ಇಪ್ಪತ್ತನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ, ಧಾರವಾಡ
ಮಾರ್ಚ್, ೧೮-೧೯, ೧೯೯೩
ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ- ಡಾ. ಬಿ. ಎ. ವಿವೇಕ ರೈ*

 

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಒಂದು ಶ್ರೇಷ್ಠ ಪರಂಪರೆಯಾಗಿ ನಿರಂತರವಾಗಿ ನಡೆಸಿಕೊಂಡು ಬಂದಿರುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳಲ್ಲಿ ೨೦ನೆಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿ, ಕರ್ನಾಟಕದ ಹಿರಿಯ ಹತ್ತೊಂಬತ್ತು ಮಂದಿ ಜಾನಪದ ವಿದ್ವಾಂಸರ ಸಾಲಿನಲ್ಲಿ ನನ್ನನ್ನು ಕುಳ್ಳಿರಿಸಿ ಗೌರವಿಸಿದ ನಿಮ್ಮ ಜನಪದ ಅಭಿಮಾನಕ್ಕೆ ಮೊತ್ತಮೊದಲಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ‘ಎನಗಿಂತ ಕಿರಿಯರಿಲ್ಲ, ಜನಪದರಿಗಿಂತ ಹಿರಿಯರಿಲ್ಲ’ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ವಿನಯಪೂರ್ವಕವಾಗಿ ಹೇಳಲು ಇಷ್ಟಪಡುತ್ತೇನೆ. ಡಾ. ಶಿವರಾಮ ಕಾರಂತರಿಂದ ತೊಡಗಿ ಡಾ. ಎಂ. ಎಸ್. ಲಠ್ಠೆಯವರ ವರೆಗೆ ೧೯ ಮಂದಿ ಜಾನಪದದ ಗೌರವವನ್ನು ಹೆಚ್ಚಿಸಿದ್ದಾರೆ. ಅಂತಹ ಜಾನಪದ ಪ್ರಕ್ರಿಯೆ ಮುಂದುವರಿಸುವ ಹೊಣೆಗಾರಿಕೆಯನ್ನು ಜಾನಪದ  ಅಧ್ಯಯನದ ಸಂಕ್ರಮಣಾವಸ್ಥೆಯ ಈ ಸಂದರ್ಭದಲ್ಲಿ ವಹಿಸಿಕೊಳ್ಳುವುದು ನನಗೆ ಅಭಿಮಾನದ ಮತ್ತು ಸಂತೋಷದ ವಿಷಯ.

೧೯೭೩ ರಿಂದ ೧೯೯೩ರ ವರೆಗೆ ೨೦ವರ್ಷಗಳ ಅವಧಿಯಲ್ಲಿ ಈ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳ ಹರಹನ್ನು ಪರಿಶೀಲಿಸಿದಾಗ ಕರ್ನಾಟಕ ಜಾನಪದ ಅಧ್ಯಯನದ ಬಹು ಮಹತ್ವದ ಮಜಲುಗಳು ಇಲ್ಲಿ ಕಾಣಸಿಗುತ್ತವೆ. ಯಾವುದೇ ಒಂದು ಕಾಲಘಟ್ಟವನ್ನು ಸಂಪೂರ್ಣವಾಗಿ ಒಂದೇ ತಾತ್ತ್ವಿಕತೆಯ ಒಂದೇ ಅಧ್ಯಯನದ ವಿಧಾನದ ಕಾಲಘಟ್ಟವೆಂದು ಕರೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಈ ೨೦ ವರ್ಷಗಳ ಅವಧಿಯು ಕನ್ನಡ ಜಾನಪದ ಅಧ್ಯಯನದ ಬಹುರೂಪಗಳನ್ನು ಬಹುವಿಧಾನಗಳನ್ನು ಬಹುತಾತ್ತ್ವಿಕತೆಗಳನ್ನು ಪ್ರಕಟಿಸಿದೆ. ಹಿಂದೆ ಆಗಿ ಹೋಗಿರುವ ಅಧ್ಯಯನಗಳ ಮಹತ್ವಗಳನ್ನು ಒಪ್ಪಿಕೊಳ್ಳುತ್ತಲೇ ಮುಂದಿನ ಅಧ್ಯಯನಗಳು ಸಾಗಬೇಕಾದ ದಾರಿಗಳ ಕುರಿತು ಯೋಚಿಸಲು ಇದು ಸಕಾಲವೆಂದು ಭಾವಿಸುತ್ತೇನೆ.

ಜಾಗತಿಕವಾಗಿಯೂ ಜಾನಪದ ಅಧ್ಯಯನದ ಉದ್ದೇಶ ಮತ್ತು ವಿಧಾನಗಳು ಬದಲಾಗುತ್ತಿವೆ. ಜಾನಪದದ ಪರಿಕಲ್ಪನೆ ಬದಲಾವಣೆಗೊಳ್ಳುತ್ತಿದೆ.  ಇದು ಸಹಜ ಮತ್ತು ಅನಿವಾರ್ಯ ಕೂಡಾ. ಪ್ರತಿಯೊಂದು ಕಾಲಘಟ್ಟವೂ ಕೇಂದ್ರೀಯ ಪರಿಕಲ್ಪನೆಗಳಿಗೆ ತನ್ನದೇ ಆದ ಅರ್ಥಗಳನ್ನು ಕೊಡುತ್ತಿರುತ್ತದೆ ಮತ್ತು ವಿಶ್ಲೇಷಣೆಗೆ ಹೊಸ ಸಾಧನೆಗಳನ್ನು ರೂಪಿಸುತ್ತದೆ. ಜಾನಪದ ಅಧ್ಯಯನದಲ್ಲಿ ಆಗುತ್ತಿರುವ ಒಂದು ಮುಖ್ಯ ಮೂಲಭೂತ ಬದಲಾವಣೆ ಎಂದರೆ ಜಾನಪದ ಉತ್ಪಾದಕರು, ಬಳಕೆದಾರರು ಮತ್ತು ನಿರ್ವಾಹಕರು ಆಗಿರುವ ಜನಪದರನ್ನು ಕುರಿತು ಧೋರಣೆ. ಸಾಂಪ್ರದಾಯಿಕವಾಗಿ ಜಾನಪದ ಅಧ್ಯಯನವು ಜಾನಪದದ ಉತ್ಪನ್ನಗಳಿಗೆ ಅಂದರೆ ಸಾಹಿತ್ಯಕ ಮತ್ತು ಸಾಹಿತ್ಯೇತರ ನಿರ್ಮಾಣಗಳಿಗೆ ವಿಶೇಷ ಮಹತ್ವವನ್ನು ಕೊಟ್ಟಿತ್ತು. ಜನಪದ ವ್ಯಕ್ತಿಗಳಿಂದ ಹೆಚ್ಚು ಪ್ರಮಾಣದಲ್ಲಿ ಜಾನಪದವನ್ನು ಸಂಗ್ರಹ ಮಾಡುವುದು ಮತ್ತು ಪ್ರಕಟಿಸುವುದು ಜಾನಪದ ಅಧ್ಯಯನದ ಮುಖ್ಯ ಗುರಿ ಎಂದು ಭಾವಿಸಲಾಗಿತ್ತು. ಜನಪದರೆಂದರೆ ಗ್ರಾಮೀಣರು, ಅನಕ್ಷರಸ್ಥರು, ವಿಚಿತ್ರ ರೀತಿಯ ಜೀವಿಗಳು ಎನ್ನುವ ರೊಮ್ಯಾಂಟಿಕ್ ಕಲ್ಪನೆ ಇಂತಹ ಅಧ್ಯಯನಗಳಲ್ಲಿ ಪ್ರಧಾನವಾಗಿತ್ತು. ಈಗ ಈ ದೃಷ್ಟಿಕೋನವು ಬದಲಾಗಿ ಸಾಮಾಜಿಕ ಸ್ಥಾನಮಾನ, ಕಸುಬು, ಜನಾಂಗಿಕ ಹಿನ್ನೆಲೆ, ಧರ್ಮವಾಸದ ನೆಲೆ ಇವನ್ನು ಆಧರಿಸಿದ ಸಾಮಾಜಿಕ ಜನನವರ್ಗಗಳನ್ನು ಜನಪದ ಸಮುದಾಯಗಳು ಎಂದು ತಿಳಿದು ಅಂತಹ ಜನರ ಬದುಕನ್ನು ಅವರ ಜಾನಪದ ಸಾಮಗ್ರಿಗಳ ಮೂಲಕ  ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಮಾನವಿಕ ನಿಲುವು ಮುಖ್ಯವಾಗಿದೆ. ಹೀಗಾಗಿ ಇಡೀ ಒಂದು ದೇಶವನ್ನು ಒಂದು ಜಾನಪದದ ಘಟಕ ಎಂದು ಭಾವಿಸದೆ ಸಾಮಾಜಿಕ ಸಂಬಂಧಗಳನ್ನು ಸ್ಪಷ್ಟವಾಗಿ ಹೊಂದಿರುವ ಘಟಕಗಳನ್ನು ಮಾತ್ರ ಜನಪದ ಸಮುದಾಯಗಳೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ಜಾನಪದ ಎನ್ನುವುದು ಒಂದು ಜನ ಸಮುದಾಯಕ್ಕೆ ಸಂಬಂಧಪಟ್ಟಂತೆ ಒಂದು ರೊಮ್ಯಾಂಟಿಕ್ ಕಲ್ಪನೆಯಲ್ಲ. ಅದು ಅವರ ನೋವು-ನಲಿವುಗಳ ಸಹಿತದ ನಿರ್ದಿಷ್ಟ ಜೀವನವಿಧಾನ. ಇಂತಹ ಸಮುದಾಯಗಳ ಮೌಲ್ಯಗಳು, ಪದ್ಧತಿಗಳು, ಸಂಕೇತಗಳು ಇವೆಲ್ಲವೂ ಅವುಗಳ ಪರಂಪರೆ ಎನ್ನಿಸಿಕೊಳ್ಳುತ್ತವೆ ಹೀಗಾಗಿ ಜಾನಪದ ಎನ್ನುವುದು ಒಂದು ಸಮುದಾಯವನ್ನು ಒಂದುಗೂಡಿಸುವ ಅಂಶ. ಒಂದು ಸಮುದಾಯದ ಲೋಕದೃಷ್ಟಿ (world view) ಯನ್ನು ಮತ್ತು ಅನನ್ಯತೆ (Identity)ಯನ್ನು ತನ್ನಲ್ಲಿ ಅಳವಡಿಸಿಕೊಂಡಿರುವ ಅಂಶ. ಹೀಗಾಗಿ ಒಂದು ಗುಂಪಿಗೆ ಜಾನಪದ ಉಂಟೇ ಇಲ್ಲವೇ ಎಂದು ಕೇಳುವ ಅವಶ್ಯಕತೆ ಇಂದು ಇಲ್ಲ. ಅದರ ಬದಲು ನಾವು ಶೋಧಿಸಬೇಕಾಗಿರುವುದು ಆ ಗುಂಪಿನ ಜಾನಪದದ ಸ್ವರೂಪ ಯಾವುದು ಅನ್ನುವುದನ್ನು. ಪರಂಪರಾಗತವಾಗಿ ಜಾನಪದ ಅಧ್ಯಯನ ಅನ್ನುವುದು ಪ್ರಕಾರ     (Genre)ಗಳನ್ನು ಅವಲಂಬಿಸಿತ್ತು. ಈಗ ಅದು ಕ್ರಿಯೆಗಳನ್ನು ಆಧರಿಸಿ ಸಂಸ್ಕೃತಿಯನ್ನು ಶೋಧಿಸಲು ತೊಡಗಿದೆ.

ಪರಂಪರಾಗತ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಅಧ್ಯಯನ ಮಾಡುವುದು ಜಾನಪದ ಅಧ್ಯಯನದಲ್ಲಿ ಬಹಳ ಮುಖ್ಯವಾದುದು. ಇಂತಹ ವ್ಯವಸ್ಥೆಯನ್ನು ನಾವು ಕಾಣಬೇಕಾಗಿರುವುದು ಜಾನಪದದಲ್ಲಿ ಅಲ್ಲ. ಬದಲಾಗಿ ಜಾನಪದವನ್ನು ಉತ್ಪಾದನೆ ಮಾಡುವ ಬಳಸುವ ಮತ್ತು ಕಾಪಾಡುವ ಜನರಲ್ಲಿ. ಹೀಗಾಗಿಯೇ ಇಲ್ಲಿ ಜಾನಪದವನ್ನು ಜನರಿಂದ ಪ್ರತ್ಯೇಕಿಸಿ ಭಾಷಿಕ ಅಥವಾ ಸಂಜ್ಞಾಪಠ್ಯಗಳ ರೂಪದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕ್ಷೇತ್ರಕಾರ್ಯವು ಇಂದು ಜಾನಪದದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಿಂದಿನ ಜಾನಪದ ಅಧ್ಯಯನಗಳಲ್ಲೂ ಕ್ಷೇತ್ರಕಾರ್ಯಕ್ಕೆ ಮಹತ್ವವಿತ್ತು. ಆದರೆ ಅಲ್ಲಿ ಕ್ಷೇತ್ರಕಾರ್ಯದ ಉದ್ದೇಶ ಜಾನಪದ ವಸ್ತುಸಂಗ್ರಹಾಲಯಗಳು (Museums) ಮತ್ತು ದೃಶ್ಯ-ಶ್ರವ್ಯ ದಾಖಲಾತಿ ಕೇಂದ್ರಗಳು  (Archives)  ಈ ಉದ್ದೇಶದ ಫಲಗಳು. ಆದರೆ ಇಂದು ಕ್ಷೇತ್ರಕಾರ್ಯ ಮುಖ್ಯವಾಗಿರುವುದು ಜನರ ನಡವಳಿಕೆಗಳನ್ನು, ಉತ್ಪಾದನೆಗಳನ್ನು ಜಾನಪದ ಉತ್ಪನ್ನಗಳು ಹೇಗೆ ಪ್ರಕಟಿಸುತ್ತವೆ ಎ‌ನ್ನುವುದರ ಸೂಕ್ಷ್ಮಾವಲೋಕನಕ್ಕಾಗಿ. ಹೀಗಾಗಿಯೇ ಕ್ಷೇತ್ರಕಾರ್ಯ ಎ‌ನ್ನುವುದು ಕೇವಲ ಸಂಗ್ರಹಣೆ ಅಲ್ಲ, ಅದು ಸಂಶೋಧನೆ ಎನ್ನುವ ಅರ್ಥವನ್ನು ಪಡೆದಿದೆ. ಇಲ್ಲಿ ಊಹೆಗಳಿಗೆ ಮಹತ್ತ್ವವಿಲ್ಲ. ಪ್ರತ್ಯಕ್ಷ ಪ್ರಮಾಣಗಳಿಗೆ ಮತ್ತು ಕ್ಷೇತ್ರಕಾರ್ಯದಲ್ಲಿ ಪಡೆದ ಅನುಭವಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಇಂತಹ ಸಂದರ್ಭದಲ್ಲಿ ಜಾನಪದ ವಿದ್ವಾಂಸರು ಎರಡು ಜಗತ್ತುಗಳ ನಡುವೆ ಸಂವಾದವನ್ನು ಏರ್ಪಡಿಸುವ ಗುರುತರವಾದ ಹೊಣೆಗಳನ್ನು ನಿರ್ವಹಿಸಬೇಕಾಗುತ್ತದೆ. ಒಂದು ವೈಜ್ಞಾನಿಕ ಜಗತ್ತು, ಇನ್ನೊಂದು ಜಾನಪದ ಜಗತ್ತು. ಜಾನಪದ ವಿದ್ವಾಂಸರಿಗೆ ಈ ಎರಡೂ ಕ್ಷೇತ್ರಗಳಲ್ಲಿಯೂ ನಿರ್ವಹಿಸಬೇಕಾದ ಪಾತ್ರವಿರುತ್ತದೆ. ಒಂದು ಕಡೆಯಲ್ಲಿ ಅವರು ಜನಪದರೊಂದಿಗೆ ವೈಯಕ್ತಿಕ ನೆಲೆಯಲ್ಲಿ ಸಂಬಂಧಗಳನ್ನು ಏರ್ಪಡಿಸಿಕೊಂಡು ಅವರ ಬದುಕಿನ ಜೊತೆಗೆ ಆತ್ಮೀಯರಾಗಿರಬೇಕಾಗುತ್ತದೆ. ಇನ್ನೊಂದು ಕಡೆಯಲ್ಲಿ ಇಂತಹ ಜನಪದರಿಂದ ತಿಳುವಳಿಕೆಯನ್ನು ಪಡೆಯುವ ಕೆಲಸವನ್ನು ಅವರು ಮಾಡಬೇಕಾಗುತ್ತದೆ. ಮತ್ತೊಂದು ಕಡೆಯಲ್ಲಿ ಜಾನಪದ ವಿಜ್ಞಾನಕ್ಷೇತ್ರ ಒದಗಿಸುವ ಭೌತಿಕ ಮತ್ತು ಅಭೌತಿಕ ಸಲಕರಣೆಗಳನ್ನು ಬಳಸಿಕೊಂಡು ಆ ಶಿಸ್ತಿನ ಪರಿಧಿಗಳನ್ನು ವಿಸ್ತರಿಸಬೇಕಾಗುತ್ತದೆ. ಹೀಗೆ ಜನಪದ ಜಗತ್ತು ಮತ್ತು ವಿಜ್ಞಾನ ಜಗತ್ತುಗಳು ಒಂದು ಇನ್ನೊಂದರಿಂದ ತಮ್ಮ ವ್ಯಾಪ್ತಿಗಳನ್ನು ಹಿಗ್ಗಿಸುವ ಜಗತ್ತು ಮತ್ತು ಶ್ರೀಮಂತಗೊಳಿಸುವ ಪ್ರಕ್ರಿಯೆಯಲ್ಲಿ ಜಾನಪದ ವಿದ್ವಾಂಸರು ಕೊಂಡಿಯಂತೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಅವರಿಗೆ ಈ ಎರಡೂ ಕ್ಷೇತ್ರಗಳನ್ನು ಒಂದುಗೂಡಿಸುವ ಅನನ್ಯ ಸಾಮರ್ಥ್ಯ ಇರಬೇಕಾಗುತ್ತದೆ. ಒಂದು ಸಂಸ್ಕೃತಿಯ ಪ್ರಜ್ಞಾಪೂರ್ವಕ ಅಭಿವ್ಯಕ್ತಿಗಳ ವಿಶ್ಲೇಷಣೆಯನ್ನು ಮತ್ತು ಆ ಸಂಸ್ಕೃತಿಯ ಜನರ ವಿವರಣೆಗಳನ್ನು ಒಟ್ಟು ಮಾಡುವುದು ಇಂದಿನ ಜಾನಪದ ಸಂಶೋಧನೆಯ ಒಂದು ಮುಖ್ಯ ಸವಾಲು. ಸಮಕಾಲೀನ ಜಾನಪದ ವಿಜ್ಞಾನವು ಜನಪದರನ್ನು ಸಹಸಂಶೋಧಕರನ್ನಾಗಿ, ಸಂಶೋಧನಾ ಮಾಹಿತಿಯ ನಿರ್ಮಾಪಕರಾಗಿ ಸಮಾನಗೌರವದಿಂದ ಕಾಣಲು ಪ್ರಯತ್ನಿಸುತ್ತದೆ.

ಹೀಗೆ ಜಾನಪದ ಅಧ್ಯಯನವು ಮನುಷ್ಯರನ್ನು ಮತ್ತು ಕ್ರಿಯಾತ್ಮಕ ಸಮುದಾಯಗಳನ್ನು ಅರ್ಥಮಾಡಿಕೊಳ್ಳುವ ಒಂದು ‘ಮಾನವಿಕ ವಿಜ್ಞಾನವಾಗಿ’ ರೂಪುಗೊಳ್ಳುತ್ತಿದೆ. ಹೀಗಾಗಿಯೇ ಜಾನಪದವನ್ನು ಒಳಗೊಂಡ ಯಾವುದನ್ನೇ ಅಧ್ಯಯನ ಮಾಡುವಾಗಲೂ ಅದರ ಪರಿಸರ, ಸಂದರ್ಭ ಮತ್ತು ಅರ್ಥ ಇವು ಬಹು ಮುಖ್ಯವಾಗುತ್ತವೆ. ಒಂದು ಸಾಂಸ್ಕೃತಿಕ ಸುಮುದಾಯದ ಪರಂಪರೆಯ ನೆಲೆಯುಳ್ಳ ಸೃಷ್ಟಿಗಳು ಆ ಸಮುದಾಯದ ನಿರೀಕ್ಷೆಗಳ ಸುತ್ತ ನಿರ್ಮಾಣಗೊಂಡಿರುತ್ತವೆ. ಹೀಗೆ ಸಮುದಾಯದ ನಿರೀಕ್ಷೆಗಳನ್ನು ಜಾನಪದ ಕೇಂದ್ರವಾಗಿಟ್ಟುಕೊಂಡು ಅಧ್ಯಯನ ಮಾಡಬೇಕಾಗಿರುವುದು ಇಂದಿನ ಜಾನಪದ ಅಧ್ಯಯನದ ಮುಖ್ಯ ಸವಾಲು. ಒಂದು ಜೀವಂತ ಸಮುದಾಯದ ದೃಷ್ಟಿಕೋನದ ಮೂಲಕ, ಕ್ರಿಯಾತ್ಮಕತೆಯ ಮೂಲಕ ಆ ಸಮುದಾಯದ ಅನನ್ಯತೆಯನ್ನು ಅದರ ಮೌಲ್ಯಗಳನ್ನು ಗುರುತಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಜಾನಪದ ಸಂಶೋಧನೆ ಇಂದು ಗಮನಿಸಬೇಕಾದ ಮುಖ್ಯ ನೆಲೆ.

ಪ್ರತಿಯೊಂದು ದೇಶವು, ಪ್ರತಿಯೊಂದು ಸಂಸ್ಕೃತಿಯು, ಪ್ರತಿಯೊಂದು ಪೀಳಿಗೆಯೂ ತನ್ನ ಅಗತ್ಯಗಳಿಗೆ ಅನುಗುಣವಾದ ಆಹಾರ ವ್ಯವಸ್ಥೆಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಮನುಷ್ಯರ ಸಹಜ ಬಯಕೆಗಳಲ್ಲಿ ಹಸಿವು ಮೂಲಭೂತವಾದುದು. ಹಸಿವು ಎಂಬ ಬಯಕೆಯನ್ನು ತೃಪ್ತಿಪಡಿಸಲು ಮನುಷ್ಯರು ಬಳಸುವ ಯಾವುದೇ ಸಾಮಗ್ರಿ ‘ಆಹಾರ’ ಎನಿಸುತ್ತದೆ. ಮೂಲತಃ ಅಪೇಕ್ಷೆ ಮತ್ತು ಸಂತೃಪ್ತಿ ಇಂತಹ ಸಂಬಂಧ ಹಸಿವು ಮತ್ತು ಆಹಾರದ್ದು. ಹೀಗೆ ಒಂದು ಮೂಲಭೂತ ಪ್ರವೃತ್ತಿಯನ್ನು ತೀರಿಸಿಕೊಳ್ಳಲು ಮನುಷ್ಯರು ಶೋಧಿಸಿದ ಆಹಾರ ವಸ್ತುಗಳು ಒಂದು ವ್ಯವಸ್ಥೆಯೂ ರೂಪುಗೊಂಡುದು ಸಾಂಸ್ಕೃತಿಕ ಇತಿಹಾಸದ ಮುಖ್ಯ ಹೆಜ್ಜೆ. ಹೀಗಾಗಿ ಜನಪದ ಸಂಸ್ಕೃತಿಯ ಕ್ರಿಯಾತ್ಮಕ ಭಾಗವಾಗಿ ಆಹಾರ ವ್ಯವಸ್ಥೆ ಕಾಣಿಸಿಕೊಳ್ಳುತ್ತದೆ. ಜನಪದ ಸಂಸ್ಕೃತಿಯಲ್ಲಿ ಆಹಾರ ವ್ಯವಸ್ಥೆ ಒಂದು ಮುಖ್ಯವಾದ ಭಾಗ. ಆಹಾರ ಮತ್ತು ಅಡುಗೆಗೆ ಸಂಬಂಧಿಸಿದ ಧೋರಣೆಗಳು ನಿಷಿದ್ಧತೆಗಳು, ಪದ್ಧತಿಗಳು, ಅಡುಗೆ ಮತ್ತು ಆಹಾರ ಸಂಬಂಧಿಯಾದ ಎಲ್ಲಾ ರೂಪಗಳು ಆಹಾರ ಸಂಸ್ಕೃತಿಯ ವ್ಯಾಪ್ತಿಯಲ್ಲಿ ಬರುತ್ತವೆ. ಹೀಗೆ ಭೌತಿಕ ಮತ್ತು ಜೈವಿಕ ಅವಶ್ಯಕತೆಯ ಈಡೇರಿಕೆಗಾಗಿ ರೂಪುತಾಳಿದ ‘ಆಹಾರ’ಎನ್ನುವುದು ಜನಪದ ಸಂಸ್ಕೃತಿಯ ಒಂದು ಮುಖ್ಯ ಭಾಗವಾಗಿ ರೂಪುಗೊಂಡ ಇತಿಹಾಸ ಬಹಳ ವೈವಿಧ್ಯಮಯವಾದುದು ಮತ್ತು ಮಹತ್ತ್ವಪೂರ್ಣವಾದುದು. ಆಹಾರವು ಕೇವಲ ಹೊಟ್ಟೆ ತುಂಬಿಸುವ ಸಾಮಗ್ರಿಯಷ್ಟೇ ಆಗದೆ ಬೇರೆ ಬೇರೆ ಸಂದರ್ಭಗಳಲ್ಲಿ ಅವಕಾಶಗಳನ್ನು ಮತ್ತು ಕೊರತೆಗಳನ್ನು ಅವಲಂಬಿಸಿಕೊಂಡು ಮನುಷ್ಯರು ರೂಪಿಸಿಕೊಂಡ ಸಾಂಸ್ಕೃತಿಕ ಬದುಕಾಗಿ ರೂಪು ತಾಳಿದೆ.

ಆಹಾರ ‌ವ್ಯವಸ್ಥೆಗೂ ಜನರ ಆರ್ಥಿಕ ಮತ್ತು ಸಾಮಾಜಿಕ ನೇರವಾದ ಸಂಬಂಧವಿದೆ. ಜನರ ಆರ್ಥಿಕ ಶಕ್ತಿ ನಿರ್ದಿಷ್ಟ ರೀತಿಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಕಾರಣವಾಗುತ್ತದೆ. ಮನುಷ್ಯರು ಬದುಕುವ ಪರಿಸರಗಳು ಕೂಡಾ ಆಹಾರ ವ್ಯವಸ್ಥೆಯ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿಸರ್ಗದ ಆವರಣವು ಅಂತಹ ಪರಿಸರದಲ್ಲಿ ದೊರೆಯುವ ಉತ್ಪನ್ನಗಳನ್ನು ಆಹಾರವನ್ನಾಗಿ ಬಳಸಲು ಕಾರಣವಾಗಿವೆ. ಹೀಗಾಗಿ ಆಹಾರ ‌ವ್ಯವಸ್ಥೆಯಲ್ಲಿಯೇ ರೂಢಿಯ ಆಹಾರ ಅಥವಾ ದೈನಂದಿನ ಆಹಾರ ಒಂದು ಮುಖ್ಯವಾದ ಘಟಕ. ಇದನ್ನೇ ‘ಮುಖ್ಯ ಆಹಾರ’ ಎಂದು ಕರೆಯಬಹುದು. ಕರ್ನಾಟಕ ಸಂಸ್ಕೃತಿಯಲ್ಲಿ ಕೆಲವರಿಗೆ ಅಕ್ಕಿ , ಇನ್ನೂ ಕೆಲವರಿಗೆ ಜೋಳ, ಕೆಲವರಿಗೆ ರಾಗಿ ಅಥವಾ ಕೆಲವೊಮ್ಮೆ ಗೋಧಿ – ಇವು ಮುಖ್ಯ ಆಹಾರಗಳಾಗಿವೆ. ಅಕ್ಕಿ, ಜೋಳ, ರಾಗಿಯಂತಹ ಆಹಾರ ಬೆಳೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಹೆಚ್ಚು ಉತ್ಪಾದನೆಗೊಳ್ಳುವುದರಿಂದ ಆಯಾಯ ಪ್ರದೇಶಗಳ ಮುಖ್ಯ ಆಹಾರಗಳಾಗಿವೆ. ಕರಾವಳಿಯಲ್ಲಿ ಅಕ್ಕಿ, ಉತ್ತರ ಕರ್ನಾಟಕದಲ್ಲಿ ಜೋಳ, ದಕ್ಷಿಣ ಕರ್ನಾಟಕದಲ್ಲಿ ರಾಗಿ – ಇವು ಈ ರೀತಿ ಮುಖ್ಯ ಆಹಾರವಾಗಿ ರೂಪುಗೊಂಡವು.  ಇಂತಹ ಮುಖ್ಯ ಆಹಾರವನ್ನೇ ತಮ್ಮ ಬದುಕಿನ ಜೀವಧಾತು ಎನ್ನುವ  ದೃಷ್ಟಿಯಿಂದ ಜನಪದರು ಇವುಗಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ಆರೋಪಿಸುತ್ತಾ ಬಂದಿದ್ದಾರೆ. ಇವೇ ‘ದೇವರು ಎನ್ನುವ ಅರ್ಥ ವ್ಯಾಪ್ತಿಯನ್ನು ಪಡೆದಿವೆ. ಅನ್ನವನ್ನು ದೇವರೆಂದು ಪವಿತ್ರಗೊಳಿಸುವಾಗಲೂ ಅಂತಹ ಪರಿಕಲ್ಪನೆ ಹಿಂದೆ ಮುಖ್ಯವಾಗಿದ್ದ ಭಾವನೆಗಳೆಂದರೆ ಅದು ನಮ್ಮ ಜೀವದ ಉಳಿಯುವಿಕೆಗಾಗಿ ತೀರಾ ಅವಶ್ಯ ಎನ್ನುವುದು. ಇದೇ ಅರ್ಥವು ವ್ಯಾಪಕಗೊಂಡು ‘ಅನ್ನದ ಋಣ’ ಎನ್ನುವ ಪರಿಭಾಷೆಯನ್ನು ಸೃಷ್ಟಿಸಿತು. ‘ಉಂಡ ಮನೆಗೆ ಎರಡು ಬಗೆಯಬಾರದು’ ಎನ್ನುವ ಕೃತಜ್ಞತೆಯ ಕೀರ್ತಿಯನ್ನು ವರ್ಣಿಸಿತು. ಉತ್ತರ ಕರ್ನಾಟಕದ ಜೋಳದ ಸಂಸ್ಕೃತಿಯಿಂದ ಬಂದ ಪಂಪ, ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ‘ಜೋಳದ ವಾಳಿ’ ಎಂಬ ಪರಿಭಾಷೆಯನ್ನು ಸೃಷ್ಟಿಸಿ ಅದಕ್ಕೆ ಒಂದು ಸಾಂಸ್ಕೃತಿಕ ಅರ್ಥದ ವ್ಯಾಪಕತೆಯನ್ನು ತಂದುಕೊಟ್ಟ ಕೃತಜ್ಞತೆ ಮತ್ತು ಇನ್ನೊಬ್ಬರಿಂದ ಪಡೆದ ಆಹಾರ ಇವು ಸಮೀಕರಣಗೊಂಡು ಒಂದು ಮೌಲ್ಯದ ಅರ್ಥವನ್ನು ಪಡೆಯಿತು.

ಇಂತಹ ಪ್ರಾದೇಶಿಕ ಆಹಾರದ ವಿಶಿಷ್ಟತೆಗಳನ್ನು ಕರ್ನಾಟಕದ ಸಂಸ್ಕೃತಿಯಲ್ಲಿ ಗುರುತಿಸುವಾಗಲೇ ಇವು ಕೇವಲ ಪ್ರಾದೇಶಿಕ ರೂಪದಲ್ಲಷ್ಟೇ ಉಳಿಯದೆ, ಇವುಗಳ ಪರಸ್ಪರ ಕೊಳುಕೊಡೆ ನಡೆದಿರುವ ಪ್ರಕ್ರಿಯೆಯನ್ನು ಗಮನಿಸಬೇಕಾಗುತ್ತದೆ. ಒಂದು ಪ್ರದೇಶದ ಮುಖ್ಯ ಆಹಾರವು ಇನ್ನೊಂದು ಪ್ರದೇಶದ  ಸಂಸ್ಕೃತಿಯಲ್ಲಿ ಅಪೂರ್ವ ಆಹಾರವಾಗಿ ಸೇರ್ಪಡೆಗೊಳ್ಳುವುದು ಆಹಾರ ಸಂಪರ್ಕದ ಅಳವಡಿಕೆಯ ಒಂದು ಮುಖ್ಯ ವಿಧ. ಅಕ್ಕಿಯನ್ನು ಮುಖ್ಯ ಆಹಾರವಾಗಿ ಸೇವಿಸುವ ಕರಾವಳಿಯ ಜನರು ಗೋಧಿಯಿಂದ ಸಿದ್ಧಪಡಿಸಿದ ಆಹಾರವಸ್ತುಗಳನ್ನು ಅಪೂರ್ವವಾಗಿ ತಮ್ಮ ಆಹಾರ ಸಂಸ್ಕೃತಿಯಲ್ಲಿ ಸೇರಿಸಿಕೊಂಡರು. ಇಂತಹ ಆಗಂತುಕ ಅಪೂರ್ವ ಆಹಾರ ವಸ್ತುಗಳು ತಮ್ಮ ಪರಕೀಯ ಗುಣಗಳಿಂದಾಗಿ ಕೆಲವೊಮ್ಮೆ ಪಾವಿತ್ಯ್ರವನ್ನು ಇನ್ನು ಕೆಲವೊಮ್ಮೆ ನಿಷಿದ್ಧತೆಯನ್ನು ಪಡೆದುಕೊಂಡವು. ಅಕ್ಕಿಯನ್ನು ಪ್ರಧಾನ ಆಹಾರವಾಗಿ ಸೇವಿಸುವ ಕರಾವಳಿಯ ಜನರು ತಮ್ಮ ದೈನಂದಿನ ಲೌಕಿಕ ಬದುಕಿನಲ್ಲಿ ಅದನ್ನು ಬಹಳ ಮಹತ್ವದ್ದೆಂದು ಭಾವಿಸಿದರೆ ಅದೇ ಅವರ ಪವಿತ್ರ ಅಥವಾ ಅಲೌಕಿಕ ದಿನಗಳಲ್ಲಿ ನಿಷಿದ್ಧ ಆಹಾರವಾಗುತ್ತದೆ. ಅಂತಹ ದಿನಗಳಲ್ಲಿ ಗೋಧಿಯ ಆಹಾರ ಅವರ ಮುಖ್ಯ ಆಹಾರವಾಗುತ್ತದೆ. ಏಕೆಂದರೆ ಗೋಧಿ ಅವರ ಸಂಸ್ಕೃತಿಗೆ ಪರಕೀಯವಾದುದು, ಹೊರಗಿನಿಂದ ಬಂದುದು ಎನ್ನುವ ಕಾರಣಕ್ಕೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕುಚ್ಚಲು ಅಕ್ಕಿಯನ್ನು ದೈನಂದಿನ ಆಹಾರಕ್ಕೆ ಬಳಸುತ್ತಾರೆ. ಆದರೆ ತಮ್ಮ ಹಬ್ಬದ ದಿನಗಳಲ್ಲಿ ಅಥವಾ ಜಾತ್ರಾ ಪವಿತ್ರ ದಿನಗಳಲ್ಲಿ ಅವರು ಬೆಳ್ತಿಗೆ ಅಕ್ಕಿಯ ಅನ್ನವನ್ನು ಮಾತ್ರ ಬಳಸುತ್ತಾರೆ. ಹೀಗೆ ಲೌಕಿಕ ಬದುಕಿನ ಕುಚ್ಚಲು ಅಕ್ಕಿ ಅಲೌಕಿಕ ದಿನಗಳಲ್ಲಿ ನಿಷೇಧಿತವಾಗುತ್ತದೆ. ಹೀಗಾಗಿ ಬೆಳ್ತಿಗೆ ಅಕ್ಕಿಗೆ ಅಲೌಕಿಕತ್ವ ಆರೋಪಿತವಾಗುತ್ತದೆ. ಈ ಬೆಳ್ತಿಗೆ ಅಕ್ಕಿಯನ್ನು ಧಾರ್ಮಿಕ, ಸಾಮಾಜಿಕ ಆಚರಣೆಗಳ ಸಂದರ್ಭಗಳಲ್ಲಿ ವಿಶಿಷ್ಟ ಆಹಾರವಾಗಿ ಬಳಸುತ್ತಾರೆ. ಆಹಾರವನ್ನು ಈ ರೀತಿಯಾಗಿ ಲೌಕಿಕ ಮತ್ತು ಅಲೌಕಿಕ ಎಂದು ವರ್ಗೀಕರಣ ಮಾಡುವಲ್ಲಿ ಒಂದು ಪ್ರದೇಶದ ಜನರ ಸಾಂಸ್ಕೃತಿಕ ಗ್ರಹಿಕೆಗಳೇ ಮುಖ್ಯವಾಗಿ ಕೆಲಸಮಾಡುತ್ತವೆ.

ಈ ರೀತಿಯ ಪ್ರಾದೇಶಿಕ ವಿಶಿಷ್ಟ ಆಹಾರಗಳಲ್ಲಿ ಆಹಾರಗಳ ಜೊತೆಗೆ ಸಾಮಾಜಿಕ ವರ್ಗಗಳ ಸಂಬಂಧಗಳೂ ಕೆಲವೊಮ್ಮೆ ಏರ್ಪಟ್ಟಿರುತ್ತವೆ. ಇಂತಹ ತಾರತಮ್ಯ ಭಿನ್ನತೆಗಳು ಒಂದು ಪ್ರದೇಶದಲ್ಲಿ ಸಾಪೇಕ್ಷವಾದ ಭಿನ್ನತೆಗಳಾಗಿವೆ. ಅಕ್ಕಿ ಮತ್ತು ರಾಗಿಗಳಲ್ಲಿ ಅಕ್ಕಿ ಶ್ರೀಮಂತರ ಆಹಾರ, ರಾಗಿ ಬಡವರ ಆಹಾರ ಎನ್ನುವ ಸಾಂಸ್ಕೃತಿಕ ಭಿನ್ನತೆಯ ಹಿಂದೆ ಅಂತಹ ಆಹಾರವನ್ನು ಸೇವಿಸುವ ಜನಸಮುದಾಯಗಳ ನಡುವಿನ ಆರ್ಥಿಕ ವರ್ಗಗಳ ಭಿನ್ನತೆ ಕೂಡಾ ಪರಿಗಣಿತವಾಗುತ್ತದೆ. ಈ ದೃಷ್ಟಿಯಿಂದ ಕನಕದಾಸರ ‘ರಾಮಧಾನ್ಯ ಚರಿತೆ’ ಎಂಬ ರೂಪಕ ಕಾವ್ಯವು ವಿಶಿಷ್ಟ ತಾತ್ವಿಕತೆಯನ್ನು ಉಳ್ಳದ್ದು. ಭತ್ತ, ರಾಗಿಗಳ ನಡುವಿನ ವಾಗ್ವಾದವನ್ನು ಏರ್ಪಡಿಸಿ ಭತ್ತವನ್ನು ಶ್ರೀಮಂತರ ಪ್ರತಿನಿಧಿಯಾಗಿ ಮತ್ತು ರಾಗಿಯನ್ನು ಬಡವರ ಪ್ರತಿನಿಧಿಯಾಗಿ ರೂಪಿಸಿ ಕೊನೆಗೆ ರಾಗಿಯೇ ಗೆಲ್ಲುವುದರ ಮೂಲಕ ಬಡವರ ಗೆಲುವನ್ನು ತೋರಿಸುವ ಈ ಕಾವ್ಯ ಆಹಾರ ವ್ಯವಸ್ಥೆಯಲ್ಲಿನ ವರ್ಗಭೇದವನ್ನು ವಿಶೇಷವಾಗಿ ಉಲ್ಲೇಖಿಸುತ್ತದೆ.

ಆಹಾರ ಪದ್ಧತಿಗಳ ಚಾರಿತ್ರಿಕ ರೂಪುಗೊಳ್ಳುವಿಕೆಯಲ್ಲಿ ಪರಿಸರ ಮತ್ತು ಹವಾಮಾನ, ನೆಲೆವೂರಿದ ಇತಿಹಾಸ ಮತ್ತು ಜನಾಂಗಿಕ ಜನಸಂಖ್ಯಾ ಪ್ರಮಾಣ, ನಗರೀಕರಣ ಮತ್ತು ತಂತ್ರಜ್ಞಾನದ ಅನ್ವೇಷಣೆಗಳಿಂದಾದ ಬದಲಾವಣೆಗಳು, ಆರ್ಥಿಕ ಇತಿಹಾಸ, ಸಮಾಜಶಾಸ್ತ್ರೀಯ ಅಂಶಗಳು ಮತ್ತು ಧರ್ಮ – ಇವು ಮುಖ್ಯವಾದುವು. ನೈಸರ್ಗಿಕ ಪರಿಸರದೊಂದಿಗಿನ ಮನುಷ್ಯರ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡುವುದರ ಮೂಲಕ ಆಹಾರ ಪದ್ಧತಿಗಳ ಮೇಲೆ ಪರಿಸರದ ಪ್ರಭಾವ, ಋತುಮಾನ ಸಂಬಂಧಿಯಾದ ಆಹಾರಗಳು, ಸ್ಥಳೀಯ ಬೆಳೆಗಳು, ವಿಭಿನ್ನ ಸಾಂಸ್ಕೃತಿಕ ಪ್ರದೇಶಗಳ ಸ್ಥಳೀಯ ಆಹಾರಗಳು ಇವನ್ನು ಸಾಂಸ್ಕೃತಿಕ ಭೂಗೋಳ ಶಾಸ್ತ್ರ ಮತ್ತು ಪರಿಸರ ವಿಜ್ಞಾನಗಳ ದೃಷ್ಟಿಯಿಂದ ಅಧ್ಯಯನ ಮಾಡಲು ಅವಕಾಶವಿದೆ. ಆರ್ಥಿಕ ಇತಿಹಾಸದ ದೃಷ್ಟಿಯಿಂದ ಆಹಾರದ ವಿತರಣೆಯ ವಿಭಿನ್ನ ದೃಷ್ಟಿಗಳನ್ನು ಅಧ್ಯಯನ ಮಾಡುವುದರ ಮೂಲಕ ಸ್ಥಳೀಯ ಆರ್ಥಿಕತೆ ಮತ್ತು ಸ್ಥಳೀಯ ಆಹಾರ ಪದ್ಧತಿಗಳ ಮೇಲೆ ಅದು ಬೀರುವ ಪರಿಣಾಮಗಳನ್ನು ತಿಳಿದುಕೊಳ್ಳಲು ಅವಕಾಶವಿದೆ. ಕೃಷಿ ಇತಿಹಾಸ ಮತ್ತು  ತಂತ್ರಜ್ಞಾನದ ಇತಿಹಾಸಗಳ ಅಧ್ಯಯನವು ಗ್ರಾಮೀಣ ತಂತ್ರಜ್ಞಾನದಲ್ಲಾಗಿರುವ ಬದಲಾವಣೆಗಳನ್ನು ಗಮನಿಸಿ ಅದು ಹೇಗೆ ಆಹಾರ ಪದ್ಧತಿಗಳ ಬದಲಾವಣೆಗಳ ಮೇಲೆ ಪರಿಣಾಮವನ್ನು ಬೀರಿವೆ ಎನ್ನುವುದನ್ನು ಪರಿಶೀಲಿಸಲು ಅವಕಾಶ ಕಲ್ಪಿಸುತ್ತದೆ. ಹೀಗೆ ಜನಪದ ಆಹಾರ ಪದ್ಧತಿಯ ಅಧ್ಯಯನವು ಜನಪದ ಸಂಸ್ಕೃತಿಯ ಇತಿಹಾಸ, ಆರ್ಥಿಕತೆಗಳ ಮೂಲಕ ಇಡೀ ಸಮಾಜ ರಚನೆಯ ಅನೇಕ ಮುಖಗಳನ್ನು ಅನಾವರಣ ಮಾಡುತ್ತದೆ. ಜನಪದ ಧರ್ಮದ ಅಧ್ಯಯನದಲ್ಲಿ ಲೌಕಿಕ ಆಹಾರ ಮತ್ತು ಪವಿತ್ರ ಆಹಾರ ಎಂಬ ವರ್ಗೀಕರಣವನ್ನೂ, ಆಹಾರ ಸಂಬಂಧಿಯಾದ ನಿಷಿದ್ಧತೆಗಳನ್ನೂ, ಆಹಾರ ರೀತಿಗಳ ಮನೋವಿಜ್ಞಾನವನ್ನೂ ಪರಿಶೀಲಿಸಲು ಅವಕಾಶವಿದೆ. ಹೀಗೆ ಆಹಾರ ವ್ಯವಸ್ಥೆಯ ಜಾನಪದ ಅಧ್ಯಯನವು ಅಂತಿಮವಾಗಿ ಮನುಷ್ಯರ ಬದುಕಿನ ರಚನೆಗಳ ಸ್ವರೂಪ ಹಾಗೂ ಬದಲಾವಣೆಗಳ ಅಧ್ಯಯನವಾಗಿ ಮುಖ್ಯವಾಗುತ್ತವೆ.

ಯಾವ ಆಹಾರವನ್ನು ವರ್ಷದ ಯಾವ ಋತುಮಾನದಲ್ಲಿ ಸೇವಿಸಬೇಕು ಎನ್ನುವುದು ಆಹಾರ ಸಂಸ್ಕೃತಿಯ ಒಂದು ಮುಖ್ಯ ಅಂಶ. ಹಾಗೆಯೇ ಯಾವ ಆಹಾರವನ್ನು ದಿನದ ಯಾವ ವೇಳೆಯಲ್ಲಿ ಸೇವಿಸಬೇಕು ಎನ್ನುವುದು ಮನುಷ್ಯರ ಅಲೋಚನೆ ಹಾಗೂ ಅಗತ್ಯಗಳನ್ನು ಹೊಂದಿಕೊಂಡು ರೂಪಿತವಾದ ವ್ಯವಸ್ಥೆ. ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು ಮತ್ತು ಯಾವಾಗ ಊಟ ಮಾಡಬೇಕು ಎನ್ನುವುದು ಮತ್ತೆ ಪ್ರಾದೇಶಿಕವಾಗಿ ಮತ್ತು ಐತಿಹಾಸಿಕವಾಗಿ ನಿರ್ಧರಿತವಾಗುವ ಅಂಶ. ‘ಊಟ’ ಅಂದರೆ ಏನು ಎನ್ನುವುದು ಒಂದೊಂದು ಸಂಸ್ಕೃತಿಯು ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನ ಮಾಡುವ ಅಂಶ. ಮುಖ್ಯ ಆಹಾರವನ್ನು ಸೇವನೆ ಮಾಡಿದಾಗ ಅದನ್ನು‘ಊಟ’ವೆಂದೂ ಉಪ ಆಹಾರವನ್ನು ಸೇವನೆ ಮಾಡಿದಾಗ ತಿಂಡಿ ಅಥವಾ ಉಪಹಾರವೆಂದೂ ಕರೆದಿರುವ ಪದ್ಧತಿಯು ಇಂತಹ ಗ್ರಹಿಕೆಗಳಿಂದ ಕೂಡಿದ್ದು. ಅಕ್ಕಿಯ ಅನ್ನವನ್ನು ಊಟ ಮಡುವ ಸಂಸ್ಕೃತಿಯಲ್ಲಿ ದಕ್ಷಿಣ ಕನ್ನಡದ ಕೃಷಿ ಸಮಾಜಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತು ಅನ್ನದ ಊಟದ ಪದ್ಧತಿಯಿತ್ತು. ಬೆಳಿಗ್ಗಿನ ಊಟವನ್ನು ಗಂಜಿ ಊಟ, ಅಥವಾ ತಂಗುಳನ್ನದ ಊಟ ಎನ್ನುತ್ತಿದ್ದರು. ಕ್ರಮೇಣ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಎಂಬ ಪದ್ಧತಿ ಬಂತು. ಈ ಪದ್ಧತಿ ಬರಲು ಕಾರಣ ಪಟ್ಟಣಗಳ ಸಂಪರ್ಕ ಮತ್ತು ಕಾಫಿ ಹೋಟೆಲುಗಳ ಉದಯ. ಸಾಯಂಕಾಲದ ವೇಳೆ ತಿಂಡಿ ಮತ್ತು ಕಾಫಿ-ಚಹ ಇದು ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಕಾಣಿಸುವ ಒಂದು ಆಹಾರ ಪದ್ಧತಿ. ಹೀಗೆ ಲೆಕ್ಕ ಮಾಡಿದರೆ ಒಟ್ಟು ನಾಲ್ಕು ಬಾರಿ ನಿಗದಿತವಾಗಿ ಆಹಾರ ಸೇವನೆ ಮಾಡುವ ಕ್ರಮ ಇಲ್ಲಿ ಕಾಣಿಸುತ್ತದೆ. ಈ ರೀತಿಯ ವಿಭಜನೆಗೆ ಆಯಾಯ ಸಂಸ್ಕೃತಿ ನಿರ್ವಹಿಸುತ್ತಿದ್ದ ಕೆಲಸಗಳು ಕಾರಣ. ಪರಂಪರಾಗತವಾಗಿ ಜೈನ ಮತದ ಅನುಯಾಯಿಗಳು ಸೂರ್ಯಾಸ್ತಮಾನದ ಮೊದಲು ತಮ್ಮ ‘ಪೋಸದ ಊಟ’ದಲ್ಲಿ ಆಹಾರ ಸೇವನೆ ಮಾಡುತ್ತಾರೆ. ಆಮೇಲೆ ಅವರಿಗೆ ಆಹಾರ ಸೇವನೆ ನಿಷಿದ್ಧ.

ದಿನದ ಊಟ ಮತ್ತು ಉಪಾಹಾರಗಳಲ್ಲಿ ಯಾವ ಯಾವ ಆಹಾರ ವಸ್ತುಗಳು, ಯಾವ ಯಾವ ವೇಳೆಗಳಲ್ಲಿ ಬಳಕೆಯಾಗುತ್ತವೆ. ಮತ್ತು ಯಾಕೆ ಅದೇ ವೇಳೆಗೆ ಬಳಕೆಯಾಗುತ್ತವೆ ಎನ್ನುವುದರ ಶೋಧ ಅಗತ್ಯವಾದುದು. ಆಹಾರ ವಸ್ತುಗಳ ಉಪಲಬ್ಧತೆ ಮತ್ತು ಆಹಾರ ಸೇವನೆಯ ಕಾಲಬದ್ಧತೆಗಳ ಸಂಬಂಧ ಎಷ್ಟು ತಾರ್ಕಿಕ ರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ರೂಪುತಾಳಿದೆ ಎನ್ನುವುದನ್ನು ಅನ್ವೇಷಿಸುವ ಅಗತ್ಯವಿದೆ. ಏಕೆಂದರೆ ಸಂಸ್ಕೃತಿಯಲ್ಲಿ ಯಾವುದೇ ವ್ಯವಸ್ಥೆ ಅಲೌಕಿಕವಾಗಿ ಹುಟ್ಟಿಕೊಂಡಿರುವುದಿಲ್ಲ. ಪರಂಪರಗತವಾದ ಜನಪದ ಆಹರ ಪದ್ಧತಿಯ ಕುರಿತು ಸಂಶೋಧನೆ ನಡೆಸುವಾಗ ಅಂತಹ ಆಹಾರ ಪದ್ಧತಿಯಲ್ಲಿ ಬಳಕೆಯಾಗುತ್ತಿದ್ದ ಆಹಾರ ವಸ್ತುಗಳನ್ನು ಮಾತ್ರ ಗುರುತಿಸಿದರೆ ಸಾಲದು. ಈ ರೀತಿ ಗುರುತಿಸುವಿಕೆ ಸಾಮಗ್ರಿಗಳ ಶೋಧನ ದೃಷ್ಟಿಯಿಂದ ಖಂಡಿತ ಮಹತ್ವದ್ದು. ಆದರೆ ನಮ್ಮ ಸಂಶೋಧನೆಯು ಇನ್ನೂ ಹೆಚ್ಚು ಆಳವಾಗಿ ಮುಂದುವರಿದು ಅಂತಹ   ಆಹಾರ ವ್ಯವಸ್ಥೆಗಳಲ್ಲಿ ಅಡಕವಾಗಿದ್ದು ಆಹಾರ ತತ್ವಗಳನ್ನು  ಶೋಧಿಸುವ ಕೆಲಸವನ್ನು ಮಾಡಬೇಕು.‘ಆಹಾರ ತತ್ತ್ವದ ಪರಿಕಲ್ಪನೆಗಳನ್ನು ಗುರುತಿಸುವ ಮತ್ತು ಅಂತಹ ತತ್ವ’ದ ತಾತ್ವಿಕತೆಗಳನ್ನು ತಿಳಿದುಕೊಳ್ಳುವ ಕೆಲಸ ವಿಶೇಷವಾಗಿ ನಡೆಯಬೇಕು. ‘ಆಹಾರ ತತ್ವ’ ಎಂದರೆ ನಿರ್ದಿಷ್ಟ ಸಾಂಸ್ಕೃತಿಕ ಸಂದರ್ಭದಲ್ಲಿ ಮತ್ತು ನಿರ್ದಿಷ್ಟ ಕಾಲದ ಸಂದರ್ಭದಲ್ಲಿ ನಿರ್ದಿಷ್ಟ ರೀತಿಯ  ಆಹಾರವನ್ನು ಬಳಸಬೇಕಾದ ಅಗತ್ಯವನ್ನು ಕಂಡುಕೊಂಡ ತತ್ವ. ಉದಾ: ಬೆಳಗಿನ,ಮಧ್ಯಾಹ್ನದ, ರಾತ್ರಿಯ ವೇಳೆಯ ಆಹಾರಗಳು ಯಾವ ಹೊತ್ತಿಗೆ ಯಾವುದಿರಬೇಕು ಮತ್ತು ಯಾಕೆ ಎನ್ನುವ ತಿಳುವಳಿಕೆ. ಹಾಗೆಯೇ ಮಳೆಗಾಲ, ಬೇಸಿಗೆಕಾಲ, ಚಳಿಗಾಲಗಳ ಋತುಮಾನಕ್ಕೆ ಸಂಬಂಧಿಸಿದಂತೆ ಆಹಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳುವ ವ್ಯತ್ಯಾಸಗಳು ಮತ್ತು ಇಂತಹ ವ್ಯತ್ಯಾಸಗಳಿಗೆ ಇರುವ ಕಾರಣಗಳು. ದೇಶದ ಪ್ರಕೃತಿಯನ್ನು ಗಮನಿಸಿಕೊಂಡು ಆಹಾರದಲ್ಲಿ ಮಾಡಿಕೊಳ್ಳುವ ಬದಲಾವಣೆಗಳ ಹಿಂದೆ ಅಡಕವಾಗಿರುವ ತತ್ವ. ಉದಾ: ಕಾಯಿಲೆ ಆದಾಗ ಎಂಥ ಆಹಾರವನ್ನು ಸೇವಿಸಬೇಕು, ಅದರಲ್ಲೂ ಎಂತಹ ಕಾಯಲೆಗಳಿಗೆ ಎಂತಹ ಆಹಾರಗಳು ಪಥ್ಯ ಮತ್ತು ಎಂತಹ ಆಹಾರಗಳು ಅಪಥ್ಯ ಎನ್ನುವ ತಿಳುವಳಿಕೆ. ದೇಹಕ್ಕೆ ಉಷ್ಣವಾದಾಗ ತಂಪಿನ ಆಹಾರಗಳನ್ನು ಸೇವಿಸಬೇಕು, ದೇಹಕ್ಕೆ ತಂಪಾಗಿದ್ದಾಗ ಉಷ್ಣದ ಆಹಾರಗಳನ್ನು ಸೇವಿಸಬೇಕು ಎನ್ನುವುದು ಇಂತಹ ಒಂದು ಆಹಾರ ತತ್ವ. ಹೀಗೆ ಆಹಾರ ಸೇವನೆಯು ದೇಹದ ಸಮತೋಲನವನ್ನು ಕಾಪಾಡುವ ತತ್ವವನ್ನು ಆಧರಿಸಿರುತ್ತದೆ. ಈ ರೀತಿ ಜನಪದರು ಶರೀರದ ಸಮತೋಲನ  ಮತ್ತು ತಮ್ಮ ಆಹಾರ ಸೇವನೆಗಳ ನಡುವೆ ಮಾಡಿಕೊಂಡಿರುವ ಹೊಂದಾಣಿಕೆಯ ಸಂಬಂಧಗಳ ಭಿನ್ನ ರಚನೆಗಳನ್ನು ಶೋಧಿಸುವುದು ಬಹಳ ಮುಖ್ಯವಾಗಿ ನಡೆಯಬೇಕಾದ ಸಂಶೋಧನೆಯ  ಕೆಲಸ. ಆರೋಗ್ಯ-ಅನಾರೋಗ್ಯ ಎನ್ನುವ ಪರಿಭಾಷೆಗಳಿಗೂ ಜನಪದರ ಆಹಾರ ತತ್ವದ ಪರಿಕಲ್ಪನೆಗಳಿಗೂ ತಾರ್ಕಿಕವಾದ ಸಂಬಂಧವಿರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು  ಕಾಯಿಲೆಯಾದಾಗ ಆರೋಗ್ಯವನ್ನು ಮರುಸಂಪಾದನೆ ಮಾಡುವುದು ಇವೆರಡೂ ಜನಪದರ ಆಹಾರ ತತ್ವವನ್ನು ಹೊಂದಿಕೊಂಡೇ ನಿಜವಾಗುತ್ತದೆ.‘ಜನಪದ ವೈದ್ಯ’ ಪದ್ಧತಿಯು ಆಹಾರದ ನಿಷಿದ್ಧತೆಯನ್ನು, ಆಹಾರ ತತ್ವದಲ್ಲಿ ಒಂದು ಮುಖ್ಯ ಅಂಶವನ್ನಾಗಿ ಪರಿಗಣಿಸಿದೆ. ಹೀಗಾಗಿ ಜನಪದ ಆಹಾರತತ್ವದ ಸಂಶೋಧನೆಯು ಜನಪದ ವೈದ್ಯರ ಸಂಶೋಧನೆಯೊಂದಿಗೆ ಕೂಡಾ ನೇರವಾದ ಸಂಬಂಧವನ್ನು ಹೊಂದಿರುತ್ತದೆ.

ಜನಪದ ಆಹಾರ ಪದ್ಧತಿಯಲ್ಲಿ ದೈನಂದಿನ ಆಹಾರ ಮತ್ತು ವಿಶೇಷ ಸಂದರ್ಭಗಳ ಆಹಾರ ಎನ್ನುವ ವರ್ಗೀಕರಣವನ್ನು ಕಾಣುತ್ತೇವೆ. ದೈನಂದಿನ ಸಾಮಾನ್ಯ ಆಹಾರವನ್ನು ಊಟ ಎಂದೂ, ವಿಶೇಷ ಸಾಂದರ್ಭಿಕ ಆಹಾರವನ್ನು ಔತಣ(ಭೋಜನ) ಎಂದೂ ಕರೆಯುವ ಪದ್ಧತಿ ಇದೆ. ಸಾಮಾನ್ಯವಾಗಿ ಊಟ ಎಂದಾಗ ಅಲ್ಲಿರುವ ಆಹಾರ ವೈವಿಧ್ಯ ಬಹಳ ಮಿತವಾದುದು. ಕೆಲವು ಬಗೆಗಳನ್ನು ಒಳಗೊಂಡ ಆಹಾರ ದೈನಂದಿನ ಊಟದಲ್ಲಿ ಇರುತ್ತದೆ. ಔತಣ ಅಥವಾ ಭೋಜನ ಅಂದರೆ ಅಲ್ಲಿ ಅನೇಕ ವಿಶೇಷ ಆಹಾರಗಳಿರುತ್ತವೆ. ದಿನನಿತ್ಯದ ಆಹಾರದಲ್ಲಿ ಇಲ್ಲದಿರುವ  ವಿಶೇಷ ಆಹಾರಗಳು ಔತಣ ಅಥವಾ ಭೋಜನದಲ್ಲಿ ಇರುತ್ತವೆ. ಅಂತಿಂತಹ ಭಕ್ಷ್ಯಗಳೇ ಇಂತಿಂತಹ ಸಂದರ್ಭಗಳಲ್ಲಿ ಇರಬೇಕು ಎನ್ನುವುದು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ನಿರ್ಧರಿತವಾಗುತ್ತವೆ. ಉದಾ: ದೈನಂದಿನ ಆಹಾರದಲ್ಲಿ ಸಿಹಿತಿಂಡಿಗಳು ಇಲ್ಲದಿರುವ ಸಂಸ್ಕೃತಿಯವರು ತಮ್ಮ ಔತಣದಲ್ಲಿ ಸಿಹಿತಿಂಡಿಯನ್ನು  ಕಡ್ಡಾಯವಾಗಿ ಮಾಡುತ್ತಾರೆ. ಆರ್ಥಿಕ ಶಕ್ತಿಯು ಔತಣದ ಸ್ವರೂಪವನ್ನು ನಿರ್ಧರಿಸುತ್ತದೆ. ಸಾಮಾನ್ಯ ವರ್ಗದವರ ಪಾಲಿಗೆ ದಿನನಿತ್ಯದ  ಊಟಕ್ಕೆ ಒಂದು ಸಿಹಿತಿಂಡಿಯೋ ಪಾಯಸವೋ ಸೇರಿದರೆ ಅದು ಔತಣ. ಆರ್ಥಿಕ ಸಂಪನ್ನರ ಪಾಲಿನ ಔತಣ ಬಹುಸಂಖ್ಯೆಯ ವಿಶಿಷ್ಟ ತಿನಿಸುಗಳ ಭಕ್ಷ್ಯಗಳ ಬೃಹತ್ ಪ್ರದರ್ಶನವಾಗಬಹುದು. ಇಂತಹ ಔತಣಗಳಲ್ಲಿ ಆಹಾರ ವಸ್ತುಗಳು ಕೇವಲ ಸೇವನೆಯ ವಸ್ತುಗಳಷ್ಟೇ ಆಗದೆ ಅವು ಪ್ರದರ್ಶನದ ವಸ್ತುಗಳೂ ಆಗುತ್ತವೆ. ಶ್ರೀಮಂತಿಕೆ ಮತ್ತು ಅಂತಸ್ತನ್ನು ನಿರ್ಧರಿಸುವಲ್ಲಿ ಆಹಾರ ಕೂಡಾ ಒಂದು ಮುಖ್ಯ ಸಾಧನವಾಗಿ ಬಳಕೆಯಾಗಿದೆ. ಇಂದು ಈ ರೀತಿಯ ಬಳಕೆಯ ಪ್ರಮಾಣ ಅಧಿಕವಾಗಿದೆ.

ಅಡುಗೆಯ ಆಹಾರವ್ಯವಸ್ಥೆಗೆ ಸಂಬಂಧಪಟ್ಟ ಒಂದು ತಂತ್ರಜ್ಞಾನ ‘ಅಡು’ ಎನ್ನುವ ಶಬ್ದಕ್ಕಿರುವ ಅರ್ಥ ‘ಅಡುಗೆ ಮಾಡು’, ‘ಬೇಯಿಸು’,‘ಕುದಿಸು’, ಎಂದು ‘ಅಡುಗೂಳ್’ ಅಂದರೆ ಬೇಯಿಸಿದ್ದು -‘ಅನ್ನ’ ಬೇಯಿಸಿದ್ದು ಎನ್ನುವಾಗಲೂ ಬೇಯಿಸುವ ವಿಧಾನಗಳು ಬಹು ಬಗೆಯವು ಆಗಿರುತ್ತವೆ. ಇಲ್ಲಿ ಬೇಯಿಸುವ ಪಾತ್ರೆಗಳು, ಬೇಯಿಸುವ ಕ್ರಮಗಳು, ಬೇಯಿಸುವ ವಸ್ತುಗಳು ಇವನ್ನು ಹೊಂದಿಕೊಂಡು ಮತ್ತು  ದೊರಕಬೇಕಾದ ಆಹಾರದ ಸ್ವರೂಪವನ್ನು ಹೊಂದಿಕೊಂಡು ಬೇಯಿಸುವ ವಿಧಾನಗಳು ಭಿನ್ನವಾಗಿರುತ್ತವೆ. ಬೆಂಕಿ ಮತ್ತು ಆಹಾರದ ಕಚ್ಚಾ ವಸ್ತುವಿನ ಸಂಬಂಧ ಇಲ್ಲಿ ಬೇರೆ ಬೇರೆ ರೀತಿಗಳಲ್ಲಿ ಏರ್ಪಡುತ್ತದೆ. ನೇರವಾಗಿ ಬೆಂಕಿ ಸ್ಪರ್ಶಿಸಿದರೆ ಅದು ಸುಡುವುದು.  ಪಾತ್ರೆಯಲ್ಲಿ ನೀರಿನ ಮೂಲಕ ನೀರಲ್ಲಿ ಹಾಕಿ ಬೆಂಕಿಯ ಶಾಖವನ್ನು ಬಳಸಿದರೆ ಅದು ಕುದಿವುದು ಅಥವಾ ಬೇಯಿವುದು. ನೀರನ್ನು  ಬೆಂಕಿಯಿಂದ ಕಾಯಿಸಿ ಅದರ ಹವೆಯ  ಮೂಲಕ ವಸ್ತಗಳನ್ನು ಬೇಯಿವುದು ಇನ್ನೊಂದು ಬಗೆ. ನೀರನ್ನು ಬಳಸದೆಯೇ ಕಾವಲಿಗಳಲ್ಲಿ, ಬಾಣಲೆಗಳಲ್ಲಿ, ಓಡುಗಳಲ್ಲಿ ಒಣರೂಪದಲ್ಲಿ ವಸ್ತುಗಳನ್ನು ಬೇಯಿಸುವುದು ಮತ್ತೊಂದು ಬಗೆ. ಬೆಂಕಿಯೊಂದಗಿನ ನೇರ, ಪರೋಕ್ಷ, ಅಂತರದ ಸಂಬಂಧಗಳು ಅನೇಕ ರೀತಿಗಳಲ್ಲಿ ಅಡುಗೆಗಳಲ್ಲಿ ಪ್ರಯೋಗಗೊಂಡಿವೆ. ರುಚಿಯ ಬಹುಸಾಧ್ಯತೆಗಳನ್ನು ಬೆಂಕಿಯ ಸಂಬಂಧಗಳ ಭಿನ್ನ ರೀತಿಗಳೊಂದಿಗೆ ಸಾಧಿಸಿಕೊಂಡ ಜನಪದರ ಅಡುಗೆಯ ತಂತ್ರಜ್ಞಾನ  ಬಹಳ ವಿಶಿಷ್ಟವಾದುದು. ಬೆಂಕಿಯನ್ನು ಬಳಸದೆಯೇ ಅಹಾರವನ್ನು ಸಿದ್ಧಪಡಿಸಿ ಸೇವಿಸಲು ಸಜ್ಜುಗೊಳಿಸುವ ಕ್ರಮಗಳೂ ಅಡುಗೆಯ ಭಾಗಗಳೆಂದೇ ಪರಿಗಣಿತವಾಗುತ್ತವೆ. ನಿಜವಾಗಿ ಇಲ್ಲಿ ಅಡುವುದು ಅಂದರೆ ಬೇಯಿಸುವ ಕೆಲಸ ಇರುವುದಿಲ್ಲ. ಆಹಾರದ ಕಚ್ಚಾ ಸಾಮಗ್ರಿಗಳನ್ನು ಕಡೆಯುವ, ರುಬ್ಬುವ, ಜಜ್ಜುವ, ಅರೆಯುವ, ಸಣ್ಣಿಸುವ, ಬೆರಸುವ, ಇಂತಹ ಕ್ರಮಗಳು ಒಂದು ಬಗೆ. ಜನಪದರು ಗುರುತಿಸುವ ಚಟ್ನಿಗಳು ಬಹುಪಾಲು ನಿಸರ್ಗದ ಸಸ್ಯೋತ್ಪನ್ನಗಳನ್ನು ಅರೆದು ಸಣ್ಣಿಸಿ ಸಿದ್ಧಮಾಡಿದ ಆಹಾರಗಳು. ತಮ್ಮ ಪರಿಸರದಲ್ಲಿ ದೊರೆಯುವ, ಸೇವಿಸಬಹುದಾದ ಯಾವುದೇ ಸಸ್ಯದ ಎಲೆ, ಕಾಯಿ, ಹಣ್ಣು, ಕುಡಿ, ಚಕ್ಕೆ ಇವನ್ನು ಜನಪದರು ಬಳಸಿಕೊಳ್ಳದೆ ಬಿಟ್ಟಿಲ್ಲ. ಕರ್ನಾಟಕದ ಭಿನ್ನ, ಭಿನ್ನ ಪ್ರದೇಶಗಳಲ್ಲಿ ಜನಪದರು ತಮ್ಮ ಪ್ರಯೋಗಗಳಿಂದ ಸಿದ್ಧಪಡಿಸಿಕೊಂಡು ಬಂದ ಚಟ್ನಿಗಳ ಬಹುರೂಪಗಳೇ ಏಕತಾನತೆಯ ಆಧುನಿಕ ಆಹಾರ ಸೇವನೆಯಿಂದ ತಮ್ಮ ರುಚಿ ಸಂಸ್ಕೃತಿಯನ್ನು ಕಳೆದುಕೊಂಡು ಆಧುನಿಕ ನಾಲಗೆಗಳಿಗೆ ಮರುಚೈತನ್ಯವನ್ನು ನೀಡಬಲ್ಲುವು.

ಆಹಾರ ವ್ಯವಸ್ಥೆ ಎನ್ನುವಾಗ ಪಾನೀಯಗಳು ಅದರ ಭಾಗವಾಗಿ ಬಳಕೆಯಾಗುತ್ತವೆ. ಅಂದರೆ ಇಲ್ಲಿ ಜಗಿಯುವ, ಜೀರ್ಣಿಸುವ ಕೆಲಸ ಇಲ್ಲ. ಗುಟುಕರಿಸುವ, ಹೀರುವ, ಕೆಲವೊಮ್ಮೆ ಚಪ್ಪರಿಸುವ ಯಾವುದೇ ದ್ರವ ಆಹಾರವಾದರೂ ಅದೊಂದೇ ಪಾನೀಯ. ಜಗತ್ತಿನ ಯಾವುದೇ ಸಂಸ್ಕೃತಿಯಲ್ಲೂ ಎಲ್ಲ ಆಧುನಿಕ ಪಾನೀಯ ವ್ಯವಸ್ಥೆಗಳ ಪ್ಯಾಶನ್‌ಗಳ ಯುಗದಲ್ಲೂ ನೀರಿನ ಮಹತ್ವವನ್ನು ಕಡೆಗಣಿಸಿ ಅದನ್ನು ಹಿಮ್ಮೆಟ್ಟಿಸುವ ಪಾನೀಯವೊಂದು ಇನ್ನೂ ಹುಟ್ಟಿಕೊಂಡಿಲ್ಲ. ನೈಸರ್ಗಿಕವಾಗಿ ದೊರೆಯುವ ನೀರು ತನ್ನ ಸುಲಭ ಲಭ್ಯತೆ ಮತ್ತು ಬಹುಮಟ್ಟಿಗೆ ಸಂಸ್ಕರಣ ಅಗತ್ಯವಿಲ್ಲದ ಕಾರಣದಿಂದ ಮತ್ತು ಸಾಮಾನ್ಯವಾಗಿ ದುಡ್ಡು ಕೊಡದೆ ದೊರೆಯುವ ಪಾನೀಯ ಎನ್ನುವುದರಿಂದ ಇಂದಿಗೂ ಬಹು ಜನಪ್ರಿಯ ಪಾನೀಯವಾಗಿ ಮುಂದುವರಿದಿದೆ. ಜೊತೆಗೆ ಇತರ ಅನೇಕ ಪಾನೀಯಗಳ ಉತ್ಪಾದನೆಗೆ ಇದು ಒಂದು ಮೂಲ ಪಾನೀಯವಾಗಿ ಕೂಡ ಬಹಳ ಮಹತ್ವದ್ದಾಗಿದೆ. ಆದರೆ ನೀರನ್ನು ಪಾನೀಯವಾಗಿ ಸೇವಿಸುವ ಕ್ರಮಗಳು ಎಲ್ಲ ಸಂಸ್ಕೃತಿಯಲ್ಲೂ ಒಂದೇ ರೀತಿಯಾಗಿಲ್ಲ. ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಊಟ, ಉಪಹಾರಗಳ ಮೊದಲು ಕುಡಿಯಲು ನೀರು ಕೊಡುವ ಸಂಪ್ರದಾಯ ಬಹಳ ಕಡಿಮೆ. ಜನಪದ ರೂಪಕಗಳ ಮೂಲಕ ಆಹಾರ ಪೋಷಣೆಯ(Nutrition) ತಿಳುವಳಿಕೆಯನ್ನು ಕೊಡಬಹುದು. ದೇಹ ಸಂಬಂಧಿಯಾದ ಬಹುತೇಕ ಕಾಯಿಲೆಗಳಿಗೆ (ಮೂತ್ರ ಜನಕಾಂಗದ್ದು ಇತ್ಯಾದಿ) ಸಮೃದ್ಧವಾಗಿ ನೀರು ಕುಡಿಯುವುದೇ ಒಂದು ಮುಖ್ಯ ಮಾರ್ಗೋಪಾಯ. ಇನ್ನೊಬ್ಬರಿಗೆ ನೀರು ಕುಡಿಸುವುದಕ್ಕಿಂತ ತಾವೇ ಹೆಚ್ಚು ಹೆಚ್ಚು ನೀರು ಕುಡಿಯುವುದು ತಮ್ಮ ಆರೋಗ್ಯಕ್ಕೂ ಹಿತ, ಸಮಾಜದ ಆರೋಗ್ಯಕ್ಕೂ ಹಿತ, ಎನ್ನುವ ತತ್ವ ಹೆಚ್ಚಾಗಿ ಪ್ರಚಾರಕ್ಕೆ ಬರಬೇಕಾಗಿದೆ.

ಜನಪದರಲ್ಲಿ ಬಳಕೆಯಾಗುವ ಇನ್ನೊಂದು ಮುಖ್ಯ ಪಾನೀಯವೆಂದರೆ ಹಾಲು. ಹಸು, ಎಮ್ಮೆ, ಆಡು ಇಂತಹ ಪ್ರಾಣಿಗಳಿಂದ ದೊರೆಯುವ ಹಾಲು ಆಹಾರವಾಗಿ ಮತ್ತು ಆರ್ಥಿಕ ಸಂಪನ್ಮೂಲವಾಗಿ ಒಂದು ಜನಪ್ರಿಯ ಮೂಲ ದ್ರವ್ಯ. ಹಾಗಾಗಿ ಹಾಲನ್ನು ಕುರಿತು ಗಾದೆಗಳು, ನಂಬಿಕೆಗಳು, ರೂಪಕಗಳು, ಜಾನಪದದಲ್ಲಿ ಬಹು ಪ್ರಮಾಣದಲ್ಲಿ ದೊರೆಯುತ್ತವೆ. ಹಾಲಿನ ಶುಭ್ರಬಣ್ಣ, ಅದರ ಪೌಷ್ಟಿಕ ಗುಣ, ಅದರ ನೈಸರ್ಗಿಕ ರೂಪ ಇವುಗಳಿಂದಾಗಿ ಶುದ್ಧತೆ, ಪಾವಿತ್ಯ್ರ, ಪ್ರಾಮಾಣಿಕತೆ ಇಂತಹ ಗುಣಗಳು ಹಾಲಿನೊಂದಿಗೆ ಸಮೀಕರಣಗೊಂಡಿವೆ. ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವು ಜನಪದರ ಆಹಾರಗಳಲ್ಲಿ ಅನೇಕ ಬಗೆಗಳಲ್ಲಿ ಅನಿವಾರ್ಯವೆನ್ನುವಂತೆ ಬಳಕೆಯಾಗಿವೆ. ತಾಯಿ ಮತ್ತು ಆಕೆಯಿಂದ ನಿಷ್ಪನ್ನಗೊಳ್ಳುವ ಕುಟುಂಬದ ಹಾಗೆ ಹಾಲು ಮತ್ತು ಅದರಿಂದ ನಿಷ್ಪನ್ನಗೊಳ್ಳುವ ಇಂತಹ ವಸ್ತುಗಳ ಆಹಾರ ವ್ಯವಸ್ಥೆಯಲ್ಲಿ ಒಂದು ಕುಟುಂಬದ ಪರಿಕಲ್ಪನೆಯನ್ನು ತಂದು ಕೊಡುತ್ತವೆ. ನೀರು ಮತ್ತು ಹಾಲು ತಮ್ಮ  ಸಹಜ ರೂಪಗಳಲ್ಲಿ ಪಾನೀಯಗಳು. ಇವು ಇತರ ವಸ್ತುಗಳೊಂದಿಗೆ ಸೇರಿಯೂ ಅನೇಕ ರೀತಿಯ ಪಾನೀಯಗಳ ನಿರ್ಮಾಣಕ್ಕೆ ಆಕರ ಸಾಮಗ್ರಿಗಳಾಗುತ್ತವೆ. ಚಹ, ಕಾಫಿ, ಕಷಾಯ ಇತ್ಯಾದಿ. ಈ ರೀತಿ ಪಾನೀಯಗಳನ್ನು ಮಿಶ್ರ ಮಾಡಿ ಹೊಸ ಪಾನೀಯಗಳನ್ನು ಸೃಷ್ಟಿಸುವ ಪ್ರಯೋಗಗಳನ್ನು ಜನಪದರು ಮಾಡಿಕೊಂಡು ಬಂದಿದ್ದಾರೆ. ಪರಸ್ಪರ ಬೆರೆಯುವ ಪ್ರವೃತ್ತಿಯನ್ನು ತಮ್ಮ ಬದುಕಿನ ಆರೋಗ್ಯಕರ ದೃಷ್ಟಿಯನ್ನಾಗಿ ಇಟ್ಟುಕೊಂಡ ಜನಪದರು ಆಹಾರ ಮತ್ತು  ಪಾನೀಯಗಳ ಸಿದ್ಧತೆಗಳಲ್ಲೂ ಇದನ್ನು ಅನ್ವಯಿಸಿಕೊಂಡು ಮಿಶ್ರ ಆಹಾರಗಳ ಮತ್ತು ಮಿಶ್ರ ಪಾನೀಯಗಳ ಸೃಷ್ಟಿಗೆ ಕಾರಣರಾಗಿದ್ದಾರೆ.

ಪಾನೀಯಗಳ ಉಲ್ಲೇಖ ಮಾಡುವಾಗ ಜನಪದರು ಪರಂಪರಾಗತವಾಗಿ ಬಳಸುತ್ತಿದ್ದ ನೈಸರ್ಗಿಕ ಮೂಲದ ಕಳ್ಳು ಮತ್ತು ಅದರ ಸಂಬಂಧಿಯದ ಮರದ ಪಾನೀಯಗಳು ವಿಶೇಷ ಉಲ್ಲೇಖಕ್ಕೆ ಅರ್ಥವಾಗುತ್ತವೆ. ತಾಳೆ, ತೆಂಗು, ಬೈನೆ ಈಚಲು ಹೀಗೆ ಬೇರೆ ಬೇರೆ ಸಸ್ಯಗಳಿಂದ ರಸಗಳನ್ನು ಉತ್ಪಾದಿಸಿ, ಕೆಲವೊಮ್ಮೆ ಅವನ್ನು ಅತ್ಯಂತ ನೈಸರ್ಗಿಕ ರೂಪದಲ್ಲಿ ಮತ್ತೆ ಕೆಲವೊಮ್ಮೆ ಕೆಲವು ಪರಿಷ್ಕರಣಗಳ ಮೂಲಕ ಸೇವಿಸುವ ಬಹು ಬಗೆಗಳು ಕರ್ನಾಟಕ ಸಂಸ್ಕೃತಿಯಲ್ಲಿ ದೊರೆಯುತ್ತವೆ. ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಪ್ರಸ್ತಾಪಗೊಂಡ ಮಧುಪಾನ ಗೋಷ್ಠಿಯ ವರ್ಣನೆಯಲ್ಲಿ ಬಹುಬಗೆಯ ಕಳ್ಳುಗಳ ಉಲ್ಲೇಖವಿದೆ. ಇಂತಹ ಮರದ ಪಾನೀಯಗಳು ಕ್ರಮೇಣ ಅನೇಕ ಪರಿಷ್ಕರಣಗಳಿಗೆ ಒಳಗಾಗಿ ವ್ಯಾಪಾರದ ವಸ್ತುಗಳಾದಾಗ ಎಲ್ಲಾ ವ್ಯಾಪಾರ ಸಂಸ್ಕೃತಿಗಳಲ್ಲಿ ಆಗುವಂತೆಯೇ ಕಲಬೆರಕೆತನ ಮತ್ತು ಅದರ ಪರಿಣಾಮವಾದ ಅನಾರೋಗ್ಯ ಮತ್ತು ಸಾವು-ಇವು ಕಳ್ಳನ್ನು ಕಳ್ಳನ ಸ್ಥಾನದಲ್ಲಿ ನಿಲ್ಲಿಸಲು ಕಾರಣವಾಯಿತು.

ಜನಪದ ಸಂಸ್ಕೃತಿಯಲ್ಲಿ ಆಹಾರ ಸಂಸ್ಕೃತಿ ನಿರ್ಮಾಣಗೊಂಡದ್ದು ಮನುಷ್ಯರು ಮತ್ತು ಪರಿಸರದ ನಡುವಿನ ನಿರಂತರ ಸಂಬಂಧದ ಮೂಲಕ. ಮನುಷ್ಯರು, ಸಸ್ಯಗಳು ಮತ್ತು ಪ್ರಾಣಿಗಳು ಒಂದು ಸಮಗ್ರ ವ್ಯವಸ್ಥೆಯ ಮೂರು ಮುಖ್ಯ ಅವಯವಗಳು. ಈ ವ್ಯವಸ್ಥೆಯಲ್ಲಿ ಮನುಷ್ಯರನ್ನು ಕೇಂದ್ರದಲ್ಲಿಟ್ಟುಕೊಂಡು ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಕೇವಲ ಮನುಷ್ಯರ ಬಳಕೆಯ ಸಾಧನಗಳೆಂದು ಉಪಯೋಗಿಸಿಕೊಂಡು, ನಿಸರ್ಗದ ನಿಯಂತ್ರಣ ಮತ್ತು ಶೋಷಣೆಗಳ ಮೂಲಕ ಮನುಷ್ಯರ  ಬೆಳವಣಿಗೆಯನ್ನು ಸಾಧಿಸುವ ತಾತ್ವಿಕತೆಯು ಮನುಷ್ಯ ಕೇಂದ್ರಿತವಾದುದು(Anthropoeentrism). ಇದರ ಬದಲಾಗಿ ಮನಷ್ಯೇತರ ಜೀವಿಗಳಿಗೂ ತಮ್ಮದೇ ಆದ ಆಂತರಿಕ ಮೌಲ್ಯವೊಂದಿರುತ್ತದೆ ಮತ್ತು ಅವುಗಳಿಗೂ ಬದುಕುವ ಮತ್ತು ಬೆಳೆಯುವ ಹಕ್ಕು ಮನುಷ್ಯರಷ್ಟೇ ಇರುತ್ತದೆ ಎನ್ನುವ ತಾತ್ವಿಕತೆ ಜೀವ ಕೇಂದ್ರಿತ ತತ್ತ್ವ (Biocentrism) ಈ ಜೀವ ಕೇಂದ್ರಿತ ತತ್ತ್ವದ ದೃಷ್ಟಿಯಿಂದ ಮನುಷ್ಯರ ಆಹಾರ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸಬಹುದು. ಪ್ರಾಣಿಗಳ ಬೇಟೆ, ವಿವೇಚನಾರಹಿತವಾಗಿ ಸಸ್ಯಗಳ ನಾಶ ಇವನ್ನು ಜೀವ ಕೇಂದ್ರಿತ ತಾತ್ವಿಕತೆಯ ದೃಷ್ಟಿಯಿಂದ ನಿರಾಕರಿಸಬೇಕಾಗುತ್ತದೆ. ಅನೇಕ ಬುಡಕಟ್ಟು ಜನಾಂಗಗಳ ಲೋಕದೃಷ್ಟಿ (World view)ಯು ಅಂತಹ ಜನಾಂಗಗಳ ಪುರಾಣಗಳ ಮೂಲಕ ಪ್ರಕಟಗೊಂಡಿದೆ. ಅಂತಹ ಪುರಾಣಗಳಲ್ಲಿ ಅವರ ಜಗತ್ತಿನ ಕಲ್ಪನೆಯು ಸಸ್ಯ, ಪ್ರಾಣಿ ಮತ್ತು ಮನುಷ್ಯರೆಂಬ ಮೂರು ಸ್ತರಗಳಲ್ಲಿ ರೂಪಿತವಾಗಿದ್ದು, ಅವುಗಳ ಅಂತರ್ ಸಂಬಂಧಗಳು ಜಗತ್ತಿನ ಉಳಿಯುವಿಕೆಗೆ ಅತ್ಯಗತ್ಯ ಎ‌ನ್ನುವ ತಿಳುವಳಿಕೆ ದೊರೆಯುತ್ತದೆ. ಆಹಾರವನ್ನು ಕುರಿತು ನಿಷೇಧಗಳು ನಿಯಮಗಳು ಇಂತಹ ತಾತ್ವಿಕತೆಯ ಈಡೇರಿಕೆಗಾಗಿ ಹುಟ್ಟಿಕೊಂಡವು. ನಾವು ಇಂದು ಕರೆಯುವ ಪರಿಸರ ಪ್ರಜ್ಞೆ ಎನ್ನುವುದನ್ನು ಅಂತಹ ಪರಿಭಾಷೆಯನ್ನು ಬಳಸದೆಯೇ ಬೇರೆ ಬೇರೆ ಜನಪದ ಸಮುದಾಯದವರು ತಮ್ಮ ತಮ್ಮ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡಿದ್ದರು ಎನ್ನುವುದರ ಶೋಧ ಅನ್ವಯಿಕ-ಜಾನಪದದ ದೃಷ್ಟಿಯಿಂದ ಮುಖ್ಯವಾದುದು.

ಸುಖದ ಮತ್ತು ಸಂತೃಪ್ತಿಯ ಪರಿಕಲ್ಪನೆಯು ಜನಪದ ಸಂಸ್ಕೃತಿಯಲ್ಲಿ ವಿಶಿಷ್ಟವಾದುದು ಮತ್ತು ವೈವಿಧ್ಯಮಯವಾದುದು. ಆಹಾರ ಮತ್ತು ಪಾನೀಯಗಳು ಅಂತಹ ಸುಖದ ಮತ್ತು ಸಂತೃಪ್ತಿಯ ಭಾವನೆಯನ್ನು ಅನೇಕ ರೀತಿಗಳಲ್ಲಿ ಕೊಡುತ್ತಾ ಬಂದಿವೆ. ವ್ಯಕ್ತಿಗಳು ನಿರ್ದಿಷ್ಟವಾದ ಆಹಾರ ಸೇವನೆಯಿಂದ ಸಂತೃಪ್ತಿಯನ್ನು ಪಡೆಯಬಹುದು. ಆದರೆ ತಮ್ಮ ಸುತ್ತಮುತ್ತಲೂ ಬದುಕುತ್ತಿರುವ ಅನೇಕ ಮಂದಿ ಇಂತಹ ಸಂತೃಪ್ತಿಯನ್ನು ಪಡೆಯಲು ಸಾಧ್ಯವಾಗಿದೆಯೇ ಎನ್ನುವುದರ ಕುರಿತು ಯೋಚನೆ ಮಾಡುವುದು ಕೂಡಾ ಜನಪದ ಸಂಸ್ಕೃತಿಯ ಪುನರಜ್ಜೀವನದ ಈ ಸಂದರ್ಭದಲ್ಲಿ ಹೆಚ್ಚು ಮುಖ್ಯವಾದುದು. ಆಹಾರದಲ್ಲಿ ಸರ್ವರಿಗೂ ಸಮಪಾಲು ಅನ್ನುವ ತತ್ವ ಮೂಲತಃ ಜನಪದ ಸಂಸ್ಕೃತಿಯ ಸಂದೇಶ. ಆದ್ದರಿಂದಲೇ ಹಸಿವಿನಿಂದ ನರಳುವವರ ಕುರಿತು ನಮ್ಮ ನಿಜವಾದ ಭಾವನೆಗಳು ಕಾರ್ಯರೂಪಕ್ಕೆ ಬರಬೇಕಾಗಿರುವುದು ಆಹಾರದ ಸಮರ್ಪಕ ಹಂಚಿಕೆಯಾಗುವ ಮೂಲಕ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಸಂದೇಶ ಜನಪದ ತಾತ್ವಿಕತೆಯಾಗಿ ಆಹಾರ ಕ್ಷೇತ್ರದಲ್ಲಿ ನಿಜವಾಗುವಂತೆ ಜಾನಪದ ಸಂಶೋಧಕರು ತಮ್ಮ ಅಧ್ಯಯನಗಳನ್ನು ನಡೆಸಬೇಕಾಗಿದೆ.

ಕರ್ನಾಟಕದಲ್ಲಿ ಜಾನಪದ ಅಧ್ಯಯನ ಇಂದು ಹೊಸ ಆಯಾಮಗಳನ್ನು ಹೊಂದಿ ಹೊಸ ದಿಕ್ಕಿನತ್ತ ಮುಖ ಮಾಡಿದೆ. ಸಾಂಸ್ಕೃತಿಕ ಅನನ್ಯತೆ, ಅನ್ವಯಿಕ ಜಾನಪದ, ಸ್ತ್ರೀವಾದಿ ದೃಷ್ಟಿಕೋನ, ಮಾನವೀಯತೆ ಅನ್ವೇಷಣೆ, ಸಂದರ್ಭ ಮತ್ತು ಪ್ರದರ್ಶಕ ಅಧ್ಯಯನ ವಿಧಾನ, ಮೌಖಿಕ ಇತಿಹಾಸದ ದೃಷ್ಟಿ, ಜನಪದರ ಲೋಕದೃಷ್ಟಿಗಳ ಶೋಧ, ಸಂವಹನ ಸಾಧ್ಯತೆಗಳ ವಿಸ್ತರಣೆ, ಕ್ಷೇತ್ರಕಾರ್ಯವಿಜ್ಞಾನದ ಬಹುರೂಪಗಳು, ದಾಖಲೆಕಾಣದ ಹೊಸ ಅವಿಷ್ಕಾರಗಳು-ಹೀಗೆ ಜಾನಪದ ಅಧ್ಯಯನ ಎನ್ನುವುದು  ಇಂದು ಉಪಯುಕ್ತ ಮತ್ತು ಜನಪದ ಅಧ್ಯಯನದ ವಿಷಯವಾಗಿ ಮಹತ್ತ್ವವನ್ನು ಪಡೆದುಕೊಳ್ಳುತ್ತಿದೆ. ಇಂತಹ ಸಂಕ್ರಮಣ ಸಂದರ್ಭದಲ್ಲಿ ಕರ್ನಾಟಕದ ಜಾನಪದ ಸಂಶೋಧಕರು ಇದಕ್ಕೆ ಅನುಗುಣವಾದ ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವ ಅಗತ್ಯವಿದೆ. ಕನ್ನಡ ಸಾಹಿತ್ಯ, ಕರ್ನಾಟಕದ ಇತಿಹಾಸ, ಮಾನವವಿಜ್ಞಾನ, ಸಮಾಜವಿಜ್ಞಾನ, ಭೂಗೋಳ, ಭಾಷಾವಿಜ್ಞಾನ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ವಿಜ್ಞಾನ, ವಾಸ್ತುಶಿಲ್ಪ ಮುಂತಾದ ಬಹುಕ್ಷೇತ್ರಗಳ ಸಂಶೋಧನೆಗಳಿಗೆ ಜಾನಪದವು ಅದರವಾಗಿಯೂ ಅಂತಹ ವಿಜ್ಞಾನಗಳಲ್ಲಿನ ಸಂಶೋಧನೆಗೆ ಜಾನಪದ ವಿಜ್ಞಾನವು ಸೈದ್ಧಾಂತಿಕ ತಳಹದಿಯಾಗಿಯೂ ಮುಂಚೂಣಿಯಲ್ಲಿ ಇರಬೇಕಾದ ಅವಶ್ಯಕತೆ ಇದೆ. ಅಂತಹ ಜವಾಬ್ದಾರಿಯನ್ನು ಕರ್ನಾಟಕದ ಹಿರಿಯ ಮತ್ತು ಕಿರಿಯ ಜಾನಪದ ಸಂಶೋಧಕರು ಒಂದು ಸವಾಲಿನ ರೂಪದಲ್ಲಿ ಸ್ವೀಕರಿಸಿ ಕೆಲಸ ಮಾಡಬೇಕೆಂದು ಈ ಸಂದರ್ಭದಲ್ಲಿ ವಿನಂತಿಸಿಕೊಳ್ಳುತ್ತೇನೆ. ನಮ್ಮ ಎಲ್ಲ ವಾದ-ವಿವಾದಗಳು, ಚರ್ಚೆಗಳು ಕರ್ನಾಟಕದಲ್ಲಿ ಜಾನಪದ ಅಧ್ಯಯನವನ್ನು ಒಂದು ಅನನ್ಯ ಶಿಸ್ತನ್ನಾಗಿ ಬೆಳೆಸಲು ಪೂರ್ಣ ಪ್ರಮಾಣದಲ್ಲಿ ವಿನಿಯೋಗವಾಗಲಿ ಎಂದು ಹಾರೈಸುತ್ತೇನೆ. ನಮ್ಮ ಜನಪದರು ಹಾಡಿದ ಒಂದು ತ್ರಿಪದಿ ನನಗೆ ಈ ಸಂದರ್ಭದಲ್ಲಿ ಬಹಳ ಅರ್ಥಪೂರ್ಣವೆನಿಸುತ್ತದೆ.-

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ | ಭೂಮಿತಾಯ
ಎದ್ದೊಂದು ಗಳಿಗೆ ನೆನೆದೇನು ||

ಎಳ್ಳು, ಜೀರಿಗೆಯಂತಹ ಜೀವಧಾತುಗಳು ನಮ್ಮ ನಿಜವಾದ ಶಕ್ತಿಗಳು, ನಮ್ಮ ಬದುಕಿನ ಚೇತನಗಳು. ಈ ಜಾನಪದ ಗೋಷ್ಠಿಗಳ ಸಂಪ್ರಬಂಧಗಳು ಕರ್ನಾಟಕ ಜಾನಪದ ಅಧ್ಯಯನದ ಆಹಾರ-ಪಾನೀಯಗಳಾಗಲಿ, ಜೀವಧಾತುಗಳಾಗಲಿ, ಶಕ್ತಿಕೇಂದ್ರಗಳಾಗಲಿ ಎಂದು ಹಾರೈಸುತ್ತೇನೆ.*       ಪ್ರಾಧ್ಯಾಪಕ, ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾಲಯನಿಲಯ, ಮಂಗಳಗಂಗೋತ್ರಿ, ೫೭೪೧೯೯, ಕರ್ನಾಟಕ.