂಗ್ರಹಿಸಿ, ಪೃಫಕ್ಕರಿಸಿ ಅವು ಜ್ಯೋತಿಷ್ಯ, ಶಾಸ್ತ್ರ, ಪುರಾಣಗಳಿಗೆ ಹೀಗೆ ಎಡೆಮಾಡಿಕೊಟ್ಟಿವೆ ಎಂಬುದನ್ನು ಇಲ್ಲಿ ಕಂಡುಹಿಡಿಯಬೇಕಾಗುತ್ತದೆ.

ಒಟ್ಟಿನಲ್ಲಿ ಈ ಆಕಾಶಜಾನಪದೀಯ ಅತ್ಯಂತ ನವೀನವಾಗಿ, ವಿವೇಚಿಸಲ್ಪಡುವುದೆಂದು ಆಶಿಸಲಾಗಿದೆ. “ಮನುಷ್ಯಜಾತಿ ತಾನೊಂದೆವಲಂ” ಮಹಾಕವಿ ಪಂಪನ ಉಕ್ತಿ, ‘God hath made all men of the same blood’ ಎಂಬ ಬೈಬಲ್ ಉಕ್ತಿ ಇವುಗಳ ಸತ್ಯವನ್ನು ಎತ್ತಿ ಹಿಡಿಯುವ ಈ ಜಾನಪದ ಸಮ್ಮೇಲನ ಯಶಸ್ವಿಯಾಗಲಿ.