ಅಖಿಲ ಕರ್ನಾಟಕದ ಎಂಟನೆಯ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಲ್. ಆರ್. ಹೆಗಡೆಯವರೆ, ಉದ್ಘಾಟಕರಾದ ಶ್ರೀ ಮತ್ತಿಹಳ್ಳಿ ನಾಗರಾಜ ರಾಯರೆ, ಮಾನ್ಯ ಶ್ರೀ ದಿನಕರ ದೇಸಾಯಿಯವರೆ, ಪ್ರಿ . ಕೆ .ಜಿ.ನಾಯಕರೆ, ಜಾನಪದ ಕಲಾವಿದರೆ, ಅಂಕೊಲೆ ನಾಡಿನ ಸಹೃದಯರೆ,

ಭಾರತದ ಹೃದಯ ಹಳ್ಳಿಗಳಲ್ಲಿದೆ ಎನ್ನುವ ಮಾತು ಸತ್ಯ. ಭಾರತೀಯರ ಆಶೀರ್ವಾದ ಸಂಸ್ಕೃತಿ, ಇಂದಿನ ನವನಾಗರಿಕತೆ ಇನ್ನೂ ಕಾಲಿಡದಿರುವ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದಿದೆ, ನಿಜವಾದ ಭಾರತದ ಚಿತ್ರವನ್ನು ನೋಡಬೇಕೆಂದರೆ ನಮ್ಮ ಹಳ್ಳಿಗಳಿಗೆ ಹೋಗಬೇಕು. ಜನಪದದ ರೀತಿ – ನೀತಿಗಳಲ್ಲಿ, ಹಬ್ಬ – ಹುಣ್ಣಿಮೆಗಳಲ್ಲಿ. ಹಾಡು – ಹಸೆಗಳಲ್ಲಿ ನಾಟ್ಯ – ನಾಟಕ ಕಲಾಭಿವ್ಯಕ್ತಿಯಲ್ಲಿ – ಒಟ್ಟಿನಲ್ಲಿ ಶ್ರೀ ಸಾಮಾನ್ಯರ ಜೀವನದಲ್ಲಿ ಅಚ್ಚ ಭಾರತೀಯತೆ ಇಂದಿಗೂ ಸಜೀವವಾಗಿ ಉಳಿದಿದೆ. ಹಳ್ಳಿಗಳ ಉದ್ಧಾರವೆಂದರೆ ಆರ್ಥಿಕ, ಸಾಮಾಜಿಕ ಪ್ರಗತಿಯನ್ನು ಸಾಧಿಸುವುದು ಎಂದಿಷ್ಟೇ ಭಾವಿಸದೆ, “ಅಚ್ಚ ಭಾರತೀಯತೆ” ಯನ್ನು ಪುನರುಜ್ಜೀವಿಸುವುದು ಎಂದು ಎಂದಿಷ್ಟೇ ಭಾವಿಸಿದೆ, “ಅಚ್ಚ ಭಾರತೀಯತೆ” ಯನ್ನು ಪುನರುಜ್ಜೀವಿಸುವುದು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆ ಜಾನಪದ ಸಂಸ್ಕೃತಿ, ನವ ನಾಗರಿಕತೆಯ ಪ್ರಭಾವಕ್ಕೆ ಸಿಕ್ಕು, ನಾಶವಾಗಿ ಹೋಗುವ ಮೊದಲೇ ಅದನ್ನು ರಕ್ಷಿಸುವ ಕಾರ್ಯ ಆಗಬೇಕಾಗಿದೆ. ಸರಕಾರ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿರುವದು ಸಂತೋಷದ ಸಂಗತಿ.

ಅಭಿಜಾತ ಕಲಾಪ್ರಕಾರಗಳು :

ಜಾನಪದ ಕಲೆ ಪುರಾತನವಾದುದು, ಹಾಗೂ ವಿಶಿಷ್ಟವಾದುದು. ಹಳ್ಳಿಗಳ ಪರಿಸರದಲ್ಲಿ ಸ್ವಯಂಸ್ಫೂರ್ತಿಯಿಂದ ಮೂಡಿದ ಈ ಕಲಾಪ್ರಕಾರಗಳಲ್ಲಿ ಅಭಿಜಾತ ಗುಣವನ್ನು ಕಾಣಿತ್ತೇವೆ. ನರ್ತನ, ನಾಟಕ, ಗೊಂಬೆಯಾಟ, ವೇಗಾರಿಕೆ ಮುಂತಾದ ಜಾನಪದ ಕಲೆಗಳಲ್ಲಿ  ಮುಖ್ಯವಾಗಿ ಜನರ ಮನಸ್ಸನ್ನು ತಣಿಸುವ, ದಣಿದವರಿಗೆ ಸಮಾಧಾನ ಹಾಗೂ ಹುಮ್ಮಸ್ಸು ನೀಡುವ ವಿಶೇಷ  ಗುಣವಿದೆ. ಇಂಥ ಕಲಾಭಿವ್ಯಕ್ತಿಯಲ್ಲಿ ಸಾರ್ವಜನಿಕರೆಲ್ಲರೂ ಸಮಾನವಾಗಿ ಪಾಲ್ಗೊಂಡು, ಈ ಕಲೆಯ ಆನಂದವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಒಂದು ಕುಟುಂಬದಂತಿರುವ ಜನಪದ ಸಮೂಹ, ಈ ಕಲೋಪಾಸನೆಯಲ್ಲಿ ವಿಶೇಷ ಆಸಕ್ತಿ ವಹಿಸಿ, ಹಳ್ಳಿಗಳ ಮನರಂಜನೆಯನ್ನು ಅವರವರ ಮನರಬಾಗಿಲಿನ ಮುಂದೆಯೇ ಸೃಷ್ಟಿಸುಕೊಳ್ಳುತ್ತಾರೆ. ಹಬ್ಬ – ಹರಿದಿನಗಳಲ್ಲಿ ಈ ಮನರಂಜನೆ ರಂಗೀರಿ, ಅವರ ದಿನ ನಿತ್ಯದ ಜೀವನಕ್ಕೆ ಹೊಸ ಚೇತನವನ್ನು ನೀಡುತ್ತದೆ. ಹೀಗೆ, ಸ್ಥಳೀಯ ಕಲಾವಿದರು, ಸ್ಥಳೀಯ ಪ್ರೆಕ್ಷಕರು ಹಾಗೂ ಸ್ಥಳೀಯ ಮತ್ತು ವಸ್ತು ಸಾಮಗ್ರಿಗಳನ್ನೇ ಅವಲಂಬಿಸಿ ನಿರ್ಮಾಣವಾಗುವ ಈ ದೇಶೀಯ ಕಲೆಗಳು ಸ್ವಯಂಪೂರ್ಣವೂ ಸ್ವಯಂಪೂರ್ತವೂ ಆದುದಾಗಿದೆ. ಅಂಥ ಜಾನಪದ ಕಲಾಸಮೂಹ ಹಾಲಾಗದಂತೆ ರಕ್ಷಿಸಬೇಕಾದುದು ಎಲ್ಲರ ಕರ್ತವ್ಯ.

ಸಾಮಾಜಿಕ ಶಿಕ್ಷಣದ ಮಾಧ್ಯಮ :

ಜಾನಪದ ರಂಗಭೂಮಿ ಇನ್ನೊಂದು ಮಹತ್ತರವಾದ ಕೆಲಸವನ್ನು ಸಾಧಿಸುತ್ತಿದೆ. ವೇದ, ಆಗಮ, ಪುರಾಣ ಹಾಗೂ ಮಹಾಕಾವ್ಯಗಳ ಕಥೆ, ಕಥಾನಕಗಳನ್ನು ಜನಮನದಲ್ಲಿ ಹಬ್ಬಿಸಲು ವಿಶೇಷ ಸಹಾಯ ಮಾಡುತ್ತಿವೆ. ಒಂದು ರೀತಿಯಲ್ಲಿ ಇವು ಸಾಮಾಜಿಕ ಶಿಕ್ಷಣದ ಸಾಧನಗಳಾಗಿವೆ. ರಾಮಾಯಣ, ಮಹಾಭಾರತ ಹಾಗೂ ಶರಣರ, ಸಂತರ  ಆದರ್ಶ ಜೀವನದ ವಸ್ತುವಿನ ಸುತ್ತ ಹಬ್ಬಿರುವ ಈ ಕಲೆಗಳು ಜನಸಾಮಾನ್ಯರಿಗೆ ಈ ಪೌರಾಣಿಕ ಸಂಗತಿಗಳ, ಆದರ್ಶ ಪುರುಷರ ಇತಿಹಾಸವನ್ನು ಬಹು ಸುಲಭವಾಗಿ ತಿಳಿಸಿಕೊಡುತ್ತವೆ. ಹಳ್ಳಿಯ ಜನ ಕುರಿತೋದಡೆಯಂ ಕಾವ್ಯಪ್ರಯೋಗ ಪರಿಣಿತ ಮತಿಗಳಾಗುವುದೂ, ಪುರಾಣ ಪುಣ್ಯ ಕಥೆಗಳ ಪರಿಚಯವನ್ನು ಮಾಡಿಕೊಳ್ಳುವುದೂ ಇಂಥ ಕಲಾಪ್ರಕಾರಗಳಿಂದ ಸಾಧ್ಯವಾಗುತ್ತದೆ. ಭಾರತೀಯ ಪರಂಪರೆಯ ಕಾವ್ಯ, ಇತಿಹಾಸ, ಪುರಾಣಗಳ ಬಗೆಗೆ, ಆಧುನಿಕ ಶಿಕ್ಷಣ ಪಡಿವರಲ್ಲಿರುವುದಕ್ಕಿಂತ ಹೆಚ್ಚಿನ ಜ್ಞಾನ, ಓದು ಬರಹ ಬರದ ಹಳ್ಳಿಯ ಜನಸಾಮಾನ್ಯರಲ್ಲಿ ಕಾಣಬರುವದು, ಇಂಥ ಜಾನಪದ ಸಾಹಿತ್ಯ, ಕಲೆಗಳ ಕಾರಣವಾಗಿಯೇ, ಹೀಗಾಗಿ, ಸಾರ್ವಜನಿಕ ಜೀವನದ ಮೌಲ್ಯಗಳನ್ನು ಬಿಂಬಿಸುವ ಮಹಾಪುರುಷರನ್ನು ಕುರಿತ ಕಾವ್ಯ, ಸಾಹಿತ್ಯ, ಪುರಾಣಗಳು ಜೀವಂತವಾಗಿರಲು, ಈ ಕಲೆಗಳ ಉಳಿಯುವಿಕೆ, ಬೆಳೆಯುವಿಕೆ ಅತ್ಯಾವಶ್ಯಕ. ನಾಗರಿಕ ಪ್ರಪಂಚದಲ್ಲಿ ಸಾಹಿತ್ಯ ಸಮ್ಮೇಳನಗಳು ನಗರಗಳಲ್ಲಿ ನೆರೆಯುವಂತೆ, ಜಾನಪದಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನದ ಸಭೆ, ಸಮ್ಮೇಳನಗಳು ಗ್ರಾಮ ಕೇಂದ್ರಗಳಲ್ಲಿ ಪ್ರತಿ ತಾಲೂಕುಗಳಲ್ಲಿ ನೆರೆಯಬೇಕು.

ಧಾರ್ಮಿಕತೆಯ ದಾರಿದೀಪ :

ಜಾನಪದ ಕಲೆ, ನಾಟಕ, ನರ್ತನಗಳ ಪ್ರದರ್ಶನಗಳಿಂದ ಶ್ರೀ ಸಾಮಾನ್ಯರಲ್ಲಿ ಧಾರ್ಮಿಕ ಪ್ರವೃತ್ತಿಯನ್ನು ಬೆಳೆಯಿಸುವ ಸಾಧನಗಳೂ ಆಗಿವೆ. ವಿವಿಧ ಧರ್ಮಗಳ ಮೂಲ ತತ್ವಗಳನ್ನು ನೀತಿ ನಿಯಮಗಳನ್ನು ಆಚಾರ ವ್ಯವಹಾರಗಳನ್ನು, ಜನಸಾಮಾನ್ಯರಲ್ಲಿ ಹಬ್ಬಿಸಲು ಈ ಜಾನಪದ ಕಲಾ ಪ್ರಕಾರಗಳು ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿವೆ. ವಿವಿಧ ಧರ್ಮಗಳಲ್ಲಿ ತಾರತಮ್ಯಗಳಿಲ್ಲದ ಜನಪದ ಜೀವನದಲ್ಲಿ, ಧಾರ್ಮಿಕ ಸಾಮರಸ್ಯವನ್ನು ಕುದುರಿಸಲು, ಈ ಕಾರಣ ಪರಿಣತಿಯ ಘೋಷಣೆ ಅತ್ಯವಶ್ಯಕ. ಮನರಂಜನೆಯೊಡನೆಯೇ, ಧಾರ್ಮಿಕ ಪ್ರವೃತ್ತಿಯನ್ನು ಹಳ್ಳಿಗಳಲ್ಲಿ ಮೂಡಿಸಲು ಸಹಾಯಕವಾಗುವ ಈ ಜಾನಪದ ಕಲಾ ಪ್ರಕಾರಗಳ ಮಾನ್ಯತೆ ಹಾಗೂ ಅವುಗಳ ಪುನರುಜ್ಜೀವನದ ಇಂದು ಆಗಲೇಬೇಕಾಗಿರುವ ಕಾರ್ಯವಾಗಿದೆ. ಶಿಥಿಲಗೊಳ್ಳುತ್ತಿರುವ ಗ್ರಾಮಜೀವನದ ಭದ್ರತೆಗೆ ಈ ಕಲೆಗಳ ರಕ್ಷಣೆ ಅತ್ಯಾವಶ್ಯಕ.

ಶಿಷ್ಟಕಲೆಗಳ ಮೂಲಸ್ಪೂರ್ತಿ :

ಜಾಣಪದ ಸಾಹಿತ್ಯ, ಜಾನಪದ ಕಲೆಗಳು, ನಾಗರಿಕ ಸಾಹಿತ್ಯ ವಿಕಾಸ ಹಾಗೂ ನಾಗರಿಕ ಕಲಾ ಪ್ರಕಾರಗಳಿಗೆ ಮೂಲವಾಗಿದಾವೆ. ಹಳ್ಳಿಗಳಿಂದ ನಗರಗಳು ನಿರ್ಮಾಣವಾದಂತೆ, ಜನಪದ ಸಾಹಿತ್ಯ, ಕಲೆಗಳಿಂದ ನಾಗರಿಕ, ಹಾಗೂ ಕಲೆಗಳು ನಿರ್ಮಾಣವಾಗಿವೆ ಅಥವಾ ಸ್ಪೂರ್ತಿಯನ್ನು ಪಡೆದು ಬಾಳಿ ಬದುಕಿವೆ. ಈ ದೇಶೀಯ ಕಲಾ ಸಂಪತ್ತು, ನಾಗರಿಕ ಕಲೆ – ಸಾಹಿತ್ಯಗಳಿಗೂ ವೈವಿದ್ಯಮಯವಾದ ಸಂಪತ್ತಿಯನ್ನು ಒದಗಿಸುತ್ತವೆ, ಹಳ್ಳಿಗಳ ಹಬ್ಬ ಹರಿದಿನಗಳ ಕುಣಿತಗಳಿಂದ, ನಾಗರಿಕ ಜೀವನದ ನರ್ತನ ಪ್ರಕಾರಗಳೂ, ಜಾನಪದ ಅಟ್ಟದಾಟ, ಬುಲಾಟಗಳಿಂದ, ಸುಧಾರಿಸಿದ ನಾಟಕ ಒರಕಾರಗಳೂ, ಜನನುಡಿಯ ಹಾಡು, ಗೀತಗಳಿಂದ ಪ್ರತಿಷ್ಟಿತ ಸಾಹಿತ್ಯ ಪ್ರಕಾರಗಳೂ, ಜನನುಡಿಯ ಹಾಡು, ಗೀತಗಳಿಂದ ಪ್ರತಿಷ್ಠಿತ ಸಾಹಿತ್ಯ ಪ್ರಕಾರಗಳೂ ಮೂಡಿರುವುದನ್ನು ಕಾಣುತ್ತೇವೆ. ಸುಧಾರಿತ ಜನಸಮುದಾಯದ ಸಾಹಿತ್ಯ, ಕಲೆಗಳ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಜಾನಪದ ಕಲಾ ಪ್ರಕಾರಗಳ ಪ್ರೋತ್ಸಾಹ ಪೋಷಣೆ ಅತ್ಯಾವಶ್ಯಕ ದೇಶೀಯ ಸಾಹಿತ್ಯ, ದೇಶೀಯ ಕಲೆಗಳು ಎಂದಿಗಿಂತಲೂ ಇಂದು ಹೆಚ್ಚು ಮಾನ್ಯತೆಗೆ ಅರ್ಹವಾಗಿವೆ.

ಪ್ರಜಾಪ್ರಭುತ್ವದ ಅವಶ್ಯಕತೆ :

ಜಾನಪದ ಪ್ರಕಾರಗಳ ಮಾನ್ಯತೆಯಲ್ಲಿ ಒಂದು ರಾಜಕೀಯ ಅವಶ್ಯಕತೆಯು ತೋರುತ್ತದೆ. ಪ್ರಜಾಪ್ರಭುತ್ವ ವಿಧಾನವನ್ನು ಒಪ್ಪಿರುವ ನಮ್ಮ ಬಾರತದ ರಾಜ್ಯಕೀಯವೂ ಒಂದರ್ಥದಲ್ಲಿ ಹಳ್ಳಿಗಳಲ್ಲಿಯೇ ಕೇಂದ್ರಿಕೃತವಾಗಬೇಕಾಗಿದೆ ಹೆಚ್ಚಿನ ಮತದಾರರು ಹಳ್ಳಿಗಳಲ್ಲಿ ಇರುವುದರಿಂದ ಅವರ ಅಭಿಪ್ರಾಯವೇ ನಾಗರಿಕ ಬದುಕಿನ ರಾಜ್ಯಕೀಯ ಚಟುವಟಿಕೆಗಳ ಚಾಲನ ಶಕ್ತಿಯಾಗಿದೆ. ಅಲ್ಲದೆ ಈಚೆಗೆ ಹಳ್ಳಿಗಳ ಹಾಗೂ ಪಟ್ಟಣಗಳ ಅಂತರ ವಿಸ್ತರಿಸುತ್ತಾ ಹೋಗಿ, ಜೀವನ ಸಂಬಂಧ ದೂರ ದೂರವಾಗುತ್ತಿವೆ. ಜನಸಾಮಾನ್ಯರು ನಾಗರಿಕರನ್ನು ಮಾನ್ಯ ಮಾಡುವಂತೆ, ನಾಗರಿಕರೂ ಜನತೆಗೆ ಗೌರವ, ಮಾನ್ಯತೆ ತೋರಬೇಕಾಗುತ್ತದೆ.

ನವನಾಗರಿಕತೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ; ಹಳ್ಳಿಗಳೂ ಅದನ್ನು ಸ್ವಾಗತಿಸಿ, ಅನುಕರಿಸುತ್ತವೆ. ಅಂತಾಯೇ ಪಟ್ಟಣ ವಾಸಿಗಳು ಇಂದು ಜನ ಜೀವನದ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು, ಹಳ್ಳಿ ಪಟ್ಟಣಗಳ ಮಧುರ ಬಾಂದವ್ಯವನ್ನು ಬೆಳೆಯಿಸಬೇಕಾಗಿದೆ. ಹಳ್ಳಿಗಳ ಆರ್ಥಿಕ, ಸಾಮಾಜಿಕ ಏರುಪೇರುಗಳನ್ನು ಸರಿಗೊಳಿಸಲು ಹೊರಟಿರುವ ನಾವು, ನಗರ ಹಾಗೂ ಗ್ರಾಮೀಣ ಬದುಕಿನ ಅಂತರವನ್ನೂ ಕಡಿಮೆ ಮಾಡಿ, ಜನತೆಯೊಡನೆ ನಿಕಟ ಸಂಪರ್ಕವನ್ನು ಕೊಡುಕೊಳ್ಳುವಿಕೆಯ ಮನೋಭಾವವನ್ನು ರೂಪಿಸಬೇಕಾಗಿದೆ. ಇಂಥ ಒಂದು ರಾಜ್ಯಕೀಯ ಅವಶ್ಯಕತೆಯಗಾಗಿಯೂ ನಾವಿಂದು ಹಳ್ಳಿಗಳ ಜೀವನ , ಕಲೆಗಳಿಗೆ ಮಾನ್ಯತೆ ನೀಡಬೇಕಾಗಿದೆ. ಅದೊಂದು ಆದ್ಯ ಕರ್ತವ್ಯವಾಗಬೇಕಾಗಿದೆ.

ರಂಗದರ್ಶನ ಒಂದು ಚಿತ್ರಣ :

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ಈ ವರ್ಷ ಗ್ರಾಮಗಳ ಕೇಂದ್ರವಾದ ಅಂಕೋಲೆಯಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವನ್ನು ಯೋಜಿಸಿರುವುದು ಸ್ತುತ್ಯ ಸಂಗತಿ. ಜಾನಪದದ ಕಲೆ, ಸಾಹಿತ್ಯ ಹಾಗೂ ಜಾನಪದ ನಡೆವಳಿಗಳ ಹಿನ್ನೆಲೆಯಲ್ಲಿ ಇಂದಿಗೂ ಗ್ರಾಮ ಜೀವನದ ಶಕ್ತಿಕೇಂದ್ರಗಳಾಗಿರುವ ಗ್ರಾಮದೇವತೆಗಳನ್ನು ಕುರಿತ ವಿಚಾರ ಸಂಕೀರಣಗಳನ್ನು ನಡೆಯಿಸುವದರ ಜೊತೆಗೆ ಈ ಜಾನಪದ ಕಲೆಗಳ : “ರಂಗದರ್ಶನ” ವನ್ನು ಏರ್ಪಡಿಸಿದರೂ ಅಷ್ಟೇ ದೂರದೃಷ್ಟಿಯ ಪ್ರತೀಕ. ಸಮೀಪದ ಹಾಗೂ ದೂರದ ಹಳ್ಳಿಗಳಿಂದ ಜಾನಪದ ಕಲಾವಿದರನ್ನು ಕಲಾಮೇಳಗಳನ್ನು ಆಹ್ವಾನಿಸಿ ಅವರ ಕಲೆಯ ಪ್ರದರ್ಶನವನ್ನು ಏರ್ಪಡಿಸಿರುವುದು ತುಂಬ ಒಳ್ಳೆಯ ಕೆಲಸ. ಅನುಕರಣೀಯ ಸಂಗತಿ,. ಯಕ್ಷಗಾಣ, ಶ್ರೀ ಕೃಷ್ಣ ಪಾರಿಜಾತ ಹಾಗೂ ದೊಡ್ಡಾಟದ ಹಾಡುಗಳ – ಕುಣಿತದ ಮಾದರಿಗಳನ್ನು ಇಂದು ಮತ್ತು ನಾಳೆಯ ನೀವೆಲ್ಲರೂ ನೋಡಿ ಆನಂದಪಡುತ್ತಿರಿ. ಈ ಎಲ್ಲ ಕಲಾ ಪ್ರಕಾರಗಳನ್ನು ನೋಡಿ ನೀವೆಲ್ಲರೂ  ಸಂತೋಷಪಡುವುದರಲ್ಲಿ ಸಂಶಯವಿಲ್ಲ, ಜಾನಪದ ಶಾಸ್ತ್ರಾಭ್ಯಾಸಿಗಳಾದ ವಿದ್ಯಾರ್ಥಿಗಳಿಗೂ, ಪ್ರಾಧ್ಯಾಪಕರಿಗೂ ಈ ರಂಗದರ್ಶನ ವಿಶೇಷ ಉಪಯೋಗಕರವಾದುದಾಗಿದೆ. ವಿವಿಧ ಹಳ್ಳಿಗಳಿಂದ ಬಂದಿರುವ ಕಲಾವಿದರೂ, ಸಮ್ಮೇಳನಕ್ಕೆ ಆಹ್ವಾನಿತರಾಗಿ ಬಂದಿರುವ ಮಹನೀಯರಿಗೂ ಈ ರಂಗದರ್ಶನ ಸಂಭಂಧವನ್ನು ಕುದುರಿಸುವ ರಸ ಸೇತುವೆಯಾಗಿ ಪರಿಣಮಿಸಲಿ ಎಂದು ಹಾರೈಸುತ್ತೇವೆ

ಕೆಲವು ಸೂಚನೆಗಳು :

ಕೊನೆಯದಾಗಿ ನಿಮ್ಮೆಲ್ಲರಿಗೆ ಒಂದು ಸೂಚನೆ ಕೊಡಬಯಸುತ್ತೇನೆ ಈ ಜಾನಪದ ಕಲಾಮಾಧ್ಯಮಗಳನ್ನು ಸುಧಾರಿಸಿ, ಆಧುನಿಕ ಮನರಂಜನ ಸಾಧನಗಳನ್ನಾಗಿ ಮಾಡುವುದರ ಅವಶ್ಯಕತೆ ಈಗ ಇದೆ. ಡಾ. ಕಾರಂತರು “ಯಕ್ಷಗಾನ” ವನ್ನು ಇಂದು ಪ್ರಪಂಚದ ಕಲಿಕೆಯನ್ನಾಗಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಹಳ್ಳಿಗಳಲ್ಲಿರುವ ಈ ಕಲೆಗಳ ಮೂಲಕ, ಸ್ವಾತಂತ್ರೈ ಚಳವಳಿ ತ್ವರಿತವಾದುದನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬಹುದು. ಅಂತೆಯೇ, ಇಂದು ಆಧುನಿಕ ತಾಂತ್ರಿಕ ಜ್ಞಾನ, ರಾಷ್ಟ್ರದ  ಪುನಾರಚನೆಯ ಅಭಿಪ್ರಾಯಗಳು, ನಾಗರಿಕ ಹಕ್ಕು  ಬಾಧ್ಯತೆಗಳು , ವೈಜ್ಞಾನಿಕ ಮನೋಭಾವ ಮಂತಾದ ಅಂಶಗಳನ್ನು ಈ ಗ್ರಾಮೀಣ ಕಲೆಗಳ ಮೂಲಕ ಪ್ರಚಾರ ಮಾಡುವುದು ಈಗ ಅತ್ಯವಶ್ಯಕ. ಜಾನಪದ ಸಾಹಿತ್ಯ ಹಾಗೂ ಕಲೆಗಳ ಚಾರಿತ್ರಿಕ ಅಭ್ಯಾಸದ ಜೊತೆಗೇನೆ, ಇವುಗಳ ಆಧುನಿಕ (Modernisation)  ಹಾಗೂ ಸಮರ್ಥವಾದ ಜನಬಳಕೀಕರಣ (Utiligation) ದ  ಕಡೆ ನೀವೆಲ್ಲರೂ ವಿಶೇಷ ಗಮನ ಹರಿಸಿದರೆ ಒಳ್ಳೆಯದು. ಇಂಥ “ರಂಗದರ್ಶನ” ಹಾಗೂ ಜಾನಪದ ಸಮ್ಮೇಳನಗಳು ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತವಾಗಲೆಂದು ಹಾರೈಸುವೆ. ಆಧುನಿಕ ಶಿಕ್ಷಣ ಪಡೆದ ತರುಣರು ಈ ಗ್ರಾಮೀಣ ಕಲೆಗಳ ಅಭಿವೃದ್ಧಿಗೆ ದುಡಿಯುವುದನ್ನು, ತನ್ಮೂಲಕ ತಾನು ಬೆಳೆದು ಬಾಳಿಬಂದ ಸಮಾಜದ ಋಣವನ್ನು ತೀರಿಸುವ “ಕಾಯಕ”ವನ್ನು ಕೈಕೊಂಡು ನಾಡ – ನುಡಿಯ ಪ್ರಗತಿಯನ್ನು ಸಾಧಿಸಲೆಂದು ಹಾರೈಸುವೆ. ನಾಗರಿಕ ಜಗತ್ತಿನ ಕಣ್ಣನ್ನು ತೆರೆಯಿಸಿ, ನಮ್ಮ ಗ್ರಾಮಗಳಿಗೆ ಗ್ರಾಮೀಣರಿಗೆ ಗೌರವ ದೊರೆಯುವಂತೆ  ಮಾಡಿ, ಆಧುನಿಕ ಭಾರತೀಯ ಬದುಕಿನ ಕೇಂದ್ರಗಳಾಗುವಂತೆ ಮಾಡುವ ಕಾರ್ಯ ಈ ತರುಣ ಪೀಳಿಗೆಯ ಮುಂದಿರುವ ಆದರ್ಶ. ಇಂದಿನ “ರಂಗದರ್ಶನ” ಈ ಎಲ್ಲ ಸಾಧನಗಳಿಗೆ  ನಾಂದಿಯಾಗಲೆಂದು ಹಾರೈಸುವೆ.