ಕನ್ನಡ ಭಾಷೆಯಲ್ಲಿ ಕಾವ್ಯಗಳು ಪಂಪಕವಿ (ಕ್ರಿ.ಶ. ೯೪೧) ಗಿಂತಲೂ ಮೊದಲೇ ರಚಿತವಾಗಿದ್ದವು. ಆದರೆ ಆ ಕಾಲದ ಸಮಗ್ರ ಕಾವ್ಯಗಳು ನಮಗೆ ಸಿಕ್ಕಿಲ್ಲ. ಪಂಪಮಹಾಕವಿ ಬರೆದ ವಿಕ್ರಮಾರ್ಜುನವಿಜಯ, ಆದಿ ಪುರಾಣಗಳೇ ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಮೊದಲಿನವು. ಪೂರ್ವದ ಗ್ರಂಥಗಳು ಸಿಗದಿದ್ದರೂ ಕ್ರಿ.ಶ. ೯ನೆಯ ಶತಕದಲ್ಲಿ ನೃಪತುಂಗನಿಂದ ರಚಿತವಾದ ‘ಕವಿರಾಜಮಾರ್ಗ‘ದಲ್ಲಿ ಉತ್ತಮ ಕಾವ್ಯಮಯವಾದ ಪದ್ಯಗಳನ್ನು ಉದಾಹರಿಸಿದ್ದಾನೆ. ಇದರಿಂದ ನೃಪತುಂಗನಿಗಿಂತಲೂ ಮೊದಲು ಉತ್ತಮವಾದ ಕನ್ನಡ ಪದ್ಯ ಕಾವ್ಯಗಳು ಇದ್ದುವೆಂದು ತಿಳಿಯಬಹುದು. ಮತ್ತು ಕಲ್ಲುಗಳ ಮೇಲೆ ಕೆತ್ತಿದ ಅನೇಕ ಪದ್ಯಗಳು ಸಿಗುತ್ತವೆ. ಇವುಗಳ ಮೇಲಿಂದ ಕ್ರಿ.ಶ. ೬ನೆಯ ಶತಮಾನದ ಹೊತ್ತಿನಲ್ಲಿಯೇ ಛಂದೋಬದ್ಧವಾದ ಪದ್ಯಗಳನ್ನು ನಮ್ಮ ಕವಿಗಳು ಬರೆಯುತ್ತಿದ್ದರೆಂದು ಹೇಳಬಹುದು. ಪಂಪ (ಕ್ರಿ.ಶ. ೯೪೧), ರನ್ನ (ಕ್ರಿ.ಶ. ೯೯೩), ಅಭಿನವ ಪಂಪ (ಕ್ರಿ.ಶ. ೧೧೦೦), ಜನ್ನ (ಕ್ರಿ.ಶ. ೧೨೦೯) ಇತ್ಯಾದಿ ಮಹಾಕವಿಗಳು ಸಂಸ್ಕೃತ ವೃತ್ತ ಜಾತಿಯ ಛಂದಸ್ಸನ್ನು ಬಳಸಿ ದೊಡ್ಡ ದೊಡ್ಡ ಚಂಪೂಕಾವ್ಯಗಳನ್ನು ಬರೆದರು. ಚಂಪೂಕಾವ್ಯಗಳೆಂದರೆ ಗದ್ಯಪದ್ಯಗಳಿಂದ ಕೂಡಿದ ಕಾವ್ಯಗಳು. ಕ್ರಿ.ಶ.ಸು. ೧೨೧೬ ರ ಸುಮಾರಿನಲ್ಲಿದ್ದ ಹರಿಹರೇಶ್ವರನೆಂಬ ಕವಿ ರಗಳೆಗಳ ಛಂದಸ್ಸಿನಲ್ಲಿ ಅನೇಕ ಕಾವ್ಯ ಬರೆದನು. ಇವನ ಅಳಿಯನಾದ ರಾಘವಾಂಕನು (ಕ್ರಿ.ಶ. ೧೨೧೬) ಷಟ್ಪದಿಗಳ ಛಂದಸ್ಸಿನಲ್ಲಿ ಅನೇಕ ಕಾವ್ಯಗಳನ್ನು ಬರೆದನು. ಷಟ್ಪದಿಯನ್ನು ಬಳಸಿ ಮುಂದೆ ಗದುಗಿನ ನಾರಣಪ್ಪ (ಕ್ರಿ.ಶ. ೧೪೩೦) ನೇ ಮೊದಲಾದವರು ಕಾವ್ಯ ಬರೆದರು. ರತ್ನಾಕರವರ್ಣಿ (ಕ್ರಿ.ಶ. ೧೫೫೭) ಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು. ಹೀಗೆ ಅನೇಕಾನೇಕ ಛಂದೋಬದ್ಧವಾದ ಸಾಹಿತ್ಯರಾಶಿ ಕನ್ನಡಕ್ಕೆ ಇದೆ. ಈ ಎಲ್ಲ ಛಂದಸ್ಸುಗಳ ಲಕ್ಷಣವನ್ನು ತಿಳಿಯುವುದು ಅವಶ್ಯವಾದರೂ ಪ್ರೌಢಶಾಲೆಗಳಲ್ಲಿ ವ್ಯಾಸಂಗಮಾಡುವ ನಮ್ಮ ಮಕ್ಕಳು, ಮುಖ್ಯವಾಗಿ ಕನ್ನಡದಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ ಉತ್ಪಲಮಾಲಾ, ಚಂಪಕಮಾಲ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ-ಇತ್ಯಾದಿ ವೃತ್ತಗಳ ಲಕ್ಷಣಗಳನ್ನೂ, ಷಟ್ಪದಿಗಳು, ರಗಳೆಗಳು ಕಂದ ಪದ್ಯಗಳೇ ಮೊದಲಾದವುಗಳ ಲಕ್ಷಣಗಳನ್ನು ತಿಳಿಯಬೇಕಾದುದು ಅವಶ್ಯಕ. ಅಂತೆಯೇ ಸಂಕ್ಷೇಪವಾಗಿ ಮುಂದೆ ಆ ವಿಷಯವನ್ನು ಹೇಳಲಾಗಿದೆ.
ಅಧ್ಯಾಯ ೧೦: ಛಂದಸ್ಸು: ಭಾಗ II – ಕನ್ನಡ ಕಾವ್ಯಗಳು
By kanaja|2011-04-17T15:36:48+05:30April 17, 2011|ಕನ್ನಡ, ಕನ್ನಡ ಕಲಿಯಿರಿ, ಕನ್ನಡ ವ್ಯಾಕರಣ ದರ್ಪಣ, ವ್ಯಾಕರಣ|0 Comments
Leave A Comment