ನನ್ನ ಬದುಕಿನ ಕೆಲವು ಸ್ಮರಣೀಯ ಕ್ಷಣಗಳಿಗೂ ಕರ್ನಾಟಕದ ಈ ಉತ್ತರ ಭಾಗಕ್ಕೂ ನಿಕಟ ಸಂಬಂಧವಿರುವುದು ಒಂದು ಯೋಗಾಯೋಗ. ನಾನು ಕುಲಪತಿಯಾಗಿದ್ದದ್ದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ; ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದು ಬೀದರಿನಲ್ಲಿ; ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದುದು ಬೆಳಗಾವಿಯಲ್ಲಿ ; ಅಖಿಲ ಕರ್ನಾಟಕ ಮೂರನೇ ಪ್ರಗತಿ ಪಂಥದ ಅಧ್ಯಕ್ಷನಾಗಿದ್ದುದು ಬಿಜಾಪುರ ಜಿಲ್ಲೆಯ ಮಹಾಲಿಂಗಪುರದಲ್ಲಿ. ಈಗ ಈ ಹದಿನಾಲ್ಕನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷನಾಗಿರುವ ಗೌರವ ಪ್ರಾಪ್ತವಾಗಿರುವುದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕೃಪೆಯಿಂದ. ಈ ಕೃಪೆಗಾಗಿ ನಾನು ಆ ವಿಶ್ವವಿದ್ಯಾಲಯಕ್ಕೆ, ಮುಖ್ಯವಾಗಿ ಅದರ ಕನ್ನಡ ಅಧ್ಯಯನ ಪೀಠದ ಮಿತ್ರರಿಗೆ ಕೃತಜ್ಞನಾಗಿದ್ದೇನೆ.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದ ಹಿರಿಯರು ನನಗೆ ಈ ಗೌರವವನ್ನು ಒಪ್ಪಿಕೊಳ್ಳುವಂತೆ ಕಳೆದ ನಾಲ್ಕೈದು ವರ್ಷಗಳಿಂದಲೂ ಒತ್ತಾಯಿಸುತ್ತಿದ್ದರು, ಒಂದಲ್ಲ ಒಂದು ಕಾರಣದಿಂದ ನನಗೆ ಅದು ಸಾಧ್ಯವಾಗಿರಲಿಲ್ಲ. ‘ಕಾಲ ಕೂಡಿಬರಬೇಕು’ ಎಂಬುದು ಕೇವಲ ಜನಪದ ನುಡಿಯಲ್ಲ ; ಜೀವನದ ವಾಸ್ತವತೆಯೂ ಹೌದು. ನಾನು ಈ ಸಮ್ಮೇಳನದ ಅಧ್ಯಕ್ಷನಾಗಬೇಕೆಂದು ತೀವ್ರವಾಗಿ ಬಯಸಿದ್ದ ಅಧ್ಯಯನಪೀಠದ ನಿರ್ದೇಶಕರಾಗಿದ್ದ ಡಾ. ಎಂ. ಬಿ. ಕೊಟ್ರಶೆಟ್ಟಿಯವರು ಈಗ ಇಲ್ಲ. ಆದರೆ ಅವರ ಸ್ನೇಹ ವಿಶ್ವಾಸಗಳನ್ನು ನಾನು ಮರೆತಿಲ್ಲ. ಈ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವ ಈ ಹೊತ್ತಿನಲ್ಲಿ ನಾನು ಅವರನ್ನು ಹನಿತುಂಬಿದ ಕಣ್ಣುಗಳಿಂದ ನೆನಪಿಸಿಕೊಳ್ಳುತ್ತಿದ್ದೇನೆ. ಈಗ ನಿರ್ದೇಶಕರಾಗಿರುವ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿಯವರನ್ನೂ, ಹಿರಿಯ ಪ್ರಾಧ್ಯಾಪಕರಾದ ಡಾ. ಎಂ. ಎಂ. ಕಲಬುರ್ಗಿಯವರನ್ನೂ ನಾನು ಅವರ ಅಭಿಮಾನ ಅಂತಃಕರಣಗಳಿಗಾಗಿ ಸ್ಮರಿಸಬೇಕು. ಈ ಮಿತ್ರರು ಬಹುಕಾಲದಿಂದಲೂ ನನ್ನ ವಿಚಾರದಲ್ಲಿ ತೋರುತ್ತ ಬಂದ ಸ್ನೇಹ ವಿಶ್ವಾಸಗಳು ದೊಡ್ಡವು. ಅವನ್ನು ನನ್ನ ಪಾಲಿನ ವರಗಳೆಂದೇ ತಿಳಿದಿದ್ದೇನೆ.

ನಮ್ಮ ನಾಡಿನ ಜ್ಞಾನಕೇಂದ್ರಗಳಲ್ಲಿ ಒಂದು, ಕರ್ನಾಟಕ ವಿಶ್ವವಿದ್ಯಾಲಯ. ಅದು ಕಳೆದ ಹದಿನಾಲ್ಕು ವರ್ಷಗಳಿಂದ ಮಾಡಿರುವ ಒಂದು ಘನವಾದ ಕಾರ್ಯವೆಂದರೆ ಪ್ರತಿವರ್ಷವೂ ಯೋಚಿಸಿ ವ್ಯವಸ್ಥೆಗೊಳಿಸಿಕೊಂಡು ಬಂದಿರುವ ಈ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳು. ೧೯೭೩ರಲ್ಲಿ ಆರಂಭವಾದ ಈ ಸಮ್ಮೇಳನಗಳು ಪ್ರತಿವರ್ಷವೂ ನಡೆದಿವೆ. ಪ್ರತಿಯೊಂದು ಸಮ್ಮೇಳನಕ್ಕೂ ಒಂದೊಂದು ಮುಖ್ಯ ವಿಷಯವಿದ್ದು, ನಮ್ಮ ನಾಡಿನ ಜಾನಪದ ಪರಿಣತರೆಲ್ಲರೂ ಭಾಗವಹಿಸಿ, ಸಮ್ಮೇಳನಗಳು ಅತ್ಯಂತ ಉಪಯುಕ್ತವೆನ್ನಿಸಿವೆ. ಈ ಸಮ್ಮೇಳನಗಳ ನಡೆವಳಿಗಳು ಅಧ್ಯಯನಾಸಕ್ತರಿಗೆ ಅಪರೂಪದ ಆಕರಗಳಾಗಿವೆ. ಈ ಮೊದಲು ನಡೆದ ಹದಿಮೂರು ಸಮ್ಮೇಳನಗಳಲ್ಲಿ, ಹತ್ತು ಸಮ್ಮೇಳನಗಳ ನಡೆವಳಿಗಳು ಪುಸ್ತಕ ರೂಪದಲ್ಲಿ ಈಗಾಗಲೇ ಪ್ರಕಟವಾಗಿರುವುದು ತುಂಬ ಸ್ತುತ್ಯರ್ಹವಾದ ಕೆಲಸವಾಗಿದೆ, ಇದಕ್ಕಾಗಿ ನಾನು ಕರ್ನಾಟಕ ವಿಶ್ವವಿದ್ಯಾಲಯವನ್ನೂ, ಕನ್ನಡ ಅಧ್ಯಯನಪೀಠದ ಕಾರ್ಯಕರ್ತರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮುಂದಿನ ಸಮ್ಮೇಳನ ನಡೆಯುವ ಹೊತ್ತಿಗೆ ಉಳಿದ ನಾಲ್ಕೂ ಸಮ್ಮೇಳನಗಳ ನಡವಳಿಗಳನ್ನು ಪ್ರಕಟಿಸಲು ಬೇಕಾದ ಅನುಕೂಲಗಳನ್ನು ಅಧ್ಯಯನಪೀಠಕ್ಕೆ ಒದಗಿಸಿಕೊಡಬೇಕೆಂದು ನಾನು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಜಿ. ದೇಸಾಯಿಯವರಲ್ಲಿ ನಮ್ರತೆಯಿಂದ ಕೇಳಿಕೊಳ್ಳುತ್ತೇನೆ. ವಿಶ್ವವಿದ್ಯಾಲಯಕ್ಕೆ ಇದೇನೂ ಹೊರೆಯಾಗುವುದಿಲ್ಲ.

ತಾನು ವ್ಯವಸ್ಥೆಗೊಳಿಸಿದ ಈ ಸಮ್ಮೇಳನಗಳನ್ನು ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಎಂದು ವಿಶ್ವವಿದ್ಯಾಲಯ ಕರೆದುಕೊಂಡಿದ್ದರೂ, ವಿಶ್ವವಿದ್ಯಾಲಯದ ಭೌಗೋಲಿಕ ಪರಿಧಿಯ ಹೊರಗೆ ಸಮ್ಮೇಳನ ನಡೆಯುತ್ತಿರುವುದು ಇದೇ ಮೊದಲು. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ ದಾವಣಗೆರೆಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು, ಸಮ್ಮೇಳನದ ಅಖಿಲ ಕರ್ನಾಟಕ ಹೆಸರಿಗೆ ನಾಂದಿಯಾದಂತಾಗಿದೆ. ಆದ್ದರಿಂದ ಇದನ್ನು ಸೀಮೋಲ್ಲಂಘನ ಸಮ್ಮೇಳನವೆಂದು ಕರೆದರೆ ತಪ್ಪಾಗುವುದಿಲ್ಲ, ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯಿಂದ ಹೊರಬಂದ ಈ ಮೊದಲ ಸಮ್ಮೇಳನದಲ್ಲಿ ನಾನು ಭಾಗಿಯಾಗಿರುವುದಕ್ಕೆ ಹೆಚ್ಚಿನ ಸಂತೋಷವಾಗಿದೆ. ಮುಂದೆ ಈ ಸಮ್ಮೇಳನಗಳು ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರಗಷ್ಟೆ ಅಲ್ಲ, ಕರ್ನಾಟಕದ ಗಡಿಯ ಹೊರಗೂ ನಡೆಯುವಂತಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ.

ನನ್ನನ್ನು ಜಾನಪದ ತಜ್ಞನೆಂದು ಕೆಲವರು ವರ್ಣಿಸುತ್ತಾರೆ. ನಾನು ಯಾವ ವಿಷಯದಲ್ಲಿಯೂ ತಜ್ಞನಲ್ಲ. ಆದರೆ ನನ್ನ ಆಸಕ್ತಿಗೆ ಯಾವ ವಿಷಯವೂ ಹೊರತಲ್ಲ. ಇಂಥವರ ಪಾಡು ಏನೆಂಬುದು ತಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಕೆಲವು ವರ್ಷಗಳ ಹಿಂದೆ (೧೯೬೬) ಮೈಸೂರು ವಿಶ್ವವಿದ್ಯಾನಿಲಯ ವ್ಯವಸ್ಥೆ ಮಾಡಿದ್ದ ವಿಚಾರಗೋಷ್ಠಿಯೊಂದರಲ್ಲಿ ಜನಪದ ಸಾಹಿತ್ಯವನ್ನು ಕುರಿತು ನಾನು ಒಂದು ಪ್ರಬಂಧ ಮಂಡಿಸಿದ್ದೆ. ಮುಂದೆ (೧೯೭೧) ‘ಜಾನಪದ ಸ್ವರೂಪ’ ಎಂಬ ಪುಸ್ತಿಕೆಯೊಂದನ್ನು ಪ್ರಕಟಿಸಿದೆ. ಈ ಪ್ರಸಂಗಗಳು ಕನ್ನಡ ಜನಪದಸಾಹಿತ್ಯ ಮತ್ತು ಕರ್ನಾಟಕದ ಜಾನಪದ ಅಧ್ಯಯನಕ್ಕೆ ಹೊಸ ತಿರುವನ್ನು ಕೊಟ್ಟವೆಂದು ಅನೇಕ ಮಿತ್ರರು ಭಾವಿಸುತ್ತಾರೆ. ಅದು ನಿಜವೋ ಸುಳ್ಳೋ ನನಗೆ ತಿಳಿಯದು. ನಾನಂತೂ ಅಂದಿನಿಂದ ತಜ್ಞನೆನ್ನಿಸಿಕೊಂಡು ಬಿಟ್ಟೆ! ಇದನ್ನು ನೋಡಿದಾಗ ನಮಗೆ ನಮ್ಮ ದೇಶದಲ್ಲಿ ತಜ್ಞತೆಯನ್ನು ಎಷ್ಟು ಸುಲಭವಾಗಿ ಗಳಿಸಬಹುದೆಂದು ಆಶ್ಚರ್ಯವಾಗುತ್ತದೆ; ಜೊತೆಗೆ ವಿಷಾದವೂ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಈಗ ತಜ್ಞತೆ, ಪರಿಣತಿ, ವಿದ್ವತ್ತು ಇವೂ ಜಾನಪದಗಳೇ ಆಗಿವೆಯೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ !

ಜಾನಪದದ ಬಗೆಗೆ ನನ್ನ ಆಸಕ್ತಿ ಕುದುರಿದ್ದು, ಅದರ ಅಧ್ಯಯನದ ಬಗೆಗೆ ದೃಷ್ಟಿ ಬದಲಾದದ್ದು, ತೀರ ಆಕಸ್ಮಿಕವಾಗಿ. ನವೋದಯಕಾಲದಲ್ಲಿ ನಮ್ಮ ಹಿರಿಯರು ಕೆಲವರು ಸಂಗ್ರಹಿಸಿ ಪ್ರಕಟಿಸಿದ್ದ ಜನಪದ ಸಾಹಿತ್ಯವನ್ನು ನಾನು ನನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಓದಿದ್ದೆ. ಜನಪದ ತ್ರಿಪದಿಗಳ ನಿರಾಭರಣಸೌಂದರ್ಯಕ್ಕೆ ಮಾರುಹೋಗಿದ್ದೆ. ಆ ಫಲವಾಗಿಯೇ ಐವತ್ತರ ದಶಕದಲ್ಲಿ ‘ಅಜ್ಞಾತ ಕವಿಗಳ ಅಮರಗೀತೆಗಳು’ ಎಂಬ ಒಂದು ಲೇಖನವನ್ನೂ ಬರೆದಿದ್ದೆ. ‘ಕೆರೆಗೆಹಾರ’ ಲಾವಣಿಯನ್ನು ನಾಟಕರೂಪಕ್ಕೆ ತಿರುಗಿಸಿ ಪ್ರಸಾರಮಾಡಿದ್ದೆ, ಹತ್ತು ವರ್ಷಗಳ ನಂತರ ೧೯೬೨-೬೪ರ ಅವಧಿಯಲ್ಲಿ ಉನ್ನತ ಅಧ್ಯಯನಕ್ಕಾಗಿ ನಾನು ಅಮೆರಿಕೆಯ ಇಂಡಿಯಾನಾ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದಾಗ, ಆ ದೇಶದಲ್ಲೇ ಜಾನಪದ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದ ಅಲ್ಲಿನ ಜಾನಪದ ವಿಭಾಗದ ವಿದ್ವಾಂಸರ ಸಂಪರ್ಕ ಅನಿರೀಕ್ಷಿತವಾಗಿ ಒದಗಿಬಂತು. ಸ್ಟಿತ್‌ಥಾಂಸನ್, ರಿಚರ್ಡ್ ಡೋರ್ ಸನ್ ಮೊದಲಾದ ವಿದ್ವಾಂಸರೊಡನೆ ಮಾತುಕತೆ ನಡೆಸುವ ಪ್ರಸಂಗಗಳುಂಟಾದವು. ಕೆಲವು ಜಾನಪದ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸುವ, ಅದುವರೆಗೂ ನೋಡದಿದ್ದ ಜಾನಪದ ಪುಸ್ತಕ, ನಿಬಂಧ, ನಿಯತಕಾಲಿಕೆಗಳನ್ನು ನೋಡುವ ಅವಕಾಶಗಳು ತೆರೆದಿದ್ದವು. ನನ್ನ ಅಧ್ಯಯನ ವಿಷಯ ಭಾಷಾವಿಜ್ಞಾನ ಮತ್ತು ಮಾನವ ಶಾಸ್ತ್ರಗಳಾಗಿದ್ದು. ಅವುಗಳೊಡನೆ ಜಾನಪದದ ಸಂಬಂಧ ನಿಕಟವಾಗಿದ್ದುದರಿಂದ ಸಹಜವಾಗಿಯೇ ಈ ಅಧ್ಯಯನದಲ್ಲಿಯೂ ಆಸಕ್ತಿಯುಂಟಾಯಿತು. ಜಾನಪದವನ್ನು ನೋಡುವ, ವಿಶ್ಲೇಷಿಸುವ ರೀತಿಯೇ ಬೇರೆಬಗೆಯಾಗಿರುವುದನ್ನು ಅರಿತು ಅರ್ಥಮಾಡಿಕೊಳ್ಳಲು ನನಗೆ ಬಹಳಕಾಲ ಬೇಕಾಗಲಿಲ್ಲ. ನಾನು ಭಾರತಕ್ಕೆ ಹಿಂದಿರುಗಿದಾಗಲೂ ಜನಪದ ಸಾಹಿತ್ಯವನ್ನು ಆಸ್ವಾದಿಸುವ ರೀತಿಯಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಆಗಬೇಕಾಗಿದ್ದ ಬದಲಾವಣೆಯನ್ನು ಬಯಸಿ ನಾನು ನನ್ನ ‘ಜಾನಪದ ಸ್ವರೂಪ’ ಪುಸ್ತಿಕೆಯನ್ನು ಪ್ರಕಟಿಸಿದೆ. ಅದರಲ್ಲಿ ಪ್ರತಿಪಾದಿತವಾದ ಹೊಸ ಪ್ರವೃತ್ತಿಯನ್ನು ನಮ್ಮ ಜನ ಗ್ರಹಿಸಿದರು. ಅದೇ ಕಾಲಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಜಾನಪದ ಅಧ್ಯಯನಕ್ಕೆ ಮಾನ್ಯತೆಯನ್ನು ಕೊಟ್ಟಿದ್ದರಿಂದ ಈ ಪ್ರವೃತ್ತಿಯ ಪ್ರಸಾರಕ್ಕೆ ಸಹಾಯವಾಯಿತು.

ಒಂದು ಜನಾಂಗದಲ್ಲಿ ತಲೆಮಾರುಗಳಿಂದಲೂ ಅಲಿಖಿತವಾಗಿ ಉಳಿದುಕೊಂಡು ಬಂದ ಪರಂಪರೆಗಳೆಲ್ಲವನ್ನೂ ಜಾನಪದ ಒಳಕೊಂಡಿರುತ್ತದೆ. ಈ ಪರಂಪರೆಗಳನ್ನು ದಾಖಲಿಸುವುದು, ವಿಶ್ಲೇಷಿಸುವುದು ಜಾನಪದ ಅಧ್ಯಯನದ ಕೆಲಸ. ಆಧುನಿಕ ನಾಗರಿಕತೆ ದಾಖಲಗೊಳಿಸುವ ಶಿಷ್ಟ ಸಂಪ್ರದಾಯಗಳಿಂದ ಈ ಪರಂಪರೆಗಳು ಬೇರೆಯಾಗಿರುತ್ತವೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಂಡಿರಬೇಕು. ಜನಪದ ಪರಂಪರೆಗಳನ್ನು ಅವುಗಳ ಕಾರ್ಯನಿರ್ವಹಣೆಯನ್ನು ಅರ್ಥಪೂರ್ಣವಾಗಿ ಗ್ರಹಿಸಿದಾಗಲೇ ನಮಗೆ ಆ ಜನಾಂಗದ ಅರ್ಥವಾಗುವುದು. ಪರಂಪರೆಗಳ ಒಳಸಾಮ್ಯಗಳೂ, ಕಾರ್ಯನಿರ್ವಹಣೆಗಳ ವೈಖರಿಗಳೂ ಮನುಷ್ಯನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ. ಜನಪದ ಪರಂಪರೆಗಳನ್ನು ಈ ಬೆಳಕಿನಲ್ಲಿ ನೋಡುವ, ಅರ್ಥೈಸುವ ಕೆಲಸ ಯುರೋಪಿನಲ್ಲಿ ಬಹಳ ಹಿಂದೆಯೇ ಆರಂಭವಾಯಿತು. ಅಮೆರಿಕೆಯಲ್ಲಿ ಅದು ಹೊಸದೆನಿಸಿದರೂ ಸಾಧಿತವಾದ ಪ್ರಗತಿ ಮಾತ್ರ ಅದ್ಭುತವಾದದ್ದು. ನಮ್ಮ ದೇಶದಲ್ಲಿ ಅದು ಈಗ ತಾನೆ ಕಣ್ಣೊಡೆಯುತ್ತಿದೆ. ಒಂದು ಜನಾಂಗದ ಜಾನಪದದ ಮೊತ್ತವನ್ನು ಪರಿಶೀಲಿಸಿದಾಗ ಅದು ಶಾಬ್ದಿಕವಾಗಿಯೂ (ಮಾತು, ಗಾದೆ, ಒಗಟು, ಲಾವಣಿ, ಹಾಡು ಇತ್ಯಾದಿ), ಭಾಗಶಃ ಶಾಬ್ದಿಕವಾಗಿಯೂ (ನಂಬಿಕೆಗಳು, ಆಟಗಳು, ನಾಟಕಗಳು, ಕುಣಿತಗಳು ಇತ್ಯಾದಿ) ಅಶಾಬ್ದಿಕವಾಗಿಯೂ (ವಾಸ್ತು, ಕಲೆ, ಉಡುಗೆ, ಸಂಗೀತ ಇತ್ಯಾದಿ) ಇರುವುದನ್ನು ಗಮನಿಸುತ್ತೇವೆ. ಇದು ತೀರ ಸ್ಥೂಲವಾದ ವಿಭಜನೆ, ಈ ವಿಭಜನೆ ಕೊನೆಯಮಾತಾಗುವುದು ಸಾಧ್ಯವಿಲ್ಲ, ಒಂದು ಎಲ್ಲಿ ಮುಗಿಯುತ್ತದೆ. ಇನ್ನೊಂದು ಎಲ್ಲಿ ಆರಂಭವಾಗುತ್ತದೆ ಎಂದು ಹೇಳುವುದು ಸುಲಭವಲ್ಲ.

ಹೊರದೇಶಗಳಲ್ಲಿ ಯಾರೋ ಏನೋ ಮಾಡಿದ್ದಾರೆ ; ಅದನ್ನು ತಂದು ಇಲ್ಲಿ ಅಳವಡಿಸಲಾಗಿದೆ ; ನಮ್ಮ ಅಧ್ಯಯನಕ್ಕೆ ಇದೆಲ್ಲದರ ಅಗತ್ಯವಿಲ್ಲ-ಎಂಬ ಒಂದು ಟೀಕೆಯನ್ನು ಕೇಳಿದ್ದೇನೆ. ಹೀಗೆ ಟೀಕಿಸುವವರಿಗೆ ಜ್ಞಾನದ ದಾರಿ ತಿಳಿದಿಲ್ಲ ; ವಿಜ್ಞಾನದ ಸ್ವರೂಪ ಗೊತ್ತಿಲ್ಲ, ಇವತ್ತು ಜಾನಪದ ಒಂದು ವೈಜ್ಞಾನಿಕ ವಿಷಯವಾಗಿದೆ. ಅದರ ಸೂತ್ರಗಳು ಸಿದ್ಧವಾಗಿವೆ. ಆ ಸೂತ್ರಗಳಿಗೆ ನಮ್ಮ ಸಾಮಗ್ರಿಯನ್ನು ಅಳವಡಿಸುವುದು ನಾವು ಮಾಡಬೇಕಾಗಿರುವ ಕೆಲಸ. ನಮ್ಮ ಸಾಮಗ್ರಿ ಆ ಸೂತ್ರಗಳಿಗೆ ಹೊರತಾದಾಗ ಅದರಲ್ಲಿ ಏನೋ ವಿಶೇಷವಿದೆ ಎಂದು ಗ್ರಹಿಸಬಹುದು. ಆಗ ಮೂಲ ಸೂತ್ರಗಳನ್ನು ಬದಲಿಸಬೇಕಾಗುತ್ತದೆ ; ಇಲ್ಲವೆ ಹೊಸ ಸೂತ್ರಗಳನ್ನು ಹೇಳಬೇಕಾಗುತ್ತದೆ. ಅಂಥ ಕೆಲಸಗಳನ್ನು ನಾವು ಮಾಡಬೇಕಾಗಿದೆ. ಆಧುನಿಕ ವೈಜ್ಞಾನಿಕ ಸಿದ್ಧಾಂತಗಳಲ್ಲಿ ಯಾವುದು ನಮ್ಮದು ಎಂದು ನಾವು ಕೇಳಿಕೊಳ್ಳಬೇಕಾಗುತ್ತದೆ. ಮಾನವಶಾಸ್ತ್ರವಾಗಲಿ, ಸಮಾಜಶಾಸ್ತ್ರವಾಗಲಿ, ಅರ್ಥಶಾಸ್ತ್ರವಾಗಲಿ-ಯಾವುದಕ್ಕೆ ನಾವು ಕೊಡುಗೆಗಳನ್ನು ಕೊಟ್ಟು ಸ್ವೋಪಜ್ಞರೆನ್ನಿಸಿದ್ದೇವೆ? ಜಾನಪದ ಇದಕ್ಕೆ ಹೊರಗಾದುದಲ್ಲ. ಅದರ ಸಿದ್ಧಾಂತಗಳನ್ನು ಯಾರೋ ರೂಪಿಸಿದರು. ನಮ್ಮಲ್ಲಿ ಶಕ್ತಿಯಿರುವವರು ತಮ್ಮ ಸಿದ್ಧಾಂತಗಳನ್ನು ಮಂಡಿಸಲಿ. ಅವನ್ನು ಜಗತ್ತಿನ ವಿದ್ವಾಂಸರು ಸ್ವೀಕರಿಸುವಂತಾಗಲಿ. ಆಗ ಅದನ್ನು ನಮ್ಮದು ಎಂದು ನಾವು ಹೆಮ್ಮೆಪಡೋಣ, ಅಲ್ಲಿಯವರೆಗೆ ಜಾನಪದದ ವೈಜ್ಞಾನಿಕ ಅಧ್ಯಯನ ಮಾಡಬೇಕಾಗಿದೆ. ಜ್ಞಾನಕ್ಕೆ ಬೇಲಿ ಇಲ್ಲ. ಯಾವುದೂ ಯಾರಿಗೂ ಗುತ್ತಿಗೆಯಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಶಕ್ತಿಗೆ ಸೀಮಿತಗಳಿಗೆ ಅನುಗುಣವಾಗಿ ಕೆಲಸ ಮಾಡುವುದೊಂದೇ ಇರುವ ದಾರಿ.

ಇದುವರೆಗೆ ಜಾನಪದವನ್ನು ಅಧ್ಯಯನ ಮಾಡಿರುವವರ ಅಭಿಪ್ರಾಯಗಳನ್ನು ಸಂಗ್ರಹಿಸಿದರೆ, ನಿಜವಾದ ಜಾನಪದಕ್ಕೆ ಐದು ಪ್ರಧಾನ ಲಕ್ಷಣವಳಿರುವುದು ಗೊತ್ತಾಗುತ್ತದೆ: ಮೊದಲನೆಯದಾಗಿ, ಅದು ಮೌಖಿಕವಾದದ್ದು; ಎರಡನೆಯದಾಗಿ, ಅದು ಪರಂಪರಾಗತವಾದದ್ದು ; ಮೂರನೆಯದಾಗಿ, ಅದಕ್ಕೆ ವಿವಿಧ ರೂಪಾಂತರಗಳಿರುತ್ತವೆ : ನಾಲ್ಕನೆಯವಾಗಿ, ಅದರ ಕರ್ತೃಗಳು ಅನಾಮಧೇಯರಾಗಿರುತ್ತಾರೆ ; ಕೊನೆಯದಾಗಿ ಅದು ಸೂತ್ರರೂಪದ ಕಡೆಗೆ ಒಲೆಯುತ್ತದೆ. ಈ ಮಾತುಗಳನ್ನು ಸ್ವಲ್ಪ ವಿವರವಾಗಿ ನೋಡಿದರೆ ಜಾನಪದದ ಸ್ವರೂಪಸ್ಪಷ್ಟಗೊಳ್ಳುತ್ತದೆ.

ಜಾನಪದ ಮೌಖಿಕವಾದದ್ದು ಎಂದರೆ ಬಾಯಿಂದ ಬಾಯಿಗೆ ಬಂದದ್ದು. ಅಷ್ಟೇ ಅಲ್ಲ ಅದು ಕಿವಿಯಿಂದ ಕಿವಿಗೆ, ಕಣ್ಣಿಂದ ಕಣ್ಣಿಗೆ ಬಂದದ್ದೂ ಹೌದು. ತಲೆಮಾರಿನಿಂದ ತಲೆಮಾರಿಗೆ ಉಳಿದು ಬರಬೇಕಾದರೆ ಇದೆಲ್ಲ ಸಹಜ. ಹೀಗೆ ಉಳಿದುಕೊಳ್ಳುವುದು ಪರಂಪರೆ ಎನ್ನಿಸುತ್ತದೆ. ಗೊತ್ತಾದ ರೂಪಗಳು ಹಾಗೆಯೇ ನಿಂತುಕೊಳ್ಳುತ್ತವೆ, ಸಂಬಂಧಿಸಿದ ಗುಂಪುಗಳಲ್ಲಿ ಪ್ರಸಾರಗೊಳ್ಳುತ್ತವೆ. ಬದಲಾವಣೆಗಳು ಸಂಭವಿಸಿದರೂ ಮೂಲಸ್ವರೂಪದಲ್ಲಿ ವ್ಯತ್ಯಾಸ ಬರುವುದಿಲ್ಲ. ಬದಲಾವಣೆಗಳು ಗುಂಪಿನಿಂದ ಗುಂಪಿಗೆ, ಕಾಲದಿಂದ ಕಾಲಕ್ಕೆ ತಮ್ಮದೇ ಆದ ಶಿಷ್ಟತೆಗಳನ್ನು ಗಳಿಸಿಕೊಳ್ಳುತ್ತವೆ. ಪಠ್ಯಗಳನ್ನು ಉದಾಹರಿಸಿ ಹೇಳುವುದಾದರೆ, ಅವು ಪಾಠಾಂತರಗಳೆನ್ನಿಸಿಕೊಳ್ಳುತ್ತವೆ. ಮನುಷ್ಯನ ಸೃಜನಶೀಲ ಗುಣದಿಂದಾಗಿ ಜೀವಂತ ಜಾನಪದ ಸಹಜವಾಗಿಯೇ ರೂಪಾಂತರಗೊಳ್ಳುತ್ತ ಹೋಗುತ್ತದೆ. ಜಾನಪದ ಅಂಶಗಳು ಮೂಲತಃ ಏಕವ್ಯಕ್ತಿಸೃಷ್ಟಿಯಾಗಿದ್ದರೂ, ಆ ವ್ಯಕ್ತಿ ಬಹುಬೇಗ ಮರೆತು ಹೋಗುತ್ತಾನೆ. ಅವನ ಸೃಷ್ಟಿ ಅಷ್ಟೇ ಬೇಗನೆ ಸಮೂಹಸೃಷ್ಟಿ ಎನ್ನಿಸುತ್ತದೆ. ಆದ್ದರಿಂದಲೇ ಜಾನಪದ ಸೃಷ್ಟಿಕರ್ತರು ಅನಾಮಧೇಯರಾಗಿ ಹೋಗುತ್ತಾರೆ. ಜಾನಪದ ನೆನಪಿನ ಅವಲಂಬನೆಯಿಂದ ಮುಂದುವರಿಯುವುದರಿಂದ ನೆನಪಿನಲ್ಲಿಡಲು. ಅನುಸರಿಸಲು, ಅನುಕರಿಸಲು ಸುಲಭವಾದ ಮಾರ್ಗವೆಂದರೆ ಸೂತ್ರಪ್ರಾಯವಾಗಿರುವುದು; ಮರುಕಳಿಸುವ ಪ್ರವೃತ್ತಿಯದಾಗಿರುವುದು. ಅದರಿಂದ ಯಾವುದೇ ಬಗೆಯ ಜಾನಪದವಾದರೂ ಅದಕ್ಕೆ ಸೂತ್ರಬದ್ಧತೆ ಬಂದು ಬಿಡುತ್ತದೆ. ಯಾವ ದೇಶದ ಜಾನಪದವಾದರೂ ತನ್ನ ಬಾಹ್ಯರೂಪದಲ್ಲಿ ಈ ಗುಣಗಳನ್ನು ಪ್ರದರ್ಶಿಸುತ್ತದೆ.

ಮನುಷ್ಯ ತನ್ನ ಸೃಜನಶೀಲಗುಣಗಳಿಂದ ಆಕರ್ಷಕವೆನ್ನಿಸಿದ್ದಾನೆ. ಸಾಹಿತ್ಯವಾಗಲಿ, ಕಲೆಯಾಗಲಿ, ತತ್ವವಿವೇಚನೆಯಾಗಲಿ, ವೈಜ್ಞಾನಿಕ ಕುತೂಹಲವಾಗಲಿ ಅವನ ಎಲ್ಲ ಸೃಜನಶೀಲ ಗುಣಗಳೂ ಜಾನಪದದಲ್ಲಿ ಮೈವೆತ್ತಿವೆ. ಆದ್ದರಿಂದಲೇ ಸಹಜವಾಗಿ ಜಾನಪದವೂ ಮನುಷ್ಯನಷ್ಟೇ ಆಕರ್ಷಕವೆನ್ನಿಸಿದೆ. ಆದ್ದರಿಂದ ಮನುಷ್ಯನನ್ನಾಗಲಿ ಅಥವಾ ಸಂಸ್ಥೆಗಳನ್ನಾಗಲಿ ಅಧ್ಯಯನ ಮಾಡುವವರಿಗೆ ಜಾನಪದ ಒಂದು ಕೀಲಿಕೈ ಆಗಿದೆ. ಈಗ ಅದನ್ನು ನಾವು ಬೇರೆಬೇರೆ ದೃಷ್ಟಿಕೋನಗಳಿಂದ ನೋಡುವ ಅಗತ್ಯವಿದೆ. ಮಾನವೀಯ ದೃಷ್ಟಿಯಿಂದ ನೋಡುವುದಾದರೆ ಪರಂಪರೆ ಮುಖ್ಯವೆನ್ನಿಸುತ್ತದೆ. ಸಮಾಜವಿಜ್ಞಾನಗಳ ದೃಷ್ಟಿಯಿಂದ ಅಧ್ಯಯನ ಮಾಡುವುದಾದರೆ ಸಂಬಂಧಿಸಿದ ಸಮೂಹವೇ ಪ್ರಧಾನವಾಗುತ್ತದೆ. ಶಿಕ್ಷಣ ತಜ್ಞನಿಗೆ ಇಲ್ಲಿ ತನಗೆ ಅಗತ್ಯವಾದ ಪರಿಕರಗಳಿವೆ ಎನ್ನಿಸಬಹುದು. ತತ್ವಶಾಸ್ತ್ರ, ಇತಿಹಾಸ, ಮಾನವಶಾಸ್ತ್ರ ಆಸಕ್ತರಿಗೆ ಜಾನಪದ ಆಕರಗಳು ಕಣಜವೆನ್ನಿಸುತ್ತವೆ. ಛಂದಸ್ಸಿನ ಬೇರುಗಳನ್ನೂ, ಸಂಗೀತದ ಶುದ್ಧ ಸ್ವರೂಪಗಳನ್ನೂ ಜಾನಪದ ತೋರಿಸಬಹುದು. ಈ ಎಲ್ಲದರಿಂದ ಜಾನಪದ ಅಧ್ಯಯನ ಮಾನವಸಮೂಹದ ಅಧ್ಯಯನವೇ ಆಗಿದೆ, ಆದ್ದರಿಂದ ಅದು ಸಂಕೀರ್ಣವೆನ್ನಿಸಿದೆ. ಜಾನಪದ ಎಂದರೆ ಮನುಷ್ಯನ, ಅವನ ಸಂಸ್ಥೆಗಳ ಅಧ್ಯಯನ.

ಇಂಥ ಅಧ್ಯಯನವನ್ನು ಕೈಗೊಳ್ಳುವಾಗ ನಾವು ಅನೇಕ ಸಂಗತಿಗಳನ್ನು ಗಮನಿಸಬೇಕು. ಜಾನಪದ ಎಂದರೇನು? ಅದರ ವಿವಿಧ ಅಂಗಗಳು ಯಾವುವು? ಜಾನಪದದ ಜನಸಮೂಹ ಯಾವುವು? ಅದನ್ನು ನಿರ್ಮಿಸಿದವರು ಯಾರು? ಅದರ ಪ್ರಸಾರ ಹೇಗಾಯಿತು? ಜಾನಪದ ಬದಲಾಗುವುದರ ಬಗೆಗಳೇನು? ಅದರ ವಸ್ತು ರೂಪಗಳೇನು? ಅದರಿಂದ ಸಾಧಿತವಾಗುವುದೇನು? ಅದರ ಸಂಬಂಧದ ಇತರ ಜ್ಞಾನಕ್ಷೇತ್ರಗಳು ಯಾವುವು? ಅವುಗಳ ಸಂಬಂಧ ಯಾವ ಬಗೆಯಾದುದು? ಅವುಗಳ ನಡುವೆ ಕೊಡುಕೊಳುವಿಕೆ ಹೇಗೆ ನಡೆಯುತ್ತದೆ?-ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗ ಅಧ್ಯಯನ ಪೂರ್ಣಗೊಳ್ಳುತ್ತದೆ. ಹಲವು ಶಾಸ್ತ್ರಗಳ ವಿಧಿವಿಧಾನಗಳು ಜಾನಪದದಲ್ಲಿ ಸಮಾವೇಶಗೊಂಡಿರುವುದರಿಂದ ನಿಜವಾದ ಜಾನಪದ ವಿದ್ಯಾರ್ಥಿಗೆ ವಿವಿಧ ಕ್ಷೇತ್ರಗಳ ಪರಿಚಯ ಅಗತ್ಯವಾಗಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಜಾನಪದ ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಕೆಲಸಗಳಾಗಿವೆ ಎಂಬುದು ಸಮಾಧಾನದ ಮಾತು. ನಮ್ಮ ಐದೂ ವಿಶ್ವವಿದ್ಯಾನಿಲಯಗಳಲ್ಲಿ ಪ್ರಕಟಣೆ ಮತ್ತು ಪಠ್ಯಕ್ರಮದಲ್ಲಿ ಜಾನಪದಕ್ಕೆ ಮಾನ್ಯತೆ ದೊರಕಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತ್ಯೇಕ ಜಾನಪದ ಎಂ. ಎ. ತರಗತಿಗಳು ನಡೆದಿವೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜನಪದ ಸಾಹಿತ್ಯದಲ್ಲಿ ಎಂ. ಎ. ಪದವಿಯನ್ನು ನೀಡಲಾಗುತ್ತಿದೆ. ವಸ್ತುಸಂಗ್ರಹಾಲಯಗಳು ಸ್ಥಾಪನೆಗೊಂಡಿವೆ. ಕ್ಷೇತ್ರಕಾರ್ಯ ವಿಪುಲವಾಗಿ ನಡೆದಿದೆ. ವಿಚಾರಗೋಷ್ಠಿಗಳಿಗೆ, ಸಭೆ ಸಮ್ಮೇಳನಗಳಿಗೆ ಲೆಕ್ಕವಿಲ್ಲ. ಸರ್ಕಾರ ಜಾನಪದಕ್ಕಾಗಿ ಒಂದು ಅಕಾಡೆಮಿಯನ್ನೇ ಸ್ಥಾಪಿಸಿದೆ. ಖಾಸಗಿ ಸಂಸ್ಥೆಗಳೂ ಅಸ್ತಿತ್ವಕ್ಕೆ ಬಂದಿವೆ. ಉಡುಪಿಯಲ್ಲಿ ಪ್ರಾದೇಶಿಕ ಜನಪದ ಕಲೆಗಳ ಅಧ್ಯಯನ ಕೇಂದ್ರವೆ ರೂಪುಗೊಂಡಿದೆ. ಪುಸ್ತಕ ಪ್ರಕಟಣೆ ನಿಯತಕಾಲಿಕೆಗಳ ಸಂಖ್ಯೆ ಬೆಳೆದಿದೆ. ನಮ್ಮ ಜನಪದ ಕಲಾವಿದರ ತಂಡಗಳು ದೇಶವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿವೆ. ಇದೆಲ್ಲವೂ ಗಮನಾರ್ಹವಾದ ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಸಾಂಸ್ಥಿಕ ಬೆಳವಣಿಗೆಯಂತೆ, ಬೌದ್ಧಿಕ ಬೆಳವಣಿಗೆಯಾಗಿಲ್ಲವೆಂಬುದು, ಕೆಲವರಿಗೆ ರುಚಿಸದೆ ಹೋದರೂ, ಹೇಳಲೇಬೇಕಾದ ಮಾತಾಗಿದೆ. ಬೆಳೆಯೇನೋ ಬೇಕಾದಷ್ಟಿದೆ ; ಜೊತೆಗೆ ಕಳೆಯೂ ಸಾಕಷ್ಟು ಬೆಳೆದಿದೆ.

೧೯೭೪ರಲ್ಲಿ ನಾನು ಕನ್ನಡ ಜಾನಪದ ಗ್ರಂಥಸೂಚಿಯೊಂದನ್ನು ಪ್ರಕಟಿಸಿದೆ. ಅದರಲ್ಲಿ ಅಲ್ಲಿಯವರೆಗೆ ಪ್ರಕಟಗೊಂಡ ೫೩೨ ಜಾನಪದ ಗ್ರಂಥಗಳು ನಮೂದುಗೊಂಡಿವೆ, ಅಲ್ಲಿಂದ ಮುಂದಿನ ಈ ೧೨ ವರ್ಷಗಳಲ್ಲಿ ಬಹುಶಃ ಅದಕ್ಕಿಂತಲೂ ದೊಡ್ಡ ಸಂಖ್ಯೆಯ ಗ್ರಂಥಗಳೇ ಪ್ರಕಟವಾಗಿರಬೇಕು. ಸಂಖ್ಯೆ ದೊಡ್ಡದಾಗಿ ತೋರಿದರೂ ಗುಣ ಆ ಗಾತ್ರದ್ದಲ್ಲ ಎಂಬುದನ್ನು ಹೇಳಬೇಕು. ಪುಸ್ತಕಗಳ ಸಂಖ್ಯೆಯನ್ನು ಬೆಳೆಸಬೇಕೆಂಬ ಹಂಬಲ ನಮ್ಮ ಜಾನಪದ ಲೇಖಕರಲ್ಲಿ, ಅದರಲ್ಲೂ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸಮಾಡುವವರಲ್ಲಿ, ಹೆಚ್ಚಾಗಿ ಬೆಳೆದಿದೆ. ಪ್ರಗತಿಯ ವರದಿಗಾಗಿ, ಬಹುಮಾನಗಳಿಗೆ ಒಪ್ಪಿಸುವ ಸಲುವಾಗಿ, ಪುಸ್ತಕ ಪ್ರಕಟಣೆಯ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಪ್ರಕಾಶನದ ಪೈಪೋಟಿ ನಡೆದಿದೆ. ಪ್ರಕಟಿತವಾದ ಸಾಹಿತ್ಯವನ್ನೇ ಭಾಷಿಕ ಸ್ವರೂಪದಲ್ಲಿ ಅಲ್ಪ ಸ್ವಲ್ಪ ಬದಲಿಸಿ ಪ್ರಾದೇಶಿಕ ಹೆಸರು ಕೊಟ್ಟು ತಮ್ಮದನ್ನಾಗಿಸಿಕೊಳ್ಳುವ ಪ್ರವೃತ್ತಿ ಕಾಣಿಸಿಕೊಂಡಿದೆ. ಎರಡೋ ಮೂರೋ ಸಂಕಲಗಳನ್ನಿಟ್ಟುಕೊಂಡು ಮಗುದೊಂದು ಹೊಸ ಸಂಕಲನವನ್ನು ಸೃಷ್ಟಿಸುವ ಕಲೆ ಬೆಳೆದಿದೆ. ಜಾನಪದವು ಕಲಬೆರಕೆಯಾಗುವ ರೀತಿಯನ್ನು ಕುರಿತೇ ದೊಡ್ಡದೊಂದು ಪುಸ್ತಕ ಪ್ರಕಟವಾಗಿದೆ ಎಂದ ಮೇಲೆ ಆ ಕೌಶಲದ ಬಗೆಗೆ ಪ್ರತ್ಯೇಕವಾಗಿ ಹೇಲಬೇಕಾಗಿಲ್ಲ !

ಆಧುನಿಕ ನಾಗರಿಕತೆಯ ನಾಗಾಲೋಟಕ್ಕೆ ಸಿಕ್ಕಿ ತಿವ್ರಗತಿಯಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಸಾಮಗ್ರಿಯನ್ನು ಸಂಗ್ರಹಿಸಬೇಕೆಂಬುದು ಸರಿಯಾದ ಮಾತು. ಆದರೆ ಆ ಸಂಗ್ರಹದಿಂದಲೇ ಬಹುದೊಡ್ಡ ಸಾಧನೆಮಾಡಿದ್ದೇವೆಂದು ಭ್ರಮಿಸುವುದು ಮಾತ್ರ ತಪ್ಪು. ನಮ್ಮಲ್ಲಿ ಈಗಾಗಲೇ ಸಂಗ್ರಹವಾಗಿರುವ ಸಾಮಗ್ರಿಯ ಗಾತ್ರವನ್ನು ನೋಡಿದರೆ, ನಡೆದಿರುವ ವಿಶ್ಲೇಷಣೆಯ ಕೆಲಸ ಏನೂ ಸಾಲದೆಂಬುದು ದೃಢವಾಗುತ್ತದೆ. ಈ ವಿಶ್ಲೇಷಣೆಯ ಕೆಲಸಕ್ಕೆ ಅಗತ್ಯವಾದ ಪೂರ್ವ ಸಿದ್ಧತೆಯನ್ನು ಪಡೆದವರು ತೀರ ವಿರಳ. ಜಾನಪದದ ಅಧ್ಯಯನಕ್ಕೆ ಅನಿವಾರ್ಯವಾಗಿ ಬೇಕಾದ ಮಾನವಶಾಸ್ತ್ರವನ್ನು ಬಲ್ಲವರು ಕಾಣಿಸುವುದಿಲ್ಲ. ಆದ್ದರಿಂದಲೇ ಭಾರತದಂಥ ದೇಶದಲ್ಲಿ ಧರ್ಮಾಚರಣೆಯೊಂದಿಗೆ ಬೆರೆತುಕೊಂಡಿರುವ ಜಾನಪದದ ನೈಜಸ್ವರೂಪವನ್ನು ತೆರೆದು ತೋರಿಸುವವರ ಸಂಖ್ಯೆ ಬೆಳೆದಿಲ್ಲ. ಕೆಲವರಿಗೆ ಜಾನಪದ, ವೃತ್ತಿಜೀವನದ ಬಡ್ತಿಗೆ ಸಾಧನ ; ಕೆಲವರಿಗೆ ಅದು ಪ್ರತಿಷ್ಠೆಯ ಕಣ ; ಇನ್ನು ಕೆಲವರಿಗೆ ಲಾಭಗಳಿಕೆಯ ಒಂದು ದಾರಿ. ಇದರಿಂದ ಜಾನಪದ ಅಧ್ಯಯನ ಬೆಳೆಯುವುದು ಸಾಧ್ಯವಿಲ್ಲ.

“ಜಾನಪದವೆಂದರೆ ಕಲೆಗಾರರು ಮಾತ್ರ. ಅವರನ್ನು ಕುಣಿಸಿದರೆ ಸಾಕು, ವಿದ್ವಾಂಸರ ಸಹವಾಸವೇ ನಮಗೆ ಬೇಡ” ಎನ್ನುವವರೂ ಇದ್ದಾರೆ ! ಇದು ಅವರ ಅಜ್ಞಾನವನ್ನು ಮುಚ್ಚಿಡುವ ಒಂದು ಬಗೆ ಮಾತ್ರವಲ್ಲ ; ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ವಿಧಾನವೂ ಹೌದು. ಜಾನಪದ, ಕಲಾಪೋಷಣೆಗೆ ಮಾತ್ರವೇ ಅಲ್ಲ, ಅದರ ಅರ್ಥಪ್ರಕಾಶನವೂ ಮಹತ್ವದ್ದು ಎಂಬುದನ್ನು ನಾವು ತಿಳಿದುಕೊಂಡಿರಬೇಕು. ಜನಪದ ಕಲಾವಿದರು ಶೋಷಣೆಗೊಳ್ಳುತ್ತಿರುವ ರೀತಿಯನ್ನು ನೋಡಿದಾಗ ಜನಪದ ಕಲೆಗಳ ಉದ್ಧಾರಕ್ಕೆ ಕಂಕಣ ಕಟ್ಟಿರುವ ಕೆಲವು ವ್ಯಕ್ತಿಗಳ ಮೇಲೂ, ಅವರು ನಡೆಸುವ ಸಂಸ್ಥೆಗಳ ಮೇಲೂ ಬೇಸರಬರುತ್ತದೆ. ಜನಪ್ರಿಯತೆಯ ಹೆಸರಿನಲ್ಲಿ ಶಿಷ್ಟತೆ ಮಾಯವಾಗುತ್ತಿದೆ.

ಬಗೆಬಗೆಯ ಕಾರಣಗಳಿಂದಾಗಿ ನಮ್ಮ ಕೆಲಸಗಾರರಲ್ಲಿ ಪರಸ್ಪರ ಪೈಪೋಟಿ ಕಚ್ಚಾಟ ಹೆಚ್ಚಿದೆ. ಆರೋಗ್ಯಕರವಲ್ಲದ ಈ ಪ್ರವೃತಿ ಕೆಲವು ಸಲ ಅಸಹ್ಯಕರ ಘಟ್ಟವನ್ನು ತಲುಪಿರುವುದೂ ಉಂಟು. ಸದ್ಯದ ಲಾಭ ಪ್ರತಿಷ್ಠೆಗಳನ್ನಷ್ಟೆ ಗಮನದಲ್ಲಿಟ್ಟುಕೊಂಡಿರುವ ಈ ಜನ ನಾಳೆಯನ್ನು ಮರೆಯಬಾರದು. ನಾವು ನಮ್ಮ ಕೆಲಸಗಳಿಂದ ಮಾತ್ರ ಉಳಿಯುತ್ತೇವೆ. ಪ್ರಚಾರಗಳು ನಮ್ಮನ್ನು ಬದುಕಿಸುವುದಿಲ್ಲ. ಕಾಲ ಎಲ್ಲವನ್ನೂ ಜರಡಿ ಹಿಡಿಯುತ್ತದೆ. ಐವತ್ತು ಪುಸ್ತಕ, ನೂರು ಪುಸ್ತಕ ಬರೆದಿದ್ದೇವೆ ಎಂದುಕೊಳ್ಳುವವರ ಹೆಸರು ಉಳಿಯದೆ ಹೋಗಬಹುದು ; ಒಂದೇ ಪುಸ್ತಕ ಬರೆದುಹೋದವರನ್ನು ಚರಿತ್ರೆ ಸ್ಮರಿಸಬಹುದು. ಇದನ್ನು ಜನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿಗಳಿಗೆ ಕಿವಿ ಮಾತೆಂದು ಹೇಳಬಯಸುತ್ತೇನೆ. ನಿಮ್ಮ ಕೆಲಸ ನೀವು ಮಾಡಿ; ಇನ್ನೊಬ್ಬರ ಹೆಸರನ್ನು ಅಳಿಸಲು ಹೋಗಬೇಡಿ. ನೀವು ಆಸಕ್ತಿಯಾಗಿರಲಿ; ಜಾನಪದದ ಅಭಿವೃದ್ಧಿ ನಿಮ್ಮ ಆಸಕ್ತಿಯಿಂದ ಸಾಧಿತವಾಗುವಂತಾಗಲಿ.

ಕರ್ನಾಟಕ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ದಾರಿಯನ್ನು ನಿಚ್ಚಳವಾಗಿ ಕಂಡುಕೊಳ್ಳಬೇಕಾಗಿದೆ. ಜಾನಪದ ಇನ್ನೂ ಇಲ್ಲಿ ಕನ್ನೆಕ್ಷೇತ್ರ. ನಾವು ಮಾಡುವ ಪ್ರತಿಯೊಂದು ಕೆಲಸವು ಈ ಕ್ಷೇತ್ರದ ದಿಗಂತಗಳನ್ನು ವಿಸ್ತರಿಸುವುದಾಗಬೇಕು. ಅದೇ ಹೊತ್ತಿನಲ್ಲಿ ಜ್ಞಾನದ ಕ್ಷೇತ್ರಕ್ಕೆ ನಾವು ಕೊಡುತ್ತಿರುವುದೇನು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳುತ್ತಿರಬೇಕು, ಜಾನಪದವು ಒಂದು ವಿಶ್ವವ್ಯಾಪಿಯಾದ ವಿಜ್ಞಾನವಾಗಿ ಬೆಳೆದಿರುವುದು ಯಾವುದೇ ಒಂದು ಜನಾಂಗದ ಅಥವಾ ಪ್ರದೇಶದ ಜಾನಪದವನ್ನು ಆಧರಿಸಿ ಅಲ್ಲ, ಜಾನಪದದ ಸಾಮಗ್ರಿ ಎಷ್ಟು ಎಷ್ಟು ದೊರೆಯುತ್ತದೆ, ಅಷ್ಟು ಅಷ್ಟು ವಿಜ್ಞಾನದ ವ್ಯಾಪ್ತಿ ಹಿಗ್ಗುತ್ತದೆ. ಆದ್ದರಿಂದ ಕನ್ನಡದ ಜಾನಪದ ಸಾಮಗ್ರಿಯನ್ನು ಜಗತ್ತಿನ ಅಧ್ಯಯನಕ್ಕೆ ಒದಗಿಸಬೇಕಾದದ್ದೂ ನಮ್ಮ ಕರ್ತವ್ಯವೇ ಆಗಿದೆ. ಇದು ಸದ್ಯಕ್ಕೆ ಇಂಗ್ಲಿಷಿನ ಮೂಲಕ ಮಾತ್ರ ಆಗುವಂಥದು. ಆದ್ದರಿಂದ, ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಆಯ್ದ ಅತ್ಯುತ್ತಮ ಹಾಗೂ ವಿಶೇಷ ಗುಣದ ಕನ್ನಡ ಜಾನಪದವನ್ನು ಇಂಗ್ಲಿಷಿನಲ್ಲಿ ಪ್ರಕಟಿಸುವ ಕೆಲಸವನ್ನು ಕೈಗೊಳ್ಳಬೇಕು.

ಕನ್ನಡ ಜನಪದಸಾಹಿತ್ಯವನ್ನು ಐದಾರು ಸಂಪುಟಗಳಲ್ಲಿ, ಸಾಹಿತ್ಯೇತರ ಸಾಮಗ್ರಿಯನ್ನು ನಾಲ್ಕೈದು ಸಂಪುಟಗಳಲ್ಲಿ ವಿಶ್ವದ ನಾನಾ ಭಾಗಗಳ ವಿದ್ವಾಂಸರಿಗೆ ಒದಗಿಸುವ ಕೆಲಸ ಆದ್ಯತೆಯ ಮೇಲೆ ಆಗಬೇಕಾಗಿದೆ. ಕೆಲವು ವರ್ಷಗಳ ಹಿಂದೆ, ನಾನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನಸಂಸ್ಥೆಯ ನಿರ್ದೇಶಕನಾಗಿದ್ದಾಗ, ಸಾಹಿತ್ಯಸಂಬಂಧವಾದ ಈ ಕೆಲಸವನ್ನು ನಿರ್ವಹಿಸಬೇಕೆಂದು ಯೋಚಿಸಿದ್ದೆ. ನಾನು ಮಾಡಲಾಶಿಸಿ, ಮಾಡಲಾಗದೆ ಹೋದ ಅನೇಕ ಯೋಜನೆಗಳಲ್ಲಿ ಇದೂ ಒಂದಾಗಿ ಹೋಯಿತು. ವಿಶ್ವವಿದ್ಯಾನಿಲಯಗಳೋ, ಅಕಾಡೆಮಿಯೋ, ಪ್ರಾದೇಶಿಕ ಕೇಂದ್ರವೋ ಇದನ್ನು ಕೈಗೆತ್ತಿಕೊಂಡು ನಿರ್ವಹಿಸುತ್ತವೆಂದು ಆಶಿಸುತ್ತೇನೆ. ಆಫ್ರಿಕೆಯ ದೇಶಗಳಿಂದ ಒದಗುತ್ತಿರುವಷ್ಟು ಸಾಮಗ್ರಿಯನ್ನು ನಮ್ಮ ದೇಶದಿಂದ ಒದಗುತ್ತಿಲ್ಲವೆಂಬುದು ಗಮನಿಸಬೇಕಾದ ಮಾತು. ಇದಕ್ಕೆ ಕಾರಣಗಳು ಅನೇಕ. ಆದರೆ ನಮ್ಮಲ್ಲಿ ಅರ್ಥವತ್ತಾದ ಸಾಮಗ್ರಿ ಇಲ್ಲವೆಂಬುದಲ್ಲ. ನಮ್ಮ ಸಾಮಗ್ರಿಯನ್ನು ಸರಿಯಾದ ರೀತಿಯಲ್ಲಿ ಹೂಡುವ ಕ್ರಮಬದ್ಧ ಯೋಜನೆಯನ್ನು ಕೈಗೊಳ್ಳಬೇಕಾಗಿದೆ. ಈ ಬಗೆಯ ಕೆಲಸಗಳಾಗದಿದ್ದರೆ, ನಾವು ಎಷ್ಟೇ ಕ್ಷೇತ್ರಕಾರ್ಯ ಮಾಡಿ ಸಾಮಗ್ರಿಯನ್ನು ಒಟ್ಟಿಕೊಂಡರೂ ಪ್ರಯೋಜನವಾಗುವುದಿಲ್ಲ. ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಕರ್ನಾಟಕದ ಉದ್ದಗಲಕ್ಕೂ ಜಾನಪದ ಸಮೂಕ್ಷೆಯೊಂದನ್ನು ಕೈಗೊಳ್ಳುವುದು ಅವಶ್ಯವಾಗಿದೆ. ನಗರೀಕರಣದ ಶೀಘ್ರ ಬೆಳವಣಿಗೆಯೊಂದಿಗೆ ಸ್ಪರ್ಧಿಸಲಾಗದೆ ಜಾನಪದ ನಶಿಸುತ್ತದೆಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಹಾಗೆ ಆಗುವ ಮೊದಲು ಎಲ್ಲವನ್ನೂ ದಾಖಲೆಗಾಗಿಯಾದರೂ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಈ ಕೆಲಸ ಬಹು ದೊಡ್ಡಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಸಜ್ಜುಗೊಳಿಸಬೇಕು. ಜಾನಪದಸಂಗ್ರಹ ಬಹಳ ಸುಲಭವಾದ ಕೆಲಸವೆಂದು ಅನೇಕರು ಭಾವಿಸಿರುವಂತಿದೆ. ಶಿಷ್ಟಭಾಷೆಯ ಉಕ್ತಲೇಖನವನ್ನೇ ತಪ್ಪಿಲ್ಲದೆ ತೆಗೆದುಕೊಳ್ಳಲು ಅಸಮರ್ಥರಾದವರು ಆಡುಮಾತಿನ ನಿರೂಪಣೆಗಳನ್ನು ಅದರ ಧ್ವನಿಪೂರ್ಣವಾದ ಏರಿಳಿತಗಳೊಡನೆ ಬರೆದುಕೊಳ್ಳುತ್ತಾರೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಅಲ್ಲದೆ ಯಾವುದನ್ನು, ಎಲ್ಲಿ, ಎಷ್ಟು ತೆಗೆದುಕೊಳ್ಳಬೇಕೆಂಬ ವಿವೇಚನೆ ಎಲ್ಲರಿಗೂ ಇರುವುದಿಲ್ಲ. ಇದು ಕ್ಷೇತ್ರಕಾರ್ಯಕರ್ತರಿಗೆ ತರಬೇತಿ ಬೇಕೆಂಬುದನ್ನು ಸೂಚಿಸುತ್ತದೆ. ಸಮೀಕ್ಷೆಯ ಯೋಜನೆ ಕಾರ್ಯಗತಗೊಳ್ಳುವಾಗ ಕಾರ್ಯಕರ್ತರೆಲ್ಲರಿಗೂ ಕೆಲ ವಾರಗಳ ತರಬೇತಿ ನೀಡುವುದು ಅಗತ್ಯ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯವ್ಯಾಪಿಯಾದ ಸಮೀಕ್ಷೆಯ ಕೆಲಸವನ್ನು ಯಾವುದಾದರೊಂದು ಸಂಸ್ಥೆ ನಿರ್ವಹಿಸೀತು ಎಂಬ ನಂಬಿಕೆ ನನಗಿಲ್ಲ. ಹಾಗೆ ನಿರ್ವಹಿಸಬಹುದಾದ ಸಂಸ್ಥೆ ಎಂದರೆ ಜಾನಪದ ಅಕಾಡೆಮಿಯೊಂದೇ. ಆದರೆ ಅದಕ್ಕೆ ಈ ಬಗೆಯ ಶೈಕ್ಷಣಿಕ ಆಸಕ್ತಿ ಎಷ್ಟಿದೆ ಎಂಬುದನ್ನು ಹೇಳಲಾಗದು. ಆದ್ದರಿಂದ ನಮ್ಮ ವಿಶ್ವವಿದ್ಯಾನಿಲಯಗಳು ತಮ್ಮ ತಮ್ಮ ವ್ಯಾಪ್ತಿಗೆ ಸೇರಿದ ಭೌಗೋಲಿಕ ಪ್ರದೇಶಗಳಲ್ಲಿ ಈ ಸಮೀಕ್ಷೆಗಳನ್ನು ನಡೆಸುವುದು ಹೆಚ್ಚು ವ್ಯಾವಹಾರಿಕವಾಗಬಹುದೇನೋ. ಆದರೆ ಈ ಕೆಲಸದ ಏಕರೂಪತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಎಲ್ಲ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿಯೊಂದು ಉಸ್ತುವಾರಿ ನೋಡಿಕೊಳ್ಳಬೇಕಾಗುತ್ತದೆ. ನಮ್ಮ ವಿಶ್ವವಿದ್ಯಾನಿಲಯಗಳ ಜಾನಪದ, ಕನ್ನಡ, ಭಾಷಾವಿಜ್ಞಾನ. ಇತಿಹಾಸ ಮತ್ತು ಮಾನವಶಾಸ್ತ್ರ ವಿಭಾಗಗಳ ಪರಿಣತರು ಕಲೆತು ಈ ನಿಟ್ಟಿನಲ್ಲಿ ಸಮಾಲೋಚಿಸುವುದು ಸೂಕ್ತವಾಗಿದೆ. ಇದರಿಂದ ಈಗ ಆಗುತ್ತಿರುವ ಕೆಲಸಗಳ ಪುನರಾವರ್ತನೆಗಳನ್ನೂ ತಡೆಯಬಹುದು; ಸಮೀಕ್ಷೆಯನ್ನೂ ತ್ವರಿತವಾಗಿ ಮುಗಿಸಬಹುದು.

ನಶಿಸುವ ಜನಪದಕಲೆಗಳನ್ನು ಸಂಗ್ರಹಿಸಿ ಉಳಿಸಿಕೊಳ್ಳುವ ಕೆಲಸ ಹೇಗೂ ನಡೆದೀತು. ಆದರೆ ಈ ಕಲೆಗಳನ್ನು, ಅವುಗಳ ಪರಂಪರೆಯನ್ನು ಮೂಲರೂಪದಲ್ಲಿ ಉಳಿಸಿಕೊಳ್ಳುವುದು ಹೇಗೆಂಬುದು ಮಾತ್ರ ಮಹತ್ವದ ಪ್ರಶ್ನೆಯಾಗಿದೆ. ಈ ಕಲೆಗಳನ್ನು ನಂಬಿಕೊಂಡು ಯಾರೂ ಜೀವನ ಮಾಡುವ ಸ್ಥಿತಿಯಲಿಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಸುಖವನ್ನೂ ಭದ್ರತೆಯನ್ನೂ ಬಯಸುತ್ತಿರುವಾಗ ಈ ಜನಪದ ಕಲಾವಿದರು ಮಾತ್ರ ಕಲೆಗಾಗಿ ತಮ್ಮನ್ನು ತೇದುಕೊಳ್ಳಬೇಕೆಂದು ನಿರೀಕ್ಷಿಸುವುದು ತಪ್ಪಾಗು‌ತ್ತದೆ. ಕಲಾವಿದರು ಈಗ ತಮ್ಮ ವಂಶಪಾರಂಪರ್ಯವಾದ ಕಲೆಗಿಂತ ಹೆಚ್ಚಾಗಿ ಸರ್ಕಾರಿ ಕಛೇರಿಯಲ್ಲಿ ಒಂದು ಜವಾನ ಪದವಿ ಪಡೆಯುವುದರಲ್ಲಿ ಉತ್ಸುಕರಾಗಿದ್ದಾರೆ. ಈ ಮನೋಭಾವತಪ್ಪುವಂತೆ ಮಾಡುವುದು ಹೇಗೆ ಎನ್ನುವುದು ನಮ್ಮ ಎದುರಿಗಿನ ಸಮಸ್ಯೆಯಾಗಿದೆ. ಕೆಲವು ವಿಶಿಷ್ಟ ಕಲಾ ತಂಡಗಳನ್ನು ಗುರುತಿಸಿ ಆ ತಂಡಗಳವರಿಗೆ ಜೀವನೋಪಾಯವನ್ನು ಕಲ್ಪಿಸಬೇಕು. ಈ ಜೀವನೋಪಾಯ ಎಂಬುದು ತಮಗೆ ಭದ್ರತೆಯನ್ನು ಕೊಡುತ್ತದೆ ಎಂಬುದು ಅವರಿಗೆ ಖಾತ್ರಿಯಾಗಬೇಕು. ಇಂಥ ತಂಡಗಳ ಕೆಲಸ ಯಾವಾಗಲೂ ಕಲೆಗಳನ್ನು ಪ್ರದರ್ಶಿಸುವುದು ಹಾಗೂ ಆಸಕ್ತರಾದವರಿಗೆ ತರಬೇತಿ ನೀಡುವುದು ಆಗಿರಬೇಕು. ಈ ತಂಡಗಳು ನೀಡುವ ಪ್ರದರ್ಶನಗಳನ್ನು ಅಧಿಕೃತ ಎನ್ನಿಸಬೇಕು. ಸರ್ಕಾರ ಇಂಥದೊಂದು ಯೋಜನೆಗಳನ್ನು ರೂಪಿಸಬೇಕು. ಇದರ ಕಷ್ಟ ಸುಖಗಳನ್ನು ನಾನು ಬಲ್ಲೆನಾದರೂ ಇದು ಕಾರ್ಯಗತ ಮಾಡಲಾಗದ ಸಲಹೆಯಲ್ಲ. ಅತ್ಯಂತ ವಿಶಿಷ್ಟವಾದ ಕಲೆಗಳನ್ನು ಉಳಿಸಿಕೊಳ್ಳುವುದು ನಮ್ಮ ಅಗತ್ಯವೇ ಸರಿ. ಇದು ಸಾಧ್ಯವಾಗದಿದ್ದರೆ ಬೀದಿನಾಟಕಗಳನ್ನೇ ನಮ್ಮ ಜನಪದಕಲೆಗಳೆಂದು ಭಾವಿಸುವ ದಿನಗಳೂ ಬರುತ್ತವೆ.

ಜನಪದ ಕಲೆಗಳು ಸೃಷ್ಟಿಯಾದ ಕಾಲದ ಪುನರ್ ನಿರ್ಮಾಣಕ್ಕೆ ನಾನು ಅಪೇಕ್ಷಿಸುತ್ತಿದ್ದೇನೆಂದು ಯಾರೂ ಭಾವಿಸಬಾರದು. ಅದು ಸಾಧುವಲ್ಲ; ಸಾಧ್ಯವೂ ಇಲ್ಲ. ಇಂದಿನದು ಬದಲಾದ ಪರಿಸರ. ಈಗ ಈ ಪರಿಸರಕ್ಕೆ ಅನುಗುಣವಾಗಿ ಹೊಸಬಗೆಯ ಜಾನಪದ ಸೃಷ್ಟಿಗೊಳ್ಳಬಹುದು. ಆದರೆ ಕಳೆದುಹೋದ ಕಾಲದ ಜನಪದ ಕಲಾಸಂಪ್ರದಾಯಗಳು ಉಳಿದುಕೊಳ್ಳುವ ಪರಿಸರವನ್ನು ನಿರ್ಮಿಸುವುದು ಅಗತ್ಯವೆನ್ನುವುದಷ್ಟೇ ನನ್ನ ಆಶಯ.

ಸಮೂಹ ಜೀವನದ ಹಳೆಯ ಪರಂಪರೆಯಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲವೂ ತುಂಬಿಕೊಂಡಿರುತ್ತದೆ. ಅನೇಕ ಮೌಢ್ಯಗಳೂ ಉಳಿದಿರುತ್ತವೆ. ಇದನ್ನು ಸೋಸಿ ತೆಗೆದುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಜನರಲ್ಲಿ ತಿಳಿವಳಿಕೆ ಬೆಳೆದಾಗ, ಶಿಕ್ಷಣ ಹೆಚ್ಚಿದಾಗ ಈ ಆಯ್ಕೆ ಸುಲಭವಾಗುತ್ತದೆ. ನಮಗೆ ಈಗ ಸಹ್ಯವೆನಿಸದ್ದನ್ನು ತೆಗೆದುಹಾಕುವುದಕ್ಕೆ ಅಪಾರವಾದ ತಾಳ್ಮೆ ಬೇಕಾಗುತ್ತದೆ. ಕಾರಣ ಯಾವುದೇ ಇರಲಿ ಉಳಿದು ಬಂದ ಕೆಲವು ಕುರುಡು ಸಂಪ್ರದಾಯಗಳು ನಮ್ಮ ಜೀವನದಲ್ಲಿ ಬಲವಾಗಿ ಬೇರುಬಿಟ್ಟಿವೆ. ರಾಹುಕಾಲ ಗುಳಿಕಕಾಲಗಳಿಗೆ ಆದ್ಯತೆ ಕೊಡುವವರು ಅಣುಶಕ್ತಿಮಂಡಳಿಯ ಅಧ್ಯಕ್ಷರಾಗುವ ಈ ದೇಶದಲ್ಲಿ, ನೂರಕ್ಕೆ ಎಪ್ಪತ್ತರಷ್ಟು ಜನ ನಿರಕ್ಷರಸ್ಥರು ಮೌಢ್ಯಗಳ ಆಚರಣೆಯಲ್ಲಿ ಮುಳುಗಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.

ಚಂದ್ರಗುತ್ತಿಯ ಬೆತ್ತಲೆಸೇವೆಯಂಥ ಮೂಢ ಆಚರಣೆಗಳು ನಮ್ಮ ಸಮಾಜ ಜೀವನದಲ್ಲಿ ಶತಮಾನಗಳಿಂದ ಅಂಟಿಕೊಂಡು ಬಂದಿವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ನಲವತ್ತು ವರ್ಷಗಳಾಗಿವೆ. ಬೆತ್ತಲೆಸೇವೆಗೆ ಸಂಬಂಧಿಸಿದ ಜನರ ಮನಸ್ಸನ್ನು ಪರಿವರ್ತಿಸಲು ಈ ಅವಧಿಯಲ್ಲಿ ಯಾರೂ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗುವುದರ ಒಳಗೆ ಈ ಸಂಪ್ರದಾಯ ನಿಲ್ಲಬೇಕೆಂದು ಕೆಲವರು ಬಯಸಿದರು. ಆದ್ದರಿಂದ ಅಹಿತಕರ ಘಟನೆಗಳು ನಡೆದವು. ಈಗ ಕಾನೂನು ಇದನ್ನು ಬಹಿಷ್ಕರಿಸಿದೆ. ಫಲವಾಗಿ ಎಷ್ಟೋ ಜನರಿಗೆ ಮಾನಸಿಕ ಆಘಾತವಾಗಿರಬಹುದು. ತಮ್ಮ ಸ್ವಂತ ನಡೆವಳಿಗಳಲ್ಲಿ ಸರ್ಕಾರ ಕೈ ಹಾಕುತ್ತದೆ ಎಂಬ ಭಾವನೆ ಬಂದಿರಬಹುದು. ನನ್ನ ಅಭಿಪ್ರಾಯದಲ್ಲಿ ಸರ್ಕಾರ ಕೈಗೊಂಡ ಕ್ರಮ ಖಂಡಿತ ಸರಿಯಲ್ಲ. ಜನರನ್ನು ಸುಧಾರಿಸಬೇಕೆಂಬ ಸರ್ಕಾರವಾಗಲಿ, ಸಂಘಸಂಸ್ಥೆಗಳಾಗಲಿ ಇಂಥ ಆಚರಣೆಗಳ ಹಿಂದಿನ ಕಾರಣಗಳನ್ನು ಹುಡುಕಬೇಕು. ಅದಕ್ಕೆ ಪರಿಹಾರಗಳನ್ನು ಪ್ರಯತ್ನಿಸಬೇಕು.

ಇದು ಸಾಮಾಜಿಕ ಆರ್ಥಿಕ ಕಾರಣಗಳಿಗೆ ಸಂಬಂಧಿಸಿದ್ದು ; ಜನರ ಅಜ್ಞಾನವನ್ನು ಅವಲಂಬಿಸಿದ್ದು. ನಾವು ಈ ಜನರಲ್ಲಿ ತಿಳಿವಳಿಕೆಯನ್ನುಂಟು ಮಾಡದೆ, ಅವರ ಸಾಮಾಜಿಕ ಆರ್ಥಿಕ ಮಟ್ಟಗಳನ್ನು ಸುಧಾರಿಸದೆ ಬಹಿಷ್ಕಾರದಂಥ ತೀವ್ರ ಕ್ರಮಗಳನ್ನು ಕೈಗೊಂಡರೆ ಉದ್ದೇಶಿತ ಫಲ ದೊರಕದೆ ಹೋಗಬಹುದು. ಬೆತ್ತಲೆ ಸೇವೆ ಜೀವನವಿಧಾನದ ಒಂದು ಅಂಶ. ಇದು ಹೇಗೆ ಸರಿಯಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡದೆ, ಇದನ್ನು ನೀವು ಮಾಡಕೂಡದು ಎಂದರೆ ಘರ್ಷಣೆಗೆ ನಾಂದಿಯಾಗುತ್ತದೆ. ಬೆತ್ತಲೆಸೇವೆಯಲ್ಲಿ ರತಿಯನ್ನು ಕಂಡವರಿಂದ, ಸಂದರ್ಭವನ್ನು ಉಪಯೋಗಿಸಿಕೊಂಡು ತಮ್ಮ ಕೋಡು ಬೆಳೆಸಿಕೊಳ್ಳಬೇಕೆಂಬ ಸುಧಾರಕರಿಂದ, ಸರ್ಕಾರದ ಕುರುಡು ಕ್ರಮಗಳಿಂದ-ಚಂದ್ರಗುತ್ತಿಯ ಸಮಸ್ಯೆ ಸಂಕೀರ್ಣಗೊಂಡಿದೆ. ವಾಸ್ತವವಾಗಿ ಸಂಬಂಧಿಸಿದ ಜನರಿಗೆ ಅಗತ್ಯವಾದ ತಿಳಿವಳಿಕೆ ನೀಡಿ ಸುಧಾರಣೆ ತರಲು ಹತ್ತು ವರ್ಷಗಳ ಯೋಜನೆಯೊಂದನ್ನು ಇಟ್ಟುಕೊಂಡು ಕ್ರಮಶಃ ಪ್ರಯತ್ನಿಸಿದ್ದರೆ ಈಗಿನ ಸ್ಥಿತಿ ಉದ್ಭವವಾಗುತ್ತಿರಲಿಲ್ಲ. ವಿದ್ಯೆ ಬೆಳೆದಂತೆ ಮೌಢ್ಯ ಇಳಿಮುಖವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಇನ್ನು ಮುಂದಾದರೂ ಸರ್ಕಾರ ಈ ಮಾರ್ಗವನ್ನು ಅನುಸರಿಸಬೇಕು.

ಜಾನಪದದ ಭಾಗವಾಗಿ ಹೋಗಿರುವ ಈ ಬಗೆಯ ಆಚರಣೆಗಳನ್ನು ಕುರಿತು ಜನತೆಯಲ್ಲಿ ತಿಳಿವಳಿಕೆ ಮೂಡಿಸುವ ಜವಾಬ್ದಾರಿ ಜನಪದ ಕಾರ್ಯಕರ್ತರ ಮೇಲೂ, ತಜ್ಞರ ಮೇಲೂ ಇದೆ. ಈ ದೇಶದಲ್ಲಿ ಜನಪದ ಸಂಬಂಧವಾದ ಕೆಲಸ ಮಾಡುವವರ ಮೇಲೆ ಜೀವನವನ್ನು ದಾಖಲಿಸುವ ಹಾಗೂ ತಿದ್ದುವ ಹೊಣೆಗಳು ಏಕಕಾಲದಲ್ಲಿ ಇರುತ್ತವೆ. ಜಾನಪದದ ಹೆಸರಿನಲ್ಲಿ ನಾವು ಮೌಢ್ಯವನ್ನು ಪೋಷಿಸಬಾರದು.

ನಮ್ಮ ದೇಶದಲ್ಲಿ ಈಗ ಶಿಕ್ಷಣ ನೌಕರಿಯ ಬೆನ್ನು ಹತ್ತಿದೆ; ಜ್ಞಾನದ ಅನ್ವೇಷಣೆ ಅಲ್ಲ. ಆದ್ದರಿಂದ ಜಾನಪದ ಪದವೀಧರರು “ನಮಗೇನು ಕೆಲಸ ಕೊಡುತ್ತೀರಿ?” ಎಂದು ಕೇಳುವ ಸ್ಥಿತಿ ಉದ್ಭವವಾಗಬಾರದು. ಜಾನಪದ ಎಂ. ಎ. ಮಾಡುವುದು; ಹೀಗೆ ಮಾಡಿದವರಿಗೆ ಯಾವ ಕೆಲಸವೂ ದೊರೆಯದಿದ್ದಾಗ, ಅಧ್ಯಾಪಕರ ಕೆಲಸವಾದರೂ ದೊರೆಯಲಿ ಎಂದು ಜಾನಪದವನ್ನು ಪದವಿ ತರಗತಿಯಲ್ಲಿ ಕಲಿಸುವುದು; ಅವರು ನಮಗೆ ಯಾವ ಕೆಲಸವೂ ಇಲ್ಲವಲ್ಲ ಎಂದು ಹತಾಶನಾಗುವುದು- ಇಂಥ ವ್ಯವಸ್ಥೆ ಬೇಡ. ಎಲ್ಲಿಯವರೆಗೆ ಶಿಕ್ಷಣ ಗೋಡೆ ಕಟ್ಟಿಕೊಂಡು ಇರುತ್ತದೋ ಅಲ್ಲಿಯವರೆಗೆ ಜಾನಪದಕ್ಕೆ ನಮ್ಮಲ್ಲಿ ಬೆಲೆ ಬರುವುದಿಲ್ಲವೆಂದೇ ನನ್ನ ಭಾವನೆ. ಸದ್ಯದ ಪರಿಸ್ಥಿತಿಯಲ್ಲಿ ಜಾನಪದ ಒಂದು ಸಹವಿಷಯವಾಗಿ ಬೆಳೆಯುವುದೇ ಅದಕ್ಕಿರುವ ಭವಿಷ್ಯ. ಸಾಹಿತ್ಯ, ಇತಿಹಾಸ, ತತ್ವಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರಗಳ ಜೊತೆ ಜಾನಪದ ಒಂದು ಅಗತ್ಯ ವಿಷಯವೆಂದು ಪರಿಗಣಿಸಲ್ಪಡಬೇಕು. ಇದರಿಂದ ಜಾನಪದವನ್ನು ಅಧ್ಯಯನ ಮಾಡುವವರಿಗೆ, ಅವಶ್ಯವಾದ ಇನ್ನೊಂದು ವಿಷಯದ ಪರಿಚಯವಾಗುತ್ತದೆ ಮಾತ್ರವಲ್ಲ, ತಮಗೆ ಜಾನಪದದಂಥ ವಿಷಯದ ಅಗತ್ಯವಿಲ್ಲ ಎಂದು ಭಾವಿಸುವ ಸಾಹಿತ್ಯ, ಇತಿಹಾಸಗಳಂಥ ವಿಷಯಗಳ ವಿದ್ಯಾರ್ಥಿಗಳಿಗೆ ಹೊಸ ದಿಗಂತಗಳನ್ನು ತೆರೆದಂತಾಗುತ್ತದೆ. ಜಾನಪದ ಶಿಕ್ಷಣ ಇನ್ನೂ ಕೆಲವು ವರ್ಷ ಹೀಗೆ ಕೊಡುಕೊಳ್ಳುವಿಕೆಗಳ ವಿಷಯವಾಗಿರಬೇಕು. ಜೊತೆವಿಷಯವಾಗಿ ಅಭಿವೃದ್ಧಿಗೊಳ್ಳಬೇಕು, ಇಲ್ಲದಿದ್ದರೆ ಅದು ಹತ್ತರ ಜೊತೆ ಹನ್ನೊಂದನೆಯದಾಗಿ ಹೋದಿತು.

ಜಾನಪದ ಒಂದು ಜೀವನವಿಧಾನವಾಗಿ, ಒಂದು ಅಧ್ಯಯನ ವಿಷಯವಾಗಿ ನಿರ್ದಿಷ್ಟವಾಗಿದೆ ; ಖಚಿತವಾಗಿದೆ. ಅದರ ದಾರಿ ಸ್ಪಷ್ಟವಾಗಿದೆ. ನಮ್ಮ ದೇಶದ ವಿಶೇಷವಾದ ಪರಿಸ್ಥಿತಿಯಲ್ಲಿ ಮಾತ್ರ ಅದು ಹಲವು ಕವಲುಗಳ ದಾರಿಯಲ್ಲಿ ನಿಂತಿದೆ. ಮುಂದಿನ ದಾರಿಯನ್ನು ಕಂಡು ಕ್ರಮಿಸಬೇಕಾಗಿದೆ. ಈ ದೃಷ್ಟಿಯಿಂದ ಕೆಲವು ಮಾತುಗಳನ್ನು ಆಡಿದ್ದೇನೆ. ಈ ಮಾತುಗಳು, ಜಾನಪದದ ಬಗೆಗೆ ಅಪಾರ ಉತ್ಸುಕರಾದ ಕೆಲವರಾದರೂ ನನ್ನ ಮಿತ್ರರಿಗೆ ಇಷ್ಟವಾಗದೆ ಹೋಗಬಹುದು. ಅಂಥವರಿಗೆ, ಉತ್ಸಾಹ ಅಗತ್ಯವಾದ ಗುಣವಾದರೂ ಅದೊಂದರಿಂದಲೇ ಸಾಧನೆ ಆಗದೆಂದು ತಿಳಿಸಬಯಸುತ್ತೇನೆ. ನಮ್ಮ ಗುರಿ ಯಾವಾಗಲೂ ಮೊದಲ ದರ್ಜೆಯದಾಗಿರಬೇಕು. ಸಾಮಾನ್ಯವಾದುದನ್ನು ಸೃಷ್ಟಿಸಿಕೊಂಡು ಪರಸ್ಪರ ಪ್ರಶಂಸೆಯಲ್ಲಿ ಮುಳುಗಿ ಹೋಗಬಾರದು. ನಮ್ಮ ಹೊರಗೂ ಜಗತ್ತಿದೆ ಎಂಬ ಎಚ್ಚರಿಕೆ ಇರಬೇಕು. ಇದು ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದ್ದು, ಆದರೆ ಅದೇ ಸಮಾಧಾನದ ಮಾತಾಗಬಾರದು.

* * *

ನಾನು ಅಕ್ಷರ ಕಲಿತ ಮೇಲೆ ಮೊದಲ ಸಲ ಓದಿದ ಕೆಲವು ಸಾಲುಗಳು ಇವು :

ಮಳೆರಾಯ ಹುಯ್ಯಲಿ
ಕೆರೆರಾಯ ತುಂಬಲಿ
ಹನ್ನೆರಡು ಕೋಡಿ ಹರಿಯಲಿ
ಸಣ್ಣಕ್ಕಿ ಬೈಲು ಬೆಳೆಯಲಿ
ನಮ್ಮೂರ ತೇರು ಎಳೆಯಲಿ

ವ್ಯಕ್ತಿಜೀವನ ಮತ್ತು ಸಮಷ್ಟಿಜೀವನ ಸುಖಕರವಾಗಿರುವಂತೆ, ಸುಂದರವಾಗಿರುವಂತೆ ನೆಮ್ಮದಿಯಿಂದ ತುಂಬಿರುವಂತೆ, ಸದಭಿರುಚಿಯಿಂದ ಕೂಡಿರುವಂತೆ ಆಶಿಸುವ ಜನಪದ ಕವಿತೆಯ ಈ ಸಾಲಗಳನ್ನು ಕಳೆದ ನಲವತ್ತೈದು ವರ್ಷದಿಂದಲೂ ನಾನು ಪರಿಭಾವಿಸಿದ್ದೇನೆ. ಇವುಗಳಲ್ಲಿ ಲೋಕದ ಎಲ್ಲ ಸದಾಶಯಗಳೂ ಕೆನೆಗಟ್ಟಿವೆ. ಈ ಸಾಲುಗಳು ಯಾವ ಉಪನಿಷತ್ತಿನ ಮಂತ್ರಕ್ಕೂ ಕಡಿಮೆಯಾದುವಲ್ಲ. ಅಜ್ಞಾತ ಕವಿಯ ಈ ಆಶಯಗುಚ್ಛ ನಮ್ಮ ಬದುಕಿನ ತೇರನ್ನೂ ನಿರಾತಂಕವಾಗಿ ನಡೆಸುತ್ತಿರಲಿ.