ಪೂರ್ವಾಪರ

ಹದಿನೆಂಟನೆಯ ಶತಮಾನದ ಆಧುನಿಕ ವಿಜ್ಞಾನ ನಮ್ಮ ದೇಶಕ್ಕೆ ಒಂದು ಮಹಾಪಲ್ಲಟವಾಗಿ ಪ್ರವೇಶಿಸಿತು. ಅದು ವಸಾಹತುಶಾಹಿಯ ಒಂದು ಪ್ರಭುತ್ವವೂ, ಹೊಸಜ್ಞಾನ ಮತ್ತು ಹೊಸ ವಸ್ತು ವಿನ್ಯಾಸದ ಒಂದು ಆವಿಷ್ಕಾರವೂ ಆಗಿತ್ತು. ನಮ್ಮೊಳಗೆ ನಾವು, ಕಟ್ಟಿಹಾಕಿಕೊಂಡಿದ್ದ ನಮಗೆ ಈ ಕಂಪನ ಕೆಲವರಲ್ಲಿ ಭಾರಿ ತಲ್ಲಣವನ್ನೂ, ಹಲವರಲ್ಲಿ ಬಿಡುಗಡೆಯ ತರಂಗಗಳನ್ನೂ ತಂದಿತು. ಅದನ್ನು ಮಿಸುಕುವ, ಮೀರುವ ಅಥವಾ ಸುಧಾರಿಸಿ ಸ್ವೀಕರಿಸುವ ಯಾವ ಶಕ್ತಿಯೂ ಆಗಿನ ಭಾರತೀಯ ಸಂದರ್ಭಕ್ಕೆ ಇರಲಿಲ್ಲ. ‘ಒಪ್ಪಿಕೊ ಇಲ್ಲವೆ ಹಿಂದೆಸರಿ’ ಎಂಬ ಕೊನೆಯ ಆದೇಶವದು. ಇದು ಕಾರಣವಾಗಿ ಪ್ರಭುತ್ವವನ್ನು ಮೀರಿದರೆ ಹೊಸಜ್ಞಾನ  ತಪ್ಪಿಹೋಗುವ, ಹೊಸಜ್ಞಾನವನ್ನೇ ವಿರೋಧಿಸಿದರೆ ಜೀವನ ಹಿಂದೆ ಸರಿಯುವ ಅಪಾಯದ ಇಕ್ಕಟ್ಟಿನಲ್ಲಿ ಭಾರತದ ಶ್ರೀಮಂತ ಮತ್ತು ಬಡವ ಇಬ್ಬರೂ ಸಿಕ್ಕಿಕೊಂಡರು. ಅಂಥ ವಿಜ್ಞಾನ ನಮ್ಮ ಹತ್ತಿರ ಬಂತು.

ಆ ವಿಜ್ಞಾನ ಕೇವಲ ಜ್ಞಾನವಾಗಿ ಬಂದಿದ್ದರೆ ಭಾರತೀಯ ಪಂಡಿತರು ಅದರೊಂದಿಗೆ ತರ್ಕಕ್ಕೆ ಬಿದ್ದು ಅದನ್ನು ಹೇಗೋ ಸೋಲಿಸಿ ಓಡಿಸಿಬಿಡುತ್ತಿದ್ದರು. ಅದು ಆಯುಧವಾಗಿಯೂ, ಆಸೆಯಾಗಿಯೂ ಮೂಡಿಬಂದಿತ್ತು. ಬ್ರಿಟಿಷರನ್ನು ಸೋಲಿಸಬಹುದಿತ್ತು. ಬಡತನವನ್ನು ಸೋಲಿಸುಬಹುದಿತ್ತೆ ! ನಮ್ಮ ಆ ಕಾಲದ, ದೇಶದ ಬಡತನ ಅಂಥ ವಸ್ತುಜ್ಞಾನದ ಆದೇಶಕ್ಕೆ ತಲೆಬಾಗಿತು. ಜೊತೆಯಲ್ಲಿಯೇ ಸಂಸ್ಕೃತಿಯ ಬಡತನವನ್ನೂ  ಘೋಷಿಸಿಕೊಂಡಿತಲ್ಲ ! ಅಲ್ಲಿ ನಮ್ಮ ಪತನದ ಹಾದಿ ತೆರೆಯಿತು. ಈ ಸೋಲೇ ಮತ್ತೊಂದು ಕಡೆಯಿಂದ ರಾಷ್ಟ್ರೀಯ ಚಳವಳಿಗೆ ಸ್ವರಸಂಯೋಜನೆ ಮಾಡಿತು. ‘ಸಾಮಗ್ರಿ ಆಧುನಿಕತೆ’ಯನ್ನು ಎತ್ತಕಡೆಯಿಂದ ಬೇಕಾದರೂ ತರಬಹುದು ‘ಸಂಸ್ಕೃತಿ ಆಧುನಿಕತೆ’ ಎಂಬುದು ಹಾಗೆ ಬೇರೆ ಬೇರೆ ಕಡೆಯಿಂದ ತುಂಬಿಕೊಳ್ಳುವಂಥದಲ್ಲ. ಅದನ್ನು ನೆಲದೊಡಲ ಫಲವತ್ತತೆಯಿಂದಲೇ ಪುನರ್‌ನಿರ್ಮಿಸಿ ಕೊಳ್ಳುತ್ತ, ಅನ್ಯಸಂಸ್ಕೃತಿಗಳೊಂದಿಗೆ ಅನುಸಂಧಾನ ನಡೆಸತಕ್ಕದ್ದು ಎಂಬುದನ್ನು ರಾಷ್ಟ್ರೀಯವಾದಿಗಳೂ, ಕನ್ನಡ ಸಾಹಿತ್ಯ,  ಸಂಸ್ಕೃತಿ ಪುನರ್ ನಿರ್ಮಾತೃಗಳೂ ಆದ ಕನ್ನಡ ಕವಿ ಚಿಂತಕರು ಕಂಡುಕೊಂಡರು. ಅಲ್ಲಿ ಹುಟ್ಟಿತು ನೋಡಿ ನಮ್ಮ ಜನಪದ ಸಾಹಿತ್ಯದ ಕಾಂಕ್ಷೆ.

ಈ ಮೊದಲೆ ಬ್ರಿಟಿಷರು ಜನಪದ ಸಾಹಿತ್ಯ, ಸಂಸ್ಕೃತಿ ಸಂಗ್ರಹದಲ್ಲಿ ತೊಡಗಿದ್ದರು. ಅದು ಅವರ ಸಾಮ್ರಾಜ್ಯ ವಿಸ್ತರಣೆಯ ಎರಡನೆ ಚಲನೆಯ ಹುನ್ನಾರು. ಮತ್ತೊಂದು ಬಗೆಯಲ್ಲಿ ಭಾರತದ ಜಾನಪದ ಕಚ್ಚಾಸಂಪತ್ತನ್ನು ಕೊಂಡೊಯ್ಯುವ ವಿಕ್ರಮದ ಮುಂದುವರಿದ ಕಥಾನಕ. ಈ ನಮ್ಮ ಸಂಸ್ಕೃತಿ, ಅವರು ನಮಗೆ ತಂದುಕೊಟ್ಟ ವಿಜ್ಞಾನದಂಥ ಶ್ರೇಷ್ಠತೆ ಎಂದು ಅವರು ತಿಳಿದಿರಲಿಲ್ಲ, ಮಂತ್ರ ಮಾಯಾ ಲೋಕದ ಭಾರತೀಯ ಪುರಾತನರು ಹೇಗಿರಬಹುದು ಎಂಬ ಕುತೂಹಲ ಹಾಗೂ ಅದನ್ನು ಕಂಡು ಅನುಭವಿಸುವ ಪ್ರಭುವಿನ ಋಷಿ ಅವರದಾಗಿತ್ತು. ತಪ್ಪೇನಿಲ್ಲ; ಪ್ರಭುಗಳೆ ಹಾಗೆ ! ಆಳಿಸಿಕೊಳ್ಳುವವನ ಸಂಪತ್ತು, ಸಂಸ್ಕೃತಿ, ಸಾಹಿತ್ಯ – ಇವೆಲ್ಲ ಅಕಾಲಿಕ ಮತ್ತು ಹಳೆಯವು ಎಂದು ಅವರು ಹೇಳಲೇಬೇಕಿತ್ತು. ಅದು ಅವರ ಅಭಿವೃದ್ಧಿ ತತ್ವದ ಮುಂದುವರಿಕೆ ಮತ್ತು ಆಳಿಸಿಕೊಳ್ಳುವವನ  ಅನಭಿವೃದ್ಧಿ ಮನೋಧರ್ಮದ ಸಮರ್ಥನೆ. ಅದು ಆಗಿನ ಭಾರತದಲ್ಲೂ ಕರ್ನಾಟಕದಲ್ಲೂ ಚನ್ನಾಗಿಯೇ ನಡೆಯಿತು.

ಆ ಕಾಲದ ಪರಿಸ್ಥಿತಿ ಹೊರಗಿನಿಂದ ಬಂದ ಜ್ಞಾನ ‘ಆಧುನಿಕ’,  ನಮ್ಮದೆಂಬುದು ‘ಪುರಾತನ’  ಎಂದು ಮನಸೋತು ಒಪ್ಪಿಕೊಂಡುಬಿಟ್ಟಿತ್ತು. ಭಾರತೀಯ ಉತ್ಪಾದನೆಯಲ್ಲಿ ಹೊಸತು ಮತ್ತು ಹಳತು ಎಂಬ ವಿಭಜಿತ ಧೋರಣೆ ಎಲ್ಲರ ಮನದೊಳಗೆ ದಾಖಲಾಗಿತ್ತು. ಆ ಕಾರಣದ ಮೇಲಿಂದ ನಮ್ಮ ಸಂಸ್ಕೃತಿ ಮತ್ತು ಜನಪದ ಸಾಹಿತ್ಯ ನಮ್ಮ ಹಳ್ಳಿಗಳಂತೆ ಹಳೆಯದು ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ. ಅದೇ ಸಂದರ್ಭದಲ್ಲಿ ಈ ಎಲ್ಲವೂ ನಮ್ಮ ಹೃದಯಕ್ಕೆ ಸಂಬಂಧಪಟ್ಟ ಅತ್ಯಂತ ಆಪ್ತವಾದ ಸ್ಪಂದನ ಎಂಬುದನ್ನು ನಿರಾಕರಿಸುವಂತಿರಲಿಲ್ಲ.  ಇಂತಹ ಒಂದು ಸಮಕಾಲೀನ ಸಂಘರ್ಷವನ್ನು ಎದುರು ಹಾಕಿಕೊಂಡ ಸಂದರ್ಭದಲ್ಲಿ ನಮ್ಮ ಹಿರಿಯ ಸಾಹಿತಿಗಳು ಜನಪದ ಸಾಹಿತ್ಯವನ್ನು ಕಂಡು ಕಾಣಿಸಿ ವಿವರಿಸಿದರು. ಅಂತಹ ಜನಪದ ಸಾಹಿತ್ಯದ ಆಪ್ತತೆಗಾಗಿ ಅದರ ಕಡೆಗೆ ಕೈ ಚಾಚಿದರು, ಅದಕ್ಕಾಗಿ ಹಂಬಲಿಸಿ ಆಸೆಪಟ್ಟರು, ಅದನ್ನು ಕೊಡುವ  ಜನತೆಯ ಮುಂದೆ ಬೇಡಿದರು, ಅವರ ಸೃಷ್ಟಿಸಂಸ್ಕೃತಿಗೆ ಉಪಕಾರ ಸ್ಮರಣೆ ಸಲ್ಲಿಸಿದರು. ಶಿಷ್ಟತೆಯ ಸ್ಥಾನ – ಮಾನ, ಅಹಂಕಾರವನ್ನು ತೊರೆದು ಜನಪದರೊಂದಿಗೆ ಒಂದಾಗುವ, ಒಡನಾಡುವ ತಾಯ್ತನವನ್ನು ಮೆರೆದರು.

ಜನಪದ ಸಾಹಿತ್ಯ ಮತ್ತು ಅದರ ಸಂಗ್ರಹದ ಪ್ರಶ್ನೆ ಕೇವಲ ಒಂದು ಸಾಹಿತ್ಯ ಪ್ರಕಾರದ ಬಗೆಗಿನ ವ್ಯಾಮೋಹ ಆಗಿರಲಿಲ್ಲ. ಅದು ಪ್ರಸ್ತುತದಲ್ಲಿದ್ದ ‘ಆಧುನಿಕ’ವೆಂಬ ಜಾಗತಿಕ ಸಂಸ್ಕೃತಿಯ ಸಂದರ್ಭದಲ್ಲಿ  ಸ್ಥಳೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂಘಟಿಸುವ ಜವಾಬ್ದಾರಿಯೂ ಆಗಿತ್ತು. ಇದರೊಳಗೆ ಗ್ರಾಮೀಣ ಸಮುದಾಯಗಳನ್ನು ಚೇತರಿಸುವ ಮೂಲಕ ಅಖಂಡ ಭಾರತವನ್ನು ಪುನರ್‌ಸಂಘಟಿಸುವ ಪರೋಕ್ಷ ಪ್ರಯತ್ನವೂ ಇತ್ತು. ಹೀಗೆ ಒಂದು ‘ಸಮಗ್ರ ಸಾಹಿತ್ಯ ಕರ್ನಾಟಕ’ ಮತ್ತು  ‘ಸಂಸ್ಕೃತಿ ಭಾರತ’ವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ನಮ್ಮ ಹಿರಿಯರು ಹೊತ್ತರು. ಇದನ್ನು ಸಾಹಿತಿಗಳ ಮೂಲಕ ನಡೆದ ರಾಷ್ಟ್ರೀಯ ಚಳವಳಿ ಎನ್ನಬಹುದು. ಇವರಿಗೆ ಜನಪದಸಾಹಿತ್ಯ ಮುಖ್ಯ ಸಂಪನ್ಮೂಲವೂ, ಸ್ಫೂರ್ತಿಯೂ, ಸಾಂಸ್ಕೃತಿಕ ಅಸ್ತ್ರವೂ ಆಯಿತು. ಶಿಷ್ಟ ಸಾಹಿತ್ಯ, ಕವಿ ಮುದ್ದಣನ ಸಂದರ್ಭದಲ್ಲಿ ನಿಲುಗಡೆಗೆ ತಲುಪಿದ್ದು, ನವೋದಯ ಸಾಹಿತ್ಯ ಚಳವಳಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟುವ ಹೊಸ ನಾಯಕತ್ವವನ್ನು ವಹಿಸಿತ್ತು. ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದ ಕೆಲವು ಪಾಶ್ಚಾತ್ಯ ದೇಶಗಳು ಜನಪದ ಸಾಹಿತ್ಯದ ಮೂಲಕ ತಮ್ಮ ದೇಶವನ್ನು ಪುನರ್‌ಸಂಘಟಿಸುವ ಮಾರ್ಗದರ್ಶನವನ್ನು ನೀಡಿದ್ದವು. ಅದು ನಮ್ಮ ಸಾಹಿತಿ-ಚಿಂತಕರಿಗೆ ಒಂದು ಹೆದ್ದಾರಿಯಾಯಿತು.

ಇಂಗ್ಲೆಂಡ್ ಕೈಗಾರಿಕೀಕರಣದಿಂದ ಕಳೆದುಕೊಳ್ಳುತ್ತಿರುವ ತಾಯ್ತನವನ್ನು ಮತ್ತೆ ಪಡೆಯಲು ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಕಡೆಗೆ ಧಾವಿಸಿತು. ಫಿನ್ಲೆಂಡ್ ತನ್ನ ಪಕ್ಕದ ಸಾಮ್ರಾಜ್ಯಶಾಹಿಯನ್ನು ಎದುರಿಸಲು ಮತ್ತು ಸ್ವದೇಶವೆಂಬ ಸಂಸ್ಕೃತಿ ರಾಷ್ಟ್ರವನ್ನು ಸ್ಥಾಪಿಸಲು ಜನಪದ ಮಹಾಕಾವ್ಯ ಮತ್ತು ನಾಯಕರನ್ನು ಸಾಂಸ್ಕೃತಿಕ ವೀರರನ್ನಾಗಿ ಸ್ಥಾಪನೆಮಾಡಿತು. ಜರ್ಮನಿ ತಮ್ಮ ಮೂಲವನ್ನು ಪರೀಕ್ಷೆ ಮಾಡಿಕೊಳ್ಳಲು ಹಾಗೂ ಭದ್ರಮಾಡಿಕೊಳ್ಳಲು ಜನಪದ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ಭಾರಿ ಹೊರೆಯನ್ನು  ಹೊರಿಸಿತು. ರಷ್ಯಾ ಕಾರ್ಮಿಕ ರಾಜ್ಯ ಸ್ಥಾಪನೆಯ ಘೋಷಣೆಯ ಮೂಲಕ, ದುಡಿಯುವ ಜನರ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ  ಜನರ ದನಿಗೆ ಮಾನ್ಯತೆ ನೀಡಿತು. ಭಾರತದಲ್ಲಿ ಇಂಥದೊಂದು ಚಟುವಟಿಕೆ ಗಾಂಧೀಜಿ ಅವರ ಸ್ವದೇಶಿ ಮತ್ತು ಗ್ರಾಮ ಸ್ವರಾಜ್ಯ ಚಿಂತನೆಯಿಂದ ಆರಂಭವಾಯಿತು.

ನಮ್ಮ ನವೋದಯ ಹಿರಿಯ ಸಾಹಿತಿಗಳು ಪಾಶ್ಚಾತ್ಯವನ್ನು ಪೌರ‍್ವಾತ್ಯದಿಂದ ಸರಿಗಟ್ಟಲು ಪ್ರಯತ್ನಶೀಲರಾದರೂ ಪಾಶ್ಚಾತ್ಯವೆಂಬುದು ಅವರಿಗೆ ನಿರಾಕರಣೆಯ ಜ್ಞಾನವಾಗಿರಲಿಲ್ಲ. ಈ ಎರಡರಲ್ಲಿಯ ಒಳ್ಳೆಯದರ ಆಯ್ಕೆ ಅವರ ಆದ್ಯತೆಯಾಗಿತ್ತು. ಪಾಶ್ಚಾತ್ಯ ಸಾಹಿತ್ಯದಲ್ಲಿಯ ಒಳ್ಳೆಯದನ್ನು ಹೆಸರಿಸುತ್ತಲೇ ಆ ಮಟ್ಟಿನ ಸಾಮರ್ಥ್ಯ ಪಡೆಯಲು ಜನಪದ ಸಾಹಿತ್ಯವೇ ಸರಿಯಾದ ಸಂಪನ್ಮೂಲ ಎಂಬುದನ್ನು ಮನಗಂಡರು. ಆ ಮೂಲಕ ಜನಪದ  ಸಾಹಿತ್ಯ ಒಂದು ಸಾಹಿತ್ಯಕ ಅನನ್ಯತೆ ಮತ್ತು ಸ್ವೋಪಜ್ಞತೆ ಎಂದು ಗುರುತಿಸಿದರು. ಜನಪದ ಸಾಹಿತ್ಯವೆಂಬುದು: ‘ಗೊರವರ ಡುಂಡುಚಿ ಬೀದಿವರೆಯ ಬೀರನಕತೆ’ ಎಂಬ ಹಿಂದಿನ ಅವಹೇಳನಕಾರಿ ಧೋರಣೆಯನ್ನು ತಿರಸ್ಕರಿಸಿದರು. ೧೯೨೧ರ ಸುಮಾರಿನಿಂದಲೆ ನಮ್ಮ ಕನ್ನಡ ಸಾಹಿತಿಗಳು ಜನಪದಗೀತ ಸಂಗ್ರಹಗಳನ್ನು ಪ್ರಕಟಿಸತೊಡಗಿದರು, ನಮ್ಮ ಅಸ್ತಿತ್ವಕ್ಕಾಗಿ ಪಡಿ ನುಡಿದರು. ಹಾಗೆ ನೋಡಿದರೆ ಈ ಬದ್ಧತೆ ಅವರು ಸಮಕಾಲೀನವಾಗಿ ತಮ್ಮನ್ನು ಸೂಕ್ತ ಮಾಡಿಕೊಳ್ಳುವ ಸಂಗತಿಯೂ ಹೌದು. ಇಂಥ ಮುಕ್ತ ಮನಸ್ಸು ಮತ್ತು ವ್ಯಕ್ತ  ವ್ಯಕ್ತಿತ್ವದ ಮೂಲಕ ಜನಪದ ಸಾಹಿತ್ಯ ಸಂಗ್ರಹಕ್ಕೆ ರಾಜಮಾರ್ಗವನ್ನು ಸೃಷ್ಟಿಸಿದರು. ಈಗ ಅವರ ಮಾರ್ಗದರ್ಶಕ ಮಾತುಗಳನ್ನು ಅನುಸರಿಸಿಯೇ ನಾವು ಮುಂದೆ ಹೋಗಬೇಕಿದೆ.

– ೨ –

ಮಾತಿನ ಸರಣಿ : ಮುತ್ತಿನ ಬೆಲೆ 

ಬಿ. ಎಂ. ಶ್ರೀಕಂಠಯ್ಯ

‘ಕನ್ನಡದಲ್ಲಿ ಇಂತಹ ಕಾಲ ಒದಗಿರುವಾಗ, ಕನ್ನಡ ಕವಿತೆ ತನ್ನ ಅಳತೆಯನ್ನೆ ಅಲ್ಲ, ಆಳವನ್ನೂ ಕೂಡಾ ಕಂಡುಕೊಳ್ಳುತ್ತಿರುವಾಗ, ಸಂಸ್ಕೃತ-ಇಂಗ್ಲಿಷ್ ಸಾಹಿತ್ಯಗಳ, ಇತರ ಸಾಹಿತ್ಯಗಳ, ಸರಿಯಾದ ಸಂಸ್ಕಾರದ ಜೊತೆಗೆ ಕನ್ನಡದ ಪ್ರೌಢಸಾಹಿತ್ಯದ ವ್ಯಾಸಂಗದ ಜೊತೆಗೆ, ಕನ್ನಡದ ಮತ್ತು ಇತರ ಸಾಹಿತ್ಯದ ಜನಪದ ಸಾಹಿತ್ಯವನ್ನೂ ಪರಾಮರ್ಶಿಸುವುದು ಅತ್ಯಾವಶ್ಯಕವಾದ ಕರ್ತವ್ಯ. ನವನಾಗರಿಕತೆಯ ಹೊಡೆತದಲ್ಲಿ, ಪ್ರೌಢಸಾಹಿತ್ಯದ ತಿರಸ್ಕಾರದಲ್ಲಿ ಈ ಜನಪದ ಸಾಹಿತ್ಯ ಉಳಿಯುವುದೇ ಕಷ್ಟವಾಗಿದೆ. ನಾಶವಾಗುವುದಕ್ಕೆ ಮೊದಲೇ ಇದನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಕರ್ತವ್ಯ. ಸಾಹಿತ್ಯಾಭಿಮಾನಿಗಳೂ, ದೇಶವತ್ಸಲರೂ ಶ್ರದ್ಧೆಯಿಂದ ಮೂಲೆ ಮೂಲೆಗಳಿಂದಲೂ ತಮ್ಮ ತಮ್ಮ ಕಡೆಯಲ್ಲಿರುವ ಹಾಡುಗಳನ್ನು ಸಂಗ್ರಹಿಸುತ್ತಾ ಬಂದರೆ ಶೀಘ್ರದಲ್ಲಿಯೇ ಕನ್ನಡ ನಾಡಿನ ಹಾಡುಗಳೆಲ್ಲಾ  ಒಂದುಗೂಡಿ ಒಂದು ದೊಡ್ಡ ಜನಪದ ಸಾಹಿತ್ಯಕೋಶವಾಗುವುದು’. (ಗರತಿಯ ಹಾಡು ೧೯೩೧)

 

ದ. ರಾ. ಬೇಂದ್ರೆ

‘………ತಾಯಿ, ಅಕ್ಕಗಳಿರಾ !  ಈ ಹಳ್ಳಿಯ ಹಾಡುಗಳ, ಹಳೆಯ ಹಾಡುಗಳ ಹೊಳೆಯನ್ನು  ಇಂಗಗೊಡಬೇಡಿ. ಮತ್ತೆ ಹನಿಹನಿಯಾಗಿ ಹಳ್ಳವಾಗಲಿ, ಹಳ್ಳ ಹಳ್ಳ ಕೂಡಿ ಹೊಳೆಯಾಗಲಿ. ಈ ಅಪೇಕ್ಷೆಯನ್ನು ಕನ್ನಡತಿಯರು ಕೈಗೂಡಿಸಿಕೊಡರೆ?

‘ಕರ್ನಾಟಕದೊಳಗಿನ ಬೇರೆ ಬೇರೆ ಭಾಗದವರು ಹೀಗೆ ಪದ್ಯಗಳನ್ನು ಸಂಗ್ರಹಿಸಿ

ಚೆನ್ನಾಗಿ ಬರೆದು ಕಳುಹಿಸಿದರೆ ಕನ್ನಡದ ಅಭ್ಯಾಸಕ್ಕೆ ದೊಡ್ಡದೊಂದು ಉಪಕಾರ ಮಾಡಿದಂತಾಗುವುದು.  ಇದನ್ನು ಎಷ್ಟು ಒತ್ತಿಹೇಳಿದರೂ ಸಾಲದು !. (ಗರತಿಯ ಹಾಡು ೧೯೩೧)

 

ಮಾಸ್ತಿ ವೆಂಕಟೇಶ ಅಯ್ಯಂಗಾರ್

‘ಜನದ ಕ್ಷೇಮವನ್ನು ಬಯಸುವವರೆಲ್ಲ  ಈ ಕವಿತೆಯನ್ನು ದೃಷ್ಟಿಯಿಟ್ಟು ನೋಡಬೇಕು, ಮನಸ್ಸು ಕೊಟ್ಟು ತಿಳಿಯಬೇಕು. ಇನ್ನು ಯಾವ ರೀತಿಯಿಂದಲಾದರೂ ತಿಳಿಯಲಾಗದ ಕೆಲವು ವಿಷಯಗಳು ನಮಗೆ ಈ ಕವಿತೆಯಿಂದ ತಿಳಿಯುತ್ತವೆ’. (ಕರ್ನಾಟಕ ಜನಪದ ಸಾಹಿತ್ಯ ೧೯೫೬)

 

ಬೆಟಗೇರಿ ಕೃಷ್ಣಶರ್ಮ

‘ಹೊಸಕಾಲದ ಕ್ರಾಂತಿಯಲ್ಲಿ ಮಾನವನ ಮನಸ್ಸು ಬುದ್ಧಿ ಹೃದಯಗಳು ಮಾಯವಾಗಿ ಹೋಗುವವೇನು?.. ಇದ್ದೇ ಇರುವವು. ಇವು ಇದ್ದೇ ಇರುವುದಾದರೆ ನಮ್ಮ ಹಳೆಯ ಜನಪದ ಸಾಹಿತ್ಯ ಉಳಿಯಲೇಬೇಕು, ಉಳಿದೇ ಉಳಿಯುವುದು. ನಾವೀಗ ಅದನ್ನು ಅಳಿಯದಂತೆ ಉಳಿಸಿ, ಹೊಸ ಕಾಲಕ್ಕೆ ನಮ್ಮ ಕಾಣಿಕೆ ಸಲ್ಲಿಸಲೇಬೇಕಾಗಿದೆ’.

(ಅಧ್ಯಕ್ಷ ಭಾಷಣ. ಮೂರನೆಯ ಕರ್ನಾಟಕ ಜಾನಪದ ಸಮ್ಮೇಳನ ೧೯೭೧)

 

ಬಿ. ಎಸ್. ಗದ್ಗೀಮಠ

‘ಕರ್ನಾಟಕದ ಒಂದೊಂದು ಭಾಗದ ಜನಪದ ಸಾಹಿತ್ಯವನ್ನು ಕಲೆಹಾಕಿ ಬೆಳಕಿಗೆ ತಂದರೆ ಕನ್ನಡ ಜನತೆಯ ನಿಜವಾದ ಸಂಸ್ಕೃತಿಯ ಒಂದು ಅಮೂಲ್ಯವಾದ ‘ವಿಶ್ವಕೋಶ’ವೇ ಆಗಬಹುದೆಂದು ಹೇಳಬಹುದು’. (ಕನ್ನಡ ಜನಪದ ಗೀತೆಗಳು ೧೯೬೩)

 

ದೇ. ಜವರೇಗೌಡ

‘ಈ ತನಕ ವೈಯಕ್ತಿಕ ಮಟ್ಟದಲ್ಲಿ ತಕ್ಕಮಟ್ಟಿಗೆ ಸಂಗ್ರಹಕಾರ್ಯ ನಡೆದಿದೆ; ಆದರೆ ಆಗಬೇಕಾದ ಕಾರ್ಯ ಬೆಟ್ಟದಷ್ಟಿದೆ. ಅದನ್ನೆಲ್ಲ ಒಬ್ಬಿಬ್ಬರು ವ್ಯಕ್ತಿಗಳಿಂದ ನಿರೀಕ್ಷಿಸುವುದು ಕಷ್ಟ. ಸರ್ಕಾರವೊ, ಸರ್ಕಾರದ ನೆರವು ಪಡೆದ ಸಂಸ್ಥೆಗಳೊ ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿದೆ’. (ಜನಪದ ಸಾಹಿತ್ಯ  ಸಮೀಕ್ಷೆ – ಜೀಶಂಪ ೧೯೬೭).

 

ಎಚ್. ಎಲ್. ನಾಗೇಗೌಡ

‘ಹಣಕೊಟ್ಟರೆ ಮುಂದೆ ಏನಾದರೂ ಸಿಕ್ಕಬಹುದು. ಆದರೆ ಜನಪದ ಸಾಹಿತ್ಯ ಸಿಕ್ಕುವುದಿಲ್ಲ. ಶರಾವತಿಯನ್ನು  ಈಗ ಉಪಯೋಗಿಸಿಕೊಳ್ಳದಿದ್ದರೆ ಮುಂದೆ ಉಪಯೋಗಿಸಿಕೊಳ್ಳಬಹುದು. ಆದರೆ ಜನಪದ ಸಾಹಿತ್ಯ ಶರಾವತಿ ಒಮ್ಮೆ ಬತ್ತಿದರೆ ಮತ್ತೊಮ್ಮೆ ಹರಿಯಲಾರಳು’. (ಹೊನ್ನ ಬಿತ್ತೇವು ಹೊಲಕೆಲ್ಲ ೧೯೬೩)

 

ಜೀ.ಶಂ.ಪರಮಶಿವಯ್ಯ

‘ಸಮೃದ್ಧವಾದ ಜನಪದ ಸಾಹಿತ್ಯ ದೇಶದ ಸೌಭಾಗ್ಯಗಳಲ್ಲೊಂದು, ಅದನ್ನು ಪ್ರಮುಖವಾದ ರಾಷ್ಟ್ರೀಯ ಸಂಪತ್ತು ಎಂಬಂತೆ ಕಾಪಾಡಿಕೊಳ್ಳಬೇಕು’. (ಜನಪದ ಸಾಹಿತ್ಯ ಸಮೀಕ್ಷೆ ೧೯೬೭)

– ೩ –

 

ಕಟ್ಟುವ ಕನಸು ; ನೆಟ್ಟ ಸಸಿ

ಜನಪದ ಸಾಹಿತ್ಯದ ಸಂಗ್ರಹದ ಮಾತು ಆ ಸಾಹಿತ್ಯ ಸಂಗ್ರಹಕ್ಕೆ ಮಾತ್ರ ಮುಗಿಯದು. ಆ ಸಂಗ್ರಹದ ಮೂಲ ಉದ್ದೇಶ ಜನಪದ ಸಂಸ್ಕೃತಿಯ ಕಾಂಕೆ. ಎಂದರೆ ಜೀವನ ಸಂಸ್ಕೃತಿಯ ಹುಡುಕಾಟ, ಬದುಕುವ ಸಂಸತಿಯ ಬಯಕೆ. ಸಹಜ ಸಂಸ್ಕೃತಿ ಮತ್ತು  ಭೋಗ ಸಂಸ್ಕೃತಿಯ ನಡುವಿನ ಈ ಸಂಘರ್ಷ ಬ್ರಿಟಿಷ್ ವಸಾಹತುಶಾಹಿ

ಆಗಮನ ಕಾಲದಿಂದ ಮಾತ್ರವಲ್ಲ ; ಶಿಷ್ಟ  ಜನಪದವೆಂಬ ಸಹಜ ಸಂಸ್ಕೃತಿಗಳ ನಿರಂತರ ಅನುಸಂಧಾನದ ಪ್ರಕ್ರಿಯೆ. ಅದು ಕಾರಣವಾಗಿ ಜನಪದ ಸಾಹಿತ್ಯ ಸಂಗ್ರಹದ ಕಾರ್ಯ ಮತ್ತು ಅಧ್ಯಯನ ಯಾವ ಕಾಲಕ್ಕೂ ಮುಗಿಯುವುದಿಲ್ಲ. ಹಾಗೆ ಮುಗಿದರೆ ಸಂಸ್ಕೃತಿಗಳೆಲ್ಲವೂ ಸತ್ತಿರುತ್ತವೆ. ಕರ್ನಾಟಕದ ಸಂದರ್ಭದಲ್ಲಿ ಶಿಷ್ಟ – ಜನಪದ – ವಸಾಹತು ಸಂಸ್ಕೃತಿಗಳ ಸಂಘರ್ಷ ಮತ್ತು ಅನುಸಂಧಾನ ಬೇರೆ ಬೇರೆ ದಾರಿಗಳಲ್ಲಿ ನಡೆಯುತ್ತಲೇ ಇದೆ. ಅಂತಹ ನಾಲ್ಕು ದಾರಿಗಳು ನಮಗೆ ಕಂಡಿವೆ :

೧  ಕನ್ನಡ ಭಾಷಾ ಅಭಿವೃದ್ಧಿಗಾಗಿ

೨  ಜನತಾ ಸಂಸ್ಕೃತಿಯ ಶೋಧಕ್ಕಾಗಿ

೩  ಜಾನಪದ ಅಧ್ಯಯನಕ್ಕಾಗಿ

೪  ಪರ‍್ಯಾಯ ಜ್ಞಾನ ಚಿಂತನೆಯಾಗಿ

ಕನ್ನಡ ಭಾಷಾಭಿವೃದ್ಧಿಗಾಗಿ ಜನಪದ ಸಾಹಿತ್ಯವನ್ನು ಯಾಕೆ ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಮ್ಮ ಹಿರಿಯ ಸಾಹಿತಿಗಳು ಹೇಳಿರುವುದನ್ನು ಈ ಮೊದಲು ಕಂಡಿದ್ದೇವೆ. ಜನತಾ ಸಂಸ್ಕೃತಿಯ ಪುನರುತ್ಥಾನದ ವಿಷಯದಲ್ಲಿ ಕೂಡ ಇದೇ ಹಿರಿಯರು ಅತ್ಯಂತ ಸಂವೇದನಾಶೀಲ ನಡೆಯನ್ನು ದಾಖಲಿಸಿದ್ದಾರೆ. ದೇವುಡು ಅವರ ಈ ಮಾತುಗಳನ್ನು ಗಮನಿಸಿ: ‘ಈ ಸಂಸ್ಕೃತಿ ವಿಮರ್ಶೆಯ ದೃಷ್ಟಿಯಿಂದ ನಮಗೆ ನಮ್ಮ ನಾಡಿನ ಕುಲಕುಲಗಳೆಲ್ಲವೂ ಒಂದೇ ಸಮನಾಗಿ ಮಾನ್ಯವಾದುವು: ಹಾರುವರೆಂದು ಹೆಚ್ಚಲ್ಲ, ಹೊಲೆಯರೆಂದು ಕಡೆಯಿಲ್ಲ; ಕನ್ನಡ ನಾಡಿನಲ್ಲಿ ನೆಲಸಿ, ಕನ್ನಡಿಗರು ನಾವು ಎಂದು ಅಭಿಮಾನಪಡುವ ಪ್ರತಿಯೊಂದು ಕುಲವೂ ನಮಗೆ ಮಾನ್ಯವು. ಈ ಕನ್ನಡ ಕುಲಕುಲಗಳ ವ್ಯಷ್ಟಿಸಮಷ್ಟಿ ವ್ಯವಹಾರ ಪ್ರಪಂಚವನ್ನು ಸಂಸ್ಕೃತಿಯ ದೃಷ್ಟಿಯಿಂದ ಹುಡುಕಾಡುವುದು ಈ ಲೇಖನಗಳಲ್ಲಿ ಮಾಡುವ ಕೆಲಸ (ಕರ್ನಾಟಕ ಸಂಸ್ಕೃತಿ ೧೯೩೫). ಸಿಂಪಿ ಲಿಂಗಣ್ಣ  ಅವರೂ ಇದೇ ಮಾರ್ಗದಲ್ಲಿ  ಮುನ್ನಡೆದಿದ್ದಾರೆ: “ಇದು ದಲಿತರು ಉದ್ಧಾರವಾಗುವ ಕಾಲ; ದುಡಿಮೆಗಾರರು ರಾಜ್ಯ ಶಾಸಕರಾಗುವ ಕಾಲ; ಒಕ್ಕಲಿಗನು ನೇಗಿಲಯೋಗಿಯೆನಿಸುವ ಕಾಲ, ನಿರಕ್ಷರರು ಸಾಕ್ಷರರಾಗುವ ಕಾಲ; ಸಾಮಾನ್ಯ ಜನರೂ ಸುಖ  ಬಯಸುವ ಕಾಲ; (ಜನಾಂಗದ ಜೀವಾಳ ೧೯೩೪).

ಕರ್ನಾಟಕದ ಹೆಚ್ಚಿನ ಜಾನಪದ ಅಧ್ಯಯನ ಎಂಬುದು ಜನಪದ ಸಾಹಿತ್ಯದ ಅಧ್ಯಯನವೆ ಆಗಿದೆ. ಕರ್ನಾಟಕದಲ್ಲಿ ‘ಜಾನಪದವನ್ನು ಹುಟ್ಟಿಸಿ ಬೆಳಸಿದವರೆ ಸಾಹಿತಿಗಳು. ಜನಪದ ಸಾಹಿತ್ಯ ಸಂಗ್ರಹ ಬ್ರಿಟಿಷ್ ವಿದ್ವಾಂಸ ಜಾನ್ ಲೇಡನ್ (೧೮೦೩) ಕಾಲದಿಂದ ನಡೆಯುತ್ತ ಬಂದಿದೆ. ಅದರ ಸಾಹಿತ್ಯ ಅಧ್ಯಯನ ಕೂಡ ತುಂಬ ಹಿಂದಿನದು. ಜನಪದ ಸಾಹಿತ್ಯ ಸೇರಿದಂತೆ ಜನಪದರ ಏನೆಲ್ಲ ಹುಟ್ಟುವಳಿಗಳನ್ನು ಜಾನಪದವೆಂಬ ಸಮಗ್ರ ವಿಷಯದೊಳಗೆ ತಂದು ಅಧ್ಯಯನ ಮಾಡಿದ್ದು ೧೯೬೬ ರಿಂದ ಈಚೆಗೆ. ಕರ್ನಾಟಕ ಜಾನಪದ ಅಧ್ಯಯನದ ಪ್ರೇರಕರೆಂದರೆ  ದೇ. ಜವರೇಗೌಡ. ಇವರನ್ನು ಅನುಸರಿಸಿದವರೆಂದರೆ, ಹಾ. ಮಾ. ನಾಯಕ ಮತ್ತು ಜೀ.ಶಂ. ಪರಮಶಿವಯ್ಯ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೊದಲಾಗಿ ಕನ್ನಡ ಎಂ.ಎ ತರಗತಿಗೆ ಐಚ್ಛಿಕವಾಗಿ ಎರಡು ಜಾನಪದ ಸಂಬಂಧಿ ಪತ್ರಿಕೆಗಳನ್ನು ಅಧ್ಯಯನಕ್ಕಾಗಿ ಅಳವಡಿಸಲಾಯಿತು (೧೯೬೬). ಆನಂತರ ೧೯೭೪ರಲ್ಲಿ ಪೂರ್ಣಪ್ರಮಾಣದಲ್ಲಿ ಜಾನಪದ ಎಂ.ಎ ತರಗತಿಗಳನ್ನು ಆರಂಭಿಸಲಾಯಿತು. ಈ ವಿಭಾಗಕ್ಕೆ ಕರ್ನಾಟಕದ, ಏಕೆ ಭಾರತದಲ್ಲಿಯೇ ಮೊದಲಾಗಿ ಜಾನಪದ ಪ್ರಾಧ್ಯಾಪಕರಾಗಿ ಜೀ.ಶಂ.ಪರಮಶಿವಯ್ಯ ನೇಮಕಗೊಂಡರು. ಇದೇ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಹಾ. ಮಾ. ನಾಯಕ ಅವರು ‘ಜಾನಪದ ಸ್ವರೂಪ’ (೧೯೬೬) ಕುರಿತು ಒಂದು ಸಮಗ್ರ ದೃಷ್ಟಿಯ ಲೇಖನವನ್ನು ಬರೆದು ಜಾನಪದ ಅಧ್ಯಯನಕ್ಕೆ ರಾಜಮಾರ್ಗವನ್ನು ತೋರಿಸಿದರು. ಇಷ್ಟೆಲ್ಲದರ ಪ್ರೇರಣಾಶಕ್ತಿಯಾದ ದೇ.ಜವರೇಗೌಡರ ನುಡಿ ಇದು: ‘ಜಾನಪದ ಸಂಪ್ರದಾಯ ಒಂದು ಜನಸಮುದಾಯದ ಸಮಷ್ಟಿ ಸೃಷ್ಟಿ, ಸಾಮಾಜಿಕ ಜೀವನದ ಸಂಕೇತ, ರಾಷ್ಟ್ರೀಯ  ಸಂಸ್ಕೃತಿಯ ತಾಯಿ ಬೇರು; ಅದು ಜನಸಾಮಾನ್ಯರ ಶ್ರುತಿಯೂ ಅಹುದು, ಸ್ಮೃತಿಯೂ ಅಹುದು…. ಭಾರತೀಯತ್ವದ ಅಥವಾ ದೇಶೀಯತೆಯ ರಕ್ಷಣೆಗಾಗಿ ಜಾನಪದ ಸಂಪ್ರದಾಯದ ಜೀರ್ಣೋದ್ಧಾರ ಕಾರ್ಯ ನಡೆಯಬೇಕಾಗಿದೆ…..ಜಾನಪದ ಸಂಪ್ರದಾಯದ ಪುನಶ್ಚೇತನದಿಂದ ದಾಸ್ಯ ಮನೋಭಾವ ತೊಲಗಿ ಜನಜೀವನದಲ್ಲಿ ಹುರುಪು ಹುಮ್ಮಸ್ಸುಗಳು ಚಿಗುರಿ, ಆತ್ಮಪ್ರಜ್ಞೆ ಕೊನರಿ, ಕೆಚ್ಚುನೆಚ್ಚುಗಳು ಮೂಡಿ, ಹೊಸ ಚೇತನ ಮುಕ್ಕಳಿಸುತ್ತದೆ (ಜನಪದ ಸಾಹಿತ್ಯ ಸಮೀಕ್ಷೆ – ಜೀಶಂಪ; ಮನ್ನುಡಿಯಲ್ಲಿ ೧೯೬೭).

ಮೈಸೂರು ವಿಶ್ವವಿದ್ಯಾನಿಲಯ ಆರಂಭಿಸಿದ ಈ ಜಾನಪದ ಪ್ರಸ್ಥಾನ, ಇದೊಂದು ರಾಷ್ಟ್ರೀಯ ಅವಶ್ಯಕತೆ ಎನ್ನುವಂತೆ ಬಹುಬೇಗನೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗೆ ವ್ಯಾಪಿಸಿತು. ದೇಜಗೌ, ಹಾಮಾನಾ, ಜೀಶಂಪ ಅವರು ಈ ಪ್ರಸ್ಥಾನದ ಮಾರ್ಗದರ್ಶಿ ಮಾದರಿಗಳಾದರು. ಈ ಹಿಂದೆ ಜನಪದ ಸಾಹಿತ್ಯ ಸಂಗ್ರಹಕ್ಕೆ ಅಗ್ರಮಾನ್ಯತೆ ಇತ್ತು. ಈಗದು ಅಧ್ಯಯನದ ನೆರವನ್ನು ಪಡೆಯಬೇಕಾಗಿ ಬಂತು. ಜನಪದ ಸಾಹಿತ್ಯವನ್ನು ಕೇಳುವ – ಓದುವ ಪ್ರಕ್ತಿಯೆ ಅದನ್ನು ಸಾಂಸ್ಕೃತಿಕವಾಗಿ ಅರ್ಥೈಸುವತ್ತ ಮುನ್ನಡೆಯಿತು. ಅದು ಕಾರಣವಾಗಿ ಹಲವರು ಜನಪದ ಸಾಹಿತ್ಯವನ್ನು ಸಂಗ್ರಹಿಸುತ್ತಲೂ, ಅದರ ವಿಚಾರವನ್ನು ಹೇಳುತ್ತಲೂ ಹೋದರು. ಈ ನಿಟ್ಟಿನಲ್ಲಿ ಕರ್ನಾಟಕದ  ವಿಶ್ವವಿದ್ಯಾನಿಲಯಗಳು ಮಾರ್ಗದರ್ಶಕನ ಸ್ಥಾನದಲ್ಲಿ ನಿಂತರೆ, ಹೊರಗಿನಿಂದ ಅನೇಕರು ಈ ಮಾರ್ಗವನ್ನು ದೃಢೀಕರಿಸಿದ್ದಾರೆ.

ವಿಶ್ವವಿದ್ಯಾಲಯಗಳಿಗೆ ಜನಪದ ಸಾಹಿತ್ಯವೊಂದು ಅಧ್ಯಯನ ವಿಷಯವಾಗಬಲ್ಲದು ಎಂಬ ಸೂಚನೆಯನ್ನೂ ವಾತಾವರಣವನ್ನೂ ಸೃಷ್ಟಿಸಿಕೊಟ್ಟವರು ರಾಷ್ಟೀಯವಾದಿಗಳಾದ ಹಿರಿಯ ಕನ್ನಡ ಸಾಹಿತಿಗಳು. ಜನಪದ ಸಾಹಿತ್ಯ – ಜಾನಪದವನ್ನು ಅಧ್ಯಯನ ಶಿಸ್ತನ್ನಾಗಿ ಮಾಡಿಯೆ ತೀರುವ ಹಠವನ್ನು ಹೊತ್ತವರು ದೇ.ಜವರೇಗೌಡರು. ಜಾನಪದ ಡಿಪ್ಲೊಮಾ, ಜಾನಪದ ಎಂ.ಎ ತೆರೆಯುವುದರ ಜೊತೆಗೆ ಜನಪದ ಸಾಹಿತ್ಯವನ್ನು ಸಂಗ್ರಹಿಸಲು ಒಂದು ವಿಭಾಗವನ್ನೇ ಆರಂಭಿಸಿದರು. ಕರ್ನಾಟಕದಾದ್ಯಂತ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ತರಲು ಕ್ಯಾತನಹಳ್ಳಿ ರಾಮಣ್ಣ, ಟಿ.ಎಸ್.ರಾಜಪ್ಪ, ಅಂಬಳಿಕೆ ಹಿರಿಯಣ್ಣ   ನೇಮಕಗೊಂಡರು. ಇವರ ನಂತರ ಮೈಲಹಳ್ಳಿ ರೇವಣ್ಣ ಮತ್ತು ಜಯಲಕ್ಷ್ಮಿ ಸೀತಾಪುರ ಜನಪದ ಸಾಹಿತ್ಯ ಸಂಗ್ರಹದಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ಜಾನಪದ ವಸ್ತುಸಂಗ್ರಹಾಲಯವನ್ನೂ ದೇ.ಜ.ಗೌ. ಶುರುಮಾಡಿದರು. ಅವರ ಈ ಸಾಹಸ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳನ್ನು ಪ್ರೇರೇಪಿಸಿತು. ಈ ಮೂರು ಹಂತದ; ಜಾನಪದ  ಅಧ್ಯಯನ,  ಸಂಗ್ರಹ  ಹಾಗೂ  ವಸ್ತುಸಂಗ್ರಹಾಲಯ  ಸ್ಥಾಪನೆ ಕಾರ್ಯಯೋಜನೆಯನ್ನು  ಕರ್ನಾಟಕದ  ಬೇರೆ ಬೇರೆ  ವಿಶ್ವವಿದ್ಯಾಲಯಗಳು ಕೈಗೆತ್ತಿಕೊಂಡವು.

ಮೈಸೂರು ವಿಶ್ವವಿದ್ಯಾಲಯ ವಲಯವು ಈಗಾಗಲೇ ಎಸ್. ಕೆ. ಕರೀಂಖಾನ್, ಕೆ. ಆರ್. ಲಿಂಗಪ್ಪ ಹಾಗೂ ಮತ್ತಿತರರ ಜನಪದ ಸಾಹಿತ್ಯ ಹಾಡುಗಾರಿಕೆ ಪ್ರಚಾರದಿಂದ, ಮತಿಘಟ್ಟ ಕೃಷ್ಣಮೂರ್ತಿಯವರ ಸಮೃದ್ಧ ಜನಪದ ಸಾಹಿತ್ಯ ಸಂಗ್ರಹದ ದಾಖಲೆ ಮತ್ತು ತರೀಕೆರೆಯ ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನದಿಂದ ಮೈನೆರೆದು ನಿಂತಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಈ ವಲಯದಿಂದ ಕೆಳಗಿನ ಜಾನಪದ ವಿದ್ವಾಂಸರು ಸಂಗ್ರಹ, ಅಧ್ಯಯನ ಮತ್ತು ಪ್ರಸರಣಕಾರ್ಯವನ್ನು ಮುಂದುವರಿಸಿದರು. ಅವರೆಂದರೆ: ಮತಿಘಟ್ಟ ಕೃಷ್ಣಮೂರ್ತಿ, ಪಿ.ಆರ್. ತಿಪ್ಪೇಸ್ವಾಮಿ, ಸಿ. ಪಿ. ಕೆ., ರಾಗೌ, ಸುಧಾಕರ, ನಂ.ತಪಸ್ವೀ ಕುಮಾರ್, ಹ. ಕ. ರಾಜೇಗೌಡ, ಡಿ.ಕೆ.ರಾಜೇಂದ್ರ ಹಿ.ಶಿ. ರಾಮಚಂದ್ರೇಗೌಡ, ಜಿ. ವಿ. ದಾಸೇಗೌಡ, ವೈ.ಸಿ. ಭಾನುಮತಿ, ನಲ್ಲೂರು ಪ್ರಸಾದ್, ಮೇಟಿಕೆರೆ ಹಿರಿಯಣ್ಣ,  ಚಂದ್ರು ಕಾಳೇನಹಳ್ಳಿ,  ವಿ. ಎನ್. ಶಿವರಾಮು ಮುಂತಾದವರು.

ತಾವು ಬೇರೆಯಾಗುವುದಕ್ಕೆ ಮೊದಲು ಕುವೆಂಪು ಹಾಗೂ ಮಂಗಳೂರು ವಿಶ್ವವಿದ್ಯಾಲಯಗಳು ಮೈಸೂರು ವಿಶ್ವವಿದ್ಯಾಲಯದ  ವಿಸ್ತರಿತ ಕೇಂದ್ರಸ್ಥಾನಗಳಾಗಿದ್ದವು. ಜನಪದ ಸಾಹಿತ್ಯ ಕಾರ್ಯಯೋಜನೆಯಲ್ಲಿ  ಅವು ಮೈಸೂರು ವಿಶ್ವವಿದ್ಯಾಲಯವನ್ನು ಅನುಸರಿಸಿದವು. ಪ್ರತ್ಯೇಕ ವಿಶ್ವವಿದ್ಯಾಲಯಗಳಾದ ಮೇಲೂ ಅಲ್ಲಿನ ಕನ್ನಡ ಸಾಹಿತಿ-ಅಧ್ಯಾಪಕರು ಜನಪದ ಸಾಹಿತ್ಯದ ಮೇಲೆ ತೋರಿದ ಆಸಕ್ತಿ ಅನನ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ನೆಲೆಯಲ್ಲಿ  ಗಣನೀಯವಾದ ಕೆಲಸ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಕಡೆಯಿಂದ ಎಚ್.ಜೆ.ಲಕ್ಕಪ್ಪಗೌಡ, ತೀ.ನಂ. ಶಂಕರನಾರಾಯಣ, ಶ್ರೀಕಂಠ ಕೂಡಿಗೆ, ಬಸವರಾಜ ನೆಲ್ಲೀಸರ, ಎಂ. ಜಿ. ಈಶ್ವರಪ್ಪ, ಮೀರಾಸಾಬಿಹಳ್ಳಿ ಶಿವಣ್ಣ,  ಮುಂತಾದವರು ಹಾಗೂ ಮಂಗಳೂರು ವಿಶ್ವವಿದ್ಯಾಲಯ ವಲಯದಿಂದ ಗುಂಡ್ಮಿ ಚಂದ್ರಶೇಖರ ಐತಾಳ, ಅಮೃತ ಸೋಮೇಶ್ವರ, ಬಿ.ಎ.ವಿವೇಕ ರೈ, ಕೆ. ಚಿನ್ನಪ್ಪಗೌಡ, ಶಿವರಾಮಶೆಟ್ಟಿ,  ಅಭಯಕುಮಾರ್, ಎಸ್.ಎ. ಕೃಷ್ಣಯ್ಯ, ಅರವಿಂದ ಮಾಲಗತ್ತಿ, ಪ್ರಭಾಕರ ಜೋಷಿ, ಪಾಲ್ತಾಡಿ ರಾಮಕೃಷ್ಣ ಆಚಾರ್, ರಾಘವ ನಂಬಿಯಾರ್ ಈ ಮಂತಾದವರು ಜನಪದ ಸಾಹಿತ್ಯವಲ್ಲದೆ ಯಕ್ಷಗಾನ ಸಾಹಿತ್ಯದಲ್ಲೂ ಪ್ರಬುದ್ಧ  ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ಆರ್. ಸಿ. ಹಿರೇಮಠರು, ದೇ. ಜವರೇಗೌಡರು ತಮ್ಮ ವಿಶ್ವವಿದ್ಯಾಲಯದಲ್ಲಿ ಸೃಷ್ಟಿಸಿದ್ದ ಮೂರು ಹಂತದ ಜನಪದ ಸಾಹಿತ್ಯ- ಜಾನಪದ ಕ್ರಿಯಾಯೋಜನೆಯನ್ನು ಅನುಸರಿಸಿದರು. ಇವರ ನಾಯಕತ್ವದ ಮುಂದುವರಿಕೆಯಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಹುದೊಡ್ಡ ಮೊತ್ತದ ಜನಪದ ಸಾಹಿತ್ಯ ಹಾಗೂ ಜಾನಪದ ಅಧ್ಯಯನದ ಫಲಶ್ರುತಿಯಾಗಿ ಅನೇಕ “ಜಾನಪದ ಸಾಹಿತ್ಯದರ್ಶನ” ಸಂಪುಟಗಳು ಹೊರಬಂದವು. ಕರ್ನಾಟಕ ವಿಶ್ವವಿದ್ಯಾಲಯ ವಲಯದಲ್ಲಿ ಎಂ.ಎಸ್. ಸುಂಕಾಪುರ, ಎಂ ಟಿ. ಧೂಪದ, ಸೋಮಶೇಖರ ಇಮ್ರಾಪುರ, ಎಂ. ಎಸ್. ವೃಷಭೇಂದ್ರಸ್ವಾಮಿ,  ಎಂ. ಎಂ. ಕಲಬುರ್ಗಿ, ದೇವೇಂದ್ರಕುಮಾರ ಹಕಾರಿ, ಎಂ. ಬಿ. ನೇಗಿನಹಾಳ, ಎಂ. ಬಿ. ಕೊಟ್ರಶೆಟ್ಟಿ, ಸಿ. ಸಿ. ಎ. ಪೈ, ಎಲ್. ಆರ್. ಹೆಗಡೆ, ಎನ್. ಆರ್. ನಾಯಕ, ಶ್ರೀಮತಿ ಶಾಂತಿನಾಯಕ, ಎಂ.ಎಂ.ಪಡಶೆಟ್ಟಿ, ಜ್ಯೋತಿ ಹೊಸೂರ, ನಿಂಗಣ್ಣ ಸಣ್ಣಕ್ಕಿ, ಶ್ರೀರಾಮ ಇಟ್ಟಣ್ಣನವರ, ವಿಲಿಯಂಮಾಡ್ತ, ಎಂ. ಎನ್. ವಾಲಿ, ಬಿ. ವಿ. ಮಲ್ಲಾಪುರ, ಎಚ್. ಎಂ. ಮಹೇಶ್ವರಯ್ಯ, ಕೆ. ಆರ್. ದುರ್ಗಾದಾಸ್, ಸೈಯದ್ ಜಮೀರುಲ್ಲಾ ಷರೀಫ್, ಶಾಲಿನಿ ರಘುನಾಥ, ಸಿ. ಕೆ. ನಾವಲಗಿ ಮುಂತಾದವರು ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇವರೆಲ್ಲರ ಹಿಂದೆ ಹಿರಿಯ ಶಕ್ತಿಯಾದ ಬಿ. ಎಸ್. ಗದ್ದಗೀಮಠರು ಜನಪದ ಸಾಹಿತ್ಯದಲ್ಲಿ ಮಾಡಿದ ಅಪಾರ ಸೇವೆ ಬೆಂಬಲವಾಗಿ ನಿಂತಿದೆ. ಬಹುದೊಡ್ಡ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಗುಲಬರ್ಗಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಹಿರಿಯ – ಕಿರಿಯ ಅನೇಕ ಸಾಹಿತಿಗಳು ಜನಪದ ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನದಲ್ಲಿ ತಮ್ಮ ಪ್ರಾದೇಶಿಕ ವೈಶಿಷ್ಟ್ಯವನ್ನು ಸರಿಯಾಗಿಯೆ ದಾಖಲಿಸಿದ್ದಾರೆ. ಅವರುಗಳಲ್ಲಿ ಬಿ. ಬಿ. ಹೆಂಡಿ, ಎಂ. ಎಸ್. ಲಠ್ಠೆ, ಮ. ಗು. ಬಿರಾದಾರ, ವೀರಣ್ಣ ದಂಡೆ, ಪಿ.ಕೆ. ಖಂಡೋಬಾ, ಡಿ. ಬಿ. ನಾಯಕ ಮುಖ್ಯರು.

ಕನ್ನಡ ವಿಶ್ವವಿದ್ಯಾಲಯ ತನ್ನ ಕಡಿಮೆ ವಯಸ್ಸಿನಲ್ಲೆ ಗಣನೀಯ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಿದೆ. ಈ ನೆಲೆಯಲ್ಲಿ ಹಿ. ಚಿ. ಬೋರಲಿಂಗಯ್ಯ, ಎ. ವಿ. ನಾವಡ, ಗಾಯತ್ರಿ ನಾವಡ ದಾಖಲೆಯ ಕೆಲಸ ಮಾಡಿದ್ದಾರೆ. ಮಂಜುನಾಥ ಬೇವಿನಕಟ್ಟಿ, ಎಸ್. ಸಿ. ರಮೇಶ, ಮೊಗಳ್ಳಿ ಗಣೇಶ, ವೆಂಕಟೇಶ ಇಂದುವಾಡಿ, ವೀರೇಶ ಬಡಿಗೇರ ಇವರು ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.. ಹೊಸಪೇಟೆಯಲ್ಲಿದ್ದು ಬಸವರಾಜ ಮಲಶೆಟ್ಟರು ಜನಪದ ಸಾಹಿತ್ಯ – ಬಯಲಾಟ ಕ್ಷೇತ್ರದಲ್ಲಿ ಅಪೂರ್ವವಾದ ಸಾಧನೆ ಮಾಡಿದ್ದಾರೆ. ಪುರುಷೋತ್ತಮ ಬಿಳಿಮಲೆಯವರು ಬಹುದೊಡ್ಡ ಪ್ರೇರಣೆಯಾಗಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗವನ್ನು ಕಟ್ಟಿದವರು.

ರಾಜಧಾನಿ ವಿಶ್ವವಿದ್ಯಾಲಯವಾದ ಬೆಂಗಳೂರು ವಲಯದಲ್ಲಿ ಚಂದ್ರಶೇಖರ ಕಂಬಾರ, ಕಾಳೇಗೌಡ ನಾಗವಾರ, ಸಿದ್ಧಗಂಗಯ್ಯ ಕಂಬಾಳು, ಡಿ.ಲಿಂಗಯ್ಯ, ಜಿ.ಆರ್.ತಿಪ್ಪೇಸ್ವಾಮಿ, ರಂಗಾರೆಡ್ಡಿ ಕೋಡಿರಾಂಪುರ, ಕೆ. ಆರ್. ಸಂಧ್ಯಾರೆಡ್ಡಿ , ಧವಳಶ್ರೀ, ಸಿ.ವೀರಣ್ಣ, ಬಿಎಸ್.ಸ್ವಾಮಿ, ಎಸ್.ಪಿ. ಪದ್ಮಪ್ರಸಾದ್, ಟಿ.ಗೋವಿಂದರಾಜು, ರಾಜೇಗೌಡ ಹೊಸಹಳ್ಳಿ, ಎಂ.ಬೈರೇಗೌಡ, ಚಕ್ಕೆರೆ ಶಿವಶಂಕರ್, ಬೈರಮಂಗಲ ರಾಮೇಗೌಡ, ಕೃಷ್ಣಮೂರ್ತಿ ಹನೂರು, ಟಿ.ಎಸ್.ಸತ್ಯನಾಥ್, ಅಂದನೂರು ಶೋಭ, ಕುರುವ ಬಸವರಾಜ ಅವರಂಥ ಅನೇಕ ಜನಪದ ಸಾಹಿತ್ಯ ಕ್ಷೇತ್ರದ ಸಾಧಕರಿದ್ಧಾರೆ. ಈ ವಲಯದ ಮಹಾ ಪ್ರೇರಣೆಗಳೆಂದರೆ ಚಂದ್ರಶೇಖರ ಕಂಬಾರ ಮತ್ತು ಎಚ್.ಎಲ್.ನಾಗೇಗೌಡರು. ನಾಗೇಗೌಡರಲ್ಲಿ ಅಪಾರವಾದ ಜನಪದ ಸಾಹಿತ್ಯ ಸಂಗ್ರಹವಿದೆ.

ಜನಪದ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಕಟಣೆ, ಪ್ರಚಾರ, ಪ್ರಸಾರ, ವಿವರಣೆ, ವಿಶ್ಲೇಷಣೆ, ಸಮರ್ಥನೆ ಮತ್ತು ತಮ್ಮನ್ನು ತಾವೇ ಜನಪದ ಸಾಹಿತ್ಯಕ್ಕೆ ಸಮರ್ಪಿಸಿಕೊಳ್ಳುವ ಚಟುವಟಿಕೆ ಎಲ್ಲಿಗೆ ತಲುಪಿತು ಎಂದರೆ ಜನಪದ ಸಾಹಿತ್ಯವನ್ನು ಶಿಷ್ಟಸಾಹಿತ್ಯ ಚಟುವಟಿಕೆಗೆ ಸರಿಸಮವಾಗಿಸುವ ಪರ‍್ಯಾಯ ಚಿಂತನೆ ಹುಟ್ಟಿಕೊಂಡಿತು. ಇನ್ನೊಂದು ರೀತಿಯಲ್ಲಿ ಈ ಚಟುವಟಿಕೆ ಶಿಷ್ಟಸಾಹಿತ್ಯಕ್ಕೆ ತೋರಿದ ಸೃಜನಾತ್ಮಕ ಪ್ರತಿಭಟನೆಯಂತೆಯೂ ಕಾಣುತ್ತದೆ. ಆರಂಭಕಾಲದಲ್ಲಿ ಶಿಷ್ಟಸಾಹಿತ್ಯಕ್ಕೆ ಸೌಷ್ಟವವನ್ನು ಭರ್ತಿ ಮಾಡಿಕೊಳ್ಳಲು ಹುಟ್ಟಿದ ಜನಪದ ಸಾಹಿತ್ಯ ಸಂಗ್ರಹಪ್ರೇಮ ಇಪ್ಪತ್ತನೆಯ ಶತಮಾನದ ಏಳನೆಯ ದಶಕದ ಹೊತ್ತಿಗೆ ಶಿಷ್ಟಸಾಹಿತ್ಯಕ್ಕೆ ಸಮಸಾಹಿತ್ಯವೆಂಬಂತೆ ಎದ್ದುನಿಂತಿತು. ಇದಕ್ಕೆ ಸಮರ್ಥನೆ ಎನ್ನುವಂತೆ ೧೯೬೬ರಲ್ಲಿ ತರೀಕೆರೆಯಲ್ಲಿ, ೧೯೬೯ರಲ್ಲಿ ಮಂಗಳೂರಿನಲ್ಲಿ ಹಾಗೂ ೧೯೭೧ ರಲ್ಲಿ ನಾಗಮಂಗಲದಲ್ಲಿ ನಡೆದ ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನಗಳೆ ಸಾಕ್ಷಿ. ಮೊದಲ ಸಮ್ಮೇಳನದ ಜವಾಬ್ದಾರಿಯನ್ನು ಜನಪದ ಸಾಹಿತ್ಯ ಕ್ಷೇತ್ರದ ನವಕೋಗಿಲೆ ಎಂದು ಹೆಸರು ಪಡೆದಿದ್ದ ಕೆ.ಆರ್.ಲಿಂಗಪ್ಪನವರು ವಹಿಸಿದ್ದರು. ಉಳಿದೆರಡು ಸಮ್ಮೇಳನಗಳ ಜವಾಬ್ದಾರಿಯನ್ನು ಐ.ಎ.ಎಸ್. ಅಧಿಕಾರಿಯೂ ಜಾನಪದ ಲೋಕದ ಸೃಷ್ಟಿಕರ್ತರೂ ಆದ ಎಚ್.ಎಲ್.ನಾಗೇಗೌಡರು ನಿರ್ವಹಿಸಿದರು. ದೊಡ್ಡಪ್ರಮಾಣದ ಇಂತಹ ಜನಪದ ಸಾಹಿತ್ಯ ಸಮ್ಮೇಳನಗಳನ್ನು ಅನುಸರಿಸಿ  ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲಿ ಅನೇಕ ಜನಪದ ಸಾಹಿತ್ಯ ಸಮ್ಮೇಳನಗಳು ನಡೆದವು.

ಇಂತಹ ಜನಪದ ಸಾಹಿತ್ಯ ಸಮ್ಮೇಳನಗಳ ಹಿಂದೆ ನಾಡಿನ ಹೆಸರಾಂತ ಸಾಹಿತ್ಯ ವಿಮರ್ಶಕರು ನಿಂತು ತಮ್ಮ ತಮ್ಮ ನೆಲೆಯಲ್ಲಿ ಜನಪದ ಸಾಹಿತ್ಯದ ಮಹತ್ವವನ್ನು  ಶೈಕ್ಷಣಿಕವಾಗಿ ಎತ್ತಿ ಹಿಡಿಯುವ ಪ್ರಯತ್ನ ನಡೆಸಿದ್ದರು. ತೀ. ನಂ. ಶ್ರೀಕಂಠಯ್ಯನವರಂಥ ಹಿರಿಯ ಕಾವ್ಯಮೀಮಾಂಸಕರು ತಮ್ಮ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕಾವ್ಯಲಕ್ಷಣಕ್ಕೆ

ಜನಪದ ಸಾಹಿತ್ಯದಿಂದ  ಉದಾಹರಣೆಗಳನ್ನು ಎತ್ತಿಕೊಂಡು ಅದರ ಘನತೆಯನ್ನು ಹೆಚ್ಚಿಸಿದರು. ಈ ನಿಟ್ಟಿನಲ್ಲಿ ಹಿರಿಯ ಕವಿ ಕಾವ್ಯಮೀಮಾಂಸಕರಾದ ಜಿ. ಎಸ್. ಶಿವರುದ್ರಪ್ಪ ಮತ್ತು

ಸಿ. ಪಿ. ಕೃಷ್ಣಕುಮಾರ್ ಅವರ ಕೊಡುಗೆ ಸ್ಮರಣೀಯವಾದುದು. ಸಿ. ಪಿ. ಕೆ. ಯವರು ಜನಪದ ಸಾಹಿತ್ಯದ ಸಾಮರ್ಥ್ಯವನ್ನು ಯಾಹೊತ್ತೂ ಶಿಷ್ಟಸಾಹಿತ್ಯಕ್ಕೆ ಕಡಿಮೆ ಇಲ್ಲವೆಂಬಂತೆ ಹಟಹಿಡಿದು ಬರೆದಿದ್ದಾರೆ. ಜನಪದ ಸಾಹಿತ್ಯವನ್ನೂ ಶಿಷ್ಟಸಾಹಿತ್ಯದ ಕ್ರಮದಂತೆ ಕಾವ್ಯಮೀಮಾಂಸಾ ಪರಿಧಿಗೆ ತರಬಹುದು ಎಂಬುದನ್ನು ಶ್ರಮವಹಿಸಿ ವೀರಣ್ಣ ದಂಡೆಯವರು ಸಾಧಿಸಿ ತೋರಿಸಿದ್ದಾರೆ.

ಜನಪದ ಸಾಹಿತ್ಯದ ಮೌಲ್ಯಮಾಪನ ದೃಷ್ಟಿಯಿಂದ ಗಿರಡ್ಡಿ ಗೋವಿಂದರಾಜು ಅವರ ‘ಜನಪದ ಗೀತೆ’ ಕೃತಿ ಜನಪದ ಸಾಹಿತ್ಯ ಪ್ರೇಮಿಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಯನ್ನು ಸೃಷ್ಟಿಮಾಡಿತು. ಈ ಬರಹಕ್ಕೆ ಸಿಪಿಕೆಯವರು ತೀವ್ರವಾಗಿ ಪ್ರತಿನುಡಿದಿದ್ದಾರೆ. ಜನಪದ ಸಾಹಿತ್ಯದ ಸಾಹಿತ್ಯಕ ಮೌಲ್ಯಮಾಪನದ ದೃಷ್ಟಿಯಿಂದ ಚಂದ್ರಶೇಖರ ಕಂಬಾರ, ರಾಗೌ ಮತ್ತು ಹಿ. ಶಿ. ರಾಮಚಂದ್ರೇಗೌಡ ಅವರ ನಿಲುವು ‘ಪ್ರಕಾರನ್ಯಾಯ’ದ ನೆಲೆಯಿಂದ ವ್ಯಕ್ತವಾಗಿದೆ. ಜನಪದ ಸಾಹಿತ್ಯ ಅಖಂಡ ಜಾನಪದದ ‘ಉಪ ಉತ್ಪನ್ನ’ ಎಂದು ಕಂಬಾರರು ಹೇಳಿದರೆ; ಜನಪದ ಸಾಹಿತ್ಯದ ಅನನ್ಯತೆಯೆ ಬೇರೆ ಎಂದು ರಾಗೌ ಪ್ರತಿಪಾದಿಸಿರುತ್ತಾರೆ. ಈ ವಿಷಯ ಕುರಿತು ಹಿ. ಶಿ. ರಾಮಚಂದ್ರೇಗೌಡ ಅವರ ‘ಪ್ರಕಾರನ್ಯಾಯ’ ಮತ್ತು ‘ಪ್ರಕಾರ ಅಸ್ತಿತ್ವ’ ದೃಷ್ಟಿಯಿಂದ ಜನಪದ ಸಾಹಿತ್ಯವನ್ನು ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ ಮತ್ತು ಅಸ್ತಿತ್ವ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.  ಜನಪದ ಸಾಹಿತ್ಯವನ್ನು ಬೇರೆ ಬೇರೆ ಮಗ್ಗಲುಗಳಲ್ಲಿ ವಿವರಿಸುವ  ಮತ್ತು ವಿಮರ್ಶಿಸುವ ಪ್ರಯತ್ನಗಳನ್ನು ಕರ್ನಾಟಕದ ಅನೇಕ ಸಾಹಿತ್ಯ ಚಿಂತಕರು ಮಾಡಿದ್ದಾರೆ.