ಪರ್ಯಾಯದ ಬೆಲೆ : ಗೊತ್ತಿಲ್ಲದ ನೆಲೆ

ಈಗ ಜಗತ್ತಿನಾದ್ಯಂತ ಪರ್ಯಾಯ ಜ್ಞಾನದ ಹುಡುಕಾಟ ತುಂಬ ತುರ್ತಿನ ಕೆಲಸವೆಂಬಂತೆ ನಡೆಯುತ್ತಿದೆ. ಅಭಿವೃದ್ಧಿಶೀಲ ದೇಶಗಳು ಇರುವ ಸೌಕರ್ಯಗಳನ್ನು ಇನ್ನೂ ಹೆಚ್ಚಿಸಿಕೊಳ್ಳುವ ಕಾರಣಕ್ಕೆ ಪರ‍್ಯಾಯ ಜ್ಞಾನದ ಹುಡುಕಾಟದಲ್ಲಿ ತೊಡಗಿವೆ. ಅಭಿವೃದ್ಧಿ  ಹೊಂದುತ್ತಿರುವ ರಾಷ್ಟ್ರಗಳು ‘ಪ್ರಭುರಾಷ್ಟ್ರಗಳ  ಪ್ರಭುತ್ವ ವಿಜ್ಞಾನ’ಕ್ಕೆ ಪರ‍್ಯಾಯವಾಗಿ ತಮ್ಮ ತಮ್ಮ ದೇಶದ ‘ಪಾರಂಪರಿಕ ಜ್ಞಾನ ಮಾದರಿ’ಗಳನ್ನು  ಸಮಕಾಲೀನಗೊಳಿಸಿಕೊಳ್ಳುವ ಹವಣಿಕೆಯಲ್ಲಿವೆ. ಕರ್ನಾಟಕದಲ್ಲಿ ಜನಪದ ಸಾಹಿತ್ಯವನ್ನು ದೇಸಿಸಾಹಿತ್ಯವೆಂದೂ, ಜಾನಪದವನ್ನು ದೇಶಿಜ್ಞಾನವೆಂದೂ ಹೆಸರಿಸಿ ಅವುಗಳ ಪ್ರತ್ಯೇಕತೆ ಮತ್ತು ವಿಶಿಷ್ಟತೆಯನ್ನು ಬಹಳ ಕಾಲದಿಂದಲೂ ಗುರುತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ತಲೆಮಾರಿನ ಜಾನಪದ ಚಿಂತಕರು ಜಾನಪದವನ್ನು ಸiಕಾಲೀನ ಜ್ಞಾನ – ವಿಜ್ಞಾನವನ್ನಾಗಿ ನಿರ್ವಚಿಸಿ ಮಂಡಿಸುತ್ತಿದ್ದಾರೆ. ಉದಾಹರಣೆಗಾಗಿ ಹಿ. ಶಿ. ರಾಮಚಂದ್ರೇಗೌಡರ ಕೆಳಗಿನ ನುಡಿಗಳನ್ನು ಗಮನಿಸಿ;

‘ಪುರದಪುಣ್ಯಂ ಪುರುಷರೂಪಿಂದೆ ಪೋಗುತಿದೆ
ಪರಿಜನದ ಭಾಗ್ಯವಡವಿಗೆ ನಡೆಯುತಿದೆ.’
                   – ರಾಘವಾಂಕ

“ವಿಜ್ಞಾನವೆಂಬ ಯಜಮಾನನಿಗೆ ಜನತೆಯ ಜ್ಞಾನ ಸೊರಗಿ ಸೋತುಹೋಯಿತು. ಇಲ್ಲಿಂದಲೆ ಬಡವರ ಸೋಲು ಆರಂಭವಾಯಿತು. ಎಲ್ಲ ಸ್ಥಳೀಯ ಕುಶಲಕರ್ಮಿಗಳು ಕೈಚೆಲ್ಲಿದರು. ಆ ಮೂಲಕ ಬಹುಜನರ ಸೃಜನಶೀಲತೆ ತಟಸ್ಥವಾಯಿತು. ಅನೇಕ ಶತಮಾನಗಳ ಜ್ಞಾನ ಅವನತಿಯ ಹಾದಿಹಿಡಿಯಿತು. ಇದೆ ಜಾನಪದ ; ಜನರ ಜ್ಞಾನ-ವಿಜ್ಞಾನ. ಒಂದು ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ, ಬಹುಜನರು ಕ್ರಿಯಾಶೀಲರಾಗಬೇಕಾದರೆ,  ಯುಗಶೀಲವಾದ ಜಾನಪದ ಮರುಹುಟ್ಟು ಪಡೆಯಬೇಕು ಮತ್ತು ಸಮಕಾಲೀನವಾಗಬೇಕು. ಧುತ್ತನೆ ಎದ್ದು ನಿಂತು ಬಡವರ ಹಾಗೂ ಬಹುಜನರ ಮನಸ್ಸು ಮತ್ತು ಶ್ರಮವನ್ನು ನಿಷ್ಕ್ರಿಯಗೊಳಿಸಿದ ಆಧುನಿಕತೆ ನಿಶ್ಶಸ್ತ್ರೀಕರಣಗೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮನ್ನು ಅಮೆರಿಕ ಕಾಡಿದಂತೆ, ಅಮೆರಿಕವನ್ನು ಬಿನ್ ಲಾಡೆನ್ ಕಾಡಿದಂತೆ ನವ ಆಧುನಿಕತೆ ನಮ್ಮನ್ನೆಲ್ಲ ನಿರಂತರ ಭಯದಲ್ಲಿ ಇಟ್ಟಿರುತ್ತದೆ” (ಪುರದ ಪುಣ್ಯ ೬೧.೧೯೦೪).

ನಮ್ಮ ಜನಪದ ಸಾಹಿತ್ಯದ ಸಂಗ್ರಹ, ಅಧ್ಯಯನ ತಲುಪಬೇಕಾದ ಗುರಿ ಇದು. ಇಲ್ಲದಿದ್ದಲ್ಲಿ ಎಂದಿನಂತೆ ಜನಪದ ಸಾಹಿತ್ಯ ನಶಿಸಿಹೋಗುತ್ತಿದೆ, ನಾವು ಕಳೆದು ಹೋಗುತ್ತಿದ್ದೇವೆ ಎಂದು ಪರಿತಪಿಸುತ್ತಲೇ ಇರಬೇಕಾಗುತ್ತದೆ. ಈ ಪರ‍್ಯಾಯದ ಪ್ರಶ್ನೆ ಸರಳವಾದುದಲ್ಲ. ಅದು ನಮ್ಮ ಜೀವನ ಭದ್ರತೆಯ ಹುಡುಕಾಟ. ಜಾಗತೀಕರಣವೆಂಬ ವಸ್ತುರಾಕ್ಷಸನಿಂದ ಇಡೀ ಭಾರತೀಯ ಸಂಸ್ಕೃತಿ ವಸ್ತುಸಂಸ್ಕೃತಿಯಾಗಿ ಪರಿವರ್ತಿತವಾಗುತ್ತಿದೆ. ತಮ್ಮಲ್ಲೆ ವಸ್ತುವನ್ನು ಸೃಷ್ಟಿ ಮಾಡುವ ಜೀವನ ಸಂಸ್ಕೃತಿಯ ಆಶಯಗಳಾದ ಭೂಮಿ, ನೀರು, ಗಾಳಿ, ಆಹಾರ ಕಲುಷಿತಗೊಳ್ಳುತ್ತಿವೆ. ಜೀವನ ಸಂಸ್ಕೃತಿಯ ಅಭಿವ್ಯಕ್ತಿಗಳಾದ ಹೆಣ್ಣು, ಕಲಾವಿದರು, ಮಕ್ಕಳು ಮತ್ತು ಸಮುದಾಯಗಳು ಶಕ್ತಿಗುಂದುತ್ತಿವೆ.  ಜೀವನ ಸಮತೋಲನಕ್ಕೆ ಒಡನಾಡಬೇಕಾದ ಅಂಚಿಗೆ ಸರಿದವರು, ರಾಜಕೀಯವನ್ನು ಎಟುಕಿಸಿಕೊಳ್ಳಲಾಗದ ಕಿರುಸಮುದಾಯಗಳು, ತಳ – ಕೆಳವರ್ಗದವರು ಸಾಂಸ್ಕೃತಿಕ ಅನನ್ಯತೆಯನ್ನು ಪಡೆಯದೆ ಹೋಗುತ್ತಾರೆ. ಅವರಿಗೊಂದು ಇತಿಹಾಸ ಮತ್ತೂ ದಕ್ಕದೆ ಹೋಗುತ್ತದೆ. ಇದರ ಅರ್ಥ ಭಾರತವನ್ನು ಇರುವ ಹಾಗೆಯೇ ಉಳಿಸಿಕೊಳ್ಳುವುದಲ್ಲ. ಜಾನಪದ ಜೀವನ ಚಿಂತನೆ ಹೇಳುವ; ‘ಎಲ್ಲರಿಗೂ ಬದುಕು ಮತ್ತು ಎಲ್ಲರಿಗೂ ಅವಕಾಶ’ ಎಂಬುದನ್ನು ಸಮಕಾಲೀನವಾಗಿ ಸಾಧ್ಯಮಾಡಿಕೊಡುವುದು. ಅರ್ಥಾತ್, ಜ್ಞಾನ ಮತ್ತು ಅವಕಾಶ ಎಲ್ಲರ ಸೊತ್ತು ಮತ್ತು ಬಳಕೆಯಾಗುವಂತೆ ನೊಡಿಕೊಳ್ಳುವುದು. ಜಾನಪದ ಅಧ್ಯಯನ ಅಂಥ ಹೊಸದಾರಿಯಲ್ಲಿ ನಡೆಯುತ್ತಿರುವುದನ್ನು ನಾವು ಮನ್ನಿಸಬೇಕು. ಜನಪದ ಸಾಹಿತ್ಯವನ್ನು   ಕಿರಿದಾಗಿ ನಿರ್ವಚಿಸಿ ಅದರ ಸ್ಥಾನಮಾನವನ್ನು ಶಿಷ್ಟ ಸಾಹಿತ್ಯದ ಕೆಳಗೆ ಇಟ್ಟು ನೋಡುವ ಮನೋಧರ್ಮ ಹುಟ್ಟಿರುವುದೇ ವರ್ಗಶಾಹಿ ಮತ್ತು  ವಸಾಹತುಶಾಹಿ ಜ್ಞಾನ ಮಾದರಿಗಳು ನಮ್ಮ ಮೇಲೆ ಸವಾರಿ ನಡೆಸುತ್ತಿರುವುದರಿಂದಾಗಿದೆ.  ಆ ಕಾರಣದ ಮೇಲೆ ಜನಪದ ಸಂಸ್ಕೃತಿ ಮತ್ತು ಜನಪದ ಸಾಹಿತ್ಯದ ಮೌಲ್ಯಮಾಪನ ಸಮಸಂಸ್ಕೃತಿ ಸ್ಥಾನಮಾನದ ಮೇಲೆ ನಡೆಯಬೇಕಿದೆ.

ಕನ್ನಡ ಜನಪದ ಸಾಹಿತ್ಯ ಸಂಗ್ರಹ ಎರಡು ನೆಲೆಯಲ್ಲಿ ನಡೆಯಿತು. ರಾಷ್ಟ್ರೀಯ ಪುನರುತ್ಥಾನದ ಕಾರಣದಿಂದ ಮತ್ತು ರಾಷ್ಟ್ರದ ಮೂಲ ಸಂಪತ್ತಾದ ಎಲ್ಲವನ್ನೂ ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ, ರಾಷ್ಟ್ರೀಯ ಸಂಪತ್ತುಗಳಲ್ಲಿ ಒಂದಾದ ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂಗ್ರಹಿಸುವ ಪ್ರಯತ್ನ ಮೊದಲನೆಯದು. ಈ ಪ್ರವೃತ್ತಿ ಸಂಪೂರ್ಣವಾಗಿಯೂ ಭಾವನಾತ್ಮಕವಾದುದು. ರಾಷ್ಟ್ರೀಯ ಪುನರುತ್ಥಾನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗವಹಿಸಿದ ನವೋದಯ ಸಾಹಿತಿಗಳು ಜನಪದ ಸಾಹಿತ್ಯವನ್ನು ಈ ಹಿನ್ನೆಲೆಯಲ್ಲಿ ಸಂಗ್ರಹಿಸಿದರು. ಆದಕಾರಣ ‘ಸಾಹಿತ್ಯವೆಂಬ ಸಾಮಗ್ರಿಗೆ’ ಅವರು ಒತ್ತುಕೊಟ್ಟರು. ಅದರ ಉತ್ಪಾದಕರು, ಅವರ ಅಸ್ತಿತ್ವ, ನೆಲೆ-ಬೆಲೆ ಮತ್ತು ಜನಪದ ಸಾಹಿತ್ಯದ ಸಾಮಾಜಿಕ ಸಾಂಸ್ಕೃತಿಕ ಸಂದರ್ಭದ ಕಡೆಗೆ ಗಮನ ಹರಿಸಲಿಲ್ಲ. ರಾಷ್ಟ್ರದ ಆರಾಧನೆಯಂತೆ ಜನಪದ ಸಾಹಿತ್ಯವೂ ಒಂದು ರೀತಿಯ ಆರಾಧನೆಯ ಸಾಮಗ್ರಿಯೆ ಆಯಿತು. ಆ ಸಾಹಿತ್ಯವನ್ನು ಸಂಗ್ರಹಿಸುವ, ಪ್ರೇಮಿಸುವ ಮತ್ತು ಕೊಂಡಾಡುವ ಪ್ರವೃತ್ತಿ ತುಂಬು ಹೊಳೆಯಂತೆ ಹರಿಯಿತು. ಜನಪದ ಸಾಹಿತ್ಯವೂ ದೇಶವನ್ನು ಕಟ್ಟುವ ಒಂದು ಉಪಕರಣವಾಗಿ ಬಳಕೆಯಾಯಿತು. ಅಷ್ಟೇ ಪ್ರಮಾಣದಲ್ಲಿ ಸಾಹಿತ್ಯವೂ ಸಂಗ್ರಹವಾಯಿತು. ಜನಪದ ಸಾಹಿತ್ಯ ಸಂಗ್ರಹ ಜಂಗಮರು ತಾವಿರುವ ಕಡೆಯಲ್ಲಿ ಮಾತ್ರವಲ್ಲದೆ, ಜನಪದ ಸಾಹಿತ್ಯ ಸಂಗ್ರಹಯಾತ್ರೆಯನ್ನು ಕೈಕೊಂಡರು. ಈ ಸಂಗ್ರಹಯಾತ್ರೆ, ಅದನ್ನು ಕುರಿತ ಪ್ರಚಾರವೂ ಪ್ರಶಂಸೆಯೂ ಆಗಿತ್ತು. ಅದು ಅಗತ್ಯ ಭೂಮಿಕೆಯೂ ಆಯಿತು.

ಯಾವಾಗ ಜಾನಪದ ಎಂಬುದು ಅಧ್ಯಯನದ ವಿಷಯವೂ ಆಯಿತೊ ಆಗ ಅದಕ್ಕೊಂದು ಶಾಸ್ತ್ರೀಯ ಶಿಸ್ತು ಸೇರಿಕೊಂಡಿತು. ಅಲ್ಲಿಂದ ಜನಪದ ಸಾಹಿತ್ಯ ಸಂಗ್ರಹದ ಭರಾಟೆ ಕಡಿಮೆಯಾಯಿತು. ಯಾವಾಗ ಇದು ವೈಜ್ಞಾನಿಕವೆಂಬ ಹೆಸರಿನ ಪ್ರಜ್ಞಾಪೂರ್ವಕ ಚಟುವಟಿಕೆ ಆಯಿತೊ ಅಲ್ಲಿಂದ ಪ್ರೇಮದ ವಿವಾಹ ಕೌಟುಂಬಿಕ ಜವಾಬ್ದಾರಿ ಆದಂತಾಯಿತು. ಒಂದು ರೀತಿಯಲ್ಲಿ ಇದು ಜನಪದ ಸಾಹಿತ್ಯ ಸಂಗ್ರಹಕ್ಕೆ ತಗುಲಿದ ಪೆಟ್ಟು ಎನಿಸಿದರೂ ಮತ್ತೊಂದು ಬಗೆಯಲ್ಲಿ ಆ ಸಾಹಿತ್ಯದ ಅಂತರಂಗ ಪ್ರಕಾಶಿಸಲು ಅನುಕೂಲವಾಯಿತು.

ಅಭಿಮಾನದ ದೃಷ್ಟಿಯಿಂದ ಸಂಗ್ರಹಿಸಲಿ ಅಥವಾ ಅಧ್ಯಯನ ದೃಷ್ಟಿಯಿಂದ ಸಂಗ್ರಹಿಸಲಿ ಈ ಸಂಗ್ರಹ ಕಾರ್ಯ ಮಾತ್ರ ಸುಲಭದ್ದಲ್ಲ. ಮೂಲತ: ಅದು ಸಂಗ್ರಾಹಕನ ಅನುಭವ, ಬದ್ಧತೆ, ಶ್ರಮ ಮತ್ತು ಆರ್ಥಿಕ ಅನುಕೊಲತೆಯನ್ನು  ಅಪೇಕ್ಷಿಸುತ್ತದೆ. ಆರಂಭಿಕ ಕಾಲದಲ್ಲಿ ಸಂಗ್ರಾಹಕರಲ್ಲಿ ಅಥಿ೯ಕ ಬಡತನವಿದ್ದರೂ, ಅವರ ಸಾಂಸ್ಕೃತಿಕ ಸ್ವಾಭಿಮಾನವೆಂಬುದು ಕಷ್ಟನಷ್ಟಗಳ ಪರಿವೆಯನ್ನು ಮರೆತು ಜನಪದ ಸಾಹಿತ್ಯವನ್ನು ಹಾಡಿ, ಸಂಗ್ರಹಿಸಿ ಜನತೆಯ ಮುಂದೆ ಮಂಡಿಸಿತು. ಇದೊಂದು ಅಧ್ಯಯನದ ವಿಷಯವಾದ ತಕ್ಷಣದಿಂದ ಅದಕ್ಕೊಂದು ಉದ್ಯಮದ ಸ್ವರೂಪ ಉಂಟಾಯಿತು. ಲಾಭ-ನಷ್ಟಗಳ ಪರಿವೆ ಸಂಗ್ರಾಹಕನನ್ನು ಕಾಡಹತ್ತಿತು. ಈ ಹೊತ್ತಿಗೆ ಜನಪದ ಸಾಹಿತ್ಯವನ್ನು ಜನಪ್ರಿಯ ಸಾಹಿತ್ಯದಂತೆ  ಪ್ರಕಟಿಸಿ  ಬೀದಿಬದಿಯಲ್ಲಿ ಮಾರಿ  ಕಾಸು  ಮಾಡುವ  ಪರಿಸ್ಥ್ಥಿತಿ  ನಿಂತುಹೋಯಿತು. ವ್ಯಾಪಾರಿಗಳು ಈ ಸಾಹಿತ್ಯವನ್ನು ಪ್ರಕಟಿಸುವುದನ್ನು ನಿಲ್ಲಿಸಿದರು, ಪ್ರಕಾಶಕರೆಂಬುವವರು ಹುಟ್ಟಿಕೊಂಡರು. ಅಕೆಡೆಮಿಷಿಯನ್ ಮತ್ತು ಪ್ರಕಾಶಕರೆಂಬ ಉದ್ಯಮ ಆಧಾರಿತ ದಣಿಗಳಿಂದಾಗಿ ಹೊಸ ಸಂಗ್ರಹಕಾರರು ಮುಂದೆ ಬರುವುದಾಗಲಿಲ್ಲ. ಜನಪದಸಾಹಿತ್ಯ ಸಂಗ್ರಹಕಾರ್ಯ ಬಹಳ ಶಿಸ್ತಿನ ವಿಷಯವಾಯಿತು. ಸಂಗ್ರಹಕಾರ್ಯಕ್ಕೂ ಹೆಚ್ಚು ಓದು  ಮತ್ತು ವಿದ್ವತ್ತು  ಬೇಕೆನಿಸಿತು. ಸಹಜವಾಗಿ ಹವ್ಯಾಸಿ, ಭಾಷಾಪ್ರೇಮಿ ಮತ್ತು  ಅಲೆಮಾರಿ  ಸಂಗ್ರಹಕಾರರು  ಹಿಂದೆ  ಸರಿದರು.  ಜನಪದ  ಸಾಹಿತ್ಯವನ್ನು, ಸಂಗ್ರಹಿಸುವುದಕ್ಕಿಂತ ಅದರ ಸತ್ವ ಮತ್ತು ಸಾರ್ಥಕತೆಯ  ಪ್ರಶ್ನೆ ಮುಂದೆ ಬಂದು ವಿದ್ವಾಂಸರು ಮಾತ್ರವೇ ಈ ಕೆಲಸವನ್ನು ಮಾಡಬೇಕು ಎಂಬ ಮನೋಧರ್ಮ ಉಂಟಾಯಿತು. ಜನಪದ ಸಾಹಿತ್ಯ  ಸಂಗ್ರಹ ಹಿಂದೆ ಸರಿದುದಕ್ಕೆ ಅದು ಒಂದು ಅಧ್ಯಯನ ಶಿಸ್ತಿಗೆ ಒಳಪಟ್ಟುದಷ್ಟೆ ಕಾರಣವಲ್ಲ. ಆಧುನಿಕವೆಂಬ ವಸ್ತುಪ್ರಧಾನ ಚಿಂತನೆ ಮತ್ತು ಬಳಕೆಯ ಜೀವನ ವಿಧಾನ ಪಾರಂಪರಿಕ ಮತ್ತು ಸ್ಥಳೀಯವೆಂಬ ಎಲ್ಲ ಸಾಂಸ್ಕೃತಿಕ ಉತ್ಪನ್ನಗಳನ್ನು ಜನಬಳಕೆಯಿಂದ ದೂರಮಾಡಲು ತೊಡಗಿದ್ದು  ಮುಖ್ಯಕಾರಣವಾಗಿದೆ. ಸೀಮಿತ ವರ್ಗದ ವಿಶಿಷ್ಟ ಚಟುವಟಿಕೆಯಾಗಿದ್ದ ಬರಹದ ಸಾಹಿತ್ಯ ಆಧುನಿಕತೆಯ ಜೊತೆಗೆ  ಸ್ಪರ್ಧಿಸಿ ಮತ್ತು ಹೊಂದಿಕೊಂಡು ಮರುಹುಟ್ಟು ಪಡೆದ ಕಾರಣದಿಂದ ಅದು ವರ್ಗಾತೀತವಾದ ಸಾಹಿತ್ಯಕ ಚಟುವಟಿಕೆಯಾಯಿತು. ಎಲ್ಲಾ ಜಾತಿ, ಪಂಗಡದ ವ್ಯಕ್ತಿಗಳೂ ಈ ಸಾಹಿತ್ಯದೊಂದಿಗೆ ಸ್ಪಂದಿಸುವುದು ಸಾಧ್ಯವಾಯಿತು. ಇದರಿಂದ ಸಾಹಿತ್ಯವೆಂದರೆ ಬರಹಗಾರರು ಬರೆದದ್ದು ಎಂಬ ಪ್ರತೀತಿ ದೃಢವಾಯಿತು. ಹೆಚ್ಚು ವ್ಯಕ್ತಿಗಳು ತಮ್ಮ ವ್ಯಕ್ತಿನಿಷ್ಠೆ ಮತ್ತು ವ್ಯಕ್ತಿವೃತ್ತಿ  ಸಾಮರ್ಥ್ಯದೊಡನೆ ಈ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಜೊತೆ ಜೊತೆಯಲ್ಲೆ ಓದು ಮಾತ್ರ ಅರ್ಹತೆ, ‘ಓದಿಲ್ಲದ್ದು’ ಅನರ್ಹತೆ ಎಂಬ ಜೀವನ ತತ್ವ ಬಳಕೆಗೆ ಬಂತು.  ಸಹಜವಾಗಿಯೆ ಅವಿದ್ಯಾವಂತರ ಜನಪದ ಸಾಹಿತ್ಯ ಸತ್ವದಲ್ಲಿ ಸಂಪುಷ್ಟವಾಗಿದ್ದರೂ ಗುರುತುಪಡೆಯುವಲ್ಲಿ ಹಿಂದೆ ಬಿದ್ದಕಾರಣ ವಿಸ್ಮೃತಿಗೆ ತುತ್ತಾಯಿತು. ಶಿಷ್ಟ ಸಾಹಿತ್ಯದ ನಿರಂತರ ಪ್ರಯೋಗಶೀಲತೆ ಜನಪದಸಾಹಿತ್ಯದ ನಿಧಾನ ಹಾಗೂ ನಿಶ್ಚಿತಚಲನೆಯನ್ನು ಹಿಂದೆ ಹಾಕಿತು. ಇದು ನಿಶ್ಚಿತ ಅಭಿರುಚಿಗೆ ನಿರಂತರ ಅಭಿರುಚಿ ಒಡ್ಡಿದ ಸವಾಲುಕೂಡ ಹೌದು. ಜನಪದ ಸಾಹಿತ್ಯ ಶಿಷ್ಟಸಾಹಿತ್ಯದಂತೆ ‘ಅಧಿಕೃತ ಸಾಹಿತ್ಯ’ವಾಗಲಿಲ್ಲ ಎಂಬ ಸತ್ಯಸ್ಯಸತ್ಯವೂ ಜನಪದ ಸಾಹಿತ್ಯ ಇನ್ನಿತರ ಆಧುನಿಕ ಸಾಹಿತ್ಯ ಪದ್ಧತಿಗಳೊಡನೆ ಸ್ಪರ್ಧಿಸದೆ ಹಿಂದೆ ಬೀಳಲು ಕಾರಣವಾಗಿದೆ. ಉದ್ಯಮ, ಉದ್ಯೋಗ, ವ್ಯತ್ತಿಯಲ್ಲದ ಈ ಸಾಹಿತ್ಯ ಆಧುನಿಕ ತತ್ತ್ವವಾದ ‘ಸ್ಪರ್ಧೆ ಮತ್ತು ಗೆಲ್ಲು’ ಸಮರದಲ್ಲಿ ಸೋಲೊಪ್ಪಿಕೊಳ್ಳುವುದು ಅನಿವಾರ್ಯವಾಯಿತು.

ಆದರೆ ಜನಪದ ಸಾಹಿತ್ಯದ ಸತ್ವ ಮತ್ತು ಸಾತತ್ಯ ಎಲ್ಲಿದೆ ಎಂಬುದನ್ನು ಗುರುತಿಸಿಕೊಳ್ಳಲಾಗದ ಹೆಳವತನ ನಮ್ಮನ್ನು ಕಾಡಬೇಕಿತ್ತೆ? ನವೋದಯ ಸಾಹಿತಿಗಳಾದ ಬಿ. ಎಂ. ಶ್ರೀ, ದ. ರಾ. ಬೇಂದ್ರೆ,  ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ- ಈ ಮೊದಲಾದ ಹಿರಿಯರು ಜನಪದ ಸಾಹಿತ್ಯದಿಂದ ಒಂದು ಸತ್ವವನ್ನು ಕಂಡುಕೊಂಡು ಅದನ್ನು ಹೆಕ್ಕಿ ತೆಗೆದು, ತಮ್ಮ ಸಾಹಿತ್ಯವನ್ನು ಮೈದುಂಬಿಸಿಕೊಂಡರು. ಅವರಿಂದ ಮುಂದೆ ನಮ್ಮ ಸಾಹಿತ್ಯ ಚಿಂತಕರಾಗಲೀ, ಸಂಸ್ಕೃತಿ ಚಿಂತಕರಾಗಲಿ ಜನಪದ ಸಾಹಿತ್ಯದ ಹೊಸ ಸಾಧ್ಯತೆಗಳನ್ನು ಹುಡುಕಲೇ ಇಲ್ಲ ಎಂಬುದು ದುರ್ದೈವದ ಸಂಗತಿ. ಅಲ್ಲಲ್ಲಿ ಕೆಲವು ಸಾಹಿತಿಗಳು ಜನಪದ ಸಾಹಿತ್ಯದ ಸೆಲೆಗಳನ್ನು ಹಿಡಿದು ಬರೆಯುತ್ತಿದ್ದಾರೆ ನಿಜ. ಆದರೆ ಅದು ಅವರ ಬರಹದ ಪ್ರವೃತ್ತಿಗಳಲ್ಲಿ ಒಂದಾಗಿದೆಯೆ ಹೊರತು ಅವರ ಸೃಜನಶೀಲತೆಯ ಪ್ರಕೃತಿಯಾಗಿಲ್ಲ. ಈ ಕಾರಣದಿಂದ ಆಧುನಿಕ ಸಂದರ್ಭದಲ್ಲಿ ಜನಪದ ಜೀವನ ಮತ್ತು ಸಂಸ್ಕೃತಿ ಹೊರಗಿನ ಸರಕು, ಕನಸು, ಅಪೇಕ್ಷೆ, ತುಡಿತ, ಆಕರ್ಷಣೆ ಆಗಿದೆಯೆ ಹೊರತು ಜೀವನ ಬಂಧ, ಸಂಬಂಧ ಅಥವಾ ಬದುಕೇ ಆಗಬೇಕಿತ್ತಲ್ಲ, ಅದು ಆಗಲಿಲ್ಲ;  ಹಾಗೆ ಆಗುವ ಸಾಧ್ಯತೆಯೂ ಹತ್ತಿರದಲ್ಲಿ ಇಲ್ಲ.

ಯಾವಾಗ ಆಧುನಿಕ ವ್ಯಕ್ತಿಗಳು ವ್ಯಕ್ತಿತ್ವ ಪ್ರತ್ಯೇಕತೆಯನ್ನು ಅನುಭವಿಸುವ ಅಪೇಕ್ಷೆಯನ್ನು ಅನಿವಾರ್ಯ ಅಂತ ಮಾಡಿಕೊಂಡರೊ ಅಂದಿನಿಂದ ಜನಪದ ಸಾಹಿತ್ಯ ಮತ್ತು ಜನಪದ ಸಂಸ್ಕೃತಿಯನ್ನು ಅನುಭವಿಸುವ ಮತ್ತು  ಅನುಸರಿಸುವ ಅವಕಾಶಗಳನ್ನು ಕಳಕೊಂಡರು. ಪ್ರಭುಕೇಂದ್ರಿತ ಮತ್ತು ಧರ್ಮಕೇಂದ್ರಿತ ರಾಜಸತ್ತೆ ಇದ್ದಾಗ ಜನಪದಜೀವನ ಸತ್ವವನ್ನು ಆಗಾಗ ಪಡೆಯುತ್ತ ತಮ್ಮನ್ನು ಹಿಗ್ಗಲಿಸಿಕೊಳ್ಳುತ್ತಿದ್ದವು. ಪ್ರಭುವ್ಯವಸ್ಥೆಯ ಅಧೀನದಲ್ಲಿದ್ದೂ ಮಹಾಕವಿ ಪಂಪ ತನ್ನ ಮೂಲ ನೆಲೆಯಾದ ಬನವಾಸಿ ದೇಶವನ್ನು ನೆನೆದು ತನ್ನನ್ನು ಹಿಗ್ಗಲಿಸಿಕೊಂಡನು. ಪ್ರಭು ಕೇಂದ್ರಿತ ಹಿರಿಯ ಪ್ರಜೆಗಳು ತಮ್ಮ ಬಾಲ್ಯಜೀವನದಲ್ಲಿ ಜನಪದ ಬದುಕನ್ನು ಅನುಭವಿಸಿದರೆ ಮತ್ತೆ ಅದಕ್ಕೆ ಹಿಂದಿರುಗುತ್ತಿದ್ದುದು ವಾನಪ್ರಸ್ಥ ಸಮಯದಲ್ಲಿಯೆ.  ಆದರೆ ನಾವು ಪ್ರಜಾಪ್ರಭುತ್ವವೆಂಬ ಜನಪದ ಜೀವನ ತತ್ತ್ವದೊಳಗೆ ಇದ್ದರೂ ಬದುಕುತ್ತಿರುವುದು ಮಾತ್ರ ‘ಆಧುನಿಕ ವಾನಪ್ರಸ್ಥ’ ದಲ್ಲಿ.  ಸತ್ತಲ್ಲದೆ ಬದುಕಲಾರೆವು ಎಂಬ ಈ ಸ್ಥಿತಿಗೆ ನಮ್ಮನ್ನು ನಾವು ಶಪಿಸಿಕೊಂಡಿರುವುದೆ ಕಾರಣವಾಗಿದೆ. ಅಂತಹ ಒಂದು ದುರವಸ್ಥೆಯಿಂದ ಬಿಡುಗಡೆಗೊಳ್ಳುವ ಕಾರಣಕ್ಕಾಗಿಯೇ ನಾವಿಂದು ಜನಪದ ಸಾಹಿತ್ಯವನ್ನು ಓದಬೇಕಾಗಿದೆ ಮತ್ತು ಜನಪದ ಸಂಸ್ಕೃತಿಯನ್ನು ಕಲಿಯಬೇಕಾಗಿದೆ. ಇದರಿಂದ ಆಧುನಿಕತೆಯನ್ನು ಕಳೆದುಕೊಳ್ಳುತ್ತೇವೆ ಎಂದು ನಾವ್ಯಾರು ಭಯಪಡಬೇಕಾಗಿಲ್ಲ. ಆಧುನಿಕತೆಯನ್ನು  ಜನಪದ ಬದುಕಾಗಿ ಹಂಚಿಕೊಳ್ಳುವ ಸಾಧ್ಯತೆಗಳನ್ನಷ್ಟೆ ನಾವು ನಮ್ಮಲ್ಲಿ ಕಂಡುಕೊಳ್ಳಬೇಕಾಗಿದೆ.

 

ಕರ್ನಾಟಕ ಸರ್ಕಾರ; ಚಿಗುರಿದ ಸಂಸ್ಕೃತಿಯ ಸಾರ
ಸರ್ಕಾರ ನಿಂತಕಡೆ ಜನಪದಗಳು ಚಲಿಸಬೇಕು

ಜನಪದಗಳು ತಾಟಸ್ಥ್ಯಕ್ಕೆ ಬರುತ್ತಿವೆ ಎಂದ ಕಡೆ ಸರ್ಕಾರ ಚಲಿಸಬೇಕು. ಜಗತ್ತಿನ ಎಲ್ಲ ಕಡೆಯೂ ಇಂತಹ ಚಲನೆಗಳು ಸಂಭವಿಸಿವೆ. ಕರ್ನಾಟಕದ ತಳ-ಕೆಳವರ್ಗಗಳು ಎಲ್ಲ ಅನುಕೂಲಗಳಿಂದ ವಂಚಿತವಾಗಿ ಸ್ತಬ್ಧತೆಯ ಕಡೆಗೆ ಹೊರಟಿವೆ ಎಂಬುದನ್ನು ಕಂಡ ಶ್ರೀ ಡಿ. ದೇವರಾಜ ಅರಸು ಅವರ ಸರ್ಕಾರ ಬೇರೆ ಬೇರೆ ರೀತಿಯಲ್ಲಿ ಅವುಗಳನ್ನು ಪ್ರೋತ್ಸಾಹಿಸಿ, ಪೋಷಿಸಿ ಮುಖ್ಯಧಾರೆಗೆ ಅಭಿಮುಖೀಕರಿಸಿದರು. ಭಾಷೆಯ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಅನ್ಯತೆಗೆ ಸೋಲುತ್ತದೆ ಎಂದು ತಿಳಿದಾಗ ಕರ್ನಾಟಕ ಜನತೆ ಗೋಕಾಕ್ ಚಳವಳಿಯನ್ನು ಆರಂಭಿಸಿ ಕನ್ನಡ ಭಾಷೆ ಮತ್ತು ಕನ್ನಡ  ಸಂಸ್ಕೃತಿಯನ್ನು ಸಮನೆಲೆಗೆ ತಂದರು. ಜನಪದಸಾಹಿತ್ಯ ಮತ್ತು ಸಂಸ್ಕೃತಿಯ ಪುನರುತ್ಥಾನದ ಸಂದರ್ಭಕ್ಕೆ ಇಂಥದೊಂದು ಚಲನೆ ಜನರ ಮಧ್ಯೆ ಉಂಟಾಗಬೇಕಿದೆ. ಆದರೆ ಅಂತಹ ಸೂಚನೆಗಳು ಕಾಣುತ್ತಿಲ್ಲ. ಇಂತಹ ಸ್ಥಿತಿಯನ್ನು ಅಲುಗಾಡಿಸಲು ಜನತೆಯ ಸಂಸ್ಕೃತಿಯ  ಪ್ರತಿನಿಧಿಯಾಗಿರುವ ಸರ್ಕಾರ ಹೊಸಹೆಜ್ಜೆಯನ್ನು ಹಸನಾದ ಗೆಜ್ಜೆ ಸದ್ದಿನೊಂದಿಗೆ ಇಡಬೇಕಾಗಿದೆ. ‘ಕನ್ನಡ ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟ’ ಗಳನ್ನು ಹೊರತರಲು ಹೊರಟಿರುವ ಕರ್ನಾಟಕ ಸರ್ಕಾರ ಮತ್ತು ಅದರ ಸಂಸ್ಕೃತಿ ಚಾಲಕ ಸಂಸ್ಥೆಯಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತಹ ಒಂದು ಮಹತ್ವದ ಕೆಲಸಕ್ಕೆ ಕೈಹಾಕಿದೆ.

ಭಾರತದ ಅನೇಕ ಸಂಸ್ಥಾನಗಳಲ್ಲಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಜಾನಪದ ಅಧ್ಯಯನ ನಡೆದಿದೆ. ಆದರೆ ಕರ್ನಾಟಕದ ಈ ದಿಸೆಯ ಕೆಲಸ ಆ ಎಲ್ಲವನ್ನೂ ಮೀರಿಸಿ ಮುಂದೆ ನಿಂತಿದೆ. ಈ ಸಾಧನೆಯ ಮೊದಲ ಗೌರವಕ್ಕೆ ಪಾತ್ರರಾದವರೆಂದರೆ ಕನ್ನಡ ನಿಜ ನೆಲದಿಂದ ಬಂದ ನಮ್ಮ ನಾಡಿನ ಸಾಹಿತಿಗಳು. ನೆಲ ಸಂಸ್ಕೃತಿಯ  ನೆಲೆಯಲ್ಲಿ ನಿಂತು ನಾಡಿನ ಭವಿಷ್ಯದ ಬಗ್ಗೆ ತಲೆಬಿಸಿ ಮಾಡಿಕೊಂಡ ಸಂಸ್ಕೃತಿ ಚಿಂತಕರ ಪಾತ್ರ ಈ ಸಾಧನೆಯನ್ನು ಸತ್ವಯುತಗೊಳಿಸಿದೆ. ಪ್ರತ್ಯಕ್ಷವಾಗಿ ನಮ್ಮ ನಾಡಿನ ಎಲ್ಲ ವಿಶ್ವವಿದ್ಯಾನಿಲಯಗಳು ಜನಪದ ಸಾಹಿತ್ಯ ಮತ್ತು ಜಾನಪದ ಅಧ್ಯಯನವನ್ನು ತಮ್ಮ ಒಂದು ಬದ್ಧತೆಯನ್ನಾಗಿ ಸ್ವೀಕರಿಸಬೇಕು. ಕರ್ನಾಟಕ ಜಾನಪದ ಪರಿಷತ್ತಿನಂತಹ ಕೆಲವು ಖಾಸಗಿ ಸಂಸ್ಥೆಗಳು ಜಾನಪದ ಪುನರುದ್ಧಾರ ಕೆಲಸದಲ್ಲಿ ತೊಡಗಿವೆ.  ಕರ್ನಾಟಕದ ರಾಜಕಾರಣ ಮತ್ತು ರಾಜ್ಯ ಪ್ರತಿನಿಧಿಗಳನ್ನು ದೂರವಿಟ್ಟು  ಮಾತನಾಡುವಂತಿಲ್ಲ.  ಗ್ರಾಮೀಣ  ಪ್ರದೇಶದಿಂದ  ಬಂದ  ಎಲ್ಲ ಜನಪ್ರತಿನಿಧಿಗಳು ಜಾನಪದ ನಮ್ಮದೆಂದು ಪ್ರೀತಿಸಿ ಪ್ರೋತ್ಸಾಹ ಕೊಡುತ್ತಾ ಬರುತ್ತಿದ್ದಾರೆ. ಕರ್ನಾಟಕದಲ್ಲಿ ಜನಪದ ಕಲೆ ಮತ್ತು ಕಲಾವಿದರಿಗೆ ಸಿಗುತ್ತಿರುವ  ಪ್ರೋತ್ಸಾಹ ಭಾರತದ ಬೇರಾವ ಸಂಸ್ಥಾನದಲ್ಲಿಯೂ ಸಿಗುತ್ತಿಲ್ಲವೆಂದು ನಿಸ್ಸಂಶಯವಾಗಿ ಹೇಳಬಹುದು. ಇಂತಹ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿ ಬದ್ಧ ರಾಜ್ಯಶಕ್ತಿಯ ಪ್ರತ್ಯುತ್ಪನ್ನವಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದಕ್ಕೆ ಕೊಟ್ಟಿರುವ ಪ್ರೇರಣೆ, ಪ್ರೋತ್ಸಾಹ ಅಪಾರವಾದುದು. ತಾನೇ ನೇರವಾಗಿ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮೂಲಕ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯ ಪುಸ್ತಕಗಳಿಗೆ ಅರ್ಥಿಕ ನೆರವು ನೀಡುತ್ತಿದೆ. ಜನಪದ ಸಾಹಿತ್ಯದ ಪ್ರಾಮಾಣ್ಯ ಸಂಗ್ರಹಗಳನ್ನು ಪುನರ್ ಮುದ್ರಿಸಿದೆ. ಜನಪದ ಕಲಾವಿದರಿಗೆ ಮಾಸಾಶನ, ಕಲಾವಿದ ಪ್ರಶಸ್ತಿ ಮತ್ತು ಅತ್ಯುನ್ನತ ‘ಜಾನಪದ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಕಲಾವಿದರ ಪುನಶ್ಚೇತನ, ಗುರು-ಶಿಷ್ಯ ಪರಂಪರೆಯ ಮೂಲಕ ಜನಪದ ಕಲೆಗಳ ಪುನರುಜ್ಜೀವನ, ಜನಪದ ಕಲಾವಿದರಿಗೆ ವಾದ್ಯೋಪಕರಣಗಳ ಸಹಾಯ, ಶ್ರೇಷ್ಠ ಕಲಾವಿದರಿಗೆ ರಾಜ್ಯೋತ್ಸವದ ಪ್ರಶಸ್ತಿ ನೀಡಿ  ರಾಜ್ಯದ ಇನ್ನಾವುದೇ ಕಲೆ, ಸಂಸ್ಕೃತಿಯ ಸಮಸಮಕ್ಕೆ ತಂದು ಅವರ ಸ್ವಾಭಿಮಾನವನ್ನು, ಸ್ವಾಯತ್ತತೆಯನ್ನು ಮಾನ್ಯ ಮಾಡಿದೆ.

ಇದೀಗ ಇದೇ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸಮಗ್ರ ಕನ್ನಡ ಜನಪದ ಸಾಹಿತ್ಯ ಪ್ರಕಟಣೆಗಾಗಿ ಸಮಿತಿಯೊಂದನ್ನು ರಚಿಸಿದೆ. ಇದರಿಂದ ಸುಮಾರು ಐದುನೂರು ಪುಟಗಳ ನೂರು ಜನಪದ ಸಾಹಿತ್ಯ ಸಂಪುಟಗಳು ಹೊರಬರುತ್ತಿವೆ. ಇದನ್ನು ಕನ್ನಡ ಜನಪದ ಸಾಹಿತ್ಯ ಪುನರುತ್ಥಾನದ ಪರ್ವ ಎಂದು ಕರೆಯಬಹುದು. ಈ ಬಗೆಯ ಕೆಲಸ ಭಾರತದ ಮತ್ತಾವುದೇ ರಾಜ್ಯದಲ್ಲಿ ಆರಂಭಗೊಂಡಿಲ್ಲ. ವಚನ ಸಾಹಿತ್ಯ ಹಾಗೂ ದಾಸಸಾಹಿತ್ಯವನ್ನು ಕುರಿತ ಸಂಪುಟಗಳನ್ನು ಪ್ರಕಟಿಸಿದ ನಂತರದ ಮೂರನೆಯ ಬೃಹತ್ ಕಾರ್ಯಯೋಜನೆ ಇದು. ಕನ್ನಡಿಗರನ್ನು ಇಷ್ಟೊಂದು ಸಂತಸಪಡಿಸಿದ ಸಂದರ್ಭ ಇನ್ನೊಂದಿಲ್ಲ. ಇದೊಂದು ನಿರಂತರವಾದ ನಾಡ ಚಳವಳಿ ಇದ್ದಂತೆ. ಈ ಕಾರಣಕ್ಕೆ ಕರ್ನಾಟಕ ಸಮಸ್ತ ‘ಜನಶ್ರೀ’ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಋಣಿಯಾಗಿದೆ. ಈ ಋಣ ಯಾಕೆಂದರೆ ಕೆರೆಯ ನೀರನು ಕೆರೆಗೆ ಬಿಡಿ ಎಂಬಂತೆ ಜನತೆಯ ಸಾಹಿತ್ಯವನ್ನು ಜನರ ಮಧ್ಯೆ ಜನಪ್ರಿಯಗೊಳಿಸುವ ಕೆಲಸ, ನಿಮ್ಮ ಸಂಪತ್ತು ನಿಮ್ಮ ಪ್ರೇಮ, ನಿಮ್ಮ ಅಭಿಮಾನ ಮತ್ತು ನಿಮ್ಮ ಅಂತರಂಗದ ಅಭಿವೃದ್ಧಿಯನ್ನಾಗಿ ಮಾಡಿಕೊಳ್ಳಿ ಎಂಬ ಸಂದೇಶವನ್ನು ಕೊಟ್ಟಂತಾಗಿದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ರಾಜಕೀಯ ಶಕ್ತಿ ಮಾತ್ರ ಇಂಥ ಕೆಲಸವನ್ನು ಮಾಡಬಲ್ಲದು. ಇಂತಹ ಮಹತ್ವದ ಯೋಜನೆಯನ್ನು ಕೊಟ್ಟ ಕರ್ನಾಟಕ ಸರ್ಕಾರಕ್ಕೆ ಸಮಗ್ರ ಕನ್ನಡ ಜನಪದ ಸಾಹಿತ್ಯ ಸಮಿತಿ ಗೌರವ ವಂದನೆಗಳನ್ನು ಸಲ್ಲಿಸುತ್ತದೆ.

ಜನಪದ ಸಾಹಿತ್ಯ ಮುಗಿಯದ ಸಾಹಿತ್ಯ. ಜನರ ಜೀವನದ ಜೊತೆಗೇ ಅದು ಬೆಳೆಯುತ್ತಿರುತ್ತದೆ. ಈ ಕಾರ್ಯಯೋಜನೆ ಕೂಡ ಹಾಗೆಯೇ ಮುಂದುವರಿಯಬೇಕಾದ ಅವಶ್ಯಕತೆ ಇದೆ. ಕರ್ನಾಟಕದಲ್ಲಿ ಇರುವ ಜಾನಪದ ವಾತಾವರಣ ಇದನ್ನು ಆಗು ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಸಂಪುಟ ಸಮಿತಿ ಇಂತಹ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೆ ಸಂಪುಟ ಸಮಿತಿ ತುಂಬು ಜವಾಬ್ದಾರಿಯಿಂದ ತನ್ನ ಕೆಲಸದಲ್ಲಿ ತೊಡಗಿದೆ.  ಕರ್ನಾಟಕದಲ್ಲಿ ಈಗಾಗಲೆ ಹಲವು ವ್ಯಕ್ತಿಗಳು ಮತ್ತು ಕೆಲವು ಸಂಸ್ಥೆಗಳು ನಿರಂತರವಾಗಿ ಜನಪದ ಸಾಹಿತ್ಯ ಸಂಗ್ರಹಗಳನ್ನು ಪ್ರಕಟಿಸುತ್ತಾ ಬಂದಿವೆ. ಇವುಗಳಲ್ಲಿ ಕೆಲವು ಮಾತ್ರ ಶಾಸ್ತ್ರೀಯವಾಗಿದ್ದು ಹೆಚ್ಚಿನವು ಸಾಂದರ್ಭಿಕ ಒತ್ತಡ ಮತ್ತು ಅಗತ್ಯತೆಗೆ ಹೊಂದಿಕೊಂಡು ಪ್ರಕಟವಾಗಿವೆ. ಅನೇಕ ವೇಳೆ ಅದೆ ಅಂಶಗಳು ಪದೇಪದೇ ಬೇರೆಬೇರೆ ಸಂಗ್ರಹಗಳಲ್ಲಿ ಪುನರುಕ್ತಿಗೊಂಡಿವೆ. ಇದನ್ನು ಗಮನಕ್ಕೆ ತೆಗೆದುಕೊಂಡಿರುವ ಪ್ರಕಟಣ ಸಮಿತಿಯು ಇರುವುದನ್ನೆಲ್ಲ ಇದ್ದ ಹಾಗೇ ಪ್ರಕಟಿಸುತ್ತಿಲ್ಲ, ಒಂದು ಪ್ರಕಾರದ ಒಂದು ಪ್ರಧಾನ ಆಶಯದ ಮೇಲೆ ನೆಲೆ ನಿಂತಿರುವ ಒಂದು ಹಾಡು, ಕಥೆ, ಕಥನಗೀತೆ, ಗಾದೆ, ಒಗಟು, ಒಡಪು, ನುಡಿಗಟ್ಟು….. ಹೀಗೆ ಒಂದು ಪಾಠವನ್ನು ಮಾತ್ರ ಆಯ್ದುಕೊಳ್ಳಲಾಗಿದೆ. ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಅಥವಾ ಭಾಷಿಕವಾಗಿ ವಿಶೇಷವಾಗಿ ಪ್ರತಿನಿಧಿಸುವ ಮತ್ತೊಂದು ಪಾಠವಿದ್ದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಯಾವುದೇ ಪಾಠವನ್ನು ಶಿಷ್ಟ ಸಂಪಾದನೆಯ ಕ್ರಮಕ್ಕೆ ಒಳಪಡಿಸಿರುವುದಿಲ್ಲ. ಆ  ಕ್ರಮ ಬಹುಜನರಿಂದ, ಬಹುಪಾಠಗಳಲ್ಲಿ ಮತ್ತು ಬಹುಕಾಲಗಳಲ್ಲಿ ಸೃಷ್ಟಿಯಾಗುವ ಜನಪದ ಸಾಹಿತ್ಯಕ್ಕೆ ಸಲ್ಲತಕ್ಕುದಲ್ಲ. ಭಾಷಿಕ ದೋಷಗಳನ್ನು ಸರಿಪಡಿಸಲು ಮಾತ್ರ ಮುಂದಾಗಿದ್ದೇವೆ. ಆಗತ್ಯವಿದ್ದಷ್ಟು ಸಾಂಸ್ಕೃತಿಕ ಪದಕೋಶವನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಶಿಷ್ಟ ಮತ್ತು ಜನಪ್ರಿಯ ಸಾಹಿತ್ಯ ಪ್ರವೃತ್ತಿಗಳು ಜನಪದ ಸಾಹಿತ್ಯದ ಮೇಲೆ ಯಾವ ಕಾಲದಿಂದಲೂ ಪ್ರಭಾವಬೀರುತ್ತ ಬಂದಿವೆ. ಸಮೂಹ ಮಾಧ್ಯಮಗಳು ಈ ಹೊತ್ತು ಭಾರಿ ಪರಿಣಾಮವನ್ನು ಜನಜೀವನದ ಎಲ್ಲ ಕ್ಷೇತ್ರಗಳ ಮೇಲೆ ಬೀರುತ್ತಾ ಇವೆ. ಇಂತಹ ಸಂದರ್ಭಗಳಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ನಡುವೆ ‘ಮಧ್ಯಮ ಸಾಹಿತ್ಯ’ ಸೃಷ್ಟಿಯಾಗಿದೆ. ಈ ಸಾಹಿತ್ಯ ಬಾಯಿ ಮಾತಿನಲ್ಲೂ ಇದೆ, ಬರಹದಲ್ಲೂ ಇದೆ. ಇದು ಜನಪದದ ಮಧ್ಯೆಯೇ  ಪ್ರಚುರಪ್ರಚಾರದಲ್ಲಿದೆ. ಜನ ಈ ಸಾಹಿತ್ಯವನ್ನು ಜನಪದ ಸಾಹಿತ್ಯದ ಒಂದು ಭಾಗ ಎಂದು ಒಪ್ಪಿ ಸ್ವೀಕರಿಸಿ ಹಾಡುತ್ತಿದ್ದಾರೆ. ತತ್ವಪದಗಳು ಮತ್ತು ಭಜನೆಯ ಪದಗಳು ಈ ಪ್ರವೃತ್ತಿಗೆ ಮುಖ್ಯ ಸಾಕ್ಷಿಗಳಾಗಿವೆ. ಮೌಖಿಕ ಪರಂಪರೆಯೊಳಕ್ಕೆ ಬಂದು ಅನ್ಯೋನ್ಯವಾಗಿ ಸೇರಿಕೊಂಡ ಎಲ್ಲವೂ ಹಾಗೂ ಜಾನಪದೀಯವಾಗಿ ಪರಿಗಣಿತವಾದುದೆಲ್ಲವೂ ಜಾನಪದ ಎಂದು ನಮ್ಮ ವಿಶ್ವ ಪರಂಪರೆಯ ಜಾನಪದ ವಿದ್ವಾಂಸರು ಅನುಮೋದನೆ ನೀಡಿದ್ದಾರೆ. ಉತ್ತರ ಕರ್ನಾಟಕದಂಥ ಸಮೃದ್ಧ ಜಾನಪದ ಜೀವನವನ್ನು ಬದುಕುತ್ತಿರುವ ಜನ ತಮ್ಮ ಅಂತಃಸತ್ವದಲ್ಲಿ ಕೆಲವು ಶಿಷ್ಟ ಹಾಡುಗಳನ್ನು ಜಾನಪದೀಯಗೊಳಿಸಿಬಿಟ್ಟಿದ್ದಾರೆ. ದಾಸಸಾಹಿತ್ಯದ ಅನೇಕ ಹಾಡುಗಳು, ಶಿಶುನಾಳ ಷರೀಫರಂಥ ಜನಸಾಮಾನ್ಯರ ನಡುವಿನ ತತ್ವಚಿಂತಕರ ಹಾಡುಗಳು ಜನರ ಬಾಯಲ್ಲಿ ಜಾನಪದೀಯವಾಗಿವೆ. ವಚನ ಚಳವಳಿಯ ಮುಖ್ಯ ಧಾರೆಯ ಹಿಂದಿನಿಂದ ಬಂದ ಶರಣ ಕವಿಗಳ ಹಾಡುಗಳು ಭಜನೆಯ ಪದಗಳಾಗಿ ಹಾಡಲ್ಪಡುತ್ತಿವೆ. ಜನಪದ ಸಾಹಿತ್ಯದ ಒಂದು ಪ್ರಕಾರವನ್ನು ಮತ್ತೊಂದು ಉದ್ದೇಶಕ್ಕೆ ಬಳಸಿಕೊಳ್ಳುವ ಪರಿಪಾಠ ಎಲ್ಲ ಜನಪದಗಳಲ್ಲೂ ಇದೆ. ಪ್ರಕಾರದೊಳಗಿನ ಉಪಪ್ರಕಾರಗಳಲ್ಲಿ ಕಾರ್ಯಾಂತರವಾಗುವ ರೂಢಿಯೂ ಇದೆ, ಇದನ್ನು ಅಡ್ಡ ಪ್ರಕಾರ ಸ್ವಭಾವ ಎಂದು ಕರೆಯಬಹುದು. ವ್ಯಕ್ತ್ತಿಯೊಬ್ಬ ಮರಣ ಹೊಂದಿದಾಗ ಆ ದಿನ ರಾತ್ರಿ ಇಡೀ ದಾಸರ ಪದಗಳನ್ನು ಕರುಣಾಕೃತಿಯಾಗಿ ಬಳಸಲಾಗುತ್ತದೆ. ಜನಪದದಲ್ಲಿ ಈ ಸಂದರ್ಭಕ್ಕೆಂದು ಮರಣಗೀತೆಗಳಿದ್ದಾಗ್ಯೂ ಹಾಡುಗಾರರು ದಾಸರ ಪದಗಳನ್ನು ಬಳಸುತ್ತಿರುವುದು ಸಾಂದರ್ಭಿಕ ಔಚಿತ್ಯವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಜಾನಪದ ಪ್ರಕಾರ ವಿಸ್ತೃತಗೊಂಡು ಆಧುನಿಕ ಅವಶ್ಯಕತೆಗಳಿಗಾಗಿ ಬಳಕೆಯಾಗುತ್ತಿದೆ. ಈ ಚಟುವಟಿಕೆಯನ್ನು ಪಾಶ್ಚಾತ್ಯ ಜಾನಪದ ವಿದ್ಯಾಂಸರು ‘ಸಾರ್ವಜನಿಕ ಜಾನಪದ’ ಎಂದು ಕರೆದಿದ್ದಾರೆ. ಈಗ ಬರುತ್ತಿರುವ ಟಿ.ವಿ, ಧಾರಾವಾಹಿಗಳನ್ನು ಗಮನಿಸಿದರೆ ಮುಂದೊಂದು ದಿನ ‘ಸಾರ್ವಜನಿಕ ಸಾಹಿತ್ಯ’ ಎಂಬ ನಡುಮಧ್ಯದ ಸಾಹಿತ್ಯವೂ ಹುಟ್ಟಿಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ ಜನಪದ ಸಾಹಿತ್ಯ ತಾಳುವ ಭಿನ್ನ ಉಪಪ್ರಕಾರಗಳ ಚಲನೆಯನ್ನು ಜಾನಪದ ವಿದ್ವಾಂಸರು ತೆರೆದ ಮನಸ್ಸಿನಿಂದ ನೋಡಬೇಕಾಗಿದೆ.

ಈ ಯೋಜನೆಯನ್ನು ‘ಸಮಗ್ರ ಕನ್ನಡ ಜನಪದ ಸಾಹಿತ್ಯ ಸಂಪುಟ ಪ್ರಕಟಣ ಯೋಜನೆ’ ಎಂದು ಕರೆಯಲಾಗಿದೆ. ಇದರೊಳಗೆ ಬಯಲಾಟ ಮತ್ತು ಯಕ್ಷಗಾನ  ಪ್ರಸಂಗಗಳನ್ನು ವಿಶೇಷ ಗಮನಕ್ಕೆ ಅರ್ಹವೆಂದು ಪರಿಗಣಿಸಲಾಗಿದೆ. ಜನಪದ ಸಾಹಿತ್ಯ ಮತ್ತು ಶಿಷ್ಟ ಸಾಹಿತ್ಯದ ಮಧ್ಯೆ ಜನಪರವಾಗಿ ಬೆಳೆದುನಿಂತಿರುವ ಈ ಸಾಹಿತ್ಯ ಒಂದು ವಿಶೇಷ ಸಾಹಿತ್ಯ ಪ್ರಕಾರವಾಗಿದೆ. ಶಿಷ್ಟ ಸಾಹಿತ್ಯ ಮೀಮಾಂಸೆ ಜನಪದ ಸಾಹಿತ್ಯವನ್ನು ಅವಗಣಿಸಿರುವಂತೆ ವಿವಿಧ ಬಯಲಾಟ ಪ್ರಕಾರಗಳ ಪ್ರಸಂಗ ಸಾಹಿತ್ಯವನ್ನು ತನ್ನಿಂದ  ದೂರವಿರಿಸಿದೆ. ಶಿಷ್ಟ ಸಾಹಿತ್ಯವನ್ನು ಮೀರಿ ಬೆಳೆದ ಯಾವ ಸಾಹಿತ್ಯ ಪ್ರಕಾರವಿದ್ದರೂ ಅದನ್ನು ಗಮನಿಸುವುದು ಬೆಳೆಯುವ ಪ್ರತಿಭಾ ಚಟುವಟಿಕೆಯ ಪುರಸ್ಕಾರವಾಗುತ್ತದೆ. ಜನಪದ ಸಾಹಿತ್ಯ ಸಂಪುಟ ಸಮಿತಿ ತುಂಬ ಜವಾಬ್ದಾರಿಯಿಂದಲೆ ಈ ಬೆಳೆದ ಸಾಹಿತ್ಯ ಪ್ರಕಾರವನ್ನು ಗುರುತಿಸಿ ಗೌರವಿಸಿದೆ.

ಸಮಗ್ರ ಕನ್ನಡ ಜನಪದ ಸಾಹಿತ್ಯ ಪ್ರಕಟಣೆಯ ಈ ಯೋಜನೆಯಲ್ಲಿ ಮೊದಲಾಗಿ ಪ್ರಕಟಿತ ಸಾಹಿತ್ಯವನ್ನು ಆರಿಸಿ ವಿದ್ವಾಂಸರು ಹಾಗೂ ಕನ್ನಡ ಸಾಹಿತ್ಯಾಭಿರುಚಿಯುಳ್ಳ ಎಲ್ಲರಿಗೂ ಒಪ್ಪುವಂತೆ ಸಂಪುಟಗಳಲ್ಲಿ ಪ್ರಕಟಿಸಲಾಗುತ್ತದೆ. ಎರಡನೆಯ ಹಂತದಲ್ಲಿ ಕರ್ನಾಟಕ ನಾಡಿನಾದ್ಯಂತ ಜನಪದ ಸಾಹಿತ್ಯವನ್ನು ಸಂಗ್ರಹಿಸಿ, ಪ್ರಕಟಿಸಲು ಸಾಧ್ಯಾವಾಗದೆ ಇಟ್ಟುಕೊಂಡಿರುವ ವ್ಯಕ್ತಿ ಹಾಗೂ ಸಂಸ್ಥೆಗಳ ಜನಪದ ಸಾಹಿತ್ಯವನ್ನು ಪ್ರಕಟಿಸಲು ಯೋಜಿಸಲಾಗಿದೆ. ಇಲ್ಲಿ ಕೂಡ ಈಗಾಗಲೆ ಬೇರೆ ಬೇರೆ ಕೃತಿಗಳಲ್ಲಿ ಕಾಣಿಸಿಕೊಂಡಿರುವ ಸಾಹಿತ್ಯ ಭಾಗವನ್ನು ಬಿಟ್ಟು ಹೊಸದೆನಿಸಿದುದನ್ನು ಕೈಗೆತ್ತಿಕೊಳ್ಳಲಾಗುವುದು. ಮೂರನೆಯ ಹಂತದಲ್ಲಿ ನಾಡಿನಾದ್ಯಂತ ಕೆಡೆದು ಬಿದ್ದಿರುವ ಅಪೂರ್ವವೂ, ಅಮೂಲ್ಯವೂ ಆದ ಜನಪದ ಸಾಹಿತ್ಯವನ್ನು ಕ್ಷೇತ್ರ ಕಾರ್ಯ ಮಾಡಿಸಿ, ಸಂಗ್ರಹಿಸಿ ಪ್ರಕಟಿಸುವ ಬಹುದೊಡ್ಡ ಯೋಜನೆ ಇದೆ. ನಮ್ಮ ಸಾಹಿತ್ಯ – ಸಂಸ್ಕೃತಿ ಚಿಂತಕರು ‘ಕರ್ನಾಟಕದ ಮುರಿದ  ಭಾಗವನ್ನು ಸರಿಪಡಿಸಿ ಕಟ್ಟಿರಿ, (ಅರ್ಚಕ ಬಿ. ರಂಗಸ್ವಾಮಿ: ಹುಟ್ಟಿದ ಹಳ್ಳಿ; ಹಳ್ಳಿಯ ಹಾಡು ೧೯೩೩) ಎಂಬ ಕಳಕಳಿಯ ಆದೇಶವನ್ನು ಕೊಟ್ಟಿದ್ದಾರೆ, ಅದನ್ನು ಪಾಲಿಸುವುದು ನಮ್ಮ ಕರ್ತವ್ಯ ಹಾಗೂ ಧರ್ಮವಾಗಿದೆ.

ಕರ್ನಾಟಕ ಸರ್ಕಾರವು ದಿನಾಂಕ ೧೦-೦೨-೨೦೦೪ರಂದು ಸಮಗ್ರ ಕನ್ನಡ ಜನಪದ ಸಾಹಿತ್ಯ ಸಂಪುಟ ಯೋಜನೆಯ ನಿರ್ವಹಣೆಗಾಗಿ ಸಮಿತಿಯೊಂದನ್ನು ರಚಿಸಿದೆ. ಇಲ್ಲಿ ನಾಡಿನ ಹಿರಿಯ ಹಾಗೂ ಶ್ರೇಷ್ಠ ಜಾನಪದ ತಜ್ಞರಿದ್ದಾರೆ. ಅವರ ಪ್ರತಿಭೆ ಮತ್ತು ಪರಿಶ್ರಮ ಇಲ್ಲಿ ಕೆಲಸ ಮಾಡಿದೆ. ಬಹಳ ಕಾಲದ ಕನಸೊಂದು ನನಸಾಗುತ್ತಿರುವ ಬಗ್ಗೆ ಅವರು ಸಂತಸಗೊಂಡಿದ್ದಾರೆ. ಇದೊಂದು ನಾಡಿಗೆ ಸಲ್ಲಿಸುವ ಸೇವೆಯ ಕೆಲಸವೆಂಬಂತೆ ದುಡಿಯುತ್ತಿದ್ದಾರೆ. ಅವರು ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕದ ನಾನಾ ಕಡೆ ಬಹಳಕಾಲದಿಂದ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿ ನುರಿತಿರುವ ನೂರೈವತ್ತಕ್ಕೂ ಹೆಚ್ಚು ಜಾನಪದ ವಿದ್ವಾಂಸರು ಸಂಪುಟಗಳ ಸಂಪಾದಕರಾಗಲು ಒಪ್ಪಿಕೊಂಡಿದ್ದಾರೆ. ನಾಡ ಮೇಲಿನ ಅವರ ಪ್ರೀತಿ ಅಪಾರವಾದುದು. ಅವರನ್ನು ಕರ್ನಾಟಕ ಸಾಹಿತ್ಯ ಸಂಸ್ಕೃತಿ ಪ್ರೇಮಿಗಳು ಸ್ಮರಿಸುತ್ತಾರೆ. ಸಂಪುಟ ಸಮಿತಿ ಅವರನ್ನು ತುಂಬುಮನಸ್ಸಿನಿಂದ ವಂದಿಸುತ್ತದೆ.

ಈ ಸಂಪುಟಗಳು ಹೊರಬರುವಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನ ಶ್ಲಾಘನೀಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರು ಈ ನಿಟ್ಟಿನಲ್ಲಿ ಮುಕ್ತ ಸಹಕಾರವನ್ನು ನೀಡಿದ್ದಾರೆ. ಈ ಇಲಾಖೆಯ ಜಂಟಿ ನಿರ್ದೇಶಕರೂ, ಸಾಹಿತಿಗಳೂ ಆದ ಶ್ರೀ ಕಾ.ತ. ಚಿಕ್ಕಣ್ಣನವರು ಪ್ರತಿಯೊಂದು ಹಂತದಲ್ಲೂ ಸಂಪುಟ ಸಮಿತಿಯ ಜೊತೆಗಿದ್ದು ಅವರ ಅಪಾರ ಶ್ರಮ ಮತ್ತು ಸಹಕಾರವನ್ನು ಧಾರೆ ಎರೆದಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯು ಪ್ರಕಟಣೆಯ ಕೆಲಸಕಾರ್ಯಗಳನ್ನು ನಿರ್ವಹಿಸಿ ತುಂಬು ಬೆಂಬಲ ನೀಡಿದೆ. ಈ ಸಮಸ್ತರಿಗೂ ನನ್ನ ಗೌರವಪೂರ್ವಕ ವಂದನೆಗಳು ಸಲ್ಲುತ್ತವೆ.

ಪ್ರೊ. ಹಿ. ಶಿ. ರಾಮಚಂದ್ರೇಗೌಡ
ಅಧ್ಯಕ್ಷರು
ಸಮಗ್ರ ಕನ್ನಡ ಜನಪದ ಮತ್ತು
ಯಕ್ಷಗಾನ ಸಾಹಿತ್ಯ ಸಂಪುಟ ಸಮಿತಿ