I – ಛಂದೋಂಬುಧಿ ಗ್ರಂಥ ಕರ್ತೃವಿನ ವಿಚಾರ
ಛಂದೋಂಬುಧಿ ಎಂಬ ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ೧ನೆಯ ನಾಗವರ್ಮನೆಂಬುವನು[1] ಬರೆದನು. ಇವನು ಕರ್ನಾಟಕ ಕಾದಂಬರಿಯೆಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾನೆ. ವೆಂಗಿ ವಿಷಯದಲ್ಲಿನ ಸಪ್ತ ಗ್ರಾಮಗಳಲ್ಲಿ ಮನೋಹರವಾದ ವೆಂಗಿಪಳುವಿನಲ್ಲಿದ್ದ ಕೌಂಡಿನ್ಯ ಗೋತ್ರ ದ ವೆಣ್ಣಮಯ್ಯ ಎಂಬ ಬ್ರಾಹ್ಮಣನ ಮಗ; ತಾಯಿ ಹೋಕಳವ್ವೆ. ಇವನಿಗೆ ಕವಿರಾಜಹಂಸ, ಬುಧಾಬ್ಜವನಕಳ ಹಂಸ, ಕಂದಕಂದರ್ಪ-ಇತ್ಯಾದಿ ಅನೇಕ ಬಿರುದುಗಳಿದ್ದವು. ಈತನು ಯುದ್ಧವೀರನಾಗಿದ್ದ ಹಾಗೆಯೂ ತೋರುವುದು. ಶ್ರವಣಬೆಳ್ಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿ ಪ್ರಸಿದ್ಧನಾಗಿರುವ ಚಾವುಂಡರಾಯನೆಂಬುವನು ಇವನ ಆಶ್ರಯದಾತನು. ಅಜಿತಸೇನದೇವ ನೆಂಬುವರು ಇವನಿಗೆ ಗುರುಗಳು.
ಛಂದೋಂಬುಧಿ ಎಂಬ ಈ ಗ್ರಂಥದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಹೇಳಲ್ಪಟ್ಟಿವೆ.
[1] ನಾಗವರ್ಮನೆಂಬ ಹೆಸರಿನ ಕವಿಗಳಿಬ್ಬರು. ಮೊದಲನೆಯ ನಾಗವರ್ಮ (ಕ್ರಿ.ಶ. ೯೯೦) ನು ಛಂದೋಂಬುಧಿಯನ್ನೂ, ಕರ್ನಾಟಕ ಕಾದಂಬರಿ ಎಂಬ ಚಂಪೂ ಗ್ರಂಥವನ್ನೂ ರಚಿಸಿದನು. ಎರಡನೆಯ ನಾಗವರ್ಮನೆಂಬುವನು ಕ್ರಿ.ಶ. ೧೧೪೫ ರ ದವನು. ಇವನು ಕಾವ್ಯಾವಲೋಕನ, ಕರ್ನಾಟಕ ಭಾಷಾಭೂಷಣ, ವಸ್ತುಕೋಶಗಳೆಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆಂದು ಕವಿ ಚರಿತ್ರೆಕಾರರು ತಿಳಿಸಿದ್ದಾರೆ.
Leave A Comment